ನಮ್ಮ ದೇಶದ ಮಹಿಳೆಯರ ಹಿಂದಿನ, ಇಂದಿನ ಮತ್ತು ಮುಂದಿನ ಆರೋಗ್ಯ ಸ್ಥಿತಿಗತಿಗಳಿಗೂ, ನಮ್ಮಿ ದೇಶದ ಆರ್ಥಿಕ, ಆರೋಗ್ಯ ಮತ್ತು ಜನಸಂಖ್ಯಾ ಕಾರ್ಯನೀತಿಗಳಿಗೂ, ಈ ಕಾರ್ಯನೀತಿಗಳ ಮೇಲೆ ಆಧಾರಿತವಾದ ಕಾರ್ಯಕ್ರಮಗಳಿಗೂ ಮತ್ತು ಯೋಜನೆಗಳಿಗೂ ಅವಿನಾ ಸಂಬಂಧವಿದೆ. ಆದ್ದರಿಂದ ಮಹಿಳೆಯರ ಆರೋಗ್ಯದ ಪೂರ್ಣ ಚಿತ್ರಣ ದೊರೆಯಬೇಕಾಗಿದ್ದಲ್ಲಿ ಇವೆಲ್ಲವನ್ನು ಇಡಿಯಾಗಿ ಅರ್ಥೈಸಿಕೊಂಡು ವಿಶ್ಲೇಷಿಸುವುದು ಅನಿವಾರ್ಯ. ಈ ಎಲ್ಲಾ ಅಂಶಗಳನ್ನು ಕುರಿತಂತೆ ಮೊದಲನೆಯದಾಗಿ ಒಂದು ಸಂಕ್ಷಿಪ್ತ ಹಿನ್ನೋಟ ಇಲ್ಲಿ ಅಪ್ರಸ್ತುತವೆನಿಸಲಾರದು. ಈ ಹಿನ್ನೋಟದಲ್ಲಿ ಆರ್ಥಿಕ ನೀತಿಯ ವಿವರಣೆ ಮತ್ತು ವಿಶ್ಲೇಷಣೆಗೆ ಹೆಚ್ಚು ಒತ್ತು ನೀಡಿಲ್ಲ. ಏಕೆಂದರೆ ಸ್ತ್ರೀ ಆರೋಗ್ಯಕ್ಕೆ ಅನ್ವಯಿಸುವಂತೆ ನಮ್ಮ ದೇಶದ ಆರ್ಥಿಕ ಕಾರ್ಯನೀತಿ ಮತ್ತು ಕಾರ್ಯಕ್ರಮಗಳನ್ನು ಕೊನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಹಿನ್ನೆಲೆ

೧೯೪೬ರಲ್ಲಿಯೇ ಭೋರ್‌ಕಮಿಟಿಯೆಂದೇ ಹೆಸರುವಾಸಿಯಾಗಿರುವ ರಾಷ್ಟ್ರೀಯ ಆರೋಗ್ಯ ಮತ್ತು ಅಭಿವೃದ್ಧಿ ಸಮಿತಿಯು ಸಲ್ಲಿಸಿದ ವರದಿಯ ಆಧಾರದ ಮೇಲೆಯೇ ನಮ್ಮ ದೇಶದ ಸ್ವಾತಂತ್ರ್ಯಾನಂತರದ ಆರೋಗ್ಯ ಕಾರ್ಯನೀತಿ ಮತ್ತು ಕಾರ್ಯಕ್ರಮಗಳು ರೂಪಿತಗೊಂಡವು. ಇಂಗ್ಲೆಂಡ್‌ಮತ್ತು ಸೋವಿಯತ್‌ರಷ್ಯಾ ದೇಶಗಳು ಹೇಗೆ ತಮ್ಮ ನಾಗರಿಕರೆಲ್ಲರಿಗೂ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಅದ್ಭುತ ಯಶಸ್ಸನ್ನು ಆ ವೇಳೆಗಾಗಲೇ ಸಾಧಿಸಿದ್ದವು ಎಂಬುದರಿಂದ ಪ್ರಭಾವಿತವಾಗಿದ್ದ ಈ ಸಮಿತಿಯು ತನ್ನ ವರದಿಯನ್ನು ಎರಡು ಮುಖ್ಯವಾದ ಮೂಲಭೂತ ಅಂಶಗಳ ಅಡಿಪಾಯದ ಮೇಲೆಯೇ ತಯಾರಿಸಿತ್ತು. ಮೊದಲನೆಯದಾಗಿ ಸಾರ್ವಜನಿಕರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಹೊಣೆ ಸರ್ಕಾರದ್ದು ಹಾಗೂ ಎರಡನೆಯದಾಗಿ ಸಮಗ್ರವಾದ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಹಣ ನೀಡುವ ಶಕ್ತಿಯಿರಲಿ ಇಲ್ಲದಿರಲಿ ಅವು ಎಲ್ಲಾ ನಾಗರಿಕರ ಹಕ್ಕು ಆಗಿರುವುದರಿಂದ ಅವುಗಳು ಎಲ್ಲರಿಗೂ ಸಿಗಬೇಕು ಎನ್ನುವ ಅಂಶಗಳು ಈ ಸಮಿತಿ ಮಾಡಿದ ಅನೇಕ ಶಿಫಾರಸ್‌ಗಳಿಗೆ ಆಧಾರವಾಗಿದ್ದವು. ಹಾಗಾಗಿ ಭೋರ್‌ಸಮಿತಿಯು ಸರ್ವರಿಗೂ ಆರೋಗ್ಯ ಸೌಲಭ್ಯಗಳು ಸಿಗುವಂತೆ ಮಾಡಲು ಜಿಲ್ಲಾ ಕೇಂದ್ರಗಳಲ್ಲಿ, ಆರೋಗ್ಯ ಕೇಂದ್ರಗಳು, ಬ್ಲಾಕ್‌ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಇವುಗಳ ಅಡಿಯಲ್ಲಿ ಉಪಕೇಂದ್ರಗಳು ಇರಬೇಕೆಂಬ ಮೂರು ಹಂತಗಳ ಸಾಂಸ್ಥಿಕ ಪರಿಕಲ್ಪನೆಯನ್ನು ಹಾಕಿಕೊಟ್ಟಿತು. ಇಂದಿಗೂ ಈ ಮೂರು ಹಂತಗಳ ಸಾಂಸ್ಥಿಕ ರೂಪದಲ್ಲಿಯೇ ಆರೋಗ್ಯ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಲಾಗುತ್ತಿದೆ.[1]

ಸ್ವಾತಂತ್ರ್ಯಾನಂತರ ಈ ಸಮಿತಿಯ ಶಿಫಾರಸ್‌ಗಳಿಗೆ ಅನುಗುಣವಾಗಿಯೇ ಹಂತ ಹಂತವಾಗಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುತ್ತಾ ಹೋಗಲಾಯಿತು. ಆದರೆ ಮಹಿಳೆಯರಿಗೇ ಸಂಬಂಧಿಸಿದಂತೆ ತಾಯ್ತನದ ಆರೋಗ್ಯ, ಮಹಿಳಾ ಆರೋಗ್ಯ ಸುಧಾರಣೆ ಮತ್ತಿತರ ಕಾಯಿಲೆಗಳ ನಿವಾರಣೆ ಹಾಗೂ ಜನಸಂಖ್ಯಾ ನಿಯಂತ್ರಣಗಳನ್ನು ಕುರಿತ ಕಾರ್ಯ ನೀತಿಗಳು ಮತ್ತು ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ಸಫಲಗೊಂಡಿಲ್ಲ ಎಂಬುದು ಸರ್ವವಿದಿತವೇ ಆಗಿದೆ.

ವಿಶ್ವದಲ್ಲಿಯೇ ಮೊಟ್ಟಮೊದಲಿಗೆ ೧೯೫೧ರಲ್ಲಿ ಒಂದು ಅಧಿಕೃತ ರಾಷ್ಟ್ರೀಯ ಜನಸಂಖ್ಯಾ ಕಾರ್ಯನೀತಿಯನ್ನು ರೂಪಿಸಿ ವಿಶಾಲ ವ್ಯಾಪ್ತಿಯ ಕಾರ್ಯಕ್ರಮಗಳನ್ನು ಯೋಜಿಸಿ ೧೯೫೨ರಲ್ಲಿ ಜಾರಿಗೆ ತಂದ ಕೀರ್ತಿ ಭಾರತದ್ದಾಗಿದೆ. ಹಾಗೆಯೇ ಎರಡು ದಶಕಗಳಿಗೂ ಹಿಂದೆಯೇ ೧೯೮೩ರಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯನೀತಿಯನ್ನು ಭಾರತ ರೂಪಿಸಿ ಜಾರಿಗೆ ತಂದಿದೆ. ಆದರೆ ಜನಭರಿತ ದೇಶಗಳಲ್ಲಿ ಎರಡನೇ ಸ್ಥಾನ ಪಡೆದಿದ್ದು ವಿಶ್ವದ ೧೬.೭% ರಷ್ಟು ವಿಶ್ವದ ಜನಸಂಖ್ಯೆಯನ್ನು ಕೇವಲ ೨.೪% ರಷ್ಟು ವಿಶ್ವದ ವಿಸ್ತೀರ್ಣದಲ್ಲಿ ಹೊರಬೇಕಾಗಿದೆ.[2] ಇದು ನಮ್ಮ ಜನಸಂಖ್ಯಾ ನಿಯಂತ್ರಣ ಕಾರ್ಯನೀತಿಗಳು, ಕಾರ್ಯತಂತ್ರಗಳು (Strategies) ಹಾಗೂ ಕಾರ್ಯಕ್ರಮಗಳು ವಿಫಲಗೊಂಡಿರುವುದಕ್ಕೆ ಸಾಕ್ಷಿ. ಅದೇ ರೀತಿ ೨೦೦೫ರ ವಿಶ್ವ ಆರೋಗ್ಯ ವರದಿಯ ಪ್ರಕಾರ ಭಾರತ ಇಡೀ ದಕ್ಷಿಣ ಏಷ್ಯಾದಲ್ಲಿ ಶಿಶುಮರಣ ಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಮತ್ತು ತಾಯ್ತನದ ಮರಣ ಸಂಖ್ಯೆಯಲ್ಲಿ ಮೂರನೆಯ ಸ್ಥಾನವನ್ನು ಪಡೆದಿರುವುದು, ನಾವು ಆರೋಗ್ಯ ಕ್ಷೇತ್ರದಲ್ಲಿ ಅದರಲ್ಲಿಯೂ ಮಹಿಳಾ ಆರೋಗ್ಯಕ್ಕೆ ನೇರವಾಗಿ ಅನ್ವಯಿಸಿದಂತೆ ಪ್ರಗತಿ ಸಾಧಿಸಿಲ್ಲ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ಪರಿಸ್ಥಿತಿಗೆ ಕಾರಕವಾದ ಅಂಶಗಳನ್ನು ಮತ್ತು ಪ್ರಕ್ರಿಯೆಗಳನ್ನು ಹುಡುಕುವಲ್ಲಿ, ಅವನ್ನು ಗುರ್ತಿಸಿ ಅರ್ಥೈಸುವಲ್ಲಿ ನಮ್ಮ ಸಾರ್ವಜನಿಕ ಆರೋಗ್ಯ ಕಾರ್ಯನೀತಿ/ ಕಾರ್ಯತಂತ್ರಗಳು ಹಾಗೂ ಜನಸಂಖ್ಯಾ ನಿಯಂತ್ರಣದ ಕಾರ್ಯತಂತ್ರಗಳು ಹೇಗೆ ಒಂದು ಪಂಚವಾರ್ಷಿಕ ಯೋಜನೆಯಿಂದ ಇನ್ನೊಂದಕ್ಕೆ ಎಷ್ಟರಮಟ್ಟಿಗೆ ಬದಲಾಗುತ್ತಾ ಹೋಗಿ ಜನಸಂಖ್ಯಾ ನಿಯಂತ್ರಣ ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳು ಜನರ ಕಾರ್ಯಕ್ರಮಗಳಾಗಿ ಯಶಸ್ಸುಗಳಿಸುವಲ್ಲಿ ಸೋತವು ಎಂಬುದರ ವಿಶ್ಲೇಷಣೆ ಅಗತ್ಯ.

ಮೊದಲನೆಯ ಪಂಚವಾರ್ಷಿಕ ಯೋಜನೆ (೧೯೫೧೫೬)

ಈ ಪಂಚವಾರ್ಷಿಕ ಯೋಜನಾವಧಿಯಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸೆಗಳಿಗೆ ಹೆಚ್ಚು ಆದ್ಯತೆ ನೀಡಿ ಆಯವ್ಯಯದಲ್ಲಿ ಆರೋಗ್ಯಕ್ಕೆ ಮೀಸಲಾಗಿರಿಸಿದ್ದ ಮೊತ್ತದಲ್ಲಿ ೫೦% ರಿಂದ ೬೦% ರಷ್ಟು ಹಣವನ್ನು ಅವಕ್ಕೇ ನೀಡಲಾಯಿತು. ಭೋರ್‌ಸಮಿತಿಯು ಸರ್ಕಾರದ ಆಯವ್ಯಯದಲ್ಲಿ ಕನಿಷ್ಠ ೧೦% ಕ್ಕಿಂತಲೂ ಕಡಿಮೆಯಾಗದಂತೆ ಆರೋಗ್ಯ ವಲಯಕ್ಕೆ ಸಂಪನ್ಮೂಲಗಳನ್ನು ಒದಗಿಸುವಂತೆ ಶಿಫಾರಸ್‌ಮಾಡಿತ್ತು. ಈ ಯೋಜನೆಯ ಆರಂಭದಲ್ಲಿಯೇ ೧೯೫೧ರಲ್ಲಿ ಅಧಿಕೃತವಾದ ರಾಷ್ಟ್ರೀಯ ಜನಸಂಖ್ಯಾ ಕಾರ್ಯನೀತಿಯನ್ನು ಘೋಷಿಸಲಾಯಿತು. ಹಾಗೆಯೇ ೧೯೫೨ರಲ್ಲಿ ರಾಷ್ಟ್ರೀಯ ಕುಟುಂಬ ಯೋಜನಾ ಕಾರ್ಯಕ್ರಮವನ್ನು ರೂಪಿಸಲಾಯಿತು. ರಾಷ್ಟ್ರೀಯ ಜನಸಂಖ್ಯಾ ನೀತಿಯ ಮುಖ್ಯ ಗುರಿಯೆಂದರೆ, ದೇಶದ ಆರ್ಥಿಕ ಪರಿಸ್ಥಿತಿಯ ಅಗತ್ಯಗಳಿಗೆ ಹೊಂದುವಂತಹ ಹಂತಕ್ಕೆ ಜನನ ಸಂಖ್ಯಾ ಪ್ರಮಾಣವನ್ನು ತಗ್ಗಿಸಿ ದೇಶದ ಜನಸಂಖ್ಯೆಯನ್ನು ಸ್ಥಿರಗೊಳಿಸುವುದೇ ಆಗಿತ್ತು.1

“ಕುಟುಂಬ ಯೋಜನೆಯ ಮುಖ್ಯ ಆಸಕ್ತಿಯೆಂದರೆ ಕುಟುಂಬದ ಆರೋಗ್ಯ ಮತ್ತು ಕಲ್ಯಾಣವೇ ಆಗಿದೆ. ತಾಯಿಯ ಉತ್ತಮ ಆರೋಗ್ಯಕ್ಕಾಗಿ ಹಾಗೂ ಮಕ್ಕಳ ಒಳ್ಳೆಯ ಪಾಲನೆಗಾಗಿ ಕುಟುಂಬದ ಗಾತ್ರವನ್ನು ಸೀಮಿತಗೊಳಿಸುವುದು ಹಾಗೂ ಮಕ್ಕಳ ನಡುವೆ ಅಂತರ ಇರುವುದು ಅಗತ್ಯವಾಗಿದ್ದು, ಈ ಗುರಿ ತಲುಪುವುದಕ್ಕಾಗಿ ಕೈಗೊಳ್ಳುವ ಕ್ರಮಗಳೆಲ್ಲವೂ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದ ಅಂಗವಾಗಿರಬೇಕು” ಎನ್ನುವುದು ಮೊಟ್ಟಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಕುಟುಂಬ ಯೋಜನೆಯನ್ನು ಕುರಿತ ಅಧಿಕೃತ ಹೇಳಿಕೆಯಾಗಿತ್ತು. ೧೯೯೪ರಲ್ಲಿ ಕೈರೋದಲ್ಲಿ ನಡೆದ ಅಂತರರಾಷ್ಟ್ರೀಯ ಜನಸಂಖ್ಯೆ ಮತ್ತು ಅಭಿವೃದ್ಧಿ ಸಮಾವೇಶ (ICPD) ನಡೆಯುವ ನಾಲ್ಕು ದಶಕಗಳಿಗೂ ಮುನ್ನವೇ ಇಂತಹ ದೂರಗಾಮೀ ದೃಷ್ಟಿಯುಳ್ಳ ಸ್ತ್ರೀ ಆರೋಗ್ಯ ಪರವಾದ ಹೇಳಿಕೆ ಹೊರಬಿದ್ದಿತ್ತು ಎನ್ನುವುದನ್ನು ಗಮನಿಸಬೇಕು. ಕೈರೋದ ಈ ಸಮಾವೇಶದಲ್ಲಿ ಮಾಡಲಾದ ಶಿಫಾರಸ್‌ಗಳಲ್ಲಿರುವ ಹಲವು ಅಂಶಗಳು ಈ ಹೇಳಿಕೆಯಲ್ಲಿರುವುದು ಮೊದಲ ಪಂಚವಾರ್ಷಿಕ ಯೋಜನೆಯ ಕಾರ್ಯನೀತಿ ನಿರೂಪಕರ ದೂರದೃಷ್ಟಿಗೆ ಸಾಕ್ಷಿಯಾಗಿದೆ.

ಎರಡನೆಯ ಪಂಚವಾರ್ಷಿಕ ಯೋಜನೆ (೧೯೫೬೬೧)

ಬೇಡದ ಬಸಿರುಗಳ ಭಾರದಿಂದ ಹಾಗೂ ಮೇಲಿಂದ ಮೇಲೆ ಹೆರಿಗೆಯನ್ನು ಎದುರಿಸಬೇಕಾಗುವ ಸಂಕಷ್ಟಗಳ ಸರಮಾಲೆಯಿಂದ ಸ್ತ್ರೀಯರನ್ನು ಬಿಡುಗಡೆಗೊಳಿಸುವುದಕ್ಕಾಗಿ ಪ್ರಗತಿಪರ ಮಹಿಳಾ ಚಳವಳಿಯು ಕುಟುಂಬ ಯೋಜನೆಯನ್ನು ಮಹಿಳಾ ವಿಮೋಚನೆಯ ಒಂದು ಸಾಧನೆಯಾಗಿ ಆರಂಭಿಸಿತು. ಭಾರತ ಸರ್ಕಾರವು ತನ್ನ ಜನಸಂಖ್ಯಾ ನಿಯಂತ್ರಣ ಕಾರ್ಯನೀತಿಗೆ ಅನುಗುಣವಾಗಿ ಕುಟುಂಬ ಯೋಜನೆಯನ್ನು ತನ್ನ ಪಂಚವಾರ್ಷಿಕ ಯೋಜನೆಯಲ್ಲಿ ಅಳವಡಿಸಿಕೊಂಡಿತ್ತು.1 ಜನಸಂಖ್ಯಾ ನಿಯಂತ್ರಣಕ್ಕಾಗಿ ಅದು ವೈದ್ಯಕೀಯ ಚಿಕಿತ್ಸಾ ಕಾರ್ಯತಂತ್ರದ (Clinicel approch) ಧೋರಣೆಯನ್ನು ತನ್ನ ಕಾರ್ಯಕ್ರಮಗಳಲ್ಲಿ ಜಾರಿಗೆ ತಂದಿತು. ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಲ್ಲಿ ತಕ್ಕಮಟ್ಟಿನ ಕುಟುಂಬ ಯೋಜನಾ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಕುಟುಂಬ ಯೋಜನೆಯ ಕಾರ್ಯಕ್ರಮಗಳಲ್ಲಿ ಸ್ವಲ್ಪಮಟ್ಟಿಗೆ ಶೈಕ್ಷಣಿಕ ಮತ್ತು ವಿಸ್ತರಣಾ ವಿಧಾನಗಳನ್ನು ಉಪಯೋಗಿಸಲಾಗುತ್ತಿತ್ತು. ಐವತ್ತರ ದಶಕದಲ್ಲಿ ಕಾಂಡೋಮ್‌ಗಳು, ಡಯಾಫ್ರಾಮ್‌ಗಳು, ಕ್ರೀಂ ಮತ್ತು ಜೆಲ್ಲಿಗಳು ಕುಟುಂಬ ಯೋಜನೆಯ ವಿಧಾನಗಳಾಗಿದ್ದವು. ಈ ಎರಡೂ ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಸಂತಾನ ನಿರೋಧಕ ಶಸ್ತ್ರ ಚಿಕಿತ್ಸೆಯನ್ನು ಕಾರ್ಯಕ್ರಮಗಳಲ್ಲಿ ಸೇರಿಸಿಕೊಂಡಿರಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.[3][4]

ಶಿಶುಮರಣ ಸಂಖ್ಯೆಯ ಹೆಚ್ಚಳದಿಂದಲೇ ಮಹಿಳೆಯರು ಹೆಚ್ಚು ಮಕ್ಕಳನ್ನು ಹಡೆಯಬೇಕಾದ ಅನಿವಾರ್ಯತೆಯುಂಟಾಗುತ್ತದೆ ಎಂಬ ವಿಷಯಕ್ಕೆ ಹೆಚ್ಚು ಒತ್ತು ನೀಡಲಾಯಿತು. ಆದ್ದರಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳಲ್ಲಿ ಮಕ್ಕಳ ಆರೋಗ್ಯಕ್ಕೇನೇ ಹೆಚ್ಚು ಆದ್ಯತೆ ನೀಡಲಾಯಿತು. ಆದರೆ ಅದೇ ವೇಳೆಗೆ ತಾಯಿಯ ಆರೋಗ್ಯದ ಸ್ಥಿತಿಗೂ ಹಾಗೂ ತಾಯ್ತನದ ಮರಣಗಳಿಗೂ ಇರುವ ಪಾರಸ್ಪರಿಕ ಸಂಬಂಧಕ್ಕೆ ಹೆಚ್ಚಿನ ಗಮನ ದೊರಕದೇ ಹೋಯಿತು. ನೂರು ಹೆರಿಗೆ/ಶಿಶುಜನನಗಳಿಗೆ, ಹೆರಿಗೆ ಮಾಡಿಸಬಲ್ಲ ತರಬೇತಿ ಹೊಂದಿದ ಒಬ್ಬ ದಾಯಿಯಾದರೂ ಇರಬೇಕಾದ ಅಗತ್ಯವಿದ್ದು ಆಗ ಅಂದಾಜಿಸಲಾಗಿದ್ದ ೧೦ ದಶಲಕ್ಷ ಶಿಶುಜನನಗಳಿಗೆ ೧ ಲಕ್ಷ ದಾಯಿಯರ ಅಗತ್ಯವಿತ್ತು. ಆದರೆ ಈ ಯೋಜನೆಯ ಅವಧಿಯಲ್ಲಿ ಕೇವಲ ೫೫%ರಷ್ಟು (೫೫,೦೦೦) ಹೆರಿಗೆ ಮಾಡಿಸಬಲ್ಲ ದಾಯಿಯರಿದ್ದರು ಎಂಬುದನ್ನು ಗಮನಿಸಬೇಕು.

ಮೂರನೆಯ ಪಂಚವಾರ್ಷಿಕ ಯೋಜನೆ (೧೯೬೧೬೬) ಮತ್ತು ವಾರ್ಷಿಕ ಯೋಜನೆಗಳು (೧೯೬೬೬೯)

ಈ ಪಂಚವಾರ್ಷಿಕ ಯೋಜನೆ ಹಾಗೂ ಅದನ್ನು ಹಿಂಬಾಲಿಸಿ ಬಂದ ವಾರ್ಷಿಕ ಯೋಜನೆಗಳ ಅವಧಿಯಲ್ಲಿ ಮೊದಲ ಬಾರಿಗೆ ಇಂತಿಷ್ಟು ಜನರನ್ನು ಕುಟುಂಬ ಯೋಜನೆಗೆ ಒಳಪಡಿಸಲೇಬೇಕೆನ್ನುವ ‘ಗುರಿ ಕೇಂದ್ರಿತ’ ಧೋರಣೆಗೆ (Target oriented) ಕುಟುಂಬ ಯೋಜನೆಯ ಕಾರ್ಯಕ್ರಮಗಳಲ್ಲಿ ಪ್ರಥಮ ಆದ್ಯತೆ ನೀಡಲಾಯಿತು. ಹೀಗೆ ಇಡೀ ಕಾರ್ಯಕ್ರಮದ ಕೇಂದ್ರವು ಈ ಗುರಿಸಾಧನೆಯೇ ಆಗಿದ್ದುದರಿಂದ ತಾಯಿಯರ ಆರೋಗ್ಯ ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣಗಳು ನಿರ್ಲಕ್ಷ್ಯಕ್ಕೆ ಒಳಗಾದವು. ಮುಖರ್ಜಿ ಸಮಿತಿಯು ಬಲವಾಗಿ ಪ್ರತಿಪಾದಿಸಿ ಮಾಡಿದ್ದ ಶಿಪಾರಸ್‌ಗಳಿಗೆ ಅನುಗುಣವಾಗಿ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡವರಿಗೆ ಮತ್ತು ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳಲು ಜನರ ಮನವೊಲಿಸಿ ಕರೆದುಕೊಂಡು ಬಂದವರಿಗೆ ಪ್ರೋತ್ಸಾಹಕಗಳನ್ನು (Incentives) ನೀಡಲು ಆರಂಭವಾಯಿತು. ಜೊತೆಗೆ ಕುಟುಂಬ ಯೋಜನೆಯನ್ನು ಜನಪ್ರಿಯಗೊಳಿಸಲು ವಿಸ್ತರಣಾ ವಿಧಾನಗಳನ್ನು ಬಳಸಲಾಯಿತು.

ಅಂತರ ರಾಷ್ಟ್ರೀಯ ಸಂಸ್ಥೆಗಳ ನಿರ್ದೇಶನದಂತೆ ೧೯೬೫ ರಲ್ಲಿ ಗರ್ಭಕೋಶದಲ್ಲಿ ಇರಿಸುವ ಗರ್ಭನಿರೋಧಕ ಲಿಪ್ಪರ್‌ಲೂಪ್‌(ವಂಕಿ) ಬಳಕೆಯನ್ನು ಪ್ರಚಾರ ಮಾಡಿ ಪ್ರಚಲಿತಗೊಳಿಸಲು ಆರಂಭಿಸಲಾಯಿತು. ಆದರೆ ಈ ಸಾಧನವು ಹೆಚ್ಚಿನ ಮಹಿಳೆಯರ ದೇಹದಿಂದ ತನ್ನಷ್ಟಕ್ಕೆ ತಾನೇ ಬೇಗನೆ ಹೊರಬೀಳುತ್ತಾ ಇದ್ದುದರಿಂದ ಅದು ನಿರೀಕ್ಷಿತ ಯಶಸ್ಸನ್ನು ಕಾಣಲಾಗಲಿಲ್ಲ. ಅಲ್ಲದೆ, ಈ ಬಗೆಯ ಒಂದು ಗರ್ಭನಿರೋಧಕವನ್ನು ದೇಹದೊಳಗೆ ಇರಿಸಬೇಕಾಗಿದ್ದಲ್ಲಿ ಮಹಿಳೆಯನ್ನು ವೈದ್ಯಕೀಯ ಪರೀಕ್ಷಗೆ ಒಳಪಡಿಸಿ ಆಕೆಗೆ ಯಾವುದೇ ಸೋಂಕು ಇಲ್ಲದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅದನ್ನು ಅಳವಡಿಸಿಕೊಳ್ಳಲು ತರಬೇತಿ ಸಹ ಅಗತ್ಯ. ಇದರ ಉಪಯೋಗದಿಂದ ಉಂಟಾಗುವ ಅಡ್ಡ ಪರಿಣಾಮಗಳಾದ ಕೀಲ್ಗುಳಿ ಸೋಂಕು, ರಕ್ತಸ್ರಾವ ಮತ್ತು ಬೆನ್ನುನೋವುಗಳು ಮಹಿಳೆಯರು ವಂಕಿಯನ್ನು ತಿರಸ್ಕರಿಸಲು ಕಾರಣವಾದವು. ನಮ್ಮ ದೇಶದಲ್ಲಿ ಅದರಲ್ಲಿಯೂ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳ ಮತ್ತು ನಗರಗಳ ಕೊಳಚೆ ಪ್ರದೇಶಗಳಲ್ಲಿ ಲೂಪ್‌ಅನ್ನು/ವಂಕಿಯನ್ನು ಅಳವಡಿಸಿಕೊಂಡು ಅಡ್ಡ ಪರಿಣಾಮಗಳಿಗೆ ಗುರಿಯಾದ ಮಹಿಳೆಯರಿಗೆ ತಕ್ಕ ಚಿಕಿತ್ಸೆ ನೀಡಬಲ್ಲ ಸಿಬ್ಬಂದಿ ಮತ್ತು ಇತರ ಸೌಲಭ್ಯಗಳ ಕೊರತೆಗಳೂ ಈ ಗರ್ಭನಿರೋಧಕ ಸಾಧನವು ಬಲುಬೇಗ ಜನಪ್ರಿಯತೆಯನ್ನು ಕಳೆದುಕೊಳ್ಳಲು ಕಾರಣವಾದವು. ನಗರ ಪ್ರದೇಶಗಳಲ್ಲಿ ಮಾತ್ರ ಇದರ ಉಪಯೋಗ ಪಡೆಯಬಲ್ಲ ಆರ್ಥಿಕ ವರ್ಗಗಳ ಮಹಿಳೆಯರಲ್ಲಿ ಮಾತ್ರ ಇದರ ಉಪಯೋಗ ಸೀಮಿತಗೊಂಡಿತು. ಹಾಗಾಗಿ ಕುಟುಂಬ ಯೋಜನೆಯ ವಿಧಾನಗಳನ್ನು ಅನುಸರಿಸುವ ಒಟ್ಟು ಜನಸಂಖ್ಯೆಯಲ್ಲಿ ವಂಕಿಯನ್ನು (IUD) ಬಳಕೆ ಮಾಡುವವರ ಸಂಖ್ಯೆ ೧೯೯೯ರಿಂದ ೨೦೦೩ರ ವೇಳೆಗೆ ಕೇವಲ ೧೬.೫%ಕ್ಕೆ ಇಳಿದಿದೆ.[5]

೧೯೬೭ರಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮವನ್ನು (MCH Programme) ಕುಟುಂಬ ಯೋಜನಾ ಕಾರ್ಯಕ್ರಮದಡಿಯಲ್ಲಿಯೇ ಸಮನ್ವಯಗೊಳಿಸಲಾಯಿತು. ಇದರಿಂದ ತಾಯಿ ಮಕ್ಕಳ ಆರೋಗ್ಯ ಇನ್ನಿತರ ಆರೋಗ್ಯ ಕಾರ್ಯಕ್ರಮಗಳಿಂದ ಬೇರ್ಪಟ್ಟಂತೆ ಆಯಿತು. ಅಂದರೆ ತಾಯಿ ಮಕ್ಕಳ ಆರೋಗ್ಯ ಕುಟುಂಬ ಯೋಜನಾ ದೃಷ್ಟಿಯಿಂದ ಮಾತ್ರವೇ ಮುಖ್ಯವೆನಿಸಿತು. ಸರ್ಕಾರ ನಿಯಮಿಸಿದ್ದ ಆರೋಗ್ಯ ಸರ್ವೇಕ್ಷಣೆ ಮತ್ತು ಅಭಿವೃದ್ಧಿ ಸಮಿತಿ (ಮೊದಲಿಯಾರ್‌ಸಮಿತಿ) ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚುವರಿ ಕುಟುಂಬ ಯೋಜನಾ ಆರೋಗ್ಯ ಸಹಾಯಕರನ್ನು ನಿಯಮಿಸಿಕೊಳ್ಳಬೇಕೆಂದು ಬಲವಾಗಿ ಶಿಪಾರಸ್‌ಮಾಡಿತ್ತು. ಅಲ್ಲದೆ ಪ್ರತಿ ಬ್ಲಾಕ್‌ಗೆ ಒಬ್ಬ ವಿಸ್ತರಣಾಧಿಕಾರಿ ಹಾಗೂ ನಾಲ್ಕರಿಂದ ಆರು ಮಂದಿ ಎ.ಎನ್‌.ಎಂ.ಗಳನ್ನು ನಿಯಮಿಸಬೇಕೆಂಬ ಶಿಪಾರಸ್‌ಗಳು ಇದ್ದು ಅವು ಈಗಾಗಲೇ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವ ಕ್ರಮಗಳಾಗಿದ್ದವು. ಆದರೆ ದೂರದ ಹಳ್ಳಿ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಉಪಕೇಂದ್ರಗಳನ್ನು ತೆರೆದು ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವ ಯಾವುದೇ ಪ್ರಯತ್ನ ಈ ಅವಧಿಯಲ್ಲಿ ಆಗಲಿಲ್ಲ. ಆದರೆ ದೂರದ ಗ್ರಾಮಾಂತರ ಮತ್ತು ಗುಡ್ಡಗಾಡು ಜನರಿಗೆ ಆರೋಗ್ಯ ಸೇವಾ ಸೌಲಭ್ಯಗಳೊಂದಿಗೇ ಯೋಜನೆಯನ್ನು ತಲುಪಿಸಲು ಸಂಚಾರೀ ಔಷಧಾಲಯಗಳನ್ನು (Mobile dispensaries) ಆರಂಭಿಸಲಾಯಿತು. ನಗರ ಪ್ರದೇಶಗಳಲ್ಲಿ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆಗಳನ್ನು ಸ್ಥಾಪಿಸಲಾಯಿತು. ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು. ಹೀಗೆ ಮೂರನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ನಗರ ಕೇಂದ್ರಿತ ಹಾಗೂ ಕುಟುಂಬ ಯೋಜನೆಯ ಗುರಿಕೇಂದ್ರಿತ ಕೆಲಸಗಳೇ ಹೆಚ್ಚಾಗಿ ತಾಯಿ ಮತ್ತು ಮಕ್ಕಳ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಕೆಲಸಗಳು ಅಲಕ್ಷ್ಯಕ್ಕೀಡಾದವು.

ನಾಲ್ಕನೆಯ ಪಂಚವಾರ್ಷಿಕ ಯೋಜನೆ (೧೯೬೯೭೪)

ಈ ಅವಧಿಯಲ್ಲಿ ಸ್ತ್ರೀ ಆರೋಗ್ಯಕ್ಕೆ ಸಂಬಂಧಿಸಿದಂತೆ ಎರಡು ಇತ್ಯಾತ್ಮಕ ಬೆಳವಣಿಗೆಗಳಾದವು. ಮೊದಲನೆಯದಾಗಿ ತಾಯಿ ಮತ್ತು ಮಕ್ಕಳ ಆರೋಗ್ಯದಡಿಯಲ್ಲಿ ಬಸುರಿಯರಿಗೆ ಧರ್ನುವಾಯು ನಿರೋಧಕ ಚುಚ್ಚುಮದ್ದು ಹಾಕುವ ಹಾಗೂ ರಕ್ತಹೀನತಾ ಪ್ರತಿಬಂಧಕ (Anaemia Prophylaxis) ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಎರಡನೆಯದಾಗಿ ೧೯೭೧ರಲ್ಲಿ ಗರ್ಭಸಮಾಪನಾ ಕಾಯಿದೆಯನ್ನು (Medical Termination of pregnancy Act) ತರಲಾಯಿತು. ಅಳವಡಿಕೊಂಡ ಕುಟುಂಬಯೋಜನಾ ವಿಧಾನವು ಗರ್ಭನಿರೋಧಕ ರಕ್ಷೆ ನೀಡುವಲ್ಲಿ ಯಶಸ್ವಿಯಾಗದೆ ಬಸುರಾದಲ್ಲಿ ಕಾನೂನು ಬದ್ಧವಾಗಿ ಗರ್ಭಪಾತ ಮಾಡಿಸಿಕೊಳ್ಳಬಹುದೆಂಬ ನಿಯಮವನ್ನು ಗರ್ಭಸಮಾಪನಾ ಕಾಯಿದೆಗೆ ಸೇರ್ಪಡೆ ಮಾಡಲಾಯಿತು.

ಇನ್ನು ಕುಟುಂಬ ಯೋಜನಾ ಕಾರ್ಯಕ್ರಮವನ್ನೇ ಪರಿಶೀಲಿಸಿದಲ್ಲಿ, ಹಿಂದಿನ (ಮೂರನೆಯ) ಪಂಚವಾರ್ಷಿಕ ಯೋಜನೆಯಲ್ಲಿ ಅಳವಡಿಸಿಕೊಂಡಿದ್ದ ‘‘ವಿಸ್ತರಣಾ ವಿಧಾನಗಳ ಕಾರ್ಯತಂತ್ರ” ತಕ್ಷಣ ಯಶಸ್ಸನ್ನು ನೀಡುವ ಯಾವುದೇ ಖಾತರಿಯಿಲ್ಲ ಎಂದು ಕಾರ್ಯನೀತಿ ನಿರೂಪಕರಿಗೆ ತೀವ್ರವಾಗಿ ಅನ್ನಿಸತೊಡಗಿತು. ಹಾಗಾಗಿ, ವಿಸ್ತರಣಾ ವಿಧಾನಗಳ ತತ್ವಾದರ್ಶಗಳು ಮಸುಕಾಗಲಾರಂಭಿಸಿದವು. ಜನಸಂಖ್ಯಾ ನಿಯಂತ್ರಣಕ್ಕಾಗಿ ಇಂತಿಷ್ಟು ಜನರಿಗೆ ಸಂತಾನ ನಿರೋಧಕ ಶಸ್ತ್ರ ಚಿಕಿತ್ಸೆ ಮಾಡಲೇಬೇಕೆಂಬ ನಿರ್ದಿಷ್ಟ ಗುರಿಗಳನ್ನು ಪ್ರಧಾನವಾಗಿ ಮೊಟ್ಟಮೊದಲ ಬಾರಿಗೆ ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಯಿತು. ಈ ಅವಧಿಯಲ್ಲಿ ಕೆಂಪು ತ್ರಿಕೋನವನ್ನು ಕುಟುಂಬ ಯೋಜನೆಯ ಚಿಹ್ನೆಯಾಗಿ ಅಳವಡಿಸಿಕೊಳ್ಳಲಾಯಿತು. ಕಾಂಡೋಮ್‌ಗಳು ಸುಲಭ ಬೆಲೆಗೆ ಎಲ್ಲೆಡೆ ಸಿಗುವಂತೆ ವ್ಯವಸ್ಥೆ ಮಾಡಲಾಯಿತು. ಎಲ್ಲಕ್ಕಿಂತಾ ಹೆಚ್ಚಾಗಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಅದರಲ್ಲಿಯೂ ಪುರುಷರ ಶಸ್ತ್ರಚಿಕಿತ್ಸೆಗೆ ಅಭೂತಪೂರ್ವ ಆದ್ಯತೆನೀಡಿ, ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸಾ ಶಿಬಿರಗಳಲ್ಲಿ ಲಕ್ಷಾಂತರ ಪುರುಷರಿಗೆ ಸಾಮೂಹಿಕವಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ದೇಶದಾದ್ಯಂತ ನಡೆಸಲಾದ ಈ ಸಂತಾನ ನಿರೋಧ ಶಸ್ತ್ರಚಿಕಿತ್ಸಾ ಶಿಬಿರಗಳಲ್ಲಿ ಮೊಟ್ಟ ಮೊದಲನೆಯದನ್ನು ಕೇರಳದಲ್ಲಿ ನಡೆಸಲಾಯಿತು. ಇಂತಿಷ್ಟೇ ಕಾಲಾವಧಿಯಲ್ಲಿ ಇಂತಿಷ್ಟು ಜನರನ್ನು ಸಂತಾನ ನಿರೋಧ ಶಸ್ತ್ರಚಿಕಿತ್ಸಗೆ ಒಳಪಡಿಸಲೇಬೇಕೆಂಬ ನಿಶ್ಚಿತಗುರಿಗಳನ್ನು ಕುಟುಂಬ ಯೋಜನಾ ಇಲಾಖೆಯ ಸಿಬ್ಬಂದಿಗೆ ನೀಡಿ ಆ ಗುರಿಗಳನ್ನು ತಲುಪಬೇಕೇಂಬ ಒತ್ತಡ ಹಾಕಲಾಯಿತು. ಇದರಿಂದ ಇಡೀ ಕುಟುಂಬ ಯೋಜನೆಯ ಗಮನ ಶಸ್ತ್ರಚಿಕಿತ್ಸೆಗಳ ಮೇಲೆಯೇ ಕೇಂದ್ರಿಕೃತವಾಗಿ ನಿಶ್ಚಿತ ಗುರಿಯನ್ನು ಮುಟ್ಟುವ ಆತುರ ಮತ್ತು ಆತಂಕಗಳಿಂದಾಗಿ ಹಲವಾರು ಸಂತಾನ ನಿರೋಧ ಶಸ್ತ್ರಚಿಕಿತ್ಸಾ ಶಿಬಿರಗಳಲ್ಲಿ ಅನಾಹುತಗಳು ಸಂಭವಿಸಲು ಆರಂಭವಾಯಿರು ಗೋರಖಪುರದ ಶಿಬಿರದಲ್ಲಿ ಹನ್ನೊಂದು ಗಂಡಸರು ಅಸುನೀಗಿದರು. ಇಂತಹ ಅನಾಹುತಗಳು ಬಹಳ ಕಡೆಗಳಲ್ಲಿ ಜರುಗಿದುದರಿಂದ ಇಡೀ ಕುಟುಂಬ ಯೋಜನಾ ಕಾರ್ಯಕ್ರಮವನ್ನು ಜನಸಾಮಾನ್ಯರು ಸಂಶಯದ ದೃಷ್ಟಿಯಿಂದ ನೋಡಲಾರಂಭಿಸಿದರು.1

ಐದನೆಯ ಪಂಚವಾರ್ಷಿಕ ಯೋಜನೆ (೧೯೭೪೭೮)

ಈ ಅವಧಿಯಲ್ಲಿ ಅಧಿಕಾರ ವಹಿಸಿಕೊಂಡ ಜನತಾ ಪಕ್ಷದ ಸರ್ಕಾರ, ಬಲವಂತದಿಂದ ಕುಟುಂಬ ಯೋಜನೆಯನ್ನು ಜನರ ಮೇಲೆ ಹೇರುವ ಕಾರ್ಯನೀತಿ ಹಾಗೂ ಕಾರ್ಯವಿಧಾನಗಳನ್ನು ರದ್ದುಪಡಿಸಿತು. ಕುಟುಂಬ ಯೋಜನಾ ಕಾರ್ಯಕ್ರಮಕ್ಕೆ “ಕುಟುಂಬ ಕಲ್ಯಾಣ ಯೋಜನೆ” ಎಂದು ಹೊಸದಾಗಿ ನಾಮಕರಣ ಮಾಡಲಾಯಿತು. ಜನನ ಪ್ರಮಾಣವನ್ನು ತಗ್ಗಿಸಲು ವಿವಾಹದ ಕನಿಷ್ಠ ವಯಸ್ಸಿನ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ, ಸ್ತ್ರೀ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಹಾಗೂ ಜನಸಾಮಾನ್ಯರಲ್ಲಿ ಜನಸಂಖ್ಯಾ ಬಾಹುಳ್ಯದ ಗಂಭೀರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳತ್ತ ಕುಟುಂಬ ಕಲ್ಯಾಣ ಯೋಜನೆ ತನ್ನ ಗಮನ ಕೇಂದ್ರೀಕರಿಸಿತು. ೧೯೭೭ರ ವೇಳೆಗೇ ಗರ್ಭನಿರೋಧಕ ಮಾತ್ರೆಗಳು ಬಳಕೆಯಲ್ಲಿದರೂ ಸ್ತ್ರೀಯರ ಸಂತಾನ ನಿರೋಧಕ ಶಸ್ತ್ರ ಚಿಕಿತ್ಸೆಯೇ ಅತ್ಯಂತ ವ್ಯಾಪಕವಾದ ಪ್ರಚಲಿತ ಕುಟುಂಬ ಯೋಜನಾ ವಿಧಾನವಾಗಿ ಬಿಟ್ಟಿತು.

ಐದನೇ ಪಂಚವಾರ್ಷಿಕ ಅವಧಿಯಲ್ಲಿ ಶ್ತ್ರೀವಾಸ್ತವದ ವರದಿಯು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸಲು ಶಿಪಾರಸ್ ಮಾಡಿತು. ೧೯೭೭ರಲ್ಲಿ ಸಮುದಾಯ ಆರೋಗ್ಯ ಸ್ವಯಂಸೇವಾ ಕಾರ್ಯಕರ್ತರ (Community Health Volunter) ಯೋಜನೆಯನ್ನು ‘ಜನರ ಕೈಯಲ್ಲಿ ಜನರ ಆರೋಗ್ಯ’ ಎಂಬ ಧ್ಯೇಯ ವಾಕ್ಯದೊಂದಿಗೆ (Motto) ಘೋಷಿಸಲಾಯಿತು. ಅಲ್ಲದೇ ಕುಟುಂಬ ಯೋಜನಾ ಸೌಲಭ್ಯಗಳು ಹಾಗೂ ತಾಯಿಮಕ್ಕಳ ಆರೋಗ್ಯ ಸೇವಾ ಸೌಲಭ್ಯಗಳನ್ನು ಮೂಲಭೂತ ಆರೋಗ್ಯ ಸೇವೆಗಳೆಂದೇ ಪರಿಗಣಿಸಲಾಯಿತು. ಸಮುದಾಯ ಆರೋಗ್ಯ ಸ್ವಯಂ ಸೇವಾ ಕಾರ್ಯಕರ್ತರ ಬಹೂಪಯೋಗಿ ಆರೋಗ್ಯ ಕಾರ್ಯಕರ್ತರ ಹಾಗೂ ಸೋಂಕು ನಿರೋಧಕ ಕಾರ್ಯಕ್ರಮಗಳನ್ನು ವಿಸ್ತರಿತ ರೂಪದಲ್ಲಿ (Extended Programme of Immunisation) ಹಮ್ಮಿಕೊಳ್ಳಲಾಯಿತು. ಈ ಪಂಚವಾರ್ಷಿಕ ಯೋಜನೆ ಮುಗಿದ ಮರುವರ್ಷವೇ ೧೯೭೯ರಲ್ಲಿ ಶಿಶು ಹಾಗೂ ಮಕ್ಕಳ ಮರಣ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲು ‘ಮಕ್ಕಳ ಜೀವನದ ಉಳಿಕೆಯ’ (Child Survival) ಕಾರ್ಯಕ್ರಮಗಳನ್ನು ತಾಯಿಮಕ್ಕಳ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಆರಂಭಿಸಲಾಯಿತು. ಹೀಗೆ ಆರೋಗ್ಯ ಸೇವೆಗಳಲ್ಲಿ ಸಮಗ್ರತೆಯನ್ನು ಸಾಧಿಸುವ ಉತ್ತಮ ಪ್ರಯತ್ನಗಳನ್ನು ಮಾಡಲಾಯಿತು.1

ಆರನೇ ಪಂಚವಾರ್ಷಿಕ ಯೋಜನೆ (೧೯೮೦೮೫)

ಈ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಸರಕಾರ, ಆರೋಗ್ಯ ಕಾರ್ಯಕ್ರಮಗಳಲ್ಲಿ ಮಹಿಳೆ ಮತ್ತು ಮಕ್ಕಳ ಆರೋಗ್ಯಪಾಲನೆ ಮತ್ತು ಆಹಾರ ಪೋಷಣೆಳೊಂದಿಗೇ ಕುಟುಂಬ ಕಲ್ಯಾಣ ಯೋಜನೆಯು ಹಾಸುಹೊಕ್ಕಾಗಿರಬೇಕೆಂಬ ಕಾರ್ಯನೀತಿಯನ್ನು ಅಳವಡಿಸಿಕೊಂಡಿತು. ೧೯೮೩ರಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯನೀತಿಯನ್ನು ರೂಪಿಸಲಾಯಿತು. ೨೦೦೦ ವೇಳೆಗೆ ಎಲ್ಲರಿಗೂ ಆರೀಗ್ಯ ಎಂಬ ಘೋಷವಾಕ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಪಾಲನಾ ಪರಿಕಲ್ಪನೆಯು ಈ ರಾಷ್ಟ್ರೀಯ ಆರೋಗ್ಯ ಕಾರ್ಯನೀತಿಯ ಮೇಲೆ ಹಾಗೂ ಕುಟುಂಬ ಕಲ್ಯಾಣ ಯೋಜನೆಯ ಮೇಲೆ ಗಾಢವಾದ ಪರಿಣಾಮ ಬೀರಿದ ಮುಖ್ಯಾಂಶವಾಗಿತ್ತು.4

ಈ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ದಿಸೆಯಲ್ಲಿ ಗ್ರಾಮಾಂತರ ಪ್ರದೇಶಗಳ, ಗುಡ್ಡಗಾಡುಗಳ ಹಾಗೂ ನಗರದ ಕೊಳಚೆ ಪ್ರದೇಶಗಳ ಹೀಗೆ ಎಲ್ಲ ಪರಿಧಿಗಳಲ್ಲಿರುವ ಜನರಿಗೆ ಆರೋಗ್ಯ ಸೌಲಭ್ಯಗಳು ಸಿಗುವಂತೆ ಮಾಡುವಲ್ಲಿ ಅನುಸರಿಸಬೇಕಾಗುವ ಕೆಲವು ಮಾನದಂಡಗಳನ್ನು ಘೋಷಿಸಲಾಯಿತು. ಅದರ ಪ್ರಕಾರ ಪ್ರತಿ ೩೦.೦೦೦ ಜನಸಂಖ್ಯೆಗೆ ಒಂದು ಪ್ರಾಥಮಿಕ ಕೇಂದ್ರವಿರಬೇಕೆಂದು ನಿಯಮಿಸಲಾಯಿತು. ಪ್ರತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ಹಾಗೂ ಮಕ್ಕಳ ರೋಗಗಳನ್ನು ಒಳಗೊಂಡಂತೆ ಅವುಗಳಿಗೆ ಪರಿಣಿತ ಸೇವೆ ನೀಡಬಲ್ಲ ಆರು ವಿಶೇಷ ಸೇವಾ ಸೌಲಭ್ಯಗಳಿರಬೇಕೆಂದು ವಿಧಿಸಲಾಯಿತು.1

ಶಿಶು ಮತ್ತು ತಾತಿಯರ ಮರಣ ಸಂಖ್ಯೆಯನ್ನು ತಗ್ಗಿಸಲು ವಿಸ್ತರಿತ ಸೋಂಕು ರೋಗ ನಿರೋಧಕ ಕಾರ್ಯಕ್ರಮವನ್ನು (EPI=Extended Program of Immunisation) ಬಲಪಡಿಸಲಾಯಿತು. ಆರನೇ ಪಂಚವಾರ್ಷಿಕ ಅವಧಿಯಲ್ಲಿಯೇ ಸಮಗ್ರ ಶಿಶು ಅಭಿವೃದ್ಧಿ ಯೀಜನೆಯ (ICDS) ಅಡಿಯಲ್ಲಿ ಪೂರಕ ಆಹಾರ ನೀಡಿಕೆ ಮತ್ತು ರಕ್ತಹೀನತಾ ಪ್ರತಿಬಂಧಕ ಕಾರ್ಯಕ್ರಮಗಳನ್ನು ತರಲಾಯಿತು.2

ಏಳನೆಯ ಪಂಚವಾರ್ಷಿಕ ಯೋಜನೆ (೧೯೮೫೯೨)

ಏಳನೆಯ ಪಂಚವಾರ್ಷಿಕ ಯೋಜನೆಯಲ್ಲಿ ಭಾರತ ಸರ್ಕಾರ, ಕುಟುಂಬ ಕಲ್ಯಾಣ ಯೋಜನೆಯನ್ನು ನಿಜವಾದ ಅರ್ಥದಲ್ಲಿ ಜನರ ಕಾರ್ಯಕ್ರಮವನ್ನಾಗಿ ಮಾಡುವಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುವ ಎಲ್ಲಾ ಸಂಬಂಧಿತ ಸಂಘ ಸಂಸ್ಥೆಗಳು ಸರ್ಕಾರದ ಪ್ರಯತ್ನಗಳೊಂದಿಗೆ ಕೈಜೋಡಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿತು. ಮಹಿಳಾ ಮಂಡಳಿಗಳ, ಯುವಜನ ಸಂಘಗಳ ಮತ್ತು ಗ್ರಾಮ ಆರೋಗ್ಯ ಸಮಿತಿಗಳ ಪಾತ್ರ ಈ ದಿಸೆಯಲ್ಲಿ ಅತ್ಯಗತ್ಯವೆಂದು ಗುರ್ತಿಸಲಾಯಿತು. ಮಕ್ಕಳ ಜನನಗಳ ನಡುವೆ ಅಂತರವಿರಿಸಲು ತಾತ್ಕಾಲಿಕ ಗರ್ಭನಿರೋಧಕ ಸಾಧನಗಳಾದ ನಿರೋಧ್‌, ಗರ್ಭನಿರೋಧಕ ಮಾತ್ರೆಗಳು ಹಾಗೂ ಗರ್ಭಕೋಶದಲ್ಲಿರಿಸುವ ಕಾಪರ್‌ಟಿ, ಲೂಪ್‌ಗಳ ಬಳಕೆಗೆ ಹೆಚ್ಚು ಪ್ರಾಮುಖ್ಯೆತೆ ನೀಡಲಾಯಿತು. ಆರೋಗ್ಯಕ್ಕಾಗಿ ತೆಗೆದಿರಿಸಲಾದ ಆಯವ್ಯಯದಲ್ಲಿ ಹೆಚ್ಚು ಭಾಗವನ್ನು ಕುಟುಂಬ ಯೋಜನೆಗಾಗಿಯೇ ಹೂಡಲಾಯಿತು.

ಇನ್ನುಳಿದ ಆರೋಗ್ಯ ಕಾಳಜಿಗಳ ಬಗ್ಗೆ ಈ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಆದ ಮುಖ್ಯ ಕೆಲಸವೆಂದರೆ ಬಡವರ್ಗಗಳನ್ನೇ ಹೆಚ್ಚಾಗಿ ಕಾಡುವ ಮಲೇರಿಯಾ, ಫಿಲೇರಿಯಾ, ಕುಷ್ಠ, ಕುರುಡತನ ನಿಯಂತ್ರಣ ಮತ್ತು ಇನ್ನಿತರ ಸಾಂಕ್ರಾಮಿಕವಲ್ಲದ ರೋಗಗಳನ್ನು ತಗ್ಗಿಸಲು ತೀವ್ರವಾದ ಕಾರ್ಯಕ್ರಮಗಳನ್ನು (Verticle Programmes) ಹಮ್ಮಿಕೋಳ್ಳಲಾಯಿತು. ಶಿಕ್ಷಣ ಮತ್ತು ಸಂವಹನಗಳ ಮೂಲಕ ಜನಸಾಮಾನ್ಯರಲ್ಲಿ ಆರೋಗ್ಯ ಪ್ರಜ್ಞೆಯನ್ನು ಹೆಚ್ಚಿಸಬೇಕೆಂಬ ಪ್ರಸ್ತಾವನೆ ಮಾಡಲಾಯಿತು.1

೧೯೮೬ರಲ್ಲಿಯೇ ರಾಷ್ಟ್ರೀಯ ನಿಯಂತ್ರಣ ಸಂಸ್ಥೆಯನ್ನು (NACO=National AIDS Conttrol Organisation) ವಿಶ್ವಬ್ಯಾಂಕ್‌ಹಾಗೂ ಉತ್ತರ ಅಮೇರಿಕೆಯಿಂದ ಸಾಲ ಪಡೆದು ಆರಂಭಿಸಲಾಯಿತು.

ಎಂಟನೇ ಪಂಚವಾರ್ಷಿಕ ಯೋಜನೆ (೧೯೯೨೯೭)

ಈ ಯೋಜನೆಯ ಆರಂಭದ ವೇಳೆಗಾಗಲೇ ನಮ್ಮ ದೇಶದಲ್ಲಿ ಹೊಸ ಆರ್ಥಿಕ ನೀತಿಯ ಗಾಳಿ ಬಲವಾಗಿ ಬೀಸಲಾರಂಭಿಸಿತ್ತು. ಜಾಗತೀಕರಣದ ಪ್ರಕ್ರಿಯೆ ಆ ವೇಳೆಗಾಗಲೇ ಬಲವಾಗಿ ಬೇರೂರ ತೊಡಗಿದ್ದು, ಸಂರಚನಾ ಹೊಂದಾಣಿಕೆಯ ಕಾರ್ಯಕ್ರಮವನ್ನು (Stuctural Adjustment Programme) ನಮ್ಮ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಾಗಿತ್ತು. ಇದರ ಪರಿಣಾಮವಾಗಿ ಇದುವರೆವಿಗೂ ಆರೋಗ್ಯ ಕ್ಷೇತ್ರದಲ್ಲಿದ್ದ ಸಾರ್ವಜನಿಕ ವಲಯಗಳ ಬಾಗಿಲನ್ನು ಖಾಸಗೀ ಉದ್ಯಮಕ್ಕೆ ತೆರೆದಿಡಬೇಕಾದ ಅನಿವಾರ್ಯತೆಯುಂಟಾಯಿತು. ಹಾಗಾಗಿ ವೈದ್ಯಕೀಯ ಚಿಕಿತ್ಸೆ/ಆರೋಗ್ಯ ಪಾಲನೆಗಳು ಬಹುಬೇಗ ಖಾಸಗೀಕರಣಕ್ಕೆ ಒಳಗಾಗಿ ಶರವೇಗದಲ್ಲಿ ಹಲವಾರು ವೈದ್ಯಕೀಯ ಕಾರ್ಪೋರೇಟ್‌ಗಳು ಹುಟ್ಟಿಕೊಂಡವು ಹಾಗೂ ಅವುಗಳ ಕಾರ್ಪೋರೇಟ್‌ಆಸ್ಪತ್ರೆಗಳು ಅತ್ಯಾಧುನಿಕ ವೈದ್ಯಕೀಯ ಸಾಧನ ಸಲಕರಣೆಗಳಿಂದ ಸುಸಜ್ಜಿತಗೊಂಡು ಅತ್ಯಾಧುನಿಕ ವೈದ್ಯಕೀಯ ವಿಶೇಷ ಚಿಕಿತ್ಸೆಗಳನ್ನು ಲಾಭಕ್ಕಾಗಿ ಮಾರಾಟಕ್ಕೆ ಇರಿಸಿದವು ಎಂದರೆ ತಪ್ಪಾಗಲಾರದು.

ಹೀಗೆ ಹಣ ನೀಡಿ ಸೌಲಭ್ಯಗಳನ್ನು ಪಡೆಯಬೇಕೆಂಬ ನೀತಿಯನ್ನು ಅನಿವಾರ್ಯವಾಗಿಸಿದ ಹೊಸ ಆರ್ಥಿಕ ನೀತಿಯಿಂದಾಗಿ ಜನಸಾಮಾನ್ಯರು ಬಡಬಗ್ಗರೂ ಸಹ ತುರ್ತು ಆರೋಗ್ಯ ಪರಿಸ್ಥಿತಿಗಳಲ್ಲೂ ಸಹ ಸಾಲ ಸೋಲವನ್ನಾದರೂ ಮಾಡಿ ಚಿಕಿತ್ಸೆಗಾಗಿ ಹಣತೆರಬೇಕಾಗಿ ಬಂತು. ಏಕೆಂದರೆ ಕೇಂದ್ರ ಸರ್ಕಾರ, ಆರೋಗ್ಯಕ್ಕಾಗಿ ಬಜೆಟ್‌ನಲ್ಲಿ ತೆಗೆದಿರಿಸುತ್ತಿದ್ದ ಶೇಕಡಾ ಮೊತ್ತವನ್ನು ಕಡಿತಗೊಳಿಸುತ್ತಾ ಬಂದಿತು. ಎಲ್ಲರಿಗೂ ಆರೋಗ್ಯ ಎಂಬ ಧ್ಯೇಯ ವಾಕ್ಯದಿಂದ ದೂರಸರಿದ ಸರ್ಕಾರದ ಆರ್ಥಿಕ ನೀತಿಯಿಂದಾಗಿ ಅದು “ಬಡವರಿಗೆ ಮಾತ್ರ” (Health for Under Previleged) ಎಂಬ ಪರಿಕಲ್ಪನೆಯಾಗಿ ಮಾರ್ಪಟ್ಟಿತು. ಹೀಗೆ ಇದ್ದಾಗ್ಯೂ ಸಹ ಬಡವರಿಗೆ ಪುಕ್ಕಟೆಯಾಗಿ ದೊರಕುತ್ತಿದ್ದ ಆರೋಗ್ಯಸೇವಾ ಸೌಲಭ್ಯಗಳೂ ಸೀಮಿತಗೊಂಡವು. ಜೊತೆಗೆ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸುವುದಕ್ಕೆ ಬದಲಾಗಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೇ ಬಲಪಡಿಸುವ ಕ್ರಮಗಳನ್ನು ಸರ್ಕಾರ ಕೈಗೊಂಡಿತು. ಶಿಕ್ಷಣ, ಸಾಧನ ಸಲಕೆಣೆಗಳು ಹಾಗೂ ಔಷಧಿಗಳು ಈ ಅಂಶಗಳಿಗೆ ಒತ್ತು ನೀಡಲಾಯಿತು.

ಎಂಟನೆಯ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಹಲವು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ೫೦%ರಷ್ಟು ಹಾಗೂ ರಾಜ್ಯ ಸರ್ಕಾರಗಳು ಉಳಿದ ೫೦%ರಷ್ಟು ಆರ್ಥಿಕ ಹೊರೆಯನ್ನು ಹೊರಬೇಕೆಂಬ ನೀತಿಯನ್ನು ರೂಪಿಸಿ ಜಾರಿಗೆ ತರಲಾಯಿತು. ಇಂತಹ ನೀತಿಯಿಂದಾಗಿ ಹಲವು ಬಡರಾಜ್ಯ ಸರ್ಕಾರಗಳು ತಮ್ಮ ಪಾಲಿನ ೫೦%ರಷ್ಟು ಆರ್ಥಿಕ ನೆರವು ನೀಡಲಾಗಲಿಲ್ಲ. ಇದರಿಂದಾಗಿ ಕೆಲವು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗೆ, ಉದಾಹರಣೆಗೆ ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮ, ಇವುಗಳಿಗೆ ಹಣ ಒದಗಿಸಲಾಗದೇ ಇದ್ದುದರಿಂದ ಈ ಕಾರ್ಯಕ್ರಮಗಳಿಗೆ ಆಯಾ ರಾಜ್ಯಗಳಲ್ಲಿ ತೀವ್ರ ಹಿನ್ನಡೆಯುಂಟಾಯಿತು. ಇದರ ನೇರ ಪರಿಣಾಮವೆಂದರೆ, ಬಡವರನ್ನೇ ಕಾಡುವ ಇಂತಹ ರೋಗಗಳನ್ನು ನಿಯಂತ್ರಿಸಲು ಆಗದೇ ಹೋದುದರಿಂದ ಈ ರೋಗಗಳಿಂದ ನರಳುತ್ತಿದ್ದ ಬಡವರಿಗೆ ಸಿಗಬೇಕಾಗಿದ್ದ ಒಂದು ಮಟ್ಟದ ಆರೋಗ್ಯಸೇವಾ ಸೌಲಭ್ಯಗಳು ದೊರಕದೇ ಹೋದವು.

ಆದರೆ ಇದೇ ವೇಳೆಗೆ ಕುಟುಂಬ ಯೋಜನಾ ಕಾರ್ಯಕ್ರಮಗಳಿಗೆ ನೀಡಲಾಗುತ್ತಿದ್ದ ಸಂಪನ್ಮೂಲಗಳ ಮೊತ್ತವನ್ನು ಏರಿಸಲಾಯಿತು. ಎಂಟನೆಯ ಪಂಚವಾರ್ಷಿಕ ಯೋಜನೆಯ ಕಾರ್ಯನೀತಿಯ ಗಮನವು ಗರ್ಭನಿರೋಧದ ಮೇಲೆಯೇ ಕೇಂದ್ರಿಕೃತವಾಗಿದ್ದು ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ, ಸುರಕ್ಷಿತ ತಾಯ್ತನ (Safe motherhood) ಮತ್ತು ಮಕ್ಕಳ ಉಳಿಯುವಿಕೆ (child survival) ಕಾರ್ಯಕ್ರಮಗಳಿಗೆ ಅದು ಒತ್ತು ನೀಡಿತು. ಇದುವರೆವಿಗೂ ಪೂರೈಸಲಾಗದಿದ್ದ ತಾತ್ಕಾಲಿಕ ಗರ್ಭನಿರೋಧಕಗಳ ಅಗತ್ಯವನ್ನು ಪೂರೈಸಲು ಹಾಗೂ ಪ್ರಜನನ ಮತ್ತು ಆರೋಗ್ಯಕ್ಕೆ ಈ ಯೋಜನೆಯ ಅವಧಿಯಲ್ಲಿ ಹೆಚ್ಚು ಗಮನ ಕೊಡಲಾಯಿತು. ಮಹಿಳೆಯರಿಗೆ ಹೆಚ್ಚು ಆಯ್ಕೆಗಳನ್ನು ಸಾಧ್ಯವಾಗುವಂತೆ ಮಾಡಲು ಉತ್ತಮ ಕಾರ್ಯಕ್ಷಮತೆಯುಳ್ಳ ಆದರೆ ಸುರಕ್ಷತೆಯ ದೃಷ್ಟಿಯಿಂದ ಪ್ರಶ್ನಾರ್ಹವಾದ ಗರ್ಭನಿರೋಧಕಗಳನ್ನು ಈ ಅವಧಿಯಲ್ಲಿ ಮಾರುಕಟ್ಟೆಗೆ ತರಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಈ ಎರಡೂ ಮಂತ್ರಾಲಯಗಳನ್ನು ಒಗ್ಗೂಡಿಸಿ ಒಂದೇ ಮಂತ್ರಾಲಯದಡಿ ತರಲಾಯಿತು. ಜನಸಂಖ್ಯಾ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು. ಎರಡಕ್ಕಿಂತಾ ಹೆಚ್ಚು ಮಕ್ಕಳಿರುವುದನ್ನು ‘ಅನರ್ಹತೆ’ ಎಂದು ಪರಿಗಣಿಸಲು ಶಾಸಕಾಂಗದ ಮೂಲಕ ಕ್ರಮಗಳನ್ನು ಕೈಗೊಳ್ಳಲಾಯಿತು.

ಪುರುಷರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಸಂಖ್ಯೆ ಒಂದೇ ಸಮನೆ ಇಳಿಯುತ್ತಶ ಇರುವುದನ್ನು ಗುರ್ತಿಸಿ ಮತ್ತೆ ಅದನ್ನು ಜನಪ್ರಿಯಗೊಳಿಸಲು ಸರಳ ವಿಧಾನವೊಂದನ್ನು ಜಾರಿಗೆ ತರಲಾಯಿತು. ಅದೇ ಶಸ್ತ್ರ ಚಿಕಿತ್ಸೆಯ ಚಾಕುವನ್ನು ಬಳಸದೇ ಮಾಡುವ ವ್ಯಾಸಕ್ಟಮಿ (No scalpe vasectomy). ಈ ಅವಧಿಯಲ್ಲಾದ ಇನ್ನೊಂದು ಬದಲಾವಣೆಯೆಂದರೆ ಬಸಿರುಗಳ ನಡುವೆ ಅಂತರ ಹೆಚ್ಚಿಸುವ ವಿಧಾನಗಳ ಬಳಕೆಗೆ ವಿಶೇಷ ಗಮನ ನೀಡಲಾರಂಭಿಸಿದ್ದು. ಸ್ಪೀರಾಯಿಡ್‌ಗಳು ಇಲ್ಲದೆ ವಾರಕ್ಕೊಮ್ಮೆ ಮಾತ್ರ ತೆಗೆದುಕೊಳ್ಳಬಹುದಾದ ಗರ್ಭನಿರೋಧಕ ಗುಳಿಗೆಯನ್ನು ‘ಸಹೇಲಿ’ ಎಂಬ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಆರಂಭಿಸಲಾಯಿತು. ಜೊತೆಗೇ ಫಲವತ್ತತೆ ನಿರೋಧೀ ವ್ಯಾಕ್ಸೀನುಗಳ ಸಂಶೋಧನೆಗೆ ಒತ್ತುನೀಡಲಾಯಿತು.

ಎಂಟನೆ ಪಂಚವಾರ್ಷಿಕ ಆರಂಭದಲ್ಲಿ ೧೯೯೨ರಲ್ಲಿಯೇ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌(Indian Concil for medical Research) ಮಹಿಳಾ ಆರೋಗ್ಯ ಪ್ರತಿಪಾದಕರನ್ನು, ಮಹಿಳಾ ಸಂಘಟನೆಗಳು ಆಹ್ವಾನಿಸಿ ಸ್ತ್ರೀ ಆರೋಗ್ಯ ಅದರಲ್ಲೂ ಪ್ರಜನನ ಆರೋಗ್ಯದ ಬಗ್ಗೆ ಇರಬೇಕಾದ ಆಸಕ್ತ ಪೂರ್ಣ ಧೋರಣೆಗಳ (approaches) ಬಗ್ಗೆ ಚರ್ಚೆ ನಡೆಸಿತು. ಸರ್ಕಾರ ನಡೆಸುವ ಗರ್ಭನಿರೋಧಕಗಳ ಸಂಶೋಧನೆಗಳಿಗೆ ಮಹಿಳೆಯರ, ಮಹಿಳಾ ಸಂಘಟನೆಗಳ, ಸ್ತ್ರೀಆರೋಗ್ಯ ಚಳುವಳಿಗಾರರ ಬೆಂಬಲ ಪಡೆಯುದು ಹಾಗೂ ಸ್ತ್ರೀ ಆರೋಗ್ಯ ಪ್ರತಿಪಾದಕ ಟೀಕೆಗಳ/ಕಟು ವಿಮರ್ಶೆಯ ಮೊನಚನ್ನು ಮೊಂಡಾಗಿಸುವುದು ಈ ಚರ್ಚೆಯ ಅಘೋಷಿತ ಗುರಿಗಳಾಗಿದ್ದವು.[6] ಇದೇ ಅವಧಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು (National Women’s Commission) ಅಸ್ಥಿತ್ವಕ್ಕೆ ಬಂದಿತು. ಮಹಿಳೆಯರ ಬದುಕನ್ನು ತಟ್ಟುವ ಎಲ್ಲಾ ಮುಖ್ಯ ಕಾರ್ಯನೀತಿಗಳ ಬಗ್ಗೆ/ಕಾಳಜಿಗಳ ಬಗ್ಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಮಹಿಳಾ ಆಯೋಗದೊಂದಿಗೆ ಚರ್ಚಿಸಿ ಸಲಹೆ ಪಡೆಯಬೇಕೆಂದು ನಿರ್ಣಯಿಸಲಾಯಿತು.

ಇಂತಿಷ್ಟೇ ಜನರಿಗೆ ಗರ್ಭನಿರೋಧಕಗಳ ಅಳವಡಿಕೆ ಹಾಗೂ ಇಂತಿಷ್ಟು ಮಂದಿಗೆ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂಬ ನಿಶ್ಚಿತಗುರಿಗಳನ್ನುಳ್ಳ ಕುಟುಂಬ ಯೋಜನಾ ಕಾರ್ಯಕ್ರಮಗಳನ್ನು ಇನ್ನು ಮುಂದೆ ಪ್ರೋತ್ಸಾಹಿಸಬಾರದು ಮತ್ತು ಜನಸಂಖ್ಯೆ ಹಾಗೂ ಅಭಿವೃದ್ಧಿಯನ್ನು ಕುರಿತು ರಾಷ್ಟ್ರೀಯ ಆಯೋಗವೊಂದನ್ನು ರಚಿಸಬೇಕೆಂದು ಸರ್ಕಾರವೇ ನಿಯಮಿಸಿದ್ದ ಸ್ವಾಮಿನಾಥನ್‌ಸಮಿತಿಯು ಶಿಪಾರಸ್ ಮಾಡಿತ್ತು. ಆದರೆ ಎಂಟನೇ ಪಂಚವಾರ್ಷಿಕ ಅವಧಿಯ ಕೊನೆಯಲ್ಲಿ ಸರ್ಕಾರ ರೂಪಿಸಿದ ಜನಸಂಖ್ಯಾ ನೀತಿಯಲ್ಲಿ ಸ್ವಾಮಿನಾಥನ್‌ಸಮಿತಿಯ ಶಿಪಾರಸ್‌ಗಳನ್ನು ನಿರ್ಬಲಗೊಳಿಸಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿತ್ತು.

ಎಂಟನೆಯ ಪಂಚವಾರ್ಷಿಕ ಯೋಜನಾವಧಿಯಲ್ಲಿ (೧೯೯೨-೯೭), ಜನಸಂಖ್ಯಾ ಬೆಳವಣಿಗೆಯ ಗತಿಯನ್ನು ತಗ್ಗಿಸುವುದು ಯೋಜನೆಯ ಹೆಗ್ಗುರಿಗಳಲ್ಲಿ ಒಂದಾಗಿತ್ತು. ಜನಸಾಮಾನ್ಯರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳುವಂತೆ ಹಾಗೂ ಸಮುದಾಯವನ್ನು ಕರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದರ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಬೇಕೆಂಬುದು ಈ ಪಂಚವಾರ್ಷಿಕ ಯೋಜನೆಯ ಕಾರ್ಯನೀತಿಯಾಗಿತ್ತು. ಅಲ್ಲದೆ ಮೊಟ್ಟಮೊದಲ ಬಾರಿಗೆ ಪಂಚವಾರ್ಷಿಕ ಯೋಜನೆಯಲ್ಲಿ “ಮಹಿಳೆ ಮತ್ತು ಅಭಿವೃದ್ಧಿ” ಕುರಿತ ಒಂದು ಅಧ್ಯಾಯವನ್ನು ಸೇರಿಸಲಾಯಿತು. ಇದನ್ನು ಒಂದು ಇತ್ಯಾತ್ಮಕ ಬೆಳವಣಿಗೆಯೆಂದೇ ಗುರ್ತಿಸಲಾಗಿದೆ. ಇಷ್ಟೇಲ್ಲಾ ಬೆಳವಣಿಗೆಗಳಾದರೂ ಸಹ ಈ ಪಂಚವಾರ್ಷಿಕ ಯೋಜನಾವಧಿಯಲ್ಲಿ ಸಹ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಯೇ ಜನಸಂಖ್ಯಾ ನಿಯಂತ್ರಣದ ಮುಖ್ಯ ಸಾಧನವಾಗಿ ಮುಂದುವರೆಯಿತು.

ಒಂಭತ್ತನೇ ಪಂಚವಾರ್ಷಿಕ ಯೋಜನೆ (೧೯೯೭೨೦೦೨)

ಈ ಯೋಜನೆಯ ಅವಧಿಯಲ್ಲಿ ಜನಸಂಖ್ಯೆಯನ್ನು ಕುರಿತ ರಾಷ್ಟ್ರೀಯ ಅಭಿವೃದ್ಧಿ ಪರಿಷತ್ತಿನ ಉಪಸಮಿತಿಯು ಮಾಡಿದ್ದ ಶಿಪಾರಸ್‌ಗಳನ್ನು ಕುಟುಂಬ ಕಲ್ಯಾಣ ಇಲಾಖೆ ಜಾರಿಗೆ ತಂದಿತು. ಮುಖ್ಯವಾಗಿ, ಕುಟುಂಬ ಯೋಜನೆಯ ವಿವಿಧ ವಿಧಾನಗಳ ಮೂಲಕ ಸಾಧಿಸಬೇಕಾದ ಗುರಿಗಳನ್ನು ಕೇಂದ್ರ ಸರ್ಕಾರದ ಸಂಬಂಧಿತ ಮಂತ್ರಾಲಯಗಳಲ್ಲಿ ನಿರ್ಣಯಿಸುವುದನ್ನು ಕೈಬಿಟ್ಟು ಅಂತಹ ನಿರ್ಣಯಗಳ ಹೊಣೆಯನ್ನು ವಿಕೇಂದ್ರೀಕರಣಗೊಳಿಸಲಾಯಿತು. ಹಾಗಾಗಿ, ಜಿಲ್ಲಾಮಟ್ಟದಲ್ಲಿ ಆಯಾ ಜಿಲ್ಲೆಯ ಜನಸಮುದಾಯದ ಅಗತ್ಯಗಳನ್ನು ಅಭ್ಯಸಿಸಿ ಅವುಗಳನ್ನೇ ಆಯಾ ರಾಜ್ಯಗಳಲ್ಲಿ ಈ ಎಲ್ಲಾ ಕಾರ್ಯಕ್ರಮಗಳ ನಿರ್ವಹಣೆಗೆ, ಕಾರ್ಯಕ್ರಮಗಳ ಮಧ್ಯದಲ್ಲಿ ತಪ್ಪುಗಳೇನಾದರೂ ಇದ್ದಲ್ಲಿ ತಿದ್ದಿಕೊಂಡು ಮಾರ್ಪಡಿಸಿಕೊಳ್ಳಲು ಮೌಲ್ಯಮಾಪನ ಮಾಡಲು ಅಳತೆಗೋಲುಗಳನ್ನಾಗಿ ಉಪಯೋಗಿಸಬೇಕೆಂದು ವಿಧಿಸಲಾಯಿತು. ಇನ್ನು ಮಕ್ಕಳ ಆರೋಗ್ಯವನ್ನೇ ತೆಗೆದುಕೊಂಡರೆ, ಪೋಲಿಯೋ ರೋಗ ನಿವಾರಣೆಗಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಅತ್ಯಂತ ಬೃಹತ್‌ಪ್ರಮಾಣದಲ್ಲಿ ನಡೆಸಲಾಯಿತು.

ಒಂಭತ್ತನೆಯ ಪಂಚವಾರ್ಷಿಕ ಯೋಜನೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮವೆಂದರೆ ಪ್ರಜನನ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ (Reproductive and Child Health). ಶಿಶುಮರಣ ಹಾಗೂ ತಾಯ್ತನದ ಮರಣ ಸಂಖ್ಯಾ ಪ್ರಮಾಣಗಳನ್ನು ತಗ್ಗಿಸಲು ಈ ಕಾರ್ಯಕ್ರಮಗಳನ್ನು ೧೯೯೭ರಲ್ಲಿ ದೇಶಾದ್ಯಂತ ಜಾರಿಗೊಳಿಸಲಾಯಿತು. ಗರ್ಭನಿರೋಧಕಗಳಿಂದ ಬೇಡದ ಬಸಿರುಗಳನ್ನು ತಡೆಯುವುದು ಮತ್ತು ಈಗಾಗಲೇ ಆಗಿರುವ ಬೇಡದ ಬಸಿರುಗಳನ್ನು ಸುರಕ್ಷಿತ ಗರ್ಭಸಮಾಪನೆಯಿಂದ (Safe abortion) ನಿವಾರಿಸುವುದು, ಸುರಕ್ಷಿತ ತಾಯ್ತನ ಮತ್ತು ಮಕ್ಕಳ ಉಳಿಯುವಿಕೆಗಾಗಿ (Safe Mother hood and child survial) ಸೇವಾ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಪ್ರಜನನ ನಾಳದ ಸೋಂಕುಗಳನ್ನು (Reproductive Tract Infections) ಮತ್ತು ಲೈಂಗಿಕ ಸೋಂಕುಗಳನ್ನು (Sexually Transnitted Infections) ಚಿಕಿತ್ಸೆಗೊಳಪಡಿಸುವುದು/ತಡೆಗಟ್ಟುವುದು ಈ ಕಾರ್ಯಕ್ರಮದ ಅತಿಮುಖ್ಯ ಅಂಗಗಳಾಗಿವೆ. ಪ್ರಜನನ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮವು ಹತ್ತನೆಯ ಪಂಚವಾರ್ಷಿಕ ಅವಧಿಯಲ್ಲೂ ಮುಂದುವರೆದಿದ್ದು, ಇದು ಪ್ರಜನನ ವಯೋಮಾನದಲ್ಲಿರುವ ಸ್ತ್ರೀಯರ ಆರೋಗ್ಯವನ್ನೇ ಕೇಂದ್ರವಾಗಿರಿಸಿಕೊಂಡಿರುವ ಉತ್ತಮ ಕಾರ್ಯಕ್ರಮವೆನ್ನಬಹುದು.

ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳು ಜನಸಂಖ್ಯಾ ನಿಯಂತ್ರಣ ಅದರಲ್ಲಿಯೂ ಮಹಿಳೆಯರ ಫಲವಂತಿಕೆಯ ನಿಯಂತ್ರಣವನ್ನೇ ತಮ್ಮ ಕೇಂದ್ರೀಕೃತ ಗುರಿಯನ್ನಾಗಿಸಿಕೊಂಡಿದ್ದು ಈ ಯೋಜನೆಯ ಅವಧಿಯಲ್ಲಿ ಕುಟುಂಬ ಯೋಜನೆಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಅಲ್ಲದೆ ಸರಕಾರದೊಂದಿಗೆ ಖಾಸಗೀ ವಲಯವೂ ಸಹ ಸಾರ್ವಜನಿಕ ವಲಯದ ಆರೋಗ್ಯ ಕ್ಷೇತ್ರದಲ್ಲಿ ಪಾಲ್ಗೊಂಡು ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಲು ಅನುವು ಮಾಡಿಕೊಟ್ಟು ಪ್ರೋತ್ಸಾಹಿಸಲಾಗಿದೆ. ಹೀಗೆ ಯಾವುದನ್ನು ಮೊದಲನೆಯ ಪಂಚವಾರ್ಷಿಕ ಯೋಜನೆಯಲ್ಲಿ ಸರ್ಕಾರದ್ದೇ ಹೊಣೆಯೆಂದು ಭಾವಿಸಲಾಗಿತ್ತೋ ಅದನ್ನು ನಿಧಾನವಾಗಿ ಖಾಸಗೀ ಉದ್ಯಮಿಗಳಿಗೆ ಇನ್ನಿತರ ಖಾಸಗಿಯವರಿಗೆ ಭಾಗಶಃ ಹಸ್ತಾಂತರಿಸುವ ಪ್ರವೃತ್ತಿ ಆರಂಭವಾಯಿತು.

ಇನ್ನು, ಪ್ರಶಂಸೆಗೆ ಪಾತ್ರವಾಗಿರುವ ಪ್ರಜನನ ಮತ್ತು ಮಕ್ಕಳ ಆರೋಗ್ಯ (RCH) ಕಾರ್ಯಕ್ರವೂ ಸಹ ಕುಟುಂಬ ಯೋಜನೆಯ ಪರಿಕಲ್ಪನೆಯ ಚೌಕಟ್ಟಿನೊಳಗೇ ಜಾರಿಯಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಇಲ್ಲಿ ಸ್ತ್ರೀಯರ ಆರೋಗ್ಯವೆಂದರೆ ಅವರು ತಾಯಿಯಾಗುವ ಫಲವಂತಿಕೆಯ ಕಾಲದ ಆರೋಗ್ಯ ಮಾತ್ರ ಎಂಬ ಪರಿಕಲ್ಪನೆಗೇ ಹೆಚ್ಚು ಒತ್ತು ಇರುವುದನ್ನು ಕಾಣಬಹುದು. ಹಾಗಾಗಿ ಬಾಲಕಿಯರ, ಕಿಶೋರಿಯರ ಹಾಗೂ ಫಲವಂತಿಕೆಯ ವಯೋಮಾನವನ್ನು ದಾಟಿದ ಸ್ತ್ರೀಯರ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಮತ್ತು ಅವರ ಪ್ರಜನನ ಆರೋಗ್ಯ ಇವೆರಡೂ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಒಂಭತ್ತನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿಯೇ ೨೦೦೦ದ ರಾಷ್ಟ್ರೀಯ ಜನಸಂಖ್ಯಾ ಕಾರ್ಯನೀತಿಯನ್ನು ರೂಪಿಸಲಾಗಿದ್ದು ಅದರ ಗುರಿ ೨೦೧೦ರ ವೇಳೆಗೆ ಒಟ್ಟು ಫಲವಂತಿಕೆಯ ಪ್ರಮಾಣವನ್ನು (TFR=Total Fertility Rate)೨.೧ಕ್ಕೆ ತಗ್ಗಿಸುವುದೇ ಆಗಿದೆ. ಇನ್ನು ಒಂಭತ್ತನೆಯ ಪಂಚವಾರ್ಷಿಕ ಯೋಜನೆಯ ಸಾಧನೆ ಮತ್ತು ವೈಫಲ್ಯಗಳನ್ನು ಪಟ್ಟಿ ಮಾಡಿರುವ ಹತ್ತನೆಯ ಪಂಚವಾರ್ಷಿಕ ಯೋಝನಾ ಆಯೋಗದ ಪ್ರಕಟನೆಯೊಂದರ ಪ್ರಕಾರ ತಾಯ್ತನದ ಮರಣ ಸಂಖ್ಯಾ ಪ್ರಮಾಣದಲ್ಲಿ ಕಳೆದ ಮೂರು ದಶಕಗಳಲ್ಲಿ ನಿರೀಕ್ಷಿತ ಇಳಿತ ಉಂಟಾಗಿಲ್ಲ.2 ಶಿಶು ಮರಣ ಸಂಖ್ಯಾ ಪ್ರಮಾಣ ಮಾತ್ರ ೧೯೯೦ರ ವೇಳೆಗೆ ಇಳಿದಿದ್ದು ೧೯೯೦ರ ದಶಕದಲ್ಲಿ ಏರುಪೇರನ್ನೇನೂ ಕಾಣದ ಒಂದೇ ಪ್ರಮಾಣದಲ್ಲಿ ಮುಂದುವರೆದಿತ್ತು. ಪ್ರಜನನ ಹಾಗೂ ಮಕ್ಕಳ ಆರೋಗ್ಯ ಕಾರ್ಯಕ್ರಮಗಳ ಅಡಿಯಲ್ಲಿ ಸಂಬಂಧಿಸಿದ ಸಿಬ್ಬಂದಿಗೆ ನೀಡಬೇಕಾಗಿದ್ದ ತರಬೇತಿಗಳು ಬಹಳ ನಿಧಾನವಾಗಿ ಆರಂಭಗೊಂಡು ಆರೋಗ್ಯ ಕಾರ್ಯಕ್ರಮಗಳ ಗುಣಮಟ್ಟ ಮತ್ತು ಹೂರಗಣಗಳಲ್ಲಿ ಸುಧಾರಣೆ ಕಂಡುಬರಲಿಲ್ಲ. ರಾಜ್ಯಗಳಿಗೆ ಔಷಧಿ ಪೂರೈಕೆ ತೃಪ್ತಿಕರವಾಗಿದ್ದರೂ ಜನಸಂಖ್ಯಾ ಬಾಹುಳ್ಯವಿರುವ ಹಾಗೂ ಹಿಂದುಳಿದ ರಾಜ್ಯಗಳಲ್ಲಿ ಔಷಧಿ ಪೂರೈಕೆ ತೃಪ್ತಿಕರವಾಗಿರಲಿಲ್ಲ ಎಂದು ಈ ಪ್ರಕಟಣೆ ತಿಳಿಸಿದೆ. ಎಲ್ಲಕ್ಕಿಂತಾ ಮುಖ್ಯವಾಗಿ ಈಗಾಗಲೇ ಪ್ರಸ್ತಾಪಿಸಿದ, ಜಿಲ್ಲಾಮಟ್ಟದಲ್ಲಿ ನಡೆಸಬೇಕಾಗಿದ್ದ ಗುರಿಗಳನ್ನು ಕುರಿತ ನಿರ್ಣಯ, ಯೋಜನೆಯ ರೂಪುರೇಷೆಗಳ ರಚನೆ, ಕಾರ್ಯಕ್ರಮಗಳ ನಿರ್ವಹಣೆ, ಆಯಾ ಸಮುದಾಯಗಳ ಅಗತ್ಯಗಳ ಪೂರೈಕೆ ಇತ್ಯಾದಿ ಎಲ್ಲಾ ಪ್ರಕ್ರಿಯೆಗಳಲ್ಲಿ ಆಗಬೇಕಾಗಿದ್ದ ವಿಕೇಂದ್ರೀಕರಣ, ಒಂಭತ್ತನೆಯ ಪಂಚವಾರ್ಷಿಕ ಯೋಜನೆಯ ಅವಧಿ ಮುಗಿದರೂ ಇನ್ನು ಆರಂಭವಾಗಿರಲಿಲ್ಲ ಎನ್ನುವುದನ್ನು ಯೋಜನಾ ಆಯೋಗದ ಪ್ರಕಟನೆಯೇ ಎತ್ತಿತೋರಿದೆ.2

ಇನ್ನು, ೧೯೫೧ ರಿಂದ ಇದುವರೆಗೂ ಐದುವರೆ ದಶಕಗಳಲ್ಲಿ ಜಾರಿಯಾದ ಪಂಚವಾರ್ಷಿಕ ಯೋಜನೆಗಳ ಪರಿಶೀಲನೆಯಿಂದ ಸ್ಪಷ್ಟವಾಗುವ ವಿಷಯವೆಂದರೆ, ಈ ಅವಧಿಯಲ್ಲಿ ಕುಟುಂಬ ಯೋಜನೆಯು ಜನಸಂಖ್ಯೆಯನ್ನು ನಿಯಂತ್ರಿಸುವ ಒತ್ತಡದ ಬಲವಂತದ ಸಾಧನವಾಗಿ ಮಾರ್ಪಟ್ಟಿರುವುದೇ ಆಗಿದೆ. ಮಹಿಳೆಯರನ್ನು ಅತಿಸಂತಾನದ ಹೊರೆಯಿಂದ ಪಾರುಮಾಡಿ ಅವರ ಆರೋಗ್ಯವನ್ನು ಉತ್ತಮಪಡಿಸುವ ಉದ್ದೇಶದಿಂದ ಪ್ರಗತಿಪರ ಮಹಿಳಾ ಚಳವಳಿಯು ಆರಂಭಿಸಿದ ಕುಟುಂಬ ಯೋಜನೆಯು ಇಂದು ಮಹಿಳೆಯರ ಆರೋಗ್ಯವನ್ನು ನಿರ್ಲಕ್ಷಿಸಿ ಅದಕ್ಕೆ ಬದಲು ಜನಸಂಖ್ಯಾ ನಿಯಂತ್ರಣದ ಗುರಿಗಳನ್ನು ತಲುಪಲು ಅನಿವಾರ್ಯವಾದ ಸಾಧನವೆಂಬಂತೆ ಬಳಕೆಯಾಗುತ್ತಿರುವುದು ದುರದೃಷ್ಟವೇ ಸರಿ. ಮಹಿಳೆಯರ ನಿಜವಾದ ಆರೋಗ್ಯದ ಅಗತ್ಯಗಳನ್ನು ಪೂರೈಸುವ ದಿಕ್ಕಿನಲ್ಲಿ ಹಾಗೂ ಅವರು ತಮ್ಮ ಹಾಗೂ ಇಡೀ ಕುಟುಂಬದ ಆರೋಗ್ಯದ ಸಾಧನೆಗಾಗಿ ಪುರುಷರೊಂದಿಗೆ ಸಮಾನವಾಗಿ ಹೊಣೆ ಹೊರೆಗಳನ್ನು ಹಂಚಿಕೊಳ್ಳಬೇಕಾದ ಅನಿವಾರ್ಹತೆಗಳನ್ನು ಪೂರೈಸುವ ದಿಕ್ಕಿನಲ್ಲಿ ಬದ್ಧತೆಯುಳ್ಳ ಯಾವುದೇ ಪ್ರಯತ್ನಗಳನ್ನು ಈ ಐದುವರೆ ದಶಕದ ಅವಧಿಯಲ್ಲಿ ಮಾಡಲಾಗಿಲ್ಲ ಎಂಬುದು ಸ್ತ್ರೀಪರ ಆರೋಗ್ಯ ಮತ್ತು ಅಭಿವೃದ್ಧಿ ಚಿಂತಕರ ಸ್ಪಷ್ಟ ಅಭಿಪ್ರಾಯ.

ಲೈಂಗಿಕ ಮತ್ತು ಪ್ರಜನನ ವಿಷಯಗಳಲ್ಲಿ ಹಾಗೂ ಕುಟುಂಬ ಯೋಜನೆಯನ್ನು ಪಾಲಿಸುವ ವಿಷಯಗಳಲ್ಲಿ ಅತ್ಯಂತ ನಿರ್ಣಯಾತ್ಮಕ ಪಾತ್ರವಹಿಸುವ ಗಂಡು ಹೆಣ್ಣಿನ ನಡುವೆ ಇರುವ ಪಾರಸ್ಪರಿಕ ಅಧಿಕಾರ (Power relation) ಹಾಗೂ ಲಿಂಗತ್ವ ಸಂಬಂಧಗಳಲ್ಲಿ (Gender relations) ಯಾವುದೇ ಬದಲಾವಣೆ ಇದುವರೆವಿಗೂ ಆಗಿಲ್ಲ. ಇದರಿಂದಾಗಿ ಮಹಿಳೆಗೆ ತನ್ನ ದೇಹದ ಮೇಲೆ ಹಾಗೂ ತನ್ನ ಜೀವನದ ಮೇಲೆ ಸ್ವಂತವಾದ ನಿಯಂತ್ರಣವಿಲ್ಲ. ಅಲ್ಲದೆ ಇಂದು ಪ್ರಜನನ ಹಕ್ಕುಗಳನ್ನು ಜನಸಂಖ್ಯಾತ್ಮಕ ಸಾಧನ (Demographic tool) ಎಂದು ಪರಿಭಾವಿಸಿರುವುದರಿಂದ ಅವುಗಳನ್ನು, ತನಗೆಷ್ಟು ಮಕ್ಕಳು ಬೇಕು, ಯಾವ ಅಂತರದಲ್ಲಿ ಬೇಕು ಹಾಗೂ ಎಷ್ಟು ಬೇಗ ಬೇಕು ಎಂಬುದನ್ನು ನಿರ್ಧರಿಸಲು ಮಹಿಳೆಗೆ ಇರಬೇಕಾಗುವ ಹಕ್ಕುಗಳು ಎಂದೇ ಸೀಮಿತವಾಗಿ ಅರ್ಥೈಸಲಾಗುತ್ತಿದೆ. ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಮಹಿಳೆಗೆ ತನ್ನ ಮಕ್ಕಳ ತಂದೆ ಯಾರು ಆಗಿರಬೇಕು ಎಂಬ ತನ್ನ ಪತಿಯನ್ನು ತಾನೇ ಆಯ್ಕೆಮಾಡಬಲ್ಲ ಅವಳ ಹಕ್ಕೂಗಳಿಗೆ ಇಂದು ಮಾನ್ಯತೆ ಮತ್ತು ಆದ್ಯತೆ ಸಿಗಬೇಕಾಗಿದೆ ಎಂಬುದು ಸ್ತ್ರೀವಾದಿ ಆರೋಗ್ಯ ಹಾಗೂ ಅಭಿವೃದ್ಧಿ ಚಿಂತಕರ ದೃಢ ಅಭಿಪ್ರಾಯವಾಗಿದೆ. ಇಂದು ಬೃಹತ್‌ಸಂಖ್ಯೆಯ ಹುಡುಗಿಯರಲ್ಲಿ ಬಹುತೇಕ ಮಂದಿಗೆ ಕಾನೂನು ಬದ್ಧ ವಯಸ್ಸಿಗೆ ಮೊದಲೇ ಮದುವೆ ಮಾಡಲಾಗುತ್ತಿದ್ದು ಅವರ ಮೇಲೆ ಬೇಡದ ವಿವಾಹ ಹಾಗೂ ಬಸಿರುಗಳ ಹೊರೆಯನ್ನು ಹೊರಿಸಲಾಗುತ್ತಿರುವ ಇಂದಿನ ಸಮಾಜದ ಕಟುವಾಸ್ತವತೆಯ ಸಂದರ್ಭದಲ್ಲಿ ಪ್ರಜನನ ಹಕ್ಕುಗಳನ್ನು ಈ ಬಗೆಯ ಪುನರ್‌ವಿಮರ್ಶೆ ಮತ್ತು ಪುನರ್‌ಅರ್ಥೈಸುವಿಕೆಗೆ ಒಳಪಡಿಸಬೇಕೆಂಬುದು ಸ್ತ್ರೀವಾದೀ ಆರೋಗ್ಯ ಚಿಂತಕರ ವಾದ.

ಹತ್ತನೇ ಪಂಚವಾರ್ಷಿಕ ಯೋಜನೆ (೨೦೦೨೦೭)

ಈ ಯೋಜನೆಯ ಗುರಿಗಳೇನು ಎಂಬುದು ಇಲ್ಲಿ ಪರಿಶೀಲನಾರ್ಹ. ೨೦೦೬ರಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರಕಟಿಸಿರುವ ವರದಿಯು ಈ ಯೋಜನೆಯಲ್ಲಿ ನಿರ್ವಹಿಸಬಹುದಾದ ಗುರಿಗಳನ್ನು ಕೆಳಕಂಡಂತೆ ಪಟ್ಟಿಮಾಡಿದೆ.6

೧. ೨೦೦೭ರ ವೇಳೆಗೆ ಒಂದು ಸಾವಿರ ಜೀವಂತ ಜನಗಳಿಗೆ ತಾಯ್ತದ ಮರಣಗಳನ್ನು ೨ರ ಸಂಖ್ಯೆಗೆ ಇಳಿಸುವುದು. ಹನ್ನೊಂದನೇ ಪಂಚವಾರ್ಷಿಕ ಯೋಜನೆಯು ಕೊನೆಯಾಗುವ ೨೦೧೨ರ ವೇಳೆಗೆ ಈ ಸಂಖ್ಯೆಯನ್ನು ೧ಕ್ಕೆ ಇಳಿಸುವುದು.

೨. ೨೦೦೭ರ ಒಳಗೆ ಒಂದು ಸಾವಿರ ಜೀವಂತ ಜನನಗಳಿಗೆ ಶಿಶುಮರಣ ಸಂಖ್ಯಾ ಪ್ರಮಾಣವನ್ನು ೪೫೦ ಸಂಖ್ಯೆಗೆ ಇಳಿಸುವುದು ಹಾಗೂ ೨೦೧೨ರ ವೇಳೆಗೆ ಆ ಸಂಖ್ಯೆಯನ್ನು ೨೮ಕ್ಕೆ ಇಳಿಸುವುದು.

೩. ೨೦೦೧ ರಿಂದ ೨೦೧೧ರ ದಶಕದಲ್ಲಿ ಜನಸಂಖ್ಯಾ ಬೆಳವಣಿಗೆಯನ್ನು ೧೬.೨% ರಷ್ಟು ಕಡಿಮೆ ಮಾಡುವುದು.

೪. ಶಿಕ್ಷಣ ಹಾಗೂ ವೇತನಗಳಲ್ಲಿ ಈಗಿರುವ ಲಿಂಗತ್ವ ತಾರತಮ್ಯವನ್ನು (Gender differences) ೨೦೦೭ರ ವೇಳೆಗೆ ೫೦% ರಷ್ಟು ಇಳಿಸುವುದು.

೫. ೨೦೦೭ರ ಒಳಗೆ ಬಡತನದ ಪ್ರಮಾಣವನ್ನು ೫% ರಷ್ಟು ಹಾಗೂ ೨೦೧೨ರ ವೇಳೆಗೆ ೧೫% ರಷ್ಟು ಕಡಿಮೆ ಮಾಡುವುದು.

೬. ಎಲ್ಲಾ ಮಕ್ಕಳೂ ೨೦೦೩ರ ಒಳಗೆ ಶಾಲೆಯಲ್ಲಿರುವಂತೆ ಖಾತ್ರಿಪಡಿಸಿಕೊಳ್ಳುವುದು ಹಾಗೂ ೨೦೦೭ರ ವೇಳೆಗೆ ಎಲ್ಲಾ ಮಕ್ಕಳೂ ೫ ವರ್ಷಗಳಷ್ಟಾದರೂ ಶಾಲಾ ವಿದ್ಯಾಭ್ಯಾಸವನ್ನು ಪಡೆಯುವಂತೆ ಮಾಡುವುದು.

೭. ಈ ಯೋಜನೆಯ ಅವಧಿಯಲ್ಲಿ ಸಾಕ್ಷರರ ಪ್ರಮಾಣವನ್ನು ೭೫% ಏರಿಸುವುದು.

೮. ಎಲ್ಲಾ ಹಳ್ಳಿಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವುದು.

೯. ಈ ಯೋಜನೆಯ ಅವಧಿಯಲ್ಲಿ ಸೇರ್ಪಡೆಯಾಗುವ ಜನಸಂಖ್ಯೆಯಲ್ಲಿ ಉದ್ಯೋಗಾರ್ಥಿಗಳಾಗುವ ಯುವ ಜನರಿಗೆ ಉದ್ಯೋಗ ಕಲ್ಪಿಸುವುದು.

೧೦. ಅರಣ್ಯ ಪ್ರದೇಶವನ್ನು ೨೫% ರಷ್ಟು ಹೆಚ್ಚಿಸುವುದು ಹಾಗೂ ೨೦೧೨ರ ವೇಳೆಗೆ ಅರಣ್ಯವನ್ನು ೩೩% ರಷ್ಟು ಹೆಚ್ಚಿಸುವುದು.

೧೧.೨೦೦೭ರ ವೇಳೆಗೆ ಭಾರತದ ಕಲುಷಿತವಾದ ಪ್ರಮುಖ ನದಿಗಳನ್ನು ಸ್ವಚ್ಛಗೊಳಿಸುವುದು.

ಮಹಾತ್ವಾಕಾಂಕ್ಷಿಯಾದ ಈ ಯೋಜನಾ ಗುರಿಗಳಲ್ಲಿ ಎಷ್ಟರಮಟ್ಟಿಗೆ ಎಷ್ಟು ಗುರಿಗಳನ್ನು ನಮ್ಮ ಸರ್ಕಾರ ತಲುಪಲು ಸಾಧ್ಯ ಎನ್ನುವುದು ಪ್ರಶ್ನಾರ್ಹವೇ ಸರಿ. ಆದರೆ ಮಹಿಳಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಜನಸಂಖ್ಯಾ ಪ್ರಮಾಣ, ತಾಯ್ತನ ಹಾಗೂ ಶಿಶು ಮರಣಗಳ ಪ್ರಮಾಣ ಇಳಿಸುವ ಪ್ರಯತ್ನಗಳು ತೀವ್ರಗತಿಯಲ್ಲಿ ನಡೆಯುತ್ತಿದ್ದು ಅವುಗಳ ಫಲಿತಾಂಶಗಳನ್ನು ೨೦೦೭ರ ನಂತರ ಹತ್ತನೆಯ ಪಂಚವಾರ್ಷಿಕ ಯೋಜನೆಯ ಸಾಧನೆ ಹಾಗೂ ವೈಫಲ್ಯಗಳ ಮಾಪನದ ನಂತರವೇ ತಿಳಿಯಬಹುದಾಗಿದೆ.

ನಮ್ಮ ದೇಶದಲ್ಲಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಒತ್ತಡಗಳಿಂದಾಗಿ ಪಾಲಕರು ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಲೇಬೇಕು ಎಂಬುದು ಕಡ್ಡಾಯವಾಗಿದೆ. ಬಡತನ, ವರದಕ್ಷಿಣೆಯ ಏರಿಕೆ ಹಾಗೂ ಒಂಟಿಯಾದ ಅವಿವಾಹಿತ ಹುಡುಗಿಯರಿಗೆ ಹಾಗೂ ಮಹಿಳೆಯರಿಗೆ ಸೂಕ್ತವಾದ ಸಾಮಾಜಿಕ ಸುಭದ್ರತೆ ನೀಡದ, ಅವರನ್ನು ಸಹಜವಾಗಿ ಒಪ್ಪಿಕೊಳ್ಳದ ಸಮಾಜದ ಒತ್ತಡ ಹಾಗೂ ಇನ್ನಿತರ ಒತ್ತಡಗಳು ಅನೇಕ ಹುಡುಗಿಯರಿಗೆ ಮದುವೆಯೇ ಜೀವನದ ಪರಮಗುರಿಯೆಂಬಂತೆ ಪ್ರತ್ಯಕ್ಷವಾಗಿ ಹಾಗೂ ಅಪ್ರತ್ಯಕ್ಷವಾಗಿ ಹುಡುಗಿಯರನ್ನು ನಂಬಿಸುವ ಸಾಮಾಜೀಕರಣದ ಪ್ರಕ್ರಿಯೆಗಳೂ ಇದಕ್ಕೆ ಕಾರಣವಾಗಿವೆ. ಇಷ್ಟು ಸಾಲದೆಂಬಂತೆ, ಸಾಮಾನ್ಯವಾಗಿ ಭಾರತೀಯ ಹುಡುಗಿಯರು ಬೆಳೆಯುವ ಸಾಮಾಜಿಕ/ಕೌಟುಂಬಿಕ ಪರಿಸರಗಳು ಅವರಿಗೆ ಬೇರೆ ಬೇರೆ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದಾದ ಅವಕಾಶಗಳನ್ನೇ ನಿರಾಕರಿಸುತ್ತವೆ. ಹಾಗಾಗಿ ಹುಡುಗಿಯರು ಅದರಲ್ಲಿಯೂ ಗ್ರಾಮಾಂತರ ಪ್ರದೇಶಗಳಲ್ಲಿನ ಹುಡುಗಿಯರು ತಮಗೆ ಸೂಕ್ತವಲ್ಲದ ಬೇಡವಾಗಿರುವ ಮದುವೆಗೆ ಚಿಕ್ಕವಯಸ್ಸಿನಲ್ಲಿಯೇ ಬಲಿಯಾಗುತ್ತಾರೆ. ಇದರಿಂದ ಅವರ ಸರ್ವತೋಮುಖ ವಿಕಾಸಕ್ಕೆ ಅಡ್ಡಿಯಾಗುವುದಲ್ಲದೆ ಅವರ ಆರೋಗ್ಯವೂ ಹದಗೆಡುತ್ತದೆ (ಹೆಚ್ಚಿನ ವಿವರಗಳಿಗೆ “ಹದಿಹರೆಯದ ಹುಡುಗಿಯರ ಆರೋಗ್ಯ ಒಂದು ವಿಶ್ಲೇಷಣೆ” ಅಧ್ಯಾಯ ನೋಡಿ) . ಆದ್ದರಿಂದ ಮಹಿಳೆಯರ ಆರೋಗ್ಯ ಸುಧಾರಣೆಯೆಂದರೆ ಕೇವಲ, ಅವರ ತಾಯ್ತನದ ಕಾಯಿಲೆಗಳ, ತಾಯ್ತನದ ಮರಣಗಳ ಹಾಗೂ ಇಶು ಮರಣಗಳ ಪ್ರಮಾಣವನ್ನು ಇಳಿಸುವುದು ಮಾತ್ರ ಅಲ್ಲ ಎಂಬ ಅರಿವು ಇಂದು ಎಲ್ಲರಲ್ಲಿಯೂ ಅದರಲ್ಲಿಯೂ ವಿಶೇಷವಾಗಿ ಆರೋಗ್ಯ/ಕುಟುಂಬ ಯೋಜನಾ ಕಾರ್ಯನೀತಿ ನಿರೂಪಕರಿಂದ ಹಿಡಿದು ತಳಮಟ್ಟದ ಆರೋಗ್ಯ/ಕುಟುಂಬ ಯೋಜನಾ ಕಾರ್ಯಕರ್ತರವರೆಗೂ ಮೂಡಬೇಕಾಗಿದೆ. ಎಲ್ಲಕ್ಕಿಂತಾ ಮುಖ್ಯವಾಗಿ ಇಂದು ಮಹಿಳೆಯರಿಗೆ ಲಿಂಗತ್ವ ನ್ಯಾಯ (Gender Justice) ದೊರಕಿಸುವ ಹಾಗೂ ಅವರನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಸಬಲೀಕರಣಗೊಳಿಸುವ ಪ್ರಯತ್ನಗಳು ತೀವ್ರಗತಿಯಲ್ಲಿ ಸಾಗಬೇಕಾಗಿದೆ.

[1] Gopalan Sarala and Mira Shiva (Editors) 2000, National Profile on Women, Health and Development, New Delhi, Voluntary Health Association of India, Pp. 275-78.

[2] GOI (Undated document) Tenth Five Year Plan 2002-07, Vol. 2 Planning Commission, New Delhi, Pp 165-176.

[3] ????

[4] Raina B. L., (1994) The Population Challenge Delhi, B. R. Publishing Co.

[5] GOI (2004)Women and Men in India 2004, Ministry of Statistics and Programme Implementation, New Delhi (2006), P. 36.

[6] GOI (2006), Platfrom for Action: 10 Years after : India Country Report., Department of Women and Child Development, Ministry of Human Resource Development, P.3.