ಇಂದು ಜಾಗತೀಕರಣವು ನಮ್ಮ ಬದುಕಿನ ಅನೇಕ ಆಯಾಮಗಳನ್ನು ನೇರವಾಗಿ ಹಾಗೂ ಅಗೋಚರವಾಗಿ ತಟ್ಟುತ್ತಿರುವುದು ಸರ್ವವೇದ್ಯವೇ ಆಗಿದೆ. ಜಾಗತೀಕರಣದ ಪ್ರಕ್ರಿಯೆಗಳಿಂದಾಗಿ ಉಂಟಾಗಿರುವ ಉಸಿರುಗಟ್ಟಿಸುವಂತಹ ತೀವ್ರಸ್ಪರ್ಧೆಯ, ಲಾಭವೇ ಪರಮಗುರಿಯಾಗಿರುವ, ಮಾನವೀಯ ಮೌಲ್ಯರಹಿತವಾದ ಮಾರುಕಟ್ಟೆಯ ಮೌಲ್ಯಗಳ ಜಗತ್ತಿನಲ್ಲಿ ದುರ್ಬಲರು, ಬಡವರು, ಮಹಿಳೆಯರು ಮತ್ತು ಪರಿಸರಗಳು ಹಾನಿಗೀಡಾಗುತ್ತಿದ್ದು ಇದರಿಂದ ಸ್ತ್ರೀ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಚರ್ಚಿಸುವುದು ಇಂದು ಅನಿವಾರ್ಯವಾಗಿದೆ. ನಮ್ಮ ದೇಶದ ಸ್ತ್ರೀಯರ ಜನಸಂಖ್ಯೆಯ ಬೃಹತ್‌ಭಾಗವಾಗಿರುವ ಬಡಮಹಿಳೆಯರ, ಅನಕ್ಷರಸ್ಥ ಸ್ತ್ರೀಯರ ಹಾಗೂ ಗ್ರಾಮೀಣ ಮಹಿಳೆಯರ ಆರೋಗ್ಯ, ಜಾಗತೀಕರಣದ ದುಷ್ಪರಿಣಾಮಗಳಿಗೆ ಹೇಗೆ ಮತ್ತು ಏಕೆ ವಿಶೇಷವಾಗಿ ಗುರಿಯಾಗುತ್ತಿದೆ ಎಂಬುದರ ಪರಿಶೀಲನೆ ಇಲ್ಲಿ ಅತ್ಯಗತ್ಯ. ಹಾಗೆಯೇ ಇಂದಿನ ಕಟುವಾಸ್ತವವಾದ ಜಾಗತೀಕರಣದ ಸಂದರ್ಭದಲ್ಲಿ ನಮ್ಮ ಬೃಹತ್‌ಮಹಿಳಾ ಸಮುದಾಯ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು, ತನ್ಮೂಲಕ ತಮ್ಮ ಮಕ್ಕಳ ಹಾಗೂ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಹಿಳೆಯರ ಆರೋಗ್ಯ ಸಬಲೀಕರಣ ಅತ್ಯಗತ್ಯ. ಈ ದಿಸೆಯಲ್ಲಿ ನಡೆದಿರುವ ಹೊಸ ಚಿಂತನೆಗಳನ್ನು ಹಾಗೂ ಪ್ರಯತ್ನಗಳನ್ನು ಇಲ್ಲಿ ವಿವರಿಸಲಾಗಿದೆ.

೧೯೯೧ರಲ್ಲಿ ಭಾರತ ಸರ್ಕಾರ ಅಳವಡಿಸಿಕೊಂಡ ಹೊಸ ಆರ್ಥಿಕ ನೀತಿಯಿಂದಾಗಿ ಭಾರತೀಯ ಮಹಿಳೆಯರ ಬೃಹತ್‌ಸಮುದಾಯದ ಅಸಹಾಯಕತೆ ಹಾಗೂ ಬಡತನಗಳು ದಾರುಣ ಹಂತವನ್ನು ತಲುಪಿವೆಯೆನ್ನಬಹುದು. ಹೊಸ ಆರ್ಥಿಕ ನೀತಿಯು ನಮ್ಮ ಮಾರುಕಟ್ಟೆಗಳ ಖಾಸಗೀಕರಣ, ಉದಾರೀಕರಣ ಹಾಗೂ ಭಾರತೀಯ ರೂಪಾಯಿಯ ಅಪಮೌಲ್ಯೀಕರಣಗಳ ಮೂಲಕ ಜಾಗತೀಕರಣಕ್ಕೆ ನಮ್ಮ ದೇಶದ ಹೆಬ್ಬಾಗಿಲನ್ನೇ ತೆರೆದುಬಿಟ್ಟಿದೆ. ಈ ಆರ್ಥಿಕ ನೀತಿ ಒಂದು ಕಡೆ ನಮ್ಮ ದೇಶದ ಮಾರುಕಟ್ಟೆಗಳನ್ನು ಹಾಗೂ ಮಾರುಕಟ್ಟೆಗಳ ಖಾಸಗೀಕರಣವನ್ನು ವಿಸ್ತರಿಸುತ್ತಾ ಹೋಗುತ್ತಿದೆ. ಇನ್ನೊಂದು ಕಡೆ ಸರ್ಕಾರದ ಆರ್ಥಿಕ ಹೊರೆಯನ್ನು ಹಗುರಗೊಳಿಸಲು ಸಾರ್ವಜನಿಕ ವಲಯದಲ್ಲಿ ಸರಕಾರ ಹೂಡಬೇಕಾಗಿರುವ ಬಂಡವಾಳವನ್ನು ಕಡಿತಗೊಳಿಸುತ್ತಾ ಹೋಗುತ್ತಿದೆ ಹಾಗೂ ಈಗಾಗಲೇ ಸರ್ಕಾರ ತಾನು ಹೂಡಿರುವ ಬಂಡವಾಳವನ್ನು ಸಾರ್ವಜನಿಕ ವಲಯದ ಉದ್ದಿಮೆಗಳಿಂದ ಹಿಂದೆಗೆದುಕೊಳ್ಳುತ್ತಿದೆ. ಇದಕ್ಕಿಂತಾ ಹೆಚ್ಚಾಗಿ, ಸರ್ಕಾರ ಈ ಹೊಸ ಆರ್ಥಿಕ ನೀತಿಯನ್ನು ಅಳವಡಿಸಿಕೊಳ್ಳುವ ಮುಂಚೆ ಸಾರ್ವಜನಿಕರಿಗೆ ಕಲ್ಯಾಣವಾದೀ ಹಾಗೂ ಪ್ರಜಾಪ್ರಭುತ್ವದ ದೃಷ್ಟಿಯಿಂದ ಸಾಮಾಜಿಕ ಸೌಲಭ್ಯಗಳಿಗಾಗಿ ಮಾಡುತ್ತಿದ್ದ ವೆಚ್ಚವನ್ನು ತೀವ್ರವಾಗಿ ಕಡಿತಗೊಳಿಸುತ್ತಾ ಹೋಗುತ್ತಿದೆ. ಸಾಮಾಜಿಕ ಸಾರ್ವಜನಿಕ ಸೌಲಭ್ಯಗಳಲ್ಲಿ ಆರೋಗ್ಯ ಸೇವಾ ಸೌಲಭ್ಯವೂ ಒಂದು ಎಂಬುದನ್ನು ಇಲ್ಲಿ ಗಮನಿಸಬಹುದು. ಸಾರ್ವಜನಿಕರ ಆರೋಗ್ಯಕ್ಕಾಗಿ ಸರ್ಕಾರ ಮಾಡುತ್ತಿದ್ದ ಖರ್ಚನ್ನು ಕಡಿಮೆ ಮಾಡಿಕೊಳ್ಳಲು ಬಡವರಿಗೆ ಸಬ್ಸಿಡಿಯ ದರದಲ್ಲಿ ಒದಗಿಸುತ್ತಿದ್ದ ಅನೇಕ ಆರೋಗ್ಯ ಸೇವೆಗಳಲ್ಲಿ ಕಡಿತ ಮಾಡಲಾಗುತ್ತಿದೆಯಲ್ಲದೆ, ಇರುವ ಸೇವಾ ಸೌಲಭ್ಯಗಳನ್ನು ಕ್ರಮೇಣ ಹಿಂತೆಗೆದುಕೊಳ್ಳಲಾಗುತ್ತಿದೆ. ಆರೋಗ್ಯ ಸೇವಾ ಸಿಬ್ಬಂದಿಯ ಸಂಖ್ಯೆಯನ್ನು ನೇಮಕಾತಿಯ ಸಂದರ್ಭದಲ್ಲಿಯೇ ಕಡಿತಗೊಳಿಸಲಾಗುತ್ತಿದೆ.

ಇವೆಲ್ಲವುಗಳ ಜೊತೆಗೇ ವೈದ್ಯಕೀಯ ಸೇವೆಗಳನ್ನು ಖಾಸಗೀಕರಣಕ್ಕೆ ಒಳಪಡಿಸಿರುವುದರಿಂದ ವೈದ್ಯಕೀಯ ಸೇವಾ ಸೌಲಭ್ಯಗಳ ಲಭ್ಯತೆ ದಿನೇ ದಿನೇ ತುಟ್ಟಿಯಾಗುತ್ತಾ ಹೋಗುತ್ತಿದ್ದು ಬಡಜನರ ಕೈಗೆಟುಕದಂತೆ ಆಗುತ್ತಿದೆ. ಖಾಸಗೀ ಆಸ್ಪತ್ರೆಗಳು, ನರ್ಸಿಂಗ್‌ಹೋಂಗಳು ಹಾಗೂ ವೈಭವೋಪೇತವಾದ ಎಲ್ಲಾ ಬಗೆಯ ಅತ್ಯಾಧುನಿಕ ವೈದ್ಯಕೀಯ ಸೇವಾ ಸೌಲಭ್ಯಗಳನ್ನು ಹೊಂದಿರುವ ಕಾರ್ಪೋರೇಟ್‌ಆಸ್ಪತ್ರೆಗಳು ಎಲ್ಲೆಡೆ ತಲೆಯೆತ್ತುತ್ತಿವೆ. ಇವು ತಾವು ವಿಧಿಸುವ ಶುಲ್ಕ ತೆರಬಲ್ಲ ತಾಕತ್ತು ಇರುವ ಶ್ರೀಮಂತ ವರ್ಗಗಳ ಅಗತ್ಯಗಳನ್ನು ಪೂರೈಸುತ್ತಿದ್ದು ಲಾಭಗಳಿಕೆಯ ದೃಷ್ಟಿಯಿಂದಲೇ ಹುಟ್ಟಿಕೊಂಡಿವೆ. ಆದ್ದರಿಂದ ಅವುಗಳ ಸಾರ್ವಜನಿಕರ ಆರೋಗ್ಯದ ಬಗ್ಗೆ ಯಾವುದೇ ಗಂಭೀರ ಗಮನವೀಯುತ್ತಿಲ್ಲ ಮತ್ತು ಅಂತಹ ಸಾರ್ವಜನಿಕ ಆರೋಗ್ಯ ಅಗತ್ಯಗಳನ್ನು ಪೂರೈಸುವ ಪ್ರಯತ್ನಗಳನ್ನು ಸಹ ಮಾಡುತ್ತಿಲ್ಲ. ಸಾರ್ವಜನಿಕ ಆರೋಗ್ಯ ಅಗತ್ಯಗಳನ್ನು ಪೂರೈಸುವುದರಿಂದ ಅವುಗಳಿಗೆ ಯಾವುದೇ ಹೆಚ್ಚಿನ ಲಾಭ ಇಲ್ಲದೇಯಿರುವುದರಿಂದ ಅಂತಹ ಸೌಲಭ್ಯ ಸೇವೆಗಳನ್ನು ಒದಗಿಸುವುದು ಸರಕಾರದ ಹೊಣೆ ಎಂಬುದು ಅವುಗಳ ಧೋರಣೆಯಾಗಿದೆ. ಇದೇ ಸಂದರ್ಭದಲ್ಲಿ ಭಾರತ ಸರ್ಕಾರ ತನ್ನ ಉದಾರೀಕರಣ ನೀತಿಯಿಂದಾಗಿ ವಿದೇಶಿ ಔಷಧ ಕಂಪನಿಗಳು ಭಾರತದಲ್ಲಿ ನೇರವಾಗಿ ವ್ಯಾಪಾರ ವಹಿವಾಟು ನಡೆಸುವ ಅವಕಾಶಗಳ ತಲೆಬಾಗಿಲನ್ನೇ ತೆರೆದಿಟ್ಟಿದೆ. ಇದರಿಂದಾಗಿ ಈ ವಿದೇಶಿ ಕಂಪನಿಗಳು ಅನಗತ್ಯವಾದ ಹಾಗೂ ತಮ್ಮ ದೇಶದಲ್ಲಿಯೇ ಮಾರಾಟವಾಗದ ಹಲವಾರು ಔಷಧಿಗಳನ್ನು ಪ್ರವಾಹದೋಪಾದಿಯಲ್ಲಿ ನಮ್ಮ ಔಷಧಿ ಮಾರುಕಟ್ಟೆಗೆ ಹರಿಯಬಿಡುತ್ತಿವೆ. ಅಷ್ಟೇ ಅಲ್ಲದೇ ಅಗತ್ಯವಾದ ಔಷಧಿಯ ಬೆಲೆಗಳನ್ನು ಸಹ ಏರಿಸುತ್ತಿವೆ.

ಸಾರ್ವಜನಿಕ ವಲಯದಲ್ಲಿ ಹೂಡಿದ್ದ ಸರ್ಕಾರೀ ಬಂಡವಾಳದ ಹಿಂತೆಗೆತ ಹಾಗೂ ಹೂಡಬೇಕಾಗಿದ್ದ ಬಂಡವಾಳದಲ್ಲಿ ಕಡಿತ, ಖಾಸಗೀ ಹಾಗೂ ಸರ್ಕಾರೀ ವಲಯಗಳಲ್ಲಿ ತಾತ್ಕಾಲಿಕ ಉದ್ಯೋಗಗಳು ಸೃಷ್ಟಿ ಇತ್ಯಾದಿ ಕಾರ್ಯನೀತಿಗಳಿಂದಾಗಿ ನಿರುದ್ಯೋಗ ಹೆಚ್ಚಾಗಿ, ಬಡತನದ ತೀವ್ರತೆ ಹೆಚ್ಚಾಗುತ್ತಾ ಹೋಗುತ್ತಿದೆ. ಇನ್ನು ಅಸಂಘಟಿತ ಆರ್ಥಿಕ ವಲಯದಲ್ಲಿಯೂ ಬಹಳಷ್ಟು ಉದ್ಯೋಗಗಳು ತಾತ್ಕಾಲಿಕ ಉದ್ಯೋಗಗಳಾಗಿ ಮಾರ್ಪಟ್ಟು ಅಗತ್ಯ ಬಿದ್ದಾಗ ಉದ್ಯೋಗ ಇಲ್ಲದಿದ್ದಾಗ ನಿರುದ್ಯೋಗ ಎಂಬ ಪರಿಸ್ಥಿತಿ ಏರ್ಪಟ್ಟಿದೆ. ಲಕ್ಷಾಂತರ ಸಣ್ಣಪುಟ್ಟ ಉದ್ಯಮಿಗಳು ಅಷ್ಟೇ ಅಲ್ಲದೆ ಮದ್ಯಮ ಗಾತ್ರದ ಉದ್ಯಮಗಳೂ ಸಹ ಮುಚ್ಚಿಹೋಗುತ್ತಿವೆ. ಕೆಲಸದಿಂದ ತೆಗೆಯಲ್ಪಡುವ ಉದ್ಯೋಗಿಗಳಲ್ಲಿ ಪುರುಷರಿಗಿಂತಾ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೊತೆಗೆ ಈ ಹಿಂದೆ ಅಸಂಘಟಿತ ವಲಯಗಳಲ್ಲಿ ಹೆಚ್ಚು ದುಡಿಮೆ ಮತ್ತು ಕಡಿಮೆ ಕೂಲಿ ಪಡೆಯುತ್ತಿದ್ದ ಕೆಲಸಗಳಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದು ಇಂದು ನಿರುದ್ಯೋಗ ಸಮಸ್ಯೆಯಿಂದಾಗಿ ಅಂತಹ ಕೆಲಸಗಳಿಗೆ ಪುರುಷರೂ ಲಗ್ಗೆಯಿಡುತ್ತಿದ್ದಾರೆ. ಹಾಗಾಗಿ ಬಡಮಹಿಳೆಯರು ಈಗ ಗಂಡಸರಿಂದಲೂ ಸ್ಪರ್ಧೆಯನ್ನು ಎದುರಿಸುತ್ತಾ ತಮ್ಮ ಉದ್ಯೋಗಾವಕಾಶಗಳನ್ನು ಉಳಿಸಿಕೊಂಡು ಬದುಕಬೇಕಾಗಿದೆ. ನಮ್ಮ ದೇಶದಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಲ್ಲಿ ೯೪% ಮಂದಿ ಅಸಂಘಟಿತ ವಲಯದಲ್ಲಿ ಅದರಲ್ಲೂ ಕಡಿಮೆ ಕುಶಲತೆಯ ಆದರೆ ಶ್ರಮದಾಯಕ ದುಡಿಮೆ ಬೇಡುವ ಕೆಲಸಗಳಿಗೆ ದುಡಿಯುತ್ತಿದ್ದಾರೆ. ಈಗ ಈ ವಲಯಗಳಲ್ಲಿ ಸಹ ಮಹಿಳೆಯರಿಗೆ ಸಿಗುತ್ತಿದ್ದ ಕೆಲಸಗಳ ಅವಕಾಶ ಕಡಿಮೆಯಾಗುತ್ತಾ ಹೋಗುತ್ತಿದೆ. ತತ್ಪರಿಣಾಮವಾಗಿ ಇಂದು ಭಾರತೀಯ ಬಡಮಹಿಳೆಯರ ಬಡತನದ ದುಷ್ಪರಿಣಾಮಗಳೂ ಸಹ ಹೆಚ್ಚಾಗುತ್ತಲೇ ಹೋಗುತ್ತಿವೆ.

ಆಜಾದಿ ಬಚಾವ್‌ಆಂದೋಲನ ಮತ್ತು ಲೋಕಾಯನ್‌ಸಂಘಟನೆಗಳ ಪರ್ಯಾಯ ಸಮೀಕ್ಷಾ ವೃಂದವು ೧೯೯೮-೨೦೦೦ರಲ್ಲಿ ನಡೆಸಿದ ಪರ್ಯಾಯ ಆರ್ಥಿಕ ಸಮೀಕ್ಷೆಯ ಪ್ರಕಾರ ರಾಜ್ಯ ಸರ್ಕಾರಗಳು ತಮ್ಮ ವಾರ್ಷಿಕ ಆಯವ್ಯಯಗಳಲ್ಲಿ ಸಾಮಾಜಿಕ ವಲಯಕ್ಕಾಗಿ ತೆಗೆದಿರಿಸುತ್ತಿದ್ದ ಬಜೆಟ್‌ನಲ್ಲಿ ಶೇಕಡಾವಾರು ಕಡಿತ ಕಳೆದ ೫ ವರ್ಷಗಳಿಂದ ಹೆಚ್ಚಾಗುತ್ತಾ ಹೋಗುತ್ತಿದೆ.

[1] ನಮ್ಮ ದೇಶದ ಜಿ.ಡಿ.ಪಿಯಲ್ಲಿ ೫.೩ರಷ್ಟು ಪಾಲನ್ನು ಆರೋಗ್ಯಕ್ಕಾಗಿ ಸರ್ಕಾರ ೧೯೯೭ರಲ್ಲಿ ಖರ್ಚು ಮಾಡಿದ್ದು,೨೦೦೧ರಲ್ಲಿ ಅದು ಜಿ.ಡಿ.ಪಿಯ ೫.೧ ಭಾಗಕ್ಕೆ ಇಳಿದಿದೆ ಎಂಬುದನ್ನು ಸರಕಾರಿ ವರದಿಯೇ ದಾಖಲಿಸಿದೆ.[2]

೧೯೯೨ರ ಫೆಬ್ರವರಿ ೫ರಂದು ಯು.ಎನ್‌.ಡಿ.ಪಿ (UNDP) ನಡೆಸಿದ ದಂಡು ಮೇಜಿನ ಚರ್ಚೆಯು ಹೊಸ ಆರ್ಥಿಕ ನೀತಿಯು ಸಾರ್ವಜನಿಕ ವಲಯದ ಮಾರುಕಟ್ಟೆಗಳನ್ನು ಸಹ ಖಾಸಗೀಕರಣಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ಭಾರತೀಯ ಮಹಿಳಾ ಜನಸಮುದಾಯವು ಇನ್ನಷ್ಟು ಅಂಚಿಗೆ ತಳ್ಳಲ್ಪಡುತ್ತಿದೆ ಎಂಬುದನ್ನು ಎತ್ತಿ ತೋರಿಸಿತ್ತು.[3] ಅಂದಿನ ಚರ್ಚೆಯ ಭವಿಷ್ಯವಾಣಿ ಇಂದು ನಿಜವಾಗಿದೆ. ಇಂದು ಮಹಿಳೆಯರು, ಸಂಕೀರ್ಣವಾದ ಸಾಮಾಕಿಕೋ ಆರ್ಥಿಕ, ಸಾಂಸ್ಕೃತಿಕ ಹಾಗೂ ಕೌಟುಂಬಿಕ ಕಾಳಜಿಗಳ ಹಿನ್ನೆಲೆಯಲ್ಲಿ ಜಾಗತೀಕರಣದ ಅನಿವಾರ್ಯ ದುಷ್ಪರಿಣಾಮಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ಈ ಎಲ್ಲಾ ಸಂಕೀರ್ಣ ಸಂದರ್ಭಗಳ ಹಿನ್ನೆಲೆಯಲ್ಲಿ ನಮ್ಮ ಬೃಹತ್‌ಮಹಿಳಾ ಸಮುದಾಯವನ್ನು ಅವರ ಆರೋಗ್ಯವನ್ನು ಕುರಿತಂತೆ ಸಬಲೀಕರಣಗೊಳಿಸಬಲ್ಲ ಕ್ರಮಗಳ ಪರಿಶೀಲನೆ ಅನಿವಾರ್ಯ ಅಗತ್ಯವಾಗಿದೆ.

ವಿಶಾಲ ವ್ಯಾಪ್ತಿಯಲ್ಲಿ ಸಮಗ್ರವಾಗಿ ಕೈಗೊಳ್ಳಬಹುದಾದ ಈ ಕ್ರಮಗಳನ್ನು ಕೆಳಕಂಡಂತೆ ವರ್ಗೀಕರಿಸಿ ಪರಿಶೀಲಿಸಬಹುದಾಗಿದೆ.

೧. ಆರೋಗ್ಯ ಕಾರ್ಯನೀತಿ ರೂಪಿಸುವ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ರೂಪುರೇಷೆ.

೨. ಆರೋಗ್ಯ ಕಾರ್ಯಕ್ರಮಗಳ ಯೋಜನೆ ಹಾಗೂ ಜಾರಿಗೊಳಿಸುವಿಕೆಯ ಹಂತಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು.

೩. ಲಿಂಗತ್ವ ಸೂಕ್ಷ್ಮ ಸಂವೇದನೆ ಮತ್ತು ಪಂಚಾಯಿತಿಗಳ ಪಾಲ್ಗೊಳ್ಳುವಿಕೆ.

೪. ಸ್ತ್ರೀ ಆರೋಗ್ಯ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರ.

೫. ಮಹಿಳೆಯರ ಆರೋಗ್ಯ ಸಬಲೀಕರಣದಲ್ಲಿ ಪುರುಷರ ಪಾಲ್ಗೊಳ್ಳುವಿಕೆ.

ಸ್ತ್ರೀ ಆರೋಗ್ಯ ಸಬಲೀಕರಣಕ್ಕಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಈ ಪಟ್ಟಿ ಸಂಪೂರ್ಣವಾಗಿಲ್ಲ. ಇನ್ನೂ ಹೆಚ್ಚು ಸೂಕ್ತವಾದ ಹಾಗೂ ಪರಿಣಾಮಕಾರಿಯಾದ ಕ್ರಮಗಳನ್ನು ಸಾರ್ವಜನಿಕ ಚರ್ಚೆಯಿಂದ, ವಿವೇಚನೆಯಿಂದ ಹಾಗೂ ಸಂಶೋಧನೆಯಿಂದ ಪರಿಶೀಲಿಸುವುದಿಲ್ಲ ಸೂಕ್ತ.

. ಆರೋಗ್ಯ ಕಾರ್ಯನೀತಿ ರೂಪಿಸುವ ಹಂತದಲ್ಲಿ ಸ್ತ್ರೀ ಆರೋಗ್ಯ ಸಬಲೀಕರಣಕ್ಕಾಗಿ ಕ್ರಮಗಳು

ಯಾವುದೇ ಯೋಜನೆಯ ಸುಸಂಬದ್ಧವಾಗಿ ರೂಪುಗೊಂಡು ಕಾರ್ಯಗತವಾಗಬೇಕಾಗಿದ್ದಲ್ಲಿ ಅದು ಒಂದು ಗಟ್ಟಿಯಾದ ಕಾರ್ಯನೀತಿಯ ನೆಲೆಗಟ್ಟಿನ ಮೇಲೆ ನಿಂತಿರಬೇಕಾಗುತ್ತದೆ. ಯೋಜನೆಯ ಒಟ್ಟು ಧೋರಣೆ ಹಾಗೂ ಯೋಜನೆಯನ್ನು ಜಾರಿಗೆ ತರುವಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ವಿಧಾನ, ಗುರಿಗಳು ಹಾಗೂ ನಿರ್ವಹಣೆಗಳು ಒಂದು ಕಾರ್ಯನೀತಿಯ ಮೇಲೆ ಆಧಾರಿತವಾಗಿರುತ್ತವೆ. ಸರಿಯಾದ ಕಾರ್ಯನೀತಿಯು ಹಡಗಿನ ದಿಕ್ಸೂಚಿಯಂತೆ ಇಡೀ ಯೋಜನೆಯು ಸಾಗಬೇಕಾದ ಸರಿ ದಿಕ್ಕನ್ನು ತೋರುತ್ತಾ ಮಾರ್ಗದರ್ಶನ ನೀಡುತ್ತಿರುತ್ತದೆ. ಸರಿಯಾದ ಗಟ್ಟಿ ಕಾರ್ಯನೀತಿಯೊಂದು ಇಲ್ಲದಿದ್ದಲ್ಲಿ ಯೋಜನೆ ಹಾಗೂ ಅದರ ಕಾರ್ಯಕ್ರಮಗಳ ಸಾಗರದಲ್ಲಿ ದಿಕ್ಕುತಪ್ಪಿದ ನಾವೆಗಳಂತಾಗುವುದರಲ್ಲಿ ಸಂಶಯವಿಲ್ಲ. ಹಾಗಾದಾಗ ಸಹ ಯೋಜನೆಯ ಕಾರ್ಯಕ್ರಮಗಳು ಗುರಿಮುಟ್ಟದೇ ಅಲ್ಪಸ್ವಲ್ಪ ಸಾಧನೆಗಳಿಗೇ ಸಮಾಧಾನಗೊಳ್ಳುವ ಹಂತ ತಲುಪುತ್ತವೆ. ಈ ಮಾತು ನಮ್ಮ ಪ್ರಸ್ತುತ, ಹಲವು ಕಾರ್ಯನೀತಿಗಳಿಗೂ ಅನ್ವಯಿಸುತ್ತದೆ. ನಮ್ಮ ಪ್ರಸ್ತುತ ಆರೋಗ್ಯ ಕಾರ್ಯನೀತಿಗಳಲ್ಲಿ ತಮ್ಮ ಆರೋಗ್ಯವನ್ನು ಕುರಿತಂತೆ ಮಹಿಳೆಯರನ್ನು ನಿಜವಾಗಿ ಸಬಲೀಕರಣಗೊಳಿಸಬೇಕೆಂಬ ಧೋರಣೆಯ ಅಂಶಗಳು ಇಲ್ಲ. ಹಾಗಾಗಿ ನಮ್ಮ ಆರೋಗ್ಯ ಕಾರ್ಯಕ್ರಮಗಳಲ್ಲೂ ಸ್ತ್ರೀ ಆರೋಗ್ಯ ಸಬಲೀಕರಣದ ಅಂಶ ಎದ್ದು ಕಾಣುತ್ತಿಲ್ಲ. ಆದ್ದರಿಂದ ಈಗಾಗಲೇ ಜಾರಿಯಲ್ಲಿರುವ ಹಲವು ಕಾರ್ಯನೀತಿಗಳಲ್ಲಿ ಬದಲಾವಣೆಗಳನ್ನು ತರಬೇಕಾಗಿದೆ. ಅಲ್ಲದೆ ಇಂದು ಹೊಸದಾಗಿ ಕಾರ್ಯನೀತಿಗಳನ್ನು ರೂಪಿಸಬೇಕಾದ ಅಗತ್ಯವಿದೆ. ಕಾರ್ಯನೀತಿಗಳು ಹಾಗೂ ಅವುಗಳ ಧೋರಣೆಗಳಲ್ಲಿ ಆಗಬೇಕಾಗಿರುವ ಬದಲಾವಣೆಗಳನ್ನು ಕೆಳಕಂಡಂತೆ ಪಟ್ಟಿ ಮಾಡಬಹುದಾಗಿದೆ.

೧. ಆರೋಗ್ಯ ವಲಯಕ್ಕಾಗಿ ಸಾಕಷ್ಟು ಹಣ ನಿಗದಿಪಡಿಸುವ ರೀತಿಯಲ್ಲಿ ನಮ್ಮ ಈಗಿನ ಆರ್ಥಿಕ ಕಾರ್ಯನೀತಿಯ ಧೋರಣೆ ಬದಲಾಗಬೇಕಾಗಿದೆ.

೨. ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ರಾಷ್ಟ್ರೀಯ ಹಾಗೂ ರಾಜ್ಯದ ಕಾರ್ಯನೀತಿಗಳಲ್ಲಿ ಲಿಂಗತ್ವ ದೃಷ್ಟಿಕೋನವನ್ನು (Gender perspective) ಅಳವಡಿಸಿಕೊಳ್ಳಬೇಕಾಗಿದೆ.

೩. ಸಮಗ್ರವಾದ ಒಂದು ನೂತನ ಸಾರ್ವಜನಿಕ ಆರೋಗ್ಯ ಕಾರ್ಯನೀತಿಯನ್ನು ರೂಪಿಸಬೇಕಾಗಿದೆ.

೪. ರಾಷ್ಟ್ರೀಯ ಹಾಗೂ ರಾಜ್ಯ ಸರ್ಕಾರಗಳ ಜನಸಂಖ್ಯಾ ನೀತಿಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ತರಬೇಕಾಗಿದೆ.

೫. ಆರೋಗ್ಯ ಮತ್ತು ಜನಸಂಖ್ಯಾ ಕಾರ್ಯನೀತಿಗಳ ಕರಡನ್ನು ರೂಪಿಸುವಾಗ, ಸರ್ಕಾರಗಳು, ಮಹಿಳಾ ಆರೋಗ್ಯ ಕಾಳಜಿಗಳ ಬಗ್ಗೆ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಘಟನೆಗಳ ಮತ್ತು ಮಹಿಳಾ ಆರೋಗ್ಯ ಚಳವಳಿಯಲ್ಲಿ ಸಕ್ರೀಯವಾಗಿರುವ ಕ್ರಿಯಾಶೀಲ ಕಾರ್ಯಕರ್ತರ ಭಾಗವಹಿಸುವಿಕೆ ಇರುವುದನ್ನು ಖಾತರಿಪಡಿಸಿಕೊಳ್ಳಬೇಕಾಗಿದೆ. ಅಲ್ಲದೆ ಅವರ ಅನುಭವ, ಅಭಿಪ್ರಾಯ ಮತ್ತು ಸಲಹೆಗಳನ್ನು ಪರಿಗಣಿಸಬೇಕು.

ಹೀಗೆ ಸ್ತ್ರೀ ಆರೋಗ್ಯ ಸಬಲೀಕರಣಕ್ಕಾಗಿ ನಮ್ಮ ಕಾರ್ಯನೀತಿಗಳಲ್ಲಿ ಕೆಲವು ಭಾಗಶಃ ಬದಲಾವಣೆಗೆ ಒಳಗಾಗಬೇಕಾಗಿದ್ದು, ಇನ್ನು ಕೆಲವನ್ನು ತಿದ್ದಿ ಮರುಬರವಣಿಗೆ ಮಾಡಬೇಕಾಗಿದೆ. ಇನ್ನೂ ಕೆಲವು ಕಾರ್ಯನೀತಿಗಳನ್ನು ಪೂರ್ತಿ ತಿರಸ್ಕರಿಸಿ ಹೊಸದಾಗಿ ರೂಪಿಸಬೇಕಾಗಿದೆ. ಇಂತಹ ಕಾರ್ಯನೀತಿಗಳಲ್ಲಿ ಮುಖ್ಯವಾದವುಗಳೆಂದರೆ ಒಂದಕ್ಕೊಂದು ತಳಕು ಹಾಕಿಕೊಂಡುರುವ ನಮ್ಮ ಆರ್ಥಿಕ, ಆರೋಗ್ಯ, ಔಷಧಿ ಹಾಗೂ ಜನಸಂಖ್ಯೆಯನ್ನು ಕುರಿತ ಕಾರ್ಯನೀತಿಗಳು. ಆರ್ಥಿಕ ಕಾರ್ಯನೀತಿಯನ್ನೇ ತೆಗೆದುಕೊಂಡಲ್ಲಿ, ಸಾರ್ವಜನಿಕ ಆರೋಗ್ಯವವನ್ನು ಕುರಿತು ಅದರ ಧೋರಣೆ ತಕ್ಷಣ ಬದಲಾಗಬೇಕಾಗಿದೆ. ಆರೋಗ್ಯ ವಲಯಕ್ಕೆ ವಾರ್ಷಿಕ ಆಯವ್ಯಯದಲ್ಲಿ ತೆಗೆದಿರಿಸಬೇಕಾದ ಹಣವನ್ನು ಸಾಮಾಜೀಕವಾದ ಬರೀ ಖರ್ಚಿನ ಬಾಬತ್ತು ಎಂಬ ಧೋರಣೆಯು ಬದಲಾಗಿ ಅದನ್ನು ಸಂಪದ್ಭರಿತವಾದ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಮಾನವ ಅಭಿವೃದ್ಧಿಯಲ್ಲಿ ಹೂಡುತ್ತಿರುವಂಥಹ ಬಂಡವಾಳ ಎನ್ನುವ ಧೋರಣೆಯನ್ನು ರಾಷ್ಟ್ರೀಯ ಹಾಗೂ ರಾಜ್ಯಗಳ ಆರ್ಥಿಕ ನೀತಿಗಳು ಅಳವಡಿಸಿಕೊಳ್ಳಬೇಕಾಗಿದೆ. ಆದರೆ ದುರದೃಷ್ಟವಶಾತ್‌ಜಾಗತೀಕರಣದ ಸಧ್ಯದ ಸಂದರ್ಭದಲ್ಲಿ ಆರೋಗ್ಯ ವಲಯಕ್ಕೆ ಮಾಡುವ ಖರ್ಚನ್ನು ಅದರಲ್ಲಿಯೂ ರಿಯಾಯಿತಿ ದರಗಳಲ್ಲಿ ಸಾರ್ವಜನಿಕರಿಗೆ ಒದಗಿಸುತ್ತಿರುವ ಆರೋಗ್ಯ ಸೌಲಭ್ಯಗಳ ಖರ್ಚನ್ನು ದೇಶದ ಒಂದು ರಾಜ್ಯಗಳ ಆರ್ಥಿಕ ಹೊರೆಯನ್ನು ಹೆಚ್ಚಿಸುವಂತಹ ದುಂದು ವೆಚ್ಚ ಎಂದೇ ಭಾವಿಸಲಾಗುತ್ತಿದೆ. ಈ ಬಗೆಯ ಧೋರಣೆ ಮತ್ತು ಚಿಂತನಾಕ್ರಮಗಳಿಂದಾಗಿಯೇ ಇಂದು ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗಾಗಿ ಪ್ರತಿವರ್ಷದ ಆಯವ್ಯಯದಲ್ಲಿ ತೆಗೆದಿರಿಸಬೇಕಾಗುವ ಮೊತ್ತದಲ್ಲಿ ಭಾರೀ ಕಡಿತವುಂಟಾಗುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಪರ್ಯಾಯ ಆರ್ಥಿಕ ಸಮೀಕ್ಷಣಾ ಸಮೂಹವು ೧೯೯೮-೨೦೦೦ರಲ್ಲಿ ನಡೆಸಿದ ಪರ್ಯಾಯ ಆರ್ಥಿಕ ಸಮೀಕ್ಷೆಯು ಎಂಟನೇ ಪಂಚವಾರ್ಷಿಕ ಯೋಜನೆಯಿಂದೀಚೆಗೆ ಸಾರ್ವಜನಿಕ ಆರೋಗ್ಯಕ್ಕಾಗಿ ತೆಗೆದಿರಿಸುತ್ತಿದ್ದ ಬಜೆಟ್ ಒಂದು ಪಂಚವಾರ್ಷಿಕ ಯೋಜನೆಯಿಂದ ಇನ್ನೊಂದಕ್ಕೆ ಒಂದೇ ಸಮನೆ ಕಡಿಮೆಯಾಗುತ್ತಾ ಹೋಗುತ್ತಿರುವುದನ್ನು ಎತ್ತಿತೋರಿದೆ.1 ಅಂಟು ಜಾಡ್ಯಗಳ (Communicable diseases)ಹಾಗೂ ಬಡತನದಿಂದ ಉಂಟಾಗುವ ಕಾಯಿಲೆಗಳಲ್ಲಿನ ಹೆಚ್ಚಳವನ್ನು ಈ ವರದಿ ಬೆರಳು ಮಾಡಿ ತೋರಿಸಿದೆ. ಕ್ಷಯ, ಮಲೆರಿಯ, ಕುಷ್ಟ ಇತ್ಯಾದಿ ರೋಗಗಳು ಮತ್ತೆ ಹೆಡೆಬಿಚ್ಚಿ ಹರಡುತ್ತಿವೆ. ಅಪಪೋಷಣೆ ಅದರಲ್ಲಿಯೂ ಮಹಿಳೆಯರು ಮತ್ತು ಹುಡುಗಿಯರಲ್ಲಿ ಹೆಚ್ಚಾಗುತ್ತಿವೆ. ಬಡಜನತೆ ಸರಕಾರಿ ಸಾರ್ವಜನಿಕ ಆಸ್ಪತ್ರೆಗಳನ್ನು ಸೇರಿಸಿ ಚಿಕಿತ್ಸೆ ಪಡೆಯಬಹುದಾದ ಅವಕಾಶಗಳಿಗೆ ಹೇಗೆ ವೈದ್ಯಕೀಯ ಆರೋಗ್ಯ ಸೌಲಭ್ಯಗಳ ಖಾಸಗೀಕರಣ ಕೊಡಲಿ ಪೆಟ್ಟು ಹಾಕಿದೆ ಎಂಬುದನ್ನು ಈ ವರದಿ ಅಂಕಿ ಅಂಶಗಳಿಂದ ಸ್ಪಷ್ಟಪಡಿಸಿದೆ. ಉದಾಹರಣೆಗೆ ೧೯೫೭ ರಿಂದ ೧೯೯೮ರ ವರೆಗೆ ಬಡಜನರಿಗೆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯಲು ತೆಗೆದಿರಿಸುತ್ತಿದ್ದ ೨೫ ಕೋಟಿ ರೂಪಾಯಿಗಳ ಮೊತ್ತ ೨೦೦೦-೦೧ ವಾರ್ಷಿಕ ಬಜೆಟ್‌ನಲ್ಲಿ ಕೇವಲ ೬ ಕೋಟಿಗಳಿಗೆ ಕುಸಿದಿದೆ.

ಖರ್ಚಿಗೆ ತಕ್ಕ ಕಾರ್ಯಕ್ಷಮತೆ (Cost -effective) ಎಂಬುದನ್ನೇ ಕಾರಣವನ್ನಾಗಿಸಿಕೊಂಡು ಸರ್ಕಾರಗಳು ಪ್ರಾಥಮಿಕ ಆರೋಗ್ಯ ಸೇವಾ ಸೌಲಭ್ಯಗಳನ್ನು ಮುಖ್ಯವಾಗಿ ಅಂಟು ಜಾಡ್ಯಗಳ ತಡೆಗಟ್ಟುವಿಕೆಗೆ ಸೀಮಿತಗೊಳಿಸುವುದರ ಮೂಲಕ ಹಾಗೂ ಚಿಕಿತ್ಸಾ ಸೌಲಭ್ಯ ಸೇವೆಗಳನ್ನು ಒದಗಿಸುವ ಹೊಣೆಯನ್ನು ಖಾಸಗೀಯವರಿಗೆ ಬಿಟ್ಟುಕೊಡುತ್ತಿರುವ ನೀತಿಯ ಮೂಲಕ ಆರೋಗ್ಯ ವಲಯಕ್ಕೆ ಮಾಡಬೇಕಾದ ಖರ್ಚನ್ನು ಕಡಿತಗೊಳಿಸುತ್ತಿವೆ. ಜೊತೆಗೆ, ಇಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಸೌಲಭ್ಯಗಳನ್ನು ಉಪಯೋಗಿಸಲು ಬಳಕೆದಾರ ಶುಲ್ಕವನ್ನು ವಿಧಿಸಲಾಗುತ್ತಿದೆ.[4] ಅಲ್ಲದೆ ಸರಕಾರಿ ಅಸ್ಪತ್ರೆಯನ್ನು ಸೇರಿದ ರೋಗಿಗಳು ಚಿಕಿತ್ಸೆ ಪೂರ್ಣಗೊಳ್ಳುವ ಮುನ್ನ ಹಾಗೂ ಪೂರ್ಣ ಗುಣವಾಗುವ ಮುಂಚೆಯೇ ಮನೆಗೆ ಹಿಂದಿರುಗಿಸಲ್ಪಡುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿಗಳನ್ನು ಕೊಡುವ ಅಥವಾ ರಿಯಾಯಿತಿ ದರಗಳಲ್ಲಿ ಔಷಧಿಗಳನ್ನು ಒದಗಿಸುವುದನ್ನು ಕ್ರಮೇಣ ನಿಲ್ಲಿಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ರೋಗಿಗಳನ್ನು ಮನೆಯಲ್ಲಿಯೇ ನೋಡಿಕೊಳ್ಳಬೇಕಾಗುವ ಮಹಿಳೆಯರ ಅದರಲ್ಲೂ ಬಡ ಮಹಿಳೆಯರ ದುಡಿಮೆ ಹೆಚ್ಚಾಗುತ್ತಿದೆ. ಆದರೆ ಮಹಿಳೆಯರು ತಮ್ಮ ದುಡಿಮೆಯ ವೇಳೆ ಮತ್ತು ಶ್ರಮಗಳನ್ನು ಹಿಗ್ಗಿಸುತ್ತಾ ಹೋಗುವುದಕ್ಕೂ ಒಂದು ಮಿತಿಯಿದೆ. ಹೀಗೆ ಬಡ ಮಹಿಳೆಯರು ವಿಪರೀತ ದುಡಿಮೆಯ ಹೊರೆ ಹೊರುವುದರಿಂದ ಅವರ ಆರೋಗ್ಯವೂ ಹಾಳಾಗುವುದರಲ್ಲಿ ಸಂಶಯವಿಲ್ಲ. ಗ್ರಾಮಾಂತರ ಹಾಗೂ ನಗರಪ್ರದೇಶದ ಬಡಕುಟುಂಬಗಳು ಸಾಲಕ್ಕೆ ಗುರಿಯಾಗಲು ಇರುವ ಮುಖ್ಯ ಕಾರಣಗಳಲ್ಲಿ ಕುಟುಂಬದ ಸದಸ್ಯರು ಆಸ್ಪತ್ರೆಗೆ ಸೇರುವಂತಹ ಕಾಯಿಲೆಗಳಿಗೆ ಗುರಿಯಾಗುವುದು ಒಂದು ಕಾರಣವಾಗಿದೆ.

ಇನ್ನು ಔಷಧಿ ನಿಯಂತ್ರಣ ಕಾರ್ಯನೀತಿಯನ್ನೇ (Drug policy) ತೆಗೆದುಕೊಂಡಲ್ಲಿ, ೧೯೯೪ರಲ್ಲಿ ಅದನ್ನು ಮರುಪರಿಷ್ಕರಣೆಗೊಳಿಸಿದ ನಂತರ ಔಷಧಿಗಳ ಬೆಲೆಗಳು ಏರಿ ಬಿಟ್ಟಿವೆ. ೧೯೯೪ರ ಪರಿಷ್ಕೃತ ಔಷಧಿ ನಿಯಂತ್ರಣ ಕಾರ್ಯನೀತಿಯಿಂದಾಗಿ ಮೊದಲಿದ್ದ ನಿಯಮಗಳನ್ನು ಸಡಲಿಸಲಾಗಿದೆ. ಅಲ್ಲದೇ ಔಷಧಿ ಆಮದಿನ ಉದಾರೀಕರಣದಿಂದಾಗಿ ಅನಿಯಂತ್ರಿತ ಆಮದು ಹಾಗೂ ಔಷಧಿಗಳ ಆಮದಿಗೆ ವಿಧಿಸುತ್ತಿದ್ದ ಆಮದು ಶುಲ್ಕಗಳಲ್ಲಿ ಭಾರೀ ಕಡಿತ, ಔಷಧಿ ಅನಿಯಂತ್ರಣ ಇತ್ಯಾದಿಗಳು ಜಾರಿಗೊಂಡಿವೆ.[5] ೧೯೭೮ರಲ್ಲಿ ೩೭೮ ಔಷಧಗಳ ಬೆಲೆಗಳನ್ನು ನಿಯಂತ್ರಿಸಲಾಗಿತ್ತು. ೧೯೯೪ರ ನಂತರ ಕೇವಲ ೭೩ ಔಷಧಗಳ ಬೆಲೆಗಳು ಮಾತ್ರ ನಿಯಂತ್ರಣದಲ್ಲಿವೆ ಎಂಬುದನ್ನು ೨೦೦೦-೨೦೦೧ರ ಪರ್ಯಾಯ ಆರ್ಥಿಕ ಸಮೀಕ್ಷೆ ಎತ್ತಿತೋರಿದೆ. ಜಾಗತೀಕರಣದಿಂದಾಗಿ ಔಷಧಿ ನಿಯಂತ್ರಣ ಕಾರ್ಯನೀತಿಯು ಆರ್ಥಿಕ ಹೊಂದಾಣಿಕೆಗಾಗಿ ಮಾಡಿಕೊಳ್ಳಬೇಕಾಗಿ ಬಂದಿರುವ ಬದಲಾವಣೆಗಳಿಂದಾಗಿ ಔಷಧಿಗಳ ಬೆಲೆಗಳು ಬಡವರ ಕೈಗೆಟುಕದಷ್ಟು ಮೇಲೇರಿ ಅವರು ಔಷಧಿಗಳಿಂದ ವಂಚಿತರಾಗಬಹುದೆಂಬ ಭಯ ಇಂದು ಕ್ರೂರ ಸತ್ಯವಾಗಿ ಮಾರ್ಪಟ್ಟಿದೆ. ಅಖಿಲ ಭಾರತ ಆರೋಗ್ಯ ಸೇವಾ ಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ಜಂಟಿಯಾಗಿ ತಯಾರಿಸಿರುವ “ಮಹಿಳೆ, ಆರೋಗ್ಯ ಮತ್ತು ಅಭಿವೃದ್ಧಿ” ಎಂಬ ವರದಿಯು ಅತ್ಯಗತ್ಯವಾದ ಔಷಧಿಗಳ ತಯಾರಿಕೆ ಮತ್ತು ಹಂಚಿಕೆಗೆ ಪ್ರಥಮ ಆದ್ಯತೆ ನೀಡುವಂತಹ ಔಷಧಿ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಬಲವಾಗಿ ಶಿಫಾರಸ್‌ಮಾಡಿದೆ. ಅಪಾಯಕಾರೀ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವ ಅದೇ ಸಮಯದಲ್ಲಿ ಔಷಧಿಗಳ ಬಗ್ಗೆ ಪರವಿರೋಧ ಪೂರ್ವಗ್ರಹಗಳಿಲ್ಲದ ವಸ್ತುನಿಷ್ಠ ಮಾಹಿತಿಯನ್ನು ವೈದ್ಯರಿಗೂ ಹಾಗೂ ಬಳಕೆದಾರರಿಗೂ ನೀಡಬೇಕಾಗುವಂತೆ ಮಾಡಬಲ್ಲ ಬಿಗಿ ನಿಯಮಗಳು, ಕಾರ್ಯನೀತಿ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರುವಂತೆ ಈ ವರದಿ ಶಿಫಾರಸ್‌ಮಾಡಿದೆ. ಜೊತೆಗೆ, ಮುಖ್ಯ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಕುರಿತಂತೆ ಹೆಚ್ಚಿನ ಸಂಶೋಧನೆ ಮತ್ತು ಪರಿಹಾರಗಳ ಅಭಿವೃದ್ಧಿ ಹಾಗೂ ಇವುಗಳೆರಡಕ್ಕೂ ಅಗತ್ಯವಾದ ತಾಂತ್ರಿಕತೆಗಾಗಿ ಪರದೇಶಗಳ ಕಡೆ ನೋಡದೆ ಸ್ವಾವಲಂಬನೆ ಬೆಳಸಿಕೊಳ್ಳಬೇಕಾಗುವ ತುರ್ತು ಅಗತ್ಯದ ಮೇಲೆ ಈ ವರದಿ ಬೆಳಕು ಚೆಲ್ಲಿದೆ.5

ಸಾರ್ವಜನಿಕ ಆರೋಗ್ಯ ಸೇವೆಗಳಿಗಾಗಿ ಅದರಲ್ಲಿಯೂ ಪ್ರಾಥಮಿಕ ಆರೋಗ್ಯ ಸೇವಾ ಸೌಲಭ್ಯಗಳಿಗಾಗಿ, ರಿಯಾಯಿತಿ ದರಗಳಲ್ಲಿ ಒದಗಿಸಬೇಕಾಗುವ ಔಷಧಿ, ಆಸ್ಪತ್ರೆಯಲ್ಲಿ ಪಡೆಯಬೇಕಾದ ಚಿಕಿತ್ಸೆಗಳ ದರಗಳಲ್ಲಿ ರಿಯಾಯಿತಿ ಹಾಗೂ ಆರೋಗ್ಯ ಸೇವಾ ಸಿಬ್ಬಂದಿಗಾಗಿ ಮಾಡಬೇಕಾಗಿರುವ ಖರ್ಚಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ವಾರ್ಷಿಕ ಬಜೆಟ್‌ನಲ್ಲಿ ತೆಗೆದಿರಿಸಬೇಕಾಗುವ ಮೊತ್ತವನ್ನು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿಸಲೇ ಬೇಕಾಗುವ ಅಗತ್ಯವನ್ನು ಇದುವರೆಗಿನ ವಿಶ್ಲೇಷಣೆ ವ್ಯಾಖ್ಯಾನಗಳು ಸ್ಪಷ್ಪಡಿಸಿವೆ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಇದನ್ನು ಜಾರಿಗೊಳಿಸಲಾಗದ ಅಸಾಧ್ಯ ಸಲಹೆಯೆಂದು ವಿರೋಧಿಸುವವರು ಎರಡು ಅಂಶಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಮೊದಲನೆಯದಾಗಿ, ಇಂದು ಆರ್ಥಿಕವಾಗಿ ಅಭಿವೃದ್ಧಿಗೊಂಡು ಬಲಿಷ್ಠ ರಾಷ್ಟ್ರ

ಕೋಷ್ಟಕ೨೬: ಆಯ್ದ ಕೆಲವು ದೇಶಗಳಲ್ಲಿ ಆರೋಗ್ಯಕ್ಕಾಗಿ ಮಾಡುತ್ತಿರುವ ಸಾರ್ವಜನಿಕ ವೆಚ್ಚ

ದೇಶ ದಿನದ ಆದಾಯ ೧ ಡಾಲರಿಗಿಂತಾ ಕಡಿಮೆಯಿರುವ ಜನಸಂಖ್ಯೆ ೧ ವರ್ಷದೊಳಗಿನ ಸಾವಿರ ಮಕ್ಕಳಲ್ಲಿ ಸಾವಿನ ಸಂಖ್ಯೆ ಜಿ.ಡಿ.ಪಿಯಲ್ಲಿ (G.D.P) ಆರೋಗ್ಯಕ್ಕಾಗಿ ಮಾಡುವ ವೆಚ್ಚ ಆರೋಗ್ಯಕ್ಕಾಗಿ ಆದ ಒಟ್ಟು ವೆಚ್ಚದಲ್ಲಿ ಸಾರ್ವಜನಿಕ ಹಣದ ಉಪಯೋಗ
ಭಾರತ ೪೪.೩% ೭೦ ೫.೨% ೧೭.೩%
ಚೀನಾ ೧೮.೫% ೩೧ ೨.೭% ೨೪.೯%
ಶ್ರೀಲಂಕಾ ೬.೬% ೧೬ ೩.೦% ೪೫.೪%
ಇಂಗ್ಲೆಂಡ್‌ .೦೬ ೫.೮% ೯೬.೯%

ಮೂಲ: Draft National Health Policy 2001
http//www.mohfwinic.in/np 2001.htm

ಗಳಾಗಿ ಬೆಳೆದು ನಿಂತಿರುವ ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ ಹಾಗೂ ಅಮೆರಿಕ ತಾವು ಕೈಗಾರೀಕರಣಗೊಳ್ಳುತ್ತಿದ್ದು ಇನ್ನೂ ಅಭಿವೃದ್ಧಿಶೀಲ ದೇಶಗಳಾಗಿದ್ದ ಕಾಲದಲ್ಲಿ ಅವೂ ಸಹ ತಮ್ಮ ದೇಶೀಯ ಮಾರುಕಟ್ಟೆಗಳನ್ನು ವಿದೇಶಿಯರ ಸ್ಪರ್ಧೆಯಿಂದ ಕಾಪಾಡಿಕೊಳ್ಳಲು ವ್ಯಾಪಾರಿ ಸಂರಕ್ಷಣ ಕಾರ್ಯನೀತಿಯನ್ನೇ (Policy of trade protectionism) ಅನುಸರಿಸುತ್ತಿದ್ದವು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು. ಎರಡನೆಯದಾಗಿ ಸಾಮಾಜಿಕ ಸಂರಚಣೆಗಳ ಜೀವಾಳವೇ ಆಗಿರುವ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಇವುಗಳನ್ನು ಚೆನ್ನಾಗಿ ಬಲಪಡಿಸಿ ಗಟ್ಟಿಯಾಗಿ ಬೆಳೆಸಿದ ನಂತರವೇ ಅವು ಜಾಗತೀಕರಣದ ಆರ್ಥಿಕತೆಯನ್ನು ಸ್ವಾಗತಿಸಿದವು ಎಂಬುದನ್ನು ಮರೆಯಬಾರದು.[6],[7],[8], ಅಲ್ಲದೆ ಇಂದಿಗೂ ಇಂಗ್ಲೆಂಡಿನಲ್ಲಿ ಆರೋಗ್ಯಕ್ಕಾಗಿ ಮಾಡಲಾಗುತ್ತಿರುವ ಒಟ್ಟು ವೆಚ್ಚದಲ್ಲಿ ಶೇ. ೯೭ರಷ್ಟು ವೆಚ್ಚವನ್ನು ಸಾರ್ವಜನಿಕ ಹಣದಿಂದ ಸರ್ಕಾರವೇ ಭರಿಸುತ್ತಿದೆ ಎಂಬುದನ್ನು ಗಮನಿಸಬೇಕು (ಕೋಷ್ಟಕ-೨೫ ನೋಡಿ).

ಇಂದು, ಕಾರ್ಯನೀತಿಯ ಎಲ್ಲಾ ಆಯಾಮಗಳಲ್ಲಿ ಲಿಂಗತ್ವ ದೃಷ್ಟಿಕೋನವು ಬೇರ್ಪಡಿಸಲಾಗದ ರೀತಿಯಲ್ಲಿ ಹೆಣೆದುಕೊಂಡಿರುವಂತಹ ಒಂದು ಸಮಗ್ರವಾದ ಹೊಸದೇ ಆದ ಸಾರ್ವಜನಿಕ ಆರೋಗ್ಯ ಕಾರ್ಯನೀತಿಯೊಂದನ್ನು ರೂಪಿಸಬೆಕಾದ ಅಗತ್ಯವಿದೆ. ಇಂತಹ ಹೊಸ ಕಾರ್ಯನೀತಿಗೆ ಲಿಂಗತ್ವಾಧಾರಿತವಾದ ಆರೋಗ್ಯ ಸಮಾನತೆಯೇ ಮುಖ್ಯ ಗುರಿಯಾಗಿರಬೇಕಾಗುತ್ತದೆ. ಏಕೆಂದರೆ ಹೇಗೆ ಸಾಮಾಜಿಕ ವರ್ಗ ಮತ್ತು ಜಾತಿಗಳು ಜನರ ಆರೋಗ್ಯದಲ್ಲಿ ಅಸಮಾನತೆಯನ್ನು ಉಂಟುಮಾಡುತ್ತವೆಯೋ ಅದೇ ರೀತಿ ಲಿಂಗಾಧಾರಿತ ತಾರತಮ್ಯಗಳು ಆರೋಗ್ಯ ಅಸಮಾನತೆಗಳನ್ನು ಉಂಟುಮಾಡುತ್ತವೆ. ವರ್ಗ, ಜಾತಿ ಮತ್ತು ಲಿಂಗ ಬೇಧಗಳು ಇಂದು ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯಗಳಲ್ಲಿನ ಅಸಮಾನತೆಗಳಲ್ಲಿ ಪ್ರತಿಫಲಿಸುತ್ತಿವೆ. ಹಾಗಾಗಿ ಯಾರು ಸಮಾಜದಲ್ಲಿರುವ ಏಣಿಶ್ರೇಣಿಯಲ್ಲಿ ಕೆಳಗಿನ ಸ್ಥಾನಗಳಲ್ಲಿರುತ್ತಾರೆಯೋ ಅವರು ತಮ್ಮ ಲಿಂಗ, ಜಾತಿ, ಸಾಮಾಜಿಕ ಅರ್ಥಿಕ ವರ್ಗಗಳಿಗೆ ಅನುಸಾರವಾಗಿ ತಾರತಮ್ಯಗಳ/ಪಕ್ಷಪಾತಗಳ ದುಷ್ಪರಿಣಾಮಗಳಿಗೆ ಗುರಿಯಾಗುತ್ತಾರೆ. ಆದ್ದರಿಂದ ಯಾವುದೇ ಕಾರ್ಯನೀತಿಯು ಲಿಂಗತ್ವಾಧಾರಿತ ನ್ಯಾಯ ಸಮ್ಮತವಾಗಿ (Gender equitable) ಇರಬೇಕಾಗಿದ್ದಲ್ಲಿ ಅದು ಲಿಂಗತ್ವಾಧಾರಿತ ವಿಶ್ಲೇಷಣೆಯ (Gender analysis)ಬುನಾದಿಯ ಮೇಲೆ ರೂಪಿತವಾಗಬೇಕಾಗುತ್ತದೆ. ಇದಕ್ಕಾಗಿ ಮೊಟ್ಟಮೊದಲು, ಯಾವ್ಯಾವ ರೋಗಳು ಎಷ್ಟರಮಟ್ಟಿಗೆ ಹರಡಿವೆ ಎಂಬುದರ ಬಗ್ಗೆ, ಸಾವಿನ ಸಂಖ್ಯೆ, ಆರೋಗ್ಯ ಸೇವಾ ಸೌಲಭ್ಯಗಳನ್ನು ದಕ್ಕಿಸಿಕೊಂಡು ಉಪಯೋಗಿಸಿಕೊಳ್ಳಬಲ್ಲ ಅವಕಾಶಗಳು, ಆಹಾರ ಪೋಷಣೆ, ಆರ್ಥಿಕ ಹಾಗೂ ಇನ್ನಿತರ ಸಂಪನ್ಮೂಲಗಳ ಬಗ್ಗೆ ಮಾಹಿತಿಯನ್ನು ಸ್ತ್ರೀ ಹಾಗೂ ಪುರುಷರಿಗೆ ಅನ್ವಯಿಸಿದಂತೆ ಸಂಗ್ರಹಿಸಿ ವರ್ಗೀಕರಿಸಬೇಕಾಗುತ್ತದೆ. ಅದೇ ರೀತಿ ಆರೋಗ್ಯದ ಮೇಲೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪರಿಣಾಮ ಬೀರಬಲ್ಲ ಅನೇಕ ಅಂಶಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ, ನಂತರ ಎಲ್ಲಾ ದತ್ತಾಂಶಗಳನ್ನು ಲಿಂಗತ್ವ ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಇಂತಹ ವಿಶ್ಲೇಷಣೆಯು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಮುಖ್ಯ ವಿಷಯಗಳಲ್ಲಿ ಸ್ತ್ರೀ ಮತ್ತು ಪುರುಷರ ನಡುವೆ ಇರುವ ಅಸಮಾನತೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಉದಾಹರಣೆಗೆ ಸ್ತ್ರೀ ಪುರುಷರ ನಡುವೆ ಯಾವ್ಯಾವ ಕಾಯಿಲೆಗಳು ಎಷ್ಟು ಬಾರಿ, ಎಷ್ಟು ತೀವ್ರವಾಗಿ ಉಂಟಾಗುತ್ತಿವೆ ಮತ್ತು ಇಂತಹ ಕಾಯಿಲೆಗಳಿಗೆ ಪಕ್ಕಾಗುವ ಅಪಾಯಗಳನ್ನು ಎದುರಿಸುವಲ್ಲಿ ಸ್ತ್ರೀ ಪುರುಷರಲ್ಲಿ ಏನಾದರೂ ವ್ಯತ್ಯಾಸವಿದೆಯೇ? ಇದ್ದರೆ ಎಷ್ಟು? ಈ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವಲ್ಲಿ ವ್ಯತ್ಯಾಸವಿದೆಯೇ? ಇತ್ಯಾದಿ ಮಾಹಿತಿಯನ್ನು ಲಿಂಗತ್ವ ವಿಶ್ಲೇಷಣೆ ನೀಡಬಲ್ಲದು. ಅಲ್ಲದೆ ಆರೋಗ್ಯವನ್ನು ಕಾಪಾಡಿ ಸದೃಢಗೊಳಿಸಬಲ್ಲ ಸಂಪನ್ಮೂಲಗಳಾದ ಆರೋಗ್ಯ, ಆರೋಗ್ಯ ಸೇವಾ ಸೌಲಭ್ಯಗಳು, ಆರೋಗ್ಯ ಶಿಕ್ಷಣ, ಆದಯಾ ಇತ್ಯಾದಿಗಳನ್ನು ದಕ್ಕಿಸಿಕೊಂಡು ಉಪಯೋಗಿಸಿಕೊಳ್ಳುವಲ್ಲಿ ಇರುವ ಲಿಂಗ ಅಸಮಾನತೆಗಳನ್ನು ಲಿಂಗತ್ವ ವಿಶ್ಲೇಷಣೆ ಎತ್ತಿ ತೋರಿಸುತ್ತದೆ. ಆದ್ದರಿಂದಲೇ, ಆರೋಗ್ಯ ವಲಯದ ಪ್ರಯತ್ನಗಳು ಯಶಸ್ವಿಯಾಗಲು ಹಾಗೂ ಆರೋಗ್ಯದ ಹಕ್ಕುಗಳು ಸ್ತ್ರೀ ಪುರುಷರಿಬ್ಬರಲ್ಲೂ ಸಮಾನವಾಗಿ ಜಾರಿಯಾಗಲು ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಲಿಂಗತ್ವ ವಿಶ್ಲೇಷಣೆಗೆ ಒಳಪಡಿಸುವುದು ಅತ್ಯಗತ್ಯ. ಇಂತಹ ವಿಶ್ಲೇಷಣೆ ನಡೆಸುವಾಗ ಎಂತಹ ಆರೋಗ್ಯ ಸೇವಾ ಸೌಲಭ್ಯಗಳನ್ನು ಯಾರಿಗೆ ಎಷ್ಟು ಒದಗಿಸುತ್ತಿದ್ದೇವೆ ಮತ್ತು ಹೀಗೆ ಲಭ್ಯವಿರುವ ಸೇವಾ ಸೌಲಭ್ಯಗಳನ್ನು ಯಾರು ಉಪಯೋಗಿಸುತ್ತಿದ್ದಾರೆ ಎಂಬ ಪ್ರಶ್ನೆಗಳು ಸಹಜವಾಗಿ ಎದುರಾಗುತ್ತವೆ. ಹಾಗಾಗಿ ಆರೋಗ್ಯಕ್ಕೆ ಅನ್ವಯಿಸುವ ಎಲ್ಲಾ ಕಾರ್ಯನೀತಿಗಳು, ಕಾರ್ಯಕ್ರಮಗಳು ಮತ್ತು ಯೋಜನೆಗಳು ಸ್ತ್ರೀ ಪುರುಷರಿಬ್ಬರ ಆರೋಗ್ಯವನ್ನು ಸಂರಕ್ಷಿಸಿ ಬಲಗೊಳಿಸಬೇಕೇ ಹೊರತು, ಅವುಗಳು ಆರೋಗ್ಯಕ್ಕೆ ಹಾನಿಕಾರವಾದ ಯಾವುದೇ ಸ್ತ್ರೀ ಪುರುಷ ರೂಢಿಗತ ಲಿಂಗತ್ವ ಪಾತ್ರಗಳನ್ನು (Gender role stereotypes) ಬಲಪಡಿಸುವುದಾಗಲೀ ಅಂತಹ ಹೊಸ ಲಿಂಗತ್ವ ಪಾತ್ರಗಳನ್ನು ಸೃಜಿಸುವುದಾಗಲೀ ಮಾಡದಂತೆ ನೋಡಿಕೊಳ್ಳುವುದೇ ಲಿಂಗತ್ವ ವಿಶ್ಲೇಷಣೆಯ ಮುಖ್ಯ ಗುರಿ.[9]

ಆದರೆ, ಇಂದಿನವರೆಗಿನ ಸ್ತ್ರೀಯರನ್ನು ಕುರಿತ ಆರೋಗ್ಯ ಕಾರ್ಯನೀತಿಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಸ್ತ್ರೀಯರ ಫಲವತ್ತತೆ ಅದರ ನಿಯಂತ್ರಣ, ಬಸಿರು ಹಾಗೂ ಬಾಣಂತಿತನಗಳ ಅವಧಿಯ ಆರೋಗ್ಯದ ಬಗ್ಗೆಯೇ ಹೆಚ್ಚು ಒತ್ತು ಇರುವುದನ್ನು ಕಾಣಬಹುದು. ಹೀಗೆ ಪ್ರಜನನ ವಯೋಮಾನದಲ್ಲಿರುವ ಸ್ತ್ರೀಯರ ಆರೋಗ್ಯಕ್ಕೆ ಮಾತ್ರ ಒತ್ತು ನೀಡುವುದನ್ನು, ವಿಶ್ವದಾದ್ಯಂತ ಸ್ತ್ರೀವಾದಿಗಳು ಹಾಗೂ ಸ್ತ್ರೀ ಆರೋಗ್ಯ ಚಳವಳಿಗಳಲ್ಲಿ ಇರುವ ಕ್ರಿಯಾಶೀಲ ಕಾರ್ಯಕರ್ತರುಗಳು ಉಗ್ರವಾಗಿ ವಿರೋಧಿಸುತ್ತಿದ್ದಾರೆ. ಈ ವಿರೋಧದ ಧ್ವನಿ ಮೊದಲಿನಿಂದಲೂ ಇದ್ದು ಇಂದು ಗಟ್ಟಿಯಾಗಿ ಕೇಳಿಬರುತ್ತಿದೆ. ಪ್ರಜನನ ವಯೋಮಾನದಲ್ಲಿರುವ ಸ್ತ್ರೀಯರ ಆರೋಗ್ಯಪಾಲನೆಗೆ ಮಾತ್ರವಲ್ಲದೆ ಎಲ್ಲಾ ವಯೋಮಾನಗಳ ಸ್ತ್ರೀಯರ ಪ್ರಜನನ ಆರೋಗ್ಯಕ್ಕೆ ವಿಶಾಲವ್ಯಾಪ್ತಿಯ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸಬೇಕೆನ್ನುವುದು ಅವರ ವಾದ. ಸ್ತ್ರೀಯರ ಮಾನಸಿಕ ಮತ್ತು ಔದ್ಯೋಗಿಕ ಆರೋಗ್ಯ ಪಾಲೆಗೂ (Occupational health care) ಅನ್ವಯಿಸುವಂತಹ ಆರೋಗ್ಯ ಸೇವಾ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದೂ ಅವರ ಬೇಡಿಕೆಯಾಗಿದೆ. ಅಲ್ಲದೆ, ರೋಗ ನಿರೋಧಕ ಕ್ರಮಗಳನ್ನು, ರೋಗ ಚಿಕಿತ್ಸಾ ಸೌಲಭ್ಯಗಳನ್ನು ಹಾಗೂ ಸ್ತ್ರೀಯರನ್ನು ಸಬಲೀಕರಣಗೊಳಿಸಬಹುದಾದ ಎಲ್ಲಾ ಬಗೆಯ ಆರೋಗ್ಯ ಸಂಬಂಧಿ ಮಾಹಿತಿಯನ್ನು ಮಹಿಳೆಯರು ದಕ್ಕಿಸಿಕೊಂಡು ಉಪಯೋಗಿಸುವಂತೆ ಆಗಬೇಕು ಎನ್ನುವುದು ಅವರ ಹಕ್ಕೊತ್ತಾಯವಾಗಿದೆ.

ಆರೋಗ್ಯವಲಯದ ಬಜೆಟ್‌ನಲ್ಲಿ ಕೇವಲ ‘ಕುಟುಂಬ ಕಲ್ಯಾಣ’ ಎಂಬ ಹಣೆಪಟ್ಟಿಯಡಿಯಲ್ಲಿ ಬರೀ ಸಂತಾನ ನಿರೋಧಕಗಳಿಗಾಗಿಯೇ ೩೦-೩೪% ರಷ್ಟು ಹಣವನ್ನು ಮೀಸಲಿರಿಸಿದ್ದನ್ನು ಹಾಗೂ ೫೨-೫೫% ಪಾಲನ್ನು ತಾಯ್ತನ ಪಾಲನೆ, ಶಿಶುಮರಣಗಳ ತಡೆಗಟ್ಟುವಿಕೆ, ಹದಿಹರೆಯದ ಹುಡುಗಿಯರ ಅರೋಗ್ಯ ಇತ್ಯಾದಿಗಳಿಗೆ ತೆಗೆದಿರಿಸಿದ್ದನ್ನು ೨೦೦೦-೦೧ರಲ್ಲಿ ನಡೆಸಿದ ಪರ್ಯಾಯ ಆರ್ಥಿಕ ಸಮೀಕ್ಷೆ ಎತ್ತಿ ತೋರಿಸಿರುವುದನ್ನು ಪ್ರಸ್ತುತ ಸಂದರ್ಭದಲ್ಲಿ ಮುಖ್ಯವಾಗಿ ಗಮನಿಸಬೇಕು. ಏಕೆಂದರೆ ಇದು, ಸ್ತ್ರೀ ಆರೋಗ್ಯ ಎಂದರೆ ಅದು ಅವಳ ಪ್ರಜನನ ಆರೋಗ್ಯ ಅದರಲ್ಲೂ ತಾಯ್ತನಕ್ಕೆ ಸಂಬಂಧಿಸಿದ ಪ್ರಜನನ ಆರೋಗ್ಯ ಮಾತ್ರ ಎಂಬ ಸೀಮಿತ ದೃಷ್ಟಿಯು ನಮ್ಮ ಆರೋಗ್ಯ ಕಾರ್ಯನೀತಿಯಲ್ಲಿ ಢಾಳಾಗಿ ಇರುವುದನ್ನು ಸಾಬೀತುಪಡಿಸುತ್ತದೆ. ಹೀಗೆ ಹೆಂಗಸು ಎಂದರೆ ಅವಳ ತಾಯ್ತನ, ಅವಳ ಆರೋಗ್ಯವೆಂದರೆ ಅವಳು ತಾಯಿಯಾಗುವ ಹಾಗೂ ತಾಯಿಯಾದ ನಂತರದ ಕೆಲವು ತಿಂಗಳುಗಳ ಅವಧಿಯ ಆರೋಗ್ಯ ಮಾತ್ರ ಎಂಬ ಸೀಮಿತ ದೃಷ್ಟಿಯನ್ನು ಈ ಕಾರ್ಯನೀತಿ ಒಳಗೊಂಡಿರುವುದು ಈ ಕಾರ್ಯನೀತಿ ಆಧಾರಿತ ಬಜೆಟ್‌ನಿಂದ ಸ್ಪಷ್ಟವಾಗುತ್ತದೆ. ೧೯೮೧ ರಿಂದ ೧೯೯೪ರ ಅಂಕಿ ಅಂಶಗಳನ್ನೇ ತೆಗೆದುಕೊಂಡಲ್ಲಿ ಪ್ರಜನನ ವಯೋಮಾನದಲ್ಲಿದ್ದ ಅಂದರೆ ೧೫-೪೪ ವರ್ಷದೊಳಗಿನ ಹೆಣ್ಣು ಮಕ್ಕಳಲ್ಲಿ ಈ ಹದಿನಾಲ್ಕು ವರ್ಷಗಳ ಅವಧಿಯಲ್ಲಿ ಬಡತನದ ರೋಗವೆಂದೇ ಹೆಸರುವಾಸಿಯಾಗಿರುವ ಶ್ವಾಸಕೋಶಗಳ ಕ್ಷಯ ಈ ಹೆಣ್ಣು ಮಕ್ಕಳ ಮರಣಕ್ಕೆ ಕಾರಣವಾದ ಹತ್ತು ರೋಗಗಳ ಪಟ್ಟಿಯಲ್ಲಿ ಸತತವಾಗಿ ಅಷ್ಟು ವರ್ಷಗಳು, ಮೊದಲ ಸ್ಥಾನ ಪಡೆದಿತ್ತು ಎಂಬುದನ್ನು ಗಮನಿಸಿದಾಗ ನಮ್ಮ ಸರ್ಕಾರದ ಆರೋಗ್ಯ ಕಾರ್ಯನೀತಿಯ ಪ್ರಸ್ತುತ ಸಮಗ್ರತೆಯನ್ನೇ ಪ್ರಶ್ನಿಸುವಂತಾಗುತ್ತದೆ (ಆರ್‌.ಜಿ.ಐ. ೧೯೮೧-೯೪).5 ಹಾಗಾಗಿ ಇಂದು ಸಮಗ್ರವಾದ ಹೊಸ ಕಾರ್ಯನೀತಿಯೊಂದನ್ನು ರೂಪಿಸುವ ಅಗತ್ಯವಿದೆ. ಹೊಸ ಕಾರ್ಯನೀತಿಯಲ್ಲಿ ಸಮಗ್ರತೆಯನ್ನು ತರಲು ಮೂಲಭೂತವಾಗಿ ಐದು ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇವುಗಳೆಂದರೆ ಆರೋಗ್ಯವನ್ನು ಕುರಿತಂತೆ ಇರಬೇಕಾದ ಸಾರ್ವಜನಿಕವಾದ ಪಾರದರ್ಶಕ ಆಡಳಿತ, ಸಮಗ್ರತೆ, ಸಾರ್ವತ್ರಿಕತೆ, ಸಂಚಾರಿ ಆರೋಗ್ಯ ಸೌಲಭ್ಯಗಳ ಲಭ್ಯತೆ ಹಾಗೂ ಸೇವಾ ಸೌಲಭ್ಯಗಳ ದಕ್ಕುವಿಕೆ (Accessiblility). ಈ ಐದು ಅಂಶಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಆರೋಗ್ಯ ಕಾರ್ಯನೀತಿಗಳ್ಲಲಿ ಅಳವಡಿಸಿಕೊಳ್ಳಬೇಕಾಗಿದೆ.

[1] Altemate Economic Survey Group (2000).Alternate Economic Survey, 1998-2000. Delhi, Rainbown Publishers.

[2] GOI (2006),Platform for Action, 10 years after : India Country Report., New Delhi, Department of Women and Child Development, Ministry of Human Resource Development, p. 25-35.

[3] Krishnaraj M. (1993), “The New Economic Policy: Safeguarding women’s Interests’’ in. The New Economic Policy : a Collection of Background papers to sixth national conference. Indian Association for Women Studies., p. 3-10.

[4] Druvy N. (1999),“Gender Implication of New Economic Policies’’ in Disinvesting in Health : The World Bank’s Prescriptions for Health., Mohan Rao (Ed), New Delhi, Sage Publications.

[5] Gopalan Sarala and Mira Shiva (2000),National Profile on Women, Health and Development, New Delhi, Voluntary Health Association of India & WHO.

[6] Dietrich Gabriele (2001), “Globalisation and Women in India in the 90’s’’, IAWS News letter ., September 2001, p. 2 to 8 & 15.

[7] Health Watch (2000), News Letter, Bangalore, Health Watch Trust.

[8] Krishnaswamy Saroja, “Health Empowerment of Indian Women in the Context of Globalization’’, Indian Journal of Social Research, 47(2) p.149-158.

[9] Baume Elaine, Mercedes, Jurez and Hillary Standing (2000), Gender and Health equity folder, online resource downloaded from www.ids.ac/uk/bridge/reports/gender folder.