ಸ್ತ್ರೀಯರ ಹಲವಾರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಚಿಕಿತ್ಸೆ, ಔಷದೋಪಚಾರ, ವಿಶ್ರಾಂತಿ ಮತ್ತು ಕೌಟುಂಬಿಕ ಬೆಂಬಲ ಬೇಡುವ ಕಾಯಿಲೆಗಳನ್ನು ಗುರ್ತಿಸಲೂ ಸಹ ನಮ್ಮ ಸಮಾಜ ಹಾಗೂ ಕುಟುಂಬಗಳು ಹಿಂಜರಿಯುತ್ತವೆ. ಇಂತಹ ಅಲಕ್ಷಿತ ಆರೋಗ್ಯ ಸಮಸ್ಯೆಗಳ ಪಟ್ಟಿಗೆ ಸುಲಭವಾಗಿ ಸೇರಿಸಬಹುದಾದ ಎರಡು ಕಾಹಿಲೆಗಳೆಂದರೆ ಮುಟ್ಟಿನ ಆರೋಗ್ಯ ಸಮಸ್ಯೆ ಹಾಗೂ ತೀವ್ರತಮವಾಗಿಲ್ಲದ ಮಾನಸಿಕ ಕಾಯಿಲೆಗಳು. ಇವುಗಳು ತೀವ್ರವಾಗಿ ಉಲ್ಬಣಿಸಿ ಇತರರಿಗೆ ತೊಂದರೆ, ಇರಿಸು ಮುರಿಸು ಉಂಟುಮಾಡುವವರೆಗೂ ಆ ಸ್ತ್ರೀಯರಿಗೆ ನ್ಯಾಯವಾಗಿ ಸಿಗಬೇಕಾಗಿರುವ ವೈದ್ಯಕೀಯ ಚಿಕಿತ್ಸೆ ಸಿಗುವುದಿಲ್ಲ. ಹೀಗೆ ಒಳಗೇ ಹಿಡಿದ ಗೆದ್ದಲಿನಂತೆ ಮಹಿಳೆಯರಿಗೆ ಆರೋಗ್ಯವನ್ನು ನಾಶಪಡಿಸುವ ಮಾನಸಿಕ ರೋಗಗಳು ಸಹ ಅಲಕ್ಷ್ಯಕ್ಕೆ ಒಳಗಾಗಿವೆ. ದೈಹಿಕ ಕಾಹಿಲೆಗಳು ಮಹಿಳೆಯರ ಶಾರೀರಿಕ ಆರೋಗ್ಯವನ್ನು ಹಾಳುಗೆಡಹಿದರೆ, ಒಳಗೇ ಇರುವ ಮಾನಸಿಕ ಕಾಯಿಲೆಗಳು ಮಹಿಳೆಯ ಕೌಟುಂಬಿಕ, ವೈವಾಹಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಹಾಳುಗೆಡವುವವಲ್ಲದೆ ‘ಮಾನಸಿಕ ರೋಗ’ ಎಂಬುದನ್ನು ಕಳಂಕವೆಂದೇ ಭಾವಿಸುವ ಸಮಾಜದಲ್ಲಿ ಅವಳನ್ನು ಒಂದು ಸಾಮಾಜಿ ಕಳಂಕವನ್ನು ಹೊತ್ತಿರುವ ದುರ್ದೈವಿಯನ್ನಾಗಿಸುತ್ತದೆ. ಕುಷ್ಟ ಹಾಗೂ ಕ್ಷಯರೋಗಗಳ ಬಗ್ಗೆ ಜನಸಾಮಾನ್ಯರಲ್ಲಿರುವ ಪೂರ್ವ ಗ್ರಹಗಳಿಗಿಂತಾ ಮನೋರೋಗಗಳ ಬಗ್ಗೆ ಅದರಲ್ಲಿಯೂ ಸ್ತ್ರೀಯರ ಮನೋರೋಗಗಳ ಬಗ್ಗೆ ಇರುವ ಪೂರ್ವಗ್ರಹಗಳು ಹೆಚ್ಚು ಪ್ರಬಲವಾಗಿವೆಯೆನ್ನಬಹುದು.

ಪ್ರಸ್ತುತ ಸಂದರ್ಭದಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಇಂದು ಅಭಿವೃದ್ಧಿಶೀಲ ದೇಶಗಳ ಜನತೆಯನ್ನು ಬಹುವಾಗಿ ಕಾಡುತ್ತಿರುವ ನಾಲ್ಕು ರೋಗಗಳ ಪಟ್ಟಿಯಲ್ಲಿರುವ ಏಡ್ಸ, ಕ್ಯಾನ್ಸರ್‌ಮತ್ತು ಹೃದ್ರೋಗಗಳೊಂದಿಗೆ ಮಾನಸಿಕ ರೋಗವನ್ನು ಅಂತರಾಷ್ಟ್ರೀಯ ವಿಶ್ವ ಪ್ರಕ್ಷೇಪಣಗಳ ಆಧಾರದ ಮೇಲೆ ಸೇರಿಸಲಾಗಿದೆ.

[1] ಬಡ ಹಾಗೂ ಅಭಿವೃದ್ಧಿಶೀಲ ದೇಶಗಳಲ್ಲಿರುವ ಮಾನಸಿಕ ರೋಗಗಳ ಗಂಭೀರತೆ ಮತ್ತು ವ್ಯಾಪ್ತಿಯನ್ನು ಈ ಸಂಗತಿ ನಿಚ್ಚಳಗೊಳಿಸಿದೆ. ಪುರುಷರಿಗಿಂತಾ ಹೆಚ್ಚಾಗಿ ಸ್ತ್ರೀಯರು ಮಾನಸಿಕ ರೋಗಗಳಿಂದ ಬಳಲುತ್ತಿರುವುದು ಸಾಬೀತಾಗಿದ್ದು ಇದು ಮಹಿಳೆಯರ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಹಲವಾರು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಸಂಸ್ಥೆಗಳ, ಸರ್ಕಾರಗಳ ಮತ್ತು ಆರೋಗ್ಯ ತಜ್ಞರ ಅಂತಃಸಾಕ್ಷಿಯನ್ನು ಎಚ್ಚರಿಸಿ ಪ್ರಜ್ಞೆ ಮೂಡಿಸಿದೆ. ಇಡೀ ವಿಶ್ವದಲ್ಲಿ ಪುರುಷರ ಎರಡು ಪಟ್ಟು ಸ್ತ್ರೀಯರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಹಾಗೂ ಎಂಟು ಮಹಿಳೆಯರಲ್ಲಿ ಒಬ್ಬಳು ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಪ್ರಮುಖ ಖಿನ್ನತೆಯಿಂದ ನರಳಿದವಳಾಗಿರುತ್ತಾಳೆ ಅಲ್ಲದೆ ಮಹಿಳೆಯರಿಗೆ ದೀರ್ಘಕಾಲೀನ ಖಿನ್ನತೆಯಿಂದ ನರಳುವ ಅಪಾಯ ಹೆಚ್ಚು ಎನ್ನವುದನ್ನು ತೀರ ಇತ್ತೀಚಿನ ವರದಿಯೊಂದು ತಿಳಿಸಿದೆ.[2]

ಇನ್ನು ನಮ್ಮ ದೇಶದಲ್ಲಿ, ಸ್ತ್ರೀಯರಲ್ಲಿ ೧೫% ಹಾಗೂ ಪುರುಷರಲ್ಲಿ ೧೧%ರಷ್ಟು ಮಂದಿ ಮನೋರೋಗಗಳಿಂದ ಬಳಲುತ್ತಿದ್ದಾರೆ.[3] ನಗರ, ಅರೆನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆದ ಹಲವಾರು ಅಧ್ಯಯನಗಳಿಂದ ಒಂದುಸಾವಿರ ಜನಸಂಖ್ಯೆಯಲ್ಲಿ ೨೪ ರಿಂದ ಹಿಡಿದು ೧೨೯ರಷ್ಟು ಜನರು ಮಾನಸಿಕ ರೋಗಗಳಿಂದ ನರಳುತ್ತಿದ್ದಾರೆ ಎಂಬುದು ತಿಳಿದುಬಂದಿದೆ.[4] ಮಹಿಳೆಯರಲ್ಲಿ ವಿವಾಹಿತರೇ ಹೆಚ್ಚಾಗಿ ಮನೋರೋಗಳಿಗೆ ತುತ್ತಾಗುವುದೂ ಅದರಲ್ಲಿಯೂ ವಿಶೇಷವಾಗಿ ಪ್ರಜನನ ವಯೋಮಾನದಲ್ಲಿರುವ ವಿವಾಹಿತರೇ ಈ ರೋಗಗಳಿಗೆ ಬಲಿಯಾಗುತ್ತಿರುವುದು ನಮ್ಮ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ನಡೆದ ಅಧ್ಯಯನಗಳಿಂದ ತಿಳಿದಿಬಂದಿದೆ. ನಮ್ಮ ದೇಶದ ಸ್ತ್ರೀಮನೋರೋಗಿಗಳಲ್ಲಿ ಅರ್ಧಕ್ಕಿಂತಾ ಹೆಚ್ಚು ಜನರಿಗೆ ಅವರು ಪ್ರಜನನ ವಯೋಮಾನದಲ್ಲಿದ್ದು ಸಾಮಾನ್ಯವಾಗಿ ವಿವಾಹಿತರಾದ ನಂತರ ರೋಗ ಕಾಣಿಸಿಕೊಳ್ಳುತ್ತದೆ. ಇಂತಹ ಅಧ್ಯಯನಗಳನ್ನು ವಿಮರ್ಶಿಸಿರುವ ದೇವರ್, ‘ಮದುವೆ’ ಸ್ತ್ರೀಗೆ ವೇದನಾಯುಕ್ತ ಒತ್ತಡ ಉಂಟುಮಾಡಬಲ್ಲದು ಎನ್ನುತ್ತಾರೆ. ಏಕೆಂದರೆ ವಿವಾಹಾನಂತರ ಸ್ತ್ರೀಯರ ಸಾಮಾಜಿಕ, ವೈವಾಹಿಕ, ಲೈಂಗಿಕ, ಕೌಟುಂಬಿಕ ಇತ್ಯಾದಿ ಬಹುಮುಖೀ ಹೊಣೆಗಾರಿಕೆಗಳ ಹೊರೆ ಹೆಚ್ಚುವುದಲ್ಲದೆ ಅದೇ ವೇಳೆಗೆ ಅವರ ಪರಾಧೀನತೆಯೂ ಹೆಚ್ಚಾಗುತ್ತದೆ. ಅಲ್ಲದೆ ಪ್ರಜನನ ಅವಧಿಯಲ್ಲಿ ಮಕ್ಕಳನ್ನು ಹೊತ್ತು ಹೆತ್ತು ಸಾಕುವ ಹೊಣೆಗಾರಿಕೆಯೊಂದಿಗೆ ಅವರ ಪ್ರಜನನ ಆರೋಗ್ಯ ಕಡಿಮೆಯಾಗುವ ಅಥವಾ ಕೆಡುವ ಅಪಾಯಗಳೂ ಇದ್ದೇ ಇರುತ್ತವೆ (ಕೋಷ್ಟಕ ೨೦, ೨೧ ಮತ್ತು ೨೨ ನೋಡಿ).

ಭಾರತದ ರಿಜಿಸ್ಟ್ರಾರ್‌ಜನರಲ್‌ಕಛೇರಿಯು ೧೯೮೪ ರಿಂದ ೧೯೯೪ರ ವರೆಗೆ ನೀಡಿರುವ ಪ್ರಜನನ ವಯೋಮಾನದಲ್ಲಿದ್ದ ಸ್ತ್ರೀಯರ ಸಾವಿನ ಮೊದಲ ಹತ್ತು ಕಾರಣಗಳಲ್ಲಿ, ೧೯೮೪ರಲ್ಲಿ ಹತ್ತನೆಯ ಸ್ಥಾನ ಪಡೆದಿದ್ದ ಆತ್ಮಹತ್ಯೆ ೧೯೯೪ರಲ್ಲಿ ಎರಡನೇ ಸ್ಥಾನ ಪಡೆದಿರುವುದು ಅವರಲ್ಲಿ ಹೆಚ್ಚುತ್ತಿರುವ ಮಾನಸಿಕ ವೇದನೆ ಹಾಗೂ ಅನಾರೋಗ್ಯಗಳಿಗೆ ಹಿಡಿದ ಕೈಗನ್ನಡಿಯಾಗಿದೆ (ಕೋಷ್ಟಕ ೨೨ ನೋಡಿ).4 ಆದರೆ, ಇಂತಹ ಪ್ರಕರಣಗಳಲ್ಲಿ ಮಹಿಳೆಯ ಮಾನಸಿಕ. ದೌರ್ಬಲ್ಯವನ್ನೋ, ಅವಳ ವ್ಯಕ್ತಿತ್ವದ ಗುಣದೋಷಗಳನ್ನೋ ಅಥವಾ ಅವಳು ವಂಶವಾಹಿನಿಗಳ ಮೂಲಕ ಪಡೆದಿರಬಹುದಾದ ಪ್ರವೃತ್ತಿಗಳನ್ನೋ ಅಥವಾ ಇವುಗಳೆಲ್ಲವನ್ನೂ ಅವಳ ಸಾವಿನ ಕಾರಣ/ಕಾರಣಗಳೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ.

ಆದರೆ ಮಹಿಳೆಯರ ಮಾನಸಿಕ ರೋಗಗಳ ಸೆಲೆಯಾದ ಸಾಮಾಜಿಕ ಮತ್ತು ಕೌಟುಂಬಿಕ ಕಾರಣಗಳು ನಿರ್ಲಕ್ಷಿಸಲ್ಪಡುತ್ತಿವೆ. ಮನೋರೋಗಿಗಳಾದ ಸ್ತ್ರೀಯರು ಮುಖ್ಯವಾಗಿ ‘ಖಿನ್ನತೆ’ ಮತ್ತು ‘ಆತಂಕ’ದ ರೋಗಗಳಿಂದ ಬಳಲುತ್ತಿದ್ದು ಅವುಗಳಿಗೆ ಲೈಂಗಿಕ ಹಿಂಸೆ, ವರದಕ್ಷಿಣೆಯ ಕಿರುಕುಳ, ಮಕ್ಕಳಲ್ಲಿದಿರುವುದು ಅದರಲ್ಲಿಯೂ ಗಂಡುಸಂತಾನವಿಲ್ಲದಿರುವುದು, ಬಡತನ, ಗಂಡನ ದುಶ್ಚಟಗಳು ಹಾಗೂ ಅವರು ಅನುಭವಿಸುವ ಅಸಹನೀಯ ಪರಾಧೀನತೆಗಳೇ ಕಾರಣಗಳಾಗಿರುತ್ತವೆ. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚುತ್ತಿರುವ ಅದರಲ್ಲಿಯೂ ವಿವಾಹಿತೆಯರಲ್ಲಿ ಹೆಚ್ಚಾಗುತ್ತಿರುವ ಆತ್ಮಹತ್ಯಗಳ ಸಂಖ್ಯೆಯು ಅವರ ತೀವ್ರ ಮಾನಸಿಕ ನೋವಿನ ಪ್ರತಿಫಲನವೇ ಆಗಿದೆ.

ಮಾನಸಿಕ ಆರೋಗ್ಯದ ಮೇಲೆ ಹಿಂಸೆಯ ಪರಿಣಾಮ

ಹಿಂಸೆಯು ದೇಹದ ಮೇಲೆ ಬೀರುವ ಪ್ರಭಾವಕ್ಕಿಂತಾ ಮನಸ್ಸಿನ ಮೇಲೆ ಬೀರುವ ಪ್ರಭಾವವೂ ಹೆಚ್ಚು ಗಂಭೀರವೂ ತೀವ್ರವೂ ಆಗಿರುತ್ತದೆ. ಮೂಲತಃ ಹಿಂಸೆಯು ಸ್ತ್ರೀಯರ ಆತ್ಮಸಮ್ಮಾನಕ್ಕೆ (Self Esteen) ಧಕ್ಕೆಯುಂಟುಮಾಡಿ ಅವರನ್ನು ಖಿನ್ನತೆ, ಆತ್ಮಹತ್ಯೆ, ತೀವ್ರ ಅಘಾತದ ನಂತರದ ಭಾವನಾತ್ಮಕ ಒತ್ತಡದ ಕಾಯಿಲೆ, ಮತ್ತು ಮದ್ಯಪಾನ ಹಾಗೂ ಇನ್ನಿತರ ಮಾದಕ ವಸ್ತುಗಳ ಸೇವನೆಗೆ ಬಲಿಯಾಗುವ ಅಪಾಯಗಳಿಗೆ ಒಡ್ಡುತ್ತದೆ. ಖಿನ್ನತೆಯನ್ನು ಇಂದು ವಿಶ್ವದ ಗಂಭೀರವಾದ ಮುಖ್ಯ ಮಾನಸಿಕ ಕಾಯಿಲೆಯೆಂದೇ ಗುರ್ತಿಸಲಾಗಿದೆ. ವಿಶ್ವದ ಅನೇಕ ದೇಶಗಳಲ್ಲಿ ಇಂದು ಗಂಡಸರಿಗಿಂತಾ ದುಪ್ಪಟ್ಟು ಸಂಖ್ಯೆಯ ವಯಸ್ಕ ಹೆಣ್ಣುಮಕ್ಕಳ ಖಿನ್ನತೆಯಿಂದ ನರಳುತ್ತಿರುವುದು ಕಂಡುಬಂದಿದೆ.[5] ಇದಕ್ಕೆ ಸ್ತ್ರೀ ಪುರುಷರ ನಡುವೆ ಇರುವ ಜೈವಿಕ ಭಿನ್ನತೆ ಕಾರಣವಲ್ಲ. ಬಡತನ, ಲಿಂಗಾಧಾರಿತ ಪಕ್ಷಪಾತ ಮತ್ತು ಲಿಂಗಾಧಾರಿತ ಹಿಂಸೆಗೆ ಮಹಿಳೆಯರು ಗುರಿಯಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣಗಳಾಗಿವೆ ಎಂಬುದು ಕೆಲವು ಸಂಶೋಧಕರ ಅಭಿಪ್ರಾಯ.[6]

ತಮ್ಮ ಜೀವನ ಸಂಗಾತಿಯಿಂದಲೇ ದೂಷಣೆಗೆ (abuse) ಒಳಗಾಗುವ ಸ್ತ್ರೀಯರು ಈ ಬಗೆಯ ದೂಷಣೆಗೆ ಒಳಗಾಗದ ಸ್ತ್ರೀಯರಿಗಿಂತಾ ಹೆಚ್ಚು ಖಿನ್ನತೆ, ಆತಂಕ, ಅತಿಉತ್ಪ್ರೇಕ್ಷಿತ ಅಸಾಮಾನ್ಯ ಭಯಗಳಿಂದ (phobia) ನರಳುತ್ತಾರೆ ಎಂಬುದನ್ನು ಆಸ್ಟ್ರೇಲಿಯಾ, ನಿಕರಾಗುವ ಮತ್ತು ಪಾಕೀಸ್ಥಾನಗಳಲ್ಲಿ ನಡೆದಿರುವ ಸಂಶೋಧನೆಗಳು ಎತ್ತಿ ತೋರಿವೆ. ಉದಾಹರಣೆಗೆ ನಿಕರಾಗುವ ದೇಶದಲ್ಲಿ ಹೊಡೆತಕ್ಕೆ ಒಳಗಾಗುತ್ತಿದ್ದ ಮಹಿಳೆಯರು ಹೊಡೆತಕ್ಕೆ ಒಳಗಾಗದ ಸ್ತ್ರೀಯರಿಗಿಂತಾ ಭಾವನಾತ್ಮಕ ಒತ್ತಡದ ತೀವ್ರ ವೇದನೆಗೆ (steess) ಒಳಗಾಗುವ ಸಾಧ್ಯತೆಗಳು ಆರುಪಟ್ಟು ಹೆಚ್ಚಾಗಿತ್ತು. ಈ ಅಧ್ಯಯನದಲ್ಲಿ ದೈಹಿಕ ದೂಷಣೆಯೊಂದೇ ಶೇಕಡಾ ಎಪ್ಪತ್ತ ರಷ್ಟು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದ್ದುದು ಕಂಡುಬಂದಿದ್ದು ಹಿಂಸೆಗೂ ಮಾನಸಿಕ ಆರೋಗ್ಯಕ್ಕೂ ಇರುವ ಪಾರಸ್ಪರಿಕ ಸಂಬಂಧವನ್ನು ಈ ಫಲಿತಾಂಶ ಸಾಬೀತುಗೊಳಿಸಿದೆ. ಸ್ತ್ರೀಯ ಮೇಲೆ ನಡೆದ ಲೈಂಗಿಕ ಆಕ್ರಮಣಕ್ಕೂ ಖಿನ್ನತೆ ಹಾಗೂ ಆತಂಕದ ಕಾಯಿಲೆಗಳಿಗೂ ಸಂಬಂಧವಿದ್ದು ಬಾಲ್ಯದಲ್ಲಿ ಆದ ಲೈಂಗಿಕ ದೂಷಣೆಯ (Sexual abuse) ಪ್ರಭಾವ ಬಾಲಕಿಯು ಮಧ್ಯವಯಸ್ಕಳಾದ ನಂತರ ಸಹ ಮಾನಸಿಕ ರೋಗಗಳಿಗೆ ಎಡೆಮಾಡಿಕೊಡುತ್ತದೆ ಎಂಬುದೂ ಈಗ ಖಚಿತವಾಗಿದೆ.

ಕೌಟುಂಬಿಕ ಹಿಂಸೆ, ಅತ್ಯಾಚಾರ ಹಾಗೂ ಬಾಲ್ಯದಲ್ಲಿ ನಡೆದ ಲೈಂಗಿಕ ದೂಷಣೆ ಇವುಗಳಿಂದ ತೀವ್ರಾಘಾತದ ನಂತರದ ಭಾವನಾತ್ಮಕ ಒತ್ತಡದ ಕಾಯಿಲೆ (post Traumatic stress Disease) ಸಾಮಾನ್ಯವಾಗಿ ಉಂಟಾಗುತ್ತದೆ. ಅಲ್ಲದೆ, ದೂಷಣೆ (abuse) ಅಥವಾ ಹಿಂಸೆಯಿಂದ ಉಂಟಾಗುವ ಮಾನಸಿಕ ವೇದನೆಯನ್ನು ತಡೆಯಲಾಗದ ಎಷ್ಟೋ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಥವಾ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಕೌಟುಂಬಿಕ ಹಿಂಸೆಗೂ, ಖಿನ್ನತೆಗೂ ಹಾಗೂ ಖಿನ್ನತೆಯನ್ನು ಹಿಂಬಾಲಿಸುವ ಆತ್ಮಹತ್ಯೆಗಳಿಗೂ ನೇರ ಸಂಬಂಧವಿರುವುದನ್ನು ಹಲವಾರು ದೇಶಗಳಲ್ಲಿ ನಡೆದಿರುವ ಅಧ್ಯಯನಗಳು ಸಾಬೀತುಪಡಿಸಿವೆ. ಲೈಂಗಿಕ ಆಕ್ರಮಣಕ್ಕೆ ಬಾಲ್ಯದಲ್ಲಾಗಲೀ ಅಥವಾ ವಯಸ್ಕರಾದ ಮೇಲಾಗಲೀ ಒಳಗಾದ ಸ್ತ್ರೀಯರು ಇನ್ನಿತರ ಸ್ತ್ರೀಯರಿಗಿಣತಾ ಆತ್ಮಹತ್ಯೆಗೆ ಯತ್ನಿಸುವ ಅಪಾಯಗಳು ಹೆಚ್ಚು. ಹೀಗೆ ಮಹಿಳೆಯರ ಅನೇಕ ಗಂಭೀರ ಮಾನಸಿಕ ಕಾಯಿಲೆಗಳಿಗೆ ಅವರು ಬಲಿಯಾಗುವ ನಾನಾ ಬಗೆಯ ಲಿಂಗ ಪಕ್ಷಪಾತಗಳು, ಹಿಂಸೆ, ದೂಷಣೆ, ಲೈಂಗಿಕ ಆಕ್ರಮಣಗಳು ಹಾಗೂ ಒಟ್ಟಿನಲ್ಲಿ ಅವರ ಆತ್ಮಸಮ್ಮಾನಕ್ಕೆ ಕುಂದು ತರುವ ಕೌಟುಂಬಿಕ ಸಾಮಾಜಿಕ ಅಂಶಗಳೇ ಕಾರಣಗಳಾಗಿವೆಯೆನ್ನಬಹುದು.

ಆದರೆ, ದುರದೃಷ್ಟವಶಾತ್‌ಮಹಿಳೆಯರ ಮಾನಸಿಕ ರೋಗಗಳಿಗೆ ಔಷಧಗಳೇ ಸರಿಯಾದ ಮದ್ದು ಎನ್ನುವ ಚಿಕಿತ್ಸಾ ವಿಧಾನಗಳೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿರುವುದರಿಂದ, ಮಾನಸಿಕ ರೋಗಗಳಿಗೆ ಕಾರಕಗಳಾದ ಹಲವಾರು ಕೌಟುಂಬಿಕ ಮತ್ತು ಸಾಮಾಜಿಕ ಕಾರಣಗಳನ್ನು ನಿವಾರಿಸಬೇಕಾಗುವ ತುರ್ತನ್ನು ನಿರ್ಲಕ್ಷಿಸಲಾಗುತ್ತಿದೆ. ಅಲ್ಲದೆ, ವೈವಾಹಿಕ ಮತ್ತು ಕೌಟುಂಬಿಕ ಹಿಂಸೆಯಲ್ಲಿ ಅಡಗಿರುವ ಮಾಮಸಿಕ ಅನಾರೋಗ್ಯದ ಆಯಾಮಗಳನ್ನು ಕುರಿತಂತೆ ಲಿಂಗತ್ವ ದೃಷ್ಟಿಕೋನದಿಂದ (Gender perspective) ನಡೆದಿರುವ ಸಂಶೋಧನೆಗಳು ಬಹಳ ಕಡಿಮೆ. ಇತ್ತೀಚೆಗಷ್ಟೇ ಹಿಂಸೆಯಿಂದ ಆಗುವ ತೀವ್ರ ಮಾನಸಿಕ ವೇದನೆಯು ಹಿಂಸೆಗೊಳಗಾದ ವ್ಯಕ್ತಿಯ ಮಾನಸಿಕ ಚೈತನ್ಯ (Psyche)ದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಗಮನಹರಿಸಲಾಗುತ್ತಿದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನಗಳು ಅಥವಾ ಸಂಶೋಧನೆಗಳು ಇನ್ನೂ ಹೆಚ್ಚಾಗಿ ಆಗಬೇಕಾಗಿದೆ.

ಮಾನಸಿಕ ಆರೋಗ್ಯ ಸೇವಾ ಸೌಲಭ್ಯಗಳ ಬಳಕೆ

ಮಾನಸಿಕ ರೋಗಿಗಳಲ್ಲಿ ಪುರುಷರಿಗೆ ಹೋಲಿಸಿದ್ದಲ್ಲಿ ಸ್ತ್ರೀಯರು ಲಭ್ಯವಿರುವ ಮಾನಸಿಕ ಆರೋಗ್ಯ ಸೇವಾ ಸೌಲಭ್ಯಗಳನ್ನು ಪಡೆಯುವುದು ಕಡಿಮೆ. ಸರಕಾರೀ ಆಸ್ಪತ್ರೆಗಳಲ್ಲಿ ಸಹ ಸ್ತ್ರೀರೋಗಿಗಳಿಗೆಂದು ಮೀಸಲಿರಿಸಿರುವ ಹಾಸಿಗೆಗಳ ಸಂಖ್ಯೆ ಪುರುಷ ರೋಗಿಗಳ ಹಾಸಿಗೆಗಳ ಸಂಖ್ಯೆಗಿಂತಾ ಕಡಿಮೆಯಿದೆ. ಸ್ತ್ರೀಯರು ಸಾಮಾನ್ಯವಾಗಿ ಮಾನಸಿಕ ರೋಗಗಳಿಗೆ ಸಮಯೋಚಿತ ಚಿಕಿತ್ಸೆಯನ್ನು ಪಡೆಯಲು ವಿಫಲರಾಗುವುದಕ್ಕೆ ಅವರು ಬದುಕುತ್ತಿರುವ ಹಾಗೂ ಅವರ ಮಾನಸಿಕ ಸಮಸ್ಯೆಗಳಿಗೆ ಅವರ ವೈವಾಹಿಕ, ಸಾಮಾಜಿಕ, ಆರ್ಥಿಕ ಸಂದರ್ಭಗಳು ಹಾಗೂ ಸಾಂಸ್ಕೃತಿಕ ಕಟ್ಟುಪಾಡುಗಳೂ ಕಾರಣಗಳಾಗಿವೆ. ಜೊತೆಗೆ, ಇವುಗಳೆಲ್ಲವನ್ನು ಅರಿತುಕೊಳ್ಳಲು ಇರಬೇಕಾದ ಲಿಂಗತ್ವ ಸೂಕ್ಷ್ಮ ಸಂವೇದನೆಯಾಗಲೀ (Gender sensitivity) ಹಾಗೂ ಸಾಂಸ್ಕೃತಿಕ ಸೂಕ್ಷ್ಮ ಸಂವೇದನೆಯಾಗಲೀ (Cultural sensitivity) ಇರುವ ಮನೋರೋಗ ಚಿಕಿತ್ಸಕರ ಅಭಾವವೂ ಒಂದು ಕಾರಣವಾಗಿರುವುದನ್ನು, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ಸ್ವಯಂಸೇವಾ ಆರೋಗ್ಯ ಸಂಸ್ಥೆ (VHAI) ಜಂಟಿಯಾಗಿ ಹೊರತಂದಿರುವ ವರದಿಯು ತಿಳಿಸಿದೆ.4

ಇವೆಲ್ಲವುಗಳಿಗಿಂತಾ ಮುಖ್ಯವಾಗಿ ‘ಮನೋರೋಗ’ ಒಂದು ಅಳಿಸಲಾಗದ ಸಾಮಾಜಿಕ ಕಳಂಕವೆಂಬ ಭಾವನೆ ಜನ ಸಾಮಾನ್ಯರಲ್ಲಿರುವುದರಿಂದ mneಮನೆಯ ಹೆಣ್ಣು ಮಕ್ಕಳಿಗೆ ಮಾನಸಿಕ ಕಾಯಿಲೆಯಿದೆಯೆಂದು ಗುರ್ತಿಸಿ ಚಿಕಿತ್ಸೆ ಕೊಡಿಸಲು ಕುಟುಂಬಗಳು ಹಿಂದೇಟು ಹಾಕುತ್ತವೆ. ಮನೆಯಲ್ಲಿ ಯಾರಿಗಾದರೂ ಮಾನಸಿಕ ರೋಗವಿದೆ ಎಂದಾಕ್ಷಣ ಆ ಕುಟುಂಬಕ್ಕೇ ಕಳಂಕ ಅಂಟಿತು ಎಂದೇ ಭಾವಿಸಲಾಗುತ್ತದೆ. ನಮ್ಮ ರಾಜಧಾನಿ, ದೆಹಲಿಯಲ್ಲಿ ನಡೆಸಲಾದ ಹಲವು ಅಧ್ಯಯನಗಳಲ್ಲಿ ವಿದ್ಯಾವಂತರಾದ ಜನರಲ್ಲಿ ಸಹ ಮಾನಸಿಕ ರೋಗಿಗಳೆಂದರೆ ಆಕ್ರಮಣಶೀಲರಾದ, ಹಿಂಸಾ ಪ್ರವೃತ್ತಿಯುಳ್ಳ ಅಪಾಯಕಾರೀ ವ್ಯಕ್ತಿಗಳು ಎಂಬ ಅಭಿಪ್ರಾಯವಿರುವುದು ಕಂಡುಬಂದಿತಲ್ಲದೆ ಮನೋರೋಗಕ್ಕೆ ನೀಡುವ ಚಿಕಿತ್ಸೆಗಳು ಫಲಕಾರಿಯಲ್ಲ ಎಂಬ ಅಭಿಪ್ರಾಯವೂ ಜನಜನಿತವಾಗಿರುವುದು ಕಂಡುಬಂದಿತು. ಅಲ್ಲದೇ ಅನೇಕರಿಗೆ ಮಾನಸಿಕ ಆರೋಗ್ಯ ಸೌಲಭ್ಯಗಳು ಎಲ್ಲಿ ಲಭ್ಯ ಎನ್ನುವ ಅರಿವು ಸಹ ಇಲ್ಲದಿರುವುದು ತಿಳಿದುಬಂದಿತು. ಇನ್ನು ಕೆಲವು ಅಧ್ಯಯನಗಳಲ್ಲಿ ನಗರವಾಸೀ ಅಕ್ಷರಸ್ಥ ಜನರಲ್ಲೂ ಸಹ ಮಾನಸಿಕ ರೋಗಗಳ ಬಗ್ಗೆ, ರೋಗ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಅರಿವಿಲ್ಲದಿರುವುದು ಹಾಗೂ ಮನೋರೋಗಿಗಳ ಬಗ್ಗೆ ಬರೀ ಕರುಣೆ ಮಾತ್ರ ಇರುವುದು ಕಂಡುಬಂದಿದೆ.[7]

ಇನ್ನು, ಮಾನಸಿಕ ರೋಗಿಗಳ ಸಂಬಂಧಿಕರು ಮನೋರೋಗ ಆಧುನಿಕ ಚಿಕಿತ್ಸೆ ಕೊಡಿಸುವುದಕ್ಕಿಂತಾ (Psychiatric treatment), ಮಂತ್ರವಾದ, ಆಯುರ್ವೇದ, ಹೋಮಿಯೋಪತಿ ಚಿಕಿತ್ಸೆಗಳಿಗೇ ಆದ್ಯತೆ ನೀಡುತ್ತಿರುವುದನ್ನು ಹಲವು ಅಧ್ಯಯನಗಳು ವರದಿ ಮಾಡಿವೆ. ಸ್ಕಲ್‌ಟಾನ್‌(೧೯೯೧)[8] ಅವರ ಅಧ್ಯಯನವಂತೂ ಮಾನಸಿಕ ರೋಗಿಗಳನ್ನು ನೋಡಿಕೊಳ್ಳುವ ಹೊಣೆ ಹೊರಲು ಅದರಲ್ಲಿಯೂ ರೋಗಿ ಹೆಂಗಸಾಗಿದ್ದಲ್ಲಿ ರೋಗಿಯ ಬಂಧುಗಳು ಹಿಂಜರಿಯುವುದನ್ನು ಎತ್ತಿ ತೋರಿದೆ. ಸ್ತ್ರೀಯೊಬ್ಬಳು ಮನೋರೋಗಿಯಾದಲ್ಲಿ ಅವಳನ್ನು ನೋಡಿಕೊಳ್ಳುವ, ಚಿಕಿತ್ಸೆ ಕೊಡಿಸುವ ಎಲ್ಲಾ ಹೊಣೆಯನ್ನು ಅವಳ ತಂದೆತಾಯಿಗಳೇ ಹೊರಬೇಕು ಅಥವಾ ಸೋದರ/ಸೋದರಿಯರು ಹೊರಬೇಕೇ ಹೊರತು ಗಂಡನಲ್ಲ/ಗಂಡನ ಮನೆಯವರಲ್ಲ ಎಂಬ ಅಭಿಪ್ರಾಯವನ್ನು ಈ ಅಧ್ಯಯನಕ್ಕೊಳಗಾದ ಬಹಳಷ್ಟು ಜನರು ವ್ಯಕ್ತಪಡಿಸಿದ್ದರು. ಅದೇ ಗಂಡಸು ಮಾನಸಿಕ ರೋಗಿಯಾಗಿದ್ದಲ್ಲಿ ಅವನನ್ನು ನೋಡಿಕೊಳ್ಳುವ ಹೊಣೆ ಹೆಂಡತಿಯದೇ ಎಂಬುದು ಇವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಭಾರತೀಯ ಸಮಾಜದಲ್ಲಿ ಕುಟುಂಬದ ಗೌರವ ಪ್ರತಿಷ್ಠೆಗಳಿಗೆ, ಕುಟುಂಬದ ಖಾಸಗೀ ಜೀವನಕ್ಕೆ ಹಾಗೂ ದಿನನಿತ್ಯದ ಮನೆವಾರ್ತೆಯ ದಿನಚರಿಗೆ ಮಾನಸಿಕ ರೋಗಿಯಾದ ಮಹಿಳೆಯನ್ನು ಒಂದು ದೊಡ್ಡ ಅಪಾಯವೆಂದೇ ತಿಳಿಯಲಾಗುತ್ತದೆ. ಆದ್ದರಿಂದ ನಮ್ಮ ದೇಶದ ಮಹಿಳೆಯರಿಗೆ ಅದರಲ್ಲಿಯೂ ವಿವಾಹಿತೆಯರಿಗೆ ತಕ್ಕ ಸಮಯದಲ್ಲಿ ಸೂಕ್ತವಾದ ಮಾನಸಿಕ ಆರೋಗ್ಯ ಚಿಕಿತ್ಸೆ ದೊರೆಯುವುದು ಬಹಳ ಕಡಿಮೆ. ವಿವಾಹಿತೆಯರಾದ ಮನೋರೋಗಿಗಳನ್ನು ಅವರ ತವರಿಗೇ ಹಿಂದಿರುಗಿಸಲಾಗುತ್ತದೆಯಲ್ಲದೆ ಅವರಿಗೆ ವಿವಾಹ ವಿಚ್ಛೇದನ ನೀಡಿ ಪರಿತ್ಯಜಿಸಲಾಗುತ್ತದೆ. ಕ್ಷಯ, ಕುಷ್ಟ ಮತ್ತು ಏಡ್ಸ್‌ರೋಗಿಗಳಿಗೆ ಅಂಟಿಕೊಂಡಿರುವಂತಹ ಸಾಮಾಜಿಕ ಕಳಂಕ ಸ್ತ್ರೀ ಪುರುಷರಿಬ್ಬರ ಮನೋರೋಗಕ್ಕೆ ಅಂಟಿಕೊಂಡಿದೆ. ಆದರೆ ಮನೋರೋಗಿಯಾದ ಮಹಿಳೆಯರನ್ನು ಸಮಾಜ ವಿಧಿಸಿರುವ ಕೌಟುಂಬಿಕ ಮತ್ತು ಸಾಂಸ್ಕೃತಿಕ ಪಾತ್ರಗಳನ್ನು ನಿವ್ವಹಿಸಲಾಗದ ಅವಳ ನಡವಳಿಕೆಗಾಗಿ ಗಂಡನ ಕುಟುಂಬ ಹಾಗೂ ಸಮಾಜ ತಿರಸ್ಕರಿಸುತ್ತದೆ. ಆದರೆ ಮನೋರೋಗಿಯಾದ ಗಂಡಸನ್ನು ಬರೀ ಒಂದು ಆರ್ಥಿಕ ಹೊರೆಯೆಂದು ಮಾತ್ರ ಕುಟುಂಬ ಹಾಗೂ ಸಮಾಜಗಳು ನಡೆಸಿಕೊಳ್ಳುತ್ತವೆ. ಹೀಗೆ ಅನೇಕ ಸಂದರ್ಭಗಳಲ್ಲಿ ಗಂಡನ ಮನೆಯಲ್ಲಿ ಅನುಭವಿಸಿದ ಮಾನಸಿಕ ಒತ್ತಡಗಳ ನೋವು ಸೃಷ್ಟಿಸಿದ ಮಾನಸಿಕ ಕಾಯಿಲೆಗೆ ತುತ್ತಾದ ಮನೋರೋಗಿ ಮಹಿಳೆ ತನ್ನ ಮನೆ ಅಂದರೆ ಗಂಡನ ಮನೆಯಲ್ಲಿ ಸ್ಥಾನ ಕಳೆದುಕೊಂಡು ಪರಿತ್ಯಕ್ತೆಯಾಗಿ ತವರು ಮನೆಗೆ ಮರಳಿಸಲ್ಪಡುವುದು ಅಥವಾ ಅಲ್ಲಿ ಅವಳನ್ನು ನೋಡಿಕೊಳ್ಳುವ ತಂದೆ ತಾಯಿಗಳಾಗಲೀ ಅಥವಾ ಉತ್ತಮ ಸೋದರ ಸಂಬಂಧಿಗಳಾಗಲೀ ಇಲ್ಲದಿದ್ದಲ್ಲಿ ಮನೋ ರೋಗಿಗಳ ಆಶ್ರಯಧಾಮಗಳಿಗೆ (Mental Asylum) ಬಲವಂತವಾಗಿ ಸೇರ್ಪಡೆಯಾಗುವುದು ದುರಂತಕರವಾದ ವಿಪರ್ಯಾಸವೇ ಸರಿ.

ಸ್ತ್ರೀ ಮನೋರೋಗಿಗೆ ವಾಸಿಯಾದ ನಂತರವೂ ಅವಳನ್ನು ಗಂಡನ ಮನೆಯವರು ಕರೆದುಕೊಳ್ಳಲು ಹಿಂಜರಿಯುತ್ತಾರೆ. ಮೂರನೇ ಎರಡು ಭಾಗದಷ್ಟು (೬೬%) ಅಂತಹ ರೋಗಿಗಳು ಅಲ್ಪಪ್ರಮಾಣದ ಖಿನ್ನತೆಯಿಂದ ನರಳುತ್ತಿದ್ದರೂ ಸಹ ಅವರು ತಮ್ಮ ದೈನಂದಿನ ದಿನಚರಿಯನ್ನು ಇತರರಷ್ಟೇ ಚೆನ್ನಾಗಿ ನಡೆಸಿಕೊಂಡು ಹೋಗಬಲ್ಲ ಸಾಮರ್ಥ್ಯವುಳ್ಳವರಾಗಿರುತ್ತಾರೆ. ಆದರೂ ಸಹ ಇಂತಹ ಅಸಹಾಯಕ ಸ್ತ್ರೀಯರ ಮೇಲೆ ಅನ್ಯಾಯಗಳನ್ನೆಸಲಾಗುತ್ತದೆ. ಇಂತಹ ಕೆಲವು ಪ್ರಕರಣಗಳನ್ನು ರಾಷ್ಟ್ರೀಯ ಮಹಿಳಾ ಆಯೋಗದ ಗಮನಕ್ಕೆ ತರಲಾಗಿದೆ.

ಮಾನಸಿಕ ಆರೋಗ್ಯ ಕಾಯಿದೆ (೧೯೮೭)

ಸ್ತ್ರೀಯರ ರಕ್ಷಣೆಗೆಂದೇ ರೂಪಿಸಲಾಗಿದ್ದ ಈ ಕಾಯಿದೆಯೂ ದುರದೃಷ್ಟವಶಾತ್‌ಇಂದು ಯಾವುದೇ ನೈತಿಕ ಹಿಂಜರಿಕೆಗಳಿಲ್ಲದ (unscrupulous) ಗಂಡ ಹಾಗೂ ಗಂಡನ ಮನೆಯವರಿಗೆ, ಬೇಡದ ಹೆಂಡತಿಯ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸುಲಭ ಸಾಧನವಾಗಿ ಮಾರ್ಪಟ್ಟಿದೆ. ಇಬ್ಬರು ಮನೋರೋಗ ಚಿಕಿತ್ಸಕ ವೈದ್ಯರುಗಳು ‘‘ಈ ರೋಗಿಗೆ ಹುಚ್ಚು” (Insane) ಎಂಬ ಪ್ರಮಾಣ ಪತ್ರ ನೀಡಿದಲ್ಲಿ ಮ್ಯಾಜಿಸ್ಟ್ರೇಟರು ಅಂತಹ ರೋಗಿಯನ್ನು ಮಾನಸಿಕ ರೋಗಿಗಳ ಆಶ್ರಯಧಾಮಕ್ಕೆ (Mental Assylum) ದಾಖಲು ಮಾಡುವ ಆಜ್ಞೆ ಹೊರಡಿಸಬಹುದು. ಹೀಗೆ ಹೆಂಡತಿಗೆ ಹುಚ್ಚು ಎಂದು ಪ್ರಮಾಣೀಕರಿಸಿ ಅವಳಿಂದ ಅತ್ಯಂತ ಸುಲಭವಾಗಿ ವಿಚ್ಛೇದನ ಪಡೆದು ಮತ್ತೆ ಮರುಮದುವೆಯಾಗುವುದೋ, ಹೆಚ್ಚಿನ ವರದಕ್ಷಿಣೆ ಪಡೆಯುವುದೋ ಅಥವಾ ಆಸ್ತಿಯ ಮೇಲೆ ಹಕ್ಕು ಹೊಂದುವುದೋ ಇಂದು ಗಂಡನಿಗೆ ಸುಲಭ ಸಾಧ್ಯವಾಗಿದೆ. ಒಂಟಿ ಹೆಂಗಸು, ಮಕ್ಕಳಿಲ್ಲದ ಮಹಿಳೆ, ವಿಧವೆ, ಭೂಮಿ, ಆಸ್ತಿಯಿರುವ ಸ್ತ್ರೀ ಇತ್ಯಾದಿ ಮಹಿಳೆಯರನ್ನು ತಮ್ಮ ಲಾಭಕ್ಕಾಗಿ, ಹುಚ್ಚು ಎಂದು ಪ್ರಮಾಣೀಕರಿಸಿ ಅವರನ್ನು ಶಾಶ್ವತವಾಗಿ ಮನೋರೋಗಿಗಳ ಆಶ್ರಯಧಾಮಕ್ಕೆ ಸುಲಭವಾಗಿ ಸೇರಿಸಬಹುದು (ಧಾಂಡಾ ೧೯೯೬).[9] ಹಾಗೆ ಸೇರಿಸಿದ ನಂತರ ಅವಳ ಒಪ್ಪಿಗೆಯಿಲ್ಲದೇ ಸಹ ಅವಳ ಆಸ್ತಿಯನ್ನು ಲಪಟಾಯಿಸಬಹುದು.

ಇಂತಹ ಕೆಲವು ಪ್ರಕರಣಗಳನ್ನು ರಾಷ್ಟ್ರೀಯ ಮಹಿಳಾ ಆಯೋಗದ ಗಮನಕ್ಕೆ ತರಲಾಗಿದ್ದು ಅವುಗಳಲ್ಲೊಂದನ್ನು ಇಲ್ಲಿ ಉದಹರಿಸಬಹುದಾಗಿದೆ. ವಿವಾಹಿತ ತರುಣಿಯೊಬ್ಬಳು ತನ್ನ ಗಂಡನ ಹೊಡೆತಗಳಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿಹೋಗಿ ಬೇರೆಡೆ ಕೆಲಸಕ್ಕೆ ಸೇರಿಕೊಂಡು ಸ್ವತಂತ್ರವಾಗಿ ವಾಸಿಸುತ್ತಿದ್ದಳು. ಆದರೆ ಅವಳ ಪಾಲಕರು ಮತ್ತು ಪತಿ ಅವಳನ್ನು ‘ಹುಚ್ಚಿ’ ಎಂದು ಸಾಬೀತುಪಡಿಸಲು ಯತ್ನಿಸುತ್ತಿದ್ದರು. ಈ ಪ್ರಯತ್ನದ ಫಲವಾಗಿ ನೈತಿಕ ಹಿಂಜರಿಕೆಗಳಿಲ್ಲದ ಇಬ್ಬರು ವೈದ್ಯರುಗಳಿಂದ ಅವಳನ್ನು ‘ಹುಚ್ಚಿ’ ಎಂದು ಪ್ರಮಾಣೀಕರಿಸಿದ ಪತ್ರಗಳೂ ಅವರಿಗೆ ದೊರಕಿದವು. ಆದರೆ ಮುಖ್ಯ ನ್ಯಾಯಾಧೀಶರೊಬ್ಬರು ಈ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿ ಈ ಹುಡುಗಿಯು ತನ್ನ ಜೀವಮಾನವಿಡೀ ಮಾನಸಿಕ ರೋಗಿಯೆಂದು ಕರೆಸಿಕೊಳ್ಳುತ್ತಾ ಮಾನಸಿಕ ರೋಗಿಗಳ ಆಶ್ರಯಧಾಮದಲ್ಲಿ ಬಂಧಿಯಾಗಿ ಕೊಳೆಯುವುದನ್ನು ತಪ್ಪಿಸಿದರು.4

ಈ ಆಶ್ರಯಧಾಮಗಳು, ತೀವ್ರ ಮಾನಸಿಕ ರೋಗಿಗಳಲ್ಲಿ ಕಂಡುಬರುವ ವಿನಾಶಕಾರೀ (Destructive) ಲಕ್ಷಣಗಳನ್ನಾಗಲೀ ಸಮಾಜದ ಶಾಂತಿ ಕದಡಬಲ್ಲ ಅವರ ನಡವಳಿಕೆಗಳನ್ನಾಗಲೀ ವಾಸಿ ಮಾಡುವ ಪ್ರಯತ್ನಗಳನ್ನೇನೂ ಮಾಡುವುದಿಲ್ಲ. ಏಕೆಂದರೆ ಇಂತಹ ಅಭಿರಕ್ಷಾ ಸಂಸ್ಥೆಗಳು (Custodial Institutions) ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಬಲ್ಲ ಆಸ್ಪತ್ರೆಗಳಂತೆ ಕೆಲಸ ಮಾಡುವ ಬದಲು ಈ ಮಾನಸಿಕ ರೋಗಿಗಳಿಂದ ಕುಟುಂಬ ಮತ್ತು ಸಮಾಜವನ್ನು ಕಾಪಾಡಲೆಂದೇ ರೂಪಿಸಲ್ಪಟ್ಟಿವೆ. ಹಾಗಾಗಿ ಇವುಗಳಿಗೆ ರೋಗಿಗಳನ್ನು ಹೊರಗೆ ಹೋಗದಂತೆ ಬಂಧನದಲ್ಲಿ ಇರಿಸುವುದೇ ಮುಖ್ಯ.

ಒಮ್ಮೆ ಮಾನಸಿಕ ರೋಗಿಗಳು ಈ ಕಾಯ್ದೆಯ ಪರಿಧಿಯೊಳಗೆ ಬಂದು ಬಿಟ್ಟರೆ ಅವರು ತಮ್ಮ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಅದು ಅವರನ್ನು ಇನ್ನಷ್ಟು ಅಸಹಾಯಕರನ್ನಾಗಿಸಿ ಅವರು ಮಾನಸಿಕ ರೋಗಿಗಳ ಆಶ್ರಯ ಧಾಮಗಳಲ್ಲಿ ಬಲವಂತವಾಗಿ ಬಂಧಿಗಳ ಹಾಗೆ ಜೀವಿಸಬೇಕಾದ ಅಪಾಯವನ್ನು ಯಾವಾಗಲೂ ಎದುರಿಸುತ್ತಾ ಇರುವಂತೆ ಮಾಡುತ್ತದೆ. ಏಕೆಂದರೆ ಈ ಕಾಯಿದೆಯು ಯಾರನ್ನು ಆಶ್ರಯಧಾಮಗಳಲ್ಲಿ ಅಭಿರಕ್ಷೆಯಲ್ಲಿ ಬಲವಂತವಾಗಿ ಇರಿಸಲಾಗದು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆಯೇ ಹೊರತು ಯಾರನ್ನು ಇರಿಸಬಹುದು ಎಂಬುದನ್ನು ಸ್ಪಷ್ಟೀಕರಿಸುವುದಿಲ್ಲ. ಧಾಂಡಾರವರ ಅಭಿಪ್ರಾಯದಲ್ಲಿ ಹೀಗೆ ಬಂಧಿಯಾಗಿರುವ ಮಾನಸಿಕ ರೋಗಿಗೆ, ನ್ಯಾಯಾಲಯದಲ್ಲಿ, ಒಬ್ಬ ಕ್ರಿಮಿನಲ್‌ಅಪರಾಧಿಗಿಂತಾ ಕಡಿಮೆ ಹಕ್ಕುಗಳಿರುತ್ತವೆ. ಉದಾಹರಣೆಗೆ ಒಬ್ಬ ಸಾಮಾನ್ಯ ಕ್ರಿಮಿನಲ್‌ಅಪರಾಧಿಗೆ ತನ್ನನ್ನು ರಕ್ಷಿಸಿಕೊಳ್ಳಲು ಹಾಗೂ ಪ್ರತಿನಿಧಿಸಲು ಒಬ್ಬ ನ್ಯಾಯವಾದಿಯನ್ನು ನಿಯಮಿಸಿಕೊಳ್ಳುವ ಹಕ್ಕು ಇರುತ್ತದೆ. ಆದರೆ ಈ ಹಕ್ಕು ಸಹ ಆಶ್ರಯಧಾಮಗಳಲ್ಲಿ ಬಂಧಿಗಳಾಗಿರುವ ಮಾನಸಿಕ ರೋಗಿಗಳಿಗೆ ಇರುವುದಿಲ್ಲ.[10]

ಯಾರು ಸಮಾಜಕ್ಕೆ/ಕುಟುಂಬಕ್ಕೆ ಅಪಾಯಕಾರಿಯಾಗಿದ್ದರೋ ಹಾಗೂ ಸ್ವತಂತ್ರವಾಗಿ ಸಮಾಜ ಮತ್ತು ಕುಟುಂಬದಲ್ಲಿ ತಮ್ಮಷ್ಟಕ್ಕೆ ತಾವಿರಲು ಅನರ್ಹರೋ ಅಂತಹ ಮನೋರೋಗಿಗಳನ್ನು ಬಲವಂತವಾಗಿಯಾದರೂ ಆಶ್ರಯಧಾಮದ ಅಭಿರಕ್ಷೆಯಲ್ಲಿರಿಸಲು ನ್ಯಾಯಾಲಯಕ್ಕೆ ಎಲ್ಲಾ ಅಧಿಕಾರವನ್ನು ಈ ಕಾಯಿದೆ ನೀಡಿದೆ. ಆದರೆ ಅದು ಈ ‘ಅಪಾಯ’ ಎಂದರೇನು ಎಂಬುದನ್ನು ಸ್ಪಷ್ಟವಾಗಿ ವಿವರಿಸಿಲ್ಲ. ಅಲ್ಲದೇ ವಿವಿಧ ಮನೋರೋಗಗಳನ್ನಾಗಲೀ, ಆ ರೋಗಗಳ ಹಂತಗಳನ್ನಾಗಲೀ ಗುರ್ತಿಸಿ, ಯಾವಾಗ ಯಾವ ರೀತಿಯ ರೋಗದಿಂದ, ರೋಗದ ಯಾವ ಹಂತದಲ್ಲಿ ರೋಗಿ ‘ಅಪಾಯಕಾರಿ’ ಎಂಬುದನ್ನು ಈ ಕಾಯಿದೆ ಖಚಿತವಾಗಿ ಸ್ಪಷ್ಟೀಕರಿಸದೇ ಇರುವುದರಿಂದ ನ್ಯಾಯಾಲಯಕ್ಕೆ ಮನೋರೋಗಿಯನ್ನು ಆಶ್ರಯಧಾಮದ ಅಭಿರಕ್ಷೆಯಲ್ಲಿರಿಸುವುದು ಸುಲಭ ಸಾಧ್ಯವಾಗಿದೆ. ಹೀಗೆ ಮನೋರೋಗ/ಹುಚ್ಚು (Insanity) ಎಂಬುದರ ಸ್ಪಷ್ಟ ನಿರ್ವಚನ ಇಲ್ಲದಿರುವುದರಿಂದ ಈ ಕಾಯಿದೆಯು ದುರುಪಯೋಗಕ್ಕೆ ಒಳಗಾಗುತ್ತಿದೆ. ಈ ಕಾಯಿದೆಯನ್ನು ಮಾನಸಿಕ ಆರೋಗ್ಯ ಕಾಯಿದೆಯೆಂದು ಕರೆಯಲಾಗಿದ್ದರೂ, ಮಾನಸಿಕ ರೋಗಿಗಳ ಆರೋಗ್ಯ ಸುಧಾರಣೆಯ ಯಾವ ಅಂಶವೂ ಅದರಲ್ಲಿ ಇಲ್ಲದಿರುವುದು ಒಂದು ಕ್ರೂರ ವ್ಯಂಗ್ಯವೇ ಸರಿ. ಮಾನಸಿಕ ರೋಗಿಯೆಂದು ಪ್ರಮಾಣೀಕರಿಸಲಾಗಿರುವ ವ್ಯಕ್ತಿಯನ್ನು ಆಶ್ರಯಧಾಮಕ್ಕೆ ಸೇರಿಸಲು ಅನುಮತಿ ಕೋರುವ ಪ್ರಕರಣಗಳು ನ್ಯಾಯಾಲಯದ ಮುಂದೆ ಬಂದಾಗ ಅಂತಹ ಅನುಮತಿ ನೀಡಬಲ್ಲ ಎಲ್ಲಾ ಅಧಿಕಾರವನ್ನೂ ಈ ಕಾಯಿದೆ ನ್ಯಾಯಾಲಯಕ್ಕೆ ನೀಡಿದೆ. ಆದರೆ ಇಂತಹ ಅನುಮತಿ ನೀಡುವ ತೀರ್ಪನ್ನು ಕೊಡಲು ನಿರಾಕರಿಸಿದಲ್ಲಿ ನ್ಯಾಯಾಲಯವು ತನ್ನ ನಿರಾಕರಣೆಗೆ ಕಾರಣಗಳನ್ನು ಕೊಡಬೇಕಾಗುತ್ತದೆ. ಆದರೆ ರೋಗಿಯನ್ನು ಅವನ/ಅವಳ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದಲಾದರೂ ಸರಿ ಆಶ್ರಮಧಾಮದ ಅಭಿರಕ್ಷೆಯಲ್ಲಿರಿಸಲು ನ್ಯಾಯಾಲಯ ಯಾವ ಕಾರಣವನ್ನೂ ಕೊಡಬೇಕಾಗಿಲ್ಲ. ಅದಕ್ಕೆ ವೈದ್ಯರಿಬ್ಬರ ಪ್ರಮಾಣ ಪತ್ರಗಳೇ ಸಾಕು. ಏಕೆಂದರೆ ಈ ಕಾಯಿದೆಯು ಸಾರಾಂಶದಲ್ಲಿ, ಮನೋರೋಗಿ ಉಂಟುಮಾಡಬಹುದಾದ ಅಪಾಯಗಳಿಂದ ಕುಟುಂಬ/ಸಮಾಜಗಳನ್ನು ರಕ್ಷಿಸಲು ಆದ್ಯತೆ ನೀಡುತ್ತದೆಯಲ್ಲದೆ ರೋಗಿಯ ಮಾನಸಿಕ ಆರೋಗ್ಯಕ್ಕೆ ಅಲ್ಲ. ಇಲ್ಲಿ ರೋಗ ಚಿಕಿತ್ಸೆಗಿಂತಾ ರೋಗಿಯ ಅಭಿರಕ್ಷೆಗೆ ಆದ್ಯತೆ ನೀಡಲಾಗಿದೆ.

ಲಿಂಗತ್ವ ಸೂಕ್ಷ್ಮ ಸಂವೇದನಾ ತರಬೇತಿ (Gender Sensitization Training) ಮತ್ತು ತಿದ್ದುಪಡಿಗಳ ಅಗತ್ಯ

ರೋಗಿ ಮತ್ತು ಅವಳ ಸಂಬಂಧೀಕರು ಕಾಯಿಲೆಗೆ ಸಂಬಂಧಿಸಿದಂತೆ ವೈದ್ಯರಲ್ಲಿ ಹೇಳುವ ವಿವರಗಳ ಹಾಗೂ ತಾವು ನೀಡಿದ ಚಿಕಿತ್ಸೆಯ ವಿವರಗಳ ಗೋಪ್ಯತೆಯನ್ನು, ರೋಗಿಯ ಹಿತದೃಷ್ಟಿಯಿಂದ ಅಂದರೆ ವಾಸಿಮಾಡುವ ದೃಷ್ಟಿಯಿಂದ ಕಾಪಾಡಬೇಕಾಗಿರುವುದು ವೈದ್ಯರ ನೀತಿ ಸಂಹಿತೆಯಾಗಿದೆ. ಆದರೆ, ಅನೇಕ ಮನೋವೈದ್ಯರುಗಳು ಗೋಪ್ಯತೆಯ ನಿಯಮಗಳನ್ನು ಪಾಲಿಸುತ್ತಿಲ್ಲ. ಆದ್ದರಿಂದ ಮನೋವೈದ್ಯರು/ಮನರೋಗ ಚಿಕಿತ್ಸಕರು ಗೋಪ್ಯತೆಯ ನೀತಿ ಸಂಹಿತೆಯನ್ನು ಪಾಲಿಸಲೇ ಬೇಕೆಂಬ ಅಧಿನಿಯಮವನ್ನು ಮಾನಸಿಕ ಆರೋಗ್ಯ ಕಾಯಿದೆಗೆ ಸೇರ್ಪಡೆ ಮಾಡಿ ತಿದ್ದುಪಡಿ ಮಾಡುವುದೊಳ್ಳೆಯದು. ಏಕೆಂದರೆ, ಚಿಕಿತ್ಸೆಯ ವಿವರಗಳನ್ನು ಹಾಗೂ ರೋಗಿಯ ಮನೋರೋಗಕ್ಕೆ ವೈದ್ಯರು ದಯಪಾಲಿಸಿರುವ ಹಣೆಪಟ್ಟಿಯನ್ನು ಹೆಸರಿಸಿ ‘ಮನೋರೋಗಿ’ ಎಂದು ಪ್ರಮಾಣಿಸಿದ ಸ್ತ್ರೀ ಮನೋರೋಗಿಯನ್ನು ಆಶ್ರಯಧಾಮಕ್ಕೆ ಸೇರಿಸಿ ಅವಳಿಂದ ವಿಚ್ಛೇದನ ಪಡೆಯಲು, ಅಥವಾ ಅವಳೊಂದಿಗೆ ಆಗಿರುವ ವಿವಾಹವನ್ನು ರದ್ದು ಮಾಡಿಸಲು (Annulment), ಅಂತಹ ರೋಗಿಯು ಅವಿವಾಹಿತ ಸೋದರಿಯಾಗಿದ್ದಲ್ಲಿ ಅವಳ ಪಿತ್ರಾರ್ಜಿತ ಆಸ್ತಿಯನ್ನು ಲಪಟಾಯಿಸಲು, ಮನೆಯಲ್ಲಿ ಆಶ್ರಿತಳಾಗಿರುವ ಸಂಬಂಧಿ ವಿಧವೆ ಅಥವಾ ಇನ್ಯಾರಾದರೂ ಸಂಬಂಧೀ ಅಸಹಾಯಕ ಸ್ತ್ರೀಯರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಪಾರಾಗಲು ಅಥವಾ ಅವಳ ಆಸ್ತಿ ಎತ್ತಿಹಾಕಲು ಒಟ್ಟಿನಲ್ಲಿ ಕುಟುಂಬಕ್ಕೆ ಬೇಡವಾದ ಮಹಿಳೆಯ ಹೊಣೆಯಿಂದ ಜಾರಿಕೊಳ್ಳಲು ಈ ಕಾಯಿದೆಯು ದುರುಪಯೋಗವಾಗುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ಗಮನಿಸಿರುವ ಮಹಿಳಾ ಸಂಘಟನೆಗಳು, ಸ್ತ್ರೀವಾದೀ ಗುಂಪುಗಳು, ತಜ್ಞ ವೈದ್ಯರುಗಳು, ಲಿಂಗತ್ವ ಸೂಕ್ಷ್ಮ ಸಂವೇದನಾ ತರಬೇತಿಗಳನ್ನು ನಿಯಮಿತವಾಗಿ ಮನೋರೋಗ ಚಿಕಿತ್ಸಕರಿಗೆ, ಆಸ್ಪತ್ರೆಯಲ್ಲಿರುವ ಆಪ್ತ ಸಲಹೆಗಾರರಿಗೆ (counsellors) ಹಾಗೂ ದಾದಿಯರಿಗೂ ಸಹ ನೀಡಬೇಕೆಂದು ಶಿಫಾರಸು ಮಾಡುತ್ತಿದ್ದಾರೆ.

ಅನೇಕ ಸಾರಿ ಮನೋರೋಗ ವಾಸಿಯಾದ ಅಥವಾ ವಾಸಿಯಾಗುತ್ತಿರುವ ಸ್ತ್ರೀಯರ ಬಗ್ಗೆ ಮನೋರೋಗ ಚಿಕಿತ್ಸಕರು ನೀಡುವ ಇಂತಹ ಪ್ರಮಾಣ ಪತ್ರದಿಂದಾಗಲೀ ಚಿಕಿತ್ಸೆಯ ವಿವರಗಳನ್ನು ಗೋಪ್ಯವಾಗಿರಿಸದೇ ಬಯಲು ಮಾಡುವುದರಿಂದಾಗಲೀ ಅಂತಹ ಮಹಿಳೆಯರ ಮಾನಸಿಕ ರೋಗ ಮತ್ತೆ ಕೆರಳುವುದಲ್ಲದೆ ಅವರ ಸಾಮಾಜಿಕ, ವೈವಾಹಿಕ ಹಾಗೂ ಆರ್ಥಿಕ ಜೀವನದ ಆರೋಗ್ಯ ಹದಗೆಡುತ್ತದೆ. ಅಲ್ಲದೆ, ಇದರಿಂದ ಅವಳು ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳಬಹುದಾಗಿದೆ. ಉದಾಹರಣೆಗೆ ಹೀಗೆ ಹುಚ್ಚು ಎಂದು ಪ್ರಮಾಣಿತಳಾದ ಸ್ತ್ರೀ ಉದ್ಯೋಗಸ್ಥಾಗುವ, ಸ್ವಂತ ಆಸ್ತಿ ಹೊಂದುವ, ಆಸ್ತಿ ನಿರ್ವಹಿಸುವ, ಈಗಾಗಲೇ ಇರುವ ಆಸ್ತಿಯ ಮೇಲಣ ಹಕ್ಕು, ಅವುಗಳನ್ನು ಅನುಭವಿಸುವ ಅಧಿಕಾರ, ಮತದಾನ ಮಾಡುವ ಹಕ್ಕು ಇತ್ಯಾದಿ ವೈಯಕ್ತಿಕ ಹಾಗೂ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತಾಳೆ. ಅವಳಿಗೆ ಯಾವುದೇ ಜೀವನಾಂಶ ನೀಡದೆ, ಅವಳಿಗೆ ಆಸ್ತಿಯಿದ್ದಲ್ಲಿ ಅದಕ್ಕೆ ಹಕ್ಕುದಾರನಾಗಿ ಅವಳ ಗಂಡ ಅವಳಿಗೆ ವಿಚ್ಛೇದನ ನೀಡಬಹುದಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಅಥವಾ ಈಗಾಗಲೇ ಮಾನಸಿಕ ರೋಗದಿಂದ ಚೇತರಿಸಿಕೊಳ್ಳುತ್ತಿರುವ ಮಹಿಳೆಯರನ್ನು ಇಂತಹ ದುರವಸ್ಥೆಗೆ ಈಡುಮಾಡಿ ಅವಳನ್ನು ಮತ್ತೆ ಮನೋರೋಗದ ತೀವ್ರ ವೇದನೆಗೆ ಗುರಿಮಾಡಬಲ್ಲ ಎಲ್ಲಾ ಅಂಶಗಳನ್ನು ಕುರಿತು ಮಣೊರೋಗ ಚಿಕಿತ್ಸಕರು ಲಿಂಗತ್ವ ದೃಷ್ಟಿಕೋನದಿಂದ ವಿವೇಚಿಸಬೇಕು.

ಇದೇ ರೀತಿ, ನಮ್ಮ ಪಿತೃಪ್ರಧಾನ ಸಮಾಜದಲ್ಲಿ ದುರುಪಯೋಗಕ್ಕೆ ಒಳಗಾಗುತ್ತಿರುವ ಇನ್ನೊಂದು ಕಾನೂನಿನ ವಿಷಯವಿದೆ. ವಿವಾಹಿತ ಸ್ತ್ರೀ ತನಗೆ ಸಮಾಜ ವಿಧಿಸಿರುವ ರೂಢಿಗತ ವಿವಾಹಿತ ಸ್ತ್ರೀಯ ನಡವಳಿಕೆಗಿಂತಾ ತುಸು ಬೇರೆಯಾಗಿ ನಡೆದುಕೊಂಡರೆ ಸಾಕು, ಇದನ್ನೇ ಮಾನಸಿಕ ರೋಗದ ಲಕ್ಷಣಗಳೆಂದು ಪರಿಗಣಿಸಿ, ಹೆಚ್ಚಿನ ನೈತಿಕ ಹಿಂಜರಿಕೆಗಳೇನೂ ಇಲ್ಲದ ಇಬ್ಬರು ವೈದ್ಯರುಗಳಿಂದ ಹೆಂಡತಿಯನ್ನು ‘ಮಾನಸಿಕ ರೋಗಿ’ ಎಂದು ಪ್ರಮಾಣೀಕರಿಸಿ ಅವಳಿಂದ ವಿಚ್ಛೇದನ ಪಡೆಯುವುದು ಸಾಧ್ಯ. ಮದುವೆ ಮತ್ತು ವಿಚ್ಛೇದನ ಕಾಯಿದೆಯ ಅಡಿಯಲ್ಲಿ ತನ್ನ ಸಂಗಾತಿಗೆ ‘ಮಾನಸಿಕ ಅಸ್ವಸ್ಥತೆ’ ಅಥವಾ ‘ಹುಚ್ಚು’ ಎಂಬ ಕಾರಣ ನೀಡಿ ವಿಚ್ಛೇದನ ಪಡೆಯುವವರಲ್ಲಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಏಕೆಂದರೆ ಪುರುಷ ಮಾನಸಿಕ ರೋಗಿಗಳ ಹೆಂಡತಿಯರು ಗಂಡನ ನಡವಳಿಕೆ ತಮ್ಮ ಜೀವಕ್ಕೆ ಅಪಾಯ ಮಾಡುವ ಮಟ್ಟ ಮುಟ್ಟುವವರೆಗೂ ಈ ಕಾಯಿದೆಯ ಉಪಯೋಗ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಧಾಂಡಾ ಎಂಬ ಕಾನೂನು ತಜ್ಞ ಸಂಶೋಧಕರು ಉದಾಹರಣೆಗಳ ಸಹಿತ ವಿವರಿಸಿದ್ದಾರೆ.[11] ಅಲ್ಲದೆ ಎಂತಹ ಕ್ಷುಲ್ಲಕ ಸಂಗತಿಗಳನ್ನು ಮಾನಸಿಕ ರೋಗ ಲಕ್ಷಣಗಳೆಂದು ತೋರಿಸಿ ವಿಚ್ಛೇದನ ಯಾಚಿಸಲಾಗಿದೆ ಎಂಬುದನ್ನು ಇವರು ಈ ಕೆಳಕಂಡಂತೆ ಪಟ್ಟಿ ಮಾಡಿದ್ದಾರೆ.

ಅ. ಹೆಂಡತಿಗೆ ಮನೆ ಕೆಲಸ ಮಾಡಲು ಬರುವುದಿಲ್ಲ. ೨. ಮೊದಲ ರಾತ್ರಿ ಸಂಭೋಗಿಸಲು ಗಂಡನಿಗೆ ಬಿಡಲಿಲ್ಲ ಇ. ಅಪರಿಚಿತರೊಂದಿಗೆ ವ್ಯವಹರಿಸಬೇಡವೆಂದರೂ ಅವರೊಡನೆ ಮಾತನಾಡಿದಳು ಈ. ಮನೆ ತುಂಬಿಸಿಕೊಳ್ಳುವ ಸಮಾರಂಭದಲ್ಲಿ ಅತಿಥಿಗಳ ಮುಂದೆ ಬಹಳ ಅತ್ತಳು. ಉ. ಅವಳಿಗೆ ನೀಡಿದ ಉಡುಗೊರೆಗಳನ್ನು ಎಡಗೈಯಲ್ಲಿ ತೆಗೆದುಕೊಂಡಳು ಊ. ಬ್ರಾಹ್ಮಣ ಜಾತಿಯವಳಾಗಿದ್ದರೂ ಸಹ ದಿನಾ ಸ್ನಾನ ಮಾಡುವುದಿಲ್ಲ ಋ. ಆಹಾರ ತಯಾರಿಸುವಾಗ ಹೆಚ್ಚು ಉಪ್ಪು ಖಾರ ಹಾಕುತ್ತಾಳೆ. ೠ. ಒಂದು ಪ್ಯಾಕೆಟ್‌ಹಾಲು ಕುದಿಸು ಎಂದು ಹೇಳಿದಾಗ ಅನಗತ್ಯವಾಗಿ ಎರಡು ಪ್ಯಾಕೆಟ್‌ಹಾಲನ್ನು ಕುದಿಸಿದಳು. ಎ. ಚಪಾತಿ ಮಾಡು ಎಂದರೆ ಪರೋಟ ಮಾಡಿದಳು ಏ. ಗಂಡನ ಸಂಬಂಧಿಗಳನ್ನು ಒರಟಾಗಿ ಸ್ವಾಗತಿಸಿದಳು ಐ. ಹೆಚ್ಚು ಸೋಪನ್ನು ಉಪಯೋಗಿಸಿ ಅಪವ್ಯಯ ಮಾಡಿದಳು ಒ. ಹಣವನ್ನು ಅಪವ್ಯಯಿಸುತ್ತಾಳೆ.

‘ಮಾನಸಿಕ ಅಸ್ವಸ್ಥತೆ’ ಎಂಬ ಕಾರಣವನ್ನು ನೀಡಿ ಹೀಗೆ ಬೇಡದ ಹೆಂಡತಿಗೆ ವಿಚ್ಛೇದನ ನೀಡುವ ಪ್ರವೃತ್ತಿ ಅಸಹಾಯಕ ಸ್ತ್ರೀಯರನ್ನು ಬಲಿಪಶುಗಳನ್ನಾಗಿ ಮಾಡುತ್ತಿದೆ ಎಂಬುದನ್ನು ವಿವರಿಸುತ್ತಾ ಧಾಂಡಾರವರು, ಸ್ತ್ರೀಯರ ಅನುಕೂಲಕ್ಕಾಗಿ ಎಂದು ವಿಚ್ಛೇದನ ಕಾನೂನಿನಲ್ಲಿ ಸೇರಿಸಿದ್ದ ಈ ಅಧಿನಿಯಮವು ಹೇಗೆ ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರಿಗೇ ತಿರುಗು ಬಾಣವಾಗಿದೆ ಎಂಬುದನ್ನು ವಿಶ್ಲೇಷಿಸಿದ್ದಾರೆ. ನ್ಯಾಯಾಲಯದಲ್ಲಿ ಸ್ತ್ರೀಯರು ಮಾನಸಿಕ ಅಸ್ವಸ್ಥತೆಯ ಕಾರಣ ನೀಡಿ ವಿಚ್ಛೇದನ ಕೋರಿದ ಎರಡು ಪ್ರಕರಣಗಳಲ್ಲಿ ಹೆಂಡತಿ ಗಂಡನಿಂದ ಮಾರಣಾಂತಿಕವಾಗಿ ಘಾಯಗೊಂಡಿದ್ದಳು ಎಂಬುದನ್ನು ಇವರು ಉದಹರಿಸುತ್ತಾ ಸ್ತ್ರೀಯರು ಸಾಮಾನ್ಯವಾಗಿ, ಗಂಡನಿಗೆ ಮಾನಸಿಕ ಅಸ್ವಸ್ಥತೆಯುಂಟಾದಾಗ ಅವನನ್ನು ತ್ಯಜಿಸುವ ಅಥವಾ ವಿಚ್ಛೇದನ ನೀಡುವ ಆಲೋಚನೆಯನ್ನು ಸಹಿತ ಮಾಡುವುದಿಲ್ಲವೆಂದು ಧಾಂಡಾ ಅಭಿಪ್ರಾಯಪಡುತ್ತಾರೆ.10

ಇನ್ನು ಮಾನಸಿಕ ರೋಗಿಗಳನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುವ ಹಾಗೂ ಬಂದು ನೋಡುವ ಬಂಧು ಬಳಗದ ಬಗ್ಗೆ ಸಂಶೋಧಕರು ಸಂಗ್ರಹಿಸಿರುವ ದತ್ತಾಂಶಗಳು, ಪುರುಷರಿಗೆ ಹೋಲಿಸಿದಾಗ ಮಹಿಳಾ ರೋಗಿಗಳು ಹೇಗೆ ಸಮಾಜಕ್ಕೆ ಬೇಡದ ಜೀವಗಳಾಗಿದ್ದಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತವೆ. ಹಾಗೆಯೇ ರೋಗ ವಾಸಿಯಾದ ನಂತರ ಸಹ ಸ್ತ್ರೀಯರು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಬೇಡದ ಜೀವಿಗಳಾಗಿಯೇ ಉಳಿಯುತ್ತಾರೆ ಎಂಬುದನ್ನು ಇಂತಹ ಸಂಶೋಧನೆಗಳು ಸೂಚಿಸುತ್ತವೆ. ಇನ್ನೋರ್ವ ಸಂಶೋಧಕರು ಮಾನಸಿಕ ರೋಗಿಯೆಂದು ಪ್ರಮಾಣೀಕರಿಸಿ ಆಸ್ಪತ್ರೆ ಹಾಗೂ ಮನೋರೋಗಿಗಳ ಆಶ್ರಯಧಾಮಗಳಿಗೆ ಸೇರಿಸಲ್ಪಡುವವರಲ್ಲಿ ಪುರುಷರಿಗಿಂತ ಸ್ತ್ರೀಯರ ಸಂಖ್ಯೆಯೇ ಹೆಚ್ಚಾಗಿರುವುದನ್ನು ಗಮನಿಸಿದ್ದಾರೆ.3

ಅಲ್ಲದೇ ನಮ್ಮ ಭಾರತೀಯ ಭಾಷೆಗಳಲ್ಲಿ ಮಾನಸಿಕ ಅಸ್ವಸ್ಥತೆ, ಮನೋರೋಗಗಳನ್ನು ಕುಸಿತ ಸರಿಯಾದ ಪದಗಳು ಸಹ ಇಲ್ಲದಿರುವುದನ್ನು ಹಾಗೂ ಇರುವ ಕೆಲವೇ ಪದಗಳು ಸಹ ಮಾನಸಿಕ ರೋಗ ಮತ್ತು ರೋಗಿಯನ್ನು ಕುರಿತ ಪೂರ್ವಗ್ರಹಗಳನ್ನು, ತಿರಸ್ಕಾರ ಜಿಗುಪ್ಸೆಗಳನ್ನು ಪ್ರತಿಫಲಿಸುವಂತಹ ಪದಗಳಾಗಿರುವುದನ್ನು ಗಮನಿಸಬಹುದು. “ಮನೋರೋಗಕ್ಕೆ ಮದ್ದಿಲ್ಲ”, “ಮದುವೆ ಆಗುವವರೆಗೆ ಹುಚ್ಚು ಬಿಡೋಲ್ಲ”, “ಹುಚ್ಚು ಬಿಡುವವರೆಗೆ ಮದುವೆಯಿಲ್ಲ” ಎನ್ನುವ ಗಾದೆಗಳೂ ಸಹ ಮನೋರೋಗ ಒಂದು ಶಾಶ್ವತವಾದ ವಾಸಿಯಾಗಲಾರದ ರೋಗವೆನ್ನುವ ನಕಾರಾತ್ಮಕ ಮಿಥ್ಯೆಯನ್ನು ಬಿಂಬಿಸುತ್ತವೆ. ಇಂದು ಸಮಾಜದಲ್ಲಿ ಮಾನಸಿಕ ಆರೋಗ್ಯ/ಅನಾರೋಗ್ಯಗಳ ಬಗ್ಗೆ, ಮಾನಸಿಕ ರೋಗಿಗಳ ಬಗ್ಗೆ ಅಪಾರವಾದ ಅಜ್ಞಾನ, ಪೂರ್ವಗ್ರಹ ಮತ್ತು ಅಲಕ್ಷ್ಯಗಳು ತಾಂಡವಾಡುತ್ತಿವೆ. ಇವೆಲ್ಲಾ ವಿಷಯಗಳನ್ನು ಕುರಿತಂತೆ ವೈಜ್ಞಾನಿಕ ಪ್ರಜ್ಞೆ, ಲಿಂಗತ್ವ ಸೂಕ್ಷ್ಮ ಸಂವೇದನೆ ಹಾಗೂ ಸ್ತ್ರೀಪರ ದೃಷ್ಟಿಕೋನ ಬೆಳೆದಾಗ ಮಾತ್ರ ಮಹಿಳಾ ಮಾನಸಿಕ ರೋಗಿಗಳ ಮಾನವ ಹಕ್ಕುಗಳ ಸಂರಕ್ಷಣೆಯಾಗಿ, ಕಾಯಿದೆಗಳ ದುರುಪಯೋಗ ನಿಂತು, ಘನತೆಯ ಬದುಕನ್ನು ಸಾಗಿಸಲು ಅವರಿಗೆ ಸಾಧ್ಯ.

ಈ ದಿಸೆಯಲ್ಲಿ ಮನೋರೋಗ ಚಿಕಿತ್ಸಕರಿಗೆ (Psychiatrists), ಆಪ್ತ ಸಮಾಲೋಚಕರಿಗೆ (Counsellors), ಚಿಕಿತ್ಸಾ ಮನೋವಿಜ್ಞಾನಿ (Clinical Psychologists)ಗಳಿಗೆ ಹಾಗೂ ಮಾನಸಿಕ ರೋಗಿಗಳ ಬಗ್ಗೆ ಕೆಲಸ ಮಾಡುವ ಸ್ವಯಂಸೇವಾ ಸಂಸ್ಥೆಗಳವರಿಗೆ ಲಿಂಗತ್ವ ಸೂಕ್ಷ್ಮ ಸಂವೇದನಾ ತರಬೇತಿ ನೀಡಬೇಕು. ಏಕೆಂದರೆ ಇಂತಹ ತರಬೇತಿಗಳು, ಅವರು ಮಹಿಳಾ ನೆಲೆಯಲ್ಲಿ ನಿಂತು ಸಹಾನುಭೂತಿಯಿಂದ ಮಹಿಳಾ ಮಾನಸಿಕ ರೋಗಿಗಳು ಹಾಗೂ ಅವರ ಕುಟುಂಬದವರಿಗೆ ಅಗತ್ಯವಾದ ಮಾನಸಿಕ ಬೆಂಬಲ, ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡಲು ಸರಿಯಾದ ಆಪ್ತಸಲಹೆ ನೀಡಲು ಅಗತ್ಯವಾಗಿದೆ.

ಕೊನೆಯದಾಗಿ, ವಿಶ್ವಆರೋಗ್ಯ ಸಂಸ್ಥೆ ಹಾಗೂ ವಾಲಂಟರಿ ಹೆಲ್ತ್‌ಅಸೋಸಿಯೇಷನ್‌ಆಫ್‌ಇಂಡಿಯಾ ಜಂಟಿಯಾಗಿ ಹೊರತಂದಿರುವ ಭಾರತೀಯ ಮಹಿಳೆಯರ ಆರೋಗ್ಯವನ್ನು ಕುರಿತ ವರದಿಯಲ್ಲಿ ಮಹಿಳಾ ಮಾನಸಿಕ ಆರೋಗ್ಯವನ್ನು ಕುರಿತು ಮಾಡಿರುವ ಸಲಹೆಗಳನ್ನು ಕೆಳಕಂಡಂತೆ ಪಟ್ಟಿ ಮಾಡಬಹುದು.

ಅ. ಮಾನಸಿಕ ಆರೋಗ್ಯವನ್ನು ಕುರಿತ ಎಲ್ಲಾ ಯೋಜನೆಗಳನ್ನು ರೂಪಿಸಲು, ನಿರ್ವಹಿಸಲು, ವಿವಿಧ ಸಂಬಂಧಿತ ಇಲಾಖೆ, ಮಂತ್ರಾಲಯಗಳ ಕೆಲಸಗಳನ್ನು ಸುಸಂಬಂದ್ಧವಾಗಿ ಸಂಯೋಜಿಸಿ ಕಾರ್ಯನಿರ್ವಹಿಸಲು ಒಂದು ಕೇಂದ್ರೀಯ ಮಾನಸಿಕ ಆರೋಗ್ಯ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಈ ಪ್ರಾಧಿಕಾರದ ಮಂಡಲಿಗಳು ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಕೆಲಸ ಮಾಡಬೇಕು. ಈ ಮಂಡಲಿಗಳಲ್ಲಿ ಮಾನಸಿಕ ರೋಗಿಗಳ ಕುಟುಂಬದ ಸದಸ್ಯರುಗಳು, ಮಹಿಳಾ ಸಂಘಟನೆಗಳು ಹಾಗೂ ಮಹಿಳಾ ಮಾನಸಿಕ ಆರೋಗ್ಯದ ಬಗ್ಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳ ಪ್ರತಿನಿಧಿಗಳು ಇರಬೇಕು.

ಆ. ಪ್ರಾಥಮಿಕ ಆರೋಗ್ಯ ಸೇವಾ ಸೌಲಭ್ಯಗಳೊಂದಿಗೇ ಮಾನಸಿಕ ಆರೋಗ್ಯ ಸೇವಾ ಸೌಲಭ್ಯಗಳನ್ನು ಸಮನ್ವಯಗೊಳಿಸಬೇಕು. ಪ್ರಾಥಮಿಕ ಆರೋಗ್ಯ ಸೇವಾ ಸಿಬ್ಬಂಧಿಗಳಿಗೆ ತರಬೇತಿ ನೀಡುವಾಗ ಮತ್ತು ಸಮುದಾಯಗಳಿಗೆ ಆರೋಗ್ಯ ಶಿಕ್ಷಣ ನೀಡುವಾಗ ಮಾನಸಿಕ ಆರೋಗ್ಯ/ಅನಾರೋಗ್ಯಗಳ ಬಗ್ಗೆ ಪಠ್ಯಗಳನ್ನು ಸೇರಿಸಲು ಸಾಧ್ಯ. ಹಾಗೆಯೇ ಪ್ರಾಥಮಿಕ ಆರೋಗ್ಯ ಸೇವಾ ಸೌಲಭ್ಯಗಳ ಜೊತೆಗೇ ಪ್ರಾಥಮಿಕ ಮಾನಸಿಕ ಆರೋಗ್ಯ ಸೇವೆಗಳನ್ನೂ ಸಮನ್ವಯಗೊಳಿಸಬೇಕು.

ಇ. ಮಹಿಳೆಯರ ಮಾನಸಿಕ ಕಾಯಿಲೆಗಳ ಬೇರುಗಳು ಅವರು ಬದುಕುವ ಕೌಟುಂಬಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೇರುಗಳಲ್ಲಿದ್ದು ಅವುಗಳನ್ನು ತುರ್ತಾಗಿ ಗುರ್ತಿಸಬೇಕು.

ಈ. ವೈದ್ಯಕೀಯ ತಜ್ಞರ ಹಾಗೂ ಅರೆವೈದ್ಯಕೀಯ ಸಿಬ್ಬಂದಿಗೆ ಅದರಲ್ಲೂ ವಿಶೇಷವಾಗಿ, ಸ್ತ್ರೀಯರ ಆರೋಗ್ಯ ಸೇವಾ ಸೌಲಭ್ಯಗಳಲ್ಲಿ ಕಾರ್ಯನಿರತವಾಗಿರುವ ಸಿಬ್ಬಂದಿಗಳಿಗೆ ಮಹಿಳೆಯರ ಮಾನಸಿಕ ಆರೋಗ್ಯವನ್ನು ಕುರಿತಂತೆ ಹಾಗೂ ನೀಡಬೇಕಾಗುವ ಆಪ್ತ ಸಮಾಲೋಚನೆಯ ಬಗ್ಗೆ ತರಬೇತಿ ನೀಡಬೇಕು.

ಉ. ಆಸ್ಪತ್ರೆಗಳಲ್ಲಿ, ನಿರ್ಗತಿಕರ ನಿಲಯಗಳಲ್ಲಿ (Destitute Homes), ಮನೋರೋಗಿಗಳ ಆಶ್ರಮಧಾಮಗಳಲ್ಲಿ ಮಹಿಳಾ ಮನೋರೋಗಿಗಳಿಗೆ ಗಮನ ನೀಡಬೇಕು. ಈ ಎಲ್ಲಾ ಸಂಸ್ಥೆಗಳಲ್ಲಿ ಸ್ತ್ರೀ ಮನೋರೋಗಿಗಳಿಗಾಗಿ ಸಾಕಷ್ಟು ಸಂಖ್ಯೆಯ ಹಾಸಿಗೆಗಳನ್ನು ಮೀಸಲಿರಿಸಬೇಕು. ಹಾಗೆಯೇ ಮಹಿಳಾ ಮನೋರೋಗಿಗಳಿಗೆ ಹಾಗೂ ಆ ರೋಗಿಗಳ ಕುಟುಂಬಗಳಿಗೆ ನೆರವು ಹಾಗೂ ಬೆಂಬಲ ನೀಡುವ ಸಹಾಯಕ ಗುಂಪುಗಳನ್ನು ಕಟ್ಟಬೇಕು (Support groups).

ಊ. ಮಾನಸಿಕ ರೋಗಗಳನ್ನು ಮಹಿಳೆಯರಲ್ಲಿ ತಗ್ಗಿಸಲು ಬಹು ಆಯಾಮಗಳ (Multi dimensional) ಕಾರ್ಯಕ್ರಮಗಳನ್ನು ಹಾಗೂ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಬೇಕು. ವಿವಿಧ ಹಂತಗಳಲ್ಲಿರುವ ಆರೋಗ್ಯ ಸಿಬ್ಬಂದಿಯನ್ನು ಹಾಗೂ ವಿವಿಧ ವಲಯಗಳಲ್ಲಿಯ ಸಿಬ್ಬಂದಿಯನ್ನು ಈ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾಮಾಜಿಕ ಕಾರ್ಯನೀತಿ, ಸಮೂಹ ಮಾಧ್ಯಮ, ಉದ್ಯೋಗಾವಕಾಶ ಇತ್ಯಾದಿ ವಲಯಗಳು ತಮ್ಮದೇ ಆದ ರೀತಿಯಲ್ಲಿ ಇಂತಹ ಯೋಜನೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು.

ಕೊನೆಯದಾಗಿ, ಈ ಲೇಖಕಿಯ ಪ್ರಕಾರ ಎರಡು ವಿಷಯಗಳ ಬಗ್ಗೆ ವಿಶಾಲವ್ಯಾಪ್ತಿಯ ಚರ್ಚೆಗಳ ನಡೆಯಬೇಕಾಗಿದೆ. ಮೊದಲನೆಯದಾಗಿ, ಪಾಶ್ಚಿಮಾತ್ಯ ದೇಶಗಳಲ್ಲಿ ಆರೋಗ್ಯ ವಿಮಾ ಯೋಜನೆಯಡಿ ಪಟ್ಟಿ ಮಾಡಿದ ಕಾಯಿಲೆಗಳಲ್ಲಿ ಮಾನಸಿಕ ಕಾಯಿಲೆಗಳನ್ನು ಸಹ ಸೇರಿಸಲಾಗಿದೆ, ಇದು ನಮ್ಮಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂಬುದು ಚರ್ಚೆಯಾಗಬೇಕು.ಇಂತಹ ವಿಮಾ ಯೋಜನೆಗಳ ಕಾರ್ಯನೀತಿಯ ಫಲವಾಗಿ ಮಾನಸಿಕ ಆರೋಗ್ಯ ಸೇವಾ ಸೌಲಭ್ಯಗಳು, ಸಂಸ್ಥೆಗಳು, ವೈದ್ಯರು ಇತ್ಯಾದಿಯವರು ಸಹ ಖಾಸಗೀಕರಣದ ಆರ್ಥಿಕತೆಯಲ್ಲಿರುವ ವ್ಯಾವಹಾರಿಕ ವ್ಯಾಪಾರದ ಕಟ್ಟುನಿಟ್ಟಿನ ನೀತಿ ನಿಯಮಗಳನ್ನು ಸರಿಯಾಗಿ ಪಾಲಿಸಬೇಕಾಗುತ್ತದೆ. ಹಾಗಾಗಿ ಮಾನಸಿಕ ರೋಗಿಗಳ ಕುಟುಂಬಕ್ಕೆ ಎಷ್ಟೋ ಸಹಾಯವಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಅಳವಡಿಸಿಕೊಂಡಿರುವ ಹೊಸ ಆರ್ಥಿಕ ನೀತಿಯಿಂದಾಗಿ ಆರೋಗ್ಯಕ್ಕಾಗಿ ಹೂಡಬೇಕಾಗುವ ಮೊತ್ತವನ್ನು ಕಡಿತಗೊಳಿಸುವ ನೀತಿಯನ್ನು ಸರ್ಕಾರಗಳು ಪಾಲಿಸಬೇಕಾಗುವುದರಿಂದ ಸರ್ಕಾರೀ ಆರೋಗ್ಯ ಸೌಲಭ್ಯಗಳನ್ನೇ ನಂಬಿರುವ ಸಾಮಾನ್ಯ ಆರ್ಥಿಕ ವರ್ಗ ಹಾಗೂ ಮಧ್ಯಮ ವರ್ಗಗಳಿಗೂ ಸಹ ಬಹಳ ತೊಂದರೆಯಾಗುತ್ತಿದೆ. ಹೀಗಾಗಿ ಜಾಗತೀಕರಣದ ನಕಾರಾತ್ಮಕ ಪರಿಣಾಮಗಳಿಗೆ ಗುರಿಯಾಗುತ್ತಿರುವ ಸಾಮಾನ್ಯ ಜನತೆಗಾಗಿ ಆರೋಗ್ಯ ವಿಮೆಯ ಅಡಿಯಲ್ಲಿಯ ಕಾಯಿಲೆಗಳ ಪಟ್ಟಿಗೆ ಮಾನಸಿಕ ಕಾಯಿಲೆಗಳನ್ನು ಸೇರಿಸಿ, ಅದಕ್ಕಾಗಿ ವಿಶೇಷ ಅಥವಾ ಹೆಚ್ಚುವರಿ ಪ್ರಿಮಿಯಂ ಅಥವಾ ಕಂತನ್ನು ಕಟ್ಟಿಸಿಕೊಳ್ಳಬಹುದಾದ ಆರೋಗ್ಯ ವಿಮಾ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಸರ್ಕಾರ, ವಿಮಾ ಕಂಪೆನಿಗಳ ಹಾಗೂ ಸಾರ್ವಜನಿಕರ ನಡುವೆ ಸಂವಾದ ನಡೆಯಬೇಕಾದ ಅಗತ್ಯವಿದೆ.

ಎರಡನೆಯದಾಗಿ ನಮ್ಮ ದೇಶದ ಸ್ತ್ರೀವಾದಿ ಚಳವಳಿಯ ಮುಂಚೂಣಿಯಲ್ಲಿರುವವರು ಮಹಿಳಾ ಮಾನಸಿಕ ಆರೋಗ್ಯವನ್ನು ತಮ್ಮ ಮುಖ್ಯ ಕಾರ್ಯಸೂಚಿಯಲ್ಲಿ ತರಬೇಕಾಗಿದೆ. ಭಾರತದಲ್ಲಿ ಮಹಿಳಾ ಆರೋಗ್ಯ ಚಳವಳಿಯಲ್ಲಿರುವ ಸ್ತ್ರೀವಾದಿಗಳು ತಾಯ್ತನದ ಸಮಸ್ಯೆಗಳು, ಮಹಿಳೆಯರ ಮೇಲಣ ಹಿಂಸೆ, ಜನಸಂಖ್ಯಾ ನೀತಿ, ಸ್ತ್ರೀ ಪುರುಷರ ಅನುಪಾತ ಇವುಗಳಿಗೂ ಮಹಿಳಾ ಆರೋಗ್ಯಕ್ಕೂ ಇರುವ ಪಾರಸ್ಪರಿಕ ಸಂಬಂಧಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿ ಆ ದಿಸೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಹೆಚ್ಚಾಗುತ್ತಿರುವ ಮಹಿಳೆಯರ ಮಾನಸಿಕ ರೋಗಗಳ ವಿಷಯವನ್ನು ಮಹಿಳಾ ಆರೋಗ್ಯ ಚಳವಳಿ ಕೈಗೆತ್ತಿಕೊಂಡು ಅದಕ್ಕೆ ಸಿಗಬೇಕಾದ ಸಾರ್ವತ್ರಿಕವಾದ ಸಾರ್ವಜನಿಕವಾದ ಸ್ತ್ರೀಪರ ಸಹಾನುಭೂತಿ ಹಾಗೂ ಬೆಂಬಲ ದೊರಕಿಸಿಕೊಡಬೇಕಾಗಿದೆ.

ಕೋಷ್ಟಕ೨೧: ಮಾನಸಿಕ ರೋಗಗಳಿಂದ ಬಳಲುತ್ತಿದ್ದ ಸ್ತ್ರೀ ಪುರುಷರ ಶೇಕಡಾವಾರು ಸಂಖ್ಯೆ

ಅಧ್ಯಯನಗಳು

ಪುರುಷರು ಸ್ತ್ರೀಯರು
ಡುಬೆ (೧೯೭೦)* ೧.೫೮ ೩.೩೩
ಸೇತಿ ಮತ್ತಿತರರು (೧೯೭೨)* ೫.೨೬ ೨.೪೧
ವರ್ಗೀಸ್‌ಮತ್ತಿತರರು (೧೯೭೩)* ೬.೦೪ ೭.೨೯
ನಂದಿ ಮತ್ತಿತರರು (೧೯೭೫)* ೯.೦೬ ೧೧.೪೬
ಚಕ್ರಬೊರ್ತಿ (೧೯೯೦)* ೯.೨೬ ೨೨.೫೦
ಒಟ್ಟು ೧೦.೪೮ ೧೪.೪೫

ಮೂಲ: Davar, V. Bhargavi (1999)., Mental Health of Indian Women : a Faminist Agenda., New Delhi, Sage Publication, P. 43

* ಅಧ್ಯಯನಗಳಲ್ಲಿ ಕುಡಿತದ ಚಟವನ್ನು ಮಾನಸಿಕ ರೋಗಗಳ ಪಟ್ಟಿಗೆ ಸೇರಿಸಿಕೊಳ್ಳಲಾಗಿತ್ತು.

+ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ಪುರುಷರ ಮಾನಸಿಕ ಸಮಸ್ಯೆಯಾದ ಕುಡಿತವನ್ನು ಮಾನಸಿಕ ರೋಗಗಳ ಪಟ್ಟಿಗೆ ಸೇರಿಸಿರಲಿಲ್ಲ. ಹಾಗಾಗಿ ಇವರ ಫಲಿತಾಂಶಗಳಲ್ಲಿ ಸ್ತ್ರೀ ಪುರುಷರಲ್ಲಿರುವ ಅಗಾಧ ವ್ಯತ್ಯಾಸವು ವ್ಯಕ್ತವಾಗಿದೆ.

ಕೋಷ್ಟಕ೨೨: ಮನೋರೋಗಿಗಳ ಲಿಂಗ ಮತ್ತು ವೈವಾಹಿಕ ಸ್ಥಿತಿ

ಮೂಲ ಅಧ್ಯಯನಗಳು ಅವಿವಾಹಿತರು ವಿವಾಹಿತರು ವಿಚ್ಛೇದಿತರು / ಬೇರ್ಪಡೆಯಾದವರು / ವಿಧುರರು / ವಿಧೆಯರು
ಗಂ ಹೆಂ ಗಂ ಹೆಂ ಗಂ ಹೆಂ
ಡುಬೆ (೧೯೭೦) ೨.೬೮ ೩.೮೯ ೧.೯೫ ೫.೭೧
ವರ್ಗೀಸ್‌ಮತ್ತು ಇತರರು (೧೯೭೩) ೪.೭೦ ೫.೪೦ ೬.೩೦ ೮.೫೦ ೧೨.೪೦
ಚಕ್ರವರ್ತಿ (೧೯೯೦) ೧.೭೦ ೧.೨೦ ೧.೬೦ ೧.೧೦ ೨.೨೦ ೩.೬೦
ಸರ್ವೇಕ್ಷಣೆಗಳು* ೫.೫೦ ೭.೮೦ ೧೬.೬೦ ೧೧.೧೦ ೧೧.೧೦ ೨೯.೨೦
ಒಟ್ಟು ೩.೬೫ ೪.೫೭ ೪.೩೪ ೭.೯೮ ೩. ೧೧.೩೦

ಮೂಲ: Davar. V. Bhargavi (1999)., Mental Health of Indian Women : a Feminist Agenda., New Delhi, Sage Publication, P.90

*ಪಶ್ಚಿಮ ಬಂಗಾಳದ ಸಮುದಾಯಗಳಲ್ಲಿ ನಡೆಸಿದ ಸರ್ವೇಕ್ಷಣಗಳ ಸಾಮಾನ್ಯ ಫಲಿತಾಂಶಗಳು (General results).

ಕೋಷ್ಟಕ೨೩: ವಿಭಿನ್ನ ವಯೋಮಾನಗಳ ಸ್ತ್ರೀಯರಲ್ಲಿ ಮಾನಸಿಕ ಕಾಯಿಲೆಗಳು

ಅಧ್ಯಯನಗಳು ಮೂಲ ಬಾಲ್ಯ ಪ್ರಜನನ ವಯೋಮಾನ ಮುಟ್ಟು ನಿಂತ ನಂತರದ ಅವಧಿ
ವೃದ್ಧಾಪ್ಯ
ಒಟ್ಟು
ಡುಬೆ (೧೯೭೦) ೧೮.೦೪ ೬೬.೩೭ ೯.೧೩ ೬.೪೬ ೧೦೦
ನಂದಿ ಮತ್ತಿತರರು (೧೯೭೫) ೧೧.೩೦ ೫೦.೦೦ ೨೦.೬೯ ೧೭.೭೪ ೧೦೦
ಚಕ್ರವರ್ತಿ (೧೯೯೦) ೬೭.೭೦ ೧೩.೮೦ ೧೮.೫೦ ೧೦೦
ಒಟ್ಟು ೯.೭೮ ೬೧.೩೯ ೧೪.೬೦ ೧೪.೨೩ ೧೦೦

ಮೂಲ: Davar. V. Bhargavi (1999).,Mental Health of Indian Women : a Feminist Agenda., New Delhi, Sage Publication, P. 92.

ಕೋಷ್ಟಕ೨೪: ಪ್ರಜನನ ವಯೋಮಾನದ ಮಹಿಳೆಯರ ಸಾವಿನ ಮೊದಲ ಹತ್ತು ಕಾರಣಗಳಲ್ಲಿ ಆತ್ಮಹತ್ಯೆಯ ಸ್ಥಾನ

ಕ್ರ.ಸಂಖ್ಯೆ ಮಾದರಿಯಾದ ವರ್ಷ ಆತ್ಮಹತ್ಯೆಯ ಸ್ಥಾನ
೧. ೧೯೮೪ ೧೦ನೇ ಸ್ಥಾನ
೨. ೧೯೮೫ ೬ನೇ ಸ್ಥಾನ
೩. ೧೯೮೬ ೭ನೇ ಸ್ಥಾನ
೪. ೧೯೮೭ ೭ನೇ ಸ್ಥಾನ
೫. ೧೯೮೮ ೭ನೇ ಸ್ಥಾನ
೬. ೧೯೮೯ ೪ನೇ ಸ್ಥಾನ
೭. ೧೯೯೦ ೩ನೇ ಸ್ಥಾನ
೮. ೧೯೯೧ ೩ನೇ ಸ್ಥಾನ
೯. ೧೯೯೪ ೨ನೇ ಸ್ಥಾನ

ಮೂಲ:Gopalan Sarala and Mira Shiva (2000) (Edotors), National Pro-file on Women, Health and Development Country Profile India., VHAI and WHO., Pp. 177-178.

ಮೂಲದ ಕೋಷ್ಟಕಗಳಿಂದ ಆತ್ಮಹತ್ಯೆಯ ಸ್ಥಾನವನ್ನಷ್ಟೇ ತೆಗೆದು ಕೋಷ್ಟಕದಲ್ಲಿ ಕೊಡಲಾಗಿದೆ.

[1] Shatrugna Veena (1999) `Foreword’ in Davar Vol.3, Mental Health of Indian Women., New Delhi, Sage Publications, P.II

[2] Anonymous (2005) “Depression More Common in Women a study reveals’’, Deccan Herald., 4.5.05, P. 11

[3] Davar, V. Bhargavi (1996) “Mental Illness Among Indian Women’’, Economic and Political Weekly no 12, Vol. 28. P.p. 79-86.

[4] Gopalan Sarala and Mira Shiva (2000) “National profile on Womn : Health and Development’’. New Delhi., Voluntary Health Association of India and WHO., p. 167,231-234, 304 and 78.

[5] Wiessman M. M., Bland R., Joyace P. R., Newman., Wells J. E. and Wittchen H. U. (1993), “Sex Differences in rates of Depression : Cross national Perspectives, Journal of Affective Disorder 29 (2-3), P.77-84.

[6] Clubertson F. M., (1997) “Depression and gender : An International review’’. American Psychologist 51 (1)25-31.

[7] Anonymous (1999) “Threats to Health and Development’’, Population Reports series L, No. 11, P. 18-20.

[8] Shultans V. (1991) “Women and afflication in Maharashtra : A hydraulic mode of Health and illness’’., Culture, Medicine and Psychiatry., Vol. 15., no (3). P. 321-359 quoted in Davar ref no. 10.

[9] Dhanda A (1996) “Insanity, Gender and Law’’ in P. Uberoi (Ed)., Social Reform, Sexuality and the State, New Delhi, Sage Publications.

[10] Davar V. Bhargavi (1999) “Mental Health of Indian Women : A Feminist Agenda’’. New Delhi, Sage Publications.

[11] Dhanda A (1984) “The Mental Health bill of 1981 a new deal for mentally ill’’, Supreme Court Cases., Vol. 2, No. 8, Pp. 8-19 quoted in ref no 4 p. 146.