ತುರ್ತು ಗರ್ಭನಿರೋಧಕ ಮಾತ್ರೆಗಳು: ಸಾಧಕ ಬಾಧಕಗಳು

ಇವು ಯಾವುದೇ ಗರ್ಭನಿರೋಧಕವನ್ನು ಬಳಸದ ಸುರಕ್ಷಿತವಲ್ಲದ ಸಂಭೋಗದ ನಂತರ ಬೇಡದ ಬಸಿರನ್ನು ನಿವಾರಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಮಾತ್ರೆಗಳಾಗಿವೆ. ತುರ್ತು ಗರ್ಭನಿರೋಧಕ ಮಾತ್ರೆಗಳನ್ನು ಇಂದು ಅನೇಕ ಯೂರೋಪಿಯನ್‌ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಸಂಭೋಘವಾದ ನಂತರ ೪೮ ಗಂಟೆಯೊಳಗೆ ಒಂದು ಪೊಸ್ಟಿನಾರ್‌(Postinar) ಮಾತ್ರೆಯನ್ನು ತೆಗೆದುಕೊಂಡಲ್ಲಿ ಅದು ಬಸಿರನ್ನು ತಡೆಗಟ್ಟಬಲ್ಲದು. ಇದರಲ್ಲಿ ಇನ್ನಿತರ ಸಾಮಾನ್ಯ ಗರ್ಭನಿರೋಧಕ ಮಾತ್ರೆಗಳಲ್ಲಿರುವ ಪ್ರೊಜೆಸ್ಟಿನ್‌ಲೆವೆನಾರ್‌ಜಿಸ್ಟಾರಾಲ್‌ನ ಪ್ರಮಾಣ ೦.೭೫ ಮಿಲಿ ಗ್ರಾಂಗಳಷ್ಟಿದ್ದು ಇದು ಇತರ ಗುಳಿಗೆಗಳಲ್ಲಿರುವ ಪ್ರಮಾಣಕ್ಕಿಂತಾ ೨೫ರಷ್ಟು ಜಾಸ್ತಿಯಿರುತ್ತದೆ. ನಾಲ್ಕು ಮಾತ್ರೆಗಳಿರುವ ಒಂದು ವಿಶೇಷ ಪ್ಯಾಕೆಟ್‌ನಲ್ಲಿ ಇವನ್ನು ಮಾರಾಟ ಮಾಡಲಾಗುತ್ತಿದ್ದು, ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಮಾತ್ರೆಗಳಿಗಿಂತಾ ಹೆಚ್ಚಾಗಿ ತೆಗೆದುಕೊಳ್ಳಬಾರದೆಂಬ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಒಂದು ವೇಳೆ ಯಾವುದೇ ಕಾರಣದಿಂದ ಅಸುರಕ್ಷಿತ ಸಂಭೋಗವಾದ ೪೮ ಗಂಟೆಗಳೊಳಗೆ ಇದನ್ನು ತೆಗೆದುಕೊಳ್ಳಲಾಗದಿದ್ದಲ್ಲಿ, ಸಂಭೋಗವಾದ ೭೨ ಗಂಟೆಯೊಳಗೆ ಒಂದು ನಂತರದ ೧೨ ಗಂಟೆಗಳ ಒಳಗೆ ಇನ್ನೊಂದು ಮಾತ್ರೆ ತೆಗೆದುಕೊಳ್ಳುವುದರಿಂದ ಬೇಡದ ಬಸಿರನ್ನು ತಡೆಗಟ್ಟಬಹುದು. ಅಮೆರಿಕೆಯ ಆಹಾರ ಮತ್ತು ಔಷಧಿ ಪ್ರಾಧಿಕಾರ (FDA), ಈ ರೀತಿ ಎರಡು ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿಯೇನಲ್ಲ ಎಂಬ ಅಭಿಪ್ರಾಯ ನೀಡಿದೆ.1

ಅತ್ಯಂತ ಗುಪ್ತವಾಗಿ ಉಪಯೋಗಿಸಬಹುದಾದ ಸಂತಾನ ನಿರೋಧಕವೆಂದೇ ಕರೆಯಲ್ಪಡುವ ತುರ್ತುಗರ್ಭನಿರೋಧಕ ಮಾತ್ರೆಗಳು ಹೆಚ್ಚಿನ ಆಯ್ಕೆಗಳಿಲ್ಲದ ಅನೇಕ ಮಹಿಳೆಯರಿಗೆ ವರದಾನವಾಗಬಲ್ಲದು. ಒಂದು ವೇಳೆ ಸ್ತ್ರೀಯರಿಗೆ ಗರ್ಭನಿರೋಧಕ ಸಾಧನಗಳು ಲಭ್ಯವಿದ್ದರೂ ಅವುಗಳಲ್ಲಿ ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿಲ್ಲದಿದ್ದಲ್ಲಿ ಅವರ ಅಗತ್ಯಗಳನ್ನು ತುರ್ತು ಗರ್ಭನಿರೋಧಕ ಮಾತ್ರೆಗಳು ಪೂರೈಸಬಲ್ಲವು. ಕೆಲವೊಮ್ಮೆ ಕುಟುಂಬ ಯೋಜನೆಯನ್ನು ಅನುಸರಿಸುತ್ತಿರುವ ದಂಪತಿಗಳಲ್ಲಿ ಹೆಂಡತಿ ಗರ್ಭನಿರೋಧಕ ಮಾತ್ರೆ ಸೇವಿಸಲು ಮರೆತಿದ್ದರೆ ಅಥವಾ ಸಂಭೋಗದಲ್ಲಿ ಕಾಂಡೋಮ್‌ಹರಿದು ಹೋದರೆ, ಈ ತುರ್ತು ಗರ್ಭನಿರೋಧಕ ಮಾತ್ರೆಗಳು ಗರ್ಭನಿರೋಧಕ ರಕ್ಷೆ ನೀಡಬಲ್ಲವು. ಹೀಗೆ ಮಹಿಳೆಯ ಫಲವತ್ತತೆಯನ್ನು ನಿಯಂತ್ರಿಸಲು ಮಹಿಳೆಯ ನಿಯಂತ್ರಣದಲ್ಲಿಯೇ ಇರುವಂತಹ ಸಂಭೋಗದ ನಂತರದ ಗರ್ಭನಿರೋಧಕಗಳು ಅವಶ್ಯಕ. ಅದರಲ್ಲಿಯೂ ಎಂದಾದರೊಮ್ಮೆ ಸಂಭೋಗಕ್ಕೆ ಒಳಗಾಗುವ ಸ್ತ್ರೀಯರಿಗೆ ಇದು ರಕ್ಷಣೆಯನ್ನೊದಗಿಸಬಲ್ಲದು. ಸರಿಯಾದ ಮಾಹಿತಿ ಹಾಗೂ ಆಪ್ತಸಲಹೆಯೊಂದಿಗೆ ಯಾವಾಗಲಾದರೂ ತುರ್ತು ಪರಿಸ್ಥಿತಿಯಲ್ಲಿ ಮಹಿಳೆಗೆ ಇದನ್ನು ನೀಡಬೇಕಾಗಿದೆ. ಇದರ ಇನ್ನೊಂದು ಉತ್ತಮ ಗುಣವೆಂದರೆ ಈ ಮಾತ್ರೆಯ ಅಡ್ಡಪರಿಣಾಮಗಳು ಬೇಗನೆ ಕಾಣಿಸಿಕೊಂಡು ಗುರ್ತಿಸಲ್ಪಡುತ್ತವೆ. ಅಲ್ಲದೇ ಈ ಮಾತ್ರೆಗಳನ್ನು ನೀಡಲು ಕುಟುಂಬ ಯೋಜನೆಯ ಕಾರ್ಯಕರ್ತರಿಗೆ ಹೆಚ್ಚಿನ ತರಬೇತಿ ಬೇಕಿಲ್ಲ. ಅಲ್ಲದೆ ಮಹಿಳೆಯರ ಆರೋಗ್ಯಕ್ಕೆ ಇವುಗಳಿಂದ ಉಂಟಾಗಬಹುದಾದ ಅಪಾಯಗಳು ಕಡಿಮೆಯಿರುವುದರಿಂದ ಇವನ್ನು ಸಮುದಾಯದ ಮಟ್ಟದಲ್ಲಿ ಹಂಚಬಹುದಾಗಿದೆ. ಆದರೆ, ಅನೇಕ ಅಭಿವೃದ್ಧಿಶೀಲ ಮತ್ತು ಬಡದೇಶಗಳ ಮಹಿಳೆಯರಲ್ಲಿ ಬಹಳಷ್ಟು ಮಂದಿಗೆ ಇಂತಹ ಸಂಭೋಗದ ನಂತರದ ಹಾಗೂ ಸ್ತ್ರೀಯರ ಪೂರ್ಣ ನಿಯಂತ್ರಣದಲ್ಲಿಯೇ ಇರಬಹುದಾದ ಗರ್ಭನಿರೋಧಕ ಸಾಧನಗಳಿವೆ, ವಿಧಾನಗಳಿವೆ ಎಂಬ ಅರಿವು ಇಲ್ಲ. ಅಲ್ಲದೆ, ಅಭಿವೃದ್ಧಿಶೀಲ ದೇಶಗಳಲ್ಲಿ ಕೆಲವೇ ಕೆಲವು ಕುಟುಂಬ ಯೋಜನಾ ಸಂಸ್ಥೆಗಳು ಇವನ್ನು ಒದಗಿಸುತ್ತಿವೆ. ಇದರೊಂದಿಗೇ ಪಾಶ್ಚಿಮಾತ್ಯ ದೇಶಗಳಲ್ಲಿರುವ ಗರ್ಭಪಾತ ವಿರೋಧೀ ಗುಂಪುಗಳು ಅದರಲ್ಲಿಯೂ ಗರ್ಭಪಾತ ವಿರೋಧೀ ಧಾರ್ಮಿಕ ಗುಂಪುಗಳು ಇದರ ಪ್ರಸಾರಕ್ಕೆ ಅಪ್ರತ್ಯಕ್ಷವಾದ ಆದರೆ ಬಲವಾದ ವಿರೋಧವನ್ನು ವ್ಯಕ್ತಪಡಿಸುತ್ತಿವೆ.

ಪ್ರಜನನ ಕಾನೂನು ಮತ್ತು ಕಾರ್ಯನೀತಿ ಕೇಂದ್ರವು (Centre for Reproductive law and policy), ತುರ್ತು ಗರ್ಭನಿರೋಧಕ ಮಾತ್ರೆಗಳು ಫಲಗೊಂಡ ಅಂಡಾಣುವು ಗರ್ಭಾಯ/ಗರ್ಭಕೋಶಕ್ಕೆ ಒಂದು ನಾಟಿಕೊಂಡು ಬೆಳೆಯದಂತೆ ತಡೆಯುವುದರಿಂದ ಇದನ್ನು ಗರ್ಭಪಾತದ ಔಷಧಿಯೆಂದು ಪರಿಗಣಿಸಲಾಗದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಆದ್ದರಿಂದ ಈ ಮಾತ್ರೆಗಳ ಪ್ಯಾಕೆಟ್‌ಮೇಲೆ ಸಂಭೋಗದ ನಂತರದ ಗರ್ಭನಿರೋಧಕ ಎಂಬ ಲೇಬಲ್‌ಹಾಕಬೇಕೆಂದು ಈ ಮಾತ್ರೆಗಳ ತಯಾರಕರ ಮೇಲೆ ಒತ್ತಾಯ ಹೇರಲಾಗುತ್ತಿದ್ದರೂ ಅಂತಹ ಪ್ರಯತ್ನಗಳು ಇನ್ನೂ ಫಲಕಾರಿಯಾಗಿಲ್ಲ. ಅಮೆರಿಕೆಯ ಗರ್ಭಪಾತ ವಿರೋಧಿ ಗುಂಪುಗಳ ಕೆಂಗಣ್ಣಿಗೆ ಗುರಿಯಾಗಿ, ಅವುಗಳು ತಮ್ಮನ್ನು ನ್ಯಾಯಾಲಯದ ಕಟ್ಟೆ ಹತ್ತುವಂತೆ ಮಾಡುತ್ತವೆಂಬ ಭೀತಿಯಿಂದಾಗಿ ಈ ಔಷಧಿ ತಯಾರಕರು ಅಂತಹ ಲೇಬಲ್‌ಗಳನ್ನು ಇನ್ನೂ ಹಚ್ಚಿಲ್ಲ.1 ಹೀಗೆ ಪೂರ್ತಿಯಾಗಿ ಸ್ತ್ರೀಯರಿಗೆ ಸಂತಾನ ನಿರೋಧದ ಸ್ವಾತಂತ್ರ್ಯ ನೀಡಬಲ್ಲ ಸಾಧನಗಳಿಗೆ ವಿರೋಧ ಇರುವುದು ವಿಷಾದದ ಸಂಗತಿಯೇ ಸರಿ.

ಇನ್ನು ಈ ಗುಳಿಗೆಗಳು ಯಾರಿಗೆ ನಿಷಿದ್ಧ ಎಂಬುದರ ತಿಳುವಳಿಕೆಯೂ ಅಗತ್ಯ. ಇತ್ತೀಚೆಗೆ ಕಾಯಿಲೆಯಿಂದ ಚೇತರಿಸಿಕೊಂಡಿರುವ ಮಹಿಳೆಯರು, ಪಿತ್ತಕೋಶದ ಕಾಯಿಲೆ ಇರುವವರು, ಗರ್ಭಕೋಶದ ಬಾಯಿಯ ಒಳಪದರ ಅಸಹಜವಾಗಿ ದಪ್ಪವಾಗಿ ಬೆಳೆಯುವ ಕಾಯಿಲೆಯಿಂದ ನರಳುತ್ತಿರುವವರು (Cervical hyperplasia), ಅಂಡಾಶಯದ ಕಾಯಿಲೆಯಿರುವವರು, ದೀರ್ಘಕಾಲೀನ ಗರ್ಭಕೋಶದ ಬಾಯಿಯ ಉರಿಯೂತಯಿರುವವರು (Chronic cervical inflamation) ಹಾಗೂ ಮೂತ್ರಪಿಂಡದ ಕಾಯಿಲೆಗಳಿಂದ ಪೀಡಿತರಾದ ಮಹಿಳೆಯರು ಈ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಹೆರಿಗೆಯ ನಂತರದ ಆರು ತಿಂಗಳ ಅವಧಿಯಲ್ಲಿ ಎದೆಹಾಲುಣಿಸುತ್ತಿರುವ ತಾಯಂದಿರೂ ಈ ಮಾತ್ರೆಗಳನ್ನು ಸೇವಿಸುವಂತಿಲ್ಲ. ತಲೆಸುತ್ತು, ವಾಂತಿ, ಸ್ತನಗಳು ಅತಿಮೃದುವಾಗುವುದು, ಅನಿಯಮಿತ ಅತಿರಕ್ತಸ್ರಾವದ ಮುಟ್ಟು ಇವು ಈ ಮಾತ್ರೆಗಳ ಅಡ್ಡಪರಿಣಾಮಗಳಾಗಿದ್ದು ಇವುಗಳನ್ನು ಬಲುಬೇಗನೆ ಗುರ್ತಿಸಬಹುದಾಗಿದೆ. ಇದರಿಂದಾಗಿ ಈ ಮಾತ್ರೆಗಳ ಸೇವನೆಯನ್ನು ತಕ್ಷಣ ನಿಲ್ಲಿಸಿ ವೈದ್ಯಕೀಯ ಪರೀಕ್ಷೆ ಚಿಕಿತ್ಸೆಗಳಿಗೆ ಒಳಗಾಗುವುದು ಸಾಧ್ಯವಾಗುತ್ತದೆ.1

ಭಾರತದಲ್ಲಿ ಈ ಮಾತ್ರೆಗಳು ಕಳೆದ ಮೂರು ನಾಲ್ಕು ವರ್ಷಗಳಿಂದ ಸಿಗುತ್ತಿವೆ. ಇವು ೨ ಮಾತ್ರೆಗಳು ಮಾತ್ರ ಇರುವ ಪ್ಯಾಕೆಟ್‌ನಲ್ಲಿ ಮಾರಾಟವಾಗುತ್ತಿದ್ದು ಇವನ್ನು ವೈದ್ಯರು ಬರೆದುಕೊಡುವ ಪ್ರಿಸ್ಕ್ರಿಪ್‌ಷನ್‌ಮೂಲಕ ಮಾತ್ರ ಕೊಳ್ಳಲು ಸಾಧ್ಯ. ಈಗ ಇವನ್ನು ಮೂರು ಔಷಧಿ ಕಂಪೆನಿಗಳು ಮಾರಾಟ ಮಾಡುತ್ತಿದ್ದು ಇವುಗಳ ಬೆಲೆ ೩೦ ರೂ.ಗಳಿಂದ ೫೦ ರೂಪಾಯಿಗಳ ವರೆಗೆ ಇದೆ. ಭಾರತೀಯ ವೈದ್ಯ ತಜ್ಞರ ಪ್ರಕಾರ ಇದು ೮೫% ರಷ್ಟು ಬೇಡದ ಬಸಿರುಗಳನ್ನು ತಡೆಗಟ್ಟಬಲ್ಲದು ಮತ್ತು ಒಂದು ವೇಳೆ ಈ ಮಾತ್ರೆ ತೆಗೆದುಕೊಂಡ ಮೇಲೆ ಸಹ ಬಸಿರಾದಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ಹಾನಿಯಾಗುವುದಿಲ್ಲ. ಅಲ್ಲದೆ ಅತ್ಯಾಚಾರದ ಪ್ರಕರಣಗಳಲ್ಲಿ ಹಾಗೂ ವೈವಾಹಿಕ ಲೈಂಗಿಕ ಸಂಬಂಧದಲ್ಲಿಯೇ ಉಂಟಾಗಬಹುದಾದ ಬಲವಂತದ ಸಂಭೋಗದ ಪ್ರಕರಣಗಳಲ್ಲಿ ಈ ಮಾತ್ರೆಗಳು ಮಹಿಳೆಯರಿಗೆ ಬೇಡದ ಬಸಿರುಗಳಿಂದ ಬಿಡುಗಡೆ ನೀಡಬಲ್ಲವು. ಎಲ್ಲಾ ಮಹಿಳೆಯರಿಗೂ ತಮ್ಮ ಲೈಂಗಿಕತೆ ಹಾಗೂ ಫಲವಂತಿಕೆಗಳನ್ನು (Sexuality & Fertility) ನಿಯಂತ್ರಿಸುವ ಹಕ್ಕು ಇರಬೇಕಾಗಿದ್ದು ಅಂತಹ ಹಕ್ಕನ್ನು ಈ ಮಾತ್ರೆಗಳು ಸಾಧ್ಯವಾಗಿಸಬಹುದಾಗಿದೆ. ಬೆಳಗಾದ ನಂತರದ ಮಾತ್ರೆಗಳೆಂದೇ ಪಾಶ್ಚಿಮಾತ್ಯ ದೇಶಗಳಲ್ಲಿ ಕರೆಯಲ್ಪಡುವ ಈ ಮಾತ್ರೆಗಳನ್ನು ಬೃಹತ್‌ಪ್ರಮಾಣದಲ್ಲಿ ಖರೀದಿಸಿ, ಅವುಗಳ ಬೆಲೆಗಳನ್ನು ಮಾರುಕಟ್ಟೆಯಲ್ಲಿ ಇಳಿಸಿ, ಇವುಗಳ ಬಗ್ಗೆ ಅರಿವು ಮೂಡಿಸಿ ಕುಟುಂಬ ಕಲ್ಯಾಣ ಚಿಕಿತ್ಸಾಲಯಗಳ ಮೂಲಕ ಹಂಚುವ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿರುವುದು ಶ್ಲಾಘನೀಯವಾಗಿದೆ.[1] ಆದರೆ ಈ ಪ್ರಯತ್ನಗಳು ಯಾವ ಪ್ರಮಾಣದಲ್ಲಿ ಎಷ್ಟರಮಟ್ಟಿಗೆ ಮಹಿಳೆಯರನ್ನು ತಲುಪಿ ಅವರಿಗೆ ಈ ತುರ್ತು ಗರ್ಭನಿರೋಧಕ ಮಾತ್ರೆಗಳು ಉಪಯುಕ್ತವಾಗುವಂತೆ ಮಾಡುವಲ್ಲಿ ಯಶಸ್ಸು ಗಳಿಸುವವೋ ಎಂಬುದನ್ನು ಇನ್ನೂ ಕಾದು ನೋಡಬೇಕಾಗಿದೆ.

ಸ್ತ್ರೀ ಕಾಂಡೋಮ್‌: ಸಾಧಕಬಾಧಕಗಳು

ಮಹಿಳೆಯರು ಉಪಯೋಗಿಸಬಹುದಾದ ಕಾಂಡೋಮ್‌ಮೊಟ್ಟಮೊದಲ ಬಾರಿಗೆ ಅಮೆರಿಕ ಹಾಗೂ ಯೂರೋಪ್‌ದೇಶಗಳಲ್ಲಿ ೧೯೯೨ ರಿಂದಲೇ ಬಳಕೆಗೆ ಬಂತು. ಭಾರತವನ್ನೂ ಒಳಗೊಂಡಂತೆ ಏಷ್ಯನ್‌ದೇಶಗಳಲ್ಲಿ ೨೦೦೦ ದಿಂದೀಚೆಗೆ ಇದನ್ನು ಪರಿಚಯಿಸಲಾಗುತ್ತಿದೆ. ನಮ್ಮ ದೇಶದ ಸ್ವಯಂ ಸೇವಾ ಸಂಸ್ಥೆಯಾದ ಪಾಪ್ಯುಲೇಷನ್‌ಸರ್ವಿಸಸ್‌ಇಂಟರ್‌ನ್ಯಾಷನಲ್‌, ೨೦೦೪ರಲ್ಲಿ ಸ್ತ್ರೀಕಾಂಡೋಮ್‌ಅನ್ನು ಮುಂಬೈನ ಲೈಂಗಿಕ ಕಾರ್ಯಕರ್ತೆಯರಿಗೆ ಹಂಚಿ, ಇದನ್ನು ಬೇಡದ ಬಸಿರು ಹಾಗೂ ಅವರಿಗೆ ಪ್ರಾಣಾಂತಿಕವಾಗಿರುವ ಎಚ್‌.ಐ.ವಿ. ಹಾಗೂ ಏಡ್ಸ್‌ನಿಂದ ರಕ್ಷಿಸುವ ಸಾಧನವನ್ನಾಗಿ ಹೇಗೆ ಉಪಯೋಗಿಸಬಹುದು ಎನ್ನುವುದರ ಅರಿವನ್ನು ಉಂಟುಮಾಡುವ ಪ್ರಮುಖ ಪ್ರಯತ್ನ ಮಾಡಿತು.[2] ಆನಂತರ ೨೦೦೫ರ ಡಿಸೆಂಬರ್‌ನಲ್ಲಿ ಸರ್ಕಾರೀ ಮಾಲೀಕತ್ವದ ಹಿಂದೂಸ್ಥಾನ್‌ಲೇಟೆಕ್ಸ್‌ಲಿಮಿಟೆಡ್‌, ‘ಕಾನ್‌ಫಿಡೆಮ್‌’ (Confidem) ಎಂಬ ಹೆಸರಿನಡಿ ಸ್ತ್ರೀಕಾಂಡೋಮ್‌ಅನ್ನು ೫೦ ರೂ.ಗಳಿಗೆ ಒಂದರಂತೆ, ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೂಲತಃ ಇದನ್ನು ಇಂಗ್ಲೆಂಡಿನ ಫೀಮೇಲ್‌ಹೆಲ್ತ್‌ಕಂಪೆನಿಯು ತಯಾರಿಸಿದ್ದು, ಸದ್ಯಕ್ಕೆ, ಹಿಂದೂಸ್ಥಾನ್‌ಲೇಟೆಕ್ಸ್‌ಲಿ., ಇದನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದೆ. ೨೦೦೬ರ ಅಂತ್ಯದ ವೇಳೆಗೆ ಹಿಂದೂಸ್ತಾನ್‌ಲೇಟೆಕ್ಸ್‌ಲಿಮಿಟೆಡ್‌ಕಂಪೆನಿಯು ಇದನ್ನು ತಾನೇ ತಯಾರಿಸಿ ೫೫% ರಷ್ಟು ಬೆಲೆ ಇಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿ ಹೊಂದಿದೆ.[3]

ಸ್ತ್ರೀಕಾಂಡೋಮ್‌ಅನ್ನು ಅತ್ಯಂತ ತೆಳ್ಳಗಿರುವ, ಮೃದುವಾದ ಹಾಗೂ ವಾಸನಾರಹಿತವಾದ ಪಾರದರ್ಶಕ ಪಾಲೀಯೂರಿಥೀನ್‌ಎಂಬ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದ್ದು ಯೋನಿಯೊಳಗೆ ಸರಿಯಾಗಿ ಕೂಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಆಕಾರದಲ್ಲಿ ಪುರುಷ ಕಾಂಡೋಮ್‌ಅನ್ನೇ ಹೆಚ್ಚಾಗಿ ಹೋಲುತ್ತಿದ್ದು ಇದರ ಬಾಯಿಯ ಬಳಿ ಅತ್ಯಂತ ಮೃದುವಾದ ಬಳುಕುವ ಉಂಗುರವಿದೆ. ಇದರ ಇನ್ನೊಂದು ತುದಿ ಮುಚ್ಚಿದ್ದು ಅಲ್ಲಿ ಸಹ ಇಂತಹದ್ದೇ ಇನ್ನೊಂದು ಉಂಗುರವಿದೆ. ಇದನ್ನು ಸಂಭೋಗಕ್ಕೆ ಮೊದಲು ಯೋನಿಯೊಳಗೆ ತೂರಿಸಿ ಇರಿಸಬೇಕಾಗುತ್ತದೆ. ಇದರ ತೆರೆದ ತುದಿಯಲ್ಲಿರುವ ಉಂಗುರವು ಯೋನಿಯ ಹೊರಗೇ ಉಳಿಯುತ್ತದೆ. ಇದನ್ನು ತಯಾರಿಸಲು ಉಪಯೋಗಿಸಿರುವ ಪಾಲೀಯೂರಿಥೀನ್‌ಪುರುಷ ಕಾಂಡೋಮ್‌ಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುವ ಲೇಟೆಕ್ಸ್‌ಗಿಂತ ಬಲಿಷ್ಠವಾಗಿದ್ದು ಇದು ಹರಿದು ಹೋಗುವುದಿಲ್ಲ. ಅಲ್ಲದೆ ಪುರುಷ ಕಾಂಡೋಮ್‌ನ ಲೆಟೆಕ್ಸ್‌ಕೆಲ ಸ್ತ್ರೀ ಹಾಗೂ ಪುರುಷರಲ್ಲಿ ಒಗ್ಗದಿಕೆಯ ಅಡ್ಡಪರಿಣಾಮಗಳನ್ನು (Allergicreaction) ಉಂಟುಮಾಡಿದಂತೆ, ಸ್ತ್ರೀಕಾಂಡೋಮ್‌ನಿಂದ ಒಗ್ಗದಿಕೆಯ ಪರಿಣಾಮಗಳು ಉಂಟಾಗಿರುವುದು ಇದುವರೆವಿಗೂ ವರದಿಯಾಗಿಲ್ಲ.[4]

ಇದರ ಮುಖ್ಯ ಉಪಯುಕ್ತತೆಯೆಂದರೆ ಇದು ಸ್ತ್ರೀಯರ ನಿಯಂತ್ರಣದಲ್ಲಿರುವ ಕುಟುಂಬ ಯೋಜನಾ ವಿಧಾನವಾಗಿದ್ದು ಸ್ತ್ರೀ ಸಬಲೀಕರಣವನ್ನು ಉಂಟುಮಾಡುವ ಸಾಧನವಾಗಬಹುದಾಗಿದೆ. ಎರಡನೆಯದಾಗಿ ಇದು ಸ್ತ್ರೀದೇಹದ ಪ್ರಜನನ ವ್ಯವಸ್ಥೆಯೊಳಗೆ ಆಗಲೀ ಅಥವಾ ಚೋದನಿಗಳ ವ್ಯವಸ್ಥೆಯೊಳಗೆ ಮಧ್ಯೆ ಪ್ರವೇಶಿಸುವುದಿಲ್ಲ. ಆದ್ದರಿಂದ ಸ್ತ್ರೀಕಾಂಡೋಮ್‌ನ ಉಪಯೋಗದಿಂದಾಗಿ ಸ್ತ್ರೀ ಶಾರೀರಿಕ ವ್ಯವಸ್ಥೆಗಳೊಳಗೆ ಯಾವುದೇ ಏರುಪೇರುಗಳಾಗುವುದಿಲ್ಲ. ಮೂರನೆಯದಾಗಿ ಹಾಗೂ ಅತಿಮುಖ್ಯವಾಗಿ ಇದು ಹೆಚ್‌.ಐ.ವಿ./ಏಡ್ಸ್‌ಒಳಗೊಂಡಂತೆ ಲೈಂಗಿಕ ಸಂಪರ್ಕದಿಂದ ಉಂಟಾಗುವ ಎಲ್ಲಾ ರೀತಿಯ ಸೋಂಕುಗಳನ್ನು ಯಶಸ್ವಿಯಾಗಿ ತಡೆಗಟ್ಟುತ್ತದೆ. ಆದ್ದರಿಂದಲೇ ಇಂತಹ ಸೋಂಕುಗಳು ಹೊಸದಾಗಿ ತಗುಲಿ ಹರಡದಂತೆ ತಡೆಗಟ್ಟುವ ಸಾಧನವನ್ನಾಗಿ ಸ್ತ್ರೀಕಾಂಡೋಮ್‌ಅನ್ನು ಪ್ರಚಲಿತಗೊಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬೇಡದ ಬಸಿರುಗಳನ್ನು ತಡೆಗಟ್ಟುವಲ್ಲಿಯೂ ಇದರ ಕಾರ್ಯಕ್ಷಮತೆ ಗಣನೀಯ. ಇದನ್ನು ಉಪಯೋಗಿಸಿದ ಮಹಿಳೆಯರಲ್ಲಿ ಮೊದಲ ವರ್ಷ ೭೯% ರಷ್ಟು ಮಹಿಳೆಯರಿಗೆ ಗರ್ಭನಿರೋಧಕ ರಕ್ಷೆ ನೀಡಿದೆ. ಇದನ್ನು ಸತತವಾಗಿ ಹಾಗೂ ಸರಿಯಾಗಿ ಉಪಯೋಗಿಸಿದ ೯೫% ರಷ್ಟು ಮಹಿಳೆಯರಲ್ಲಿ ಇದು ಬೇಡದ ಬಸಿರುಗಳನ್ನು ತಡೆಗಟ್ಟಬಲ್ಲದು.೧೨ ಹಾಗೂ ಇಂದು ವಿಶ್ವಆರೋಗ್ಯ ಸಂಸ್ಥೆಯಲ್ಲಿ ಹೆಚ್‌.ಐ.ವಿ./ಏಡ್ಸ್‌ನಿಯಂತ್ರಣಕ್ಕಾಗಿ ರೂಪಿಸಿರುವ ವಿಸ್ವಸಂಸ್ಥೆಯ ಬಹುರಾಷ್ಟ್ರೀಯ ಜಂಟಿ ಕಾರ್ಯಕ್ರಮದಡಿಯಲ್ಲಿ ಇದನ್ನು ಹೆಚ್‌.ಐ.ವಿ./ಏಡ್ಸ್‌ನಿಯಂತ್ರಣಕ್ಕಾಗಿ ಮಾತ್ರವೇ ಅಲ್ಲದೆ ಸ್ತ್ರೀಪುರುಷರಿಬ್ಬರ ಲೈಂಗಿಕ ಹಾಗೂ ಪ್ರಜನನ ಆರೋಗ್ಯ ಅಗತ್ಯಗಳನ್ನು ಪೂರೈಸಬಲ್ಲ ಹೆಚ್ಚುವರಿ ಸಾಧನವನ್ನಾಗಿ ಪರಿಗಣಿಸಿ ಜನಪ್ರಿಯಗೊಳಿಸಲಾಗುತ್ತಿದೆ.10

ಆದರೆ ಭಾರತವನ್ನು ಒಳಗೊಂಡಂತೆ ಅನೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಸ್ತ್ರೀ ಕಾಂಡೋಮ್‌ನಿರೀಕ್ಷಿತ ಪ್ರಮಾಣದಲ್ಲಿ ಜನಪ್ರಿಯಗೊಂಡು ಬಳಕೆಯಾಗುತ್ತಿಲ್ಲ. ಇದಕ್ಕೆ ಇರುವ ಮುಖ್ಯ ಕಾರಣವೆಂದರೆ, ಸಾಮಾನ್ಯರಿಗೆ ಎಟುಕದ ಇದರ ಬೆಲೆ. ಭಾರತದಲ್ಲಿ ನಗರ ಪ್ರದೇಶಗಳಲ್ಲಿ ಮಾರಾಟವಾಗುತ್ತಿರುವ ಕಾನ್‌ಫಿಡೆಮ್‌ಎಂಬ ಎರಡು ಸ್ತ್ರೀಕಾಂಡೋಮ್‌ಗಳ ಒಂದು ಪ್ಯಾಕೆಟ್‌ನ ಬೆಲೆ ನೂರು ರೂಪಾಯಿಗಳು. ಇಷ್ಟು ದುಬಾರಿಯಾದ ಕಾಂಡೋಮ್‌ಅನ್ನು ಒಮ್ಮೆ ಮಾತ್ರ ಬಳಸಬಹುದು. ಇದರ ಪುನರ್‌ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್‌ಮಾಡಿಲ್ಲ. ಎರಡನೆಯದಾಗಿ ಇದನ್ನು ಉಪಯೋಗಿಸುವುದು ಸ್ತ್ರೀಯ ಕೈಯಲ್ಲಿಯೇ ಇದ್ದರೂ ಸಹ ಅವಳು ತನ್ನ ಲೈಂಗಿಕ ಸಂಗಾತಿ/ಪತಿಯ ಅನುಮತಿ/ಒಪ್ಪಿಗೆ ಇಲ್ಲದೆ, ಅವನಿಗೆ ತಿಳಿಯದಂತೆ ಉಪಯೋಗಿಸಲು ಸಾಧ್ಯವಿಲ್ಲ. ಮೂರನೆಯದಾಗಿ ಇದನ್ನು ಉಪಯೋಗಿಸುವ ವಿಧಾನ ಸಹ ಸ್ತ್ರೀಪುರುಷರಿಬ್ಬರಲ್ಲೂ ಮುಜುಗರ/ಇರಿಸು ಮುರಿಸು ಉಂಟುಮಾಡುವುದೂ ಸಹ ಇನ್ನೊಂದು ಕಾರಣವಾಗಿದೆ.

ಹೀಗೆ ಮೇಲ್ನೋಟಕ್ಕೆ ಕಾಣುವ ಕಾರಣಗಳಿಗಿಂತಾ, ಇದನ್ನು ಸ್ತ್ರೀಯರು ಉಪಯೋಗಿಸಲು ಇರುವ ಮುಖ್ಯವಾದ ಅಡ್ಡಿಯೆಂದರೆ ‘ಸಮಾಜದ ಸ್ವೀಕೃತಿ’ ಅಂದರೆ ಇದರ ಬಳಕೆಯನ್ನು ಕುಟುಂಬ ಮತ್ತು ಸಮಾಜ ಒಪ್ಪಿಕೊಳ್ಳಬೇಕಾಗಿರುವುದೇ ಆಗಿದೆ. ಮಹಿಳೆಯರು ಕಾಂಡೋಮ್‌ಬಳಸುವಂತಹ ನಿರ್ಧಾರ ತೆಗೆದುಕೊಳ್ಳಬಹುದಾದ ವಾತಾವರಣವನ್ನು ಸಮಾಜ ಕಲ್ಪಿಸಬೇಕಾಗುತ್ತದೆ. ನಮ್ಮ ದೇಶದಲ್ಲಿ ಪ್ರತಿದಿನ ಸಾವಿರಾರು ಮಂದಿಗೆ ಹೊಸದಾಗಿ ಏಡ್ಸ್‌/ಹೆಚ್‌.ಐ.ವಿ. ಯನ್ನು ಒಳಗೊಂಡಂತೆ ಲೈಂಗಿಕ ಸಂಪರ್ಕದಿಂದ ಸೋಂಕುಗಳು ತಗಲುತ್ತಿವೆ ಎಂದಾಗಲೂ ಸಹ ಪುರುಷ ಕಾಂಡೋಮ್‌ಗಳ ಬಳಕೆಯ ಬಗ್ಗೆಯೇ ಮಡಿವಂತಿಕೆ ಮಾಡುತ್ತಿರುವ ಸಮಾಜದಲ್ಲಿ ಮಹಿಳಾ ಕಾಂಡೋಮ್‌ಗಳ ಬಳಕೆಗೆ ಇರುವ ವಿರೋಧವನ್ನು ಯಾರಾದರೂ ಊಹಿಸಬಹುದಾಗಿದೆ. ಕೇಂದ್ರದ ಆರೋಗ್ಯ ಮಂತ್ರಿಗಳ ಹೇಳೆಕೆಯಂತೆಯೇ ನಮ್ಮ ದೇಶದಲ್ಲಿಂದು ೫.೨ ದಶಲಕ್ಷ ಹೆಚ್‌.ಐ.ವಿ/ಏಡ್ಸ್‌ರೋಗಿಗಳು ಇದ್ದಾರೆ ಹಾಗೂ ನಮ್ಮ ದೇಶ ಇಡೀ ವಿಶ್ವದಲ್ಲಿ ಏಡ್ಸ್‌ಪ್ರಕರಣಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ.[5] ಇನ್ನು ನಮ್ಮ ರಾಜ್ಯದಲ್ಲಿ ೫ ಲಕ್ಷ ಜನರಿಗೆ ಈ ಸೋಂಕು ತಗುಲಿದೆ ಎಂಬುದು ಸಮೀಕ್ಷೆಗಳಿಂದ ಸಾಬೀತಾಗಿದ್ದು ಇವರಲ್ಲಿ ೫೦% ರಷ್ಟು ಮಂದಿ ಮಹಿಳೆಯರೇ ಆಗಿರುವುದು ಆತಂಕಕಾರಿ ಸಂಗತಿಯಾಗಿದೆ.[6] ೨೦೦೪ರಲ್ಲಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಲೈಂಗಿಕ ಕಾರ್ಯಕರ್ತೆಯರಿಗಿಂತಾ ಗೃಹಿಣಿಯರಲ್ಲಿ ಹೆಚ್‌.ಐ.ವಿ. ಸೋಂಕು ತೀವ್ರಗತಿಯಲ್ಲಿ ಹರಡುತ್ತಾ ಇರುವುದು ಬೆಳಕಿಗೆ ಬಂದಿದೆ.[7] ಇಂತಹ ಕಟುವಾಸ್ತವತೆಗಳ ಸಂದರ್ಭದಲ್ಲಿ ಸ್ತ್ರೀಕಾಂಡೋಮ್ನ ಬಳಕೆಗೆ ಎದುರಾಗುವ ಎಲ್ಲಾ ಸವಾಲುಗಳನ್ನು ಸ್ತ್ರೀ ಸಬಲೀಕರಣದ ಹೋರಾಟದ ಭಾಗವಾಗಿಯೇ ಎದುರಿಸಬೇಕಾಗಿದೆ. ಜೊತೆಗೇ ಸ್ತ್ರೀಕಾಂಡೋಮ್‌ಗಳು ಜನಸಾಮಾನ್ಯ ಮಹಿಳೆಯರ ಕೈಗೆಟಕುವ ಬೆಲೆಯಲ್ಲಿ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುವಂತೆ ಸರ್ಕಾರ ಸಬ್ಸಿಡಿ ಇತ್ಯಾದಿ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕಾಗಿದೆ. ಹಾಗೆಯೇ ಇದರ ವಿನ್ಯಾಸವನ್ನು ಭಾರತೀಯ ಮಹಿಳೆಯರ ಶಾರೀರಿಕ ಅಳತೆಗೆ ಅನುಗುಣವಾಗಿ ಮಾರ್ಪಡಿಸುವ ದಿಕ್ಕಿನಲ್ಲೂ ಗಮನಹರಿಸಬೇಕಾಗಿದೆ.

ಪುರುಷ ಕಾಂಡೋಮ್‌ಗಳ ಬಳಕೆಗೂ ಸಹ ಹಲವಾರು ಸವಾಲುಗಳು ಮತ್ತು ಪರಿಮಿತಿಗಳಿರುವ ನಮ್ಮ ಭಾರತೀಯ ಸಂದರ್ಭದಲ್ಲಿ, ಸ್ತ್ರೀಯರು ಅವುಗಳನ್ನೆಲ್ಲಾ ಮೀರಿ ನಿಲ್ಲುವ ಮನಃಸ್ಥಿತಿ ಹಾಗೂ ಸಾಮರ್ಥ್ಯಗಳನ್ನು ಪಡೆದುಕೊಳ್ಳಬೇಕಾಗಿದೆ. ಜೊತೆಗೇ ತನ್ನ ವೈಯಕ್ತಿಕ ಬದುಕು, ಲೈಂಗಿಕ ಸಂಗಾತಿ/ಪತಿಯೊಂದಿಗಿನ ಲೈಂಗಿಕ ಚಟುವಟಿಕೆಯ ಬಗ್ಗೆ ಎಚ್ಚರಿಕೆವಹಿಸುವ ಜವಾಬ್ದಾರಿಯೂ ಸಹ ಸ್ತ್ರೀಯರ ಮೇಲೆಯೇ ಇದೆ. ಈ ನಿಟ್ಟಿನಲ್ಲಿ ಸ್ತ್ರೀಪುರುಷರಿಬ್ಬರಲ್ಲೂ ಅರಿವು, ಆರೋಗ್ಯಕರ ಚಿಂತನೆ ಮತ್ತು ಕಾಳಜಿಗಳನ್ನು ಬೆಳೆಸುವಂತಹ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಾದ ಅಗತ್ಯವಿದೆ.

ಇದುವರೆವಿಗೂ ಪರಿಶೀಲಿಸಿದ ಗರ್ಭನಿರೋಧಕಗಳ ಬಳಕೆ ಹಾಗೂ ಅವುಗಳಲ್ಲಿ ಅತ್ಯಾಧುನಿಕವಾದವುಗಳ ಸಾಧಕ ಬಾಧಕಗಳ ವಿವರಣಾತ್ಮಕ ವಿಶ್ಲೇಷಣೆಯಿಂದ ಒಂದು ವಿಷಯ ಸುಸ್ಪಷ್ಟವಾಗುತ್ತದೆ. ಅದೇನೆಂದರೆ ನಮ್ಮ ದೇಶದ ಮಹಿಳೆಯರಿಗೆ ನಿಜವಾದ ಅರ್ಥದಲ್ಲಿ ಪ್ರಜನನ ಮತ್ತು ಲೈಂಗಿಕ ಆರೋಗ್ಯದ ಹಕ್ಕುಗಳು ಸಿಗುವುದಿರಲಿ ಅವುಗಳ ಬಗ್ಗೆ ಪೂರ್ಣ ಮಾಹಿತಿಯೂ ಇಲ್ಲ ಎನ್ನುವುದೇ ಆಗಿದೆ. ಈ ಪರಿಸ್ಥಿತಿಯ ಪೂರ್ಣ ಅರಿವಿರುವ ಸ್ತ್ರೀ ಆರೋಗ್ಯ ಚಳವಳಿಯು, ಮಹಿಳೆಯರಲ್ಲಿ ಇಂತಹ ಅರಿವನ್ನು ಮೂಡಿಸಲು ಹಾಗೂ ಸ್ತ್ರೀಯರ ಪ್ರಜನನ ಹಕ್ಕುಗಳಿಗಾಗಿ ಹೋರಾಟ ನಡೆಸಿದೆ. ಈ ಸಂದರ್ಭದಲ್ಲಿ ಸ್ತ್ರೀವಾದಿ ಚಳವಳಿಯಾಗಲೀ ವಿಶೇಷತಃ ಸ್ತ್ರೀ ಆರೋಗ್ಯ ಚಳವಳಿಯಾಗಲೀ, ಗರ್ಭ ನಿರೋಧಕಗಳ ಬಳಕೆಯನ್ನು ಕುರಿತಂತೆ ಸ್ತ್ರೀಯರ ಪ್ರಜನನ ಮತ್ತು ಲೈಂಗಿಕ ಆರೋಗ್ಯಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಯಶಸ್ವಿಯಾಗಿ ನಡೆಸಬೇಕಾಗಿದ್ದಲ್ಲಿ ರೂಪಿಸಿಕೊಳ್ಳಬೇಕಾದ ಕಾರ್ಯತಂತ್ರದ (Strategies) ಬಗ್ಗೆ ಒಂದು ಕಿರುನೋಟ ಇಲ್ಲಿ ಅಪ್ರಸ್ತುತವಾಗಲಾರದು.

ಸ್ತ್ರೀಯರ ಪ್ರಜನನ ಮತ್ತು ಲೈಂಗಿಕ ಆರೋಗ್ಯದ ಹಕ್ಕುಗಳಿಗಾಗಿ ಕಾರ್ಯತಂತ್ರಗಳು:

ಹಿನ್ನೆಲೆ

ಕೈರೋ ಮತ್ತ ಬೀಜಿಂಗ್‌ನಲ್ಲಿ ನಡೆದ ಎರಡು ಅಂತರರಾಷ್ಟ್ರೀಯ ಮಹಿಳಾ ಅಧಿವೇಶನಗಳ ಫಲಶ್ರುತಿಯಾಗಿ ಮಹಿಳೆಯರ ಪ್ರಜನನ ಆರೋಗ್ಯ ಮತ್ತು ಹಕ್ಕುಗಳನ್ನು ಕುರಿತ ಸಮಗ್ರ ಪರಿಕಲ್ಪನೆ ಹಾಗೂ ಸಮಗ್ರವಾಗಿ ಜಾರಿಗೆ ತರಬೇಕಾಗುವ ಕಾರ್ಯಯೋಜನೆಯ ಕರಡು ಹೊರಹೊಮ್ಮಿದೆ. ಸ್ತ್ರೀಯರ ಪ್ರಜನನ ಆರೋಗ್ಯ ಮತ್ತು ಹಕ್ಕುಗಳ ಬಗ್ಗೆ ಒಂದು ಪೂರ್ಣವಾದ ಧೋರಣೆ ಈ ಅಧಿಕೃತ ಕಾರ್ಯಯೋಜನೆಯ ಕರಡಿನಲ್ಲಿದೆ (Plan of action). ವಿಶ್ವ ಮಹಿಳಾ ಚಳವಳಿಯ ತೀವ್ರ ಪ್ರಯತ್ನದಿಂದಾಗಿಯೇ ಇಂತಹ ಸ್ತ್ರೀಪರ ಧೋರಣೆಯುಳ್ಳ ಅಧಿಕೃತವಾಗಿ ಜಾರಿಗೆ ತರಬೇಕಾಗುವ ಕಾರ್ಯಯೋಜನೆಯನ್ನು ರೂಪಿಸಲು ಸಾಧ್ಯವಾಯಿತು. ಮಹಿಳೆಯರ ಪ್ರಜನನ ಹಾಗೂ ಲೈಂಗಿಕ ಆರೋಗ್ಯದ ಹಕ್ಕುಗಳನ್ನು ಸಾಕಾರಗೊಳಿಸಬೇಕಾಗಿದ್ದಲ್ಲಿ ಜಾರಿಗೆ ತರಬೇಕಾದ ಕಾರ್ಯನೀತಿ ಹಾಗೂ ಕಾರ್ಯಕ್ರಮಗಳ ಚೌಕಟ್ಟನ್ನು ಈ ಕರಡು ಸ್ಪಷ್ಟವಾಗಿ ರೂಪಿಸಿಕೊಟ್ಟಿದೆ. ಆರೋಗ್ಯ ಹಾಗೂ ಪ್ರಜನನ ಹಕ್ಕುಗಳು ಸ್ತ್ರೀಯರಿಗೆ ದಕ್ಕುವಂತೆ ಮಾಡಲು ರಾಷ್ಟ್ರೀಯ ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ತಮ್ಮ ಕಾರ್ಯನೀತಿಗಳನ್ನು ಮಾರ್ಪಡಿಸಿಕೊಳ್ಳುವಂತೆ ಈ ಅಧಿಕೃತ ಕಾರ್ಯಯೋಜನೆಯ ಕರಡು ಒತ್ತಾಯಿಸಿದೆ. ಇದರಲ್ಲಿರುವ ಕಾರ್ಯನೀತಿ ಮತ್ತು ಕಾರ್ಯಕ್ರಮಗಳ ಚೌಕಟ್ಟಿನಲ್ಲಿ ಸ್ತ್ರೀ ಪ್ರಜನನ ಆರೋಗ್ಯದ ಹಕ್ಕುಗಳು ಜಾರಿಗೆ ಬರುವುದನ್ನು ಇಂದು ವಿಶ್ವಮಹಿಳಾ ಚಳವಳಿ ಖಾತರಿಪರಿಸಿಕೊಳ್ಳಬೇಕಾಗಿದೆ.

ಸ್ತ್ರೀಯರ ಲೈಂಗಿಕತೆ ಮತ್ತು ಕೌಟುಂಬಿಕ ಸಂರಚಣೆಗಳನ್ನು ನಿಯಂತ್ರಿಸಿ ಆಳುತ್ತಿರುವ ಇಂದಿನ ಪಿತೃಪ್ರಧಾನ ವ್ಯವಸ್ಥೆಯಲ್ಲಿರುವ ಲಿಂಗತ್ವ ಸಂಬಂಧಗಳಲ್ಲಿ (Gender relations) ಮತ್ತು ಸೈದ್ಧಾಂತಿಕ ನಿಲುವುಗಳಲ್ಲಿ ಬದಲಾವಣೆಗಳನ್ನು ತರುವುದರಿಂದ ಆರಂಭಿಸಿ ಸಮಗ್ರ ಆರೋಗ್ಯ ಪಾಲನೆ ಹಾಗೂ ಪ್ರಜನನ ಆರೋಗ್ಯ ಸೇವಾ ಸೌಲಭ್ಯಗಳನ್ನು ಮಹಿಳೆಯರಿಗೆ ಒದಗಿಸುವಂತಹ ಕಾರ್ಯನೀತಿ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರುವಂತೆ ವಿಶ್ವದ ರಾಷ್ಟ್ರಗಳ ಸರ್ಕಾರಗಳ ಮೇಲೆ ಒತ್ತಡ ತರುವವರೆಗೂ ಹೊಣೆಯರಿತ ಸಂತಾನೋತ್ಪತ್ತಿಯ ನಡವಳಿಕೆಗೆ ಅಗತ್ಯವಾದ ಶಿಕ್ಷಣ ನೀಡುವಂತೆ ಹಾಗೂ ಸ್ತ್ರೀಯರ ಮೇಲಣ ಹಿಂಸೆ/ದೌರ್ಜನ್ಯಗಳನ್ನು ತಡೆಗಟ್ಟಿ ವಿರೋಧಿಸುವ ಕ್ರಮಗಳನ್ನು ಕೈಗೊಳ್ಳುವಂತೆ ಸಹ ಸರ್ಕಾರಗಳ ಮೇಲೆ ಪ್ರಭಾವ ಬೀರುವ ಜವಾಬ್ದಾರಿಯು ಸ್ತ್ರೀವಾದಿ ಚಳವಳಿಗೆ ಇದೆ. ಅಲ್ಲದೆ ಇಂದು ಸ್ತ್ರೀವಾದಿ ಚಳವಳಿ ವಿಶೇಷತಃ ಸ್ತ್ರೀ ಆರೋಗ್ಯ ಚಳವಳಿ ಇಂತಹ ಒತ್ತಡ ಹೇರಬೇಕಾಗಿದೆ. ಒಟ್ಟಿನಲ್ಲಿ ಇಂದು ವಿಶ್ವ ಸ್ತ್ರೀವಾದೀ ಚಳವಳಿಯು ವಿಶ್ವಜನತೆಯ ಮೂಲಭೂತ ಅಗತ್ಯಗಳನ್ನು ಪೂರೈಸಲು ಹಾಗೂ ಈಗಿನ ಮುಕ್ತ ಮಾರುಕಟ್ಟೆಯ ಆಕ್ರಮಣಶೀಲ ವ್ಯವಸ್ಥೆಯನ್ನು ಹೆಚ್ಚು ಮಾನವೀಯತೆಯನ್ನುಳ್ಳ ವ್ಯವಸ್ಥೆಯನ್ನಾಗಿಸಲು ಈಗ ಜಾರಿಯಲ್ಲಿರುವ ಅಭಿವೃದ್ಧಿ ಕಾರ್ಯತಂತ್ರಗಳಿಗೆ (Strategies) ಪರ್ಯಾಯವಾಗಿ ಸ್ತ್ರೀಪರವಾದ, ಪರಿಸರ ಪರವಾದ ಹಾಗೂ ಬಹುಸಂಖ್ಯಾತರಾಗಿರುವ ಬಡವರ ಪರವಾದ ಅಭಿವೃದ್ಧಿ ಮಾದರಿಗಳನ್ನು ಸರಕಾರಗಳು ಅಳವಡಿಸಿಕೊಳ್ಳುವಂತೆ ಹೋರಾಟ ನಡೆಸಬೇಕಾಗಿದೆ.

ಅಸಮಾನತೆಯ ಲಿಂಗತ್ವ ಸಂಬಂಧಗಳಿಂದಾಗಿ (Unequal gender relations) ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ತಮ್ಮ ದೇಹದ ಮೇಲೆಯೇ ಹಕ್ಕಿಲ್ಲದಿರುವುದಕ್ಕೆ ನಮ್ಮ ಸಂಸ್ಕೃತಿ ಹಾಗೂ ಸಮಾಜದ ಸಂರಚಣೆಗಳಲ್ಲಿಯೇ ಇರುವ ಕಾರಣಗಳ ಬಗ್ಗೆ ಎಲ್ಲರ ಗಮನ ಸೆಳೆಯಬೇಕಾಗಿದೆ. ಸ್ತ್ರೀಯರಿಗೆ ಪ್ರಜನನ ಹಕ್ಕುಗಳು ಇರಬೇಕೆನ್ನುವ ಧೋರಣೆಯನ್ನುಳ್ಳ ಯಾವುದೇ ವಿಶ್ಲೇಷಣೆಯು ಸಂತಾನೋತ್ಪತ್ತಿಯ ಮೇಲೆ ಪ್ರಭಾವ ಬೀರುವ ಎಲ್ಲಾ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ಆಯಾಮಗಳನ್ನು ತನ್ನ ವಿಶ್ಲೇಷಣೆಯ ಪರೀಧಿಯಲ್ಲಿ ಸೇರಿಸಿಕೊಳ್ಳಲೇಬೇಕು. ಏಕೆಂದರೆ, ಮಹಿಳೆಯರ ಅದರಲ್ಲೂ ಬಡಮಹಿಳೆಯರು ತಮ್ಮ ಲೈಂಗಿಕತೆ ಮತ್ತು ಫಲವತ್ತತೆಗಳ ಮೇಲೆ ಸಾಧಿಸಬೇಕಾಗಿರುವ ನಿಯಂತ್ರಣ, ಆಯ್ಕೆಗಳನ್ನು ಹಾಗೂ ಸ್ವನಿರ್ಧಾರಗಳ ಹಕ್ಕುಗಳನ್ನು ಅವರ ಬದುಕಿನ ಸಂದರ್ಭದ ಹಿನ್ನೆಲೆಯಲ್ಲಿಯೇ ಪರಿಗಣಿಸಬೇಕಾಗುತ್ತದೆ.

ಯಾವುದೇ ಸ್ತ್ರೀ, ತನ್ನ ಸ್ವಾತಂತ್ರ್ಯವನ್ನು ಹಾಗೂ ತನ್ನ ದೇಹದ ಸಮಗ್ರತೆಯನ್ನು (integrity) ಕಾಪಾಡಿಕೊರ್ಳಳಬೇಕೆಂಬ ಸಿದ್ಧಾಂತದ ಪ್ರಕಾರ ಸ್ತ್ರೀಯರ ಮಾನವ ಹಕ್ಕುಗಳಾದ ಮನೆ, ಶಿಕ್ಷಣ, ಉದ್ಯೋಗ, ಆಸ್ತಿಯ ಹಕ್ಕು, ಸಮಾನ ಕಾನೂನಿನ ಹಕ್ಕುಗಳು ಇತ್ಯಾದಿಗಳೊಂದಿಗೇ ಸಮಗ್ರವಾದ ಪ್ರಜನನ ಆರೋಗ್ಯ ಸೇವಾ ಸೌಲಭ್ಯಗಳನ್ನೂ ಸ್ತ್ರೀಯರ ಹಕ್ಕು ಎಂದೇ ಪರಿಗಣಿಸಬೇಕೆನ್ನುವುದು ಹೊಸ ಪ್ರಜನನ ತಾಂತ್ರಿಕತೆಗಳ ಬಗ್ಗೆ ಮಾನವ ಶಾಸ್ತ್ರೀಯ ಮಹಿಳಾ ದೃಷ್ಟಿಕೋನದಿಂದ ಅಧ್ಯಯನ ಮಾಡಿರುವ ಗುಪ್ತಾ (೨೦೦೦)ರವರ ಅಭಿಪ್ರಾಯವಾಗಿದೆ. ಹೀಗೆ ವಿಶ್ವದಲ್ಲಿ ಮಹಿಳೆಯರ ಪ್ರಜನನ ಹಕ್ಕುಗಳಿಗಾಗಿ ನಡೆಯುತ್ತಿರುವ ಸಂಘರ್ಷವು ಹೆಣ್ಣನ್ನು ಲೈಂಗಿಕ ವಸ್ತುವಿನಂತೆ ಹಾಗೂ ಸಂತಾನೋತ್ಪತ್ತಿಯ ಯಂತ್ರದಂತೆ ನೋಡುವುದರ ವಿರುದ್ಧ, ವರ್ಗಬೇಧಗಳ ವಿರುದ್ಧ ಹಾಗೂ ಮುಕ್ತ ಮಾರುಕಟ್ಟೆಯ ವಿರುದ್ಧ ನಡೆಯುತ್ತಿರುವ ಹಲವಾರು ಹೋರಾಟಗಳೊಂದಿಗೇ ಹೆಣೆದುಕೊಂಡಿದೆ. ಕಡಿಮೆ ಜನಸಂಖ್ಯೆಯಿದ್ದಲ್ಲಿ ಸಂಪನ್ಮೂಲಗಳ (ಅಂದರೆ ಆಹಾರ, ವಸತಿ, ವಾಹನ, ಇಂಧನ, ಖನಿಜಗಳು, ವಿದ್ಯುತ್‌ಇತ್ಯಾದಿ) ಬಳಕೆ ಕಡಿಮೆಯಾಗುತ್ತದೆ ಎಂಬ ವಾದವು ಸುಳ್ಳು ಎಂದು ಇಂದು ಸಾಬೀತಾಗಿದೆ. ಏಕೆಂದರೆ ವಿಶ್ವದ ಉತ್ತರಾರ್ಧಗೋಳದಲ್ಲಿರುವ ಪ್ರದೇಶಗಳ ಅತಿ ಶ್ರೀಮಂತ ಜನರು, ಹೆಚ್ಚು ಆಹಾರ, ವಸತಿ, ಬಟ್ಟೆ, ಇಂಧನ, ಆರೋಗ್ಯ ಸೌಲಭ್ಯಗಳ ಬಜೆಟ್‌ಹಾಗೂ ನೈಸರ್ಗಿಕ ಸಂಪನ್ಮೂಲಗಳಾದ ನೀರು, ನೆಲ, ಖನಿಜ, ಇಂಧನ ಇತ್ಯಾದಿಗಳನ್ನು ವಿಪರೀತವಾಗಿ ಬಳಸುತ್ತಿದ್ದು ಜಗತ್ತಿನ ಬಹುಸಂಖ್ಯಾತ ಬಡಜನರಿಗೆ ಬದುಕಲು ಬೇಕಾಗುವ ಸಂಪನ್ಮೂಲಗಳ ಖಜಾನೆಯನ್ನು ವೇಗವಾಗಿ ಬರಿದು ಮಾಡುತ್ತಿದ್ದಾರೆ.

ಹಾಗಾಗಿ, ಇಂದು ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ಇನ್ನಿತರ ಸಂಪತ್ತನ್ನು ಬಳಸಿದ ಹಾಗೆಲ್ಲ ಮತ್ತೆ ನಿಸರ್ಗಕ್ಕೆ ಅವನ್ನು ನಿರಂತರವಾಗಿ ಹಿಂದಿರುಗಿಸಬಲ್ಲ ಹಾಗೂ ಸರ್ವರಿಗೂ ಅವರವರ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿಯ ಫಲಗಳು ದೊರಕುವಂತೆ ಮಾಡಬಲ್ಲ ಅಭಿವೃದ್ಧಿ ಮಾದರಿಗಳನ್ನು ಅಳವಡಿಸಿಕೊಳ್ಳಬೇಕಾಗುವ ಅಗತ್ಯವನ್ನು ೧೯೯೮ರ ಮಾನವ ವಿಕಾಸ ವರದಿ ಎತ್ತಿತೋರಿದೆ. ಆದ್ದರಿಂದಲೇ ಏನೋ ಇಂದು ಅನೇಕ ರಾಷ್ಟ್ರಗಳ ಸರಕಾರೀ ಹಾಗೂ ಸಾರ್ವಜನಿಕ ಸಂಸ್ಥೆಗಳ ಅಧಿಕೃತ ದಾಖಲೆಗಳಲ್ಲಿ ಈ ವಾದಕ್ಕೆ ಸೈದ್ಧಾಂತಿಕ ಬೆಂಬಲವಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಇಂತಹ ಜನಪರ, ಸ್ತ್ರೀಪರ ಹಾಗೂ ಪರಿಸರಪರ ಕಾರ್ಯನೀತಿಗಳನ್ನು ಎಂದು ಮತ್ತು ಹೇಗೆ ಸರ್ಕಾರಗಳು ನಿಜವಾಗಿ ಕಾರ್ಯರೂಪಕ್ಕೆ ತರುತ್ತವೆಯೋ, ಇಲ್ಲವೋ ಎಂಬುದನ್ನು ಕಾದುನೋಡಬೇಕಾಗಿದೆ.

ಸೈದ್ಧಾಂತಿಕ ಹಾಗೂ ವ್ಯಾವಹಾರಿಕ ಮಟ್ಟಗಳಲ್ಲಿ ಸ್ತ್ರೀಯರ ಪ್ರಜನನ ಹಕ್ಕುಗಳನ್ನು ಜಾರಿಗೆ ತರಲು ಅಗತ್ಯವಾದ ಕೆಲವು ಕಾರ್ಯತಂತ್ರಗಳನ್ನು ಗುಪ್ತಾರವರು (೨೦೦೦)1 ಚರ್ಚಿಸಿದ್ದು ಅವುಗಳನ್ನಿಲ್ಲಿ ಸಂಕ್ಷಿಪ್ತವಾಗಿ ಪಟ್ಟಿ ಮಾಡಲಾಗಿದೆ.

ಸೈದ್ಧಾಂತಿಕ ಹಂತದ ಕಾರ್ಯತಂತ್ರಗಳು

ಸೈದ್ಧಾಂತಿಕ ನೆಲೆಯಲ್ಲಿನ ಕಾರ್ಯತಂತ್ರಗಳು ಯಶಸ್ವಿಯಾಗಲು ಶಿಕ್ಷಣ, ಮಾಹಿತಿ ಮತ್ತು ಸಂವಹನಗಳು ಅತ್ಯಗತ್ಯವಾದ ಅಂಶಗಳಾಗಿವೆ ಎಂಬುದನ್ನು ಮೊಟ್ಟ ಮೊದಲಿಗೆ ಗಮನಿಸಬೇಕು.

 • ಹೆಚ್ಚುತ್ತಲೇ ಇರುವ ಹಸಿವು, ಬಡತನ ಮತ್ತು ಪರಿಸರ ಪ್ರದೂಷಣೆಗಳಿಗೂ ಏರುತ್ತಲೇ ಇರುವ ಜನಸಂಖ್ಯೆಗೂ ಇರುವ ಗಾಢವಾದ ಕಾರ್ಯಕಾರಣ ಸಂಬಂಧವನ್ನು ಅನಾವರಣಗೊಳಿಸಬೇಕು.
 • ಸ್ತ್ರೀಯರ ಫಲವಂತಿಕೆ ಮತ್ತು ಆರೋಗ್ಯದ ಕಾಳಜಿಗಳನ್ನು ಅವರ ಲೈಂಗಿಕತೆ, ಫಲವತ್ತತೆ ಮತ್ತು ಸಂತಾನೋತ್ಪತ್ತಿಯ ಬಗ್ಗೆ ಅವರಿಗೆ ಇರಬೇಕಾದ ಸ್ವನಿರ್ಣಯದ ಹಕ್ಕುಗಳೊಂದಿಗೆ ಜೋಡಿಸಿ ಅವುಗಳಿಗಿರುವ ಪಾರಸ್ಪರಿಕ ಸಂಬಂಧವನ್ನು ಜಾಹೀರುಗೊಳಿಸಬೇಕು.
 • ಸ್ತ್ರೀಪುರುಷರ ನಡುವೆ ಹಾಗೂ ವೈದ್ಯಕೀಯ ಸೇವಾ ಸೌಲಭ್ಯಗಳನ್ನು ಉಪಯೋಗಿಸುವ ಸ್ತ್ರೀಯರು ಮತ್ತು ವೈದ್ಯಕೀಯ/ಅರೆ ವೈದ್ಯಕೀಯ ಸಿಬ್ಬಂದಿಗಳ ನಡುವೆ ಇರುವ ಅಧಿಕಾರದ ಅಸಮಾನತೆ/ವ್ಯತ್ಯಾಸಗಳ ಬಗ್ಗೆ ಗಮನ ಸೆಳೆಯಬೇಕು.
 • ಜನಸಾಮಾನ್ಯರನ್ನು ಘನತೆಯುಳ್ಳ ಮಾನವರಂತೆ ಗುರ್ತಿಸಿ ನಡೆಸಿಕೊಳ್ಳಬಲ್ಲ ಹಾಗೂ ಜೈವಿಕ ಬದುಕನ್ನು (Organic life) ಗೌರವಿಸುವಂತಹ ಸ್ತ್ರೀವಾದಿ ವೈಜ್ಞಾನಿಕ ಧೋರಣೆಗಳನ್ನು ಅಳವಡಿಸಿಕೊಳ್ಳುವಂತೆ ಸಂಬಂಧಿಸಿದವರ ಮೇಲೆ ಒತ್ತಡ ತರಬೇಕು. ಏಕೆಂದರೆ ಈಗಿರುವ ವೈಜ್ಞಾನಿಕ ಧೋರಣೆಗಳಲ್ಲಿ ಜನಸಾಮಾನ್ಯರನ್ನು ವಾಣಿಜ್ಯ ಲಾಭ, ಅಧಿಕಾರ ಹಾಗೂ ನಿಯಂತ್ರಗಳ ಸಾಧನಗಳನ್ನಾಗಿ ಪರಿಗಣಿಸುವ ಪ್ರವೃತ್ತಿ ಬೆಳೆಯುತ್ತಿದೆ.
 • ಜ್ಞಾನದ ಇಂದಿನ ರಾಜಕೀಯವನ್ನು (Politics of Knowledge)ಧೈರ್ಯವಾಗಿ ಪ್ರಶ್ನಿಸಬೇಕಾಗಿದೆ. ಜ್ಞಾನವೆಂದರೆ ಏನು, ಜ್ಞಾನ ಪಡೆದಿರುವವರು ಹಾಗೂ ಪಡೆಯಲಿರುವವರು ಯಾರು ಹಾಗೂ ಏಕೆ ಕೆಲವು ಬಗೆಯ ಜ್ಞಾನಗಳನ್ನು ಅಲಕ್ಷಿಸಿ ಮೂಲೆಗುಂಪು ಮಾಡಲಾಗುತ್ತಿದೆ ಎಂಬುದನ್ನು ಪ್ರಶ್ನಿಸಬೇಕಾಗಿದೆ. ಜನಸಾಮಾನ್ಯರ ಅದರಲ್ಲಿಯೂ ಮಹಿಳೆಯರ ಅನುಭವಾತ್ಮಕ ಜ್ಞಾನವನ್ನು ಅಪಮೌಲ್ಯಗೊಳಿಸಲಾಗುತ್ತಿರುವುದನ್ನು ಪ್ರಶ್ನಿಸಬೇಕಾಗಿದೆ.

ವ್ಯಾವಹಾರಿಕ ಸಾಧ್ಯತೆಯ ಕಾರ್ಯತಂತ್ರಗಳು (Strategies at practical level)

 • ಮೊದಲನೆಯದಾಗಿ ಪ್ರಜನನ ಹಕ್ಕುಗಳನ್ನು ಪಡೆದು ಅದನ್ನು ಚಲಾಯಿಸುವಲ್ಲಿ ಜ್ಞಾನದ/ಮಾಹಿತಿಯ ಪಾತ್ರ ಬಹಳ ದೊಡ್ಡದು. ಆದ್ದರಿಂದ ತಮ್ಮ ಫಲವಂತಿಕೆಯನ್ನು ಸುರಕ್ಷಿತವಾದ ರೀತಿಯಲ್ಲಿ ತೃಪ್ತಿಕರವಾಗಿ ನಿರ್ವಹಿಸಲು ಸ್ತ್ರೀಯರಿಗೆ ಅಗತ್ಯವಾದ ಸರಿಯಾದ ಮಾಹಿತಿಯನ್ನು ನೀಡಬೇಕು. ಏಕೆಂದರೆ ಇಂದು ಸಂತಾನ ಪಡೆಯಲಾಗಲೀ ಸಂತಾನೋತ್ಪತ್ತಿಯನ್ನು ತಡೆಯಲಾಗಲೀ ಸ್ತ್ರೀಯರ ಮೇಲೆ ನಡೆಯುತ್ತಿರುವ ಶಸ್ತ್ರಚಿಕಿತ್ಸೆಗಳ ಬಗ್ಗೆ ಅವರ ದೇಹದಲ್ಲಿ ಅಳವಡಿಸಲಾಗುತ್ತಿರುವ ಚೋದನಿಯುಕ್ತ ಗರ್ಭನಿರೋಧಕಗಳನ್ನು ಕುರಿತಂತೆ ಹಾಗೂ ಅಂತಹ ಗರ್ಭನಿರೋಧಕ ಸಾಧನಗಳು ಸ್ತ್ರೀ ಶರೀರದ ನಿಸರ್ಗ ಸಹಜ ವ್ಯವಸ್ಥೆಯಲ್ಲಿ ಮಧ್ಯೆ ಪ್ರವೇಶಿಸುವುದರಿಂದ (Interfere) ಉಂಟಾಗಬಹುದಾದ/ ಉಂಟಾಗಿರುವ ಅಡ್ಡ ಪರಿಣಾಮಗಳ ಬಗ್ಗೆ ಮಹಿಳೆಯರಿಗೆ ಪೂರ್ಣ ಮಾಹಿತಿ ಇರಬೇಕಾಗಿರುವುದು ಅಗತ್ಯ. ಇಂತಹ ಮಾಹಿತಿ ಮತ್ತು ತಿಳುವಳಿಕೆಯನ್ನು ಸ್ತ್ರೀಯರಿಗೆ ನೀಡಿ ಅವರಿಗೆ ತಮಗೆ ಸೂಕ್ತವೆನಿಸಿದ ಸುರಕ್ಷಿತ ವಿಧಾನಗಳ ಆಯ್ಕೆಯ ಅವಕಾಶ ಹಾಗೂ ಅಧಿಕಾರ ನೀಡುವುದು ಸ್ತ್ರೀಯರ ಆರೋಗ್ಯ ಸಬಲೀಕರಣಕ್ಕೆ ಅತೀ ಅವಶ್ಯಕ. ಇಂತಹ ಅರಿವನ್ನು ಸಂಬಂಧಿಸಿದ ಸ್ತ್ರೀಯರಲ್ಲಿ ಅಷ್ಟೇ ಅಲ್ಲದೆ ಅವರ ತಾಯಿಯವರಿಗೆ, ಅತ್ತೆಗೆ, ಅಜ್ಜಿಗೆ, ಪ್ರಜನನ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸುವವರಿಗೆ ಸಹ ನೀಡಬೇಕಾಗಿದೆ. ಸಾರ್ವಜನಿಕರ ಅಭಿಪ್ರಾಯಗಳನ್ನು ರೂಢಿಸಿ, ನಿಯಂತ್ರಿಸಬಲ್ಲ ಧಾರ್ಮಿಕ ಮುಖಂಡರಿಗೆ ಹಾಗೂ ರಾಜಕೀಯ ಜನನಾಯಕರುಗಳಿಗೂ ಸಹ ಇಂತಹ ಅರಿವು ನೀಡುವ ಅಗತ್ಯವಿದೆ. ಎಲ್ಲರಿಗಿಂತಾ ಮುಖ್ಯವಾಗಿ ಕುಟುಂಬದ ಪುರುಷ ಸದಸ್ಯರುಗಳಲ್ಲಿ ಇಂತಹ ಮಾಹಿತಿ/ಜ್ಞಾನ ಉಂಟುಮಾಡುವುದು ಬಹಳ ಮುಖ್ಯ. ಪ್ರಾಥಮಿಕ ಆರೋಗ್ಯ ಸೇವಾ ಕಾರ್ಯಕ್ರಮಗಳಲ್ಲಿ ಹಾಗೂ ಯುವಜನತೆಗೆ ನೀಡಲಾಗುವ ಲೈಂಗಿಕ ಶಿಕ್ಷಣದಲ್ಲಿ ಇಂತಹ ಅರಿವನ್ನುಂಟು ಮಾಡುವಂತಹ ರೀತಿಯ ಶಿಕ್ಷಣ ಸಾಧನ ಸಾಮಗ್ರಿಗಳನ್ನು ರೂಪಿಸಬೇಕಾಗಿದೆ. ಜನಸಂಖ್ಯಾ ಹೆಚ್ಚಳಕ್ಕೆ ನಿಜವಾದ ಅಭಿವೃದ್ಧಿಯೇ ಪರಿಹಾರವೆನ್ನುವುದು ಕಾರ್ಯನೀತಿಗಳನ್ನು ರೂಪಿಸುವವರಿಗೆ ಮನದಟ್ಟು ಮಾಡಿಸಬೇಕಾಗಿದೆ. ಉದಾಹರಣೆಗೆ ಜನಸಂಖ್ಯೆಯನ್ನು ನಿಯಂತ್ರಿಸಲು ಇಂತಿಷ್ಟು ಜನರಿಗೆ ಇಂತಿಷ್ಟು ಕುಟುಂಬ ಯೋಜನಾ ವಿಧಾನಗಳನ್ನು ಅಳವಡಿಸಬೇಕೆಂಬ ಗುರಿಗಳನ್ನುಳ್ಳ ಕಾರ್ಯಕ್ರಮಗಳಿಗೆ ಪ್ರತಿಯಾಗಿ ಸರ್ವರಿಗೂ ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ದೊರೆಯುವಂತೆ ಮಾಡುವ, ಸಂಪೂರ್ಣ ಸಾಕ್ಷರತೆಯನ್ನು ಸಾಧಿಸುವ, ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಗುರಿಗಳನ್ನುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸರ್ಕಾರದ ಕಾರ್ಯನೀತಿಗಳನ್ನು ರೂಪಿಸುವವರ ಮೇಲೆ ಪ್ರಭಾವ ಬೀರಬೇಕಾಗಿದೆ.
 • ಇನ್ನು ಸಾಮಾಜಿಕ ಮತ್ತು ಆರ್ಥಿಕ ವಲಯಗಳಲ್ಲಿ ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾತಂತ್ರ್ಯ, ಗುಣಮಟ್ಟದ ಆರೋಗ್ಯ ಸೇವಾ ಹಾಗೂ ಶಿಶುಪಾಲನಾ ಸೌಲಭ್ಯಗಳು ಮತ್ತು ಅಭಿವೃದ್ಧಿಯ ಎಲ್ಲಾ ಫಲಗಳು ಸ್ತ್ರೀಯರಿಗೂ ಸಿಗಬೇಕಾದ ಅಗತ್ಯವನ್ನು ಇಂದು ಬಲವಾಗಿ ಪ್ರತಿಪಾದಿಸಬೇಕಾಗಿದೆ.
 • ಸ್ತ್ರೀ ಜೀವನ ಚಕ್ರದ ಅವಧಿಯ ಪೂರ್ತಿ ಅವರ ಪ್ರಜನನ ಆರೋಗ್ಯ ಅಗತ್ಯಗಳನ್ನು ಪೂರೈಸಬೇಕೆಂಬ ಹೊಸ ಪ್ರಜನನ ಆರೋಗ್ಯ ಧೋರಣೆಯನ್ನು ನಾವಿಂದು ಆದ್ಯತೆಯ ಮೇರೆಗೆ ಅಳವಡಿಸಿಕೊಂಡು ಜಾರಿಗೆ ತರಬೇಕಾಗಿದೆ. ಈ ದಿಸೆಯಲ್ಲಿ, ಮೊದಲ ಹೆಜ್ಜೆಯಾಗಿ ಅವರ ಫಲವತ್ತೆಯ ಪ್ರಮಾಣ, ಅವರಿಗೆ ಜನಿಸಿದ ಮಕ್ಕಳ ಸಂಖ್ಯೆ, ಎಷ್ಟು ಸಂಖ್ಯೆಯಲ್ಲಿ ಮಹಿಳೆಯರು ಗರ್ಭನಿರೋಧಕ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಇತ್ಯಾದಿ ವಿಷಯಗಳ ಅಂಕಿಸಂಖ್ಯೆಗಳ ರೂಪದಲ್ಲಿ ಸ್ತ್ರೀಯರನ್ನು ಗುರ್ತಿಸುವುದಕ್ಕೆ ಬದಲಾಗಿ ಸ್ತ್ರೀಯರನ್ನು, ಅವರ ಆರೋಗ್ಯ ಅಗತ್ಯಗಳನ್ನು ಗೌರವಿಸುವ ಧೋರಣೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ಇಂತಹ ಧೋರಣೆಯುಳ್ಳ ಕಾರ್ಯಕ್ರಮಗಳ ಚೌಕಟ್ಟಿನಲ್ಲಿ ನಮ್ಮ ಮಹಿಳೆಯರಿಗೆ ಸೂಕ್ತವಾದ ಸುರಕ್ಷಿತ ಗರ್ಭನಿರೋಧಕಗಳನ್ನು ರೂಪಿಸಿ ಅವು ಅವರಿಗೆ ಸುಲಭವಾಗಿ ಸಿಗುವಂತೆ ಮಾಡಬೇಕು.
 • ಸ್ತ್ರೀಯರ ಹಾಗೂ ಅವರ ಮಕ್ಕಳ ಆರೋಗ್ಯ ಸುರಕ್ಷತೆ ಹಾಗೂ ಸ್ತ್ರೀಯರಿಗೆ ಮುಕ್ತವಾದ ಮಾಹಿತಿಯುಕ್ತ ಆಯ್ಕೆ ನೀಡಿಕೆಯು ಕುಟುಂಬ ಯೋಜನಾ ಕಾರ್ಯಕ್ರಮದ ಯಶಸ್ಸಿನ ಪ್ರಥಮ ಮಾನದಂಡವಾಗಬೇಕು. ಗರ್ಭನಿರೋಧಕಗಳ ಕ್ಷಮತೆ ಎರಡನೇ ಮಾನದಂಡವಾಗಬೇಕು.
 • ಪ್ರಜನನ ಆರೋಗ್ಯ ಸೇವಾ ಸೌಲಭ್ಯಗಳು ಮಹಿಳೆಯರಿಗೆ ದಕ್ಕುವಂತೆ ಮಾಡಬಲ್ಲ ವಿಧಿ ವಿಧಾನಗಳನ್ನು ನಮ್ಮ ಆರೋಗ್ಯ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಸಂತಾನ ನಿರೋಧಕಗಳನ್ನು ಉಪಯೋಗಿಸುತ್ತಿರುವ ಮಹಿಳೆಯರಿಗೆ ನಿಯಮಿತ ತಪಾಸಣೆ ಹಾಗೂ ಆರೋಗ್ಯ ಸೇವಾ ಸೌಲಭ್ಯಗಳು ಸಿಗುವುದನ್ನು ಖಾತರಿ ಪಡಿಸಿಕೊಳ್ಳುವುದರೊಂದಿಗೇ ಅವರ ತೊಂದರೆ ತಕರಾರುಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಬೇಕು.
 • ಪ್ರಾಥಮಿಕ ಅಧ್ಯಯನಗಳನ್ನು (Base line studies) ನಿರಂತರವಾಗಿ ನಡೆಸುತ್ತಾ ಮಹಿಳೆಯರಿಗೆ ಯಾವ ಬಗೆಯ ಪ್ರಜನನ ಸೇವಾ ಸೌಲಭ್ಯಗಳು, ಸಂತಾನ ನಿರೋಧಕ ಹಾಗೂ ಬಂಜೆತನ ನಿವಾರಣೆಯ ತಾಂತ್ರಿಕತೆಗಳು ಬೇಕಾಗಿದೆ ಎಂದು ತಿಳಿದುಕೊಂಡು ಅಂತಹ ತಾಂತ್ರಿಕತೆಗಳನ್ನು ಸಂಶೋಧಿಸಿ ಅಭಿವೃದ್ಧಿಪಡಿಸುವಲ್ಲಿ ಮಹಿಳೆಯರು ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸಬೇಕು.
 • ಸ್ತ್ರೀಯರ ದೇಹದ ವ್ಯವಸ್ಥೆಯ ಸಮಗ್ರತೆಯನ್ನು ಬೇಧಿಸಿ ಅದರಲ್ಲಿ ವ್ಯತ್ಯಾಸಗಳನ್ನುಂಟು ಮಾಡದಂತಹ, ಸುಲಭ ಹಾಗೂ ಅಗ್ಗವಾದ ವಿಧಾನಗಳನ್ನು ಪ್ರಚಾರ ಮಾಡಲು ಸಂತಾನೋತ್ಪತ್ತಿಯ ಪ್ರಕ್ರಿಯೆಯ ಅರಿವನ್ನು ಉಪಯೋಗಿಸಬಹುದಾಗಿದೆ. ಉದಾಹರಣೆಗೆ ಯಾವ ಸ್ತ್ರೀಯರಿಗೆ ಮಕ್ಕಳಾಗಬೇಕೋ ಯಾರಿಗೆ ಮಕ್ಕಳು ಸದ್ಯದಲ್ಲಿ ಬೇಡವೋ ಅವರಿಬ್ಬರಿಗೂ ಸಹ ಅಂಡಾಶಯವು ಅಂಡವನ್ನು ಬಿಡುಗಡೆ ಮಾಡುವ ಅವಧಿಯನ್ನು ಕಂಡುಹಿಡಿಯುವ ಸುಲಭ ವಿಧಾನಗಳನ್ನು ಕುರಿತು ಅರಿವು ಉಪಯುಕ್ತವಾಗುತ್ತದೆ.
 • ಕಾರ್ಯನೀತಿ ರೂಪಕರು, ಆರೋಗ್ಯ ಸೇವೆ ಒದಗಿಸುವ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ, ಆರೋಗ್ಯ ಸಂಶೋಧಕರು ಇತ್ಯಾದಿ ಆಸಕ್ತ ಗುಂಪುಗಳು ಹಾಗೂ ಮಹಿಳೆಯರ ನಡುವೆ ವಿಚಾರ ವಿನಿಮಯ ನಡೆಯಬೇಕಾಗಿದೆ. ಚರ್ಚೆ, ವಿಚಾರ ವಿನಿಮಯ ಮತ್ತು ಸಂವಾದಗಳು ಬದಲಾವಣೆ ತರಬಲ್ಲ ಮುಖ್ಯ ಕಾರ್ಯತಂತ್ರಗಳಾಗಿವೆ. ಅಲ್ಲದೆ ಮಹಿಳೆಯರ ನಡುವೆಯೇ ಇಂತಹ ವಿಚಾರ ವಿನಿಮಯಗಳು ನಡೆಯುವ ಅಗತ್ಯವಿದೆ. ಈ ದಿಸೆಯಲ್ಲಿ ಸರಿಯಾದಿ ವಸ್ತುನಿಷ್ಠ, ಮಾಹಿತಿ ನೀಡಿ ಸಾರ್ವಜನಿ ಚರ್ಚೆಗಳಿಗೆ ಮುಕ್ತ ಅವಕಾಶ ಕಲ್ಪಿಸುವಲ್ಲಿ ಇಂದಿನ ಮುದ್ರಣ ಹಾಗೂ ಎಲೆಕ್ಟ್ರಾನಿಕ್‌ಮಾಧ್ಯಮಗಳು ಪ್ರಮುಖ ಪಾತ್ರವಹಿಸಬೇಕಾಗಿದೆ.
 • ಇಂದು ಹೊಸದಾಗಿ ಕಂಡುಹಿಡಿಯಲ್ಪಡುತ್ತಿರುವ ಪ್ರಜನನ ತಾಂತ್ರಿಕತೆಗಳನ್ನು ಬಹುಜ್ಞಾನ ಶಿಸ್ತುಗಳ ಅಧ್ಯಯನಗಳ (Multi Disciplinary Studies) ವಿಶಾಲವ್ಯಾಪ್ತಿಯ ಸಂಶೋಧನೆಗಳಿಗೆ ಒಳಪಡಿಸಬೇಕಾದ ಅಗತ್ಯವಿದೆ. ಇಂತಹ ಬಹುಜ್ಞಾನಶಿಸ್ತೀಯ ಅಧ್ಯಯನಗಳನ್ನು ವಿವಿಧ ದೇಶಗಳಲ್ಲಿ ನಡೆಸಿದಲ್ಲಿ ವಿಭಿನ್ನ ಸಾಮಾಜಿಕ ಸಾಂಸ್ಕೃತಿಕ ಸಂದರ್ಭಗಳಲ್ಲಿ ಹೊಸ ಪ್ರಜನನ ತಾಂತ್ರಿಕತೆಗಳು ಎಷ್ಟು ಸೂಕ್ತ ಹಾಗೂ ಸುರಕ್ಷಿತ ಎಂಬುದನ್ನು ಪರೀಕ್ಷಿಸಲು ಸಾಧ್ಯ.
 • ಇಂದು ಸ್ತ್ರೀವಾದಿಗಳು ಮತ್ತು ಸ್ತ್ರೀ ಆರೋಗ್ಯ ಪ್ರತಿಪಾದಕರು ಸಮಾನ ಆಸಕ್ತಿ ಹಾಗೂ ಗುರಿಗಳನ್ನುಳ್ಳ ಇತರ ಗುಂಪುಗಳೊಂದಿಗೆ ಸೇರಿ ಮಿತ್ರಕೂಟಗಳನ್ನು ಕಟ್ಟುವುದು ಬಹಳ ಮುಖ್ಯ. ವೈದ್ಯಕೀಯ ಸಂಶೋಧನಾ ಕ್ಷೇತ್ರದ ವಿಜ್ಞಾನಿಗಳು, ಪರಿಣಿತ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಗಳು ಹಾಗೂ ಇನ್ನಿತರ ಸಮಾನ ಆಸಕ್ತಿ, ಗುರಿಗಲನ್ನುಳ್ಳ ಇತರ ಗುಂಪುಗಳೊಂದಿಗೆ ಚರ್ಚಿಸಿ, ಸಮಾಲೋಚನೆ ನಡೆಸಿ ಇಂತಹ ಮಿತ್ರಕೂಟಗಳನ್ನು ರಚಿಸಿಕೊಂಡಲ್ಲಿ ಸ್ತ್ರೀ ಆರೋಗ್ಯ ಪ್ರತಿಪಾದನೆಗೆ ಸ್ತ್ರೀ ಪ್ರಜನನ ಹಕ್ಕುಗಳ ಹೋರಾಟಕ್ಕೆ ಅಧಿಕೃತವಾದ ಹಾಗೂ ವೈಜ್ಞಾನಿಕ/ವೈಚಾರಿಕ ಬಲ ಬಂದಂತೆ ಆಗುತ್ತದೆ.

ಈ ಸೈದ್ಧಾಂತಿಕ ಹಾಗೂ ವ್ಯವಹಾರಿಕ ಸಾಧ್ಯತೆಯ ಕಾರ್ಯತಂತ್ರಗಳನ್ನು ಜಾರಿಗೆ ತರಲು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬದುಕಿನಲ್ಲಿ ಬದಲಾವಣೆಗಳನ್ನು ತರಬೇಕಾಗುತ್ತದೆ. ಈ ಬದಲಾವಣೆಗಳು ಅತ್ಯಂತ ಕಿರಿಯ ಮಟ್ಟದಲ್ಲೂ ಆಗಬೇಕಾಗುತ್ತದೆ. ಇದಕ್ಕಾಗಿ, ಆಹಾರ, ವಸತಿ, ಉದ್ಯೋಗ, ವೈಯಕ್ತಿಕ ಸ್ವಾತಂತ್ರ್ಯ ಇತ್ಯಾದಿ ನ್ಯಾಯಯುತ ಮೂಲಭೂತ ಹಕ್ಕುಗಳಿಗೂ ಸ್ತ್ರೀಯರ ಲೈಂಗಿಕ ಮತ್ತು ಪ್ರಜನನ ಹಕ್ಕುಗಳಿಗೂ ಇರುವ ಪಾರಸ್ಪರಿಕ ಸಂಬಂಧಗಳನ್ನು ಅರಿತುಕೊಳ್ಳುವ ಅಗತ್ಯವಿದೆ.

[1] Devagan Kavita., (2003). “Rescue Pill for Women’’, Deccan Herald., 19. 10. 03, Women feature Service.

[2] Anonymous (2004) “Female Condoms Launched’’, Deccan Herald. 2010. 04, P. 9.

[3] Anonymous (2005) Condoms for Women hit market, Times of India, 19. 12. 05, P. 10.

[4] Hatcher A Robert, Ward Rinehart, Richard Black Burn, Judith S. Geller and James D Shelton (2001), The Essentials of Countraceptive Technology. Baltimore, USA, John Hopkins Population Information Program pp. 11-7.

[5] Anonymous (2006), “Five Million AIDS cases in India : Ramadas’’, Deccan Herald., 8.9.06.

[6] Vijaya Karnataka (2004), “5 Lakhsa HIV Sonkitatalli Ardha Mahileyaru’’, dt 2.12.04, p.5.

[7] Leela Sampige (2005), Sabaleekaranada Saadhana Mahilaa Condom, Prajavani, 4. 10. 05, p.6.