ನುಡಿವೊಡೆ ಲಜ್ಜಿಸಿ ನಾಲಗೆ
ಪೊಡರ್ದಪುದಿಲ್ಲಕ್ಕು ಬಿಕ್ಕೆಯಂ ಬೇರುಮನುಂ
ಡಡವಿಯೊಳಗಿರ್ಪ ಮುನಿಗಳ
ನಡೆವಳಿಯೆತ್ತೆತ್ತ ಯುವತಿಜನದನುರಾಗಂ      ೯೨

ವ|| ಅದಲ್ಲದೆಯುಂ

ನಗೆಗೆಡೆಯಾಗೆ ದೈವವೆನಗೇನನೊಡರ್ಚಿಸಿತೀಗಳಕ್ಕ ರಾ
ಗಿಗಳ ನಿಕೃಷ್ಟಚೇಷ್ಟೆಗನುಗೆಯ್ದಪೆನೆಂತಿದ್ದ ನಿನ್ನ ಮುಂದೆ ಪೇೞ್
ಬಗೆವೊಡೆ ಕಟ್ಟಿದೀ ಜಡೆಗೆ ತಕ್ಕುದೊ ಮೇಣ್ ಪೊದೆದಿರ್ದ ನಾರಸೀ
ರೆಗೆ ದೊರೆಯೋ ತಪಕ್ಕಿದನುರೂಪಮೊ ಮೇಣ ಸುಕೃತಕ್ಕುಪಾಯಮೋ            ೯೩

ವ|| ಆದೊಡಂ

ಪೇೞಲೆವೇಡಿದಪ್ಪುದು ಶರಣ್ ಪೆಱತಾವುದುಮಿಲ್ಲ ಕೇವಲಂ
ಪೇೞದಿರಲ್ಕನರ್ಥಮದಱಂದಸುವಂ ನೆ ಬಿಟ್ಟುಮೀಗಳಾಂ
ಪಾಲಿಸವೇೞ್ಕುಮೆನ್ನಯ ಸಹಾಯನ ಜೀವಮನೊಂದು ಲಜ್ಜೆಯಂ
ಪಾಲಿಸದೆಯ್ದೆ ಪೇೞಲನುಗೆಯ್ದಪೆನುತ್ಸವಲೋಲಲೋಚನೇ       ೯೪

ವ|| ಅದೆಂತೆನೆ

ಒದವಿದ ಮುನಿಸಿಂದಂ ನಿ
ನ್ನಿದಿರೊಳ್ ಬಿಡೆ ನುಡಿದು ಬಿಟ್ಟು ಮುನಿಪನ ಪೂಗೊ
ಯ್ವುದುಮಂ ಬಿಸುಟ್ಟು ನಿಲಲಾ
ಱದೆ ಮತ್ತೊಂದೆಡೆಗೆ ಪೋದನುಬ್ಬೆಗದಿಂದಂ         ೯೫

ವ|| ಅನ್ನೆಗಂ ನೀಮುಂ ನಿಜನಿವಾಸಕ್ಕೆ ವಂದಿರಾಗಳಾನೇಕಾಕಿಯಾಗಿರ್ದುಮೇಗೆ ಯ್ಯುತ್ತಿರ್ದಪನೆಂದು ಕುತೂಹಲಂಬೆರಸು ಮುನ್ನಿನೆಡೆಗೆ ಬಂದು ನೋಡಿ ಕಾಣದೆ ವ್ಯಗ್ರಮನನಾಗಿ

ತರುಣಿಯ ಬೆನ್ನೊಳಂಗಭವನಾಡಿಸಿದಂದದೊಳಾಡಿ ಗೋರಿಗೊಂ
ಡೆರಳೆವೊಲಾಗಿ ಪೋದನೊ ಭಯಂಬೆರಸೆನ್ನ ಮೊಗಕ್ಕೆ ನಾಣ್ಚಿ ಮೆ
ಯ್ಗರೆದನೊ ಕೋಪದಾಗ್ರಹದಿನೆನ್ನನಗಲ್ದನೊ ಕಾಣದೆನ್ನನೆ
ಲ್ಲಿರದಱಸುತ್ತಮಿರ್ದಪನೊ ಬಾಲತಮಾಲವನಾಂತರಾಳದೊಳ್            ೯೬

ವ|| ಆಗ ನಾನು ‘ಎಲೈ ಮುನೀಶ್ವರನೆ, ಇವಳು ನನ್ನ ಶರೀರದಿಂದ ಬೇರೆಯವಳಲ್ಲ, ಸಂಕೋಚವನ್ನು ಬಿಟ್ಟು ಹೇಳಬಹುದು’ ಎಂದೆನು. ೯೨. ಆಗ ಅವನು “ಅಮ್ಮ, ಮಾತನಾಡಲು ನಾಚಿಕೆಯಿಂದ ನನಗೆ ನಾಲಿಗೆಯೇ ಹೊರಳುವುದಿಲ್ಲ. ಗೆಡ್ಡೆಗೆಣಸುಗಳನ್ನು ತಿಂದುಕೊಂಡು ಕಾಡಿನಲ್ಲಿರುವ ಋಷಿಗಳ ನಡೆವಳಿಕೆಯೆಲ್ಲಿ? ತರುಣಿಯರ ಮೇಲೆ ಪ್ರೀತಿಯೆಲ್ಲಿ? ವ|| ಅದಲ್ಲದೆ, ೯೩, ಅಕ್ಕ, ಈಗ ನಗೆಗೀಡಾಗುವಂತೆ ಅದೃಷ್ಟವು ನನಗೆ ಏನೋ ಮಾಡಿಬಿಟ್ಟಿದೆ. ಕಾಮಾತುರರ ತುಚ್ಛವಾದ ವ್ಯವಹಾರಕ್ಕೆ ಸಹಾಯಮಾಡಲು ಹೊರಟಿದ್ದೇನೆ. ಇದನ್ನು ನಿನ್ನ ಮುಂದೆ ಹೇಗೆ ಹೇಳಲಿ? ಆಲೋಚಿಸಿದರೆ ಇದು ಕಟ್ಟಿರುವ ಜಡೆಗೆ ಯೋಗ್ಯವೂ? ಅಥವಾ ತಪಸ್ಸಿಗೆ ಅನುಗುಣವಾಗಿದೆಯೊ? ಇಲ್ಲವೆ ಪುಣ್ಯಕ್ಕೆ ಸಾಧನವೊ? ವ|| ಆದರೂ ೯೪. ಹೇಳಿಯೇ ತೀರಬೇಕು. ಬೇರೆ ಗತಿಯೇ ಇಲ್ಲ. ಸುಮ್ಮನೆ ಹೇಳದೆ ಹೋದರೆ ಅನರ್ಥವುಂಟಾಗುತ್ತದೆ. ಆದ್ದರಿಂದ ಈಗ ನನ್ನ ಪ್ರಾಣವನ್ನು ತೆತ್ತಾದರೂ ನನ್ನ ಸ್ನೇಹಿತನ ಪ್ರಾಣವನ್ನು ಉಳಿಸಲೇಬೇಕು. ಆದ್ದರಿಂದ ಎಲೈ, ಹರ್ಷದಿಂದ ಚಂಚಲವಾದ ಕಣ್ಣುಳ್ಳವಳೆ, ನಾನು ನಾಚಿಕೆಯನ್ನು ಬದಿಗೊತ್ತಿ ನಿನ್ನ ಮುಂದೆ ಹೇಳಲು ಹೊರಟಿದ್ದೇನೆ.

ವ|| ಅದೇನೆಂದರೆ ೯೫. ನಾನು ನಿನ್ನೆದುರಿನಲ್ಲೆ ನನ್ನ ಸ್ನೇಹಿತನನ್ನು ಹಾಗೆ ಕಠಿನವಾಗಿ ಮಾತನಾಡಿ, ಆಮೇಲೆ ಹೂವು ಕೊಯ್ಯುವುದನ್ನೂ ನಿಲ್ಲಿಸಿ ಉದ್ವೇಗದಿಂದ ಅಲ್ಲಿ ನಿಲ್ಲಲಾರದೆ ಬೇರೊಂದು ಕಡೆಗೆ ಹೊರಟುಹೋದೆನು. ವ|| ಅಷ್ಟರಲ್ಲಿ ನೀವೂ ನಿಮ್ಮ ಮನೆಗೆ ಮರಳಿದಿರಿ. ಆಗ ನಾನು ಇವನು ಒಬ್ಬಂಟಿಗನಾಗಿದ್ದು ಏನು ಮಾಡುತ್ತಾನೆ –  ಎಂದು ಕುತೂಹಲದಿಂದ ಹಿಂದಿನ ಸ್ಥಳಕ್ಕೆ ಬಂದು ನೋಡಿದೆನು. ಅವನು ಅಲ್ಲಿ ಇರಲಿಲ್ಲ. ಮನಸ್ಸಿಗೆ ಕಳವಳವಾಯಿತು. ೯೬. ಇದೇನು, ಇವನು ಮನ್ಮಥನು ಕುಣಿಸಿದಂತೆ ಕುಣಿದು, ಬೇಟಿಗಾರರ ಸಂಗೀತಕ್ಕೆ ಮೋಹಿಸಿ ಅವರ ಬೆನ್ನುಹಿಂದೆ ಓಡಿಹೋಗುವ ಜಿಂಕೆಯಂತೆ ಆ ಹುಡುಗಿಯ ಬೆನ್ನುಹಿಡಿದು ಹೋದನೊ? ನನಗೆ ಮುಖತೋರಿಸಲು ನಾಚಿಕೆಯಿಂದ ಅಂಜಿ ಕಣ್ಮರೆಯಾಗಿದ್ದಾನೋ? ಇಲ್ಲವೆ ಕೋಪೋದೇಕದಿಂದ ನನ್ನನ್ನು ಬಿಟ್ಟೇ ಹೋದನೊ?

ವ|| ಎಂದು ವಿಕಲ್ಪಿಸುತ್ತುಮಿರ್ದು

ಕಿಱದೊಂದು ಪೊೞ್ತಗಲ್ದಿರ
ಲಱಯದನಂ ಕ್ಷಣಮಗಲ್ದು ನಿಲಲಾಱದೆ ಮೆಯ್
ಮಱುಗಿ ಮದೀಯ ವಯಸ್ಯನ
ನಱಸುತ್ತುಂ ಮಗೞೆ ಮನದೊಳಾಂ ಚಿಂತಿಸಿದೆಂ        ೯೭

ಮದನಮದೋದ್ರೇಕದಿನೆ
ನ್ನಿದಿರೊಳ್ ಧೃತಿಗೆಟ್ಟು ಸಿಗ್ಗಿನಿಂ ತನ್ನೊಳ್ ಪೊ
ಲ್ಲದನೆತ್ತಾಚರಿಸುಗುಮೋ
ಒದವಿದ ಸಿಗ್ಗಿಂದಮಾರುಮೇನನೊಡರ್ಚರ್   ೯೮

ವ|| ಎಂದಱಸಿ ನೋಡುತ್ತುಮೆಂತೆಂತು ಕಾಣದಿರ್ಪೆನಂತಂತೇನಾನುಮಂ ಮನದೊಳ್ ಭಾವಿಸುತ್ತುಮಿರ್ದು

ಇರಿಪುದು ಯುಕ್ತಮಿನ್ನೆನಗರಣ್ಯದೊಳೊರ್ವನನೆಂದು ಶಂಕೆಯಿಂ
ತರುತಳದೊಳ್ ತಮಾಲವನದೊಳ್ ಘನಚಂದನವೀಥಿಯೊಳ್ ನಿರಂ
ತರ ಲತಿಕಾಗೃಹಂಗಳೊಳನೇಕ ಲತಾಭವನಂಗಳೊಳ್ ಸರೋ
ವರತಟದೊಳ್ ತೊೞಲ್ದಱಸಿ ನೋಡಿದೆನುತ್ಪಲಲೋಲಲೋಚನೇ          ೯೯

ವ|| ಅಂತು ನೋಡುತಿರ್ಪನ್ನೆಗಮೊಂದು ಸರಸ್ಸಮೀಪದೊಳ್ ವನನಿರಂತರತೆಯಿಂ ಕುಸುಮಮಯಮುಂ ಪರಭೃತಮಯಮುಂ ಮಯೂರಮಯಮುಮಾಗಿ ವಸಂತಜನ್ಮ ಬೂಮಿಯುಮಾದಂತಿರಲತಿಮನೋಹರಮಾದ ಲತಾಗಹನದೊಳುತ್ಕ ಷ್ಟಸಕಲವ್ಯಾಪಾರನುಂ ವಿಗತನಿಮೇಷನುಮೆನಿಸಿ ಬರೆದನಂತೆಯುಂ ಕಂಡರಸಿದನಂತೆಯುಂ ಮಱವಟ್ಟನಂತೆಯುಂ ಯೋಗಸಮಾಸ್ಥಿತನಂತೆಯುಮುಪರತವಶ ನಾದಂತೆಯುಮಿರ್ದನಲ್ಲದೆಯುಂ

ಹೃದಯದೊಳಿರ್ದ ವಲ್ಲಭೆಯನೀಕ್ಷಿಸಲೆಂದೊಳಪೊಕ್ಕು ಮೆಯ್ಗೆ ಪ
ರ್ಬಿದ ಮದನಾನಲಂಗಗಿದು ಭೋಂಕನೆ ಮೆಯ್ಗರೆದಿರ್ದುವೆಂಬಿನಂ
ಕದಡಿದ ಚಿತ್ತಮೆಂಬ ಕಡಲೊಳ್ ಪೊಡರಲ್ಕಣಮಾಱದಿರ್ದಡಂ
ಗಿದುವು ಶರೀರದೊಳ್ ವಿರಹದಿಂದಖಿಳೇಂದ್ರಿಯವಾ ಮುನೀಂದ್ರನಾ      ೧೦೦

ವ|| ಅದಲ್ಲದೆಯುಂ

ಅಥವಾ ಈ ಹೊಂಗೇ ಗಿಡಗಳಿಂದ ತುಂಬಿರುವ ಕಾಡಿನ ಮಧ್ಯದಲ್ಲಿ ನನ್ನನ್ನೇ ಹುಡುಕುತ್ತಿದ್ದಾನೊ? ವ|| ಎಂದು ತರ್ಕಿಸುತ್ತ.

೯೭. ಜನ್ಮಾರಭ್ಯ ಕ್ಷಣಮಾತ್ರವೂ ಬಿಟ್ಟಿರಲು ಅಭ್ಯಾಸವೇ ಇಲ್ಲದ ನಾನು ಈಗ ಒಂದು ಕ್ಷಣವೂ ಅವನನ್ನು ಅಗಲಿರಲಾರದೆ ಸಂತಾಪಗೊಂಡು ನನ್ನ ಆ ಗೆಳೆಯನನ್ನು ಮತ್ತೆ ಹುಡುಕುತ್ತಾ ಮನಸ್ಸಿನಲ್ಲಿ ಹೀಗೆ ಚಿಂತಿಸಿದೆನು. ೯೮. ಅತ್ಯಂತ ಕಾಮಪರವಶನಾಗಿ ನನ್ನ ಎದುರಿನಲ್ಲಿ ಎದೆಗೆಟ್ಟು ನಾಚಿಕೆಯಿಂದ ಎಲ್ಲಾದರೂ ಅಪಘಾತ ಮಾಡಿಕೊಂಡು ಬಿಡುತ್ತಾನೋ ಎನೊ! ನಾಚಿಕೆಯಿಂದ ಯಾರು ಏನನ್ನು ತಾನೆ ಮಾಡಿಕೊಳ್ಳುವುದಿಲ್ಲ! ವ|| ಎಂದು ಹುಡುಕಿ ನೋಡುತ್ತಾ ಹೇಗೂ ಕಾಣದಿರಲು, ಮನದಲ್ಲಿ ಏನನ್ನೋ ಯೋಚಿಸುತ್ತಿದ್ದು ೯೯. ಎಲೈ ನೈದಿಲೆಯಂತೆ ಕಣ್ಣುಳ್ಳವಳೆ, ಇನ್ನು ಈ ಕಾಡಿನಲ್ಲಿ ಅವನೊಬ್ಬನನ್ನೆ ಬಿಟ್ಟಿರುವುದು ಸರಿಯಲ್ಲವೆಂದು ಅಳುಕಿನಿಂದ ಮರದ ಬುಡಗಳಲ್ಲಿ, ಹೊಂಗೆಯ ಮರದ ಹಿಂಡುಗಳಲ್ಲಿ, ದಟ್ಟವಾದ ಗಂಧದ ಮರದ ಸಾಲುಗಳಲ್ಲಿ, ಒತ್ತೊತ್ತಾಗಿ ಬೆಳೆದಿರುವ ಬಳ್ಳಿಮನೆಗಳಲ್ಲಿ, ಕೊಳದ ದಡದಲ್ಲಿ ಸುತ್ತಾಡಿ ಹುಡುಕಾಡಿದೆನು. ವ|| ಹಾಗೆ ಹುಡುಕುತ್ತಿರಲಾಗಿ ಒಂದು ಸರೋವರದ ಸಮೀಪದಲ್ಲಿ ಕಾಡು ದಟ್ಟವಾಗಿರುವುದರಿಂದ ಹೂವುಗಳಿಂದಲೇ ತುಂಬಿದಂತೆಯೂ, ಕೋಗಿಲೆಗಳಿಂದಲೇ ತುಂಬಿದಂತೆಯೂ, ನವಿಲುಗಳಿಂದಲೇ ತುಂಬಿಕೊಂಡಿರುವಂತೆಯೂ ಇದ್ದು ವಸಂತನಿಗೆ ತೌರುಮನೆಯಂತಿರುವ ಅತಿಮನೋಹರವಾದ ಒಂದು ಬಳ್ಳಿಯ ಪೊದರಿನಲ್ಲಿ ನಿಶ್ಚೇಷ್ಟಿತವಾಗಿ ರೆಪ್ಪೆಯನ್ನೂ ಅಳ್ಳಾಡಿಸಿದೆ ಚಿತ್ರದಲ್ಲಿ ಬರೆದಿರುವವನಂತೆಯೂ, ಕೆತ್ತಲ್ಪಟ್ಟಿರುವವನಂತೆಯೂ, ಮೈಮರೆತವನಂತೆಯೂ, ಯೋಗ ಸಮಾಯಲ್ಲಿರುವವನಂತೆಯೂ, ಮರಣಕ್ಕೆ ಅನನಾದಂತೆಯೂ ಇರುವ ಅವನನ್ನು ಕಂಡೆನು. ಅಲ್ಲದೆ ೧೦೦. ಹೃದಯದ ಒಳಗೆ ನೆಲೆಸಿರುವ ಪ್ರಾಣಕಾಂತೆಯನ್ನು ನೋಡಬೇಕೆಂದು ಒಳಗೆ ಪ್ರವೇಶಿಸಿರುವಂತೆಯೂ, ಇಡೀ ದೇಹವನ್ನು ಆವರಿಸಿಕೊಂಡಿರುವ ವಿರಹಾಗ್ನಿಗೆ ಹೆದರಿ ತಟ್ಟನೆ ಅದೃಶ್ಯನಾದಂತೆಯೂ, ಕದಡಿರುವ ಮನಸ್ಸೆಂಬ ಸಮುದ್ರದಲ್ಲಿ ಸ್ವಲ್ಪವೂ ಮಿಸುಕಾಡದಂತೆ ಮುಳುಗಿರುವಂತೆಯೂ ಆ ಮುನೀಂದ್ರನ ಸಮಸ್ತ ಇಂದ್ರಿಯಗಳೂ ಶರೀರದಲ್ಲಿ ಅಡಗಿಹೋಗಿದ್ದುವು.

ವ|| ಅದಲ್ಲದೆ

ಒಳಗೊಳಗಳುರ್ವ ಮನೋಜಾ
ನಳಧೂಮಸ್ತೋಮಮೆಯ್ದೆ ಸುತ್ತಿದುದೋ ಕ
ಣ್ಗಳನೆನೆ ತಳ್ತೆಮೆದುಱುಗಲಿ
ನಿೞದುವು ಮಿಗೆ ಬಾಷ್ಪವಾರಿ ಧಾರಾಪೂರಂ          ೧೦೧

ಹೃದಯದೊಳಗುಣ್ಮಿ ಪೊಣ್ಮಿದ
ಮದನಾಗ್ನಿಜ್ವಾಲೆಯೆನಿಸಿದಧರಾಂಶುಗಳಿಂ
ಪುದಿದ ಬಿಸುಸುಯ್ಗಳಿಂ ಕೊರ
ಗಿದುವು ಲತಾಕುಸುಮಕೇಸರಪ್ರಸರಂಗಳ್       ೧೦೨

ಒದವಿದ ಚಿಂತಾಭಾರದೆ
ಕದಪಿನೊಳಿಕ್ಕಿರ್ದ ಮುನಿಯ ಕರನಖರುಚಿಗಳ್
ಪುದಿದಡರ್ದು ಬೆಳಗಿದುವು ಪೂ
ಸಿದ ಚಂದನರಸಲಲಾಮದಂತಿರೆ ನೊಸಲೊಳ್         ೧೦೩

ತೊಳಗುವ ಪಾರಿಜಾತದಲರ್ಗೊಂಚಲಿನೊಪ್ಪುವ ಕರ್ಣಪೂರಮಂ
ಕಳೆದೊಡಮಲ್ಲಿ ಸಂಕ್ರಮಿಸಿ ಪೋಗದ ಕಂಪನುಣಲ್ಕೆ ಕರ್ಣದ
ತ್ತೆಳಸಿ ಜಿನುಂಗುತಿರ್ಪ ನೆವದಿಂ ಸ್ಮರಮಂತ್ರಮನೋದುವಂತೆ ಕ
ಣಳಿಪಳಿಸಂಕುಳಂ ನೆನೆಯಿಸಿತ್ತಸಿತೋತ್ಪಳಕರ್ಣಪೂರಮಂ      ೧೦೪

ವಿರಹಜ್ವರದಿಂ ಪುಳಕೋ
ತ್ಕರಮೊಗೆದುವು ರೋಮಕೂಪಮೆನಿತನಿತಱ ಳಂ
ಸ್ಮರನ ಸರಲ್ಗಳ್ ನಾಂಟಲ್
ಶರೀರಮಂ ಪತ್ತಿ ನಿಂದ ಪುಂಖಂಗಳವೋಲ್             ೧೦೫

ಪುಳಕಂಗಳ್ ದಕ್ಷಿಣಕರ
ತಳಸ್ಪರ್ಶನದಿನೊಗೆದುವೆನೆ ಕೆದಱುವ ನು
ಣ್ಬೆಳಗಿಂ ಮುಕ್ತಾವಳಿ ಕ
ಣಳಿಸಿದುದಂಗಜಪತಾಕೆಯಂದದಿನುರ         ೧೦೬

೧೦೧. ಒಳಗೆಲ್ಲ ಆವರಿಸಿಕೊಂಡಿರುವ ಮದನಾಗ್ನಿಯ ಹೊಗೆಯ ಸಮೂಹವು ಕಣ್ಣುಗಳಿಗೆ ಸುತ್ತಿಕೊಂಡಿದೆಯೋ ಎಂಬಂತೆ ಒತ್ತಾದ ಕಣ್ಣಿನ ರೆಪ್ಪೆಗಳಿಂದ ಹೆಚ್ಚಾದ ಕಣ್ಣೀರಿನ ಪ್ರವಾಹವು ಧಾರಕಾರವಾಗಿ ಹರಿಯುತ್ತಿತ್ತು. ೧೦೨. ಅವನ ತುಟಿಯ ಕಾಂತಿಯು ಹೃದಯದ ಒಳಗೆ ಹೆಚ್ಚಾಗಿ ವ್ಯಾಪಿಸಿ ಹೊರಕ್ಕೆ ಹೊರಡುತ್ತಿರುವ ವಿರಹಾಗ್ನಿಯ ಜ್ವಾಲೆಯಂತೆ ಕಾಣುತ್ತಿತ್ತು. ಆ ಜ್ವಾಲೆಯಿಂದ ಕೂಡಿಕೊಂಡಿರುವಂತೆ ಬಿಸಿಯಾಗಿರುವ ನಿಟ್ಟುಸಿರುಗಳಿಂದ ಅಲ್ಲಿನ ಬಳ್ಳಿಗಳಲ್ಲಿ ಬಿಟ್ಟಿರುವ ಹೂವುಗಳ ಕೇಸರಗಳು ಬಾಡಿಹೋಗುತ್ತಿದ್ದುವು. ೧೦೩. ಅವನು ಅತಿಶಯವಾದ ಚಿಂತೆಯಿಂದ ಕೆನ್ನೆಯ ಮೇಲೆ ಕೈಯನ್ನಿಟ್ಟುಕೊಂಡಿದ್ದನು. ಅದರ ಉಗುರುಗಳ ಕಾಂತಿಯ ಮೇಲುಗಡೆ ಪ್ರಸರಿಸಿ ಹಣೆಯಲ್ಲಿಟ್ಟುಕೊಂಡಿರುವ ಚಂದನದ ತಿಲಕದಂತೆ ಪ್ರಕಾಶಿಸುತ್ತಿತ್ತು. ೧೦೪. ಮೊದಲು ಕಿವಿಯನ್ನು ಅಲಂಕರಿಸಿದ್ದ ಪಾರಿಜಾತಕುಸುಮಮಂಜರಿಯು ಈಗ ಅಲ್ಲಿರಲಿಲ್ಲ. ಆದರೂ ಅಲ್ಲಿ ಸಂಕ್ರಾಂತವಾಗಿದ್ದ ಪರಿಮಳವು ಇನ್ನೂ ಹೋಗಿರಲಿಲ್ಲ! ಅದರ ಲೋಭದಿಂದ ದುಂಬಿಗಳು ಕಿವಿಯ ಹತ್ತಿರ ಬಂದು ಮೊರೆಯುತ್ತಿದ್ದುವು! ಆ ಗುಂಜಾರವವು ಮನ್ಮಥನ ವಶೀಕರಣಂತ್ರವನ್ನು ಪಠಿಸುತ್ತಿರುವಂತೆ ಇತ್ತು. ಅಲ್ಲದೆ ಕಿವಿಯಲ್ಲಿ ಮುತ್ತಿದ್ದ ದುಂಬಿಗಳ ಗುಂಪು ಕನ್ನೆ ದಿಲೆಯ ಕರ್ಣಾಭರಣವನ್ನು ಜ್ಞಾಪಿಸಿಕೊಳ್ಳುವಂತೆ ಮಾಡುತ್ತಿತ್ತು. (ಟಿ. ಕಿವಿಯಲ್ಲಿ ಮುಡಿದುಕೊಂಡಿರುವ ಕನ್ನೆ ದಿಲೆಯಂತೆ ಇತ್ತು) ೧೦೫. ವಿರಹ ಸಂತಾಪದಿಂದ ರೋಮಕೂಪಗಳಲ್ಲೆಲ್ಲಾ ಎದ್ದಿರುವ ಮೈನವಿರುಗಳು ಶರೀರದಲ್ಲೆಲ್ಲಾ ಮನ್ಮಥನ ಬಾಣಗಳು ನಾಟಿಕೊಂಡಿರಲು ಹೊರಗೆ ಕಾಣುತ್ತಿರುವ ಅವುಗಳ ಗರಿಗಳಂತೆ ಕಾಣುತ್ತಿದ್ದುವು. ೧೦೬. ಅವನ ಎದೆಯ ಮೇಲೆ ನಿನ್ನ ಮುತ್ತಿನ ಸರವು ಮನ್ಮಥನ ಬಾವುಟದಂತೆ ಶೋಭಿಸುತ್ತಿತ್ತು! ಅದರ ಕೋಮಲವಾದ ಕಾಂತಿಯು ಹೊರಸೂಸುತ್ತಿರಲು, ಅದು ಅವನ ಬಲಗೈಯ ಸ್ಪರ್ಶಸುಖದಿಂದ ತನಗೆ ಉಂಟಾದ ರೋಮಾಂಚನವನ್ನು ತಾಳಿರುವಂತೆ

ಪೊಗೆ ಪರ್ಬಲ್ ಕಾಯ್ದ ಪುಣುಂ
ಬುಗಳುಂ ಕುಸುಮಾಸ್ತ್ರನಿಸುತಮಿರ್ದಪನೆನೆ ಸಂ
ಪಗೆಯ ಮುಗುಳ್ಗಳ್ ಮೇಲ
ಲ್ಲುಗುತಿರ್ದುವು ಬಳಸಿದಳಿಕುಳಂಬೆರಸಾಗಳ್            ೧೦೭

ವ|| ಅದಲ್ಲದೆಯುಂ ಮದನವಶೀಕರಣಚೂರ್ಣದಂತೆ ಮೇಲೆ ಕೆದಱುವ ಕುಸುಮರೇಣುಗಳುಂ ಆತ್ಮರಾಗಮಂ ಸಂಕ್ರಮಿಸುವಂತೆ ಮೇಲಲೆವ ರಕ್ತಾಶೋಕಪಲ್ಲವಮುಂ ವನಲಕ್ಷಿ ಯೊಡರ್ಚುವ ರತ್ನಾಭಿಷೇಕದಂತೆ ಸುರಿವ ಪುಷ್ಪಸ್ತಬಕಶೀಕರಂಗಳುಂ ಅತಿಬಹುಳ ವನಾಮೋದಮತ್ತಮಧುಕರಝಂಕಾರಂಗಳೊಳ್ ಪೊರೆದ ದಕ್ಷಿಣಾನಿಲನುಂ ವಸಂತಜಯಶಬ್ದಕೋಲಾಹಲಂಗಳಂತೆ ಕಳಕಳಿಪ ಕೋಕಿಲೆಗಳುಮತ್ಯಾಕುಲತೆಯಂ ಮಾಡೆ ಜನ್ಮಾಂತರೋಪಗತ ನಾದಂತೆಯುಂ ರೂಪಾಂತರಮಂ ಕೈಕೊಂಡಂತೆಯುಂ ಮನ್ಮಥಾವೇಶದಿಂದ ಱಯಲ್ಕೆ ಬಾರದಾಕಾರಮಂ ಭಾವಿಸಿ ನೋಡಿ

ಏನಂ ವಿ ಮಾಡಿದನೋ
ತಾನಿಲ್ಲಿಗುಪಾಯಮೆಂತು ಭೋಂಕನೆ ಬಱದೀ
ಜ್ಞಾನನಿ ಸೂರೆವೋದಪು
ದಾನಿನ್ನೇಗೆಯ್ವೆನೆಂದು ತಳವೆಳಗಾದೆಂ        ೧೦೮

ವ|| ಅದಲ್ಲದೆಯುಂ

ಗುಣಿಯೆನಿಸಿದ ಚಾತುರ್ಯದ
ಕಣಿಯೆನಿಸಿದ ಮುನಿಕುಮಾರಕಪ್ರತತಿಯೊಳ
ಗ್ರಣಿಯೆನಿಸಿದ ಮತ್ಸಖನಂ
ಕ್ಷಣಮಾತ್ರದಿನಿಂತಿರೆೞ ದು ಪೊಸೆಗುಮೆ ಮದನಂ       ೧೦೯

ವ|| ಎಂದಾತನಿರ್ಪ ಲತಾಮಂಟಪದೊಳಗಣ ಚಂದ್ರಕಾಂತಶಿಲಾತಳಕ್ಕೆ ಬಂದು

ಪೊರೆಯೊಳ್ ಕುಳ್ಳಿರ್ದೊಯ್ಯನೆ
ಕರತಳದಿಂದೆಳ (ೞ)ವಿ ತನುವನೀಗಳೇ ನೀನಿ
ರ್ಪಿರವಿನ ಪರಿಯೇನೆಂದಾಂ
ಸರೋಜಮುಖಿ ಮುಕುಳಿತಾಕ್ಷನಂ ಬೆಸಗೊಂಡೆಂ        ೧೧೦

ಕಾಣುತ್ತಿತ್ತು! ೧೦೭. ಸುವಾಸನೆಗಾಗಿ ಬಂದು ಮುತ್ತಿಕೊಂಡಿರುವ ದುಂಬಿಗಳೊಂದಿಗೆ ಸಂಪಿಗೆಮೊಗ್ಗುಗಳು ಅವನ ಮೇಲೆ ಉದುರುತ್ತಿದ್ದುವು. ಅವು ಮನ್ಮಥನು ಬೆಂಕಿಯಲ್ಲಿ ಚೆನ್ನಾಗಿ ಕಾಯ್ದು ಹೋಗೆಯಾಡುತ್ತಿರುವ ತನ್ನ ಬಾಣಗಳನ್ನು ಇವನ ಮೇಲೆ ಸುರಿಸುತ್ತಿದ್ದಾನೋ ಎಂಬಂತೆ ಕಾಣುತ್ತಿದ್ದವು. (ಟಿ. ಇಲ್ಲಿ ಸಂಪಿಗೆಮೊಗ್ಗುಗಳನ್ನು ಮನ್ಮಥನ ಬಾಣಗಳೆಂದೂ ಮುತ್ತಿರುವ ದುಂಬಿಗಳನ್ನು ಹೊಗೆಯೆಂದೂ ವರ್ಣಿಸಿದ್ದಾನೆ) ವ|| ಅದಲ್ಲದೆ ಮನ್ಮಥನು ಪ್ರಯೋಗಿಸುತ್ತಿರುವ ವಶೀಕರಣಚೂರ್ಣದಂತೆ ಮೇಲೆ ಬೀಳುತ್ತಿರುವ ಹೂವಿನ ಧೂಳುಗಳೂ, ತಮ್ಮ ರಾಗವನ್ನು (ಕೆಂಪು, ಅನುರಾಗ) ಇವನಿಗೂ ಒಳಗೂಡಿಸುವಂತೆ ಮೇಲೆ ಗಾಳಿಯಿಂದ ಅಳ್ಳಾಡುತ್ತಿರುವ ಕೆಂಪು ಅಸುಗೆಯ ಚಿಗುರುಗಳೂ, ವನಲಕ್ಷಿ ಯು ಇವನಿಗೆ ಮಾಡುತ್ತಿರುವ ಸಂಭೋಗಾರಾಜ್ಯಾಭಿಷೇಕದಂತೆ ಮೇಲೆ ಸುರಿಯುತ್ತಿರುವ ಹೂವಿನ ಗೊಂಚಲಿನ ಬಂಡಿನ ಹುಂಡುಗಳೂ, ಅತ್ಯಕವಾದ ಕಾಡಿನ ಸುವಾಸನೆಯಿಂದ ಕೊಬ್ಬಿದ ದುಂಬಿಗಳ ಝೇಂಕಾರದಿಂದ ಕೂಡಿರುವ ದಕ್ಷಿಣದಿಕ್ಕಿನ ಗಾಳಿಯೂ, ವಸಂತರಾಜನಿಗೆ ಮಾಡುವ ಜಯಕಾರದ ಗದ್ದಲದಂತೆ ಕೂಗುತ್ತಿರುವ ಕೋಗಿಲೆಗಳೂ ಇವನನ್ನು ಬಹಳಮಟ್ಟಿಗೆ ಕಳವಳಪಡಿಸುತ್ತಿರಲಾಗಿ ಬೇರೆ ಜನ್ಮವನ್ನು ಪಡೆದು ಬಂದವನಂತೆಯೂ, ಬೇರೆ ಆಕಾರವನ್ನು ತಾಳಿದವನಂತೆಯೂ ವಿರಹವ್ಯಥೆಯಿಂದ ಗುರುತೇ ಸಿಕ್ಕದಂತಹ ಅವನ ಸ್ವರಪವನ್ನು ಚೆನ್ನಾಗಿ ನೋಡಿ ೧೦೮. ಅಯ್ಯೋ! ವಿ ಏನು ಮಾಡಿಬಿಟ್ಟನು? ಇದನ್ನು ಸರಿಪಡಿಸಲು ಏನು ಉಪಾಯವಿದೆ? ಇವನ ಜ್ಞಾನಸಂಪತ್ತು ಹೀಗೆ ಸುಮ್ಮನೆ ಸೂರೆಯಾಗಿಬಿಟ್ಟಿತಲ್ಲ! ನಾನಿನ್ನೇನು ಮಾಡಲಿ? ಎಂದು ತಳಮಳಗೊಂಡೆನು. ವ|| ಅದಲ್ಲದೆ ೧೦೯. ಗುಣವಂತನೆನಿಸಿಕೊಂಡಿದ್ದ, ಜಾಣತನದ ಗಣಿಯೆನಿಸಿಕೊಂಡಿದ್ದ, ಮುನಿಕುಮಾರರ ಸಮೂಹದಲ್ಲಿ ಅಗ್ರೇಸರನೆನಿಸಿಕೊಂಡಿದ್ದ ನನ್ನ ಸ್ನೇಹಿತನನ್ನು ಮನ್ಮಥನು ಆ ರೀತಿಯಲ್ಲಿ ಕ್ಷಣಮಾತ್ರದಲ್ಲಿ ಎಳೆದು ಹೊಸಕಿಹಾಕುತ್ತಿರುವನಲ್ಲ! ವ|| ಎಂದು ಅವನಿದ್ದ ಲತಾಮಂಟಪದ ಒಳಗಿರುವ ಚಂದ್ರಕಾಂತಶಿಲಾತಳಕ್ಕೆ ಬಂದು ೧೧೦. ಎಲೈ ತಾವರೆಯಂತೆ ಮುಖವುಳ್ಳವಳೆ, ಅವನ ಸಮೀಪದಲ್ಲಿ ಕುಳಿತುಕೊಂಡು ಮೆಲ್ಲನೆ ಕೈಯಿಂದ ಅವನ ಶರೀರವನ್ನು ಸವರಿ, ಮಿತ್ರ ಈಗ ನೀನೇಕೆ ಹೀಗಿರುವೆ? ಎಂದು

ವ|| ಅಂತು ಬೆಸಗೊಳ್ವುದುಮಾಗಳೆಡವಿಡದೆ ಮುಚ್ಚಿ ಬೆಚ್ಚಂತಿರ್ದ ಕಣ್ಗಳನೆಂತಾನುಂ ತೆದು

ಬಸವಲ್ಲದೞ್ತು ಕೆಂಪೊಡ
ರಿಸೆ ತೀವಿರೆ ಬಾಷ್ಪಸಲಿಲಮಚ್ಛಾಂಬುಗಳಿಂ
ಮುಸುಕಿದ ರಕ್ತಾಂಭೋರುಹ
ದೆಸಳಂ ಪೋಲ್ತೆಸೆವ ಕಣ್ಗಳಿಂದೀಕ್ಷಿಸಿದಂ        ೧೧೧

ವ|| ಅಂತು ಕಿಱದುಬೇಗಮೆನ್ನಂ ಭಾವಿಸಿ ನೋಡಿ

ನೀಂ ತಿಳಿದರ್ದುಂ ಮದ್ವೃ
ತ್ತಾಂತಮನೇನೆಂದು ಕೆಳೆದು ಬೆಸಗೊಂಡಪೆಯೆಂ
ದಿಂತದನುಸಿರ್ದಂ ಲಜ್ಜೆಯಿ
ನೆಂತಾನುಂ ಶೀರ್ಯಮಾಣ ವಿರಳಾಕ್ಷರದಿಂ ೧೧೨

ವ|| ಎಂಬುದುಮದು ನೀನೆಂದಂತೆ ನಿಶ್ಚಯಮಪ್ಪುದಾದೊಡಂ
ಇನಿತನೆ ಪುಂಡರೀಕ ಬೆಸಗೊಂಡಪೆನಿಂತಿದು ಧರ್ಮಶಾಸ್ತ್ರ,ಸಂ
ಜನಿತರಹಸ್ಯಮೋ ಯಮಮೊ ಪೇಱ್ ಪೆಱತೇನಪವರ್ಗಮಾರ್ಗಮೋ
ಮನದೊಳಣಂ ವಿಚಾರಿಸಿದೆ ಸೈರಣೆಗೆಟ್ಟಱವೆತ್ತವೋದುದೀ
ಮನಸಿಜನೆಂಬ ಪಾತಕನಿನಿಂತಪಹಾಸ್ಯಮನೆಯ್ದಲಕ್ಕುಮೇ        ೧೧೩

ವ|| ಅದಲ್ಲದೆಯುಂ

ಅಗರುವ ಧೂಪಧೂಮಲತೆಯೆಂದಸಿತಾಹಿಗೆ ಸಾರ್ವ ನೆಯ್ದಿಲೊ
ಳ್ಮುಗುಳಿನ ಮಾಲೆಯೆಂದಸಿಯನಪ್ಪುವ ಮಾಣಿಕಮೆಂದು ಕೆಂಡಮಂ
ನೆಗಪುವ ಪುಣ್ಯಮೆಂದು ವಿಷವಲ್ಲಿಗೆ ನೀರೆವೆಗ್ಗನಂತೆ ಕೆ
ಮ್ಮಗೆ ಸುಖಮೆಂದಸದ್ವಿಷಯಸೌಖ್ಯದೊಳಿಂತೆಱಗಲ್ಕೆ ತಕ್ಕುದೇ             ೧೧೪

ವ|| ಅದಲ್ಲದೆಯುಮತಿಬಹುಳರಜದೊಳ್ ಪೊರೆದ ಪೊನಲ್ಗಳಂತುನ್ಮಾರ್ಗದಿಂ ಪರಿವಿಂದ್ರಿಯಂಗಳಂ ನಿವಾರಿಸದೆಯುಂ ಕದಡಿದ ಮನಮಂ ನಿಯಾಮಿಸದೆಯುಂ ಇಂತಿರ್ಪುದುಚಿತ ಮಲ್ಲಮನಂಗನೆಂಬ ದುರಾಚಾರನಂ ನಿವರ್ತಿಸಲ್ವೇೞ್ಕು ಮೆಂಬುದುಮಾಕ್ಷೇಪಂಗೆಯ್ದೆ ಮೆದುಱುಗಲಿನಿೞವ ತೋರ ಕಣ್ಬನಿಗಳಂ ಬಸಿಯುತ್ತಮೆನ್ನನಿಂತೆಂದಂ

ಕಣ್ಣು ಮುಚ್ಚಿಕೊಂಡಿದ್ದ ಅವನನ್ನು ಕೇಳಿದೆನು. ವ|| ಹಾಗೆ ಕೇಳಲಾಗಿ ಆಗ ಮುಚ್ಚಿ ಬೆಸುಗೆ ಹಾಕಿದಂತಿದ್ದ ಕಣ್ಣುಗಳನ್ನು ಹೇಗೋ ತೆರೆದನು. ೧೧೧. ಹತೋಟಿಯಿಲ್ಲದೆ ಅತ್ತು ಅತ್ತು ಅವನ ಕಣ್ಣುಗಳು ಕೆಂಪಾಗಿಹೋಗಿದ್ದುವು. ಆಲ್ಲದೆ ನೀರು ತುಂಬಿಕೊಂಡಿತ್ತು. ಅದರಿಂದ ನಿರ್ಮಲವಾದ ನೀರುಗಳಿಂದ ಕೂಡಿಕೊಂಡಿರುವ ಕೆಂಪುಕಮಲದ ದಳದಂತೆ ಶೋಭಿಸುತ್ತಿರುವ ಕಣ್ಣುಗಳಿಂದ ನನ್ನನ್ನು ನೋಡಿದನು. ವ|| ಹಾಗೆ ಸ್ವಲ್ಪ ಹೊತ್ತು ನನ್ನನ್ನೇ ದೃಷ್ಟಿಸಿ ನೋಡಿ ೧೧೨. ‘ಗೆಳೆಯ, ನಿನಗೆ ನನ್ನ ಸಮಾಚಾರವೆಲ್ಲ ಗೊತ್ತೇ ಇದೆ. ಮತ್ತೆ ಏಕೆ ಕೇಳುತ್ತೀಯೆ?’ ಎಂದು ನಾಚಿಕೆಯಿಂದ ಅಸುಟವಾಗಿ ಉಚ್ಚರಿಸಲ್ಪಡುತ್ತಿರುವ ಕೆಲವೇ ಅಕ್ಷರಗಳಿಂದ ಕಷ್ಟಪಟ್ಟು ಹೇಳಿದನು. ವ|| ಎಂದು ಹೇಳಲಾಗಿ ‘ನೀನು ಹೇಳುವುದೇನೋ ಸರಿ. ಆದರೂ ೧೧೩. ಇಷ್ಟು ಮಾತ್ರ ಕೇಳುತ್ತೇನೆ. ಪುಂಡರೀಕ, ಇದು ಸ್ಮ ತಿಗಳನ್ನು ಓದಿರುವುದರಿಂದ ಪಡೆದಿರುವ ಧರ್ಮರಹಸ್ಯವೋ? ಯೋಗಾಭ್ಯಾಸವೋ? ಬೇರೊಂದು ಮೋಕ್ಷಮಾರ್ಗವೋ? ಹೇಳು. ಮನಸ್ಸಿನಲ್ಲಿ ಸ್ವಲ್ಪವೂ ವಿಚಾರಮಾಡದೆ ಸಹನೆಯನ್ನು ಹಾಳುಮಾಡಿಕೊಂಡರೆ ಹೇಗೆ? ನಿನ್ನ ಶಾಸ್ತ್ರಜ್ಞಾನವು ಎಲ್ಲಿ ಹೋಯಿತು? ಈ ಮನ್ಮಥನೆಂಬ ಪಾಪಿಷ್ಠನಿಂದ ಹೀಗೆ ಅಪಹಾಸ್ಯಕ್ಕೆ ಈಡಾಗಬಹುದೆ? ವ|| ಅದಲ್ಲದೆ ೧೧೪. ಮೇಲಕ್ಕೇಳುತ್ತಿರುವ ಧೂಪದ ಹೊಗೆಯೆಂದು ಕರಿಯ ನಾಗರಹಾವಿನ ಹತ್ತಿರಕ್ಕೆ ಹೋಗುವ, ಕನ್ನೆ ದಿಲೆಯ ಒಳ್ಳೆಯ ಮೊಗ್ಗಿನ ಮಾಲಿಕೆಯೆಂದು ಕತ್ತಿಯನ್ನು ತಬ್ಬಿಕೊಳ್ಳುವ, ಕೆಂಪುರತ್ನವೆಂದು ತಿಳಿದು ಕೆಂಡವನ್ನು ಎತ್ತಿಕೊಳ್ಳುವ, ಪುಣ್ಯ ಬರುತ್ತದೆ ಎಂದು ವಿಷದ ಬಳ್ಳಿಗೆ ನೀರು ಹಾಕಿ ಪೋಷಿಸುವ ಮೂಢನಂತೆ ವಿಚಾರಮಾಡದೆ ಸುಖವೆಂದು ತಿಳಿದುಕೊಂಡು ಒಳ್ಳೆಯದಲ್ಲದ ಇಂದ್ರಿಯಸೌಖ್ಯದಲ್ಲಿ ಹೀಗೆ ಬೀಳುವುದು ಸರಿಯೆ? ವ|| ಅದಲ್ಲದೆ ಬಹಳ ಹೆಚ್ಚಾದ ರಜೋಗುಣದಿಂದ ಕೂಡಿಕೊಂಡಿರುವ ನದಿಗಳಂತೆ ದಾರಿ ಬಿಟ್ಟು ಹೋಗುತ್ತಿರುವ ಇಂದ್ರಿಯಗಳನ್ನು ತಡೆಯದೆ, ಕದಡದ ಮನಸ್ಸನ್ನು ಹತೋಟಿ ಮಾಡಿಕೊಳ್ಳದೆ ಹೀಗೆ ಇರುವುದು ಯೋಗ್ಯವಲ್ಲ. ಮನ್ಮಥನೆಂಬ ದುರಾಚಾರಿಯನ್ನು ಓಡಿಸಬೇಕು ಎಂದು ಹೇಳುತ್ತಿರುವ