ಸಾರ್ವಜನಿಕವೂ, ಪಾರದರ್ಶಕವೂ ಆದ ಆಡಳಿತ, ಲಾಭಕೋರ ಕಂಪೆನಿಗಳನ್ನು ಹಾಗೂ ಕಾರ್ಪೋರೇಟ್‌ಆಸ್ಪತ್ರೆಗಳನ್ನು ಆರೋಗ್ಯ ಆಡಳಿತದಿಂದ ಪೂರ್ತಿಯಾಗಿ ಹೊರಗೇ ಇರಿಸಲು ಅಗತ್ಯ. ‘ಸಮಗ್ರತೆ’ ಎಂಬ ಅಂಶವು ಜನರ ಆರೋಗ್ಯಕ್ಕೆ ಅಗತ್ಯವಾಗಿರುವ ಎಲ್ಲಾ ಆರೋಗ್ಯ ಸೇವಾ ಸೌಲಭ್ಯಗಳನ್ನು ಒಳಗೊಳ್ಳುವ ಹಾಗೆ ಹೊಸ ಆರೋಗ್ಯ ಕಾರ್ಯನೀತಿಯು ರೂಪಿತವಾಗುವುದನ್ನು ಖಾತರಿಪಡಿಸಬಲ್ಲದು. ಇನನು ‘ಸಾರ್ವತ್ರಿಕತೆ’ ಎಂಬ ಅಂಶವು ಹೊಸ ಆರೋಗ್ಯ ಕಾರ್ಯನೀತಿಯಲ್ಲಿದ್ದರೆ ಜನಸಮುದಾಯದ ಪ್ರತಿವ್ಯಕ್ತಿ ಆರೋಗ್ಯ ಸೇವಾ ಸೌಲಭ್ಯಗಳ ಅಡಿಯಲ್ಲಿ ಬರಲು ಸಾಧ್ಯವಾಗುತ್ತದೆ. “ಸಂಚಾರೀ ಆರೋಗ್ಯ ಸೇವಾ ಸೌಲಭ್ಯಗಳ” ಲಭ್ಯತೆ, ಜನರು ತಮಗೆ ಬೇಕಾದ ಕಡೆ, ಅಗತ್ಯವಿರುವ ಆರೋಗ್ಯ ಸೇವಾ ಸೌಲಭ್ಯಗಳನ್ನು ಆದಷ್ಟೂ ಬೇಗನೆ ಪಡೆಯಲು ಸಾಧ್ಯವಾಗುವಂತೆ ಮಾಡಬಲ್ಲದು. ಇನ್ನು ಕೊನೆಯದಾಗಿ, “ಆರೋಗ್ಯ ಸೇವಾ ಸೌಲಭ್ಯಗಳ ದಕ್ಕುವಿಕೆ”. ಇದನ್ನು ಆರೋಗ್ಯ ಸೇವಾ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವುದಕ್ಕೆ ಇರುವ ಎಲ್ಲಾ ಆರ್ಥಿಕ, ಭೌಗೋಳಿಕ, ಆಡಳಿತಶಾಹಿ ಹಾಗೂ ಲಿಂಗತ್ವದ ಅಡೆತಡೆಗಳಿಂದ ಬಿಡುಗಡೆಯೆಂದೇ ಅರ್ಥೈಸಲಾಗಿದೆ.

[1]

ಹೀಗೆ ಈ ಐದು ಅಂಶಗಳು ಸಾರ್ವಜನಿಕ ಆರೋಗ್ಯಕ್ಕೆ ಇರುವ ಆರ್ಥಿಕ ಹಾಗೂ ರಾಜಕೀಯ ಆಯಾಮಗಳನ್ನು ಪ್ರತಿಬಿಂಬಿಸುತ್ತವೆ. ಇನ್ನೂ ಸರಳೀಕೃತಗೊಳಿಸಿ ಹೇಳಬೇಕೆಂದರೆ, ಯಾರ್ಯಾರು ಯಾವ್ಯಾವ ಕಾಯಿಲೆಗಳಿಗೆ ತುತ್ತಾಗುತ್ತಾರೆ, ಅಂತಹ ಕಾಯಿಲೆಗಳ ದುಷ್ಪರಿಣಾಮಗಳೇನು ಹಾಗೂ ಹೀಗೆ ಕಾಯಿಲೆಯಾದವರಲ್ಲಿ ಯಾರಿಗೆ ಎಷ್ಟು ಮಾತ್ರದ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯ, ಯಾರಿಗೆ ಸಾಧ್ಯವೇ ಇಲ್ಲ ಎಂಬುದನ್ನೆಲ್ಲಾ ಸಾಮಾಜಿಕ ಆರ್ಥಿಕ ಏಣಿಶ್ರೇಣಿಗಳೇ ನಿರ್ಧರಿಸುತ್ತವೆ. ಆದ್ದರಿಂದ ಇಂತಹ ಸಾಮಾಜಿಕ ಅಸಮಾನತೆಗಳನ್ನು ಎದುರಿಸಲು ಹಾಗೂ ಜನಸಮುದಾಯದ ಕಲ್ಯಾಣವನ್ನು ಸಾಧಿಸುವಲ್ಲಿ ಸಾಮಾಜಿಕ ಕಾರ್ಯನೀತಿಗಳನ್ನು (Social policies) ಸರಿಯಾಗಿ ರೂಪಿಸುವುದು ಅನಿವಾರ್ಯ. ಅಂತಹ ಸಾಮಾಜಿಕ ಕಾರ್ಯನೀತಿಗಳಲ್ಲಿ ಆರೋಗ್ಯ ಕಾರ್ಯನೀತಿ ಸಹ ಪ್ರಮುಖವಾದದ್ದು.

ಆರೋಗ್ಯ ವಲಯದಲ್ಲಿ ಈಗಿರುವ ಹಲವು ಬಗೆಯ ಸಾಮಾಜಿಕ ಅಸಮಾನತೆಗಳಲ್ಲಿ ಅತ್ಯಂತ ಗಾಢವಾಗಿರುವ ಅಸಮಾನತೆಯೆಂದರೆ ಲಿಂಗ ಅಸಮಾನತೆಯಾಗಿದೆ. ಇಂತಹ ಲಿಂಗ ಅಸಮಾನತೆಯನ್ನು ಅತ್ಯಂತ ಬಲವಾಗಿ ಎತ್ತಿತೋರುವ ಆರೋಗ್ಯ ಸಂಬಂಧಿ ಕಾರ್ಯನೀತಿಯೊಂದು ಏನಾದರೂ ಇದ್ದಲ್ಲಿ ಅದು ನಮ್ಮ ಜನಸಂಖ್ಯಾ ನೀತಿಯೇ (Population policy). ಆಗಿದೆ. ಮಹಿಳೆಯರನ್ನು ನೇರವಾಗಿ ಸಬಲೀಕರಣಗೊಳಿಸಲು ಆದ್ಯತೆ ನೀಡಬಲ್ಲ ಯಾವುದೇ ಅಂಶವಾಗಲೀ, ಅವರು ತಮ್ಮ ಆರೋಗ್ಯದ ಹಕ್ಕುಗಳನ್ನು ಜಾರಿಗೊಳಿಸಲು ಸಾಧ್ಯವಾಗುವಂತೆ ಮಾಡಬಲ್ಲ ಯಾವ ಅಂಶವಾಗಲೀ ನಮ್ಮ ರಾಷ್ಟ್ರೀಯ ಜನಸಂಖ್ಯಾ ಕಾರ್ಯನೀತಿಯಲ್ಲಿ ಇಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ತದ್ವಿರುದ್ಧವಾಗಿ ನಗರದ ಬಡವರಿಗೆ, ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ನೀಡುವ ಪ್ರೋತ್ಸಾಹಕಗಳನ್ನು (incentives) ಹಾಗೂ ನಿರುತ್ಸಾಹಕಗಳನ್ನು (disincentives) ಅವರು ಸಂತಾನ ನಿರೋಧವನ್ನು ಅನುಸರಿಸುತ್ತಿದ್ದಾರೋ ಇಲ್ಲವೋ ಎಂಬುದಕ್ಕೆ ತಳುಕು ಹಾಕಲಾಗಿದೆ. ಉದಾಹರಣೆಗೆ, ಇವರಿಗೆ ನೀಡುವ ರೇಷನ್‌ಕಾರ್ಡ್‌ಇತ್ಯಾದಿ ಮೂಲಭೂತ ಅಗತ್ಯಗಳಿಗೆ ತಳುಕು ಹಾಕಿ, ಅವುಗಳ ಮುಂದುವರಿಕೆಯು ಅವರು ಸಂತಾನ ನಿರೋಧಕ್ಕೆ ಒಳಗಾಗಿದ್ದಾರೋ ಇಲ್ಲವೋ ಎಂಬುದನ್ನೇ ಅವಲಂಬಿಸಿರಬೇಕೆಂಬ ಒತ್ತಡದ ಧೋರಣೆಯನ್ನು ನಮ್ಮ ರಾಷ್ಟ್ರೀಯ ಜನಸಂಖ್ಯಾ ನೀತಿಯಲ್ಲಿ ಹಾಗೂ ಕೇವಲ ರಾಜ್ಯಗಳ ಜನಸಂಖ್ಯಾ ಕಾರ್ಯನೀತಿಗಳಲ್ಲಿ ಪುನರ್‌ಪ್ರಸ್ತಾಪಿಸಲಾಗುತ್ತಿದೆ.6,7

ಜನಸಂಖ್ಯೆ ಮತ್ತು ಅಭಿವೃದ್ಧಿಯನ್ನು ಕುರಿತು ಅಂತರರಾಷ್ಟ್ರೀಯ ಸಮಾವೇಶದಲ್ಲಿ (ICPD) ನಿರ್ಧರಿಸಲಾಗಿದ್ದ ಕ್ರಿಯಾಯೋಜನೆಗೆ ಇಂತಹ ಒತ್ತಾಯದ/ಒತ್ತಡದ ಧೋರಣೆಗಳು ಕಟುವಿರೋಧಿಯಾಗಿವೆಯೆನ್ನಬಹುದು. ಈ ಕ್ರಿಯಾಯೋಜನೆಗೆ ಸಹಿ ಹಾಕಿರುವ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂಬುದನ್ನು ಗಮನಿಸಬೇಕು. ಹಾಗಿದ್ದರೂ ಸಹ ಕೇಂದ್ರ ಸರ್ಕಾರದ ರಾಷ್ಟ್ರೀಯ ಜನಸಂಖ್ಯಾ ನೀತಿ ಹಾಗೂ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳು ಸ್ವಯಂ ಘೋಷಿಸಿರುವ ಜನಸಂಖ್ಯಾ ಕಾರ್ಯನೀತಿಯು ಅಧಿಕೃತ ಹೇಳಿಕೆಗಳು ಈ ಅಂತರಾಷ್ಟ್ರೀಯ ಜನಸಂಖ್ಯೆ ಮತ್ತು ಅಭಿವೃದ್ಧಿ ಕಾರ್ಯಯೋಜನೆಯ ವಿರುದ್ಧವಾಗಿಯೇ ಇವೆ. ಉದಾಹರಣೆಗೆ ರಾಜಸ್ಥಾನದ ಜನಸಂಖ್ಯಾ ಕಾರ್ಯನೀತಿಯ ಪ್ರಕಾರ ಕಾನೂನು ಬದ್ಧ ವಯಸ್ಸಿಗೆ ಮೊದಲೇ ವಿವಾಹವಾದ ಹಾಗೂ ಎರಡಕ್ಕಿಂತಾ ಹೆಚ್ಚು ಮಕ್ಕಳಿರುವ ವ್ಯಕ್ತಿಗಳು ಚುನಾವಣೆಗೆ ನಿಲ್ಲುವ ಹಾಗಿಲ್ಲ. ಅಲ್ಲದೆ ಅಂತಹವರಿಗೆ ಪಡಿತರ ಚೀಟಿ ಪಡೆಯುವ ಹಾಗೂ ಸರ್ಕಾರೀ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಬೇಕಾಗುವ ಅರ್ಹತೆಯನ್ನೇ ನಿರಾಕರಿಸಲಾಗುತ್ತದೆ. ಮಹಾರಾಷ್ಟ್ರದ ಜನಸಂಖ್ಯಾ ಕಾರ್ಯನೀತಿಯ ಪ್ರಕಾರ ಎರಡಕ್ಕಿಂತಾ ಹೆಚ್ಚು ಮಕ್ಕಳಿರುವ ಕುಟುಂಬಗಳು ರಾಜ್ಯ ಸರ್ಕಾರದ ೫೦ ಕಲ್ಯಾಣವಾದೀ ಯೋಜನೆಗಳಲ್ಲಿ ಫಲಾನುಭವಿಗಳಾಗುವ ಹಾಗಿಲ್ಲ. ಇಂತಹ ನಿರುತ್ಸಾಹಕಗಳು ಸಮಾಜದಲ್ಲಿ ಈಗಾಗಲೇ ಪ್ರಚಲಿತವಾಗಿರುವ ಲಿಂಗ ಅಸಮಾನತೆಯ ತೀವ್ರತೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ಇಂತಹ ಕಾರ್ಯನೀತಿಯ ಧೋರಣೆಯಿಂದಾಗಿ ಸ್ತ್ರೀಭ್ರೂಣ ಪರೀಕ್ಷೆ ಮತ್ತು ಸ್ತ್ರೀಭ್ರೂಣ ಗರ್ಭಪಾತಗಳ ತಾಂತ್ರಿಕತೆಗಳ ಉಪಯೋಗ ತೀವ್ರವಾಗಿ ಹೆಚ್ಚುತ್ತದೆ. ಗರ್ಭಪಾತವು ಅಪಾಯಕಾರಿಯಾಗಬಹುದಾದ ಬಸುರಿನ ಎರಡನೇ ತ್ರೈಮಾಸಿಕ ಅವಧಿಯಲ್ಲೂ ಸಹ ಸ್ತ್ರೀಭ್ರೂಣ ಪತ್ತೆ ಹಾಗೂ ಹತ್ಯೆಗಳು ಸಾಗುತ್ತವೆ. ಬಾಲ್ಯವಿವಾಹ ನಿಷೇಧ ಕಾನೂನು ಹಾಗೂ ಬಸುರಿನ ಅವಧಿಯ ಪರೀಕ್ಷಾ ತಾಂತ್ರಿಕತೆಗಳ ನಿಯಂತ್ರಣ ಹಾಗೂ ದುರುಪಯೋಗ ತಡೆಯ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಈ ಜನಸಂಖ್ಯಾ ನೀತಿ ಶಿಫಾರಸ್‌ಮಾಡಿದ್ದರೂ ಸಹ, ಎರಡು ಮಕ್ಕಳಿಗಿಂತಾ ಹೆಚ್ಚು ಇರಬಾರದೆನ್ನುವ ನೀತಿಯಿಂದಾಗಿ ಭ್ರೂಣಹತ್ಯಗಳ ಸಂಖ್ಯೆ ಹೆಚ್ಚಾಗುತ್ತಿರುವುದೂ ಅಷ್ಟೇ ನಿಜ. ಇಂತಹ ನಿಷೇಧಗಳು ಹಾಗೂ ಇರುವ, ಸಿಗಬೇಕಾದ ಸವಲತ್ತುಗಳನ್ನು ಕಿತ್ತುಕೊಳ್ಳುವಂತಹ ನಿರುತ್ಸಾಹಕಗಳಿಂದಾಗಿ (disincentives) ಲಂಚಗುಳಿತನ ಹಾಗೂ ಇಂತಹ ನಿಯಮಗಳ ದುರುಪಯೋಗ ಅತಿಯಾಗಿ ಹೆಚ್ಚಾಗುವ ಸಾಧ್ಯತೆಗಳನ್ನು ತಳ್ಳಿಹಾಕುವ ಹಾಗಿಲ್ಲ. ಈ ಪರಿಯ ನಿರುತ್ಸಾಹಕಗಳು ಬಡವರ ಜೀವನೋಪಾಯಗಳ ಅವಕಾಶಗಳನ್ನು ಕಡಿಮೆ ಮಾಡುವುದರೊಂದಿಗೆ ಬಡತನದಲ್ಲಿರುವ ಸಮುದಾಯಗಳನ್ನು ಇನ್ನಷ್ಟು ಆಳವಾದ ಬಡತನಕ್ಕೆ ತಳ್ಳಿ ಅವರು ಇನ್ನಷ್ಟು ಶೋಷಣೆಗೆ ಒಳಗಾಗುವ ಪರಿಸ್ಥಿಯನ್ನು ನಿರ್ಮಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ಹಾಗೂ ತಮ್ಮ ಕುಟುಂಬದ ಉಳಿವಿಗಾಗಿ ಅಳವಡಿಸಿಕೊಳ್ಳುವ ಹೆಚ್ಚು ದುಡಿಮೆ, ಕಡಿಮೆ ಆಹಾರ ಹಾಗೂ ವಿಶ್ರಾಂತಿಗಳಿಂದಾಗಿ ಅದರಲ್ಲೂ ಬಸುರಿಯರು ಮತ್ತು ಹಾಲೂಡಿಸುವ ಬಾಣಂತಿಯರು ತಮ್ಮ ಆರೋಗ್ಯದ ಬೆಲೆ ತೆರಲೇಬೇಕಾಗುತ್ತದೆ. ಆದ್ದರಿಂದ ಜನಸಂಖ್ಯಾ ಕಾರ್ಯನೀತಿಗಳು, ಅವು ಕೇಂದ್ರ ಸರ್ಕಾರದ್ದಾಗಿರಲೀ ರಾಜ್ಯ ಸರ್ಕಾರದ್ದಾಗಿರಲೀ ಅವುಗಳಲ್ಲಿರುವ ಪ್ರೋತ್ಸಾಹಕಗಳು ಮತ್ತು ನಿರುತ್ಸಾಹಕಗಳನ್ನು ಕಿತ್ತುಹಾಕಿ ಅವನ್ನು ಮಹಿಳಾ ಸಬಲಿಕರಣವನ್ನುಂಟು ಮಾಡುವಂತಹ ಕಾರ್ಯನೀತಿಗಳನ್ನಾಗಿ ಬದಲಾಯಿಸಿ ಬರೆಯಬೇಕಾಗಿದೆ. ಎಲ್ಲಕ್ಕಿಂತಾ ಮುಖ್ಯವಾಗಿ ಇಂದು ಭಾರತೀಯ ಮಹಿಳೆಯರ ಬೃಹತ್‌ಸಮುದಾಯ ಬದುಕುತ್ತಿರುವ ತಳಸ್ಪರ್ಶ ವಾಸ್ತವತೆಗಳನ್ನು (Ground realities) ಕಾರ್ಯನೀತಿ ನಿರೂಪಕರು ಪರಿಗಣಿಸಲೇಬೇಕು. ಸಂತಾನೋತ್ಪತ್ತಿಯೂ ಸೇರಿದಂತೆ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಎಷ್ಟೋ ವಿಷಯಗಳಲ್ಲಿ ನಮ್ಮ ಮಹಿಳಾ ಜನಸಮುದಾಯಕ್ಕಿರುವ ಅಧಿಕಾರ ಬಹಳ ಸೀಮಿತವಾದದ್ದು ಎಂಬುದನ್ನು ಕಾರ್ಯನೀತಿ ನಿರೂಪಕರು ಮನದಟ್ಟು ಮಾಡಿಕೊಳ್ಳಬೇಕಾಗಿದೆ.

ವಿಶ್ವಾಸಾರ್ಹವಾದ ಜನಸಂಖ್ಯಾ ಪ್ರಕ್ಷೇಪಣವೊಂದರ (Population projection) ಪ್ರಕಾರ ನಮ್ಮ ಜನಸಂಖ್ಯೆಯ ಹೆಚ್ಚಳದ ಕೇವಲ ಶೇ. ೨೦ರಷ್ಟು ಮಾತ್ರ ಹೆಚ್ಚು ಮಕ್ಕಳುಬೇಕೆಂಬ ಆಸೆಯಿಂದ ಉಂಟಾಗಿದೆ. ಇನ್ನುಳಿದ ಶೇ. ೮೦ರಷ್ಟು ಹೆಚ್ಚಳಕ್ಕೆ ಹರೆಯದ ಜನಸಂಖ್ಯಾಯ ಹೆಚ್ಚಳ ಹಾಗೂ ಸರಿಯಾದ ಸಂತಾನ ನಿಯಂತ್ರಣದ ಸೇವಾ ಸೌಲಭ್ಯಗಳ ಕೊರತೆ ಹಾಗೂ ಸಂತಾನ ನಿರೋಧಕಗಳನ್ನು ಅಳವಡಿಸಿಕೊಳ್ಳಲು ಬೇಕಾಗುವ ನಿರ್ಣಯದ ಅಧಿಕಾರವಿಲ್ಲದಿರುವುದು ಇತ್ಯಾದಿಗಳು ಕಾರಣಗಳಾಗಿವೆ. ಆದ್ದರಿಂದ ಪ್ರಸ್ತುತ ಸಂದರ್ಭದಲ್ಲಿ ಒಳ್ಳೆಯ ಗುಣಮಟ್ಟದ ಸುಧಾರಿತ ಸಂತಾನ ನಿರೋಧಕ ಸಾಧನ ಸೌಲಭ್ಯಗಳು ಲಭಿಸುವಂತೆ ಮಾಡಬೇಕಾಗಿದೆ. ಈ ಬಗೆಯ ಉತ್ತಮ ಪ್ರಜನನ ಸೌಲಭ್ಯಗಳನ್ನು ಪ್ರಾಥಮಿಕ ಆರೋಗ್ಯ ಸೇವಾ ಸೌಲಭ್ಯಗಳ ಚೌಕಟ್ಟಿನಲ್ಲಿಯೇ ಎಲ್ಲರಿಗೂ ಸಮಾನವಾಗಿ ನ್ಯಾಯಯುತವಾಗಿ ಒದಗಿಸಬೇಕಾಗಿದೆ.

ಮಹಿಳೆಯರನ್ನು ಹಾಗೂ ಹುಡುಗಿಯರನ್ನು ಸಬಲೀಕರಣಗೊಳಿಸಲು ಹಾಗೂ ಲೈಂಗಿಕತೆ ಮತ್ತು ಸಂತಾನೋತ್ಪತ್ತಿಗಳನ್ನು ಕುರಿಂತಂತೆ ಗಂಡಸರಲ್ಲಿ ಈಗಿರುವ ನಂಬಿಕೆ ನಡವಳಿಕೆಗಳಲ್ಲಿ ಬದಲಾವಣೆ ತರಲು ಸರಕಾರೀ ಆಡಳಿತ ವಿವಿಧ ವಲಯಗಳ ನಡುವೆ ಪಾರಸ್ಪರಿಕವಾದ ಸಮಗ್ರ ಪ್ರಯತ್ನ ನಡೆಯಬೇಕು. ಈ ಪ್ರಯತ್ನಗಳೊಂದಿಗೆ ನಮ್ಮ ದೇಶದ ಜನಸಂಖ್ಯಾ ಕಾರ್ಯನೀತಿ ಮತ್ತು ಕಾರ್ಯಕ್ರಮಗಳ ಗುರಿಗಳನ್ನು ಕುರಿತ ಹಾಗೂ ಈ ಕಾರ್ಯಕ್ರಮಗಳು ಅಳವಡಿಸಿಕೊಂಡಿರುವ ವಿಧಿ ವಿಧಾನಗಳ ಬಗ್ಗೆ ವ್ಯಾಪಕವಾದ ಹಾಗೂ ಮುಖ್ಯವಾದ ಸಾರ್ವಜನಿಕ ಚರ್ಚೆಗಳನ್ನು ನಡೆಸುವ ಅಗತ್ಯವಿದೆ. ಈ ಸಾರ್ವಜನಿಕ ಸಂವಾದಗಳಲ್ಲಿ ಮಹಿಳಾ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸ್ತ್ರೀ ಆರೋಗ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಕಾರ್ಯಕರ್ತರು, ಪ್ರಜಾಪ್ರಭುತ್ವವಾದೀ ಗುಂಪುಗಳು ಹಾಗೂ ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಗುಂಪುಗಳೂ ಅಷ್ಟೇ ಅಲ್ಲದೆ ಎಲ್ಲಾ ಆಸಕ್ತ ನಾಗರೀಕರು ಪರಿಣಾಮಕಾರಿಯಾಗಿ ಭಾಗವಹಿಸಬೇಕಾಗಿದೆ. ಏಕೆಂದರೆ ನಮ್ಮ ದೇಶದ ಜನಸಂಖ್ಯೆಯ ನಿಯಂತ್ರಣಕ್ಕೆ ಮೂಲಭೂತವಾಗಿ ಸ್ತ್ರೀಯರಿಗೆ ತಮ್ಮ ಸಂತಾನದ ಬಗ್ಗೆ ಸ್ವನಿರ್ಣಯದ ಅಧಿಕಾರವನ್ನು ನೀಡಬಲ್ಲಂಥಹ ಸಬಲೀಕರಣ ಅತ್ಯಗತ್ಯ ಎನ್ನುವುದರ ಬಗ್ಗೆ ಸರ್ಕಾರದಲ್ಲಿ ಹಾಗೂ ಸಾರ್ವಜನಿಕರಲ್ಲಿ ಸಕಾರಾತ್ಮಕವಾದ ಅಭಿಪ್ರಾಯ ಬಲವಾಗಿ ರೂಪುಗೊಂಡು ನೆಲೆಯೂರಬೇಕಾಗಿದೆ. ಅದಕ್ಕೆ ಇಂತಹ ಅಂತರಕ್ರಿಯಾತ್ಮಕವಾದ ಸಾರ್ವಜನಿಕವಾದ ಸಂವಾದ ಚರ್ಚೆಗಳು ಅತ್ಯಂತ ಅವಶ್ಯಕ. ಸ್ತ್ರೀಪರವಾದ ಮತ್ತು ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವ ಹೊಸ ರಾಷ್ಟ್ರೀಯ ಜನಸಂಖ್ಯಾ ನೀತಿಯೊಂದು ರೂಪುಗೊಳ್ಳುವಂತೆ ಮಾಡುವುದು ಇಂದು ಅನಿವಾರ್ಯವಾಗಿದೆ.

ಆರೋಗ್ಯ ಕಾರ್ಯಕ್ರಮಗಳಲ್ಲಿ ಸ್ತ್ರೀ ಸಬಲೀಕರಣಕ್ಕಾಗಿ ಕೈಗೊಳ್ಳಬೇಕಾಗುವ ಕ್ರಮಗಳು

ಕಾರ್ಯಕ್ರಗಳನ್ನು ಯೋಜಿಸುವಾಗ ಹಾಗೂ ಕಾರ್ಯಗತಗೊಳಿಸುವ ಹಂತಗಳಲ್ಲಿ ಸ್ತ್ರೀ ಸಬಲೀಕರಣಕ್ಕಾಗಿ ತೆಗೆದುಕೊಳ್ಳಬೇಕಾಗುವ ಕ್ರಮಗಳನ್ನು ಕೆಳಕಂಡಂತೆ ವರ್ಗೀಕರಿಸಬಹುದು.

ಅ. ಆರೋಗ್ಯ ವಲಯಗಳಲ್ಲಿ ಕೆಲಸ ಮಾಡುವವರಿಗೆಲ್ಲರಿಗೂ (ಕಾರ್ಯನೀತಿ ನಿರೂಪಕರಿಂದ ಹಿಡಿದು ತಳಮಟ್ಟದ ಕೆಲಸಗಾರರವರೆಗೂ) ಲಿಂಗತ್ವ ಸೂಕ್ಷ್ಮ ಸಂವೇದನಾ ತರಬೇತಿಯನ್ನು (Gender sensitization) ನೀಡುವುದು.

ಆ. ಸ್ಥಳೀಯ ಮಟ್ಟದಲ್ಲಿ ಆರೋಗ್ಯ ಕಾರ್ಯಕ್ರಮಗಳನ್ನು ಯೋಜಿಸಿ, ಜಾರಿಗೆ ತಂದು ನಿರ್ವಹಿಸುವ ಮತ್ತು ಮೌಲ್ಯಮಾಪನ ಮಾಡುವ ಎಲ್ಲಾ ಹಂತಗಳಲ್ಲಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿಕೊಂಡು ಜಂಟಿಯಾಗಿ ಕೆಲಸ ಮಾಡುವುದು.

ಇ. ಅದೇ ರೀತಿ ಕಾರ್ಯಕ್ರಮಗಳನ್ನು ಯೋಜಿಸುವ ಹಂತದಿಂದ ಹಿಡಿದು ಮೌಲ್ಯಮಾಪನದ ಹಂತದವರೆಗೆ ಆಯಾ ಗ್ರಾಮದ ಸ್ವಸಹಾಯ ಸಂಘಗಳು ಪಾಲ್ಗೊಳ್ಳುವಂತೆ ಮಾಡುವುದು.

ಈ. ಆರೋಗ್ಯ, ಆಹಾರ ಪೋಷಣೆ, ಕುಟುಂಬ ಯೋಜನೆ ಹಾಗೂ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳಲ್ಲಷ್ಟೇ ಅಲ್ಲದೆ, ಏಡ್ಸ್‌, ಲೈಂಗಿಕ ಸಂಪರ್ಕದಿಂದ ಉಂಟಾಗುವ ರೋಗಗಳು ಹಾಗು ಪ್ರಜನನ ನಾಳದ ಸೋಂಕುಗಳನ್ನು ತಡೆಗಟ್ಟುವ ಮತ್ತು ಚಿಕಿತ್ಸೆ ಮಾಡುವಂತಹ ಕಾರ್ಯಕ್ರಮಗಳಲ್ಲಿ ಪುರುಷರ ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸಿಕೊಳ್ಳಬೇಕು.

ಉ. ಆರೋಗ್ಯ ಪಾಲನೆ, ರಕ್ಷಣೆ ಹಾಗೂ ರೋಗ ಚಿಕಿತ್ಸೆಗಳಿಗೆ ಪರಂಪರಾನುಗತವಾಗಿ ಬಂದಿರುವ ಸ್ತ್ರೀ ಅನುಭವಾತ್ಮಕ ಜನ್ಯವಾದ ಮನೆ ಔಷಧೋಪಚಾರಗಳನ್ನು ಪುನರುಜ್ಜೀವಿಸಿ ಬಲಗೊಳಿಸಬೇಕು.

ಲಿಂಗತ್ವ ಸೂಕ್ಷ್ಮ ಸಂವೇದನಾ ತರಬೇತಿಗಳು ಮತ್ತು ಗ್ರಾಮಪಂಚಾಯಿತಿಗಳನ್ನು ಕಾರ್ಯಕ್ರಮಗಳಲ್ಲಿ ಒಳಗೊಳ್ಳುವುದು

ಆರೋಗ್ಯ ವಲಯದಲ್ಲಿ ಬೇರೆ ಬೇರೆ ಹಂತಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ ಲಿಂಗ ಸೂಕ್ಷ್ಮ ಸಂವೇದನಾ ತರಬೇತಿಯ ಅಗತ್ಯವಿದೆ. ಈ ತರಬೇತಿಗಳು ನಿಶ್ಚಿತ ಅವಧಿಯ ಅಂತರದಲ್ಲಿ ನಿಯಮಿತವಾಗಿ ನಡೆಯುವುದು ಮುಖ್ಯ. ಏಕೆಂದರೆ ಆರೋಗ್ಯ ಕ್ಷೇತ್ರದಲ್ಲಿ ಪ್ರತ್ಯಕ್ಷವಾದ ಹಾಗೂ ಪರೋಕ್ಷವಾದ ಹಲವಾರು ಸ್ತ್ರೀ ವಿರೋಧೀ ಪೂರ್ವ ಗ್ರಹಗಳಿದ್ದು ಸ್ತ್ರೀ ಆರೋಗ್ಯ ಸಬಲೀಕರಣಕ್ಕೆ ಪ್ರಮುಖವಾದ ಅಡ್ಡಿಯಾಗಿವೆ. ಮಹಿಳೆಯರು ಸಂತಾನ ನಿರೋಧಕ ಕ್ರಮಗಳು ಹಾಗೂ ಪ್ರಜನನ ಸೇವಾ ಸೌಲಭ್ಯಗಳ ಬರೀ ನಿಷ್ರ್ಕಿಯ ಫಲಾನುಭವಿಗಳು ಮಾತ್ರ ಇವುಗಳಲ್ಲಿ ಅವರ ಸಕ್ರಿಯ ಪಾತ್ರವೇನೂ ಇರಬೇಕಾದದ್ದು ಇಲ್ಲ ಎಂಬ ಅಭಿಪ್ರಾಯ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ವ್ಯಾಪಕವಾಗಿದೆ. ಈ ರೀತಿ ಸ್ತ್ರೀಯರನ್ನು ಪರಿಭಾವಿಸುವ ಅಭ್ಯಾಸ ಆರೋಗ್ಯ ಹಾಗೂ ವೈದ್ಯಕೀಯ ಸಿಬ್ಬಂದಿಗಳಲ್ಲಿ ಪೂರ್ತಿ ಬದಲಾಗಬೇಕಾಗಿದ್ದು, ಲಿಂಗತ್ವ ಸೂಕ್ಷ್ಮ ಸಂವೇದನಾ ತರಬೇತಿ ಈ ದಿಸೆಯಲ್ಲಿ ಒಂದು ಮುಖ್ಯ ಸಾಧನವಾಗಿದೆ. ಸ್ತ್ರೀಯರು ತಮ್ಮ ಸಂತಾನೋತ್ಪತ್ತಿಯನ್ನು ನಿಯಂತ್ರಿಸಿ ನಿರ್ವಹಿಸಬಲ್ಲ ಸಕ್ರಿಯ ವ್ಯಕ್ತಿಗಳು ಎಂಬ ಪರಿಕಲ್ಪನೆಯನ್ನು ಎಲ್ಲರಲ್ಲೂ ಮೂಡಿಸಿ ದೃಢಪಡಿಸಬೇಕಾಗಿದೆ. ಸ್ತ್ರೀಯರೂ ತಮಗೆ ಆರೋಗ್ಯ ಸೇವಾ ಸೌಲಭ್ಯಗಳನ್ನು ನೀಡುವ ಸಂಸ್ಥೆಗಳಿಂದ ಆಗಲೀ, ಔಷಧ ಕಂಪನಿಗಳಿಂದ ಆಗಲೀ, ವೈದ್ಯರಿಂದಾಗಲೀ ಹಾನಿಯುಂಟಾದಲ್ಲಿ ಅದಕ್ಕೆ ತಮ್ಮ ಹಣೆಬರಹವೇ ಹೊಣೆಯೆಂದಯ ಮುಗ್ಧ ಮೂಕಪ್ರಾಣಿಗಳಂತ ಹೆದರಿಕೊಂಡು ಸುಮ್ಮನಿರದೆ, ವೈದ್ಯರು, ಆಸ್ಪತ್ರೆಗಳನ್ನು ತಮಗಾದ ಆಗಲಿರುವ ಆರೋಗ್ಯ ಹಾನಿಗೆ ಹೊಣೆಗಾರರನ್ನಾಗಿಸುವ ಧೈರ್ಯ ಸಾಮರ್ಥ್ಯಗಳನ್ನುಳ್ಳ ವ್ಯಕ್ತಿಗಳಾಗಬಲ್ಲರು ಎಂಬುದನ್ನು ತಿಳಿದುಕೊಂಡು ಅವರನ್ನು ಗೌರವ ಶ್ರದ್ಧೆಗಳಿಂದ ನಡೆಸಿಕೊಳ್ಳುವ ಮನೋಭಾವ ಹಾಗೂ ಅಭ್ಯಾಸಗಳನ್ನು ವೈದ್ಯರು, ದಾದಿಯರು ಹಾಗೂ ಇತರೇ ಆರೋಗ್ಯ ಸಿಬ್ಬಂದಿಯಲ್ಲಿ ಬೆಳೆಸಬೇಕಾಗಿದೆ. ಇಂತಹ ಬದಲಾವಣೆ ಸ್ತ್ರೀ ಆರೋಗ್ಯ ಸಬಲೀಕರಣಕ್ಕೆ ಬಹಳ ಮುಖ್ಯ ಅಲ್ಲದೆ, ಲಿಂಗತ್ವ ಸೂಕ್ಷ್ಮ ಸಂವೇದನಾ ತರಬೇತಿಗಳು, ಆರೋಗ್ಯ ವಲಯದಲ್ಲಿ ಕೆಲಸ ಮಾಡುತ್ತಿರುವ ಸ್ತ್ರೀವೈದ್ಯರುಗಳು, ದಾದಿಯರು, ಸೂಲಗಿತ್ತಿಯರು, ಸ್ತ್ರೀ ಆರೋಗ್ಯ ಕಾರ್ಯಕರ್ತರುಗಳು ಇತ್ಯಾದಿ ಮಹಿಳಾ ಸಿಬ್ಬಂದಿಯ ಸಬಲೀಕರಣಕ್ಕೂ ಸಹಕಾರಿ.

ಸರ್ಕಾರ ತಾನು ಯೋಜಿಸುವ, ಜಾರಿಗೊಳಿಸುವ, ನಿರ್ವಹಿಸುವ ಹಾಗೂ ಮೌಲ್ಯಮಾಪನ ಮಾಡುವ ಎಲ್ಲಾ ಆರೋಗ್ಯ ಕಾರ್ಯಕ್ರಮಗಳಲ್ಲಿ, ಯುವಜನತೆ, ಕ್ರಿಯಾಶೀಲ ಆರೋಗ್ಯ ಕಾರ್ಯಕರ್ತರುಗಳು (Health Activists ), ಸ್ತ್ರೀ ಸಂಘಟನೆಗಳು ಹಾಗೂ ಪಂಚಾಯಿತಿ ಸದಸ್ಯರುಗಳ ಜಾಲಗಳನ್ನು ಪಾಲ್ಗೊಳ್ಳುವಂತೆ ಮಾಡಿ ಅವುಗಳ ಸಹಯೋಗದಲ್ಲಿ ಕೆಲಸ ಮಾಡುವುದೊಳ್ಳೆಯದು. ಇದರಿಂದ ಸಾಮಾನ್ಯ ಆರೋಗ್ಯ ಹಾಗೂ ಪ್ರಜನನ ಆರೋಗ್ಯಗಳನ್ನು ಕುರಿತಂತೆ ಸ್ತ್ರೀ ಆರೋಗ್ಯ ಸಬಲೀಕರಣ ಸಾಧ್ಯ. ಇದೇ ರೀತಿ ಆರೋಗ್ಯ ಇಲಾಖೆ ನೀಡುವ ಕುಟುಂಬ ಯೋಜನಾ ಸೇವಾ ಸೌಲಭ್ಯಗಳನ್ನು ಸಹ ಆದಷ್ಟೂ ಗ್ರಾಮಪಂಚಾಯಿತಿಗಳ ಸದಸ್ಯೆಯರಾಗಲೀ, ಸ್ಥಳೀಯ ಮಹಿಳಾ ಸಂಘಟನೆಗಳ ಪ್ರತಿನಿಧಿಗಳಾಗಲೀ ನಿರ್ವಹಿಸಿ ಅಂತಹ ಸೇವಾ ಸೌಲಭ್ಯಗಳ ಗುಣಮಟ್ಟ ಮತ್ತು ನಿಯಮಿತ ತನಗಳನ್ನು ಕಾಪಾಡಿಕೊಳ್ಳುವುದು ಮುಖ್ಯ.

ಸ್ತ್ರೀ ಆರೋಗ್ಯ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರ

ಸ್ತ್ರೀ ಸ್ವಸಹಾಯ ಸಂಘಗಳ ವಿಶ್ವದ ಅತ್ಯಂತ ಸಣ್ಣ ಹಣಕಾಸು ಸಂಸ್ಥೆಗಳೆಂದೇ ಹೆಸರುವಾಸಿಯಾಗಿವೆ. ಬಡ ಮಹಿಳೆಯರು ಆದಾಯ ಗಳಿಸಲು, ಗಳಿಸಿದ್ದನ್ನು ಉಳಿತಾಯ ಮಾಡಲು ಹಾಗೂ ಸಾಲ ಪಡೆಯಲು ಇರುವ ಅವಕಾಶಗಳನ್ನು ಹೆಚ್ಚಿಸಲು ಈ ಸಂಘಗಳು ಕಾರಣವಾಗಿವೆ. ಆದರೆ ಇಂತಹ ಸಂಘದಲ್ಲಿ ಸದಸ್ಯತ್ವ ಪಡೆಯುವುದರಿಂದ ಮಹಿಳೆಯರ ಆರೋಗ್ಯ ಹೇಗೆ ಸುಧಾರಿಸಲು ಸಾಧ್ಯ ಎಂಬುದು ಇನ್ನೂ ಸಂಶೋಧನೆಗೆ ಒಳಗಾಗಬೇಕಾದ ವಿಷಯವಾಗಿದೆ. ಈ ವಿಷಯ ಕುರಿತಂತೆ ಈಗಾಗಲೇ ಸೈದ್ಧಾಂತಿಕ ಆಧಾರ ಕಲ್ಪನೆಗಳ (Theoretical hypotheses) ಮೇಲೆ ಎರಡು ಮಾದರಿಗಳನ್ನು ಸೃಷ್ಟಿಸಲಾಗಿದೆ. ಮೊದಲನೆಯ ಮಾದರಿಯ ಪ್ರಕಾರ ಮನೆ ವಾರ್ತೆಯ ಆದಾಯ, ಉಳಿತಾಯ ಹಾಗೂ ಸಾಲ ತೆಗೆದುಕೊಳ್ಳುವ ಅವಕಾಶಗಳು/ಸೌಲಭ್ಯಗಳು ಹೆಚ್ಚಾದಂತೆ, ಮನೆಯಲ್ಲಿ ಆಹಾರ ಮತ್ತು ಆರೋಗ್ಯಕ್ಕಾಗಿ ಮಾಡುವ ಖರ್ಚು ಸಹ ಹೆಚ್ಚಾಗುತ್ತದೆ. ಹಾಗಾಗಿ ಮಹಿಳೆಯರ ಆರೋಗ್ಯ ಸಹ ಉತ್ತಮಗೊಳ್ಳುತ್ತದೆ. ಎರಡನೆಯ ಮಾದರಿಯ ಪ್ರಕಾರ ಸ್ವಸಹಾಯ ಸಂಘಗಳ ಈಗಿನ ಸಂರಚನೆಯಿಂದಾಗಿ ಆರೋಗ್ಯ ಶಿಕ್ಷಣವನ್ನು ಸದಸ್ಯೆಯರಿಗೆ ನೀಡುವುದು ಸುಲಭ ಸಾಧ್ಯವಾಗಿದೆ. ಹೀಗೆ ಆದಾಯದ ಹೆಚ್ಚಳ ಮತ್ತು ಆರೋಗ್ಯ ಶಿಕ್ಷಣ ಇವೆರಡೂ ಸ್ವಸಹಾಯ ಸಂಘಗಳಿಂದಾಗಿ ಹೆಚ್ಚಬಹುದ್ದಾಗಿದ್ದು ತಮಗೆ ಉತ್ತಮ ಆರೋಗ್ಯ ಸೇವಾ ಸೌಲಭ್ಯಗಳು ಬೇಕೆನ್ನುವ ಮಹಿಳೆಯರ ಬೇಡಿಕೆಗಳೂ ಹೆಚ್ಚಾಗಲಿದ್ದು ಮಹಿಳೆಯರ ಆರೋಗ್ಯ ಸುಧಾರಣೆ ಸಾಧ್ಯವಾಗುತ್ತದೆ. ಆದರೆ ಆರೋಗ್ಯದ ಅಗತ್ಯಗಳಿಗಾಗಿ ಮತ್ತು ಆಹಾರಕ್ಕಾಗಿ ಮತ್ತು ಆಹಾರಕ್ಕಾಗಿ ಮಾಡುವ ಖರ್ಚಿನ ಹಂಚಿಕೆಯಲ್ಲಿ ಯಾರಿಗೆ ಎಷ್ಟು ಮತ್ತು ಯಾವಾಗ ಎಂಬಲ್ಲಿ ಕುಟುಂಬದೊಳಗೇ ಹಾಸುಹೊಕ್ಕಾಗಿ ಬೇರೂರಿರುವ ಲಿಂಗ ಅಸಮಾನತೆಯ ಹಿನ್ನಲೆಯಲ್ಲಿಯೇ ಈ ಎರಡೂ ಮಾದರಿಗಳನ್ನು ಪರೀಕ್ಷಿಸಬೇಕಾಗುತ್ತದೆ.

ಈ ದಿಸೆಯಲ್ಲಿ ಗುಜರಾತ್‌ರಾಜ್ಯದಲ್ಲಿರುವ ಸ್ವಯಂ ಉದ್ಯೋಗಿ ಮಹಿಳಾ ಸಂಸ್ಥೆ ‘ಸೇವಾ’ (Self Employed Women’s Association) ಮಹಿಳೆಯರ ಸ್ವಾರೋಗ್ಯ ಸಬಲೀಕರಣಕ್ಕಾಗಿ ಮಾಡುತ್ತಿರುವ ಪ್ರಯತ್ನಗಳು ಶ್ಲಾಘನೀಯವೂ ಅನುಕರಣೀಯವೂ ಆಗಿವೆ.[2] ೧೯೯೨ರಲ್ಲಿ ಯುನೈಟೆಡ್‌ಇಂಡಿಯಾ ಇನ್ಸೂರೆನ್ಸ್‌ಕವರೇಜ್‌(UIIC= United Inida Insurance Coverage) ಇವರ ಸಹಕಾರದೊಂದಿಗೆ ‘ಸೇವಾ’ ಒಂದು ವಿಮಾ ಯೋಜನೆಯನ್ನು ಆರಂಭಿಸಿತು. ಕಾಯಿಲೆ ಅಥವಾ ಅಪಘಾತದಿಂದ ಉಂಟಾಗುವ ಕುಟುಂಬ ಸದಸ್ಯರ ಮತ್ತು ಗಂಡನ ಸಾವು, ದೊಂಬಿ, ಪ್ರವಾಹ ಬೆಂಕಿ ಮತ್ತು ಕಳವಿನಿಂದಾಗಿ ಹಾಳಾಗುವ ಮನೆಯ ಸಾಮಾನು, ಸಲಕರಣೆ, ಸಾಧನಗಳ ನಷ್ಟದಿಂದ ಉಂಟಾಗುವ ಎಲ್ಲಾ ಬಗೆಯ ಸಂದರ್ಭಗಳಲ್ಲಿ ಈ ವಿಮಾ ಯೋಜನೆ ಹಣ ಒದಗಿಸುತ್ತದೆ. ಜೊತೆಗೆ ‘ಸೇವಾ’ ಸಂಸ್ಥೆಯು ‘ತಾಯ್ತನದ ವಿಮೆ’ ಯೋಜನೆ ಹಾಕಿಕೊಂಡಿದೆ. ಯಾವುದೇ ವಿಮಾ ಕಂಪೆನಿಯು ಈ ಯೋಜನೆಗಾಗಿ ‘ಸೇವಾ’ದೊಂದಿಗೆ ಕೈಜೋಡಿಸಲು ಒಪ್ಪದೇ ಇದ್ದುದರಿಂದ ಸೇವಾ ಸಂಸ್ಥೆಯೇ ತಾಯ್ತನದ ವಿಮೆಯನ್ನು ಆರಂಭಿಸಿ ಅದರ ಪೂರ್ಣ ಹೊರೆಯನ್ನು ಹೊತ್ತು ನಡೆಸುತ್ತಿದೆ. ಮಹಿಳೆಯರು ಕೇವಲ ಅರವತ್ತು ರೂಪಾಯಿಗಳ ವಾರ್ಷಿಕ ವಿಮಾ ಕಂತನ್ನು ತುಂಬುದುರ ಮೂಲಕ ಈ ವಿಮೆ ಮಾಡಿಬಹುದಾಗಿದೆ. ಬಸುರಿನ ಅವಧಿಯಲ್ಲಿ ನೀಡಬೇಕಾಗುವ ಸೋಂಕು ನಿರೋಧಕ ಚುಚ್ಚುಮದ್ದುಗಳಿಗಾಗಿ, ಹೆಚ್ಚುವರಿ ಆಹಾರ ಪೋಷಣೆಗಾಗಿ, ತುರ್ತು ವೆಚ್ಚಗಳಿಗಾಗಿ ಹಾಗೂ ಹೆರಿಗೆಯ ನಂತರ ತಾಯಿ ಮತ್ತು ಮಗುವಿನ ಆರೋಗ್ಯ ಪಾಲನೆಗಾಗಿ ನೀಡಬೇಕಾಗುವ ಆರೋಗ್ಯ ಶಿಕ್ಷಣಕ್ಕಾಗಿ ಆಗುವ ಖರ್ಚು ವೆಚ್ಚಗಳನ್ನು ‘ತಾಯ್ತನದ ವಿಮೆ’ ಭರಿಸುತ್ತದೆ. ಅಲ್ಲದೇ ‘ಸೇವಾ’ ರಿಯಾಯಿತಿ ದರಗಳಲ್ಲಿ ಮಹಿಳೆಯರಿಗೆ ವೈದ್ಯರ ಸೇವೆಯನ್ನು ಒದಗಿಸುವ ಯೋಜನೆಯೊಂದನ್ನು ಅಭಿವೃದ್ಧಿಪಡಿಸಿದ್ದು ಕೆಲವು ವೈದ್ಯರುಗಳು ಉಚಿತವಾಗಿ ತಮ್ಮ ಸೇವೆ ನೀಡಲು ಮುಂದೆ ಬಂದಿದ್ದಾರೆ. ಇಷ್ಟೇ ಅಲ್ಲದೆ, ‘ಸೇವಾ’ ಸಂಸ್ಥೆಗೇ ಅಧಿಕೃತವಾಗಿ ಸೇರಿದ ಕೆಲವು ಸಹಕಾರಿ ಸಂಘಗಳು ‘ಸೇವಾ’ ಸಂಸ್ಥೆಯ ಸದಸ್ಯೆಯರಿಗೆ ರಿಯಾಯಿತಿ ದರಗಳಲ್ಲಿ ಅಗತ್ಯವಾದ ಪಡಿತರ ಔಷಧಿಗಳನ್ನು ಮಾರಲು ಮುನಿಸಿಪಲ್‌ಆಸ್ಪತ್ರೆಗಳ ಆವರಣದಲ್ಲಿಯೇ ತಮ್ಮ ಮಳಿಗೆಗಳನ್ನು ನಡೆಸುತ್ತಿವೆ. ಈ ವಿಮಾ ಯೋಜನೆ ಹಾಗೂ ತಾಯ್ತನದ ಈ ಬೆನಿಫಿಟ್‌ಸ್ಕೀಂನಿಂದ ಪ್ರೋತ್ಸಾಹಿತರಾದ ಮಹಿಳೆಯರು ಇತರ ಮಹಿಳೆಯರನ್ನು ‘ಸೇವಾ’ದ ಸದಸ್ಯೆಯರಾಗಿ ಸೇರಿ ಇವೆಲ್ಲಾ ಸೇವಾ ಸೌಲಭ್ಯಗಳನ್ನು ಪಡೆಯುವಂತೆ ಪ್ರೇರೇಪಿಸುತ್ತಿದ್ದಾರೆ. ವಿಮೆಯ ಫಲಗಳನ್ನು ಪಡೆಯುವಲ್ಲಿ ಮಹಿಳೆಯರು ಹೇಗೆ ಆಡಳಿತಶಾಹಿಯ ಜೊತೆ ವ್ಯಹರಿಸಬೇಕು. ಎಂಬುದನ್ನು ಕಲಿಯುತ್ತಿದ್ದಾರೆ. ಈ ಕಲಿಯುವಿಕೆಯ ಪ್ರಕ್ರಿಯೆ ಅವರನ್ನು ಆತ್ಮವಿಶ್ವಾಸಿಗಳನ್ನಾಗಿಯೂ ಸ್ವಾವಲಂಬಿಗಳನ್ನಾಗಿಯೂ ಮಾಡುತ್ತಿದೆ. ಇವೆಲ್ಲಕ್ಕಿಂತಾ ಹೆಚ್ಚಾಗಿ ಗಂಡನ ಮತ್ತು ತಮ್ಮ ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ ತಮ್ಮ ಆರೋಗ್ಯಕ್ಕೆ ಕೊನೆಯ ಆದ್ಯತೆ ನೀಡುತ್ತಿದ್ದ ಮಹಿಳೆಯರು ಇಂದು ತಮ್ಮ ಆರೋಗ್ಯ ರಕ್ಷಣೆಗಾಗಿ ಮುಂದೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.11 ಹೀಗೆ ‘ಸೇವಾ’ದ ವಿಮಾ ಯೋಜನೆಗಳು ಮತ್ತು ಅವಕ್ಕೆ ಪೂರಕವಾದ ಇನ್ನಿತರ ಕಾರ್ಯಕ್ರಮಗಳು, ಮಹಿಳೆಯರನ್ನು ಸಬಲೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಇಟ್ಟಿರುವ ಅನುಕರಣೀಯ ಯಶಸ್ಸಿನ ಹೆಜ್ಜೆಗಳಾಗಿವೆ.

ಆದರೆ ೧೯೯೨ರಲ್ಲಿಯೇ ಸೇವಾ ಸಂಸ್ಥೆ ೪೦,೦೦೦ ಸದಸ್ಯಯರನ್ನುಳ್ಳ ಬೃಹತ್‌ಸಂಸ್ಥೆಯಾಗಿದ್ದು, ಆರ್ಥಿಕವಾಗಿ ಇಂತಹ ವಿಮೆಯೊಂದನ್ನು ನಡೆಸಿಕೊಂಡು ಹೋಗಬಲ್ಲ ಸಾಮರ್ಥ್ಯದ ಆರ್ಥಿಕ ಸಬಲತೆ ಅದಕ್ಕಿದೆ ಎಂಬುದನ್ನು ಗಮನಿಸಬೇಕು. ಆದಾಗ್ಯೂ ಸಹ ಸ್ವಸಹಾಯ ಸಂಘಗಳು ‘ಸೇವಾ’ದ ಈ ಮಾದರಿಯನ್ನು ತಮ್ಮ ಸೀಮಿತ ಮಿತಿಗಳ ಒಳಗೇ ಆದಷ್ಟೂ ಅನುಸರಿಸಬಹುದಾಗಿದೆ. ಸ್ವಸಹಾಯ ಸಂಘದ ಸದಸ್ಯೆಯರು ತಮ್ಮ ಗುಂಪಿನವರೇ ನಿರ್ಧರಿಸುವ ಒಂದು ಸಣ್ಣ ಮೊತ್ತದ ಹಣವನ್ನಾದರೂ ಆರೋಗ್ಯದ ಚಟುವಟಿಕೆಗಳಿಗೆ ಮೀಸಲಿರಿಸುವುದು ಒಳ್ಳೆಯದು. ಮಹಿಳಾ ಆರೋಗ್ಯ ಸಬಲೀಕರಣದಲ್ಲಿ ಆಸಕ್ತರಾಗಿದ್ದು ಅದನ್ನು ಕುರಿತ ಬದ್ಧತೆಯುಳ್ಳ ವ್ಯಕ್ತಿಗಳಿಂದ ಹಾಗೂ ಸ್ವಯಂ ಸೇವಾ ಸಂಘಗಳಿಂದ ಸಹಾಯ, ಸಹಕಾರ ಮತ್ತು ಮಾರ್ಗದರ್ಶನ ಪಡೆದು ಮಹಿಳಾ ಆರೋಗ್ಯ ಸಬಲೀಕರಣಕ್ಕಾಗಿ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಸ್ತ್ರೀ ಸ್ವಸಹಾಯ ಸಂಘಗಳು ಹಮ್ಮಿಕೊಳ್ಳಬಹುದಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಇನ್ನೊಂದು ವಿಷಯವನ್ನು ಗಮನಿಸಬೇಕಾದ ಅಗತ್ಯವಿದೆ. ಬಡತನ ರೇಖೆಯ ಕೆಳಗೆ ಇರುವ ಕುಟುಂಬಗಳ ಮಹಿಳೆಯರ ಮೊದಲ ಎರಡು ಹೆರಿಗೆಗಳಲ್ಲಿ ಐನೂರು ರೂಪಾಯಿಗಳ ಹೆರಿಗೆ ಭತ್ಯೆಯನ್ನು ಎಲ್ಲಾ ರಾಜ್ಯಗಳಲ್ಲೂ ರಾಷ್ಟ್ರೀಯ ತಾಯ್ತನದ ಫಲಾನುಭವಿ ಯೋಜನೆಯಡಿಯಲ್ಲಿ (National Maternity Benefit Scheme) ಕೇಂದ್ರ ಸರ್ಕಾರದ ಪ್ರತಿಶತ ನೂರಕ್ಕೆ ನೂರರಷ್ಟು ಧನ ಸಹಾಯದಿಂದ ನೀಡಲಾಗುತ್ತಿದೆ. ಇದೊಂದು ಸಂಪೂರ್ಣವಾಗಿ ಕಲ್ಯಾಣವಾದೀ ಕಾರ್ಯಕ್ರಮವಾಗಿದ್ದು (Welfare programme)ಅದು ಬಡಮಹಿಳೆಯರಿಗೆ ನೀಡುವ ತಾತ್ಕಾಲಿಕ ನೆರವು ಮಾತ್ರವಾಗಿದೆ. ಆದ್ದರಿಂದ ಇದರ ಜೊತೆಗೆ ನಮ್ಮ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ, ಇಂದು ರಾಷ್ಟ್ರವ್ಯಾಪಿಯಾಗಿ ಸ್ತ್ರೀ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸ್ತ್ರೀ ಸ್ವಸಹಾಯ ಸಂಘಗಳಿಗೆ ಸೂಕ್ತ ಪ್ರಮಾಣದ ವಾರ್ಷಿಕ ಸಹಾಯ ಧನವನ್ನು ಈಗ ‘ಸೇವಾ’ ಸಂಘಟನೆ ನಡೆಸುತ್ತಿರುವ ಆರೋಗ್ಯ ಸಬಲೀಕರಣದ ಚಟುವಟಿಕೆಗಳನ್ನು ನಡೆಸಲು ನೀಡಬಹುದಾಗಿದೆ.

ಇನ್ನು, ಸರ್ಕಾರವು ಸ್ತ್ರೀಆರೋಗ್ಯ ಸಬಲೀಕರಣದ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಮಹಿಳಾ ಸಂಘಗಳಿಗೆ ಆರೋಗ್ಯವನ್ನು ಕುರಿತ ಮಾಹಿತಿ ಮತ್ತು ತರಬೇತಿಗಳನ್ನು ನೀಡುವ ಯೋಜನೆಯನ್ನು ಜಾರಿಗೆ ತರುವ ಪ್ರಯತ್ನವೊಂದನ್ನು ಮಾಡುತ್ತಿದೆ. ಈ ತರಬೇತಿಗಳನ್ನು ಹದಿನೈದು ರಾಜ್ಯಗಳಲ್ಲಿ ಆರಂಭಿಕ ಪ್ರಯೋಗವಾಗಿ (Pilot project) ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುವ ಹೊಸ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವನ್ನು ಪ್ರಾರಂಭಿಸಲಿದೆ. ೨೫೦೦ ಮಹಿಳಾ ಸಂಘಗಳ ೪೦,೦೦೦ ಗ್ರಾಮೀಣ ಮಹಿಳೆಯರಿಗೆ ಈ ತರಬೇತಿ ನೀಡುವುದು ಈ ಯೋಜನೆಯ ಗುರಿ. ಕಳೆದ ಎರಡು ದಶಕಗಳಿಂದ ಮಹಿಳಾ ಆರೋಗ್ಯ ಕ್ಷೇತ್ರದಲ್ಲಿ ದುಡಿದು ಹೆಸರುವಾಸಿಯಾಗಿರುವ ‘ಚೇತನ’ (CHETNA : Centre for Health Education and Nutrition Awareness) ಸಂಸ್ಥೆಯು ಸಿದ್ಧಪಡಿಸಿರುವ ಕೈಪಿಡಿಯಲ್ಲಿ ಇಪ್ಪತ್ಮೂರು ಪಠ್ಯಗಳನ್ನು ಹಾಗೂ ತರಬೇತಿ ನೀಡುವಲ್ಲಿ ಅನುಸರಿಸಬೇಕಾಗಿರುವ ವಿಧಿ ವಿಧಾನಗಳ ವಿವರಗಳನ್ನು ‘ಚೇತನಾ’ ಸಂಸ್ಥೆ ಸಿದ್ಧಪಡಿಸಿಕೊಟ್ಟಿದೆ. ಈ ಕೈಪಿಡಿಯು ಪ್ರಸ್ತುತ ಗ್ರಾಮೀಣ ಮಹಿಳಾ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಲವಾರು ಸ್ವಯಂ ಸೇವಾ ಸಂಘಗಳ ಕಾರ್ಯಕರ್ತರುಗಳಿಂದಲೂ ಮತ್ತು ಆರೋಗ್ಯ ಶಿಕ್ಷಣ ತಜ್ಞರಿಂದಲೂ ಪರಿಶೀಲಿಸಲ್ಪಟ್ಟು ಪರಿಷ್ಕೃತಗೊಂಡು ಸಿದ್ಧವಾಗಿದೆ.3 ಈ ಯೋಜನೆಯು ಕಾರ್ಯಗತವಾಗುವುದನ್ನು ಕಾದು ನೋಡಬೇಕಾಗಿದೆ.

ಸ್ತ್ರೀ ಆರೋಗ್ಯ ಸಬಲೀಕರಣ ಕಾರ್ಯಕ್ರಮಗಳಲ್ಲಿ ಪುರುಷರ ಪಾಲ್ಗೊಳ್ಳುವಿಕೆ

ಲೈಂಗಿಕತೆಯ ಹಾಗೂ ಪಾಲಕತ್ವದ (Parenthood)ಹೊಣೆಗಾರಿಕೆಯನ್ನು ಹೊರಲು ನಿರಾಕರಿಸುವ ಪುರುಷರ ಸಮಸ್ಯೆಗಳನ್ನು ಪರಿಗಣಿಸದೇ ಹಾಗೂ ಪುರುಷರ ಪಾಲ್ಗೊಳ್ಳುವಿಕೆಯಿಲ್ಲದೆ ಸ್ತ್ರೀ ಆರೋಗ್ಯ ಸಬಲೀಕರಣ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಹೆಂಡತಿ ಮಕ್ಕಳನ್ನು ಹಿಂಸಿಸುವ ಹಾಗೂ ಅವರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದ ಸಮಸ್ಯೆಗಳು ಸಾಮಾನ್ಯವಾಗಿ ಬಲವಾಗಿಲ್ಲದ ದಾಂಪತ್ಯದಿಂದಾಚೆ ಆಕಸ್ಮಾತ್‌ಎಂಬಂತೆ ಉಂಟಾಗುವ ಲೈಂಗಿಕ ಸಂಬಂಧಗಳಿಂದ, ಅಸುರಕ್ಷಿತ ಸಂಭೋಗಗಳಿಂದ, ಹಲವು ಲೈಂಗಿಕ ಸಂಗಾತಿಗಳನ್ನು ಹೊಂದಿರುವುದರಿಂದ ಹಾಗೂ ಸಂತಾನ ನಿರೋಧಕಗಳನ್ನು ಉಪಯೋಗಿಸಲು ನಿರಾಕರಿಸುವುದರಿಂದ ಉಂಟಾಗುತ್ತದೆ. ಹಾಗಾಗಿ ಯಾವುದೇ ಸ್ತ್ರೀ ಆರೋಗ್ಯ ಸಬಲೀಕರಣ ಯೋಜನೆ ಅಥವಾ ಕಾರ್ಯಕ್ರಮದಲ್ಲಿ ಪುರುಷರ ಪಾಲ್ಗೊಳ್ಳುವಿಕೆಯಿದ್ದಲ್ಲಿ ಈ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೆ ನಮ್ಮ ಸರಕಾರಗಳು ಈ ದಿಸೆಯಲ್ಲಿ ಯಾವುದೇ ಪ್ರಭಾವಶಾಲೀ ಕಾರ್ಯಕ್ರಮಗಳನ್ನು ಇನ್ನೂ ಹಮ್ಮಿಕೊಂಡಿಲ್ಲ. ಏಕೆಂದರೆ ೧೯೬೦ ರಿಂದ ಈಚೆಗೆ ಪುರುಷ ಸಂತಾನ ನಿರೋಧಕ ಶಸ್ತ್ರ ಚಿಕಿತ್ಸೆಗಳ ಸಂಖ್ಯೆಯಲ್ಲಿ ಒಂದೇ ಸಮನೆ ತೀವ್ರ ಇಳಿತ ಕಂಡುಬಂದಿದ್ದು (ಕೋಷ್ಟಕ-೨೪ ನೋಡಿ), ೧೯೯೭ ರಿಂದ ಒಂದು ಸಾವಿರದ ನೂರ ಐವತ್ತಾರು ವೈದ್ಯರಿಗೆ ಸ್ಕಾಲ್‌ಪೆಲ್‌ಉಪಯೋಗಿಸಿದೇ ವ್ಯಾಸಕ್ಟಮಿ ಮಾಡುವ ತರಬೇತಿ ನೀಡಿರುವುದೇ ಸರ್ಕಾರ ಮಾಡಿರುವ ಮುಖ್ಯ ಕೆಲಸವಾಗಿದೆಯೆನ್ನಬಹುದು. ಆದರೆ ೧೯೯೭ರಲ್ಲಿ ೧.೮%ರಷ್ಟಿದ್ದ ವ್ಯಾಸಕ್ಟಮಿಗಳ ಸಂಖ್ಯೆ ೫ ವರ್ಷಗಳ ನಂತರವೂ ಸಹ ಅಂದರೆ ೨೦೦೨ರಲ್ಲಿ ಕೇವಲ ೨.೪೬% ರಷ್ಟು ಮಾತ್ರ ಏರಿರುವುದು ಸರ್ಕಾರದ ಈ ಏಕಮುಖೀ ಪ್ರಯತ್ನದ ಫಲಿತಾಂಶ ನಿರಾಶಾದಾಯಕವಾಗಿರುವುದನ್ನು ಪ್ರತಿಬಿಂಬಿಸುತ್ತದೆ.2

“ಕುಟುಂಬ ಯೋಜನೆಯಲ್ಲಿ ಪುರುಷರ ಭಾಗವಹಿಸುವಿಕೆ” ಎಂಬ ಹಣೆಪಟ್ಟಿಯ ಅಡಿಯಲ್ಲಿ ಮುಕ್ಕಾಲು ಪುಟದ ವಿವರವನ್ನು ಹತ್ತನೇ ಪಂಚವಾರ್ಷಿಕ ಯೋಜನೆಯ ಪ್ರಕಟನೆಯಲ್ಲಿ ನೀಡಲಾಗಿದೆ. ಮುಖ್ಯವಾಗಿ ವ್ಯಾಸೆಕ್ಟಮಿಯನ್ನು ಪುನಃ ಜನಪ್ರಿಯಗೊಳಿಸಲಾಗುವುದೆಂದೂ ಅದಕ್ಕಾಗಿ ವ್ಯಾಸೆಕ್ಟಮಿಯ ಸೌಲಭ್ಯವನ್ನು ಜಿಲ್ಲಾ ಹಾಗೂ ತಾಲೂಕು ಹೊರರೋಗಿಗಳ ವಿಭಾಗದಲ್ಲಿ ಎಲ್ಲರಿಗೂ ಸಿಗುವಂತೆ ಮಾಡಲಾಗುವುದೆಂದೂ ಇದರಲ್ಲಿ ತಿಳಿಸಲಾಗಿದೆ. ಗಂಡಸರಿಗೆ ಇರಬಹುದಾದ ವೇಳೆಯ ಪರಿಮಿತಿಗಳನ್ನು ಮತ್ತು ಅನುಕೂಲಗಳನ್ನು ಪರಿಗಣಿಸಿ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೆ ನಿಯಮಿತ ಆರೋಗ್ಯ ತಪಾಸಣೆ ಹಾಗೂ ಪಾಲನೆಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಈ ಪ್ರಕಟನೆ ತಿಳಿಸಿದೆ. ಅಲ್ಲದೆ, ಬಸುರಿ ಹಾಗೂ ಮಕ್ಕಳನ್ನು ನಿಯಮಿತ ಆರೋಗ್ಯ ತಪಾಸಣೆಗೆ ಒಳಪಡಿಸುವಲ್ಲಿ, ಅವರಿಗೆ ಸೋಂಕು ನಿರೋಧಕ ಚುಚ್ಚುಮದ್ದು ಹಾಕಿಸುವಲ್ಲಿ ಹಾಗೂ ಅವರನ್ನು ಆರೋಗ್ಯ ಕೇಂದ್ರಗಳಿಗೆ ಕರೆದುಕೊಂಡು ಬರುವಲ್ಲಿ ಗಂಡಸರು ಪ್ರಮುಖ ಪಾತ್ರವಹಿಸುವಂತೆ ಮಾಡಲು ಮತ್ತು ಕುಟುಂಬ ಯೋಜನೆಯ ಎಲ್ಲಾ ಪ್ರಯತ್ನಗಳನ್ನು ಪುರುಷರು ಪಾಲ್ಗೊಳ್ಳುವಂತೆ ಮಾಡಲು ಪ್ರಯತ್ನಿಸಲಾಗುವುದೆಂದು ಈ ಪ್ರಕಟನೆಯಲ್ಲಿ ಹೇಳಲಾಗಿದೆ. ಆದರೆ ಇವನ್ನೆಲ್ಲಾ ಹೇಗೆ ಮಾಡಬಹುದು ಅಥವಾ ಹೇಗೆ ಮಾಡಲಾಗುವುದು ಎಂಬುದರ ಸ್ಪಷ್ಟ ವಿವರಣೆಯಾಗಲೀ ಮತ್ತು ಇವನ್ನು ಸಾಧಿಸಲು ಬೇಕಾಗುವ ನಿರ್ದಿಷ್ಟ ಕಾರ್ಯಕ್ರಮಗಳನ್ನಾಗಲೀ ಸೂಚಿಸಿಲ್ಲ. ಹಾಗಾಗಿ, ಹತ್ತನೆಯ ಪಂಚವಾರ್ಷಿಕ ಯೋಜನೆಯನ್ನು (೨೦೦೨-೦೭) ರೂಪಿಸುವಲ್ಲಿ ಪಾಲ್ಗೊಂಡ ಆರೋಗ್ಯ ಕಾರ್ಯನೀತಿ ಹಾಗೂ ಕಾರ್ಯಕ್ರಮಗಳ ಸೃಷ್ಟಿಕರ್ತರುಗಳಿಗೆ (Policy makers & programme planners). ಸ್ತ್ರೀ ಆರೋಗ್ಯ, ಮಕ್ಕಳ ಆರೋಗ್ಯ ಮತ್ತು ಕುಟುಂಬ ಯೋಜನೆಗಳಲ್ಲಿ ಪುರುಷರ ಸಹಭಾಗಿತ್ವವನ್ನು ಸಹಕಾರವನ್ನು ಪಡೆಯಲು ಬೇಕಾಗಬಹುದಾದ ನಿರ್ದಿಷ್ಟ ಕಾರ್ಯಕ್ರಮಗಳ ಬಗ್ಗೆ ಸ್ಪಷ್ಟತೆಯಿಲ್ಲವೇನೋ ಎಂದೆನಿಸುತ್ತದೆ.

ಸಂತಾನ ನಿರೋಧಕ ಕಾರ್ಯಕ್ರಮಗಳಲ್ಲಿ ಗಂಡಸರು ಪಾಲ್ಗೊಳ್ಳುವಂತೆ ಮಾಡಲು ಅವರ ನಂಬಿಕೆಗಳಲ್ಲಿ, ಅಭಿಪ್ರಾಯಗಳಲ್ಲಿ, ಮನೋಭಾವನೆಗಳಲ್ಲಿ ಹಾಗೂ ನಡವಳಿಕೆಗಳಲ್ಲಿ ಆದಷ್ಟೂ ಬದಲಾವಣೆ ತರುವ ಕಾರ್ಯಕ್ರಮಗಳನ್ನು ಪ್ರಪ್ರಥಮವಾಗಿ ಹಮ್ಮಿಕೊಳ್ಳಬೇಕಾಗುತ್ತದೆ. ಏಕೆಂದರೆ ಪಿತೃಪ್ರಧಾನ ಪರಿಸರದಲ್ಲಿ ಬೆಳೆದ ಪುರುಷರು ತಾಯ್ತನ, ಮಕ್ಕಳ ಪಾಲನೆ, ಸಂತಾನ ನಿರೋಧ ಇತ್ಯಾದಿಗಳು ಗಂಡಸರಿಗೆ ಸೇರಿದ ವಿಷಯಗಳಲ್ಲ. ಅವುಗಳೆಲ್ಲಾ ಸ್ತ್ರೀಯರ ಹೊಣೆಯೆಂದೇ ದೃಢವಾಗಿ ನಂಬಿರುತ್ತಾರೆ. ಹಾಗಾಗಿ, ಇಂತಹ ನಂಬಿಕೆ ಮತ್ತು ನಡವಳಿಕೆಗಳನ್ನು ಆದಷ್ಟೂ ಬದಲಾಯಿಸುವ ತುರ್ತು ಅಗತ್ಯವಿದೆ. ಈ ದಿಸೆಯಲ್ಲಿ ಯಶಸ್ವಿಯಾಗಿ ವಿದೇಶವೊಂದರಲ್ಲಿ ನಡೆದ ಪ್ರಯತ್ನವೊಂದು ಅನುಕರಣೀಯವಾಗಿದ್ದು ಅದನ್ನು ಇಲ್ಲಿ ಉದಾಹರಿಸುವುದು ಸೂಕ್ತ.

ಜಮೈಕಾ ದೇಶದ ಕಿಂಗ್ಸ್‌ಟನ್‌ನಗರದಲ್ಲಿ ೧೯೯೭ರಲ್ಲಿ “ಪುರುಷರ ಪ್ರಜನನ ಆರೋಗ್ಯ ಯೋಜನೆ : ತಂದೆಯ ಪಾಲ್ಗೊಳ್ಳುವಿಕೆ” ಎಂಬ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಮುಖ್ಯವಾಗಿ ಎರಡು ಗುರಿಗಳಿದ್ದು, ಗಂಡಸರು ತಂದೆಯ ಪಾತ್ರದಲ್ಲಿ ತಮ್ಮ ಪಾಲಕತ್ವದ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸುವಂತೆ ಮಾಡುವುದು ಮೊದಲ ಗುರಿಯಾಗಿತ್ತು. ಲೈಂಗಿಕ ಹೊಣೆಗೇಡಿತನ ಹಾಗೂ ಪಾಲಕತ್ವದ ಹೊಣೆಗೇಡಿತನ ಗಂಡಸರ ಪೌರುಷದ ಪ್ರತೀಕಗಳು ಎನ್ನುವಂತಹ ಸ್ಥಳೀಯವಾದ ರೂಢಿಗತ ಪಾತ್ರದಲ್ಲಿ ಬದಲಾವಣೆ ತರುವುದು ಎರಡನೆಯ ಮುಖ್ಯ ಗುರಿಯಾಗಿತ್ತು. ನಗರ ಹಾಗೂ ಆರೆನಗರವಾಸಿಗಳಾದ ಶ್ರಮಿಕ ವರ್ಗದ ಯುವಕರನ್ನು ಗುರಿಯಾಗಿಸಿಕೊಂಡೇ ಈ ಯೋಜನೆಯನ್ನು ರೂಪಿಸಲಾಗಿತ್ತು. ಶಿಬಿರ, ತರಬೇತಿ, ಸಮವಯಸ್ಕರ ಆಪ್ತಸಲಹೆ, ಪಾಲ್ಗೊಳ್ಳುವಿಕೆಯ ಮೂಲಕ ಕಲಿಕೆ, ಪ್ರತಿಪಾದನಾ ಕ್ರಮಗಳು, ನಿರ್ಣಯ ತೆಗೆದುಕೊಳ್ಳುವುದು ಹಾಗೂ ಅವನ್ನು ಕಾರ್ಯಗತಗೊಳಿಸುವುದು ಇವು ಈ ಯೋಜನೆಯಲ್ಲಿ ಅಳವಡಿಸಿಕೊಂಡಿದ್ದ ಕಾರ್ಯತಂತ್ರಗಳಾಗಿದ್ದವು.9

ಈ ಯೋಜನೆಯಡಿಯ ಕಾರ್ಯತಂತ್ರಗಳಲ್ಲಿ ಯುವಕರಿಗೆ ಪೌರುಷದ ಗುಣಾತ್ಮಕ ಅಥವಾ ಸಕರಾತ್ಮಕವಾದ ಪ್ರತಿಮೆ ಪ್ರತೀಕಗಳನ್ನು ನೀಡಿದ್ದರಿಂದ ಅವರಿಗೆ ತಮ್ಮನ್ನು ಕುರಿತಂತೆ ಇದ್ದ ಸ್ವರೂಪ ಕಲ್ಪನೆಯನ್ನು (Self image) ಉದಾತ್ತೀಕರಿಸಿಕೊಳ್ಳಲು ಸಾಧ್ಯವಾಯಿತು. ಲೈಂಗಿಕ ನಡವಳಿಕೆಯನ್ನು, ಲಿಂಗತ್ವ ಸಂಬಂಧಗಳನ್ನು (Gender relations), ಪ್ರಜನನ ಹಕ್ಕು/ಹೊಣೆಗಾರಿಕೆಗಳನ್ನು ಹಾಗೂ ತಂದೆತನವನ್ನು ಕುರಿತಂತೆ ಹಾಗೂ ಒಟ್ಟು ಪುರುಷತ್ವ/ಪೌರತ್ವದ ಬಗ್ಗೆ ಇದ್ದ ಪರಿಕಲ್ಪನೆಗಳಲ್ಲಿ, ಅಭಿಪ್ರಾಯ ಮತ್ತು ಮನೋಭಾವನೆಗಳಲ್ಲಿ ಅಪೇಕ್ಷಿತ ಬದಲಾವಣೆಗಳು ಉಂಟಾಗಿದ್ದನ್ನು ಈ ಯೋಜನೆಯ ವರದಿಯಲ್ಲಿ ಎತ್ತಿತೋರಲಾಗಿದೆ. ಪ್ರಜನನ ಆರೋಗ್ಯ ಕಾರ್ಯಕ್ರಮಗಳಲ್ಲಿ ಪುರುಷರು ಯಶಸ್ವಿಯಾಗಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು ಇಂತಹ ಯೋಜನೆಗಳನ್ನು ನಮ್ಮ ದೇಶದಲ್ಲಿಯೂ ಹಮ್ಮಿ ಕೊಳ್ಳಬೇಕಾಗಿದೆ.

ತಮ್ಮ ಆರೋಗ್ಯದ ಹಕ್ಕುಗಳನ್ನು ಮಹಿಳೆಯರು ಸರಿಯಾಗಿ ಚಲಾಯಿಸುವಂತೆ ಅವರನ್ನು ಸಬಲೀಕರಣಗೊಳಿಬೇಕಾದಲ್ಲಿ ಸರ್ಕಾರಗಳು ಪ್ರಥಮವಾಗಿ, ತಮ್ಮ ಜನಸಂಖ್ಯಾ ಕಾರ್ಯನೀತಿ ಕಾರ್ಯಕ್ರಮಗಳಲ್ಲಿ ಹಾಗೂ ಆರೋಗ್ಯ ಕಾರ್ಯಕ್ರಮಗಳಲ್ಲಿ ಪುರುಷರ ಪಾಲ್ಗೊಳ್ಳುವಿಕೆಯಷ್ಟೇ ಅಲ್ಲದೆ ಸ್ತ್ರೀ ಸಬಲೀಕರಣದಲ್ಲಿ ಪುರುಷರ ಪಾತ್ರ ಮತ್ತು ಹೊಣೆಗಾರಿಕೆಯನ್ನು ಸಹ ವಿಸ್ತರಿಸಬೇಕಾಗುತ್ತದೆ.

ಕಾರ್ಯ ನೀತಿಗಳನ್ನು ರೂಪಿಸುವ ಹಂತದಲ್ಲಿ ಯೋಜನೆಯಲ್ಲಿ ತಯಾರಿಸುವ ಹಂತದಲ್ಲಿ ಹಾಗೂ ಅವುಗಳನ್ನು ಕಾರ್ಯಗತಗೊಳಿಸುವ ಹಂತಗಳಲ್ಲಿ ಮಹಿಳೆಯರನ್ನು ನಿಜವಾಗಿಯೂ ಸಬಲೀಕರಣಗೊಳಿಸುವ ದಿಸೆಯಲ್ಲಿಯೇ ಸರಕಾರಗಳು ನಡೆಯುವಂತೆ ಮಾಡುವ ಎಚ್ಚರಿಕೆವಹಿಸಬೇಕಾಗುತ್ತದೆ. ಹೀಗೆ ಮಾಡಲು ಸರ್ಕಾರಗಳ ಮೇಲೆ ಒತ್ತಡ ಹೇರುವ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು ಅವುಗಳಲ್ಲಿ ಮುಖ್ಯವಾದವುಗಳನ್ನಿಲ್ಲಿ ಪಟ್ಟಿ ಮಾಡಲಾಗಿದೆ.8

  • ಭಾರತದಲ್ಲಿ ಈಗ ನಡೆಯುತ್ತಿರುವ ಮಹಿಳಾ ಆರೋಗ್ಯ ಚಳುವಳಿಯನ್ನು ಬಲಪಡಿಸುವುದು.
  • ಈಗಿರುವ ಮಹಿಳಾ ಸಂಘ/ಸಂಘಟನೆಗಳ ಜಾಲಗಳು ಹಾಗೂ ಆರೋಗ್ಯದ ಕಾಳಜಿಗಳನ್ನು ಕುರಿತು ಈಗಾಗಲೇ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಘಗಳ ಜಾಲಗಳನ್ನು ಬಲಪಡಿಸಿ ಅವುಗಳ ವ್ಯಾಪ್ತಿಯನ್ನು ವಿಸ್ತರಿಸಬೇಕಲ್ಲದೆ, ಮಹಿಳಾ ಆರೋಗ್ಯ ಸಬಲೀಕರಣಕ್ಕಾಗಿ ಇವೆಲ್ಲಾ ಪರಸ್ಪರ ಒಗ್ಗೂಡಿ ಬೃಹತ್‌ಜಾಲವೊಂದನ್ನು ನಿರ್ಮಿಸಿಕೊಳ್ಳಬೇಕು. ಮಹಿಳಾ ಆರೋಗ್ಯ ಸರ್ಕಾರದ ಕಾರ್ಯಸೂಚಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವಂತೆ ಮಾಡಬಲ್ಲ ಒತ್ತಡವನ್ನು ಹೇರಲು ಇಂತಹ ಬಲವಾದ ಜಾಲಗಳ ಜಾಲಕ್ಕೆ ಹೆಚ್ಚು ಸುಲಭ ಸಾಧ್ಯ.
  • ಮಹಿಳಾ ಆರೋಗ್ಯದ ಕಾರ್ಯಸೂಚಿ (Agenda) ಕಾರ್ಯಗತವಾಗುವಂತೆ ಮಾಡಲು ಸಾರ್ವಜನಿಕ ಅಭಿಪ್ರಾಯ ಮತ್ತು ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ರೂಢಿಸಿ ಕಟ್ಟಬೇಕು.
  • ನ್ಯಾಯಯುತವಾದ ಆರೋಗ್ಯ ಲಿಂಗತ್ವ ಸಮಾನತೆಯನ್ನು (Gender health equity) ತರಲು ಸಾಧ್ಯವಾಗುವಂತಹ ಮನಸ್ಥಿತಿಯನ್ನು ಸಾರ್ವಜನಿಕರಲ್ಲಿ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸ್ತ್ರೀ ಕಾಳಜಿಗಳ ಬಗ್ಗೆ ಪ್ರಜ್ಞೆ ಮೂಡಿಸಬೇಕು.

[1] Amarstrong Pat, Helth Empowerment of Indian Women in the Context of Globalization’’, Indian Journal of Social Research, 47(2)p. 149-158.

[2] Chatterjee, Meera and Vyas S. (1999), “Organising Insurance for Women Workers, The SEWA Experience’’, Paper Presented at the conference on Linking Women’s health and credit in India : program experience and Future Action. Jan 1999, p. 20. 22., New Delhi.