ಒಂದು ಊರು ಇತ್ತು. ಅಲ್ಲೊಬ್ಬ ಜಮೀನುದಾರನಿದ್ದ. ವಾರ್ಷಿಕ ೨೦೦ ಪೌಂಡು ಉತ್ಪತ್ತಿ ಬರುವ ಭೂಮಿ ಅವನಿಗಿತ್ತು. ಬೇಸಾಯದ ಕೆಲಸಗಳನ್ನೆಲ್ಲ ಆಳುಗಳೇ ಮಾಡುತ್ತಿದ್ದರು. ಸ್ವತಃ ದುಡಿವ ಅಭ್ಯಾಸ ಅವನಿಗಿರಲಿಲ್ಲ.

‘ಆಳು ಮಾಡಿದ್ದು ಹಾಳು’ ಅನ್ನುತ್ತಾರಲ್ಲ? ಹಾಗೇ ಆಯಿತು. ಜಮೀನುದಾರನ ಬೇಸಾಯ ಸರಿಯಾಗಿ ನಡೆಯಲಿಲ್ಲ. ಒಳ್ಳೆಯ ಫಸಲು ಅವನಿಗೆ ಬರಲಿಲ್ಲ. ವೆಚ್ಚ ಹೆಚ್ಚುತ್ತ ಹೋಯಿತು. ಆದಾಯ ಕಡಿಮೆಯಾಯಿತು. ಜಮೀನುದಾರ ಸಾಲದಲ್ಲಿ ಬಿದ್ದ. ಕೊನೆಗೆ ಜಮೀನಿನ ಅರ್ಧಭಾಗವನ್ನು ಮಾರಿ, ಸಾಲ ಸಂದಾಯ ಮಾಡಿದ.

ಇನ್ನೂ ಅರ್ಧಭಾಗ ಉಳಿದಿದೆಯಲ್ಲ? ಅದರ ಬೇಸಾಯ ನಡೆಯಬೇಕಷ್ಟೆ? ಜಮೀನುದಾರ ಅದರ ಬಗೆಗೆ ಯೋಚಿಸಿದ. ಕಟ್ಟ ಕಡೆಗೆ ಅದನ್ನು ೨೦ ವರುಷಗಳ ಅವಧಿಗೆಂದು ಗೇಣಿಗೆ ಕೊಟ್ಟ.

ಕೆಲವು ಕಾಲ ಕಳೆಯಿತು. ಒಂದು ದಿನ ಗೇಣಿದಾರ ಭೂಮಾಲಿಕನ ಮನೆಗೆ ಬಂದ. ಆವರೆಗಿನ ಗೇಣಿಯನ್ನೆಲ್ಲ ಸಂದಾಯ ಮಾಡಿದ ಮಾತುಕತೆಯ ಮಧ್ಯೆ ಧನಿಯು ಆ ಹೊಲಗಳನ್ನು ಮಾರಲಿರುವನೇ ಎಂದು ವಿಚಾರಿಸಿದ. ಭೂಮಾಲಿಕನಿಗೆ ಆಶ್ಚರ್ಯವಾಯಿತು. ಆ ಬಡರೈತನಲ್ಲಿ ಅಷ್ಟು ಹಣ ಹೇಗೆ ಬಂತು ಎಂದು ತಿಳಿಯದಾಯಿತು. “ನನ್ನ ಎಲ್ಲ ಹೊಲಗಳ ಸಾಗುವಳಿ ನಡೆಸಿದರೂ ನನಗೆ ಲಾಭ ಸಿಗಲಿಲ್ಲ ನನ್ನಲ್ಲಿ ಚಿಕ್ಕಾಸೂ ಉಳಿಯಲಿಲ್ಲ. ನಿನಗಿದ್ದ ಭೂಮಿಯ ಅರ್ಧಭಾಗದಷ್ಟು ಹೊಲಗಳಲ್ಲಿ ಮಾತ್ರ ನೀನು ಬೇಸಾಯ ಮಾಡಿದೆ. ಆದರೂ ನೀನಿಂದು ಗೇಣಿ ಸಂದಾಯ ಮಾಡಿದ್ದೀಯಾ. ಈಗ ಹೊಲಗಳನ್ನು ಕೊಳ್ಳಲಿಕ್ಕೂ ಸಿದ್ಧನಿದ್ದಿಯಾ. ನಿನ್ನಲ್ಲಿ ಅಷ್ಟು ಹಣ ಹೇಗೆ ಬಂತು ಹೇಳು?” ಎಂದು ಅವನು ರೈತನನ್ನು ಪ್ರಶ್ನಿಸಿದ.

ಜಮೀನುದಾರನ ಮಾತು ಕೇಳಿ ರೈತನಿಗೆ ನಗು ಬಂತು. ನಗುತ್ತಲೇ ಅವನು ಉತ್ತರ ಕೊಟ್ಟ, “ನೀವು ಸ್ವತಃ ಶ್ರಮಪಟ್ಟು ದುಡಿಯಲಿಲ್ಲ. ಕೆಲಸದಲ್ಲಿ ಸೋಮಾರಿ ತನ ತೋರಿಸಿದರಿ. ‘ಹೋಗಿ ಕೆಲಸ ಮಾಡಿ’ ಎಂದು ಆಳುಗಳನ್ನು ಅಟ್ಟದಿರಿ. ನೀವು ಮಾಡಬೇಕಾದ ಕೆಲಸಕ್ಕೆ ಬೇರೆಯವರನ್ನೆ ಕಳಿಸಿದರಿ. ಆದಕಾರಣ ನಿಮ್ಮ ಬಳಿಗೆ ಬರಬೇಕಾಗಿದ್ದ ಸಂಪತ್ತು ನಿಮ್ಮಿಂದ ದೂರ ಹೋಯಿತು. ನಾನು ನಿಮ್ಮ ಹಾಗೆ ಮಾಡಲಿಲ್ಲ. ಕೆಲಸಕ್ಕೆ ನಾನೇ ಬಂದೆ. ಬೆವರು ಸುರಿಸಿ ನಾನೇ ದುಡಿದೆ. ಅದರಿಂದಾಗಿ ಒಳ್ಳೆಯ ಫಸಲು ನನಗೆ ಬಂದಿತು ಸಂಪತ್ತು ಕೈ ಸೇರಿತು. ನಿಮ್ಮ ಕೆಲಸ ಮಾಡಲು ಆಳನ್ನೆ ‘ಹೋಗು’ ಅಂದಾಗ ಸಂಪತ್ತನ್ನೆ ‘ಹೋಗು’ ಅಂದಂತಾಯಿತು. ಕೆಲಸಕ್ಕೆ ನಾನೇ ಬಂದು ಶ್ರಮಪಟ್ಟಾಗ ಸಂಪತ್ತನ್ನೆ ‘ಬಾ’ ಎಂದು ಕರೆದಂತಾಯಿತು.”

ರೈತನ ಮಾತುಕೇಳಿದ ಜಮೀನುದಾರನಿಗೆ ತನ್ನ ತಪ್ಪಿನ ಅರಿವಾಯಿತು. ಇನ್ನೆಂದಿಗೂ ಅಂಥ ತಪ್ಪು ಮಾಡಬಾರದೆಂಬ ನಿರ್ಧಾರ ಮನದಲ್ಲಿ ಮೂಡಿತು.

* * *