ಮಹಾಭಾರತದ ೧೮ ಪರ್ವಗಳಲ್ಲಿ ಅಶ್ವಮೇಧಿಕವೆಂಬುದೂ ಒಂದು ಪರ್ವ ಇದರಲ್ಲಿ ಧರ್ಮರಾಜನು ಆಶ್ವಮೇಧವನ್ನು ಮಾಡಿದ ವಿಷಯವಿದೆ. ತಿಮ್ಮಣ್ಣ ಕವಿಯು (ಕ್ರಿ. ಶ. ೧೫೧೦) ವ್ಯಾಸ ಭಾರತದ ಕೊನೆಯ ಎಂಟು ಪರ್ವಗಳನ್ನು ಕನ್ನಡದಲ್ಲಿ ಭಾಮಿನಿ ಷಟ್ಪದಿಗಳಲ್ಲಿ ಬರೆದಿದ್ದಾನೆ.  ಆದರೆ, ಆ ಭಾರತದ ಅಶ್ವಮೇಧಿಕ ಪರ್ವಕ್ಕೂ ಜೈಮಿನಿಯ ಅಶ್ವಮೇಧಿಕ ಪರ್ವಕ್ಕೂ ಕಥೆಯಲ್ಲಿ ತುಂಬಾ ವ್ಯತ್ಯಾಸವಿದೆ. ಜೈಮಿನಿ ಭಾರತವು ಕೊಂಚ ವಿಸ್ತಾರವಾಗಿ ಸ್ವಾರಸ್ಯವಾಗಿದೆ ಅನ್ನಬಹುದು. ವೇದವ್ಯಾಸರು ಜೈಮಿನಿಯು ಬರೆದ ಭಾರತವನ್ನೆಲ್ಲಾ ಓದಿಸಿ ಕೇಳಿ ಅದರಲ್ಲಿ ಅಶ್ವಮೇಧಿಕ ಪರ್ವವನ್ನು ಮಾತ್ರ ಉಳಿಸಿ ಉಳಿದುದನ್ನು ನಾಶ ಪಡಿಸುವಂತೆ ಹೇಳಿದರೆಂಬ ಕಥೆಯು ಪ್ರಚಾರದಲ್ಲಿದೆ.

ಮಹಾಭಾರತವು ಭಾರತದಲ್ಲೇ ಏಕೆ, ವಿಶ್ವದಲ್ಲಿಯೇ ದೊಡ್ಡ ಕಾವ್ಯ. “ಸಪಾದ ಲಕ್ಷಗ್ರಂಥ”ವೆಂಬ ಪ್ರಖ್ಯಾತಿಗಳಿಸಿದೆ. ಇದನ್ನು “ಭಾರತಃ ಪಂಚಮೋವೇದಃ” ಎಂದು ಹೇಳಿದ್ದಾರೆ. ಆದಿಪಂಪನು “ಭಾರತಂ ಲೋಕ ಪೂಜ್ಯಂ” ಎಂದೂ, ಕುಮಾರವ್ಯಾಸನು “ಕಾವ್ಯಕೆ ಗುರು” ಎಂದೂ ಹೇಳಿದ್ದಾರೆ.

ಮಹಾಭಾರತವನ್ನು ಜನಮೇಜಯನಿಗೆ ವೈಶಂಪಾಯನ ಮುನಿ ಹೇಳುತ್ತಾನೆ. ಜೈಮಿನಿಯನ್ನು, ವೈಶಂಪಾಯನನ ಶಿಷ್ಯ ಜೈಮಿನಿ ಋಷಿಯು ಜನಮೇಜಯನಿಗೆ ಹೇಳುತ್ತಾನೆ.

ಜೈಮಿನಿ ಭಾರತವನ್ನು ಲಕ್ಷ್ಮೀಶನು “ಶ್ರೀಕೃಷ್ಣಚರಿತಾಮೃತಂ” ಎಂದು ಹೇಳಿದರೆ ಭಾರತನ್ನು ಕುಮಾರವ್ಯಾಸನು-

ತಿಳಿಯ ಹೇಳುವೆ ಕೃಷ್ಣಚರಿತೆಯ |
ನಿಳೆಯ ಜಾಣರು ಮೆಚ್ಚುವಂದದಿ |
ನೆಲೆಗೆ ಪಂಚಮಶ್ರುತಿಯನೊರೆವೆನು ಕೃಷ್ಣಮೆಚ್ಚಲಿಕೆ || (ಆದಿಪರ್ವ ಸಂ. , . ೧೫)

ಎಂದೂ “ಹರಿಕಥಾಮೃತವೆಂಬ ಭಾರತ” (ಅರಣ್ಯಪರ್ವ ಸಂ. ೩, ಪ. ೩೫), ಎಂದೂ ಹೇಳಿದ್ದಾನೆ.

ಮಹಾಭಾರತದ ಕಥೆಗಳಿಗೂ ಜೈಮಿನಿ ಭಾರತದ ಕಥೆಗಳಿಗೂ ಕೆಲವು ಹೋಲಿಕೆಗಳಿವೆ. ಹಲವು ವ್ಯತ್ಯಾಸಗಳೂ ಇವೆ.

ಕಾವೇರೀ ತೀರದ ಮಾಹಿಪ್ಮತಿಯಲ್ಲಿ ನೀಲನೆಂಬ ರಾಜನಿಗೂ ಸಹದೇವನಿಗೂ ಯುದ್ಧವಾಗುತ್ತದೆ. (ಕನ್ನಡ ಭಾರತ, ಸಭಾಪರ್ವ ಸಂ. ೫, ಪ. ೧೧) ಆದರೆ ಈ ನೀಲನಿಗೂ, ಜೈಮಿನಿಯಲ್ಲಿ ಬರುವ ನೀಲಧ್ವಜನಿಗೂ ಸಂಬಂಧ ಕಾಣಿಸುವುದಿಲ್ಲ.*

ಮಹಾಭಾರತ-ಜೈಮಿನಿ ಭಾರತಗಳನ್ನು ಓದಿದಾಗ ಒಂದು ವ್ಯತ್ಯಾಸ ಕಾಣುತ್ತದೆ. ಸುಧನ್ವ, ಸುರಥ, ತಾಮ್ರಧ್ವಜರ ಮೇಲೆ ಯುದ್ಧಮಾಡುವಾಗ ಅರ್ಜುನನು ಸೋತುಹೋಗುವನು. ಬಭ್ರುವಾಹನನು ಅರ್ಜುನನ್ನು ಕೊಂದು ಬಿಡುವನು. ಶ್ರೀಕೃಷ್ಣನು ಅವತಾರಗಳ ಪುಣ್ಯವನ್ನಿತ್ತರೂ ಅರ್ಜುನನು ಬದುಕುವುದು ಕಷ್ಟವಾಗಿದೆ. ಭಾರತದಲ್ಲಿ ಅರ್ಜುನನು ಮೂರ್ಛೆಬೀಳುವನೆಂದು ಹೇಳಿದೆ. ಹಿಂದೆ ಪಾಂಡವರು ರಾಜಸೂಯ ಮಾಡಿದಷ್ಟು ಹಗುರವಾಗಿ ಈ ಅಶ್ವಮೇಧ ಮಾಡಲು ಸಾಧ್ಯವಾಗುವುದಿಲ್ಲ. ಇಲ್ಲಿ ಶ್ರೀಕೃಷ್ಣನ ಮಹಿಮೆ-ಧರ್ಮರಾಜನ ಪುಣ್ಯ ಅಶ್ವಮೇಧವನ್ನು ಕೊನೆಗಾಣಿಸುತ್ತವೆ.

ಭಾರತದ ಅಶ್ವಮೇಧಿಕ ಪರ್ವದಲ್ಲಿ ಸ್ಪಷ್ಟವಾದ ಅಶ್ವವಧೆ ಮತ್ತು ಹಿಂಸೆ ನಡೆದಿದೆ. ಆದರೆ ಜೈಮಿನಿ ಭಾರತದ ಅಶ್ವಮೇಧಿಕದಲ್ಲಿ ಹಿಂಸೆ ಅಸ್ಪಸ್ಟವಾಗಿ ಸತ್ತ ಕುದುರೆ ಕರ್ಪೂರವಾಗುವ ಸನ್ನಿವೇಶವಿದೆ. ಭಾರತದ ಅಶ್ವಮೇಧಿಕ ಪರ್ವದ ಯಾತ್ರೆಯಲ್ಲಿ ಹೆಚ್ಚು ಯುದ್ಧಗಳ ಸನ್ನಿವೇಶಗಳಿಲ್ಲ. ಅರ್ಜುನನು ತ್ರಿಗರ್ತ,

*ಜೈಮಿನಿ ಭಾರತದಲ್ಲಿ ಬರುವ ಚಂದ್ರಹಾಸನು ಕನ್ನಡರಾಜನೆಂಬ ಪ್ರತೀತಿ ಇದೆ. ಕೊಪ್ಪಳ ತಾಲ್ಲೂಕಿನ ಕುಕನೂರು ಕುಂತಳನಗರವೆಂಬ ಹೇಳಿಕೆಯುಂಟು. ಆ ಕಥೆಯಲ್ಲಿ ಬರುವ ಬೇಡರ ರಾಜನು ಶಿವಮೊಗ್ಗ ಪ್ರಾಂತದ ಕುಬಟೂರಿನವನಿರಬೇಕೆಂದು ಕೆಲವರ ಮತ. ಸುಧನ್ವನನ್ನು ಎಣ್ಣೆಯ ಕೊಪ್ಪರಿಗೆಯಲ್ಲಿ ಬೇಯಿಸಿದುದು ತುಮಕೂರು ಜಿಲ್ಲಾ, ಗುಬ್ಬಿ ತಾಲ್ಲೂಕಿನ ಸಂಪಿಗೆಯಲ್ಲಿ ಎಂದೂ, ಜನಮೇಜಯರಾಜನು ಸರ್ಪಯಾಗಮಾಡಿದುದು ಹಿರೇಮಗಳೂರು ಎಂದು ನಮ್ಮ ನಾಡಿನಲ್ಲಿ ದಂತ ಕಥೆಗಳಿವೆ.

ಪಾಂಡವರಲ್ಲಿ ಶೂರನೆನಿಸಿದ ಭೀಮಸೇನನ ಪತ್ನಿ ಹಿಡಿಂಬಿ ಚಿತ್ರದುರ್ಗದವಳೆಂದು ಹೇಳುತ್ತಾರೆ. ಆ ಬೆಟ್ಟದಲ್ಲಿರುವ ಹಿಡಿಂಬೇಶ್ವರ ದೇವಾಲಯವು ಇಲ್ಲಿ ಸ್ಮರಣಾರ್ಹ. ಮಹಾಭಾರತದಲ್ಲಿ ಬರುವ ಬಕಾಸುರನ ಊರು ಚಿಂತಾಮಣಿ ತಾಲ್ಲೂಕು, ಕೈವಾರವೆಂದೂ, ಅಲ್ಲಿನ ಬೆಟ್ಟದಲ್ಲಿ ಬಕನಿದ್ದನೆಂದೂ ಹೇಳುತ್ತಾರೆ. ಅಲ್ಲಿ ಪಾಂಡವರಿದ್ದ ಸ್ಮಾರಕಗಳಿವೆ. ಪಾಂಡವರು ಅಜ್ಞಾತವಾಸ ಮಾಡಿದ ವಿರಾಟನಗರ ಧಾರವಾಡ ಜಿಲ್ಲಾ ಹಾನಗಲ್ಲೆಂದು ಕೆಲವು ವಿದ್ವಾಂಸರ ಮತ ಹಾನಗಲ್ ಕೋಟೆಗೆ ‘ವಿರಾಟನಕೋಟೆ’ ಅನ್ನುತ್ತಾರೆ. ಅಲ್ಲಿ ಕೀಚಕನ ಗರುಡಿಮನೆ, ಧರ್ಮಾನದಿ ಮೊದಲಾದುವಿವೆ. ಪಾಂಡವರು ವನವಾಸಮಾಡಿದ ಸ್ಥಳವೆ ‘ಬನವಾಸಿ’ ಎನ್ನುತ್ತಾರೆ. ಅದು ಕಾರವಾರ ಜಿಲ್ಲೆಯಲ್ಲಿದೆ.

ಗೋಕರ್ಣದಲ್ಲರುವ ಸಮುದ್ರತೀರದ ಶತಶೃಂಗ ಪರ್ವತದಲ್ಲಿ ಪಾಂಡವರ ಗವಿ ಇದೆ. ಅಲ್ಲಿ ಪಾಂಡವರು ಕೆಲಕಾಲ ಇದ್ದರೆನ್ನುತ್ತಾರೆ. ಕರ್ಣಾಟಕದ ಹಿರಿಯ ನದಿಗೆ ಕೃಷ್ಣಾನದಿಯೆಂದೂ, ಹಿರಿಯ ಬೆಟ್ಟಕ್ಕೆ ನೀಲಗಿರಿ (ಕೃಷ್ಣಗಿರಿ) ಎಂದೂ ಹೆಸರಿದೆ. ಕರ್ಣಾಟಕದ ಹೊಯ್ಸಳ, ಯಾದವ, ಮೈಸೂರು ಅರಸರು ಶ್ರೀಕೃಷ್ಣನ ವಂಶೀಯರೆಂದು ಹೆಸರಾಗಿದ್ದಾರೆ. ಉಡುಪಿಯಲ್ಲಿ ಶ್ರೀಕೃಷ್ಣನನ್ನು ಆಚಾರ‍್ಯ ಆನಂದತೀರ್ಥರು ಸ್ಥಾಪಿಸಿದ್ದಾರೆ. ವಿರಾಟನ ಮಗಳು ಉತ್ತರೆ ಅಭಿಮನ್ಯುವನ್ನು ಮದುವೆಯಾಗಿರುವದರಿಂದ ಶ್ರೀಕೃಷ್ಣನು ಕರ್ಣಾಟಕಕ್ಕೆ ಬಂಧುವೆನಿಸಿಕೊಳ್ಳುತ್ತಾನೆ. ಇವನ್ನೆಲ್ಲಾ ದಂತ ಕಥೆಯೆಂದು ಉಪೇಕ್ಷಿಸಿದರೂ ಕರ್ಣಾಟಕಕ್ಕೂ ಶ್ರೀಕೃಷ್ಣನಿಗೂ-ಪಾಂಡವರಿಗೂ ಇರುವ ಬಾಂಧವ್ಯವನ್ನು ನಾವು ತಿಳಿಯಬಹುದು. ಮಹಾಕವಿಗಳಾದ ರುದ್ರಭಟ್ಟ, ಕುಮಾರವ್ಯಾಸ, ಲಕ್ಷ್ಮೀಶ, ಚಾಟುವಿಠ್ಠಲ, ಕನಕದಾಸ ಮೊದಲಾದವರು ಶ್ರೀಕೃಷ್ಣನ ಮಹಿಮೆಯನ್ನು ಕೊಂಡಾಡಿದ್ದಾರೆ. ಕನ್ನಡ ಭಾರತ, ಜೈಮಿನಿ ಭಾರತಾದಿ ಕಾವ್ಯಗಳು ಕನ್ನಡಿಗರಿಗೆ ಕರ್ಣಕಮನೀಯವೆನಿಸಿವೆ.

ಪ್ರಾಗ್ಜ್ಯೋತಿಷ, ಸಿಂಧು, ಮಣಲೂರಪುರ (ಮಣಿಪುರ) ಗಳಿಗೆ ಹೋಗುವನು ಮಣಿಪುರದಲ್ಲಿ ಅರ್ಜುನನು ಬಭ್ರುವಾಹನನ ಬಾಣಕ್ಕೆ ಮೂರ್ಛೆಹೋಗಿ ಮತ್ತೆ ಸಂಜೀವಕಮಣಿಯಿಂದ ಏಳುವನು. ಅಲ್ಲಿಂದ ಅವನು ಚೇದಿ, ಕಾಶಿ, ಕೋಸಲ, ಗಾಂಧಾರ ದೇಶಗಳನ್ನು ಸುತ್ತಿಕೊಂಡು ಅಲ್ಲಿನ ರಾಜರಿಂದ ಕಪ್ಪಕಾಣಿಕೆಗಳನ್ನು ತೆಗೆದುಕೊಂಡು ಹಸ್ತಿನಾವತಿಗೆ ಹಿಂತಿರುಗುವನು.

ಯಜ್ಞವೆಲ್ಲಾ ಆದ ಮೇಲೆ ಸಂಸ್ಕೃತದಲ್ಲಿ ಮುಂಗುಸಿಯ ಕಥೆ ಬರುತ್ತದೆ. ಕನ್ನಡ ಜೈಮಿನಿಯಲ್ಲಿ ಈ ಮುಂಗುಸಿಯ ಕಥೆ ಇಲ್ಲ. ಒಟ್ಟಿನಲ್ಲಿ ಭಾರತದ ಅಶ್ವಮೇಧಿಕ ಪರ್ವವು ಜೈಮಿನಿ ಭಾರತದ ಅಶ್ವಮೇಧಿಕ ಪರ‍್ವದಷ್ಟು ಆಕರ್ಷಕವಾಗಿಯೂ ಸ್ವಾರಸ್ಯವಾಗಿಯೂ ಇಲ್ಲ ಎಂದು ಹೇಳಬಹುದು.

ಈ ಸಂದರ್ಭದಲ್ಲಿ ಸುಪ್ರಸಿದ್ಧ ಇತಿಹಾಸ ಸಂಶೋಧಕರಾದ ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸರು ಕನ್ನಡ ಜೈಮಿನಿ ಭಾರತದ ಬಗ್ಗೆ ಪತ್ರಿಕೆಗಳಲ್ಲಿ ಬರೆದಿರುವ ಲೇಖನಗಳು ಗಮನಾರ್ಹವಾಗಿವೆ.

“ಮಹಾಭಾರತವು ರಚಿತವಾದ ಎಷ್ಟೋ ಕಾಲದ ಮೇಲೆ ಜೈಮಿನಿ ಭಾರತವು ರಚಿಸಲ್ಪಟ್ಟಿತು. ಮಹಾಭಾರತದ ಅಶ್ವಮೇಧ ಪರ್ವದಲ್ಲಿ ಹೇಳಿರುವ ಅನೇಕ ಯುದ್ಧಗಳು ಜೈಮಿನಿಯಲ್ಲಿ ಹೇಳಿಲ್ಲ. ಬಭ್ರುವಾಹನ ಕಾಳಗ, ಸಿಂಧೂ ದೇಶದ ವಿಜಯದ ವಿಷಯಗಳು ಮಾತ್ರ ಎರಡು ಅಶ್ವಮೇಧಗಳಲ್ಲಿಯೂ ವರ್ಣಿಸಲ್ಪಟ್ಟಿವೆ. ಅವುಗಳಲ್ಲಿಯೂ ಹಲವು ವ್ಯತ್ಯಾಸಗಳಿವೆ…….. ಸಮುದ್ರಗುಪ್ತನ ದಂಡಯಾತ್ರೆಯ ಕೆಲವು ಅಂಶಗಳನ್ನು ಮಹಾಭಾರತದ ಇತಿಹಾಸದೊಡನೆ ಜೋಡಣೆ ಮಾಡಿಕೊಂಡು ಜೈಮಿನಿ ಭಾರತವೆಂಬ ಹೆಸರಿನಿಂದ ಗ್ರಂಥ ರಚಿಸಿದಂತೆ ಭಾಸವಾಗುತ್ತದೆ. ಅದರಂತೆ ಇತಿಹಾಸ ಕಾಲದಲ್ಲಿ ಸಮುದ್ರಗುಪ್ತ ನಡೆಸಿದ ಅಶ್ವಮೇಧ ಯಾಗದ ವಿಜಯಯಾತ್ರೆಯ ವಿಷಯವು ಜೈಮಿನಿ ಭಾರತದಲ್ಲಿ ಸೇರಿದೆ. ವಾಕಾಟಕ ಅಥವಾ ವಿಂಧ್ಯವಂಶದರಸನಾದ ರುದ್ರದೇವನನ್ನು ನೀಲಧ್ವಜನೆಂದೂ, ವನರಾಜ್ಯಾಧಿಪತಿಗಳನ್ನು ವ್ಯಾಘ್ರರಾಜನೆಂದೂ, ಕಂಚಿಯ ಪಲ್ಲವ ಸಾಮ್ರಾಟನಾದ ಶಿವಸ್ಕಂದವರ‍್ಮ ಮತ್ತು ಯುವರಾಜ ವಿಷ್ಣುಗೋಪರನ್ನು-ಮಯೂರಧ್ವಜ-ತಾಮ್ರಧ್ವಜರೆಂದೂ, ಸೌರಾಷ್ಟ್ರದರಸನನ್ನು ವೀರವರ‍್ಮನೆಂದೂ, ಕುಂತಳದರಸನಾದ ಮಯೂರವರ್ಮನನ್ನು ಚಂದ್ರಹಾಸನೆಂದೂ ಹೆಸರುಗಳನ್ನು ಮಾರ್ಪಡಿಸಿ ಸಮುದ್ರಗುಪ್ತನ ದಂಡಯಾತ್ರೆಯ ಕೆಲವು ಅಂಶಗಳನ್ನೂ ಮಹಾಭಾರತದ ಅಶ್ವಮೇಧಯಾಗವನ್ನೂ ಸೇರಿಸಿ ಜೈಮಿನಿ ಭಾರತವನ್ನು ಬರೆದಿದ್ದಾರೆ.” ಎಂದು ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಮತ್ತು ಜಯಕರ್ಣಾಟಕಗಳಲ್ಲಿ ಶ್ರೀ ಜೋಯಿಸರು ಬರೆದಿದ್ದಾರೆ.

ಭಾರತದೇಶದಲ್ಲಿ ಕ್ರಿ.ಶ. ೩೨೬-೩೭೫ರವರೆಗೆ ರಾಜ್ಯಭಾರಮಾಡಿದ ಗುಪ್ತರಲ್ಲಿ ಸುಪ್ರಸಿದ್ಧನಾದ ಸಮುದ್ರಗುಪ್ತನು ಅಶ್ವಮೇಧಯಾಗವನ್ನು ಮಾಡಿದ ವಿಷಯವು ಕೌಶಾಂಬಿಯ ಶಿಲಾಶಾಸನದಲ್ಲಿ ಪ್ರಸಿದ್ಧವಾಗಿದೆ. ಈತನ ವಂಶೀಯನಾದ ಕುಮಾರಗುಪ್ತನೂ (ಕ್ರಿ.ಶ. ೪೧೩) ಸಹ ಅಶ್ವಮೇಧಯಾಗಮಾಡಿದ್ದಾನೆ. ಸಮುದ್ರಗುಪ್ತನ ಸಮಕಾಲೀನನಾದ ಕಂಚಿಯ ಪಲ್ಲವ ಅರಸ ಶಿವಸ್ಕಂದ ವರ್ಮನು ಅಶ್ವಮೇಧಯಾಗಮಾಡಿದಂತೆ ಶಾಸನಗಳಿಂದ ತಿಳಿದುಬಂದಿದೆ. ಈ ಶಿವಸ್ಕಂದ ವರ್ಮನೇ ಜೈಮಿನಿ ಭಾರತದ ಮಯೂರದ್ವಜನೆಂದೂ, ಸಮುದ್ರಗುಪ್ತನೇ ಜೈಮಿನಿಭಾರತದ ಯುಧಿಷ್ಠಿರನೆಂದೂ ಶ್ರೀ ಜೋಯಿಸರು ತರ್ಕಿಸಿರುತ್ತಾರೆ.

ಈ ತರ್ಕದಿಂದ ಇತಿಹಾಸ ಕಾಲದಲ್ಲಿ ಕೂಡ ಉತ್ತರ ಭಾರತ, ಹಾಗೂ ದಕ್ಷಿಣ ಭಾರತದಲ್ಲಿ ಅಶ್ವಮೇಧಯಾಗಗಳು ನಡೆದು ವೈದಿಕ ಧರ‍್ಮವು ತಲೆ ಎತ್ತಿದ್ದುದು (ಜೈನ ಬೌದ್ಧ ಯುಗಗಳ ಅನಂತರ) ಗಮನಾರ್ಹವಾಗಿದೆ. ಹೀಗೆ ಜೈಮಿನಿ ಭಾರತವು ಪುರಾಣದ ಮೇಲೆ ಇತಿಹಾಸದ ಪ್ರಕಾಶಬಿದ್ದ ಗ್ರಂಥವೆನಿಸಿರುವುದು ಇಲ್ಲಿ ಬಹು ಮುಖ್ಯ ಸಂಗತಿಯಾಗಿದೆ.

ಗ್ರಂಥ ಮಹಾತ್ಮ್ಯ

ಕನ್ನಡ ಜೈಮಿನಿ ಭಾರತದ ಕಟ್ಟಕಡೆಯಲ್ಲಿ “ತಾಪಸೋತ್ತಮನಾದ ಜೈಮಿನಿ ಮುನೀಶ್ವರಂ ಭೂಪಾಲ ತಿಲಕ ಜನಮೇಜಯಂಗೊರೆದ ಸಂಗತಿಗಳಂ ಸಕಲ ಜನಕೆ ವ್ಯಾಪಿಸಿದ ಸುಪ್ರೌಢಿ ಮೆರೆಯೆ ಕನ್ನಡದ ಭಾಷಾಪದ್ಧತಿಯೊಳ್ ಅಣ್ಣಮಾಂಕನ ಕುಮಾರ ಲಕ್ಷ್ಮೀಪತಿಯ ಮುಖದಿಂದೆ ಕೃತಿಯಾಗಿ ರಚಿಸಿದಂ ಸುರಪುರದ ಶ್ರೀಕಾಂತನು” ಎಂದು ಕವಿಯು ಹೇಳಿ, “ಅಶ್ವಮೇಧಿಕ ಪರ್ವದ ಅಮಲಸತ್ಕಥ ಯೌವ್ಯನಾಶ್ವಾದಿ ನೃಪರ ಚರಿತಂ ಕೇಳ್ದ ಮಾನವರ್ಗೆ” ಐಶ್ವರ್ಯ, ಆರೋಗ್ಯ, ಆಯುಷ್ಯದ ಅಭಿವೃದ್ಧಿ, ಕಲಿನಾಶನಂ, ಶ್ವೇತಕೀರ್ತಿ, ಸುತಲಾಭ, ಶತ್ರುಕ್ಷಯಂ, ಸರ್ವ ಭೋಗಂಗಳಾದಪುವು, ಸರ್ವೇಶ್ವರನ ಭಕ್ತಿ ದೊರೆ ಕೊಂಡಪುದು ಎಂದು ಫಲಶೃತಿಯನ್ನು ಹೇಳುತ್ತಾನೆ. ಇಷ್ಟೇ ಅಲ್ಲ. “ಜೈಮಿನಿ ಭಾರತದೊಳ್ ಒಂದು ವರ್ಣಮಂ ಪ್ರೀತಿಯಿಂ ಕೇಳ್ದವರ್ಗೆ” ಉಪವನ, ತಟಾಕ, ದೇವಾಲಯ, ಪ್ರಪೆಗಳು-ಇವುಗಳನ್ನು ಪ್ರತಿಷ್ಠೆ ಮಾಡಿಸಿದ ಮತ್ತು ಧರ್ಮ, ಉಪಕಾರ, ವೇದಪುರಾಣ ಶಾಸ್ತ್ರ ಶ್ರವಣವನ್ನು ಮಾಡಿದ; ಪುಣ್ಯಕ್ಷೇತ್ರವಾಸ, ತೀರ್ಥಸ್ನಾನ, ಜಪ, ಹೋಮ, ಸುವ್ರತ, ಸಮಾಧಿ, ಯೋಗ, ಧ್ಯಾನ ತಪಸ್ಸು ಹರಿಹರಾರ್ಚನೆ-ಇವುಗಳನ್ನು ಮಾಡಿದ ಪುಣ್ಯ ಬರುವುದೆಂದು ಕವಿ ಹೇಳುತ್ತಾನೆ.

ಇದೇ ಅಭಿಪ್ರಾಯಗಳನ್ನು ಸಂಸ್ಕೃತ ಜೈಮಿನಿ ಭಾರತದ ಕಡೆಯಲ್ಲಿಯೂ ಫಲಶ್ರುತಿಯಾಗಿ ಹೇಳಿದೆ. ‘ಭಾರತವು ಐದನೆಯವೇದ’ ಎಂಬ ನಂಬಿಕೆ ನಮ್ಮ ಜನಗಳಲ್ಲಿದೆ ಭಗವಂತನಾದ ಶ್ರೀಕೃಷ್ಣ, ಯುಗಪುರುಷನಾದ ಯುಧಿಷ್ಠಿರ, ಗಂಡುಗಲಿಯಾದ ಭೀಮಸೇನ, ಮಹಾಭಾಗ್ಯಶಾಲಿಯಾದ ಅರ್ಜುನ, ದಾನಶೂರನಾದ ಕರ್ಣ, ಸತ್ಯವ್ರತನಾದ ಭೀಷ್ಮ, ನೀತಿವಂತನಾದ ವಿದುರ, ಸಾಧಿಮಣಿಯಾದ ದ್ರೌಪದಿ, ಸುಪ್ರೌಢೆಯಾದ, ಸುಭದ್ರೆ, ಶಸ್ತ್ರಾಗಮಾಚಾರ‍್ಯನಾದ ದ್ರೋಣ, ಚಿರಂಜೀವಿಯಾದ ಅಶ್ವತ್ಥಾಮ, ವೀರರಾದ ಅಭಿಮನ್ಯು, ಸುಧನ್ವ, ಸುರಥ, ತಾಮ್ರಧ್ವಜ, ವೃಷಕೇತು, ವೀರವರ್ಮ, ಭಾಗವತನಾದ ಚಂದ್ರಹಾಸ, ಮಯೂರದ್ವಜ ಮೊದಲಾದವರ ಪವಿತ್ರ ಚಿರತ್ರೆಯು ಈ ಭಾರತದಲ್ಲಿ ನಿರೂಪಿಸಲ್ಪಟ್ಟಿದೆ. ಆದುದರಿಂದ ಈ ಭಾರತ ಕಥಾಶ್ರವಣವು ಪುಣ್ಯಪ್ರದವೆಂದು ಹಿಂದಿನಿಂದ ನಮ್ಮಜನ ನಂಬಿಕೊಂಡು ಬಂದಿದ್ದಾರೆ. ಜನಮೇಜಯನು ಸರ್ಪಯಾಗಮಾಡಿದ್ದರಿಂದ ಪ್ರಾಪ್ತವಾದ ಕುಷ್ಠರೋಗವನ್ನು ಮಹಾ ಭಾರತ ಕೇಳಿ ಪರಿಹರಿಸಿಕೊಂಡನೆಂದೂ ಉಳಿದ ಅತ್ಯಲ್ಪ ಕುಷ್ಠವು ಜೈಮಿನಿ ಭಾರತ ಶ್ರವಣದಿಂದ ಹೋಯಿತೆಂದೂ ಕಥೆಯಿದೆ. ಈ ಅಭಿಪ್ರಾಯಗಳನ್ನೇ ಸಂಸ್ಕೃತ ಜೈಮಿನಿ ಭಾರತದಲ್ಲಿಯೂ ಹೇಳಿದ್ದಾರೆ.

ಅಶ್ವಮೇಧಿಕ ಮೇತಚ್ಚ ಪರ್ವಂ ತುಭ್ಯಂ ಪ್ರಕೀರ್ತಿತಂ |
ಶೃಣ್ವಥಾಸ್ಯ ಫಲಂ ರಾಜ ಸತ್ಯಂ ಹಿ ಗದತೋಮಮ ||

ಈ ಅಶ್ವಮೇಧ ಪರ್ವದ ಕಥೆಯು ನಿನಗಾಗಿ ಹೇಳಲ್ಪಟ್ಟಿದೆ. ಎಲೈ ರಾಜನಾದ ಜನಮೇಜಯನೇ ಇದರ ಫಲವನ್ನು ಕೇಳು.

ಧೇನೂನಾಂ ಹಿ ಸಹಸ್ರೇ ಚ ದತ್ತೇಭವತಿ ಯತ್ಪಲಂ |
ತತ್ ಪ್ರಾಪ್ನೋತಿ ಸಮಗ್ರಮ್ಯಃ ಶೃಣುಯಾದಾಶ್ವಮೇಧಿಕಂ ||

ಒಂದು ಸಾವಿರ ಹಸುಗಳನ್ನು ದಾನಮಾಡಿದರೆ ಬರುವ ಪುಣ್ಯವು ಈ ಕಥಾಶ್ರವಣದಿಂದ ಬರುತ್ತದೆ.

ಫಲಂ ಶತಗುಣಂ ತಸ್ಮಾತ್ ಗ್ರಂಥತಃ ಸಮವಾಪ್ನುಯಾತ್ |
ಯೋದದ್ಯಾತ್ ಪುಸ್ತಕಂ ಗಾಂ ಚ ಬ್ರಾಹಣಾಯ ಗೃಹಂ ಶ್ರಿಯಂ ||

ಅದಕ್ಕಿಂತ ನೂರುಪಾಲು ಹೆಚ್ಚು ಫಲವು ಗ್ರಂಥ, ಗೋವು, ಮನೆ, ಹಣ ಇವನ್ನು ಶೋತ್ರೀಯರಾದ ಬ್ರಾಹ್ಮಣರಿಗೆ ದಾನಮಾಡುವುದರಿಂದ ಬರುತ್ತದೆ.

ಗೌರೀಂ ವರಯತೇಕನ್ಯಾಂ ನೀಲಂವಾ ವೃಷಮುತ್ಸ*ಜೇತ್ |
ಅಶ್ವಮೇಧಿಕ ಮಧ್ಯಾಯಂ ಶೃಣುಯಾದ್ಯಃಸ್ಸಮೌ ಚತೌ ||

ಕನ್ಯಾದಾನ ಗೋದಾನಗಳಿಂದ ಬರುವ ಪುಣ್ಯವು ಈ ಅಶ್ವಮೇಧ ಪರ್ವದ ಕಥಾಶ್ರವಣದಿಂದ ಬರುತ್ತದೆ.

ಯೌವ್ವನಾ ಶ್ವ ಮುಖಾನಾಂ ಚ ನೃಪಾಣಾಂ ಚ ಶುಭಾಃ ಕಥಾಃ |
ಶೃಣುಯಾತ್ ಶ್ರಾವಯೇದೋಪಿ ಕಲಿದೋಷೈರ್ನಲಿಪ್ಯತೇ ||

ಯೌವ್ಯನಾಶ್ವನೇ ಮೊದಲಾದ ಪುಣ್ಯಶೀಲರಾದ ರಾಜರ ಕಥೆಗಳನ್ನು ಯಾವನು ಕೇಳುತ್ತಾನೆಯೋ ಕೇಳಿಸುತ್ತಾನೆಯೋ ಅವನಿಗೆ ಕಲಿದೋಷವಿಲ್ಲ.

ಬ್ರಾಹ್ಮಣೋಲಭತೇ ವಿದ್ಯಾಂ ಧನಾರ್ಥೀ ಪ್ರಾಪ್ನು ಯಾತ್ ಧನಂ |
ಕ್ಷತ್ರಿಯೋ ಜಾಯತೇ ಶೂರಃ ಪ್ರಾಪ್ನುಯಾನ್ನ ಪರಾಜಯಂ ||

ಈ ಕಥಾಶ್ರವಣದಿಂದ ಬ್ರಾಹ್ಮಣನು ವಿದ್ಯೆಯನ್ನೂ, ಕ್ಷತ್ರಿಯನು ವಿಜಯವನ್ನೂ, ವೈಶ್ಯನು ಧನವನ್ನೂ ಪಡೆಯುವರು.

ಅಪುತ್ರೋ ಲಭತೇ ಪುತ್ರಂ ರೋಗೀ ರೋಗೈರ‍್ವಿಮುಚ್ಯತೇ |
ಅಷ್ಟಾದಶ ಪುರಾಣಾನಾಂ ಪಠನಾದ್ಯತ್ಪಲಂ ಭವೇತ್” ||

ಮಕ್ಕಳಿಲ್ಲದವರಿಗೆ ಸಂತಾನವೂ, ರೋಗಿಗಳಿಗೆ ಆರೋಗ್ಯವೂ, ಹದಿನೆಂಟು ಪುರಾಣಗಳ ಶ್ರವಣದ ಫಲವೂ ಈ ಜೈಮಿನಿಯ ಕಥಾಶ್ರವಣದಿಂದ ಉಂಟಾಗುತ್ತದೆ.

ತತ್ಪಲಂ ಸಮವಾಪ್ನೋತಿ ಭಾರತ ಶ್ರವಣೌನ್ನರಃ |
ಸಮಗ್ರಂ ಭಾರತಂ ತೇನ ಶೃತಂ ಭವತಿ ಭಾರತ ||

ಈ ಮೇಲೆ ಕಂಡ ಫಲಗಳೆಲ್ಲವೂ ಭಾರತ ಕಥಾ ಶ್ರವಣದಿಂದುಂಟಾಗುತ್ತವೆ. ಈ ಅಶ್ವಮೇಧ ಪರ್ವದ ಕಥಾಶ್ರವಣದಿಂದ ಸಮಗ್ರ ಭಾರತ ಕಥೆಯನ್ನು ಕೇಳಿದ ಪುಣ್ಯ ಪ್ರಾಪ್ತವಾಗುತ್ತದೆ.

ಕಂದ || ಕವಿ ಲಕ್ಷ್ಮೀಶನ ಕಾವ್ಯದ |
ನ ವಿರಳ ವಿಶ್ವಾಸದಿಂದೆ ಪಠಿಸುವ ರಸಿಕರ್ ||
ಭುವಿಯೊಳ್ ಪಡೆವರ್ ನಿರುತಮ್ |
ಪ್ರವಿಮಲ ನವ ಕಾವ್ಯಕಾಂತೆಯೊಲವಿನ ಸುಖಮಮ್ ||

ಇಂತು ಸುಜನ ವಿಧೇಯ,
ಬ. ಶಿವಮೂರ್ತಿಶಾಸ್ತ್ರೀ
ಬೆಂಗಳೂರು
ದಿನಾಂಕ ೧೫-೬-೧೯೫೬