ಆರೋಗ್ಯವೇ ಅಭ್ಯುದಯದ ಅಡಿಗಲ್ಲು. ಪ್ರಪಂಚದ ಯಾವುದೇ ದೇಶದ ಯಾವುದೇ ಸಮುದಾಯದ ಜನರ ಆರೋಗ್ಯ ಆ ದೇಶದ ಆಯಾ ಸಮುದಾಯಗಳ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ. ನಮ್ಮ ದೇಶದ ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಇರುವ ಮಹಿಳೆಯರ ಆರೋಗ್ಯ ಉತ್ತಮಗೊಳ್ಳದೆ ಪ್ರಸ್ತುತ ಜನಸಮುದಾಯದ ಆರೋಗ್ಯವಾಗಲೀ, ಮುಂದಿನ ತಲೆಮಾರಿನ ಆರೋಗ್ಯವಾಗಲೀ ಉತ್ತಮಗೊಳ್ಳಲು ಖಂಡಿತಾ ಸಾಧ್ಯವಿಲ್ಲ. ಏಕೆಂದರೆ ಅರ್ಧ ಜನಸಂಖ್ಯೆಯ ಆರೋಗ್ಯವನ್ನು ಕಡೆಗಣಿಸಿ ಇಡೀ ಜನಸಮುದಾಯದ ಆರೋಗ್ಯವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಮುಂದಿನ ತಲೆಮಾರನ್ನು ಹೊತ್ತು, ಹೆತ್ತು ಪಾಲಿಸಬೇಕಾಗುವ ಮಹಿಳೆಯರು ಅಪಪೋಷಣೆ, ಅನಾರೋಗ್ಯ ಮತ್ತು ಅಲಕ್ಷ್ಯಗಳಿಗೆ ಒಳಗಾಗಿ ಬಳಲುತ್ತಿದ್ದಲ್ಲಿ ಆ ಸಮುದಾಯದ ಆರೋಗ್ಯಕ್ಕೆ ಹಾಗೂ ಅಭಿವೃದ್ಧಿಯ ಹಾದಿಯಲ್ಲಿ ನಡೆಯಬಲ್ಲ ಜನತೆಯ ಕಾರ್ಯಕ್ಷಮತೆಗೆ ಹಿನ್ನಡೆಯುಂಟಾಗುವುದರಲ್ಲಿ ಅಚ್ಚರಿಯಿಲ್ಲ.

ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ನಡೆದ ಜನಗಣತಿಗಳಲ್ಲಿ ನಮಗೆ ದಕ್ಕಿರುವ ಹಲವು ಜನಸಂಖ್ಯಾತ್ಮಕ ಆರೋಗ್ಯ ಸೂಚಕಗಳು ಭಾರತೀಯ ಸ್ತ್ರೀಯರ ಆರೋಗ್ಯದ ಹಿಂದಿನ ಮತ್ತು ಇಂದಿನ ವಾಸ್ತವ ಸ್ಥಿತಿಗತಿಗಳ ಸ್ಥೂಲ ಚಿತ್ರವೊಂದನ್ನು ಕಟ್ಟಿಕೊಡುತ್ತವೆ. ಹಾಗೆಯೇ ಆರೋಗ್ಯವನ್ನು ಕುರಿತ ಜನಸಂಖ್ಯಾತ್ಮಕ ಅಂಕಿ ಅಂಶಗಳು ಕಳೆದ ಐವತ್ತು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯವನ್ನು ಅದರಲ್ಲಿಯೂ ಮಹಿಳೆಯರ ಆರೋಗ್ಯವನ್ನು ಅಭಿವೃದ್ಧಿಪಡಿಸುವಲ್ಲಿ ನಾವೆಷ್ಟು ಸಾಧಿಸಿದ್ದೇವೆ, ಇನ್ನೂ ಸಾಧಿಸಬೇಕಾಗಿರುವುದು ಎಷ್ಟು ಹಾಗೂ ನಾವು ಕ್ರಮಿಸಿ ಬಂದ ದಿಕ್ಕು ಸರಿಯಾಗಿದೆಯೋ ಇಲ್ಲವೋ ಎಂಬುದರ ಪಕ್ಷಿನೋಟವನ್ನು ನೀಡಬಲ್ಲವು. ಇಂದು ನಮ್ಮ ದೇಶ ಆರ್ಥಿಕವಾಗಿ ಮುನ್ನಡೆಯುತ್ತಾ ವಿಜ್ಞಾನ ಮತ್ತು ತಾಂತ್ರಿಕತೆಗಳಲ್ಲಿ ದಾಪುಗಾಲು ಇಡುತ್ತಾ ಅಭಿವೃದ್ಧಿಶೀಲ ದೇಶವೆಂಬ ಹಣೆಪಟ್ಟಿಯಿಂದ ಪಾರಾಗಿ ಅಭಿವೃದ್ಧಿಗೊಂಡ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗುವ ಹಾದಿಯಲ್ಲಿ ನಡೆಯುತ್ತಿದೆ ಎಂಬ ಅಭಿಪ್ರಾಯ ವಿಶ್ವದಲ್ಲಿ ಮೂಡುತ್ತಿದೆ, ಈ ಸಂದರ್ಭದಲ್ಲಿ ಇಡೀ ಭಾರತದ ಆರ್ಥಿಕ, ವೈಜ್ಞಾನಿಕ ಮತ್ತು ಅಭಿವೃದ್ಧಿಯ ಫಲಗಳು ಎಷ್ಟರಮಟ್ಟಿಗೆ ಎಲ್ಲರನ್ನೂ ತಲುಪಿ ಸಾರ್ವಜನಿಕ ಆರೋಗ್ಯದಲ್ಲಿ ಪ್ರತಿಫಲಿಸುತ್ತಿದೆ ಎನ್ನುವುದನ್ನು ಜನಗಣತಿಯ ಹಾಗೂ ರಾಷ್ಟ್ರವ್ಯಾಪಿ ಸರ್ವೇಕ್ಷಣೆಗಳ ಅಂಕಿ ಅಂಶಗಳು ಸ್ಥೂಲವಾಗಿ ತೋರಬಲ್ಲವು. ಆದ್ದರಿಂದ ಅವುಗಳ ಒಂದು ಸ್ಥೂಲವಾದ ಸಂಕ್ಷಿಪ್ತ ವಿವರಣೆ ಹಾಗೂ ವಿಶ್ಲೇಷಣೆ ಇಲ್ಲಿ ಅತ್ಯಗತ್ಯ. ಆದ್ದರಿಂದ ಮುಖ್ಯ ಅಂಕಿ ಸಂಖ್ಯಾತ್ಮಕ ಆರೋಗ್ಯ ಸೂಚಕಗಳಾದ ಸ್ತ್ರೀ ಪುರುಷರ ನಿರೀಕ್ಷಿತ ಆಯಸ್ಸು, ಮರಣ ಸಂಖ್ಯಾ ಪ್ರಮಾಣ, ನವಜಾತ ಶಿಶು ಮರಣ ಸಂಖ್ಯೆ, ಶಿಶುಮರಣ ಸಂಖ್ಯಾ ಪ್ರಮಾಣ, ಮಕ್ಕಳ ಮರಣ ಸಂಖ್ಯಾ ಪ್ರಮಾಣ ಹಾಗೂ ಲಿಂಗ ಅನುಪಾತಗಳನ್ನು ಇಲ್ಲಿ ಪರಿಶೀಲಿಸಲಾಗಿದೆ.

ನಿರೀಕ್ಷಿತ ಆಯಸ್ಸು

ಇದನ್ನು ಆರೋಗ್ಯ ಸೂಚಕಗಳಲ್ಲಿಯೇ ಅತ್ಯಂತ ಮುಖ್ಯವಾದದ್ದು ಎಂದು ಪರಿಗಣಿಸಲಾಗುತ್ತಿದೆ. ಒಟ್ಟು ಜನಸಂಖ್ಯೆಯಲ್ಲಿ ನಾನಾ ಕಾರಣಗಳಿಂದ ಉಂಟಾಗುವ ಮರಣದ ಅಪಾಯಗಳನ್ನು ಯಾವುದೇ ಕ್ಷಣದಲ್ಲಿ ಎದುರಿಸಿಯೂ ಸಹ ಒಬ್ಬ ವ್ಯಕ್ತಿ ಸರಾಸರಿ ಎಷ್ಟು ವರ್ಷಗಳು ಬದುಕುವ ನಿರೀಕ್ಷೆಯಿದೆ ಎನ್ನುವುದನ್ನು ನಿರೀಕ್ಷಿತ ಆಯಸ್ಸು ಸೂಚಿಸುತ್ತದೆ. ಹುಟ್ಟಿದ ಮೊದಲ ವರ್ಷ ಮಗುವಿಗೆ ಮರಣದ ಅಪಾಯಗಳು ಹೆಚ್ಚಾಗಿರುವುದರಿಂದ ಒಂದು ವರ್ಷ ವಯಸ್ಸಿನ ವ್ಯಕ್ತಿ (ಮಗು) ಎಷ್ಟು ವರ್ಷ ಬದುಕಬಹುದಾದ ನಿರೀಕ್ಷೆಯಿದೆ ಎಂದುದನ್ನು ನಿರೀಕ್ಷಿತ ಸರಾಸರಿ ಆಯಸ್ಸಿನ ಸೂಚಕ ಅಳೆಯುತ್ತದೆ. ಇಡೀ ವಿಶ್ವದಲ್ಲಿ ಮಹಿಳೆಯರ ನಿರೀಕ್ಷಿತ ಆಯಸ್ಸು ಪುರುಷರ ಆಯಸ್ಸಿಗಿಂತಾ ೪-೫ ವರ್ಷಗಳು ಹೆಚ್ಚಾಗಿಯೇ ಇದೆ. ಇದಕ್ಕೆ ಸ್ತ್ರೀಯರು ಜೈವಿಕವಾಗಿ ಹುಟ್ಟಿನಿಂದಲೇ ಹೆಚ್ಚು ಬಲಶಾಲಿಗಳಾಗಿದ್ದು ಹೆಚ್ಚು ಕಾಲ ಬದುಕಬಲ್ಲ ಸುಪ್ತ ಸಾಮರ್ಥ್ಯವನ್ನು ಪ್ರಕೃತಿಯಿಂದ ಪಡೆದಿರುವುದೇ ಕಾರಣವಾಗಿದೆ. ಆದರೆ, ಈ ಜೈವಿಕವಾದ ಸುಪ್ತ ಸಾಮರ್ಥ್ಯದ ಪೂರ್ಣ ವಿಕಾಸಕ್ಕೆ ಗಂಡು ಮಕ್ಕಳಿಗೆ ಸಿಗುವಷ್ಟೇ ಆರೋಗ್ಯ, ಆಹಾರ, ವಿಶ್ರಾಂತಿ ಇತ್ಯಾದಿಗಳ ಸೌಲಭ್ಯಗಳು ಹೆಣ್ಣು ಮಕ್ಕಳಿಗೂ ದಕ್ಕಬೇಕಾಗುತ್ತದೆ.

೨೦೦೧ ವಿಶ್ವಾರೋಗ್ಯ ವರದಿಯ ಪ್ರಕಾರ ಭಾರತೀಯ ಪುರುಷರ ನಿರೀಕ್ಷಿತ ಆಯಸ್ಸು ೫೯.೮ ವರ್ಷಗಳಾಗಿದ್ದು ಮಹಿಳೆಯರ ನಿರೀಕ್ಷಿತ ಆಯಸ್ಸು ೬೨.೭ ವರ್ಷಗಳಾಗಿದೆ. ಅಂದರೆ ಭಾರತೀಯ ಮಹಿಳೆಯರು ೨.೯ ವರ್ಷಗಳಷ್ಟು ಹೆಚ್ಚು ಕಾಲ ಬದುಕುತ್ತಾರೆ ಎಂಬ ನಿರೀಕ್ಷೆಯಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಮ್ಮ ಮಹಿಳೆಯರು ಒಂದೆರಡು ವರ್ಷಗಳು ಹೆಚ್ಚು ನಿರೀಕ್ಷಿತ ಆಯಸ್ಸನ್ನು ಹೊಂದಿದ್ದರೂ, ಅವರು ಪುರುಷರಿಗಿಂತಾ ಹೆಚ್ಚಿನ ಕಾಯಿಲೆಗಳ ಹೊರೆಯನ್ನು ಹಾಗೂ ಅನಾರೋಗ್ಯದಿಂದ ಉಂಟಾಗುವ ಅಸಾಮರ್ಥ್ಯಗಳ ಹೊರೆ ಹೊತ್ತೇ ಬಳಲುತ್ತಾ ಬದುಕುತ್ತಾರೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅಲ್ಲದೆ ಜನಸಂಖ್ಯಾ ತಜ್ಞರು ಹಾಗೂ ಅಂಕಿ ಅಂಶಗಳ ತಜ್ಞರುಗಳು ಇತ್ತೀಚೆಗೆ ‘ಆರೋಗ್ಯಪೂರ್ಣ ವರ್ಷಗಳ ನಿರೀಕ್ಷಿತ ಆಯಸ್ಸು’ (Healthy Years of life expectancy) ಎಂಬ ಪರಿಕಲ್ಪನೆಯನ್ನು ಸೃಜಿಸಿದ್ದಾರೆ. ಇದರಿಂದ ನಿರೀಕ್ಷಿತ ಆಯಸ್ಸಿನಲ್ಲಿ ಎಷ್ಟು ವರ್ಷಗಳು ಕಾಹಿಲೆ ಮತ್ತು ಅನಾರೋಗ್ಯದಿಂದ ಉಂಟಾಗುವ ಅಸಾಮರ್ಥ್ಯದಿಂದಾಗಿ ಕಳೆದು ಹೋಗಿವೆ ಎಂಬುದರ ಅಂದಾಜನ್ನು ಪಡೆಯಬಹುದಾಗಿದೆ. ಭಾರತದಲ್ಲಿ ಮಹಿಳೆಯರು ಪುರುಷರಿಂತಾ ಮೂರು ವರ್ಷಗಳಷ್ಟು ಹೆಚ್ಚು ಕಾಲ ಅನಾರೋಗ್ಯ ಮತ್ತು ಅದರಿಂದ ಉಂಟಾಗುವ ಅಸಾಮರ್ಥ್ಯಗಳಿಂದ ಬಳಲಿ ತಮ್ಮ ಆರೋಗ್ಯಪೂರ್ಣ ವರ್ಷಗಳ ನಿರೀಕ್ಷಿತ ಆಯಸ್ಸಿನಲ್ಲಿ ಮೂರು ವರ್ಷಗಳನ್ನು ಕಳೆದು ಕೊಳ್ಳುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

[1]

ಮರಣ ಸಂಖ್ಯಾ ಪ್ರಮಾಣ

ವರ್ಷದ ಮಧ್ಯದ ಅವಧಿಯಲ್ಲಿ ಒಂದು ಸಾವಿರ ಜನಸಂಖ್ಯೆಯಲ್ಲಿ ಉಂಟಾಗುವ ಮರಣಗಳ ಒಟ್ಟು ಸಂಖ್ಯೆಯನ್ನು ಮರಣ ಸಂಖ್ಯಾ ಪ್ರಮಾಣ ಎನ್ನಲಾಗುತ್ತದೆ. ಇದು ಒಂದು ನಿರ್ದಿಷ್ಟ ಸಂಖ್ಯೆಯ ಜನರಲ್ಲಿ ಗೊತ್ತುಪಡಿಸಿದ ಒಂದು ಅವಧಿಯಲ್ಲಿ (ಒಂದು ವರ್ಷದಲ್ಲಿ) ನಾನಾ ಕಾರಣಗಳಿಂದ ಉಂಟಾಗುವ ಒಟ್ಟು ಮರಣ ಸಂಖ್ಯೆಯನ್ನು ಸೂಚಿಸುತ್ತದೆ. ಇದರಲ್ಲಿ ಮಹಿಳೆ ಮತ್ತು ಪುರುಷರ ಮರಣ ಸಂಖ್ಯೆಗಳನ್ನು ಬೇರ್ಪಡಿಸಿ ನೋಡಿದಾಗ ಮರಣ ಸಂಖ್ಯೆಯ ಪ್ರಮಾಣದಲ್ಲಿ ಸ್ತ್ರೀ ಮತ್ತು ಪುರುಷರ ಮರಣಗಳ ಶೇಕಡವಾರು ಸಂಖ್ಯೆ ಸಿಗುತ್ತದೆ. ಹಾಗೆಯೇ ವಿವಿಧ ವಯೋಮಾಮಗಳಲ್ಲಿರುವ ಶೇಕಡವಾರು ಸಂಖ್ಯೆಯನ್ನು ಗಮನಿಸಿದಾಗ ಯಾವ ವಯೋಮಾನಗಳಲ್ಲಿ ಸ್ತ್ರೀಯರು ಪುರುಷರಿಗಿಂತಾ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಉದಾಹರಣೆಗೆ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಮಾನವ ವಿಕಾಸ ವರದಿಯು (೧೯೯೯), ಕರ್ನಾಟಕದಲ್ಲಿ ಸ್ತ್ರೀಯರ ಮರಣ ಸಂಖ್ಯೆ ಹುಟ್ಟಿನಿಂದ ಹಿಡಿದು ಮೂವತ್ನಾಲ್ಕು ವರ್ಷಗಳ ವಯಸ್ಸಿನವರೆಗೂ ಪುರುಷರ ಮರಣ ಸಂಖ್ಯೆಗಿಂತಾ ಹೆಚ್ಚಾಗಿದ್ದುದ್ದನ್ನು ಎತ್ತಿ ತೋರಿದೆ.[2] ಅದರಲ್ಲಿಯೂ ಹದಿನೈದರಿಂದ ಮೂವತ್ನಾಲ್ಕು ವಯೋಮಾನದ ಸ್ತ್ರೀಯರ ಮರಣ ಸಂಖ್ಯೆ ಅದೇ ವಯೋಮಾನದ ಗಂಡಸರ ಮರಣ ಸಂಖ್ಯೆಗಿಂತಾ ಎರಡು ಪಟ್ಟು ಹೆಚ್ಚಾಗಿದ್ದುದ್ದನ್ನು ಈ ವರದಿಯಲ್ಲಿ ನೋಡಬಹುದಾಗಿದೆ. ಹದಿನೈದರಿಂದ ಮೂವತ್ತನಾಲ್ಕರ ವಯೋಮಾನದ ಅವಧಿಯಲ್ಲಿ ಸಂತಾನೋತ್ಪತ್ತಿಯು ತೀವ್ರಗತಿಯಲ್ಲಿ ಸಾಗುತ್ತಿದ್ದು ಈ ಅವಧಿಯಲ್ಲಿಯೇ, ಮಹಿಳೆಯರು ಬಸಿರು, ಹೆರಿಗೆಗಳಿಗೆ ಸಂಬಧಿಸಿದ ಅನಾರೋಗ್ಯದ ಅಪಾಯಗಳಿಂದ ಸಾಯುವ ಸಾಧ್ಯತೆಗಳು ಹೆಚ್ಚು (ಹೆಚ್ಚಿನ ವಿವರಗಳಿಗಾಗಿ ತಾಯ್ತನದ ಮರಣಗಳು ಉಪಶೀರ್ಷಿಕೆಯಡಿಯಲ್ಲಿ ನೋಡಿ). ಅಲ್ಲದೇ ಇದೇ ಅವಧಿಯಲ್ಲಿ ಮಹಿಳೆಯರು ವರದಕ್ಷಿಣೆ, ವೈವಾಹಿಕ ಹಿಂಸೆ, ಲೈಂಗಿಕ ದೌರ್ಜನ್ಯಗಳ ಹಾಗೂ ಇನ್ನಿತರ ಕಾರಣಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಾರೆ ಎಂಬುದನ್ನು ಪ್ರಜನನ ವಯೋಮಾನದ ಮಹಿಳೆಯಲ್ಲಿರುವ ಹೆಚ್ಚಿನ ಮರಣ ಸಂಖ್ಯಾ ಪ್ರಮಾಣವು ಸೂಚಿಸುತ್ತದೆ (ಕರ್ನಾಟಕ ಅಂಕಿ ಸಂಖ್ಯೆಗಳಿಗೆ ಇದೇ ಲೇಖಕಿಯ ಮಹಿಳೆ ಮತ್ತು ಆರೋಗ್ಯ ಕೃತಿಯ ೧೦ನೇ ಪುಟವನ್ನು ನೋಡಿ).

ಇಲ್ಲಿ, ಸಾಮಾನ್ಯವಾಗಿ ಯಾರ ಗಮನಕ್ಕೂ ಬಾರದ ಅಂಶವೆಂದರೆ ಪ್ರಜನನ ವಯೋಮಾನದ (೧೪ ರಿಂದ ೪೯ ವರ್ಷಗಳು) ಸ್ತ್ರೀಯರ ಒಟ್ಟು ಮರಣ ಸಂಖ್ಯೆಯಲ್ಲಿ ಶೇಕಡ ೫೦ಕ್ಕಿಂತಾ ಹೆಚ್ಚು ಮರಣಗಳು ಹೆರಿಗೆ ಮತ್ತು ತಾಯ್ತನಕ್ಕೆ ಹೊರತಾದ ಕಾರಣಗಳಿಂದ ಎಂಬುದೇ ಆಗಿದೆ. ೧೯೮೧ ರಿಂದ ೧೯೯೪ರ ವರೆವಿಗೂ ಭಾರತದ ರಿಜಿಸ್ಟ್ರಾರ್‌ಜನರಲ್‌ರವರ ಕಛೇರಿಯು ನೀಡಿರುವ ಅಂಕಿ ಅಂಶಗಳು ಈ ವಿಷಯವನ್ನು ಸಾಬೀತು ಪಡಿಸುತ್ತವೆ. ಬಡವರ್ಗಗಳಲ್ಲಿಯೇ ಹೆಚ್ಚಾಗಿ ಕಂಡುಬರುವ ಶ್ವಾಸಕೋಶದ ಕ್ಷಯರೋಗವು ಪ್ರಜನನ ವಯೋಮಾನದಲ್ಲಿರುವ ಮಹಿಳೆಯರ ಮರಣಕ್ಕೆ ಕಾರಣವಾದ ಅಂಶಗಳ ಮೊದಲ ಹತ್ತು ಕಾರಣಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಶ್ವಾಸಕೋಶದ ಕ್ಷಯರೋಗ ೧೯೮೧ ರಿಂದ ೧೯೯೪ರ ಅವಧಿಯಲ್ಲಿ ಸತತವಾಗಿ ಪ್ರತಿವರ್ಷವೂ ಮೊದಲನೆಯ ಸ್ಥಾನದಲ್ಲಿಯೇ ಇತ್ತು ಎಂಬುದಿಲ್ಲಿ ಗಮನಾರ್ಹ.[3] ತೀರ ಇತ್ತೀಚಿನ ಭಾರತ ಸರ್ಕಾರದ ವರದಿಯ ಪ್ರಕಾರವೇ (೨೦೦೬) ಶ್ವಾಸಕೋಶದ ಕ್ಷಯದಿಂದ ಸಾಯುವ ಪ್ರಜನನ ವಯೋಮಾನದ ಮಹಿಳೆಯರ ಸಂಖ್ಯೆ ಹೆರಿಗೆ ಬಸಿರುಗಳಲ್ಲಿ ವಿವಿಧ ಕಾರಣಗಳಿಂದ ಸಾಯುವ ಒಟ್ಟು ಮಹಿಳೆಯರ ಸಂಖ್ಯೆಗಿಂತಲೂ ಜಾಸ್ತಿ.[4] ೧೯೯೪ರಲ್ಲಿ ಮರಣ ಕಾರಣಗಳ ಈ ಪಟ್ಟಿಯಲ್ಲಿ ಆತ್ಮಹತ್ಯೆ ಎರಡನೇ ಸ್ಥಾನ ಪಡೆದಿದ್ದರೆ, ಹೃದಯಾಘಾತ, ಸುಟ್ಟ ಗಾಯಗಳು ಮತ್ತು ಕ್ಯಾನ್ಸರ್‌ಕ್ರಮವಾಗಿ ಮೂರನೆಯ, ನಾಲ್ಕನೆಯ ಹಾಗೂ ಐದನೆಯ ಸ್ಥಾನಗಳನ್ನು ಪಡೆದಿದ್ದವು. ಇದರಿಂದ ನಿಚ್ಚಳವಾಗುವ ವಿಷಯವೆಂದರೆ ಪ್ರಜನನ ವಯೋಮಾನದ ಮಹಿಳೆಯರಲ್ಲಿ ಶೇಕಡ ೫೦ಕ್ಕಿಂತಾ ಹೆಚ್ಚು ಮರಣಗಳು ಪ್ರಜನೇತರ ಕಾರಣಗಳಿಂದ ಉಂಟಾಗುತ್ತಾ ಇದ್ದರೂ ಮಹಿಳಾ ಆರೋಗ್ಯವೆಂದರೆ ತಾಯ್ತನದ ಆರೋಗ್ಯ (Maternal health) ಎಂದೇ ನಮ್ಮ ಆರೋಗ್ಯ ಇಲಾಖೆಯ ಕಾರ್ಯನೀತಿ, ಕಾರ್ಯಯೋಜನೆ ಹಾಗೂ ಕಾರ್ಯಕ್ರಮಗಳು ಬಿಂಬಿಸುತ್ತಾ ಹೋಗುತ್ತಿವೆ. ಅಲ್ಲದೆ ನಮ್ಮ ಸಮಾಜ ಹಾಗೂ ಕುಟುಂಬಗಳಲ್ಲಿ ಸಹ ಮಹಿಳೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸಾಮಾನ್ಯವಾಗಿ ಅವಳು ತಾಯಿಯಾಗುವ ಸಂದರ್ಭದಲ್ಲಿ ಮಾತ್ರ. ಹಾಗಾಗಿ ಈ ಯುವ ಮಹಿಳೆಯರನ್ನು ಸಾವಿನ ದವಡೆಗೆ ನೂಕುವಂತಹ, ಪ್ರಜನೇತರ ಕಾಯಿಲೆಗಳು, ಮಾನಸಿಕ ಸಾಮಾಜಿಕ ಒತ್ತಡಗಳು, ದೌರ್ಜನ್ಯಗಳು ಇತ್ಯಾದಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿರುವುದನ್ನು ಈ ಅಂಕಿ ಅಂಶಗಳು ಬೆರಳು ಮಾಡಿ ತೋರಿಸುತ್ತವೆ.

ನವಜಾತ ಶಿಶುಮರಣ ಸಂಖ್ಯಾ ಪ್ರಮಾಣ

ಇದು ಜನಿಸಿದ ಇಪ್ಪತ್ತೆಂಟು ದಿನಗಳೊಳಗೇ ( ನಾಲ್ಕು ವಾರಗಳು) ಸಾಯುವ ಶಿಶುಗಳ ಸಂಖ್ಯೆ. ನಮ್ಮ ದೇಶದಲ್ಲಿ ಈ ಸಂಖ್ಯೆಯನ್ನು ಕೆಲವು ಮುಖ್ಯ ಕಾರಣಗಳಿಂದಾಗಿ ಕರಾರುವಾಕ್ಕಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಇಂದಿಗೂ ೬೦% ರಿಂದ ೭೫%ರಷ್ಟು ಹೆರಿಗೆಗಳು ಮನೆಯಲ್ಲಿಯೇ ಆಗುತ್ತಿದ್ದು ಅವುಗಳ ಜನನ ನೋಂದಣಿಯೂ ಸರಿಯಾಗಿ ಆಗದೇ ಇರುವುದರಿಂದ ನವಜಾತ ಶಿಶುಗಳ ಮರಣ ಸಂಖ್ಯಾ ಪ್ರಮಾಣ ಕರಾರುವಾಕ್ಕಾಗಿ ಲಭ್ಯವಿಲ್ಲ. ಆದರೂ ಸಹ ಆಸ್ಪತ್ರೆ ಮತ್ತಿತರ ಆರೋಗ್ಯ ಸಂಸ್ಥೆಗಳಲ್ಲಿ ಆಗುವ ಹೆರಿಗೆಗಳು ಹಾಗೂ ಸಮುದಾಯಗಳಲ್ಲಿ ನಡೆಸಿದ ಸಣ್ಣ ಪ್ರಮಾಣದ ಸರ್ವೇಕ್ಷಣಗಳು ಮತ್ತು ಸಂಶೋಧನಾ ಅಧ್ಯಯನಗಳಿಂದ ದೊರಕಿರುವ ಮಾಹಿತಿಯಿಂದ ನಮ್ಮ ದೇಶದಲ್ಲಿ ಈ ಸಂಖ್ಯೆ ಹೆಚ್ಚಾಗಿರುವುದನ್ನು ಅಂದಾಜಿಸಲಾಗಿದೆ. ಅಂತರ ರಾಷ್ಟ್ರೀಯ ಜನಸಂಖ್ಯಾ ವಿಜ್ಞಾನಗಳ ಸಂಸ್ಥೆ ಪ್ರಕಟಿಸಿರುವ ಸರ್ವೇಕ್ಷಣೆಯ ಫಲಿತಾಂಶಗಳ ಪ್ರಕಾರ ಒಂದು ಸಾವಿರ ಶಿಶುಜನನಗಳಲ್ಲಿ ೫೨.೭ರಷ್ಟು ಸಂಖ್ಯೆಯ ಮಕ್ಕಳು ಹುಟ್ಟಿದ ನಾಲ್ಕು ವಾರಗಳಲ್ಲಿಯೇ ಸಾಯುತ್ತವೆ.[5] ಇನ್ನೊಂದು ಅಂದಾಜಿನ ಪ್ರಕಾರ ಪ್ರತಿ ಐದು ಶಿಶುಮರಣಗಳಲ್ಲಿ ಮೂರು ನವಜಾತ ಶಿಶುಮರಣಗಳಾಗಿರುತ್ತವೆ. ಅಲ್ಲದೆ ನಮ್ಮ ದೇಶದಲ್ಲಿ ಹುಟ್ಟುವ ಪ್ರತಿ ಮೂರು ಮಕ್ಕಳಲ್ಲಿ ಒಂದು ಕಡಿಮೆ ಜನನ ತೂಕದೊಂದಿಗೇ ಅಂದರೆ ೨೫೦೦ಗ್ರಾಂ ಗಳಿಗಿಂತಾ ಕಡಿಮೆ ದೇಹ ತೂಕದೊಂದಿಗೇ ಅನಿಸುತ್ತದೆ.[6] ಕಡಿಮೆ ದೇಹತೂಕದ ಮಕ್ಕಳು ಒಂದು ತಿಂಗಳಿನೊಳಗೇ ಸಾಯುವ ಸಾಧ್ಯತೆಗಳು ಜಾಸ್ತಿ. ಇತ್ತೀಚಿನ ವರದಿಯೊಂದರ (೨೦೦೬) ಪ್ರಕಾರ ಕಳೆದ ಮೂವತ್ತು ವರ್ಷಗಳಿಂದ ನಮ್ಮ ದೇಶದಲ್ಲಿ ಕಡಿಮೆ ಜನನ ತೂಕದೊಂದಿಗೇ ಹುಟ್ಟುವ ಮಕ್ಕಳ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ನವಜಾತ ಶಿಶುಗಳ ಮರಣಗಳಲ್ಲಿ ಶೇಕಡ ೬೬ರಷ್ಟು ಮರಣಗಳು ಹುಟ್ಟಿದ ಮೊದಲ ವಾರದಲ್ಲಿಯೇ ಸಂಭವಿಸುತ್ತವೆ.[7] ನವಜಾತ ಶಿಶು ಮರಣಗಳಿಗೆ ಮುಖ್ಯವಾಗಿ ಬ್ಯಾಕ್ಟೀರಿಯಾ ಸೋಂಕುಗಳಿಂದ ಉಂಟಾಗುವ ರಕ್ತನಂಜೇರಿಕೆ, ಉಸಿರುಗಟ್ಟುವುದು ಹಾಗೂ ಏಳು ತಿಂಗಳಿಗೇ ಆಗುವ ಜನನಗಳೇ ಮುಖ್ಯ ಕಾರಣಗಳಾಗಿವೆ (ಕೋಷ್ಟಕ ೧ ನೋಡಿ). ಅಲ್ಲದೇ, ನವಜಾತ ಶಿಶು ಮರಣಗಳಲ್ಲಿ ಶೇಕಡ ೬೬ರಷ್ಟು ಮರಣಗಳು ಹುಟ್ಟಿದ ಮೊದಲವಾರದಲ್ಲಿ ಉಂಟಾಗುತ್ತವೆ. ಈ ಮರಣಗಳಿಗೆ ಮುಖ್ಯವಾಗಿ ಬ್ಯಾಕ್ಟೀರಿಯಾ ಸೋಂಕುಗಳಿಂದ ಉಂಟಾಗುವ ರಕ್ತನಂಜೇರಿಕೆ, ಉಸಿರುಗಟ್ಟುವಿಕೆ ಮತ್ತು ಏಳು ತಿಂಗಳಿಗೇ ಆಗುವ ಹೆರಿಗೆಗಳೇ ಕಾರಣಗಳಾಗಿವೆ (ಕೋಷ್ಟಕ-೧ ನೋಡಿ). ಇಲ್ಲಿ ಗಮನಿಸಬೇಕಾದ ಅತಿಮುಖ್ಯ ಅಂಶವೆಂದರೆ ನಮ್ಮ ದೇಶದಲ್ಲಿ ಬಡವರ್ಗಗಳಲ್ಲಿಯೇ ಮನೆಯಲ್ಲಿಯೇ ಆಗುವ ಹೆರಿಗೆಗಳ ಸಂಖ್ಯೆ ಹಾಗೂ ಕಡಿಮೆ ಜನನ ತೂಕದ ಮಕ್ಕಳ ಸಂಖ್ಯೆ ಅತ್ಯಧಿಕವಾಗಿರುವುದು.7

ಕೋಷ್ಟಕ೧: ಶಿಶುಮರಣ ಸಂಖ್ಯಾ ಪ್ರಮಾಣದಲ್ಲಿ ನವಜಾತ ಶಿಶು ಮರಣಗಳ ಪಾಲು ಹಾಗೂ ಕಾರಣಗಳು

I. ಶಿಶುಮರಣ ಸಂಖ್ಯಾ ಪ್ರಮಾಣ ಶೇಕಡಾವಾರು
i.      ಮೊದಲ ವಾರದಲ್ಲಿ ನವಜಾತ ಶಿಶು ಮರಣಗಳು ೪೮%
ii.    ನಂತರದ ಮೂರು ವಾರಗಳಲ್ಲಿ ಶಿಶು ಮರಣಗಳು ೧೭%
iii.  ನವಜಾತ ಶಿಶುವಿನ ಅವಧಿಯ ನಂತರದ ಶಿಶು ಮರಣಗಳು ೩೫%
II. ನವಜಾತ ಶಿಶು ಮರಣಗಳಿಗೆ ಕಾರಣಗಳು  
i.      ರಕ್ತ ನಂಜೇರುವಿಕೆ ೫೨%
ii.    ಉಸಿರು ಗಟ್ಟುವುದು ೨೦%
iii.  ಏಳು ತಿಂಗಳಿಗೇ ಜನನ ೧೫%
iv.  ಇನ್ನಿತರ ಕಾರಣಗಳು ೧೩%

ನಮ್ಮದೇಶದಲ್ಲಿ ಆಸ್ಪತ್ರೆಯಲ್ಲಿ ಆಗುವ ಹೆರಿಗೆಗಳ ಸಂಖ್ಯೆ ಹೆಚ್ಚಿದಾಗ ಹಾಗೂ ನವಜಾತ ಶಿಶುಗಳನ್ನು ಮರಣಕ್ಕೀಡು ಮಾಡಬಹುದಾದ ಲಕ್ಷಣಗಳಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಮತ್ತು ಆರೈಕೆಗಳು ದೊರಕಿದಾಗ ಮಾತ್ರ ನವಜಾತ ಶಿಶುಗಳ ಮರಣ ಸಂಖ್ಯೆಯನ್ನು ತಗ್ಗಿಸಹಬಹುದಾಗಿದೆ. ಅಂದರೆ ನಮ್ಮ ಜನಸಾಮಾನ್ಯ ಮಹಿಳೆಯರಿಗೆ ಉತ್ತಮ ಸರಕಾರೀ ಹೆರಿಗೆ ಆಸ್ಪತ್ರೆಗಳ ಸೌಲಭ್ಯ, ಆರೈಕೆ, ಆಹಾರ ಪೋಷಣೆ ದೊರಕಿದಲ್ಲಿ ಮಾತ್ರ ಈ ನವಜಾತ ಶಿಶು ಮರಣ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಲು ಸಾಧ್ಯ.

ಶಿಶುಮರಣ ಸಂಖ್ಯಾ ಪ್ರಮಾಣ

ಯಾವುದೇ ಒಂದು ಜನ ಸಮುದಾಯದಲ್ಲಿ ಒಂದು ವರ್ಷದ ಅವಧಿಯಲ್ಲಿ ಹುಟ್ಟುವ ಪ್ರತಿ ಸಾವಿರ ಶಿಶುಗಳಲ್ಲಿ ಒಂದು ವರ್ಷ ವಯಸ್ಸಾಗುವುದರೊಳಗೇ ಸಾಯುವ ಮಕ್ಕಳ ಸಂಖ್ಯೆಯೇ ಶಿಶು ಮರಣ ಸಂಖ್ಯಾ ಪ್ರಮಾಣ. ೧೯೯೦ರಿಂದ ೨೦೦೧ ವರೆಗಿನ ಶಿಶು ಮರಣ ಸಂಖ್ಯಾ ಪ್ರಮಾಣವನ್ನು ಪರಿಶೀಲಿಸಿದಾಗ ೧೯೯೧ ಹಾಗೂ ೧೯೯೪ರನ್ನು ಹೊರತುಪಡಿಸಿ, ಇನ್ನಿತರ ವರ್ಷಗಳಲ್ಲಿ ಸತತವಾಗಿ ಗಂಡುಮಕ್ಕಳ ಸಂಖ್ಯೆಗಿಂತ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಾಗಿರುವುದು ಗಮನಿಸಬೇಕಾದ ಅಂಶವಾಗಿದೆ (ಕೋಷ್ಟಕ-೨ ನೋಡಿ). ಹೆಣ್ಣು ಶಿಶುಗಳು ಜೈವಿಕವಾಗಿ ಗಂಡು ಶಿಶುಗಳಿಗಿಂತಾ ಹೆಚ್ಚು ಬಲವಾಗಿದ್ದು ಬದುಕಿ ಉಳಿಯುವ ಸುಪ್ತ ಸಾಮರ್ಥ್ಯವನ್ನು ಪ್ರಕೃತಿಯಿಂದಲೇ ಪಡೆದಿರುತ್ತವೆ. ವಸ್ತುಸ್ಥಿತಿ ಹೀಗಿದ್ದರೂ ಸಹ ಹೆಣ್ಣು ಶಿಶುಗಳ ಆಹಾರ ಪೋಷಣೆ, ಆರೋಗ್ಯ ಅಲಕ್ಷ್ಯಕ್ಕೆ ಒಳಗಾಗುತ್ತಿರುವುದರಿಂದ ಅವು ಒಂದು ವರ್ಷದೊಳಗೇ ಗಂಡು ಮಕ್ಕಳಿಗಿಂತಾ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದು ಈ ಅಂಕಿ ಅಂಶಗಳು ನಮ್ಮ ಸಮಾಜದಲ್ಲಿ ಬೇರೂರಿರುವ ಲಿಂಗ ಪಕ್ಷಪಾತೀ ಧೋರಣೆಗೆ ದ್ಯೋತಕವಾಗಿದೆ.

ಕಳೆದ ಐದು ದಶಕಗಳಲ್ಲಿ ಶಿಶುಮರಣ ಸಂಖ್ಯಾ ಪ್ರಮಾಣವನ್ನು ನಮ್ಮ ದೇಶದಲ್ಲಿ ಗಣನೀಯವಾಗಿ ತಗ್ಗಿಸಲಾಗಿದೆ. ೧೯೫೧ರಲ್ಲಿ ಈ ಸಂಖ್ಯೆ ೧೪೬ರಷ್ಟಿದ್ದು ಇದನ್ನು ೨೦೦೨ರಲ್ಲಿ ೬೪ಕ್ಕೆ ಇಳಿಸಲಾಗಿದೆ.[8] ಆದರೂ ಸಹ ಈ ಪ್ರಗತಿಯ ವೇಗ ನಿರೀಕ್ಷೆಗಿಂತ ಕಡಿಮೆಯಾಗಿದೆ ಹಾಗೂ ೧೯೯೦ರಿಂದ ಈಚೆಗೆ ಶಿಶುಮರಣ ಸಂಖ್ಯಾ ಪ್ರಮಾಣದಲ್ಲಿ ಹೆಚ್ಚಿನ ಇಳಿತವಿಲ್ಲದೆ ಸರಿಸುಮಾರು ಒಂದೇ ಮಟ್ಟದಲ್ಲಿದೆ ಎಂಬುದು ಯೋಜನಾ ಆಯೋಗದ ಪ್ರಕಟನೆಯಲ್ಲಿ ವ್ಯಕ್ತವಾದ ಅಭಿಪ್ರಾಯವಾಗಿದೆ.7

೨೦೦೧ಕ್ಕೆ ಕೊನೆಗೊಂಡ ಒಂಬತ್ತನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಶಿಶುಮರಣ ಸಂಖ್ಯಾ ಪ್ರಮಾಣವನ್ನು ತಗ್ಗಿಸಲು ಇರಿಸಿಕೊಂಡಿದ್ದ ಗುರಿಯನ್ನು ತಲುಪಲು ಇನ್ನೂ ಸಾಧ್ಯವಾಗಿಲ್ಲ. ಹತ್ತನೆಯ ಪಂಚವಾರ್ಷಿಕ ಯೋಜನೆಯಲ್ಲಿ (೨೦೦೨-೦೭) ಶಿಶು ಮರಣ ಸಂಖ್ಯಾ ಪ್ರಮಾಣವನ್ನು ಪ್ರತಿ ಸಾವಿರ ಶಿಶು ಜನನಗಳಿಗೆ ೪೫ಕ್ಕೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದ್ದು ಅದನ್ನೂ ಸಾಧಿಸಲಾಗಿಲ್ಲ. ಇನ್ನೂ ಹನ್ನೊಂದನೆಯ ಪಂಚವಾರ್ಷಿಕ

ಕೋಷ್ಟಕ೨ : ಭಾರತದಲ್ಲಿ ಶಿಶು ಮರಣ ಸಂಖ್ಯಾ ಪ್ರಮಾಣ ೧೯೯೦೨೦೦೧

ವರ್ಷ ಹೆಣ್ಣು ಶಿಶುಗಳು ಗಂಡು ಶಿಶುಗಳು ಅಂತರ ಒಟ್ಟು
೧೯೯೦ ೮೧ ೭೮ ೮೦
೧೯೯೧* ೮೦ ೮೧ ೮೦
೧೯೯೧* ೮೦ ೮೧ ೮೦
೧೯೯೨* ೮೦ ೭೯ ೭೯
೧೯೯೩* ೭೫ ೭೩ ೭೪
೧೯೯೪* ೭೩ ೭೫ ೭೪
೧೯೯೫* ೭೬ ೭೩ ೭೪
೧೯೯೬* ೭೩ ೭೧ ೭೨
೧೯೯೭* ೭೩ ೭೦ ೭೧
೧೯೯೮ ೭೩ ೭೦ ೭೨
೧೯೯೯ ೭೧ ೭೦ ೭೦
೨೦೦೦ ೬೯ ೬೭ ೬೮
೨೦೦೧ ೬೮ ೬೪ ೬೬

ಮೂಲ: Sample and Census Registration Systems (Various Years) Office of Registrar General India. Excludes Jammu and Kashmir Quoted from Ref. No. 7, Page. 25

ಯೋಜನೆಯಲ್ಲಿ (೨೦೦೮-೨೦೧೨) ಈ ಸಂಖ್ಯೆಯನ್ನು ೨೮ಕ್ಕೆ ಇಳಿಸುವ ಗುರುತರವಾದ ಗುರಿಯನ್ನು ಇರಿಸಿಕೊಳ್ಳಲಾಗಿದೆ.[9] ಈ ಗುರಿಯನ್ನು ತಲುಪಬೇಕಾದಲ್ಲಿ ನಮ್ಮ ದೇಶದ ತಾಯಿಯರ ಆಹಾರ ಪೋಷಣೆಯನ್ನು ತುರ್ತಾಗಿ ಉತ್ತಮಪಡಿಸುವುದರೊಂದಿಗೆ ತಾಯಿ ಮತ್ತು ಮಕ್ಕಳ ಆರೋಗ್ಯ ಸೌಲಭ್ಯಗಳನ್ನು ತುರ್ತಾಗಿ ಅಭಿವೃದ್ಧಿ ಪಡಿಸಿ ತಾಯಿ ಮತ್ತು ಮಕ್ಕಳಿಗೆ ತಲುಪುವಂತೆ ಅದರಲ್ಲಿಯೂ ಗ್ರಾಮೀಣ ಬಡ ಜನತೆಗೆ ತಲುಪುವಂತೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಾಗುತ್ತದೆ.

ಮಕ್ಕಳ ಮರಣ ಸಂಖ್ಯಾ ಪ್ರಮಾಣ

ಒಂದು ವರ್ಷದಲ್ಲಾಗುವ ಒಂದು ಸಾವಿರ ಜೀವಂತ ಶಿಶು ಜನನಗಳಿಗೆ ಪ್ರತಿಯಾಗಿ ಅದೇ ವರ್ಷ ಸಾಯುವ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆಯೇ ಇದು. ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ (೧೯೯೯) ನಮ್ಮ ದೇಶದಲ್ಲಿ ಹುಟ್ಟುವ ಸಾವಿರ ಮಕ್ಕಳಲ್ಲಿ ೧೦೮ ಮಕ್ಕಳು ೫ ವರ್ಷ ತುಂಬುವುದರೊಳಗೇ ಕಣ್ಮುಚ್ಚುತ್ತಾರೆ ( ಈ ಸಂಖ್ಯೆಯಲ್ಲಿ ನವಜಾತ ಹಾಗೂ ಶಿಶುಮರಣ ಸಂಖ್ಯೆಯೂ ಸೇರಿದೆ ಎಂಬುದನ್ನು ಗಮನಿಸಬೇಕು).9 ಆದರೆ ನಮ್ಮ ದೇಶದ ಸರ್ಕಾರೀ ಅಂಕೆ ಸಂಖ್ಯೆಗಳ ಪ್ರಕಾರ ಮಕ್ಕಳ ಮರಣ ಸಂಖ್ಯಾ ಪ್ರಮಾಣ. ೧೯೮೯ರಲ್ಲಿ ೩೮.೪ರಷ್ಟಿತ್ತು. ೨೦೦೧ರಲ್ಲಿ ೭೧.೧ರಷ್ಟಾಗಿದೆ. ಅಂದರೆ ಮರಣ ಸಂಖ್ಯಾ ಪ್ರಮಾಣ ಹೆಚ್ಚಾಗಿದೆ.[10] ಮುಂಬೈನಲ್ಲಿರುವ ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನಗಳ ಸಂಸ್ಥೆಯ ಹಲವಾರು ಸಂಶೋಧನಾ ಸಂಸ್ಥೆಗಳ ಸಹಯೋಗದಲ್ಲಿ ದೆಹಲಿಯನ್ನೂ ಒಳಗೊಂಡಂತೆ ನಮ್ಮ ದೇಶದ ೨೪ ರಾಜ್ಯಗಳಲ್ಲಿ ಮೊದಲನೆಯ ರಾಷ್ಟ್ರೀಯ ಕುಟುಂಬ ಆರೋಗ್ಯ ಪರಿಸ್ಥಿತಿಯ ಬಗ್ಗೆ ವರದಿಗಳನ್ನು ಪ್ರಕಟಿಸಿದೆ. ೧೯೯೮-೯೯ರಲ್ಲಿ ಅದು ಪುನಃ ತನ್ನ ಎರಡನೆಯ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇಕ್ಷೆಣೆಯ ವರದಿಗಳನ್ನು ಪ್ರಕಟಿಸಿದೆ. ಈ ಎರಡೂ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇಕ್ಷಣೆಗಳ ವರದಿಗಳ ಪ್ರಕಾರ ಮಕ್ಕಳ ಮರಣ ಸಂಖ್ಯೆ ಪ್ರಮಾಣವು ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಹಾಗೂ ಇಡೀ ದೇಶದಲ್ಲಿ ಗಂಡುಮಕ್ಕಳಿಗೆ ತಮ್ಮ ಕುಟುಂಬದಲ್ಲಿರುವ ಪ್ರಾಮುಖ್ಯತೆ ಮತ್ತು ಆದ್ಯತೆಗಳನ್ನು ಸಾರಿ ಹೇಳುತ್ತವೆ. ಎರಡನೆಯ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇಕ್ಷಣೆಯ ವರದಿಯಂತೂ ಒಂದರಿಂದ ನಾಲ್ಕು ವರ್ಷದೊಳಗಿನ ವಯೋಮಾನದ ಮಕ್ಕಳಲ್ಲಿ ಹೆಣ್ಣು ಮಕ್ಕಳು ಸಾಯುವ ಸಾಧ್ಯತೆಗಳು ಗಂಡುಮಕ್ಕಳಿಗಿಂತಾ ಶೇ.೫೦ರಷ್ಟು ಜಾಸ್ತಿಯಿರುವುದನ್ನು ಎತ್ತಿತೋರಿದೆ.10

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಬಡಮಕ್ಕಳಲ್ಲಿ ಅದರಲ್ಲಿಯೂ ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳಲ್ಲಿ ನ್ಯೂನ ಪೋಷಣೆ, ಶಿಶುಮರಣ ಸಂಖ್ಯೆ ಹಾಗೂ ಮಕ್ಕಳ ಮರಣ ಸಂಖ್ಯಾ ಪ್ರಮಾಣಗಳು ಇತರ ಸಾಮಾನ್ಯ ವರ್ಗದ ಮಕ್ಕಳಿಗೆ ಹೋಲಿಸಿದಲ್ಲಿ ಅತಿ ಹೆಚ್ಚಾಗಿದೆ. ಉದಾಹರಣೆಗೆ ನಮ್ಮ ರಾಷ್ಟ್ರೀಯ ಆರೋಗ್ಯ ಕಾರ್ಯನೀತಿಯ (೨೦೦೧) ಕರಡಿನ ಅಂಕಿ ಸಂಖ್ಯೆಗಳ ಪ್ರಕಾರ ಭಾರತದಲ್ಲಿ ಸಾಮಾನ್ಯ ವರ್ಗದ ಮಕ್ಕಳಲ್ಲಿ ಶಿಶುಮರಣ ಸಂಖ್ಯೆ ೬೨ ರಷ್ಟಿದ್ದರೆ ಪರಿಶಿಷ್ಟ ಪಂಗಡ ಬುಡಕಟ್ಟುಗಳಲ್ಲಿ ೮೪.೨ರಷ್ಟಿದೆ. (ಕೋಷ್ಟಕ-೩ ನೋಡಿ) ಹಾಗೆಯೇ ಮಕ್ಕಳ ಮರಣ ಸಂಖ್ಯಾ ಪ್ರಮಾಣ ಇತರ ವರ್ಗಗಳಲ್ಲಿ ೮೨.೬ರಷ್ಟು ಇದ್ದರೆ ಪರಿಶಿಷ್ಟ ಪಂಗಡ ಬುಡಕಟ್ಟುಗಳಲ್ಲಿ ೧೦೩ರ ಸಂಖ್ಯೆಯನ್ನು ಮುಟ್ಟಿದೆ. ಇದಕ್ಕೆ ದುರ್ಬಲ ವರ್ಗಗಳು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳಿಗೆ ಗುರಿಯಾಗಿರುವುದೇ ಆಗಿದೆ. ಆದರೆ ಈ ದುರ್ಬಲ ವರ್ಗಗಳಲ್ಲಿ ಹೀಗೆ ಒಂದು ಮತ್ತು ಐದು ವರ್ಷದೊಳಗೆ ಸಾಯುವ ಮಕ್ಕಳಲ್ಲಿ ಹಣ್ಣು ಮಕ್ಕಳ ಹಾಗೂ ಗಂಡುಮಕ್ಕಳ ಸಂಖ್ಯೆಯನ್ನು ಬೇರ್ಪಡಿಸಿ ನೋಡಿದಲ್ಲಿ ಈ ವರ್ಗಗಳಲ್ಲೂ ಲಿಂಗತ್ವ ತಾರತಮ್ಯ ಕಂಡುಬರಬಹುದು. ಆದರೆ ಪ್ರಸ್ತುತ ಇಂತಹ ಲಿಂಗತ್ವಾಧಾರಿತ ಮರಣ ಸಂಖ್ಯಾ ಪ್ರಮಾಣಗಳ ಇತ್ತೀಚಿನ ಮಾಹಿತಿ ಲಭ್ಯವಿಲ್ಲ.

ಕೋಷ್ಟಕ೩: ವಿಭಿನ್ನ ಸಾಮಾಜಿಆರ್ಥಿಕ ಗುಂಪುಗಳ ಆರೋಗ್ಯ ಸೂಚಕಗಳಲ್ಲಿ ಕಂಡುಬಂದಿರುವ ಸಾಮಾಜಿಕ ಅಸಮಾನತೆ/ಅನ್ಯಾಯ ಆರೋಗ್ಯ ಸೂಚಕಗಳು

ಶಿಶುಮರಣ

ಸಂಖ್ಯೆ / ೧೦೦೦ಕ್ಕೆ

ಐದು ವರ್ಷದೊಳಗಿನ

ಮಕ್ಕಳ ಮರಣ ಸಂಖ್ಯೆ

ಕಡಿಮೆ ದೇಹ ತೂಕದ ಮಕ್ಕಳ ಶೇಕಡಾವಾರು ಸಂಖ್ಯೆ
ಭಾರತ ೭೦ ೯೪.೯ ೪೭%
ಪರಿಶಿಷ್ಟ ಜಾತಿ ೮೩ ೧೧೯.೩ ೫೩.೫%
ಪರಿಶಿಷ್ಟ ಬುಡಕಟ್ಟು ೮೭.೨ ೧೨೬.೩ ೫೫.೯%
ಇತರ ದುರ್ಬಲರು ೭೬ ೧೦೩.೧ ೪೭.೩%
ಇತರರು ೬೧.೮೦ ೮೨.೩ ೪೧.೧%

ಮೂಲ: Droft National Health Policy 2001
 http//www.mohf.w.nic.in/np2001.htm

ತಾಯಿಯರ ಮರಣ ಸಂಖ್ಯಾ ಪ್ರಮಾಣ

ಇದು ಒಂದು ವರ್ಷದಲ್ಲಿ ಹುಟ್ಟುವ ೧೦೦,೦೦೦ ಶಿಶುಗಳಿಗೆ ಪ್ರತಿಯಾಗಿ ಬಸಿರು ಹಾಗೂ ಹೆರಿಗೆಗೆ ಸಂಬಂಧಿಸಿದ ಕಾರಣಗಳಿಂದ ಮರಣ ಹೊಂದಿದ ಮಹಿಳೆಯರ ಸಂಖ್ಯೆಯನ್ನು ತೋರಿಸುತ್ತದೆ. ಇಡೀ ಆಗ್ನೇಯ ಏಷ್ಯಾದಲ್ಲಿ ಅತಿಹೆಚ್ಚು ತಾಯ್ತನದ ಮರಣಗಳುಂಟಾಗುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ನಮ್ಮ ದೇಶದ ತಾಯಿಯರ ಮರಣ ಸಂಖ್ಯಾ ಪ್ರಮಾಣ ೪೦೭ರಷ್ಟಿದ್ದು ಇದು ಟೈಮೂರ್‌ಲೆಸ್ತೆ ದೇಶದಲ್ಲಿನ ೮೦೦ ಹಾಗೂ ನೇಪಾಳದ ೪೧೫ ರಷ್ಟು ಇರುವ ಮರಣ ಸಂಖ್ಯೆಯ ನಂತರದ ಸ್ಥಾನ ಪಡೆದಿದೆ.[11] ಇದು ಭಾರತದಂತಹ ದೊಡ್ಡ ಪ್ರಜಾಪ್ರಭುತ್ವಕ್ಕೆ ಗೌರವ ತರುವ ವಿಷಯವಲ್ಲ. ೧೯೯೧ರಲ್ಲಿ ೪೦೮ರಷ್ಟು ಇದ್ದ ತಾಯಿರ ಮರಣ ಸಂಖ್ಯಾ ೨೦೦೧ರಲ್ಲಿ ೪೦೭ಕ್ಕೆ ಮಾತ್ರ ತಗ್ಗಿರುವುದು, ನಮ್ಮ ದೇಶದಲ್ಲಿ ಮಹಿಳಾ ಆರೋಗ್ಯ ಪ್ರಗತಿಯು ಆಮೆಯ ವೇಗದಲ್ಲಿ ಸಾಗುತ್ತಿರುವುದಕ್ಕೆ ಸಾಕ್ಷಿ. ಹತ್ತನೆಯ ಪಂಚವಾರ್ಷಿಕ ಯೋಜನೆಯನ್ನು ಕುರಿತ ಸರ್ಕಾರೀ ಪ್ರಕಟನೆಯೇ ಕಳೆದ ಮೂವತ್ತು ವರ್ಷಗಳಲ್ಲಿ ತಾಯ್ತನದ ಮರಣ ಸಂಖ್ಯಾ ಪ್ರಮಾಣದಲ್ಲಿ ಯಾವುದೇ ಹೆಚ್ಚಿನ ಬದಲಾವಣೆಯಿಲ್ಲದೇ ಇರುವುದನ್ನು ಗುರ್ತಿಸಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ತಾಯಿಯರ ಮರಣ ಸಂಖ್ಯೆಯನ್ನು ತಗ್ಗಿಸುವ ಹಲವಾರು ಆರೋಗ್ಯ ಕಾರ್ಯಕ್ರಮಗಳು ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಾಗೂ ಇನ್ನಿತರ ಒಂದೆರಡು ರಾಜ್ಯಗಳಲ್ಲಿ ಯಶಸ್ಸನ್ನು ತಕ್ಕಮಟ್ಟಿಗೆ ಪಡೆದಿದ್ದರೂ ಸಹ ಉತ್ತರ ಭಾರತದ BIMARU ಎಂದೇ ಗುರ್ತಿಸಲಾಗಿರುವ ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ, ಆಸ್ಸಾಂ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಮಹಿಳಾ ಆರೋಗ್ಯದ ಕಾರ್ಯಕ್ರಮಗಳು ಸರಿಯಾಗಿ ನಡೆಯದೆ ಹಿನ್ನಡೆಯುಂಟಾಗುತ್ತಿರುವುದೇ ಒಟ್ಟು ಭಾರತ ದೇಶದ ತಾಯ್ತನದ ಮರಣಗಳ ಸಂಖ್ಯಾ ಪ್ರಮಾಣ ಕಡಿಮೆಯಾಗದಿರಲು ಕಾರಣವಾಗಿದೆ. ಉತ್ತಮವಾದ ಆಡಳಿತ ಅದರಲ್ಲಿಯೂ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಆಡಳಿತ ಹಾಗೂ ರಾಜಕೀಯ ಇಚ್ಛಾಶಕ್ತಿಯಿಲ್ಲದಿದ್ದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ (ಕೋಷ್ಟಕ-೪ ನೋಡಿ).೧೨

ನಮ್ಮ ದೇಶದಲ್ಲಿ ಹೆಚ್ಚಾಗಿರುವ ತಾಯಿಯರ ಮರಣಸಂಖ್ಯಾ ಪ್ರಮಾಣಕ್ಕೆ ಮೊಟ್ಟ ಮೊದಲ ಐದು ಕಾರಣಗಳೆಂದರೆ ಕ್ರಮವಾಗಿ, ಬಸಿರು ಹಾಗೂ ಹೆರಿಗೆಯ ನಂತರದ ರಕ್ತಸ್ರಾವ, ರಕ್ತಹೀನತೆ, ರಕ್ತನಂಜೇರುವಿಕೆ, ಹೆರಿಗೆಯ ನಂತರದ ಸೋಂಕುಗಳು ಮತ್ತು ಗರ್ಭಪಾತ (ಕೋಷ್ಟಕ-೫ ನೋಡಿ). ತಾಯಿಯರ ಮರಣಗಳ ಮೊಟ್ಟ ಮೊದಲ ಕಾರಣವಾದ ರಕ್ತಸ್ರಾವ ನೇರವಾಗಿ ಪ್ರಸವಕ್ಕೇ ಸಂಬಂಧಿಸಿದ್ದರೂ ಸಹ ಅದರಿಂದ ಉಂಟಾಗುವ ಸಾವುಗಳಿಗೆ ಬಹಳಷ್ಟು ಮಟ್ಟಿಗೆ ರಕ್ತಹೀನತೆಯೇ ಅಪ್ರತ್ಯಕ್ಷ್ಯ ಕಾರಣವಾಗಿದೆ. ನಮ್ಮ ದೇಶದ ಮಹಿಳೆಯರಲ್ಲಿ ಅರ್ಧಕ್ಕಿಂತಾ ಹೆಚ್ಚು ಮಂದಿ ರಕ್ತಹೀನತೆಯಿಂದ ನರಳುತ್ತಿದ್ದು ಹಾಗೂ ಇನ್ನುಳಿದ ಸ್ತ್ರೀಯರಲ್ಲಿ ಅನೇಕರು ಸಹ ರಕ್ತಹೀನತೆಯ ಅಂಚಿನಲ್ಲಿಯೇ ಇರುವುದರಿಂದ ಬಸುರಿನ ಅವಧಿಯಲ್ಲಿ ರಕ್ತಹೀನತೆಯ ಪ್ರಮಾಣ ಹೆಚ್ಚುವುದರಲ್ಲಿ ಸಂಶಯವಿಲ್ಲ.[12] ಹಾಗಾಗಿಯೇ ನಮ್ಮ ದೇಶದ ಗರ್ಭಿಣಿಯರಲ್ಲಿ ಶೇ. ೮೦ ರಿಂದ ಶೇ. ೮೮ ಮಂದಿ ರಕ್ತಹೀನತೆಯಿಂದ ನರಳುತ್ತಿದ್ದಾರೆ. ಇಂತಹವರಲ್ಲಿ ಸಾಧಾರಣ ಹಾಗೂ ತೀವ್ರ ರಕ್ತಹೀನತೆಯಿರುವ ತಾಯಿಯರಲ್ಲಿ ಹೆರಿಗೆಯಲ್ಲಿ ಉಂಟಾಗುವ ೧೫೦ ಮಿಲಿ. ಲೀಟರ್‌ರಕ್ತಸ್ರಾವ ಸಹ ಅವರನ್ನು ಸಾವಿನ ದವಡೆಗೆ ತಳ್ಳಬಹುದಾಗಿದೆ.[13]

ಕೋಷ್ಟಕ೪: ಭಾರತದಲ್ಲಿ ತಾಯ್ತನದ ಮರಣಗಳ ಸಂಖ್ಯಾ ಪ್ರಮಾಣ : ೧೯೯೮

ರಾಜ್ಯಗಳು ಮರಣ ಸಂಖ್ಯಾ ಪ್ರಮಾಣ
೧. ಉತ್ತರ ಪ್ರದೇಶ ೭೦೭
೨. ರಾಜಸ್ಥಾನ ೬೭೦
೩. ಮಧ್ಯಪ್ರದೇಶ ೪೬೮
೪. ಬಿಹಾರ ೪೫೨
೫. ಅಸ್ಸಾಂ ೪೦೯
೬. ಒರಿಸ್ಸಾ ೩೬೭
೭. ಪಶ್ಚಿಮ ಬಂಗಾಳ ೨೬೬
೮. ಪಂಜಾಬ್‌ ೧೯೯
೯. ಕೇರಳ ೧೯೮
೧೦. ಕರ್ನಾಟಕ ೧೯೫
೧೧. ಆಂಧ್ರಪ್ರದೇಶ ೧೫೯
೧೨. ಮಹಾರಾಷ್ಟ್ರ ೧೩೫
೧೩. ಹರಿಯಾಣ ೧೦೩
೧೪. ತಮಿಳುನಾಡು ೭೯
೧೫. ಗುಜರಾತ್‌ ೨೮
೧೬. ಅರುಣಾಚಲ ಪ್ರದೇಶ ಅಂಕಿ ಸಂಖ್ಯೆ ಲಭ್ಯವಿಲ್ಲ
೧೭. ಗೋವಾ ಅಂಕಿ ಸಂಖ್ಯೆ ಲಭ್ಯವಿಲ್ಲ
೧೮. ಮಣಿಪುರ ಅಂಕಿ ಸಂಖ್ಯೆ ಲಭ್ಯವಿಲ್ಲ
೧೯. ಮೇಘಾಲಯ ಅಂಕಿ ಸಂಖ್ಯೆ ಲಭ್ಯವಿಲ್ಲ
೨೦. ಮಿಜೋರಾಂ ಅಂಕಿ ಸಂಖ್ಯೆ ಲಭ್ಯವಿಲ್ಲ
೨೧. ನಾಗಾಲ್ಯಾಂಡ್‌ ಅಂಕಿ ಸಂಖ್ಯೆ ಲಭ್ಯವಿಲ್ಲ
೨೨. ಹಿಮಾಚಲ ಪ್ರದೇಶ ಅಂಕಿ ಸಂಖ್ಯೆ ಲಭ್ಯವಿಲ್ಲ
೨೩. ಜಮ್ಮು ಮತ್ತು ಕಾಶ್ಮೀರ ಅಂಕಿ ಸಂಖ್ಯೆ ಲಭ್ಯವಿಲ್ಲ
೨೪. ಸಿಕ್ಕಿಂ ಅಂಕಿ ಸಂಖ್ಯೆ ಲಭ್ಯವಿಲ್ಲ
೨೫. ತ್ರಿಪುರಾ ಅಂಕಿ ಸಂಖ್ಯೆ ಲಭ್ಯವಿಲ್ಲ
೨೬. ಏಳು ಕೇಂದ್ರಾಡಳಿತ ಪ್ರದೇಶಗಳು ಅಂಕಿ ಸಂಖ್ಯೆ ಲಭ್ಯವಿಲ್ಲ
ಭಾರತ ೪೦೭

ಮೂಲ: Sample Registration System, Office of Registrar General. India

ಟಿಪ್ಪಣಿ: ಬಿಹಾರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳ ಅಂಕಿಅಂಶಗಳಲ್ಲಿ, ಹೊಸದಾಗಿ ರಚನೆಯಾಗಿರುವ ರಾಜ್ಯಗಳಾದ ಜಾರ್ಖಂಡ್‌, ಛತ್ತೀಸ್‌ಘಡ್‌ಮತ್ತು ಉತ್ತರಾಂಚಲ ರಾಜ್ಯಗಳ ಅಂಕಿ ಅಂಶಗಳು ಅನುಕ್ರಮವಾಗಿ ಸೇರಿವೆ.

ಗ್ರಂಥಋಣ: ಸಂಖ್ಯೆ. ೧೨, ಪು. ೩೦.

ಕೋಷ್ಟಕ೫: ಬಸಿರು ಹಾಗೂ ಹೆರಿಗೆಯಲ್ಲಿ ವಿವಿಧ ಕಾರಣಗಳಿಂದ ಸತ್ತ ಗ್ರಾಮೀಣ ತಾಯಿಯರ ಶೇಕಡಾವಾರು ಸಂಖ್ಯೆ ೧೯೮೯೧೯೯೮

ಕಾರಣಗಳು ೧೯೯೩ ೧೯೯೪ ೧೯೯೫ ೧೯೯೬ ೧೯೯೭ ೧೯೯೮
೧. ಬಸುರಿನ ಅವಧಿಯಲ್ಲಿ ಮತ್ತು ಹೆರಿಗೆಯ ನಂತರದ ರಕ್ತಸ್ರಾವ ೨೨.೬ ೨೩.೭ ೨೮.೯ ೨೬.೪ ೨೪.೭ ೨೩.೩
೨. ರಕ್ತಹೀನತೆ (ಅನೀಮಯ) ೨೦.೩ ೧೯.೩ ೧೭.೦ ೧೫.೮ ೧೫.೭ ೨೩.೭
೩. ಬಸುರಿನ ನಂಜೇರುವಿಕೆ ೧೨.೮ ೧೩.೧ ೭.೯ ೧೧.೫ ೧೦.೫ ೯.೯
೪. ಹೆರಿಗೆಯ ನಂತರದ ಸೋಂಕುಗಳು ೧೨.೫ ೧೦.೯ ೮.೫ ೧೪.೦ ೧೦.೨ ೯.೫
೫. ಗರ್ಭಪಾತ ೧೧.೭ ೧೨.೬ ೧೭.೬ ೯.೦ ೮.೭ ೧೨.೪
೬. ಹೆರಿಗೆಗೆ ಮೊದಲು ಶಿಶುವು

ತಲೆಕೆಳಗಾಗಿ ಇಲ್ಲದಿರುವುದು

೫.೫ ೬.೪ ೪.೦ ೯.೬ ೧೧.೭ ೭.೪
೭. ವರ್ಗೀಕರಿಸಲಾಗದ ಇತರೇ ಕಾರಣಗಳು ೧೪.೬ ೧೪.೨ ೧೪.೧ ೧೩.೭ ೧೮.೪ ೧೩.೮
ಒಟ್ಟು ಮೊತ್ತ ೧೦೦ ೧೦೦ ೧೦೦ ೧೦೦ ೧೦೦ ೧೦೦

ಮೂಲ: Survey of causes of Death Office of Registrar General India. Original table Slighty modified.

ಟಿಪ್ಪಣಿ: ಆಯ್ಕೆ ಮಾಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಡಿಯಲ್ಲಿ ಬರುವ ಸ್ಯಾಂಪಲ್‌ಹಳ್ಳಿಗಳಲ್ಲೇ ಸತತವಾಗಿ ಸಮೀಕ್ಷೆಯನ್ನು ನಡೆಸಲಾಗಿತ್ತು. ೧೯೯೮ರಲ್ಲಿ ೨೦೫೯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಳ್ಳಿಗಳನ್ನು ಸಮೀಕ್ಷೆ ಮಾಡಲಾಗಿದ್ದು ೪೦, ೩೫೧ ಸಾವುಗಳು ವರದಿಯಾಗಿದ್ದು ಅವುಗಳ ಕಾರಣಗಳನ್ನು ಗುರ್ತಿಸಲಾಗಿತ್ತು.

 

[1] Malhotra Mahindra, “Gender budgeting and audit Health issues’’ in Pro-ceedings of National Seminar on Gender statistics and Data gaps., 5th to 7th Feb 2004, Gos (undated), New Delhi. Central statitistical organization Ministary of statistics and Programme implementation, P. 76

[2] Directorate of Economics and Statistics (1997), Bangalore, quoted from GOK (1999), Human Development Report in Karnataka, 1999, UBS Publishers Bangalore. P.5.

[3] Gopalan Sarala and Mira Shiva (Eds) 2000, National Profile on Women, Health and Development, Voluntary Health Association of India, and W.H.O., Pp. 177-78,192.

[4] GOI. (2006), Platform for Action 10 Years after-India Country Report., Department of Women and Child Development., Ministry of Human Resource Development, P. 35.

[5] Pandey Arvind, Minija Kim Choe, Norman. Y Luther Damodar Sahu and Jagadish Chand (1998), Infant and child mortality in India,, (NFHS Report No. 11)International Institute of Population Studies, Mumbai P.3-4.

[6] Jejeebhoy Shireen (1997), “Maternal Mortality and Morbirdity in India. Priorities for Social Science Research’’ The Journal of Family Welfare. Vol. 43, No. 2, June, P. 37.

[7] GOI (Undated document) Tenth five Year plan 2002-07, Vol. 2., Planning Commission New Delhi, Pp. 183, 184, 193

[8] GOI., Annual Report 2003-04, Ministry of Health and Family Welfare, Table I. P. 123

[9] UNDP (1999), Human Development Report, 1999 United Nations Development Programme, Oxford University Press, Oxford, P. 170.

[10] Shrin Ballu (2003). “Human and the girl Child’’ Health Dialogue, No. 32, Jan –March. P.6.

[11] “WHO calls for hiking Health Expenditure’’ (2005) News item Financial Express, Mumbai, 8. 4. 2005.

[12] GOI, Women and Men in India-2004, New Delhi. Central Statistical Organisation, Ministry of statistics and Programme Implementation, Pp 28-30.

[13] Chakravarty Indira and Kalapana Ghosh, “Under nutrition-a Gender related issue with particular reference to nutritional Anaemia’’ In Proceedings of the National Seminar on Gender Statistics and Data Gaps, 5-7 Feb, 2004., Central Statistical Organisations Ministry of Statistics and Programme Implementation. P. 192.