ಮಹಿತಳ ಲುಠಿತೋತ್ಥಿತಮಂ
ಗೃಹೀತ ಕತಿಪಯ ತೃಣಾಂಕುರಗ್ರಾಸಮನಾ
ಮಹಿಪಂ ಪೀತಾಂಬುವನಂ
ದು ಹಯವನಾಸನ್ನವಿಟಪಿಯೊಳ್ ನಿಯಮಿಸಿದಂ       ೨೬

ಲಲಿತ ನಿಜಕನಕಮಯ ಶೃಂ
ಖಲೆಯಿಂ ಹರಿಚರಣಯುಗಳಮಂ ನಿಯಮಿಸಿ ಶಾ
ಡ್ವಲತೃಣತತಿಯಂ ಖಡ್ಗದಿ
ನಿಳಾಪಂ ಕೊಯ್ದು ಮುಂದೆ ಸಾರ್ಚಿದನಾಗಳ್             ೨೭

ವ|| ಅನಂತರಮಾ ವಿಬುಧಕಮಳಾಕರರಾಜಹಂಸನಾ ಕಮಳಾಕರದೊಳ್ ಕರಚರಣ ವದನಪ್ರಕ್ಷಾಲನಂಗೆಯ್ದು ಚಾತಕನಂತೆ ಕೃತಜಲಾಹಾರನಾಗಿ ಚಕ್ರಾಹ್ವಯದಂತೆ ಮೃಣಾಳನಾಳಂಗಳಂ ಮೆಲ್ದು ವಿಯೋಗಿಯಂತೆ ನಳಿನದಳಂಗಳನುರದೊಳೊತ್ತಿಕೊಂಡು ತನ್ನೊಳಿಂತೆಂದಂ

ಅಂಚೆಗಳಿಂಚರದಿಂ ತ
ಣ್ಪಿಂ ಚೆಲ್ವಿಂ ಸವಿಯಿನಬ್ಜಘನಸೌರಭದಿಂ
ಕಾಂಚನಕಮಳಾಕರಮಿದು
ಪಂಚೇಂದ್ರಿಯಸುಖಮನೆನಗೆ ಪಡೆದಪುದೀಗಳ್          ೨೮

ವ|| ಎನುತಮಲ್ಲಿಂ ಪೊಱಮಟ್ಟು

ಲಲಿತಲತಾಗೃಹದಿಂದೂ
ಪಲಮಂ ಸಾರ್ದುಂಡೆಸುತ್ತಿ ಮೇಲುದನಾಗಳ್
ತಲೆಗಿಂಬುಮಾಡಿ ನೃಪಕುಲ
ತಿಲಕಂ ಪಟ್ಟಿರ್ದನಿರ್ಪುದುಂ ತತ್‌ಕ್ಷಣದೊಳ್                ೨೯

ಮುರಿದ ಕೊರಲ್ ಬೞಲ್ದೆಳಪಲಾಟಿಪ ಮೆಯ್ ಕಟವಾಯ ಲೋಳೆಯೊಳ್
ಪೊರೆದುಗುತರ್ಪ ಪಚ್ಚಪಸಿಯಚ್ಚಗಱುಂಕೆ ಮರಲ್ದ ದಿಟ್ಟ ಕ
ತ್ತರಿಮೊನೆಗೊಂಡೆೞಲ್ವ ಕಿವಿ ಸೂಚಿದಪ್ಪುದು ಸೋಲ್ತ ಭಾವಮಂ
ತುರಗಮಿದೇನನಾಲಿಸುತಮಿರ್ದಪುದೆಂದು ನರೇಂದ್ರಚಂದ್ರಮಂ              ೩೦

ವ|| ಅಂದದನಚ್ಚರಿವಟ್ಟು ವೀಣಾವಿದ್ಯಾಧರಂ ಭಾವಿಸಿ ನೋಡುತ್ತಮಿರ್ದುನನ್ನೆಗಂ

ಭೂಮಿಗಿಳಿದು ಜೀನನ್ನು ಕೆಳಗಿಳಿಸಿದನು. ಬಳಿಕ ೨೬. ನೆಲದ ಮೇಲೆ ಹೊರಳಾಡಿ ಮೇಲಕ್ಕೆದ್ದ, ಕೆಲವು ಚಿಗುರುಹುಲ್ಲಿನ ಕವಳವನ್ನು ಮೆದ್ದು ನೀರು ಕುಡಿದ ಆ ಕುದುರೆಯನ್ನು ರಾಜಕುಮಾರನು ಸಮೀಪದಲ್ಲಿದ್ದ ಮರಕ್ಕೆ ಕಟ್ಟಿಹಾಕಿದನು. ೨೭. ತರುವಾಯ ಸುಂದರವಾದ ಚಿನ್ನದ ಸರಪಣಿಯಿಂದ ಕುದುರೆಯ ಎರಡು ಕಾಲುಗಳನ್ನು ಕಟ್ಟಿದನು. ಆಮೇಲೆ ಕತ್ತಿಯಿಂದ ಹುಲ್ಲುಗಳನ್ನು ಕೊಯ್ದು ಕುದುರೆಯ ಮುಂದೆ ಹಾಕಿದನು. ವ|| ಆಮೇಲೆ ವಿದ್ವಾಂಸರೆಂಬ ತಾವರೆಗೊಳದಲ್ಲಿ ಅರಸಂಚೆಯಂತೆ ವಿರಾಜಿಸುವ ಆ ರಾಜಪುತ್ರನು ಆ ತಾವರೆಗೊಳದಲ್ಲಿ ಕೈಕಾಲು ಮುಖಗಳನ್ನು ತೊಳೆದುಕೊಂಡು ಚಾತಕಪಕ್ಷಿಯಂತೆ ಜಲಾಹಾರಮಾಡಿ, ಚಕ್ರವಾಕಪಕ್ಷಿಯಂತೆ ತಾವರೆಯ ದಂಟುಗಳನ್ನು, ಮೆದ್ದು, ವಿರಹಜ್ವರಪೀಡಿತನಂತೆ ತಾವರೆಯ ಎಲೆಗಳನ್ನು ಎದೆಗೆ ಅಮುಚಿಕೊಂಡು ಹೀಗೆ ಆಲೋಚಿಸಿದನು.

೨೮. ಹಂಸಪಕ್ಷಿಗಳ ಇಂಪಾದ ಧ್ವನಿಯಿಂದಲೂ, ತಂಪಿನಿಂದಲೂ, ಸೊಬಗಿನಿಂದಲೂ, ರುಚಿಯಿಂದಲೂ, ಶ್ರೇಷ್ಠವಾದ ತಾವರೆಯ ವಾಸನೆಯಿಂದಲೂ ಕೆಂದಾವರೆಯ ಈ ಕೊಳವು ನನಗೆ ಈಗ ಪಂಚೇಂದ್ರಿಯಗಳಿಗೂ ಸುಖವನ್ನಂಟುಮಾಡುತ್ತಿದೆ. ವ|| ಎನ್ನುತ್ತ ಅಲ್ಲಿಂದ ಹೊರಟು. ೨೯. ಆ ರಾಜವಂಶಕ್ಕೆ ತಿಲಕಪ್ರಾಯನಾದ ಚಂದ್ರಾಪೀಡನು ಸುಂದರವಾದ ಬಳ್ಳಿಮಾಡದ ಚಂದ್ರಕಾಂತ ಶಿಲೆಯೊಂದನ್ನು ಸೇರಿ, ತನ್ನ ಹೊದೆಯುವ ಬಟ್ಟೆಯನ್ನು ಉಂಡೆಸುತ್ತಿ ತಲೆದಿಂಬು ಮಾಡಿಕೊಂಡು ಸ್ವಲ್ಪ ಹೊತ್ತು ಮಲಗಿದ್ದನು. ೩೦. ಆಗ ಈ ಕುದುರೆಯು ತಿರುಗಿಕೊಂಡಿರುವ ಕತ್ತು, ಬಳಲಿ ಏನನ್ನೋ ಬಯಸಲು ತವಕಿಸುತ್ತಿರುವ ಶರೀರ, ಕಟವಾಯಿಯಿಂದ ಸುರಿಯುತ್ತಿರುವ ಜೊಲ್ಲಿನಲ್ಲಿ ಸೇರಿಕೊಂಡು ಬರುತ್ತಿರುವ ಹಸುರಾದ ಗರಿಕೆಹುಲ್ಲು, ಅರಳಿರುವ ಕಣ್ಣು, ಕತ್ತರಿಯ ಮೊನೆಯಂತೆ ನೆಟ್ಟನೆ ನಿಂತು ಆಲಿಸುತ್ತಿರುವ ಕಿವಿ, ಇವುಗಳಿಂದ ತಾನು ಪರವಶವಾಗಿರುವ ಮನಸ್ಸನ್ನು ಪ್ರಕಟಪಡಿಸುತ್ತಿದೆ. ಇದು ಏನನ್ನು ಕೇಳುತ್ತಿದೆ? ಎಂದು ಆ ಚಂದ್ರಾಪೀಡನು ಆಶ್ಚರ್ಯಪಟ್ಟನು. ವ|| ವೀಣಾವಾದನದಲ್ಲಿ ಪಾರಂಗತನಾದ ಆ ರಾಜಕುಮಾರನು ಹಾಗೆ ಆಶ್ಚರ್ಯದಿಂದ

ಎಲೆ ಪೆಣ್ದುಂಬಿಯ ಗಾವರಂಬೊರೆದು ಪೊಣ್ಮುತ್ತಿರ್ದ ಪುಷ್ಪಾಸ್ತ್ರ ಚಾ
ಪಲತಾ ಜ್ಯಾರವದಂತಮಾನುಷಮೆನಿಪ್ಪೊಂದೋಜೆಯೊಳ್ ಸಂದ ಕಾ
ಕಲಿಯಿಂದಂ ಪುದಿದೊಯ್ಯನೊಯ್ಯನೆ ವಿಪಂಚೀನಾದಮೀಗಳ್ ಪಳಂ
ಚಲೆವುತ್ತಿರ್ದಪುದಲ್ತೆ ಸಾಲ್ವುದಿದೆ ತದ್ಗಂಧರ್ವರಂ ಸೋಲಿಸಲ್   ೩೧

ಇದು ಮನುಜರ್ಗಗೋಚರಮೆನಿಪ್ಪ ಹರಾದ್ರಿಯ ತಪ್ಪಲಲ್ಲಿ ಗೇ
ಯದ ದನಿ ನುಣ್ಪುವೆತ್ತೆಸೆಯುತಿರ್ದಪುದೀಗಳೆ ಪೋಗಿ ನೋೞ್ಪೆನಾ
ನಿದನೆನುತಂ ಕುತೂಹಲಿಮಾನಸನಂದು ನರೇಂದ್ರನಂದನಂ
ಕುದುರೆಯ ಬೆಂಗೆವಂದು ನಡೆದಂ ಮೃಗಸೂಚಿತ ಗೇಯಮಾರ್ಗದಿಂ                 ೩೨

ವ|| ಅಂತು ಪೋಗೆವೋಗೆ

ಗಿರಿಜಾಕರ್ಣಾವತಂಸೋತ್ಪಲಮನಲೆಯುತಂ ಪಾರಿಜಾತಪ್ರಸೂನೋ
ದರದಿವ್ಯಾಮೋದಮಂ ಬೀಱುತುಮಭವವೃಷಾಶರೋಮಂಥಫೇನೋ
ತ್ಕರದೊಳ್ ತಳ್ಪೊಯ್ಯುತಂ ಧೂರ್ಜಟಿನಿಬಿಡಜಟಾಹೀಂದ್ರಪೀತಾವಶೇಷಂ
ಪರಮಾನಂದಾವಹಂ ಬಂದೆಸಗಿದುದಭವಾದ್ರೀಂದ್ರಚಾರಂ ಸಮೀರಂ               ೩೩

ವ|| ಅಂತು ಬಂದ ಮಂದಮಾರುತನಂ ನರೇಂದ್ರನಂದನನಿದಿರ್ಗೊಂಡು ಪೋಗೆ ವೋಗೆ ತದ್ಗಿರಿಂದ್ರಚಂದ್ರಪ್ರಭಮೆಂಬುಪಾಂತ ಪರ್ವತದ ಪಶ್ಚಿಮಪ್ರಾಂತದೊಳ್ ವಿಕೀರ್ಯಮಾಣ ಬಹುಳ ಕುಸುಮಂಗಳಪ್ಪ ಕನಕಕೇತಕೀವ್ರಜಂಗಳೊಳಂ ಮತ್ತಮಧುಕರ ಝೇಂಕಾರಂಗಳಪ್ಪ ಸಹಕಾರಂಗಳೊಳಂ ಪರಿವೇಷ್ಟಿತ ಮಧುವ್ರತಂಗಳಪ್ಪ ತಮಾಲಂಗಳೊಳಂ ಅನ್ಯೋನ್ಯ ಕಲಹಕುಪಿತ ಕಪೋತ ಪೋತಪಾತಿತಂಗಳಪ್ಪ ಪೂಗಳೊಳಂ ನಯನಾನಂದಂಗಳಪ್ಪ ಚಂದನಂಗಳೊಳಂ ಶುಕನಿಕರಾವೃತಂಗಳಪ್ಪ ಫಲಭರಿತ ದಾಡಿಮೀ ನೀಡಂಗಳೊಳಂ ವಸಂತಸಾಮಜ ಘಟಾಪಿನದ್ಧ ಕದಳಿಕಾನಿಕಾಯಕಾಯಮಾನಂಗಳಪ್ಪ ಕದಳೀವನಂಗಳೊಳಂ ಹರಿದ್ವಿತಾನೋಪಮಾನಂಗಳಪ್ಪ ಲತಾಪ್ರತಾನಂಗಳೊಳಂ ನಿಜಸೌರಭಾಕೃಷ್ಟ ಮಧುಕರಕುಲಂಗಳಪ್ಪ ವಕುಳಂಗಳೊಳಂ ಕೃತ ಪುಲಕಂಗಳಪ್ಪ ತಿಲಕಂಗಳೊಳಂ ಕಂಗೊಳಿಪ ಕೈಲಾಸತರಂಗಿಣೀತರಂಗಿತ ಕಾಂಚನ ಸಿಕತಿಲ ಭೂಭಾಗದೊಳ್ ಸೂರ್ಯಕಾಂತ ಮಣಿಮಯಶೂಲಪಾಣಿದೇವಾಯತನಮಿರ್ದುದನನತಿದೂರದೊಳೆ ನೋಡಿ

ಗಮನವಿಟ್ಟು ನೋಡುತ್ತಿರಲಾಗಿ, ೩೧. ಹೆಣ್ಣುದುಂಬಿಯ ಧ್ವನಿಯಿಂದ ಕೂಡಿಕೊಂಡು ಹರಡುತ್ತಿರುವ ಮನ್ಮಥನ ಬಿಲ್ಲಿನ ನಾಣುದನಿಯಂತೆ ಇರುವ, ದೇವತೆಗಳ ಕಂಠದ ರೀತಿಯಿಂದ ಕೂಡಿಕೊಂಡಿರುವ, ಮಧುರಗೀತದಿಂದ ಕೂಡಿಕೊಂಡಿರುವ ಈ ವೀಣಾನಾದವು ನಿಧಾನವಾಗಿ ಕಿವಿಗೆ ಬೀಳುತ್ತಿದೆ. (ದೇವತೆಗಳ ಕಂಠದಂತೆ ತೋರುವ) ಗಂಧರ್ವರನ್ನು ಕೀಳುಮಾಡಲು ಇಷ್ಟೇ ಸಾಕು. ೩೨. ಇದು ಮನುಷ್ಯರ ದೃಷ್ಟಿಗೆ ಗೋಚರವಾಗದಿರುವ ಕೈಲಾಸಪರ್ವತದ ತಪ್ಪಲು. ಇಂತಹ ಸ್ಥಳದಲ್ಲಿ ಸಂಗೀತದ ಧ್ವನಿಯು ಇಂಪಾಗಿ ಕೇಳಿಬರುತ್ತಿದೆ. ನಾನು ಈಗಲೆ ಹೋಗಿ ಇದನ್ನು ನೋಡುತ್ತೇನೆ  – ಎಂದು ಕುತೂಹಲದಿಂದ ಕೂಡಿದ ಮನಸ್ಸುಳ್ಳ ರಾಜಕುಮಾರನು ಕುದುರೆಯು ತೋರಿಸುವ ಗೀತವು ಕೇಳಿಬರುತ್ತಿರುವ ದಾರಿಯಿಂದಲೆ ಅದನ್ನು ಹಿಂಬಾಲಿಸುತ್ತ ಮುಂದೆ ಹೋದನು. ವ|| ಹಾಗೆ ಹೋಗುತ್ತಿರಲಾಗಿ

೩೩. ಪಾರ್ವತೀದೇವಿಯ ಕಿವಿಯಲ್ಲಿ ಮುಡಿದುಕೊಂಡಿರುವ ಕಮಲ ಪುಷ್ಪದಲ್ಲಿ ಸಂಚರಿಸುತ್ತ, ಪಾರಿಜಾತಪುಷ್ಪದ ದಿವ್ಯವಾದ ಸುವಾಸನೆಯನ್ನು ಬೀರುತ್ತ, ಪರಮೇಶ್ವರನ ವಾಹನವಾದ ವೃಷಭದ ಮೆಲುಕುನೊರೆಗಳಲ್ಲಿ ಸಂಪರ್ಕಹೊಂದುತ್ತಾ, ಪರಶಿವನ ದಟ್ಟವಾದ ಜಡೆಯಲ್ಲಿರುವ ಸರ್ಪರಾಜನಿಂದ ಸೇವಿಸಿ ಉಳಿದಿರುವ ಪರಮಾನಂದವನ್ನುಂಟುಮಾಡುವ ಕೈಲಾಸಪರ್ವತದಲ್ಲಿ ಸಂಚರಿಸುವ ಗಾಳಿಯು ಬೀಸುತ್ತಿತ್ತು. ವ|| ಹಾಗೆ ಬಂದ ಮಂದಮಾರುತವನ್ನು ರಾಜಕುಮಾರನು ಎದುರುಗೊಂಡು ಮುಂದೆ ಹೋಗುತ್ತಿರಲಾಗಿ, ಆ ಕೈಲಾಸದ ನೆರೆಬೆಟ್ಟವಾದ ಚಂದ್ರಪ್ರಭ ಪರ್ವತದ ಪಶ್ಚಿಮಭಾಗದಲ್ಲಿ ಹೂವುಗಳನ್ನು ಚೆಲ್ಲುತ್ತಿರುವ, ಹೊಂಗೇದಗೆ ಮರಗಳಿಂದಲೂ, ಕೊಬ್ಬಿದ ದುಂಬಿಗಳ ಝೇಂಕಾರದಿಂದ ಕೂಡಿರುವ ಸಿಹಿಮಾವಿನ ಮರಗಳಿಂದಲೂ, ದುಂಬಿಗಳಿಂದ ಸುತ್ತುವರಿಯಲ್ಪಟ್ಟಿರುವ ಹೊಂಗೆ ಮರಗಳಿಂದಲೂ, ಪರಸ್ಪರ ಜಗಳದಿಂದ ರೇಗಿರುವ ಪಾರಿವಾಳಮರಗಳಿಂದ ಬೀಳಿಸಲ್ಪಟ್ಟ ಹೂವುಗಳುಳ್ಳ ರಮಣೀಯವಾದ ಗಂಧದ ಮರಗಳಿಂದಲೂ, ಗಿಳಿವಿಂಡಿನಿಂದ ಆವರಿಸಲ್ಪಟ್ಟಿರುವ ಹಣ್ಣುಗಳಿಂದ ತುಂಬಿರುವ ದಾಳಿಂಬೆ ಮರಗಳಿಂದಲೂ, ವಸಂತಋತುವೆಂಬ ಆನೆಯ ಹಿಂಡಿನ ಮೇಲೆ ಕಟ್ಟಿರುವ ಬಾವುಟಗಳಂತಿರುವ ಬಾಳೆಯಮರದ ಗುಂಪುಗಳಿಂದಲೂ ಹಸಿರುಬಣ್ಣದ ಮೇಲುಕಟ್ಟುಗಳಂತಿರುವ ಬಳ್ಳಿಯ ಪೊದರುಗಳಿಂದಲೂ, ಸುವಾಸನೆಯಿಂದ ದುಂಬಿವಿಂಡನ್ನು ಸೆಳೆಯುತ್ತಿರುವ ವಕುಳವೃಕ್ಷಗಳಿಂದಲೂ, ರೋಮಾಂಚನವನ್ನುಂಟು ಮಾಡುವ ತಿಲಕವೃಕ್ಷಗಳಿಂದಲೂ ಕಂಗೊಳಿಸುತ್ತಿರುವ ಕೈಲಾಸಪರ್ವತದಿಂದ ಹರಿದು ಬರುತ್ತಿರುವ ನದಿಯೊಂದರ ವಿಸ್ತಾರವಾದ

ಹೊಂಬಣ್ಣದ ಮರುಳುನೆಲದಲ್ಲಿ ಸೂರ್ಯಕಾಂತಶಿಲಾ ನಿರ್ಮಿತವಾದ ಪರಮೇಶ್ವರನ ದೇವಾಲಯವಿರುವುದನ್ನು ಸಮೀಪದಲ್ಲೆ ಕಂಡನು.

ಇದು ಸಿದ್ಧಾಯತನಂ ಮನಂಗೊಳಿಸಿ ತೋರುತ್ತಿರ್ಪುದಿಲ್ಲಿಂದೆ ಬಂ
ದುದು ವೀಣಾಧ್ವನಿ ತಪ್ಪದೀಯೆಡೆಯೊಳಿರ್ದಾರ್ ಬಾಜಿಸುತ್ತಿರ್ದಪರೆಂ
ಬುದನಾಂ ನೋಡುವೆನೀಗಳೆಂದು ಮನದೊಳ್ ನಿಶ್ಚೈಸುತಂ ಮೆಲ್ಲನೆ
ಯ್ದಿದನಾಸ್ಥಾನಮನಂದನಂತಮಹಿಮಂ ಭೂಪಾಲವಿದ್ಯಾಧರಂ               ೩೪

ವ|| ಅಂತದನೆಯ್ದಿ ನೋೞ್ಪನ್ನೆಗಮಲ್ಲಿ

 

ಹರಹಾಸಾವಯವಂಗಳಂತಿರಲನಂತಾನಂತ ಭೋಗಂಗಳಂ
ತಿರೆ ಪೂರ್ಣೇಂದ್ರಕಲಾಳಿಯಂತಿರೆ ಸಿತಾಬ್ಜಾನೀಕಮೊಪ್ಪಲ್ ಶಿಖಾಂ
ತರದೊಳ್ ನಿರ್ಮಲ ದಿವ್ಯಮೌಕ್ತಿಕಶಿಲಾಲಿಂಗಂ ಚತುರ್ವಕ್ತ್ರಸುಂ
ದರಮಲ್ಲಿರ್ದುದು ರತ್ನಪೀಠಘಟಿತಂ ದೇದೀಪ್ಯಮಾನಪ್ರಭಂ                    ೩೫

ವ|| ಅಂತಿರ್ದ ಚರಾಚರಗುರುವಪ್ಪ ಶೂಲಪಾಣಿದೇವರಂ ಕಾಣ್ಬುದುಮಾ ಪರಮೇಶ್ವರನ ಸಕಳಜಗದಭೀಷ್ಟಫಲದಾಯಕಮಪ್ಪ ದಕ್ಷಿಣಾಮೂರ್ತಿಯನಾಶ್ರಯಿಸಿ

ಅಮೃತಾಂಭೋರಾಶಿಪೂರಪ್ರತಿಮ ನಿಜತಪಸ್ಸಂಚಯಂ ಪರ್ವಿತೋ ಲೋ
ಕಮನೆಂಬಂತಿರ್ವ ದೇಹಾಂಶುಗಳ ಬಳಗದಿಂ ಕಾನನಾನೀಕಮಂ ದಂ
ತಮಯಂ ಮಾೞ್ಪಂತೆ ತಾರಾಚಳಮನಸದಳಂ ನುಣ್ಣಿಪಂತೊರ್ವಳತ್ಯು
ತ್ತಮ ದಿವ್ಯಾಕಾರೆ ಕುಳ್ಳಿರ್ದತನುಹರನನಾರಾಸುತ್ತಿರ್ದಳಾಗಳ್              ೩೬

ವ|| ಅಂತುಮಲ್ಲದೆಯುಂ

ತಳತಳಿಸಿ ಪೊಳೆವ ಪಳುಕಿನ
ನಿಲಯಮದೊಳಮೃತಾಬ್ಧಿಜಲದೊಳಭ್ರಕಪಟಲಂ
ಗಳ ಮಯೊಳಿರ್ದಳೆನೆ ಮೆ
ಯ್ವೆಳಗಿಂ ನೆಯಱಯಲಾದುದಿಲ್ಲಂಗನೆಯಂ                                    ೩೭

ಸೊಗಯಿಸವೆಂದು ಪೃಥಿವ್ಯಾ
ದಿಗಳೆನಿಸುವ ಪಂಚಭೂತಮೆಲ್ಲವನುೞದಾ
ವಗಮುಜ್ವಳಾಂಗಿಯಂ ಧವ
ಳಗುಣದೆ ನಿರ್ಮಿಸಿದನಾಗವೇೞ್ಕುಂ ಧಾತ್ರಂ                                     ೩೮

೩೪. “ಇಲ್ಲಿ ಒಂದು ದೇವಸ್ಥಾನವು ಮನೋಹರವಾಗಿ ಕಾಣುತ್ತಿದೆ. ನಿಜವಾಗಿಯೂ ವೀಣಾಧ್ವನಿಯು ಇಲ್ಲಿಂದಲೇ ಕೇಳಿಬರುತ್ತಿದೆ. ಇಲ್ಲಿದ್ದುಕೊಂಡು ಯಾರು ನುಡಿಸುತ್ತಿದ್ದಾರೆ ಎಂಬುದನ್ನು ನಾನು ಈಗ ನೋಡುತ್ತೇನೆ” ಎಂದು ಮನಸ್ಸಿನಲ್ಲಿ ತೀರ್ಮಾನಿಸಿ ಆ ಮಹಾಪ್ರಭಾವಶಾಲಿಯಾದ ರಾಜಕುಮಾರನು ಮೆಲ್ಲನೆ ಅಲ್ಲಿಗೆ ಹೋದನು. ವ|| ಹಾಗೆ ಅಲ್ಲಿಗೆ ಹೋಗಿ ನೋಡುತ್ತಿರಲಾಗಿ, ಅಲ್ಲಿ ೩೫. ಪರಮೇಶ್ವರನ ಅಟ್ಟಹಾಸದ ಅವಯವಗಳಂತೆಯೂ, ಆದಿಶೇಷನ ಅನೇಕ ಹೆಡೆಗಳಂತೆಯೂ, ಪೂರ್ಣಚಂದ್ರನ ಕಳೆಗಳ ಪಂಕ್ತಿಯಂತೆಯೂ ಇರುವ ಬಿಳಿಯ ಕಮಲಗಳ ರಾಶಿಯು ತಲೆಯ ಮೇಲೆ ಶೋಭಿಸುತ್ತಿರಲು, ರತ್ನಪೀಠದಲ್ಲಿ ಪ್ರತಿಷ್ಠಿಸಲ್ಪಟ್ಟಿರುವ ಪ್ರಕಾಶಮಾನವಾದ ಕಾಂತಿಯುಳ್ಳ, ನಾಲ್ಕು ಮುಖಗಳಿಂದ ಶೋಭಿಸುವ ಮೌಕ್ತಿಕಶಿಲೆಯಿಂದ ನಿರ್ಮಿತವಾದ ಶುಭ್ರವಾದ ಶಿವಲಿಂಗವೊಂದು ಇರುವುದು ಕಂಡುಬಂದಿತು. ಟಿ|| ಸಾಮಾನ್ಯವಾಗಿ ಪರಮೇಶ್ವರನು ಐದು ಮುಖವುಳ್ಳವನೆಂದು ಪ್ರಸಿದ್ಧಿಯಿದ್ದರೂ ನಾಲ್ಕು ಮುಖವುಳ್ಳವನೆಂದೂ ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ವ|| ಹಾಗೆ ಇದ್ದ ಚರಾಚರಾತ್ಮಕವಾದ ಜಗತ್ತಿಗೆ ಗುರುವೆನಿಸಿದ ತ್ರಿಶೂಲಧರನನ್ನು ಕಂಡನು. ಆ ಪರಮೇಶ್ವರನ ಸಮಸ್ತಜನರ ಇಷ್ಟಾರ್ಥಗಳನ್ನೂ ನೆರವೇರಿಸುವ ದಕ್ಷಿಣದಿಕ್ಕಿನ ಮುಖದ ಎದುರುಗಡೆ ಕುಳಿತುಕೊಂಡು, ೩೬. ಕ್ಷೀರಸಮುದ್ರದ ಪ್ರವಾಹಕ್ಕೆ ಸಮಾನವಾದ ತನ್ನ ತಪಸ್ಸಿನ ಸಮೃದ್ಧಿಯು ಜಗತ್ತಿನಲ್ಲಿ ಹರಡುತ್ತಿದೆಯೋ ಎಂಬಂತೆ ಇರುವ ತನ್ನ ಶರೀರದ ಕಾಂತಿಗಳ ಸಮೂಹದಿಂದ ಆ ಕಾಡುಗಳನ್ನೆಲ್ಲಾ ದಂತಮಯವನ್ನಾಗಿ ಮಾಡುವಂತೆಯೂ, ಕೈಲಾಸಪರ್ವತವನ್ನೇ ಅತಿಶಯವಾಗಿ ಬಿಳುಪು ಮಾಡುವಂತೆಯೂ ಇರುವ ಬಹಳ ಪ್ರಶಸ್ತವೂ ದಿವ್ಯವೂ ಆದ ಸ್ವರೂಪವುಳ್ಳ ಒಬ್ಬಳು ಕುಳಿತುಕೊಂಡು ನಿರಾಕಾರನಾದರೂ ಭಕ್ತರಿಗಾಗಿ ಆಕಾರವನ್ನು ತಾಳಿರುವ ಆ ಪರಮೇಶ್ವರನನ್ನು ಪೂಜಿಸುತ್ತಿದ್ದಳು. ವ|| ಅದಲ್ಲದೆ ೩೭. ತಳತಳನೆ ಹೊಳೆಯುತ್ತಿರುವ ಶರೀರದ ಕಾಂತಿಯಿಂದ ಕೂಡಿದ ಅವಳು ಸಟಿಕಶಿಲಾಗೃಹದಲ್ಲಿ ಇರುವವಳಂತೆಯೂ, ಕ್ಷೀರಸಮುದ್ರದ ನೀರಿನಲ್ಲಿ ಮುಳುಗಿರುವ ವಳಂತೆಯೂ, ಬಿಳಿಯ ಮೋಡಗಳ ಆವರಣದ ಮರೆಯಲ್ಲಿ ಇರುವವಳಂತೆಯೂ ಕಾಣುತ್ತಿದ್ದಳು. ಇದರಿಂದ ಅವಳನ್ನು ಚೆನ್ನಾಗಿ ಗುರುತಿಸಲು ಆಗುತ್ತಿರಲಿಲ್ಲ. ೩೮. ಬ್ರಹ್ಮನು ಇತರರನ್ನು ಸೃಷ್ಟಿಮಾಡುವಂತೆ ಪೃಥಿವಿ ಮೊದಲಾದ ಪಂಚಭೂತಗಳಿಂದ ಸೃಷ್ಟಿಮಾಡಿದರೆ

ವ|| ಅಂತುಮಲ್ಲದೆಯುಂ

ಪತಿಯನೆ ಬೇಡಿ ರುದ್ರನ ಸಮೀಪದೊಳುಗ್ರತಪಕ್ಕೆ ನಿಂದಳೋ
ರತಿ ಶಶಿಲೇಖೆಯಂ ನೆನೆದು ಬಂದಳೋ ಮೇಣಮೃತಾರ್ಣವಾದೇ
ವತೆ ಶಿತಿಕಂಠಕಂಠತಮಮಂ ಕಳೆವಾಗ್ರಹದಿಂದೆ ಬಂದಳೋ
ಕ್ಷಿತಿಗಮೃತಾಂಶುಮೂರ್ತಿಯೆನಲೇನೆಸೆದಿರ್ದುದೊ ರೂಪು ಕಾಂತೆಯಾ           ೩೯

ಹರಹಾಸದ್ಯುತಿ ಮೂರ್ತಿಗೊಂಡುದೊ ವಿರಿಂಚಿಖ್ಯಾತಿ ಲೋಕಂಗಳೊಳ್
ಪರಿದಾಯಾಸದೆ ನಿಂದುದೋ ಕಲಿಯುಗಂ ನಿರ್ಮೂಲಿಸಲ್ ಧರ್ಮಮಂ
ಪಿರಿದುಂ ಶೋಕದೊಳಾ ತ್ರಯೀವಧು ವನಂಬೊಕ್ಕಿರ್ದಳೋ ಪೇೞಮ
ಚ್ಚರಿಯೆಂಬಂತಿರೆ ದಿವ್ಯಸುಂದರಿ ಮನಕ್ಕಾನಂದಮಂ ಮಾಡಿದಳ್                    ೪೦

ಬರಲಿರ್ದ ಕೃತಯುಗದ ಬೀ
ಜರುಚಿರಕಳೆ ಪೆಣ್ಣರೂಪದಿಂದಿರ್ದುದೊ ಭಾ
ಸುರಶೇಷದೇಹರುಚಿ ತಾಂ
ಧರೆಗವತರಿಸಿರ್ದುದೆನೆ ಕರಂ ಸೊಗಯಿಸಿದಳ್                                       ೪೧

ದಶವದನೋನ್ಮೂಲನಭಯ
ವಶದಿಂ ಕೈಲಾಸಲಕ್ಷಿ  ಬಂದಳೊ ಬಳಭ
ದ್ರಶರೀರಕಾಂತಿ ಮಧುಮದ
ವಿಶೇಷ ಘೂರ್ಣನದಿನಳ್ಕಿ ಬಂದಿರ್ದಪಳೋ                                    ೪೨

ದ್ವೀಪಾಂತರಮಂ ಶ್ವೇತ
ದ್ವೀಪಸ್ತ್ರೀ ನೋಡಲೆಂದು ಬಂದಳೊ ಭುವನ
ವ್ಯಾಪಿ ಸಿತಪಕ್ಷಸಂತತಿ
ರೂಪಂ ಕೈಕೊಂಡು ನಿಂದುದೆನೆ ಸೊಗಯಿಸುಗುಂ                                      ೪೩

ಚಂದಗಾಣುವುದಿಲ್ಲವೆಂದು ತಿಳಿದು ಪ್ರಕಾಶಮಾನವಾದ ಶರೀರಕಾಂತಿಯುಳ್ಳ ಇವಳನ್ನು ಬರಿಯ ಧವಳಗುಣದಿಂದಲೇ ಸೃಷ್ಟಿಸಿರಬೇಕು. ವ|| ಅದಲ್ಲದೆ, ೩೯. ರತಿದೇವಿಯು ಗಂಡನನ್ನು ಬದುಕಿಸಬೇಕೆಂದು ಪರಮೇಶ್ವರನ ಸಮೀಪದಲ್ಲಿ ಕಠಿಣವಾದ ತಪಸ್ಸನ್ನು ಮಾಡುತ್ತಿರುವಳೊ ಎಂಬಂತೆಯೂ, ಕ್ಷೀರಸಮುದ್ರದ ಅದೇವತೆಯು ಶಿವನ ತಲೆಯಲ್ಲಿ ನೆಲೆಸಿರುವ ಚಂದ್ರನ ಕಲೆಯನ್ನು ನೆನಸಿಕೊಂಡು ನೋಡಬಯಸಿ ಬಂದಿರುವಳೊ ಎಂಬಂತೆಯೂ, ನೀಲಕಂಠನ ಕೊರಳಿನಲ್ಲಿರುವ ಕತ್ತಲೆ (ಕಪ್ಪು)ಯನ್ನು ಪರಿಹರಿಸಬೇಕೆಂಬ ತವಕದಿಂದ ಚಂದ್ರಮೂರ್ತಿಯು ಭೂಮಿಗೆ ಬಂದಿರುವುದೊ ಎಂಬಂತೆಯೂ ಆ ತರುಣಿಯ ರೂಪವು ಶೋಭಿಸುತ್ತಿತ್ತು. ೪೦. ಪರಮೇಶ್ವರನ ಅಟ್ಟಹಾಸದ ಕಾಂತಿಯು ಸ್ತ್ರೀರೂಪವನ್ನು ತಾಳಿ ಬಂದಿರುವಂತೆಯೂ, ಬ್ರಹ್ಮನ ಕೀರ್ತಿಯು ಲೋಕಗಳಲ್ಲೆಲ್ಲಾ ಸಂಚರಿಸಿ ಆಯಾಸದಿಂದ ಇಲ್ಲಿಗೆ ಬಂದು ವಿಶ್ರಮಿಸಿಕೊಳ್ಳುತ್ತಿರುವಂತೆಯೂ, ಕಲಿಯುಗವು ಧರ್ಮವನ್ನು ನಾಶಪಡಿಸಲಾಗಿ ಬಹಳ ದುಖದಿಂದ ವೇದಾದೇವತೆಯು ವನವಾಸಕ್ಕೆ ಬಂದಿರುವಂತೆಯೂ ಇರುವ ಆಶ್ಚರ್ಯವನ್ನುಂಟುಮಾಡುವ ಆ ದಿವ್ಯಸುಂದರಿಯು ರಾಜಕುಮಾರನ ಮನಸ್ಸಿಗೆ ಆನಂದವನ್ನುಂಟುಮಾಡಿದಳು. ೪೧. ಮುಂದೆ ಬರಲಿರುವ ಕೃತಯುಗದ ಸುಂದರವಾದ ಮೂಲಾಂಶವು ಸ್ತ್ರೀರೂಪವನ್ನು ತಾಳಿ ಬಂದಿರುವಂತೆಯೂ, ಪ್ರಕಾಶಮಾನವಾದ ಆದಿಶೇಷನ ಶರೀರಕಾಂತಿಯು ಸ್ತ್ರೀರೂಪದಿಂದ ಭೂಮಿಗೆ ಬಂದಿರುವಂತೆಯೂ ಇರುವ ಅವಳು ಬಹಳ ಮನೋಹರವಾಗಿದ್ದಳು. ಟಿ|| ಕೃತಯುಗವು ಪುಣ್ಯಮಯವಾದುದು. ಕವಿಸಮಯದಲ್ಲಿ ಪುಣ್ಯವು ಬಿಳುಪು. ಅದಕ್ಕೆ ಉಪಾದಾನಕಾರಣವಾದ ಅಂಶವೂ ಬಿಳುಪಾಗಿದೆ ಎಂಬ ಅಭಿಪ್ರಾಯದಿಂದ ವರ್ಣಿಸಿದ್ದಾನೆ. ೪೨. ರಾವಣನು ಕಿತ್ತುಹಾಕಿಬಿಟ್ಟಾನೆಂಬ ಭಯದಿಂದ ಕೈಲಾಸಾದೇವತೆಯು ಇಲ್ಲಿಗೆ ಬಂದು ನೆಲೆಸಿರುವಂತೆಯೂ ಬಲರಾಮನ ಶರೀರಕಾಂತಿಯು ಅವನು ಮಾಡುವ ಮದ್ಯಪಾನದ ಮದದಿಂದ ಉಂಟಾಗುವ ದೊಡ್ಡ ಒಲೆತಕ್ಕೆ ಹೆದರಿ ಸ್ತ್ರೀರೂಪದಿಂದ ಇಲ್ಲಿಗೆ ಬಂದಿರುವಂತೆಯೂ ಅವಳು ಕಾಣುತ್ತಿದ್ದಳು. ಟಿ|| ಬಲರಾಮನ ಶರೀರಕಾಂತಿಯು ಬಿಳುಪು. ೪೩. ದ್ವೀಪಾಂತರಗಳನ್ನು ನೋಡಬೇಕೆಂಬ ಕುತೂಹಲದಿಂದ ಶ್ವೇತದ್ವೀಪದೇವತೆಯು ಬಂದಿರುವಂತೆಯೂ, ಜಗತ್ತಿನಲ್ಲಿ ವ್ಯಾಪಿಸಿರುವ ಶುಕ್ಲಪಕ್ಷ ಪರಂಪರೆಯು ಮಹಿಳಾಕಾರವನ್ನು ತಾಳಿ ನಿಂತಿರುವಂತೆಯೂ ಅವಳು

ಕಡೆದರೊ ಶಂಖದಿಂ ತೆಗೆದರೋ ನವಮೌಕ್ತಿಕದಿಂ ಮೃಣಾಳದಿಂ
ಪಡೆದರೊ ದಂತದಿಂದೆಸೆಯೆ ಮಾಡಿದರೋ ರುಚಿರೋಲ್ವಲಾಂಗಮಂ
ಬಿಡದಮೃತಾಂಶುರಶ್ಮಿಗಳ ಕುಂಚಿಗೆಯಿಂದಮೆ ಕರ್ಚಿ ಪಾರದಂ
ದೊಡೆದರೊ ಪೇೞೆನಲ್ ಕರಮೆ ಕಣ್ಗೆಸೆದಿರ್ದುದು ರೂಪು ಕಾಂತೆಯಾ          ೪೪

 

ಪೊಳೆವ ರಜತಾಭ್ರಕದ್ಯುತಿ
ಗಳಿನಮೃತರಸಪ್ರವಾಹದಿಂದಭಿಷವಮ
ಗ್ಗಳಿಸೆ ತಳತಳಿಸಿ ತೊಳಗುವ
ಪಳುಕಿನ ಪುತ್ಥಳಿಕೆಯಂತೆ ಕರಮೆಸೆದಿರ್ದಳ್                                  ೪೫

ಪೊಳೆವೆಳನೇಸಱಂ ತೆಗೆದ ರಶ್ಮಿಗಳಂತೆ ಮಡಲ್ತು ಕಾಂತಿಯಂ
ತಳೆದೆಳಮಿಂಚಿನೊಳ್ದಳಿರ್ಗಳಂತೆ ಕವಲ್ತು ಮೃಗಾಂಕಮೌಳಿ ನಿ
ರ್ಮಳಪದಭಸ್ಮರೇಣುಗಳೆನಲ್ ನವಮಜ್ಜನ ವಾಕರಣಂಗಳಂ
ತಳೆದು ಪೆಗಲ್ವಂ ಬಳೆದು ರಂಜಿಸುಗುಂ ಜಡೆಗಳ್ ಮೃಗಾಕ್ಷಿಯಾ           ೪೬

ಶಿವನಾಮಾಂಕಿತಮಂ ರ
ತ್ನವಿರಚಿತಮನುತ್ತಮಾಂಗದೊಳ್ ಪಾದೂಯು
ಗ್ಮವನೆಸೆಯೆ ತಳೆದು ಭಕ್ತಿಯೆ
ಭವಸನ್ನಿಯಲ್ಲಿ ರೂಪುಗೊಂಡಂತಿರ್ದಳ್                 ೪೭

ತೊಳಗುವ ತಾರಾಚೂರ್ಣೋ
ಜ್ವಳ ಭಸಿತಲಲಾಮದಿಂದೆ ಪೆವೆರಸು ತಳ
ತ್ತಳಿಸುವ ಹೈಮಾಚಳಮೇ
ಖಳೆಯಂತಿರೆ ಕಾಂತೆ ಕಣ್ಗೆ ಕರಮೆಸೆದಿರ್ದಳ್             ೪೮

ಪಿರಿದೆನಿಪ ಭಕ್ತಿಭರದಿಂ
ದರಲ್ದು ಸಿರಿ ನೆಲಸಿತೋರ್ಪ ಕಣ್ಮಲರ್ಗಳ್ ನ
ಟ್ಟರೆ ಮಗುೞೆ ದೇವನಂ ಪುಂ
ಡರೀಕಮಾಲೆಗಳಿನರ್ಚಿಪಂತೆಸೆದಿರ್ದಳ್                    ೪೯

ಮನೋಹರಳಾಗಿದ್ದಳು. ೪೪. ಬೆಳ್ಳಗೆ ತಳತಳಿಸುವ ಅವಳ ಶರೀರವು ಶಂಖದಿಂದ ಕಡೆದು ಮಾಡಿರುವಂತೆಯೂ, ಹೊಸ ಮುತ್ತುಗಳಿಂದ ನಿರ್ಮಾಣಗೊಂಡಂತೆಯೂ, ತಾವರೆಯ ದಂಟುಗಳಿಂದ ನಿರ್ಮಿಸಲ್ಪಟ್ಟಂತೆಯೂ, ದಂತಗಳಿಂದ ಒಪ್ಪವಾಗಿ ಮಾಡಿರುವಂತೆಯೂ ಶೋಭಿಸುತ್ತಿತ್ತು. ಅಲ್ಲದೆ ಅವಳ ರೂಪು ಚಂದ್ರಕಿರಣಗಳೆಂಬ ಕುಂಚದಿಂದ ತೊಳೆದು ಪಾದರಸದಿಂದ ಲೇಪನಮಾಡಿರುವಂತೆಯೂ ಶೋಭಿಸುತ್ತಿತ್ತು. ೪೫. ಪ್ರಕಾಶಿಸುವ ಬೆಳ್ಳಿ ಮತ್ತು ಕಾಗೆಬಂಗಾರಗಳ ರಸಗಳಿಂದಲೂ ಅಮೃತರಸದ ಪ್ರವಾಹದಿಂದಲೂ ಸ್ನಾನ ಮಾಡಿಸಿದರೆ ತಳತಳಿಸಿ ಹೊಳೆಯುವ ಸಟಿಕದ ಬೊಂಬೆಯಂತೆ ಅವಳು ಚೆನ್ನಾಗಿ ಶೋಭಿಸುತ್ತಿದ್ದಳು. ೪೬. ಆ ತರುಣಿಯ ಜಡೆಗಳು ಹೊಳೆಯುವ ಬಾಲಸೂರ್ಯನ ಕಿರಣಗಳನ್ನು ಸಂಗ್ರಹಿಸಿ ಮಾಡಿರುವಂತೆ ಹರಡಿದ್ದುವು; ಹೊಸಹೊಸದಾಗಿ ಮೂಡುತ್ತಿರುವ ಮಿಂಚಿನ ದಳಗಳಂತೆ ಕೆಂಬಣ್ಣವನ್ನು ತಾಳಿ ಬೆಳೆದಿದ್ದುವು. ಹೀಗೆ ಹೆಗಲಿನವರೆಗೂ ಬೆಳೆದಿದ್ದ ಅವಳ ಜಡೆಗಳು ಮನೋಹರವಾಗಿದ್ದುವು. ಅವಳು ಆಗತಾನೆ ಸ್ನಾನ ಮಾಡಿದ್ದರಿಂದ ನೀರಿನ ಹನಿಗಳು ಅಲ್ಲಿ ಸೇರಿಕೊಂಡಿದ್ದುವು. ಅವು ನಮಸ್ಕಾರ ಮಾಡುವಾಗ ಅಂಟಿಕೊಂಡಿರುವ ಪರಮೇಶ್ವರನ ಪವಿತ್ರವಾದ ಪಾದಗಳ ವಿಭೂತಿಕಣಗಳಂತೆ ಶೋಭಿಸುತ್ತಿದ್ದುವು. ೪೭. ಅವಳು ಎರಡು ಶಿವಪಾದಪ್ರತಿಮೆಗಳನ್ನು ತಲೆಯಲ್ಲಿ ಧರಿಸಿದ್ದಳು. ಸಾಕ್ಷಾತ್ ಶಿವಭಕ್ತಿಯೇ ಸ್ತ್ರೀರೂಪವನ್ನು ಧರಿಸಿ ಬಂದಿರುವಂತೆ ಅವಳು ಪರಮೇಶ್ವರನ ಸನ್ನಿಧಾನದಲ್ಲಿ ಶೋಭಿಸುತ್ತಿದ್ದಳು. ೪೮. ಸೂರ್ಯನ ರಥದ ಕುದುರೆಗಳ ಗೊರಸುಗಳ ತುದಿಯಿಂದ ಹೊಡೆಯಲ್ಪಟ್ಟ ನಕ್ಷತ್ರಗಳ ಪುಡಿಯಂತಿರುವ, ವಿಭೂತಿಯಿಂದ ಕೂಡಿಕೊಂಡಿರುವ ಹಣೆಯುಳ್ಳ ಆ ಸುಂದರಿಯು ಚಂದ್ರನ ಕಳೆಯಿಂದ ತಳತಳಿಸುವ ಹಿಮಾಚಲದ ಮಧ್ಯಭಾಗದಂತೆ ಚಂದಗಾಣುತ್ತಿದ್ದಳು. ೪೯. ಮಿಗಿಲಾದ ಭಕ್ತಿಯ ಅತಿಶಯದಿಂದ ಅರಳಿರುವ ಮತ್ತು ಕಾಂತಿಗೆ ನೆಲೆಯಾಗಿರುವ ಅವಳ ಕಣ್ಣಿನ ನೋಟಗಳು ಆ ಶಿವಲಿಂಗದಲ್ಲೇ ನೆಟ್ಟಿರಲಾಗಿ, ಮತ್ತೆ ದೇವರನ್ನು ಬಿಳಿಯ ಕಮಲಗಳ ಮಾಲಿಕೆಯಿಂದ ಪೂಜಿಸುತ್ತಿರುವಂತೆ ಅವಳು