ಒಂದು ಊರಲ್ಲಿ ಒಬ್ಬ ಧರ್ಮಬೋಧಕನಿದ್ದ. ಅವನು ತೀರ ಬಡವ. ಆದರೆ ತುಂಬ ಪ್ರಾಮಾಣಿಕ. ಅವನಿಗೆ ಒಬ್ಬಳು ಹೆಂಡತಿ ಮತ್ತು ಏಳು ಜನ ಮಕ್ಕಳು. ಸುಮರು ೪೦ ಪೌಂಡುಗಳು ವಾರ್ಷಿಕ ಆದಾಯ ಮಾತ್ರ ಅವನಿಗಿತ್ತು. ಬಹು ಕಷ್ಟದಲ್ಲೆ ಅವನ ಸಂಸಾರ ಸಾಗುತಿತ್ತು.

ಒಂದು ದಿನ ಧರ್ಮಬೋಧಕನು ಎಲ್ಲೋ ಹೋಗಿದ್ದ.  ಮನೆಗೆ ಹಿಂದಿರುಗುವ ದಾರಿಯಲ್ಲಿ ಅವನಿಗೊಂದು ಚೀಲ ಗೋಚರಿಸಿತು. ಅವನು ಅದನ್ನು ಎತ್ತಿಕೊಂಡ; ಸಾಕಷ್ಟು ಭಾರವಾಗಿತ್ತು ಅದು. ಒಳಗೆ ನೋಡಿದಾಗ ಅಮೂಲ್ಯ ಚಿನ್ನಾಭರಣಗಳು ಅದರಲ್ಲಿದ್ದವು. ಸುತ್ತಮುತ್ತ ಯಾರೂ ಕಾಣಿಸಲಿಲ್ಲ. ಹಾಗಾಗಿ ಅವನು ಅದನ್ನು ಮನೆಗೆ ತಂದ. ಹೆಂಡತಿಗೂ ಅದನ್ನು ತೋರಿಸಿದ. ಅದು ತನಗೆ ದೊರೆತ ಬಗೆಯನ್ನೂ ವಿವರಿಸಿ ಹೇಳಿದ.

ಗಂಡನಿಗೆ ಚಿನ್ನಾಭರಣಗಳ ಚೀಲ ದೊರೆತುದರಿಂದ ಹೆಂಡತಿಗೆ ಭಾರೀ ಸಂತೋಷವಾಯಿತು. ತಮ್ಮ ಕಷ್ಟ ನಿವಾರಣೆಗಾಗಿ ದೇವನೇ ಅದನ್ನು ದೊರಕಿಸಿಕೊಟ್ಟ ಎಂದು ಕೊಂಡಳು ಆಕೆ. ಗಂಡ ಅದನ್ನು ತಮ್ಮ ಕುಟುಂಬದ ಉಪಯೋಗಕ್ಕೆ ಬಳಸಿಕೊಳ್ಳುವಂತೆ ಒತ್ತಾಯಿಸಿದಳು. ಆದರೆ ಗಂಡ ಅದಕ್ಕೆ ಒಪ್ಪಲಿಲ್ಲ. “ಷರರ ಸೊತ್ತು ನಮಗೆ ಬೇಡ ಅದರ ಚಿಕ್ಕಾಸನ್ನೂ ನಾನು ಮುಟ್ಟುವುದಿಲ್ಲ. ಅದನ್ನು ಕಳೆದುಕೊಂಡವರನ್ನು ಹುಡುಕಬೇಕು. ಸತ್ಯಕ್ಕೆ ನಾನೆಂದಿಗೂ ದ್ರೋಹ ಬಗೆಯಲಾರೆ” ಎಂದು ಹೇಳಿದ.

ಕೆಲವು ಕಾಲ ಕಳೆಯಿತು. ಒಂದು ದಿನ ಒಬ್ಬ ಗೃಹಸ್ಥನು ಧರ್ಮಬೋಧಕನ ಮನೆಗೆ ಬಂದ. ತಾನು ಕಳೆದುಕೊಂಡ ಒಡವೆಗಳ ವಿವರಣೆ ನೀಡಿದ. ತಕ್ಷಣ ಧರ್ಮಬೋಧಕ ತನಗೆ ಸಿಕ್ಕಿದ ಚಿನ್ನಾಭರಣಗಳ ಚೀಲವನ್ನು ಅವನಿಗೆ ಒಪ್ಪಿಸಿದ “ತುಂಬ ಉಪಕಾರ ಮಾಡಿದಿರಿ” ಎನ್ನುತ್ತ ಬಂದವನು ಹೊರಟು ಹೋದ.

ಧರ್ಮಬೋಧಕನ ಹೆಂಡತಿಗೆ ಭಾರೀ ಕೋಪ ಬಂತು. ಚಿನ್ನಾಭರಣಗಳನ್ನು ಮರಳಿ ಪಡೆದ ಆ ಧನಿಕ ಅದರ ಸ್ವಲ್ಪ ಭಾಗವನ್ನಾದರೂ ತಮಗೆ ಕೊಡಬೇಕಿತ್ತು ಎಂದುಕೊಂಡಳು ಆಕೆ. ತನ್ನ ಗಂಡನ ಮಿತಿಮೀರಿದ ಸತ್ಯ ಸಂಧತೆಗಾಗಿ ಅವನನ್ನೂ ದೂರಿದಳು. ಆದರೆ ಗಂಡನು ಕೋಪಗೊಳ್ಳಲಿಲ್ಲ. “ಸತ್ಯ ಸಂಧತೆ ಯೇ ಸರ್ವ ಶ್ರೇಷ್ಠ ನೀತಿ. ಅದಕ್ಕೆ ತಪ್ಪಿ ನಡೆಯುವುದು ತರವಲ್ಲ. ಅದು ನನ್ನಿಂದಾಗದು. ಜನಕ್ಕೆ ನೀತಿ ಬೋಧಿಸುವವರೇ ಅನೀತಿಯ ಹಾದಿ ಹಿಡಿದರೆ, ಬೇಲಿಯೇ ಹೊಲ ಮೇದಂತೆ ಆಗುವುದಿಲ್ಲವೆ?” ಎಂದುಬಿಟ್ಟ.

ಇನ್ನೂ ಕೆಲವು ದಿನಗಳು ಸಂದುವು. ಅಷ್ಟರಲ್ಲಿ ಆ ಧನಿಕನು ಧರ್ಮಬೋಧಕನ ಮನೆಗೆ ಮತ್ತೆ ಬಂದ. ಧರ್ಮಬೋಧಕನು ತನ್ನ ಮನೆಗೊಮ್ಮೆ ಬರಲೇಬೇಕೆಂದು ಒತ್ತಾಯಿಸಿದ. ಧರ್ಮಬೋಧಕ ಒಪ್ಪಿಕೊಂಡ. ಹೇಳಿದ ಆ ಶ್ರೀಮಂತನ ಮನೆಗೆ ಹೋದ. ಭರ್ಜರಿಯಾಗಿ ಊಟೋಪಚಾರಗಳು ನಡೆದವು. ಧರ್ಮಬೋಧಕ ತನ್ನ ಮನೆಗೆ ಹೊರಟು ನಿಂತ ಆಗ ಆ ಶ್ರೀಮಂತನಿಂದ ೫೦ ಪೌಂಡುಗಳ ಒಂದು ಚೆಕ್‌ ಮತ್ತು ವಾರ್ಷಿಕವಾಗಿ ೩೦೦ ಪೌಂಡು ಆದಾಯ ತರಬಲ್ಲ ಚಿನ್ನಾಭರಣಗಳ ಕಾಣಿಕೆ ಆತನಿಗೆ ದೊರೆಯಿತು. ಉದಾರಿಯಾದ ಆ ಧನಿಕನಿಗೆ ತುಂಬುಹೃದಯದ ಕೃತಜ್ಞತೆ ಅರ್ಪಿಸಿ, ಧರ್ಮಬೋಧಕ ಹೊರಟು ಬಂದ. ಅಂದಿಗೆ ಅವನ ಬಡತನವೂ ನೀಗಿತು, ಕಷ್ಟ ಕಾರ್ಪಣ್ಯಗಳೂ ತೊಲಗಿ ಹೋದವು.

ಧರ್ಮಬೋಧಕನ ಸತ್ಯಸಂಧತೆ ಅವನನ್ನು ಕಾಪಾಡಿತು.

* * *