ಮೂರನೆಯದಾಗಿ ಹಾಗೂ ಮುಖ್ಯವಾಗಿ ಕುಟುಂಬದಲ್ಲಿ ಸ್ತ್ರೀಯರಿಗೆ ತಮಗೇ ಸಂಬಂಧಿಸಿದ ವಿಷಯಗಳಲ್ಲಿ ನಿರ್ಣಯ ತೆಗೆದುಕೊಳ್ಳುವಲ್ಲಿರುವ ಬಹುಸೀಮಿತವಾದ ಅಧಿಕಾರ. ಇದರಿಂದಾಗಿ ಅವರಿಗೆ ತಮ್ಮ ಆರೋಗ್ಯವನ್ನೇ ಕುರಿತಂತೆ ಸಹ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಈ ಪರಾಧೀನತೆ ಅಡ್ಡಿಯಾಗುತ್ತಿರುವುದನ್ನು ಭಾರತ ಸರ್ಕಾರದ ೨೦೦೧ರ ಜನಗಣತಿ ಹಾಗೂ ಎರಡನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೇಕ್ಷಣೆಯ ವರದಿಗಳು ಸಾಬೀತುಪಡಿಸಿವೆ. ತಮ್ಮ ಆರೋಗ್ಯವನ್ನು ಕುರಿತ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಪಾಲ್ಗೊಳ್ಳುವ ಅವಕಾಶವಿಲ್ಲದ ಮಹಿಳೆಯರ ಸಂಖ್ಯೆ ಭಾರತದಲ್ಲಿ ಶೇ. ೪೮ರಷ್ಟಿದ್ದರೆ, ಕರ್ನಾಟಕ ರಾಜ್ಯದಲ್ಲಿ ಅವರ ಸಂಖ್ಯೆ ೫೧.೭ರಷ್ಟು ಇದೆ (ಕೋಷ್ಟಕ-೧೪ ನೋಡಿ). ಇನ್ನು ಯಾವುದೇ ಚಿರ/ಸ್ಥಿರ ಆಸ್ತಿಗಳನ್ನು ಗೃಹೋಪಯೋಗಿ ವಸ್ತುಗಳನ್ನು ಕೊಳ್ಳುವಲ್ಲಿ ಭಾಗಿಯಾಗದವರ, ಮಾರುಕಟ್ಟೆಗೆ ಹೋಗಲು ಹಾಗೂ ಬಂಧುಗಳು/ಸ್ನೇಹಿತರನ್ನು ಭೇಟಿ ಮಾಡಲು ಭಾಗಿಯಾದವರ, ಮಾರುಕಟ್ಟೆಗೆ ಹೋಗಲು ಹಾಗೂ ಬಂಧುಗಳು/ಸ್ನೇಹಿತರನ್ನು ಭೇಟಿ ಮಾಡಲು ಸಹ ಅನುಮತಿ ಪಡೆಯಬೇಕಾದವರ ಸಂಖ್ಯೆ ಇನ್ನೂ ಹೆಚ್ಚು ಎಂಬುದನ್ನು ಗಮನಿಸಬಹುದು. ಹಾಗೆಯೇ ಕುಟುಂಬದಲ್ಲಿ ಮಹಿಳೆಯರ ಮೇಲಣ ದೈಹಿಕ ಹಿಂಸೆ ಸಹ ಅವರನ್ನು ಪರಾಧೀನತೆಯಲ್ಲಿಯೇ ಇರುವಂತೆ ಮಾಡುವ ಸಾಧನವಾಗಿದ್ದು ಶೇ. ೨೧ ರಷ್ಟು ಮಹಿಳೆಯರು ತಾವು ದೈಹಿಕ ಹಿಂಸೆಗೆ ಒಳಗಾಗಿದ್ದನ್ನು ಹೇಳಿಕೊಂಡಿರುವುದನ್ನು ಈ ವರದಿಗಳು ದಾಖಲಿಸಿವೆ. ಈ ವರದಿಗಳಲ್ಲಿರುವ, ಮಹಿಳೆಯರಲ್ಲಿ ಹದಿಹರೆಯದವರನ್ನೇ ಅವರು ವಿವಾಹಿತರಾಗಿರಲೀ ಅವಿವಾಹಿತೆಯರಾಗಿರಲೀ, ಬೇರೆ ಮಾಡಿ ಪರಿಗಣಿಸಿದಲ್ಲಿ ಅವರ ಪರಾಧೀನತೆಯ ಹಾಗೂ ಆಯ್ಕೆಗಳಿಲ್ಲದವರ ಸಂಖ್ಯೆ ಇನ್ನು ಹೆಚ್ಚಾಗಿರುವುದನ್ನು ನಿರೀಕ್ಷಿಸಬಹುದು. ಏಕೆಂದರೆ ಹರೆಯದ ಹುಡುಗಿಯರು ವಯಸ್ಸಿನಲ್ಲಿ ಕಿರಿಯರೂ, ಕುಟುಂಬದ ಅಧಿಕಾರದ ಏಣಿಶ್ರೇಣಿಯಲ್ಲಿ ಅತ್ಯಂತ ಕೆಳಗೆ ಇರುವವರಾಗಿ, ವಿವಾಹಿತೆಯರಾಗಿದ್ದರೆ ಗಂಡನ ಮತ್ತು ಅವನ ತಂದೆತಾಯಿಗಳ ಅಧೀನದಲ್ಲಿ ಯಾವುದೇ ಆಯ್ಕೆ, ಅವಕಾಶ, ನಿರ್ಣಯಾಧಿಕಾರಗಳಿಲ್ಲದೆ ಬದುಕನ್ನು ನೂಕಬೇಕಾಗುತ್ತದೆ. ಹಾಗಾಗಿ, ಹದಿಹರೆಯದ ಹುಡುಗಿಯರಿಗೆ ಮುಟ್ಟಿನಂಥಹ ಸಮಸ್ಯೆಗಳು ಒತ್ತಟ್ಟಿಗಿರಲಿ ತಾಯ್ತನಕ್ಕೇ ನೇರವಾಗಿ ಸಂಬಂಧಿಸಿದ ತೊಂದರೆ, ಸಮಸ್ಯೆಗಳಿಗೆ ಬಸುರಿನ ಅವಧಿಯಲ್ಲಿ, ಹೆರಿಗೆ ಕೆಲದಿನಗಳ ಮೊದಲು, ಹೆರಿಗೆಯಲ್ಲಿ ಹಾಗೂ ಹೆರಿಗೆಯ ನಂತರದಲ್ಲೂ ಸಹ ಅಗತ್ಯವಾದ ಚಿಕಿತ್ಸೆ ಪಡೆಯುವಲ್ಲಿ ಸ್ವಂತ ನಿರ್ಣಯದ ಹಕ್ಕು ಕಡಿಮೆಯೇ.

ಕೋಷ್ಟಕ೧೬: ತಾಯ್ತನದ ಆರೋಗ್ಯ ಸಮಸ್ಯಳಿಗೆ ಚಿಕಿತ್ಸೆ ಪಡೆದ ಮತ್ತು ಪಡೆಯದ ವಿವಾಹಿತ ಹುಡುಗಿಯರ ಸಂಖ್ಯೆ ಹಾಗೂ ಚಿಕಿತ್ಸೆ ಪಡೆಯದಿರುವುದಕ್ಕೆ ಕಾರಣಗಳು*

ಚಿಕಿತ್ಸೆ ಪಡೆದ ಹುಡುಗಿಯರು

ಚಿಕಿತ್ಸೆ ಪಡೆಯದ ಹುಡುಗಿಯರು

೭೨ (೪೮%)

೭೮ (೫೨%)

ಒಟ್ಟು ಸಂಖ್ಯೆ ೧೫೦ (೧೦೦%)
ಚಿಕಿತ್ಸೆ ಪಡೆಯದಿರಲು ನೀಡಿದ ಕಾರಣಗಳು
೧. ಅತ್ತೆ ಹಾಗೂ ಗಂಡ, ಇಬ್ಬರಿಗೂ ಅವಳನ್ನು ಚಿಕಿತ್ಸೆಗಾಗಿ ಕರೆದೊಯ್ಯಲು ವೇಳೆ ಇರಲಿಲ್ಲ ೪೨ (೫೩.೮%)
೨. ಅತ್ತೆ ಮತ್ತು ಗಂಡ ವೈದ್ಯಕೀಯ ಸೇವೆ ಚಿಕಿತ್ಸೆ ದುಬಾರಿ ಎಂದು ಭಾವಿಸಿರುವುದು ೩೦ (೩೮.೫%)
೩. ಮೇಲಿಂದ ಮೇಲೆ ಚಿಕಿತ್ಸೆ ಕೊಡಿಸಲು ಗಂಡನಿಗೆ ಇಷ್ಟವಿಲ್ಲದಿರುವುದು ೨೮ (೩೫.೯೦%)
೪. ಕಾಯಿಲೆ ಗಂಭೀರವಾಗುವವರೆಗೂ ಚಿಕಿತ್ಸೆ ಪಡೆಯಲು ಅನುಮತಿ ಸಿಗದೇ ಇದ್ದದ್ದು ೨೬ (೩೩.೩%)

*ಅಧ್ಯಯನಕ್ಕೊಳಗಾದ ಹುಡುಗಿಯರು ಒಂದಕ್ಕಿಂತಾ ಹೆಚ್ಚು ಕಾರಣಗಳನ್ನು ನೀಡಿದ್ದಾರೆ. ಮೂಲ: ಗ್ರಂಥಋಣ ಸಂಖ್ಯೆ೬

ಈಗಾಗಲೇ ಪ್ರಸ್ತಾಪಿಸಿರುವ ರಾಣೆಬೆನ್ನೂರು ತಾಲ್ಲೂಕಿನ ಹಳ್ಳಿಗಳಲ್ಲಿ ನಡೆಸಿದ ಅಧ್ಯಯನಕ್ಕೊಳಗಾದ ವಿವಾಹಿತ ಹದಿಹರೆಯದ ಹುಡುಗಿಯರೆಲ್ಲರೂ (ತಾಯ್ತನಕ್ಕೆ ಸಂಬಂಧಿಸಿದ) ಒಂದಲ್ಲಾ ಒಂದು ಅಥವಾ ಒಂದಕ್ಕಿಂತಾ ಹೆಚ್ಚು ಸಂಖ್ಯೆಯ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ ಅವರಲ್ಲಿ ಶೇ. ೫೦ಕ್ಕಿಂತಾ ಹೆಚ್ಚು ಹುಡುಗಿಯರು ತಮ್ಮ ಸಮಸ್ಯೆಗಳಿಗೆ ಯಾವುದೇ ಚಿಕಿತ್ಸೆ ಪಡೆಯಲಾಗಿರಲಿಲ್ಲ. ಹೀಗಾಗಲು ಅವರು ಕೊಟ್ಟ ಕಾರಣಗಳಲ್ಲಿ ಮುಖ್ಯವಾದವುಗಳೆಂದರೆ, ಹುಡುಗಿಯ ಅತ್ತೆ ಅಥವಾ ಗಂಡನಿಗೆ ಅವಳನ್ನು ಚಿಕಿತ್ಸೆಗಾಗಿ ಕರೆದೊಯ್ಯಲು ವೇಳೆ ಇಲ್ಲದೇ ಇದ್ದದ್ದು, ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಲು ಇಷ್ಟವಿಲ್ಲದೇ ಇದ್ದದ್ದು (ಕೋಷ್ಟಕ-೧೫). ಈ ಫಲಿತಾಂಶಗಳು ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳಲ್ಲಿನ ವಿವಾಹಿತ ಹದಿಹರೆಯದ ಹುಡುಗಿಯರ ಆರೋಗ್ಯ ಎಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿದೆಯೆಂಬುದನ್ನು ಹಾಗೂ ಅನಾರೋಗ್ಯದ ಸಂದರ್ಭಗಳಲ್ಲೂ ಅವಳಿಗೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ತಾನೇ ಸ್ವತಂತ್ರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲಾಗದಷ್ಟು ಪರಾಧೀನತೆಯಿರುವುದನ್ನು ಬಿಂಬಿಸುತ್ತವೆ.

ಇನ್ನು ನಾಲ್ಕನೆಯದಾಗಿ ಹಾಗೂ ಅತ್ಯಂತ ಮುಖ್ಯವಾಗಿ ಮಹಿಳೆಯರಿಗೆ ಅದರಲ್ಲಿಯೂ ವಿಶೇಷವಾಗಿ ಹದಿಹರೆಯದ ಹುಡುಗಿಯರಿಗೆ ಸರಿಯಾದ ಪ್ರಜನನ ಹಕ್ಕುಗಳು ಇಲ್ಲದೇ ಇರುವುದು, ಅವರ ಪರಾಧೀನತೆಯನ್ನು ಹೆಚ್ಚಿಸಿದೆ. ಏಕೆಂದರೆ ತಮಗೆ ಮಕ್ಕಳು ಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಹಕ್ಕನ್ನು ಸಾಮಾನ್ಯವಾಗಿ ಅವರಿಗೆ ಕುಟುಂಬವು ನೀಡಿರುವುದಿಲ್ಲ. ಒಂದು ವೇಳೆ ಹುಡುಗಿಗೆ ಮಗು/ಮಕ್ಕಳು ಬೇಕೆನಿಸಿದರೂ ಯಾವಾಗ, ಎಷ್ಟು ಹಾಗೂ ಯಾವ ಲಿಂಗದ ಮಗು/ಮಕ್ಕಳು ಬೇಕೆನ್ನುವ ಹಾಗೂ ಮಕ್ಕಳ ನಡುವೆ ಎಷ್ಟು ಅಂತರವಿಡಬೇಕೆನ್ನುವ ಬಗ್ಗೆಯೂ ಅವಳಿಗೆ ಹೆಚ್ಚಿನ ನಿರ್ಣಯಾಧಿಕಾರವಿಲ್ಲ. ಹಾಗೆಯೇ ಕುಟುಂಬ ಯೋಜನೆಯ ವಿಧಾನಗಳ ಬಗ್ಗೆ ಅರಿತುಕೊಳ್ಳಲು, ಅರಿತುಕೊಂಡಿದ್ದರೆ ಅವುಗಳಲ್ಲಿ ಒಂದನ್ನು ಅಳವಡಿಸಿಕೊಳ್ಳಲು ಸಹ ಅವಳಿಗೆ ಇರುವ ಸ್ವಾತಂತ್ರ್ಯ ಅತ್ಯಂತ ಸೀಮಿತವಾದದ್ದು. ಸಮಾಜ ಹಾಗೂ ಕುಟುಂಬ, ವಿವಾಹಿತೆಯರು ಆದಷ್ಟು ಬೇಗ ಮಕ್ಕಳನ್ನು ಹೆರಬೇಕೆಂದು ಒತ್ತಡ ಹೇರುವುದರಿಂದ ಹಾಗೂ ಮಹಿಳೆಯರು ಅದರಲ್ಲಿಯೂ ಹದಿಹರೆಯದ ವಿವಾಹಿತೆಯರು ತಮ್ಮ ಪರಾಧೀನತೆಯಿಂದಾಗಿ ಅವರ ದೇಹ ಮನಸ್ಸುಗಳು ಬಸುರಿನ ಭಾರವನ್ನು ಹೊರಲು ಸಿದ್ಧವಾಗಿರಲೀ ಇಲ್ಲದಿರಲೀ ತಾಯಿಯರಾಗಬೇಕಾಗುತ್ತದೆ. ಇವೆಲ್ಲಾ ಕಾರಣಗಳಿಂದಾಗಿ ಸಂತಾನ ನಿರೋಧಕಗಳ ಬಳಕೆ ಹದಿಹರೆಯದ ಹುಡುಗಿಯರಲ್ಲಿ ಅತ್ಯಂತ ಕಡಿಮೆಯಾಗಿರುತ್ತದೆ. ಹದಿಹರೆಯದ ವಯೋಮಾನ ಅತ್ಯಂತ ಫಲವಂತಿಕೆಯ ಅವಧಿಯಾಗಿದ್ದು, ತಾಯಿಯಾಗುವುದರಿಂದ ಈ ಅವಧಿಯಲ್ಲಿ ಹುಡುಗಿಗೆ ಹಲವು ಅಪಾಯಗಳಿದ್ದರೂ ಸಹ ಪರಾಧೀನತೆಯಿಂದಾಗಿ ವಿವಾಹಿತ ಹುಡುಗಿಯರಿಗೆ ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳಲು ಆಗುತ್ತಿಲ್ಲ. ಇದೇ ಮಾತು ನಮ್ಮ ದೇಶದ ಬಹುತೇಕ ವಯಸ್ಕ ಮಹಿಳೆಯರಿಗೂ ಅನ್ವಯಿಸುತ್ತದೆ. ಹಾಗಾಗಿ ಅನಗತ್ಯ ಹಾಗೂ ಬೇಡದ ಬಸಿರು ಜನಸಂಖ್ಯೆಯ ಹೆಚ್ಚಳಕ್ಕೆ ಒಂದು ಮುಖ್ಯ ಕಾರಣವಾಗಿದೆ.

ಸರ್ಕಾರೀ ವರದಿಗಳ ಪ್ರಕಾರವೇ ನಮ್ಮ ದೇಶದ ಜನಸಂಖ್ಯೆಯ ಹೆಚ್ಚಳದ ತೀವ್ರಗತಿಗೆ ಗರ್ಭನಿರೋಧಕ ಅಗತ್ಯಗಳು ಪೂರೈಕೆಯಾಗದಿರುವುದು ಒಂದು ಕಾರಣ. ಇದರಿಂದಾಗಿ ೨೦% ರಷ್ಟು ಜನಸಂಖ್ಯೆ ಬೆಳವಣಿಗೆಯಾಗುತ್ತಿದೆ. ಇದೇ ರೀತಿ ನಮ್ಮ ದೇಶದಲ್ಲಿಯ ಹೆಚ್ಚಿನ ಶಿಶುಮರಣ ಸಂಖ್ಯೆಯಿಂದಾಗಿ ಹೆಚ್ಚು ಮಕ್ಕಳಿರಬೇಕೆಂಬ ನಂಬಿಕೆ ಹಾಗೂ ಇನ್ನಿತರ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಇನ್ನಿತರ ೨೦%ರಷ್ಟು ಜನಸಂಖ್ಯೆಯ ಹೆಚ್ಚಳವಾಗುತ್ತಿದೆ. ಅಲ್ಲದೇ ಈಗಾಗಲೇ ಪ್ರಸ್ತಾಪಿಸಿದಂತೆ ನಮ್ಮ ದೇಶದಲ್ಲಿರುವ ಸುಮಾರು ನೂರು ದಶಲಕ್ಷ ಹದಿಹರೆಯದ ಹುಡುಗಿಯರಲ್ಲಿ ಬಹುತೇಕ ಮಂದಿ ಈಗಾಗಲೇ ವಿವಾಹಿತರಾಗಿದ್ದು ಕುಟುಂಬ ಯೋಜನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಅವರಿಗಿರುವ ಸಾಮಾಜಿಕ ಮತ್ತು ಕೌಟುಂಬಿಕ ಅಡ್ಡಿಗಳಿಂದಾಗಿ ಹಾಗೂ ಅವರ ಪರಾಧೀನತೆಯಿಂದಾಗಿ ಜನಸಂಖ್ಯೆ ಹೆಚ್ಚುತ್ತಿರುವುದರಲ್ಲಿ ಸಂಶಯವೇ ಇಲ್ಲ. ನಮ್ಮ ದೇಶದಲ್ಲಿ ಹದಿಹರೆಯದ ವಯೋಮಾನದಲ್ಲಿ ಇರುವವರಲ್ಲಿ ೯೩%ರಷ್ಟು ಮಂದಿ ಯಾವುದೇ ಗರ್ಭನಿರೋಧಕ ವಿಧಾನಗಳನ್ನು ಪಾಲಿಸದೇ ಇರುವುದರಿಂದ ಅವರಿಗೆ ಬೇಕಿರಲಿ ಬೇಡದಿರಲಿ ಮಕ್ಕಳನ್ನು ಪಡೆಯುತ್ತಾ ಹೋಗುತ್ತಾರೆ.

ವಿಶ್ವಬ್ಯಾಂಕಿನ ವರದಿಯ (೨೦೦೦) ಪ್ರಕಾರ ಭಾರತದಲ್ಲಿ ಪ್ರಜನನ ವಯೋಮಾನದಲ್ಲಿರುವ (೧೫-೪೯ ವರ್ಷಗಳು) ಮಹಿಳೆಯರಲ್ಲಿ ಕೇವಲ ೪೧% ರಷ್ಟು ಮಂದಿ ಮಾತ್ರ ಯಾವುದಾದರೂ ಒಂದು ಗರ್ಭನಿರೋಧಕ ವಿಧಾನ ಅಳವಡಿಸಿಕೊಂಡಿದ್ದು ಇನ್ನಿತರ ೫೯% ಮಂದಿ ಗರ್ಭನಿರೋಧಕ ರಕ್ಷೆ ಹೊಂದಿಲ್ಲ. ಇನ್ನು ನಮ್ಮ ದೇಶದ ಮಹಿಳೆಯರಲ್ಲಿ ಬೇಡದ ಬಸುರಿನಿಂದಾಗಿಯೇ ೨೦% ರಷ್ಟು ಜನಸಂಖ್ಯೆಯ ಬೆಳವಣಿಗೆಯಾಗುತ್ತಿದೆ. ಅಲ್ಲದೆ, ಹದಿಹರೆಯದ ಹುಡುಗಿಯರ ಫಲವಂತಿಕೆ ಅತಿಹೆಚ್ಚಾಗಿರುವ ದೇಶಗಳಲ್ಲಿ ನಮ್ಮ ದೇಶವೂ ಒಂದಾಗಿದ್ದು ೧೫ ರಿಂದ ೧೯ ವರ್ಷಗಳೊಳಗಿನ ಪ್ರತಿ ಒಂದು ಸಾವಿರ ಹುಡುಗಿಯರಲ್ಲಿ ೧೧೫ ಶಿಶು ಜನನಗಳಾಗುತ್ತಿವೆ.

ಹೀಗೆ ಹದಿವಯಸ್ಸಿನಲ್ಲಿ ಹುಡುಗಿಯರಿಗೆ ತಮ್ಮ ಸಂತಾನೋತ್ಪತ್ತಿಯ ವಿಷಯಗಳಲ್ಲಿರುವ ಅತಿ ಸೀಮಿತ ಅಧಿಕಾರ/ಆಯ್ಕೆಯಿಂದಾಗಿ ಹಾಗೂ ಮುಖ್ಯವಾಗಿ ಅವರು ಅನುಭವಿಸುತ್ತಿರುವ ಪರಾಧೀನತೆಯಿಂದಾಗಿಯೇ ಅವರಿಗೆ ತಕ್ಕಮಟ್ಟಿನ ಶಿಕ್ಷಣ ಇದ್ದಾಗಲೂ ಹಾಗೂ ಗರ್ಭನಿರೋಧಕಗಳ ಬಗ್ಗೆ ಅರಿವಿದ್ದರೂ ಸಹ ಅವರು ಮಕ್ಕಳನ್ನು ಹೆರುತ್ತಾ ಇರಬೇಕಾಗಿದೆ. ಉದಾಹರಣೆಗೆ ಈಗಾಗಲೇ ಪ್ರಸ್ತಾಪಿಸಿರುವ ಹಳ್ಳಿಯ ಬಡಕುಟುಂಬಗಳ ಹದಿಹರೆಯದ ವಿವಾಹಿತೆಯರಲ್ಲಿ ೫೨% ಕ್ಕಿಂತಾ ಹೆಚ್ಚು ಮಂದಿ ಐದನೇ ತರಗತಿಗಿಂತಾ ಮೇಲ್ಪಟ್ಟ ಶಾಲಾ ಶಿಕ್ಷಣ ಪಡೆದಿದ್ದು, ಅವರಲ್ಲಿ ೮೦% ರಷ್ಟು ಮಂದಿಗೆ ತಾತ್ಕಾಲಿಕ ಕುಟುಂಬ ಯೋಜನಾ ವಿಧಾನಗಳ ಬಗ್ಗೆ ಅರಿವಿದ್ದುದರಿಂದ ಅವರಲ್ಲಿ ೬೫% ರಷ್ಟು ಮಂದಿ ತಾತ್ಕಾಲಿಕ ವಿಧಾನಗಳನ್ನು ಅಳವಡಿಸಿಕೊಂಡಿದ್ದರು. ಆದರೆ ಗಂಡ ಮತ್ತು ಗಂಡನ ಮನೆಯವರು ಇದಕ್ಕೆ ಒಪ್ಪಲಾರರೆಂಬ ತಿಳುವಳಿಕೆಯಿಂದ ಹಾಗೂ ತಮ್ಮ ಪರಾಧೀನತೆಯ ಅರಿವು ಅವರಿಗೆ ಇದ್ದುದರಿಂದ ಅವರಲ್ಲಿ ಬಹುತೇಕ ಮಂದಿ ಗಂಡ ಹಾಗೂ ಗಂಡನ ಮನೆಯವರಿಗೆ ತಿಳಿಯದಂತೆ ತಾತ್ಕಾಲಿಕ ಸಂತಾನ ನಿರೋಧವನ್ನು ಪಾಲಿಸುತ್ತಿದ್ದರೆಂಬುದನ್ನಿಲ್ಲಿ ಗಮನಿಸಬೇಕು. ಗರ್ಭನಿರೋಧವನ್ನು ಪಾಲಿಸುತ್ತಿದ್ದವರಲ್ಲಿ ಹೆಚ್ಚಿನವರು (೪೯%) ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದರೆ, ಇನ್ನುಳಿದವರು (೧೬%) ಗರ್ಭಾಶಯದಲ್ಲಿರಿಸುವಂತೆ ಸಂತಾನ ನಿರೋಧಕ ಸಾಧನವನ್ನು (Intra Uterine Divice) ಹಾಕಿಸಿಕೊಂಡಿದ್ದರು. ಪ್ರಸ್ತುತ ಅಧ್ಯಯನ ನಡೆಸುವ ಕಾಲಕ್ಕೆ ಇವರಲ್ಲಿ ೭೪%ರಷ್ಟು ಹುಡುಗಿಯರು ಈ ತಾತ್ಕಾಲಿಕ ಕುಟುಂಬ ಯೋಜನಾ ವಿಧಾನಗಳನ್ನು ನಿಲ್ಲಿಸಿಬಿಟ್ಟರು. ಇದಕ್ಕೆ ಅವರು ಸಂದರ್ಶನಗಳಲ್ಲಿ ನೀಡಿದ ಮುಖ್ಯ ಕಾರಣಗಳೆಂದರೆ ಅತ್ತೆಗೆ ಗೊತ್ತಾದಾಗ ನಿಲ್ಲಿಸಬೇಕಾಯಿತು (೫೭%) ಮತ್ತು ಗಂಡನಿಗೆ ಗೊತ್ತಾಗಿ ಅವನಿಂದ ಬೈಸಿಕೊಂಡು ನಿಲ್ಲಿಸಬೇಕಾಯಿತು (೪೩%) ಎನ್ನುವುದು. ಹಲವರು ಗರ್ಭನಿರೋಧಕ ಸಾಧನವು ನೋವುಂಟು ಮಾಡುತ್ತಿದ್ದುದರಿಂದ ಗರ್ಭಾಶಯದಿಂದ ಅದನ್ನು ತೆಗೆಸಿದ್ದರು (೨೯%), ಇನ್ನುಳಿದವರು ಅತಿ ಹೆಚ್ಚಿನ ಕೆಲಸದ ಹೊರೆಯಿಂದಾಗಿ ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು (೨೭%). ಇವರಲ್ಲಿ ಅನೇಕರು ಒಂದಕ್ಕಿಂತಾ ಹೆಚ್ಚು ಕಾರಣಗಳನ್ನು ಕೊಟ್ಟಿದ್ದರು (ಕೋಷ್ಟಕ-೧೬ ನೋಡಿ). ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸಂತಾನ ನಿರೋಧಕಗಳನ್ನು ಬಳಸಲು ಅವರ ಪರಾಧೀನತೆಯೇ ಮುಖ್ಯ ಅಡ್ಡಿಯಾಗಿರುವುದನ್ನು ಈ ಫಲಿತಾಂಶಗಳು ಸಂಕೇತಿಸುತ್ತಿವೆ ಎನ್ನಬಹುದು. ಇದರ ಹಿನ್ನೆಲೆಯಲ್ಲಿ ವಿವಾಹಿತ ಹುಡುಗಿಯರೆಲ್ಲರೂ ಆದಷ್ಟು ಬೇಗ ತಾಯಿಯರಾಗಲೇಬೇಕೆಂಬ ಸಾಮಾಜಿಕ ನಿರೀಕ್ಷೆ ಮತ್ತು ಕೌಟುಂಬಿಕ ಒತ್ತಡಗಳಿರುವುದನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಜನಸಂಖ್ಯಾ ನಿಯಂತ್ರಣವನ್ನು ಸಾಧಿಸಬೇಕೆನ್ನುವ ಕಾರ್ಯನೀತಿ ನಿರೂಪಕರು, ಕಾರ್ಯಕ್ರಮಗಳನ್ನು ಯೋಜಿಸಿ ಜಾರಿಗೊಳಿಸುವವರು, ಹೀಗೆ ಎಲ್ಲರೂ ಹುಡುಗಿಯರ ಶಿಕ್ಷಣವನ್ನು ಹೆಚ್ಚಿಸುತ್ತ, ವಿವಾಹದ ವಯಸ್ಸನ್ನು ಹದಿನೆಂಟು ವರ್ಷಗಳಾಚೆ ಮುಂದೂಡುವತ್ತ, ಎಲ್ಲಕ್ಕಿಂತಾ ಹೆಚ್ಚಾಗಿ ಹುಡುಗಿಯರನ್ನು ನಿಜಾರ್ಥದಲ್ಲಿ ಸಬಲೀಕರಣಗೊಳಿಸಿ ಅವರು ತಮಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ವತಃ ನಿರ್ಧಾರಗಳನ್ನು ತೆಗೆದುಕೊಂಡು ಅವನ್ನು ಜಾರಿಗೊಳಿಸಲು ಸಾಧ್ಯವಾಗುವಂತಹ ಕೌಟುಂಬಿಕ ಮತ್ತು ಸಾಮಾಜಿಕ ಪರಿಸರವನ್ನು ನಿರ್ಮಿಸುವಂತಹ ಕಾರ್ಯಕ್ರಮಗಳ ಕಡೆಗೆ ತುರ್ತಾಗಿ ಗಮನಹರಿಸಬೇಕಾಗಿದೆ.

ಈ ದಿಸೆಯಲ್ಲಿ ಯೋಜನಾ ಆಯೋಗವು ತನ್ನ ಹತ್ತನೇ ಪಂಚವಾರ್ಷಿಕ ಯೋಜನಾ ದಾಖಲೆಯಲ್ಲಿ ಕೆಲವು ಗಮನಾರ್ಹ ಸಲಹೆಗಳನ್ನು ನೀಡಿದ್ದು ಅವು ಇಂತಿವೆ.

  • ಮುಂದಿನ ಪೀಳಿಗೆ ಆರೋಗ್ಯವಾಗಿ ಜನಿಸಲು ಹಾಗೂ ಉಳಿಯಲು, ಹದಿಹರೆಯದ ಹುಡುಗಿಯರ ಆರೋಗ್ಯ ಎಷ್ಟು ಮುಖ್ಯ ಎಂಬುದರ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸಬೇಕು. ನಮ್ಮ ದೇಶದಲ್ಲಿ ಅದರಲ್ಲಿಯೂ ಹಳ್ಳಿಗಳಲ್ಲಿ ಹದಿಹರೆಯದಲ್ಲಿಯೇ ತಾಯಿಯಾಗುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ತುರ್ತಾಗಿ ಜನಜಾಗೃತಿ ಮೂಡಿಸಬೇಕಾಗಿದೆ.
  • ಕಾನೂನು ಬದ್ಧ ವಿವಾಹದ ವಯಸ್ಸನ್ನು ಕಟ್ಟುನಿಟ್ಟಾಗಿ ಜಾರಿಗೆತರಲು ಸಾಮಾಜಿಕ ಬೆಂಬಲವನ್ನು ತುರ್ತಾಗಿ ರೂಢಿಸಬೇಕಾಗಿದೆ.

ಕೋಷ್ಟಕ೧೭: ಇಪ್ಪತ್ತು ವರ್ಷದೊಳಗಿನ ಗ್ರಾಮೀಣ ವಿವಾಹಿತ ಹುಡುಗಿಯರು ಅನುಸರಿಸುತ್ತಿದ್ದ ಕುಟುಂಬ ಯೋಜನಾ ವಿಧಾನಗಳು (ಸಂಖ್ಯೆ೧೫೦)

ಸಂತಾನ ನಿರೋಧಿ ಶಸ್ತ್ರ ಚಿಕಿತ್ಸೆಗೊಳಗಾದವರು ೧೦+ (೭%)
ತಾತ್ಕಾಲಿಕ ಸಂತಾನ ನಿರೋಧಕಗಳನ್ನು ಅಳವಡಿಸಿಕೊಂಡವರು ೯೭ (೬೪.೬೬%)
ಯಾವುದೇ ವಿಧಾನವನ್ನು ಅನುಸರಿಸದವರು ೪೩ (೨೮.೬೬%)

ಒಟ್ಟು

೧೫೦
ತಾತ್ಕಾಲಿಕ ವಿಧಾನಗಳನ್ನು ಪ್ರಸ್ತುತ ಅನುಸರಿಸುತ್ತಿರುವವರು ಹಾಗೂ ನಿಲ್ಲಿಸಿದವರು (ಸಂ. ೯೭)
ಪ್ರಸ್ತುತ ಮುಂದುವರೆಸುತ್ತಿರುವವರು ೩೯ (೨೬%)
ನಿಲ್ಲಿಸಿ ಬಿಟ್ಟಿರುವವರು ೫೮ (೭೪%)

ಒಟ್ಟು

೯೭
ನಿಲ್ಲಿಸಲು ನೀಡಿದ ಕಾರಣಗಳು*
ಅತ್ತೆಗೆ ಗೊತ್ತಾದ ನಂತರ ನಿಲ್ಲಿಸಬೇಕಾಯಿತು ೩೩ (೫೭%)
ಗಂಡನಿಗೆ ಗೊತ್ತಾದ ನಂತರ ಬೈಸಿಕೊಳ್ಳಬೇಕಾಯಿತು ೨೫ (೪೩%)
ಗರ್ಭಕೋಶದಲ್ಲಿ ಅಳವಡಿಸಿದ್ದ ಸಾಧನವು ನೋವು ಉಂಟುಮಾಡುತ್ತಿತ್ತು ೧೭ (೨೯%)
ಅತಿಹೆಚ್ಚಿನ ಕೆಲಸದ ಹೊರೆಯಿಂದಾಗಿ ಮುಂದುವರೆಸಲಾಗಿಲ್ಲ ೧೬ (೨೭%)
ಗರ್ಭನಿರೋಧಕ ಮಾತ್ರೆ/ಸಾಧನಗಳಿಂದ ತೊಂದರೆ ಉಂಟಾಗುತ್ತದೆ ಎಂಬ ನಂಬಿಕೆ ೦೬ (೧೦%)

+ ಹತ್ತೂ ಹುಡುಗಿಯರಿಗೆ ಈಗಾಗಲೆ ಮಕ್ಕಳು ಆಗಿವೆ.
*
ಅಧ್ಯಯನಕ್ಕೊಳಗಾದ ಹುಡುಗಿಯರು ಒಂದಕ್ಕಿಂತಾ ಹೆಚ್ಚು ಕಾರಣಗಳನ್ನು ಕೊಟ್ಟಿದ್ದಾರೆ.

ಮೂಲ: ಗ್ರಂಥಋಣ ಸಂಖ್ಯೆ ೬.

  • ಹದಿಹರೆಯದ ಗರ್ಭೀಣಿಯರು ಎಲ್ಲಿದ್ದರೂ ಅವರನ್ನು ಅಪಾಯದಲ್ಲಿರುವರೆಂದು ಗುರ್ತಿಸಿ ಅವರಿಗೆ ಸಾಕಷ್ಟು ಸೂಕ್ತ ಆಹಾರ ಘೋಷಣೆ ಹಾಗೂ ಆರೋಗ್ಯ ಸೌಲಭ್ಯಗಳನ್ನು ತುರ್ತಾಗಿ ನೀಡಬೇಕು. ಅವರಿಗೆ ಜನಸುವ ಶಿಶುಗಳಿಗೂ ಸಹ ಸೂಕ್ತ ತುರ್ತು ವೈದ್ಯಕೀಯ ಚಿಕಿತ್ಸೆ ಹಾಗೂ ಮೇಲ್ವಿಚಾರಣೆ ಎರಡನ್ನೂ ಅಗತ್ಯವಾಗಿ ನೀಡಬೇಕು.
  • ವಯಸ್ಕರಾದ ತಾಯಿಯರಿಗೆ ಹೋಲಿಸಿದಲ್ಲಿ ಹದಿಹರೆಯದಲ್ಲಿ ತಾಯಿಯಾದವರು ಹಾಗೂ ತಾಯಿಯಾಗಲಿರುವವರು ತಮಗೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ, ಹೆರಿಗೆ ಸೌಲಭ್ಯಗಳನ್ನು ಪಡೆಯಲು ಮುಂದೆ ಬರುವುದು ಅಥವಾ ಮುಂದೆ ಬರಲು ಪ್ರಯತ್ನಿಸುವ ಸಾಧ್ಯತೆಗಳು ಸಹ ಕಡಿಮೆಯೇ. ಇದಕ್ಕೆ ಅವರ ಚಿಕ್ಕ ವಯಸ್ಸು, ಅನುಭವವಿಲ್ಲದಿರುವುದು ವೈದ್ಯಕೀಯ ಚಿಕಿತ್ಸೆಯ ಅಗತ್ಯದ ಅರಿವಿಲ್ಲದಿರುವುದು ಇತ್ಯಾದಿ ಕಾರಣಗಳಿಗಿಂತಾ ಹೆಚ್ಚಾಗಿ ಅವರು ಅನುಭವಿಸುತ್ತಿರುವ ಲಿಂಗ ಪಕ್ಷಪಾತ, ಗಂಡನ ಕುಟುಂಬದಲ್ಲಿ ಅವರಿಗಿರುವ ಅಧಿಕಾರ ಹೀನತೆ ಮತ್ತು ಪರಾಧೀನತೆಗಳಿಂದಾಗಿ ಅವರು ಅನುಭವಿಸುವ ಅಸಹಾಯಕತೆಗಳ ಬಗ್ಗೆ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸುವ ವೈದ್ಯಕೀಯ ಸಿಬ್ಬಂದಿಗೆ ಲಿಂಗತ್ವ ಸೂಕ್ಷ್ಮ ಸಂವೇದನಾ ಪ್ರಜ್ಞೆ ಇರಬೇಕಾದ ಅಗತ್ಯವಿದೆ. ಹಾಗಾಗಿ ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿಗೆ ಲಿಂಗತ್ವ ಸೂಕ್ಷ್ಮ ಸಂವೇದನಾ ತರಬೇತಿ ನೀಡಬೇಕು.

ಹದಿಹರೆಯದ ಹುಡುಗಿಯರ ಆರೋಗ್ಯ ಮತ್ತು ಸರಕಾರೀ ಕಾರ್ಯಕ್ರಮಗಳು

ನೇರವಾಗಿ, ಹದಿಹರೆಯದ ಹುಡುಗಿಯರ ಆರೋಗ್ಯ ರಕ್ಷಣೆ ಮತ್ತು ಪಾಲನೆಗಾಗಿ ಎಂದು ಯಾವುದೇ ನಿರ್ದಿಷ್ಟ ಕಾರ್ಯಕ್ರಮ ಸರಕಾರೀ ರೋಗ್ಯ ಇಲಾಖೆಯ ವತಿಯಿಂದ ನಡೆಯುತ್ತಿಲ್ಲ. ಈಗೀಗ ಪ್ರಜನನ ಮತ್ತು ಶಿಶು ಆರೋಗ್ಯ ಕಾರ್ಯಕ್ರಮಗಳಲ್ಲಿ (RCH Programme)ಹದಿವಯಸ್ಸಿನ ಹುಡುಗಿಯರ ಆರೋಗ್ಯ ಸಮಸ್ಯೆಗಳಿಗೂ ಹೆಚ್ಚಿನ ಗಮನ ಸಿಗಲಾರಂಭಿಸಿದೆ. ಅದೇ ರೀತಿ ಕೇಂದ್ರ ಸರ್ಕಾರದಿಂದ ಪ್ರಮುಖವಾಗಿ ಪ್ರಾಯೋಜಿತವಾಗಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಇತ್ತೀಚೆಗೆ ಹದಿಹರೆಯದ ಹುಡುಗಿಯರ ಅಗತ್ಯಗಳಿಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಇಡೀ ವಿಶ್ವದಲ್ಲಿಯೇ ೦-೬ ವಯಸ್ಸಿನ ಮಕ್ಕಳ ಅಭಿವೃದ್ಧಿಗಾಗಿ ಇರುವ ಅತಿದೊಡ್ಡ ಯೋಜನೆಯಾಗಿದೆ. ಇಂದು ಇದು ೩೪ ದಶಲಕ್ಷ ೦-೬ ವಯಸ್ಸಿನ ಮಕ್ಕಳಿಗೂ ೭ ದಶಲಕ್ಷ ಗರ್ಭೀಣಿಯರಿಗೂ, ಹಾಲುಣಿಸುತ್ತಿರುವ ತಾಯಿಯರಿಗೂ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇದರ ಮೊದಲ ಆದ್ಯತೆ ಶಿಶುಗಳ ಅಭಿವೃದ್ಧಿಯೇ ಆಗಿದೆ. ಈಗ ಈ ಯೋಜನೆಯ ಅಡಿಯಲ್ಲಿ ೨೦೦೦-೨೦೦೧ ರಿಂದ “ಕಿಶೋರಿ ಶಕ್ತಿ ಯೋಜನೆಯನ್ನು” ಹದಿಹರೆಯದ ಹುಡುಗಿಯರಿಗಾಗಿ (೧೧-೧೮ ವರ್ಷಗಳು) ಹಮ್ಮಿಕೊಂಡು ನಡೆಸಲಾಗುತ್ತಿದೆ.

ಪ್ರಸ್ತುತ, ಕಿಶೋರಿ ಶಕ್ತಿ ಯೋಜನೆಯನ್ನು ಆಯ್ದ ಎರಡು ಸಾವಿರ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ಘಟಕಗಳಲ್ಲಿ ದೇಶದಾದ್ಯಂತ ಜಾರಿಗೊಳಿಸಲಾಗಿದೆ. ಕೇಂದ್ರ ಸರ್ಕಾರವು, ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯನ್ನು ಎಂಟು ಜಿಲ್ಲೆಗಳ ೩೮ ಸಮ್ರ ಶಿಶು ಅಭಿವೃದ್ಧಿ ಯೋಜನಾ ಘಟಕಗಳಲ್ಲಿ ಜಾರಿಗೊಳಿಸಿದ್ದು ೨೦೦೫ ರಿಂದ ಇದನ್ನು ಇನ್ನುಳಿದ ೧೪೭ ಘಟಕಗಳಲ್ಲಿಯೂ ಜಾರಿಗೆ ತಂದಿದೆ. ಕರ್ನಾಟಕ ಸರ್ಕಾರದ ಕೋರಿಕೆಯಂತೆ ಈ ಯೋಜನೆಯ ಅಡಿಯಲ್ಲಿ ಕಿಶೋರಿಯರಿಗೆ ನೀಡಬೇಕಾಗುವ ೫ ದಿನಗಳ ವಸತಿಯುತ ತರಬೇತಿಗೆ ಮತ್ತು ತರಬೇತುದಾರರ ತರಬೇತಿಗೂ ಹಣವನ್ನು ೨೦೦೫ರ ಕೊನೆಯಲ್ಲಿ ಸರ್ಕಾರ ಬಿಡುಗಡೆ ಮಾಡಿದೆ.

ಕಿಶೋರಿ ಶಕ್ತಿ ಯೋಜನೆಯು ಕಿಶೋರಿಯರನ್ನು (೧೧-೧೮ ವರ್ಷದೊಳಗಿನ ಹುಡುಗಿಯರನ್ನು) ಆದಷ್ಟೂ ರೀತಿಗಳಲ್ಲಿ ಸಬಲೀಕರಣಗೊಳಿಸುವ ಮುಖ್ಯ ಉದ್ದೇಶ ಹೊಂದಿದೆ. ಅದರ ನಿರ್ದಿಷ್ಟ ಉದ್ದೇಶಗಳನ್ನು ಕೆಳಕಂಡಂತೆ ಪಟ್ಟಿ ಮಾಡಬಹುದಾಗಿದೆ.

[1]

  • ೧೧-೧೮ ವರ್ಷ ವಯಸ್ಸಿನ ಕಿಶೋರಿಯರ ಆಹಾರ ಪೋಷಣೆ ಮತ್ತು ಆರೋಗ್ಯ ಸ್ಥಿತಿಗತಿಗಳನ್ನು ಉತ್ತಮಪಡಿಸುವುದು.
  • ಅನೌಪಚಾರಿಕ ಶಿಕ್ಷಣದ ಮೂಲಕ ಅವರಿಗೆ ಅಗತ್ಯವಾದ ಸಾಕ್ಷರತೆ ಮತ್ತು ಅಂಕಿಗಳ ಕೌಶಲ್ಯಗಳನ್ನು ಕಲಿಸುವುದು. ಸ್ವನಿರ್ಣಯಗಳನ್ನು ತೆಗೆದುಕೊಳ್ಳಲು ಬೇಕಾಗುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡುವುದು ಮತ್ತು ಹೆಚ್ಚಿನ ಸಾಮಾಜಿಕ ಅನುಭವಗಳಿಗೆ ತೆರೆದುಕೊಳ್ಳಬೇಕೆಂಬ ಆಸೆ ತವಕಗಳನ್ನು ಅವರಲ್ಲಿ ಉತ್ತೇಜಿಸುವುದು.
  • ಗೃಹ ಉದ್ಯೋಗಗಳಲ್ಲಿ ಕುಶಲತೆಗಳು ಹಾಗೂ ಇನ್ನಿತರ ಉದ್ಯೋಗ ಕುಶಲತೆಗಳನ್ನು ಕಿಶೋರಿಯರಿಗೆ ಕಲಿಸುವುದು.
  • ನೈರ್ಮಲ್ಯ, ಆರೋಗ್ಯ, ಆಹಾರ ಪೋಷಣೆ, ಕುಟುಂಬ ಕಲ್ಯಾಣ, ಗೃಹನಿರ್ವಹಣೆ ಮತ್ತು ಮಕ್ಕಳ ಪಾಲನೆಯ ಬಗ್ಗೆ ಅವರಲ್ಲಿ ಅರಿವು ಮೂಡಿಸುವುದು ಹಾಗೂ ಅವರಿಗೆ ಹದಿನೆಂಟು ವಯಸ್ಸಾದಂತಹ ಅಥವಾ ಅದಕ್ಕೂ ಹೆಚ್ಚು ವಯಸ್ಸಾದ ನಂತರ ಮದುವೆಯಾಗಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು.
  • ಅವರಲ್ಲಿ ತಮ್ಮ ಬದುಕಿನ ಪರಿಸರದಲ್ಲಿರುವ ಹಲವು ಸಾಮಾಜಿಕ ಕಾರಣಗಳಿಂದ ತಮ್ಮ ಬದುಕಿನ ಮೇಲಾಗಬಹುದಾದ ಪರಿಣಾಮಗಳ ಬಗ್ಗೆ ಸ್ಪಷ್ಟ ಅರಿವು ಉಂಟಾಗುವಂತೆ ಮಾಡುವುದು.
  • ಕಿಶೋರಿಯರು ಹಲವಾರು ಚಟುವಟಿಕೆಗಳನ್ನು ತಮ್ಮ ಸಮುದಾಯದಲ್ಲಿ ಆರಂಭಿಸಿ ತಾವಿರುವ ಸಮಾಜದಲ್ಲಿ ಉಪಯುಕ್ತ ಹಾಗೂ ಫಲಪ್ರದರಾದ ಸದಸ್ಯರಾಗುವಂತೆ ಅವರನ್ನು ಪ್ರೋತ್ಸಾಹಿಸುವುದು.

ಕಿಶೋರಿ ಯೋಜನೆಯಲ್ಲಿ ಪಾಲ್ಗೊಳ್ಳಬೇಕಾಗುವ ಹುಡುಗಿಯರು ಸಾಕ್ಷರರೋ ಅಥವಾ ನವಸಾಕ್ಷರರೋ ಆಗಿದ್ದು ಅವರಿಗೆ ಆಹಾರ ಪೋಷಣೆ, ವೈಯಕ್ತಿಕ ನೈರ್ಮಲ್ಯ, ಆರೋಗ್ಯ ಪಾಲನೆ, ಸಮುದಾಯ ಜೀವನ, ಅಕ್ಷರತೆ ಮತ್ತು ಔದ್ಯೋಗಿಕ ಚಟುವಟಿಕೆಗಳ ಅರಿವನ್ನು ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯಡಿ, ಲಿಂಗತ್ವ ಸಮಾನತೆಯನ್ನು ಕುರಿತ ಹಾಗೆ ಮತ್ತು ಸಮುದಾಯಗಳಲ್ಲಿ ಹುಡುಗಿಯರನ್ನು ಸ್ವಾವಲಂಬೀ ಹಾಗೂ ಸಕ್ರಿಯ ಉಪಯುಕ್ತರಾದ ಸದಸ್ಯೆಯರನ್ನಾಗಿ ಮಾಡಲು ಐದು ದಿನಗಳ ವಸತಿ ಸಹಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ತರಬೇತಿಗಳನ್ನು ನೀಡುವ ತರಬೇತುದಾರರಿಗೇ ಈ ಎಲ್ಲಾ ವಿಷಯಗಳ ಬಗ್ಗೆ ಹಾಗೂ ಹೇಗೆ ತರಬೇತಿ ನೀಡಬೇಕೆನ್ನುವುದನ್ನು ಕುರಿತಂತೆ ಸವಿಸ್ತರಾರವಾದ ಸಂಪನ್ಮೂಲ ಮಾಹಿತಿಯನ್ನು ಸಂಗ್ರಹಿಸಿ, ಕ್ರೋಢೀಕರಿಸಿ ಪರಿಷ್ಕರಿಸಿ ಕೈಪಿಡಿಯೊಂದನ್ನು ತಯಾರಿಸಲಾಗಿದ್ದು ಅದನ್ನು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಉನ್ನತಾಧಿಕಾರಿಗಳಿಗೆ ಕಳುಹಿಸಲಾಗಿದೆ. ಈ ತರಬೇತಿಗಳ ಹೂರಣದಲ್ಲಿ ಹುಡುಗಿಯರು ಹೇಗೆ ಕಿಶೋರಿ ಸ್ವಸಹಾಯ ಸಂಘಗಳನ್ನು ಕಟ್ಟಿ ಬೆಳೆಸಬೇಕೆಂಬ ವಿವರಗಳಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಏಕೆಂದರೆ ಹುಡುಗಿಯರು ಪರಸ್ಪರ ಅನುಭವಗಳನ್ನು ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ತಮ್ಮ ಕಾಳಜಿಗಳನ್ನು ಮುಕ್ತವಾಗಿ ಚರ್ಚಿಸಲು, ಪರಸ್ಪರ ನೆರವು ಬೆಂಬಲ ಕೊಟ್ಟು ಪಡೆಯಲು ಹಾಗೂ ತಮ್ಮಲ್ಲೇ ಇರುವ ಸಾಮರ್ಥ್ಯಗಳನ್ನು ಹುಡುಕಿ ಅವುಗಳನ್ನು ಬೆಳೆಸಿಕೊಂಡು ಹೆಚ್ಚು ಗಟ್ಟಿಯಾಗಲು ಈ ಕಿಶೋರಿ ಸಂಘಗಳು ವೇದಿಕೆಯೊಂದನ್ನು ನಿರ್ಮಿಸುವುದಕ್ಕೆಂದೇ ರೂಪಿತವಾಗಿವೆ.

ಕಿಶೋರಿ ಶಕ್ತಿ ಯೋಜನೆಯನ್ನು ಹೊರತುಪಡಿಸಿದರೆ ಕರ್ನಾಟಕ ರಾಜ್ಯದಲ್ಲಿ ಪರೋಕ್ಷವಾಗಿ ಹುಡುಗಿಯರ ಆರೋಗ್ಯದ ಕಾಳಜಿಗಳನ್ನು ಕಾಪಾಡಬಲ್ಲ ಮೂರು ಕಾರ್ಯಕ್ರಮಗಳಿವೆ. ಅವುಗಳೆಂದರೆ, ಗ್ರಾಮೀನ ಪ್ರದೇಶದ ಹೆಣ್ಣು ಮಕ್ಕಳಿಗೆ ಹಾಜರಾತಿ ಶಿಷ್ಯವೇತನ ನೀಡುವುದು, ಗ್ರಾಮೀಣ ಪ್ರದೇಶದ ಹುಡುಗಿಯರಿಗಾಗಿ ವಿದ್ಯಾರ್ಥಿನಿಲಯಗಳು ಹಾಗೂ ‘ಭಾಗ್ಯಲಕ್ಷ್ಮೀ ಯೋಜನೆ’. ಈ ಮೂರು ಯೋಜನೆಗಳ ಮುಖ್ಯ ಉದ್ದೇಶವೆಂದರೆ ಹುಡುಗಿಯರ ವಿದ್ಯಾಭ್ಯಾಸದ ಮುಂದುವರಿಕೆ ಹಾಗೂ ಅವರ ಮದುವೆಯ ವಯಸ್ಸನ್ನು ಮುಂದೂಡುವುದೇ ಆಗಿದೆ. ಈ ಮೂರು ಕಾರ್ಯಕ್ರಮಗಳಲ್ಲಿ ಭಾಗ್ಯಲಕ್ಷ್ಮಿ ತೀರಾ ಇತ್ತೀಚಿನ ಯೋಜನೆಯಾಗಿದ್ದು ಇದರಲ್ಲಿ ೩೧.೩.೦೬ರ ನಂತರ ಹುಟ್ಟಿದ ಬಡತನ ರೇಖೆಗಿಂತಾ ಕೆಳಗಿರುವ ಕುಟುಂಬಗಳ ಹೆಣ್ಣು ಮಕ್ಕಳು ಮಾತ್ರ ಫಲಾನುಭವಿಗಳಾಗಬಹುದು. ಆದರೆ ಅವರ ಜನನ ಕಡ್ಡಾಯವಾಗಿ ನೋಂದಣಿಯಾಗಿರಬೇಕು, ೮ನೇ ತರಗತಿಯವರೆಗೆ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಹಾಗೂ ೧೮ನೇ ವಯಸ್ಸಿನ ನಂತರವೇ ಮದುವೆಯಾಗಬೇಕು. ಒಂದೇ ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೂ ಇದು ಲಭ್ಯ. ಈ ಯೋಜನೆಯಲ್ಲಿ ಹೆಣ್ಣು ಮಗುವಿನ ಹೆಸರಿನಲ್ಲಿ ೧೦,೦೦೦ ರೂ ಠೇವಣಿ ಇಡಲಾಗುವುದು, ೬ ವರ್ಷಗಳ ನಂತರ ಪ್ರತಿವರ್ಷ ಲಾಭಾಂಶ ಬಿಡುಗಡೆ ಮಾಡಲಾಗುವುದು. ೧೮ ವರ್ಷಗಳಾದ ನಂತರ ಈ ಹುಡುಗಿ ಅವಿವಾಹಿತೆಯಾಗಿಯೇ ಉಳಿದಿದ್ದಲ್ಲಿ ಮಾತ್ರ ಅಸಲು ಮತ್ತು ಬಡ್ಡಿ ಸೇರಿದ ಪೂರ್ಣ ಮೊತ್ತ ನೀಡಲಾಗುವುದು. ಇಂತಹ ಹೆಣ್ಣು ಮಗುವಿನ ಪಾಲರಿಗೆ ಮೂರು ಮಕ್ಕಳಿದ್ದಲ್ಲಿ ಅವರಲ್ಲಿ ಒಬ್ಬರು ಕಡ್ಡಾಯವಾಗಿ ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರಬೇಕು.೧೭

ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಇದು ಎಷ್ಟರ ಮಟ್ಟಿಗೆ ಹೆಣ್ಣುಮಕ್ಕಳ ಮರಣ ಸಂಖ್ಯೆಯನ್ನು, ಬಾಲ್ಯವಿವಾಹಗಳನ್ನು ತಡೆಗಟ್ಟಿ ಅವರ ಶಿಕ್ಷಣವನ್ನು ಪ್ರೋತ್ಸಾಹಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಸಧ್ಯಕ್ಕೆ ಈ ಯೋಜನೆಯನ್ನು ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಸರ್ಕಾರವೇ ಪ್ರಾಯೋಜಿಸಿದ್ದು ಈ ವರ್ಷ ಬಡತನ ರೇಖೆಯ ಕೆಳಗಿನ ಕುಟುಂಬಗಳಲ್ಲಿ ಈ ಯೋಜನೆ ಎಲ್ಲಾ ಷರತ್ತುಗಳನ್ನು ಪೂರೈಸಬಲ್ಲ ಕುಟುಂಬಗಳಲ್ಲಿ ಸುಮಾರು ಎರಡು ಲಕ್ಷ ಹೆಣ್ಣು ಮಕ್ಕಳು ಜನಿಸಬಹುದೆಂದು ಅಂದಾಜು ಮಾಡಲಾಗಿದ್ದು ಅವರಲ್ಲಿ ಪ್ರತಿಯೊಂದು ಮಗುವಿಗೂ ೧೦,೦೦೦ ರೂಪಾಯಿಗಳ ಠೇವಣಿಯಿಡಲು ೧೩೪ ಕೋಟಿ ಹಣವನ್ನು ರಾಜ್ಯ ಸರ್ಕಾರ ತೆಗೆದಿರಿಸಿದೆ. ಈ ಯೋಜನೆ ೨೦೦೬-೦೭ರಲ್ಲೂ ಮುಂದುವರೆಯುತ್ತದೆ.[2]

ಇಂತಹುದೇ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಬಾಲಿಕಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ನಡೆಸುತ್ತಿದ್ದು ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ೨೦೦೫ ರಿಂದ ಅದು ಸ್ಥಗಿತಗೊಂಡಿದೆ.[3] ಭಾರತ ಸರ್ಕಾರದ ಯೋಜನಾ ಆಯೋಗವು ಆರಂಭಿಕ ಪ್ರಯೋಗಾತ್ಮಕ ಯೋಜನೆಗಾಗಿ (Pilot Project)ಆಹಾರ ಪೋಷಣಾ ಕಾರ್ಯಕ್ರಮವೊಂದನ್ನು ಹದಿಹರೆಯದ ಹುಡುಗಿಯರಿಗಾಗಿ ೨೦೦೨-೦೩ರಲ್ಲಿ ಕೈಗೆತ್ತಿಕೊಂಡಿದೆ. ಇಡೀ ಭಾರತದಲ್ಲಿ ಆಹಾರ ಪೋಷಣೆಯಲ್ಲಿ ಅತ್ಯಂತ ಹಿಂದುಳಿದವುಗಳೆಂದು ಗುರ್ತಿಸಲಾಗಿರುವ ಐವತ್ತೊಂದು ಜಿಲ್ಲೆಗಳಲ್ಲಿ ಆರಂಭಿಸಿರುವ ಈ ಕಾರ್ಯಕ್ರಮದಡಿಯಲ್ಲಿ ನ್ಯೂನಪೋಷಿತರಾದ ಕಿಶೋರಿಯರಿಗೆ, ಗರ್ಭೀಣಿಯರಿಗೆ ಹಾಗೂ ಎದೆ ಹಾಲೂಡುತ್ತಿರುವ ತಾಯಿಯರಿಗೆ ಉಚಿತವಾಗಿ ಧಾನ್ಯವನ್ನು ವಿತರಿಸಲಾಗುತ್ತಿದೆ ಎಂದು ತೀರ ಇತ್ತೀಚಿನ ಸರಕಾರೀ ಪ್ರಕಟನೆಯೊಂದು ವರದಿ ಮಾಡಿದೆ.

ಹದಿಹರೆಯದ ಹುಡುಗಿಯರ ಅತಿಹೆಚ್ಚಿನ ಫಲವಂತಿಕೆಯ, ಅವರದಲ್ಲಿಯೇ ಹೆಚ್ಚಾಗಿರುವ ತಾಯ್ತನದ ಮರಣಗಳ ಹಾಗೂ ಶಿಶುಮರಣಗಳ ಪ್ರಸ್ತುತ ಹಿನ್ನೆಲೆಯಲ್ಲಿ ಈ ಕಿಶೋರಿಯರಿಗೇ ಅನ್ವಯಿಸುವಂತೆ ಮುಂಬರುವ ಹನ್ನೊಂದನೇ ಪಂಚವಾರ್ಷಿಕ ಯೋಜನೆ ಯಾವ ಬಗೆಯ ಕಾರ್ಯತಂತ್ರ, ಕಾರ್ಯನೀತಿ ಹಾಗೂ ಯೋಜನೆಗಳನ್ನು ರೂಪಿಸುತ್ತದೆಯೆಂಬುದನ್ನು ಇನ್ನೂ ಕಾದು ನೋಡಬೇಕಾಗಿದೆ.

[1] GOK (2006) Taluk leve Core Team under Kishori Shakti Yojana : Reference Masterial.

[2] GOK (2006) `Bhagya Lakshmi’ Vijaya Karnataka., 14. 11. 06.

[3] Personal Communication., form Deputy Director, Department of Women and Child Development GOK on 16. 11. 06.