ಬಗೆಗೆಟ್ಟು ಸಾವ ಬಗೆಯಂ
ಮಗಳೆ ಮಹಾಶ್ವೇತೆ ಬಗೆಯದಿರ್ ಕೂಡುವೆ ನೀಂ
ಮಗುೞೆ ಯುಮೀತನನೆನುತಂ
ಮಗೞ್ದ್ದಾತಂಬೆರಸು ಗಗನಮಾರ್ಗಕ್ಕೊಗೆದಂ           ೧೮೫

ವ|| ಅಂತಾ ವ್ಯತಿಕರದೊಳೆನಗತಿಸಂಭ್ರಮಮುಂ ವಿಸ್ಮಯಮುಂ ಕೌತುಕಮುಮೊಗೆಯೆ ಪಿರಿದುಮಂಜಿ ಕಪಿಂಜಲನನಿದೇನೆಂದು ಬೆಸಗೊಳೆಯುಮಾತನೆನಗೆ ಮಱುಮಾತುಗುಡದುನ್ಮಖನಾಗಿ
ಎನಗಂ ಪೇೞದೆಯುಂ ಭೋಂ
ಕೆನಲೆನ್ನಯ ಸಖನನೆತ್ತವೊಯ್ದಪೆ ಮಾಣೆಂ
ದೆನುತಂ ಕೋಪದಿನಾ ಪುರು
ಷನ ಪೆಱಗನೆ ತಾನುಮಂತರೀಕ್ಷಕ್ಕೊಗೆದಂ   ೧೮೬

ವ|| ಅಂತು ಮೂವರುಂ ನೋಡೆ ನೋಡೆ ಚಂದ್ರಮಂಡಲಮಧ್ಯದೊಳ್ ಪುಗೆ ಕಪಿಂಜಲನ ಪೋಗಿಂಗೆ ಶೋಕವಿರ್ಮಡಿಯಾಗೆ ಕಿಂಕರ್ತವ್ಯತಾಮೂಢೆಯೆನಾಗಿ

ತರಳಿಕೆ ಪೇೞದೇನಱವೊ ನೀನೆನಲೆನ್ನವೊಲಾಗಳಳ್ಕಿನಿಂ
ಪರವಶೆಯಾಗಿ ನಿಂದುಮವಳೆನ್ನಯ ಸಾವಿನೊಳಾದ ಶಂಕೆಯಿಂ
ಕರುಣಮನಪ್ಪುಕೆಯ್ದುಸಿರ್ದಳಾನಱಯೆಂ ಸತಿ ಬಂದು ತಂದೆಯಂ
ತಿರೆ ಪದೆದಾ ಮಹಾಪುರುಷನಾಱಸಿದಂ ಭವದೀಯ ಶೋಕಮಂ            ೧೮೬

ಇನ್ನರ ನುಡಿ ಕನಸಿನೊಳಂ
ನನ್ನಿಯೆನಲ್ ಕೇಳ ದಿವ್ಯಪುರುಷಂ ಪ್ರತ್ಯ
ಕ್ಷಂ ನಿನ್ನ ಮುಂದೆ ನುಡಿಯ
ಲ್ಕಿನ್ನುಮದೇನೆಂಬೆ ಸಂದೆಗಕ್ಕೆಡೆಯುಂಟೇ    ೧೮೮

ನಿನ್ನಯ ಜೀವಿತೇಶ್ವರನ ಜೀವಮನಿಂ ಪಡೆದಟ್ಟಲೆಂದು ಲೋ
ಕೋನ್ನತನಪ್ಪ ದಿವ್ಯಪುರುಷಂ ವಿಗತಾಸುವನೊಯ್ದನೞ್ಕಱಂ
ನಿನ್ನುಮನೀಗಳಾಱಸಿದನಂತಿದಱಂದಿದು ನನ್ನಿಯಪ್ಪುದ
ಲ್ತೆನ್ನದೆ ಮಾಣ್ಬುದರ್ಕೆ ಪೆಱತೇಂ ಮರಣವ್ಯವಸಾಯಮೆಂಬುದಂ            ೧೮೯

ಎತ್ತಿಕೊಂಡು ೧೮೫. “ಮಗಳೆ, ಮಹಾಶ್ವೇತೆ, ಮನಸ್ಸನ್ನು ಕೆಡಿಸಿಕೊಂಡು ಸಾಯುವ ವಿಚಾರವನ್ನು ಮಾತ್ರ ಯೋಚಿಸಬೇಡ. ನೀನು ಮತ್ತೆ ಇವನೊಂದಿಗೆ ಸೇರುತ್ತೀಯೆ ಎಂದು ಹೇಳಿ ಹಿಂದಿರುಗಿ ಅವನನ್ನು ಎತ್ತಿಕೊಂಡು ಆಕಾಶಕ್ಕೇರಿದನು.” ವ|| ಹಾಗೆ ಆ ಸಂದರ್ಭದಲ್ಲಿ ನನಗೆ ಬಹಳ ಗಾಬರಿಯೂ ಆಶ್ಚರ್ಯವೂ ಕುತೂಹಲವೂ ಉಂಟಾಗಲು ಬಹಳ ಹೆದರಿ ಕಪಿಂಜಲನನ್ನು ಕುರಿತು ಇದೇನೆಂದು ಕೇಳಲು ಅವನು ನನಗೆ ಉತ್ತರವನ್ನು ಕೊಡದೆ ಮೇಲುಮುಖನಾಗಿ, ೧೮೬. “ನನಗೆ ಹೇಳದೆ ಕೇಳದೆ ನನ್ನ ಗೆಳೆಯನನ್ನು ತಟ್ಟನೆ ಎಲ್ಲಿಗೆ ಎತ್ತಿಕೊಂಡು ಹೋಗುತ್ತಿರುವೆ? ನಿಲ್ಲು?” ಎಂದು ಕೋಪದಿಂದ ಆ ಪುರುಷನನ್ನು ಹಿಂಬಾಲಿಸಿ ತಾನೂ ಆಕಾಶಕ್ಕೆ ಏರಿಹೋದನು. ವ|| ಹಾಗೆ ನೋಡುತ್ತಿರುವಂತೆಯೆ ಮೂವರೂ ಚಂದ್ರಮಂಡಲದ ಮಧ್ಯವನ್ನು ಪ್ರವೇಶಿಸಲಾಗಿ ಕಪಿಂಜಲನು ಹೊರಟುಹೋದುದರಿಂದ ದುಖವು ಇಮ್ಮಡಿಯಾಗಲು ಏನು ಮಾಡಬೇಕೆಂದು ತಿಳಿಯದವಳಾಗಿ ೧೮೭. “ತರಳಿಕೆ, ಇದೇನು ಹೇಳು. ನಿನಗೆ ಗೊತ್ತಾಯಿತೆ?” ಎಂದು ಅವಳನ್ನು ಕೇಳಿದೆನು. ಆಗ ಅವಳೂ ನನ್ನಂತೆಯೇ ಭಯದಿಂದ ಪರವಶಳಾಗಿದ್ದಳು. ಅದಲ್ಲದೆ ನಾನು ಪ್ರಾಣತ್ಯಾಗಮಾಡಿಬಿಡಬಹುದೆಂಬ ಶಂಕೆ ಬೇರೆ ಅವಳಿಗಿತ್ತು. ಅದರಿಂದ ಅವಳು ಕರುಣೆಯಿಂದ ಕೂಡಿ “ಅಮ್ಮನನಗೇನೂ ಗೊತ್ತಿಲ್ಲ. ಆದರೆ ಆ ಮಹಾಪುರುಷನು ಬಂದು ತಂದೆಯಂತೆ ನಿನ್ನ ಮೇಲೆ ವಾತ್ಸಲ್ಯವನ್ನು ತೋರಿಸಿ ನಿನ್ನ ದುಖವನ್ನು ಪರಿಹರಿಸಿದ್ದಾನೆ. ೧೮೮. ಇಂತಹವರು ಸ್ವಪ್ನದಲ್ಲಿ ಕಾಣಿಸಿಕೊಂಡು ಹೇಳಿದರೂ ಆ ಮಾತು ಸುಳ್ಳಾಗುವುದಿಲ್ಲ. ಹೀಗಿರಲು ಆ ದಿವ್ಯಪುರುಷನು ಪ್ರತ್ಯಕ್ಷನಾಗಿ ನಿನ್ನ ಮುಂದೆ ಹೇಳಿರಲಾಗಿ ಅಲ್ಲಿ ಸಂಶಯಕ್ಕೆ ಎಡೆಯೇ ಇಲ್ಲ. ಹೆಚ್ಚಿಗೆ ಹೇಳಬೇಕಾದ್ದೇ ಇಲ್ಲ ೧೮೯. ನಿನ್ನ ಪ್ರಾಣಕಾಂತನ ಹೋದ ಪ್ರಾಣವನ್ನು ಮರಳಿ ಬರುವಂತೆ ಮಾಡಿ, ಜೀವ ಬರಿಸಿ ಅವನನ್ನು ಕಳುಹಿಸಿಕೊಡಬೇಕೆಂಬ ಉದ್ದೇಶದಿಂದಲೆ ಈ ಲೋಕೋತ್ತರನಾದ ದಿವ್ಯಪುರುಷನು ಸಾವನ್ನಪ್ಪಿದ ಅವನನ್ನು ಕೊಂಡೊಯ್ದಿದ್ದಾನೆ. ಹಾಗೂ ನಿನ್ನನ್ನು ಸಮಾಧಾನಪಡಿಸಿದ್ದಾನೆ. ಅದರಿಂದ ಇದು ನಿಜವಲ್ಲವೆಂದು

ನಿಸದಂ ಕಪಿಂಜಲ ಜೀ
ವಿಸುತಿರೆ ನಿನ್ನಲ್ಲಿಗೆಯ್ದದಿರನದಱಂ ರ
ಕ್ಷಿಸವೇೞ್ಕುಮಾವ ತೆಱದಿಂ
ದಸುವಂ ನಿನ್ನಲ್ಲಿಗಾತನೆಯ್ತರ್ಪಿನೆಗಂ           ೧೯೦

ವ|| ಎಂದವಳ್ ಕಾಲ ಮೇಲೆ ಬೀೞ್ವುದುಂ

ಪಿರಿದುಮಿದಿಂತುಟೆಂದು ಬಗೆದುಂ ನೆ ಬಾೞ್ಕೆಯೊಳಾದ ತೃಷ್ಣೆಯಂ
ಪರಿಹರಿಸಲ್ಕಮಾರ್ಗಮಱದಾಗಿಯುಮುಕ್ಕೆವದಿಂದಮಂತೆ ಪೆಂ
ಡಿರ ಬಗೆ ಸಾಜದಿಂ ಕುಟಿಲಮಾಗಿಯುಮಿಂತು ದುರಾಸೆಯಿಂದಮೋ
ಸರಿಸದೆ ನನ್ನ ನಾನೆ ಬಿಡಲಾಱದ ಪಾತಕಿಯೆಂ ಮಹೀಪತೀ     ೧೯೧

ವ|| ಅನಂತರಮಾ ಸರೋವರದ ತೀರದೊಳೆಡೆವಿಡದೆ ಪೊರಳುತವೆ ಪರೆದ ಮುಡಿಯೊಳ್ ಪೊರೆದ ಕಣ್ಣ ನೀರಿಂ ನಾಂದು ಕದಂಪಿನೊಳ್ ಪಗಿಲ್ತು ಪತ್ತಿದುತ್ತರೀಯೆಯೆಂ ಆಕ್ರಂದನದಿಂ ಗಂಟಲೊಡೆದು ದನಿ ಕಿಡೆ ತರಳಿಕೆವೆರಸು ಬಿಡದೞುತ್ತುಮಿರಲಾ ಪಾಪಕಾರಿಣಿಯಪ್ಪ ಕಾಳರಾತ್ರಿಪ್ರತಿಮೆಯೆನಿಸಿದ ಮಹಾರಾತ್ರಿಯಾಗಲ್ ಶೋಕೋದ್ರೇಕದಿಂ ಯುಗಸಹಸ್ರಾಯಮಾನಮಾಗೆ

ಅಱುವೆನ್ನಂ ತರಳಿಕೆ ಮ
ಯ್ವೞಯಿಂ ಪಿಡಿಯೊಯ್ಯನೆತ್ತಿ ಮೆಲ್ಲನೆ ತಡಿಗಾ
ಗಿೞತಂದೀ ಕೊಳದೊಳ್ ನೀ
ರಿಱಯಿಸೆ ನೀರಿಱದೆನಿಲ್ಲಿ ಬೆಳಗಪ್ಪಾಗಳ್       ೧೯೨

ವ|| ಅಂತು ನೀರಿೞದು ನೀರಿೞದು ತದನಂತರಂ

ಆತನ ಪರಮಪ್ರೀತಿಯಿ
ನಾತನ ವಲ್ಕಲದಿನಾತನಕ್ಷಾವಳಿಯಿಂ
ದಾತನ ಕಮಂಡಲುವಿನಿಂ
ದಾತನ ವೇಷಮನೆ ತಾಳ್ದಿ ತಳೆದೆಂ ವ್ರತಮಂ            ೧೯೩

ವ|| ಅಂತು ತಳೆದು ಮದೀಯ ಮಂದಭಾಗ್ಯತೆಯುಮಂ ದೈವದ ದಾರುಣತೆಯುಮಂ ಶೋಕೋದ್ರೇಕಮುಮಂ ದುಖದ ದುಸಹತೆಯುಮಂ ಪದಾರ್ಥದನಿತ್ಯತೆಯುಮಂ ಭಾವಿಸಿ ನೋಡಿ

ಹೇಳದೆ ಮರಣಪ್ರಯತ್ನವನ್ನು ಕೈಬಿಡಬೇಕು. ಸಮಾಧಾನಪಡಿಸುವ ಆ ಮಾತಿಗಿಂತಲೂ ಬೇರೆ ಇನ್ನೇನು ಬೇಕು? ೧೯೦. ಕಪಿಂಜಲನು ಬದುಕಿದ್ದರೆ ನಿಜವಾಗಿಯೂ ನಿನ್ನಲ್ಲಿಗೆ ಬರದೆ ಇರುವುದಿಲ್ಲ. ಆದ್ದರಿಂದ ಅವನು ನಿನ್ನ ಸಮೀಪಕ್ಕೆ ಬರುವವರೆಗೂ ಯಾವ ರೀತಿಯಿಂದಲಾದರೂ ಜೀವವನ್ನು ಕಾಪಾಡಿಕೊಂಡೇ ತೀರಬೇಕು” ವ|| ಎಂದು ಅವಳು ನನ್ನ ಕಾಲಿನ ಮೇಲೆ ಬೀಳಲಾಗಿ

೧೯೧. ಎಲೈ ರಾಜನೆ, ಬಹುಶ ಇದು ಹೀಗೆಯೆ ಇರಬೇಕೆಂದು ಆಲೋಚಿಸಿಯೂ, ಮಿಗಿಲಾಗಿ ಬದುಕಿರಬೇಕೆಂಬ ಆಸೆಯನ್ನು ಬಿಡಲು ಯಾರಿಗೂ ಆಗದಿರುವುದರಿಂದಲೂ, ಅವನು ಮರಳಿ ಬರುತ್ತಾನೆಂಬ ಆಶಾಬಂಧದಿಂದಲೂ, ಹೆಂಗಸರ ಸ್ವಭಾವವು ಸಹಜವಾಗಿ ವಕ್ರವಾಗಿರುವುದರಿಂದಲೂ ಹೀಗೆ ದುರಾಸೆಗೆ ಅಂಟಿಕೊಂಡು ಪ್ರಾಣವನ್ನು ಬಿಡಲಾರದ ಪಾಪಿಷ್ಠಳಾಗಿದ್ದೇನೆ. ವ|| ಬಳಿಕ ಆ ಸರೋವರದ ದಡದಲ್ಲಿ ಎಡೆಬಿಡದೆ ಹೊರಳಾಡುತ್ತಾ ಚದುರಿರುವದ ಕೂದಲುಗಳಲ್ಲಿ ವ್ಯಾಪಿಸಿಕೊಂಡು (ಕೂಡಿಕೊಂಡು), ಕಣ್ಣೀರಿನಿಂದ ಒದ್ದೆಯಾಗಿ ಕೆನ್ನೆಯಲ್ಲಿ ಅಂಟಿಕೊಂಡಿರುವ ಹೊದೆಯುವ ವಸ್ತ್ರವುಳ್ಳವಳಾಗಿ, ರೋದನದಿಂದ ಗಂಟಲೊಡೆದು ದನಿ ಗಾರುಬೀಳಲು ತರಳಿಕೆಯೊಂದಿಗೆ ಒಂದೇಸಮನೆ ಅಳುತ್ತಿರಲಾಗಿ ಪ್ರಳಯಕಾಲದ ರಾತ್ರಿಗೆ ಸಮಾನವಾದ ಆ ಭಯಂಕರವಾದ ಪಾಪರಾತ್ರಿಯ ಶೋಕಾತಿಶಯದಿಂದ ಸಾವಿರಯುಗದಷ್ಟು ದೀರ್ಘವಾಗಲಾಗಿ, ೧೯೨. ಬೆಳಗಾಗಲು, ಅಳುತ್ತಿರುವ ನನ್ನನ್ನು ತರಳಿಕೆಯು ತನ್ನ ಶರೀರಾವಲಂಬನದಿಂದ ಹಿಡಿದುಕೊಂಡು (ಮೈಮೇಲೆ ಒರಗಿಸಿಕೊಂಡು) ಹಿಡಿದೆತ್ತಿ ಮೆಲ್ಲನೆ ದಡಕ್ಕೆ ಇಳಿಸಿ ಸ್ನಾನ ಮಾಡಿಸಲಾಗಿ ಸ್ನಾನ ಮಾಡಿದೆನು. ವ|| ಹಾಗೆ ಸ್ನಾನ ಮಾಡಿ ಬಳಿಕ, ೧೯೩. ಅವನ ಮೇಲಿನ ಅತ್ಯಕವಾದ ಪ್ರೀತಿಯಿಂದ ಅವನ ಉಡುತ್ತಿದ್ದ ನಾರುಬಟ್ಟೆಯನ್ನೇ ಉಟ್ಟುಕೊಂಡು, ಅವನ ಜಪಸರವನ್ನೇ ತೆಗೆದುಕೊಂಡು, ಅವನ ಕಮಂಡಲುವನ್ನೇ ಹಿಡಿದುಕೊಂಡು, ಅವನು ವೇಷವನ್ನೇ ತಾಳಿ ಬ್ರಹ್ಮಚರ್ಯವ್ರತವನ್ನು ಆರಂಭಿಸಿದೆನು. ವ|| ಹಾಗೆ ವ್ರತವನ್ನು ಹಿಡಿದು ನನ್ನ ಅದೃಷ್ಟಹೀನತೆಯನ್ನೂ, ದೈವದ ಕಠೋರತೆಯನ್ನೂ, ಅತಿಶಯವಾದ ಶೋಕವನ್ನೂ,

ಮನಮಂ ನಿಗ್ರಹಿಸುತ್ತ ಸದ್ವಿಷಯದತ್ತಲ್ ಪೊರ್ದದಂತಾಗೆ ಮಾ
ಡಿ ನಿರುದ್ಧೇಂದ್ರಿಯೆಯಾಗಿ ಬಂಧುಜನಮಂ ತಾಯ್ತಂದೆಯಂ ಪತ್ತುವಿ
ಟ್ಟೆನಗಿನ್ನೊರ್ವರುಮೇವರೆಂಬ ಬಗೆಯಂ ನಿಶ್ಚೆ ಸಿ ಲೋಕೈಕನಾ
ಥನ ನಾನಾಗಳನಾಥೆಯೆಂ ಶರಣೆನ್ನುತ್ತಾಶ್ರೆ ಸಿದೆಂ ಸ್ಥಾಣುವಂ ೧೯೪

ಜನನೀ ಜನಕರ್ ಬಾಂಧವ
ಜನಸಹಿತತ್ತೞುತೆ ಬಂದು ನಾನಾವಿಧ ಸಾಂ
ತ್ವನವಚನಸಹಿತಮುಸಿರ್ದರ್
ಮನೆಗೊಡಗೊಂಡೊಯ್ಯಲೆಂಬ ಬಗೆಯಿಂದೆನ್ನಂ         ೧೯೫

ಅಂತೆರವುಗೊಂಡಿದೇನಿವ
ಳೆಂತುಂ ಪೋ ಬಾರಳೇವೆನೆನುತಂ ದುಖಾ
ಕ್ರಾಂತಂ ಪಲವುಂ ದಿನಮಿ
ರ್ದೆಂತಾನುಂ ಮನೆಗೆ ಪೋದನೆನ್ನಯ ಜನಕಂ          ೧೯೬

ವ|| ಅಂತು ಪೋಗೆ

ಜಪದಿಂ ತಪದಿಂದೊಡಲಂ
ಕ್ಷಪಿಯಿಸಿದಪೆನೆಂಬೊಡದು ಕೃತಜ್ಞತೆ ಗಡ ಚಿ
ಜಪವೆಣಿಸುವ ನೆಪದಿಂದಂ
ನೃಪ ತದ್ಗುಣಗಣಮನೀಗಳೆಣಿಸುತ್ತಿರ್ಪೆಂ       ೧೯೭

ಅಯಶಕ್ಕೀಡಾದ ನಿರ್ಲಕ್ಷಣೆಯನಶುಭೆಯಂ ನಿಷಲೋತ್ಪನ್ನೆಯಂ ನಿ
ರ್ದಯೆಯಂ ನಿಸ್ನೇಹೆಯಂ ನಿಸ್ತ್ರಪೆಯನಸುಖೆಯಂ ನಿಂದ್ಯೆಯಂ ನಿಷ್ಪಲಪ್ರಾ
ಣೆಯನಾದಂ ಕ್ರೂರೆಯಂ ಬ್ರಾಹ್ಮಣಹನನ ಮಹಾಪಾಪಮಂ ಗೆಯ್ದ ನಿಸ್ತ್ರಿಂ
ಶೆಯನೆನ್ನಂ ಪಾಪೆಯಂ ನೀಂ ಬೆಸಗೊಳೆ ಫಲಮೇಂ ಪೇೞ್ ಮಹೀಪಾಲ ಚಂದ್ರಾ             ೧೯೮

ಸೊಗಯಿಪ ಸಸಿ ಶರದದ ಬೆ
ಳ್ಮುಗಿಲೊಳ್ ಪೊರೆಯಿಂದಮೆಯ್ದೆ ಮುಸುಕಿರ್ದುದೆನಲ್
ಸೊಗಯಿಪ ದುಗುಲದ ಸೆಱಗಂ
ಮೊಗಕ್ಕೆ ತೆಗೆದಾಗಳಿರದೆ ಗೋಳಿಟ್ಟೞ್ತಳ್     ೧೯೯

ಸಹಿಸಲಸಾಧ್ಯವಾದ ಮನೋವ್ಯಥೆಯನ್ನೂ, ಜಗತ್ತಿನ ವಸ್ತುಗಳ ಅನಿತ್ಯತೆಯನ್ನೂ ಆಲೋಚಿಸಿ ನೋಡಿ ೧೯೪. ಮನಸ್ಸನ್ನು ಕೆಟ್ಟ ವಿಷಯಗಳ ಕಡೆಗೆ ಹರಿಯದಂತೆ ಹತೋಟಿಯಲ್ಲಿಟ್ಟುಕೊಂಡು ಜಿತೇಂದ್ರಿಯಳಾಗಿ ನೆಂಟರಿಷ್ಟರನ್ನೂ ತಾಯಿತಂದೆಗಳನ್ನೂ ದೂರಮಾಡಿ, ನನಗೆ ಯಾರನ್ನು ಕಟ್ಟಿಕೊಂಡು ಏನಾಗಬೇಕೆಂದು ತೀರ್ಮಾನಿಸಿ ಅನಾಥಳಾದ ನಾನು ಜಗತ್ತಿಗೆಲ್ಲ ಒಡೆಯನಾದ ಆ ಪರಮೇಶ್ವರನನ್ನು ನೀನೇ ಗತಿ ಎಂದು ಆಶ್ರಯಿಸಿದೆನು. ೧೯೫. ನನ್ನ ತಾಯಿತಂದೆಗಳು ಬಂಧುಬಳಗ ಸಮೇತರಾಗಿ ಅಳುತ್ತಾ ಬಂದು ನನ್ನನ್ನು ಜೊತೆಯಲ್ಲಿ ಮನೆಗೆ ಕರೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಅನೇಕ ಬಗೆಯ ಸಮಾಧಾನಪಡಿಸುವ ಮಾತುಗಳನ್ನಾಡಿದರು. ೧೯೬. ಹೀಗೆ ಬೇಡಿಕೊಂಡು ‘ಅಯ್ಯೋ ಇವಳೇನಾದರೂ ಬರುವುದೇ ಇಲ್ಲವಲ್ಲ!’ ಎಂದು ನನ್ನ ತಂದೆಯು ಬಹಳ ದುಖಾಕ್ರಾಂತನಾದನು. ಹಾಗೂ ಕೆಲವು ದಿನಗಳು ಇಲ್ಲೇ ಇದ್ದು ಕೊನೆಗೆ ಬಹಳ ಕಷ್ಟದಿಂದಲೇ ಮನೆಗೆ ಮರಳಿದನು. ವ|| ಹಾಗೆ ಹೊರಟುಹೋಗಲಾಗಿ ೧೯೭. ಜಪದಿಂದಲೂ, ತಪಸ್ಸಿನಿಂದಲೂ ಶರೀರಶೋಷಣೆ ಮಾಡುತ್ತಿದ್ದೇನೆ. ಎಂದರೆ ಅದು ನನ್ನ ಸತ್ತ ಇನಿಯನಿಗೆ ತೋರಿಸುವ ಕೃತಜ್ಞತೆ ಮಾತ್ರ. ಛೆ! ಛೆ! ಜಪವೂ ಇಲ್ಲ ತಪವೂ ಇಲ್ಲ. ಎಲೈ ರಾಜನೆ, ಜಪಮಾಡುವ ನೆವದಿಂದ ಅವನ ಗುಣಸಮುದಾಯವನ್ನು ಲೆಕ್ಕ ಮಾಡುತ್ತಿದ್ದೇನೆ, ಅಷ್ಟೆ! ೧೯೮. ಎಲೈ ಚಂದ್ರನಂತಿರುವ ಅರಸನೆ, ಅಪಕೀರ್ತಿಗೆ ಪಾತ್ರಳಾದ, ಶುಭಲಕ್ಷಣಗಳಿಲ್ಲದಿರುವ, ಅಮಂಗಳಸ್ವರೂಪಳಾದ, ವ್ಯರ್ಥವಾಗಿ ಹುಟ್ಟಿರುವ, ದಯಾರಹಿತಳಾದ, ಪ್ರೀತಿಯೇ ಇಲ್ಲದ, ನಾಚಿಕೆಯಿಲ್ಲದ, ಸಂತೋಷವಿಲ್ಲದ, ನಿಂದೆಗೆ ಪಾತ್ರಳಾದ, ವ್ಯರ್ಥವಾಗಿ ಜೀವನವನ್ನು ಮಾಡುತ್ತಿರುವ ಕ್ರೂರಳಾದ, ಬ್ರಹ್ಮಹತ್ಯೆಯ ಮಹಾಪಾಪಕ್ಕೆ ಗುರಿಯಾಗಿರುವ ಘಾತುಕಿಯಾದ, ಪಾಷಿಷ್ಠಳಾದ ನನ್ನ ವಿಷಯವನ್ನು ಕೇಳಿದ್ದರಿಂದ ನಿನಗೆ ಏನು ಪ್ರಯೋಜನವಾಯಿತು? ಹೇಳು!” ೧೯೯. (ಎಂದು ಹೇಳಿ) ಮನೋಹರವಾದ ಚಂದ್ರನು ಶರತ್ಕಾಲದ ಬಿಳಿಯ ಮೋಡದ ಪದರದಿಂದ ಮುಚ್ಚಿಕೊಂಡಿರುವಂತೆ ಅವಳು ಸೊಗಸಾದ

ವ|| ಅಂತೞುತಿರ್ದಳನೆಂತಾನುಂ ಸಂತೈಸಿ

ಮೊದಲೊಳ್ ಗೌರವಮಂ ಮಾ
ಡಿದುದಲ್ಲದೆ ತನ್ನ ವಾರ್ತೆಯಂ ಸದ್ಭಾ
ವದಿನಾದ್ಯಂತಂ ಸತಿಪೇ
ೞ್ದುದರ್ಕೆ ಹೃತಹೃದಯನಾಗಿ ಚಂದ್ರಾಪೀಡಂ  ೨೦೦

ಇನಿಸೊಗೆತರ್ಪ ಕಣ್ಬನಿಗಳಿಂದಮೆ ನೇಹಮನುಂಟುಮಾಡುವಂ
ಗನೆಯರೊಳೇನಪಾರಭವಭೋಗಮನಿಂತಿರೆ ಪತ್ತುವಿಟ್ಟು ಕಾ
ನನದೊಳೆ ನಟ್ಟುನಿಂದು ಸುಕುಮಾರಮೆನಿಪ್ಪ ಶರೀರಮಂ ಕಱು
ತ್ತಿನಿವಿರಿದೊಂದು ಘೋರತಪಕೊಡ್ಡಿದೆ ನಿನ್ನವೊಲಾರ್ ಕೃತಜ್ಞೆಯರ್       ೨೧೦

ಸತ್ತವರೇೞ್ವರೆ ಪೇೞೊಡ
ಸತ್ತರೆ ತಮ್ಮೞಲನಳವಿಯಂ ಮೞಸಲೆಂ
ದುತ್ತವಳಿಕೆಯೊಳೆ ಸಾವರ್
ಸತ್ತವರವರ್ಗಾವ ಹಿತಮನಾಚರಿಸುವರೋ   ೨೦೨

ಅವರವರ್ಗಾದ ಕರ್ಮಘಲಮಿರ್ಪಡೆ ಬೇಱದಱಂದ ಮೇಲೆ ಕೂ
ಡುವರೊಡಸ್ತವರೆಂಬೊಡದು ಕೂಡದು ಕೇವಲಮಾತ್ಮಘಾತದೋ
ಷವೆ ಪೆಱತಿಲ್ಲ ಸತ್ತರೊಡಸಾಯದೆ ನಿಂದೊಡೆ ಮಾಡಲಕ್ಕುಮಿ
ತ್ತವರ್ಗೆ ಜಲಾಂಜಲಿಪ್ರಭೃತಿ ದಾನವಿಶೇಷ ಮಹೋಷಕಾರಮಂ ೨೦೩

ಸತ್ತಳೆ ಕಾಮದೇವನ ಪರೋಕ್ಷದೊಳಾ ರತಿ ಪಾಂಡು ಸತ್ತೊಡಂ
ಸತ್ತಳೆ ಕುಂತಿ ಮತ್ತಮಭಿಮನ್ಯುಕುಮಾರಕನಂದು ಸತ್ತೊಡೇ
ನುತ್ತರೆ ಸತ್ತಳೇ ನೆಗೞ್ದ ಸಿಂಧುನೃಪಾಲಕನಂದು ಸತ್ತೊಡಂ
ಸತ್ತಳೆ ದುಶ್ಯಳಾವನಿತೆಯಿಂತಿವು ನೀವರಿದಂದವಲ್ಲವೇ            ೨೦೪

ಬಿಳಿಯ ನಾರುಮಡಿಯ ಸೆರಗಿನಿಂದ ಮುಖವನ್ನು ಮುಚ್ಚಿಕೊಂಡು ಒಂದೇಸಮನೆ ಗೋಳಾಡಿ ಅತ್ತಳು. ಟಿ. ದುಕೂಲ=ರೇಷ್ಮೆ ಬಟ್ಟೆ, ಉತ್ತಮವಾದ ಬಟ್ಟೆ ಎಂಬ ಅರ್ಥವಿದೆ. ಪ್ರಕೃತ ಸಂದರ್ಭಕ್ಕೆ ತಕ್ಕಂತೆ ಉತ್ತಮವಾದ ನಾರುಮಡಿ ಎಂದು ಹೇಳಬೇಕು. ವ|| ಹೀಗೆ ಅಳುತ್ತಿದ್ದ ಅವಳನ್ನು ಬಹಳ ಕಷ್ಟದಿಂದ ಸಮಾಧಾನಪಡಿಸಿ, ೨೦೦. ಚಂದ್ರಾಪೀಡನಿಗೆ ಮೊದಲೆ ಅವಳ ಸದ್ಗುಣಗಳಿಂದ ಗೌರವವುಂಟಾಗಿತ್ತು. ಈಗ ಅವಳು ತನ್ನ ವೃತ್ತಾಂತವನ್ನೆಲ್ಲಾ ಆದ್ಯಂತವಾಗಿ ಒಳ್ಳೆಯ ಮನಸ್ಸಿನಿಂದ ಹೇಳಿದ್ದಕ್ಕೆ ಅವನು ಆಕರ್ಷಿಸಲ್ಪಟ್ಟ ಮನಸ್ಸುಳ್ಳವನಾಗಿ ಹೀಗೆ ಹೇಳಿದನು. ೨೦೧. “ಪೂಜ್ಯಳೆ, ಲೋಕದಲ್ಲಿ ಒಂದಷ್ಟು ಕಣ್ಣೀರನ್ನು ಸುರಿಸಿ ಸ್ನೇಹವನ್ನು ತೋರ್ಪಡಿಸಿಕೊಳ್ಳುವ ಹೆಂಗಸರಲ್ಲಿ ವಿಶೇಷವೇನಿದೆ? ನೀನಾದರೋ ಅಪಾರವಾದ ಐಹಿಕ ಸುಖಭೋಗವನ್ನು ಹೀಗೆ ತೊರೆದು, ಕಾಡಿನಲ್ಲೆ ನೆಲೆಸಿ, ಕೋಮಲವಾದ ಶರೀರವನ್ನು ದಂಡಿಸಿ, ಇಷ್ಟೊಂದು ಕಠೋರವಾದ ತಪಸ್ಸಿಗೆ ಈಡುಮಾಡಿರುವೆ, ನಿನ್ನಂತೆ ಇನಿಯನಲ್ಲಿ ಕೃತಜ್ಞತೆಯುಳ್ಳ ಹೆಂಗಸರು ಯಾರಿದ್ದಾರೆ? ೨೦೨. ಒಂದು ವೇಳೆ ಸಹಗಮನವನ್ನು ಮಾಡಿದರೆ ಸತ್ತವರು ಏಳುತ್ತಾರೆಯೇ? ತಮ್ಮ ದುಖಭಾರವನ್ನು ಅಡಗಿಸಬೇಕೆಂಬ ಒಂದು ಕಾತರತೆಯಿಂದ ಕೆಲವರು ಜೊತೆಯಲ್ಲಿ ಸಾಯುತ್ತಾರೆ. ಅಂತಹವರು ಸತ್ತವರಿಗೆ ಯಾವ ಹಿತವನ್ನು ಮಾಡಿದಂತಾಗುತ್ತದೆ? ೨೦೩. ಸತ್ತವರು ಅವರವರು ಮಾಡಿದ ಕರ್ಮಕ್ಕೆ ಅನುಸಾರವಾಗಿ ಬೇರೆಬೇರೆ ಕಡೆಗಳಲ್ಲಿ ಜನ್ಮವನ್ನು ಪಡೆಯುತ್ತಾರೆ. ಅದರಿಂದ ಮೊದಲು ಸತ್ತವರೂ ಅವರ ಜೊತೆಯಲ್ಲಿ ಸತ್ತವರೂ ಸತ್ತ ಮೇಲೆ ಒಟ್ಟಿಗೆ ಸೇರುತ್ತಾರೆ ಎಂಬುದು ಸುತರಾಂ ಅಸಂಗತವಾಗುತ್ತದೆ. ಅಲ್ಲದೆ ಜೊತೆಯಲ್ಲಿ ಸತ್ತವರಿಗೆ ಆತ್ಮಹತ್ಯಾದೋಷವು ಬೇರೆ ಬರುತ್ತದೆ; ಬೇರೆ ಯಾವ ಪ್ರಯೋಜನವೂ ಇಲ್ಲ. ಅಲ್ಲದೆ ಸತ್ತವರ ಜೊತೆಯಲ್ಲಿ ಸಾಯದೆ ಬದುಕಿದ್ದರೆ, ಅವರಿಗೆ ತರ್ಪಣ ಮೊದಲಾದುವುಗಳನ್ನು ಕೊಡುವುದರಿಂದ ಮಹೋಪಕಾರವನ್ನು ಮಾಡಲು ಸಾಧ್ಯವಾಗುತ್ತದೆ. ೨೦೪. ಮನ್ಮಥನು ಸತ್ತು ಅಗಲಿದನಂತರ ಅವನ ಹೆಂಡತಿಯಾದ ರತಿಯು ಸತ್ತಳೇನು? ಪಾಂಡುಮಹಾರಾಜನು ಸತ್ತಾಗ ಕುಂತಿ ಸತ್ತಳೆ? ಮತ್ತು ಅಭಿಮನ್ಯು ಸತ್ತಾಗ ಉತ್ತರೆಯು ಸತ್ತಳೆ? ಸೈಂಧವನು ಸತ್ತಾಗ ದುಶ್ಯಳೆಯು ಸತ್ತಳೆ? ಇವೆಲ್ಲವೂ

ವ|| ಅಂತುಮಲ್ಲದೆಯುಂ

ಆನಾಶ್ವಾಸಿಸಿದನಿತಱ
ಳೇನಾ ಚಂದ್ರಮನೆ ನಿನ್ನನಾಶ್ವಾಸಿಸಿದಂ
ತಾನೆಂದೊಡದೇನೆಂಬುದೊ
ಮಾನಿನಿ ತದ್ವಿಧರ ವಚನಮವಿತಥಮೆ ವಲಂ             ೨೦೫

ವ|| ಅದಱನನಿಂದ್ಯಮಪ್ಪ ನಿಜಚರಿತಮಂ ನಿಂದಿಸಲಾಗದೆಂದನೇಕ ಪುರಾಣಕಥಾ ಪ್ರಕಥನದೊಳಂ ಬಹುಪ್ರಕಾರ ಸಾಂತ್ವವಚನ ದೊಳಮೆಂತಾನುಮರಸಂ ಸಂತೈಸಿ

ವಿನಯದೊಳೆ ಮತ್ತಮಂದೊ
ಯ್ಯನೆ ನಿರ್ಝರವಾರಿಯಂ ನಿಜಾಂಜಲಿಯಿಂ ತಂ
ದನುವಿಸಿ ವದನಪ್ರಕ್ಷಾ
ಳನಮಂ ಮಾಡಿಸಿದನಂದು ಚಂದ್ರಾಪೀಡಂ   ೨೦೬

ಅವಧರಿಸಿ ಮಹಾಶ್ವೇತಾ
ಪ್ರವೃತ್ತಿಯಂ ಶೋಕಭಾರಮಂ ತಾಳ್ದಿದವೋಲ್
ರವಿಯುಂ ದಿವಸವ್ಯಾಪಾ
ರವೆಲ್ಲಮಂ ಪತ್ತುವಿಟ್ಟಧೋಮುಖನಾದಂ      ೨೦೭

ವ|| ಅನಂತರಂ ರವಿಬಿಂಬಮಪರಾಂಭೋಗೆ ವಿಲಂಬಿಸುವುದುಂ

ಜಳಜಭವಾಂಡಂ ಜಂಬೂ
ಫಳರಸದಿಂ ತೀವಿತೆಂಬಿನಂ ಜಗಮಂ ಕೋ
ಕಿಳನಯನರುಚಿರುಚಿರ ಕ
ಣಳಿಸಿರೆ ಪರ್ವಿದುದು ಸಾಂದ್ರ ಸಂಧ್ಯಾರಾಗಂ            ೨೦೮

ವ|| ಆ ಸಂಧ್ಯಾಸಮಯದೊಳ್

ಬೞಕೆ ಪದಮಂ ಕಮಂಡಲು
ಜಳದಿಂದಂ ಕರ್ಚಿ ತೀರ್ಚಿ ಸಂಧ್ಯಾನಿಯಮಂ
ಗಳನೆಯ್ದಿ ಭಸ್ಮಶಯ್ಯಾ
ತಳದೊಳ್ ಬಿಸುಸುಯ್ದು ಮೆಯ್ಯನಿಕ್ಕಿದಳಾಗಳ್         ೨೦೯

ನಿಮಗೆ ತಿಳಿದಿರುವ ವಿಷಯವೇ ಅಲ್ಲವೆ? ವ|| ಅದಲ್ಲದೆ ೨೦೫. ನಾನು ಸಮಾಧಾನಪಡಿಸುವುದು ಏನು ಮಹಾ ದೊಡ್ಡ ವಿಚಾರ. ಆ ಚಂದ್ರನೇ ಬಂದು ನಿಮ್ಮನ್ನು ಸಮಾಧಾನಪಡಿಸಿದ್ದಾನೆ ಎಂದ ಮೇಲೆ ಅದರ ಅತಿಶಯವನ್ನು ಏನು ಹೇಳೋಣಮ್ಮ. ಅಂತಹವರ ಮಾತು ಖಂಡಿತವಾಗಿಯೂ ಸುಳ್ಳಾಗುವುದಿಲ್ಲ. ವ|| ಅದರಿಂದ ತೆಗಳಿಕೆಗೆ ತಕ್ಕುದಲ್ಲದ ನಿನ್ನ ನಡೆವಳಿಕೆಯನ್ನು ತೆಗಳಬಾರದು ಎಂದು ಅನೇಕ ಪುರಾಣಕಥೆಗಳನ್ನು ಹೇಳುವುದರಿಂದಲೂ, ಅನೇಕ ಪ್ರಕಾರವಾದ ಸಮಾಧಾನದ ಮಾತುಗಳಿಂದಲೂ ಹೇಗೋ ಸಮಾಧಾನ ಪಡಿಸಿ ೨೦೬. ಮತ್ತು ಆಗ ವಿನಯದಿಂದ ಮೆಲ್ಲನೆ ಹೋಗಿ ಝರಿಯ ನೀರನ್ನು ತನ್ನ ಬೊಗಸೆಯಿಂದ ತಂದು ಚಂದ್ರಾಪೀಡನು ಅವಳಿಗೆ ಇಷ್ಟವಿಲ್ಲದಿದ್ದರೂ ಬಲಾತ್ಕಾರಮಾಡಿಯೇ ಮುಖವನ್ನು ತೊಳೆದುಕೊಳ್ಳುವಂತೆ ಮಾಡಿದನು. ೨೦೭. ಈ ಮಹಾಶ್ವೇತಾವೃತ್ತಾಂತವನ್ನು ಕೇಳಿ ತಿಳಿದು ಮಹತ್ತರವಾದ ದುಖವನ್ನು ಪಡೆದಂತೆ ಸೂರ್ಯನೂ, ಹಗಲಿನ ಕೆಲಸವನ್ನು (ಬೆಳಕು ಕೊಡುವ, ಸಂಚರಿಸುವ ಕೆಲಸವನ್ನು) ತೊರೆದು ಅಧೋಮುಖನಾದನು. (ಕೆಳಕ್ಕೆ ಇಳಿದನು, ಮುಖವನ್ನು ತಗ್ಗಿಸಿದನು) ವ|| ಬಳಿಕ ಸೂರ್ಯಮಂಡಳವು ಪಶ್ಚಿಮಸಮುದ್ರಕ್ಕೆ ಇಳಿಯುತ್ತಿರಲಾಗಿ ೨೦೮. ಬ್ರಹ್ಮಾಂಡವು ನೇರಳೆಹಣ್ಣಿನ ರಸದಿಂದ ಲೇಪನ ಹೊಂದಿದಂತೆ ಕೋಕಿಲೆಯ ಕಣ್ಣಿನಂತೆ ಸುಂದರವಾದ ಕಾಂತಿಯುಳ್ಳ ದಟ್ಟವಾದ ಸಂಜೆಗೆಂಪು ಜಗತ್ತಿನಲ್ಲಿ ಹರಡಿತು. ವ|| ಆ ಸಂಧ್ಯಾಕಾಲದಲ್ಲಿ ೨೦೯. ಬಳಿಕ ಕಮಂಡಲುವಿನ ನೀರಿನಿಂದ ಕಾಲುಗಳನ್ನು ತೊಳೆದುಕೊಂಡು, ಸಂಧ್ಯಾಕಾಲದಲ್ಲಿ ಮಾಡಬೇಕಾದ ವಿಗಳನ್ನೆಲ್ಲಾ ಮುಗಿಸಿಕೊಂಡು ಭಸ್ಮಶಯ್ಯೆಯಲ್ಲಿ ನಿಟ್ಟುಸಿರುಬಿಟ್ಟು ಕುಳಿತುಕೊಂಡಳು. ಟಿ. ಕಟ್ಟುನಿಟ್ಟಾದ ಪಾಶುಪತವ್ರತವನ್ನು ತಾಳಿರುವವರು

ವ|| ಇತ್ತ ಕೃತಸಂಧ್ಯಾವಂದನಂ ನರೇಂದ್ರನಾತ್ಮೀಯ ಪ್ರಕಲ್ಪಿತ ಲತಾಪಲ್ಲವಶಯನದೊಳ್ ಕುಳ್ಳಿರ್ದು ಮನೋಭವವಿಜೃಂಭಿತಂಗಳಂ ಮನದೊಳ್ ಭಾವಿಸುತ್ತಂ ವಿಸ್ಮಯಾಕ್ಷಿಪ್ತಚಿತ್ತನಿಂತೆಂದಂ

ತರಳಿಕೆಯೆಂಬಳ್ ನಿಮ್ಮಯ
ಪರಿಚಾರಿಕೆಯೆತ್ತವೋದಳೆಲ್ಲಿರ್ದಪಳೆಂ
ದರಸಂ ಬೆಸಗೊಳ್ವುದುಮಾ
ದರದೆ ಮಹಾಶ್ವೇತೆ ಪೇೞಲುದ್ಯತೆಯಾದಳ್             ೨೧೦

ವ|| ಅದೆಂತೆನೆ

ವಿಭೂತಿಯಿಂದ ಏರ್ಪಡಿಸಿರುವ ಹಾಸಿಗೆಯ ಮೇಲೆ ಮಲಗುತ್ತಾರೆ. ಅದಕ್ಕೆ “ಭಸ್ಮಶಯ್ಯೆ” ಎಂದು ಹೆಸರು. ವ|| ಈ ಕಡೆ ಚಂದ್ರಾಪೀಡನು ಸಂಧ್ಯಾವಂದನೆಯನ್ನು ಮಾಡಿ ತಾನೆ ಬಳ್ಳಿಯ ಚಿಗುರಿನ ಹಾಸಿಗೆಯನ್ನು ಮಾಡಿಕೊಂಡು ಕುಳಿತುಕೊಂಡನು. ಅಲ್ಲಿ ಮನ್ಮಥನ ವಿಚಿತ್ರಚೇಷ್ಟೆಗಳನ್ನು ಮನಸ್ಸಿನಲ್ಲೇ ಆಲೋಚಿಸುತ್ತ ಆಶ್ಚರ್ಯದಿಂದ ಕೂಡಿದ ಮನಸ್ಸುಳ್ಳವನಾಗಿ ಹೀಗೆ ಹೇಳಿದನು. ೨೧೦. “ನಿಮ್ಮ ಊಳಿಗದವಳಾದ ತರಳಿಕೆ ಎಂಬುವಳು ಎಲ್ಲಿಗೆ ಹೋಗಿದ್ದಾಳೆ? ಎಲ್ಲಿದ್ದಾಳೆ?” ಎಂದು ಚಂದ್ರಾಪೀಡನು ಕೇಳಲು ಮಹಾಶ್ವೇತೆಯು ಆದರದಿಂದ ಹೇಳಲುಪಕ್ರಮಿಸಿದಳು. ವ|| ಅದು ಹೇಗೆಂದರೆ

ಮಹಾಶ್ವೇತೆಯ ವೃತ್ತಾಂತ

ಮುಗಿಯಿತು