ಅಪಪೋಷಣೆ (ನ್ಯೂನಪೋಷಣೆ)

ಅಪಪೋಷಣೆ ಅಥವಾ ನ್ಯೂನಪೋಷಣೆಯನ್ನು ಸದ್ದಿಲ್ಲದ ಹಂತಕನೆಂದೇ ಗುರ್ತಿಸಲಾಗಿದೆ. ಭಾರತವನ್ನೂ ಒಳಗೊಂಡಂತೆ ಅಭಿವೃದ್ಧಿಶೀಲ ಹಾಗೂ ಬಡದೇಶಗಳಲ್ಲಿ ಅಪಪೋಷಣೆಗೆ ಒಳಗಾಗಿರುವ ಅತ್ಯಂತ ದೊಡ್ಡ ಸಮುದಾಯವೆಂದರೆ ಸ್ತ್ರೀಯರೇ. ಜನಸಮುದಾಯದ ಆಹಾರ ಪೋಷಣಾ ಸ್ಥಿತಿಯನ್ನು ಅದರಲ್ಲಿಯೂ ಜನಸಮುದಾಯಗಳಲ್ಲಿ ದುರ್ಬಲರೆಂದೇ ಗುರ್ತಿಸಲಾಗಿರುವ ಮಕ್ಕಳ, ಗರ್ಭೀಣಿಯರ, ಎದೆಹಾಲುಣಿಸುವ ತಾಯಿಯರ, ಹದಿಹರೆಯದ ಹುಡುಗಿಯರ ಆಹಾರ ಪೋಷಣಾ ಸ್ಥಿತಿಯನ್ನು ಆಯಾ ದೇಶಗಳ ಅಭಿವೃದ್ಧಿಯ ಸೂಚಕವೆಂದೇ ಇಂದು ಪರಿಗಣಿಸಲಾಗುತ್ತಿದೆ. ಒಳ್ಳೆಯ ಆಹಾರ ಪೋಷಣೆ ಉತ್ತಮ ಆರೋಗ್ಯದ ಅಡಿಗಲ್ಲು. ಹಾಗೆಯೇ ಅಪಪೋಷಣೆಗೂ ಅನಾರೋಗ್ಯಕ್ಕೂ ಬಿಡಲಾಗದ ನೆಂಟು.

ವಿಶ್ವಆರೋಗ್ಯ ಸಂಸ್ಥೆಯ ೧೯೮೫-೯೫ರ ವರದಿಯ ಪ್ರಕಾರ ದಕ್ಷಿಣ ಏಷ್ಯಾ ಹಾಗೂ ದಕ್ಷಿಣ ಪೂರ್ವ ಏಷ್ಯಾ ದೇಶಗಳಲ್ಲಿ ಪ್ರಜನನ ವಯೋಮಾನದಲ್ಲಿರುವ (೧೫ ರಿಂದ ೪೯ ವರ್ಷ) ಸ್ತ್ರೀಯರಲ್ಲಿ ಶೇ. ೬೦ ರಷ್ಟು ಮಂದಿ ನ್ಯೂನಪೋಷಿತರಾಗಿದ್ದು ಕಡಿಮೆ ದೇಹ ತೂಕವುಳ್ಳವರಾಗಿದ್ದಾರೆ.

[1] ಈ ನ್ಯೂನಪೋಷಿತರಲ್ಲಿ ಹದಿಹರೆಯದ ಹುಡುಗಿಯರ ಪಾಲು ಗಮನಾರ್ಹ. ಹದಿಹರೆಯದಲ್ಲಿಯೇ ಹಡೆಯುವುದರಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಅವರ ನ್ಯೂನಪೋಷಿತ ದೈಹಿಕ ಸ್ಥಿತಿ ನೇರವಾಗಿ ಹೊಣೆಯಾಗಿದೆಯೆನ್ನಬಹುದು. ನಮ್ಮ ದೇಶದಲ್ಲಿ ನ್ಯೂನ ಅಥವಾ ಅಪಪೋಷಣೆ ಎನ್ನುವುದು ಒಂದು ಬಹುಮುಖಿ ಸಂಕೀರ್ಣ ಸಮಸ್ಯೆಯೇ ಸರಿ. ಈ ಸಮಸ್ಯೆ ಸಂಕೀರ್ಣವಾಗಿ ಜಟಿಲಗೊಳ್ಳಲು ಹಲವಾರು ಕಾರಣಗಳಿದ್ದು ಒಂದೊಂದೂ ಇನ್ನೊಂದರೊಂದಿಗೆ ಹೆಣೆದುಕೊಂಡು ಅಪಪೋಷಣೆಯ ವಿಷಚಕ್ರ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಮುಂದುವರೆಯುತ್ತಿದೆ. ಇದರಲ್ಲಿ ಅತ್ಯಂತ ಪ್ರಮುಖವಾದ ಕೊಂಡಿಯೆಂದರೆ ಹದಿಯರೆಯದ ಹುಡುಗಿಯರೇ ಆಗಿದ್ದಾರೆ.

ಹದಿವಯಸ್ಸಿನಲ್ಲಿ ಹುಡುಗ ಮತ್ತು ಹುಡುಗಿಯರಿಬ್ಬರೂ ವೇಗವಾಗಿ ಬೆಳೆಯುತ್ತಾ ಇರುವುದರಿಂದ ಹೆಚ್ಚಿನ ಆಹಾರ ಪೋಷಣೆಯ ಅಗತ್ಯವಿದೆ. ಆದರೂ ಸಹ, ನಮ್ಮ ಸಮಾಜದಲ್ಲಿ ಎಲ್ಲೆಡೆ ಹರಡಿರುವ ಲಿಂಗಪಕ್ಷಪಾತೀ ಧೋರಣೆಯಿಂದಾಗಿ, ಕುಟುಂಬದಲ್ಲಿರುವ ಆಹಾರ ಅಭಾವ ಅಥವಾ ಆಹಾರ ಅಭದ್ರತೆಗಳಿಂದಾಗಿ (Food inserity), ಮತ್ತು ಹುಡುಗಿಯರ ಅಪಪೋಷಣೆಯಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಇರುವ ಅಜ್ಞಾನದಿಂದಾಗಿ ಹುಡುಗಿಯರ ಆಹಾರ ಪೋಷಣೆ ಸಾಮಾನ್ಯವಾಗಿ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹೀಗೆ ಅಪಪೋಷಿತರಾಗಿರುವ ಹುಡುಗಿಯರಿಗೆ ಜನಿಸುವ ಮಕ್ಕಳು ಕಡಿಮೆ ಜನನ ತೂಕದೊಂದಿಗೇ ಹುಟ್ಟುವ ಸಾಧ್ಯತೆಗಳು ಹಾಗೂ ಅವು ಶೈಶವದಲ್ಲಿಯೇ ಸಾಯುವ ಅಪಾಯಗಳೂ ಜಾಸ್ತಿ. ಇವುಗಳೊಟ್ಟಿಗೇ, ಎಳೆ ಹರೆಯದ ತಾಯಿಯರ ಆರೈಕೆ ಮತ್ತು ಹೆಣ್ಣುಶಿಶುಗಳ ಆರೈಕೆ ಹಾಗೂ ಆಹಾರ ಪೋಷಣೆಗಳು ತೃಪ್ತಿಕರವಾಗಿ ಇಲ್ಲದಿದ್ದಲ್ಲಿ ಅಂತಹ ಹೆಣ್ಣು ಮಕ್ಕಳು ನ್ಯೂನಪೋಷಣೆಯಿಂದ ನರಳುತ್ತಾ, ಕುಂಠಿತ ಗತಿಯಲ್ಲಿ ಬೆಳೆಯುತ್ತಾ ಹದಿಹರೆಯಕ್ಕೆ ಕಾಲಿಡುತ್ತಾರೆ. ಇಂತಹ ಹುಡುಗಿಯರು ಹದಿಹರೆಯಕ್ಕೆ ಕಾಲಿರುಸತ್ತಿದ್ದಂತೆಯೇ ತಾಯಿಯರಾದಲ್ಲಿ ಅಂತರ್‌ಪೀಳಿಗೆಯ ಅಪಪೋಷಣೆಯ ವಿಷಚಕ್ರ ತಡೆಯಿಲ್ಲದೆ ಮುಂದೆ ಸಾಗುತ್ತಿದೆ (೩೨ನೇ ಪುಟದ ರೇಖಾನಕ್ಷೆ ನೋಡಿ).[2]

ಹುಡುಗಿಯರ ನ್ಯೂನಪೋಷಣೆಯ ನೇರ ಪರಿಣಾಮಗಳೆಂದರೆ ಅವರ ಬೆಳವಣಿಗೆ ಕುಂಠಿತವಾಗುವುದು ಮತ್ತು ರಕ್ತಹೀನತೆಗೆ ಬಲಿಯಾಗುವುದೇ ಆಗಿದೆ. ಇವೆರಡೂ ಕಡಿಮೆ ಜನನ ತೂಕದ ಮಕ್ಕಳು ಹುಟ್ಟಲು ಕಾರಣಗಳಾಗಿವೆ. ಕಡಿಮೆ ಜನನ ತೂಕದೊಂದಿಗೇ ಹುಟ್ಟುವ ಮಗು ಹಲವು ದೈಹಿಕ ದುರ್ಬಲತೆಗಳೊಂದಿಗೆ ಜನ್ಮತಾಳುವುದರಿಂದ ಅದು ಬದುಕಿ ಉಳಿಯುವಲ್ಲಿ ಅಪಾಯಗಳನ್ನೆದುರಿಸಬೇಕಾಗುತ್ತದೆ. ಕಡಿಮೆ ಜನನ ತೂಕದ ಮಕ್ಕಳು ಗಂಡಾಗಲೀ, ಹೆಣ್ಣಾಗಲೀ ವಯಸ್ಕರಾಗುವ ವೇಳೆಗಾಗಲೇ ಅವರು ತಮ್ಮ ದೈಹಿಕ ಮತ್ತು ಬುದ್ಧಿಯ ಬೆಳವಣಿಗೆಗಳಲ್ಲಿ ಹಲವು ಸರಿಪಡಿಸಲಾಗದ ಹಿಂಜರಿತಗಳನ್ನು ಅನುಭವಿಸುತ್ತಾರೆ ಎಂಬುದನ್ನು ಹಲವಾರು ಅಧ್ಯಯನಗಳು ಸಾಬೀತುಗೊಳಿಸಿವೆ.[3]

01_323_MA-KUH

ಅಷ್ಟೇ ಅಲ್ಲದೆ ಕಡಿಮೆ ಜನನ ತೂಕದೊಂದಿಗೇ ಜನಿಸಿದ ಗಂಡುಮಕ್ಕಳು ವಯಸ್ಕರಾದ ನಂತರ ಹೃದ್ರೋಗಗಳಿಗೆ ಬಲಿಯಾಗುವ ಅಪಾಯ ಇನ್ನಿತರ ಮಕ್ಕಳಿಗಿಂತಾ ಹೆಚ್ಚಾಗಿರುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ತಾಯಿಯು ಬಾಲ್ಯದಿಂದಲೇ ಅನುಭವಿಸುವ ಲಿಂಗಪಕ್ಷಪಾತದ ದೀರ್ಘಕಾಲೀನ ದುಷ್ಪರಿಣಾಮಗಳು ಅವಳ ಗಂಡು ಸಂತಾನವನ್ನು ಹೀಗೆ ಕಾಡುವುದನ್ನು ವಿಧಿಯ ಅಣಕವೆನ್ನಬಹುದೇನೋ.

ಹತ್ತನೆಯ ಪಂಚವಾರ್ಷಿಕ ಯೋಜನೆಯ (೨೦೦೨-೦೭) ದಾಖಲೆಯೊಂದರ ಪ್ರಕಾರ ಕಳೆದ ಮೂರು ದಶಕಗಳಿಂದಲೂ ಕಡಿಮೆ ಜನನ ತೂಕದೊಂದಿಗೇ ಹುಟ್ಟುವ ಮಕ್ಕಳ ಪ್ರಮಾಣದಲ್ಲಿ ಪ್ರಮುಖವಾದ ಬದಲಾವಣೆಯೇನೂ ಆಗಿಲ್ಲ. ಇನ್ನು, ಕಡಿಮೆ ಜನನ ತೂಕದೊಂದಿಗೇ ಜನಿಸುವ ಹೆಣ್ಣುಮಕ್ಕಳು ತಮ್ಮ ಬೆಳವಣಿಗೆಯಲ್ಲಿ ಹಲವಾರು ಹಿಂಜರಿತಗಳನ್ನು ಅನುಭವಿಸುತ್ತಾ, ತಮ್ಮ ನ್ಯೂನಪೋಷಿತ ತಾಯಿ ನೀಡುವ ಪಾಲನೆ ಪೋಷಣೆಯಲ್ಲಿ ಹಾಗೂ ಲಿಂಗತ್ವ ಪಕ್ಷಪಾತದ ಕೌಟುಂಬಿಕ ಪರಿಸರದಲ್ಲಿ ಕಡಿಮೆ ಪ್ರಮಾಣದ ಮತ್ತು ಕಡಿಮೆ ಗುಣಮಟ್ಟದ ಆಹಾರವನ್ನು ಸೇವಿಸುತ್ತಾ ಬೆಳೆಯುತ್ತಿರುವಾಗ, ನ್ಯೂನ ಪೋಷಣೆಯ ವಿಷಚಕ್ರ ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ತಡೆಯಿಲ್ಲದೆ ಚಲಿಸುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ. ಎರಡನೆಯ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೇಕ್ಷಣೆಯ ಪ್ರಕಾರ ನಮ್ಮ ದೇಶದ ಮಹಿಳೆಯರಲ್ಲಿ ಶೇ. ೩೬ರಷ್ಟು ಜನರು ನ್ಯೂಪೋಷಿತರಾಗಿದ್ದಾರೆ. ಅಂದರೆ ನಮ್ಮ ದೇಶದ ಪ್ರಜನನ ವಯೋಮಾನದಲ್ಲಿರುವ (೧೪-೪೯) ಹತ್ತುಮಂದಿ ಮಹಿಳೆಯರಲ್ಲಿ ಮೂವರು ನ್ಯೂಪೋಷಿತರು.

ಈಗಾಗಲೇ ಪ್ರಸ್ತಾಪಿಸಿರುವ ರಾಣೆಬೆನ್ನೂರು ತಾಲ್ಲೂಕಿನ ಹದಿನಾಲ್ಕು ಗ್ರಾಮಗಳ ವಿವಾಹಿತ ಹುಡುಗಿಯರ ಆರೋಗ್ಯವನ್ನು ಅಧ್ಯಯನ ಮಾಡಿದ ಸಂಶೋಧನೆಯಲ್ಲಿ, ಆ ಹುಡುಗಿಯರಲ್ಲಿ ಶೇ.೩೩ರಷ್ಟು ಮಂದಿ ಅವರ ವಯಸ್ಸಿಗೆ ತಕ್ಕಂತೆ ಬೆಳೆಯದೆ ೧೪೫ ಸೆಂಟಿ ಮೀಟರ್‌ಗಳಷ್ಟು ಹಾಗೂ ಅದಕ್ಕಿಂತಾ ಕಡಿಮೆ ಎತ್ತರವುಳ್ಳವರಾಗಿದ್ದರು. ಹಾಗೂ ಶೇ. ೩೨ ರಷ್ಟು ಹುಡುಗಿಯರ ದೇಹ ತೂಕ ೩೮ ಕಿಲೋ ಗ್ರಾಂಗಳಿಗಿಂತೂ ಕಡಿಮೆಯಿರುವುದು ಕಂಡುಬಂದಿದೆ. ೧೪೫ ಸೆಂ. ಮೀಟರ್‌ಗಳಿಗಿಂತಾ ಕಡಿಮೆ ಎತ್ತರ ಇರುವುದು ಹಾಗೂ ೩೮ ಕೆ.ಜಿ. ಗಿಂತಾ ಕಡಿಮೆ ದೇಹತೂಕವಿರುವ ಗರ್ಭಿಣಿಯ ಬಸಿರನ್ನು ಅಪಾಯಕಾರೀ ಬಸಿರೆಂದೇ ಗುರ್ತಿಸಲಾಗಿದೆ. ದೇಹ ತೂಕ ಮತ್ತು ಎತ್ತರಗಳು ಆಯಾ ವ್ಯಕ್ತಿಯ ಆಹಾರ ಪೋಷಣಾ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಗಮನಿಸಬೇಕು. ಬಾಲ್ಯದಿಂದಲೇ ಸರಿಯಾದ ಆಹಾರ ಪೋಷಣೆ ಮತ್ತು ಆರೋಗ್ಯ ಹಾಗೂ ಆರೈಕೆಗಳನ್ನು ಪಡೆದಿದ್ದಲ್ಲಿ ಮಾತ್ರ ತಾಯಿಯು ತಾನೂ ಆರೋಗ್ಯವಾಗಿದ್ದು ಆರೋಗ್ಯಶಾಲಿಯಾದ ಮಗುವನ್ನು ಪಡೆಯಲು ಸಾಧ್ಯ. ಈ ಅಧ್ಯಯನಕ್ಕೆ ಒಳಗಾದ ಎಲ್ಲಾ ಹುಡುಗಿಯರಿಗೂ ಹೆರಿಗೆಯಾದ ಅನುಭವವಿದ್ದು, ಇವರಲ್ಲಿ ಅರ್ಧಕ್ಕಿಂತಾ ಹೆಚ್ಚು ಮಂದಿ (ಶೇ. ೫೪) ಒಂದಲ್ಲ ಒಂದು ಬಗೆಯ ಶಿಶುನಷ್ಟವನ್ನು ಅನುಭವಿಸಿದವರೇ ಆಗಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು.

ತಾಯಿಯರ ನ್ಯೂಪೋಷಿತ ಸ್ಥಿತಿಯಿಂದ ಅವರ ಆರೋಗ್ಯ ಹಾಗೂ ಅವರು ತಾಯ್ತನದಲ್ಲಿ ಬದುಕುಳಿಯುವ ಸಾಧ್ಯತೆಗಳ ಮೇಲೆ ಹಾಗೂ ಶಿಶುಗಳ ಮೇಲೆ ಆಗುವ ದುಷ್ಪರಿಣಾಮಗಳು ಇಂದು ಪ್ರಶ್ನಾತೀತವಾಗಿ ಸಾಬೀತಾಗಿವೆ. ಈ ದುಷ್ಪರಿಣಾಮಗಳ ಅತ್ಯಂತ ದಾರುಣ ಫಲಿತಾಂಶವೆಂದರೆ ಶಿಶುಮರಣ ಹಾಗೂ ತಾಯಿಯರ ಮರಣ. ೨೦೦೫ರ ವಿಶ್ವಾರೋಗ್ಯ ವರದಿಯ ಪ್ರಕಾರ ವಿಶ್ವದಲ್ಲಿಯ ಶಿಶುಮರಣಗಳಲ್ಲಿ ಶೇ. ೫೦ ರಷ್ಟು ಮರಣಗಳು ಕೇವಲ ಆರು ದೇಶಗಳಲ್ಲಿಯೇ ಸಂಭವಿಸುತ್ತಿದ್ದು ಇಂತಹ ಕುಖ್ಯಾತ ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ. ಇನ್ನು, ಇದೇ ವರದಿಯ ಪ್ರಕಾರ ಇಡೀ ದಕ್ಷಿಣ ಏಷ್ಯಾ ವಲಯದಲ್ಲಿ ಹೆರಿಗೆ ಮತ್ತು ತಾಯ್ತನಕ್ಕೆ ಸಂಬಂಧಿಸಿದ ಅತಿ ಹೆಚ್ಚು ಮರಣಗಳು ಉಂಟಾಗುವ ದೇಶಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನವೇ ಭಾರತದ್ದು.[4] ಭಾರತದ ಸರ್ಕಾರಿ ವರದಿಯೊಂದರ ಪ್ರಕಾರವೇ ೧೯೯೫ ರಿಂದ ೨೦೦೧ರ ವರೆಗೂ ಪ್ರತಿವರ್ಷ ಉಂಟಾದ ಶಿಶುಮರಣ ಸಂಖ್ಯೆಯಲ್ಲಿ ಗಮನಾರ್ಹ ಇಳಿತ ಕಂಡುಬಂದಿಲ್ಲ.[5] ಹಾಗೆಯೇ ಹುಟ್ಟಿದ ೫ ವರ್ಷಗಳೊಳಗೇ ಕಣ್ಮುಚ್ಚುವ ಹೆಣ್ಣುಮಕ್ಕಳ ಸಂಖ್ಯೆ ೧೯೮೫ರಲ್ಲಿ ಸಾವಿರ ಜೀವಂತ ಜನನಗಳಿಗೆ (Live births) ೪೦.೪ ಇದ್ದದ್ದು ೨೦೦೧ರಲ್ಲಿ ೭೧.೬ ಆಗಿರುವುದನ್ನು ರಿಜಿಸ್ಟ್ರಾರ್‌ಜನರಲ್‌ಕಛೇರಿಯು ತನ್ನ ವರದಿಯಲ್ಲಿ ತಿಳಿಸಿದೆ.[6] ಹೀಗೆ ಜನಸಂಖ್ಯಾತ್ಮಕ ಅಂಕಿ ಅಂಶಗಳು (Population statistics) ಹಾಗೂ ಸಂಶೋಧನೆಗಳು ಹೆಣ್ಣುಮಕ್ಕಳ ನ್ಯೂನಪೋಷಣೆ ಹಾಗೂ ಅವರ ಆರೋಗ್ಯ ರಕ್ಷಣೆಯ ಬಗ್ಗೆ ಸಮಾಜದಲ್ಲಿರುವ ಅಲಕ್ಷ್ಯ ಮತ್ತು ಅನುದರಣೆಗಳನ್ನು ಎತ್ತಿತೋರಿಸುತ್ತವೆ.

ರಕ್ತ ಹೀನತೆ

ನ್ಯೂನಪೋಷಣೆಯ ಇನ್ನೊಂದು ಕರಾಳ ಮುಖವೆಂದರೆ ರಕ್ತಹೀನತೆ. ಸರಿಯಾದ ಆಹಾರ ಪೋಷಣೆಯಿಲ್ಲದ ನ್ಯೂಪೋಷಿತರಾದ ಹಾಗೂ ಮೇಲಿಂದ ಮೇಲೆ ಅಲ್ಪಾವಧಿಯ ಅಂತರದಲ್ಲಿ ಮಕ್ಕಳನ್ನು ಹೇರುವ ಹೆಣ್ಣು ಮಕ್ಕಳಿಗೆ ಅದರಲ್ಲಿಯೂ ಹದಿಹರೆಯದ ಹುಡುಗಿಯರಿಗೆ ರಕ್ತಹೀನತೆ ಕಟ್ಟಿಟ್ಟ ಬುತ್ತಿ. ಏಕೆಂದರೆ ಪ್ರತಿ ಬಸುರಿನಲ್ಲಿ ಮತ್ತು ಹೆರಿಗೆಯಲ್ಲಿ ದೇಹದಲ್ಲಿ ಸಂಗ್ರಹವಾಗಿರುವ ಕಬ್ಬಿಣ ಖರ್ಚಾಗುತ್ತದೆ. ಹೀಗೆ ವೆಚ್ಚವಾಗುವ ಕಬ್ಬಿಣದ ಪೂರ್ಣ ಪ್ರಮಾಣವನ್ನು ಆಹಾರದ ಮೂಲಕವೇ ಭರಿಸಬೇಕಾಗುತ್ತದೆಯಲ್ಲದೆ, ಹೆಣ್ಣಿನ ಆಹಾರದಲ್ಲಿ ಆಕೆಯ ದೇಹವು ಚೆನ್ನಾಗಿ ಹೀರಿಕೊಂಡು ರಕ್ತಗತ ಮಾಡಿಕೊಳ್ಳುವಂತಹ ಗುಣಮಟ್ಟದ ಕಬ್ಬಿಣವಿರಬೇಕಾಗುತ್ತದೆ. ಜೊತೆಗೆ ಅವಳ ಆಹಾರದಲ್ಲಿ ಜೀವಸತ್ವ ‘ಸಿ’ಯನ್ನು ಹೇರಳವಾಗಿ ಒದಗಿಸಬಲ್ಲ ತಾಜಾ ಹಣ್ಣು, ಹಸಿರು ತರಕಾರಿ ಮತ್ತು ಸೊಪ್ಪುಗಳು ಇರುವುದು ಅಗತ್ಯ. ಏಕೆಂದರೆ ‘ಸಿ’ ಜೀವಸತ್ವವು ಆಹಾರದಲ್ಲಿರುವ ಕಬ್ಬಿಣಾಂಶವನ್ನು ದೇಹವು ಹೀರಿಕೊಳ್ಳಲು ಅತ್ಯಗತ್ಯ. ನಮ್ಮ ದೇಶದ ಬಸುರಿಯನ್ನು ಕಾಡುವ ರಕ್ತಹೀನತೆಯಲ್ಲಿ ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತಹೀನತೆ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಪೋಲಿಕ್‌ಆಮ್ಲವೆಂಬ ಜೀವಸತ್ವದ ಕೊರತೆಯಿಂದ ಉಂಟಾಗುವ ರಕ್ತಹೀನತೆ ಎರಡನೇ ಸ್ಥಾನವನ್ನು ಪಡೆದಿದೆ. ಆದ್ದರಿಂದಲೇ ನಮ್ಮ ದೇಶದಲ್ಲಿ ನಡೆಸಲಾಗುತ್ತಿರುವ ರಕ್ತಹೀನತಾ ಪ್ರತಿಬಂಧಕ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಬಸುರಿಯರಿಗೆ ಕಬ್ಬಿಣ ಹಾಗೂ ಪೋಲಿಕ್‌ಆಮ್ಲದ ಮಾತ್ರೆಗಳನ್ನು ನೀಡಲಾಗುತ್ತಿದೆ.

ಬಾಲ್ಯದಿಂದಲೇ ನ್ಯೂನಪೋಷಣೆಗೆ ಒಳಗಾಗಿರುವ ಹುಡುಗಿಯರು ಹದಿಹರೆಯದಲ್ಲಿಯೇ ಮದುವೆಯಾಗಿ ಬಸಿರಾದಾಗ ಅವರಿಗೆ ಸರಿಯಾದ ಆಹಾರ ಪೋಷಣೆ ಇಲ್ಲದಿದ್ದಲ್ಲಿ ಪ್ರತಿ ಹೆರಿಗೆ ಹಾಗೂ ಎದೆ ಹಾಲುಣಿಸುವ ಅವಧಿಯಲ್ಲಿ ಅವರ ದೇಹ ತನ್ನ ಜೀವಕೋಶಗಳಲ್ಲಿ, ಯಕೃತ್ತಿನಲ್ಲಿ ಹಾಗೂ ಮೂಳೆಗಳಲ್ಲಿ ಸಂಗ್ರಹವಾಗಿರುವ ಕಬ್ಬಿಣವನ್ನು ಹೊರಗೆಳೆದು ಪಿಂಡಗೂಸಿನ ಬೆಳವಣಿಗೆಗಾಗಿ ಉಪಯೋಗಿಸಿ ಈ ವೆಚ್ಚವನ್ನು ಸರಿದೂಗಿಸುತ್ತದೆ. ಅಲ್ಲದೆ, ಹೆರಿಗೆಯಲ್ಲಿ ಉಂಟಾಗುವ ರಕ್ತಸ್ರಾವ ಮತ್ತು ಹೊರಬೀಳುವ ಮಾಸುವಿನಿಂದಲೂ ಸಾಕಷ್ಟು ಕಬ್ಬಿಣ ದೇಹದಿಂದ ಹೊರಬೀಳುತ್ತದೆ. ಒಂದು ವೇಳೆ ಹೆಣ್ಣಿನ ಆಹಾರ ಪೋಷಣಾ ಸ್ಥಿತಿ ಚೆನ್ನಾಗಿದ್ದು ಅವಳ ದೇಹದಲ್ಲಿ ಕಬ್ಬಿಣದ ಸಂಗ್ರಹ ತೃಪ್ತಿಕರವಾಗಿದ್ದಲ್ಲಿ ಬಸಿರು ಮತ್ತು ಹೆರಿಗೆಗಳಿಂದ ಅವಳ ರಕ್ತದಲ್ಲಿನ ಹೀಮೋಗ್ಲಾಬಿನ್‌ಮಟ್ಟ ಸ್ವಲ್ಪಮಟ್ಟಿಗೆ ಮಾತ್ರ ಕುಗ್ಗಬಹುದು. ಆದರೆ ಅವಳು ಗರ್ಭಧರಿಸುವುದಕ್ಕೂ ಮುಂಚೆಯೇ ರಕ್ತಹೀನತೆಯ ಅಂಚಿನಲ್ಲಿದ್ದರೆ ಅಥವಾ ರಕ್ತಹೀನತೆಯಿಂದ ಬಳಲುತ್ತಿದ್ದಲ್ಲಿ ಕಷ್ಟಕರ ಹೆರಿಗೆ, ಕಡಿಮೆ ಜನನ ತೂಕದ ಶಿಶುಜನನ, ವಿವಿಧ ಬಗೆಯ ಶಿಶುನಷ್ಟ ಅಥವಾ ಹೆರಿಗೆಯಲ್ಲಿ ಸಾವನ್ನೇ ಅವಳು ಎದುರಿಸಬೇಕಾಗುತ್ತದೆ.

ಎರಡನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೇಕ್ಷಣೆ (೧೯೯೮-೯೯), ಭಾರತೀಯ ಮಹಿಳೆಯರಲ್ಲಿ ಅರ್ಧಕ್ಕಿಂತಾ ಹೆಚ್ಚು ಮಹಿಳೆಯರು ರಕ್ತಹೀನತೆಯಿಂದ ನರಳುತ್ತಿರುವುದನ್ನು ವರದಿ ಮಾಡಿದೆ. ಹದಿಹರೆಯದ ಹುಡುಗಿಯರಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು (ಶೇ. ೫೬). ಇತರೇ ಸ್ತ್ರೀಯರಿಗಿಂತಾ ಅನಕ್ಷರಸ್ಥೆಯರು ಹಾಗೂ ಗ್ರಾಮೀಣ ಪ್ರದೇಶಗಳ ಸ್ತ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವುದನ್ನು ಈ ಸರ್ವೇಕ್ಷಣೆ ಸಾಬೀತುಗೊಳಿಸಿದೆ. ಇನ್ನು ಗರ್ಭಿಣಿಯರನ್ನೇ ಪರಿಗಣಿಸಿದಲ್ಲಿ ೧೯೮೫-೯೫ರ ವಿಶ್ವದ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಭಾರತ ಮತ್ತು ಭೂತಾನ್‌ದೇಶಗಳಲ್ಲಿ ಶೇ. ೮೦ ರಷ್ಟು ಗರ್ಭೀಣಿಯರು ರಕ್ತಹೀನತೆಯಿಂದ ನರಳುತ್ತಿದ್ದಾನೆ. ೨೦೦೦ರಲ್ಲಿ ಪ್ರಕಟವಾದ ವಿಶ್ವಬ್ಯಾಂಕಿನ ವರದಿಯೊಂದರ ಪ್ರಕಾರ ೧೯೮೫-೧೯೯೯ರ ಅವಧಿಯಲ್ಲಿ ಶೇ. ೮೮ ರಷ್ಟು ಗರ್ಭೀಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದರು.[7] ಇದು ನಮ್ಮ ದೇಶದ ಗರ್ಭಿಣಿಯರಲ್ಲಿ ರಕ್ತಹೀನತೆಯಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿರುವುದನ್ನು ಸೂಚಿಸುತ್ತದೆ. ಹೀಗೆ ಬಳಲುತ್ತಿರುವ ಗರ್ಭೀಣಿಯರ ಸಂಖ್ಯೆಯಲ್ಲಿ ಹದಿಹರೆಯದ ಬಸುರಿಯರ ಪಾಲು ತುಸು ಹೆಚ್ಚೇ ಇರಬಹುದೆಂದು ಅಂದಾಜಿಸಬಹುದಾಗಿದೆ.

ಭಾರತದಲ್ಲಿ ಶೇ. ೨೦ ರಷ್ಟು ಗಂಡು ಹುಡುಗರು ರಕ್ತಹೀನತೆಗೊಳಗಾಗಿದ್ದರೆ, ೪೫% ರಷ್ಟು ಹುಡುಗಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಈ ಅಗಾಧ ವ್ಯತ್ಯಾಸಕ್ಕೆ ಸಾಮಾನ್ಯವಾಗಿ ಹೆಣ್ಣು ಮಕ್ಕಳ ಆಹಾರ ಪೋಷಣೆ ಹಾಗೂ ಆರೋಗ್ಯದ ಅಗತ್ಯಗಳು ಅಲಕ್ಷಿಸಲ್ಪಡುವುದೇ ಮುಖ್ಯ ಕಾರಣವಾಗಿದೆ. ಜೊತೆಗೆ, ಹುಡುಗಿಯರಿಗೆ ಜೈವಿಕವಾಗಿ ಹುಡುಗರಿಗಿಂತಾ ಶೇ. ೧೦ ರಷ್ಟು ಹೆಚ್ಚಿನ ಕಬ್ಬಿಣದ ಅಗತ್ಯವಿರುವುದೂ ಇನ್ನೊಂದು ಕಾರಣವಾಗಿದೆ.[8] ಇಲ್ಲಿ, ದೇಹಕ್ಕೆ ಬೇಕಾಗುವ ಕಬ್ಬಿಣವನ್ನು ಒಳ್ಳೆಯ ಆಹಾರದ ಮೂಲಕವೇ ದೇಹಕ್ಕೆ ಪೂರೈಸಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.

ಬಾಲ್ಯದಲ್ಲಿ ಉಂಟಾಗುತ್ತಿರುವ ಅಪಪೋಷಣೆಯನ್ನು ತಗ್ಗಿಸಲು ಒಂದು ರಾಷ್ಟ್ರೀಯ ಕಾರ್ಯತಂತ್ರದ ಅಗತ್ಯವಿದ್ದು ಅದನ್ನು ರೂಪಿಸುವ ಸಲುವಾಗಿ, ಪೂರ್ವಭಾವಿಯಾಗಿ ಭಾರತದಲ್ಲಿ ನಡೆಸಲಾದ ಅಧ್ಯಯನಗಳು ಮೂರು ಅಂಶಗಳನ್ನು ಅಪಪೋಷಣೆಯ ನಿರ್ಣಯಾತ್ಮಕ ಅಂಶಗಳೆಂದು ಗುರ್ತಿಸಿವೆ. ಸ್ತ್ರೀ ಅನಕ್ಷರತೆ, ಹುಡುಗಿ ಮದುವೆಯಾಗುವ ವಯಸ್ಸು ಮತ್ತು ಅವಳಿಗೆ ಮೊದಲ ಹೆರಿಗೆಯಾಗುವ ವಯಸ್ಸು ಇವು ಮೂರು ಅಪಪೋಷಣೆಯ ಅತ್ಯಂತ ನಿರ್ಣಯಾತ್ಮಕ ಅಂಶಗಳೆಂದು ಗುರ್ತಿಸಲ್ಪಟ್ಟಿವೆ.

ಕೋಷ್ಟಕ೧೩: ರಕ್ತಹೀನತೆಯಿಂದ ಬಳುತ್ತಿದ್ದ ಸ್ತ್ರೀಯರ ವಯೋಮಾನ, ವಾಸಸ್ಥಳ ಮತ್ತು ಶಿಕ್ಷಣ ೧೯೯೮೯೯

ವಯೋಮಾನ ಸವೇಕ್ಷಣೆಗೆ

ಒಳಗಾದವರ ಸಂಖ್ಯೆ

ರಕ್ತಹೀನತೆಯಿದ್ದವರ

ಸಂಖ್ಯೆ (%)

೧೫-೧೯ ೭,೧೧೭ ೫೬.೦೦%
೨೦-೨೪ ೧೪,೫೬೦ ೫೩.೮೦%
೨೫.೨೯ ೧೫,೯೬೫ ೫೧.೪%
೩೦-೩೪ ೧೩,೬೯೫ ೫೦.೫%
೩೫-೪೯ ೨೮,೪೨೬ ೫೦.೫%
ವಾಸಸ್ಥಳ
ನಗರ ಪ್ರದೇಶಗಳು ೨೦,೮೭೨ ೪೫.೭%
ಗ್ರಾಮೀಣ ಪ್ರದೇಶಗಳು ೫೮,೭೯೧ ೫೩.೯%
ಶಿಕ್ಷಣ
ಅನಕ್ಷರಸ್ಥರು ೪೫,೮೧೮ ೫೫.೮%
ಅಕ್ಷರಸ್ಥರಾಗಿ ಮಾಧ್ಯಮಿಕ ಶಾಲಾ ಶಿಕ್ಷಣ ಪೂರೈಸಿದವರು ೧೫,೭೩೫ ೫೦.೧%
ಮಾಧ್ಯಮಿಕ ಶಿಕ್ಷಣ ಪೂರ್ಣ ಗೊಳಿಸಿದವರು ೬,೭೧೮ ೪೮%
ಪ್ರೌಢಶಾಲಾ ಶಿಕ್ಷಣ ಮತ್ತು ಹೆಚ್ಚಿನ ಶಿಕ್ಷಣ ೧೧,೩೮೧ ೪೦.೩೦%

ಮೂಲ: ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೇಕ್ಷಣೆ-II ೧೯೯೮೯೯ ಮೂಲದಲ್ಲಿದ್ದ ಕೋಷ್ಟಕವನ್ನು ಭಾಗಶಃ ನೀಡಲಾಗಿದೆ. ಗ್ರಂಥಋಣ ಸಂಖ್ಯೆ೧೧ ನೋಡಿ.

ಇನ್ನು ಅನೇಕ ಆರೋಗ್ಯ ಸೂಚಕಗಳಲ್ಲಿ (health indicators) ಭಾರತದ ದಕ್ಷಿಣ ರಾಜ್ಯಗಳಿಗಿಂತಾ ಉತ್ತರ ಭಾರತದ ರಾಜ್ಯಗಳು ಹಿಂದುಳಿದಿರುವುದರಿಂದ ಅವುಗಳಲ್ಲಿ ಬಾಲ ಅಪಪೋಷಣೆ (child malnutrition) ಹಾಗೂ ಅದರ ಫಲಿತವಾದ ರಕ್ತಹೀನತೆಯು ಹೆಚ್ಚಾಗಿರುವುದನ್ನು ಗಮನಿಸಬಹುದು. ಆಲ್‌ಇಂಡಿಯಾ ಇನ್ಸಿಟಿಟ್ಯೂಟ್‌ಆಫ್‌ಹೈಜೀನ್‌ಅಂಡ್‌ಪಬ್ಲಿಕ್‌ಹೆಲ್ತ್‌, ಭಾರತದ ಏಳು ರಾಜ್ಯಗಳಲ್ಲಿ (ಆಸ್ಸಾಂ, ಜಾರ್ಖಂಡ್‌, ಬಿಹಾರ, ಒರಿಸ್ಸಾ, ತ್ರಿಪುರಾ, ಗುಜರಾತ್‌ಮತ್ತು ಪ್ಚಿಮ ಬಂಗಾಲ) ನಡೆಸಿದ ಸಮೀಕ್ಷೆಯ ವರದಿಯ ಪ್ರಕಾರ ಈ ರಾಜ್ಯಗಳಲ್ಲಿ ೬ ತಿಂಗಳುಗಳಿಂದ ೬ ವರ್ಷದೊಳಗಿನ ವಯೋಮಾನದ ಗಂಡು ಮಕ್ಕಳಲ್ಲಿ ಸೇ. ೪೫.೫ ರಿಂದ ಶೇ. ೮೭.೮ರಷ್ಟು ಮಕ್ಕಳು ರಕ್ತಹೀನತೆಗೆ ಗುರಿಯಾಗಿದ್ದು ಇದೇ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಶೇ. ೫೦.೮ ರಿಂದ ಶೇ. ೯೦.೩ ರಷ್ಟು ಮಂದಿ ರಕ್ತಹೀನತೆಗೆ ಬಲಿಯಾಗಿದ್ದಾರೆ. ಹೀಗೆ ಬಾಲ್ಯದಲ್ಲಿಯೇ ರಕ್ತಹೀನತೆಗೆ ಗುರಿಯಾದ ಹಾಗೂ ರಕ್ತಹೀನತೆಯ ಅಂಚಿನಲ್ಲಿ ನಿಂತ ಹುಡುಗಿಯರು ಮೈನೆರೆದಾಗ ಪ್ರತಿತಿಂಗಳ ಸ್ರಾವದೊಂದಿಗೆ ದೇಹದಲ್ಲಿರುವ ಸೀಮಿತ ಕಬ್ಬಿಣ ಸಂಗ್ರಹದಿಂದ ಕಬ್ಬಿಣ ಖನಿಜವು ನಷ್ಟವಾಗುತ್ತಲೇ ಹೋಗುತ್ತದೆ. ಒಳ್ಳೆಯ ಕಬ್ಬಿಣಾಂಶವುಳ್ಳ ಆಹಾರ ಸೇವನೆಯಿಂದ ಮಾತ್ರ ದೇಹಕ್ಕೆ ನಷ್ಟವಾದ ಕಬ್ಬಿಣವನ್ನು ಪೂರೈಸಿ ದೇಹದ ಕಬ್ಬಿಣ ಸಂಗ್ರಹವನ್ನು ಉತ್ತಮಪಡಿಸಿದ್ದಲ್ಲಿ ಮಾತ್ರ ಈ ಹುಡುಗಿಯರು ರಕ್ತಹೀನತೆಗೆ ಬಲಿಯಾಗುವುದನ್ನು ತಪ್ಪಿಸಬಹುದಾಗಿದೆ.* ಅಲ್ಲದೆ ಈ ವಯಸ್ಸಿನಲ್ಲಿ ಹುಡುಗಿಯ ಶಾರೀರಿಕ ಬೆಳವಣಿಗೆ ತೀವ್ರಗತಿಯಲ್ಲಿ ಸಾಗುತ್ತಿದ್ದು ಈ ಅವಧಿಯಲ್ಲಿ ಅವಳಿಗೆ ವಿವಾಹವಾಗಿ ತಾಯ್ತನದ ಹೊರೆ ಅವಳ ಮೇಲೆ ಬಿದ್ದಲ್ಲಿ ಅವಳ ಬೆಳವಣಿಗೆ ಕುಂಠಿತವಾಗುವುದಲ್ಲದೆ ರಕ್ತಹೀನತೆಯೂ ಅವಳನ್ನು ಕಾಡದೇ ಬಿಡುವುದಿಲ್ಲ. ಸಮಾಜವು ಹೆಣ್ಣಿನ ಮೇಲೆ ಕಡ್ಡಾಯವಾಗಿ ಹೊರೆಸಿರುವ ಸಂತಾನೋತ್ಪತ್ತಿಯ ಭಾರವನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಆರೋಗ್ಯವಂತ ಮಗುವನ್ನು ಅದು ಗಂಡಾಗಲೀ ಹೆಣ್ಣಾಗಲೀ ಪಡೆಯಲು ಅವಳಿಗೆ ಸರಿಯಾದ ಆಹಾರವನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಿ ಅವಳ ಆರೋಗ್ಯವನ್ನು ಕಾಪಾಡುವುದು ಹಾಗೂ ಹದಿಹರೆಯದಲ್ಲಿ ತಾಯ್ತನದ ಹೊರೆ ಅವಳ ಮೇಲೆ ಬೀಳದಂತೆ ಮದುವೆಯನ್ನು ಹದಿನೆಂಟು ವರ್ಷಗಳಾಚೆಗೂ ಮುಂದೂಡುವ ಅಗತ್ಯವಿದೆ. ಮುಂದಿನ ಪೀಳಿಗೆಯಾದರೂ ಆರೋಗ್ಯಶಾಲಿಗಳಾಗಿರಲು ಇವೆಲ್ಲಾ ಕ್ರಮಗಳನ್ನು ಆದಷ್ಟು ಬೇಗ ಕೈಗೊಳ್ಳಬೇಕಾಗಿದೆ ಎಂಬ ಪ್ರಜ್ಞೆಯನ್ನು ಒಟ್ಟು ಸಮಾಜದಲ್ಲಿ, ಸಮುದಾಯಗಳಲ್ಲಿ ಹಾಗೂ ಮುಖ್ಯವಾಗಿ ಕುಟುಂಬಗಳಲ್ಲಿ ಮೂಡಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ಪರಾಧೀನತೆ (Subordination)

ಹದಿಹರೆಯದ ಹುಡುಗಿಯರ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಹಲವು ವೇಳೆ ಅವರ ಪ್ರಾಣಕ್ಕೇ ಕುತ್ತು ತರಬಹುದಾದ ಕಾರಣಗಳಲ್ಲಿ ಈಗಾಗಲೇ ಪ್ರಸ್ತಾಪಿಸಿರುವ ಬಾಲ್ಯವಿವಾಹ, ಹದಿಹರೆಯದ ತಾಯ್ತನ, ಕುಂಠಿತ ಬೆಳವಣಿಗೆ, ನ್ಯೂನಪೋಷಣೆ ಹಾಗೂ ರಕ್ತಹೀನತೆ ಇವೆಲ್ಲವುಗಳಲ್ಲಿ ಒಂದು ಮುಖ್ಯವಾದ ಸಾಮ್ಯವಿದೆ. ಅದೆಂದರೆ ಹುಡುಗಿಯರಿಗೆ ಅಧಿಕಾರವಿಲ್ಲದೇ ಇರುವ ಪರಾಧೀನತೆಯೆ ಆಗಿದೆ. ಸಮಾಜದಲ್ಲಿ ಹುಡುಗಿಯರನ್ನು ಪರಾಧೀನತೆಗೊಳಪಡಿಸುವ ವಿಧಾನಗಳು ಅವರ ಸಮಾಜೀಕರಣ ಮತ್ತು ಸಂಸ್ಕೃತೀಕರಣ ಪ್ರಕ್ರಿಯೆಗಳಲ್ಲಿಯೇ ಅಡಕವಾಗಿವೆ. ಹುಡುಗಿಯರ ಆರೋಗ್ಯಕ್ಕೇ ಅನ್ವಯಿಸುವಂತೆ ಅವರನ್ನು ಪರಾಧೀನತೆಗೊಳಪಡಿಸಿ ತಮ್ಮನ್ನು ಅಸಹಾಯಕರೆಂದು ಅವರು ನಂಬುವಂತೆ ಮಾಡುವ ಹಲವು ವಿಧಾನಗಳನ್ನು ಗುರ್ತಿಸಬಹುದಾಗಿದೆ.

ಮೊದಲನೆಯದಾಗಿ, ಹುಡುಗಿಯರಿಗೆ ಬಾಲ್ಯದಿಂದಲೇ ತಮ್ಮ ಅಗತ್ಯಗಳಿಗೆ ಕಡೆಯ ಆದ್ಯತೆ ನೀಡುವುದೇ ಸರಿಯಾದ ಒಪ್ಪಿತವಾದ ಒಳ್ಳೆಯ ನಡತೆ ಎಂದು ಹುಡುಗಿಯರನ್ನು ನಂಬಿಸಲಾಗುತ್ತದೆ. ತನ್ನ ಆಹಾರ, ಆರೋಗ್ಯ, ಆರೈಕೆ, ಆಟ, ಪಾಠ, ವಿಶ್ರಾಂತಿಗಳಿಗಿಂತಾ ಕುಟುಂಬದ ಇತರ ಸದಸ್ಯರ ಅಗತ್ಯಗಳನ್ನು ಪೂರೈಸುವ ಸೇವೆಯೇ ಅವಳ ಗುರಿ ಹಾಗೂ ಅಂತಹ ನಡವಳಿಕೆಯೇ ಅವಳು ಮುಂದೆ ಗೃಹಿಣಿಯಾಗಿ ಯಶಸ್ವಿಯಾಗಲು ಅಗತ್ಯ ಎಂದೇ ಕಲಿಸಲಾಗುತ್ತದೆ. ಹಾಗಾಗಿ ಹುಡುಗಿ ತನ್ನ ಬಾಲ್ಯದಲ್ಲಿಯೇ ಒಬ್ಬ ಪುಟ್ಟ ಹೆಂಗಸಾಗಿ ತಾಯಿಯ ಪಾತ್ರವನ್ನು ಸಣ್ಣ ಮಟ್ಟದಲ್ಲಿ ನಿರ್ವಹಿಸುತ್ತಾ ಮನೆಗೆಲಸದಲ್ಲಿ ಅಡುಗೆಯಲ್ಲಿ ಅಮ್ಮನಿಗೆ ಸಹಾಯ ಮಾಡುತ್ತಾ ಗಂಡು ಮಕ್ಕಳಿಗಿಂತಾ ಕಡಿಮೆ ಪ್ರಮಾಣದ, ಕಡಿಮೆ ಗುಣಮಟ್ಟದ ಆಹಾರ ಸೇವಿಸುತ್ತಾ, ತಂಗಿ ತಮ್ಮಂದಿರನ್ನು ನೋಡಿಕೊಳ್ಳುತ್ತಾ ಎಲ್ಲರ ಸೇವೆ ಮಾಡುವುದನ್ನು ಕಲಿಯುತ್ತಾ ಅವಳು ಬೆಳೆಯುತ್ತಾಳೆ. ಹಾಗಾಗಿ ಹುಡುಗಿ ಹದಿಹರೆಯದಲ್ಲಿ ಆಗಲೀ ಮದುವೆಯ ನಂತರವಾಗಲೀ ಸಹಜವಾಗಿಯೇ ತನ್ನ ಅನಾರೋಗ್ಯವನ್ನು ಅವು ತೀರ ಉಲ್ಬಣವಾಗುವವರೆಗೂ ಅಲಕ್ಷಿಸುತ್ತಾಳೆ. ಅಲ್ಲದೆ ಅವಳು ಮನೆಯಾಚೆ ಶಾಲೆಗೆ ಹೋಗುವುದನ್ನು ಹೊರತು ಪಡಿಸಿದರೆ, ಇನ್ನೆಲ್ಲಿಯಾದರೂ ಹೋಗಬೇಕಾಗಿದ್ದಲ್ಲಿ ಯಾರಾದರೂ ಜೊತೆಗೆ ಇರಲೇಬೇಕು ಹಾಗೂ ಒಂಟಿಯಾಗಿ ಓಡಾಡುವುದು ಅಪಾಯಕಾರಿ ಎಂಬ ಭಯವನ್ನು ಅವಳೆದೆಯಲ್ಲಿ ಬಿತ್ತಲಾಗುತ್ತದೆ. ಹಾಗಾಗಿ ಅವಳು ತಾನೇ ಸ್ವತಂತ್ರ್ಯವಾಗಿ ಆಸ್ಪತ್ರೆಗೆ ಅಥವಾ ವೈದ್ಯರ ಬಳಿಗೆ ಒಬ್ಬಳೇ ಹೋಗಿ ತನ್ನ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡು ಚಿಕಿತ್ಸೆ ಪಡೆಯಲು ಸಹಜವಾಗಿಯೇ ಹಿಂಜರಿಯುತ್ತಾಳೆ. ಅಲ್ಲದೆ ಈ ರೀತಿ ಸ್ವತಂತ್ರ್ಯವಾಗಿ ತನ್ನ ಅಗತ್ಯಗಳಿಗಾಗಿ ಒಂಟಿಯಾಗಿ ಓಡಾಡುವುದನ್ನು ಕುಟುಂಬ ಸಹ ಸಾಮಾನ್ಯವಾಗಿ ಉತ್ತೇಜಿಸುವುದಿಲ್ಲ.

ಎರಡನೆಯದಾಗಿ ಹೆಣ್ಣಾಗಿ ಹುಟ್ಟಿದ ಮೇಲೆ ಇಂತಹ ಅನಾರೋಗ್ಯದ ಕಿರಿಕಿರಿಗಳನ್ನು ನೋವುಗಳನ್ನು ಎಲ್ಲರೂ ಅನುಭವಿಸಲೇ ಬೇಕಾಗಿರುವುದರಿಂದ ಅವುಗಳಿಗೆ ಚಿಕಿತ್ಸೆ ಅಗತ್ಯವಿಲ್ಲ ಎನ್ನುವ ನಂಬಿಕೆ ಹಾಗೂ ಮನೋಭಾವನೆಗಳು ಹುಡುಗಿಯರ ಮನಸ್ಸಿನಲ್ಲಿ ಬೇರೂರುವಂತೆ ಅವರನ್ನು ಬೆಳೆಸಲಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮುಟ್ಟಿನ ಸಮಸ್ಯೆಗಳು. ಮುಟ್ಟಾಗುವ ಮುಂಚೆ ಹಾಗೀ ಮುಟ್ಟಾದಾಗ ಉಂಟಾಗುವ ತೀವ್ರ ಕೆಳ ಹೊಟ್ಟೆನೋವು, ಬಿಳೀ ಸೆರಗು, ಹೆಚ್ಚಿನ ರಕ್ತಸ್ರಾವ, ಋತು ಚಕ್ರ ಸರಿಯಾಗಿಲ್ಲದಿರುವುದು ಇತ್ಯಾದಿ ಸಮಸ್ಯೆಗಳನ್ನು ಅನೇಕ ಹುಡುಗಿಯರು ಮೌನವಾಗಿ ಸಹಿಸಲು ಇದೇ ಕಾರಣವೆನ್ನಬಹುದು. ಈ ತೊಂದರೆಗಳನ್ನು ನಿರ್ಲಕ್ಷಿಸಿ ಚಿಕಿತ್ಸೆಗೆ ಒಳಪಡಿಸದೇ ಇದ್ದಲ್ಲಿ ಇವು ಭವಿಷ್ಯತ್ತಿನಲ್ಲಿ ಪ್ರಜನನ ವಲಯದ ಸೋಂಕು ಅಥವಾ ಕೀಲ್ಗುಳಿಯ ಉರಿಯೂತ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡುವ ಅಪಾಯವಿದ್ದರೂ ಸಹ ಇವುಗಳನ್ನು ಅಜ್ಞಾನದಿಂದಲೋ ಅಸಡ್ಡೆಯಿಂದಲೋ ನಿರ್ಲಕ್ಷಿಸಲಾಗುತ್ತಿದೆ. ಸರಿಯಾದ ಸ್ವಚ್ಛತೆ, ಶೌಚಾಲಯ ಮತ್ತು ನೀರಿನ ಸೌಲಭ್ಯಗಳು ಸರಿಯಿಲ್ಲದಿದ್ದಡೆಗಳಲ್ಲಿ ಮುಟ್ಟಿನ ಸಮಸ್ಯೆಗಳು ಜಟಿಲಗೊಂಡು ಪ್ರಜನನ ಆರೋಗ್ಯಕ್ಕೆ ಅಪಾಯಗಳನ್ನೊಡ್ಡುತ್ತವೆ. ಇದೇ ಲೇಖಕಿಯ ಮಾರ್ಗದರ್ಶನದಲ್ಲಿ ನಡೆಸಲಾದ ಮೂರು ಅಧ್ಯಯನಗಳಲ್ಲಿ, ಅಧ್ಯಯನಕ್ಕೊಳಗಾದ ಹುಡುಗಿಯರಲ್ಲಿ ಶೇ.೭೬ ರಿಂದ ೮೮ರಷ್ಟು ಮಂದಿ ಮುಟ್ಟಿನ ತೊಂದರೆಗಳಿಂದ ಬಳಲುತ್ತಿರುವುದು ಕಂಡುಬಂದಿತು. ವಸ್ತುಸ್ಥಿತಿ ಹೀಗಿದ್ದರೂ ಸಹ ವಿವಾಹಿತ ಹದಿಹರೆಯದ ಗ್ರಾಮೀಣ ಹುಡುಗಿಯರು (ಶೇ. ೧೦೦), ಗ್ರಾಮೀಣ ಪ್ರೌಢಶಾಲೆಗಳ ಬಹುತೇಕ ವಿದ್ಯಾರ್ಥಿನಿಯರು (ಶೇ. ೬೭), ನಗರದ ಪ್ರೌಢಶಾಲೆಗಳ ವಿದ್ಯಾರ್ಥಿನಿಯರು (ಶೇ. ೬೩) ಮತ್ತು ಕಾಲೇಜು ವಿದ್ಯಾರ್ಥಿನಿಯರಲ್ಲಿ ಅರ್ಧದಷ್ಟು ಮಂದಿ ಸಹ ತಮ್ಮ ಮುಟ್ಟಿನ ಸಮಸ್ಯೆಗಳಿಗೆ ಯಾವುದೇ ಚಿಕಿತ್ಸೆ ಪಡೆಯುತ್ತಿರಲಿಲ್ಲ ಹಾಗೂ ಅಂತಹ ಸಮಸ್ಯೆಗಳು ಹೆಣ್ಣಿಗೆ ಸಹಜವಾಗಿರುವುದರಿಂದ ಯಾವುದೇ ಚಿಕಿತ್ಸೆ ಅಗತ್ಯವಿಲ್ಲವೆಂದೇ ಭಾವಿಸಿದ್ದರು (ಕೋಷ್ಟಕ-೧೩ನ್ನು ನೋಡಿ). ಆದರೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಮಟ್ಟ ಹೆಚ್ಚಿದಂತೆಲ್ಲಾ ಇಂತಹ ಮೂಢನಂಬಿಕೆಗಳು ಕಡಿಮೆಯಾಗುವುದನ್ನು ಗ್ರಾಮೀಣ ಹುಡುಗಿಯರ ಹಾಗೂ ಕಾಲೇಜು ವಿದ್ಯಾರ್ಥಿನಿಯರ ನಡುವೆ ನಂಬಿಕೆಯಿದ್ದವರ ಸಂಖ್ಯೆಯ ಅಂತರದಲ್ಲಿ ಗಮನಿಸಬಹುದಾಗಿದೆ.

ಕೋಷ್ಟಕ೧೪: ಮುಟ್ಟಿನ ಸಮಸ್ಯೆಗಳನ್ನು ಕುರಿತ ಫಲಿತಾಂಶಳು: ಮೂರು ಅಧ್ಯಯನಗಳಲ್ಲಿ

ಅಧ್ಯಯನ ನಡೆಸಿದ

ಸಂಶೋಧಕರು, ವರ್ಷ

ಮತ್ತು ಸ್ಥಳ

ಅಧ್ಯಯನಕ್ಕೊಳಗಾದವರ

ಸಂಖ್ಯೆ, ವಾಸಸ್ಥಳ ಮತ್ತು

ವಯಸ್ಸು

ಸಂಶೋಧನಾ ವಿಧಾನ ಫಲಿತಾಂಶಗಳು ಪಡೆದ ಚಿಕಿತ್ಸೆ
ನೇತ್ರಾವತಿ (೨೦೦೬)ರಾಣೆಬೆನ್ನೂರು ತಾಲ್ಲೂಕಿನ ೧೪ ಹಳ್ಳಿಗಳು ೧೫೦ ಮಂದಿ ಬಡತನ ರೇಖೆಯ ಕೆಳಗಿನ ಕುಟುಂಬಗಳ ವಿವಾಹಿತ ಹುಡುಗಿಯರು : ವಯಸ್ಕ < ೨೦ ವರ್ಷಗಳು ಸರ್ವೇಕ್ಷಣೆ ವೈಯಕ್ತಿಕ ಸಂದರ್ಶನದ ಮೂಲಕ ಮಾಹಿತಿ ಸಂಗ್ರಹಣೆ ಶೇ. ೭೭ರಷ್ಟು ಹುಡುಗಿಯರು ವಿವಿಧ ಬಗೆಯ ಮುಟ್ಟಿನ ಸಮಸ್ಯೆಗಳಿಂದ ಹಾಗೂ ಶೇ. ೨೩ ರಷ್ಟು ಹುಡುಗಿಯರು ಗರ್ಭ ಕೋಶದ ತೊಂದರೆ ಮತ್ತು ಯೋನಿಯ ಸೋಂಕಿನಿಂದ ನರಳುತ್ತಿದ್ದರು. ಯಾರೂ ಚಿಕಿತ್ಸೆ ಪಡೆಯುತ್ತಿರಲಿಲ್ಲ. ಮುಟ್ಟಿನ ತೊಂದರೆಗಳು ಹೆಣ್ಣಿಗೆ ಸಹಜವಾದವುಗಳೆಂಬ ನಂಬಿಕೆ ಸರ್ವವ್ಯಾಪ್ತಿಯಾಗಿತ್ತು.
ಮೇಸ್ತ್ರಿ ಉಮಾ (೨೦೦೨)[9] ಹುಬ್ಬಳ್ಳಿ-ಧಾರವಾಡಗಳ ಕಾಲೇಜು ವಿದ್ಯಾರ್ಥಿನಿಯರ ಹತ್ತು ವಸತಿಗೃಹಗಳು ವಸತಿ ಗೃಹಗಳಲ್ಲಿನ ೧೫೦ ವಿದ್ಯಾರ್ಥಿನಿಯರು, ವಯಸ್ಸು ೧೮ ರಿಂದ ೨೪ ವರ್ಷ, ಶೇ. ೮೫ರಷ್ಟು ಮಂದಿ ೮೫ ರಷ್ಟು ಮಂದಿ ೧೮ ರಿಂದ ೨೦ ವರ್ಷ ವಯೋಮಾನದಲ್ಲಿದ್ದರು ಅನ್ವೇಷಣಾತ್ಮಕ ಅಧ್ಯಯನ, ಪರಿವೀಕ್ಷಣೆ ಮತ್ತು ವೈಯಕ್ತಿಕ ಸಂದರ್ಶನ ಶೇ. ೭೬ರಷ್ಟು ಹುಡುಗಿಯರು ಮುಟ್ಟಿನ ತೊಂದರೆಗಳಿಂದ ಬಳಲುತ್ತಿದ್ದರು ಶೇ.೨೨ರಷ್ಟು ಮಂದಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರೆ ಶೇ. ೫೦ ರಷ್ಟು ಹುಡುಗಿಯರು ಮೌನವಾಗಿ ಮುಟ್ಟಿನ ನೋವು ಅನುಭವಿಸುತ್ತಿದ್ದರು. ಇನ್ನುಳಿದವರು ತಮಗೆ ತೋಚಿದ ಔಷಧಿ ಸೇವಿಸಿ ಅಥವಾ ಸುಮ್ಮನೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ವಿಜಯಲಕ್ಷ್ಮಿ ಇನಾಮತಿ[10] (೨೦೦೧). ಧಾರವಾಡ ತಾಲ್ಲೂಕಿನ ಮೂರು ನಗರ ಪ್ರದೇಶದ ಪ್ರೌಢಶಾಲೆಗಳು ೯೦ ಮಂದಿ ಗ್ರಾಮೀಣ ಹಾಗೂ ೯೦ ಮಂದಿ ನಗರ ಪ್ರದೇಶದ ಪ್ರೌಢಶಾಲಾ ವಿದ್ಯಾರ್ಥಿನಿಯರು ವಯಸ್ಸು ೧೩ ರಿಂದ ೧೭ ವರ್ಷಗಳು ಸರ್ವೇಕ್ಷಣೆ, ವೈಯಕ್ತಿಕ ಸಂದರ್ಶನ ಶೇ. ೮೮ರಷ್ಟು ವಿದ್ಯಾರ್ಥಿನಿಯರು ಒಂದಕ್ಕಿಂತಾ ಹೆಚ್ಚಿನ ಮುಟ್ಟಿನ ತೊಂದರೆಗಳನ್ನು ಅನುಭವಿಸುತ್ತಿದ್ದು ಸರಾಸರಿ ೩ ಕ್ಕಿಂತಾ ಹೆಚ್ಚು ತೊಂದರೆಗಳಿಂದ ಬಳಲುತ್ತಿದ್ದರು ಶೇ. ೬೭ರಷ್ಟು ಗ್ರಾಮೀಣ ಹಾಗೂ ಶೇ. ೬೩ರಷ್ಟು ನಗರದ ವಿದ್ಯಾರ್ಥಿನಿಯರು ಮುಟ್ಟಿನ ತೊಂದರೆಗಳನ್ನು ಸಹಜವಾದವುಗಳೆಂದು ಭಾವಿಸಿ ವೈದ್ಯಕೀಯ ಚಿಕಿತ್ಸೆ ಪಡೆದಿರಲಿಲ್ಲ. ಮುಟ್ಟಿನ ಸಮಸ್ಯೆಗಳು ಸ್ವಾಭಾವಿಕ ಹಾಗೂ ಇವು ಎಲ್ಲರನ್ನೂ ಕಾಡುತ್ತವೆ ಎಂಬ ನಂಬಿಕೆಗಳೇ ಇದಕ್ಕೆ ಕಾರಣಗಳಾಗಿದ್ದವು.

ಕೋಷ್ಟಕ೧೫: ಮಹಿಳೆಯರ ಪರಾಧೀನತೆಯನ್ನು ಬಿಂಬಿಸುವ ಅಂಶಗಳು

ಪರಾಧೀನತೆಯ ಅಂಶಗಳು ಭಾರತ (%) ಕರ್ನಾಟಕ (%)
೧. ತಮ್ಮ ಆರೋಗ್ಯವನ್ನು ಕುರಿತ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಭಾಗಿಯಾಗುವ ಸ್ವಾತಂತ್ರ್ಯವಿಲ್ಲದವರು ೪೮.೪

(೫೧.೬)

೫೦.೭

(೪೯.೩)

೨. ಯಾವುದೇ ಆಸ್ತಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ಕೊಳ್ಳುವಲ್ಲಿ ಭಾಗಿಯಾಗದವರು ೪೭.೪

(೫೨.೬)

೫೨.೭

(೪೭.೩)

೩. ಮಾರುಕಟ್ಟೆಗೆ ಹೋಗಲು ಅನುಮತಿಯ ಅಗತ್ಯವಿರುವವರು ೬೮.೪

(೩೧.೬೦)

೫೭

(೪೩)

೪. ಬಂಧುಗಳು ಮತ್ತು ಸ್ನೇಹಿತರನ್ನು ಭೇಟಿ ಮಾಡಲು ಅನುಮತಿಯನ್ನು ಪಡೆಯಬೇಕಾದವರು ೭೫.೬೦

(೨೪.೪೦)

೬೫.೭

(೩೪.೩)

೫. ದೈಹಿಕ ಹಿಂಸೆಯನ್ನು ವರದಿ ಮಾಡಿರುವ ವಿವಾಹಿತ ಸ್ತ್ರೀಯರು ೨೧.೦೦ ೨೧.೫೦

ಟಿಪ್ಪಣಿ: ಆವರಣದಲ್ಲಿರುವ ಶೇಕಡವಾರು ಸಂಖ್ಯೆಗಳು ಪರಾಧೀನತೆಯ ಆ ಅಂಶಗಳಿಗೆ ಒಳಪಡದ ಮಹಿಳೆಯರ ಸಂಖ್ಯೆಗಳಾಗಿವೆ.

ಮೂಲ: ಭಾರತ ಸರ್ಕಾರದ ೨೦೦೧ರ ಜನಗಣತಿ, www.census Indiacenus.net.

ಎರಡನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೇಕ್ಷಣೆ, ಗ್ರಂಥಋಣ. ೧೪

[1] WHO., 4th Report on the world Nutrition Situation., Subcommittee on nutrition (ACC/SCN) Geneva, Jan. 2000, P.24.

[2] Chakravathi and Kalpana Ghosh (2004)“Under nutrition A Gender related issue with particular reference to Nutritional Anaemia’’ Proceedings of National Seminar on Gender statistics and Data gaps., 5-7th Feb, 2004. Held at Goa. P. 187.

[3] D. H. News (2005), “Gender Bias may affect men too : Amartya Sen’’, Deccan Herald, 6th Jan, 2002, P.9.

[4] News (2005), “WHO calls for hikings health expenditure’’ Health for Millions, April-May 2005, Vol. 31 (1), P. 43.

[5] GOI., Women and Men in India 2004, New Delhi., Central Statistical Organization. Ministry of Statistics and Programme Implementation., GOI P. 26.

[6] Office of RGI, quoted in GOI (2006) Platform for Action 10 years after : India Country Report., New Delhi dept of of Women and Child Development, Ministry of HRD., GOI. P. xi & 76.

[7] World Bank (2000). 2000 World Development Indicators Washington., World Bank. P. 19.

[8] GOI (2001), Census www.censulIndia.net

* ಹೆಚ್ಚಿನ ವಿವರಗಳಿಗೆ ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಕಟಿಸಿರುವ ಇದೇ ಲೇಖಕೀಯ, ಮಹಿಳೆ ಮತ್ತು ಆರೋಗ್ಯ ಪುಸ್ತಕ ನೋಡಿ. ಪು. ೭೨-೮೧

[9] Mestri Uma (2002)., Health problems among adloscent Females Hostelers in Hubli and Dharwad Cities., Thesis submitted to Univerisity of Agricultural Sciences, Dharwad in partial fulfillment of the requirement for the Degree of MHSc in Human Development. p. 57 and 59

[10] Inamati, Vijayalakshmi (2001)., Menstrual Problems of School Students in Rural and Urbon aread of Dharwad Taluk., Thesis submitted to University of Agricultural Sciences Dharwad in Partial Fulfillment of requirements for MHSc degree in Human Development. P. 69, 76-77.