ಒಬ್ಬ ರಷ್ಯನ್ನನು ಪಯಣ ಹೊರಟಿದ್ದ. ಯುರೋಪಿನ ದೇಶಗಳಲ್ಲಿ ಸುತ್ತಾಡುವುದು ಅವನ ಉದ್ದೇಶವಾಗಿತ್ತು. ಊರೂರು ಸುತ್ತಾಡುತ್ತ ಅವನು ವಾರ್ಸೋ ನಗರಕ್ಕೆ ಬಂದ. ಅವನ ಕೈಯಲ್ಲಿ ಒಂದು ಪತ್ರವಿತ್ತು. ಅವನ ಗೆಳೆಯ ಅದನ್ನು ಕೊಟ್ಟಿದ್ದ. ಅದರಲ್ಲಿ ಅವನು ಯಾರು, ಯಾವ ಉದ್ದೇಶದಿಂದ ಬಂದವನು ಎಂಬ ವಿವರಗಳಿದ್ದವು. ವಾರ್ಸೋ ನಗರದ ನಿವಾಸಿ ಒಬ್ಬನಿಗೆ ಬರೆದ ಪತ್ರವಿದು. ಪಯಣಿಗನು ಸಂಬಂಧಪಟ್ಟ ವ್ಯಕ್ತಿಯನ್ನು ಕಂಡುಹುಡುಕಿದ. ಅವನಿಗೆ ಪತ್ರವನ್ನು ತೋರಿಸಿದ ಒಡನೆ ವಾರ್ಸೋ ನಿವಾಸಿ ಆತನನ್ನು ಆದರದಿಂದ ಬರಮಾಡಿಕೊಂಡ. ಅವನಿಗೆ ಬೇಕಾದ ಅನುಕೂಲತೆಗಳನ್ನು ಒದಗಿಸಿಕೊಟ್ಟ.

ಪಯಣಿಗ ಅಲ್ಲಿ ಕೆಲವು ದಿನ ತಂಗಿದ. ನೋಡ ತಕ್ಕ ಸ್ಥಳಗಳನ್ನೆಲ್ಲ ನೋಡಿಕೊಂಡ. ಒಂದು ವಾರ ಕಾಲ ಬೇರೆ ಊರುಗಳಲ್ಲಿ ಸುತ್ತಾಡಿ ಮತ್ತೆ ಪುನಃ ಆ ನಗರಕ್ಕೆ ಹಿಂದೆ ಬಂದು ಪಯಣ ಮುಂದುವರಿಸಲು ನಿಶ್ಚಯಿಸಿದ. ಹಾಗೆ ಹೋಗುವಾಗ ತನ್ನಲ್ಲಿದ್ದ ಒಂದು ಪೆಟ್ಟಿಗೆಯನ್ನು ವಾರ್ಸೋ ನಿವಾಸಿಯ ವಶ  ಒಪ್ಪಿಸಿದ. “ಒಂದು ವಾರ ಬಿಟ್ಟು ನಾನು ಹಿಂದಿರುಗಿ ಬರುತ್ತೇನೆ. ಅಲ್ಲಿಯವರೆಗೆ ಈ ಪೆಟ್ಟಿಗೆ ನಿಮ್ಮಲ್ಲಿರಲಿ. ಅಮೂಲ್ಯವಾದ ಮುತ್ತು ರತ್ನಗಳು ಇದರಲ್ಲಿವೆ. ಇನ್ನೊಬ್ಬರಿಗೆ ಸಲ್ಲಬೇಕಾದ ವಸ್ತುಗಳಿವು. ದಯವಿಟ್ಟು ಇದನ್ನು ನಿಮ್ಮ ವಶ ಇರಿಸಿಕೊಳ್ಳಿ. ಮುಂದಿನ ವಾರ ನಾನು ಇದನ್ನು ಕೊಂಡೊಯ್ಯುವೆ” ಎಂದು ಕೇಳಿಕೊಂಡ. ಮನೆಯ ಯಜಮಾನ ಅವನ ಮಾತಿಗೆ ಒಪ್ಪಿದ. ಪೆಟ್ಟಿಗೆಯನ್ನು ತನ್ನಲ್ಲಿ ಇರಿಸಿಕೊಂಡ.

ಒಂದು ವಾರ ಕಳೆಯಿತು. ಪಯಣಿಗೆ ಹಿಂದಿರುಗಿ ಬಂದ. ತನ್ನ ಪೆಟ್ಟಿಗೆಯನ್ನು ಹಿಂದೆ ಕೊಡುವಂತೆ ಮನೆಯಾತನನ್ನು ಬೇಡಿಕೊಂಡ . ಅವನ ಮಾತು ಕೇಳಿದ ಯಜಮಾನನೂ ಅವನ ಹೆಂಡತಿಯೂ ಆಶ್ಚರ್ಯ ನಟಿಸಿದರು. “ಯಾವ ಪೆಟ್ಟಿಗೆ? ಯಾರು ಕೊಟ್ಟದ್ದು? ಯಾವಾಗ? ನಮಗೆ ಯಾವ ಸಂಗತಿಯೂ ಗೊತ್ತಿಲ್ಲವಲ್ಲ!” ಎಂದರು.

ಪಯಣಿಗನಿಗೆ ದಿಕ್ಕೇ ತೋಚದಂತಾಯಿತು. ಅವನು ಊರವರಲ್ಲಿ ದೂರು ಕೊಟ್ಟ. ಅವರು ಬಂದರು. ಮನೆಯಾತನನ್ನು ಪ್ರಶ್ನಿಸಿದರು. “ಈ ಪಯಣಿಗನಿಗೆ ತಲೆ ಕೆಟ್ಟಿದೆ. ಆದುದರಿಂದ ಏನೇನೋ ಮಾತಾಡುತ್ತಿದ್ದಾನೆ. ಅವನು ಪೆಟ್ಟಿಗೆ ಕೊಟ್ಟುದೂ ಇಲ್ಲ;  ನಾವದನ್ನು ಪಡೆದುದೂ ಇಲ್ಲ” ಎಂದು ಬಿಟ್ಟ ಮನೆಯಾತ.

ಪಯಣಿಗ ಪೋಲೀಸರಲ್ಲಿ ದೂರುಕೊಟ್ಟ. ಅವರು ಪೆಟ್ಟಿಗೆ ಕೊಟ್ಟ ಬಗ್ಗೆ ರುಜುವಾತು ಏನಿದೆ ಎಂದು ಅವನನ್ನು ಪ್ರಶ್ನಿಸಿದರು. ಪಯಣಿಗೆ ತನ್ನಲ್ಲಿದ್ದ ಕೀಲಿಕೈ ತೋರಿಸಿದ. ಆದರೆ ಪೋಲೀಸರು ಒಪ್ಪಲಿಲ್ಲ. “ಸಾಕ್ಷಿಗಳಿಲ್ಲದೆ ಕೈಚೀಟ ಸಹ ಪಡೆಯದೆ ಅಷ್ಟು ಅಮೂಲ್ಯ ವಸ್ತುಗಳನ್ನು ಹೇಗೆ ಕೊಟ್ಟೆ? ನಾವೇನೀ ಮಾಡಲಾರೆವು” ಎಂದರು ಅವರು. ಆದರೂ ದೇಶದ ಗವರ್ನರರಲ್ಲಿ ಆತ ದೂರು ಕೊಡಬಹುದು ಎಂಬ ಸಲಹೆ ನೀಡಿದರು ಅವರಲ್ಲಿಗೆ ಅವನನ್ನು ಕರೆದೊಯ್ದರು.

ಗವರ್ನರರು ಪಯಣಿಗನ ದೂರನ್ನು ತಾಳ್ಮೆಯಿಂದ ಕೇಳಿಕೊಂಡರು. ಮತ್ತೆ ಕ್ಷಣಕಾಲ ಆ ಬಗ್ಗೆ ಯೋಚಿಸಿದರು. ಅನಂತರ ಆಪಾದಿತನಿಗೆ ಹೇಳಿ ಕಳಿಸಿದರು. ಅವನು ಬಂದಾಗ ಅವರು ಅವನನ್ನು ತಮ್ಮ ಎದುರುಗಡೆಯ ಕುರ್ಚಿಯಲ್ಲಿ ಕೂಡಿಸಿದರು. ಅವನ ಕೈಯಲ್ಲಿ ಒಂದು ಕಾಗದವನ್ನೂ ಲೇಖನಿಯನ್ನೂ ಕೊಟ್ಟರು. ತಾನು ಹೇಳಿದಂತೆ ಅವನು ಅದರಲ್ಲಿ ಬರೆಯಬೇಕೆಂದು ಸೂಚಿಸಿದರು. ಮತ್ತು “ಪ್ರೀತಿಯ ನನ್ನವಳೇ, ನನ್ನ ಗುಟ್ಟು ರಟ್ಟಾಗಿದೆ. ಈ ಚೀಟು ತರುವವರಲ್ಲಿ ಆ ಪೆಟ್ಟಿಗೆಯನ್ನು ಕೊಟ್ಟು ಕಳಿಸು” ಎಂದು ಬರೆದು ಅದರ ಕೆಳಗಡೆ ಅವನು ತನ್ನ ಸಹಿ ಹಾಕಬೇಕು ಎಂದು ಅಪ್ಪಣೆ ಕೊಟ್ಟರು ಬಂದವನು ಇದಕ್ಕೆ ಸಿದ್ಧನಿರಲಿಲ್ಲ. ತಾನು ಬರೆಯಲಾರೆ ಎಂದು ಹಠ ಹಿಡಿದ. “ಹಾಗಾದರೆ ನೀನೇ ಅಪರಾಧಿ ಎಂದು ಸಾಭೀತಾಯಿತು ನೀನು ಶಿಕ್ಷೆ ಅನುಭವಿಸಬೇಕಾಗುತ್ತದೆ” ಎಂದು ಗವರ್ನರರು ಎಚ್ಚರಿಕೆ ಕೊಟ್ಟಾಗ ಅವನು ಅವರು ಹೇಳಿದಂತೆ ಒಪ್ಪಲೇಬೇಕಾಯಿತು.

ಪತ್ರ ಬರೆದಾಯಿತು. ಪತ್ರಕ್ಕೆ ಅವನ ಸಹಿಯೂ ಬಿತ್ತು. ಸೇವಕನ ಮೂಲಕ ಅದನ್ನು ಅವನ ಮನೆಗೆ ಕಳಿಸಲಾಯಿತು. ಪತ್ರ ಕಂಡೊಡನೆ ಅವನ ಹೆಂಡತಿಯ ಮುಖ ಬಿಳಿಚಿಕೊಂಡಿತು. ನಡುಗುತ್ತ ಅವಳು ಒಳಹೋಗಿ ಪೆಟ್ಟಿಗೆಯನ್ನು ತಂದೊಪ್ಪಿಸಿದಳು. ಸೇವಕ ಅದನ್ನು ತಂದು ಗವರ್ನರರಿಗೆ ಒಪ್ಪಿಸಿದ. ಅವರು ಅದನ್ನು ಪಯಣಿಗನಿಗೆ ಕೊಟ್ಟರು. “ನಿನ್ನ ವಸ್ತುಗಳೆಲ್ಲ ಸುರಕ್ಷಿತವಾಗಿ ಇವೆಯೇ ನೋಡಿಕೊ” ಎಂದರು.

ವ್ಯಾಪಾರಿ ತನ್ನ ಕೀಲಿಕೈ ಬಳಸಿ ಪೆಟ್ಟಿಗೆಯ ಬಾಯಿ ತೆರೆದ. ಅವನ ವಸ್ತುಗಳೆಲ್ಲ ಸುರಕ್ಷಿತವಾಗಿದ್ದವು. ಸಂತೋಷದಿಂದ ಅವನು ಗವರ್ನರರಿಗೆ ವಂದಿಸಿ, ಅಲ್ಲಿಂದ ಹೊರಟು ಹೋದ.

ಅಪರಾಧಿ ತಕ್ಷಣ ದೇಶ ಬಿಟ್ಟು ಹೋಗುವಂತೆ ಗವರ್ನರರ ಅಪ್ಪಣೆಯಾಯಿತು.

* * *