ಮಹಿಳಾ ಆರೋಗ್ಯವನ್ನು ಕುರಿತಂತೆ ಮಹಿಳಾ ಅಧ್ಯಯನಗಳ ದೃಷ್ಟಿಯ ಒಂದು ಮರುಚಿಂತನೆ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಅತ್ಯಗತ್ಯವಾಗಿದ್ದ, ಅದೇ ಈ ಪುಸ್ತಕದ ಮುಖ್ಯ ಹೊರಣ. ಮಹಿಳಾ ಅಧ್ಯಯನಗಳ ಸ್ತ್ರೀವಾದೀ ದೃಷ್ಟಿಕೋನದಿಂದ ಮಹಿಳಾ ಆರೋಗ್ಯದ ಮುಖ್ಯ ಆಯಾಮಗಳ ಬಗ್ಗೆ ಮುಕ್ತವಾದ ಮರುಚಿಂತನೆ, ವೈದ್ಯಕೀಯ ಅಥವಾ ಆರೋಗ್ಯ ಶಾಸ್ತ್ರಗಳ ದೃಷ್ಟಿಕೋನಗಳಿಗಿಂತಾ ವಿಭಿನ್ನವಾಗಿಯೇ ಇರಬೇಕಾಗಿದ್ದು ಅದೇ ರೀತಿ ಈ ಪುಸ್ತಕ ರೂಪಿತಗೊಂಡಿದೆ. ಏಕೆಂದರೆ ವೈದ್ಯಕೀಯ ಮತ್ತು ಆರೋಗ್ಯ ಶಾಸ್ತ್ರಗಳು ಸ್ತ್ರೀಯರ ಅನಾರೋಗ್ಯಕ್ಕೆ ಇರುವ ವೈದ್ಯಕೀಯ ಹಾಗೂ ಆರೋಗ್ಯಶಾಸ್ತ್ರೀಯ ಕಾರಣಗಳು ಹಾಗೂ ಚಿಕಿತ್ಸೆ ನಿವಾರಣೋಪಾಯಗಳನ್ನು ವಿವರಿಸುತ್ತವೆಯೇ ಹೊರತು, ಮೂಲಕಾರಣಗಳಾದ ಸ್ತ್ರೀಯರ ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಸಾಂಸ್ಕೃತಿಕ ಮತ್ತು ಲಿಂಗತ್ವ ಸಂಬಂಧಗಳ ಅಂಶಗಳನ್ನು ವಿವರಿಸಿ ವಿಶ್ಲೇಷಿಸುವುದಿಲ್ಲ. ಹಾಗಾಗಿ ಸ್ತ್ರೀ ಆರೋಗ್ಯ ಸಮಸ್ಯೆಗಳ ಮೂಲಬೇರುಗಳ ಹುಡುಕಾಟವಾಗಲೀ, ಸ್ತ್ರೀ ಆರೋಗ್ಯವನ್ನು ನೇರವಾಗಿ ತಟ್ಟುವಂತಹ ಅವರ ಬದುಕಿನ ಮೂಲಭೂತ ವಾಸ್ತವತೆಗಳಿಗೆ ಮುಖಾಮುಖಿಯಾಗಬಲ್ಲ ಸ್ಪಷ್ಟ ನೋಟ ಅಲ್ಲಿ ಸಿಗಲಾರದು.

ಸ್ವಾತಂತ್ರ್ಯಾನಂತರದಿಂದ ಇದುವರೆವಿಗೂ ಮಹಿಳಾ ಆರೋಗ್ಯವನ್ನು ಕುರಿತ, ಆರೋಗ್ಯ ಕಾರ್ಯನೀತಿಗಳು, ಯೋಜನೆಗಳು, ಕಾರ್ಯಕ್ರಮಗಳ ರೂಪುಗೊಳ್ಳುವಿಕೆ ಹಾಗೂ ಅವುಗಳನ್ನು ಜಾರಿಗೊಳಿಸುವ ಪ್ರಕ್ರಿಯೆಗಳೆಲ್ಲವೂ ಸ್ತ್ರೀ ಅನಾರೋಗ್ಯದ ಮೂಲದಲ್ಲಿರುವ ಸಾಮಾಜಿಕ, ಆರ್ಥಿಕ, ಕೌಟುಂಬಿಕ ಮತ್ತು ಲಿಂಗತ್ವದ ಕಾರಣಗಳನ್ನು ಪರಿಗಣಿಸದೆಯೇ ನಡೆದುಬಂದಿವೆ. ಆದ್ದರಿಂದ ಇಂದಿಗೂ ನಮ್ಮ ದೇಶದ ಮಹಿಳೆಯರ ಆರೋಗ್ಯದಲ್ಲಿ ನಿರೀಕ್ಷಿತ ಗತಿಯ ಪ್ರಗತಿಯಾಗಿಲ್ಲ ಎಂಬುದು ಜಾಗತೀಕರಣದ ಇಂದಿನ ಸಂದರ್ಭದಲ್ಲಿ ದಿನೇ ದಿನೇ ಸುಸ್ಪಷ್ಟವಾಗುತ್ತಿದೆ. ಈ ಜಾಡನ್ನೇ ಹಿಡಿದು, ಮಹಿಳೆಯರ ಆರೋಗ್ಯದ ಹಲವು ಮುಖ್ಯವಾದ ಅಂಶಗಳನ್ನು ಪ್ರಸ್ತುತ ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ. ಈಗಿರುವ ಕಾರ್ಯನೀತಿಗಳು, ಕಾರ್ಯತಂತ್ರಗಳು, ಕಾರ್ಯಕ್ರಮಗಳು ಯೋಜನೆಗಳು ಹಾಗೂ ಇವೆಲ್ಲವುಗಳ ದೃಷ್ಟಿಕೋನ ಮತ್ತು ಧೋರಣೆಗಳು ಹೇಗೆ ಬದಲಾಗಬೇಕಿದೆ ಮತ್ತು ಇವು ಯಾವ ದಿಕ್ಕಿನಲ್ಲಿ ಕ್ರಮಿಸಬಹುದಾಗಿದೆ ಎಂಬುದರ ವಸ್ತುನಿಷ್ಠ ವಿವರಣೆ ನೀಡುವ ಮತ್ತು ವಿಶ್ಲೇಷಣೆ ಮಾಡುವ ಪ್ರಾಮಾಣಿಕ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.

ಈ ಪುಸ್ತಕವು ೨೦೦೧ರಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಕಟಿಸಿರುವ ಇದೇ ಲೇಖಕಿಯ ‘ಮಹಿಳೆ ಮತ್ತು ಆರೋಗ್ಯ: ಮಹಿಳಾ ಅಧ್ಯಯನಗಳ ದೃಷ್ಟಿಯಲ್ಲಿ’ ಎಂಬ ಪುಸ್ತಕದ ಪರಿಷ್ಕೃತವಾದ ಮುಂದುವರೆದ ಭಾಗವಾಗಿದೆ. ಇತ್ತೀಚೆಗೆ ಲಭ್ಯವಾಗಿರುವ ೨೦೦೧ರ ಜನಗಣತಿಯ ಅಂಕಿ ಅಂಶಗಳು, ೧೦ನೇ ಪಂಚವಾರ್ಷಿಕ ಯೋಜನೆಯ ಲಭ್ಯವಿರುವ ವಿವರಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿಯ ವರದಿಗಳು, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇನ್ನಿತರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ವಾಯತ್ತ ಸಂಸ್ಥೆಗಳ ವರದಿಗಳಲ್ಲದೆ ಹೊಸ ಸಂಶೋಧನೆಗಳ ಬೆಳಕಿನಲ್ಲಿ ಸ್ತ್ರೀ ಆರೋಗ್ಯದ ಕಾಳಜಿಗಳನ್ನು ಕುರಿತ ಒಂದು ಮುಕ್ತ ಮರುಚಿಂತನೆ ಮಾಡುವ ಕಿರುಪ್ರಯತ್ನವನ್ನಿಲ್ಲಿ ಮಾಡಲಾಗಿದೆ.

ಮೊದಲನೆಯದಾಗಿ ೨೦೦೬ರ ಕೊನೆಯವರೆಗೂ ಲಭ್ಯವಾದ ಮಾಹಿತಯ ಬೆಳಕಿನಲ್ಲಿ ಭಾರತೀಯ ಮಹಿಳೆಯರ ಆರೋಗ್ಯ ಸೂಚಕಗಳನ್ನು ಅಂಕಿ ಅಂಶಗಳ ಆಧಾರ ಸಹಿತ, ಸಂಕ್ಷಿಪ್ತವಾಗಿ ಪರಿಶೀಲಿಸಿ ಇಂದಿನ ಭಾರತೀಯ ಮಹಿಳೆಯ ಆರೋಗ್ಯದ ಚಿತ್ರವನ್ನು ಲಿಂಗತ್ವದ ದೃಷ್ಟಿಕೋನದಿಂದ ಸ್ಥೂಲವಾಗಿ ಕಟ್ಟಿಕೊಡಲು ಯತ್ನಿಸಲಾಗಿದೆ. ಹೀಗೆ ಆರೋಗ್ಯ ಸೂಚಕಗಳ ಬಗ್ಗೆ ಮೊದಲನೆಯ ಅಧ್ಯಾಯದಲ್ಲಿರುವ ಎಂಟು ಕೋಷ್ಟಕಗಳು ಸಾಮಾನ್ಯ ಓದುಗರಿಗೆ ತುಸು ಭಾರವೆನಿಸಿದರೂ ಮಹಿಳಾ ಅಧ್ಯಯನಗಳ ವಿದ್ಯಾರ್ಥಿ ಸಮೂಹಕ್ಕೆ, ಸಂಶೋಧಕರಿಗೆ, ಸ್ತ್ರೀವಾದೀ ಕಾರ್ಯಕತರಿಗೆ ಹಾಗೂ ಸ್ತ್ರೀ ಆರೋಗ್ಯ ಪ್ರತಿಪಾದಕರಿಗೆ ಅವು ಉಪಯುಕ್ತವಾದ ಗಟ್ಟಿ ವಾಸ್ತವಾಂಶಗಳಾಗಿ ಇರುವುದರಿಂದ ಅವುಗಳು ಸೇರ್ಪಡೆ ಅನಿವಾರ್ಯವಾಗಿದೆ.

ಪ್ರಸ್ತುತ ಪುಸ್ತಕದಲ್ಲಿ ಹೊಸದಾಗಿ ಸೇರಿಸಿರುವ ವಿಷಯಗಳಲ್ಲಿ, ಮೊದಲನೆಯದಾಗಿ ಆರೋಗ್ಯ ಕ್ಷೇತ್ರದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸ್ತ್ರೀಯರ ಮಾನಸಿಕ ಆರೋಗ್ಯದ ಮೇಲೆ ಒಂದು ಅಧ್ಯಾಯವಿದೆ. ಇದರಲ್ಲಿ ಮಾನಸಿಕ ಅನಾರೋಗ್ಯ ಭಾರತೀಯ ಸ್ತ್ರೀಯರಲ್ಲಿ ಎಷ್ಟು ವ್ಯಾಪಕವಾಗಿದೆಯೆಂಬುದನ್ನೂ ಹಾಗೂ ಇದಕ್ಕೆ ಕಾರಣವಾಗಿರುವ ಕೌಟುಂಬಿಕ, ಸಾಮಾಜಿಕ, ಆರ್ಥಿಕ ಮತ್ತು ಲಿಂಗತ್ವದ ಅಂಶಗಳನ್ನು ವಸ್ತುನಿಷ್ಠವಾಗಿ ಸಂಶೋಧನೆಗಳ ಆಧಾರದ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಜೊತೆಗೇ ನಮ್ಮ ದೇಶದ ಮಾನಸಿಕ ಆರೋಗ್ಯ ಕಾಯಿದೆಯನ್ನು ಮಾನಸಿಕ ರೋಗಗಳ ಒಳಿತಿಗಾಗಿ ಎಂದು ರೂಪಿಸಲಾಗಿದ್ದರೂ ಅದು ಹೇಗೆ ಸ್ತ್ರೀಯರನ್ನು ಬಲಿಪಶುಗಳನ್ನಾಗಿಸುವ ಸಾಧನವಾಗಿ ಮಾರ್ಪಟ್ಟಿದೆ ಎಂಬುದನ್ನು ಚರ್ಚಿಸಲಾಗಿದೆ. ಎರಡನೆಯದಾಗಿ ಕುಟುಂಬಗಳಲ್ಲಿ ಹಾಗೂ ನಮ್ಮ ಸರ್ಕಾರೀ ಆರೋಗ್ಯ ಸೇವಾ ಸೌಲಭ್ಯಗಳಲ್ಲಿ ಸಾಮಾನ್ಯವಾಗಿ ಅಲಕ್ಷ್ಯಕ್ಕೆ ಒಳಗಾಗಿರುವ ಬಾಲೆಯರು ಹಾಗೂ ಹದಿಹರೆಯದ ಹುಡುಗಿಯರ ಆರೋಗ್ಯ ಮತ್ತು ಆಹಾರ ಪೋಷಣೆಯ ಸ್ಥಿತಿಗತಿಗಳನ್ನು ವಿಶ್ಲೇಷಿಸಿ ವಿವರಿಸಲಾಗಿದೆ. ಕಿಶೋರಿಯರ ಅನಾರೋಗ್ಯ ಮತ್ತು ಅಪಪೋಷಣೆಯ ಸ್ಥಿತಿಗತಿಗಳನ್ನು ವಿಶ್ಲೇಷಿಸಿ ವಿವರಿಸಲಾಗಿದೆ. ಕಿಶೋರಿಯರ ಅನಾರೋಗ್ಯ ಮತ್ತು ಅಪಪೋಷಣೆಗಳು ಹೇಗೆ ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ಒಂದು ವಿಷಚಕ್ರದೋಪಾದಿಯಲ್ಲಿ ಪುನರಾವರ್ತನೆಗೊಳ್ಳುತ್ತಿರುವ ಅಪಪೋಷಣೆಗೆ ಕಾರಣವಾಗಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಅಲ್ಲದೆ ಕಿಶೋರಿಯರ ಆರೋಗ್ಯವನ್ನು ಸುಧಾರಿಸಲು ಈಗೀಗ ಮಾಡುತ್ತಿರುವ ಸೀಮಿತ ಪ್ರಯತ್ನಗಳಿಗೂ ಈ ಸಮಸ್ಯೆಯ ಅಗಾಧತೆಗೂ ತಾಳ ಮೇಳವಿಲ್ಲದಿರುವುದರ ಬಗ್ಗೆ ಓದುಗರ ಗಮನ ಸೆಳೆಯುವ ಕಿರುಪ್ರಯತ್ನವನ್ನಿಲ್ಲಿ ಕಾಣಬಹುದಾಗಿದೆ.

ಮೂರನೆಯದಾಗಿ ಸಾರ್ವಜನಿಕ ವಲಯದ ಯೋಜನೆಗಳಾದ ಪಂಚವಾರ್ಷಿಕ ಯೋಜನೆಗಳಲ್ಲಿರುವ, ಸ್ತ್ರೀ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯನೀತಿಗಳು, ಯೋಜನೆಗಳು ಕಾರ್ಯತಂತ್ರಗಳು ಮತ್ತ ಕಾರ್ಯಕ್ರಮಗಳ ವಿಶ್ಲೇಷಣೆಗೆಂದೇ ಒಂದು ಅಧ್ಯಾಯವನ್ನಿಲ್ಲಿ ಮೀಸಲಿರಿಸಲಾಗಿದೆ. ನಾಲ್ಕನೆಯದಾಗಿ ಸ್ವಾತಂತ್ರ್ಯಾನಂತರದ ಹತ್ತು ಪಂಚವಾರ್ಷಿಕ ಯೋಜನೆಗಳಲ್ಲಿ ಮಹಿಳೆ ಮತ್ತು ಮಕ್ಕಳ ಆರೋಗ್ಯವನ್ನು ಕುರಿತ ಎಲ್ಲಾ ಕಾರ್ಯಕ್ರಮಗಳನ್ನು ಸಮಾನ್ಯವಾಗಿ ಕುಟುಂಬ ಯೋಜನೆಯ ಜನಸಂಖ್ಯಾ ನಿಯಂತ್ರಣದ ಚೌಕಟ್ಟಿನಲ್ಲಿಯೇ ಜಾರಿಗೆ ತರಲಾಗಿದ್ದರಿಂದ, ಈ ಅವಧಿಯಲ್ಲಿ ನಡೆಸಲಾದ ಕುಟುಂಬ ಯೋಜನಾ ಕಾರ್ಯಕ್ರಮಗಳನ್ನು ಹಾಗೂ ಅವುಗಳಲ್ಲಿ ಬಳಸಲಾದ ಹಾಗೂ ಭವಿಷತ್ತಿನಲ್ಲಿ ಪ್ರಚಲಿತಗೊಳ್ಳಲಿರುವ ಆಧುನಿಕ ಗರ್ಭನಿರೋಧಕಗಳ ಬಗ್ಗೆ ಒಂದು ಪ್ರತ್ಯೇಕ ಅಧ್ಯಾಯವನ್ನು ಈ ಪುಸ್ತಕದಲ್ಲಿ ಸೇರಿಸಲಾಗಿದೆ.

ಇಂದು ಜಾಗತೀಕರಣವು ಭಾರತೀಯರ ಬದುಕಿನ ಎಲ್ಲಾ ಆಯಾಮಗಳನ್ನು ಪ್ರತ್ಯಕ್ಷ್ಯವಾಗಿ ಹಾಗೂ ಅಪ್ರತ್ಯಕ್ಷವಾಗಿ ತಟ್ಟುತ್ತಿರುವುದು ಸರ್ವವೇದ್ಯವೇ ಆಗಿದೆ. ಜಾಗತೀಕರಣದ ಉಸಿರುಗಟ್ಟಿಸುವ ತೀವ್ರ ಸ್ಪರ್ಧೆಯ, ಮಾನವೀಯ ಮೌಲ್ಯರಹಿತ, ಮಾರುಕಟ್ಟೆ ಆಧಾರಿತ ಮೌಲ್ಯಗಳ ಜಗತ್ತಿನಲ್ಲಿ ದುರ್ಬಲರು, ಬಡವರು, ಸ್ತ್ರೀಯರು ಹಾಗೂ ಪರಿಸರಗಳು ನಲುಗುತ್ತಿದ್ದು ಅದರಿಂದ ಸ್ತ್ರೀಯರ ಆರೋಗ್ಯದ ಮೇಲೆ ಅಗುತ್ತಿರುವ ದುಷ್ಪರಿಣಾಮಗಳನ್ನು ಇಂದು ಚರ್ಚಿಸುವುದು ಅನಿವಾರ್ಯವಾಗಿದೆ. ಲಭ್ಯವಿರುವ ವಸ್ತುನಿಷ್ಠ ಅಂಶಗಳ ಆಧಾರದ ಮೇಲೆ ಇಂತಹ ವಿಶ್ಲೇಷಣೆ ಮಾಡುವ ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಮಹಿಳೆಯರು ಜಾಗತೀಕರಣದ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ತನ್ಮೂಲಕ ತಮ್ಮ ಮುಂದಿನ ತಲೆಮಾರಿನ ಆರೋಗ್ಯ, ತಮ್ಮ ಕೌಟುಂಬಿಕ ಹಾಗೂ ಸಮುದಾಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂದು ಮಹಿಳಾ ಆರೋಗ್ಯ ಸಬಲೀಕರಣ ಅಗತ್ಯವಾಗಿದೆ. ಈ ಸಂದರ್ಭದಲ್ಲಿ ಮಹಿಳಾ ಆರೋಗ್ಯಕ್ಕೆ ಅನ್ವಯಿಸಿದಂತೆ ಇರುವ ಹಲವಾರು ಸವಾಲುಗಳಿಗೆ ಉತ್ತರ ಹುಡುಕುವ ದಿಸೆಯಲ್ಲಿಯೇ “ಜಾಗತೀಕರಣದ ಸಂದರ್ಭದಲ್ಲಿ ಸ್ತ್ರೀ ಆರೋಗ್ಯ ಸಬಲೀಕರಣ” ಎಂಬ ಅಧ್ಯಾಯವೊಂದು ಈ ಪುಸ್ತಕದ ಮುಖ್ಯಭಾಗವಾಗಿ ರೂಪೊಗೊಂಡಿದೆ.

ಇನ್ನು, ಇವೆಲ್ಲವುಗಳ ಜೊತೆಗೆ ನಮ್ಮ ಮಹಿಳೆಯರನ್ನು ಕಾಡುತ್ತಿದ್ದರೂ ತೀವ್ರ ಅಲಕ್ಷ್ಯಕ್ಕೆ ಒಳಗಾಗಿರುವ ಕೆಲವು ಮುಖ್ಯ ಕಾಯಿಲೆಗಳನ್ನು ಕುರಿತ ಸಂಕ್ಷಿಪ್ತ ವಿರಣಾತ್ಮಕ ವಿಶ್ಲೇಷಣೆಗೆಂದೇ ಒಂದು ಅಧ್ಯಾಯವನ್ನು ಹೊಸದಾಗಿ ಸೇರಿಸಲಾಗಿದೆ. ಭಾರತೀಯ ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿರುವ ಮಹಿಳೆಯರ ಮೌನ ಸಂಸ್ಕೃತಿಯಿಂದಾಗಿ ಜನಸಾಮಾನ್ಯರ ಗಮನ ಸೆಳೆಯದ ಕೆಲವು ಮುಖ್ಯ ಅನಾರೋಗ್ಯ ಸಮಸ್ಯೆಗಳನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ. ಪ್ರತಿ ಅಧ್ಯಾಯದಲ್ಲಿಯೂ ಆಯಾ ಅಧ್ಯಾಯದ ವಿಷಯವನ್ನು ಸಂಕ್ಷಿಪ್ತವಾಗಿ ಆದರೆ ಸಮಗ್ರವಾಗಿ ಮತ್ತು ಸರಳವಾಗಿ ವಿವರಿಸಲು ಪ್ರಯತ್ನಿಸಲಾಗಿದೆ.

ವಿದ್ಯಾರ್ಥಿ ಸಮೂಹಕ್ಕೆ, ಮಹಿಳಾ ಅಧ್ಯಯನಗಳ ಅಧ್ಯಾಪಕ ವರ್ಗಕ್ಕೆ, ಸಂಶೋಧಕರಿಗೆ ಹಾಗೂ ಆಸಕ್ತರಿಗೆ ಹೆಚ್ಚಿನ ಓದಿಗಾಗಿ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ಪೂರ್ಣ ಗ್ರಂಥಋಣವನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿ ಬಯಸುವ ಓದುಗರಿಗೆಂದೇ ಸ್ತ್ರೀಯರ ಆರೋಗ್ಯದ ಕೆಲಸ ಮಾಡುತ್ತಿರುವ, ಅದರ ಬಗ್ಗೆ ಮಾಹಿತಿ, ಶಿಕ್ಷಣ ಮತ್ತು ತರಬೇತಿಗಳನ್ನು ನೀಡುತ್ತಿರುವ ಹಾಗೂ ಸಂಶೋಧನೆಗಳನ್ನು ನಡೆಸುತ್ತಿರುವ ಹಲವಾರು ಸಂಘ, ಸಂಸ್ಥೆಗಳ, ಜಾಲಗಳ, ಒಕ್ಕೂಟಗಳ, ಚಳವಳಿಗಳ ವಿಳಾಸ ಸಹಿತ ಪಟ್ಟಿಯನ್ನು ಅನುಬಂಧದಲ್ಲಿ ನೀಡಲಾಗಿದೆ. ಹಾಗೆಯೇ ಸಂಬಂಧಿತ ಸುದ್ದಿ ಪತ್ರಗಳ, ವೃತ್ತಿ ಪತ್ರಿಕೆಗಳ ಮತ್ತು ಪುಸ್ತಕಗಳ ಪಟ್ಟಿಯನ್ನು ನೀಡಲಾಗಿದೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಸ್ತ್ರೀ ಆರೋಗ್ಯದ ಹಲವು ಆಯಾಮಗಳನ್ನು ಒಂದೇ ಪುಸ್ತಕದಲ್ಲಿ ಅಡಕಗೊಳಿಸಲು, ಪುಟಗಳ ಮಿತಿಯಿಂದಾಗಿ ಸಾಧ್ಯವಾಗಿಲ್ಲ. ಉದಾಹರಣೆಗೆ, ಮಹಿಳೆಯರು ಗುರಿಯಾಗುವ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾದ ನಾನಾ ರೂಪಗಳ ಹಿಂಸೆ ಹಾಗೂ ಅವು ಅವರ ಮಾನಸಿಕ, ದೈಹಿಕ, ಪ್ರಜನನ (Reproductive) ಹಾಗೂ ಭಾವನಾತ್ಮಕ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ನೂರಾರು ಸಂಶೋಧನಾತ್ಮಕ ಅಧ್ಯಯನಗಳು ನಡೆದಿದ್ದು, ಹಲವಾರು ಅಂಕಿ ಅಂಶಗಳು ಇತ್ಯಾದಿ ಅಪಾರ ಮಾಹಿತಿಯಿದೆ. ಅಲ್ಲದೆ ಪ್ರಸ್ತುತ ಆಧುನಿಕ ಸಂದರ್ಭದಲ್ಲಿ ಸ್ತ್ರೀಯರ ಮೇಲನ ಹಿಂಸೆ ಹೊಸ ರೂಪಗಳನ್ನು, ವೇಷಗಳನ್ನು ಧರಿಸಿ ಅವರ ಆರೋಗ್ಯದ ಮೇಲೆ ಮಾಡುತ್ತಿರುವ ದುರಾಕ್ರಮಣಗಳ ಹಲವಾರು ವಿವರಣೆ ವಿಶ್ಲೇಷಣೆಗಳು ಇವೆ. ಅವುಗಳನ್ನು ಸಂಕ್ಷಿಪ್ತವಾಗಿಯಾದರೂ ಸರಿ ಸಮಗ್ರವಾಗಿ ಒಂದು ಅದ್ಯಾಯದೊಳಗೆ ಅಳವಡಿಸುವುದು ಸಾಧ್ಯವಿಲ್ಲ. ಅಲ್ಲದೆ ಈ ವಿಷಯದ ಬಗ್ಗೆಯೇ ಒಂದು ಪುಸ್ತಕ ಬರೆಯುವ ಅಗತ್ಯವಿದ್ದು ಆ ಉದ್ದೇಶವೂ ಈ ಲೇಖಕಿಗೆ ಇರುವುದರಿಂದ ಅದನ್ನಿಲ್ಲಿ ಕೈಬಿಡಲಾಗಿದೆ.

ಇನ್ನೂ ಏಡ್ಸ್‌ಮತ್ತು ಎಚ್‌.ಐ.ವಿ ಸೋಂಕುಗಳ ಬಗ್ಗೆ ಹೆಚ್ಚಿನ ಅರಿವು ಉಂಟುಮಾಡುವ ಪ್ರಚಾರ ಸರಿ ಸುಮಾರು ಎಲ್ಲಾ ಮಾಧ್ಯಮಗಳಲ್ಲಿ ನಡೆದಿರುವುದರಿಂದ ಅವುಗಳ ವಿವರಣೆಯನ್ನು ಇಲ್ಲಿ ನೀಡಿಲ್ಲ. ಅದಕ್ಕೆ ಪ್ರತಿಯಾಗಿ ಭಾರತೀಯ ಸ್ತ್ರೀಯರ ರೋಗ ಬಾಧೆಯ ಹೊರೆಯ ಮುಖ್ಯ ಭಾಗವಾಗಿದ್ದೂ ಸಹ ಹಾಗೂ ಅವರ ಮರಣ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದ್ದರೂ ಸಹ ಜನಸಾಮಾನ್ಯರಿಗೆ ಅಗೋಚರವಾಗಿಯೇ ಉಳಿದಿರುವ ಕಾಯಿಲೆಗಳಲ್ಲಿ ಕೆಲವನ್ನು ಸಂಕ್ಷಿಪ್ತವಾಗಿ ವಿವರಿಸಿ ಓದುಗರ ಗಮನ ಸೆಳೆವ ಪ್ರಯತ್ನವನ್ನಿಲ್ಲಿ ಕಾಣಬಹುದು.

ಒಟ್ಟಿನಲ್ಲಿ ಸ್ತ್ರೀಯರ ಬದುಕಿನ ನೆಲೆಯಲ್ಲಿ ನಿಂತು ಅವರು ಅನುಭವಿಸಿದ ಹಾಗೂ ಅನುಭವಿಸುತ್ತಿರುವ ಸಾಮಾಜಿಕ ಕಟುವಾಸ್ತವತೆಗಳನ್ನು ವಿಶ್ಲೇಷಿಸುವ ಸಾಧನವೆಂದೇ ಗುರ್ತಿಸಲಾಗಿರುವ ಮಹಿಳಾ ಅಧ್ಯಯನಗಳ ಚೌಕಟ್ಟಿನಲ್ಲಿಯೇ ಪ್ರಸ್ತುತ ಪುಸ್ತಕ ರಚಿತವಾಗಿದೆ. ಹಾಗಾಗಿ ಪ್ರಸ್ತುತ ಸ್ತ್ರೀಯರ ಆರೋಗ್ಯದ ವಿವಿಧ ಆಯಾಮಗಳನ್ನು ಮಹಿಳೆಯರ ಸಾಮಾಜಿಕ ವಸ್ತು ಸ್ಥಿತಿಯ (Social conditions) ಮತ್ತು ಸಾಮಾಜಿಕ ಕಟು ವಾಸ್ತವತೆಗಳ (Harsh social realities) ಅನುಭವಾತ್ಮಕ ನೆಲೆಯಲ್ಲಿ ನಿಂತು ವಿವರಿಸಿ ವಿಶ್ಲೇಷಿಸುವುದೇ ಈ ಪುಸ್ತಕದ ಹೆಗ್ಗುರಿ.

ಜೊತೆಗೇ ಒಟ್ಟು ಸಮುದಾಯದ ಆರೋಗ್ಯಕ್ಕೆ ಸ್ತ್ರೀಆರೋಗ್ಯ ಎಷ್ಟು ಮುಖ್ಯವೆಂಬುದನ್ನು ಬಿಂಬಿಸುವುದು ಹಾಗೂ ಸ್ತ್ರೀ ಆರೋಗ್ಯದ ವಿಷಯಗಳು ಮತ್ತು ಸಮಸ್ಯೆಗಳ ಬಗ್ಗೆ ಮಹಿಳಾ ಅಧ್ಯಯನಗಳ ವಿದ್ಯಾರ್ಥಿ ಸಮೂಹದಲ್ಲಿ, ಸಂಶೋಧಕರಲ್ಲಿ ಹಾಗೂ ಸಾಮಾನ್ಯ ಓದುಗರಲ್ಲಿ ಹೆಚ್ಚಿನ ಅರಿವು ಮೂಡಿಸಿ ಅವರಲ್ಲಿ ಸ್ತ್ರೀಪರ ಚಿಂತನೆಗಳನ್ನು ಹುಟ್ಟು ಹಾಕುವುದು ಪ್ರಸ್ತುತ ಪುಸ್ತಕದ ಇನ್ನಿತರ ಮುಖ್ಯ ಆಶಯಗಳಾಗಿವೆ. ನಮ್ಮ ಸಮಾಜದಲ್ಲಿ, ಸಮುದಾಯಗಳಲ್ಲಿ ಮತ್ತು ಕುಟುಂಬಗಳಲ್ಲಿ ಹಾಸುಹೊಕ್ಕಾಗಿರುವ ಲಿಂಗತಾರತಮ್ಯಗಳಿಂದಾಗಿ ಉಂಟಾಗಿರುವ ಹೆಣ್ಣು ಭ್ರೂಣಹತ್ಯೆ, ಹೆಣ್ಣು ಮಕ್ಕಳನ್ನು ಕುರಿತ ಅಲಕ್ಷ್ಯ ಹಾಗೂ ಅವರಿಗೆ ಜೀವನಾವಶ್ಯಕಗಳಾದ ಸರಿಯಾದ ವಂಚನೆ, ಪಕ್ಷಪಾತ ಮತ್ತಿರ ಸ್ತ್ರೀ ಜೀವ ವಿರೋಧೀ ಪ್ರವೃತ್ತಿಗಳಿಗೆ ತಡೆ ಹಾಕುವ ಪ್ರಕ್ರಿಯೆಯ ದಿಕ್ಕಿನಲ್ಲಿ ಈ ಪುಸ್ತಕ ಒಂದು ಕಿರುಪ್ರಯತ್ನ ಮಾತ್ರ. ಇದರಲ್ಲಿ ಪ್ರತಿಪಾದಿಸಲಾಗಿರುವ ಸ್ತ್ರೀವಾದಿ ಧೋರಣೆ ದೃಷ್ಟಿಕೋನಗಳು ಎಲ್ಲರಿಗೂ ರುಚಿಸದೇ ಹೋದರೂ ಸಹ ಅಂತಹವರಲ್ಲಿಯೂ ಸ್ತ್ರೀ ಆರೋಗ್ಯವನ್ನು ಪರಿಗಣಿಸುವಾಗ ಹೊಸಪ್ರಶ್ನೆಗಳು ಹಾಗೂ ಒಂದು ಹೊಸ ದೃಷ್ಟಿ ಹುಟ್ಟಬೇಕೆಂಬುದೇ ಈ ಪುಸ್ತಕದ ಮುಖ್ಯ ಆಶಯ.