ಚನ ಶೋಭಾಸಂವಿಭಾಗಮಂ ಕೊಟ್ಟುದೊ ಲೋ
ಚನಮಾಲೆ ನಿಮಿರ್ದುದೊ ಮೇ
ಣೆನೆ ಮುನಿಪನ ದೀರ್ಘಲೋಚನದ್ವಯಮೆಸೆಗುಂ       ೨೧
ನವಯವ್ವನರಾಗಂ ಚಿ
ತ್ತವನೆಂದುಂ ಪುಗಲೆ ಪದೆಯದಿರ್ದುದೊ ಪೊಱಗೆಂ
ಬವೊಲೆಸೆದು ಪಕ್ವಬಿಂಬ
ಚ್ಛವಿಯಂ ಮಾರ್ಕೊಳ್ವುದಧರಮಣಿ ಮುನಿವರನಾ       ೨೨

ಮೊಗಮೀಸೆ ಬಾರದಿರ್ದುಂ
ಸೊಗಯಿಪ ತನ್ಮುನಿಕುಮಾರವದನಾಬ್ಜಂ ದಿ
ಟ್ಟಿಗೆ ಚೆಲ್ವುವೆತ್ತು ಮಱದುಂ
ಬಿಗಳೆಱಗದ ಕನಕಕಮಲಮಂ ನೆನೆಯಿಸುಗುಂ          ೨೩

ಅದು ಮದನಚಾಪಗುಣಮಂ
ತದು ಪರಮತಪಸ್ತಟಾಕಕಮಲಿನಿಯೊಳಗು
ಣ್ಮಿದ ನವಮೃಣಾಳಮೆನಲೆಸೆ
ದುದು ಮುನಿಗತ್ಯಂತಧವಳಮೆನಿಪುಪವೀತಂ             ೨೪

ಕರತಳಮೊಂದಱ ಳ್ ಮಣಿಕಮಂಡಲು ನಾಳಸಮೇತಮಪ್ಪ ಕೇ
ಸರಫಲದಂತಿರಿರ್ದುದು ಮನೋಜವಿನಾಶದಿನೞ್ವ ತನ್ಮನೋ
ಹರಿಯ ಪೊದೞ್ದ ಕಣ್ಬನಿಗಳಂತಮಲಸಟಿಕಾಕ್ಷಮಾಲೆ ಸುಂ
ದರತರಮಾದುದೊಂದು ಕರಪಲ್ಲವದೊಳ್ ಮುನಿಪಾಗ್ರಗಣ್ಯನಾ            ೨೫

ನಿರವದ್ಯ ನಿಖಿಲವಿದ್ಯಾ
ತರಂಗಿಣೀಸಂಗದಲ್ಲಿ ತೋಱುವ ಸುೞಯಂ
ತಿರೆ ಸುರುಳ್ದು ಮುನಿಕುಮಾರನ
ಸುರುಚಿರಗಂಭೀರನಾಭಿಮಂಡಲಮೆಸೆಗುಂ   ೨೬

ಹೋಲುತ್ತಿದ್ದನು. ೨೧. ಆ ಮುನಿಕುಮಾರನ ದೀರ್ಘವಾದ ಕಣ್ಣುಗಳು ಬಹಳ ಸುಂದರವಾಗಿದ್ದುದರಿಂದ ಕಾಡಿನ ಜಿಂಕೆಗಳೆಲ್ಲವೂ ತಮ್ಮತಮ್ಮ ಕಣ್ಣುಗಳ ಸೌಂದರ್ಯದ ಒಂದೊಂದು ಅಂಶವನ್ನು ಕೊಟ್ಟಿರುವಂತೆಯೂ, ಕಣ್ಣುಗಳನ್ನೇ ಸೇರಿಸಿ ಕಟ್ಟಿರುವ ನೀಳವಾದ ಮಾಲಿಕೆಯಂತೆಯೂ ಶೋಭಿಸುತ್ತಿದ್ದುವು. ೨೨. ನವತಾರುಣ್ಯದಿಂದ ಉಂಟಾದ ರಾಗವು (ಅನುರಾಗ, ಕೆಂಪು) ಮನಸ್ಸನ್ನು ಪ್ರವೇಶಿಸಲು ಆಗದಿದ್ದುದರಿಂದ ಹೊರಗೆ ನಿಂತಿದೆಯೋ ಎಂಬಂತೆ ಅವನ ಪದ್ಮರಾಗಮಣಿಯಂತಿರುವ ಕೆಂದುಟಿಯು ಹಣ್ಣಾದ ತೊಂಡೆಹಣ್ಣಿನ ಕಾಂತಿಯನ್ನು ಪ್ರತಿಭಟಿಸುತ್ತಿತ್ತು. (ಅದರ ಕಾಂತಿಗಿಂತಲೂ ಮಿಗಿಲಾದ ಕಾಂತಿಯುಳ್ಳದ್ದಾಗಿತ್ತು) ಟಿ. ಕವಿಸಮಯದಲ್ಲಿ ಅನುರಾಗವು ಕೆಂಪುಬಣ್ಣವುಳ್ಳದ್ದು. ಅದರಿಂದ ಕೆಂದುಟಿಯನ್ನು ಹೊರಗಿರುವ ಅನುರಾಗವೆಂದು ವರ್ಣಿಸಿದ್ದಾನೆ. ೨೩. ಇನ್ನೂ ಮೀಸೆ ಮೂಡದಿರುವ ಅವನ ತಾವರೆಯಂದದ ಮುಖವು ಅಂದವಾಗಿ ಇನ್ನೂ ಮರಿದುಂಬಿಗಳು ಎರಗದಿರುವ ಹೊಂದಾವರೆಯನ್ನು ನೆನಪಿಗೆ ತರುತ್ತಿತ್ತು. ಟಿ|| ಇಲ್ಲಿ ಆಗತಾನೆ ಅರಳುತ್ತಿರುವ ಹೊಂದಾವರೆ ಎಂದು ತಿಳಿಯಬೇಕು. ೨೪. ಆ ಮುನಿಕುಮಾರನ ಬಹಳ ಶುಭ್ರವಾದ ಯಜ್ಞೋಪವೀತವು ಮನ್ಮಥನ ಬಿಲ್ಲಿನ ನಾಣಿನಂತೆಯೂ, ಮಹಾತಪಸ್ಸೆಂಬ ಕೆರೆಯಲ್ಲಿ ಬೆಳೆದಿರುವ ತಾವರೆಯ ದಂಟಿನ ದಾರಗಳಂತೆಯೂ ಶೋಭಿಸುತ್ತಿತ್ತು. ೨೫. ಆ ಮುನೀಶ್ವರನ ಒಂದು ಕೈಯಲ್ಲಿದ್ದ ಸಟಿಕಮಯವಾದ ಕಮಂಡಲು ತೊಟ್ಟಿನಿಂದ ಕೂಡಿಕೊಂಡಿರುವ ವಕುಳಫಲದಂತೆ ಕಾಣುತ್ತಿತ್ತು. ಚಿಗುರಿನಂತೆ ಮೃದುವಾದ ಮತ್ತೊಂದು ಕೈಯಲ್ಲಿದ್ದ ಸ್ವಚ್ಛವಾದ ಸಟಿಕದ ಜಪಸರವು ಮನ್ಮಥನ ವಿನಾಶದಿಂದ ಅಳುತ್ತಿರುವ ರತೀದೇವಿಯ ಕಣ್ಣುಗಳಿಂದ ಉದುರುತ್ತಿರುವ ಕಂಬನಿಗಳಂತೆ ರಮಣೀಯವಾಗಿ ಕಾಣುತ್ತಿತ್ತು. ೨೬. ಆ ಮುನಿಕುಮಾರನ ಸುರುಳಿ ಸುತ್ತಿಕೊಂಡಿರುವ ಸುಂದರವಾದ ಹಾಗೂ ಆಳವಾದ ಹೊಕ್ಕಳು ಪರಿಶುದ್ಧವಾದ ಸಮಸ್ತ ವಿದ್ಯೆಗಳೆಂಬ

ಇಂಬಾಗಿರೆ ಬಾಂದೊ ಯೊಳ
ಲುಂಬಿದ ಮಂದಾರವಲ್ಕವಿರಚಿತ ನವದಿ
ವ್ಯಾಂಬರವಾ ಮುನಿವರನೊಳ್
ಬಿಂಬಿಸಿತು ಜರಚ್ಚಕೋರಲೋಚನರುಚಿರಂ   ೨೭

ವ|| ಅಂತುಮಲ್ಲದೆಯುಂ ಬ್ರಹ್ಮಚರ‍್ಯಕ್ಕಲಂಕಾರಮುಂ ಧರ್ಮಕ್ಕೆ ನವಯವ್ವನಮುಂ ಸರಸ್ವತಿಗೆ ಲೀಲಾ ವಿಲಾಸಮುಂ ವಿದ್ಯಾಪ್ರತತಿಗೆ ಸ್ವಯಂವರಪತಿಯುಂ ಸಮಸ್ತಶ್ರುತಿಗಳಿಗೆ ಸಂಕೇತನಿಕೇತನಮುಮೆನಿಸಿದನಲ್ಲದೆಯುಂ

ತನಗನುರೂಪಮೆಂಬಿನೆಗಮೊರ್ವ ಕುಮಾರತಪಸ್ವಿ ದೇವತಾ
ರ್ಚನೆಗೆ ವನಕ್ಕೆ ಬಂದು ಪೊಸವೂಗಳನರ್ತಿಯೊಳಾಯ್ದು ಕೊಯ್ದು ಬೆ
ನ್ನನೆ ಬರಲೀ ವನಾಂತರ ಸರೋವರದಲ್ಲಿಗೆ ಮೀಯಲೆಂದು ಮೆ
ಲ್ಲನೆ ಬರುತಿರ್ದ ತನ್ಮುನಿಕುಮಾರನನಾಂ ಬಿಡೆ ನೋಡಿದೆಂ ನೃಪಾ        ೨೮

ವ|| ಅಂತು ನೋೞ್ಪನ್ನೆಗಂ

ಸ್ಮರಕಾಂತಾರತಘರ್ಮಬಿಂದುಚಯಮೋ ಮೀನಾಂಕಮತ್ತೇಭಚಾ
ಮರಮೋ ನಂದನಲಕ್ಷಿ ಯೊಳ್ನಗೆಯೊ ತಾಂ ಮಂದಾನಿಲಂ ತೆಂಕಣಿಂ
ಬರೆ ಚೈತ್ರಂ ಕುಡುವರ್ಘ್ಯಲಾಜತತಿಯೋ ಪೇೞೆಂಬಿನಂ ಪುಷ್ಪಮಂ
ಜರಿಯಂ ತನ್ಮುನಿಕರ್ಣಪೂರಕಮನತ್ಯಾಶ್ಚರ್ಯದಿಂ ನೋಡಿದೆಂ            ೨೯

ಗುಂಜನ್ಮದಾಳಿಮಾಲಾ
ಮಂಜರಿ ಬೆನ್ನಟ್ಟಿ ಬಂದ ನವಸೌರಭಮಂ
ರಂಜಿಸಿ ತೋಱುವ ಸುಮನೋ
ಮಂಜರಿಯಿಂ ಬಂದುದೆಂದು ಪರಿಭಾವಿಸಿದೆಂ            ೩೦

ವ|| ಅಂತು ಭಾವಿಸುತ್ತುಂ ಆ ಮುನಿಕುಮಾರವದನೇಂದುಬಿಂಬಮಂ ನೋಡಿ

ಸಿರಿ ನಲವಿಂದಮಿರ್ಪ ನೆಲೆ ಕಣ್ಗಳ ಪರ್ವಮೆನಿಪ್ಪ ಪಂಕಜೋ
ತ್ಕರಮುಮನಿಂದುಮಂಡಲಮುಮಂ ಮೊದಲೊಳ್ ಸಮೆದಬ್ಜಜಂ ಮನೋ
ಹರಮೆನೆ ಮಾಡಿದೀ ಮೊಗದ ಪೋಲ್ವೆಗೆ ಮುನ್ನೆಗೞಲ್ ತಗುೞ ಬಿ
ತ್ತರಿಸಿದನಲ್ಲದಿಂತು ಸಮವಸ್ತುಗಳಂ ಪಡೆವಂತು ಗಾಂಪನೇ     ೩೧

ನದಿಗಳ ಸಂಗಮದಲ್ಲಿ ತೋರುವ ಸುಳಿಯಂತೆ ಶೋಭಿಸುತ್ತಿತ್ತು. ೨೭. ದೇವಲೋಕದ ಮಂದಾರವೃಕ್ಷದ ನಾರುಗಳಿಂದ ನಿರ್ಮಿಸಿರುವ ಮತ್ತು ಹೊಸದಾಗಿರುವ, ದೇವಗಂಗಾನದಿಯಲ್ಲಿ ಒಗೆದು ಮಡಿಮಾಡಿರುವ, ಮುದಿಚಕೋರಪಕ್ಷಿಯ ಕಣ್ಣಿನಂತೆ ಸುಂದರವಾದ ಅತ್ಯುತ್ತಮವಾದ ಪಂಚೆಯು ಒಪ್ಪವಾಗಿ ಶೋಭಿಸುತ್ತಿತ್ತು. ವ|| ಅದಲ್ಲದೆ ಅವನು ಬ್ರಹ್ಮಚರ್ಯವ್ರತಕ್ಕೆ ಅಲಂಕಾರರೂಪನಾಗಿಯೂ, ಧರ್ಮಕ್ಕೆ ಹೊಸಹರೆಯದಂತೆಯೂ, ಸರಸ್ವತಿಗೆ ವಿನೋದದ ಬೆಡಗಿನಂತೆಯೂ, ವಿದ್ಯೆಗಳೆಂಬ ಲಲನೆಯರಿಗೆ ಸ್ವಯಂವರದ ಪತಿಯಂತೆಯೂ, ಸಮಸ್ತ ವೇದಗಳಿಗೂ ಸಂಕೇತಸ್ಥಾನವಾದಂತೆಯೂ (ಸೇರಲು ಗೊತ್ತುಮಾಡಿಕೊಂಡಿರುವ ಸ್ಥಳ) ಇದ್ದನು. ೨೮. ಅವನಿಗೆ ಸರಿಸಮಾನನಾದ ಮತ್ತೊಬ್ಬ ತರುಣ ಮುನಿಯು ದೇವರ ಪೂಜೆಗಾಗಿ ಈ ಕಾಡಿಗೆ ಬಂದು ಹೊಸಹೂವುಗಳನ್ನು ಆಸೆಯಿಂದ ಆರಿಸಿ ಕೊಯ್ಯುತ್ತಾ ಅವನ ಹಿಂದೆಯೇ ಬರುತ್ತಿದ್ದನು. ಎಲೈ ರಾಜನೆ, ಹೀಗೆ ಈ ಕಾಡಿನ ಒಳಗಿರುವ ಸರೋವರಕ್ಕೆ ಸ್ನಾನಕ್ಕಾಗಿ ಮೆಲ್ಲನೆ ಬರುತ್ತಿದ್ದ ಆ ಋಷಿಕುಮಾರನನ್ನು ನಾನು ಬಿಡದೆ ನೋಡಿದೆನು. ವ|| ಹಾಗೆ ನೋಡುತ್ತಿರಲಾಗಿ ೨೯. ಆಗ ನಾನು ಆ ಮುನಿಯ ಕಿವಿಯ ಮೇಲೆ ಇಟ್ಟುಕೊಂಡಿದ್ದ ಹೂವಿನ ಗೊಂಚಲನ್ನು ಬಹಳ ಆಶ್ಚರ್ಯದಿಂದ ನೋಡಿದೆನು. ಅದು ಮನ್ಮಥನ ಮಡದಿಯಾದ ರತಿಯ ಸಂಭೋಗಕಾಲದಲ್ಲಿ ಉಂಟಾದ ಬೆವರುಹನಿಗಳ ಗುಂಪಿನಂತೆಯೂ, ಮನ್ಮಥನೆಂಬ ಮದ್ದಾನೆಯ ಚಾಮರದಂತೆಯೂ, ವನಲಕ್ಷಿ ಯ ಮಂದಹಾಸದಂತೆಯೂ, ಮಂದಮಾರುತವು ದಕ್ಷಿಣದ ಕಡೆಯಿಂದ ಬರಲಾಗಿ ಚೈತ್ರಮಾಸವು ನೀಡುವ ಸ್ವಾಗತಕಾಲದ ಅರ್ಘ್ಯದಲ್ಲಿರುವ ಅರಳುಗಳಂತೆಯೂ ಶೋಭಿಸುತ್ತಿತ್ತು. ೩೦. ಮೊರೆಯುತ್ತಿರುವ ಹಾಗೂ ಮದವೇರಿದ ದುಂಬಿಸಾಲುಗಳ ತಂಡವು ಬೆನ್ನಟ್ಟಿಕೊಂಡು ಬಂದ ಹೊಸಕಂಪು ಈ ಹೂವಿನ ಗೊಂಚಲಿನಿಂದಲೇ ಬಂದಿರಬೇಕೆಂದು ನಾನು

ನಿಶ್ಚೆ ಸಿದೆನು. ವ|| ಹಾಗೆ ಆಲೋಚಿಸುತ್ತಾ ಆ ಮುನಿಕುಮಾರನ ಮುಖಚಂದ್ರನನ್ನು ನೋಡಿ ೩೧. ಲಕ್ಷಿ ಯು ಸಂತೋಷದಿಂದ ವಾಸ

ವ|| ಮತ್ತಂ

ಕೇಳಿ ಸುಷಮ್ನೆಯೆಂಬ ಕರದಿಂ ಗಡ ಚಂದ್ರಕಲಾಕಲಾಪಮಂ
ಕಾಲದೊಳಂಶುಮಾಲಿ ತೆಗೆದೀಂಟುವನೆಂಬುದಸತ್ಯಮಾ ಪ್ರಭಾ
ಜಾಲಕಮೆಲ್ಲಮೀ ತನುವಿನೊಳ್ ಪುಗುತಿರ್ಪುದು ತಪ್ಪದಲ್ಲದಿಂ
ತೀ ಲಲಿತಾಂಗೞು ತಪದೊಳಿಂತಿರೆ ಕಾಂತಿಯನಪ್ಪುಕೆಯ್ಗುಮೇ ೩೨

ವ|| ಎಂದು ರೂಪೈಕಪಕ್ಷಪಾತಮಂ ಭಾವಿಸುತ್ತಮಿರ್ಪುದುಂ

ನವಯವ್ವನದೊಳ್ ಗುಣದೋ
ಷವಿಚಾರಮನಿಂತು ಮಾಡಲೀಯದ ಭಾವೋ
ಧ್ಭವನಿಂ ಪರವಶೆಯಾದೆಂ
ನವಕುಸುಮಾಸವದೆ ಸೊಕ್ಕಿದಳಿನಿಯ ತೆಱದಿಂ          ೩೩

ವ|| ಅನಂತರಮುಸಿರೊಡನೆಮೆಯಿಕ್ಕುವುದಂ ಮದು ಪರಿದು ಪತ್ತಲವ್ವಳಿಸಿ ಕಳವಳಿಸಿ ಕೊಂಕಿ ಬಳಸುವೆಳಸುವಲರ್ಗಂಗಳಿಂ ತದ್ರೂಪಲಾವಣ್ಯರಸಮನೞ್ಕಱಂ ಬರೆ ಪೀರ್ವಂತೆ ನಿನಗೊಳಗಾದೆನೆಂಬಂತೆ ಮನಮನಂಗಯ್ಯಲಿಕ್ಕಿ ತೋರ್ಪನೆಂಬಂತೆ ತನ್ಮಯಮಾಗಲೊಡರಿಪೆನೆಂ ಬಂತೆ ಮದನನಲೆದಪಂ ಕಾಯೆನ್ನನೆಂಬಂತೆ ಶರಣ್ಬುಗುವೆನೆಂಬಂತೆ ಮನದೊಳೆಡೆಗುಡೆಂದಳುಪಂ ತೋಱುವಂತೆ ಕುಲಹೀನ ಕನ್ಯಕಾಜನೋಚಿತಮತಿ ಲಜ್ಜಾಕರಮನೋರಥವಿದೆನಗೆ ತಕ್ಕುದಲ್ಲದುದಂ ನೆಗೞ್ದೆನೆಂದಱವೆನಾಗಿಯುಂ ಅತ್ಯಾಸಕ್ತಿಯಿಂ ಮಱವಟ್ಟರಂತೆಯುಂ ಚಿತ್ರಿಸಿದರಂತೆಯುಂ ಮೂರ್ಛೆವೋದರಂತೆಯುಂ ಆರಾನುಂ ಪಿಡಿಕೆವೆತ್ತರಂತೆಯುಂ ಮಿಡುಕದೆ ನೋಡುತಿರ್ದೆನನ್ನೆಗಂ

ಪೂಗಣೆ ನಾಂಟಿದಂತೆ ತನು ಕಂಪಿಸುತಿರ್ದುದು ಘರ್ಮವಾರಿಯಿಂ
ದಾಗಳೆ ಕರ್ಚಿದಂತೆ ನೆಪೋದುದು ಲಜ್ಜೆ ಮರಳ್ದು ತನ್ಮಹಾ
ಭಾಗನ ರೂಪನೀಕ್ಷಿಸುವವೋಲ್ ಪುಳಕಂ ತಲೆದೋಱದತ್ತು ಕಾ
ಮಾಗಮನಕ್ಕೆ ಪಕ್ಕುಗೊಂಡುವಂತೆವೊಲಿರ್ದುದು ಸುಯ್ ನಿರಂತರಂ     ೩೪

ಮಾಡುವ ಕಮಲಗಳನ್ನೂ, ಕಣ್ಣುಗಳಿಗೆ ಹಬ್ಬವನ್ನುಂಟುಮಾಡುವ ಚಂದ್ರಮಂಡಲವನ್ನೂ ಬ್ರಹ್ಮನು ಮೊದಲು ಸೃಷ್ಟಿಮಾಡಿ ಆಮೇಲೆ ಈ ಸುಂದರವಾದ ಮುಖವನ್ನು ಸೃಷ್ಟಿಮಾಡಿದ್ದಾನೆ. ಹೀಗೆ ಒಂದೇ ಬಗೆಯ ವಸ್ತುಗಳನ್ನು ಮತ್ತೆ ಮತ್ತೆ ಮಾಡುವುದಕ್ಕೆ ಬ್ರಹ್ಮನೇನೂ ದಡ್ಡನಲ್ಲ. ಈ ಮುಖವನ್ನು ಸೃಷ್ಟಿಮಾಡುವುದಕ್ಕೆ ಮೊದಲು ಮಾದರಿಗಾಗಿ ಅವುಗಳನ್ನು ನಿರ್ಮಿಸಲು ಪ್ರಾರಂಭಿಸಿ ಚೆನ್ನಾಗಿ ಅಭ್ಯಾಸಮಾಡಿಕೊಂಡನು. ಕೈಕುದುರಿದ ಮೇಲೆ ಈ ಮುನಿಕುಮಾರನ ಮುಖವನ್ನು ಸೃಷ್ಟಿಮಾಡಿದ್ದಾನೆ. (ಟಿ|| ಇವನ ಮುಖವು ಅವರೆಡಕ್ಕಿಂತ ಹೆಚ್ಚು ರಮಣೀಯವಾಗಿದೆ ಎಂದು ತಾತ್ಪರ್ಯ) ವ|| ಮತ್ತು ೩೨. “ ಸೂರ್ಯನು ಕೃಷ್ಣಪಕ್ಷದಲ್ಲಿ ಸುಷಮ್ನೆ ಎಂದು ಹೆಸರುಳ್ಳ ತನ್ನ ಕಿರಣದಿಂದ ಚಂದ್ರನ ಕಲೆಗಳನ್ನು ಕುಡಿಯುತ್ತಾನೆ” ಎಂದು ಪುರಾಣಗಳಲ್ಲಿ ಹೇಳಿದೆಯಲ್ಲವೆ? ಅದು ಸುಳ್ಳು. ನಾನು ಹೇಳುವುದನ್ನು ಕೇಳಿ. ಆ ಚಂದ್ರನ ಕಾಂತಿಗಳೆಲ್ಲವೂ ಈ ಮುನಿಕುಮಾರನ ಶರೀರದಲ್ಲಿ ಸೇರಿಕೊಳ್ಳುತ್ತಿವೆ. ಇದು ಖಂಡಿತ. ಹಾಗಿಲ್ಲದಿದ್ದರೆ ಈ ಸುಂದರವಾದ ಶರೀರವು ತಪಸ್ಸುಮಾಡುವ ಈ ಸಮಯದಲ್ಲೂ ಇಷ್ಟು ಕಾಂತಿಯನ್ನು ಹೊಂದುತ್ತದೆಯೇ? ವ|| ಎಂದು ಅವನ ಸೌಂದರ್ಯವೊಂದರಲ್ಲೇ ಮುಖ್ಯವಾಗಿ ಅಭಿಮಾನವನ್ನು ಹೊಂದಿರಲಾಗಿ ೩೩. ಹೀಗೆ ಹೊಸಹರಯದಲ್ಲಿ ಗುಣದೋಷವಿಚಾರವನ್ನು ಮಾಡಲು ಅವಕಾಶವನ್ನು ಕೊಡದ ಮನ್ಮಥನಿಂದ ಹೊಸಹೂವಿನ ರಸವನ್ನು ಕುಡಿದು ಸೊಕ್ಕಿದ ಹೆಣ್ಣುದುಂಬಿಯಂತೆ ಪರವಶಳಾದೆನು. ವ|| ಬಳಿಕ ಉಸಿರು ಬಿಡುವುದರೊಂದಿಗೆ ರೆಪ್ಪೆ ಹೊಡೆಯುವುದನ್ನೂ ಮರೆತು ಮೇಲೆ ಬೀಳಲು ಆತುರಪಟ್ಟು ಕಳವಳಗೊಂಡು ವಕ್ರವಾಗಿ ಅವನನ್ನು ಸುತ್ತುಗಟ್ಟಿ ನೋಡಲು ಆಸೆಪಡುವ ಕಣ್ಣುಗಳಿಂದ ಅವನ ಸೌಂದರ್ಯರಸವನ್ನು ಬಹಳ ಆಸಕ್ತಿಯಿಂದ ಅತ್ಯಕವಾಗಿ ಕುಡಿಯುವಂತೆಯೂ, ನಿನಗೆ ನಾನು ಅನಳಾಗಿದ್ದೇನೆ ಎಂಬಂತೆಯೂ, ಮನಸ್ಸನ್ನು ಅಂಗೈಯಲ್ಲಿಟ್ಟುಕೊಂಡು ತೋರಿಸುತ್ತೇನೆ ಎಂಬಂತೆಯೂ, ತನ್ಮಯತೆಯನ್ನು ಪಡೆಯಲು ಪ್ರಯತ್ನಿಸುವಂತೆಯೂ, “ಮನ್ಮಥನು ಬಾಸುತ್ತಿದ್ದಾನೆ, ನನ್ನನ್ನು ಕಾಪಾಡು”ಎಂಬಂತೆಯೂ, ನಿನಗೆ ಶರಣಾಗತಳಾಗಿದ್ದೇನೆ ಎಂಬಂತೆಯೂ, ನಿನ್ನ ಮನಸ್ಸಿನಲ್ಲಿ ನನಗೆ ಸ್ಥಾನವನ್ನು ಕೊಡು ಎಂದು ಅಪೇಕ್ಷೆಯನ್ನು ತೋರಿಸುವಂತೆಯೂ, ಕೇವಲ ಕೀಳುಮಟ್ಟದ ಹುಡುಗಿಯರಿಗೆ ಮಾತ್ರ ಅರ್ಹವಾದ ಬಹಳ ನಾಚಿಕೆಯನ್ನುಂಟುಮಾಡುವ ಈ ಅಪೇಕ್ಷೆಯು ನನಗೆ ತಕ್ಕುದಲ್ಲ, ಇಂತಹ ಅಯೋಗ್ಯ ಕೆಲಸವನ್ನು ಮಾಡುತ್ತಿದ್ದೇನೆಂದು ತಿಳಿದುಕೊಂಡಿದ್ದರೂ ಅತ್ಯಾಸಕ್ತಿಯಿಂದ ಸ್ತಂಭಿತರಾದವರಂತೆಯೂ, ಚಿತ್ರದಲ್ಲಿ ಬರೆಯಲ್ಪಟ್ಟವರಂತೆಯೂ, ಮೂರ್ಛೆಗೊಂಡವರಂತೆಯೂ, ಯಾರಿಂದಲೋ ಹಿಡಿಯಲ್ಪಟ್ಟವರಂತೆಯೂ ಅಲುಗಾಡದೆ ಅವನನ್ನೇ ನೋಡುತ್ತಿದ್ದೆನು. ೩೪. ಮನ್ಮಥನ ಪುಷ್ಪಬಾಣವು ನಾಟಿದಂತೆ ನನ್ನ ಶರೀರವು

ಇವು ಮೊದಲಾಗೊಮ್ಮೆಯೆ ಮದ
ನವಿಕಾರಂ ಪಲವುಮಾಗಳಾಗುತ್ತಿರೆ ಮು
ನ್ನವನಱಯದವಳೆನತ್ಯಭಿ
ನವಸಾಧ್ವಸಮಾಗಲಳ್ಕಿ ತಳವೆಳಗಾದೆಂ       ೩೫

ವ|| ಅಂತು ಬೆಡಗುಗೊಂಡು

ನಿಯತೇಂದ್ರಿಯನೊಳ್ ತೇಜೋ
ಮಯನೊಳ್ ರೂಪೈಕಪಕ್ಷಪಾತದೆ ನೆ ನೀ
ತಿಯನುೞದು ಮುನಿಪನೊಳ್ ನಿ
ರ್ಭಯನಂಗಜನೆನ್ನನಿಂತಿರಲ್ ಸೋಲಿಕುಮೇ            ೩೬

ಕೂರ್ತಂಗನೆಯರ್ ನೀತಿಯ
ವಾರ್ತೆಯುಮಂ ಬಿಸುಟು ಪತ್ತುವರ್ ಪತ್ತಲೊಡಂ
ಧೂರ್ತೆಯಿವಳೆಂಗುಮೋ ಎಂ
ತಾರ್ತಪೆನಿಲ್ಲಾವತೆಱದೊಳಂ ನಿಲೆ ಪಿಡಿಯಲ್           ೩೭

ಪಲಬರ್ ಕಾಂತೆಯರೊಲ್ದುಪೋದರೊಳರೆಂತುಂ ಕಾಂತರೊಳ್ ಬೇಟವ
ಗ್ಗಲಿಸಲ್ ಕಾಣದೆ ಲಜ್ಜೆಗೆಟ್ಟರೊಳರಿಂತೀ ಲೋಕದೊಳ್ ರೂಪುಗಾ
ಣಲೊಡಂ ತೊಟ್ಟನೆ ಲಜ್ಜೆಗೆಟ್ಟಱವುಗೆಟ್ಟೆನ್ನಂತೆ ಕಣ್ಗೆಟ್ಟು ಪೇ
ೞೊಲವಿಂದಿಂತೆರ್ದೆಗೆಟ್ಟರಾರೆನುತುಮತ್ಯೌತ್ಸುಕ್ಯಮಂ ತಾಳ್ದಿದೆಂ           ೩೮

ವ|| ಅಂತಾಶ್ಚರ್ಯಮಂ ತಳೆದು ನನ್ನ ನಾನೆ ಸಂತೈಸಿ

ಎನ್ನೆವರಂ ಸಚೇತನೆಯೆನೆನ್ನೆವರಂ ಲಘುವಾಗದಿರ್ಪೆನೋ
ಅನ್ನೆಗಮೀಗಳೀಯೆಡೆಯಿನಾಂ ತೊಲಗಿರ್ಪುದು ಕಜ್ಜಮಲ್ಲದಂ
ದೆನ್ನಯ ಮನ್ಮಥೋಚಿತವಿಕಾರಮನೀಕ್ಷಿಸಿ ಸೋಲ್ತಳಕ್ಕಟಾ
ಎನ್ನದೆ ಶಾಪಮಂ ಕುಡುವನಂತುಟೆ ಕೋಪಿಗಳಲ್ತೆ ತಾಪಸರ್   ೩೯

ನಡುಗುತ್ತಿತ್ತು. ಬೆವರಿನಿಂದ ಆಗಲೇ ಚೆನ್ನಾಗಿ ತೊಳೆಯಲ್ಪಟ್ಟಂತೆ ನಾಚಿಕೆಯು ಹೊರಟುಹೋಯಿತು. ಆ ಮಹಾಪುರುಷನ ಸೌಂದರ್ಯಯನ್ನು ನೋಡುವುದಕ್ಕೋ ಎಂಬಂತೆ ರೋಮಾಂಚನವು ತಲೆಯಿಕ್ಕಿತು. ಮನ್ಮಥನ ಆಗಮನಕ್ಕೆ ಅವಕಾಶ ಮಾಡಿಕೊಡುವುದಕ್ಕೋ ಎಂಬಂತೆ ಒಳಗಿನಿಂದ ನಿಟ್ಟುಸಿರು ಒಂದೇ ಸಮನೆ ಹೊರಕ್ಕೆ ಬರುತ್ತಿತ್ತು. (ಒಳಗೆ ತುಂಬಿದ್ದ ಉಸಿರೆಲ್ಲ ಹೊರಕ್ಕೆ ಬಂದರೆ ಒಳಗೆ ಖಾಲಿಯಾಗಿ ಕಾಮನ ಪ್ರವೇಶಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ) ೩೫. ಇವು ಪ್ರಥಮವಾಗಿ ಒಟ್ಟಿಗೆ ಅನೇಕ ರೀತಿಯ ಕಾಮವಿಕಾರಗಳು ಉಂಟಾಗುತ್ತಿರಲು, ಇದಕ್ಕೆ ಮೊದಲು ಅದರ ಅನುಭವವೇ ಇಲ್ಲದವಳಾಗಿದ್ದ ನಾನು ಹೊಸದಾಗಿ ಭಯವುಂಟಾಗಲು ಸಂಕೋಚಪಟ್ಟು ತಲ್ಲಣಿಸಿಹೋದೆನು. ವ|| ಹೀಗೆ ಭಯಪಟ್ಟು ೩೬. ಭಯವೇ ಇಲ್ಲದ ಮನ್ಮಥನು ಜಿತೇಂದ್ರಿಯನಾದ ಮತ್ತು ಬ್ರಹ್ಮತೇಜಸ್ಸಿನಿಂದ ತುಂಬಿರುವ ಈ ಮಹರ್ಷಿಯಲ್ಲಿ ಕೇವಲ ಸೌಂದರ್ಯದ ಒಂದು ಅಭಿಮಾನದಿಂದ ನೀತಿಯನ್ನು ಸಂಪೂರ್ಣವಾಗಿ ಪರಿತ್ಯಜಿಸಿ ಈ ರೀತಿ ನಾನು ಮನಸೋಲುವಂತೆ ಮಾಡಿಬಿಡಬಹುದೆ? ೩೭. ಹೀಗೆ ನಾನು ಮೇಲೆ ಬಿದ್ದುಹೋದರೆ ಆಗ ಅವನು “ಹೆಂಗಸರಿಗೆ ಪ್ರೀತಿಯುಂಟಾಗಿಬಿಟ್ಟರೆ ನೀತಿಯ ವಿಚಾರವನ್ನೆಲ್ಲಾ ಬೀಸಾಡಿ ಗಂಟುಬೀಳುತ್ತಾರೆ. ಇವಳು ಒಳ್ಳೆಯ ಮಾಯಾಂಗನೆ” ಎಂದು ತಿಳಿದುಕೊಳ್ಳುತ್ತಾನೋ ಏನೋ; ಅಂತೂ ಮನಸ್ಸನ್ನು ಬಿಗಿಹಿಡಿಯಲು ಯಾವ ರೀತಿಯಲ್ಲಿಯೂ ನಾನು ಸಮರ್ಥಳಾಗಲಿಲ್ಲ. ೩೮. ತಾವಾಗಿಯೇ ಪ್ರೀತಿಸಿ ನಲ್ಲರ ಹಿಂದೆ ಹೋಗಲಿರುವ ಅನೇಕ ಹೆಂಗಸರೂ ಇದ್ದಾರೆ. ಹಾಗೆಯೇ ಪ್ರಿಯಕರನಲ್ಲಿ ಪ್ರಣಯವು ಹೆಚ್ಚಾಗಲು ನಾಚಿಕೆಗೆಟ್ಟವರೂ ಇದ್ದಾರೆ. ಆದರೆ ಈ ಪ್ರಪಂಚದಲ್ಲಿ ನನ್ನ ಹಾಗೆ ರೂಪವನ್ನು ಕಂಡೊಡನೆಯೆ ಇದ್ದಕ್ಕಿದ್ದ ಹಾಗೆ ಲಜ್ಜೆಗೆಟ್ಟು. ಅರಿವುಗೆಟ್ಟು, ದಿಕ್ಕೆಟ್ಟು, ಎದೆಗೆಟ್ಟವರು ಯಾರಾದರೂ ಇದ್ದಾರೆಯೆ? ಎಂದು ನನ್ನಲ್ಲಿ ನಾನೇ ಆಶ್ಚರ್ಯಪಟ್ಟೆನು. ವ|| ಹಾಗೆ ಆಶ್ಚರ್ಯಪಟ್ಟು ನನ್ನನ್ನು ನಾನೇ ಸಮಾಧಾನಪಡಿಸಿಕೊಂಡು, ೩೯. ನನ್ನ ಬುದ್ಧಿಯು ನನ್ನ ಹತೋಟಿಯನ್ನು ಮೀರುವುದಕ್ಕೆ ಮೊದಲೆ, ಬೆಲೆ ಕಳೆದುಕೊಳ್ಳುವುದಕ್ಕೆ ಮೊದಲೆ, ಈ ಸ್ಥಳದಿಂದ ನಾನು ತೊಲಗಿಹೋಗುವುದೇ ಒಳ್ಳೆಯದು. ಇಲ್ಲದಿದ್ದರೆ ಇವನು

ವ|| ಎಂದು ಪೊಗಲುದ್ಯೋಗಂಗೆಯ್ದು ನಿಖಿಳಜನಪೂಜಾರ್ಹರನವeಗೆಯ್ಯಲಾಗದೆಂದು

ತೊಳಗುವ ಚೆನ್ನಪೂಗಳಲಕಾವಳಿಯೊಳ್ ಮಿಱುಗಲ್ ಕಪೋಲಮಂ
ಡಳತಳದೊಳ್ ತೆಱಂಬೊಳೆಯೆ ಕೋಮಲಪಲ್ಲವಕರ್ಣಪೂರ ಮಂ ಜುಳಮಣಿಕುಂಡಲಂ ಪೆಗಲೊಳಾಡೆ ಮರಳ್ದೆವೆಯಿಕ್ಕದಾಂ ಮನಂ
ಗೊಳಿಪ ಮೂನೀಂದ್ರನಾನನಮನೀಕ್ಷಿಸುತಂ ಪೊಡವಟ್ಟೆನೞ್ಕಱಂ            ೪೦

ವ|| ತದನಂತರಂ

ಮದನಂ ದುರ್ಜಯನಿಂದ್ರಿಯಂಗಳನಿವಾರ್ಯಂಗಳ್ ವಸಂತಂ ಮದ
ಪ್ರದನಾಸ್ಥಾನವತೀವರಮ್ಯಮೆನಗಂ ದುಖಂಬರಲ್ವೇೞ್ಕುಮ
ಪ್ಪುದೞಂ ಭಾವಿಸಿ ಮದ್ವಿಕಾರಮನೆ ನೋಡುತ್ತಿರ್ಪುದುಂ ಗಾಳಿಗೊ
ಡ್ಡಿದ ದೀಪಾಂಕುರದಂತೆ ತನ್ಮುನಿಯುಮಂ ಕಾಮಂ ಚಲಂ ಮಾಡಿದಂ    ೪೧

ವ|| ಅಂತು ಮಾಡೆ

ಮನಮೆನ್ನಂ ಮುಂಬರಲ್ ಮುಂದುವರಿವುದನೆ ತೋರ್ಪಂತೆ
ನೀಳ್ದತ್ತು ಸುಯ್ ಭೋಂ ಕೆನಲಂತೆಯ್ತರ್ಪ ಕಾಮಂಗೊಲವಿನೊಳಿದಿರೇೞ್ವಂತೆ
ರೋಮೋದ್ಗಮಂ ತೊಟ್ಟನೆ ಮೆಯ್ದೋಱತ್ತು ವೀರವ್ರತವೞದಪುದಿನ್ನೆಂದು ನಟ್ಟಂಜಿದಂತಾ
ತನ ಕೆಯ್ಯೊಳ್ ರಂಜಿಪಕ್ಷಾವಳಿ ನಡುಗಿದುದತ್ಯಂತಮಾಶ್ಚರ್ಯಮಾಗಲ್            ೪೨

ವ|| ಅಂತುಮಲ್ಲದೆಯುಂ

ಕರಮೆಸೆದು ತೋಱುತಿರ್ದಪು
ದೆರಡನೆಯ ವಸಂತಕುಸುಮಮಂಜರಿಯೆಂಬಂ
ತಿರೆ ತತ್ಕಪೋಲದೊಳ್ ಬಿ
ತ್ತರಿಸಿದುವು ಕೊನರ್ತ ಬೆಮರ ಬಿಂದುಗಳಾಗಲ್        ೪೩

ತನಗೆ ಇಷ್ಟವಿಲ್ಲದ ನನ್ನ ಕಾಮವಿಕಾರಗಳನ್ನು ನೋಡಿ ‘ಅಯ್ಯೋ ಪಾಪ! ಏನೋ ಮನಸೋತಿದ್ದಾಳೆ’ ಎಂದು ಕನಿಕರಿಸದೆ ಹಾಗೆಯೆ ಶಾಪವನ್ನು ಕೊಟ್ಟರೂ ಕೊಡಬಹುದು. ಋಷಿಗಳು ಸಾಮಾನ್ಯವಾಗಿ ಕೋಪಿಷ್ಠರೇ ಅಲ್ಲವೆ? ವ|| ಎಂದು ಹಿಂದಿರುಗಲು ಪ್ರಯತ್ನಪಟ್ಟು ಸರ್ವರಿಗೂ ಪೂಜಾರ್ಹರಾದ ಮುನಿಗಳನ್ನು ಕಡೆಗಣಿಸಿ ಹೋಗಬಾರದೆಂದು, ೪೦. ಮುಂಗುರುಳುಗಳಲ್ಲಿ ಮುಡಿದುಕೊಂಡಿದ್ದ ಸುಂದರವಾದ ಹೂವುಗಳು ಕೆನ್ನೆಯ ಮೇಲೆ ಜೋಲಾಡಿ ಚೆನ್ನಾಗಿ ಶೋಭಿಸುತ್ತಿರಲಾಗಿ, ಮೃದುವಾದ ಚಿಗುರುಗಳಿಂದ ಕೂಡಿರುವ ಮನೋಹರವಾದ ಕಿರಿಯೋಲೆಯ ಹೆಗಲಿನ ಮೇಲೆ ನಲಿದಾಡುತ್ತಿರಲಾಗಿ ನಾನು ಮತ್ತೆ ಮತ್ತೆ ಎವೆಯಿಕ್ಕದೆ ಆ ಮುನಿಕುಮಾರನ ಸುಂದರವಾದ ಮುಖವನ್ನು ನೋಡುತ್ತಾ ಒಲುಮೆಯಿಂದ ನಮಸ್ಕರಿಸಿದೆನು. ವ|| ಬಳಿಕ ೪೧. ಮನ್ಮಥನನ್ನು ಜಯಿಸಲು ಸಾಧ್ಯವಿಲ್ಲದುದರಿಂದಲೂ, ಇಂದ್ರಿಯಗಳನ್ನು ತಡೆಯಲು ಅಸಾಧ್ಯ ವಾದುದರಿಂದಲೂ, ವಸಂತಕಾಲವು ಮದವನ್ನುಂಟು ಮಾಡುವುದರಿಂದಲೂ, ಆ ಪ್ರದೇಶವು ಬಹಳ ರಮಣೀಯವಾಗಿದ್ದುದರಿಂದಲೂ, ಒಟ್ಟಿನಲ್ಲಿ ನನಗೂ ಈ ಬಗೆಯ ದುಖವುಂಟಾಗುವ ಯೋಗವಿದ್ದುದರಿಂದಲೂ, ಆ ತರುಣಮುನಿಯು ನನ್ನ ವಿಕಾರಗಳನ್ನು ಗಮನಿಸಿ ನೋಡುತ್ತಿರಲಾಗಿ ಮನ್ಮಥನು ಅವನ ಮನಸ್ಸನ್ನು ಗಾಳಿಗೊಡ್ಡಿದ ದೀಪಜ್ವಾಲೆಯಂತೆ ಅಳ್ಳಾಡಿಸಿಬಿಟ್ಟನು. ವ|| ಹಾಗೆ ಮಾಡಲಾಗಿ, ೪೨. ಮನಸ್ಸು ನನ್ನ ಕಡೆಗೆ ಬರುತ್ತಿರಲಾಗಿ, ದಾರಿ ತೋರಿಸುವುದಕ್ಕಾಗಿ ಮುಂದೆ ಬರುತ್ತಿರುವಂತೆ ಅರನ ಶ್ವಾಸವು ದೀರ್ಘವಾಯಿತು. ತಟ್ಟನೆ ಬರುತ್ತಿರುವ ಕಾಮಿನಿಗೆ ಪ್ರೀತಿಯಿಂದ ಎದುರುಗೊಳ್ಳುವುದಕ್ಕಾಗಿಯೇ ಎಂಬಂತೆ ರೋಮಾಂಚನವು ಕೂಡಲೆ ಕಾಣಿಸಿಕೊಂಡಿತು. ಇದುವರೆಗೆ ಆಚರಿಸುತ್ತಿದ್ದ ದೃಢಬ್ರಹ್ಮಚರ್ಯವ್ರತವು ಇನ್ನು ನಾಶವಾಗುತ್ತದೆ ಎಂಬ ಹೆದರಿಕೆಯಿಂದಲೋ ಎಂಬಂತೆ ಅವನ ಕೈಯಲ್ಲಿ ಶೋಭಿಸುತ್ತಿದ್ದ ಜಪಸರವು ಬಹಳ ಸೋಜಿಗವಾಗುವಂತೆ ನಡುಗುತ್ತಿತ್ತು. (ಟಿ. ಅವನಿಗೂ ಕಾಮಪರವಶತೆಯ ಪರಿಣಾಮವಾಗಿ ನಿಶ್ವಾಸ, ರೋಮಾಂಚನ ಕಂಪನಗಳುಂಟಾದುವು). ವ|| ಅದಲ್ಲದೆ, ೪೩. ಈ ಪಾರಿಜಾತಮಂಜರಿಗಿಂತಲೂ ಬೇರೆಯದಾದ ವಸಂತಕಾಲದಲ್ಲಿ ಬಿಡುವ ಮತ್ತೊಂದು ಹೂವಿನ ಗೊಂಚಲು ಶೋಭಿಸುತ್ತಿದೆಯೋ ಎಂಬಂತೆ ಅವನ ಕೆನ್ನೆಯ ಮೇಲೆ ಬೆವರಿನ ಹನಿಗಳು ಮೂಡಿ ಹರಡಿಕೊಂಡವು.