ಇತ್ತೀಚಿನ ದಶಕಗಳಲ್ಲಿ ನಮ್ಮ ಸಾಹಿತ್ಯ ಹಾಗೂ ಸಾಮಾಜಿಕ ಸಂದರ್ಭಗಳಲ್ಲಿ ‘ಮಹಿಳಾವಾದ’ ಎಂಬ ಪರಿಕಲ್ಪನೆಯೊಂದು ಪ್ರಚಲಿತವಾಗಿದೆ. ‘ಮಹಿಳಾವಾದ’ ಅನ್ನುವ ಈ ಮಾತು ಇಂಗ್ಲಿಷಿನ Femenism ಎಂಬ ಪದದ ಕನ್ನಡ ಅನುವಾದವಾದರೂ, ಯಾಕೋ ‘ವಾದ’ ಅನ್ನುವ ಕಲ್ಪನೆಯೆ ನನಗೆ ಇಷ್ಟವಾಗುತ್ತಿಲ್ಲ. ಬಹುಶಃ ‘ಮಹಿಳಾಧ್ವನಿ’ ಅನ್ನುವುದು ಹೆಚ್ಚು ಸಮರ್ಪಕವೇನೋ, ಯಾಕೆಂದರೆ ಮಹಿಳೆ ತನ್ನ ಪರವಾಗಿ ತಾನು ಮಾತನಾಡಲು ತೊಡಗಿದ ಈ ಧ್ವನಿಯಲ್ಲಿ ಒಂದು ಹೊಸ ಎಚ್ಚರವಿದೆ, ಆತ್ಮ ಪ್ರತ್ಯಯವಿದೆ, ವೈಚಾರಿಕತೆ ಇದೆ, ಪ್ರತಿಭಟನೆಯ ಲಕ್ಷಣಗಳಿವೆ. ಈ ಬಗೆಯ ಧ್ವನಿ ಈವರೆಗೂ ಇರಲಿಲ್ಲವೆಂದೇ ಹೇಳಬಹುದು. ಅದು ಯಾಕೆ ಇರಲಿಲ್ಲ ಅನ್ನುವುದರ ಕಾರಣಗಳ ಒಂದು ಚರಿತ್ರೆಯೇ ಇದೆ ಈ ನಮ್ಮ ಭಾರತದಲ್ಲಿ ಹಾಗೂ ಇದನ್ನು ಒಳಗೊಂಡ ಈ ಜಾಗತಿಕ ವಿಸ್ತಾರದಲ್ಲಿ!

ಈ ಚರಿತ್ರೆ ಇದೆಯಲ್ಲ ಅದು ಎಂದೂ ಮಹಿಳೆಯರ ಪರವಾಗಿ ಇರಲಿಲ್ಲ. ಹಾಗೆಂದರೆ ಅದು ಸಂಪೂರ್ಣವಾಗಿ ಮಹಿಳೆಯರ ವಿರುದ್ಧವಾಗಿ ಇತ್ತೆಂದೂ ಹೇಳಲು ಬರುವುದಿಲ್ಲ. ಮೇಲು ನೋಟಕ್ಕೆ ಮಹಿಳೆಯರನ್ನು ಒಂದು ರೀತಿಯಲ್ಲಿ ಗೌರವಿಸುವಂತೆ ತೋರುತ್ತ, ಆಕೆಯನ್ನು ವೈಭವೀಕರಿಸುತ್ತ, ಇದೇ ಹೊತ್ತಿನಲ್ಲಿ ಆಕೆಯ ವ್ಯಕ್ತಿಸ್ವಾತಂತ್ರ ವನ್ನು ನಿರಾಕರಿಸುತ್ತ, ಅಧೀನತೆಯ ನೆಲೆಯಲ್ಲಿಯೆ ಆಕೆ ಇರುವಂತೆ ನೋಡಿಕೊಳ್ಳುವ ತಂತ್ರವನ್ನೂ ಕಾಯ್ದುಕೊಂಡು ಬರಲಾಗಿದೆ. ಈ ಇಬ್ಬಂದಿತನದ ಚರಿತ್ರೆಯನ್ನು ‘ಪುರುಷ ಪ್ರಧಾನ ನಿಲುವಿನ ಚರಿತ್ರೆ’ ಎಂದು ಗುರುತಿಸಲಾಗಿದೆ. ಈಗ ಸ್ತ್ರೀವಾದದ ನೆಲೆಯಲ್ಲಿ ಮಹಿಳೆ ಪ್ರಶ್ನಿಸುತ್ತಿರುವುದು ಈ ಚರಿತ್ರೆಯನ್ನೆ ಮತ್ತು ತನ್ನ ಪರವಾದ ‘ವಾದ’ದಲ್ಲಿ ಮಂಡಿಸುತ್ತಿರುವುದು ತನಗೆ ನಿರಾಕೃತವಾದ ಸ್ವಾತಂತ್ರ  ಹಾಗೂ ಸಮಾನತೆಗಳ ಗಳಿಕೆಯನ್ನೆ.

ವಾಸ್ತವವಾಗಿ ಗಂಡು ಮತ್ತು ಹೆಣ್ಣು ಇಬ್ಬರೂ ಸೇರಿಯೆ ಈ ಜೀವನ ಅನ್ನುವುದು ನಿಜವಾದರೂ, ಅವರಿಬ್ಬರ ನಿಸರ್ಗ ನಿರ್ಮಿತ ದೈಹಿಕ ರಚನೆಗಳೇ ಅವರಿಬ್ಬರೂ ಬದುಕಿನಲ್ಲಿ ನಿರ್ವಹಿಸಬೇಕಾದ ವಿಭಿನ್ನವೂ ಮತ್ತು ಪೂರಕವೂ ಆದ ಕಾರ್ಯಗಳಿಗೆ ಅನುಗುಣವಾಗಿವೆ. ಅಷ್ಟೇ ಅಲ್ಲ ಅವರಿಬ್ಬರ ಮನಸ್ಸಿನ ಮೂಲದ್ರವ್ಯದಲ್ಲೂ ಗಮನಾರ್ಹವಾದ ವ್ಯತ್ಯಾಸಗಳಿವೆ. ಈ ದೃಷ್ಟಿಯಿಂದ ನೋಡಿದರೆ, ಪುರುಷರಿಗಿಂತ ಭಿನ್ನವಾದ ಒಂದು ಮಾರ್ದವತೆ, ಕಷ್ಟ-ನೋವು-ಸಂಕಟಗಳನ್ನು ತಾಳಿಕೊಳ್ಳುವ ಅಸಾಧಾರಣ ಸಹನೆ, ಸಂತಾನ ಹಾಗೂ ಸಂಸ್ಕೃತಿ ಪರವಾದ ಗಾಢವಾದ ಕಾಳಜಿಗಳು, ಗಂಡಸಿನಷ್ಟು ರೂಕ್ಷವಾಗದ, ವ್ಯಗ್ರವಾಗದ ಒಂದು ಮಾನಸಿಕ ಹದ-ಇತ್ಯಾದಿಗಳು ಮಹಿಳೆಯ ಮನಸ್ಸಿನ ಲಕ್ಷಣಗಳಾಗಿವೆ ಎಂದು ಹೇಳಬಹುದು. ಮನುಷ್ಯರಾಗಿ ಅವರಿಬ್ಬರೂ ಸಮಾನರೆನ್ನುವುದು ನಿರ್ವಿವಾದವಾದರೂ, ಮಹಿಳೆ ಪುರುಷನ ಯಜಮಾನ್ಯತೆಗೆ ಅಧೀನಳಾಗಿ ಸದಾ ಪುರುಷ ಪ್ರಪಂಚದ ಅಂಚಿನಲ್ಲಿಯೇ ಬದುಕಬೇಕಾದ ನಿರ್ಬಂಧಕ್ಕೆ ಒಳಗಾಗುವಂಥ ಸಾಮಾಜಿಕ ವ್ಯವಸ್ಥೆಯೊಂದು ಸುಭದ್ರವಾಗಿ  ಹಾಗೂ ಪರಂಪರಾಗತವಾಗಿ ಉಳಿದು ಬಂದಿತೆಂಬುದು ಒಂದು ವಿಪರ‍್ಯಾಸವಾಗಿದೆ. ಮತ್ತು ಈ ಸಮಾಜದ ನಿಯಂತ್ರಕರು ಬಹುಮಟ್ಟಿಗೆ ಪುರುಷರೇ ಆದುದರಿಂದ, ಹೆಣ್ಣಿನ ಬದುಕು ಕೇವಲ ಅಡುಗೆ ಮನೆ ಹಾಗೂ ಸಂತಾನದ ಮುಂದುವರಿಕೆಗೆ ಸೀಮಿತವಾಗಿ, ಬದುಕಿನ ಇನ್ನಿತರ ಕ್ಷೇತ್ರಗಳು ಪುರುಷರ ಪಾಲಿಗೆ ದಕ್ಕಿದ್ದೇ ಮಹಿಳೆಯ ಪರಾಧೀನತೆಗೆ ಮುಖ್ಯವಾದ ಕಾರಣಗಳೆನ್ನಬಹುದು. ಹೀಗಾಗಿ ಮಹಿಳೆ ಶಿಕ್ಷಣದ ಸವಲತ್ತುಗಳಿಂದ, ಮತ್ತು ಧಾರ್ಮಿಕ ಸಂಬಂಧಿಯಾದ ಆಚರಣೆಗಳಿಂದ ಸಾಮಾಜಿಕವಾದ ಸ್ಥಾನಮಾನಗಳಿಂದ ವಂಚಿತೆಯಾಗಿ ಅಧೀನತೆಯನ್ನು ಒಪ್ಪಿಕೊಳ್ಳುವ ಅಸಹಾಯಕ ಸ್ಥಿತಿಗೆ ತಳ್ಳಲ್ಪಟ್ಟಳು. ‘ಹೆಣ್ಣು ಎಳೆಯಂದಿನಲ್ಲಿ ತಂದೆ ತಾಯಿಯರ ಅಧೀನ, ಯೌವನದಲ್ಲಿ ಗಂಡನ ಅಧೀನ, ಮುಪ್ಪಿನಲ್ಲಿ ಮಕ್ಕಳ ಅಧೀನ-ಆದ ಕಾರಣ ಹೆಣ್ಣು ಸ್ವಾತಂತ್ರ ಕ್ಕೆ ಅರ್ಹಳಲ್ಲ’- ಎಂದ ಮನುಧರ್ಮ ಶಾಸ್ತ್ರದ ಅಮಾನವೀಯ ಸಿದ್ಧಾಂತವೂ, ಮತ್ತು ನಮ್ಮ ದೇಶದ ಮಹಾಕಾವ್ಯಗಳು ಚಿತ್ರಿಸಿದ ಸೀತೆ, ಸಾವಿತ್ರಿ, ಅನುಸೂಯ, ದಮಯಂತಿ ಮೊದಲಾದ ಪಾತ್ರಗಳು ಮಂಡಿಸಿದ ಪಾತಿವ್ರತ್ಯದ ಮಾದರಿಗಳೂ ನಮ್ಮ ಮಹಿಳೆಯರಿಗೆ ಕೇವಲ ಅಧೀನತೆಯ ಹಾಗೂ ವಿಧೇಯತೆಯ ಪಾಠಗಳನ್ನು ಕಲಿಸಿದುವೇ ವಿನಾ, ಮಹಿಳೆಯಾದವಳು ತನಗೂ ಒಂದು ವ್ಯಕ್ತಿತ್ವವಿದೆ, ಈ ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲಿ, ಅವಕಾಶ ಸಿಕ್ಕರೆ ತಾವೂ ಪುರುಷರಿಗೆ ಹೆಗಲೆಣೆಯಾಗಿ ನಿಲ್ಲಬಲ್ಲೆವು ಎಂಬ ಧೈರ್ಯವನ್ನು ಆತ್ಮ ವಿಶ್ವಾಸವನ್ನೂ ಕಲಿಸಲಿಲ್ಲ. ಹೀಗಾಗಿ ಒಂದರ್ಥದಲ್ಲಿ ಮಹಿಳೆ ಶತಶತಮಾನಗಳ ಕಾಲ ಶೋಷಣೆಗೆ ಒಳಗಾಗಿದ್ದಾಳೆ ಅನ್ನುವುದು ಒಂದು ಕಹಿಯಾದ ಸತ್ಯವಾಗಿದೆ.

ಜಗತ್ತಿನ ಬಹುತೇಕ ಎಲ್ಲ ಪ್ರಮುಖ ಧರ್ಮಗಳೂ ಮಹಿಳೆಯರ ವಿಚಾರದಲ್ಲಿ ತೀರಾ ಅನುದಾರವಾಗಿ ನಡೆದುಕೊಂಡಿವೆ ಎಂದು ಹೇಳಿದರೆ ತಪ್ಪೇನಿಲ್ಲ. ಆದರೆ  ಬುದ್ಧ ಬಸವರಂಥ ಕೆಲವರು,ಹತ್ತೊಂಬತ್ತನೆಯ ಶತಮಾನದ ಸ್ವಾಮಿ ವಿವೇಕಾನಂದರು ಹಾಗೂ ಅಂದಿನ ಸಮಾಜ ಸುಧಾರಕರಾದ ಈಶ್ವರಚಂದ್ರವಿದ್ಯಾಸಾಗರ, ರಾಜಾರಾಮ ಮೋಹನರಾಯ್ ಮೊದಲಾದವರು, ಮಹಿಳೆಯರು ತಮ್ಮ ಶೋಷಣೆಯ ಐದು ಸಾವಿರವರ್ಷಗಳ ಚರಿತ್ರೆಯಿಂದ ಹೊರಗೆಬಂದು ನಿಲ್ಲುವಂಥ ವಾತಾವರಣವೊಂದನ್ನು ನಿರ್ಮಾಣ ಮಾಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಮಹಾತ್ಮ ಗಾಂಧಿಯವರು ಹೂಡಿದ ಭಾರತೀಯ ಸ್ವಾತಂತ್ರ  ಚಳುವಳಿ, ಮಹಿಳೆಯರೂ ಪುರುಷರೊಂದಿಗೆ ಸರಿಸಮನಾಗಿ ಈ ರಾಷ್ಟ್ರೀಯ ಆಂದೋಲನದಲ್ಲಿ ಪಾಲುಗೊಳ್ಳುವ ಅವಕಾಶವನ್ನೂ, ಅವರ ವ್ಯಕ್ತಿತ್ವದಲ್ಲೊಂದು ಹೊಸ ಎಚ್ಚರವನ್ನೂ ತಂದು ಕೊಟ್ಟಿತೆಂದರೆ ಅದೇನೂ ಉತ್ಪ್ರೇಕ್ಷೆಯ ಮಾತಲ್ಲ. ವಸಾಹತುಷಾಹಿ ಸಂದರ್ಭದಲ್ಲಿ ದೊರೆತ ಶಿಕ್ಷಣ ಸೌಲಭ್ಯಗಳು ಪಶ್ಚಿಮದ ವಿವಿಧ ಸಾಮಾಜಿಕ-ರಾಜಕೀಯ-ವೈಜ್ಞಾನಿಕ ಚಿಂತನೆಗಳೊಂದಿಗೆ ಉಂಟಾದ ಮುಖಾಮುಖಿಯ ಪರಿಣಾಮದಿಂದ ಲಭ್ಯವಾದ ಹೊಸ ತಿಳಿವಳಿಕೆ, ಸ್ವಾತಂತ್ರೊ ತ್ತರ ಸಂದರ್ಭದ ‘ಪ್ರಜಾಪ್ರಭುತ್ವವಾದೀ’ ಪರಿಸರದಲ್ಲಿ ಈ ರಾಷ್ಟ್ರದ ಬದುಕಿನಲ್ಲಿ ಸಂಭವಿಸಿದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಒತ್ತಡಗಳ ಕಾರಣದಿಂದ, ಅದುವರೆಗೂ ದಮನಕ್ಕೆ ಒಳಗಾಗಿದ್ದ ವಿವಿಧ ಸಾಮಾಜಿಕ ಸ್ತರಗಳ ಅನುಭವ ಪ್ರಪಂಚಗಳು ಅನಾವರಣಗೊಂಡು ಧೈರ್ಯದಿಂದ ಸಾಮಾಜಿಕ ಅಸಮಾನತೆಗಳ ವಿರುದ್ಧವಾಗಿ ಬಂಡಾಯವೆದ್ದ ಒಂದು ಅಭೂತಪೂರ್ವ ಘಟನೆ- ಈ ಎಲ್ಲ ಮಹತ್ವದ ಬದಲಾವಣೆಗಳ ಜತೆಗೆ ಭಾರತದ ಮಹಿಳೆಯೂ ಒಂದು ಹೊಸ ಹುಟ್ಟನ್ನು ಪಡೆದುಕೊಂಡಳೆಂಬುದು ಗುರುತಿಸಿಕೊಳ್ಳಬೇಕಾದ ಸಂಗತಿಯಾಗಿದೆ. ಜತೆಗೆ ಪಶ್ಚಿಮದ ಉದಾರ ಮಾನವತಾವಾದದ ಪರಿಣಾಮವಾದ ‘ಮಹಿಳಾವಾದೀ ಚಿಂತನೆ’ಗಳ ಪರಿಚಯವೂ, ನಮ್ಮ ಮಹಿಳೆಯರ ಮೇಲೆ ಪ್ರಭಾವವನ್ನು ಬೀರಿದೆ. ಸರಿಯಾದ ಶಿಕ್ಷಣ ಹಾಗೂ ಆರ್ಥಿಕ ಸ್ವಾತಂತ್ರಗಳೇ ಮಹಿಳೆಯನ್ನು ಸ್ವಾವಲಂಬಿಯನ್ನಾಗಿ ಮಾಡಬಲ್ಲವು. ಶತಶತಮಾನಗಳ ಪರಾವಲಂಬನದಿಂದ ಪಾರಾಗಲು ಇರುವ ಮಾರ್ಗ ಇದೊಂದೇ ಎಂಬ- ಹೊಸ ಬಗೆಯ ಸಾಮಾಜಿಕ ತಿಳಿವಳಿಕೆ ಆಕೆಯಲ್ಲಿ ಉಂಟಾಗಿದೆ. ಇನ್ನು ಸಾಹಿತ್ಯಾಭಿವ್ಯಕ್ತಿಗೆ ಸಂಬಂಧಿಸಿದಂತೆ ‘ಮಹಿಳಾವಾದ’ದ ಲಕ್ಷಣಗಳನ್ನು ಗುರುತಿಸುವುದಾದರೆ: ಮಹಿಳೆಗೆ ತನ್ನದೇ ಆದೊಂದು ಮನೋಧರ್ಮವಿದೆ. ಆ ಮನೋಧರ್ಮದ ಮೂಲಕ ಆಕೆ ಈ ಜಗತ್ತನ್ನು ಪುರುಷರಿಗಿಂತ ಭಿನ್ನವಾಗಿ ಗ್ರಹಿಸಬಲ್ಲಳು; ಹಾಗೂ ತನ್ನದೇ ಆದ ಅನುಭವ ಪ್ರಪಂಚವನ್ನು, ಇದುವರೆಗೂ ಪುರುಷರು ಚಿತ್ರಿಸಿದ ಕ್ರಮಕ್ಕಿಂತ ಬೇರೆಯಾಗಿ ಚಿತ್ರಿಸಬಲ್ಲಳು. ಈ ಸೃಜನ ಪ್ರಕಿಯೆಯ ಹಿಂದೆ ಶತಶತಮಾನಗಳ ಕಾಲ ತನ್ನನ್ನು ಶೋಷಣೆಗೆ ಈಡು ಮಾಡಿದ ಪುರುಷ ಪ್ರಧಾನ ಚರಿತ್ರೆಯ ಅರಿವೂ ಅವಳಿಗೆ ಇದೆ. ಆದರೆ ಆ ಕಾರಣಕ್ಕೆ ಅವಳಿಗೆ ಆ ಚರಿತ್ರೆಯೊಂದಿಗೆ ಯಾವ ಸ್ಪರ್ಧೆಯೂ ಇಲ್ಲ. ಅದರ ಬದಲು ಬದಲಾದ ಚರಿತ್ರೆಯ ಕಾಲ ಘಟ್ಟದಲ್ಲಿ ಮಹಿಳೆಗೆ ಆತ್ಮಗೌರವ ಹಾಗೂ ದಿಟ್ಟತನದ ಸ್ವತಂತ್ರ ವ್ಯಕ್ತಿತ್ವವೊಂದನ್ನು ನಿರ್ಮಾಣ ಮಾಡಬೇಕೆಂಬ ಶ್ರದ್ಧೆಯೆ,  ಮಹಿಳಾವಾದದ ಮುಖ್ಯ ಕಾಳಜಿಯಾಗಿದೆ.

ಚದುರಿದ ಚಿಂತನೆಗಳು : ೨೦೦೦