ಮಹಾ ವೈದ್ಯನಾಥ ಅಯ್ಯರ್

ತಮಿಳುನಾಡಿಗೆ ಸೇರಿದ ತಂಜಾವೂರು ಜಿಲ್ಲೆಯು ಕಲೆಗಳ ಬೀಡು ಎಂದು ಹೆರಸರಾಗಿದೆ. ಇದಕ್ಕೆ ಕಾರಣ ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನದಲ್ಲಿ ಜನಿಸಿದ ಸಂಗೀತ ತ್ರಿಮೂರ್ತಿಗಳೆಂದು ಹೆಸರಾಗಿದ್ದ ತ್ಯಾಗರಾಜರು, ಶ್ಯಾಮಶಾಸ್ತ್ರಿಗಳು ಮತ್ತು ಮುತ್ತುಸ್ವಾಮಿ ದೀಕ್ಷಿತರು- ಮೂವರೂ ಅಲ್ಲಿಯೇ ಹುಟ್ಟಿದರೆಂಬುದು. ಮಹಾ ವೈದ್ಯನಾಥ ಅಯ್ಯರ್ ಅವರು ತ್ಯಾಗರಾಜರ ಆಶೀರ್ವಾದ ಪಡೆದವರು.

ಸಂಗೀತ ಉಪಾಸಕರ ವಂಶ

ತಂಜಾವೂರಿಗೆ ಸಮೀಪವಾಗಿರುವ ವೈಯ್ಯಾಚೇರಿ ಎಂಬುದು ಒಂದು ಸಣ್ಣ ಅಗ್ರಹಾರ. ಅಗಸ್ತೇಶ್ವರ ಮತ್ತು ಮಂಗಳ ನಾಯಕಿಯರ ದಿವ್ಯ ಕ್ಷೇತ್ರ. ಪಂಚನದಯ್ಯ ಎಂಬುವರು ವೇದ, ಸಂಗೀತ ಮತ್ತು ಸಾಹಿತ್ಯಗಳಲ್ಲಿ ವಿದ್ವಾಂಸರಾಗಿ ಬೆಳಗಿದವರು. ಅವರ ಹಿರಿಯರೆಲ್ಲರೂ ಅದೇ ಊರಿನವರು. ಪಂಚನದಯ್ಯರವರಿಗೆ ಸಂಗೀತದಿಂದ ಹಣವನ್ನು ಸಂಪಾದಿಸುವ ಯೋಚನೆ ಇರಲಿಲ್ಲ. ಉತ್ಸವ ಕಾಲದಲ್ಲಿ ಭಜನ ಗೋಷ್ಠಿಗಳನ್ನು ಸೇರಿಸಿ ಹಾಡಿ ಎಲ್ಲರನ್ನೂ ಆನಂದ ಗೊಳಿಸುತ್ತಿದ್ದರು. ಒಂದು ಬಾರಿ ಪಂಚನದಯ್ಯ ನವರು ಹಾಡುವುದನ್ನು ಕೇಳಿ ಸಂತೋಷ ಪಟ್ಟ ತ್ಯಾಗರಾಜರು, ಮುಂದೆ ಅವರ ವಂಶದಲ್ಲಿ ಉನ್ನತ ಸಂಗೀತ ಕಲಾವಿದನು ಜನಿಸಲೆಂದು ಆಶೀರ್ವದಿಸಿದ್ದರು.

ಪಂಚನದಯ್ಯರವರ ಹೆಂಡತಿ ಅರುಂಧತಿ (ತಾಯ ಮ್ಮಾಳ್). ಈಕೆ ಆಗ ಹೆಸರಾಂತ ಸಂಗೀತ ವಿದ್ವಾಂಸರಾಗಿದ್ದ ಆನಯ್ಯ ಎಂಬುವರ ವಂಶದವರು. ಈ ದಂಪತಿಗಳಿಗೆ ಸಾಂಬಮೂರ್ತಿ, ರಾಮಸ್ವಾಮಿ, ವೈದ್ಯನಾಥ ಮತ್ತು ಅಪ್ಪಾ ಸ್ವಾಮಿ ಅಯ್ಯರ್ ಎಂಬ ನಾಲ್ಕು ಮಂದಿ ಗಂಡುಮಕ್ಕಳಾದರು. ವೈದ್ಯನಾಥರು ೧೮೪೪ ರ ಮೇ ೨೬ ರಂದು ಹುಟ್ಟಿದರು. ರಾಮಸ್ವಾಮಿ ಮತ್ತು ವೈದ್ಯನಾಥ ಮುಂದೆ ಕರ್ಣಾಟಕ ಸಂಗೀತ ಪ್ರಪಂಚದಲ್ಲಿ ಶಿವನ್ ಸಹೋದರರೆಂದು ಬೆಳಗಿದವರು.

ಬಾಲ್ಯ ಮತ್ತು ವಿದ್ಯಾರ್ಜನೆ

ತಮ್ಮ ಮಕ್ಕಳಿಗೆಲ್ಲಾ ಆರಂಭದಲ್ಲಿ ಪಂಚನದಯ್ಯರವರೇ ಸಂಗೀತ, ಸಂಸ್ಕೃತ, ತಮಿಳು ಮತ್ತು ತೆಲುಗು ಭಾಷೆಗಳನ್ನು ಕಲಿಸುತ್ತಿದ್ದರು. ಅವರುಗಳಲ್ಲಿ ರಾಮಸ್ವಾಮಿ ಮತ್ತು ವೈದ್ಯನಾಥ ಸದಾ ಜೊತೆಯಾಗಿ ರಾಮ-ಲಕ್ಪ್ಷ್ಮಣರಂತೆ ಒಡನಾಡಿಗಳಾಗಿ  ಬೆಳೆದು, ತಾವು ಕಲಿಯುತ್ತಿದ್ದ ಸಂಗೀತ ಮತ್ತು ಸಾಹಿತ್ಯ ಭಾಗಗಳಲ್ಲಿ ಅಪಾರ ಶ್ರದ್ಧೆ ತೋರಿಸುತ್ತಿದ್ದರು. ಇದನ್ನು ಕಂಡ  ಪಂಚನದಯ್ಯನವರು ಮಕ್ಕಳಿಗೆ ಸಂಗೀತ ಕಲಿಯಲು ವ್ಯವಸ್ಥೆ ಮಾಡಿದರು. ಆನಯ್ಯರವರೇ ಅವರ ಗುರುಗಳು. ತಾವು ಸಂಚಾರ ಹೋಗುವಾಗಲೆಲ್ಲಾ ರಾಮಸ್ವಾಮಿ ಮತ್ತು ವೈದ್ಯನಾಥರನ್ನು ತಮ್ಮೊಡನೆ ಕರೆದುಕೊಂಡು ಹೋಗುತ್ತಿದ್ದರು. ತಮ್ಮ ಸ್ನೇಹಿತರೂ ಪ್ರಸಿದ್ಧ ಸಂಗೀತ ವಿದ್ವಾಂಸರೂ ಆಗಿದ್ದ ವೆಂಕಟ ಸುಬ್ಬಯ್ಯರ್ ಮನೆಯಲ್ಲಿಯೇ ಅನೇಕ ತಿಂಗಳುಗಳ ಕಾಲವಿದ್ದು, ಮಕ್ಕಳು ಹಾಡುವಂತೆ ಮಾಡಿ, ಹೇಳಿ ಕೊಡುತ್ತಿದ್ದ ಸಂಗೀತ ಪಾಠವನ್ನು ಮನನ ಮಾಡಿಸುತ್ತಿದ್ದರು. ರಾಮಸ್ವಾಮಿ ಏಕಸಂತ ಗ್ರಾಹಿ (ಒಂದು ಸಲ ಕೇಳಿದುದನ್ನು ತಿಳಿದು ಕೊಳ್ಳುವವನು); ವೈದ್ಯನಾಥನು ದ್ವಿಸಂತಗ್ರಾಹಿ (ಎರಡುಸಲ ಕೇಳಿದುದನ್ನು ತಿಳಿದುಕೊಳ್ಳುವವನು).

ಪಂಚನದಯ್ಯರವರು ತಮ್ಮ ಈ ಇಬ್ಬರು ಮಕ್ಕಳಿಗೂ ಒಟ್ಟಿಗೆ ಉಪನಯನವನ್ನು ನಡೆಸಿದರು. ಉಪನಯನಕ್ಕೆ ಶಿವ ಗಂಗೆಯ ಪೆರಿ (ಹಿರಿಯ)ವೈದ್ಯನಾಥ ಅಯ್ಯರ್ ಮತ್ತು ಅವರ ತಮ್ಮ ಚಿನ್ನ (ಕಿರಿಯ) ವೈದ್ಯನಾಥ ಅಯ್ಯರೇ ಮೊದಲಾದ ಅನೇಕ ಮಂದಿ ಹಿರಿಯ ಸಂಗೀತ ವಿದ್ವಾಂಸರು ಬಂದಿದ್ದರು. ಭೋಜನವಾದ ಮೇಲೆ ವಿದ್ವಾಂಸರನ್ನು ಕುರಿತು ಪಂಚನದಯ್ಯರ್ ಹೇಳಿದರು: “ತಾವೆಲ್ಲರೂ ಈ ಇಬ್ಬರು ಮಕ್ಕಳೂ ಕೂಡಿ ಹಾಡುವುದನ್ನು ಕೇಳಿ ಆಶೀರ್ವದಿಸಬೇಕು.”

ಪೆರಿ ವೈದ್ಯನಾಥ ಅಯ್ಯರ್, “ಇವರು ಹಾಡುತ್ತಾರೆಯೇ? ಇಷ್ಟು ಚಿಕ್ಕವಯಸ್ಸಿನವರು?” ಎಂದರು.

ಪಂಚನದಯ್ಯರ್: “ಹಿರಿಯರಲ್ಲಿ ಕಲಿತಿದ್ದಾರೆ, ತಾವು ಕೇಳಿ ಆಶೀರ್ವದಿಸಬೇಕು.”

ಬಂದಿದ್ದ ವಿದ್ವಾಂಸರು ಒಪ್ಪಿದರು. ಆ ಚಿಕ್ಕ ವಯಸ್ಸಿನ ಅಣ್ಣತಮ್ಮಂದಿರು ತಂಬೂರಿ ಶ್ರುತಿಯೊಡನೆ ತಮ್ಮ ಅತ್ಯುತ್ತಮ ಶಾರೀರವನ್ನು ಎರಡು ಗಂಟೆಗಳ ಕಾಲ ಹೂಬಾಣದಂತೆ ಹೊಳಪಾಗಿ ಮಿಂಚಿನಂತೆ ಹಾಡಿದರು. ದೊಡ್ಡ ವೈದ್ಯನಾಥ ಅಯ್ಯರ್ ಮತ್ತು ಅವರ ತಮ್ಮಂದಿರೂ ಬೆರಗಾದರು. “ಈ ಸಂಗೀತ ಗಂಧರ್ವ ಗಾನ” ಎಂದು ಹೊಗಳಿದರು. ಹುಡುಗರು ನಮಸ್ಕರಿಸಿದಾಗ, “ಇಂತಹ ಪ್ರತಿಭೆ ಪೂರ್ವಜನ್ಮದ ಪುಣ್ಯ, ಕೀರ್ತಿವಂತರಾಗಿ” ಎಂದು ತುಂಬಿದ ಹೃದಯದಿಂದ ಹರಸಿದರು.

ಸಹೋದರರ ಮೊದಲ ಕಚೇರಿ

ಒಂದು ವರ್ಷವೂ ಕಳೆದಿರಲಿಲ್ಲ. ಕೊಡಯಾಲಂ ವಾಸುದೇವ ಅಯ್ಯಂಗಾರ್ ಎಂಬ ಶ್ರೀಮಂತರು ಹೊಸ ಮನೆ ಕಟ್ಟಿಸಿದರು. ಗೃಹಪ್ರವೇಶ ಸಮಾರಂಭದಲ್ಲಿ ದೊಡ್ಡ ವೈದ್ಯನಾಥ ಅಯ್ಯರ್ ಮತ್ತು ಚಿಕ್ಕ ವೈದ್ಯನಾಥ ಅಯ್ಯರವರ ಸಂಗೀತವೂ ನಾದಸ್ವರ ವಿದ್ವಾಂಸರ ವಾದನವೂ ಮತ್ತು ಕಥಾಕಾಲಕ್ಷೇಪವನ್ನು ಏರ್ಪಡಿಸಿದ್ದರು. ದೊಡ್ಡ ವೈದ್ಯನಾಥ ಅಯ್ಯರ್ ವಾಸುದೇವ ಅಯ್ಯಂಗಾರ್ಯರನ್ನು ಕುರಿತು, “ವೈಯ್ಯಾಚೇರಿಯ ರಾಮಸ್ವಾಮಿ ಮತ್ತು ವೈದ್ಯನಾಥರೆಂಬ ಸಹೋದರರು ತುಂಬಾ ಚೆನ್ನಾಗಿ ಹಾಡುತ್ತಾರೆ. ಚಿಕ್ಕವರಾದರೂ ಅಮೋಘವಾಗಿ ಹಾಡುತ್ತಾರೆ. ನೀವು ಅವರ ಸಂಗೀತವನ್ನು ಅಗತ್ಯವಾಗಿ ಏರ್ಪಡಿಸಬೇಕು” ಎಂದರು. ವಾಸುದೇವಯ್ಯಂಗಾರ್ಯರು ಸಹೋದರರನ್ನು ಬರಮಾಡಿ ಕೊಂಡರು. ಹಿರಿಯರ ಸಂಗೀತವು ಮುಗಿದನಂತರ ಕೊನೆಯದಾಗಿ ಈ ಸಹೋದರರ ಪ್ರಥಮ ಸಂಗೀತ ಕಛೇರಿಯು ನಡೆಯಿತು. ಹುಡುಗರು ಚಿಕ್ಕವರಾದರೂ ಅವರ ಪ್ರತಿಭೆ ದೊಡ್ಡದು ಎಂದು ಎಲ್ಲರಿಗೂ ಮನವರಿಕೆಯಾಯಿತು. ವಿದ್ವಾಂಸರೂ ರಸಿಕರೂ ಅವರನ್ನು ಮೆಚ್ಚಿಕೊಂಡರು. ವಾಸುದೇವ ಅಯ್ಯಂಗಾರ್ಯರೂ ಸಂತೋಷಪಟ್ಟು ಹಿರಿಯ ವಿದ್ವಾಂಸರುಗಳನ್ನು ಸನ್ಮಾನಿಸಿದಂತೆಯೇ ಈ ಸಹೋದರರನ್ನೂ ಸನ್ಮಾನಿಸಿ ಬೀಳ್ಕೊಟ್ಟರು.

 

ಎಳೆಯ ಸಂಗೀತಗಾರರು ಹಾಡಿದರು.

ಇದಾದನಂತರ ಈ ಎಳೆಯ ಸಂಗೀತಗಾರರಿಗೆ ಮದುವೆಗಳು ಮೊದಲಾದ ಅನೇಕ ಶುಭ ಸಂದರ್ಭಗಳಲ್ಲಿ ಹಾಡಲು ಮತ್ತೆಮತ್ತೆ ಆಹ್ವಾನಗಳು ಬಂದವು. ಚಿಕ್ಕ ವಯಸ್ಸಿನಲ್ಲೆ ಅವರು ಕೀರ್ತಿ ಸಂಪಾದಿಸಿದರು.

ಸಹೋದರರು ವರ್ಷ ಕಳೆದಂತೆ ಸಂಗೀತ, ತಮಿಳು ಮತ್ತು ಸಂಸ್ಕೃತವನ್ನು ಇನ್ನೂ ಅಭ್ಯಾಸ ಮಾಡಿದರು; ಜ್ಞಾನ ವಂತರಾದರು. ವೈದ್ಯನಾಥ ಅಯ್ಯರದು ಕಂಚಿನಂತಹ ಶಾರೀರ. ಆಗ ಈಗಿನಂತೆ ಧ್ವನಿವರ್ಧಕಗಳಿರಲಿಲ್ಲ. ಆದರೂ ಇಷ್ಟು ಜನಸಮೂಹ ಸೇರಿದ್ದರೂ ಎಲ್ಲರೂ ಕೇಳಲು ಸಾಧ್ಯ ವಾಗುವಂತಹ ಕಂಠ ಅವರದು. ಆಯಾಸವಿಲ್ಲದೆ ಸುಲಭವಾಗಿ ಹಾಡುತ್ತಿದ್ದರು. ಸ್ವರ ಮತ್ತು ಅಕ್ಷರ ಉಚ್ಚಾರಣೆ ಬಿಡಿ ಮುತ್ತಿ ನಂತೆ ಸ್ಫುಟವಾಗಿರುತ್ತಿದ್ದವು.

ವ್ಯಕ್ತಿತ್ವ

ಉಪನಯನವಾದೊಡನೆಯೇ ಪಂಚನದಯ್ಯರವರೇ ಮಕ್ಕಳಿಗೆ ಶಿವಪಂಚಾಕ್ಷರ ಮಂತ್ರವನ್ನು ಉಪದೇಶ ಮಾಡಿ, ಅದನ್ನು ತಪ್ಪದೆ ಆಚರಿಸುವಂತೆ  ಮಾಡಿದ್ದರು. ವೈದ್ಯನಾಥ ಅಯ್ಯರವರು ತಮ್ಮ ನಿತ್ಯಕರ್ಮಗಳನ್ನು ಬಹು ಶ್ರದ್ಧೆಯಿಂದ ಕಾಲಕ್ಕೆ ಸರಿಯಾಗಿ ಮಾಡುತ್ತಿದ್ದರು. ಅವರ ೧೬ನೆಯ ವಯಸ್ಸಿನಲ್ಲಿ ಕೊಡಗನಲ್ಲೂರು ಸುಂದರಸ್ವಾಮಿಗಳೆಂಬ ಹಿರಿಯರ ಸಂಪರ್ಕ ಒದಗಿ ಅವರಿಂದ ಮಂತ್ರೋ ಪದೇಶವನ್ನು ಪಡೆದರು. ವೈದ್ಯನನಾಥ ಅಯ್ಯರವರು ಮಹಾ ವರ್ಚಸ್ವಿ, ಸ್ಫುರದ್ರೂಪಿ. ನೋಡಿದೊಡನೆಯೇ ಯಾರಿಗಾದರೂ ಗೌರವ, ಭಕ್ತಿ ಮೂಡಿಬರುತ್ತಿದ್ದ ಮಹಾವ್ಯಕ್ತಿ. ಒಮ್ಮೆ ಅವರು ತಿರುಚೂರಿನ ವಡಕ್ಕನಾಥಸ್ವಾಮಿಯ ದೇವಸ್ಥಾನಕ್ಕೆ ಹೋಗಿದ್ದರು. ಪೂಜೆ ನಡೆಯುತ್ತಿದ್ದಾಗ ಭಕ್ತರ ಮಧ್ಯೆ ಮುಂದೆ ನಿಂತಿದ್ದರು. ಕೊಚ್ಚಿನ್ ಸಂಸ್ಥಾನದ ಮಹಾರಾಜರೂ ದೇವಸ್ಥಾನಕ್ಕೆ ಬಂದಿದ್ದರು. ಮಹಾ ವೈದ್ಯನಾಥ ಅಯ್ಯರವರನ್ನು ನೋಡಿ ತಮ್ಮ ಮಂತ್ರಿಗೆ, ‘ಅಲ್ಲಿ ನಿಂತಿರುವವರು ದೊಡ್ಡ ವಿದ್ವಾಂಸರೋ ಸಂಗೀತಗಾರರೋ ಇರಬೇಕು, ವಿಚಾರಿಸಿ’ ಎಂದು ಹೇಳಿದರಂತೆ.

ವೈದ್ಯನಾಥ ಅಯ್ಯರ್ ತಮ್ಮ ಅತ್ಯುತ್ತಮವಾದ ಶಾರೀರ ವನ್ನು ಕಾಪಾಡಲು ನಿತ್ಯವೂ ಮೆಣಸಿನ ಸಾರು ಅನ್ನವನ್ನೇ ಭೋಜನ ಮಾಡುತ್ತಿದ್ದರು. ಸಿಹಿ ತಿಂದವರೇ ಅಲ್ಲ. ಬೇರೆ ಯವರು ಮಾಡಿದ ಅಡುಗೆಯನ್ನು ಊಟ ಮಾಡುತ್ತಿರಲಿಲ್ಲ. ತಾವು ಹೋದೆಡೆಗೆಲ್ಲಾ ತಮ್ಮೊಡನೆ ಸ್ವಂತ ಅಡುಗೆಯವರನ್ನೇ ಕರೆದೊಯ್ದು ನಿತ್ಯವೂ ಒಂದೇ ವಿಧವಾದ ಆಹಾರ ಸ್ವೀಕರಿಸುತ್ತಿದ್ದುದೇ ಅವರ ಅಭ್ಯಾಸ. ಸದಾಕಲ ಶಾರೀರ ಕಾಪಾಡಿಕೊಳ್ಳಲು ಇದನ್ನು ಅವರು ನಿಷ್ಠೆಯಿಂದ ಪಾಲಿಸುತ್ತಿದ್ದರು.

ಕೀರ್ತಿ ಹಬ್ಬಿತು

ಶಿವನ್ ಸಹೋದರರು ಸಂಗೀತ ಮತ್ತು ಸಾಹಿತ್ಯದಲ್ಲಿ ಪರಿಣತರಾದ ಕಾರಣ, ತಮಿಳಿನಲ್ಲಿ ಪೆರಿಪುರಾಣದಲ್ಲಿ ಬರುವ ೬೩ ಸಿದ್ಧರ ಚರಿತ್ರೆಯನ್ನೂ ಕಥಾಕಾಲಕ್ಷೇಪ ಮಾಡುವಂತೆ ಅಳವಡಿಸಿ, ಕಥಾಕಾಲಕ್ಷೇಪ ಸಹಾ ಮಾಡಲು ತೊಡಗಿದರು. ಹೋದೆಡೆಗಳಲ್ಲಿ ಸಂಗೀತ ಮತ್ತು ಕಥಾಕಾಲಕ್ಷೇಪಗಳನ್ನು ಮಾಡಿ ಹೆಸರಾದರು. ನೂರು ವರ್ಷಗಳ ಹಿಂದೆ ಪ್ರಯಾಣ ಎಂದರೆ ಈಗಿನ ಅನುಕೂಲಗಳಿರಲಿಲ್ಲ; ತುಂಬಾ ಶ್ರಮ, ಶಿವನ್ ಸಹೋದರರಿಗೆ ಅನೇಕ ಆಹ್ವಾನಗಳು ಬರುತ್ತಿದ್ದವು. ಅವರು ಎರಡು ಅಥವಾ ಮೂರು ತಿಂಗಳುಗಳ ಕಾಲ ಹೋದೆಡೆಯಲ್ಲೂ ಮತ್ತು ಸುತ್ತಲೂ ಇದ್ದ ಇತರ ಸ್ಥಳಗಳಲ್ಲೂ ತಮ್ಮ ಸಂಗೀತ ಮತ್ತು ಕಥಾಕಾಲಕ್ಷೇಪ ಮಾಡಿಬರುವುದೇ ವಾಡಿಕೆ. ಕಛೇರಿಗೆ ಇಷ್ಟು ಸಂಭಾವನೆ ಕೊಡಬೇಕು ಎಂದು ಕೇಳಿದವರೇ ಅಲ್ಲ. ಕರೆದವರು ಕೊಟ್ಟ ಸಂಭಾವನೆಯನ್ನು ಸ್ವೀಕರಿಸುವುದೇ ಅವರ ಸಂಪ್ರದಾಯ.

ಶಿವನ್ ಸಹೋದರರು ಸದಾ ಕೂಡಿಯೇ ಸಂಚರಿ ಸುತ್ತಿದ್ದರು. ರಾಜಮಹಾರಾಜರು, ಗುರುಗಳು, ಶ್ರೀಮಂತರು ಅವರನ್ನು ಆಹ್ವಾನಿಸುತ್ತಿದ್ದರು.

ಪುದುಕೋಟೆಗೆ ಹೋದಾಗ ಅವರಿಗೆ ಹತ್ತು ವರ್ಷ. ಅಲ್ಲಿಯ ಮಹಾರಾಜರಾಗಿದ್ದ ರಾಮಚಂದ್ರ ತೊಂಡಮಾನ್ ಎಂಬುವರ ಸಮ್ಮುಖದಲ್ಲಿ ಸಂಗೀತ ಕಛೇರಿಯನ್ನು ಮಾಡಿ ದರು. ಸ್ಥಳದ ವಿದ್ವಾಂಸರಾಗಿದ್ದ ವೀಣಾ ಸುಬ್ಬುಕುಟ್ಟಿ ಅಯ್ಯರ್ ಮತ್ತು ವೀಣಾ ಸುಬ್ಬ ಅಯ್ಯರ್ ಮುಂತಾದವರು ಕೇಳಿ ಅಚ್ಚರಿಗೊಂಡರು. “ಇಂಥಾ ಗಂಧರ್ವ ಗಾನವನ್ನು ಮತ್ತೆ ಯಾರಿಂದಲೂ ಕೇಳಿಲ್ಲ. ಇವರಿಗೆ ಕೂಡಿಬಂದಿರುವ ಅನುಭವ, ಜ್ಞಾನ, ಉನ್ನತ ಶಾರೀರ ಸಂಪತ್ತು ಮತ್ತೆ ಯಾರಿಗೂ ಇಲ್ಲ” ಎಂದು ಹೊಗಳಿದರು. ಮಹಾರಾಜರೂ ಸಂತೋಷಪಟ್ಟು ಸಹೋದರರಿಗೆ ಉತ್ತಮ ರೀತಿಯ ಬಹುಮಾನವನ್ನು ಕೊಟ್ಟು ಮುಂದೆ ಪುದುಕೋಟೆಯಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ ಬರುವಂತೆ ಆಹ್ವಾನಿಸಿದರು. ಅದೇ ಪ್ರಕಾರ ಈರ್ವರೂ ಅನೇಕ ವರ್ಷಗಳು ಹೋಗಿ ಬರುವುದು ವಾಡಿಕೆಯಾಗಿತ್ತು.

ವೈದ್ಯನಾಥ ಅಯ್ಯರವರಿಗೆ ೧೪ನೆಯ ವಯಸ್ಸಿನಲ್ಲಿ ಎಟ್ಟಿಯಾಪುರದ ಮಹಾರಾಜರಿಂದ ಆಹ್ವಾನ ಬಂದಿತು. ಅವರೂ ಅವರ ಅಣ್ಣನೂ ಹೋದರು. ಮಹಾರಾಜರು ತಾವೇ ಸಂಗೀತವನ್ನು ತಿಳಿದವರಾಗಿದ್ದ ಕಾರಣ ಶಿವನ ಸಹೋದರರ ಕಛೇರಿಗಳನ್ನು ಅನೇಕ ದಿವಸ ಕೇಳಿ ತೃಪ್ತಿಪಟ್ಟು ಉನ್ನತ ಸ್ಥಾನವನ್ನು ಕೊಟ್ಟರು. ಶಿವನ್ ಸಹೋದರರು ಎಟ್ಟಿಯಾಪುರ ದಲ್ಲಿರುವವರೆಗೂ ಮುತ್ತು ಸ್ವಾಮಿ ದೀಕ್ಷಿತರ ವಂಶದ ಸುಬ್ಬರಾಮ ದೀಕ್ಷಿತರಿಂದ ಮುತ್ತುಸ್ವಾಮಿ ದೀಕ್ಷಿತರ ಅಪೂರ್ವ ಕೀರ್ತನೆಗಳನ್ನು ಹಾಡಿಸಿ ಕೇಳಿ, ತಾವು ಅವರಿಂದ ಕೆಲವು ಕೀರ್ತನೆಗಳನ್ನು ಕಲಿತು ಹಾಡಿದರು. ಅವರೊಡನೆ ಸಂಗೀತ ಶಾಸ್ತ್ರದ ವಿಚಾರವನ್ನು ಚರ್ಚಿಸಿ ಹೆಚ್ಚಿನ ಅನುಭವವನ್ನು ಅವರಿಂದ ಪಡೆದರು.

ಶಿವನ್ ಸಹೋದರರು ಎಟ್ಟಿಯಾಪುರದಲ್ಲಿದಾಗಲೇ ತಿರುನಲ್ವೇಲಿ ಎಂಬ ಊರಿನ ಜನರು ಬಂದು, ಅವರನ್ನು ತಮ್ಮ ಊರಿಗೆ ಬರಬೇಕೆಂದು ಕರೆದರು. ಅಲ್ಲಿಂದ ಚೊಕ್ಕಂಪೇಟೆಯ ಜಮೀನ್ದಾರರು ಅವರನ್ನು ಆಹ್ವಾನಿಸಿದರು. ಹೀಗೆಯೇ ಅವರಿಗೆ ಬಂದ ಆಹ್ವಾನಗಳಿಗೆ ಲೆಖ್ಖವಿಲ್ಲ. ಅವರು ಹೋದ ಕಡೆಯಲ್ಲೆಲ್ಲ ಸಂಗೀತದಲ್ಲಿ ಪ್ರೀತಿ ಇರುವವರಿಗೆ ಹಬ್ಬವೇ. ಶ್ರೀಮಂತರು, ಜಮೀನ್ದಾರರು ಅವರಿಗೆ ನಾನಾ ರೀತಿಗಳಲ್ಲಿ ಸನ್ಮಾನ ಮಾಡಿದರು; ಕಂಠಾಭರಣ ಕೊಟ್ಟರು, ಶಾಲುಗಳನ್ನು ಕೊಟ್ಟರು, ಪಲ್ಲಕ್ಕಿಯಲ್ಲಿ ಕೂಡಿಸಿದರು. ಹೀಗೆ ಹತ್ತಾರು ಸ್ಥಳಗಳಲ್ಲಿ ಸಾವಿರಾರು ಮಂದಿಗೆ ಸಂಗೀತದ ಅಮೃತವನ್ನೇ ಕೊಟ್ಟು, ಅಣ್ಣ ತಮ್ಮಂದಿರು ವೈಯ್ಯಾಚೇರಿಗೆ ಹಿಂದಿರುಗಿದರು.

ಇಂದಿನಿಂದ ಮಹಾ ವೈದ್ಯನಾಥ ಅಯ್ಯರ್ ಶಿವನ್ ಸಹೋದರರು ತಿರುನಲ್ವೇಲಿ ಜಿಲ್ಲೆಯಲ್ಲೆಲ್ಲಾ ಸಂಚಾರ ಮಾಡಿ ನಡೆಸಿಕೊಟ್ಟ ಸಂಗೀತ ಕಛೇರಿಗಳು ಮತ್ತು ಶಿವಕಥಾ ಕಾಲಕ್ಷೇಪಗಳು ಮನೆಮಾತಾಗಿ ಬೆಳೆದವು. ಕಲ್ಲಡೈ ಕುರ್ಚಿಯಲ್ಲಿರುವ ಪಂಡಾರಂ ಸನ್ನಿಧಿಗೆ ಸೇರಿದ ಮಠದಲ್ಲಿ ಸುಬ್ರಹ್ಮಣ್ಯ ದೇಶಿಕರು ಮಾಠಾಧಿಪತಿಗಳಾಗಿದ್ದರು. ಅವರು ಸಂಗೀತ, ಸಾಹಿತ್ಯ, ಕಲೆಗಳಿಗೆ ಪೋಷಕರಾಗಿದ್ದರು. ತಾವು ಪ್ರತಿ ವರ್ಷವೂ ಕಾರ್ತಿಕ ಮಾಸದಲ್ಲಿ ನಡೆಸುವ ಗುರುಪೂಜೆ ಸುಮಯಕ್ಕೆ ಬರುವಂತೆ ಶಿವನ್ ಸಹೋದರರನ್ನು ಆಹ್ವಾನಿಸಿ ದರು. ಆ ಮಠದಲ್ಲಿ ಶಿವಗಂಗೆ ಪೆರಿ ವೈದ್ಯನಾಥ ಅಯ್ಯರ್, ಚಿನ್ನ ವೈದ್ಯನಾಥ ಅಯ್ಯರ್ ಮತ್ತು ವೀಣೆ ಚಿನ್ನಯ್ಯ ಭಾಗವತರೇ ಮೊದಲಾದ ಬಹು ಪ್ರಸಿದ್ಧ ಪ್ರತಿಭಾವಂತ ಸಂಗೀತಗಾರರು ಆಸ್ಥಾನ ವಿದ್ವಾಂಸರಾಗಿದ್ದರು.

ದೇಶಿಕರು ಶಿವನ್ ಸಹೋದರರ ಸಂಗೀತ ಕಛೇರಿ ಮತ್ತು ಶಿವಕಥಾ ಕಾಲಕ್ಷೇಪವನ್ನು ಮಾಡಿಸಿ ಕೇಳಿದರು. ಅಂತಹ ಚಿಕ್ಕ ವಯಸ್ಸಿನಲ್ಲಿ ಸಂಗೀತದಲ್ಲಿ ಮತ್ತು ಸಾಹಿತ್ಯದಲ್ಲಿ ಅಷ್ಟು ಉತ್ತಮ ಜ್ಞಾನವನ್ನು ಪಡೆದಿರುವುದನ್ನು ಕಂಡು ಸಂತೋಷಿಸಿದರು. ಅವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿಕೊಳ್ಳ ಬಹುದು ಎಂದುಕೊಂಡರು.

ಆ ವರ್ಷ ನಡೆದ ಗುರುಪೂಜೆಯ ಮಾರನೆ ದಿನ, ಸಂಸ್ಥಾನದ ವಿದ್ವಾಂಸರಾಗಿದ್ದ ಪೆರಿ ವೈದ್ಯನಾಥ ಅಯ್ಯರ್ ಮತ್ತು ಚಿನ್ನ ವೈದ್ಯನಾಥ ಅಯ್ಯರ್‌ಗಳ ಸಂಗೀತ ನಡೆಯುತ್ತಿತ್ತು. ಅವರಿಬ್ಬರ ಸಂಗೀತ ಎಂದರೆ ಕೇಳುವವರಿಗೆ ಹಬ್ಬ. ಆ ಸಮಯದಲ್ಲಿ ದೇಶಿಕರ ಮನಸ್ಸಿಗೆ ಒಂದು ಯೋಚನೆ ಬಂದಿತು. ತರುಣ ವೈದ್ಯನಾಥ ಅಯ್ಯರವರ ಸಂಗೀತವನ್ನು ಕೇಳಿ ಸಂತೋಷಪಟ್ಟಿದ್ದರು. ಅವರನ್ನು ಮುಂದೆ ತಂದು ಸನ್ಮಾನ ಮಾಡಬೇಕು ಎನ್ನಿಸಿತು. ತರುಣ ವೈದ್ಯನಾಥ ಅಯ್ಯರನ್ನು ಕುರಿತು ದೇಶಿಕರು, “ಈಗ ಹಾಡುತ್ತಿರುವ ಹಿರಿಯ ವಿದ್ವಾಂಸರೊಡನೆ ಸೇರಿ ಹಾಡಬಲ್ಲಿರಾ?” ಎಂದು ಕೇಳಿದರು. ತರುಣ ವೈದ್ಯನಾಥ ಅಯ್ಯರ್, “ನಾನು ಹಾಡಲಾರೆನೆಂದು ಸನ್ನಿಧಾನ ಸಂಶಯ ಪಡಲು ಕಾರಣವಿಲ್ಲ. ಸನ್ನಿಧಾನದ ಪ್ರೀತ್ಯಾದರವಿದ್ದು, ಈಶ್ವರ ಕೃಪೆಯಿಂದ ಸಮಯ ದೊರೆತರೆ ಹಾಡಲು ಸಿದ್ಧನಿದ್ದೇನೆ. ನನಗೂ ಅವರೊಡನೆ ಸೇರಿ ಹಾಡಬೇಕೆನ್ನುವ ಆಸೆ ಇದೆ. ಹಿರಿಯರೊಡನೆ ಸೇರಿ ಹಾಡಿದರೆ ಅವರ ಆಶೀರ್ವಾದವೂ ಒದಗುವುದು’ ಎಂದರು. ದೇಶಿಕರು ಪೆರಿ ವೈದ್ಯನಾಥ ಅಯ್ಯರಿಗೂ ಚಿನ್ನ ವೈದ್ಯನಾಥ ಅಯ್ಯರಿಗೂ, “ನಮಗೆ ತಾವುಗಳೂ ಈ ತರುಣ ವೈದ್ಯನಾಥಯ್ಯರೂ ಸೇರಿ ಒಟ್ಟಿಗೆ ಹಾಡುವುದನ್ನು ಕೇಳುವ ಅಪೇಕ್ಷೆ ಇದೆ. ಹಿರಿಯರಾದ ತಾವುಗಳು ನಡೆಸಿಕೊಡಬಹುದೇ?” ಎಂದು ಕೇಳಿದರು. ಆಗ ಪೆರಿ ವೈದ್ಯನಾಥ ಅಯ್ಯರ್, “ನಾನು ಮತ್ತು ನನ್ನ ತಮ್ಮ, ಏಳು ವರ್ಷಗಳ ಹಿಂದೆಯೇ ಈ ಸಹೋದರರ ಮನೆಯಲ್ಲಿ ಇವರಿಂದ ಸಂಗೀತ ಹಾಡಿಸಿ ಕೇಳಿ ಸಂತೋಷಿಸಿದವೆ. ಅವರ ಮೊದಲ ಸಂಗೀತ ಕಛೇರಿ ಏರ್ಪಡಿಸಿದವರೂ ನಾವೇ. ಈಗ ಈ ಏಳು ವರ್ಷಗಳಲ್ಲಿ ಇನ್ನೂ ಹೆಚ್ಚಿನ ಪಾಂಡಿತ್ಯ ಪಡೆದಿರುವ ಇವರೊಡನೆ ಸೇರಿ ಹಾಡುವುದು ನಮಗೂ ಸಂತೋಷವೇ” ಎಂದರು.

ಮೊದಲು ಹಿರಿಯರಾದ ಪೆರಿ ವೈದ್ಯನಾಥ ಅಯ್ಯರ್ ಕಲ್ಯಾಣಿ ರಾಗವನ್ನು ವಿಮರ್ಶಾತ್ಮಕವಾಗಿ ಹಾಡಿ, ಶ್ಯಾಮ ಶಾಸ್ತ್ರಿಗಳ ‘ಖಿರಾನವರ ಲಿಚ್ಚಿ’ ಎಂಬ ಕೃತಿಯನ್ನು ತಮ್ಮ ಘನ ಶಾರೀರದಿಂದ ಹಾಡಿ ನಿಲ್ಲಿಸಿದಾಗ ಜನಸ್ತೋಮ ಕರತಾಡನ ಮಾಡಿತು.

ಎರಡನೆಯವರಾದ ಚಿನ್ನ ವೈದ್ಯನಾಥ ಅಯ್ಯರ್ ಕಾಂಭೋಜಿ ರಾಗವನ್ನು ಅತ್ಯುತ್ತಮವಾಗಿ ಹಾಡಿ, ಅರುಣಾಚಲ ಕವಿರಾಯರ ರಾಮಾಯಣ ಕೀರ್ತನೆಯಾದ “ಎಪ್ಪಡಿ ಮನಂ ತಣಿಂದದೋ ಸಾಮಿ” ಎಂಬುದನ್ನು ಹಾಡಿದಾಗ ಜನರು ಕೇಳಿ ತುಂಬ ಮೆಚ್ಚಿದರು. ಅನಂತರ ದೊಡ್ಡ ವೈದ್ಯನಾಥ ಅಯ್ಯರ್ ತರುಣ ವೈದ್ಯನಾಥರನ್ನು ಪ್ರೋತ್ಸಾಹಿಸುತ್ತಾ, “ಈ ದಿನ ಬಹಳ ಶುಭದಿನ. ನಿನ್ನ ಮುಂದಿನ ಪುರೋಭಿವೃದ್ಧಿಗೆ ನಾಂದಿ . ಮನ ಬಿಚ್ಚಿ ಸಂತೋಷದಿಂದ ಹಾಡು” ಎಂದು ಸೂಚಿಸಿದರು.

ಹಿರಿಯರಿಗೆ ವಂದಿಸಿ ತರುಣ ವೈದ್ಯನಾಥ ಅಯ್ಯರ್ ಅಲ್ಲಿಯವರೆಗೂ ಯಾರೂ ಕೇಳರಿಯದ ಚಕ್ರವಾಕ ರಾಗದಲ್ಲಿ ತಮ್ಮ ಅಮೋಘವಾದ ಶಾರೀರದಿಂದ ತ್ಯಾಗರಾಜರ ‘ಸುಗುಣ ಮಾಲೆ’ ಎಂಬ ಅಪೂರ್ವ ಕೀರ್ತನೆಯನ್ನು, ಅಪೂರ್ವ ರೀತಿ ಯಲ್ಲಿ ಹಾಡಿದರು. ಕೇಳಿದವರು ಸಂತೋಷದಿಂದ ಮೂಕ ರಾದರು. ಅವರು ಹಾಡಿದ ರಾಗ ಯಾರಿಗೂ ತಿಳಿಯಲಿಲ್ಲ. ಅವರೇ ಅದರ ವಿವರಣೆಯನ್ನು ಕೊಟ್ಟರು. ದೊಡ್ಡ ವೈದ್ಯನಾಥ ಅಯ್ಯರ್ ಬಹು ಸಂತೋಷದಿಂದ, “ಬಹಳ ಚೆನ್ನಾಗಿ ಹಾಡಿದೆ. ಬಹು ಭಾವಯುತವಾದ ಸಂಗೀತ” ಎಂದು ಕೊಂಡಾಡಿದರು.

ಶಂಕರಾಭರಣ ರಾಗವನ್ನು ಪಲ್ಲವಿಗಾಗಿ ಮೂವರೂ ಸೇರಿ ಹಾಡಿ ಮುಗಿಸಿದರು. ಅಂದು ಸಂಗೀತವನ್ನು ಕಳಿದವರು ತಾವೇ ಭಾಗ್ಯವಂತರು ಎಂದುಕೊಂಡರು. ದೇಶಿಕರ ಸಂತೋಷಕ್ಕೆ ಮೇರೆಯೇ ಇಲ್ಲವಾಯಿತು.

ದೇಶಿಕರು ದೊಡ್ಡ ವೈದ್ಯನಾಥ ಅಯ್ಯರಿಗೆ ಹೇಳಿದರು: “ತಾವು ಮೂವರೂ ಈ ದಿವಸ ಅಪೂರ್ವವಾದ ಸಂಗೀತ ಕಛೇರಿಯನ್ನು ನಡೆಸಿಕೊಟ್ಟಿದ್ದೀರಿ. ಕೇಳಿರುವ ವಿದ್ವಾಂಸರಿಗೂ ಸಭಿಕರಿಗೂ ಮತ್ತು ನಮಗೂ ತುಂಬಾ ಸಂತೋಷವಾಗಿದೆ. ಇದರ ಸವಿನೆನಪಿಗಾಗಿ ಒಂದು ಒಳ್ಳೆಯ ಹೆಸರನ್ನು  ತರುಣ ವೈದ್ಯನಾಥ ಅಯ್ಯರಿಗೆ ಕೊಡುವಂತೆ ತಾವು ಸೂಚಿಸ ಬಹುದಲ್ಲ?”

“ಸಂತೋಷ, ಈಗ ನಮ್ಮಿಬ್ಬರನ್ನೂ ದೊಡ್ಡ ವೈದ್ಯನಾಥ ಅಯ್ಯರ್ ಮತ್ತು ಚಿಕ್ಕ ವೈದ್ಯನಾಥ ಅಯ್ಯರ್ ಎಂದು ಕರೆಯು ವುದು ವಾಡಿಕೆಯಾಗಿ ಬಂದಿದೆ. ಈಗ ಇವರು ಈ ವಯಸ್ಸಿಗೇ ಉತ್ತಮ ಜ್ಞಾನ ಸಂಪಾದಿಸಿರುತ್ತಾರೆ. ಮುಂದೆ ಲೋಕವನ್ನೇ ಬೆಳಗುವವರು. ತಾವೂ ನೆರೆದಿರುವ ವಿದ್ವಾಂಸರೂ ಮತ್ತು ಸಭಿಕರೂ ಒಪ್ಪುವುದಾದರೆ ಇವರನ್ನು ಇನ್ನು ಮುಂದೆ ‘ಮಹಾ ವೈದ್ಯನಾಥ ಅಯ್ಯಯ್ಯರ್’ ಎಂದೇ ಕರೆಯುವುದು ಉಚಿತವಾಗಿ ಕಾಣುತ್ತದೆ.”

ಹೆಸರನ್ನು ಕೇಳಿದ ಮಠಾಧಿಪತಿಗಳು ಬಹಳ ತೃಪ್ತಿಪಟ್ಟು ದೊಡ್ಡ ವೈದ್ಯನಾಥ ಅಯ್ಯರವರ ವಿಶಾಲ ಮನೋವೃತ್ತಿಯನ್ನು ಹಾಡಿಹೊಗಳಿದರು. ತರುಣ ವೈದ್ಯನಾಥ ಅಯ್ಯರವರ ವಿಷಯದಲ್ಲಿ ಯಾವ ಅಸೂಯೆಯೂ ಇಲ್ಲದೆ, ಅವರನ್ನು ಎಲ್ಲರೆದುರಿಗೆ ಹೀಗೆ ಮೆಚ್ಚಿಕೊಂಡ ಹಿರಿಯ ಸಂಗೀತ ವಿದ್ವಾಂಸರ ಔದಾರ್ಯ ಕಲಾವಿದರಿಗೆಲ್ಲ ಆದರ್ಶ. ವಿದ್ವಾಂಸರು ಮತ್ತು ಸಭಿಕರು ದೊಡ್ಡ ವೈದ್ಯನಾಥ ಅಯ್ಯರವರ ಸೂಚನೆ ಯನ್ನು ಸ್ವಾಗತಿಸಿದರು. ದೇಶಿಕರು ತರುಣ ವೈದ್ಯನಾಥ ಅಯ್ಯರನ್ನು ಹತ್ತಿರ ಕೆರೆದು, ದೊಡ್ಡ ವೈದ್ಯನಾಥ ಅಯ್ಯರವರ ಹಸ್ತದಿಂದ ಎರಡು ಕೈಗಳಿಗೂ ತೋಡಾವನ್ನು ತೊಡಿಸಿ, ಕಂಠಕ್ಕೆ ರುದ್ರಾಕ್ಷಿ ಹಾರವನ್ನು ಹಾಕಿಸಿ, ಪೀತಾಂಬರ ಮತ್ತು ಶಾಲು ಜೋಡಿ ಹೊದಿಸಿ, ಮಹಾ ವೈದ್ಯನಾಥರೆಂದು ಹೊಗಳಿ ಸಭೆಯಲ್ಲಿ ಗೌರವಿಸಿದರು. ಹಿರಿಯ ವಿದ್ವಾಂಸರುಗಳಿಗೂ ಸಂಸ್ಥಾನದ ಮರ್ಯಾದೆಗೆ ತಕ್ಕಂತೆ ಸನ್ಮಾನವನ್ನು ಮಾಡಿ ಮುಂದೆ ಶಿವನ್ ಸಹೋದರರನ್ನು ಸನ್ನಿಧಾನದ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿದರು.

 

ವೈದ್ಯನಾಥ ಅಯ್ಯರರು ಮಹಾ ವೈದ್ಯನಾಥ ಅಯ್ಯರ್ ಎಂದು ಸನ್ಮಾನ ಪಡೆದರು.

ಸನ್ಮಾನ

 

ಮಹಾ ವೈದ್ಯನಾಥ ಅಯ್ಯರ್ ಅವರಿಗೆ ಇಪ್ಪತ್ತೆರಡು ವರ್ಷವಾಗಿದ್ದಾಗ ಕಾಮಾಕ್ಷಿ ಎಂಬ ಹುಡುಗಿಯೊಡನೆ ಮದುವೆಯಾಯಿತು.

ಅಯಿಲಂ ತಿರುನಾಳ್ ಮಹಾರಾಜರು ತಿರುವಾಂಕೂರು ಸಂಸ್ಥಾನಾಧಿಪತಿಗಳಾಗಿ ೧೮೬೬ರಲ್ಲಿ ಆಳುತ್ತಿದ್ದರು. ಮಹಾ ರಾಜರು ತಾವೇ ಉತ್ತಮವಾಗಿ ಹಾಡುವವರಾಗಿದ್ದು, ಕಲೆಗಳಿಗೆ ಉತ್ತಮ ಪೋಷಕರಾಗಿದ್ದರು. ಮಹಾ ವೈದ್ಯನಾಥ ಅಯ್ಯರ್‌ರ ಪ್ರತಿಭೆಯನ್ನು ಕೇಳಿ ತಿಳಿದ ಅರಸು ತಮ್ಮಲ್ಲಿಗೆ ಅವರನ್ನು ಬರಮಾಡಿಕೊಂಡರು. ತಿರುವನಂತಪುರಕ್ಕೆ ಮಹಾರಾಜರ ಕೋರಿಕೆಯಂತೆ ಬಂದು ಎರಡು ತಿಂಗಳುಗಳ ಕಾಲ ಅವರು ಅತಿಥಿಯಾಗಿದ್ದು ೨೫ ಕಛೇರಿಗಳನ್ನು ಮಾಡಿ ಮುಗಿಸಿದರು.

ಮೊದಲು ಕೆಲವು ಸಂಗೀತ ಕಛೇರಿಗಳನ್ನು ಹಾಡಿಸಿ ಕೇಳಿದ ಮಹಾರಾಜರು ಅವರ ಸಾಮರ್ಥ್ಯವನ್ನು ಅರಿತು ತಮ್ಮ ಸಂಸ್ಥಾನ ವಿದ್ವಾಂಸರಾದ ರಾಘವಯ್ಯರೊಡನೆ ಸೇರಿ ಹಾಡು ವಂತೆ ೬ ಕಛೇರಿಗಳನ್ನು ಮಾಡಿಸಿ ಕೇಳಿದರು. ಇಬ್ಬರಿಂದಲೂ ಪ್ರತಿದಿನವೂ ಒಂದೊಂದೇ ರಾಗವಾಗಿ ತೋಡಿ, ಶಂಕರಾ ಭರಣ, ಭೈರವಿ, ಕಾಂಭೋಜಿ, ಹುಸೇನಿ ಮತ್ತು ಆನಂದಭೈರವಿ ರಾಗಗಳನ್ನು ವಿಸ್ತಾರವಾಗಿ ಹಾಡಿಸಿ ಕೇಳಿ ಸಂತೋಷಿಸಿದರು. ಹುಸೇನಿ ರಾಗವನ್ನು ಹಾಡಿದ ದಿವಸ ಮಹಾ ವೈದ್ಯನಾಥ ಅಯ್ಯರ್ ಅವರ ಕೋರಿಕೆಯಂತೆ ಮಹಾರಾಜರೂ ಸೇರಿ ಹಾಡಿದರು.

ಮಹಾರಾಜರು ರಾಘವಯ್ಯವರನ್ನೂ ವೀಣೆ ಕಲ್ಯಾಣ ಕೃಷ್ಣ ಭಾಗವತರನ್ನೂ ಸನ್ಮಾನಿಸಿ, ಮಹಾ ವೈದ್ಯನಾಥ ಅಯ್ಯರಿಗೆ ಪಚ್ಚೆಯ ಕಂಠಾಭರಣ, ಕೈಗಳಿಗೆ ತೋಡಾ, ಸಂಸ್ಥಾನದ ಅತ್ಯುತ್ತಮ ಬಹುಮಾನವೆಂದು ಪರಿಗಣಿಸಿರುವ ಹಸಿರು ಪೀತಾಂಬರವೇ ಮೊದಲಾದ ರಾಜಮರ್ಯಾದೆಗೆ ತಕ್ಕ ವಸ್ತ್ರಾಭರಣಗಳನ್ನು ಕೊಟ್ಟು ಸನ್ಮಾನಿಸಿದರು. ಮಹಾ ವೈದ್ಯನಾಥ ಅಯ್ಯರ್ ಮೂರನೇ ಸಲ ಭೇಟಿ ಇತ್ತಾಗ ವಿಶಾಖಂ ತಿರುನಾಳ್ ಮಹಾರಾಜರು ರಾಜ್ಯವಾಳುತ್ತಿದ್ದರು. ಅವರೂ ಉತ್ತಮ ಕಲಾಪೋಷಕರಾಗಿದ್ದು ಮತ್ಯಾರಿಗೂ ನೀಡದಿದ್ದ ರೀತಿಯ ಸನ್ಮಾನವನ್ನು ಮಹಾ ವೈದ್ಯನಾಥ ಅಯ್ಯರ್ ಅವರಿಗೆ ನೀಡಿದರು. ಇನ್ನೂ ಹೆಚ್ಚಿನದೆಂದರೆ ಶಿವನ್‌ರವರ ಶಿವಪೂಜಾ ಕ್ರಮವನ್ನು ಅರಿತು ಪೂಜೆಗೆ ಬೇಕಾಗುವ ಬೆಳ್ಳಿ ಮಂಟಪ, ಪೂಜಾಪಾತ್ರೆಗಳನ್ನು ಬೇಳ್ಳಿಯಲ್ಲೇ ಮಾಡಿಸಿ,  ವೇದಘೋಷದೊಡನೆ ಕೊಟ್ಟು ಸನ್ಮಾನಿಸಿರುವುದು ಮತ್ಯಾವ ಕಲಾವಿದರೂ ಪಡೆಯದೇ ಇರುವ ಉನ್ನತ ಸನ್ಮಾನ.

ಇದೇ ರೀತಿ ರಾಮನಾಥಪುರದ ಮಹಾರಾಜರಿಂದಲೂ ಮಹಾ ವೈದ್ಯನಾಥ ಅಯ್ಯರ್ ಮತ್ತೆಮತ್ತೆ ಸನ್ಮಾನ ಪಡೆದರು.

೧೦೮ ತಾಳಗಳಲ್ಲಿ ಸಿದ್ಧಿ

ಸಾಮಾನ್ಯವಾಗಿ ಸಂಗೀತದಲ್ಲಿ ಸೂಳಾದಿಸಪ್ತತಾಳಗಳು ಹಾಗೂ ಅದರ ಪ್ರಭೇದಗಳಾದ ೩೫ ತಾಳಗಳು ಮಾತ್ರವೇ ಹೆಚ್ಚು ರೂಢಿಯಲ್ಲಿರುವುದು,. ಇವುಗಳನ್ನು ಬಿಟ್ಟರೆ ೧೦೮ ತಾಳಗಳು ಕಷ್ಟವಾದವು. ಅವನ್ನು ತಿಳಿದು ಹಾಡುವುದು ಒಂದು ಸಿದ್ಧಿ. ಈ ಸಿದ್ಧಿಯನ್ನು ಪಡೆದವರಲ್ಲಿ ಮತ್ತು ಅನೇಕ ಸಂದರ್ಭಗಳಲ್ಲಿ ಹಾಡಿ ತೋರಿಸಿ ಕೀರ್ತಿಗಳಿಸಿದ್ದವರಲ್ಲಿ ಮಹಾ ವೈದ್ಯನಾಥ ಶಿವನ್‌ರವರು ಉನ್ನತ ಸ್ಥಾನ ಗಳಿಸಿದ್ದವರು.

ಮದರಾಸಿನಲ್ಲಿ ತಮ್ಮ ಕಛೇರಿಯನ್ನು ನಡೆಸಲು ಹೋಗಿ ಹೆಚ್ಚುಕಾಲ ತಂಗಿರುವಾಗ, ಅವರ ಸಂಗೀತವನ್ನು ಕೇಳಿ ಮೆಚ್ಚಿದ ಜನರು ಮತ್ತು ವಿದ್ವಾಂಸರು ಪಲ್ಲವಿ ಶೇಷಯ್ಯನವರನ್ನು ಮುಂದಿಟ್ಟುಕೊಂಡು ಮಹಾ ವೈದ್ಯನಾಥ ಶಿವನ್‌ರವರಲ್ಲಿಗೆ ಬಂದು ಅಪೂರ್ವ ತಾಳವಾದ ೧೨೮ ಎಣಿಕೆಯ, ಸಿಂಹ ನಂದನ ತಾಳದಲ್ಲಿ ಒಂದು ಪಲ್ಲವಿಯನ್ನು ಹಾಡಲು ಕೇಳಿಕೊಂಡರು. ಆ ಸಮಯದಲ್ಲಿ ಪಕ್ಕವಾದ್ಯಗಳಿರಲಿಲ್ಲ. ಪಕ್ಕವಾದ್ಯ ಗಳಿಲ್ಲದೆ ಹಾಡುವುದು ಸಂಗೀತಗಾರರಿಗೆ ಕಷ್ಟ, ಶ್ರಮ ಹೆಚ್ಚು.

ಆದರೂ ಶಿವನ್‌ರವರು ತಂಬೂರಿ ಶ್ರುತಿಯೊಡನೆ ಕಲ್ಯಾಣಿ ರಾಗ ಮತ್ತು ತಾನವನ್ನು ಹಾಡಿ ಮುಗಿಸಿ, ’ಗೌರಿ ನಾಯಕ’ ಎಂಬ ಪಲ್ಲವಿಯನ್ನು ಆ ಅಪೂರ್ವ ತಾಳದಲ್ಲಿ ಉತ್ತಮ ರೀತಿಯಾಗಿ ಹಾಡಿ, ನೆರವಲ್ ಮತ್ತು ಸ್ವರಕಲ್ಪನೆಯೊಡನೆ ಮುಗಿಸಿದರು. ನೆರೆದಿದ್ದ ಯಾವ ವಿದ್ವಾಂಸರಿಗೂ ಸರಿಯಾಗಿ ತಾಳ ಹಾಕಲು ಸಾಧ್ಯವಾಗಲಿಲ್ಲ. ಕೇಳಿದವರು ಆಶ್ಚರ್ಯ ಪಟ್ಟರು, ಸಂತೋಷಪಟ್ಟರು. ಅವರ ಪಾಂಡಿತ್ಯಕ್ಕಾಗಿ ಮೆಚ್ಚಿ ತಮ್ಮ ಗೌರವವನ್ನು ಸೂಚಿಸಿದರು.

ಮದರಾಸಿನಲ್ಲಿ ಶಿವನ್‌ರವರು ಹಾಡಿದ ಸಿಂಹನಂದನ ತಾಳದ ಪಲ್ಲವಿಯ ವಿಷಯವು ಎಲ್ಲೆಡೆಯಲ್ಲೂ ಹಬ್ಬಿನಾಡಿನ ಮಾತಾಯಿತು. ಅನೇಕ ಮಂದಿ ರಾಜಮಹಾರಾಜರು, ಶ್ರೀಮಂತರು ಅವರನ್ನು ಆಹ್ವಾನಿಸಿದರು. ಅಪೂರ್ವ ರಾಗ ಗಳನ್ನು ಅವರಿಂದ ಕೇಳಬೇಕೆಂದು ಬಯಸಿದರು. ಆ ಕಾಲದ ಅತಿ ಶ್ರೇಷ್ಠ ಸಂಗೀತಗಾರರು ಹಾಡಿದ ಆಸ್ಥಾನಗಳಲ್ಲಿಯೇ ಅವರ ಸಮ್ಮುಖದಲ್ಲಿಯೇ ಮಹಾ ವೈದ್ಯನಾಥ ಅಯ್ಯರ್ ಹಾಡಿದರು. ಬಹುಮಂದಿ ಸಂಗೀತ ವಿದ್ವಾಂಸರೇ ಹಾಡದಿದ್ದ ರಾಗಗಳನ್ನು ಅವರು ಹಾಡಿ ಎಲ್ಲರನ್ನೂ ಸಂತೋಷ ಗೊಳಿಸಿದರು.

ಮೈಸೂರಿನಲ್ಲಿ

ಮಹಾರಾಜ ಚಾಮರಾಜ ಒಡೆಯರು ವೈಸೂರು ರಾಜ್ಯವನ್ನು (೧೮೬೮-೧೮೯೪) ಆಳುತ್ತಿದ್ದ ಕಾಲದಲ್ಲಿ, ಅವರಿಂದ ಆಹ್ವಾನಿತರಾಗಿ, ಮಹಾ ವೈದ್ಯನಾಥ ಶಿವನ್ ಮೂರು ಸಲ ಬೇರೆಬೇರೆ ವರ್ಷಗಳಲ್ಲಿ ಬಂದು ತಮ್ಮ ಸಂಗೀತ ಕಛೇರಿಗಳಿಂದ ಮಹಾರಾಜರನ್ನು ಮತ್ತು ವಿದ್ವಾಂಸರುಗಳನ್ನು ಸಂತೋಷಪಡಿಸಿ ಸನ್ಮಾನಿತರಾದರು. ಅವರು ಮೈಸೂರಿಗೆ ಬಂದಾಗ ವೀಣೆ ಶಾಮಣ್ಣ, ವೀಣೆ ಶೇಷಣ್ಣ ಮತ್ತು ವೀಣಾಬಕ್ಷಿ ಸುಬ್ಬಣ್ಣ- ಇವರು ಆಸ್ಥಾನ ವಿದ್ವಾಂಸರಾಗಿದ್ದರು. ಪ್ರತಿ ಸಲ ಬಂದಾಗಲೂ ಹೆಚ್ಚು ಕಾಲ ನಿಂತು ಅನೇಕ ಸಂಗೀತ ಕಛೇರಿಗಳನ್ನು ಮಾಡಿಸಿ ಕೇಳಿದ ಮಹಾರಾಜರು ಪುಳಕಿತರಾಗಿ ಉನ್ನತವಾದ ಕಂಠೀಹಾರ, ತೋಡಾ, ಖಿಲ್ಲತ್ತು ಮತ್ತು ಸಂಭಾವನೆಯನ್ನು ಕೊಟ್ಟು ಆದರಿಸಿದರು. ಒಂದು ಸಲ ಅರಮನೆಯಲ್ಲಿ ಅವರು ಹಾಡುತ್ತಿದ್ದಾಗ, ಅವರಿಗೆ ಅರಿವಿಲ್ಲದಂತೆ ಅವರ ಸಂಗೀತವನ್ನು ಧ್ವನಿಮುದ್ರಿಸಿ, ಕಛೇರಿ ಮುಗಿದ ನಂತರ ಮಹಾ ವೈದ್ಯನಾಥ ಶಿವನ್ ಕೇಳುವಂತೆ ಹಾಕಿದರು. ಶಿವನ್‌ರವರು ತಮ್ಮ ಸಂಗೀತವನ್ನು ತಾವೇ ಕೇಳಿ ತುಂಬಾ ಆನಂದಪಟ್ಟರು. ದುರದೃಷ್ಟವಶಾತ್ ಆ ಧ್ವನಿ ಮುದ್ರಿಕೆಯು ಈಗ ಕಳೆದಿರುವುದು ಸಂಗೀತ ಪ್ರಪಂಚಕ್ಕಾಗಿರುವ ಅಪಾರ ನಷ್ಟ.

ವೈದ್ಯನಾಥ ಶಿವನ್ ಅರಮನೆಯಲ್ಲಿ ಹಾಡಿದ್ದಲ್ಲದೆ, ವೀಣೆ ಶೇಷಣ್ಣ, ವೀಣಾಬಕ್ಷಿ ಸುಬ್ಬಣ್ಣನವರ ಮನೆಗಳಲ್ಲಿ ತಮ್ಮ ಸಂಗೀತವನ್ನು ನಡೆಸಿ ಪುರಜನರನ್ನು ಮತ್ತು ವಿದ್ವಾಂಸರನ್ನು ಸಂತೋಷಪಡಿಸಿದರು.

ವೀಣಾಬಕ್ಷಿ ಸುಬ್ಬಣ್ಣನವರ ಮನೆಯಲ್ಲಿ ಒಂದು ಸಲ ವೈದ್ಯನಾಥ ಶಿವನ್‌ರವರು ಹಾಡುವಾಗ, ಭೈರವಿ ರಾಗವನ್ನು ಪಲ್ಲವಿ ಹಾಡುವುದಕ್ಕಾಗಿ ಆಯ್ಕೆಮಾಡಿ ಅತ್ಯುತ್ತಮವಾಗಿ ಹಾಡುತ್ತಿದ್ದರು. ಆಗ ಸಭೆಯಲ್ಲಿದ್ದ ವೀಣೆ ಶಾಮಣ್ಣನವರು ಕೇಳಿ ತುಂಬಾ ಸಂತೋಷಿಸಿದರು. ಅನಂತರ ಮಹಾ ವೈದ್ಯನಾಥ ಅಯ್ಯರಿಗೆ, “ಒಂದುನೂರ ಎಂಟು ತಾಳಗಳಲ್ಲಿ ಒಂದಾದ ವಿಲೋಹಿತಂ ಎಂಬ ತಾಳದಲ್ಲಿ ತಾವು ಪಲ್ಲವಿ ಹಾಡುವುದನ್ನು ಕೇಳಬೇಕು ಎಂದು ನಮ್ಮೆಲ್ಲರ ಅಪೇಕ್ಷೆ. ದಯೆಯಿಟ್ಟು ನಡೆಸಿಕೊಡಬೇಕು” ಎಂದರು.

ಮಹಾ ವೈದ್ಯನಾಥ ಅಯ್ಯರ್ ಅವರಿಗೆ ವಿಲೋಹಿತಂ ತಾಳದ ಪರಿಚಯವಿರಲಿಲ್ಲ. ಅವರು ಅದನ್ನು ಅಭ್ಯಾಸ ಮಾಡಿರಲಿಲ್ಲ. ಚೆನ್ನಾಗಿ ಅಭ್ಯಾಸ ಮಾಡಿದವರಿಗೇ ಆ ತಾಳದಲ್ಲಿ ಹಾಡುವುದು ಕಷ್ಟ.

ಅವರು ಶಾಮಣ್ಣನವರ ಮಾತನ್ನು ಕೇಳಿದರು. “ಸರಿ, ತಾವು ಹಾಗೆ ಅಪೇಕ್ಷೆ ಪಡುವುದು ಸಂತೋಷ. ವಿಲೋಹಿತಂ ತಾಳದ ಅಂಗವೇನು?” ಎಂದು ಕೇಳಿದರು. ಶಾಮಣ್ಣನವರು ವಿವರಿಸಿದರು.

ಶಿವನ್‌ರವರು ‘ಸರಿ’ ಎಂದು ತಾವು ಎಷ್ಟೋ ದಿವಸ ಅಭ್ಯಾಸ ಮಾಡಿದವರಂತೆ ‘ಹರಹರಶಂಕರ’ ಎಂಬ ಸಮ ಎಡಿಪಿನ ಪಲ್ಲವಿಯನ್ನು ವಿಸ್ತಾರವಾಗಿ ಎಲ್ಲ ವಿದ್ವಾಂಸರೂ ಕೇಳಿ ಮೆಚ್ಚುವಂತೆ ಹಾಡಿ, ನೆರವಲ್ ಮತ್ತು ಸ್ವರ ಕಲ್ಪನೆಯನ್ನು ಮಾಡಿ ಮುಗಿಸಿದರು. ನೆರೆದಿದ್ದ ಜನರೆಲ್ಲರೂ ಅದ್ಭುತ ಎಂದು ಸಂತೋಷಪಟ್ಟರು. ವೀಣೆ ಬಕ್ಷಿ ಸುಬ್ಬಣ್ಣನವರು ಆ ಅತ್ಯುತ್ತಮ ವಾದ ಸಂಗೀತವನ್ನು ಕೇಳಿ ಮಹದಾನಂದಪಟ್ಟು, ಮಹಾ ರಾಜರು ಮಾಡಿದ್ದ ಸನ್ಮಾನಕ್ಕಿಂತಲೂ ಮಿಗಿಲಾದ ಸನ್ಮಾನವನ್ನು ಆ ಸಭೆಯಲ್ಲಿ ಮಹಾ ವೈದ್ಯನಾಥ ಶಿವನ್‌ವರಿಗೆ ಮಾಡಿದರು.

ಶೃಂಗೇರಿಗೆ ಭೇಟಿ

ಮೈಸೂರಿಗೆ ಭೇಟಿ ಇತ್ತ ಸಮಯದಲ್ಲಿಯೇ ಎರಡು ಸಲ ಮಹಾವೈದ್ಯನಾಥ ಶಿವನ್‌ರವರು, ತಮ್ಮ ಪರಮ ಗುರುಗಳಾಗಿದ್ದ ಶೃಂಗೇರಿ ಮಠದ ಆಚಾರ್ಯರಾದ ಜಗದ್ಗುರು ನರಸಿಂಹಭಾರತೀ ಸ್ವಾಮಿಗಳನ್ನೂ ಶ್ರೀ ಶಾರದಾದೇವಿಯನ್ನೂ ಸಂದರ್ಶಿಸಲು ಶೃಂಗೇರಿಗೆ ಹೋಗಿದ್ದರು. ಗುರುವರ್ಯರ ಮುಂದೆ ಹಾಡುವಾಗ, ರಚಿಸಿದ ನಾಗಸ್ವರಾವಳೀ ರಾಗದ ‘ಶ್ರೀಶಂಕರ ಗುರುವರಂ-ಚಿಂತಯಾಮಿಭವಹರಂ’ ಎಂಬ ಕೀರ್ತನೆಯನ್ನು ಹಾಡಿ ಆಚಾರ್ಯರಲ್ಲಿ ಸಮರ್ಪಿಸಿದರು. ನವರಾತ್ರಿಯ ಉತ್ಸವ ಕಾಲವಾದ್ದರಿಂದ ಸ್ವಾಮಿಗಳ ಸಮ್ಮುಖದಲ್ಲಿ ಹಾಗೂ ಶ್ರೀ ಶಾರದಾ ಸನ್ನಿಧಿಯಲ್ಲಿ ಅನೇಕ ದಿನಗಳು ಶಿವಕಥಾ ಕಾಲಕ್ಷೇಪ ಮಾಡಿದರು. ಶಿವನ್ ರವರಲ್ಲಿದ್ದ ವಾಕ್ ಚತುರತೆ, ಭಾವಯುತ ಶಿವಭಕ್ತಿಪ್ರದವಾದ ತತ್ವಾರ್ಥಗಳನ್ನು ವೈಮರೆತು ಕೇಳಿ ಜಗದ್ಗರುಗಳು ಸಂತೋಷ ಪಟ್ಟರು. ಶ್ಲೋಕರೂಪದಲ್ಲಿ ಆಶೀರ್ವದಿಸಿ, ಫಲಮಂತ್ರಾಕ್ಷತೆ ಯೊಡನೆ ಎರಡು ಕೈಗೂ ರತ್ನಖಚಿತವಾದ ತೋಡಾ, ಶಾಲು ಜೋಡಿ, ಖಿಲ್ಲತ್ತು ಮತ್ತು ಸಂಭಾವನೆಯನ್ನು ಕೊಟ್ಟು, ಬೀಳ್ಕೊಟ್ಟರು.

ಸವಾಲು

ಮಹಾ ವೈದ್ಯನಾಥ ಅಯ್ಯರ್ ಅವರ ಕೀರ್ತಿ ಬೆಳೆಯಿತು. ಪಾಶ್ಚಾತ್ಯರೂ ಅವರ ಸಂಗೀತವನ್ನು ಮೆಚ್ಚಿಕೊಂಡರು. ಮದರಾಸಿನ ಒಂದು ಸಭೆಯಲ್ಲಿ ಅವರ ಸಂಗೀತವನ್ನು ಕೇಳಿದ ಗವರ್ನರನೂ ಅವರನ್ನು ಹೊಗಳಿದ. ದಿನದಿನಕ್ಕೆ ಅವರ ಕೀರ್ತಿ ಈ ರೀತಿ ಬೆಳೆಯುತ್ತಿರುವುದನ್ನು ಸಹಿಸಲು ಕೆಲವರಿಗೆ ಆಗಲಿಲ್ಲ. ಏನಾದರೂ ಮಾಡಿ ಅವರ ಕೀರ್ತಿಯನ್ನು ತಗ್ಗಿಸಬೇಕು ಎಂದು ತೀರ್ಮಾನಿಸಿದರು.

ಈ ಗುಂಪಿನಲ್ಲಿ ಒಬ್ಬ ಮುಖಂಡರು ವೇಣುಗೋಪಾಲ ನಾಯುಡು ಎನ್ನುವವರು. ಅವರೂ ಒಳ್ಳೆಯ ಸಂಗೀತ ವಿದ್ವಾಂಸರೇ. ವಿರೋಧಿಗಳು ಮಹಾ ವೈದ್ಯನಾಥ ಅಯ್ಯರ್ ಅವರಿಗೆ ಒಂದು ಕಾಗದವನ್ನು ಬರೆದರು. ಅದರಲ್ಲಿ ಒಂದು ಸ್ಪರ್ಧೆಯನ್ನು ಸೂಚಿಸಿದರು. ವೈದ್ಯನಾಥ ಅಯ್ಯರ್ ತಮ್ಮ ಹೆಸರಿನೊಡನೆ ‘ಮಹಾ’ ಎಂಬ ಶಬ್ದವನ್ನು ಬಳಸುವುದು ತಮಗೆಲ್ಲ ಒಪ್ಪಿಗೆ ಇಲ್ಲ, ಅವರು ಆ ಹೆಸರಿಗೆ ತಕ್ಕ ಯೋಗ್ಯತೆ ಇದೆ ಎಂದು ತೋರಿಸಬೇಕು ಎಂದು ಬರೆದರು. ಅದನ್ನು ತೋರಿಸಿಕೊಡುವುದು ಹೇಗೆ? ಸಭೆಯಲ್ಲಿ ವೇಣುಗೋಪಾಲ ನಾಯುಡು ಪಲ್ಲವಿಯನ್ನು ಹಾಡುವರು; ವೈದ್ಯನಾಥ ಅಯ್ಯರ್ ಅದೇ ಪಲ್ಲವಿಯನ್ನು ಹಾಡಬೇಕು. ಯಾರು ಗೆದ್ದರು ಎಂದು ಸಭಿಕರು ತೀರ್ಮಾನಿಸಬೇಕು. ಬಹುಮಾನ ಒಂದು ಸಾವಿರ ರೂಪಾಯಿ ನಗದು, ತೋಡಾ, ಬೆಳ್ಳಿಯ ತಟ್ಟೆ, ಪೀತಾಂಬರ. ವೈದ್ಯನಾಥ ಅಯ್ಯರ್ ಗೆದ್ದರೆ ಈ ಬಹುಮಾನ ಅವರಿಗೆ; ಜೊತೆಗೆ ‘ಮಹಾ’ ಎನ್ನುವ ಶಬ್ದವನ್ನು ತಮ್ಮ ಹೆಸರ ಹಿಂದೆ ಬಳಸಬಹುದು. ಸೋತರೆ ಬಹುಮಾನ ವೇಣುಗೋಪಾಲ ನಾಯುಡು ಅವರಿಗೆ ಅಲ್ಲದೆ ವೈದ್ಯನಾಥ ಅಯ್ಯರ್ ‘ಮಹಾ’ ಶಬ್ದವನ್ನು ಬಿಡಬೇಕು.

ಶಿವನ್ ಸಹೋದರರು ಬಹಳ ಸಾತ್ವಿಕ ಸ್ವಭಾವದವರು. ಈ ಕಹಿ ಪ್ರಸಂಗ ಅವರಿಗೆ ಬೇಡವಾಗಿತ್ತು. ಸ್ಪರ್ದಿಸಲು ಅವರಿಗೆ ಇಷ್ಟವಿರಲಿಲ್ಲ. ಆದರೆ ಆಪ್ತ ಸ್ನೇಹಿತರೂ ಹಿತೈಷಿಗಳೂ ಶ್ರಮವಹಿಸಿ ಅವರು ಸ್ಪರ್ಧೆಗೆ ಒಪ್ಪುವಂತೆ ಮಾಡಿದರು.

ನಿರ್ದಿಷ್ಟವಾದ ದಿವಸ ಪಿಟೀಲ್ ವಿದ್ವಾನ್ ರಾಮಯ್ಯ ಪಿಳ್ಳೆಯವರ ಮನೆಯಲ್ಲಿ ಎಲ್ಲರೂ ಸೇರಿದರು. ಸ್ಪರ್ಧೆಗೆ ತೀರ್ಪುಗಾರರಾಗಿ ಮಾಸಲಾಮಣಿ ಮೊದಲಿಯಾರ್ ರವರನ್ನು ನೇಮಿಸಿದ್ದರು. ಪಲ್ಲವಿ ಶೇಷ ಅಯ್ಯರ್, ಪಿಟೀಲ್ ಕೊಟ್ಟಪ್ಪ ನಾಯುಡು, ಹರ್ಮೋನಿಯಂ ಕಂದಸ್ವಾಮಿ ಮೊದಲಿಯಾರ್, ಪೊನ್ನುಸ್ವಾಮಿ ನಾಯುಡು, ಪಿಟೀಲ್ ಸುಬ್ರಹ್ಮಣ್ಯ ಅಯ್ಯರ್ ಮೊದಲಾದ ಹಿರಿಯ ಸಂಗೀತ ವಿದ್ವಾಂಸರು ಬಂದಿದ್ದರು. ಹಾಡಬೇಕಾದ ಪಲ್ಲವಿಯನ್ನು ಹಾಡಿ ತೋರಿಸಲು ವೇಣು ಗೋಪಾಲ ನಾಯುಡು ಬಂದಿದ್ದರು. ಜನಸ್ತೋಮ ಕಕ್ಕಿರಿದು ತುಂಬಿತ್ತು.

ವಿಜಯ

ಶಿವನ್ ಸಹೋದರರು ನಿಯಮಿತ ಕಾಲಕ್ಕೆ ಪಿಟೀಲ್ ವೆಂಕೋಬರಾವ್ ಮತ್ತು ಚಾಮಾರಾರವರ ಮೃದಂಗ ದೊಡನೆ ಬಂದು ವೇದಿಕೆಯ ಮೇಲೆ ಕುಳಿತರು. ಕ್ರಮದಂತೆ ಮೊದಲು ಗಣಪತಿ ಸ್ತೋತ್ರವಾದ ‘ವಾತಾಪಿ ಗಣಪತಿಂ’ ಎಂಬ ಕೃತಿಯೊಡನೆ ಆರಂಭಿಸಿ ಮುಂದೆ ಎರಡು ಕೀರ್ತನೆಗಳನ್ನು ಹಾಡಿ ನಿಲ್ಲಿಸಿದರು. ವೇಣುಗೋಪಾಲ ನಾಯುಡು ಅವರು ಒಂದು ಕಷ್ಟಕರವಾದ ತಾಳದಲ್ಲಿ, ಸಾಮಾನ್ಯವಾಗಿ ಎಲ್ಲರೂ ಪಲ್ಲವಿಗಾಗಿ ಆಗಿನ ಕಾಲದಲ್ಲಿ ಹಾಡುತ್ತಿದ್ದ ತೋಡಿ, ಶಂಕರಾ ಭರಣ, ಭೈರವಿ, ಕಾಂಭೋಜಿ ಮತ್ತು ಕಲ್ಯಾಣಿ ರಾಗದಲ್ಲಿ ಪಲ್ಲವಿಯನ್ನು ಹಾಡಲು ಸಿದ್ದಪಡಿಸಿಕೊಂಡಿದ್ದರು.

ಕೀರ್ತನೆಯನ್ನು ಹಾಡಿ ಮುಗಿಸಿದ ಮಹಾ ವೈದ್ಯನಾಥ ಅಯ್ಯರ್ ಅವರು ವೇಣು ನಾಯುಡುರವರನ್ನು ಕುರಿತು ಪಲ್ಲವಿಗೆ ಯಾವ ರಾಗ ಹಾಡಬೇಕೆಂದು ಕೇಳಿದರು. ವೇಣು ನಾಯುಡು ಮನಸ್ಸಿನಲ್ಲಿ, ’ಸರಿ, ಇವರೂ ರೂಢಿಯಲ್ಲಿರುವ ಯಾವುದಾದರೂ ರಾಗದಲ್ಲಿಯೇ ಹಾಡುತ್ತಾರೆ’ ಎಂದುಕೊಂಡರು. “ನಿಮ್ಮ ಇಷ್ಟ ಬಂದ ಯಾವ ರಾಗ ದಲ್ಲಾದರೂ ಹಾಡಬಹುದು” ಎಂದರು.

ರಾಮಸ್ವಾಮಿ ಶಿವನ್ ಯೋಚಿಸಿದರು. ತಮ್ಮ ಉಪಾಸನಾ ದೈವವಾದ ಉಚ್ಛಿಷ್ಠ ಗಣಪತಿಯನ್ನು ನೆನೆದು, ಅಲ್ಲಿರುವವರಲ್ಲಿ ಯಾರಿಗೂ ತಿಳಿಯದಂತೆ ಮಹಾ ವೈದ್ಯನಾಥರಿಗೆ ನಾರಾಯಣ ಗೌಳ ರಾಗವನ್ನು ಹಾಡುವಂತೆ ಸೂಚಿಸಿದರು. ಆ ರಾಗವು ಎಲ್ಲರಿಂದಲೂ ವಿಸ್ತಾರವಾಗಿ ಹಾಡಲು ಸಾಧ್ಯವಿಲ್ಲದ ರಾಗ, ಅದನ್ನು ಪಲ್ಲವಿಗಾಗಿ ವಿಸ್ತಾರವಾಗಿ ಹಾಡಬೇಕಾದರೆ ಉನ್ನತ ಶಕ್ತಿಯುಕ್ತರಾಬೇಕು.

ಶಿವನ್‌ರವರು ಅವರ ಸೂಚನೆಯಂತೆಯೇ ನಾರಾಯಣ ಗೌಳ ರಾಗವನ್ನು ಎತ್ತಿಕೊಂಡರು. ಅತ್ಯಂತ ಪ್ರತಿಭೆಯಿಂದ ೪೫ ನಿಮಿಷಗಳ ಕಾಲ ಹಾಡಿದರು. ಮುಂದೆ ತಾನವನ್ನು ಹಾಡುತ್ತಿದ್ದರು. ವೇಣು ನಾಯುಡು ವವರಿಗಾದರೋ ಅವರು ಹಾಡುತ್ತಿದ್ದ ರಾಗವು ಯಾವುದು ಎಂದೇ ತಿಳಿಯಲಿಲ್ಲ. ಅವರು ಸಿದ್ಧಪಡಿಸಿದ್ದ ಪಲ್ಲವಿಯನ್ನು ಆ ರಾಗದಲ್ಲಿ ಅಳವಡಿಸ ಬೇಕಾಗಿತ್ತು. ಆದರೆ ಅವರಿಗೆ ಅದು ಸಾಧ್ಯವಾಗಲೇ ಇಲ್ಲ. ಅವರು ಸಭೆಯನ್ನು ಬಿಟ್ಟು ಹೊರಗೆ ಹೋದರು. ಬಹಳ ಕಾಲ ಹಿಂದಕ್ಕೇ ಬರಲಿಲ್ಲ.

ತಾನವನ್ನು ಮುಗಿಸಿದ ಶಿವನ್‌ರವರು ತೀರ್ಪುಗಾರರನ್ನು ಕುರಿತು, “ಯಾವಪಲ್ಲವಿ ಹಾಡಬೇಕು?” ಎಂದು ಕೇಳಿದರು. ಹಾಡಿ ತೋರಿಸಬೇಕಾದ ವೇಣು ನಾಯುಡು ಸಭೆಯಲ್ಲಿರಲಿಲ್ಲ. ತೀರ್ಪುಗಾರರು ಅವರ ನಡತೆಗಾಗಿ ಬೇಸರಪಟ್ಟು, ಶಿವನ್ ರವರನ್ನು ತಮಗೆ ಬೇಕಾದ ಪಲ್ಲವಿಯನ್ನೇ ಹಾಡಬಹು ದೆಂದರು. ಶಿವನ್‌ರವರು ಆದಿತಾಳದಲ್ಲಿ, ’ಶಂಭೋ ಶಿವಶಂಕರ ವಿಭೋ’ ಎಂಬ ಪಲ್ಲವಿಯನ್ನು ಅತಿ ನೈಪುಣ್ಯದಿಂದ, ಕೇಳುವವರು ಮೈಮರೆಯುವಂತೆ ಹಾಡಿದರು. ಸಭಿಕರೆಲ್ಲರೂ ಮೆಚ್ಚಿ ಕರತಾಡನ ಮಾಡಿದರು.

ಆ ಸಮಯಕ್ಕೆ ವೇಣು ನಾಯುಡು ಹಿಂದಕ್ಕೆ ಬಂದರು.

ಬಂದವರೇ “ಪಲ್ಲವಿಗಾಗಿ ಎತ್ತಿ ಹಾಡಿದ ರಾಗವು ಸಂಪ್ರದಾಯವಾಗಿ ಎಲ್ಲರೂ ಹಾಡುವ ರಾಗದಲ್ಲಿರದೆ, ಅಪ ರೂಪವಾದ ನಾರಾಯಣ ಗೌಳ ರಾಗದಲ್ಲಿತ್ತು, ಆದ್ದರಿಂದ ಅದನ್ನು ಒಪ್ಪುವ ಹಾಗಿಲ್ಲ.” ಎಂಬ ಆಕ್ಷೇಪಣೆಯನ್ನು ಮುಂದಿಟ್ಟರು.

ತೀರ್ಪುಗಾರರಾಗಿದ್ದ ಮಾಸಲಾಮಣಿ ಮೊದಲಿಯಾರ್ ಅವರು, “ಯಾವ ರಾಗದಲ್ಲಿ ಬೇಕಾದರೂ ಹಾಡಬಹುದೆಂದು ನೀವೇ ಹೇಳಿದ ಮೇಲೆ ಅಲ್ಲವೆ ಅವರು ನಾರಾಯಣ ಗೌಳದಲ್ಲಿ ಹಾಡಿದ್ದು? ಅವರು ಹಾಡಿರುವ ರಾಗ ಕ್ರಮಬದ್ಧವಾಗಿದೆ. ಅಲ್ಲದೆ ಅದು ಬಹು ಕಷ್ಟವಾದ ರಾಗ. ಅದನ್ನು ಇಷ್ಟು ವಿಮರ್ಶಾತ್ಮಕವಾಗಿ ಹಾಡಿರುವುದನ್ನು ನಮ್ಮ ಜೀವಮಾನದಲ್ಲೇ ಕೇಳಿಲ್ಲ. ಮತ್ತೆ ಅವರು ಯಾವ ಪಲ್ಲವಿ ಹಾಡಬೇಕು ಎಂದು ಕೇಳಿದಾಗ ನೀವೇ ಇಲ್ಲಿರಲಿಲ್ಲ. ಈ ಸನ್ಮಾನವನ್ನು ಪಡೆಯಲು ಮಹಾ ವೈದ್ಯನಾಥ ಅಯ್ಯರ್ ಸರ್ವ ವಿಧದಲ್ಲಿಯೂ ಅರ್ಹರು” ಎಂದು ತೀರ್ಮಾ ನಿಸಿದರು. ತಟ್ಟೆಯಲ್ಲಿದ್ದ ತೋಡಾವನ್ನು ಮಹಾ ವೈದ್ಯನಾಥ ಅಯ್ಯರರ ಕೈಗಳಿಗೆ ತೊಡಿಸಿ, ಪೀತಾಂಬರವನ್ನು ಹೊದಿಸಿ, ತಟ್ಟೆಯಲ್ಲಿ ಇದ್ದ ಸಾವಿರ ರೂಪಾಯಿಗಳನ್ನು ಅವರಿಗೆ ಕೊಟ್ಟರು. “ಸದಾಕಾಲವೂ ‘ಮಹಾ’ ಎಂಬ ಉತ್ತಮ ಪದದೊಡನೆ ಸೇರಿ, ಮಹಾ ವೈದ್ಯನಾಥ ಅಯ್ಯರ್ ಎಂದು ತಾವು ಸಂಗೀತ ಪ್ರಪಂಚದಲ್ಲಿ ಬೆಳಗುವುದನ್ನು ಈ ಸಭೆ ಸಂತೋಷದಿಂದ ಒಪ್ಪುತ್ತದೆ” ಎಂದರು. ಸಭಿಕರು ಒಪ್ಪಿ ಚಪ್ಪಾಳೆ ಹೊಡೆದರು.

ಕಲೆಗೆ ಕಾಣಿಕೆ

ಮಹಾ ವೈದ್ಯನಾಥ ಶಿವನ್ ಅವರು ಶ್ರೇಷ್ಠ ಗಾಯಕರು ಮಾತ್ರವಲ್ಲದೆ ವಾಗ್ಗೇಯಕಾರರೂ ಹೌದು. ಅವರು ರಚಿಸಿದ ಸಿಂಹನಂದನ ತಾಳದ ತಿಲ್ಲಾನ ಒಂದು ಅಪೂರ್ವ ರಚನೆ. ಕಾಂಭೋಜಿರಾಗದ ‘ಪಂಕಜಾಕ್ಷಿಪೈ’ ಎಂಬ ವರ್ಣವು ಅವರ ರಚನಾ ಸಾಮರ್ಥ್ಯವನ್ನು ಸೂಚಿಸುತ್ತದೆ. ಜನರಂಜನಿ ರಾಗದ ‘ಪಾಹಿಮಾಂ ಶ್ರೀ ರಾಜರಾಜೇಶ್ವರಿ’, ತಮಿಳಿನಲ್ಲಿ ‘ಮುತ್ತು ಕುಮಾರಯ್ಯನೇ’ ಎಂಬ ಶಂಕರಾಭರಣ ಕೃತಿ, ‘ಮಲ್ ಮುರುಹನೇ’ ಎಂಬ ಬಿಲಹರಿ ರಾಗದ ಕೃತಿಗಳು ಉತ್ತಮ ವಾದವು. ಎಲ್ಲಕ್ಕೂ ಮಕುಟವಿಟ್ಟಂತೆ ಏಳು ದಿವಸಗಳಲ್ಲಿ ರಚಿಸಿದ ೭೨ ರಾಗಗಳ ರಾಗಮಾಲಿಕೆಯು ದೊಡ್ಡ ರಚನೆ ಮತ್ತು ಅವರ ಶಕ್ತಿ ಸಾಮರ್ಥ್ಯಕ್ಕೆ ಕುರುಹಾಗಿ ಉಳಿದಿದೆ. ‘ಗುಹದಾಸ’ ಎಂಬುದು ಅವರ ಅಂಕಿತ. ಈಗ ಎಲ್ಲರೂ ಹಾಡುತ್ತಿರುವ ‘ವಾತಾಪಿ ಗಣಪತಿಂ’ ‘ಶ್ರೀ ಸುಬ್ರಹ್ಮಣ್ಯಾಯ ನಮಸ್ತೆ’ ಮತ್ತು ‘ಚಿಂತಯಾಮಿ’ ಎಂಬ ದೀಕ್ಷಿತರ ಕೃತಿಗಳಿಗೆ ಸಂಗತಿಗಳನ್ನು ರಚಿಸಿ, ತಾವು ಹಾಡಿ ರೂಢಿಗೆ ತಂದರು. ರಾಮಸ್ವಾಮಿ ಶಿವನ್ ಮತ್ತು ಮಹಾ ವೈದ್ಯನಾಥ ಶಿವನ್ ಅವರು ಸೇರಿ ರಚಿಸಿದ ಪೆರಿಯ ಪುರಾಣ ಕೀರ್ತನೆಗಳು ಅಗಾಧವಾಗಿವೆ.

 

‘ಈ ಸನ್ಮಾನಕ್ಕೆ ಮಹಾ ವೈದ್ಯನಾಥ ಅಯ್ಯರ್ ಅರ್ಹರು.’

ದಾನ ಧರ್ಮಗಳು

 

ಮೊದಲಿನಿಂದಲೂ ಶಿವನ್ ಅವರು ಪರಮ ಶಿವ ಭಕ್ತರು, ಆಚಾರಶೀಲರು. ಕರ್ಮಾನುಷ್ಠಾನನಿರತರು. ತಾವು ದೈವಕೃಪೆಯಿಂದ ಪಡೆದ ಧನ, ಕನಕಗಳಲ್ಲಿ ಒಂದು ಭಾಗವನ್ನು ಖರ್ಚುಮಾಡಿ, ಒಂದು ನಟರಾಜ ವಿಗ್ರಹವನ್ನು ಗುಡಿಕಟ್ಟಿಸಿ ಪ್ರತಿಷ್ಠಿಸಬೇಕೆಂಬ ಪ್ರೇರಣೆ ಉಂಟಾಯಿತು. ಈ ವಿಚಾರವು ಸುಬ್ರಹ್ಮಣ್ಯ ದೇಶಿಕರಿಗೂ ತಿಳಿಯಿತು. ಸನ್ನಿಧಾನಕ್ಕೆ ಸೇರಿದ ಭೂಪ್ರದೇಶವನ್ನು ಉತ್ತಮಪಡಿಸುವಾಗ, ಭೂಮಿಯೊಳಗೆ ಕೆಲವು ಲೋಹದ ಪದಾರ್ಥಗಳೊಡನೆ ಒಂದು ಸುಂದರ ಪಂಚಲೋಹದ ನಟರಾಜ ವಿಗ್ರಹವು ಸಿಕ್ಕಿತು. ಅದನ್ನು ದೇಶಿಕರು ಉತ್ತಮ ಸ್ಥಪತಿಗಳಿಂದ ಪರೀಕ್ಷೆ ಮಾಡಿಸಿದರು. ಅದು ಎಲ್ಲ ವಿಧದಲ್ಲಿಯೂ ಶಾಸ್ತ್ರಸಮ್ಮತ ವಾಗಿರುವುದನ್ನು ಖಚಿತ ಮಾಡಿಕೊಂಡರು. ಶಿವನ್ ಅವರು ನಟರಾಜ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು ಎಂದಿದ್ದ ವಿಷಯ ಅವರಿಗೆ ತಿಳಿದಿತ್ತು. ಶಿವನ್‌ರವರನ್ನು ಬರಮಾಡಿಕೊಂಡು, ತಮಗೆ ಸಿಕ್ಕಿದ ನಟರಾಜ ವಿಗ್ರಹವನ್ನು ತೋರಿಸಿ, ಅದು ಶಾಸ್ತ್ರಸಮ್ಮತವಾಗಿರುವುದನ್ನು ಕೇಳಿ ತಿಳಿದಿರುವುದಾಗಿ ಹೇಳಿದರು. “ಈ ವಿಗ್ರಹವನ್ನು ಪೂಜಿಸಲು ತಾವೇ ಅರ್ಹರು” ಎಂದು ಹೇಳಿ ಅದನ್ನು ಅವರಿಗೆ ಕೊಟ್ಟರು.

ಶಿವನ್ ಅವರಿಗೆ ತುಂಬಾ ಆಶ್ಚರ್ಯವಾಯಿತು, ಸಂತೋಷವೂ ಆಯಿತು. ’ಇದೆಲ್ಲ ಭಗವಂತನ ಅನುಗ್ರಹ’ ಎಂದು ವಿಗ್ರಹದೊಡನೆ ಹಿಂದಿರುಗಿದರು.

ಮುಂದೆ ಆ ವಿಗ್ರಹಕ್ಕೆ ಸರಿಹೊಂದುವ ಶಿವಕಾಮ ಸುಂದರಿಯ ವಿಗ್ರಹವನ್ನು ಮಾಡಿಸಬೇಕೆಂದು ಅವರು ಯೋಚಿಸಿದರು.

ಅವರ ಊರಿನ ದೇವಸ್ಥಾನದ ಭಾವಿಯಲ್ಲಿ ನೀರೆಲ್ಲ ಬತ್ತಿ ಹೋಯಿತು. ಶಿವನ್‌ರವರು ತಮ್ಮ ಖರ್ಚಿನಿಂದ ಮಣ್ಣನ್ನು ಹೊರತೆಗೆಯಲು ಏರ್ಪಾಟು ಮಾಡಿದರು. ಮಣ್ಣು ಅಗೆಯು ವಾಗ ಒಂದು ಪಂಚಲೋಹ ವಿಗ್ರಹವೇ ಸಿಕ್ಕಿತು. ಪರೀಕ್ಷಿಸಿ ದಾಗ ಅದು ಶಿವಕಾಮ ಸುಂದರಿಯ ವಿಗ್ರಹವಾಗಿತ್ತು, ತಮ್ಮಲ್ಲಿದ್ದ ನಟರಾಜ ವಿಗ್ರಹಕ್ಕೆ ಹೇಳಿ ಮಾಡಿಸಿದಂತಿತ್ತು. ಈಗಂತೂ ಅವರ ಆಶ್ಚರ್ಯ ಮತ್ತು ಸಂತೋಷಗಳಿಗೆ ಮಿತಿಯೇ ಇಲ್ಲದಾಯಿತು. ಅವರು ದೇವಾಲಯದ ಪ್ರಾಕಾರಕ್ಕೆ ಸೇರಿದಂತೆ ಗುಡಿಗಳನ್ನು ಕಟ್ಟಿಸಿ, ಎರಡು ವಿಗ್ರಹಗಳನ್ನೂ ಶುಭ ಮಹೂರ್ತದಲ್ಲಿ ಪ್ರತಿಷ್ಠಾಪನೆ ಮಾಡಿದರು. ವಿಗ್ರಹಗಳಿಗೆ ಕುಂಭಾಷೇಕವೇ ಮೊದಲಾದ ಕಾರ್ಯಗಳನ್ನು ಆಗಮ ರೀತಿಯಾನಗಳ ಕಾಲ ನೆರವೇರಿಸಿ, ಎಲ್ಲರೂ ಮೆಚ್ಚುವಂತೆ ಸರ್ವರಿಗೂ ಎಲ್ಲಾ ದಿನಗಳಲ್ಲಿಯೂ ಸಂತರ್ಪಣೆ ಮಾಡಿ ಮುಗಿಸಿ ಕೃತಕೃತ್ಯರಾದರು ಮಹಾ ವೈದ್ಯನಾಥ ಅಯ್ಯರರು.

ತಮಗೆ ದೊರಕಿದ್ದ ಹಾರ-ಪದಕಗಳು, ಪೀತಾಂಬರ ಗಳಲ್ಲಿ ಕೆಲವನ್ನು ದೇವರಿಗೆ ಸಮರ್ಪಿಸಿದರು. ಅವರ ಜೀವಿತ ಕಾಲದಲ್ಲಿ ತಮ್ಮ ಸ್ವಂತ ಖರ್ಚಿನಿಂದ ೧೦ ವರ್ಷ ವಯಸ್ಸಿನ ನೂರಾರು ವಟುಗಳಿಗೆ ಧರ್ಮೋಪನಯನವನ್ನು ಮಾಡಿಸಿದರು. ಬಡಬಗ್ಗರ ಸಂಸಾರಗಳಲ್ಲಿ ಮದುವೆ ಮಾಡಲು ಉದಾರವಾಗಿ ಸಹಾಯ ಮಾಡಿದರು. ಅವರ ಮನೆ ಅನ್ನಛತ್ರವಾಗಿ ಬೆಳೆದು ಅಲ್ಲಿ ನಿತ್ಯವೂ ೪೦-೫೦ ಜನ ಅತಿಥಿಗಳ ಸತ್ಕಾರ ನಡೆಯುತ್ತಿತ್ತು.

ಮಹಾ ವೈದ್ಯನಾಥ ಅಯ್ಯರ್ ಅವರು ೪೩ನೆಯ ವಯಸ್ಸಿನಲ್ಲಿ ತಿರುವಯ್ಯಾರು ಕ್ಷೇತ್ರದಲ್ಲಿ ಎರಡು ಮನೆ ಕೊಂಡು ವೈಯ್ಯಾಚೇರಿ ಬಿಟ್ಟುಬಂದು ನೆಲೆಸಿದರು. ಅವರಿಗೆ ವೇದಾರಣ್ಯಂ ಮತ್ತು ವಿಶ್ವನಾಥನ್ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಶಿವನ್ ಅವರು ಪೂಜಿಸುತ್ತಿದ್ದ ಪೂಜಾವಿಗ್ರಹವನ್ನು ಅವರ ಮೊಮ್ಮಕ್ಕಳಾದ, ವಿಶ್ವನಾಥನ್ ಅವರ ಮಕ್ಕಳಾದ ಸುಂದರ ರಾಜನ್ ಈಗಲೂ ಪೂಜಿಸುತ್ತಿದ್ದಾರೆ.

ಮಹಾ ವೈದ್ಯನಾಥ ಅಯ್ಯರ್ ಅವರು ಸಂಗೀತ ಪ್ರಪಂಚಲ್ಲಿ ೪೦ ವರ್ಷಗಳ ಕಾಲ ಧ್ರುವತಾರೆಯಂತೆ ಬೆಳಗಿದವರು. ಸಂಗೀತದ ನಾನಾ ಭಾಗಗಳಲ್ಲಿ ಶ್ರೇಷ್ಠರೆನಿಸಿ, ಅವರಿಗೆ ಸಮನಾದವರು ಮತ್ತೊಬ್ಬರು ಕಾಣದಂತೆ ಬೆಳಗಿದರು. ಅವರ ನಲವತ್ತೊಂಬತ್ತನೆಯ ವರ್ಷದಲ್ಲಿ ೧೮೯೩ ರ ಜನವರಿ ೨೬ ರಂದು ನಿಧನರಾದರು.

ಹಿರಿಯ ಬಾಳು

ಮಹಾ ವೈದ್ಯನಾಥ ಅಯ್ಯರ್ ಅವರು ಜ್ಞಾನಿಯಂತೆ ಬಾಳಿದರು. ಯೋಗಿಯಂತೆ ಸಿದ್ಧಿ ಪಡೆದರು. ಅವರ ವಿದ್ವತ್ತು, ಸಾಮರ್ಥ್ಯ ಅಸಾಧಾರಣ. ಒಂದು ಸಲ ಅವರು ಸಂಗೀತ ಕಛೇರಿಗೆ ಹೋಗಿದ್ದರು. ಇನ್ನೇನು ಹಾಡಲು ಪ್ರಾರಂಭಿಸ ಬೇಕು, ಆಗ ಅಲ್ಲಿದ್ದ ಅರುಣಾಚಲಯ್ಯರ್ ಎಂಬುವರು ಕೀಟಲೆಗಾಗಿ, “ರಸಿಕಪ್ರಿಯರಾಗ ಹಾಡಬಲ್ಲಿರ?” ಎಂದು ಕೇಳಿದರು. ಅರುಣಾಚಲಯ್ಯರ ಸ್ವಭಾವವೇ ಕೊಂಕು. ವೈದ್ಯನಾಥ ಅಯ್ಯರಿಗೆ ಆ ರಾಗ ಹಾಡಲು ಬರುವುದಿಲ್ಲ ಎಂದುಕೊಂಡೇ ಕೇಳಿದ್ದರು. ವೈದ್ಯನಾಥ ಅಯ್ಯರ್ ಆ ರಾಗವನ್ನೆ ಎತ್ತಿಕೊಂಡರು. ಮೂರು ಗಂಟೆಗಳ ಕಾಲ ಹಾಡಿ ಸೇರಿದ ನೂರಾರು ಜನ ಮೈಮರೆಯುವಂತೆ ಮಾಡಿದರು.

ಇಚಿತಹ ಸಾಮರ್ಥ್ಯವಿದ್ದರೂ ಅವರಲ್ಲಿ ಅಹಂಕಾರ ಇರಲಿಲ್ಲ. ಅವರ ಸಾಮರ್ಥ್ಯಕ್ಕೆ ಅವರ ಸೌಜನ್ಯದಿಂದ ಮೆರಗು ಬಂದಿತ್ತು. ಸಂನ್ಯಾಸಿಯಂತೆ ಸ್ಥಿರಚಿತ್ತರಾಗಿದ್ದು, ನಡೆ, ನುಡಿ, ಸಂಗೀತ ಎಲ್ಲ ಈಶ್ವರನಿಗೆ ಅರ್ಪಿತ ಎಂದು ಬದುಕಿದರು. ಬಂದ ಸಂಭಾವನೆ ತಾವು ಸ್ವೀಕರಿಸುತ್ತಿರಲಿಲ್ಲ, ತಮ್ಮ ಅಣ್ಣನವರಿಗೇ ಸ್ವೀಕರಿಸಲು ಬಿಡುತ್ತಿದ್ದರು. ತಾವೇ ಎಲ್ಲವನ್ನೂ ಸಂಪಾದಿಸಿದ್ದರೂ ಒಟ್ಟು ಕುಟುಂಬದಲ್ಲಿ ಬಾಳಿ ಬದುಕಿದ ದಿವ್ಯವ್ಯಕ್ತಿ ಅವರು.