ಇಂದು ನಮ್ಮ ದೇಶದಲ್ಲಿ ಹೆರಿಗೆ ಮತ್ತು ಬಾಣಂತಿತನಗಳಿಗೆ ಸಂಬಂಧಿಸಿದ ತಾಯ್ತನದ ಕಾಯಿಲೆಗಳನ್ನು ಹೊರತುಪಡಿಸಿದ ಹಲವಾರು ಗಂಭೀರವಾದ ಆರೋಗ್ಯ ಸಮಸ್ಯೆಗಳು ಮಹಿಳೆಯರಲ್ಲಿ ವ್ಯಾಪಕವಾಗಿವೆ. ಆದ್ದರಿಂದ ಅವುಗಳ ಸಂಕ್ಷಿಪ್ತ ಪರಿಶೀಲನೆಯಿಲ್ಲದೆ ಭಾರತೀಯ ಮಹಿಳಾ ಆರೋಗ್ಯದ ಪೂರ್ಣಚಿತ್ರ ಕಟ್ಟಿಕೊಡಲು ಅಸಾಧ್ಯ. ದುರದೃಷ್ಟವಶಾತ್‌ಇವುಗಳ ಬಗ್ಗೆ ನಮ್ಮ ಸರ್ಕಾರಗಳ ಆರೋಗ್ಯ ಇಲಾಖೆಯು ಹೆಚ್ಚಿನ ಗಮನ ಹರಿಸುತ್ತಿಲ್ಲ. ಇಂತಹ ಅಲಕ್ಷಿತ ಗಂಭೀರ ಆರೋಗ್ಯ ಸಮಸ್ಯೆಗಳ ಯಾದಿಯಲ್ಲಿ ಅತಿಮುಖ್ಯವಾದವುಗಳನ್ನು ಪಟ್ಟಿ ಮಾಡಬಹುದಾಗಿದೆ.

ಅ. ಮಹಿಳೆಯರ ಮಾನಸಿಕ ಆರೋಗ್ಯ

ಆ. ಹದಿಹರೆಯದ ಕಿಶೋರಿಯರ ಆರೋಗ್ಯ

ಇ. ಪ್ರಜನನ ವಲಯದ ಕಾಯಿಲೆಗಳು/ಸೋಂಕುಗಳು (ಎಚ್‌.ಐ.ವಿ. ಮತ್ತು ಏಡ್ಸ್‌ಹೊರತುಪಡಿಸಿ)

ಈ. ಗರ್ಭಕೋಶದ ಬಾಯಿಯ ಕ್ಯಾನ್ಸರ್‌/ಅರ್ಬುದ ರೋಗ

ಉ. ಕ್ಷಯ

ಈ ಪಟ್ಟಿ ಪೂರ್ಣವಾದ ಪಟ್ಟಿ ಅಲ್ಲವೆಂಬುದನ್ನು ಓದುಗರು ಗಮನಿಸಬೇಕು. ಈ ಪಟ್ಟಿಯಲ್ಲಿರುವ ಮೊದಲ ಎರಡು ವಿಷಯಗಳ ಬಗ್ಗೆ ಪ್ರಸ್ತುತ ಪ್ರತ್ಯೇಕ ಅಧ್ಯಾಯಗಳಲ್ಲಿ ವಿವರಣಾತ್ಮಕ ವಿಶ್ಲೇಷಣೆಯಿರುವುದರಿಂದ ಇನ್ನುಳಿದ ವಿಷಯಗಳನ್ನು ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಪರಿಶೀಲಿಸುವ ಕಿರುಪ್ರಯತ್ನವನ್ನಿಲ್ಲಿ ಮಾಡಲಾಗಿದೆ.

. ಪ್ರಜನನಾಂಗಗಳ ಕಾಯಿಲೆಗಳು/ಸೋಂಕುಗಳು

ಬಸಿರು, ಹೆರಿಗೆ ಮತ್ತು ಬಾಣಂತಿತನಗಳಿಗೆ ನೇರವಾಗಿ ಸಂಬಂಧಿಸದೇ ಇರುವ ಕೆಲವು ಸೋಂಕು/ಕಾಯಿಲೆಗಳು ಪ್ರಜನನಾಂಗಗಳನ್ನು ಕಾಡಿ, ಮಹಿಳೆಯರ ದಿನನಿತ್ಯದ ಬದುಕನ್ನು ನೋವಿನಿಂದ ತುಂಬುವಂತೆ ಮಾಡುತ್ತವೆ. ಈ ಬಗೆಯ ಸ್ತ್ರೀರೋಗಗಳೆಂದರೆ ಮುಟ್ಟಿನ ತೊಂದರೆಗಳು (ಅತಿ ನೋವಿನಿಂದ ಕೂಡಿದ ಮುಟ್ಟು, ಹೆಚ್ಚು ರಕ್ತಸ್ರಾವ ಅನಿಮಿಯತವಾದ ಮುಟ್ಟು ಇತ್ಯಾದಿ.), ಗರ್ಭಕೋಶ, ಯೋನಿ ಮತ್ತಿತರ ಪ್ರಜನಾಂಗಗಳು ಕೆಳಕ್ಕೆ ಜಾರಿಬೀಳುವುದು, ಗರ್ಭನಿರೋಧಕಗಳ ಬಳಕೆಯಿಂದ ಅಥವಾ ಶಸ್ತ್ರಚಿಕಿತ್ಸೆಗಳಿಂದ ಉಂಟಾಗುವ ಶಾರೀರಿಕ ಸಂಕಷ್ಟಗಳು, ಲೈಂಗಿಕ ಸಂಪರ್ಕದಿಂದ ಉಂಟಾಗುವ ಸೋಂಕುಗಳನ್ನೂ (Sexually transmitted diseases) ಒಳಗೊಂಡಂತೆ ಪ್ರಜನನ ವಲಯದ ನಾನಾ ಸೋಂಕುಗಳು (ಉದಾಹರಣೆಗೆ ಯೋನಿಯ ಉರಿಯೂತ, ಗರ್ಭಕೋಶದ ಉರಿಯೂತ), ಹಾಗೂ ಕೀಲ್ಗುಳಿಯ ಉರಿಯೂತದ (Pelvic Inflamatary Disease) ಕಾಯಿಲೆಗಳೇ ಆಗಿವೆ.

ಪ್ರಜನನ ವಲಯದ (reproductive tract) ಕೆಳಭಾಗದಲ್ಲಿ ಅಂದರೆ ಯೋನಿ, ಯೋನಿಯ ಮೇಲ್ಭಾಗದ ಜನನ ದ್ವಾರಗಳಲ್ಲಿ ಉಂಟಾಗುವ ಸೊಂಕುಗಳು, ಪ್ರಜನನ ವಲಯದ ಮೇಲಿನ ಭಾಗದಲ್ಲಿರುವ ಗರ್ಭಕೋಶದ ಬಾಯಿ, ಗರ್ಭಕೋಶ, ಅಂಡನಾಳ ಮತ್ತು ಅಂಡಾಶಯಗಳಿಗೂ ಹರಡಿ ಕೀಲ್ಗುಳಿಯ ಉರಿಯೂತಕ್ಕೆ ಕಾರಣವಾಗುತ್ತವೆ. ಈ ಉರಿಯೂತದ ಚಿಹ್ನೆಗಳೆಂದರೆ ಕೆಳಹೊಟ್ಟೆಯ ನೋವು, ಜ್ವರ, ಅತಿಸ್ರಾವ ಇತ್ಯಾದಿಗಳು ಕೀಲ್ಗುಳಿಯ ದೀರ್ಘಕಾಲೀನ ಪರಿಣಾಮಗಳೆಂದರೆ:

  • ಬಸಿರು ಗರ್ಭಕೋಶದಲ್ಲಿ ಬೆಳೆಯದೆ ಗರ್ಭಕೋಶದಾಚೆ ಅಂಡನಾಳಗಳಲ್ಲಿಯೇ ಅಥವಾ ಇನ್ನೆಲ್ಲಿಯೋ ಬೆಳೆಯುವುದು ಇದನ್ನು ತಕ್ಷಣ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿ ಶಸ್ತ್ರ ಚಿಕಿತ್ಸೆಗಳನ್ನು ಮಾಡದಿದ್ದಲ್ಲಿ ಬಸುರಿಯ ಪ್ರಾಣಕ್ಕೇ ಅಪಾಯವುಂಟಾಗುವುದು.
  • ಕೀಲ್ಗುಳಿಯಲ್ಲಿನ ಜೀವಕೋಶಗಳು ಅಸಹಜವಾಗಿ ಒಂದಕ್ಕೊಂದು ಅಂಟಿಕೊಳ್ಳುವುದು.
  • ಸಂಭೋಗದಲ್ಲಿ ತೀವ್ರವೇದನೆಯಾಗುವುದು.
  • ಬಂಜೆತನ.

ಪ್ರಜನನ ವಲಯದ ಸೋಂಕುಗಳು, ತೀವ್ರವಾದ ಶಾರೀರಿಕ ನೋವುಗಳನ್ನು ಉಂಟುಮಾಡುವವಲ್ಲದೆ ಮಾನಸಿಕ ಒತ್ತಡಗಳನ್ನು, ವೈಯಕ್ತಿಕವಾದ ಸಂಕೋಚ/ಹಿಂಜರಿಕೆಗಳನ್ನು ಮತ್ತು ದಾಂಪತ್ಯ ಜೀವನದಲ್ಲಿ ಒಡಕನ್ನು ಉಂಟುಮಾಡುತ್ತವೆ. (ಕಾರ್ಕಲ್‌, ೧೯೯೬).

[1] ಅಷ್ಟೇ ಅಲ್ಲದೆ ಪ್ರಜನನ ವಲಯದ ಸೋಂಕುಗಳು ಬೆನ್ನು ಹಾಗೂ ಸೊಂಟದ ನೋವುಗಳನ್ನುಂಟು ಮಾಡುವುದರಿಂದ ಇವು ಮಹಿಳೆಯರ ಮನೆಗೆಲಸ ಹಾಗೂ ಹೊರಗಿನ ಉದ್ಯೋಗ/ಕೂಲಿ ಕೆಲಸಗಳಲ್ಲಿ ಅಡ್ಡಿಯುಂಟುಮಾಡಿ ಅವರ ಕಾರ್ಯಕ್ಷಮತೆಯನ್ನೇ ಕುಗ್ಗಿ ಸುತ್ತವೆ ಎಂಬುದನ್ನಿಲ್ಲಿ ಗಮನಿಸಬೇಕು.

ಸಾಮಾನ್ಯವಾಗಿ ಇಂತಹ ಕಾಯಿಲೆಗಳು ನಮ್ಮ ಮಹಿಳೆಯರಲ್ಲಿ ವ್ಯಾಪಕವಾಗಿದ್ದರೂ ಸಹ ತಮಗಿರುವ ಈ ರೋಗಗಳ ನೋವನ್ನು ಇತರರಿಗೆ ಹೇಳಿಕೊಳ್ಳಲೂ ನಾಚಿಕೆ/ಸಂಕೋಚಗಳಿಂದ ಹಿಂಜರಿಯುವವರೇ ಜಾಸ್ತಿ. ದುರದೃಷ್ಟವಶಾತ್‌ಈ ಬಗೆಯ ರೋಗಗಳು ಬಡವರ್ಗಗಳ ಹಾಗೂ ಗ್ರಾಮೀಣ ಪ್ರದೇಶಗಳ ಮಹಿಳೆಯರಲ್ಲಿಯೇ ಜಾಸ್ತಿ. ಈ ಮಹಿಳೆಯರಲ್ಲಿ ಬಹುತೇಕ ಮಂದಿ ತಮ್ಮ ಅನಾರೋಗ್ಯದಿಂದಾಗಿ ತಮ್ಮ ದೈನಂದಿನ ಕೆಲಸಗಳನ್ನು ಮಾಡಲಾಗದೇ ಹೋದಾಗ, ಅವರ ಬದುಕಿನ ಬಂಡಿ ನೂಕಲು ಮಾಡಬೇಕಾಗುವ ಕೂಲಿಗೆ ಹೋಗಲು ಸಾಧ್ಯವಾಗದೇ ಹೋಗುವವರೆಗೂ ತಮ್ಮ ಕಾಯಿಲೆಯನ್ನು ಅಲಕ್ಷಿಸುತ್ತಾರೆ. ಬಡವರ್ಗಗಳ ಮಹಿಳೆಯರಿರಲಿ ಮಧ್ಯಮವರ್ಗಗಳ ಮಹಿಳೆಯರೂ ಸಹ ತಮ್ಮ ಆರೋಗ್ಯವನ್ನು ಅಲಕ್ಷಿಸುವ ಇಂತಹ ಪ್ರವೃತ್ತಿ ಅಪರೂಪವೇನಲ್ಲ. ಅದರಲ್ಲಿಯೂ ಮಧ್ಯವಯಸ್ಸು ದಾಟಿದ ಅದರಲ್ಲಿಯೂ ಐವತ್ತರ ವಯಸ್ಸು ದಾಟಿದ ಮಹಿಳೆಯರ ‘‘ಬಿದ್ದುಹೋಗುವ ಮರಕ್ಕೇಕೆ ಆರೈಕೆ” ಎಂಬ ಮನಸ್ಥಿತಿಯನ್ನು ಮುಟ್ಟಿದ್ದು, ಅನಾರೋಗ್ಯ ಅವರನ್ನು ಪೂರ್ತಿಯಾಗಿ ಹಾಸಿಗೆ ಹಿಡಿಸುವವರೆಗೂ ಆರೋಗ್ಯ ತಪಾಸಣೆಗಾಗಲೀ ಚಿಕಿತ್ಸೆಗಾಗಲೀ ಸಿದ್ಧರಾಗುವುದಿಲ್ಲ. ಅಲ್ಲದೇ ಕುಟುಂಬಗಳೂ ಸಹ ಇಂತಹ ‘ತ್ಯಾಗಿಯ’ ‘ಹುತಾತ್ಮರ’ ನಡವಳಿಕೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತವೆ ಎನ್ನಬಹುದು. ಒಂದು ಅಧ್ಯಯನದ ಪ್ರಕಾರ ತಾಯ್ತನಕ್ಕೆ ಹೊರತುಪಡಿಸಿದ ಇಂತಹ ರೋಗಗಳಿಂದ ನರಳುವವರಲ್ಲಿ ಸಂಕೋಚ/ನಾಚಿಕೆಗಳಿಂದ ಕೇವಲ ೮% ಮಂದಿ ಮಾತ್ರ ಚಿಕಿತ್ಸೆ ಪಡೆಯಲು ಮುಂದಾಗಿದ್ದರು. ಹೀಗೆ ಈ ಕಾಯಿಲೆಗಳು, ವ್ಯಾಪಕವಾಗಿ ನೆಲೆಯೂರಿದ್ದರೂ ಸಹ ಕುಟುಂಬದ ಸಮುದಾಯದ ಹಾಗೂ ಸಮಾಜದ ಗಮನ ಸೆಳೆಯದೆ ನಮ್ಮ ಮಹಿಳೆಯರ ಬಾಯ್ಮುಚ್ಚಿ ನೋವುಣ್ಣುವ ಮೌನ ಸಂಸ್ಕೃತಿಯ ಸಾಗರದಲ್ಲಿ ಮುಳುಗಿ ಹೋಗಿವೆ ಎನ್ನಬಹುದು.

ಆದರೆ, ಸಂವೇದನಾಶೀಲ ಸಂಶೋಧಕರು ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕ ಹಾಗೂ ರಾಜಸ್ಥಾನ ಹಳ್ಳಿಗಳಲ್ಲಿ ಮತ್ತು ಬರೋಡಾ ಮುಂಬೈ ನಗರ ಪ್ರದೇಶಗಳಲ್ಲಿ ನಡೆಸಿರುವ ಒಟ್ಟು ಏಳು ಸಾಮುದಾಯಿಕ ಅಧ್ಯಯನಗಳು (Community Studies) ಮಹಿಳೆಯರ ಈ ‘ಮೌನ ಸಂಸ್ಕೃತಿಯನ್ನು’ ಬೇಧಿಸಿ ಇವುಗಳು ಎಷ್ಟು ವ್ಯಾಪಕವಾಗಿ ನಮ್ಮ ಮಹಿಳೆಯರಲ್ಲಿ ನೆಲೆಯೂರಿವೆ ಎಂಬುದನ್ನು ದೃಢಪಡಿಸಿವೆ (ಕೋಷ್ಟಕ ೧೭, ೧೮ ಮತ್ತು ೧೯ ಗಳನ್ನು ನೋಡಿ). ಈ ಅಧ್ಯಯನಗಳಿಗೆ ಒಳಗಾಗಿದ್ದ ಮಹಿಳೆಯರಲ್ಲಿ ಒಂದಲ್ಲ ಒಂದು ಇಂತಹ ರೋಗಗಳಿಂದ ನರಳುತ್ತಿರುವುದಾಗಿ ಹೇಳಿದ ಮಹಿಳೆಯರ ಸಂಖ್ಯೆ ೩೬% ರಿಂದ (ಕರ್ನಾಟಕ) ಹಿಡಿದು ೧೦೦% (ಗ್ರಾಮೀಣ ರಾಜಸ್ಥಾನ)ವರೆಗೂ ಇತ್ತು (ಕೋಷ್ಟಕ ೧೭ ಮತ್ತು ೧೮ ಗಳನ್ನು ನೋಡಿ).

ಮಹಾರಾಷ್ಟ್ರದ ಎರಡು ಬುಡಕಟ್ಟು ಗ್ರಾಮಗಳಲ್ಲಿ ನಡೆಸಲಾದ ಅಧ್ಯಯನಗಳಲ್ಲಿ[2] ಮೂವತ್ತು ವರ್ಷಗಳಿಗೂ ಮೇಲ್ಪಟ್ಟ ಆರನೂರ ಐವತ್ತು ಮಹಿಳೆಯರನ್ನು ಸರ್ವೇಕ್ಷಣೆಗೆ ಒಳಪಡಿಸಲಾಗಿದ್ದು ಅವರಲ್ಲಿ ೫೫% ರಷ್ಟು ಮಂದಿ ಒಂದಲ್ಲ ಒಂದು ಸ್ತ್ರೀರೋಗಗಳಿಂದ ನರಳುತ್ತಿದ್ದು ಅವರು ತಮ್ಮ ದೈನಂದಿನ ಕೆಲಸಗಳಲ್ಲಿ ತೊಂದರೆಯಾಗುತ್ತಿರುವಾಗಿ ವರದಿ ಮಾಡಿದ್ದಾರೆ. ಆದರೆ ಇದೇ ಅಧ್ಯಯನಕ್ಕೆ ಒಳಗಾದ ಮಹಿಳೆಯರನ್ನು ಪ್ರಯೋಗಾಲಯ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದಾಗ ಅವರಲ್ಲಿ ೯೨% ರಷ್ಟು ಮಂದಿ ಒಂದಲ್ಲ, ಸರಾಸರಿ ಇಂತಹ ಮೂರು ಕಾಯಿಲೆಗಳಿಂದ ಪೀಡಿತರಾಗಿರುವುದು ಕಂಡುಬಂದಿತು. ಇದೇ ಬಗೆಯ ಫಲಿತಾಂಶವನ್ನು ಕರ್ನಾಟಕ ಹಳ್ಳಿಗಳಲ್ಲಿ ನಡೆಸಿದ ಅಧ್ಯಯನದಲ್ಲಿಯೂ ನೋಡಬಹುದಾಗಿದೆ[3] (ಕೋಷ್ಟಕ-೧೮ ನೋಡಿ). ಇನ್ನು ಗುಜರಾತ್‌, ಪಶ್ಚಿಮ ಬಂಗಾಲ[4] ಹಾಗೂ ರಾಜಾಸ್ಥಾನಗಳ[5] ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಬರೋಡ ನಗರದಲ್ಲಿ ನಡೆದ ಸರ್ವೇಕ್ಷಣೆಗಳು ಸಹ ಇಂತಹ ತಾಯ್ತನಕ್ಕೆ ಹೊರತಾದ ಸ್ತ್ರೀರೋಗಗಳು ವ್ಯಾಪಕವಾಗಿರುವುದನ್ನು ಬಹಳ ಚೆನ್ನಾಗಿ ಸ್ಪಷ್ಟಪಡಿಸಿವೆ.

ಇನ್ನು ಈ ಏಳು ಅಧ್ಯಯನಗಳಲ್ಲಿ ೩೩% ರಿಂದ ೬೦%ರಷ್ಟು ಮಹಿಳೆಯರು ಮುಖ್ಯವಾಗಿ ತಾವು ಮುಟ್ಟಿನ ತೊಂದರೆಗಳನ್ನು ಅನುಭವಿಸುತ್ತಿರುವುದಾಗಿ ವರದಿ ಮಾಡಿದ್ದಾರೆ. ೧೩% ರಿಂದ ೭೮% ರಷ್ಟು ಮಹಿಳೆಯರು ಅತಿಸ್ರಾವದಿಂದ ಬಳಲುತ್ತಿದ್ದು, ಆರು ಅಧ್ಯಯನಗಳಲ್ಲಿ ಕೆಳಹೊಟ್ಟೆ ನೋವು ಮತ್ತು ಕೆಳಬೆನ್ನಿನ ನೋವುಗಳು ಅವರು ಅನುಭವಿಸುತ್ತಿದ್ದ ಇನ್ನಿತರ ಕಾಯಿಲೆಗಳಾಗಿದ್ದುದು ಕಂಡುಬಂದಿದೆ.

ಇನ್ನು ಇದೇ ಲೇಖಕಿಯ ಮಾರ್ಗದರ್ಶನದಲ್ಲಿ ಉತ್ತರ ಕರ್ನಾಟಕದಲ್ಲಿ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾದ ನಾಲ್ಕು ಅಧ್ಯಯನಗಳೂ ಸಹ ಇಂತಹ ಫಲಿತಾಂಶಗಳನ್ನೇ ನೀಡಿವೆ. ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಆಯ್ದ ಹಳ್ಳಿಗಳಲ್ಲಿ ಕುಟುಂಬದ ಪೂರ್ಣ ಯಜಮಾನಿಕೆ ಹೊತ್ತ ಲಂಬಾಣಿ ಮಹಿಳೆಯರ ಮೇಲೆ ನಡೆಸಲಾದ ಅಧ್ಯಯನದಲ್ಲಿ[6] ೯೮%ರಷ್ಟು ಮಂದಿ ಕಾಹಿಲೆಯಿದ್ದಾಗಲೂ ಹಾಗೂ ೭೭% ರಷ್ಟು ಮಂದಿ ಮುಟ್ಟಾಗಿರುವಾಗಲೂ ಕೂಲಿ ಕೆಲಸಕ್ಕೆ ಹಾಜರಾಗುತ್ತಿದ್ದು ಮುಖ್ಯವಾಗಿ ಭಾರ ಹೊರುವ ಅತಿಶ್ರಮದಾಯಕ ಕೆಲಸಗಳಲ್ಲಿ ವೇದನೆ ಅನುಭವಿಸುತ್ತಿದ್ದುದ್ದನ್ನು ವರದಿಮಾಡಿದ್ದಾರೆ. ಈ ಮಹಿಳೆಯ ರಲ್ಲಿ ೮೫% ರಷ್ಟು ಮಂದಿ ಕೃಷಿ ಕಾರ್ಮಿಕರಾಗಿದ್ದು ಕಳೆಕೀಳುವ, ನಾಟಿ ಹಾಕುವ, ಗೊಬ್ಬರ ಹಾಕುವ, ಕೊಯ್ಲು ಇತ್ಯಾದಿ ಶ್ರಮದಾಯಕ ಕೆಲಸ ಮಾಡುತ್ತಿದ್ದುದು ಕಂಡುಬಂದಿತು. ಎರಡನೆಯ[7] ಅಧ್ಯಯನವನ್ನು ಗದಗ್‌ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಳ್ಳಿಗಳಲ್ಲಿನ ಮಹಿಳಾ ಕೃಷಿ ಕಾರ್ಮಿಕರ ಮೇಲೆ ನಡೆಸಲಾಗಿದ್ದು ಅಧ್ಯಯನಕ್ಕೆ ಒಳಗಾದ ಮಹಿಳೆಯರಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ಮಹಿಳೆಯರು ಮೈಕೈ ನೋವನ್ನಲ್ಲದೆ ಮುಖ್ಯವಾಗಿ ಕೆಳಬೆನ್ನಿನ ನೋವಿನಿಂದ ನರಳುತ್ತಿದ್ದುದು ಕಂಡುಬಂದಿತು. ಆದರೆ ಇವರಲ್ಲಿ ೬೪% ರಷ್ಟು ಮಂದಿ ಮಾತ್ರ ಔಷಧಿ ತೆಗೆದುಕೊಂಡರೂ ಪೂರ್ತಿ ತೆಗೆದುಕೊಳ್ಳದೇ ಇದ್ದದ್ದು ಹಾಗೂ ೩೬%ರಷ್ಟು ಮಹಿಳೆಯರು ಕಾಯಿಲೆ ಅತ್ಯಂತ ತೀವ್ರವಾಗುವವರೆಗೂ ಔಷಧಿಯನ್ನೇ ತೆಗೆದುಕೊಳ್ಳದೇ ಇರುವುದನ್ನು ಗಮನಿಸಬೇಕಾಯಿತು.

ಇನ್ನು ಮೂರನೆಯ ಅಧ್ಯಯನದಲ್ಲಿ[8] ಭೂಹೀನ ಕುಟುಂಬಗಳ ಮಹಿಳೆಯರ ಪ್ರಜನನ ಆರೋಗ್ಯದ ಬಗ್ಗೆಯೇ ಗದಗ್‌ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಆಯ್ದ ಆರು ಹಳ್ಳಿಗಳಲ್ಲಿ ೧೫-೪೫ರ ವಯೋಮಾನದ ವಿವಾಹಿತ ಮಹಿಳೆಯರ ಆರೋಗ್ಯವನ್ನು ಅಭ್ಯಾಸಿಸಲಾಯಿತು. ಇವರಲ್ಲಿ ೨೩%ರಷ್ಟು ಮಂದಿ ಹೆರಿಗೆಯಲ್ಲಿ, ೨೦% ರಷ್ಟು ಬಸುರಿನಲ್ಲಿ ೧೩% ರಷ್ಟು ಹೆರಿಗೆಯನಂತರದ ಅವಧಿಯಲ್ಲಿ ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ ಇದಕ್ಕೂ ಹೆಚ್ಚಾಗಿ ತಾಯ್ತನಕ್ಕೆ ಹೊರತಾದ ಕಾಯಿಲೆಗಳಾದ ಮುಟ್ಟಿನ ತೊಂದರೆಯಿಂದ ಬಳಲುತ್ತಿದ್ದರೆ,

ಕೋಷ್ಟಕ೧೮: ಆರು ಸಮುದಾಯಿಕ ಅಧ್ಯಯನಗಳಲ್ಲಿ ವರದಿಯಾದ ಸ್ತ್ರೀರೋಗಗಳ ವ್ಯಾಪಕತೆ

ಅಧ್ಯಯನದ ನಡೆದ ಪ್ರದೇಶಗಳು ಈ ಕಾಯಿಲೆಗಳು ನರಳುತ್ತಿರುವುದಾಗಿ ಹೇಳಿಕೊಂಡ ಸ್ತ್ರೀಯರು ಸ್ತ್ರೀರೋಗಗಳಿಂದ ಬಳಲುತ್ತಿರುವುದಾಗಿ ಹೇಳಿದವರು ವರದಿ ಮಾಡಿದ ರೋಗಗಳ ಸರಾಸರಿ ಸಂಖ್ಯೆ ವೈದ್ಯಕೀಯ ಮತ್ತು ಪ್ರಯೋಗಾಲಯ ಪರೀಕ್ಷೆಗಳಲ್ಲಿ ಪತ್ತೆಯಾದ ರೋಗಿಗಳ ಸಂಖ್ಯೆ %
ಗ್ರಾಮೀಣ ಮಹಾರಾಷ್ಟ್ರ(೧) ೫೫ ಮಾಹಿತಿ ಲಭ್ಯವಿಲ್ಲ ೯೨
ಗ್ರಾಮೀಣ ಪಶ್ಚಿಮ ಬಂಗಾಳ (೨) ೬೫ ೨.೦೦ ೪೩
ಮುಂಬೈ (೩) ೭೪ ೨.೧೯ ೭೪
ಬರೋಡಾ (೪) ೬೫ ೧.೯೬ ೨೬
ಗ್ರಾಮೀಣ ಕರ್ನಾಟಕ (೫) ೩೯ ೧.೪೯ ೭೦
ಗ್ರಾಮೀಣ ಗುಜರಾತ್‌(೬) ೮೪ ೨.೬೧ ೪೩

 

ಕೋಷ್ಟಕ೧೯: ಏಳು ಸಮುದಾಯಿಕ ಅಧ್ಯಯನಗಳಲ್ಲಿ ಮಾಹಿತಿದಾರರು ಸ್ವವರದಿ ಮಾಡಿದ ಹೆಂಗಸರ ಕಾಯಿಲೆಗಳು

ಅಧ್ಯಯನ ನಡೆದ ಪ್ರದೇಶ ಮುಟ್ಟಿನ ತೊಂದರೆಗಳು ಇದ್ದವರ ಸಂಖ್ಯೆ % ಅತಿಹೆಚ್ಚಿನ ಸ್ರಾವ ಇದ್ದವರ ಸಂಖ್ಯೆ ಕೆಳ ಹೊಟ್ಟೆಯ ನೋವು, ಇದ್ದವರ ಸಂಖ್ಯೆ ಕೆಳ ಬೆನ್ನಿನ ನೋವು ಇದ್ದವರ ಸಂಖ್ಯೆ% ಸಂಭೋಗದಲ್ಲಿ ಅತೀವ ನೋವು ಇದ್ದವರ ಸಂಖ್ಯೆ% ಬಂಜೆತನ ಅನುಭವಿಸುತ್ತಿದ್ದವರ ಸಂಖ್ಯೆ% ಒಂದು ಅಥವಾ ಅದಕ್ಕಿಂತಾ ಹೆಚ್ಚು ಕಾಯಿಲೆಗಳಿದ್ದ ವರ ಸಂಖ್ಯೆ%
ಗ್ರಾಮೀಣ ೬೦ ೧೩ ೧೩ ೩೦ ೫೫*
ಮಹಾರಾಷ್ಟ್ರ (೧)
ಗ್ರಾಮೀಣ ಪಶ್ಚಿಮ ಬಂಗಾಳ (೨) ೩೩ ೫೦ ೧೭ ೬೫
ಮುಂಬೈ (೩) ೪೧ ೩೧ ೨೧ ೩೯ ಮಾ.ಇಲ್ಲ ೭೪
ಗ್ರಾಮೀಣ ಗುಜರಾತ್‌(೫) ೫೯ ೫೭ ಮಾ.ಇಲ್ಲ ೩೦ ಮಾ.ಇಲ್ಲ ೮೪
ಗ್ರಾಮೀಣ ರಾಜಸ್ಥಾನ್‌(೬) ೪೮ ೭೮ ೧೦ ೧೬ ೪೮ ಇ.ಮಾ.ಇಲ್ಲ ೧೦೦
ಗ್ರಾಮೀಣ ಕರ್ನಾಟಕ (೭) ೬೫ ೨೨ ೧೬ ಮಾ.ಇಲ್ಲ ಮಾ.ಇಲ್ಲ ೩೯

ಮೂಲ: . ಬಾಂಗ್ಮತ್ತಿತರರು ೧೯೮೯; , , ಮತ್ತು ಬರೋಡಾ ಸಿಟಿಜನ್ಕೌನ್ಸಿಲ್ಮತ್ತಿತರರು ೧೯೯೪; ಕಿಯೋನಿಗ್ಮತ್ತಿತರರು ೧೯೯೬; ಛಾಟಿಯಾ ಮತ್ತಿತರರು ೧೯೯೫ (ವಿವರಗಳಿಗೆ ಗ್ರಂಥಋಣ ನೋಡಿ).

ಕೆಳಹೊಟ್ಟೆ ನೋವು ಮತ್ತು ಕೆಳಬೆನ್ನಿನ ನೋವು ಇದರಲ್ಲಿ ಸೇರಿಲ್ಲ
ಇ. ಮಾ. ಇ. = ಮಾಹಿತಿ ಇಲ್ಲ
ಮಾ.ಇಲ್ಲ = ಮಾಹಿತಿ ಸಂಗ್ರಹಿಸಿಲ್ಲ.

ಕೋಷ್ಟಕ೨೦: ಏಳು ಸಮುದಾಯಿಕ ಅಧ್ಯಯನಗಳಲ್ಲಿ ವೈದ್ಯಕೀಯ ಪರೀಕ್ಷೆಗಳಲ್ಲಿ ಪತ್ತೆ ಮಾಡಲಾದ ಸ್ತ್ರೀರೋಗಗಳಿಂದ ನರಳುತ್ತಿದ್ದವರ ಸಂಖ್ಯೆ (%)

ಅಧ್ಯಯನ ನಡೆದ ಪ್ರದೇಶ ಯೋನಿಯ ಉರಿಯಾತದ ಕಾಯಿಲೆಗಳು ಗರ್ಭಕೋಶದ ಬಾಯಿಯ ಉರಿಯೂತ ಗರ್ಭಕೋಶದ ಬಾಯಿಯ ಸವೆತ ಕೀಲ್ಗುಳಿಯ ಉರಿಯೂತದ ಕಾಯಿಲೆಗಳು ಗರ್ಭಕೋಶ ಮತ್ತು ಇತರ ಜನಾಂಗಗಳು ಕೆಳಕ್ಕೆ ಜಾರಿರುವುದು ಪ್ರಾಥಮಿಕ ಮತ್ತು ಅನುಷಂಗಿಕ ಬಂಜೆತನ ಒಂದು ಅಥವಾ ಅದಕ್ಕಿಂತಾ ಹೆಚ್ಚು ಕಾಯಿಲೆಗಳು
ಗ್ರಾಮೀಣ ಮಹಾರಾಷ್ಟ್ರ ೬೨ ೧೯ ೪೬ ೨೪ <೧ ೬.೭೫ ೯೨
ಗ್ರಾಮೀಣ ಪಶ್ಚಿಮ ಬಂಗಾಳ (೨) ೧೪ ೦೧ ೧೭ ಮಾ.ಇಲ್ಲ ೪೩
ಮುಂಬೈ(೩) ೧೫ ೪೦ ೨೧ ೧೬ ೧೮ ಮಾ.ಇಲ್ಲ ೪೩
ಬರೋಡಾ (೪) ೧೧ ೧೩ ೦೫ ೦೮ ೦೮ ಮಾ.ಇಲ್ಲ ೨೬
ಗ್ರಾಮೀಣ ಗುಜರಾತ್‌(೫) ೧೦ ೦೮ ೨೦ ೦೮ ಮಾ.ಇಲ್ಲ ಮಾ.ಇಲ್ಲ ೪೩
ಗ್ರಾಮೀಣ ರಾಜಸ್ಥಾನ್‌(೬) ೧೩ ೨೪ ೧೦ ೧೧ ಮಾ.ಇಲ್ಲ ೭೦
ಗ್ರಾಮೀಣ ಕರ್ನಾಟಕ (೭) ೩೦ ೧೯ ೩೦ ೬೩ ೨೭ ಮಾ.ಇಲ್ಲ ೭೭

ಮೂಲ: . ಬಾಂಗ್ ಮತ್ತಿತರರು (೧೯೮೯) , , , ಬರೋಡಾ ಸಿಟಿಜನ್ಕೌನ್ಸಿಲ್ಮತ್ತಿತರರು (೧೯೯೪), . ಭಾಟಿಯಾ ಮತ್ತಿತರರು ೧೯೯೪. . ಕಿಯೋನಿಕ್ಮತ್ತಿತರರು (೧೯೯೬).

೫೩% ರಷ್ಟು ಮಂದಿ ಯೋನಿ ಸಂಬಂಧಿತ ಕಾಯಿಲೆ/ಸೋಂಕುಗಳಿಂದ, ೨೦% ರಷ್ಟು ಮಂದಿ ಹಾಗೂ ೨೭% ರಷ್ಟು ಮಂದಿ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದುದು ಕಂಡುಬಂದಿತು.

ನಾಲ್ಕನೆಯ ಅಧ್ಯಯನದಲ್ಲಿ[9] ಬಿಜಾಪುರ ತಾಲ್ಲೂಕಿನ ಲಂಬಾಣಿ ಮಹಿಳೆಯರಲ್ಲಿ ಪ್ರಜನನ ಆರೋಗ್ಯದ ಬಗ್ಗೆ ಇರುವ ಜ್ಞಾನ ಮತ್ತು ಆಚರಣೆಗಳನ್ನು ಅಧ್ಯಯನ ಮಾಡಲಾಯಿತು (೨೦೦೪). ಈ ಮಹಿಳೆಯರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ (೫೩%) ಮುಟ್ಟಿನ ಕಾಯಿಲೆಗಳಿಂದ ಹಾಗೂ ೧೬% ಯೋನಿ ಸಂಬಂಧಿತ ಕಾಯಿಲೆಗಳಿಂದ ನರಳುತ್ತಿರುವುದಾಗಿ ವರದಿ ಮಾಡಿದರು. ಈ ನಲ್ಕೂ ಅಧ್ಯಯನಗಳಲ್ಲಿ ಬಹುತೇಕ ಮಂದಿ ಮಹಿಳೆಯರು ತಮ್ಮ ಆರೋಗ್ಯವನ್ನು ಅದರಲ್ಲೂ ತಾಯ್ತನಕ್ಕೆ ಸಂಬಂಧಿಸದೇ ಇರುವ ಅನಾರೋಗ್ಯವನ್ನು ಅಲಕ್ಷಿಸುವುದು ಕಂಡುಬಂದಿತಲ್ಲದೆ, ಸರ್ಕಾರೀ ಆರೋಗ್ಯ ಸೌಲಭ್ಯಗಳನ್ನು ದಕ್ಕಿಸಿಕೊಳ್ಳುವಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡುಬಂದಿತು.

ಹೀಗೆ ತಾಯ್ತನಕ್ಕೆ ಸಂಬಂಧಿಸದೇ ಇರುವ ಆರೋಗ್ಯ ಸಮೀಕ್ಷೆ ಸಹ ಲೈಂಗಿಕ ಮತ್ತು ಪ್ರಜನನ ಆರೋಗ್ಯ ಸಮಸ್ಯೆಗಳು ನಮ್ಮ ಮಹಿಳೆಯರಲ್ಲಿ ವ್ಯಾಪಕವಾಗಿರುವುದು ಸುಸ್ಪಷ್ಟವಾಗಿದೆ. ಅಲ್ಲದೆ ನಮ್ಮ ದೇಶದಲ್ಲಿ ನಡೆಸಲಾದ ಎರಡನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಸಹ ಲೈಂಗಿಕ ಮತ್ತು ಪ್ರಜನನ ಆರೋಗ್ಯ ಸಮಸ್ಯೆಗಳು ವ್ಯಾಪಕವಾಗಿ ಮಹಿಳೆಯರಲ್ಲಿರುವುದನ್ನು ವರದಿ ಮಾಡಿದೆ.

ಅದೃಷ್ಟವಶಾತ್‌ಇಂದು ಸಾರ್ವಜನಿಕ ಆರೋಗ್ಯ ಇಲಾಖೆಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಎಚ್‌.ಐ.ವಿ. ಮತ್ತು ಏಡ್ಸ್‌ಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಪ್ರಜನನ ವಲಯದ ಕಾಯಿಲೆಗಳು ಮತ್ತು ಸೋಂಕುಗಳು ಎಚ್‌.ಐ.ವಿ. ಸೋಂಕಿಗೆ ಸುಲಭವಾಗಿ ತುತ್ತಾಗಬಹುದಾದ ಅಪಾಯದ ಅಂಚಿಗೆ ಮಹಿಳೆಯರನ್ನು ತಳ್ಳುವುದರಿಂದ ಇಂದು ಪ್ರಜನನ ವಲಯದ ಸೋಂಕು/ಕಾಯಿಲೆಗಳಿಗೂ ಸರ್ಕಾರೀ ಆರೋಗ್ಯ ಕಾರ್ಯಕ್ರಮಗಳಲ್ಲಿ ಸಾಕಷ್ಟು ಗಮನ ನೀಡಲೇಬೇಕಾದ ಅನಿವಾರ್ಯತೆಯುಂಟಾಗಿದೆ. ಹತ್ತನೆಯ ಪಂಚವಾರ್ಷಿಕ ಯೋಜನಾ ಆಯೋಗದ ಪ್ರಕಟನೆಯ[10] ಪ್ರಕಾರ ಕುಟುಂಬ ಕಲ್ಯಾಣ ಇಲಾಖೆಯು, ರಾಷ್ಟ್ರೀಯ ಏಡ್ಸ್‌ನಿಯಂತ್ರಣ ಸಂಸ್ಥೆಯ ಸಹಯೋಗದಲ್ಲಿ ಪ್ರಜನನ ವಲಯದ ಸೋಂಕುಗಳು ಹಾಗೂ ಲೈಂಗಿಕ ಸಂಪರ್ಕದಿಂದ ಉಂಟಾಗುವ ಸೋಂಕುಗಳನ್ನು (RTI/STI) ಪತ್ತೆ ಮಾಡುವ ಹಾಗೂ ನಿಯಂತ್ರಿಸುವ ಕಾರ್ಯಕ್ರಮಗಳನ್ನು ಜಿಲ್ಲೆ ಹಾಗೂ ಅದಕ್ಕೂ ಮೇಲ್ಪಟ್ಟ ಹಂತಗಳಲ್ಲಿ ಹಮ್ಮಿಕೊಂಡಿದೆ.

. ಅರ್ಬುದ ರೋಗ (ಗರ್ಭಕೋಶದ ಕ್ಯಾನ್ಸರ್‌)

ಅಭಿವೃದ್ಧಿಗೊಂಡ ಹಾಗೂ ಅಭಿವೃದ್ಧಿಶೀಲ ದೇಶಗಳಲ್ಲಿ ಅರ್ಬುದ ರೋಗವು (ಕ್ಯಾನ್ಸರ್‌) ವಯಸ್ಕ ಮಹಿಳೆಯರ ಮರಣಗಳ ಮೂರು ಮುಖ್ಯ ಕಾರಣಗಳಲ್ಲಿ ಒಂದು.[11] ಅಭಿವೃದ್ಧಿಗೊಂಡ ದೇಶಗಳಲ್ಲಿ ಸ್ತನದ ಕ್ಯಾನ್ಸರ್‌ಅಲ್ಲಿನ ಮಹಿಳೆಯರನ್ನು ಕಾಡುತ್ತಿದ್ದರೆ, ಅಭಿವೃದ್ಧಿಶೀಲ ಬಡದೇಶಗಳಲ್ಲಿ ಗರ್ಭಕೋಶದ ಬಾಯಿಯ ಕ್ಯಾನ್ಸರ್‌ಮಹಿಳೆಯರಿಗೆ ಮಾರಕವಾಗಿದೆ. ನಮ್ಮ ದೇಶದಲ್ಲಿ ಮಹಿಳೆಯರಲ್ಲಿ ಉಂಟಾಗುವ ಮರಣಾಂತಿಕವಾದ ಅರ್ಬುದ ರೋಗಗಳ ಮೂರನೆಯ ಒಂದು ಭಾಗದಷ್ಟು ಹೊರೆ ಗರ್ಭಕೋಶದ ಬಾಯಿಯ ಕ್ಯಾನ್ಸರಿನದ್ದೇ (Cerival cancer) ಆಗಿದೆ. ಇನ್ನೊಂದು ಅಂದಾಜಿನ ಪ್ರಕಾರ ಮಹಿಳೆಯರನ್ನು ಕಾಡುವ ಕ್ಯಾನ್ಸರ್‌ಗಳಲ್ಲಿ ಗರ್ಭಕೋಶದ ಕ್ಯಾನ್ಸರ್‌ನ ಪ್ರಮಾನ ೨೩% ರಿಂದ ೪೭% ರಷ್ಟಿದೆ (ICMR, 1988)[12] ಬಾಲ್ಯದಲ್ಲಿಯೇ ಮದುವೆಯಾಗುವುದು, ಮೈನೆರೆದ ತಕ್ಷಣ ಸಂಭೋಗಕ್ಕೆ ಒಳಗಾಗುವುದು, ಮೇಲಿಂದ ಮೇಲೆ ಬಸಿರಾಗುವುದು, ಆಗಾಗ ಪ್ರಜನನ ನಾಳದ ಸೋಂಕುಗಳಿಂದ ನರಳುವುದು ಹಾಗೂ ಪುರುಷ ಸಂಗಾತಿಯ ಲೈಂಗಿಕ ಅಸ್ವಚ್ಛತೆಗಳನ್ನು ಗರ್ಭಕೋಶದ ಕ್ಯಾನ್ಸರಿಗೆ ಕಾರಣಗಳೆಂದು ಗುರ್ತಿಸಲಾಗಿದೆ. ನಮ್ಮ ಸಮಾಜ ಹಾಗೂ ಕುಟುಂಬಗಳಲ್ಲಿ ನೆಲೆಯೂರಿರುವ ಲಿಂಗ ಪಕ್ಷಪಾತದಿಂದಾಗಿ ಮಹಿಳೆಯರ ಆರೋಗ್ಯ ಅಲಕ್ಷ್ಯಕ್ಕೆ ಒಳಗಾಗುತ್ತಿರುವುದರಿಂದ ಅನೇಕ ವೇಳೆ ರೋಗ ಪತ್ತೆಯಾಗುವುದು ನಿಧಾನವಾಗುತ್ತದೆ, ನಂತರ ಪತ್ತೆಯಾದರೂ ಕೆಲವೇಳೆ ಸಕಾಲದಲ್ಲಿ ಚಿಕಿತ್ಸೆ ಅವಳಿಗೆ ಸಿಗುವುದಿಲ್ಲ. ಅರ್ಬುದ ರೋಗ ನಿಧಾನ (Diagnosis) ಸೌಲಭ್ಯಗಳು ಸಾಕಷ್ಟು ಇಲ್ಲದಿರುವುದು ಹಾಗೂ ದುಬಾರಿಯಾದ ಚಿಕಿತ್ಸೆಯಿಂದಾಗಿ ಮತ್ತು ಒಳ್ಳೆಯ ಗುಣಮಟ್ಟದ ಚಿಕಿತ್ಸೆಯನ್ನು ದಕ್ಕಿಸಿಕೊಳ್ಳಲಾಗದೇ ಸಾವನ್ನಪ್ಪುವವರೇ ಜಾಸ್ತಿ.[13]

ಇನ್ನು ಈ ರೋಗವನ್ನು ತಡೆಗಟ್ಟುವಲ್ಲಿ ಹೆಚ್ಚಿನ ಪ್ರಯತ್ನಗಳಾಗಬೇಕಾಗಿದೆ. ಗರ್ಭಕೋಶದ ಕ್ಯಾನ್ಸರಿನ ಬಗ್ಗೆ ಮಹಿಳೆಯರಲ್ಲಿ ಅದರಲ್ಲಿಯೂ ಬಡ ಗ್ರಾಮೀಣ ಮಹಿಳೆಯರಲ್ಲಿ ಹಾಗೂ ಕೊಳಗೇರಿಗಳ ಮಹಿಳೆಯರಲ್ಲಿ ಅರಿವು ಮೂಡಿಸಬೇಕಾಗಿದೆ. ಜೊತೆಗೇ ಬಾಲ್ಯ ವಿವಾಹದಂತಹ ಪದ್ಧತಿಗಳನ್ನು ತೊಡೆಯುವುದರೊಂದಿಗೇ ಮಹಿಳೆಯರ ಆರೋಗ್ಯಕ್ಕೆ ಮಾರಕವಾಗುವ ಹಲವಾರು ನಂಬಿಕೆ, ಆಚರಣೆಗಳನ್ನು ಅಳಿಸಿಹಾಕಬೇಕಾದ ಅಗತ್ಯವಿದೆ. ಇದನ್ನು ತಡೆಗಟ್ಟಲು ಇರುವ ಮುಖ್ಯವಾದ ವೈದ್ಯಕೀಯ ಉಪಾಯವೆಂದರೆ ನಿಯಮಿತವಾಗಿ ಸ್ತ್ರೀಯರ ಗರ್ಭಕೋಶದ ಬಾಯಿಯ ಸ್ಥೂಲ ತಪಾಸಣೆ ನಡೆಸುವುದು (Cervical Screening). ಅದರಲ್ಲಿಯೂ ೩೫ ವರ್ಷ ದಾಟಿದ ಹಾಗೂ ಐವತ್ತರ ವಯಸ್ಸನ್ನು ದಾಟಿದ ಮಹಿಳೆಯರನ್ನು ಈ ಪರೀಕ್ಷೆಗೆ ಒಳಪಡಿಸುವುದು ಅಗತ್ಯ. ಏಕೆಂದರೆ ನಮ್ಮ ದೇಶದಲ್ಲಿ ಈ ಕ್ಯಾನ್ಸರಿನಿಂದ ಬಳಲುವ ಸ್ತ್ರೀಯರಲ್ಲಿ ೧೭% ಮೂವತ್ತೈದರಿಂದ ನಲ್ವತ್ತೊಂಬತ್ತು ವರ್ಷಗಳ ವಯೋಮಿತಿಯಲ್ಲಿರುವವರಾಗಿದ್ದರೆ, ೬೯% ರಷ್ಟು ಮಂದಿ ಐವತ್ತು ವರ್ಷಕ್ಕೆ ಮೇಲ್ಪಟ್ಟ ಮಹಿಳೆಯರಾಗಿದ್ದಾರೆ.13 ಈ ವಯೋಮಾನಗಳ ಮಹಿಳೆಯರು ತಮ್ಮ ಕುಟುಂಬಕ್ಕೆ ಬೇಕಾಗಿರುವಷ್ಟು ಸಂಖ್ಯೆಯ ಹಾಗೂ ಲಿಂಗದ ಮಕ್ಕಳನ್ನು ಹೆತ್ತು ಸಾಮಾನ್ಯವಾಗಿ ತಮ್ಮ ಪ್ರಜನನ ಬದುಕನ್ನೇ ಮುಗಿಸಿರುವುದರಿಂದ ಕುಟುಂಬ ಅವರ ಆರೋಗ್ಯವನ್ನು ಅಲಕ್ಷಿಸುವುದಲ್ಲದೇ ಮಹಿಳೆಯರೇ ತಮ್ಮ ಆರೋಗ್ಯವನ್ನು ಅಲಕ್ಷಿಸುವುದು ಸಾಮಾನ್ಯ. ಹಾಗಾಗಿ ಮಹಿಳೆಯರಲ್ಲಿನ ಕ್ಯಾನ್ಸರ್‌, ಅಲಕ್ಷಿತವಾದ ಒಂದು ಪ್ರಮುಖ ಮರಣಾಂತಿಕ ರೋಗವಾಗಿದೆ.

ಆದರೆ ಈ ರೋಗವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (Primary Health Centre and Community Health Centre) ಕಂಡುಹಿಡಿಯಬಹುದಾಗಿದೆ. ಗರ್ಭಕೋಶದ ಬಾಯಿಯ ಕ್ಯಾನ್ಸರ್‌ಮೊದಲನೇ ಹಂತ ಅಥವಾ ಎರಡನೆಯ ಹಂತದಲ್ಲಿದ್ದರೂ ಸಹ ಬೇಗನೆ ಚಿಕಿತ್ಸೆ ನೀಡುವುದರಿಂದ ಗುಣಪಡಿಸಬಹುದಾಗಿದೆ. ಕೇಂದ್ರ ಸರ್ಕಾರವೇ ಪ್ರಕಟಿಸಿರುವ ಹತ್ತನೇ ಪಂಚವಾರ್ಷಿಕ ಯೋಜನೆಯ ಅಧಿಕೃತ ಪ್ರಕಟನೆಯ ಪ್ರಕಾರ ಈ ಯೋಜನಾವಧಿಯಲ್ಲಿ (೨೦೦೨-೦೭) ಎಲ್ಲಾ ಸರ್ಕಾರೀ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ತ್ರೀರೋಗ ತಜ್ಞ ವೈದ್ಯರನ್ನು ನೇಮಕ ಮಾಡಿ ರೋಗ ನಿಧಾನ ಮತ್ತು ಚಿಕಿತ್ಸೆಗೆ ಬೇಕಾಗಿರುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಸ್ತ್ರೀರೋಗಿಗಳನ್ನು ಶಸ್ತ್ರ ಚಿಕಿತ್ಸಾ ಸೌಲಭ್ಯಗಳಿರುವ ಜಿಲ್ಲಾ ಆಸ್ಪತ್ರೆಗಳಿಗೆ ವೈದ್ಯರು ಕಳುಹಿಸುತ್ತಾರೆ.10 ಒಂದು ಮತ್ತು ಎರಡನೆಯ ಹಂತಗಳಲ್ಲಿರುವ ಕ್ಯಾನ್ಸರ್‌ಅನ್ನು ಗುರ್ತಿಸಿ, ಚಿಕಿತ್ಸೆ ನೀಡುವ ಕಡೆಗೆ ರೋಗಿಗಳನ್ನು ಆದಷ್ಟೂ ಬೇಗ ಕಳುಹಿಸಿದಲ್ಲಿ ಈ ಕ್ಯಾನ್ಸರಿನಿಂದ ಉಂಟಾಗುವ ಮಹಿಳಾ ರೋಗಿಗಳ ಮರಣ ಸಂಖ್ಯೆಯನ್ನು ತಗ್ಗಿಸಲು ಸಾಧ್ಯ. ಆದರೆ ೨೦೦೭ರಲ್ಲಿ ಕೊನೆಗೊಳ್ಳಲಿರುವ ಹತ್ತನೆಯ ಪಂಚವಾರ್ಷಿಕ ಯೋಜನೆಯ ಈ ಭರವಸೆಗಳನ್ನು ಎಷ್ಟರ ಮಟ್ಟಿಗೆ ನೆರವೇರಿಸಲಾಗಿದೆ ಎಂಬುದರ ಮೌಲ್ಯಮಾಪನ ಇನ್ನೂ ನಡೆಯಬೇಕಾಗಿದೆ.

. ಕ್ಷಯರೋಗ

ಶ್ವಾಸಕೋಶದ ಕ್ಷಯ ಭಾರತದಲ್ಲಿ ೧೯೮೧ ರಿಂದ ೧೯೯೪ರವರೆಗಿನ ಅಂಕಿ ಅಂಶಗಳ ಪ್ರಕಾರ ಪ್ರಜನನ ವಯೋಮಾನದ (೧೫ ರಿಂದ ೪೪ ವರ್ಷಗಳು) ಮಹಿಳೆಯರಲ್ಲಿ ಉಂಟಾಗುವ ಸಾವುಗಳ ಮೊದಲ ಹತ್ತು ಕಾರಣಗಳಲ್ಲಿ ಸತತವಾಗಿ ಪ್ರತಿ ವರ್ಷವೂ ಮೊಟ್ಟಮೊದಲ ಸ್ಥಾನದಲ್ಲಿಯೇ ಇತ್ತು.12 ತೀರಾ ಇತ್ತೀಚಿನ ವರದಿಯೊಂದರ ಪ್ರಕಾರ (೨೦೦೬) ಸಹ ಶ್ವಾಸಕೋಶದ ಕ್ಷಯದಿಂದಾಗಿ ಸಾಯುವ ಪ್ರಜನನ ವಯೋಮಾನದಲ್ಲಿರುವ ಸ್ತ್ರೀಯರ ಸಂಖ್ಯೆ ಬಸಿರು ಹಾಗೂ ಹೆರಿಗೆಗಳಲ್ಲಿ ತಾಯ್ತನದ ಕಾರಣಗಳಿಂದ ಸಾಯುವ ಒಟ್ಟು ಮಹಿಳೆಯರ ಸಂಖ್ಯೆಗಿಂತಾ ಹೆಚ್ಚಾಗಿಯೇ ಇದೆ.13 ಆದರೂ ಸಹ ತಾಯ್ತನದ ಅನಾರೋಗ್ಯಕ್ಕೆ ಹಾಗೂ ಎಚ್‌.ಐ.ವಿ. ಮತ್ತು ಏಡ್ಸ್‌ಗಳ ನಿವಾರಣೆಗೆ ಸಿಕ್ಕಿರುವ ಸಾರ್ವಜನಿಕ ಪ್ರಚಾರವಾಗಲೀ, ಸಾರ್ವಜನಿಕ ಆರೋಗ್ಯ ಸೇವಾ ಸೌಲಭ್ಯಗಳಾಗಲೀ, ಕ್ಷಯರೋಗದ ಬಗ್ಗೆ ಇಲ್ಲದಿರುವುದು ಅಚ್ಚರಿಯ ಸಂಗತಿಯಾಗಿದೆ. ಬಡವರ್ಗಗಳಲ್ಲಿ ವ್ಯಾಪಕವಾಗಿರುವ ಅಪಪೋಷಣೆ, ಅರ್ನಿಮೈಲ್ಯದ ಪರಿಸರ ಆಹಾರದ ಅಭಾವ, ಸ್ವಚ್ಛ ಗಾಳಿ ಬೆಳಕು ನೀರುಗಳಿಲ್ಲದ ಎಡೆಗಳಲ್ಲಿ ವಾಸಮಾಡಬೇಕಾಗಿರುವ ಅನಿವಾರ್ಯತೆಗಳಿಂದಾಗಿ ಉಂಟಾಗುವ ಕ್ಷಯರೋಗದ ಬಗ್ಗೆ ಇರಬೇಕಾಗಿರುವಷ್ಟು ಕಾಳಜಿಯಿಲ್ಲದಿರುವುದು ಪ್ರಶ್ನಾರ್ಹ.

ಕ್ಷಯರೋಗವು ಬಡದೇಶಗಳಲ್ಲಿಯೇ ಅತ್ಯಧಿಕವಾಗಿದೆ. ವಿಶ್ವದ ೯೫% ರಷ್ಟು ಕ್ಷಯರೋಗಿಗಳೂ ಹಾಗೂ ೯೮% ರಷ್ಟು ಕ್ಷಯರೋಗದಿಂದ ಉಂಟಾಗುವ ಸಾವುಗಳೂ ಅಭಿವೃದ್ಧಿಶೀಲ ದೇಶಗಳಲ್ಲಿಯೇ ಕಂಡುಬರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ತೀರಾ ಇತ್ತೀಚಿನ ವರದಿಯ ಪ್ರಕಾರ (೨೦೦೬) ವಿಶ್ವದ ಕ್ಷಯರೋಗ ಪೀಡಿತ ದೇಶಗಳಲ್ಲಿಯೇ ಮೊದಲ ಸ್ಥಾನದಲ್ಲಿರುವುದು ಭಾರತ. ಅಲ್ಲದೆ ಜಗತ್ತಿನಲ್ಲಿ ಹೊಸದಾಗಿ ಕ್ಷಯರೋಗಕ್ಕೆ ತುತ್ತಾಗುವವರ ಸಂಖ್ಯೆ ಅತ್ಯಂತ ಹೆಚ್ಚಾಗಿರುವ ದೇಶವೆಂದರೆ ನಮ್ಮ ಭಾರತವೇ ಆಗಿದೆ.[14] ಇಲ್ಲಿ ಗಮನಿಸಬೇಕಾದ ಗಂಭೀರ ವಿಷಯವೆಂದರೆ ಹೆಂಗಸರು ಅದರಲ್ಲಿಯೂ ೧೫ ರಿಂದ ೪೪ ವರ್ಷದೊಳಗಿನವರೇ ಈ ಸೋಂಕಿಗೆ ಬಲಿಯಾಗುತ್ತಿರುವುದೇ ಆಗಿದೆ. ಮನೆಯಲ್ಲಿ ಗಂಡ, ಮಾವ, ಅತ್ತೆ, ಮಕ್ಕಳು ಅಥವಾ ಇನ್ಯಾರೇ ಸದಸ್ಯರು ಕ್ಷಯರೋಗಿಯಾದಲ್ಲಿ ಅವರ ಸೇವೆಯನ್ನು ಮಹಿಳೆಯೇ ಮಾಡಬೇಕಾಗಿದ್ದು ಅವಳು ಬಲು ಬೇಗನೇ ಸೋಂಕಿಗೆ ಬಲಿಯಾಗುತ್ತಾಳೆ. ೧೯೯೬ರಲ್ಲಿ ಮಹಾರಾಷ್ಟ್ರದ ಜಿಲ್ಲೆಯೊಂದರಲ್ಲಿ ನಡೆಸಿದ ಲಿಂಗತ್ವ ದೃಷ್ಟಿಕೋನದ (Gender perspective) ಅಧ್ಯಯನವೊಂದು, ಕ್ಷಯರೋಗದ ಸಾಮಾಜಿಕ ಕಳಂಕದ ಹೊರೆಯು ಮಹಿಳೆಯರ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುವುದನ್ನು ಸಾಬೀತುಪಡಿಸಿದೆ.[15] ಮಹಿಳೆ ಕ್ಷಯ ರೋಗಿಯಾದಲ್ಲಿ ಗಂಡನ ಮನೆಯವರು ಅವಳ ಚಿಕಿತ್ಸೆಯ ಖರ್ಚನ್ನು ಭರಿಸಲು ಆಗದೆಂದೋ ಅಥವಾ ಇಷ್ಟವಿಲ್ಲದೆ ಚಿಕಿತ್ಸೆ ಕೊಡಿಸದೇ ಅಲಕ್ಷ್ಯ ಮಾಡುವುದು ಕಂಡುಬಂದಿದೆ. ಕ್ಷಯರೋಗಕ್ಕೆ ಔಷಧಿಗಳನ್ನು ಉಚಿತವಾಗಿ ನೀಡುತ್ತಿರುವ ಸಂದರ್ಭಗಳಲ್ಲಿಯೂ ಸಹ ಮಹಿಳೆಯ ಚಿಕಿತ್ಸೆಯನ್ನು ಅಲಕ್ಷಿಸುವ ನಡವಳಿಕೆಯನ್ನು ಅವಳ ಗಂಡನ ಮನೆಯವರು ತೋರ್ಪಡಿಸುತ್ತಿರುವುದನ್ನು ಈ ಅಧ್ಯಯನದಲ್ಲಿ ಗಮನಿಸಲಾಯಿತು. ಹೆಂಡತಿ, ಮಗಳು, ಸೊಸೆ, ತಾಯಿ ಇತ್ಯಾದಿ ಭೂಮಿಕೆಗಳಲ್ಲಿ ಸ್ತ್ರೀಯರು ಪುರುಷ ಕ್ಷಯರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದರೂ ಅಂತಹುದೇ ನಡವಳಿಕೆಯನ್ನು ತಮ್ಮ ಕುಟುಂಬದ ಮಹಿಳಾ ಕ್ಷಯರೋಗಿಯ ಬಗ್ಗೆ ತೋರಿಸದೇ ಇರುವುದು ಕಂಡುಬಂದಿತು. ಕ್ಷಯರೋಗಿಯಾದ ಮಹಿಳೆಯನ್ನು ಕೆಲವು ವೇಳೆ ತವರಿಗೇ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು. ಅಥವಾ ಅವಳನ್ನು ತವರಿಗೇ ಮರಳಿಸಿ ತ್ಯಜಿಸಲಾಗಿತ್ತು. ಇನ್ನು ಕೆಲವು ವೇಳೆ ವಿವಾಹಿತ ಸ್ತ್ರೀಗೆ ಕ್ಷಯರೋಗವಿರುವುದು ಪತ್ತೆಯಾದ ನಂತರ ಅದು ಅವಳನ್ನು ಪತಿಯಿಂದ ಬೇರ್ಪಡಿಸುವುದರಲ್ಲಿ ಅಥವಾ ಪತಿಯು ಅವಳನ್ನು ಪೂರ್ತಿಯಾಗಿ ಪರಿತ್ಯಜಿಸುವುದರಲ್ಲಿ ಕೊನೆಗಾಣುತ್ತಿತ್ತು.

ಕ್ಷಯರೋಗವು ಪುರುಷರಲ್ಲಿ ಆರ್ಥಿಕ ಸಂಕಷ್ಟಗಳ ಬಗ್ಗೆ ಚಿಂತೆಯನ್ನು ಉಂಟುಮಾಡಿದರೆ, ಸ್ತ್ರೀಯರಲ್ಲಿ, ತಾವು ಗಂಡನಿಂದ ತಿರಸ್ಕರಿಸಲ್ಪಡುವ, ಗಂಡನ ಹತ್ತಿರದ ಸಂಬಂಧಿಗಳಿಂದ ಅವಹೇಳನ, ಕಿರುಕುಳಗಳನ್ನು ಎದುರಿಸಬೇಕಾಗುವ ಭಯವನ್ನು ಉಂಟುಮಾಡುವುದು ಕಂಡುಬಂದಿತು. ಅವಿವಾಹಿತ ಸ್ತ್ರೀಯರಲ್ಲಿ ಮದುವೆ ಆಗದೆಯಿರುವ ಚಿಂತೆಯನ್ನು ಈ ಕಾಯಿಲೆಯು ಉಂಟುಮಾಡುತ್ತಿತ್ತು. ಹೀಗೆ ಕಾಯಿಲೆ ಒಂದೇ ಆಗಿದ್ದರೂ ಸಹ ನಮ್ಮ ಸಮಾಜದಲ್ಲಿರುವ ಲಿಂಗತ್ವದ ಕಾರಣಗಳಿಂದಾಗಿ ಅದರ ಪರಿಣಾಮಗಳು ಸ್ತ್ರೀ ಮತ್ತು ಪುರುಷರಲ್ಲಿ ವಿಭಿನ್ನವಾಗಿ ಇರುವುದನ್ನು ಕಾಣಬಹುದು.

ಹೀಗೆ, ಇಂತಹ ಭಯಗಳಿಂದಾಗಿ ಸ್ತ್ರೀಯರಲ್ಲಿ ಕ್ಷಯ ಕಂಡುಬಂದ ತಕ್ಷಣ/ಪತ್ತೆಯಾದ ತಕ್ಷಣ, ಚಿಕಿತ್ಸೆ ಪಡೆಯುವಲ್ಲಿ ಮಹಿಳೆಯರು ಅತ್ಯಂತ ಹಿಂಜರಿಕೆಯಿಂದ ವಿಳಂಬ ಮಾಡುವುದರಿಂದ ತಕ್ಷಣ ನೀಡಬೇಕಾಗಿರುವ ಚಿಕಿತ್ಸೆ ಅವರಿಗೆ ಸಿಗುವುದು ಅಪರೂಪವೇ, ಹಾಗಾಗಿ ಅವರಿಗೆ ಕೊಡಿಸುವ ಚಿಕಿತ್ಸೆ ವಿಳಂಬ ಚಿಕಿತ್ಸೆಯಾಗಿರುತ್ತದೆ. ಅಲ್ಲದೇ ಸತತವಾಗಿ ಸ್ತ್ರೀ ಕ್ಷಯರೋಗಿಗೆ ಕೊಡಿಸಬೇಕಾದ ಆರು ತಿಂಗಳುಗಳ ಚಿಕಿತ್ಸೆ ಕೊಡಿಸಲು ಮಾಡಬೇಕಾಗುವ ಖರ್ಚನ್ನು ಭರಿಸಲು ಗಂಡನ ಮನೆಯವರು ಹಿಂದೆ ಮುಂದೆ ನೋಡುವುದು ಅಥವಾ ಹಾಗೆ ಖರ್ಚು ಮಾಡಲು ಅವರಿಗೆ ಇಷ್ಟವಿಲ್ಲದೇ ಇರುವುದೂ ಸ್ತ್ರೀಯರಿಗೆ ತಮ್ಮ ರೋಗಗಳನ್ನು ಬೇಗನೆ ಗುಣಪಡಿಸಿಕೊಳ್ಳಲು ಇರುವ ಮುಖ್ಯ ಅಡ್ಡಿಯಾಗಿದೆ. ಅಲ್ಲದೇ ಕ್ಷಯರೋಗಿಯಾದ ಸ್ತ್ರೀಯರನ್ನು ಬಹಳಷ್ಟು ಪ್ರಕರಣಗಳಲ್ಲಿ ತವರಿಗೇ ಮರಳಿಸಿ ಪರಿತ್ಯಜಿಸುವುದೂ ಸಾಮಾನ್ಯ. ಇನ್ನುಳಿದ ಪ್ರಕರಣಗಳಲ್ಲಿ ಕ್ಷಯರೋಗಿಯಾದ ಮಹಿಳೆಗೆ ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸೆಗಳೂ ಸಹ ಹೊಸ ಸಮಸ್ಯೆಗಳನ್ನು ಒಡ್ಡುತ್ತವೆ. ಆಕೆ ಚಿಕಿತ್ಸೆಗಾಗಿ ಆರೋಗ್ಯ ಚಿಕಿತ್ಸಾಲಯಕ್ಕೆ ಹೋಗಲು ಬೇಕಾಗುವ ಪ್ರಯಾಣದ ಖರ್ಚು, ಔಷಧಿಗಳು ಚಿಕಿತ್ಸೆಗಳ ಖರ್ಚು ಹಾಗೂ ಮನೆಯಿಂದಾಚೆ ಹೋಗುವಾಗ ಕುಟುಂಬದ ಸದಸ್ಯರೊಂದಿಗೇ ಹೋಗಬೇಕೆಂಬ ಒತ್ತಡ ಇತ್ಯಾದಿಗಳನ್ನು ನಿಭಾಯಿಸುವುದು ಮಹಿಳೆಯರಿಗೆ ಅದರಲ್ಲಿಯೂ ಬಡಮಹಿಳೆಯರಿಗೆ ಸುಲಭ ಸಾಧ್ಯವಲ್ಲ. ಮನೆಯಲ್ಲಿ ಅವಳ ಮಕ್ಕಳನ್ನು ನೋಡಿಕೊಳ್ಳುವ ಪರ್ಯಾಯ ವ್ಯವಸ್ಥೆ ಸಾಧ್ಯವಿಲ್ಲದೇ ಇದ್ದಲ್ಲಿ ಅಥವಾ ಅಂತಹ ವ್ಯವಸ್ಥೆ ಮಾಡಲಾಗದಿದ್ದಲ್ಲಿ ಅವಳಿಗೆ ಸಕಾಲದಲ್ಲಿ ಒಳ್ಳೆಯ ಗುಣಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಎಲ್ಲಕ್ಕಿಂತಾ ಮಿಗಿಲಾಗಿ ಮಹಿಳೆಯರಿಗೆ ತಮ್ಮ ಪರಾಧೀನತೆಯಿಂದಾಗಿ ಕುಟುಂಬದ ಹಣವನ್ನು ತಮ್ಮ ಚಿಕಿತ್ಸೆಗಾಗಿ ಖರ್ಚು ಮಾಡುವುದು ಸುಲಭ ಸಾಧ್ಯವಲ್ಲ. ಅಂತಹ ಚಿಕಿತ್ಸೆಯನ್ನು ಮುಂದೂಡುತ್ತಾ ತನಗೆ ತುರ್ತಾಗಿ ಬೇಕಾಗಿರುವ ಚಿಕಿತ್ಸೆಗೆ ಎರವಾಗುತ್ತಾ ಹೋಗುವುದು ಸಾಮಾನ್ಯ, ಎಂಬುದಾಗಿ ಮಹಿಳಾ ಆರೋಗ್ಯ ಮತ್ತು ಅಭಿವೃದ್ಧಿಯನ್ನು ಕುರಿತ ರಾಷ್ಟ್ರೀಯ ವರದಿಯೊಂದು ವಿಶ್ಲೇಷಿಸಿದೆ.12 ಸಾಮಾನ್ಯವಾಗಿ ಮಹಿಳೆಯರು ಅದರಲ್ಲೂ ವಿಶೇಷವಾಗಿ ಬಡಮಹಿಳೆಯರು ತಮ್ಮ ಅನಾರೋಗ್ಯ ತೀವ್ರವಾಗಿ ಉಲ್ಬಣಿಸುವವರೆಗೂ ಸುಮ್ಮನೇ ಇದ್ದು ನಂತರ ವೈದ್ಯರ ಬಳಿಗೆ ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ಚಿಕಿತ್ಸೆ ಪಡೆಯಲು ಧಾವಿಸುವಂತೆ ಮಾಡುವಲ್ಲಿ ಈ ಎಲ್ಲಾ ಲಿಂಗತ್ವಾಧಾರಿತ ಅಂಶಗಳು ಮಹಿಳೆಯರ ಎಲ್ಲಾ ಕಾಯಿಲೆಗಳಿಗೂ ಅನ್ವಯಿಸುತ್ತವೆ ಎಂಬುದನ್ನಿಲ್ಲಿ ಗಮನಿಸಬೇಕು.

ಇನ್ನು, ಕ್ಷಯರೋಗಕ್ಕೇ ಅನ್ವಯಿಸಿದಂತೆ ಹೇಳುವುದಾದರೆ ಸ್ತ್ರೀಯರ ಚಲನ ಶೀಲತೆಗೆ (Mobility) ಇರುವ ಅಡ್ಡಿ ಆತಂಕಗಳು ಹಾಗೂ ಕ್ಷಯರೋಗದ ಸಾಮಾಜಿಕ ಕಳಂಕದ ಭಯದಿಂದಾಗಿ ಲಭ್ಯವಿರುವ ಸಾರ್ವಜನಿಕ ಅಥವಾ ಖಾಸಗೀ ಆರೋಗ್ಯ ಸೇವಾ ಸೌಲಭ್ಯಗಳನ್ನು ಮಹಿಳೆಯರು ದಕ್ಕಸಿಕೊಳ್ಳಲಾಗುತ್ತಿಲ್ಲ. ಹೆಚ್ಚು ಜನರಿಗೆ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಸೌಲಭ್ಯಗಳು ದೊರಕುವಂತೆ ಮಾಡುವಲ್ಲಿ ನಮ್ಮ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಪುನವಿಮರ್ಶಿತ ಕಾರ್ಯಕ್ರಮದಡಿಯಲ್ಲಿ ಡಾಟ್ಸ್‌ಎಂಬ (Directly Observed Treatment Short Course) ಹೊಸ ಚಿಕಿತ್ಸಾ ಸೌಲಭ್ಯವನ್ನು ಆರಂಭಿಸಲಾಗಿದೆ. ರೋಗಿಗಳನ್ನು ನೇರ ಪರಿವೀಕ್ಷಣೆಗೆ ಒಳಪಡಿಸಿ ಅವರಿಗೆ ಅಲ್ಪಕಾಲೀನ ಚಿಕಿತ್ಸೆ ನೀಡುವ ಕೇಂದ್ರಗಳನ್ನು ರೋಗಿಗಳ ವಾಸಸ್ಥಳಕ್ಕೆ ಹತ್ತಿರದಲ್ಲಿಯೇ ಸ್ಥಾಪಿಸುವುದರ ಮೂಲಕ ಚಿಕಿತ್ಸಾ ಸೌಲಭ್ಯಗಳನ್‌ಉ ವಿಕೇಂದ್ರೀಕರಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೇ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಒಂದಂತೆ ಕ್ಷಯರೋಗ ಪತ್ತೆಗಾಗಿ ಸೂಕ್ಷ್ಮ ದರ್ಶಕೀಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಬುಡಕಟ್ಟು ಗಿರಿಜನ ಪ್ರದೇಶಗಳಲ್ಲಿ ಪ್ರತಿ ಐವತ್ತು ಸಾವಿರ ಜನಸಂಖ್ಯೆಗೆ ಒಂದರಂತೆ ಈ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ೨೦೦೪ರಲ್ಲಿ ಈ ಡಾಟ್ಸ್‌ಕಾರ್ಯಕ್ರಮದಡಿಯಲ್ಲಿ ಸುಮಾರು ಎಂಟು ಲಕ್ಷ ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು ಇವರಲ್ಲಿ ಸುಮಾರು ಶೇ. ೩೫ ರಷ್ಟು ಮಂದಿ ಮಾತ್ರ ಮಹಿಳೆಯರಾಗಿರುವುದನ್ನು ಗಮನಿಸಬೇಕು.[16] ಇತ್ತೀಚೆಗೆ ಸ್ವಸಹಾಯ ಗುಂಪುಗಳಲ್ಲಿರುವ ಮಹಿಳೆಯರನ್ನು, ಸ್ವಯಂ ಸೇವಾ ಸಂಸ್ಥೆಗಳನ್ನು, ಖಾಸಗೀ ವೈದ್ಯರುಗಳನ್ನು, ಮಹಿಳಾ ಮಂಡಳಿಗಳನ್ನು, ಎ.ಎನ್‌.ಎಂ.ಗಳನ್ನು ಕ್ಷಯರೋಗ ಪತ್ತೆಯಲ್ಲಿ ಅಷ್ಟೇ ಅಲ್ಲದೆ ಸ್ತ್ರೀರೋಗಿಗಳಿಗೆ ಚಿಕಿತ್ಸೆ ಕೊಡುವಲ್ಲಿಯೂ ಕ್ರಿಯಾತ್ಮಕವಾಗಿ ಡಾಟ್ಸ್‌ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಇದು ಸರ್ಕಾರೀ ಕಾರ್ಯಕ್ರಮಗಳೂ ಸಹ ಲಿಂಗ ಕಾಳಜಿಗಳನ್ನು ಗುರ್ತಿಸಿ ಅವುಗಳಿಗೆ ಗಮನ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದು ಸ್ತ್ರೀ ಆರೋಗ್ಯ ಚಳವಳಿಯ ಸರಿ ದಿಕ್ಕಿನಲ್ಲಿ ಮುನ್ನಡೆಯುತ್ತಿರುವುದನ್ನು ಸೂಚಿಸುತ್ತದೆ ಎನ್ನಬಹುದು.

ಇನ್ನು, ಡಾಟ್ಸ್‌ಕಾರ್ಯಕ್ರಮವನ್ನು ೧೯೯೩ ರಿಂದಲೇ ಆರಂಭಿಸಲಾಗಿದ್ದು ನಮ್ಮ ದೇಶದಲ್ಲಿರುವ ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ಮೂಲಭೂತ ಸೌಕರ್ಯಗಳು ಸೀಮಿತವಾಗಿರುವುದರಿಂದ ಇದರ ಯಶಸ್ಸು ಸಹ ಸೀಮಿತವಾಗಿದೆ ಎಂಬ ಟೀಕೆಯಿದೆ. ಅಲ್ಲದೆ ಸಾರ್ವಜನಿಕ ಆರೋಗ್ಯ, ಪ್ರಾಥಮಿಕ ಆರೋಗ್ಯದ ಮೂಲಭೂತ ಸೌಕರ್ಯಗಳನ್ನು ಬಲಪಡಿಸದೆ ಡಾಟ್ಸ್‌ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ ಎನ್ನುವ ಅಂಶಕ್ಕೆ ಗಮನ ನೀಡಬೇಕಾಗಿದೆ. ಜೊತೆಗೇ ಅತ್ಯಂತ ಕಡಿಮೆ ಬೆಲೆಯ ಔಷಧಿಗಳನ್ನು ಕ್ಷಯರೋಗ ನಿಯಂತ್ರಣಕ್ಕೂ ಚಿಕಿತ್ಸೆಗೂ ಹೆಚ್ಚಿನ ಅಗತ್ಯಪ್ರಮಾಣದಲ್ಲಿ ತಯಾರಿಸುವ ತುರ್ತು ಅಗತ್ಯವಿದ್ದು ನಮ್ಮ ರಾಷ್ಟ್ರೀಯ ಔಷಧಿ ನೀತಿಯು ಈ ಸಮಸ್ಯೆಯನ್ನು ಕಡೆಗಣಿಸಿದೆ ಎಂಬುದು ಆರೋಗ್ಯ ವಿಮರ್ಶಕರ ಅಭಿಪ್ರಾಯವಾಗಿದೆ.

ಅಲ್ಲದೆ, ಇತ್ತೀಚೆಗೆ ಬಿಡುಗಡೆಯಾದ ವಿಶ್ವ ಆರೋಗ್ಯ ಸಂಸ್ಥೆಯ ವರದಿಯು (೨೦೦೬) ಕ್ಷಯರೋಗಿಗಳ ಸಂಖ್ಯೆಯಲ್ಲಿ ಭಾರತವು ಮೊಟ್ಟ ಮೊದಲನೆಯ ಸ್ಥಾನದಲ್ಲಿರುವುದನ್ನು ಮತ್ತು ಪ್ರತಿ ವರ್ಷ ಹೊಸದಾಗಿ ಕ್ಷಯರೋಗದ ಸೋಂಕು ತಗಲುವವರ ಸಂಖ್ಯೆ ಬೇರಾವ ದೇಶಕ್ಕಿಂತಲೂ ಹೆಚ್ಚಾಗಿರುವುದನ್ನು ಸ್ಪಷ್ಟಪಡಿಸಿದೆ. ಪ್ರತಿ ಲಕ್ಷ ಜನರಲ್ಲಿ ೧೬೮ ಮಂದಿ ಕ್ಷಯರೋಗಿಗಳಾಗಿದ್ದು ಕ್ಷಯರೋಗವು ಒಂದು ಸಾಂಕ್ರಾಮಿಕ ಪಿಡುಗಾಗಿ ಮರುಕಳಿಸುವ ಅಪಾಯವನ್ನು ಎತ್ತಿತೋರಿದೆ. ಹಾಗಾಗಿ ಇಂದು ಕ್ಷಯರೋಗ ನಿವಾರಣೆಗೆ ಸಮರೋಪಾದಿಯಲ್ಲಿ ಡಾಟ್ಸ್‌ಕಾರ್ಯಕ್ರಮವನ್ನು ನಡೆಸಬೇಕಾಗಿದೆ.

[1] Karkal Malini (1996)., “Reproductive Health and Women : A review of literature’’ in Radical Journal of health (new series) quoted in ref No. 12

[2] Bang R. A. A. T. Bang, M. Baitule, Y. Choudhary, S. Sarmakadam & O. Tale (1989) ., “High Prevalence of Gynecological Disease in Rural Indian Women’’ Lancet (8629)., P. 85-88.

[3] Bhatia S. C., John Cleland, Leela Bhagavan & N. S. N. Rao (1995)., “Prevalence of Gynecological Morbidity among women In South India’’., Indian Institute of Management., Bangalore.

[4] Sree. Hitakarini, Baroda Citizen’s Council, Child in Need Institute, Society for Education Welfare and Action., Clinically Detectable Gynaecological Morbidity in India : Results of four Community Based Studies, unpublished report, found in selected reading materials on Reproductive health provided at International workshop on Reproductive health held at Karnataka University, Dharwad on 7-11 December 1998.

[5] Koenig M., Shireen Jejeebhoy., Sagri singh & S. Sridhar (1996), Undertaking Community Based Research on the prevalence of Gynecological Morbility : lessons from India (Unpublishd Document).

[6] Kinnal Anuradha (1998)., Problems; coping meehanisms and resource management strategies of Lambani female heads of the family in Shirahatti Taluk., Dharwad District., Thesis submitted to the university of Agricultural Sciences Dharwad in partial fulfillement of the requirement for Masters degee in Human Development.

[7] Meti Rajeshwari D., (1999).,Problems of Female Agricultural Laboures in Mundurgi Taluk of Gadag District., Thesis Submitted to the UAS Dharwad in Partial fulfillment of the requirement for Master Degree in Human Development.

[8] Asundi N. Renuka (2000)., Reproductive Health of Women belonging to rural landless families., Thesis submitted to UAS in partial fulfillment of the requirement for Masters Degree in Human Development.

[9] Pawar Jayashree (2004)., Knowledge and practices regarding reproductive health among Lambani women of Bijapur Taluk., Thesis submitted to UAS Dharwad., in partial fulfillment of the requirement for Master Degree in Human Development.

[10] GOI (Undated Document) Tenth five years plan 2002-07, Vol. 2., Planning Commission., New Delhi.

[11] Pachuri S. (Undated), “Women’s Reproductive Health in India : Research needs & Priorities “ in Listening to Women., Ford foundation., New Delhi.

[12] Gopalan Sarala & Mira Shiva (Editors)2000., National Profile and Women, Health and Development., New Delhi Voluntary Health Association of India & WHO., P.p 177-178, 205.

[13] Registerar General of India (1997)., Survey of Causes of Death-Rural. Annual Report 1994., New Delhi. Ministry of Home Affairs.

[14] Ravi Kanth (2006)., “TB : The fifth horseman of Indian apocalypse’’ Deccan Herald, 22.3.06.

[15] Uplekar Mukund & Sheela Rangan (1996)., “Tackling TB-The search for solution’’ Foundation for research in Community Health (FRCH), quoted in Ibid 12. GOI (2006)., Platform for Action-10years after : India Country Report, New Delhi., Department of Women Child Development., Ministry of Human Resource Development. Pp. 34-35.

[16] GOI (2006)., Platform for Action-10years after : India Country Report, New Delhi., Department of Women Child Development., Ministry of Human Resource Development. Pp. 34-35.