ಪ್ರಸ್ತುತ ಕೃತಿಯು ೨೦೦೧ರಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಹೊರತಂದ ‘ಮಹಿಳೆ ಮತ್ತು ಆರೋಗ್ಯ : ಮಹಿಳಾ ಅಧ್ಯಯನಗಳ ದೃಷ್ಟಿಯಲ್ಲಿ’ ಎಂಬ ಪಸ್ತಕದ ಮುಂದುವರೆದ ಭಾಗವಾಗಿದೆ. ೨೦೦೦-೦೧ರ ಆಸುಪಾಸಿನಲ್ಲಿ ಹಾಗೂ ನಂತರ ನಡೆದ ಹೊಸ ಸಂಶೋಧನೆಗಳ, ಹೊಸ ಜನಸಂಖ್ಯಾ ಅಂಕಿ-ಸಂಖ್ಯೆಗಳ, ಚಿಂತನೆಗಳ, ಕಾರ್ಯನೀತಿ ಮತ್ತು ಕಾರ್ಯಕ್ರಮಗಳ ವಸ್ತುನಿಷ್ಠ ಅಧ್ಯಯನದ ಫಲಶ್ರುತಿಯೇ ಈ ಪುಸ್ತಕ. ಓದುಗರು ಅದರಲ್ಲಿಯೂ ಮಹಿಳಾ ಅಧ್ಯಯನಗಳ, ಮಾನವಿಕ ವಿಜ್ಞಾನಗಳ, ಅಭಿವೃದ್ಧಿ ಅಧ್ಯಯನ ವಿದ್ಯಾರ್ಥಿ ಸಮೂಹ, ಸಂಶೋಧಕರು ಹಾಗೂ ಆಸಕ್ತರು ಈ ಕೃತಿಯು ಪ್ರತಿಪಾದಿಸಿರುವ ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆಸಿ ವಿಮರ್ಶಿಸಲಿ ಎಂಬುದು ನನ್ನ ಅರಿಕೆ.

ಈ ಪುಸ್ತಕದ ಬರವಣಿಗೆಗೆ ಮೂಲ ಪ್ರೇರಕರಾದ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಪ್ರಸಾರಾಂಗದ ನಿರ್ದೇಶಕರೂ ಹಾಗೂ ಖ್ಯಾತ ಸಾಹಿತಿಗಳೂ ಆಗಿರುವ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶರವರಿಗೆ ನನ್ನ ಮೊದಲ ಕೃತಜ್ಞತೆಗಳು ಸಲ್ಲಬೇಕು. ಇದರ ಪ್ರಕಟನೆಗೆ ಅನುಮೋದನೆ ನೀಡಿ, ಪ್ರೋತ್ಸಾಹಿಸಿರುವ ಮಾನ್ಯ ಕುಲಪತಿ ಪ್ರೊ. ಬಿ. ಎ. ವಿವೇಕರೈ ಅವರಿಗೆ ನಾನು ಅಭಾರಿಯಾಗಿದ್ದೇನೆ.

ನನ್ನ ವೈಜ್ಞಾನಿಕ, ಸಂಶೋಧನಾತ್ಮಕ ಬರವಣಿಗೆಯನ್ನು ಮೊದಲಿನಿಂದಲೂ ಪ್ರೋತ್ಸಾಹಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ನಮ್ಮ ನಾಡಿನ ಖ್ಯಾತ ಸಂಶೋಧಕರಾದ ಡಾ. ಕಲ್ಬುರ್ಗಿಯವರಿಗೆ ನಾನು ಋಣಿ. ಈ ಪುಸ್ತಕದ ಬರವಣಿಗೆಯ ಅವಧಿಯು ನನ್ನ ಅಗ್ನಿಪರೀಕ್ಷೆಯ ಕಾಲವಾಗಿದ್ದು, ಅಪೂರ್ಣವಾಗಿದ್ದ ಈ ಪುಸ್ತಕದ ಬರವಣಿಗೆಯನ್ನು ಪೂರ್ತಿಗೊಳಿಸುತ್ತೇನೋ ಇಲ್ಲವೋ ಎಂಬ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದ ನನ್ನಲ್ಲಿ ಧೈರ್ಯ ತುಂಬಿ ಬೆಂಬಲಿಸಿದ ನನ್ನ ಬಾಳಸಂಗಾತಿ ಪ್ರೊ. ನಾರಾಯಣ ರಾಜುರವರಿಗೆ ನಾನು ಚಿರಋಣಿ.

ಮಹಿಳಾ ಆರೋಗ್ಯವನ್ನು ಕುರಿತಂತೆ ನನ್ನ ಅರಿವಿನ ವಿಸ್ತಾರ ಹಾಗೂ ಒಳನೋಟಗಳ ಆಳವನ್ನು ಹೆಚ್ಚಿಸುವ ಎಲ್ಲಾ ರೀತಿಯ ವಿಮರ್ಶೆಗೆ ಸ್ವಾಗತ.

ಕೆ. ಸರೋಜಾ
ಡಿಸೆಂಬರ್‌೨೦೦೭
ಬೆಂಗಳೂರು