ರಸಮೊಸರ್ವಂತು ಪಾಡುತಿರೆ ಶುದ್ಧಮನೋಮಣಿದೀಪ್ತಿ ಪೊಣ್ಮಿ ರಾ
ಜಿಸಿದಪುದೋ ಸ್ತುತಿಪ್ರಕರನಿರ್ಮಳ ವರ್ಣಸಮೂಹಮೊತ್ತುಗೊಂ
ಡೆಸೆವುದೊ ಪೇೞೆನಲ್ ಪೊಳೆವ ದಂತಮರೀಚಿಗಳಿಂದಮೀಶ್ವರಂ
ಗೊಸೆದಭಿಷೇಕಮಂ ಮಗುೞೆ ಮಾಡುವವೊಲ್ ಬಗೆಗೊಪ್ಪಿ ತೋಱದಳ್          ೫೦

ವನರುಹನಾಭನಾಭಿಸಿತಪಂಕಜಬೀಜಮೊ ಪದ್ಮಗರ್ಭನಾ
ನನದೆ ಪೊದೞ್ದ ವೇದವಿಮಲಾಕ್ಷರಮಾಲೆಯೊ ಕೆಯ್ಯ ಸೋಂಕು ಪಾ
ವನತರಮೆಂದು ಸಪ್ತಮುನಿಮಂಡಲಮಿರ್ಪುದೊ ಬಂದ ಪೇೞೆನಲ್
ವನಿತೆಯ ಮೌಕ್ತಿಕಾಕ್ಷವಲಯಂ ಕೊರಲೊಳ್ ಕರಮೊಪ್ಪಿ ತೋಱುಗುಂ             ೫೧

ತೊಳಗುವ ಮೋಕ್ಷದ್ವಾರದ
ಕಳಸಂಗಳಿವೆನಿಸಿ ತೋರ್ಪ ಕುಚಯುಗದಿಂ ಕೋ
ಮಳೆ ಹಂಸಮಿಥುನದಿಂದಂ
ವಿಳಸಿತಮಾದಮರನದಿಯನನುಕರಿಸಿರ್ದಳ್                                           ೫೨

ಎಳವೆಯೊಳ್ಗದಿರ್ಗಳ್ ಬಂ
ದೆಳಸಿದವೀಶ್ವರನ ಸನ್ನಿಧಾನದೊಳೆಸೆವೀ
ಲಲಿತಾಂಗಿಯನೆಂಬಿನೆಗಂ
ಪೊಳೆಯುತ್ತಂ ಬ್ರಹ್ಮಸೂತ್ರಮೇನೊಪ್ಪಿದುದೋ                                           ೫೩

ಸತಿ ಪದ್ಮಾಸನದೊಳಿರ
ಲ್ಕತಿರುಚಿರೋತ್ತಾನ ಚರಣತಳರುಚಿಯಿಂ ಲೋ
ಹಿತಮಾದ ದುಗುಲದಿಂದಂ
ನಿತಂಬವಿಸ್ತಾರಮೇಂ ಮನಂಗೊಳಿಸಿದುದೋ                                                 ೫೪

ವ|| ಮತ್ತಂ ಹಾರಲತೆಯಂತೆ ಕಂಠಯೋಗ್ಯಮುಂ ಗ್ರಹಪಂಕ್ತಿಯಂತೆ ಧ್ರುವಪ್ರತಿಬದ್ಧಮುಂ ಮತ್ತಳಂತೆ ಘೂರ್ಣಿತಮಂದ್ರತಾರಮುಂ ಮೀಮಾಂಸೆಯಂತೆ ಭಾವನಾಬದ್ಧಮುಮಪ್ಪ ಗೀತೆಯಿಂ ವೀಣೆಯಂ ಬಾಜಿಸುತ್ತಿರ್ದಳಂತುಮಲ್ಲದೆಯುಂ

ಶೋಭಿಸುತ್ತಿದ್ದಳು. ಟಿ|| ಕವಿಸಮಯದಲ್ಲಿ ದೃಷ್ಟಿಯು ಬಿಳುಪು. ಆದ್ದರಿಂದ ಬಿಳಿಯ ಕಮಲವೆಂದು ವರ್ಣಿಸಿದ್ದಾನೆ. ಸಿರಿ ಅಂದರೆ ಕಾಂತಿ ಹಾಗೂ ಲಕ್ಷಿ ಯೆಂಬ ಅರ್ಥವೂ ಇದೆ. ಕಣ್ಣುಗಳು ಕಾಂತಿಗೆ ನೆಲೆಯಾಗಿವೆ. ಪುಂಡರೀಕವು ಲಕ್ಷಿ ಗೆ ನೆಲೆಯಾಗಿದೆ. ಹೀಗೆ ಕಣ್ಣೂ ಬಿಳುಪಾಗಿದೆ. ಪುಂಡರೀಕವೂ ಬಿಳುಪಾಗಿದೆ. ಎರಡೂ ಸಿರಿಗೆ ನೆಲೆಯಾಗಿವೆ. ಆದ್ದರಿಂದ ಹೋಲಿಕೆಯು ಒಪ್ಪುತ್ತದೆ.

೫೦. ಅವಳು ರಸವು ಹರಿಯುವಂತೆ ಹಾಡುತ್ತಿದ್ದಳು. ಆಗ ಅವಳ ಶುದ್ಧವಾದ ಮನಸ್ಸೆಂಬ ರತ್ನದ ಬೆಳಕು ಹೊರಹೊಮ್ಮಿ ಪ್ರಕಾಶಿಸುತ್ತಿರುವಂತೆಯೂ, ಶಿವಸ್ತೋತ್ರಗಳ ನಿರ್ಮಲವಾದ ಅಕ್ಷರಗಳು ಒಟ್ಟುಸೇರಿ ಶೋಭಿಸುತ್ತಿರುವಂತೆಯೂ ಪ್ರಕಾಶಿಸುವ ಹಲ್ಲುಗಳ ಕಾಂತಿಯಿಂದ ಪರಮೇಶ್ವರನ ಲಿಂಗಕ್ಕೆ ಮತ್ತೊಮ್ಮೆ ಭಕ್ತಿಯಿಂದ ಅಭಿಷೇಕವನ್ನು ಮಾಡುತ್ತಿರುವಂತೆ ಅವಳು ಮನೋಹರವಾಗಿ ಕಾಣುತ್ತಿದ್ದಳು. ೫೧. ಶ್ರೀಮನ್ನಾರಾಯಣನ ಹೊಕ್ಕುಳಲ್ಲಿ ಬೆಳೆದಿರುವ ಬಿಳಿದಾವರೆಯ ಬೀಜದಂತೆಯೂ, ಬ್ರಹ್ಮನ ಮುಖಗಳಿಂದ ಹೊರಗೆ ಬರುತ್ತಿರುವ ಸ್ವಚ್ಛವಾದ ವೇದಾಕ್ಷರಮಾಲಿಕೆಯೆಂಬಂತೆಯೂ, ಇವಳು ಕೈಯಿಂದ ಮುಟ್ಟಿದರೆ ಪವಿತ್ರತೆಯುಂಟಾಗುವುದೆಂದು ಭಾವಿಸಿ ಸಪ್ತರ್ಷಿಮಂಡಲಾಂತರ್ಗತ ನಕ್ಷತ್ರಗಳು ಈ ರೂಪವನ್ನು ತಾಳಿ ಬಂದಿರುವಂತೆಯೂ ಇರುವ ಮುತ್ತಿನ ಜಪಸರವು ಅವಳ ಕೊರಳಲ್ಲಿ ಬಹಳ ಚೆನ್ನಾಗಿ ತೋರುತ್ತಿತ್ತು. ೫೨. ಮೋಕ್ಷವೆಂಬ ಪಟ್ಟಣದ ಹೆಬ್ಬಾಗಿಲಿನಲ್ಲಿ ಪ್ರಕಾಶಿಸುವ ಕಳಶಗಳಂತಿರುವ ಕುಚದ್ವಯದಿಂದ ಶೋಭಿಸುವ ಆ ಕೋಮಲೆಯು ಹಂಸಯುಗಳದಿಂದ ಶೋಭಿಸುವ ಗಂಗಾನದಿಗೆ ಸರಿಸಮಾನಳಂತಿದ್ದಳು. ೫೩. ಅವಳ ಕೊರಳಿನಲ್ಲಿ ಯಜ್ಞೋಪವೀತವು ಪ್ರಕಾಶಮಾನವಾಗಿ ಶೋಭಿಸುತ್ತಿತ್ತು. ಅದು ಬಾಲಚಂದ್ರನ ಒಳ್ಳೆಯ ಕಿರಣಗಳು ಬಂದು ಪರಮೇಶ್ವರನ ಸನ್ನಿಧಾನದಲ್ಲಿ ಶೋಭಿಸುವ ಈ ಕೋಮಲಾಂಗಿಯನ್ನು ಆಶ್ರಯಿಸಿಕೊಂಡಿವೆ ಎಂಬಂತೆ ಕಾಣುತ್ತಿತ್ತು. ೫೪. ಆ ಮಹಿಳೆಯು ಪದ್ಮಾಸನದಲ್ಲಿ ಮಂಡಿಸಿದ್ದಳು. ಮೇಲುಮುಖವಾಗಿದ್ದ ಬಹಳ ರಮಣೀಯವಾದ ಅಂಗಾಲಿನ ಕಾಂತಿಯಿಂದ ಅವಳು ಉಟ್ಟಿದ್ದ ಬಿಳಿಯ ರೇಷ್ಮೆಸೀರೆಯು ಕೆಂಬಣ್ಣವನ್ನು ತಾಳಿದ್ದಿತು. ಇದರಿಂದ ಅವಳ ಪಿರ್ರೆಗಳು ಬಹಳ ಮನೋಹರವಾಗಿ ಕಾಣುತ್ತಿದ್ದುವು. ವ|| ಮತ್ತು ಅವಳು ಮುತ್ತಿನಸರದಂತೆ “ಕಂಠಯೋಗ್ಯವಾದ” (೧. ದನಿಗೆ ಯೋಗ್ಯವಾದ, ೨. ಕೊರಳಿಗೆ ಯೋಗ್ಯವಾದ) ನಕ್ಷತ್ರಪಂಕ್ತಿಯನ್ನು “ಧ್ರುವಪ್ರತಿಬದ್ಧವಾದ”

(೧. ಧ್ರುವನೆಂಬ ತಾಳವಿಶೇಷದಿಂದ ಕೂಡಿಕೊಂಡಿರುವ, ೨. ಧ್ರುವನಕ್ಷತ್ರದಿಂದ ಕೂಡಿಕೊಂಡಿರುವ) ಮದವೇರಿದಳವಂತೆ “ಘೂರ್ಣಿತ

ಪಳುಕಿನ ಭಿತ್ತಿಗಳೊಳ್ ಮಾ
ರ್ತೊಳಗುವ ನಿಜತನುಗಳಿಂದೆ ತನ್ನಂದದ ಕೋ
ಮಳೆಯರ್ವೆರಸೀಶನ ಪದ
ನಳಿನಮನಾರಾಪಂತೆ ಸತಿ ಸೊಗಯಿಸಿದಳ್                  ೫೫

ಒದವಿದ ಭಕ್ತಿಯಿನೀಶನ
ಹೃದಯದೊಳಿರ್ದಪಳೆನಲ್ಕೆ ನವಮೌಕ್ತಿಕಲಿಂ
ಗದ ನಡುವೆ ರೂಪು ಮಾರ್ತೊಳ
ಗಿದುದೆತ್ತಂ ವಿಮಲ ಕಮಲದಳಲೋಚನೆಯಾ                 ೫೬

ದಿವಿಜತೆಯಿಂ ದಿವಸಂಗಳ
ಪವಣಱಯಲ್ ಬಾರದಾದೊಡಂ ಸೊಗಯಿಸಿ ತೋ
ರ್ಪವಯವದಿಂದಂ ಪದಿನೆ
ಣ್ಬರಿಸದಾಕೃತಿಯಿನಬ್ಜಮುಖಿ ಕಣ್ಗೆಸೆದಳ್                                ೫೭

ವ|| ಅಂತು ವಿರೂಪಾಕ್ಷದೇವರನಾರಾಸುತ್ತುಮಿರ್ದ

ಅತಿಗಂಭೀರೆಯನೂರ್ಜಿತ
ಮತಿಯಂ ನಿರ್ಮಳೆಯನಮಳಧೈರ್ಯಾದಿಗುಣಾ
ನ್ವಿತೆಯಂ ದೃಢಪಾಶುಪತ
ವ್ರತೆಯಂ ಕನ್ಯಕೆಯನಂದು ಕಂಡಂ ಕ್ಷಿತಿಪಂ                     ೫೮

ವ || ಅಂತು ಕಂಡವನಿತಳಕ್ಕವತರಿಸಿ ತುರಂಗಮನೊಂದು ತರುಶಾಖೆಯೊಳ್ ಕಟ್ಟಿ ಭಗವದಿಂದುಮೌಳಿಯ ಪುರೋಭಾಗದೊಳ್ ನಿಂದು ಪೊಡಮಟ್ಟು ದಿವ್ಯಕಾಂತೆಯ ರೂಪ ಸಂಪತ್ತಿಗಂ ಕಾಂತಿಗಮುಪಶಾಂತಿಗಂ ವಿಸ್ಮಯಂಬಟ್ಟು ನೋಡುತ್ತಮಿರ್ದು

ಕಿನ್ನರಯುಗ್ಮಮೆತ್ತ ಮನಮೆತ್ತ ಸರೋರುಹಷಂಡಮೆತ್ತ ಗೀ
ತಂ ನಯದಿಂದ ಬಂದೆಸೆವುದೆತ್ತ ಭವಾಲಯಮೆತ್ತ ಭೋಂಕನೀ
ಕನ್ನೆಯ ಕಾಣ್ಕೆಯೆತ್ತ ಮನುಜಂಗೆನಗೆಂದು ನರೇಂದ್ರನಂದನಂ
ತನ್ನೊಳೆ ತಾನು ವಿಸ್ಮಯದೆ ಭಾವಿಸುತಿರ್ದನದೊಂದು ಜಾವಮಂ          ೫೯

ಮಂದ್ರತಾರ”ವಾದ (೧. ಸುತ್ತಲೂ ಹರಡಿರುವ ಮೃದುವಾದ ಮತ್ತು ದೀರ್ಘವಾದ ಸ್ವರವುಳ್ಳ, ೨. ಮದೋದ್ರೇಕದಿಂದ ತಿರುಗುತ್ತಿರುವ ಮಂದವಾದ ಕಣ್ಣುಗುಡ್ಡೆಯುಳ್ಳ) ಪೂರ್ವಮೀಮಾಂಸಶಾಸ್ತ್ರದಂತೆ “ಭಾವನಾಬದ್ಧ”ವಾದ (೧. ಮೂರ್ಛನೆಗಳಿಂದ ಕೂಡಿಕೊಂಡಿರುವ, ೨. ಶಾಬ್ದೀ, ಆರ್ಥೀ ಎಂಬ ಎರಡು ಬಗೆಯ ಭಾವನೆಗಳಿಂದ (ವ್ಯಾಪಾರಗಳಿಂದ) ಕೂಡಿಕೊಂಡಿರುವ) ಗೀತೆಯಿಂದ ವೀಣೆಯನ್ನು ಬಾರಿಸುತ್ತಿದ್ದಳು. ಅದಲ್ಲದೆ ೫೫. ಸಟಿಕಶಿಲಾಮಯವಾದ ಗೋಡೆಗಳಲ್ಲಿ ಅವಳ ಶರೀರವು ಪ್ರತಿಫಲಿಸಿ ಅನೇಕವಾಗಿ ಕಾಣುತ್ತಿತ್ತು. ಇದರಿಂದ ಅವಳು ತನ್ನಂತೆಯೆ ಇರುವ ಅನೇಕ ಮಹಿಳೆಯರೊಂದಿಗೆ ಸೇರಿ ಪರಮೇಶ್ವರನ ಪಾದಕಮಲಗಳನ್ನು ಪೂಜಿಸುತ್ತಿರುವಂತೆ ಶೋಭಿಸುತ್ತಿದ್ದಳು. ೫೬. ನಿರ್ಮಲವಾದ ಕಮಲದ ಎಸಳುಗಳಂತೆ ಕಣ್ಣುಳ್ಳ ಆ ಸುಂದರಿಯ ಆಕಾರವು ಹೊಸಮುತ್ತಿನ ಆ ಶಿವಲಿಂಗದ ಮಧ್ಯದಲ್ಲಿ ಪ್ರತಿಬಿಂಬಿಸಿದ್ದಳು. ಇದರಿಂದ ಅವಳು ಅತಿಶಯವಾದ ಭಕ್ತಿಯಿಂದ ಪರಮೇಶ್ವರನ ಹೃದಯವನ್ನೇ ಪ್ರವೇಶಿಸಿರುವಳೋ ಎಂಬಂತೆ ಕಾಣುತ್ತಿದ್ದಳು. ೫೭. ದೇವಜಾತಿಯಲ್ಲಿ ಹುಟ್ಟಿದವಳಾದುದರಿಂದ ಅವಳ ವಯಸ್ಸು ಇಷ್ಟೆ ಎಂದು ಹೇಳಲು ಆಗುವಂತಿರಲಿಲ್ಲ. ಆದರೂ ಮನೋಹರವಾಗಿ ತೋರುವ ಅಂಗಗಳಿಂದ ಹದಿನೆಂಟು ವರ್ಷದವಳಿರಬಹುದೆಂದು ಹೇಳಬಹುದಾದ ಆಕಾರದಿಂದ ಆ ತಾವರೆಮೊಗದ ಸುಂದರಿಯು ಕಂಗೊಳಿಸುತ್ತಿದ್ದಳು. ವ|| ಹೀಗೆ ವಿರೂಪಾಕ್ಷಲಿಂಗವನ್ನು ಪೂಜಿಸುತ್ತಿದ್ದ ೫೮. ಬಹಳ ಗಂಭೀರಸ್ವಭಾವದ ಸ್ಥಿರಬುದ್ಧಿಯುಳ್ಳ, ಪವಿತ್ರಳಾದ ಕುಂದಿಲ್ಲದ ಧೈರ್ಯಾದಿಗುಣಗಳಿಂದ ಕೂಡಿಕೊಂಡಿರುವ, ದೃಢವಾದ ಪಾಶುಪತವ್ರತವನ್ನು ತಾಳಿರುವ ಆ ದಿವ್ಯಕನ್ನಿಕೆಯನ್ನು ರಾಜಕುಮಾರನು ನೋಡಿದನು. ವ|| ಹೀಗೆ ನೋಡಿ ನೆಲಕ್ಕೆ ಇಳಿದು ಕುದುರೆಯನ್ನು ಒಂದು ಮರದ ಕೊಂಬೆಗೆ ಕಟ್ಟಿ, ಚಂದ್ರಮೌಳೀಶ್ವರನ ಮುಂದೆ ನಿಂತು ನಮಸ್ಕರಿಸಿ, ಆ ದಿವ್ಯವನಿತೆಯ ರೂಪಸಂಪತ್ತನ್ನೂ ಕಾಂತಿಯನ್ನೂ ಶಾಂತಿಯನ್ನೂ ಕಂಡು ಆಶ್ಚರ್ಯಪಟ್ಟು ನೋಡುತ್ತಿದ್ದು, ೫೯. ಕುದುರೆ ಮೊಗದವರ ಆ ಜೋಡಿಯೆಲ್ಲಿ! ಈ ಕಾಡೆಲ್ಲಿ! ತಾವರೆಗೊಳವೆಲ್ಲಿ! ಮಧುರವಾದ ಸಂಗೀತವು ಕೇಳಿಬರುವುದೆಲ್ಲಿ! ಈ ಶಿವಾಲಯವೆಲ್ಲಿ! ಈ ಹುಡುಗಿಯನ್ನು ಕಾಣುವುದೆಲ್ಲಿ! ಮನುಷ್ಯನಾದ ನನಗೆ ಇದೆಲ್ಲ ಹೇಗೆ ಒದಗಿ

ವ|| ಅಂತು ಭಾವಿಸುತ್ತಮಿರ್ದು

ಮನುಜನನೆನ್ನನೀಕ್ಷಿಸಿ ಭವಾದ್ರಿಯನೇಱದೆ ನಾಡೆ ನೋಡಿ ತೊ
ಟ್ಟನೆ ಕೊಳೆ ಮಾಯವಾಗದೆ ನಭಕ್ಕೊಗೆದಾಗಳೆ ಪೋಗದಿರ್ದೊಡೊ
ಯ್ಯನೆ ಬೆಸಗೊಳ್ವೆನಾರ್ಗೆ ಸತಿ ನೀಂ ಪೆಸರೇಂ ನಿನಗಿಂತು ತೋರ್ಪ ಜ
ವ್ವನದೊಳಗೀ ತಪಕ್ಕೆ ಗುಱಮಾಡಿಸಿದುಬ್ಬೆಗಮಾವುದೆಂಬುದಂ                ೬೦

ವ|| ಎಂದು ಭಾವಿಸುತ್ತಮಾ ರಮಣೀಯ ದೇವಾಯತನ ನೂತ್ನಸ್ತಂಭವಂ ನೆಮ್ಮಿನಿಂದಿರ್ದು ತದಂಗನಾ ಗೀತಾವಸಾನಸಮಯಮಂ ಪಾರುತ್ತಮಿರ್ಪುದುಂ

ಮೃದುಮಧುರ ವಲ್ಲಕೀಗೇ
ಯದ ದನಿ ಮಾಣಲ್ಕೆ ಗೀತದವಸಾನದೊಳು
ನ್ಮದ ಮಧುಕರಸ್ವನಂ ಮಾ
ಣ್ದಿದ ಕುಮುದಿನಿಯಂತೆ ಕಾಂತೆ ಕಣ್ಗೆಸೆದಿರ್ದಳ್                                   ೬೧

ವ|| ಅನಂತರಮಾ ತ್ರೈಲೋಕ್ಯರಕ್ಷಾಮಣಿಯಂ ಪ್ರದಕ್ಷಿಣೀಕರಣಪೂರ್ವಕಂ ನಮಸ್ಕರಿಸಿ

ಒಸೆದಾಶ್ವಾಸಿಸುವಂತೆ ಪುಣ್ಯತತಿಯಿಂದಂ ಮುಟ್ಟುವಂತಚ್ಛತೀ
ರ್ಥಸಮೂಹಾಂಬುಗಳಿಂದವಂದಭಿಷವಂ ಮಾೞ್ಪಂತೆ ಪೂತತ್ವಮಂ
ಪಸರಿಪ್ಪಂತೆ ಬರಂಗಳಂ ಪದಪಿನಿಂದೀವಂತೆ ದೃಕ್ತೃಪ್ತಿ ರಾ
ಜಿಸೆ ದಿವ್ಯಾಂಗನೆ ನೋಡಿದಳ್ ತಗುಳ್ದು ಚಂದ್ರಾಪೀಡಭೂಪಾಲನಂ       ೬೨

ಸ್ವಾಗತಮೇ ನಿನಗೆ ಮಹಾ
ಭಾಗನೆ ಮದ್ಭೂಮಿಗೆಂತು ಬಂದಯ್ ನೀನ
ಭ್ಯಾಗತನಾಗಲ್ವೇೞ್ಕೆಂ
ದಾಗಳ್ ನೃಪಸುತನನೞ್ಕಱಂ ಸತಿ ನುಡಿದಳ್                                 ೬೩
ವ|| ಅಂತು ನುಡಿದನಿತಳೆ ಕೃತಾರ್ಥನಾದೆನೆಂದು ಬಗೆಯುತ್ತಂ ದೇವಿಯರ್ ಬೆಸಸಿದಂತೆಗೆಯ್ವೆನೆಂದು ಆ ಕಾಂತೆಯ ಬೆಂಬೞವಿಡಿದು ನಡೆವ ಶಿಷ್ಯನಂತೆ ಪೋಗೆವೋಗೆ ಕಿಱದಂತರದೊಳ್

ಬಿಟ್ಟಿತು! ಎಂಬುದಾಗಿ ಆ ರಾಜಕುಮಾರನು ತನ್ನಲ್ಲಿಯೆ ತಾನು ಆಶ್ಚರ್ಯದಿಂದ ಸ್ವಲ್ಪ ಹೊತ್ತು ಆಲೋಚಿಸುತ್ತಿದ್ದನು. ವ|| ಹೀಗೆ ಆಲೋಚಿಸುತ್ತಿದ್ದು ೬೦. ಮನುಷ್ಯನಾದ ನನ್ನನ್ನು ನೋಡಿ ನಾನು ವಿಚಾರಿಸುವುದಕ್ಕೆ ಮೊದಲೇ ತಟ್ಟನೆ ಕೈಲಾಸಪರ್ವತವನ್ನೇರಿ ಹೋಗದಿದ್ದರೆ ಹಾಗೂ ಮಾಯವಾಗದಿದ್ದರೆ ಆಕಾಶಕ್ಕೆ ಹಾರಿಹೋಗದಿದ್ದರೆ ಮೆಲ್ಲನೆ ಎಲೌ ಮಹಿಳೆಯೆ ನೀನು ಯಾರು? ನಿನ್ನ ಹೆಸರೇನು? ಈ ಹೊಸ ಹರಯದಲ್ಲಿಯೆ ಈ ರೀತಿ ನಿನ್ನನ್ನು ತಪಸ್ಸಿಗೆ ಗುರಿಮಾಡಿದ ಮನೋವ್ಯಥೆಯಾದರೂ ಯಾವುದೆಂದು ಕೇಳುತ್ತೇನೆ. ವ|| ಎಂದು ಆಲೋಚಿಸುತ್ತ ಆ ಸುಂದರವಾದ ದೇವಸ್ಥಾನದ ಹೊಸದಾಗಿ ಕಾಣುತ್ತಿರುವ ಕಂಭವನ್ನು ಒರಗಿಕೊಂಡು ನಿಂತು, ಅವಳ ಸಂಗೀತವು ಮುಗಿಯುವ ಕಾಲವನ್ನು ನೋಡುತ್ತ ಇರಲಾಗಿ, ೬೧. ಸಂಗೀತವು ಮುಗಿಯಿತು. ಹೀಗೆ ಮೃದುವಾಗಿಯೂ ಮಧುರವಾಗಿಯೂ ಇರುವ ವೀಣೆಯ ದನಿಯು ನಿಲ್ಲಲಾಗಿ ಆ ಸುಂದರಿಯು ಮದಿಸಿದ ದುಂಬಿಗಳ ಗುಂಜಾರವವು ನಿಂತ ಕನ್ನೆ ದಿಲೆ ಬಳ್ಳಿಯಂತೆ ಮನೋಹರವಾಗಿದ್ದಳು. ವ|| ಬಳಿಕ ಅವಳು ತ್ರಿಲೋಕರಕ್ಷಕನಾದ ಪರಮಾತ್ಮನಿಗೆ ಪ್ರದಕ್ಷಿಣಪೂರ್ವಕವಾಗಿ ನಮಸ್ಕರಿಸಿ, ೬೨. ಆತ್ಮೀಯತೆಯಿಂದ ಸಮಾಧಾನಮಾಡುವಂತೆಯೂ, ಪುಣ್ಯಸಮೂಹದಿಂದ ಸ್ಪರ್ಶಮಾಡುವಂತೆಯೂ, ನಿರ್ಮಲವಾದ ತೀರ್ಥೋದಕಗಳಿಂದ ಸ್ನಾನ ಮಾಡಿಸುವಂತೆಯೂ, ಪವಿತ್ರತೆಯನ್ನುಂಟು ಮಾಡುವಂತೆಯೂ, ಸಂತೋಷದಿಂದ ವರಗಳನ್ನು ಕೊಡುವಂತೆಯೂ ನೇತ್ರಾನಂದವು ಸ್ಪಷ್ಟವಾಗಿ ವಿರಾಜಿಸುತ್ತಿರಲು ಆ ದಿವ್ಯಾಂಗನೆಯು ಚಂದ್ರಾಪೀಡನನ್ನು ನೋಡಿದಳು.

೬೩. “ಶ್ರೀಯುತನೆ, ನಿನಗೆ ಸ್ವಾಗತ. ನನ್ನ ಈ ಸ್ಥಳಕ್ಕೆ ಹೇಗೆ ಬಂದೆ? ಇಂದು ನೀನು ನನ್ನ ಅತಿಥಿಯಾಗಬೇಕು” ಎಂದು ಮಹಿಳೆಯು ಆಗ ರಾಜಪುತ್ರನಿಗೆ ಸ್ನೇಹದಿಂದ ಹೇಳಿದಳು. ವ|| ಅಷ್ಟು ಹೇಳಿದ ಮಾತ್ರದಿಂದಲೆ ಕೃತಾರ್ಥನಾದೆನೆಂದು ಭಾವಿಸುತ್ತ “ಪೂಜ್ಯರು

ಕಾಲದ ಮರ್ವು ಪರ್ವಿದವೊಲಿರ್ದ ತಮಾಲವನಂಗಳಿಂದೆ ಭೃಂ
ಗಾಳಿಯ ಗಾವರಂ ಪುದಿದ ಪುಷ್ಪಲತಾಗೃಹದಿಂದೆ ಚಂದ್ರಿಕಾ
ಜಾಲದವೊಲ್ ಕೆಲಂಬಿಡಿದು ಭೋರ್ಗರೆಯಲ್ ಸುರಿತರ್ಪ ನಿರ್ಝರಾ
ಸಾಲನ ಶೀಕರಪ್ರಸರದಿಂದೆಸೆದತ್ತು ಬೃಹದ್ಗುಹಾಂಗಣಂ                      ೬೪

 

ವ|| ಅಂತಾ ಗುಹಾಂಗಣದ ಮುಂದೆ ನಿಂದು ನೋೞ್ಪಲ್ಲಿ

ಅದು ಸುರಭೂಜವಲ್ಕವಸನದ್ವಯಮಂತದು ದಂಡಮಲ್ಲಿ ನೇ
ಲಿದುದದು ಜೋಗವಟ್ಟಿಗೆ ಕಮಂಡಲಮಂತದು ಭಸ್ಮಶಯ್ಮೆಯಂ
ತದು ಶಶಿಮಂಡಲಾಕೃತಿವೊಲಿರ್ದುದು ಶಂಖದ ಪಾತ್ರೆಯೆಂದು ನೋ
ಡಿದನತಿವಿಸ್ಮಯಂಬೆರಸು ತಗ್ಗುಹೆಯಂ ನೃಪರೂಪಚಂದ್ರಮಂ                 ೬೫

ವ|| ಅನಂತರಮಾ ದಿವ್ಯತಪಸ್ವಿನಿ ಮಾೞ್ಪತಿಥಿಪೂಜೆಯಂ ವಿನಯಪುರಸ್ಸರಂ ಕೆಯ್ಕೊಂಡು ದರ್ಭಾಸನದೊಳ್ ಕುಳ್ಳಿರಲಾ ನಿತಂಬಿನಿ

ರಕ್ಷಾಂಕಿತ ತನು ಮೆಲ್ಲನೆ
ವೃಕ್ಷಂಗಳ ಕೆಳಗೆ ಪೋಗಿ ನಿಂದಿರ್ದಾಗಳ್
ಭಿಕ್ಷಾಂದೇಹಿಯೆನಲ್ಕಂ
ತಾಕ್ಷಣದೊಳ್ ತೀವಿದತ್ತು ಭಿಕ್ಷಾಪಾತ್ರಂ                                      ೬೬

ವ|| ಅಂತು ತೀವಿದ ಭಿಕ್ಷಾಪಾತ್ರದ ಪಣಲಂಗಳಂ ತಂದುಕುಡೆ ನಿರ್ಝರಜಲಂಗಳೊಳ್ ಮಿಂದು ಅಮೃತರಸಾಸ್ವಾದಂಗಳಪ್ಪ ತತಲಗಳಂ ಮೆಲ್ದು ನೀರಂ ಕುಡಿದೊಂದುದೆಸೆ ತೊಲಗಿರ್ಪುದುಮಾ ಕನ್ನಿಕೆಯುಂ ಕೃತಫಲಜಲಾಹಾರೆಯಾಗಿ ಬಂದೊಂದು ಶಿಲಾತಳದೊಳ್ ಕುಳ್ಳಿರ್ದು ನೋಡುತ್ತುಮಿರ್ಪುದುಮಾ ಗಾಂಭೀರ್ಯರತ್ನಾಕರನುಮನತಿದೂರಮಪ್ಪ ಶಿಲಾತಲದೊಳ್ ವಿಶ್ರಮಿಸಿ ತನ್ನ ಬಂದ ವೃತ್ತಾಂತ ಮನೆಲ್ಲಮಂ ನೆಯೆ ಪೇೞ್ದು ಮತ್ತಮಾ ದಿವ್ಯಕಾಂತೆಯನಿಂತೆಂದಂ

ಪಿರಿದೆನಿಸಿರ್ದ ನಿಮ್ಮಯ ಪ್ರಸಾದಮನಾಂ ಪಡೆದೊಂದು ಗರ್ವದಿಂ
ಪರಿಚಿತನಂತೆ ಬಿನ್ನವಿಸಲುಂ ಬಗೆದಂದಪೆನಂತುಟಲ್ತೆ ಬಿ
ತ್ತರಿಪೊಡರರಪ್ಪ ಮನುಜರ್ ಪ್ರಭುಗಳ್ ದಯೆಯಿಂದೆ ತಮ್ಮನಾ
ದರಿಸಿದೊಡಾಗಳೇ ಗೞಪಲ್ ಬಗೆದರ್ಪುದಿದಾವ ವಿಸ್ಮಯಂ                 ೬೭

ಅಪ್ಪಣೆ ಮಾಡಿದಂತೆಯೆ ಆಗಲಿ” ಎಂದು ಅವಳನ್ನು ಶಿಷ್ಯನಂತೆ ಹಿಂಬಾಲಿಸಿ ಹೋಗುತ್ತಿರಲಾಗಿ ಸ್ವಲ್ಪ ದೂರದಲ್ಲಿ ೬೪. ಹಗಲಿನಲ್ಲೂ ರಾತ್ರಿಯ ಕತ್ತಲು ಹರಡಿದಂತಿರುವ ಹೊಂಗೆಮರದ ಗುಂಪುಗಳಿಂದಲೂ, ದುಂಬಿಗಳ ಧ್ವನಿಯಿಂದ ಕೂಡಿಕೊಂಡಿರುವ ಪುಷ್ಪಭರಿತವಾದ ಬಳ್ಳಿಮನೆಗಳಿಂದಲೂ, ಬೆಳದಿಂಗಳಿನ ಪ್ರಸಾರದಂತೆ ತಂಪನ್ನು ಪಡೆದು ಭೋರ್ಗರೆಯುತ್ತಾ ಸುರಿಯುತ್ತಿರುವ ಝರಿಗಳ ಬಂಡೆಗಳ ಮೇಲೆ ಬೀಳುವುದರಿಂದ ಉಂಟಾದ ತುಂತುರಗಳ ಸಮೂಹದಿಂದಲೂ ಕೂಡಿಕೊಂಡಿರುವ ದೊಡ್ಡ ಗುಹಾಪ್ರದೇಶವು ಶೋಭಿಸುತ್ತಿತ್ತು. ವ|| ಹಾಗೆ ಆ ಗುಹಾಂಗಣದ ಮುಂದೆ ನಿಂತು ನೋಡುತ್ತಿರಲಾಗಿ, ೬೫. ಅಲ್ಲಿ ಒಂದು ಕಡೆ ಕಲ್ಪವೃಕ್ಷದಿಂದ ಉತ್ಪನ್ನವಾದ ನಾರುಮಡಿಯ ಜೊತೆ, ಮತ್ತೊಂದು ಕಡೆ ಯೋಗದಂಡ, ಇನ್ನೊಂದು ಕಡೆ ನೇತುಹಾಕಿರುವ ಯೋಗಪಟ್ಟಿಕೆ, ಒಂದು ಕಡೆ ಕಮಂಡಲು, ಮತ್ತೊಂದು ಕಡೆ ಭಸ್ಮಶಯನ, ಇನ್ನೊಂದು ಕಡೆ ಚಂದ್ರಮಂಡಲದಂತಿರುವ ಶಂಖದಿಂದ ಮಾಡಿದ ಭಿಕ್ಷಾಪಾತ್ರೆ. ಇವೆಲ್ಲ ಇರುವ ಆ ಗುಹೆಯನ್ನು ಚಂದ್ರಾಪೀಡನು ಬಹಳ ಆಶ್ಚರ್ಯದಿಂದ ನೋಡಿದನು. ವ|| ಬಳಿಕ ಆ ದಿವ್ಯಯೋಗಿನಿಯು ಮಾಡಿದ ಅತಿಥಿ ಸತ್ಕಾರವನ್ನು ವಿನಯಪೂರ್ವಕವಾಗಿ ಸ್ವೀಕರಿಸಿ ದರ್ಭಾಸನದಲ್ಲಿ ಕುಳಿತುಕೊಂಡಿರಲಾಗಿ ಆಕೆಯು ೬೬. ವಿಭೂತಿಧಾರಣೆಯಿಂದ ಶೋಭಿಸುವ ಶರೀರವುಳ್ಳ ಆ ತಪಸ್ವಿನಿಯು ಮೆಲ್ಲನೆ ಮರಗಳ ಕೆಳಗೆ ಹೋಗಿ ನಿಂತುಕೊಂಡು “ಭಿಕ್ಷಾಂ ದೇಹಿ” (ಭಿಕ್ಷೆಯನ್ನು ಕೊಡು) ಎಂದು ಹೇಳಿದಳು. ಕೂಡಲೆ ಭಿಕ್ಷಾಪಾತ್ರೆಯು ಹಣ್ಣುಗಳಿಂದ ತುಂಬಿಹೋಯಿತು! ವ|| ಹಾಗೆ ತುಂಬಿದ ಭಿಕ್ಷಾಪಾತ್ರೆಯ ಹಣ್ಣುಗಳನ್ನು ತಂದು ಕೊಡಲಾಗಿ, ಝರಿಯ ನೀರಿನಲ್ಲಿ ಸ್ನಾನಮಾಡಿ ಅಮೃತರಸದಂತೆ ಬಹಳ ರುಚಿಯಾಗಿರುವ ಆ ಹಣ್ಣುಗಳನ್ನು ತಿಂದು ನೀರನ್ನು ಕುಡಿದು ಹಸಿವನ್ನು ಪರಿಹರಿಸಿಕೊಂಡನು. ಅಷ್ಟರಲ್ಲಿ ಆ ಕನ್ನಿಕೆಯು ಹಣ್ಣು ತಿಂದು, ನೀರು ಕುಡಿದು ಬಂದು ಒಂದು ಹಾಸರೆಗಲ್ಲಿನ ಮೇಲೆ ಕುಳಿತುಕೊಂಡು ನೋಡುತ್ತಿದ್ದಳು. ಆಗ ಗಾಂಭೀರ್ಯಗುಣಕ್ಕೆ ಸಮುದ್ರದಂತಿರುವ ಚಂದ್ರಾಪೀಡನು ಸಮೀಪದಲ್ಲಿರುವ ಹಾಸರೆಗಲ್ಲಿನ ಮೇಲೆ ವಿಶ್ರಮಿಸಿಕೊಳ್ಳುತ್ತಾ ತಾನು ಇಲ್ಲಿಗೆ ಬಂದ ಬಗೆಯನ್ನೆಲ್ಲಾ ವಿಸ್ತಾರವಾಗಿ ಹೇಳಿ ಮತ್ತೆ ಆ ದಿವ್ಯಾಂಗನೆಯನ್ನು ಕುರಿತು ಹೀಗೆ ಹೇಳಿದನು. ೬೭. “ಪೂಜ್ಯಳೆ ನೀನು ಮಾಡಿದ ದೊಡ್ಡದಾದ ಈ ಅತಿಥಿಸತ್ಕಾರದ ಅನುಗ್ರಹವನ್ನು ನಾನು ಪಡೆದೆನೆಂಬ ಒಂದು

ಮನುಜಂಗೆ ಕೌತುಕಾವಹ
ಮಿನಿತೊಂದಾಶ್ಚರ್ಯಮದಱನಿಂ ಬೆಸಗೊಳ್ಳ
ಲ್ಕನುಗೆಯ್ಯುತ್ತಿರ್ದಪುದೀ
ಮನಮನನುಗ್ರಹಿಸಿ ದೇವಿ ಪೇೞಲ್ವೇೞ್ಕುಂ                               ೬೮

ಸುರಮುನಿಸಿದ್ಧಖೇಚರರೊಳಾವಕುಲಂ ನಿಜಜನ್ಮದಿಂದಲಂ
ಕರಿಸಿತೊ ಪಂಚಭೂತಮಯಮಾಗಿಯುಮೀ ತನುಮಿಂದುಕಾಂತಿಯಂ
ತಿರೆ ಪೊಳೆಯುತ್ತಮಿರ್ದಪುದಿದೇಂ ಪೊಸಜವ್ವನದೇೞ್ಗೆಯೊಳ್ ತಪ
ಶ್ಚರಣಮಿದೇಂ ಪೊದೞಡಿದ ಕಾನನದೊಳ್ ಬಿಡದೊರ್ಬಳಿರ್ಪುದೇಂ         ೬೯

ವ|| ಎಂದು ಬೆಸಗೊಳ್ವುದುಂ ಕಿಱದುಬೇಗಂ ತನ್ನೊಳ್ ತಾನೆ ಭಾವಿಸಿ

ಪೊಳೆವಲರ್ಗಂಗಳಿಂ ಮಿಳಿರ್ವ ಬೆಳ್ಪು ರಸಾತ್ಮಕಮಾಗಿ ಗಂಡಮಂ
ಡಳತಳದಿಂದಮಂದಿೞಯುತಿರ್ದುದೆನಲ್ ನಯನಾಂಬುಲೋಚನಂ
ಗಳಿನಿರದುಣ್ಮೆ ಶಬ್ದಮಣಮಿಲ್ಲದೆ ತೊಟ್ಟನೆ ಕಣ್ಮಗುಳ್ದಳ
ಗ್ಗಳಿಪಳವಿಂದೆ ಮಾನಿನಿ ಮನಕ್ಕತಿವಿಸ್ಮಯಮಾಗೆ ಭೂಪನಾ            ೭೦

ವ|| ಅಂತಾ ಕಾಂತೆ ಶೋಕಾಕ್ರಾಂತೆಯಾಗಿ

ರಸೆಯಂ ತಾಂ ತಾಂಕಿ ಕಲ್ಪಾಂತದ ಬಱಸಿಡಿಲೆಯ್ತಂದು ಪೊಯ್ಯಲ್ ನೆಲಂ ಕಂ
ಪಿಸುವಂತತ್ಯಂತಶೋಕಾಕುಲತೆಯಿನೞುತಿರ್ದಪ್ಪಳೋರಂದದಿಂ ಮ
ೞಸಲಿನ್ನಾರ್ಪರೀ ಶೋಕಮನೆನುತೆ ಭಯಂಗೊಂಡಿದೆತ್ತೆತ್ತಲೀಗಳ್
ಬೆಸಗೊಂಡೆಂ ಕೆಮ್ಮನೆಂದುಮ್ಮಳಿಸಿ ಪಿರಿದುಮಂದಾ ನೃಪಂ ವ್ಯಗ್ರನಾದಂ            ೭೧

ವ|| ಅಂತು ನೃಪತಿ ವ್ಯಗ್ರನಾಗಿ ಮುಖಪ್ರಕ್ಷಾಳನಾರ್ಥಂ ಪೇರಡವಿಯೊಳಂಜಳಿಯಿಂ ಜಲಮಂ ತಂದು ದೇವಿಯರವಧಾರಿಸುವುದೆಂದು ಭೂಪನಿಳಿಂಪನುಪರೋಸುತ್ತ ಮೆಯೆ

ಹೆಮ್ಮೆಯಿಂದ ಈಗ ಪರಿಚಿತನಂತೆ ಅರಿಕೆಮಾಡಲು ಮನಸ್ಸು ಮಾಡುತ್ತಿದ್ದೇನೆ. ಅದೂ ಸರಿಯೆ. ಇನ್ನೂ ಹೇಳಬೇಕಾದರೆ ಮನುಷ್ಯರು ಬಹಳ ಚಪಲ ಸ್ವಭಾವದವರು. ಪ್ರಭುವಾದವರು ಏನೋ ಕನಿಕರದಿಂದ ತಮ್ಮನ್ನು ಆದರಿಸಿಬಿಟ್ಟರೆ ಹರಟೆಯನ್ನೇ ಪ್ರಾರಂಭಿಸಿಬಿಡುತ್ತಾರೆ! ಇದೇನೂ ಸೋಜಿಗವಲ್ಲ. ೬೮. ಇಷ್ಟು ಅದ್ಭುತವಾದ ವ್ಯವಹಾರವು ಮನುಷ್ಯನಿಗೆ ನಿಜವಾಗಿಯೂ ಆಶ್ಚರ್ಯವನ್ನುಂಟುಮಾಡುತ್ತದೆ. ಆದ್ದರಿಂದ ಈ ನನ್ನ ಮನಸ್ಸು ಇನ್ನು ನಿನ್ನನ್ನು ಪ್ರಶ್ನೆ ಮಾಡಲು ಹವಣಿಸುತ್ತಿದೆ. ತಾಯಿ, ಅನುಗ್ರಹಿಸಿ ಹೇಳಬೇಕು. ೬೯. ದೇವತೆಗಳು, ಮುನಿಗಳು, ಸಿದ್ಧರು ಮೊದಲಾದ ಆಕಾಶಚಾರಿಗಳಲ್ಲಿ ಯಾವ ಕುಲವು ನಿಮ್ಮ ಜನ್ಮದಿಂದ ಅಲಂಕರಿಸಲ್ಪಟ್ಟಿದೆ. ಪಂಚಭೂತಗಳಿಂದ ನಿರ್ಮಿತವಾಗಿದ್ದರೂ ಈ ನಿಮ್ಮ ಶರೀರವು ಬೆಳದಿಂಗಳಿನಂತೆ ಹೊಳೆಯುತ್ತಿರಲು ಕಾರಣವೇನು? ಹೊಸಹರೆಯದ ಏಳಿಗೆಯ ಕಾಲದಲ್ಲಿ ತಪಸ್ಸು ಮಾಡುವುದು ಏತಕ್ಕಾಗಿ? ಈ ದಟ್ಟವಾದ ಕಾಡಿನಲ್ಲಿ ಏಕಾಕಿನಿಯಾಗಿ ವಾಸಿಸಲು ಕಾರಣವೇನು?” ವ|| ಹೀಗೆ ಕೇಳಲಾಗಿ ಸ್ವಲ್ಪ ಹೊತ್ತು ತನ್ನೆಲ್ಲೆ ತಾನು ಚಿಂತಿಸಿ ೭೦. ಆ ಹುಡುಗಿಯು ಅತ್ಯಕವಾದ ಶೋಕದಿಂದ ಪೀಡಿತಳಾದರೂ ಸ್ವಲ್ಪವೂ ಶಬ್ದಮಾಡದೆ ಕಣ್ಣು ಮುಚ್ಚಿದಳು. ಅವಳ ಕಣ್ಣುಗಳಿಂದ ಕಣ್ಣೀರು ಒಂದೇ ಸಮನೆ ಸುರಿಯುತ್ತಿತ್ತು. ಇದು ಹೊಳೆಯುವ ಕಣ್ಣುಗಳ ಬಿಳುಪು ಜಲರೂಪವನ್ನು ತಾಳಿ ಕಣ್ಣುಗಳಿಂದ ಹೊರಟು ಕೆನ್ನೆಯ ಮೂಲಕ ಇಳಿಯುತ್ತಿರುವಂತೆ ಕಾಣುತ್ತಿತ್ತು. ಇದನ್ನು ಕಂಡು ಚಂದ್ರಾಪೀಡನಿಗೆ ಬಹಳ ಆಶ್ಚರ್ಯವಾಯಿತು. ವ|| ಹೀಗೆ ಅವಳು ಶೋಕಪೀಡಿತೆಯಾಗಿ ೭೧. ಪ್ರಳಯಕಾಲದಲ್ಲಿ ಬರಸಿಡಿಲು ಬಂದು ಭೂಮಿಗೆ ಬಡಿಯಲು ನೆಲವು ನಡುಗಿ ಹೋಗುವಂತೆ ಅತ್ಯಂತ ದುಖದಿಂದ ಪೀಡಿತಳಾಗಿ ಒಂದೇ ಸಮನೆ ಅಳುತ್ತಿದ್ದಾಳಲ್ಲ! ಇವಳ ಈ ಶೋಕವನ್ನು ಕಡಿಮೆ ಮಾಡಲು ಇನ್ನಾರಿದ್ದಾರೆ? ನಾನಾದರೂ ಏತಕ್ಕಾಗಿ ಈಗ ಇವಳನ್ನು ಸುಮ್ಮನೆ ಕೇಳಿದೆ! ಎಂದು ಚಂದ್ರಾಪೀಡನು ಭಯದಿಂದ ಬಹಳ ದುಖಪಟ್ಟು ಕಳವಳಗೊಂಡನು. ವ|| ಹೀಗೆ ಯುವರಾಜನು ಕಳವಳಿಸುತ್ತಾ ಆ ದೊಡ್ಡ ಕಾಡಿನೊಳಗಿಂದ ಬೊಗಸೆಯಲ್ಲಿ ನೀರನ್ನು ತಂದು “ಮುಖವನ್ನು ತೊಳೆದುಕೊಳ್ಳುವುದಕ್ಕಾಗಿ ತಾಯಿ ತೆಗೆದುಕೊಳಿಘಿ’ಈಆ” ಎಂದು ಆ

ಅಳವಿಲ್ಲದೞುತ್ತಿರೆ ಕೆಂ
ಪೆಳಸಿದ ಬಾಷ್ಪಾಂಬುಪೂರ್ಣಲೋಚನಮಂ ತ
ಜ್ಜಳದಿಂದೆ ಕರ್ಚಿ ವಲ್ಕಾಂ
ಚಲದಿಂ ನಿಜವದನಬಿಂಬಮಂ ಸತಿ ತೊಡೆದಳ್                       ೭೨

ವ|| ಅಂತಾ ಕಾಂತೆ ಶೋಕಾಕ್ರಾಂತೆಯಾಗಿರ್ಪುದುಂ ಕಂಡಿಂತಪ್ಪವರುಮೞುವಂದಮದ್ಭುತಮೆಂದು ಮನದೊಳ್ ಭಾವಿಸುತ್ತಮಿರೆ

ಉರಗಮುಖೋಗ್ರದಂಷ್ಟ್ರ ಸಹಜಾತೆಯನೂರ್ಜಿತಕಾಲಪಾಶನಿ
ಷ್ಠುರತರರೂಪೆಯಂ ಸಹಜಶಾಕಿನಿಯಂ ವಿಷಕನ್ಯಕಾಸಹೋ
ದರಿಯನಪಾರ ಘೋರದುರಿತಾರ್ಣವಜಾತೆಯನಾತ್ಮವಲ್ಲಭಾಂ
ತರಿತೆಯನೆನ್ನನಣ್ಣ! ಬೆಸಗೊಳ್ವುದೆ ಪೇೞ್ವೆನೆ ತತ್ಪ್ರಪಂಚಮಂ               ೭೩

ಗತಭಾಗ್ಯೆಯೆನಿಪ ಪಾಪಾ
ನ್ವಿತೆಯಂ ಪತಿದುಖಭಾಜನೆಯ ವೃತ್ತಾಂತ
ಸ್ಥಿತಿಯನದೇಂ ಕೇಳ್ದಪೆ ನೃಪ
ಸುತ ಕೌತುಕಮೆಂಬೆಯಪ್ಪೊಡುಸಿರ್ದಪೆನೀಗಳ್              ೭೪

ಮಹಾಶ್ವೇತೆಯ ಸಂದರ್ಶನ

ಸಮಾಪ್ತ

ರಾಜೇಂದ್ರನು ನಿರ್ಬಂಧಪಡಿಸುತ್ತಿರಲಾಗಿ, ೭೨. ಹೀಗೆ ಅಸಾಧ್ಯವಾಗಿ ಅಳುತ್ತಿದ್ದ ಆಕೆ ನೀರು ತುಂಬಿದ ಕೆಂಪಾದ ಕಣ್ಣುಗಳನ್ನು ಆ ನೀರಿನಿಂದ ತೊಳೆದುಕೊಂಡು, ನಾರುಸೀರೆಯ ಸೆರಗಿನಿಂದ ತನ್ನ ಮುಖವನ್ನು ಒರೆಸಿಕೊಂಡಳು. ವ|| ಹಾಗೆ ಅವಳು ದುಖಭರಿತೆ ಯಾಗಿರುವುದನ್ನು ಕಂಡು ಇಂತಹವರೂ ಅಳುವುದು ಸೋಜಿಗವೆಂದು ಚಂದ್ರಾಪೀಡನು ಮನಸ್ಸಿನಲ್ಲಿ ಆಲೋಚಿಸುತ್ತಿದ್ದನು. ೭೩. ಆಗ ಆ ತರುಣಿಯು ಹೀಗೆಂದಳು: “ಹಾವಿನ ಬಾಯಲ್ಲಿರುವ ಭಯಂಕರವಾದ ಹಲ್ಲಿನೊಡನೆ ಹುಟ್ಟಿರುವ (ಬಹಳ ಕ್ರೂರಳಾದ), ಗಟ್ಟಿಯಾದ ಯಮಪಾಶಕ್ಕಿಂತಲೂ ಕಠಿನಳಾದ, ಸ್ವಭಾವದಿಂದಲೇ ಪಿಶಾಚಿಯಂತಿರುವ, ವಿಷಕನ್ನಿಕೆಯ ಸಹೋದರಿಯೆನಿಸಿರುವ, ಅಪಾರವಾದ ಹಾಗೂ ಭಯಂಕರವಾದ ಪಾಪಸಮುದ್ರದಲ್ಲಿ ಹುಟ್ಟಿರುವ, ಪ್ರಾಣಕಾಂತನಿಂದ ವಿಯೋಗ ಹೊಂದಿರುವ ನನ್ನನ್ನು ನೀನು ಕೇಳುತ್ತಿದ್ದೀಯಪ್ಪ. ಆ ವಿವರವನ್ನು ಹೇಳಲೆ? ೭೪. ನಾನು ಹತಭಾಗ್ಯಳು, ಪಾಪಿಷ್ಠಳು, ಪತಿಯ ವಿರಹದುಖಕ್ಕೆ ಪಾತ್ರಳಾಗಿರುವವಳು. ಇಂತಹ ನನ್ನ ಸ್ಥಿತಿಯನ್ನು ಏಕೆ ಕೇಳುತ್ತೀಯೆ? ರಾಜಪುತ್ರ ಬಹಳ ಕುತೂಹಲವಾಗಿದ್ದರೆ ಹೇಳುತ್ತೇನೆ ಕೇಳು.”

ಮಹಾಶ್ವೇತೆಯ ಸಂದರ್ಶನ