ಇನ್ನು ತಾಯಿಯರ ಮರಣಗಳಿಗೆ ಕಾರಣಾದ ರಕ್ತನಂಜೇರಿಕೆಯು, ಬಸುರಿನ ಅವಧಿಯಲ್ಲಿ ಉಂಟಾಗುತ್ತದೆ. ಇದು ಗರ್ಭಿಣಿಯ ರಕ್ತದೊತ್ತಡದ ಏರಿಕೆ, ಮೈ, ಕೈ ಕಾಲುಗಳ ಊತ ಹಾಗೂ ಜ್ವರದ ಮೂಲಕ ವ್ಯಕ್ತವಾಗುತ್ತದೆ. ತಕ್ಷಣ ಸರಿಯಾದ ವೈದ್ಯಕೀಯ ನೆರವು ಚಿಕಿತ್ಸೆಗಳು ಸಿಗದೇ ಇದ್ದಲ್ಲಿ ಇದು ಬಸುರಿಯ ಪ್ರಾಣಕ್ಕೆ ಅಪಾಯ ತರುತ್ತದೆ. ೧೯೯೮-೯೯ರಲ್ಲಿ ನಮ್ಮ ದೇಶದಲ್ಲಿ ವ್ಯಾಪಕವಾಗಿ ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇಕ್ಷಣೆಯಲ್ಲಿ, ಬಸುರಿಯರಿಗೆ ಶಿಫಾರಸ್‌ಮಾಡಲಾಗಿರುವ ಎಲ್ಲಾ ಬಗೆಯ ಮುನ್ನೆಚ್ಚರಿಕೆ ಹಾಗೂ ಆರೋಗ್ಯ ಪಾಲನಾ ಕ್ರಮಗಳನ್ನು ಅನುಸರಿಸಿದ ಮಹಿಳೆಯರ ಸಂಖ್ಯೆ ಕೇವಲ ಶೇ. ೨೦ ರಷ್ಟು ಮಾತ್ರ ಎಂದು ತಿಳಿದುಬಂದಿದೆ.

[1] ಅಂದರೆ, ನಮ್ಮ ದೇಶದಲ್ಲಿ ೮೦%ರಷ್ಟು ಗರ್ಭಿಣಿಯರ ಕುಟುಂಬ ವರ್ಗದವರು ಬಸುರಿಗೆ ಸುಖವಾಗಿ ಮೈಕಳೆಯಲು ಬೇಕಾಗುವ ಪೂರ್ತಿಯಾದ ಮುನ್ನೆಚ್ಚರಿಕೆಯ ಹಾಗೂ ಆರೋಗ್ಯ ಪಾಲನಾ ಕ್ರಮಗಳನ್ನು ಅಲಕ್ಷಿಸುತ್ತಾರೆ ಎಂದಾಯಿತು. ಪ್ರಾಥಮಿಕ ಆರೋಗ್ಯ ಸೌಲಭ್ಯಗಳಾಗಲೀ, ಆರೋಗ್ಯ ಶಿಕ್ಷಣವಾಗಲೀ ಹಾಗೂ ತಮ್ಮ ಆರೋಗ್ಯದ ಬಗ್ಗೆ ಹಾಗೂ ಆರೋಗ್ಯ ಸೌಲಭ್ಯಗಳನ್ನು ದಕ್ಕಿಸಿಕೊಳ್ಳುವಲ್ಲಿ ನಿರ್ಣಯ ತೆಗೆದುಕೊಳ್ಳಬಲ್ಲ ಆರ್ಥಿಕ, ಸಾಮಾಜಿಕ ಶಕ್ತಿಯಿಲ್ಲದೆ ಮಹಿಳೆಯರು ಅದರಲ್ಲಿಯೂ ಅಶಿಕ್ಷಿತರಾದವರು ಮತ್ತು ಗ್ರಾಮೀಣ ಮಹಿಳೆಯರು ಪರಾಧೀನತೆಯ ಅಸಹಾಯಕತೆಯಲ್ಲಿ ಬದುಕುತ್ತಾ ಬಸುರಿನ ಈ ಕುತ್ತಗಳನ್ನು ದಾಟಬೇಕಾಗಿದೆ.

ಹೆರಿಗೆ ಹಾಗೂ ಹೆರಿಗೆಯ ನಂತರದಲ್ಲಿ ಉಂಟಾಗುವ ಸೋಂಕುಗಳು ತಾಯಿಯರ ಮರಣಗಳಿಗೆ ನಾಲ್ಕನೆಯ ಮುಖ್ಯ ಕಾರಣವಾಗಿದೆ. ಇಂದಿಗೂ ನಮ್ಮ ದೇಶದಲ್ಲಿ ಶೇ. ೭೫ರಷ್ಟು ಹೆರಿಗೆಗಳು ಆಸ್ಪತ್ರೆ, ನರ್ಸಿಂಗ್‌ಹೋಂ ಹಾಗೂ ಇನ್ನಿತರ ಆರೋಗ್ಯ ಸಂಸ್ಥೆಗಳ ಹೊರಗೆ ಮನೆಗಳಲ್ಲಿ ಆಗುತ್ತಿರುವುದರ ನೇರ ಪರಿಣಾಮವೇ ಈ ಸೋಂಕುಗಳೆನ್ನಬಹುದು. ಶೇ. ೨೯ರಷ್ಟು ಹೆರಿಗೆಗಳನ್ನು ಆರೋಗ್ಯ ಸಂಸ್ಥೆಗಳ ಆಚೆ ವೃತ್ತಿ ನಿರತರಾದ ದಾಯಿ ಮತ್ತಿತರ ಆರೋಗ್ಯ ಕಾರ್ಯಕರ್ತರು ಮಾಡಿಸಿದರೆ, ಇನ್ನುಳಿದವುಗಳನ್ನು ಹೆರಿಗೆ ಮಾಡಿಸುವಲ್ಲಿ ಯಾವುದೇ ತರಬೇತಿಯಿಲ್ಲದ ಬಂಧುಗಳು ಅಥವಾ ಇನ್ನಿತರರು ಮಾಡಿಸುತ್ತಾರೆ.೧೨ ಇಂತಹ ಮನೆ ಹೆರಿಗೆಗಳಲ್ಲಿ ಅದರಲ್ಲಿಯೂ ಯಾವುದೇ ತರಬೇತಿಯಿಲ್ಲದವರು ಮಾಡಿಸುವ ಅತಿ ರಕ್ತ ಸ್ರಾವವಾದಲ್ಲಿ, ತಾಯಿ ರಕ್ತಹೀನತೆಯಿಂದ ಬಳಲುತ್ತಿದ್ದು ತೀರ ನಿಶ್ಯಕ್ತಳಾದಲ್ಲಿ, ಮಗು ಅಡ್ಡ ತಿರುಗಿದಲ್ಲಿ, ವೇಳೆಗೆ ಮುಂಚೆಯೇ ಮಾಸು ಅರ್ಥ ಅಥವಾ ಪೂರ್ತಿ ಕಳಚಿ ಬಂದಲ್ಲಿ, ಹೆರಿಗೆಯಾಗುವುದು ಬಲು ತಡವಾದಲ್ಲಿ ಇತ್ಯಾದಿ ಗಂಭೀರ ಸಮಸ್ಯೆಗಳು ಉಂಟಾದಲ್ಲಿ ಅವುಗಳನ್ನು ನಿರ್ವಹಿಸಿ, ಪರಿಹರಿಸುವ ಕುಶಲತೆ ಸಾಮರ್ಥ್ಯಗಳಾಗಲೀ, ಅದಕ್ಕೆ ಬೇಕಾಗುವ ಸಾಧನ ಸಾಮಗ್ರಿ ಇನ್ನಿತರ ಸೌಲಭ್ಯಗಳಾಗಲೀ ಇಲ್ಲದೇ ಇರುವಂಥಹ ಹಳ್ಳಿಗಾಡುಗಳಲ್ಲಿ ಹೆರಿಗೆ ತಾಯಿಯರಿಗೆ ಪ್ರಾಣಾಪಾಯ ತರಬಲ್ಲದು. ಆದ್ದರಿಂದ ತಾಯಿಯರ ಮರಣಗಳನ್ನು ತಗ್ಗಿಸಲು ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಿ, ಅವುಗಳನ್ನು ಸರಿಯಾಗಿ ನಿರ್ವಹಿಸಿ ಗ್ರಾಮೀಣ ಪ್ರದೇಶಗಳ ಬುಡಕಟ್ಟು ಗುಡ್ಡಗಾಡುಗಳ ಮಹಿಳೆಯರಿಗೂ ಅವು ಸರಿಯಾಗಿ ದೊರಕುವಂತೆ ಸೂಕ್ತಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವಿದೆ.

ಇನ್ನು ತಾಯ್ತನದ ಮರಣಗಳ ಐದನೆಯ ಕಾರಣ ಗರ್ಭಪಾತ. ನಮ್ಮ ದೇಶದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇ. ೮ ರಿಂದ ಶೇ. ೯ ರಷ್ಟು ತಾಯ್ತನದ ಮರಣಗಳು ಸುರಕ್ಷಿತವಲ್ಲದ ಗರ್ಭಪಾತದಿಂದಲೇ ಉಂಟಾಗುತ್ತಿರುವುದು ವರದಿಯಾಗಿದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಶೇ. ೧೨ಕ್ಕಿಂತ ಹೆಚ್ಚು ತಾಯ್ತನದ ಮರಣಗಳಿಗೆ ಗರ್ಭಪಾತವೇ ಕಾರಣವಾಗಿರುವುದು ಕಂಡುಬಂದಿದೆ (ಕೋಷ್ಟಕ ೫ ನೋಡಿ). ಭಾರತದಲ್ಲಿ ಬೇಡದ ಬಸಿರುಗಳನ್ನು ತೆಗೆದುಹಾಕಲು ನಡೆಸಲಾಗುವ ಕಾನೂನು ಬಾಹಿರ ಗರ್ಭಪಾತಗಳ ಸಂಖ್ಯೆ ನಾಲ್ಕರಿಂದ ಆರು ದಶಲಕ್ಷಗಳವರೆಗೂ ಇದೆ. ಪ್ರತಿವರ್ಷ ಇಷ್ಟೊಂದು ಸಂಖ್ಯೆಯಲ್ಲಿ ಕಾನೂನು ಬಾಹಿರವಾಗಿ ನಡೆಯುವ ಗರ್ಭಪಾತಗಳಿಂದ ಉಂಟಾಗುವ ಆರೋಗ್ಯ ಸಂಖ್ಯೆಗಳಿಂದ ನರಳುವವರ ಸಂಖ್ಯೆಯಲ್ಲಾಗಲೀ ಹಾಗೂ ಗರ್ಭಪಾತಗಳಿಂದ ಸಾಯುವವರ ಸಂಖ್ಯೆಯಲ್ಲಾಗಲೀ ಹಲವಾರು ವರ್ಷಗಳಿಂದ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಇಂದು ಹೆಣ್ಣು ಭ್ರೂಣ ಹತ್ಯೆಗಾಗಿಯೇ ನಡೆಸುತ್ತಿರುವ ಗರ್ಭಪಾತಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದ್ದು ಇದರ ನೇರ ಪರಿಣಾಮ ನಮ್ಮ ದೇಶದಲ್ಲಿ ಒಂದೇ ಸಮನೆ ಇಳಿಯುತ್ತಿರುವ ಸ್ತ್ರೀ ಸಂಖ್ಯೆಯಲ್ಲಿ ಪ್ರತಿಫಲಿತವಾಗುತ್ತಿದೆ. ಅಲ್ಲದೆ, ತಾಯಿಯ ಆರೋಗ್ಯಕ್ಕೂ ಹಾಗೂ ಜೀವಕ್ಕೆ ಅಪಾಯಕಾರಿಯಾಗಬಲ್ಲ ಸಂಭವವಿದ್ದರೂ ಸಹ ಹೆಣ್ಣು ಭ್ರೂಣ ಹತ್ಯೆಗಾಗಿ ಮಾಡಿಸಲಾಗುತ್ತಿರುವ ಗರ್ಭಪಾತಗಳ ಸಂಖ್ಯೆಯೂ ಜಾಸ್ತಿಯಾಗಿಯೇ ಇದೆ. ೧೯೯೦ರ ದಶಕದ ಆರಂಭದಲ್ಲಿಯೇ ಬಳಕೆಗೆ ಬಂದ ಮೊಬೈಲ್‌ಅಲ್ಟ್ರಾ ಸೌಂಡ್‌ಯಂತ್ರವು ಸುಲಭವಾಗಿ ಎತ್ತಿ ಒಯ್ಯಬಹುದಾದ ಹಗುರ ಹಾಗೂ ಚಿಕ್ಕ ಗಾತ್ರದ್ದಾಗಿದ್ದು, ಸ್ತ್ರೀ ಭ್ರೂಣ ಪತ್ತೆಗಾಗಿ ಅದರ ಉಪಯೋಗ ಕಾಳ್ಗಿಚ್ಚಿನಂತೆ ವೇಗವಾಗಿ ಹರಡುತ್ತಿದೆ. ಇಂದು ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು, ಸರಿಯಾದ ರಸ್ತೆ ಸಾರಿಗೆ ಸೌಲಭ್ಯಗಳು, ಕುಡಿಯುವ ನೀರು ಇತ್ಯಾದಿ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ಹೆಣ್ಣು ಭ್ರೂಣ ಪತ್ತೆ ಮಾಡುವ ಈ ಸಾಧನವು ಹಳ್ಳಿಗಳನ್ನು ತಲುಪಿ, ಅಲ್ಲಿಯ ಬಸುರಿಯರಿಗೆ ಇಷ್ಟವಿರಲಿ, ಇಲ್ಲದಿರಲಿ, ಕುಟುಂಬಕ್ಕೆ ಬೇಡವಾಗಿರುವ ಹೆಣ್ಣು ಭ್ರೂಣಗಳನ್ನು ತೆಗೆಸಿಹಾಕುವ ಗರ್ಭಪಾತಗಳು ಹೆಚ್ಚಾಗುತ್ತಿವೆ. ಇದನ್ನು ಗಂಭೀರವಾಗಿ ಇಂದು ಪರಿಗಣಿಸಲೇಬೇಕಾಗಿದೆ.

ಇದುವರೆಗೆ ಸ್ಥೂಲವಾಗಿ ಪರಿಶೀಲಿಸಿದ ಅಂಶಗಳೆಲ್ಲವೂ ತಾಯ್ತನದ ಮರಣಗಳಿಗೆ ಪ್ರತ್ಯಕ್ಷ್ಯ ಕಾರಣಗಳಾಗಿವೆ. ಆದರೆ, ನಮ್ಮ ದೇಶದ ಮಹಿಳೆಯರು ಬಾಲ್ಯದಿಂದಲೇ ಅನುಭವಿಸುವ ಲಿಂಗಾಧಾರಿತ ಪಕ್ಷಪಾತದಿಂದ ಉಂಟಾಗುವ ಅಪಪೋಷಣೆ, ಆರೋಗ್ಯ ಪಾಲನೆಯ ಬಗ್ಗೆ ಅಲಕ್ಷ್ಯ, ಬಾಲ್ಯ ವಿವಾಹ, ಕಿಶೋರಾವಸ್ಥೆಯಲ್ಲಿಯೇ ಮೇಲಿಂದ ಮೇಲೆ ಬಸಿರುಗಳನ್ನು ಹೊರಲೇಬೇಕಾಗುವ ಅಸಹಾಯಕತೆ, ಕುಟುಂಬ ಯೋಜನೆಯ ಬಗ್ಗೆ ಮತ್ತು ತಮ್ಮದೇ ಆರೋಗ್ಯದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ, ಸ್ವತಂತ್ರವಾಗಿ ಹೋಗಿ ಚಿಕಿತ್ಸೆ, ಸಲಹೆ ಇತ್ಯಾದಿ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಇರುವ ಅಡ್ಡಿಗಳು ನಮ್ಮ ದೇಶದಲ್ಲಿ ತಾಯ್ತನದ ಮರಣಗಳು ಹೆಚ್ಚಾಗಿರಲು ಅಪ್ರತ್ಯಕ್ಷ್ಯವಾದ ಮುಖ್ಯಕಾರಣಗಳಾಗಿವೆ.

ತಾಯ್ತನದ ಮರಣಗಳನ್ನು ತಗ್ಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು ‘ಜನನಿ ಸುರಕ್ಷಾ’ ಯೋಜನೆಯನ್ನು ೨೦೦೫ರ ಏಪ್ರಿಲ್‌ತಿಂಗಳಿನಿಂದ ಜಾರಿಗೆ ತಂದಿದೆ.[2] ಇದನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ನಿನ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದ್ದು ಇದರ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದ್ದು ಇದಕ್ಕಾಗಿ ೨೦೦೫-೦೬ರ ಆರ್ಥಿಕ ವರ್ಷದಲ್ಲಿ ೧೦,೦೦೦ ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಇದನ್ನು ಆರಂಭಿಕ ಹಂತದಲ್ಲಿ ತಾಯ್ತನದ ಮರಣಗಳ ಸಂಖ್ಯೆ ಅತಿಹೆಚ್ಚಾಗಿರುವ ಹತ್ತು ರಾಜ್ಯಗಳಲ್ಲಿ ಜಾರಿಗೆ ತರಲಾಗಿದ್ದು ಈಗ ಈ ಯೋಜನೆ ಕರ್ನಾಟಕದಲ್ಲೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಜಾರಿಗೆ ಬಂದಿದೆ. ಬಡತನ ರೇಖೆಯ ಕೆಳಗೆ ಇರುವ ಕುಟುಂಬಗಳಿಗೆ ಸೇರಿದ ಹತ್ತೊಂಬತ್ತು ವರ್ಷಕ್ಕೆ ಮೇಲ್ಪಟ್ಟ ಗರ್ಭಿಣಿಯರು ಈ ಯೋಜನೆಯ ಫಲಾನುಭವಿಗಳಾಗಲ ಅರ್ಹರಾಗಿರುತ್ತಾರೆ. ಬಸುರಿನ ಅವಧಿಯಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಲು, ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಹಾಗೂ ಹೆರಿಗೆಯ ನಂತರದ ತಕ್ಷಣದ ಆರೋಗ್ಯ ಆರೈಕೆಗಾಗಿ ಈ ಸ್ತ್ರೀಯರಿಗೆ ಅವರು ಗ್ರಾಮೀಣ ಮಹಿಳೆಯರಾಗಿದ್ದಲ್ಲಿ ಏಳುನೂರು ರೂಪಾಯಿಗಳನ್ನು, ನಗರ ವಾಸಿಗಳಾಗಿದ್ದಲ್ಲಿ ಆರುನೂರು ರೂಪಾಯಿಗಳನ್ನು ನಗದಾಗಿ ನೀಡಲಾಗುತ್ತದೆ. ಈ ಸೌಲಭ್ಯ ಎರಡು ಹೆರಿಗೆಗಳಿಗೆ ಸೀಮಿತವಾಗಿದ್ದು ಮುರನೆಯ ಹೆರಿಗೆಯಲ್ಲಿ ಮಹಿಳೆ ಸಂತಾನ ನಿರೋಧಕ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಒಪ್ಪಿದಲ್ಲಿ ಅವಳಿಗೆ ಹೆರಿಗೆ ಭತ್ಯೆಯನ್ನು ನೀಡಲಾಗುವುದು. ಇಂತಹ ಬಡ ಗರ್ಭೀಣಿಯರನ್ನು ಗುರ್ತಿಸಿ ಅವರನ್ನು ಆಸ್ಪತ್ರೆಗೆ ನಿಯಮಿತವಾಗಿ ಆರೋಗ್ಯ ತಪಾಸಣೆಗಾಗಿ, ಸೋಂಕು ನಿರೋಧಕ ಚುಚ್ಚು ಮದ್ದು ಕೊಡಿಸುವುದಕ್ಕಾಗಿ ಹಾಗೂ ಹೆರಿಗೆಗಾಗಿ ಕರೆದುಕೊಂಡು ಹೋಗಲು ಮಾನ್ಯತೆ ನೀಡಲಾಗಿರುವ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರಿಗೆ ಇಂತಿಷ್ಟು ಎಂದು ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಯಾವುದೇ ಆರೋಗ್ಯ ಯೋಜನೆ ಯಶಸ್ಸು ಪಡೆಯಲು ದೃಢವಾದ ರಾಜಕೀಯ ಇಚ್ಛಾಶಕ್ತಿ, ಉತ್ತಮ ಆಡಳಿತ ಹಾಗೂ ಆರೋಗ್ಯ ಕಾರ್ಯಕರ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳಲ್ಲಿ ಬದ್ಧತೆ ಇರಬೇಕಾಗುತ್ತದೆ.

ಲಿಂಗ ಅನುಪಾತದಲ್ಲಿ ಇಳಿಯುತ್ತಿರುವ ಸ್ತ್ರೀ ಸಂಖ್ಯೆ

ನಮ್ಮ ದೇಶದ ಸ್ತ್ರೀಯರ ನಿರೀಕ್ಷಿತ ಆಯಸ್ಸು, ಅವರ ಮರಣ ಸಂಖ್ಯಾ ಪ್ರಮಾಣ, ಶೈಶವ ಹಾಗೂ ಬಾಲ್ಯಗಳಲ್ಲಿನ ಅವರ ಮರಣ ಸಂಖ್ಯೆ ಮತ್ತು ತಾಯ್ತನದ ಮರಣ ಸಂಖ್ಯಾ ಪ್ರಮಾಣಗಳು ನಮ್ಮ ಮಹಿಳೆಯರ ಆರೋಗ್ಯದ ಸ್ಥೂಲ ಚಿತ್ರವನ್ನು ಕಟ್ಟಿಕೊಟ್ಟರೆ, ನಮ್ಮ ದೇಶದ ಲಿಂಗ ಅನುಪಾತದಲ್ಲಿ ಇಳಿಯುತ್ತಲೇ ಇರುವ ಸ್ತ್ರೀ ಸಂಖ್ಯೆ ಈ ಎಲ್ಲಾ ಅಂಕಿ ಸಂಖ್ಯೆಗಳ ದುಷ್ಪರಿಣಾಮಗಳ ಮೊತ್ತವನ್ನು ಇಡಿಯಾಗಿ ಪ್ರತಿಫಲಿಸುತ್ತದೆ. ಜಗತ್ತಿನ ಎಲ್ಲಾ ದೇಶಗಳ ಜನಗಣತಿ ಮಾಡಿದಾಗ ಗಂಡರಿಗಿಂತಾ ಹೆಂಗಸರ ಸಂಖ್ಯೆಯೇ ಹೆಚ್ಚಾಗಿರುವುದು ಕಂಡುಬಂದಿದೆ. ವಿಶ್ವದ ಸರಾಸರಿ ಜನಗಣತಿಯಲ್ಲಿ ಇಂದು ಪ್ರತಿ ಸಾವಿರ ಮಂದಿ ಗಂಡಸರಿಗೆ ೧೦೫೦ ಮಂದಿ ಹೆಂಗಸರಿದ್ದಾರೆ.15 ಇದು ನಿಸರ್ಗದ ನಿಯಮ. ಜೈವಿಕವಾಗಿ ಹೆಣ್ಣಿಗೆ ಹೋಲಿಸಿದರೆ ಗಂಡುಭ್ರೂಣಗಳು ಹಾಗೂ ಗಂಡು ಕೂಸುಗಳು ಹೆಚ್ಚು ಅಶಕ್ತ. ರೋಗ ರುಜಿನಗಳನ್ನು, ಇತರೇ ಕಷ್ಟಗಳನ್ನು ಎದುರಿಸುವಲ್ಲಿ ಸಹ ಗಂಡಿನ ಸಾಮರ್ಥ್ಯ ಕಡಿಮೆಯೇ. ಹಾಗಾಗಿ ನೈಸರ್ಗಿಕವಾದ ಸಹಜ ಪರಿಸ್ಥಿತಿಯಲ್ಲಿ ಬಸುರಿನಲ್ಲಿರುವಾಗ ಹಾಗೂ ಶೈಶವದಲ್ಲಿ ಹೆಣ್ಣಿಗಿಂತಲೂ ಹೆಚ್ಚು ಗಂಡುಕೂಸುಗಳು ಸಾಯುತ್ತವೆ. ಐದು ವರ್ಷ ವಯಸ್ಸಿನ ಸುಮಾರಿಗೆ ಗಂಡು ಹೆಣ್ಣು ಮಕ್ಕಳಸಂಖ್ಯಾ ಪ್ರಮಾಣ ಸಮವಾಗುತ್ತದೆ. ಮುಂದೆ ಭವಿಷತ್ತಿನಲ್ಲಿ ಸಹ ಸಂಕಷ್ಟಗಳನ್ನು ಎದುರಿಸುವಲ್ಲಿ ಸ್ತ್ರೀ, ಪುರುಷನಿಗಿಂತಾ ಹೆಚ್ಚು ಸಮರ್ಥಳು. ಆದ್ದರಿಂದಲೇ ಜಗತ್ತಿನ ಜನಗಣತಿಯಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲಿ ಗಂಡಸರಿಗಿಂತಾ ಹೆಂಗಸರ ಸಂಖ್ಯೆ ಹೆಚ್ಚಾಗಿಯೇ ಇದೆ. ಈ ನಿಸರ್ಗ ಸಹಜ ಪ್ರಮಾಣಕ್ಕೆ ಅಪವಾದವೆಂದರೆ ನಮ್ಮ ಭಾರತವನ್ನು ಒಳಗೊಂಡಂತೆ ಭಾರತೀಯ ಉಪಖಂಡದ ಕೆಲವು ದೇಶಗಳು ಹಾಗೂ ಚೀನಾ ಮಾತ್ರ (ಕೋಷ್ಟಕ-೬ ನೋಡಿ.

ನಮ್ಮ ದೇಶದಲ್ಲಿ ೧೯೦೧ ರಿಂದ ವ್ಯವಸ್ಥಿತ ರೀತಿಯಲ್ಲಿ ನಡೆದ ಎಲ್ಲಾ ಜನಗಣತಿಗಳಲ್ಲಿ ಸ್ತ್ರೀಯರ ಸಂಖ್ಯೆ, ಲಿಂಗ ಅನುಪಾತದಲ್ಲಿ ಒಂದೇ ಸಮನೆ ಇಳಿಯುತ್ತಿರುವುದನ್ನು ಕಾಣಬಹುದು (ಕೋಷ್ಟಕ-೭). ಆದರೆ ಇದಕ್ಕಿಂತಾ ಅಪಾಯಕಾರಿಯಾದ ವಿಷಾದಕರ ಸಂಗತಿಯೆಂದರೆ ಕಳೆದ ಎರಡು ದಶಕಗಳಲ್ಲಿ ನಮ್ಮ ದೇಶದ ೦-೬ವರ್ಷದ ವಯೋಮಾನದಲ್ಲಿರುವ ಹುಡುಗಿಯರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು. ೧೯೮೧ರಲ್ಲಿ ಶಿಶು ಲಿಂಗ ಅನುಪಾತವು ೯೭೯ ಇದ್ದುದ್ದು ೧೯೯೧ರಲ್ಲಿ ೯೪೫ಕ್ಕೆ ಇಳಿದು ೨೦೦೧ರಲ್ಲಿ ೯೨೭ರಷ್ಟು ಕೆಳಕ್ಕೆ ಇಳಿದು ಬಿಟ್ಟಿದೆ (ಕೋಷ್ಟಕ-೮ ನೋಡಿ). ಹೀಗೆ ಇಳಿಯುತ್ತಾ ಹೋಗುತ್ತಿರುವ ಸ್ತ್ರೀಸಂಖ್ಯೆ ಹಾಗೂ ಬಾಲೆಯರ ಸಂಖ್ಯೆಗೆ ನಮ್ಮ ದೇಶದಲ್ಲಿ ಹಾಸುಹೊಕ್ಕಾಗಿರುವ ಪುರುಷ ಹಿತಾಸಕ್ತಿಗಳ ಸ್ತ್ರೀಜೀವ ವಿರೋಧಿ ಪ್ರಭಾವಗಳೇ ಮೂಲಕಾರಣ. ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಔದ್ಯೋಗಿಕ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲಿ ಸ್ತ್ರೀಯರಿಗೆ ಸರಿಸಮನಾದ ಅವಕಾಶ ನೀಡದೇ ಇರುವುದು ಹಾಗೂ ತಲೆಮಾರುಗಳಿಂದ ಸ್ತ್ರೀಯರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಾ ಅಲಕ್ಷಿಸಿರುವುದೇ ಕಾರಣವಾಗಿದೆ. ಇನ್ನು ಬಾಲೆಯರ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ನಮ್ಮ ದೇಶದಲ್ಲಿ ಹಲವೆಡೆಗಳಲ್ಲಿ ಪರಂಪರಾನುಗತವಾಗಿ ನಡೆದು ಬಂದಿರುವ ಸ್ತ್ರೀ ಶಿಶುಹತ್ಯೆ, ಹೆಣ್ಣು ಮಗುವನ್ನು ಕುರಿತ ತೀವ್ರ ಅಲಕ್ಷ್ಯ ಹಾಗೂ ೧೯೮೦ ರಿಂದ ಈಚೆಗೆ ಇವೆಲ್ಲಕ್ಕೂ ಕಳಸವಿಟ್ಟಂತೆ ಜಾರಿಗೆ ಬಂದಿರುವ ಸೋನೋಗ್ರಾಫಿಂಗ್‌ಮೂಲಕ ಮಾಡಲಾಗುತ್ತಿರುವ ಹೆಣ್ಣು ಭ್ರೂಣ ಪತ್ತೆ ಅದನ್ನು ಹಿಂಬಾಲಿಸಿ ಮಾಡಲಾಗುತ್ತಿರುವ ಹೆಣ್ಣು ಭ್ರೂಣಗಳ ಗರ್ಭಪಾತ ಒಂದು ಹೊಸ ಪದ್ಧತಿಯೇ ಆಗಿರುವುದು ಕಾರಣವಾಗಿದೆ.[3]

ಕೋಷ್ಟಕ೬: ವಿಭಿನ್ನ ದೇಶಗಳಲ್ಲಿನ ಲಿಂಗ ಅನುಪಾತದ ತುಲನೆ (೨೦೦೧)

ದೇಶಗಳು ಲಿಂಗ ಅನುಪಾತ
ಭಾರತ ೯೩೩
ಚೀನಾ ೯೪೪
ಬಾಂಗ್ಲಾದೇಶ ೯೫೩
ಉತ್ತರ ಅಮೆರಿಕಾ ೧೦೨೯
ಇಂಡೋನೇಷ್ಯಾ ೧೦೦೪
ಬ್ರೆಜಿಲ್‌ ೧೦೨೫
ರಷ್ಯಾ ಒಕ್ಕೂಟ ೧೧೪೦
ಜಪಾನ್‌ ೧೦೪೧
ನೈಜಿರಿಯಾ ೧೦೬೧

ಮೂಲ: ಜನಗಣತಿ ೨೦೦೧

Matur Ritu “Skewed sex ratio in India : The beginning of a nightmare’’ Health for millions April-May 2005 11(1), P. 22

ಕೋಷ್ಟಕ೭: ಕಳೆದ ನೂರು ವರ್ಷಗಳಲ್ಲಿ ಭಾರತದಲ್ಲಿ ಕಂಡು ಬಂದ ಲಿಂಗ ಅನುಪಾತ (೧೯೦೧೨೦೦೧)

ಜನಗಣತಿಯ ವರ್ಷ ಒಂದು ಸಾವಿರ ಪುರುಷರಿಗೆ ಪ್ರತಿಯಾಗಿ ಇದ್ದ ಸ್ತ್ರೀಯರ ಸಂಖ್ಯೆ
೧೯೦೧ ೯೭೨
೧೯೧೧ ೯೬೪
೧೯೨೧ ೯೫೫
೧೯೩೧ ೯೫೦
೧೯೪೧ ೯೪೫
೧೯೫೧ ೯೪೮
೧೯೬೧ ೯೪೧
೧೯೭೧ ೯೩೦
೧೯೮೧ ೯೩೪
೧೯೯೧ ೯೨೭
೨೦೦೧ ೯೩೩

ಕೋಷ್ಟಕ೮: ಆರು ವರ್ಷದೊಳಗಿನ ಸಾವಿರ ಗಂಡು ಮಕ್ಕಳಿಗೆ ೧೯೯೧ ಮತ್ತು ೨೦೦೧ರಲ್ಲಿ ಇದ್ದ ಹೆಣ್ಣು ಮಕ್ಕಳ ಸಂಖ್ಯೆ

ರಾಜ್ಯಗಳು ಮಕ್ಕಳ ಲಿಂಗ
೨೦೦೨
ಅನುಪಾತ
೧೯೯೧
ಅಂತರ
ಪಂಜಾಬ್‌ ೨೯೩ ೮೭೫ -೮೨
ಹರಿಯಾಣ ೮೨೦ ೮೭೯ -೫೯
ಗುಜರಾತ್‌ ೮೭೯ ೯೨೮ -೪೯
ಹಿಮಾಚಲ ಪ್ರದೇಶ ೮೯೭ ೯೫೧ -೫೪
ರಾಜಸ್ಥಾನ ೯೦೯ ೯೧೬ -೭
ಉತ್ತರ ಪ್ರದೇಶ ೯೧೫ ೯೨೮ -೧೩
ಮಹಾರಾಷ್ಟ್ರ ೯೧೭ ೯೪೬ -೨೯
ಮಧ್ಯಪ್ರದೇಶ ೯೩೩ ೯೫೨ -೧೯
ಗೋವಾ ೯೩೩ ೯೬೪ -೩೧
ಬಿಹಾರ್‌ ೯೩೮ ೯೫೯ -೨೧
ತಮಿಳುನಾಡು ೯೩೯ ೯೪೮ -೯
ಕರ್ನಾಟಕ* ೯೪೯ ೯೬೦ -೧೧
ಒರಿಸ್ಸಾ ೯೫೦ ೯೬೭ -೧೭
ಮಣಿಪುರ ೯೬೧ ೯೭೪ -೧೩
ಅರುಣಾಚಲ ಪ್ರದೇಶ ೯೬೧ ೯೮೨ -೨೧
ಪಶ್ಚಿಮ ಬಂಗಾಳ ೯೬೩ ೯೬೭ -೪
ಕೇರಳ ೯೬೩ ೯೫೮ +೫
ಆಂಧ್ರಪ್ರದೇಶ ೯೬೩ ೯೭೫ -೧೧
ಆಸ್ಸಾಂ ೯೬೪ ೯೭೫ -೧೧
ಮಿಜೋರಾಂ ೯೭೧ ೯೬೯ +೨
ತ್ರಿಪುರ ೯೭೧ ೯೬೯ +೮
ನಾಗಾಲ್ಯಾಂಡ್‌ ೯೭೫ ೯೯೩ -೧೮
ಸಿಕ್ಕಿಂ ೯೮೬ ೯೬೫ +೨೧
ಭಾರತ ೯೨೭ ೯೪೫ -೧೮

Source: Calculted from census of India. 2001, Rastogi 2003 Quoted in refereme No.4 page 175.

ಟಿಪ್ಪಣಿ: ಯಾವ ರಾಜ್ಯದಲ್ಲಿಯೂ ಗಂಡು ಮಕ್ಕಳ ಸಂಖ್ಯೆಗೆ ಸಮಾನವಾದ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಇಲ್ಲದಿರುವುದನ್ನು ಮತ್ತು ಕೇವಲ ನಾಲ್ಕುರಾಜ್ಯಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ರಾಜ್ಯಗಳಲ್ಲೂ ಹೆಣ್ಣು ಮಕ್ಕಳ ಸಂಖ್ಯೆ ೧೯೯೧ರಿಂದ ೨೦೦೧ರ ಅವಧಿಯಲ್ಲಿ ಇಳಿದಿರುವುದನ್ನು ಗಮನಿಸಿ.

*ಇಂದು ಇದು ೯೪೯ ರಿಂದ ೯೪೬ಕ್ಕೆ ಇಳಿದಿದೆ. ಮೂಲ: TOI., “Human Development Index: State seventh place’’ Times of India. 16.12.2001, page. 7

ಈಗಾಗಲೇ ಹೆಣ್ಣು ಭ್ರೂಣ ಹತ್ಯೆಯಿಂದ ಆಗುತ್ತಿರುವ ಅಸಹಜ ಲಿಂಗ ಅನುಪಾತ ಉಂಟುಮಾಡುವ ಗಂಭೀರ ಅಪಾಯಗಳ ಬಗ್ಗೆ ಜಾಗೃತಿ ಮೂಡಿದ್ದು ಅದನ್ನು ನಿಷೇಧಿಸುವ ಕಾನೂನುಗಳೂ, ಅವಕ್ಕೆ ತಿದ್ದುಪಡಿಗಳೂ ಜಾರಿಗೆ ಬಂದಿವೆ. ಹಲವಾರು ರಾಜ್ಯಗಳಲ್ಲಿ ಹೆಣ್ಣು ಭ್ರೂಣ ಪತ್ತೆಯನ್ನು ವಿರೋಧಿಸುವ ಅಂದೋಲನಗಳೂ ನಡೆಯುತ್ತಿವೆ. ಸ್ತ್ರೀವಾದಿ ಚಳುವಳಿಯೂ ಇಂತಹ ಅಂದೋಲನದಲ್ಲಿ ಸಕ್ರಿಯವಾಗಿ ಭಾಗಿಯಾಗಿದೆ. ಈ ಆಂದೋಲನಗಳಲ್ಲಿ ಸಕ್ರಿಯವಾಗಿರುವ ಕಾರ್ಯಕರ್ತರ ಹಾಗೂ ಈ ವಿಷಯವನ್ನು ಅಧ್ಯಯನ ಮಾಡಿರುವ ಸಂಶೋಧಕರ ಅನುಭವಕ್ಕೆ ಕೆಲ ಅಂಶಗಳು ಹಲವಾರು ಹಳೆಯ ನಂಬಿಕೆಗಳನ್ನು ತಲೆಕೆಳಗೆ ಮಾಡಿದೆ. ಇವುಗಳನ್ನು ಕೆಳಕಂಡಂತೆ ಪಟ್ಟಿ ಮಾಡಬಹುದಾಗಿದೆ.16

  • ನಗರ ಪ್ರದೇಶಗಳ ‘ಮೇಲ್ಜಾತಿ’ಯ ‘ಸುಶಿಕ್ಷಿತ’ರಲ್ಲಿಯೆ ಸ್ತ್ರೀ ಭ್ರೂಣ ಹತ್ಯೆಯ ಪ್ರಮಾಣ ಅಧಿಕವಾಗಿದೆ.
  • ನಿಧಾನವಾಗಿ ಆದರೆ ಖಂಡಿತವಾಗಿ ಈ ರೋಗ ಸಮಾಜದ ‘ಕೆಳಜಾತಿ’ಯ ಅಶಿಲ್ಷಿತ ಬಡವರ್ಗಗಳಿಗೂ ಹಬ್ಬುತ್ತಿರುವುದನ್ನು ಕಾಣಬಹುದಾಗಿದೆ.
  • ಬಡ ಹಿಂದುಳಿದ ರಾಜ್ಯಗಳಿಗಿಂತ ಕೃಷಿ ಮತ್ತು ಕೈಗಾರಿಕೋದ್ಯಮಗಳಲ್ಲಿ ಪ್ರಗತಿ ಸಾಧಿಸಿರುವ ಪಂಜಾಬ್‌, ಹರಿಯಾಣ, ಗುಜರಾತ್‌, ಮಹಾರಾಷ್ಟ್ರ, ಆಂಧ್ರ, ಕರ್ನಾಟಕ ಇತ್ಯಾದಿ ರಾಜ್ಯಗಳಲ್ಲಿ ಸ್ತ್ರೀಭ್ರೂಣ ಹತ್ಯಯ ಪ್ರಮಾಣ ಅಧಿಕವಾಗಿದೆ.
  • ಮಹಿಳೆಯರ ಶಿಕ್ಷಣ, ಆರ್ಥಿಕ ಸ್ವಾವಲಂಬನೆಗಳು ಹೆಚ್ಚಾದಂತೆ, ವರದಕ್ಷಿಣೆಯ ಪ್ರಮಾಣ ಹೆಚ್ಚಾದಂತೆ ಸ್ತ್ರೀ ಭ್ರೂಣ ಹತ್ಯೆಯ ಪ್ರಮಾಣವೂ ಹೆಚ್ಚಾಗುತ್ತಿರುವುದು ಕಂಡುಬಂದಿದೆ.
  • ಪುರುಷ ಪ್ರಧಾನ ಸಂಸ್ಕೃತಿ ಹಾಗೂ ಅಲ್ಟ್ರಾಸೋನೋಗ್ರಫಿಯಂಥಹ ಆಧುನಿಕ ತಂತ್ರಜ್ಞಾನದ ದುರ್ಬಳಕೆಯ ಕತ್ತರಿಯಿಂದ ಮಹಿಳೆಯರ ಹುಟ್ಟುವ ಹಕ್ಕನ್ನೇ ಕತ್ತರಿಸಲಾಗುತ್ತಿದೆ.
  • ಹಣದಾಸೆಗಾಗಿ ನೀತಿ-ಕಾನೂನುಗಳನ್ನು ಗಾಳಿಗೆ ತೂರಿ ಸ್ತ್ರೀಭ್ರೂಣ ಪತ್ತೆ ಮತ್ತು ಹತ್ಯೆಯಲ್ಲಿ ತೊಡಗಿರುವ ಕೆಲವು ವೈದ್ಯರಿಗೆ ಮಾತ್ರ ಈ ಸಮಸ್ಯೆ ಸೀಮಿತವಾಗಿಲ್ಲ. ಇತರ ಸಜ್ಜನರಾಗಿರುವ ವೈದ್ಯರಿಗೂ ಸ್ತ್ರೀಭ್ರೂಣ ಪತ್ತೆ ಮತ್ತು ಹತ್ಯೆಗಳು ಆಯಾ ಕುಟುಂಬದ ವ್ಯಕ್ತಿಗತ ಆಯ್ಕೆಯೆಂಬ ಭ್ರಮೆಯಿದೆ. ಸ್ತ್ರೀಭ್ರೂಣ ಹತ್ಯೆಯಿಂದ ಉಂಟಾಗುವ ಅಸಹಜ ಲಿಂಗ ಅನುಪಾತದಿಂದ ಉಂಟಾಗುವ ಸಾಮಾಜಿಕ ಘೋರ ಪರಿಣಾಮಗಳ ಅರಿವು ಅವರಿಗಿಲ್ಲ.
  • ಮೆಡಿಕಲ್‌ಎಥಿಕ್ಸ್‌(ವೈದ್ಯಶಾಸ್ತ್ರ ನೀತಿ ) ಬಗ್ಗೆ ಘೋರ ಅಜ್ಞಾನ ವೈದ್ಯರಲ್ಲಿ ವ್ಯಾಪಕವಾಗಿದೆ.
  • ವೈದ್ಯ ಸಮುದಾಯದಲ್ಲಿ ವ್ಯವಸ್ಥಿತವಾಗಿ ಆತ್ಮಾವಲೋಕನ, ಸ್ವವಿಮರ್ಶೆ ಹಾಗೂ ತಮ್ಮ ತಪ್ಪು ಸರಿಪಡಿಸಿಕೊಳ್ಳುವಿಕೆ ನಡೆಯುವುದು ಅಪರೂಪ. ಜನಸಾಮಾನ್ಯರಿಂದ ಬರುವ ಸಲಹೆ ಸೂಚನೆಗಳನ್ನು ವೈದ್ಯ ಸಮುದಾಯ ಗಂಭೀರವಾಗಿ ಪರಿಗಣಿಸುವುದಿಲ್ಲ.
  • ಸರಕಾರದ ಜನಸಂಖ್ಯಾ ನೀತಿ ಸಹ ಸ್ತ್ರೀಭ್ರೂಣಗಳಿಗೆ ಶಾಪವಾಗಿ ಪರಿಣಮಿಸಿದೆ.
  • ಸಮಾಜದಲ್ಲಿ ಸ್ತ್ರೀಸಂಖ್ಯೆ ಕಡಿಮೆಯಾದ ಹಾಗೆ ಅವರ ‘ಬೆಲೆ’ ಹೆಚ್ಚುತ್ತದೆ ಎಂಬ ಕೆಲವು ‘ಬುದ್ಧಿವಂತರ’ವಾದ ವಸ್ತುಸ್ಥಿತಿಗೆ ತದ್ವಿರುದ್ಧವಾಗಿದೆ. ಸಮಾಜದಲ್ಲಿ ಸ್ತ್ರೀಸಂಖ್ಯೆ ಕಡಿಮೆಯಾದಂತೆ ಅವರ ಮೇಲೆ ಹಿಂಸೆ ಹೆಚ್ಚಾಗುತ್ತಾ ಹೋಗುತ್ತದೆ ಎಂಬುದೀಗಾಗಲೇ ಸಾಬೀತಾಗಿದೆ. ಸ್ತ್ರೀಸಂಖ್ಯೆ ಕಡಿಮೆಯಿರುವ ಪಂಜಾಬ, ಹರಿಯಾಣ, ದಿಲ್ಲಿ ರಾಜ್ಯಗಳಲ್ಲಿ ಹೆಣ್ಣುಮಕ್ಕಳ ಮಾರಾಟ, ಓಡಿಸಿ ಕೊಂಡೊಯ್ಯುವುದು, ಕುಟುಂಬದ ನಾಲ್ಕೈದು ಸದಸ್ಯರುಗಳು ಒಬ್ಬಳನ್ನೇ ಮದುವೆಯಾಗುವುದು, ಅತ್ಯಾಚಾರ ಇತ್ಯಾದಿಗಳು ಹೆಚ್ಚಾಗುತ್ತಿವೆ.

ಇನ್ನೂ ಹೆಚ್ಚಿನ ವಿವರಣಾತ್ಮಕ ವಿಶ್ಲೇಷಣೆಗೆ ಗ್ರಂಥಋಣ ಸಂಖ್ಯೆ ೧೬ ಮತ್ತು ೧೭ರಲ್ಲಿ ಕೊಟ್ಟಿರುವ ಕೃತಿಗಳನ್ನು ನೋಡಿ. ಕೊನೆಯದಾಗಿ ಸ್ತ್ರೀಯರ ಆರೋಗ್ಯ ಸಮಸ್ಯೆಗಳಲ್ಲಿ ಯಾವುದೂ ‘ಏಕಾಂಗಿ’ ಸಮಸ್ಯೆಯಾಗಿರದೆ ಎಲ್ಲವೂ ಸಂಕೀರ್ಣತೆಯಿಂದ ಕೂಡಿವೆ ಎಂಬುದು ಇಲ್ಲಿ ಸಂಕ್ಷಿಪ್ತವಾಗಿ ಪರಿಶೀಲಿಸಿದ ಎಲ್ಲಾ ಅಂಶಗಳಿಂದ ಸುಸ್ಪಷ್ಟವಾಗುತ್ತದೆ. ಆದ್ದರಿಂದ ಇಂದಿನ ಬದಲಾಗುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಸ್ತ್ರೀಯರ ಆರೋಗ್ಯ ಸಮಸ್ಯೆಗಳನ್ನು ಅರ್ಥೈಸಿಕೊಂಡಾಗಲೇ ನಮಗೆ ಸರಿಯಾದ ಪರಿಹಾರಗಳನ್ನು ಹುಡುಕಲು ಸಾಧ್ಯ. ಇಂದು ಗಂಡು ಹೆಣ್ಣುಗಳ ಸಮಾನತೆಯನ್ನು ತಾತ್ವಿಕ ಮಟ್ಟದಲ್ಲಿ, ಪ್ರಗತಿಗೆ, ಪ್ರಜಾಪ್ರಭುತ್ವದ ಒಳಿತಿಗೆ ಅತ್ಯಂತ ಅಮೂಲ್ಯವಾದ ಮೌಲ್ಯವೆಂದು ಒಪ್ಪಿ ಗಟ್ಟಿಗೊಳಿಸಬೇಕಾಗಿದೆ. ಅದರ ಜೊತೆಗೇ ಆರ್ಥಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ, ಕೌಟುಂಬಿಕ ನೆಲೆಗಳಲ್ಲಿ ಬೇರು ಬಿಟ್ಟಿರುವ ಸ್ತ್ರೀ ವಿರೋಧಿ ವಿಚಾರ ಹಾಗೂ ಮೌಲ್ಯಗಳ ಬೇರುಗಳನ್ನು ಕತ್ತರಿಸುತ್ತಾ ಪ್ರಗತಿಯ ಹಾದಿಯಲ್ಲಿ ನಡೆಯಬೇಕಾಗಿದೆ. ಹಾಗಾಗಿ ಈಗ ನಮಗೆ ಉಳಿದಿರುವುದು ಇದೊಂದೇ ದಾರಿ. ಅದೆಂದರೆ, ಇಂತಹ ಪ್ರಜ್ಞೆಯನ್ನು ಎಲ್ಲರಲ್ಲೂ ಬೆಳೆಸುತ್ತಾ ಅವರನ್ನು ಮಾನವೀಯತೆಯ ನೆಲೆಯುಳ್ಳ ನೈಜ ಸಮಾನತೆಯ ಸಮಾಜದತ್ತ ಒಯ್ಯುವ ಹಾದಿಯಲ್ಲಿ ಕ್ರಮಿಸುವಂತೆ ಮನವೊಲಿಸುವುದೇ ಆಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] Manhanani Ruchita, “An index of Realized Basic rights of Women : Economic Perspective of Human rights’’, In Ibid 13. P. 102.

[2] Parliament News (2005). “Janani Suraksh Yojana’’ Loka Sabha unstarred question. No. 4019, dated 20.4.05 reported in Health for Millions, Vol. 31. No. 1 April-May. Pp. 55

[3] ಸಂಕುಲ ಜೀವ (೨೦೦೬), ಹೆಣ್ಣು ಭ್ರೂಣ ಗರ್ಭಪಾತ ದೇಶದ ಮಹಾದುರಂತ : ಭ್ರೂಣದ ಲಿಂಗ ನಿರ್ಧಾರ ಬೇಡ, ಗುರುವಾಯನ ಕೆರೆ. ದಕ್ಷಿಣ ಕನ್ನಡ ಜಿಲ್ಲೆ, ನಾಗರೀಕ ಸೇವಾ ಟ್ರಸ್ಟ್‌, ಕರಾವಳಿ ಮಹಿಳಾ ಜಾಗೃತಿ ವೇದಿಕೆ ಮತ್ತು ಜನಪರ ಪ್ರಕಾಶನ.