ಅದೊಂದು ಕಗ್ಗತ್ತಲ ರಾತ್ರೆ. ಇಂಗ್ಲಿಷ್‌ ಗೃಹಸ್ಥನೊಬ್ಬ ಸಾರೋಟನಲ್ಲಿ ಪಯಣ ಹೊರಟಿದ್ದ. ರಸ್ತೆ ನಿರ್ಜನವಾಗಿತ್ತು. ಫಕ್ಕನೆ ಡಕಾಯಿತನೊಬ್ಬ ಅಲ್ಲಿ ಪ್ರತ್ಯಕ್ಷನಾದ ಅವನು ಕುದುರೆಯ ಮೇಲೆ ಕೂತಿದ್ದ. ಅವನ ಕೈಯಲ್ಲಿ ಪಿಸ್ತೂಲು ಇತ್ತು. ಅದನ್ನು ಅವನು ಪ್ರಯಾಣಿಕನ ಎದೆಗೆ ಗುರಿಯಿಟ್ಟಿದ್ದ. ಜೀವದಾಸೆಯಿದ್ದರೆ ಪ್ರಯಾಣಿಕನು ತನ್ನ ಹಣವನ್ನೆಲ್ಲ ಕೊಟ್ಟುಬಿಡಬೇಕೆಂದು ಅವನು ಬೆದರಿಕೆ ಹಾಕಿದ್ದ “ಒಬ್ಬಂಟ ದರೋಡೆಗಾರ ನಿನ್ನನ್ನು ಎಂದಿಗೂ ದೋಚಲಾರನೆಂದು ಬಡಾಯಿಕೊಚ್ಚು ತಿದ್ದೆಯಲ್ಲಾ? ಅದು ನನ್ನ ಗಮನಕ್ಕೆ ಬಂದಿದೆ. ಇಗೋ ನಾನೊಬ್ಬ ಸುಲಿಗೆಗಾರ ಒಬ್ಬಂಟಿಯಾಗಿ ಬಂದಿದ್ದೇನೆ. ನಿನ್ನನ್ನೀಗ ದೋಚುವೆನೊ ಇಲ್ಲವೋ ನೋಡುತ್ತಿರು. ನಿನ್ನ ಬಡಾಯಿ ಅದೆಷ್ಟು ನಿರರ್ಥಕ ಎಂಬುದು ನನಗೀಗ ತಿಳಿಯುವುದು” ಎಂದು ಆತ ಘರ್ಜಿಸಿದ.

ಪಯಣಿಗ ಒಂದಿಷ್ಟೂ ವಿಚಲಿತನಾಗಲಿಲ್ಲ. ತನ್ನಲ್ಲಿರುವ ಹಣವನ್ನು ಹೊರತೆಗೆಯಲೆಂಬಂತೆ ಅವನು ಕೋಟನ ಕಿಸೆಗೆ ಕೈತೂರಿದ “ನಿನ್ನ ಹಿಂದೆಗಡೆಯವನ ಸಹಾಯವಿಲ್ಲದಿದ್ದರೆ ಈಗಲೂ ನನ್ನನ್ನು ದೋಚುವುದು ನಿನಗೆ ಸಾಧ್ಯವಿಲ್ಲ” ಎನ್ನುತ್ತ, ಡಕಾಯಿತ ಹಿಂದಿರುಗಿ ನೋಡುತ್ತಿದ್ದಾಗ, ಪಯಣಿಗ ಮಿಂಚಿನ ವೇಗದಲ್ಲಿ ತನ್ನ ಪಿಸ್ತೂಲು ಹೊರ ತೆಗೆದು ಗುಂಡು ಹಾರಿಸಿಬಿಟ್ಟ. ಡಕಾಯಿತ ಸತ್ತು ಬಿದ್ದ. ಬಂದ ಗಂಡಾಂತರ ದೂರವಾಯಿತು. ಗೃಹಸ್ಥನ ಪ್ರಯಾಣ ಮುಂದುವರಿಯಿತು.

ಧೈರ್ಯ ಮತ್ತು ಪ್ರಸಂಗಾವಧಾನತೆಗಳು ಅವನನ್ನು ಗಂಡಾಂತರದಿಂದ ಪಾರು ಮಾಡಿದ್ದವು.

* * *