ಹಿಂದಿನ ಅಧ್ಯಾಯದಲ್ಲಿ ಸ್ತ್ರೀ ಆರೋಗ್ಯಕ್ಕೆ ಅನ್ವಯಿಸಿದಂತೆ ಸಾರ್ವಜನಿಕ ವಲಯದ ಯೋಜನೆಗಳಾದ ಪಂಚವಾರ್ಷಿಕ ಯೋಜನೆಗಳ ಸಾಧನೆ ಮತ್ತು ವೈಫಲ್ಯಗಳ ಪರಿಶೀಲನೆ ಆಗಿದ್ದರೂ ಸಹ ಮತ್ತೇಕೆ ಗರ್ಭನಿರೋಧಕಗಳ ಬಗ್ಗೆ ಪ್ರತ್ಯೇಕ ಚರ್ಚೆ ಎಂಬ ಪ್ರಶ್ನೆಯೇಳುವುದು ಸಹಜ. ಆದರೆ ಸ್ತ್ರೀಯರ ಆರೋಗ್ಯವನ್ನು ಅವರ ಪ್ರಜನನ ವಯೋಮಾನದ ಅದರಲ್ಲಿಯೂ ತಾಯ್ತನಕ್ಕೆ ಸಂಬಂಧಿಸಿದ ಆರೋಗ್ಯವೆಂದೇ ಪರಿಭಾವಿಸಿ ಅದನ್ನು ಜನಸಂಖ್ಯಾ ನಿಯಂತ್ರಣದ ಚೌಕಟ್ಟಿನೊಳಗೆ ಅದಕ್ಕೆ ಸಂಬಂಧಿಸಿದ ಕಾರ್ಯನೀತಿ, ಕಾರ್ಯಯೋಜನೆ ಮತ್ತು ಕಾರ್ಯಕ್ರಮಗಳನ್ನು ನಿರೂಪಿಸಿ ಜಾರಿಗೆ ತಂದಿರುವುದು ಇದುವರೆಗಿನ ಪಂಚವಾರ್ಷಿಕ ಯೋಜನೆಗಳ ಪರಿಶೀಲನೆಯಲ್ಲಿ ಎದ್ದು ಕಾಣಿಸುತ್ತದೆ. ಇದರಿಂದಾಗಿ ಭಾರತೀಯ ಮಹಿಳೆಯರ ಸಾಮಾನ್ಯ ಆರೋಗ್ಯ (General Health) ಮತ್ತು ಪ್ರಜನನ ಆರೋಗ್ಯದ (Reproductive Health)ಮೇಲೆ ಆಗಿರುವ, ಆಗುತ್ತಿರುವ ಪರಿಣಾಮಗಳು ಪರಿಶೀಲನಾರ್ಹ. ಅಲ್ಲದೆ ಕಳೆದ ಐದು ದಶಕಗಳ ಹಾಗೂ ಹಾಲೀ ಪಂಚವಾರ್ಷಿಕ ಯೋಜನೆಗಳಲ್ಲಿ ಪ್ರಚಲಿತಗೊಳಿಸಲಾಗುತ್ತಿರುವ ಮತ್ತು ಸಂಶೋಧಿಸಲಾಗುತ್ತಿರುವ ಗರ್ಭನಿರೋಧಕಗಳ ಸಾಧಕ-ಬಾಧಕಗಳನ್ನು ಸ್ತ್ರೀ ಆರೋಗ್ಯಕ್ಕೆ ಅನ್ವಯಿಸಿದಂತೆ ಪ್ರತ್ಯೇಕವಾಗಿ ವಿಶ್ಲೇಷಿಸುವ ಅಗತ್ಯವಿದೆ.

ಈಗಾಗಲೇ ಬಳಕೆಯಲ್ಲಿರುವ ಹಲವು ತಾತ್ಕಾಲಿಕ ಮತ್ತು ಶಾಶ್ವತ ಸಂತಾನ ನಿರೋಧಕ ವಿಧಾನಗಳನ್ನು ಕುರಿತ ವಿಸ್ತಾರವಾದ ವಿವರಣೆ ಹಾಗೂ ಸ್ತ್ರೀವಾದಿ ವಿಶ್ಲೇಷಣೆಗಾಗಿ ಇದೇ ಲೇಖಕಿಯ ‘ಮಹಿಳೆ ಮತ್ತು ಆರೋಗ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಕೃತಿಯ ೧೦೯-೧೨೬ ಪುಟಗಳನ್ನು ನೋಡಬಹುದು. ಆದ್ದರಿಂದ, ಅವುಗಳನ್ನು ಇಲ್ಲಿ ಬಿಟ್ಟು, ನಮ್ಮ ದೇಶದಲ್ಲಿ ತೀರಾ ಇತ್ತೀಚೆಗೆ ಪ್ರಚಲಿತಗೊಳಿಸಲಾಗುತ್ತಿರುವ ಅತ್ಯಾಧುನಿಕ ಗರ್ಭನಿರೋಧಕಗಳ ಸಾಧಕ ಬಾಧಕಗಳನ್ನು ಹಾಗೂ ಈ ಹೊಸ ಗರ್ಭನಿರೋಧಕಗಳ ಬಗ್ಗೆ ನಡೆಸಲಾಗುತ್ತಿರುವ ಸಂಶೋಧನೆಗಳ ದಿಕ್ಕು ಧೋರಣೆಗಳನ್ನು ಸ್ತ್ರೀ ಆರೋಗ್ಯದ ದೃಷ್ಟಿಯಿಂದ ಇಲ್ಲಿ ಪರಿಶೀಲಿಸಲಾಗಿದೆ.

೧೯೫೨ರಷ್ಟು ಹಿಂದೆಯೇ ನಮ್ಮ ದೇಶದಲ್ಲಿ ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದ್ದು, ಆಗ ಕುಟುಂಬ ಯೋಜನಾ ಕಾರ್ಯಕ್ರಮಗಳಲ್ಲಿ ಪುರುಷರ ಸಂತಾನಹರಣ ಶಸ್ತ್ರಚಿಕಿತ್ಸೆ, ಕಾಂಡೋಮ್‌ ಮತ್ತು ಸುರಕ್ಷಿತ ಅವಧಿಯಲ್ಲಿ ಮಾತ್ರ ಸಂಭೋಗ ಎನ್ನುವಂತಹ ವಿಧಾನಗಳ ಮೇಲೆ ಒತ್ತು ಹಾಕಲಾಗಿತ್ತು. ೧೯೬೦ರ ವೇಳೆಗೆ ಗರ್ಭಕೋಶದಲ್ಲಿ ಇರಿಸುವ ಗರ್ಭನಿರೋಧಕ ಸಾಧನಗಳ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಆರಂಭದಲ್ಲಿ ಇಂತಹ ಗರ್ಭನಿರೋಧಕ ಸಾಧನವಾದ ಲೂಪ್‌/ಕಾಪರ್‌ಟಿ ಅನ್ನು ತಮ್ಮ ಗರ್ಭದಲ್ಲಿ ಧರಿಸಲು ಒಪ್ಪಿದ ಮಹಿಳೆಯರ ಸಂಖ್ಯೆಯೂ ಗಣನೀಯವಾಗಿ ದೊಡ್ಡದಾಗಿಯೇ ಇತ್ತು. ಆದರೆ ಬಹಳ ಬೇಗನೆ ಈ ಗರ್ಭನಿರೋಧಕ ಸಾಧನವು ಜನಪ್ರಿಯತೆಯನ್ನು ಕಳೆದುಕೊಂಡಿತು. ಸರಿಯಾಗಿ ಲೂಪ್‌ಅಥವಾ ಕಾಪರ್‌ಟಿಯನ್ನು ಅರೆವೈದ್ಯಕೀಯ ಸಿಬ್ಬಂದಿಯು ಸ್ತ್ರೀಯರ ಗರ್ಭಕೋಶದಲ್ಲಿ ಅಳವಡಿಸದೇ ಇದ್ದದ್ದು, ಅಳವಡಿಸಿದ ನಂತರ ನಿಯಮಿತವಾಗಿ ಮಾಡಲೇಬೇಕಾಗಿರುವ ತಪಾಸಣೆಗಳನ್ನು ಮಾಡದೇ ಬಿಟ್ಟಿದ್ದು ಹಾಗೂ ಸಾಧನದಿಂದ ಮಹಿಳೆಯರಿಗೆ ಉಂಟಾದ ಹಲವು ತೊಂದರೆಗಳಿಗೆ ಕುಟುಂಬ ಯೋಜನಾ ಕಾರ್ಯಕರ್ತರು ಸರಿಯಾಗಿ ಸ್ಪಂದಿಸದೇ ಹೋಗಿದ್ದು, ಈ ವಿಧಾನವು ಜನಪ್ರಿಯತೆಯನ್ನು ಕಳೆದುಕೊಳ್ಳಲು ಕಾರಣಗಳಾದವು. ೧೯೭೦ರಲ್ಲಿ ಮತ್ತೆ ಪುರುಷರ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ತೀವ್ರವಾಗಿ ಪ್ರಚಾರ ಮಾಡಿ, ಪ್ರತಿಪಾದಿಸಿ ದೇಶದಾದ್ಯಂತ ಸಾಮೂಹಿಕ ಶಿಬಿರಗಳಲ್ಲಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು. ಆದರೆ ೧೯೮೦ರಿಂದಿಚೇಗೆ ಚೋದನಿಯುಕ್ತ ಗರ್ಭನಿರೋಧಕಗಳನ್ನು ಕುಟುಂಬ ಯೋಜನಾ ಕಾರ್ಯಕ್ರಮಗಳಲ್ಲಿ ಬಳಸಲಾರಂಭಿಸಲಾಯಿತು.

೧೯೮೪ರಲ್ಲಿ ಗರ್ಭನಿರೋಧಕ ಸಾಧನಗಳ ಎಲ್ಲೆಡೆ ಸಿಗುವಂತೆ ಮಾಡಲು ಸರ್ಕಾರ ಅವುಗಳ ಬೆಲೆಯನ್ನು ತೀವ್ರವಾಗಿ ಸಬ್ಸಿಡಿಗಳ ಮೂಲಕ ಇಳಿಸಿ ಅವು ಸಮುದಾಯ ಹಂಚಿಕೆ ವ್ಯವಸ್ಥೆಯ ಮೂಲಕ ಎಲ್ಲೆಡೆ ಅಂಗಡಿಗಳಲ್ಲಿ ಸಿಗುವಂತೆ ಮಾಡಿತು. ಜನರಿಗೆ ಇದುವರೆಗೂ ಪೂರೈಸಲಾಗದಿದ್ದ ಗರ್ಭನಿರೋಧಕಗಳ ಅಗತ್ಯವನ್ನು ಪೂರೈಸುವ ಮಹತ್ವಾಕಾಂಕ್ಷೆಯ ಗುರಿ ಈ ಕಾರ್ಯಕ್ರಮಕ್ಕೆ ಇತ್ತು. ಅಂತರ ರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಗಳ ಒತ್ತಾಯದ ಮೇರೆಗೆ ಅವು ದಾನ ಮಾಡಿದ ಚೋದನಿಯುಕ್ತ ಗರ್ಭನಿರೋಧಕ ಮಾತ್ರೆಗಳನ್ನು ಹಾಗೂ ಕಾಂಡೋಮ್‌ಗಳನ್ನು ಅತ್ಯಂತ ದೂರದ ಹಳ್ಳಿಗಾಡುಗಳಲ್ಲೂ ಮಾರಾಟಕ್ಕೆ ಇರಿಸಲಾಯಿತು. ಆದರೆ ಗರ್ಭನಿರೋಧಕ ಮಾತ್ರೆಗಳ ಸೇವನೆಯನ್ನು ಆರಂಭಿಸುವ ಮೊದಲು ನಡೆಸಬೇಕಾಗಿದ್ದ ತಪಾಸಣೆಯಾಗಲೀ ಮಾತ್ರೆಗಳ ಸೇವೆಯನ್ನು ಆರಂಭಿಸಿದ ನಂತರ ನಿಯಮಿತವಾಗಿ ಅವುಗಳನ್ನು ಮಹಿಳೆ ತೆಗೆದುಕೊಳ್ಳುತ್ತಾ ಇದ್ದಾಳೋ ಇಲ್ಲವೋ ಎಂಬುದನ್ನು ಹಾಗೂ ಅವುಗಳ ಸೇವನೆಯಿಂದ ಅಡ್ಡ ಪರಿಣಾಮಗಳೇನಾದರೂ ಉಂಟಾಗಿವೆಯೇ ಎಂಬುದನ್ನು ತಿಳಿದುಕೊಂಡು ಚಿಕಿತ್ಸೆ ಮಾಡಲು ಬೇಕಾಗುವ ನಿಯಮಿತ ಆರೋಗ್ಯ ತಪಾಸಣೆ, ಚಿಕಿತ್ಸೆಗಳೊಂದೂ ಸಾಧ್ಯವಾಗಲಿಲ್ಲ. ತತ್ಪರಿಣಾಮವಾಗಿ ಒಂದೆಡೆ ಮಾತ್ರೆಗಳ ಅನಿಯಮಿತ ಸೇವನೆಯಿಂದಾಗಿ ಬೇಡದ ಬಸಿರುಗಳು ಉಂಟಾದರೆ ಇನ್ನೊಂದೆಡೆ ಸ್ತ್ರೀಯರ ಆರೋಗ್ಯಕ್ಕೆ ಅಪಾಯಗಳು ಹೆಚ್ಚಾದವು.

[1]

೧೯೯೭ರ ವರೆಗೂ ಭಾರತೀಯ ಕುಟುಂಬ ಯೋಜನಾ ಕಾರ್ಯಕ್ರಮವು ಒಂದಲ್ಲಾ ಒಂದು ಪ್ರೋತ್ಸಾಹಕಗಳು (Incentive) ಮತ್ತು ನಿರುತ್ಸಾಹಕಗಳನ್ನು (Disincentives) ಬಳಸಿಕೊಂಡು ಇಂತಿಷ್ಟು ಜನರಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮತ್ತು ಇಷ್ಟು ಜನಸಂಖ್ಯೆಗೆ ತಾತ್ಕಾಲಿಕ ಗರ್ಭನಿರೋಧಕಗಳ ಅಳವಡಿಕೆ ಎಂಬ ಸೂತ್ರದ ಆಧಾರದ ಮೇಲೆಯೇ ತನ್ನ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿತು. ಹೀಗೆ ಇಂತಿಷ್ಟು ಕೋಟಾಗಳನ್ನು ಸಾಧಿಸಲೇಬೇಕೆಂಬ ಗುರಿ ಕೇಂದ್ರಿತ ಧೋರಣೆಯನ್ನು ಕೈರೋ ನಗರದಲ್ಲಿ ನಡೆದ ಜನಸಂಖ್ಯೆ ಮತ್ತು ಅಭಿವೃದ್ಧಿಯನ್ನು ಕುರಿತ ಅಂತರ ರಾಷ್ಟ್ರೀಯ ಸಮಾವೇಶದಲ್ಲಿ (ICPD=International Conference on Population Development) ನಿರ್ಣಯಿಸಲಾದ ಶಿಪಾರಸ್‌/ಷರತ್ತುಗಳಿಗೆ ಭಾರತ ಸರ್ಕಾರ ಸಹಿ ಹಾಕಿದ ನಂತರ ಕೈಬಿಡಲಾಯಿತು.

ತದ್ವಿರುದ್ಧವಾಗಿ ಆಯಾ ಸಮುದಾಯಗಳ ಗರ್ಭನಿರೋಧಕ ಅಗತ್ಯಗಳನ್ನು ಪರಿಶೀಲಿಸಿ ಅದರ ಆಧಾರದ ಮೇಲೆ ಗರ್ಭನಿರೋಧಕ ವಿಧಾನ/ಸಾಧನಗಳ ಪೂರೈಕೆಗೆ ತಕ್ಕ ಕಾರ್ಯಕ್ರಮಗಳನ್ನು ಯೋಜಿಸಿ ಜಾರಿಗೆ ತರುವ ಧೋರಣೆಯನ್ನು ಕುಟುಂಬ ಕಲ್ಯಾಣ ಇಲಾಖೆಯು ಅಳವಡಿಸಿಕೊಂಡಿತು. ೧೯೯೭ರ ವೇಳೆಗೆ ಕೇಂದ್ರ ಸರ್ಕಾರದ ಕುಟುಂಬ ಕಲ್ಯಾಣ ಇಲಾಖೆಯು ಪ್ರಜನನ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮವನ್ನು (Reproductive and Child Health program) ದೇಶದಾದ್ಯಂತ ಜಾರಿಗೆ ತಂದು ಅದರೊಳಗೆ ಕುಟುಂಬಯೋಜನೆಯನ್ನು ಸಮನ್ವಯಗೊಳಿಸಿತು. ಗರ್ಭನಿರೋಧಕಗಳು ಮಹಿಳೆಯರಿಗೆ ಸುಲಭವಾಗಿ ದಕ್ಕುವಂತೆ ಮಾಡುವುದು ಹಾಗೂ ಬೇಡದ ಬಸಿರುಗಳನ್ನು ನಿವಾರಿಸಿ ನಿರ್ವಹಿಸುವ ವಿಧಾನಗಳಿಗೆ ಈ ಹೊಸ ಯೋಜನೆಯಲ್ಲಿ ಪ್ರಾಮುಖ್ಯತೆಯನ್ನು ನೀಡಲಾಯಿತು.1

ಪ್ರಸ್ತುತ ಪ್ರಜನನ ಮತ್ತು ಮಗುವಿನ ಆರೋಗ್ಯ ಕಾರ್ಯಕ್ರಮದೊಂದಿಗೆ ಕುಟುಂಬ ಯೋಜನೆಯನ್ನು ಸಮನ್ವಯಗೊಳಿಸಲಾಗಿರುವುದರಿಂದಲೋ ಏನೋ ತಮ್ಮ ಮಕ್ಕಳಿಗೆ ಸೋಂಕು ನಿರೋಧಕ ಚುಚ್ಚುಮದ್ದು ಹಾಕಿಸಲು ಹೋದಾಗ, ಸಂತಾನ ಶಕ್ತಿ ನಿರೋಧಕ ಶಸ್ತ್ರ ಚಿಕಿತ್ಸೆಗೆ ಒಳಗಾಗುವಂತೆ ಅಥವಾ ಇನ್ನಿತರ ತಾತ್ಕಾಲಿಕ ಗರ್ಭನಿರೋಧಕ ಸಾಧನಗಳನ್ನು ಅಳವಡಿಸಿಕೊಳ್ಳುವಂತೆ ಮಹಿಳೆಯರ ಮೇಲೆ ಒತ್ತಡ ಹೇರಲಾಗುತ್ತಿದೆ.1 ಇದರಿಂದಾಗಿ ಕೆಲವು ಸಾರಿ ಮಹಿಳೆಯರು, ತಾಯ್ತನ ಮತ್ತು ಮಕ್ಕಳ ಆರೋಗ್ಯ ಸೇವಾ ಸೌಲಭ್ಯಗಳನ್ನು (MCH services) ಉಪಯೋಗಿಸಲು ಹಿಂಜರಿಯುತ್ತಾರೆ. ಅಲ್ಲದೇ ತಾಯಿ ಮಕ್ಕಳ ಆರೋಗ್ಯ ಸೇವಾ ಸೌಲಭ್ಯಗಳಾಗಳಿ ಅಥವಾ ಪ್ರಜನನ ಸೇವಾ ಸೌಲಭ್ಯಗಳಾಗಲೀ ಹದಿಹರೆಯದ ಹುಡುಗಿಯರಿಗೆ ಅದರಲ್ಲಿಯೂ ಅವಿವಾಹಿತೆಯರಿಗೆ ದಕ್ಕುವಂತೆಯೇ ಇಲ್ಲ. ಬಾಂಗ್‌ಮತ್ತು ಬಾಂಗ್‌(೧೯೯೨) ಗ್ರಾಮೀಣ ಪ್ರದೇಶಗಳಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ೪೬.೭%ರಷ್ಟು ಅವಿವಾಹಿಯ ಹುಡುಗಿಯರು ಸಂಭೋಗಕ್ಕೆ ಒಳಗಾಗಿದ್ದನ್ನು ವರದಿ ಮಾಡಿದ್ದಾರೆ.[2] ಭಾರತೀಯ ಸಮಾಜ ಹಾಗೂ ಸಂಸ್ಕೃತಿಯಲ್ಲಿ ವಿವಾಹ ಪೂರ್ವ ಹಾಗೂ ವಿವಾಹ ಬಾಹಿರ ಸಂಭೋಗವನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವುದರಿಂದ ಅಂತಹ ಪ್ರಕರಣಗಳು ಇಲ್ಲವೇ ಇಲ್ಲ, ಇದ್ದರೂ ಅವುಗಳ ಸಂಖ್ಯೆ ನಗಣ್ಯ ಎಂಬ ಪೂರ್ವಕಲ್ಪನೆಯನ್ನು ಸುಳ್ಳು ಎಂದು ಈ ಅಧ್ಯಯನ ಸಾಬೀತು ಪಡಿಸಿದೆ. ಈ ಪೂರ್ವಕಲ್ಪನೆಯನ್ನು ಭಾರತೀಯ ಮಧ್ಯಮವರ್ಗಗಳ ಒಂದು ಮಿಥ್ಯೆಯೆಂದೇ ಈ ಸಂಶೋಧಕರು ಗುರ್ತಿಸಿದ್ದಾರೆ ಇಂತಹ ಮಿಥ್‌ಗಳನ್ನು ಒಡೆದು ನೈಜ ವಾಸ್ತವ ಚಿತ್ರವನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಭಾರತದಾದ್ಯಂತ ಸಂಶೋಧನೆಗಳು ನಡೆಯಬೇಕಾಗಿದೆ. ಅಲ್ಲದೇ ಕೌಟುಂಬಿಕ ಹಿಂಸೆ, ಕುಟುಂಬದ ಸದಸ್ಯರಿಂದಲೇ ಅತ್ಯಾಚಾರಕ್ಕೆ ಒಳಗಾಗುವ ಹಾಗೂ ಒತ್ತಡಗಳಿಗೋ ಓಲೈಕೆಗೋ ಮಣಿದು ಸಂಭೋಗಕ್ಕೆ ಒಳಗಾಗುವ ಹದಿಹರೆಯದ ಹುಡುಗಿಯರ ಪ್ರಜನನ ಆರೋಗ್ಯದ ಅಗತ್ಯಗಳನ್ನು ಗುರ್ತಿಸಬೇಕಾದ ಅಗತ್ಯವಿದೆ.

ಕುಟುಂಬ ಯೋಜನೆಯ ಕಾರ್ಯಕ್ರಮಗಳು ಆಕ್ರಮಣಶೀಲ ಧೋರಣೆಯನ್ನು ಹೊಂದಿ ಬಿರಿಸಾಗಿ ಸಾಗುತ್ತಿದ್ದರೂ ಸಹ ಗ್ರಾಮೀಣ ಮಹಿಳೆಯರು ಈಗ ಲಭ್ಯವಿರುವ ಯಾವುದೇ ತಾತ್ಕಾಲಿಕ ಗರ್ಭನಿರೋಧಕ ತಾಂತ್ರಿಕತೆಯನ್ನಾಗಲೀ/ವಿಧಾನವನ್ನಾಗಲೀ ಉಪಯೋಗಿಸಲು ಹಿಂಜರಿಯುತ್ತಿರುವುದು ತಿಳಿದುಬಂದಿದೆ. ಬಹುತೇಕ ಹಳ್ಳಿಯ ಹೆಂಗಸರು ಹಿಂದಿನಿಂದ ಬಂದಿರುವ ಸಂಪ್ರದಾಯಿಕ ಗರ್ಭನಿರೋಧಕ ವಿಧಾನಗಳಲ್ಲಿಯೇ ತಮಗೆ ವಿಶ್ವಾಸವಿರುವುದನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಆಧುನಿಕ ಗರ್ಭನಿರೋಧಕಗಳ ಅಡ್ಡ ಪರಿಣಾಮಗಳೇ ಕಾರಣ. ಬೆನ್ನುನೋವು, ಕೆಳಹೊಟ್ಟೆನೋವು, ಬಿಳಿಮುಟ್ಟು, ಬಲಹೀನತೆ, ಅನಿಯಮಿತವಾದ ಮತ್ತು ಹೆಚ್ಚು ರಕ್ತಸ್ರಾವದ ಮುಟ್ಟು ಇವುಗಳನ್ನೆಲ್ಲಾ ಹಳ್ಳಿಯ ಹೆಂಗಸರು ಗರ್ಭನಿರೋಧಕಗಳಿಂದಲೇ ಉಂಟಾಗುವ ತೊಂದರೆಗಳೆಂದು ತಿಳಿದಿದ್ದಾರೆ. ಜೊತೆಗೆ ಗರ್ಭನಿರೋಧಕಗಳನ್ನು ಒದಗಿಸಿ, ಅಳವಡಿಸುವ ವೈದ್ಯಕೀಯ ಅರೆವೈದ್ಯಕೀಯ ಸಿಬ್ಬಂದಿ, ಅವರ ಇಂತಹ ನೋವುಗಳಿಗೆ, ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೇ ಅಲಕ್ಷಿಸುವುದು ಸಹ ಗರ್ಭನಿರೋಧಕಗಳು ಸರಿಯಾಗಿ ವ್ಯಾಪಕವಾಗಿ ಬಳಕೆಯಾಗದಿರಲು ಕಾರಣವಾಗಿದೆ.1

ಇಂತಿಷ್ಟು ಮಹಿಳೆಯರಿಗೆ ಗರ್ಭನಿರೋಧಕಗಳನ್ನು ಅಳವಡಿಸಲೇ ಬೇಕೆಂಬ ಹಾಗೂ ಇಂತಿಷ್ಟು ಜನರಿಗೆ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಲೇಬೇಕೆಂಬ ಗುರಿಯಿರುವ ಕಾರ್ಯಕ್ರಮಗಳಲ್ಲಿ, ಕುಟುಂಬ ಯೋಜನೆಗೆ ಒಳಗಾದ ಮಹಿಳೆಯರಿಗೆ ನಂತರ ನೀಡಬೇಕಾಗಿರುವ ಆಪ್ತಸಲಹೆ, ಆರೋಗ್ಯ ಪಾಲನಾ ಸೇವೆಗಳನ್ನು ಹಾಗೂ ನಿಯಮಿತವಾಗಿ ಮಾಡಬೇಕಾಗುವ ವೈದ್ಯಕೀಯ ತಪಾಸಣೆಗಳನ್ನು ಅಲಕ್ಷಿಸಲಾಗಿತ್ತು. ದೊಡ್ಡಗಾತ್ರದ ಕುಟುಂಬ ಯೋಜನಾ ಶಿಬಿರಗಳನ್ನು ಹಮ್ಮಿಕೊಂಡು ಅತಿಹೆಚ್ಚಿನ ಜನರನ್ನು ಸಾಮೂಹಿಕವಾಗಿ ಕುಟುಂಬ ಯೋಜನೆಗೆ ಒಳಪಡಿಸುವ ಧೋರಣೆಯನ್ನು ಕುಟುಂಬ ಯೋಜನಾ ಕಾರ್ಯಕ್ರಮಗಳು ಹೊಂದಿದ್ದುದರಿಂದ ಅವು ನಿರೀಕ್ಷಿತ ಯಶಸ್ಸನ್ನು ಗಳಿಸಲಾಗಲಿಲ್ಲ. ಅಲ್ಲದೆ ಕುಟುಂಬ ಯೋಜನಾ ಆರೋಗ್ಯ ಕಾರ್ಯಕರ್ತರುಗಳ ಮೇಲೆ ಇಂತಿಷ್ಟು ಜನರನ್ನು ಕುಟುಂಬ ಯೋಜನೆಗೆ ಒಳಪಡಿಸಲೇಬೇಕೆಂಬ ಒತ್ತಡ ಬಹಳವಾಗಿ ಇದ್ದುದರಿಂದ ಅನೇಕ ಸಾರಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕುಟುಂಬ ಯೋಜನೆಯ ಯಶಸ್ಸನ್ನು ಚಿತ್ರಿಸಲಾಗಿತ್ತು ಅಲ್ಲದೇ ಅನೇಕ ಆರೋಗ್ಯ ಕಾರ್ಯಕರ್ತರುಗಳಿಗೆ ಈಗಾಗಲೇ ಸ್ತ್ರೀಯರಿಗೆ ಅಳವಡಿಸಲಾಗಿದ್ದ ಲೂಪ್‌, ಕಾಪರ್‌ಟಿಗಳನ್ನು ತೆಗೆದು ಹಾಕುವುದು ಹೇಗೆಂಬುದೇ ತಿಳಿದಿರಲಿಲ್ಲ. ಇನ್ನು ಕೆಲವರಿಗೆ ತಿಳಿದಿದ್ದರೂ ಸಹ ಅದನ್ನು ತೆಗೆದು ಹಾಕಲು ಸಿದ್ಧರಾಗಿರಲಿಲ್ಲ. ಅನೇಕ ಮಹಿಳೆಯರು ಲೂಪ್‌ಇತ್ಯಾದಿ ತಾತ್ಕಾಲಿಕ ಗರ್ಭನಿರೋಧಕಗಳನ್ನು ತಮ್ಮ ಮಕ್ಕಳ ನಡುವೆ ಅಂತರ ಇರಿಸಲು ಅಳವಡಿಸಿಕೊಂಡಿದ್ದು ತಮಗೆ ಮಗು ಬೇಕೆನಿಸಿದಾಗ ಅದನ್ನು ದೇಹದಿಂದ ಹೊರಗೆ ತೆಗೆದುಹಾಕಲು ಸಾದ್ಯವಾಗದೇ ಹೋದದ್ದು ಸಹ ತಾತ್ಕಾಲಿಕ ಸಂತಾನ ನಿರೋಧಕಗಳಿಗೆ ವಿರೋಧ ಬೆಳೆಯಲು ಕಾರಣವಾಯಿತು. ಇವೆಲ್ಲಕ್ಕಿಂತಾ ಹೆಚ್ಚಾಗಿ ಉದರ ದರ್ಶಕ ಸಂತಾನ ನಿರೋಧ ಶಸ್ತ್ರಚಿಕಿತ್ಸೆ (Laproscopy). ಮಾಡಲು ವೈದ್ಯರುಗಳಿಗೆ ನೀಡಲಾಗಿದ್ದ ಆತುರದ ತರಬೇತಿ, ಶಸ್ತ್ರ ಚಿಕಿತ್ಸಾ ಶಿಬಿರಗಳಲ್ಲಿ ಒಳ್ಳೆಯ ಗುಣಮಟ್ಟದ ಉಪಚಾರ ಮತ್ತು ಸ್ವಚ್ಛತೆಯ ಅಭಾವದಿಂದಾಗಿ ಈ ಕಾರ್ಯಕ್ರಮಗಳು ಸೋಲನ್ನು ಕಾಣಬೇಕಾಯಿತು.1

ಇನ್ನು ನಮ್ಮದೇಶದಲ್ಲಿ ಗರ್ಭಪಾತವೆನ್ನುವುದು ಬೇಡದ ಬಸಿರನ್ನು ನಿವಾರಿಸಿಕೊಳ್ಳುವ ಮುಖ್ಯ ಸಾಧನವಾಗಿದ್ದು ಅದನ್ನು ಒಂದು ಬಗೆಯ ಸಂತಾನ ನಿರೋಧಕ ರೀತಿ ಪರಿಭಾವಿಸಲಾಗುತ್ತಿದೆ. ೨೦೦೨ರಲ್ಲಿ ೧೯೭೦ರ ಗರ್ಭಸಮಾಪನಾ ಕಾಯಿದೆಗೆ ತಿದ್ದುಪಡಿ ತರಲಾಯಿತು. ಇದರಿಂದಾಗಿ ಇಂದು ಗರ್ಭ ಸಮಾಪನಾ ಕೇಂದ್ರಗಳನ್ನು ಜಿಲ್ಲಾ ಮಟ್ಟದಲ್ಲಿಯೇ ನೋಂದಾಯಿಸಿಕೊಳ್ಳಬಹುದಾಗಿದೆ. ಅಲ್ಲದೇ ಈ ತಿದ್ದುಪಡಿಯಲ್ಲಿ ಕಾನೂನು ಬಾಹಿರವಾಗಿ ಗರ್ಭಪಾತ ಮಾಡಿಸುವವರಿಗೆ ನೀಡಬೇಕಾಗುವ ಶಿಕ್ಷೆಯನ್ನು ಸ್ಪಷ್ಟೀಕರಿಸಲಾಗಿದೆ.[3] ಒಂಭತ್ತನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಸಹ ಕಾನೂನು ಬಾಹಿರ ಗರ್ಭಪಾತಗಳ ಸಂಖ್ಯೆ ನಾಲ್ಕರಿಂದ ಆರು ದಶಕಲಕ್ಷಗಳಷ್ಟು ಇತ್ತು. ಆದರೆ ಸರ್ಕಾರೀ ವರದಿಯೊಂದರ ಪ್ರಕಾರ ಇತ್ತೀಚಿನವರೆಗೂ ಇಂತಹ ಗರ್ಭಪಾತಗಳ ಸಂಖ್ಯೆಯಲ್ಲಾಗಲೀ, ತತ್ಪರಿಣಾಮವಾಗಿ ಉಂಟಾಗುವ ಅನಾರೋಗ್ಯದ ಪ್ರಕರಣಗಳಲ್ಲಾಗಲೀ ಅಥವಾ ಗರ್ಭಪಾತದಿಂದ ಉಂಟಾಗುವ ಮರಣ ಸಂಖ್ಯೆಯಲ್ಲಾಗಲೀ, ಯಾವುದೇ ರೀತಿಯ ಇಳಿತ ಕಂಡುಬಂದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಮಹಿಳೆಯರಿಗೆ ಕಾನೂನುಬದ್ಧ ಗರ್ಭಪಾತದ ಸೌಲಭ್ಯಗಳಿನ್ನೂ ದಕ್ಕಿಲ್ಲ. ಏಕೆಂದರೆ ಕೆಲವು ಆಸ್ಪತ್ರೆಗಳಲ್ಲಿ ಗರ್ಭಸಮಾಪನಾ ಕೇಂದ್ರಗಳಲ್ಲಿ ಗಂಡನ ಅನುಮತಿ ಬೇಕೆಂದೂ ಅಥವಾ ಗರ್ಭಪಾತ ಮಾಡಿಸಿಕೊಳ್ಳುವುದರ ಜೊತೆಯಲ್ಲಿಯೇ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕೆಂದೂ ಅಥವಾ ಲೂಪ್‌/ಕಾಪರ್‌ಟಿ ಅಳವಡಿಸಿಕೊಳ್ಳಬೇಕೆಂದೋ ಒತ್ತಾಯ/ಷರತ್ತುಗಳನ್ನು ಹೇರಲಾಗುತ್ತಿದೆ. ಹಾಗಾಗಿ ಯಾರು ಖಾಸಗೀ ವೈದ್ಯರುಗಳಿಗೆ ಶುಲ್ಕ ತೆರಬಲ್ಲರೋ ಅಂತಹ ಸ್ತ್ರೀಯರಿಗೆ ಮಾತ್ರ ಈ ಕಾನೂನಿನ ಉಪಯೋಗವಾಗುತ್ತಿದೆ. ಹಾಗಾಗಿ ಇಂದಿಗೂ ಸಹ ಬಹುತೇಕ ಮಹಿಳೆಯರು ಗರ್ಭಪಾತ ಮಾಡಿಸುವ ನಕಲಿ ವೈದ್ಯರುಗಳಿಗೆ ಮೊರೆಹೊಕ್ಕು ಗರ್ಭಪಾತ ಮಾಡಿಸಿಕೊಂಡು ಗಂಭೀರವಾದ ದೈಹಿಕ, ಭಾವನಾತ್ಮಕ ಹಾಗೂ ಆರ್ಥಿಕ ಸಂಕಟಗಳಿಗೆ ಬಲಿಯಾಗುತ್ತಿದ್ದಾರೆ. ಜೊತೆಗೆ ಗರ್ಭಧರಿಸಿದ ಮೂರನೆ ತಿಂಗಳ ನಂತರ ಮಾಡಲಾಗುತ್ತಿರುವ ಗರ್ಭಪಾತಗಳ ಸಂಖ್ಯೆ ಕೂಡ ಇತ್ತೀಚೆಗೆ ಹೆಚ್ಚಾಗುತ್ತಾ ಹೋಗುತ್ತಿದ್ದು ಇದಕ್ಕೆ ಹೆಣ್ಣು ಭ್ರೂಣ ಪತ್ತೆ ಮಾಡುವ ಪರೀಕ್ಷೆಯೇ ಮುಖ್ಯ ಕಾರಣವಾಗಿದೆ. ಭಾರತದಲ್ಲಿ ಗರ್ಭಪಾತವು ಸ್ತ್ರೀಯರ ಲೈಂಗಿಕ ಮತ್ತು ಪ್ರಜನನ ಹಕ್ಕು ಆಗಿರದೆ ಅದೊಂದು ಲೈಂಗಿಕ ಪಾರತಂತ್ರ್ಯದ ಹಾಗೂ ಪರಾಧೀನತೆಯ ದಾರುಣ ಫಲಿತವಾಗಿ ಪರಿಣಮಿಸಿದೆ.[4]

ಕೋಷ್ಟಕ೨೫: ಒಟ್ಟು ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಗಳಲ್ಲಿ ಸ್ತ್ರೀ ಮತ್ತು ಪುರುಷರ ಶಸ್ತ್ರಚಿಕಿತ್ಸೆಗಳ ಸಂಖ್ಯೆ (೧೯೯೦೯೧ ರಿಂದ ೨೦೦೨೦೩)

ವರ್ಷ ಪುರುಷರ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ (ವಾಸೆಕ್ಟಮಿ) ಸ್ತ್ರೀಯರ ಸಂತಾನ ನಿರೋಧಕ ಶಸ್ತ್ರ ಚಿಕಿತ್ಸೆ (ಟ್ಯುಬೆಕ್ಟಮಿ) ಒಟ್ಟು ಸಂತಾನ ನಿರೋಧಕ ಶಸ್ತ್ರ ಚಿಕಿತ್ಸೆಗಳ ಸಂಖ್ಯೆ
೧೯೯೦-೯೧ ೨೫೫ (೬.೧೮%) ೩೮೭೧ ೯೩.೮೨% ೪೧೨೬ (೧೦೦%)
೧೯೯೧-೯೨ ೧೭೪ (೪.೨೫%) ೩೯೧೬ (೯೫.೭೫%) ೪೦೯೦ (೧೦೦%)
೧೯೯೨-೯೩ ೧೫೦ (೩.೪೯%) ೪೧೩೬ (೯೬.೫೧%) ೪೨೮೬ (೧೦೦%)
೧೯೯೩-೯೪ ೧೫೦ (೩.೩೩%) ೪೩೪೭ (೯೬.೫೭%) ೪೪೯೨ (೧೦೦%)
೧೯೯೪-೯೫ ೧೪೪ (೩.೧೪%) ೪೪೩೬ (೯೬.೮೬%) ೪೫೮೦ (೧೦೦%)
೧೯೯೫-೯೬ ೧೨೪ (೨.೮೦%) ೪೨೯೮ (೯೭.೨೦%) ೪೪೨೨ (೧೦೦%)
೧೯೯೬-೯೭ ೭೨ (೧.೮೬%) ೩೭೯೮ (೯೮.೧೪%) ೩೮೭೦ (೧೦೦%)
೧೯೯೭-೯೮ ೭೧ (೧.೬೭%) ೪೧೬೭ (೯೮.೩೩%) ೪೨೩೮ (೧೦೦%)
೧೯೯೮-೯೯ ೧೦೩ (೨.೪೪%) ೪೧೦೪ (೯೭.೫೬%) ೪೨೦೭ (೧೦೦%)
೧೯೯೯-೨೦೦೦ ೮೭ (೧.೮೯%) ೪೫೦೯ (೯೮.೧೧%) ೪೫೯೬ (೧೦೦%)
೨೦೦೦-೦೧ ೧೧೦ (೧.೮೯%) ೪೬೨೫ (೯೭.೬೮%) ೪೭೩೫ (೧೦೦%)
೨೦೦೧-೦೨ ೧೧೧ (೨.೨೯%) ೪೭೧೬ (೯೭.೭೧%) ೪೮೨೭ (೧೦೦%)
೨೦೦೨-೦೩ ೧೧೪ (೨.೪೦%) ೪೬೧೭ (೯೭.೬%) ೪೭೩೧ (೧೦೦%)

ಮೂಲ: GOI., Department of Family Welfare, Ministry of Family Welfare quoted in Women and Men in India, 2004 Ministry of Statistics and Programme Implementation, New Delhi (2006), P. 36 (Table Partially Presented).

ಒಟ್ಟಿನಲ್ಲಿ ಇಂದಿಗೂ ಬೇಡದ ಬಸಿರುಗಳ ನಿವಾರಣೆಗೆ ಗರ್ಭಪಾತ ಒಂದು ಮುಖ್ಯ ಸಾಧನವಾಗಿದ್ದು ಅದೊಂದು ರೀತಿಯ ಸಂತಾನ ನಿರೋಧಕದ ರೀತಿ ಬಳಕೆಯಾಗುತ್ತಿರುವುದು ವಿಷಾದದ ಸಂಗತಿಯೇ ಸರಿ. ಇನ್ನು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗಳ ಹೊರೆಯ ೯೩% ರಿಂದ ೯೪% ರಷ್ಟು ಭಾರವನ್ನು ಹೆಣ್ಣುಮಕ್ಕಳೇ ಸತತವಾಗಿ ಹೊರುತ್ತಿರುವುದನ್ನು ೧೯೯೧ರಿಂದ ಹಿಡಿದು ೨೦೦೩ ವರೆಗಿನ ಅಂಕಿ ಸಂಖ್ಯೆಗಳೇ ತೋರುತ್ತಿವೆ. (ಕೋಷ್ಟಕ-೨೪) ನೋಡಿ.

ಈಗ ದೀರ್ಘಕಾಲೀನ ಪ್ರಭಾವ ಬೀರುವ ಗರ್ಭನಿರೋಧಕ ಚುಚ್ಚುಮದ್ದುಗಳಾದ ಡಿಪೋ ಪ್ರೂವೇರಾಹಾಗೂ ನೆಟ್‌ಎನ್‌, ಮಾತ್ರೆಗಳ ಹಾಗೂ ಚರ್ಮದಡಿ ಇರಿಸಲಾಗುವ ನಾರ್‌ಪ್ಲಾಟ್‌ಇವುಗಳೆಲ್ಲೆಲ್ಲಾ ಚೋದನಿಗಳಿದ್ದು ಅವುಗಳನ್ನು ಪ್ರಚಲಿತಗೊಳಿಸಲಾಗುತ್ತಿದೆ. ಇತ್ತೀಚೆಗೆ ಫಲವಂತಿಕೆ ನಿರೋಧೀ ವ್ಯಾಕೀನುಗಳನ್ನು (Antifertility vaccines) ಜನಸಂಖ್ಯಾ ನಿಯಂತ್ರಣಕ್ಕಾಗಿ ಬಳಸುವ ಬಗ್ಗೆ ಸರ್ಕಾರ ಒಲವು ತೋರುತ್ತಿದೆ. ಹತ್ತನೆಯ ಪಂಚವಾರ್ಷಿಕ ಯೋಜನೆಯ ಅಡಿಯಲ್ಲಿ ಕುಟುಂಬ ಕಲ್ಯಾಣ ಕ್ಷೇತ್ರದಲ್ಲಿ, ಸಂಶೋಧನೆಗಾಗಿ ಗುರ್ತಿಸಲಾಗಿರುವ ಮೊಟ್ಟಮೊದಲನೆಯ ವಿಷಯವೆಂದರೆ ಆಧುನಿಕ ವೈದ್ಯಕೀಯ ಪದ್ಧತಿಯ ಗರ್ಭನಿರೋಧಕ ಹೊಸ ಔಷಧಿಗಳು ಮತ್ತು ಸಾಧನಗಳು, ಅದರಲ್ಲಿಯೂ ವಿಷೇಶವಾಗಿ ಫಲವಂತಿಕೆ ನಿರೋಧೀ ವ್ಯಾಕೀನುಗಳನ್ನು ಅಭಿವೃದ್ಧಿಗೊಳಿಸುವುದೇ ಆಗಿದೆ.

ಪಿತೃಪ್ರಧಾನ ವ್ಯವಸ್ಥೆಯುಳ್ಳ ಯಾವುದೇ ಸಮಾಜದಲ್ಲಿ ಸಾಮಾನ್ಯವಾಗಿ ಯಾವುದೇ ಹೊಸ ಆರೋಗ್ಯ ತಾಂತ್ರಕತೆ ಸ್ತ್ರೀಜೀವ ವಿರೋಧೀ ಚಟುವಟಿಕೆಗಳಿಗೆ ಅಥವಾ ಸ್ತ್ರೀಯರ ಲೈಂಗಿಕ ಮತ್ತು ಪ್ರಜನನ ಹಕ್ಕುಗಳಿಗೆ ವಿರೋಧವಾಗಿಯೇ ಉಪಯೋಗಿಸಲ್ಪಡುತ್ತಿರುವುದು ಒಂದು ದೊಡ್ಡ ವಿಪರ್ಯಾಸ ಎಂಬುದನ್ನು ಸ್ತ್ರೀ ಆರೋಗ್ಯ ಚಳುವಳಿ ಗುರ್ತಿಸಿದೆ. ಇಂತಹ ಆರೋಪಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಫಲವಂತಿಕೆ ನಿರೋಧೀ ವ್ಯಾಕೀನುಗಳ ಸಂಶೋಧನೆಗಳು ನಡೆಯುತ್ತಿರುವ ದಿಕ್ಕು ಮತ್ತು ಅವುಗಳನ್ನು ಜನಸಾಮಾನ್ಯ ಮಹಿಳೆಯರಿಗೆ ನೀಡಿ ಜನಪ್ರಿಯಗೊಳಿಸಲು ಹೊರಟಿರುವ ನಮ್ಮ ಸರ್ಕಾರೀ ರೀತಿ ನೀತಿಗಳಲ್ಲಿ ಅಡಗಿರುವ ಲಿಂಗತ್ವ ರಾಜಕೀಯವನ್ನು (Gender politics)ಪರಿಶೀಲಿಸುವುದು ಇಲ್ಲಿ ಪ್ರಸ್ತುತವಾಗುತ್ತದೆ.

ಫಲವಂತಿಕೆ ನಿರೋಧಿ ವ್ಯಾಕ್ಸೀನುಗಳ ಲಿಂಗತ್ವ ರಾಜಕೀಯದ ಹಿನ್ನೆಲೆ

ಇಂದು ಅಭಿವೃದ್ಧಿಶೀಲ ದೇಶಗಳಲ್ಲಿ ಸೋಂಕು ರೋಗ ನಿರೋಧಕ ವ್ಯಾಕ್ಸೀನುಗಳ ಬಗ್ಗೆ ಜನತೆಗೆ ಅಗಾಧವಾದ ಅಚಲ ವಿಶ್ವಾಸವಿದೆ. ಏಕೆಂದರೆ ಅವು ಹಲವಾರು ಸೋಂಕು ರೋಗಗಳು ಸಾಂಕ್ರಾಮಿಕ ಪಿಡುಗಿನಂತೆ ಹಬ್ಬುವುದನ್ನು ಯಶಸ್ವಿಯಾಗಿ ತಡೆಗಟ್ಟಿವೆ. ಜನತೆಯಲ್ಲಿರುವ ಈ ಅಗಾಧ ವಿಶ್ವಾಸವನ್ನು ಫಲವಂತಿಕೆ ನಿರೋಧೀ ವ್ಯಾಕ್ಸೀನುಗಳ (AntiFertility Vaccines) ಪ್ರತಿಪಾದಕರು ಬಳಸಿಕೊಳ್ಳುತ್ತಾ ಇದ್ದಾರೆ. ಅವರ ಪ್ರಕಾರ, ಅಭಿವೃದ್ಧಿಶೀಲ ದೇಶಗಳ ಸ್ತ್ರೀಯರ ಅದರಲ್ಲಿಯೂ ಬಡಮಹಿಳೆಯರ ಫಲವತ್ತತೆಯು ಒಂದು ರೋಗವೇ ಆಗಿದ್ದು ಅದು ಸಾಂಕ್ರಾಮಿಕ ರೋಗಗಳಷ್ಟೇ ಬೃಹತ್‌ಆಯಾಮವನ್ನು ಹೊಂದಿರುವುದರಿಂದ ಅದನ್ನು ತಡೆಗಟ್ಟಲು ಅಂದರೆ ಜನಸಂಖ್ಯಾ ಸ್ಫೋಟವನ್ನು ತಡೆಯಲು ವ್ಯಾಕ್ಸೀನಿನಂತಹ ತೀವ್ರತಮ ಅಸಾಮಾನ್ಯ ಕ್ರಮವನ್ನು ಕೈಗೊಳ್ಳುವುದು ಸಮರ್ಥನೀಯವಾಗಿದೆ. ಆದ್ದರಿಂದ ಅವರ ಅಭಿಪ್ರಾಯದಲ್ಲಿ ಇಂತಹ ವ್ಯಾಕೀನನ್ನು ಮಾಹಿತಿ ನೀಡದೆ, ಮಹಿಳೆಯರ ಒಪ್ಪಿಗೆ ಪಡೆಯದೆ ಅವರಿಗೆ ನೀಡುವುದೇ ಸರಿ. ಬಹುತೇಕ ಮಹಿಳೆಯರು ಅನಕ್ಷರಸ್ಥರೋ ಅರೆಅಕ್ಷರಸ್ಥರೋ ಆಗಿರುವಾಗ ಹಾಗೂ ಅವರಿಗೆ ಈ ಹೊಸ ತಾಂತ್ರಿಕತೆಯ ಪರಿಣಾಮಗಳ ಬಗ್ಗೆ ಸರಿಯಾದ ತಿಳುವಳಿಕೆ ಹೊಂದುವಷ್ಟು ವಿದ್ಯೆ ಇಲ್ಲದೇ ಇರುವಾಗ ಅವರಿಗೆ ಮಾಹಿತಿಯುಕ್ತ ಆಯ್ಕೆ ನೀಡುವುದು ಹಾಸ್ಯಾಸ್ಪದವಾಗುತ್ತದೆ. ಹಾಗಾಗಿ ಇಂತಹ ವ್ಯಾಕ್ಸೀನುಗಳನ್ನು ನೀಡುವಾಗ ಅವುಗಳ ಗರ್ಭನಿರೋಧಕ ಕ್ಷಮತೆಯ ಬಗ್ಗೆ ಮಾತ್ರ ಒತ್ತುನೀಡಿ ಅವರಿಗೆ ಬಾಯಿ ಮಾತಿನ ಮೂಲಕ ತಿಳಿಸಿದರೆ ಸಾಕು ಎಂಬುದು ಇವರ ಧೋರಣೆಯಾಗಿದೆ.

ಈ ಸಂದರ್ಭದಲ್ಲಿ ಜನವರಿ ೧೯೯೪ರಲ್ಲಿ ನಡೆದ ಭಾರತೀಯ ವಿಜ್ಞಾನ ಮಹಾ ಅಧಿವೇಶನದಲ್ಲಿ “ವೈದ್ಯಕೀಯ ಸಂಶೋಧನೆಯ ಹೊಣೆಗಾರಿಕೆ” ಎಂಬ ವಿಷಯವನ್ನು ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (Indian Council for Medical Research) ನಿವೃತ್ತ ಮಹಾನಿರ್ದೇಶಕರಾದ ಡಾ.ಪೈಂಟಲ್‌ರವರು ನೀಡಿದ ಉಪನ್ಯಾಸದ ಮುಖ್ಯಾಂಶಗಳನ್ನು ಇಲ್ಲಿ ಗಮನಿಸುವುದು ಸೂಕ್ತ. ಹೊಸದಾಗಿ ತಯಾರಿಸಿದ ಔಷಧಿ ಹಾಗೂ ಇನ್ನಿತರ ಫಾರ್ಮುಲಾಗಳ ಸುರಕ್ಷತೆ ಮತ್ತು ಗುಣಮಟ್ಟ ನಿರ್ಧರಿಸಲು ನಡೆಸಬೇಕಾಗುವ ಚಿಕಿತ್ಸಾ ಪ್ರಯೋಗ ಪರೀಕ್ಷಗಳಿಗೆ (Clinical triabls) ಅನುಮತಿ ನೀಡುವ ನೈತಿಕ ಹೋಣೆ ಹೊತ್ತಿರುವ ತಜ್ಞರ ಸಮಿತಿಗಳ ಮೇಲೆ ಅನುಮತಿ ನೀಡುವಂತೆ ಹೇಗೆ ಭಾರೀ ಒತ್ತಡತರಲಾಗುತ್ತದೆ ಹಾಗೂ ತಾವೇ ಸ್ವತಃ ಇಂತಹ ಒತ್ತಡಗಳನ್ನು ನಾನಾ ಮೂಲಗಳಿಂದ ಎದುರಿಸಬೇಕಾಯಿತು ಎನ್ನುವುದನ್ನು ಡಾ. ಪೈಂಟಲ್‌ವಿವರಿಸಿದ್ದಾರೆ. ಒಂದು ವ್ಯಾಕ್ಸೀನಿನ ಇಂತಹ ಚಿಕಿತ್ಸಾ ಪ್ರಯೋಗ ಪರೀಕ್ಷೆಗೆ ಅನುಮತಿ ಬೇಡುವ ಯಾಚಿಕೆಯನ್ನು ತಾವು ಅಂತಿಮವಾಗಿ ತಿರಸ್ಕರಿಸಿ, ಯಾಚಿಕೆಯಲ್ಲಿ ನಮೂದಿಸಿದ ಪ್ರಮಾಣದ ಡೋಸ್‌ಗಿಂತಾ ಕಡಿಮೆ ಪ್ರಮಾಣದ ಡೋಸ್‌ಗಳಲ್ಲಿ ವ್ಯಾಕ್ಸೀನನ್ನು ನೀಡಿ ಪ್ರಯೋಗ ಪರೀಕ್ಷೆಗಳನ್ನು ನಡೆಸುವಂತೆ ತಾವು ಶಿಫಾರಸ್‌ಮಾಡಿದ್ದಾಗಿ ತಿಳಿಸಿದರು. ಈ ಬಗೆಯ ಪ್ರಯೋಗ ಪರೀಕ್ಷೆಗಳಿಗೆ ಗುರಿಯಾಗುವ ಮಹಿಳೆಯರು ಅನುಭವಿಸುವ ಅಡ್ಡಪರಿಣಾಮಗಳ ನೈತಿಕ ಹೊಣೆ ಯಾರದು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅದು ಅಂತಹ ಪ್ರಯೋಗಗಳನ್ನು ನಡೆಸುವ ಸಂಶೋಧಕರದೋ, ಅಂತಹ ಪ್ರಯೋಗ ಪರೀಕ್ಷೆಗಳಿಗೆ ಅನುಮತಿ ನೀಡುವ ನೈತಿಕ ಹೊಣೆ ಹೊತ್ತಿರುವ ಸಮಿತಿಯ ಸದಸ್ಯರು ಹಾಗೂ ಅಧ್ಯಕ್ಷರದೋ ಎಂಬುದು ಚರ್ಚಾಸ್ಪದ ವಿಷಯವಾಗಿದೆ. ಇಂದು ಸ್ವಿಚ್ಛೆಯಿಂದ ನೈತಿಕ ಹೊಣೆ ಹೊರುವ ಪ್ರವೃತ್ತಿ ನಮ್ಮ ದೇಶದಲ್ಲಿ ಮಾಯವಾಗಿದೆ. ಹಾಗಾಗಿ ಇಂತಹ ಪ್ರಯೋಗಗಳಿಂದಾಗಿ ನರಳುವ ಹಾಗೂ ಸಾಯುವ ಜನರ ಬಗ್ಗೆ ಸಾರ್ವಜನಿಕರಿಗಾಗಲೀ, ವೈದ್ಯಕೀಯ ಸಂಶೋಧಕರಿಗಾಗಲೀ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಡಾ. ಪೈಂಟಲ್‌ಕಟುವಾಗಿ ಟೀಕಿಸಿದ್ದಾರೆ. ಯಾವುದೇ ನೈತಿಕ ಹಿಂಜರಿಕೆಗಳಿಲ್ಲದ ವಿಜ್ಞಾನಿಗಳಿಗೆ ಸಿಗುತ್ತಿರುವ ರಾಜಕೀಯ ಪ್ರೇರಿತ ಪ್ರೋತ್ಸಾಹ ನಮ್ಮ ಬಾರತೀಯ ವಿಜ್ಞಾನಕ್ಕೆ ಹಿಡಿದ ಒಂದು ರೋಗ ಎಂಬುದು ಡಾ.ಪೈಂಟಲ್‌ರ ಕಟು ಟೀಕೆಯಾಗಿದೆ. ಉನ್ನತಮಟ್ಟದ ಸಾರ್ವಜನಿಕ ಸಂಪರ್ಕ ಹಾಗೂ ಪ್ರಭಾವಶಾಲೀ ಜನರ ಬೆಂಬಲ ಪಡೆದುಕೊಂಡಲ್ಲಿ ವಿಜ್ಞಾನಿಗಳು ತಮಗೆ ಬೇಕಾದುದನ್ನು ಬೇಕಾದ ರೀತಿಯಲ್ಲಿ ಮಾಡಬಹುದೆಂದು ವಾದಿಸುತ್ತಾ ೧೯೭೩-೭೪ರಲ್ಲಿ ನಡೆಸಲಾದ ಫಲವಂತಿಕೆ ನಿರೀಧೀ ವ್ಯಾಕ್ಸೀನಿನ ಗುಣಮಟ್ಟದ ಪರೀಕ್ಷಗೆ ನಡೆಸಲಾದ ಚಿಕಿತ್ಸಾ ಪ್ರಯೋಗ ಪರೀಕ್ಷೆಗಳನ್ನು ಉದಾಹರಿಸಿದ್ದಾರೆ. ಈ ವ್ಯಾಕ್ಸೀನಿನ ಸುರಕ್ಷತೆ ಹಾಗೂ ಅದರ ವಿಷಯುಕ್ತ ಪ್ರಭಾವದ ಬಗ್ಗೆ ಕನಿಷ್ಠ ಮಟ್ಟದ ಪ್ರಾಥಮಿಕ ಅಧ್ಯಯನಗಳನ್ನೂ ಸಹ ನಡೆಸದೆ ನೇರವಾಗಿ ಈ ವ್ಯಾಕ್ಸೀನನ್ನು ಅಶಿಕ್ಷಿತ ಹಾಗೂ ಇವುಗಳ ಅರಿವೇ ಇಲ್ಲದ ಮುಗ್ಧ ಮಹಿಳೆಯರಿಗೆ ಪರೀಕ್ಷಾ ಪ್ರಯೋಗಾರ್ಥವಾಗಿ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗಿತ್ತು. ಇದರ ಫಲಸ್ವರೂಪವಾಗಿ ಉಂಟಾದ ಪರಿಣಾಮಗಳಿಂದಾಗಿ ಆನಂತರ ಆರೋಗ್ಯ ಮಂತ್ರಿಗಳು ಈ ಪ್ರಕರಣದ ಬಗ್ಗೆ ತಮ್ಮ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿ ತಮಗೆ ತಪ್ಪು ತಿಳುವಳಿಕೆ ನೀಡಲಾಗಿತ್ತು ಎಂಬ ಹೇಳಿಕೆ ನೀಡಿದರು.[5]

ನಮ್ಮದೇಶದಲ್ಲಿ ಸ್ತ್ರೀಯರ ಮೇಲೆ ನಡೆಯುತ್ತಿರುವ ಅನೇಕ ವೈದ್ಯಕೀಯ ಪ್ರಯೋಗ ಪರೀಕ್ಷೆಗಳನ್ನು (Clinical trials) ಕುರಿತ ಈ ಕಟುಟೀಕೆಯು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ನಿವೃತ್ತ ಮಹಾನಿರ್ದೇಶಕರಿಂದಲೇ ಬಂದಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ನಮ್ಮ ದೇಶದಲ್ಲಿ ಮುಳ್ಯ ನಿರ್ಣಯಗಳನ್ನು ತೆಗೆದುಕೊಳ್ಳುವ ಉಚ್ಛಸ್ಥಾನಗಳಲ್ಲಿರುವವರ ಅಲಕ್ಷ್ಯ ಧೋರಣೆಯನ್ನು ಈ ಟೀಕೆ ಬೆರಳು ಮಾಡಿ ತೋರಿಸಿದೆ ಈ ಕಟು ಸತ್ಯವನ್ನು ಡಾ.ಪೈಂಟಲ್‌ರವರು ತಾವು ನಿವೃತ್ತಿ ಪಡೆದ ನಂತರ ನೀಡಿದ್ದಾರೆ ಎಂಬುದೂ ಗಮನಿಸಬೇಕಾದ ಅಂಶವೇ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಹಾಗೂ ಗರ್ಭನಿರೋಧಕಗಳನ್ನು ಕುರಿತ, ಇಂತಹ ನೈತಿಕ ಹಿಂಜರಿಕೆಗಳಿಲ್ಲದ ಅನೇಕ ವೈದ್ಯಕೀಯ ಸಂಶೋಧನೆಗಳು ವಿದೇಶಿ ಕಂಪನಿಗಳಿಗಾಗಿ, ಅಧಿಕಾರಾರೂಢರ ರಾಜಕೀಯ ಲಾಭಕ್ಕಾಗಿ ಹಾಗೂ ಕೆಲವಿಜ್ಞಾನಿಗಳು ಸ್ವಹಿತಕ್ಕಾಗಿ ನಡೆಯುವ ಸಾಧ್ಯತೆಗಳು ಹಲವಾರು ಪಟ್ಟು ಜಾಸ್ತಿಯಾಗಿವೆ ಎಂದರೆ ತಪ್ಪಾಗಲಾರದು.

ಸರ್ಕಾರದ ಜನಸಂಖ್ಯಾ ನಿಯಂತ್ರಣದ ಕಾರ್ಯನೀತಿಗಳಲ್ಲಿ ಹಾಗೂ ಅವುಗಳಡಿಯಲ್ಲಿಯೇ ಇರುವ ಕುಟುಂಬ ಯೋಜನಾ ಕಾರ್ಯಕ್ರಮಗಳಲ್ಲಿ ಇರುವ ಜನ ವಿರೋಧೀ ಹಾಗೂ ಸ್ತ್ರೀ ಆರೋಗ್ಯ ವಿರೋಧೀ ಅಂಶಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಭಾರತೀಯ ಮಹಿಳಾ ಚಳುವಳಿಯು ತಕ್ಕ ಮಟ್ಟಿನ ಯಶಸ್ಸುಗಳಿಸಿದೆ. ಅಪಾಯಕಾರಿಯಾಗಬಹುದಾದ ಔಷಧಿಗಳನ್ನು, ಗರ್ಭನಿರೋಧಕಗಳನ್ನು ಮತ್ತು ಕಾರ್ಯನೀತಿಗಳನ್ನು ಸ್ತ್ರೀ ಆರೋಗ್ಯ ಪ್ರತಿಪಾದಕರು ಬಯಲಿಗೆಳೆಯುತ್ತಲೇ ಇದ್ದಾರೆ.

ಇತ್ತೀಚೆಗೆ ಪ್ರಚಲಿತಗೊಳಿಸಲಾಗುತ್ತಿರುವ ಅತ್ಯಾಧುನಿಕ ಗರ್ಭನಿರೋಧಕಗಳು

ಪ್ರಸ್ತುತ ಪುಸ್ತಕ, ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ಇದೇ ಲೇಖಕಿಯ ‘ಮಹಿಳೆ ಮತ್ತು ಆರೋಗ್ಯ’ (೨೦೦೧) ಎಂಬ ಪುಸ್ತಕದ ಮುಂದುವರಿದ ಭಾಗವೂ ಆಗಿದ್ದು ಆ ಪುಸ್ತಕದಲ್ಲಿ ಈಗಾಗಲೇ ಪ್ರಚಲಿತವಾಗಿರುವ ಎಲ್ಲಾ ಕುಟುಂಬಯೋಜನಾ ವಿಧಾನಗಳ ಸಾಧಕ ಬಾಧಕಗಳನ್ನು ಚರ್ಚಿಸಲಾಗಿರುವುದರಿಂಸ ಅವುಗಳನ್ನಿಲ್ಲಿ ಪ್ರಸ್ತಾಪಿಸಿಲ್ಲ. ಪ್ರತಿಯಾಗಿ, ಫಲವಂತಿಕೆ ನಿರೋಧಿ ವ್ಯಾಕ್ಸೀನನ್ನೂ ಒಳಗೊಂಡಂತೆ ಪ್ರಚಲಿತ ಗೊಳಿಸಲಾಗುತ್ತಿರುವ ಮೂರು ಮುಖ್ಯಗರ್ಭನಿರೋಧಕಗಳ ಸಾಧಕ-ಬಾಧಕಗಳನ್ನು ಇಲ್ಲಿ ವಿಶ್ಲೇಷಿಸಲು ಯತ್ನಿಸಲಾಗಿದೆ.

ಫಲವಂತಿಕೆ ನಿರೋಧೀ ವ್ಯಾಕ್ಸೀನಿನ ಸಾಧಕಬಾಧಕಗಳು

ಫಲವಂತಿಕೆ ನಿರೋಧೀ ವ್ಯಾಕ್ಸೀನುಗಳನ್ನು ಸ್ತ್ರೀಯರ ಫಲವಂತಿಕೆಯ ನಿಯಂತ್ರಣಕ್ಕಾಗಿಯೇ ಸಂಶೋಧಿಸಲಾಗುತ್ತಿದ್ದು ಕೇವಲ ಕೆಲವೇ ಇಂತಹ ಪ್ರಯತ್ನಗಳು ಪುರುಷರು ತೆಗೆದುಕೊಳ್ಳಬಹುದಾದ ವ್ಯಾಕ್ಸೀನುಗಳ ಬಗ್ಗೆ ಸಹ ಆಗಿವೆ. ಇದುವರೆಗೆ ಸ್ತ್ರೀಯರಿಗಾಗಿ ಆಗಿರುವ ಸಂಶೋಧನೆಗಳ ಫಲವಾಗಿ ರೂಪಿತವಾಗಿರುವ ಫಲವಂತಿಕೆ ನಿರೋಧಕ ವ್ಯಾಕ್ಸೀನು, ಹೆಚ್‌.ಸಿ.ಜಿ.(Human Chorionic Gonadotropin) ಎಂಬ ಚೋದನಿಯ ಮೇಲೆ ಆಕ್ರಮಣ ಎಸಗುವುದರ ಮೂಲಕ ಗರ್ಭಧಾರಣೆಯನ್ನು ತಡೆಗಟ್ಟುತ್ತದೆ.

ಫಲಗೊಂಡ ಅಂಡಾಣುಗಳು ಅಂಡನಾಳಗಳ ಮೂಲಕ ಗರ್ಭಾಶಯವನ್ನು ಸೇರಿ ಅದರ ಒಳಗೋಡೆಯ ಒಳಪದರಗಳಲ್ಲಿ ನಾಟಿಕೊಂಡು ಬೆಳೆಯಬೇಕಾಗುತ್ತದೆ. ಹೀಗೆ ಫಲಗೊಂಡ ಅಂಡಾಣುವು ಅಂಡನಾಳಗಳಲ್ಲಿ ಪ್ರಯಾಣಿಸುವಾಗಲೇ ತನ್ನ ಜೀವಕಣಗಳ ವಿಭಜನೆಯಿಂದಾಗಿ ಬೆಳೆಯುತ್ತಾ ಹೋಗುವುದಲ್ಲದೆ ಅದು ಎಚ್‌.ಸಿ.ಜಿ.ಎಂಬ ಚೋದನಿಯನ್ನು ಸ್ರವಿಸಲಾರಂಭಿಸುತ್ತದೆ. ಹೆಚ್‌.ಸಿ.ಜಿ ಚೋದನಿಯು ಅಂಡಾಶಯಗಳು ಪ್ರೋಜೆಸ್ಟೀರೋನ್‌ಚೋದಿನಿಯನ್ನು ಸ್ರವಿಸುತ್ತಲೇ ಇರುವಂತೆ ಮಾಡುತ್ತದೆ. ಗರ್ಭಕೋಶದ ಒಳಪದರ ದಪ್ಪವಾಗಿ ಬೆಳೆದು ಅಲ್ಲಿ ಫಲಗೊಂಡು ತನ್ನ ಜೀವಕಣಗಳ ವಿಭಜನೆಯಿಂದ ಬೆಳೆಯುತ್ತಿರುವ ಅಂಡಾಣುವು ಗರ್ಭಾಶಯಕ್ಕೆ ಬಂದು ಅದರ ಒಳಗೋಡೆಗೆ ಅಂಟಿಕೊಂಡು ಅಲ್ಲಿಯೇ ಊರಿ ಬೆಳೆಯಲು ಪ್ರೋಜಿಸ್ಟಿರೋನ್‌ಚೋದನಿಯು ಅತ್ಯಂತ ಅವಶ್ಯಕ.

ಹೀಗೆ ಫಲಗೊಂಡ ಅಂಡವು ಬೆಳೆಯುತ್ತಲೇ ಗರ್ಭದತ್ತ ಪ್ರಯಾಣಿಸುವಾಗಲೇ ಅದು ಸ್ರವಿಸುವ ಹೆಚ್‌.ಸಿ.ಜಿ ದೋದನಿಯ ಮೇಲೆ ಆಕ್ರಮಣ ಮಾಡುವ ಪ್ರತಿರೋಧ ವಸ್ತುಗಳನ್ನು (Antigens) ಫಲವಂತಿಕೆ ನಿರೋಧೀ ವ್ಯಾಕ್ಸೀನು ಶರೀರದಲ್ಲಿ ಉಂಟುಮಾಡುತ್ತದೆ. ಈ ಪ್ರತಿರೋಧ ವಸ್ತುಗಳು ಹೆಚ್‌.ಸಿ.ಜಿ. ಚೋದನಿಯ ಮೇಲೆ ಆಕ್ರಮಣ ಮಾಡುವುದರಿಂದ ಅದರ ಕಾರ್ಯಕ್ಷಮತೆ ಕುಗ್ಗಿಹೋಗುತ್ತದೆ. ಅಲ್ಲದೆ ದೇಹದಲ್ಲಿ ಪ್ರೋಜೆಸ್ಟೀರೋನ್‌ಚೋದನಿಯ ಪ್ರಮಾಣ ಕುಗ್ಗುತ್ತದೆ. ಇದರಿಂದ ಗರ್ಭಾಶಯ/ಗರ್ಭಕೋಶದ ಒಳಗೋಡೆಯ ಪದರಗಳು ದಪ್ಪವಾಗಿ ಬೆಳೆಯುವುದಿಲ್ಲ. ಇದರಿಂದ ಫಲಗೊಂಡು ಬೆಳೆಯುತ್ತಿರುವ ಪಿಂಡವು ಗರ್ಭಕೋಶವನ್ನು ಪ್ರವೇಶಿಸಿದಾಗ ಅದಕ್ಕೆ ಗರ್ಭಕೋಶದ ಒಳಪದರಗಳಿಗೆ ನಾಟಿಕೊಂಡು ಬೆಳೆಯಲು ಸಾದ್ಯವಾಗುವುದಿಲ್ಲ. ಹಾಗಾಗಿ ಪಿಂಡವು ಗರ್ಭಾಶಯ/ಗರ್ಭಕೋಶದಲ್ಲಿ ನೆಲೆಯೂರಿ ಬೆಳೆಯಲಾಗದೇ ಮುಟ್ಟಿನ ರಕ್ತದೊಂದಿಗೇ ಹೊರಬೀಳುತ್ತದೆ.1

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರೋಗ ನಿರೋಧಕ ವ್ಯಾಕ್ಸೀನುಗಳು ನಮ್ಮ ಶರೀರದ ರೋಗ ಪ್ರತಿಬಂಧಕ ಕ್ರಿಯೆಯ ಮೂಲಕ ರಕ್ಷಣೆ ನೀಡುತ್ತವೆ, ಆದರೆ ಫಲವಂತಿಕೆ ನಿರೋಧಕ ವ್ಯಾಕ್ಸೀನು ಸ್ವನಿರೋಧಕ (Auto immunization) ಕ್ರಿಯೆಯ ಮೂಲಕ ಗರ್ಭಧಾರಣೆಯನ್ನು ತಡೆಗಟ್ಟುತ್ತದೆ. ಫಲವಂತಿಕೆ ನಿರೋಧೀ ವ್ಯಾಕ್ಸೀನು, ಶರೀರದಲ್ಲಿಯೇ ಸ್ರವಿಸುವ ಹೆಚ್‌.ಸಿ.ಜಿ. ಚೋದನಿಯಲ್ಲಿರುವ ಪ್ರೋಟೀನಿನ ಸಂರಚನೆಯನ್ನು ತುಸು ಮಾರ್ಪಡಿಸಿ ಶರೀರದ ರೋಗ ನಿರೋಧಕ ವ್ಯವಸ್ಥೆಉನ್ನೇ ಏಮಾರಿಸುತ್ತದೆ. ಆದ್ದರಿಂದಲೇ ರೋಗ ನಿರೋಧಕ ವ್ಯವಸ್ಥೆಯ, ಹೆಚ್‌.ಸಿ.ಜಿ. ಚೋದನಿಯನ್ನು ಶರೀರದಲ್ಲಿಯೇ ಉತ್ಪನ್ನವಾದ ಸ್ವವಸ್ತುವೆಂದು ಗುರ್ತಿಸದೇ ಅದನ್ನು ಪರಕೀಯ ವಸ್ತುವೆಂದು ತಿಳಿದು ಅದನ್ನು ನಾಶಮಾಡಲು ಪ್ರತಿರೋಧ ವಸ್ತುಗಳನ್ನು ಉತ್ಪತ್ತಿಮಾಡತೊಡಗುತ್ತದೆ. ಹಾಗಾಗಿ ಫಲಗೊಂಡ ಅಂಡಾಣು, ವಿಭಜನೆಗೊಳ್ಳುತ್ತಾ ಗಾತ್ರದಲ್ಲಿ ಬೆಳೆಯುತ್ತಾ ಪಿಂಡಾವಸ್ಥೆಯನ್ನು ಹೊಂದಿ ಗರ್ಭಕೋಶದೆಡೆಗೆ ಪಯಣಿಸುವಾಗ ಸ್ರವಿಸಲಾಗುವ ಹೆಚ್‌.ಸಿ.ಜಿ. ಚೋದನಿಯನ್ನು ಪ್ರತಿರೋಧ ವಸ್ತುಗಳು (anti bodies) ಆವರಿಸಿ ಆಕ್ರಮಣ ಮಾಡುತ್ತವೆ. ಹೀಗೆ ಪಿಂಡವು ಪ್ರತಿರೋಧ ವಸ್ತುಗಳಿಂದ ಲೇಪಿತವಾಗಿ ದಪ್ಪವಾಗಿ ಬೆಳೆಯದ ಗರ್ಭಕೋಶದ ಒಳಗೋಡೆಗೆ ನಾಟಿಕೊಂಡು ಬೆಳೆಯಲು ಸಾಧ್ಯವಾಗದೆ ಶರೀರದಿಂದ ಹೊರಹಾಕಲ್ಪಡುತ್ತದೆ.1

ಫಲವಂತಿಕೆ ನಿರೋಧಕ ವ್ಯಾಕ್ಸೀನುಗಳ ಅಪಾಯಗಳು

ಇಂತಹ ವ್ಯಾಕ್ಸೀನುಗಳು ಶರೀರದಲ್ಲಿ ಸೃಷ್ಟಿಸುವ ಪ್ರತಿರೋಧ ವಸ್ತುಗಳು ಬರೀ ಹೆಚ್‌.ಸಿ.ಜಿ. ಚೋದನಿಯನ್ನಷ್ಟೇ ಅಲ್ಲದೇ ಶರೀರದಲ್ಲಿರುವ ಇನ್ನಿತರ ಚೋದನಿಗಳ ಮೇಲೆ ಸಹ ಆಕ್ರಮಣ ಮಾಡಬಲ್ಲವು. ಆದ್ದರಿಂದ ಋತುಚಕ್ರದ ಹಾಗೂ ಥೈರಾಯಿಡ್‌ನಿರ್ನಾಳ ಗ್ರಂಥಿಯ ಕಾರ್ಯದಲ್ಲಿ ಅಡಚಣೆಯುಂಟಾಗಬಹುದಲ್ಲದೆ, ಥೈರಾಯಿಡ್‌ಮತ್ತು ಪಿಟ್ಯೂಟರಿ ಗ್ರಂಥಿಗಳಿಗೂ ಹಾನಿಯುಂಟಾಗಬಹುದಾದ ಸಾಧ್ಯತೆಗಳಿವೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.[6] ಅಲ್ಲದೆ, ಮಹಿಳೆಯರ ರೋಗ ನಿರೋಧಕ ವ್ಯವಸ್ಥೆಯ ಸಮಗ್ರತೆಯನ್ನೇ ಇಂತಹ ವ್ಯಾಕ್ಸೀನುಗಳ ಹಾಳುಮಾಡಬಲ್ಲ ಸಾಧ್ಯತೆಗಳಿವೆ. ಆದ್ದರಿಂದಲೇ ವಿಶ್ವಾರೋಗ್ಯ ಸಂಸ್ಥೆಯು ಈ ವ್ಯಾಕ್ಸೀನುಗಳನ್ನು ನೀಡುವ ಮೊದಲು ಆಯಾ ಮಹಿಳೆಯ ವಿಶಿಷ್ಟ ರೋಗ ನಿರೋಧಕ ವ್ಯವಸ್ಥೆಯ ಸ್ಥಿತಿಗತಿಗಳನ್ನು ನಿರ್ಧರಿಸಬೇಕೇಂದು ವಿಧಿಸಿದೆ. ಏಕೆಂದರೆ ಮಹಿಳೆಯು ಅಪಪೋಷಿತಳಾಗಿದ್ದಲ್ಲಿ ಅಥವಾವಿ ಸೋಂಕು ರೋಗಗಳಿಂದ (Parasitic infections) ಪೀಡಿತಳಾಗಿದ್ದಲ್ಲಿ ಅಥವಾ ಹೆಚ್‌.ಐ.ವಿ ಸೋಂಕುಗಳಿಗೆ ಪಕ್ಕಾಗಿದ್ದಲ್ಲಿ ಅವಳ ರೋಗ ನಿರೋಧಕ ವ್ಯವಸ್ಥೆಗೆ ಧಕ್ಕೆಯಾಗಿರುವುದು ಖಂಡಿತ ಶ್ವಾಸಕೋಶದ ಕ್ಷಯ, ಕುಷ್ಟ, ಕರಿಳಿನ ಹುಳಗಳ ಬಾಧೆ, ಹಾಗೂ ಪರೋಪ ಜೀವಿ ಸೋಂಕುಗಳಿಂದ ನರಳುತ್ತಿರುವ ಮಹಿಳೆಯರಿಗೆ ಮತ್ತು ಹೆಚ್‌.ಐ.ವಿ. ಸೋಂಕು ಇರುವ ಮಹಿಳೆಯರಿಗೆ ಫಲವಂತಿಕೆ ನಿರೋಧಕ ವ್ಯಾಕ್ಸೀನನ್ನು ನೀಡಿದಲ್ಲಿ ಅವರಲ್ಲಿ ಅಳಿದುಳಿದಿರುವ ಅಲ್ಪ ರೋಗನಿರೋಧಕ ಶಕ್ತಿಯ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಯಾರೂ ಊಹಿಸಬಹುದಾಗಿದೆ. ಅಲ್ಲದೆ ಇಂತಹ ವ್ಯಾಕ್ಸೀನುಗಳಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ಕುರಿತಂತೆ ಸರಿಯಾದ ಸಂಶೋಧನೆಯು ಇನ್ನೂ ನಡೆಯಬೇಕಾಗಿದೆ.

ಇಲ್ಲಿ ಗಮನಿಸಬೇಕಾದ ಸಂಗತೆಯೆಂದರೆ ಈ ಹೆಚ್‌.ಸಿ.ಜಿ. ವಿರೋಧೀ ವ್ಯಾಕ್ಸೀನ್‌ಬೇಡದ ಬಸಿರುಗಳನ್ನು ತಡೆಗಟ್ಟುವಲ್ಲಿ ಪೂರ್ತಿ ತೃಪ್ತಿಕರವಾಗಿದೆಯೇ ಎಂಬುದೇ ಪ್ರಶ್ನಾರ್ಹ. ಏಕೆಂದರೆ ಈ ವ್ಯಾಕ್ಸೀನನ್ನು ತೆಎದುಕೊಂಡಾಗ ಫಲವಂತಿಕೆಯ ನಿರೋಧ ಪೂರ್ತಿಯಾಗಿ ದೇಹದಲ್ಲಿ ಉಂಟಾಗಿದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿ ತಿಳಿಯುವುದಿಲ್ಲ. ಅಲ್ಲದೇ ಪ್ರತಿರೋಧ ವಸ್ತುಗಳ ಪ್ರಮಾಣ ಒಂದೇ ಮಟ್ಟದಲ್ಲಿ ಸತತವಾಗಿ ಇರುವಂತೆ ಮಾಡಲು ಬೂಸ್ಟರ್‌ಡೋಸ್‌(Booster dose) ನೀಡಬೇಕಾಗುತ್ತದೆ. ವ್ಯಾಕ್ಸೀನನ್ನು ಮೊದಲಿಗೆ ಆರು ತಿಂಗಳುಗಳ ಅಂತರದಲ್ಲಿ ಮೂರು ಬಾರಿ ನೀಡಬೇಕು. ಅಂದರೆ ಈ ವ್ಯಾಕ್ಸೀನಿನ ಕಾರ್ಯಕ್ರಮ ಹದಿನೆಂಟು ತಿಂಗಳುಗಳ ಕಾಲ ನಡೆಯಬೇಕು. ಆನಂತರ ಬೂಸ್ಟರ್‌ಡೋಸ್‌ಒಳಗಾಗಲು ನಮ್ಮ ಮಹಿಳೆಯರಿಗೆ ಸಾಧ್ಯವೇ ಎಂಬುದನ್ನು ವಿವೇಚಿಸಬೇಕಾದ ಅಗತ್ಯವಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಈ ವ್ಯಾಕ್ಸೀನ್‌ಸ್ತ್ರೀಯರಿಗೆ ತಮ್ಮ ದೇಹದ ಮೇಲೆ ಅವರ ಸಂತಾನೋತ್ಪತ್ತಿಯ ಮೇಲೆ ಹೆಚ್ಚಿನ ನಿಯಂತ್ರಣ ಅಥವಾ ಅಧಿಕಾರ ನೀಡುವುದಿಲ್ಲ. ವ್ಯಾಕ್ಸೀನುಗಳ ಪ್ರಭಾವ ದೀರ್ಘಕಾಲೀನವಾಗಿದ್ದು ಬೇಕೆನಿಸಿದಾಗ ಅವುಗಳ ಪ್ರಭಾವವನ್ನು ನಿಲ್ಲಿಸಲಾಗದು. ಅಲ್ಲದೆ ಫಲವಂತಿಕೆ ನಿರೋಧಿ ವ್ಯಾಕ್ಸೀನ್ ಸರಿಯಾಗಿ ತನ್ನ ಕೆಲಸ ನಿರ್ವಹಿಸುತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿಯುವ ಹೊರಲಕ್ಷಣಗಳೇನೂ ದೇಹದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಜನಸಂಖ್ಯಾ ಸ್ಫೋಟದ ಭೀತಿಯ ಭೂತವನ್ನು ಮುಂದಿಟ್ಟುಕೊಂಡು ಇಂತಹ ಫಲವಂತಿಕೆ ನಿರೋಧೀ ವ್ಯಾಕ್ಸೀನುಗಳ ಗರ್ಭನಿರೋಧಕ ಸಾಧನಗಳನ್ನು ಜನಸಾಮಾನ್ಯರಲ್ಲಿ ಜಾರಿಗೆ ತರುವಾಗ ಸರ್ಕಾರಿ ಕಾರ್ಯಕ್ರಮಗಳು ಸ್ತ್ರೀ ಆರೋಗ್ಯದ ದೃಷ್ಟಿಯಿಂದ ತೆಗೆದುಕೊಳ್ಳಲೇ ಬೇಕಾದ ನೈತಿಕ ಎಚ್ಚರಿಕೆಗಳನ್ನು ನಿರ್ಲಕ್ಷಿಸಬಾರದು ಎಂಬ ಮುನ್ನೆಚ್ಚರಿಕೆಗಳನ್ನು ಮಹಿಳಾ ಚಳವಳಿಯ ಅದರಲ್ಲಿಯೂ ಸ್ತ್ರೀಆರೋಗ್ಯ ಚಳವಳಿಯ ಸಕ್ರಿಯ ಪ್ರಮುಖರು ಆಗಾಗ ನೀಡುತ್ತಲೇ ಬಂದಿದ್ದಾರೆ. ಈ ವ್ಯಾಕ್ಸೀನುಗಳನ್ನು ಸಂಶೋಧಿಸುತ್ತಿರುವವರಾಗಲೀ ಅವುಗಳ ತಯಾರಕರಾಗಲೀ ಈ ಅಂಶಗಳನ್ನು ನಿರ್ಲಕ್ಷಿಸದಂತೆ ಇವರು ಎಚ್ಚರಿಕೆಯಿಂದ ಕಾವಲು ಕಾಯುತ್ತಿದ್ದಾರೆ. ಪ್ರಜನನ ಹಕ್ಕುಗಳ ಸ್ತ್ರೀ ವಿಶ್ವಜಾಲವು, ಫಲವಂತಿಕೆ ನಿರೋಧೀ ವ್ಯಾಕ್ಸೀನುಗಳ ಸಂಶೋಧನೆಗಳನ್ನು ವಿಶ್ವದೆಲ್ಲೆಡೆ ನಿಲ್ಲಿಸಲು ಅಂತರರಾಷ್ಟ್ರೀಯ ಚಳವಳಿಯೊಂದನ್ನು ಆರಂಭಿಸಿದೆ.[7]

ಅಲ್ಲದೆ, ಫಲವಂತಿಕೆ ನಿರೋಧೀ ವ್ಯಾಕ್ಸೀನುಗಳನ್ನು ಕುರಿತಂತೆ ಇದುವರೆವಿಗೂ ನಡೆದ ಸಂಶೋಧನೆಗಳಲ್ಲಿ ಪ್ರಯೋಗಕ್ಕಾಗಿ ಮಹಿಳೆಯರನ್ನು ಆಯ್ಕೆ ಮಾಡಿದ ರೀತಿ, ಪ್ರಯೋಗದಲ್ಲಿ ಭಾಗವಹಿಸಿದ್ದ ಸ್ತ್ರೀಯರಿಗೆ ನೀಡಿದ್ದ ಅಪೂರ್ಣ ಮತ್ತು ತಪ್ಪು ಮಾಹಿತಿ ಇತ್ಯಾದಿ, ನೈತಿಕ ಹಿಂಜರಿಕೆಗಳಿಲ್ಲದ ಸಂಶೋಧನೆಗಳ ವಿರುದ್ಧ ಪ್ರತಿಭಟನೆಯ ಕೂಗು ಎದ್ದಿದೆ. ಫಲವಂತಿಕೆ ನಿರೋಧಿ ವ್ಯಾಕ್ಸೀನುಗಳ ಸಂಶೋಧನೆಯನ್ನು ನಿಲ್ಲಿಸಬೇಕೆಂದು ಮಹಿಳಾ ಪ್ರಜನನ ಹಕ್ಕುಗಳ ವಿಶ್ವಜಾಲ ಒತ್ತಾಯಿಸುತ್ತಿದೆ. ಇದಕ್ಕಾಗಿ ಈ ವಿಶ್ವಜಾಲವು ಅಂತರರಾಷ್ಟ್ರೀಯ ಚಳವಳಿಗಾಗಿ ಕರೆ ನೀಡಿದೆ. ನಮ್ಮ ದೇಶದ ಹತ್ತನೇ ಪಂಚವಾರ್ಷಿಕ ಯೋಜನೆಯ ಕುಟುಂಬ ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ ಸಂಶೋಧನೆಗೆ ಗುರಿಯಾಗಬೇಕಾದ ವಿಷಯಗಳ ಪಟ್ಟಿಯನ್ನು ಯೋಜನಾ ಆಯೋಗ ಪ್ರಕಟಿಸಿದ್ದು ಅದರಲ್ಲಿರುವ ಮೊದಲ ವಿಷಯವೇ ಫಲವಂತಿಕೆ ವಿರೋಧಿ ವ್ಯಾಕ್ಸೀನುಗಳನ್ನು ಒಳಗೊಂಡಂತೆ. ಆಧುನಿಕ ವೈದ್ಯ ಪದ್ಧತಿಯ ಗರ್ಭನಿರೋಧಕಗಳ ಹೊಸ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವುದೇ ಆಗಿದೆ. ಇದರಿಂದ ನಮ್ಮ ದೇಶದ ಕುಟುಂಬ ಯೋಜನಾ ಕಾರ್ಯಕ್ರಮದ ಚೌಕಟ್ಟಿನೊಳಗೆ ಇಂತಹ ವ್ಯಾಕ್ಸೀನುಗಳು ಬಳಕೆಯಾಗುವ ಸಾಧ್ಯತೆಗಳ ಇಂದು ಖಚಿತವಾಗಿದೆ.[8]

ಜೊತೆಗೆ ಫಲವಂತಿಕೆ ನಿರೋಧೀ ವ್ಯಾಕ್ಸೀನುಗಳು ಹಾಗೂ ಸೋಂಕು ಮತ್ತು ಸಾಂಕ್ರಾಮಿಕ ರೋಗಗಳಿಂದ ಕಾಪಾಡಬಲ್ಲ ವ್ಯಾಕ್ಸೀನುಗಳನ್ನು ಸಮೀಕರಿಸಿಕೊಂಡು ತಪ್ಪಾಗಿ ತಿಳಿದುಕೊಂಡು ಜನಸಾಮಾನ್ಯರು ಗೊಂದಲಕ್ಕೀಡಾಗುವುದು ಸಹಜವೇ. ಈಗಾಗಲೇ ಭಾರತದ ಕೆಲಪ್ರದೇಶಗಳಲ್ಲಿ ಗರ್ಭನಿರೋಧಕ ವ್ಯಾಕ್ಸೀನುಗಳನ್ನು ನೀಡಲಾಗುತ್ತಿದೆ ಎಂಬ ವದಂತಿಗಳು ಹಬ್ಬಿದ್ದು ಇತರೇ ರೋಗನಿರೋಧಕ ವ್ಯಾಕ್ಸೀನುಗಳನ್ನು ತೆಗೆದುಕೊಳ್ಳಲು ಜನಸಾಮಾನ್ಯರು ನಿರಾಕರಿಸುತ್ತಿರುವುದು ವರದಿಯಾಗಿದೆ. ಇಂತಹ ವದಂತಿಗಳ ಸತ್ಯಾಸತ್ಯತೆ ಏನೇ ಇರಲಿ ಅದರ ಪರಿಣಾಮ ಬರೀ ಕುಟುಂಬ ಯೋಜನೆಯ ಕಾರ್ಯಕ್ರಮದ ಮೇಲೆ ಮಾತ್ರವಲ್ಲದೆ ಸಾರ್ವಜನಿಕ ಆರೋಗ್ಯ ಸೇವೆಗಳ ಮೇಲೆ ಸಹ ಜನಸಾಮಾನ್ಯರ ವಿಶ್ವಾಸ ತಗ್ಗುವಂತೆ ಆಗಬಹುದು. ಅಲ್ಲದೇ ಫಲವಂತಿಕೆ ವಿರೋಧೀ ವ್ಯಾಕ್ಸೀನುಗಳ ದುರುಪಯೋಗದ ಭಯಕ್ಕೆ ಬುನಾದಿಯಿಲ್ಲದೇ ಇಲ್ಲ. ಏಕೆಂದರೆ ಇಂತಹ ಪ್ರಯೋಗಗಳಿಗೆ ಬಲಿಯಾಗುತ್ತಿರುವವರು ಮೂರನೇ ವಿಶ್ವದ ಬಡ ಮಹಿಳೆಯರೇ, ಹೊಸ ಗರ್ಭನಿರೋಧಕಗಳ ಇಂತಹ ಪ್ರಯೋಗಗಳ ದುರುಪಯೋಗಗಳ ಇತಿಹಾಸವೇ ಭಾರತದಂತಹ ಹಲವು ಅಭಿವೃದ್ಧಿಶೀಲ ದೇಶಗಳಲ್ಲಿದೆ. ಆದ್ದರಿಂದಲೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ತ್ರೀಆರೋಗ್ಯ ಚಳವಳಿಗಳು ಇಂತಹ ಪ್ರಯೋಗಗಳನ್ನು ಹಾಗೂ ಕಾರ್ಯಕ್ರಮಗಳನ್ನು ಎಚ್ಚರಿಕೆಯಿಂದ ಪರಿವೀಕ್ಷಿಸುತ್ತಾ ಕಾವಲು ಕಾಯಬೇಕಾಗಿದೆ.

[1] Gupta Jyothsna Agnihothri (2000), New Reproductive Technologies, Women, Health and Authonomy, Sage Publications.

[2] Bang. R and A. Bang (1992), Contraceptive Technology : Experience of rural Indian Women, Manushi no. 70. Pp. 26-31.

[3] GOI (2006), Platform for Action 10 years after India Country Report, New Delhi, Dept of Women and Child Development, Ministry of HRD., GOI.

[4] Chhabra R. and S.C. Nuna (undated), Abortion in India an Overview, New Delhi, Veerendra Printers.

[5] Times of India 5.1.1994.

[6] Richter 1993 quoted in Gupta J. A. (2000) Ibid

[7] Women’s Global Network on Reproductive Rights (1993) “Call for a stop to research on anti-fertility vaccines’’, Open letter 8.11.93 Amsterdam quoted by Gupta (2000),Ibid.

[8] GOI (undated Document) Tenth Five Years Plan 2002-07, Vol. 2 New Delhi., Planning Commission.