‘ಹದಿಹರೆಯ’ ಬಾಲ್ಯ ಮತ್ತು ಯೌವನಾವಸ್ಥೆಗಳ ನಡುವಿನ ಸ್ಥಿತ್ಯಂತರದ ಅವಧಿ. ಈ ಅವಧಿಯಲ್ಲಿ ಹುಡುಗಿಯಲ್ಲಿ ಹಲವಾರು ಶಾರೀರಿಕ ಮತ್ತು ಮಾನಸಿಕ ಬದಲಾವಣೆಗಳುಂಟಾಗುವುದರಿಂದ ಹಾಗೂ ಅವಳು ಕ್ಷಿಪ್ರಗತಿಯಿಂದ ಬೆಳೆಯುವುದರಿಂದ ಇದು ಅವಳ ಜೀವನದ ಸಂಕ್ರಮಣ ಕಾಲವೂ ಹೌದು. ಇವೆಲ್ಲಾ ಬದಲಾವಣೆಗಳೊಂದಿಗೇ ಸಮಾಜ ಹಾಗೂ ಕುಟುಂಬ ಅವಳನ್ನು ನೋಡುವ ನಡೆಯಿಸಿಕೊಳ್ಳುವ ಬಗೆ, ಹಾಗೂ ಅವಳನ್ನು ಕುರಿತಂತೆ ಅವುಗಳ ನಿರೀಕ್ಷೆಗಳು ಬದಲಾಗುವ ಅವಧಿಯಿದು. ಬಾಲೆಯಾಗಿದ್ದವಳನ್ನು ಮೈ ನೆರೆದಾಕ್ಷಣ ‘ಹೆಂಗಸನ್ನಾಗಿ’ ಪರಿಭಾವಿಸಿ ಸಮಾಜ ಹಾಗೂ ಕುಟುಂಬಗಳು ಅವಳನ್ನು ವಯಸ್ಕಳಂತೆಯೇ ಮದುವೆ ಹಾಗೂ ತಾಯ್ತನಗಳ ಹೊಣೆ ಹೊರಲು ಸಿದ್ಧವಾಗಬೇಕೆಂದು ನಿರೀಕ್ಷಿಸುವ ಕಾಲವಿದು.

ವಿಶ್ವ ಆರೋಗ್ಯ ಸಂಸ್ಥೆಯು ಹತ್ತರಿಂದ ಹತ್ತೊಂಬತ್ತು ವರ್ಷದೊಳಗಿನ ವಯೋಮಾನದವರನ್ನು ಹರಿಹರೆಯದವರೆಂದು ಗುರ್ತಿಸಿದೆ. ಇಡೀ ವಿಶ್ವದಲ್ಲಿಂದು ೧.೨ ಬಿಲಿಯನ್‌ಹದಿಹರೆಯದವರಿದ್ದಾರೆ. ಇವರಲ್ಲಿ ಸುಮಾರು ಶೇ. ೮೫ರಷ್ಟು ಮಂದಿ ಬಡ ಹಾಗೂ ಅಭಿವೃದ್ಧಿ ಶೀಲ ದೇಶಗಳಲ್ಲಿದ್ದಾರೆ.

[1] ಇನ್ನುಳಿದವರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿದ್ದಾರೆ. ಹೀಗೆ ಭಾರತವನ್ನು ಒಳಗೊಂಡಂತೆ ಅತಿ ಹೆಚ್ಚು ಹದಿಹರೆಯದ ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಹರೆಯದವರ ಆರೋಗ್ಯಕ್ಕೆ ಕೆಲವು ಕಾರಣಗಳಿಂದಾಗಿ ಅತ್ಯಂತ ಮಹತ್ವದ ಆಧ್ಯತೆಯನ್ನು ನೀಡಲೇಬೇಕಾಗುವ ಅನಿವಾರ್ಯತೆಯಿದೆ.

ಮೊದಲನೆಯದಾಗಿ ನಮ್ಮ ದೇಶದಲ್ಲಿ ೧೯೯೧ರಿಂದೀಚೆಗೆ ಹದಿಹರೆಯದವರ ಜನಸಂಖ್ಯೆ ಬಹಳ ವೇಗವಾಗಿ ಹೆಚ್ಚುತ್ತಾ ಹೋಗುತ್ತಿದೆ. ಜನಸಂಖ್ಯಾ ಪ್ರಕ್ಷೇಪಣದ (Population projection) ಪ್ರಕಾರ ಈ ರೀತಿಯ ಹೆಚ್ಚಳ ಇನ್ನೂ ಇಪ್ಪತ್ತು ವರ್ಷಗಳ ದೀರ್ಘಾಚಧಿಯವರೆಗೂ ಮುಂದುವರಿಯುತ್ತಲೇ ಇರುತ್ತದೆ.[2] ಇಂದು ಹಾಗೂ ಇನ್ನೂ ಮುಂದೆ ಜನಸಂಖ್ಯೆಯು ಶರವೇಗದಲ್ಲಿ ಬೆಳೆಯುತ್ತಾ ಹೋಗಲು ಹರಿಹರೆಯದ ಹುಡುಗಿಯರ ಕೊಡುಗೆ ಅಪಾರವಾದದ್ದು ಎಂಬುದನ್ನಿಲ್ಲಿ ಗಮನಿಸಬೇಕು. ೨೦೦೧ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.೨೧.೪ರಷ್ಟು ಜನ ಹದಿಹರೆಯದವರು. ನಮ್ಮ ದೇಶದ ದಶಲಕ್ಷ ಹದಿಹರೆಯದ ಜನಸಂಖ್ಯೆಯಲ್ಲಿ ಹುಡುಗಿಯರ ಸಂಖ್ಯೆ ೧೦೦ ದಶಲಕ್ಷಕ್ಕಿಂತಾ ತುಸು ಕಡಿಮೆಯಷ್ಟೇ.[3] ಭಾರತದಲ್ಲಿ ಶೇ.೬೧ರಷ್ಟು ಹುಡುಗಿಯರಿಗೆ ೧೮ ವರ್ಷಗಳ ಒಳಗೇ ಮದುವೆಯಾಗಿದ್ದು, ಅವರಲ್ಲಿ ಬಹುತೇಕ ಮಂದಿ ಈಗಾಗಲೇ ಒಂದೆರಡು ಅಥವಾ ಅದಕ್ಕಿಂತಾ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಈಗಾಗಲೇ ಹೆತ್ತಿದ್ದಾರೆ ಮುಂದೆ ಹೆರುತ್ತಾರೆ ಎಂಬುದನ್ನು ಗಮನಿಸಿದಾಗ ಪರಿಸ್ಥಿತು ಗಂಭೀರತೆ ಅರಿವಾದೀತು.

ಎರಡನೆಯದಾಗಿ ಜನಸಂಖ್ಯಾ ಹೆಚ್ಚಳವೊಂದೇ ಅಲ್ಲದೆ, ಹದಿಹರೆಯದ ಹುಡುಗಿಯರ ಮೈಮನಗಳು ಪೂರ್ತಿಯಾಗಿ ವಿಕಾಸಗೊಳ್ಳುವ ಮೊದಲೇ ಬಾಲ್ಯವಿವಾಹದ ಮೂಲಕ ಅವರ ಮೇಲೆ ಹೇರಲಾಗುತ್ತಿರುವ ಸಂಭೋಗ ಮತ್ತು ತಾಯ್ತನಗಳ ಭಾರಗಳಿಂದಾಗಿ ಅವರ ಆರೋಗ್ಯ ಹಾಗೂ ಅವರಿಗೆ ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಲೇ ಬೇಕಾಗಿದೆ. ಇಂದು ಜನಸಂಖ್ಯಾ ನಿಯಂತ್ರಣಕ್ಕಿಂತಾ, ಮುಂದಿನ ಪೀಳಿಗೆ ಆರೋಗ್ಯವಂತವಾಗಿ ಹುಟ್ಟಲು, ಮಕ್ಕಳನ್ನು ಹೊತ್ತು, ಹೆತ್ತು, ಪಾಲಿಸಬೇಕಾಗುವ ಹರೆಯದ ಹುಡುಗಿಯರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.

ಆದರೆ, ಪುರುಷ ಪಕ್ಷಪಾತೀ ಸಮಾಜದಲ್ಲಿ ಹದಿಹರೆಯದ ಹುಡುಗಿಯರ ಬದುಕಿನ ವಾಸ್ತವತೆಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸಿದಾಗ, ಅವರು ಹುಟ್ಟಿನಿಂದಾಗಿ ಹರೆಯದ ವಯೋಮಾನವನ್ನು ದಾಟುವ ವೇಳೆಗಾಗಲೇ, ಅವರ ಆರೋಗ್ಯವನ್ನು ತೀವ್ರವಾಗಿ ತಟ್ಟುವ ಹಲವು ಅಂಶಗಳು ಒಂದರೊಳಗೊಂದು ಬಲವಾಗಿ ಹೆಣೆದುಕೊಂಡು ಅವರ ಆರೋಗ್ಯವನ್ನು ಹಾಳುಗೆಡವುತ್ತಿರುವುದನ್ನು ಮೇಲ್ನೋಟಕ್ಕೇ ಗುರ್ತಿಸಬಹುದು. ಇಂತಹ ಅಂಶಗಳ ಒಳಗೊಮ್ಮೆ ವಿಶ್ಲೇಷಣಾತ್ಮಕ ಒಳನೋಟ ಹರಿಸಿದಲ್ಲಿ, ನಮ್ಮ ಸಮಾಜದಲ್ಲಿ ಗಾಳಿಯಷ್ಟೇ ಸರ್ವವ್ಯಾಪಿಯಾಗಿರುವ ಲಿಂಗಪಕ್ಷಪಾತೀ ಧೋರಣೆ ಹಾಗೂ ನಡವಳಿಕೆಗಳ ನೆಲೆಗಟ್ಟಿನ ಮೇಲೆ ಈ ಅಂಶಗಳೆಲ್ಲವೂ ನಿಂತಿರುವುದನ್ನು ಕಾಣಬಹುದು. ಈ ಅಂಶಗಳಲ್ಲಿ ಮುಖ್ಯವಾದ ಬಾಲ್ಯವಿವಾಹ, ನ್ಯೂನಪೋಷಣೆ (ಅಪಪೋಷಣೆ), ರಕ್ತಹೀನತೆ ಹಾಗೂ ಪರಾಧೀನತೆಗಳನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ.

ನಮ್ಮ ದೇಶದಲ್ಲಿ ಪ್ರತಿವರ್ಷ ಹುಟ್ಟುವ ದಶಲಕ್ಷ ಹೆಣ್ಣುಮಕ್ಕಳಲ್ಲಿ ಮೂರು ದಶಲಕ್ಷ ಮಕ್ಕಳು ಹದಿನೈದು ವರ್ಷಗಳಾಗುವ ಮೊದಲೇ ಸಾವನ್ನಪ್ಪುತ್ತಿರುವುದು ಸ್ತ್ರೀಯರನ್ನು ದೇವತೆಗಳೆಂದೇ ಪೂಜಿಸುತ್ತೇವೆಂದು ಹೇಳಿಕೊಳ್ಳುವ ನಮ್ಮ ಸಮಾಜ ಮತ್ತು ಸಂಸ್ಕೃತಿಯಲ್ಲಿ ಹೆಣ್ಣು ಹುಟ್ಟಿದಾರಭ್ಯ ಅನುಭವಿಸುವ ಲಿಂಗಪಕ್ಷಪಾತೀ ಅಲಕ್ಷ್ಯಕ್ಕೆ ಸಾಕ್ಷಿ. ನಮ್ಮಲ್ಲಿ ವ್ಯಾಪಕವಾಗಿರುವ ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಗುವಿನ ಆಹಾರ ಪೋಷಣೆ ಹಾಗೂ ಆರೋಗ್ಯ ಅಗತ್ಯಗಳ ಬಗ್ಗೆ ಇರುವ ಅಲಕ್ಷ್ಯ, ಅನಾದರಣೆಗಳು ಹೆಣ್ಣು ತಾಯ ಗರ್ಭದಲ್ಲಿ ಜೀವತಳೆದಾಗಿನಿಂದ ಹಿಡಿದು ಬಾಲ್ಯವನ್ನು ಪೂರ್ಣಗೊಳಿಸಿ ಹದಿಹರೆಯವನ್ನು ಪೂರ್ಣಗೊಳಿಸುವವರೆಗಿನ ಕುತ್ತುಗಳಾಗಿವೆ. ಹುಡುಗಿಯರನ್ನು ಕುರಿತಂತೆ ಇರುವ ಹಲವು ಮೂಢ ನಂಬಿಕೆಗಳು, ಸಂಪ್ರದಾಯಿಕ ಮನೋಭಾವನೆಗಳು ಹಾಗೂ ಆಚರಣೆಗಳು ಅವಳ ಬದುಕನ್ನು ಘಾಸಿಗೊಳಿಸಬಲ್ಲ ಅನಾದರ, ಅಸಡ್ಡೆ, ಅಪಮೌಲ್ಯೀಕರಣಗಳಿಗೆ ಒತ್ತಾಸೆಯಾಗಿವೆ.

ಬಾಲ್ಯವಿವಾಹ

ಬಾಲ್ಯದ ಕುತ್ತುಗಳನ್ನು ದಾಟಿ ಹದಿಹರೆಯಕ್ಕೆ ಕಾಲಿಡುವಾಗ ಹುಡುಗಿಯರಿಗೆ ಎದುರಾಗುವ ಅಪಾಯವೆಂದರೆ ಬಾಲ್ಯವಿವಾಹ. ಭಾರತದಲ್ಲಿ ಪ್ರತಿವರ್ಷ ಜರಗುವ ೪.೫ ದಶಲಕ್ಷ ಮದುವೆಗಳಲ್ಲಿ ೩ ದಶಲಕ್ಷ ಮದುವಣಗಿತ್ತಿಯರು ೧೫ ರಿಂದ ೧೯ ವರ್ಷವಯಸ್ಸಿನೊಳಗಿನವರೇ ಆಗಿರುತ್ತಾರೆ.[4] ಹೀಗೇ ಬಾಲ್ಯವಿವಾಹವಾಗಿರುವವರಲ್ಲಿ ಶೇ ೬೧ರಷ್ಟು ಹೆಣ್ಣುಮಕ್ಕಳು ೧೯ನೇ ವರ್ಷದೊಳಗೇ ಮಕ್ಕಳನ್ನು ಹಡೆಯುತ್ತಾರೆ. ಇಂತಹ ಹದಿಹರೆಯದ ತಾಯ್ತನದಲ್ಲಿಯೆ ಶಿಶುಮರಣ ಹಾಗೂ ತಾಯಿಯರ ಮರಣ ಸಂಖ್ಯಾ ಪ್ರಮಾಣಗಳೆರಡೂ ಅತಿಹೆಚ್ಚಾಗಿರುತ್ತವೆ. ಹದಿನೈದು ಏಷ್ಯನ್ ದೇಶಗಳಲ್ಲಿ ನಡೆಸಲಾದ ಹಲವಾರು ಜನಸಂಖ್ಯಾತ್ಮಕ ಹಾಗೂ ಆರೋಗ್ಯ ಸರ್ವೇಕ್ಷಣೆಗಳಿಂದ ತಾಯಿಯ ವಯಸ್ಸು ಇಪ್ಪತ್ತು ವರ್ಷಗಳಿಗಿಂತಾ ಕಡಿಮೆಯಿದ್ದಲ್ಲಿಅವಳಿಗೆ ಹುಟ್ಟುವ ಮಗು ಒಂದು ವರ್ಷ ತುಂಬುವುದರೊಳಗೇ ಸಾಯುವ ಸಾಧ್ಯತೆಗಳು ಹೆಚ್ಚು ಎಂಬುದನ್ನಯು ಸಾಬೀತು ಪಡಿಸಿವೆ (ಕೋಷ್ಟಕ ೯ ನೋಡಿ).[5] ಇಷ್ಟೇ ಅಲ್ಲದೆ ಹದಿಹರೆಯದಲ್ಲಿ ಮದುವೆಯಾಗುವ ಕಿಶೋರಿಯರು ತಾಯ್ತನದ ಅವಧಿಯಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಗುವುದು. ಭಾರತವನ್ನೂ ಒಳಗೊಂಡಂತೆ ಅಭಿವೃದ್ಧಿ ಶೀಲ ದೇಶಗಳಲ್ಲಿ ಹದಿಹರೆಯದಲ್ಲಿಯೇ ನಡೆಯುವ ಮದುವೆಗಳ ಅಥವಾ ಬಾಲ್ಯವಿವಾಹಗಳನ್ನು ಇನ್ನೂ ಪ್ರಚಲಿತವಾಗಿದ್ದು ಹುಡುಗಿಯರ ಆರೋಗ್ಯಕ್ಕೆ ಗಂಭೀರ ಸವಾಲುಗಳನ್ನೂ ಒಡ್ಡುತ್ತಿವೆ.

ಬಾಲ್ಯವಿವಾಹದ ನೇರ ಫಲಿತಾಂಶದ ಹದಿಹರೆಯದ ತಾಯ್ತನದಿಂದ ಉಂಟಾಗುವ ಕುತ್ತುಗಳನ್ನು ಕೆಳಕಂಡಂತೆ ಪಟ್ಟಿ ಮಾಡಬಹುದು.

೧. ಬಸುರಿನಲ್ಲಿ ತೀವ್ರ ರಕ್ತಸ್ರಾವದ ಅಪಾಯ.

೨. ತೀವ್ರ ಗಂಭೀರವಾದ ರಕ್ತಹೀನತೆಯಿರುವ ಹುಡುಗಿ ಹೆರಿಗೆಯಲ್ಲಿ ಸಾವನ್ನು ಅಪ್ಪುವ ಅಪಾಯ.

೩. ಬಸುರಿನ ಅವಧಿಯಲ್ಲಿ ರಕ್ತದೊತ್ತಡ ತೊಂದರೆಯುಂಟಾಗುವುದು. ಚಿಕಿತ್ಸೆ ಸಕಾಲದಲ್ಲಿ ದೊರೆಯದಿದ್ದಲ್ಲಿ ಬಸುರಿನ ನಂಜೇರಿಕೆಯ ಅಪಾಯ.

೪. ಮೈ ಇಳಿದು ಹೋಗುವುದು.

೫. ಹೆರಿಗೆಯಲ್ಲಿ ತೊಡಕುಗಳುಂಟಾಗುವುದು. ಮೈನೆರೆದ ವರ್ಷವೇ ಹುಡುಗಿ ಬಸಿರಾದಲ್ಲಿ ಅವಳ ಕೀಲ್ಗುಳಿ ಹಾಗೂ ಪ್ರಜನನ ಅಂಗಗಳು ಪೂರ್ಣ ವಿಕಾಸಗೊಂಡು ಕಾರ್ಯ ಪರಿಪಕ್ವತೆಯನ್ನು (functional maturity) ಪಡೆಯದಿರುವಾಗ ಅಥವಾ ಅವಳು ಬಾಲ್ಯದಲ್ಲಿ ವೇಗವಾಗಿ ಬೆಳೆಯುವ ಅವಧಿಗಳಾದ ಹದಿಹರೆಯಕ್ಕೆ ಕಾಲಿಡುವ ಸ್ವಲ್ಪ ಮುಂಚೆ ಹಾಗೂ ನಂತರದಲ್ಲಿ ಅಪಪೋಷಣೆಗೆ ಒಳಗಾಗಿದ್ದು ಅವಳ ಬೆಳವಣಿಗೆ ಕುಂಠಿತಗೊಂಡೊದ್ದಲ್ಲಿ ಹೆರಿಗೆಯಲ್ಲಿ ತೊಡಕುಗಳುಂಟಾಗುವ ಅಪಾಯ ಹೆಚ್ಚು.

೬. ಹೆರಿಗೆಯಲ್ಲಿ ಮಗುವು ಅಡ್ಡತಿರುಗುವುದು.

ಕೋಷ್ಟಕ೯: ಏಷ್ಯಾದ ಹದಿನೈದು ದೇಶಗಳಲ್ಲಿ ತಾಯಂದಿರ ವಯಸ್ಸಿಗೆ ಸಂಬಂಧಿಸಿದಂತೆ ಶಿಶು ಮರಣ ಸಂಖ್ಯಾ ಪ್ರಮಾಣ

ದೇಶ ಸರ್ವೇಕ್ಷಣೆ ನಡೆದ ವರ್ಷ ಹೆರಿಗೆಯ ವೇಳೆಗೆ ತಾಯಿಯ ವಯಸ್ಸು
೨೦ ವರ್ಷಗಳಿಗಿಂತ ಕಡಿಮೆ ೨೦-೨೯ ವರ್ಷಗಳು ೧೫-೪೯ ವರ್ಷಗಳು
೧. ಪಾಕಿಸ್ತಾನ ೧೯೯೦-೯೧ ೧೨೧.೩೦ ೯೦.೮೦ ೯೪.೦೦
೨. ನೇಪಾಳ ೧೯೯೬ ೧೨೦.೧೦ ೭೯.೫೦ ೯೩.೦೦
೩. ಭಾರತ ೧೯೯೨-೯೩ ೧೦೭.೩೦ ೭೫.೮೦ ೮೬.೩೦
೪. ಬಾಂಗ್ಲಾದೇಶ ೧೯೯೬-೯೭ ೧೦೬.೨೦ ೭೯.೩೦ ೮೯.೬೦
೫. ಮೈನ್ಮಾರ್‌ ೧೯೯೭ ೮೩.೭೦ ೭೯.೪೦ ೮೧.೧೦
೬. ಮಂಗೋಲಿಯಾ ೧೯೯೮ ೮೫.೯೦ ೬೭.೭೦ ೬೯.೩೦
೭. ಕರ್ಗಿಸ್ಥಾನ ೧೯೯೭ ೯೮.೧೦ ೬೬.೫೦ ೬೬.೨೦
೮. ಇಂಡೋನೇಷ್ಯಾ ೧೯೯೭ ೬೩.೪೦ ೪೭.೪೦ ೫೨.೨೦
೯. ಕಜಕಿಸ್ಥಾನ್‌ ೧೯೯೯ ೭೯.೫೦ ೫೦.೯೦ ೫೦.೩೦
೧೦. ಟರ್ಕಿ ೧೯೯೮ ೫೮.೫೦ ೪೭.೦೦ ೪೮.೪೦
೧೧. ಉಜ್ಬೆಕಿಸ್ಥಾನ್‌ ೧೯೯೬ ೪೫.೦೦ ೪೧.೯೦ ೪೩.೫೦
೧೨. ಥೈಲೆಂಡ್‌ ೧೯೮೭ ೪೦.೭೦ ೩೩.೯೦ ೩೮.೫೦
೧೩. ವಿಯೆಟ್ನಾಂ ೧೯೯೭ ೪೬.೦೦ ೩೩.೭೦ ೩೪.೮೦
೧೪. ಶ್ರೀಲಂಕಾ ೧೯೯೭ ೩೪.೮೦ ೩೩.೩ ೩೨.೫೦
೧೫. ಫಿಲಿಪ್ಪೀನ್ಸ್‌ ೧೯೯೮ ೪೧.೪೦ ೩೩.೩೦ ೩೬.೦೦

ಮೂಲ: Asian Population Studies Series No. 156. Adolecent Reproductive Health in the Asian and Pacific Region. (2001)

೭. ಹೆರಿಗೆಯಲ್ಲಿ ಮಗುವು ಗರ್ಭಕೋಶದಿಂದ ಹೊರಬೀಳುವಾಗ, ಕೀಲ್ಗುಳಿಯಲ್ಲಿನ ಜನನದ ಹಾದಿಯ ಅಗಲವೇ ಕಿರಿದಾಗಿದ್ದು ಜನಿಸುತ್ತಿರುವ ಶಿಶುವಿನ ತಲೆಯ ಗಾತ್ರಕ್ಕೆ ಸರಿಹೊಂದದೇ ಇರುವುದು.

೮. ದಿನ ತುಂಬುವ ಮೊದಲೇ ಹೆರಿಗೆ ನೋವು ಆರಂಭವಾಗುವುದು (ಅಂದರೆ, ಬಸುರಿನ ಇಪ್ಪತ್ತನೆಯ ವಾರದಿಂದ ಮೂವತ್ತೇಳನೆ ವಾರದೊಳಗೇ ಹೆರಿಗೆ ನೋವು ಆರಂಭವಾಗುವುದು).

೯. ಗರ್ಭಕೋಶದ ಬಾಯಿಯ ಕ್ಯಾನ್ಸರ್. ಬಡ ಹಾಗೂ ಅಭಿವೃದ್ಧಿಶೀಲ ದೇಶಗಳಲ್ಲಿ ಎಲ್ಲಾ ಬಗೆಯ ಕ್ಯಾನ್ಸರ್‌ಗಳಿಗಿಂತಾ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿರುವ ಕ್ಯಾನ್ಸರ್‌ಎಂದರೆ ಗರ್ಭಕೋಶದ ಕ್ಯಾನ್ಸರ್‌ಆಗಿದೆ. ಲೈಂಗಿಕ ಸಂಪರ್ಕದಿಂದ ಉಂಟಾಗುವ ಹ್ಯೂಮನ್‌ಪ್ಯಾಪಿಲೋಮ ವೈರಸ್‌ನ (ಎಚ್‌.ಐ.ವಿ) ಸೋಂಕಿನಿಂದ ಈ ಕ್ಯಾನ್ಸರ್‌ಹರಡುತ್ತದೆ. ಇದು ಹೆಚ್ಚಾಗಿ ೧೫ರಿಂದ ೧೯ ವರ್ಷದೊಳಗಿನ ಹುಡುಗಿಯರಲ್ಲಿಯೇ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಮುಖ್ಯಕಾರಣಗಳೆಂದರೆ

  • ಬಾಲ್ಯದಲ್ಲಿಯೇ ವಿವಾಹವಾಗಿ ಎಳೆ ವಯಸ್ಸಿನಲ್ಲಿಯೇ ಮೇಲಿಂದ ಮೇಲೆ ಸಂಭೋಗಕ್ಕೆ ಒಳಗಾಗುವುದು.
  • ಹದಿಹರೆಯದಲ್ಲಿಯೇ ಅಂದರೆ ಹದಿನೆಂಟು ವರ್ಷದೊಳಗೇ ಮಕ್ಕಳನ್ನು ಹೆರಲಾರಂಭಿಸುವುದು.
  • ಮೇಲಿಂದ ಮೇಲೆ ಮಕ್ಕಳನ್ನು ಜಾಸ್ತಿ ಅವಧಿಯ ಅಂತರವಿಡದೆ ಹಡೆಯುತ್ತಾ ಹೋಗುವುದು.

ಹೀಗೆ ಹದಿಹರೆಯದಲ್ಲಿ ಮಕ್ಕಳನ್ನು ಮೇಲಿಂದ ಮೇಲೆ ಹಡೆಯುತ್ತಾ ಹೋಗುವ ಹುಡುಗಿ ರಕ್ತಹೀನತೆಗೂ ಗುರಿಯಾಗುತ್ತಾಳೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು, ಅನೇಕ ಸಂಶೋಧನಾತ್ಮಕ ಅಧ್ಯಯನಗಳು ವಯಸ್ಕರಾದ ತಾಯಿಯರಿಗೆ ಹೋಲಿಸಿದಲ್ಲಿ ಅವರಿಗಿಂತಾ ಹದಿಹರೆಯದ ತಾಯಿಯರಲ್ಲಿ ರಕ್ತಹೀನತೆ, ಅಕಾಲ ಪ್ರಸವ, ಗರ್ಭದೊಳಗಿನ ಶಿಶುವಿನ ಬೆಳವಣಿಗೆ ಕುಂಠಿತವಾಗುವುದು, ರಕ್ತನಂಜೇರಿಕೆ, ರಕ್ತದೊತ್ತಡ, ಬಸುರಿನ ನಂಜೇರಿಕೆ ಇವುಗಳು ಹೆಚ್ಚಾಗಿರುವುದನ್ನು ಸಾಬೀತು ಪಡಿಸಿವೆ.

ಹದಿಹರೆಯದಲ್ಲಿಯೇ ತಾಯಿಯರಾಗುವವರ ಸಂಕಷ್ಟಗಳು ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲಿಯೂ ಬಡಕುಟುಂಬಗಳಲ್ಲಿ ಕಣ್ಣಿಗೆ ರಾಚುವಷ್ಟು ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಇದೇ ಲೇಖಕಿಯ ಮಾರ್ಗದರ್ಶನದಲ್ಲಿ ನಡೆಸಲಾದ ಸಂಶೋಧನೆಯ ವರದಿಯೊಂದು ಎತ್ತಿಹಿಡಿದಿದೆ.[6] ಈ ಅಧ್ಯಯನಕ್ಕಾಗಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ೧೦೬ ಹಳ್ಳಿಗಳ ಪೈಕಿ ಹದಿನಾಲ್ಕನ್ನು ಲಾಟರಿ ಮೂಲಕ ಆಯ್ಕೆಮಾಡಿ ಆ ಹಳ್ಳಿಗಳಲ್ಲಿ ಬಡತನ ರೇಖೆಯ ಕೆಳಗಿದ್ದ ಕುಟುಂಬಗಳಲ್ಲಿನ ವಿವಾಹಿತ ಹದಿಹರೆಯದ ಹುಡುಗಿಯರಲ್ಲಿ ಲಾಟರೀ ಮೂಲಕವೇ ಆಯ್ಕೆ ಮಾಡಿದ ನೂರೈವತ್ತು ಹುಡುಗಿಯರ ಆರೋಗ್ಯ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲಾಯಿತು. ಹೀಗೆ ಆಯ್ಕೆಯಾದ ಹುಡುಗಿಯರು ಸರಾಸರಿ ಹದಿನಾರನೆಯ ವಯಸ್ಸಿಗೆ ಗಂಡನನ್ನು ಸೇರಿ ಒಂದೆರಡು ವರ್ಷಗಳಲ್ಲಿಯೇ ಎಲ್ಲರೂ ಗರ್ಭಿಣಿಯರಾಗಿದ್ದರು. ಬಸಿರಾದಾಗಿನಿಂದ ಹಿಡಿದು ಹೆರಿಗೆಯಾಗಿ ಏಳು ದಿನಗಳ ನಂತರ ಸಹ ವಿವಿಧ ಅವಧಿಗಳಲ್ಲಿ ಒಂದಕ್ಕಿಂತಾ ಹೆಚ್ಚು ಪ್ರಜನನ ಆರೋಗ್ಯ ಸಮಸ್ಯೆಗಳನ್ನು ಎಲ್ಲರೂ ಎದುರಿಸಬೇಕಾಯಿತು ಎಂಬುದನ್ನು ಕೋಷ್ಟಕ-೧೦ ರಲ್ಲಿ ನೋಡಬಹುದು.

ಕೋಷ್ಟಕ೧೦: ಬಡಕುಟುಂಬಗಳಿಗೆ ಸೇರಿದ ೨೦ ವರ್ಷ ವಯೋಮಾನದ ಕೆಳಗಿನ ವಿವಾಹಿತೆಯರ ತಾಯ್ತನದ ಸಮಸ್ಯೆಗಳು (ಮಾಹಿತಿದಾರ ಹುಡುಗಿಯರ ಸಂಖ್ಯೆ ೧೫೦)

i. ಬಸುರಿನ ಅವಧಿಯಲ್ಲಿ ಸಮಸ್ಯೆಗಳನ್ನೆದುರಿಸಿದವರು ೮೬ (೫೭.೩%)
ii. ಗರ್ಭಧರಿಸಿದ ೨೮ನೇ ವಾರದಿಂದ ಹೆರಿಗೆಯ ನಂತರದ ಏಳು ದಿನಗಳ

ಅವಧಿಯಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದವರು

೭೨ (೪೮%)
iii. ಹೆರಿಗೆಯಾದ ಏಳು ದಿನಗಳ ನಂತರ ಅನಾರೋಗ್ಯದಿಂದ ನರಳಿದವರು ೬೫ (೪೩.೩%)

ಮೂಲ: ಗ್ರಂಥಋಣ ಸಂಖ್ಯೆ ನೋಡಿ.

ಇಷ್ಟೇ ಅಲ್ಲದೆ ಹದಿವಯಸ್ಸಿನಲ್ಲಾದ ಈ ಬಸಿರು ಹಾಗೂ ಹೆರಿಗೆಗಳು ತಾಯಿಯನ್ನಷ್ಟೇ ಅನಾರೋಗ್ಯದಿಂದ ನರಳುವಂತೆ ಮಾಡಿದುದಲ್ಲದೆ ಅವಳು ಹೆತ್ತ ಹಾಗೂ ಹೆರುವ ಮೊದಲೇ ಉಂಟಾದ ಶಿಶುಗಳ ಸಾವಿಗೂ ಕಾರಣವಾಗಿದ್ದದು ಈ ಅಧ್ಯಯನದಲ್ಲಿ ಕಂಡುಬಂದಿದೆ. ಹದಿನೆಂಟು ವರ್ಷವಯಸ್ಸಾಗುವುದರೊಳಗೇ ಗರ್ಭಧರಿಸಿದ್ದ ಹುಡುಗಿಯರಲ್ಲಿ ಉಂಟಾದ ಅತಿ ಹೆಚ್ಚಿನ ಶಿಶುನಷ್ಟ (Child wastage) ಗರ್ಭಪಾತದಿಂದ ಉಂಟಾಗಿತ್ತು. ಇನ್ನುಳಿದಂತೆ ಹುಟ್ಟಿ ಒಂದು ವಾರದಲ್ಲಿಯೇ ಅಸುನೀಗಿದಮತ್ತು ಒಂದು ವರ್ಷದೊಳಗೇ ಸತ್ತು ಹೋದ ಕೂಸುಗಳು ಹದಿನೆಂಟರೊಳಗೇ ಹೆತ್ತತಾಯಿಯರಲ್ಲಿ ಮಾತ್ರ ಕಂಡುಬಂದವು. ಹದಿನೆಂಟು ವರ್ಷ ವಯಸ್ಸಾದ ನಂತರ ಬಸಿರಾದ ಹುಡುಗಿಯರಲ್ಲಿ ಒಬ್ಬಳಿಗೆ ಮಾತ್ರ ಹೊಟ್ಟೆಯಲ್ಲಿಯೇ ಸತ್ತುಹೋಗಿದ್ದ ಕೂಸು ಹುಟ್ಟಿತ್ತು. ಇದನ್ನು ಹೊರತು ಪಡಿಸಿದರೆ, ಅವರಲ್ಲಿ ಗರ್ಭಪಾತವಾದವರಾಗಲೀ ಹೆರಿಗೆಯ ನಂತರ ಒಂದು ವಾರ ಎರಡು ವಾರಗಳೊಳಗೇ ಅಥವಾ ಒಂದು ವರ್ಷದೊಳಗೇ ಸತ್ತು ಹೋದ ಕೂಸುನಗಳಿದ್ದವರು ಯಾರೂ ಇರಲಿಲ್ಲ ಎಂಬುದನ್ನು ಗಮನಿಸಬೇಕು (೨೯ನೇ ಪುಟ ನೋಡಿ) ಹದಿನೆಂಟರೊಳಗಿನ ಬಡಹುಡುಗಿಯರು ಹೇಗೆ ಬಸಿರಿನಲ್ಲಿ, ಹೆರಿಗೆಯಲ್ಲಿ ಹಾಗೂ ಹೆರಿಗೆಯ ನಂತರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವುದಲ್ಲದೆ ಹೆಚ್ಚಿನ ಶಿಶು ನಷ್ಟವನ್ನೂ ಅನುಭವಿಸುತ್ತಾರೆ ಎಂಬುದನ್ನು ಈ ಅಧ್ಯಯನ ಸಾಂಕೇತಿಕವಾಗಿ ನಿರೂಪಿಸಿದೆ.6

ಬಾಲ್ಯವಿವಾಹದ ನೇರ ಪರಿಣಾಮವಾದ ಹದಿಹರೆಯದ ತಾಯ್ತನದಲ್ಲಿ (adolescent mother hood) ಉಂಟಾಗುವ ಸಂಕಷ್ಟಗಳು ಹಾಗೂ ಅವು ಹುಡುಗಿಯರ ಆರೋಗ್ಯದ ಮೇಲೆ, ಅವರ ಬೆಳವಣಿಗೆಯ ಮೇಲೆ ಮತ್ತು ಅವರಿಗೆ ಹುಟ್ಟುವ ಮಗುವಿನ ಬದುಕಿ ಉಳಿಯುವ ಸಾಧ್ಯತೆಗಳ ಮೇಲೆಯೇ ಬೀರುವ ದುಷ್ಟರಿಣಾಮಗಳು ಸ್ಪಷ್ಟವಾಗಿ ಸಾಬೀತಾಗಿದ್ದರೂ ಬಾಲ್ಯವಿವಾಹಗಳು ನಮ್ಮ ದೇಶದಲ್ಲಿ ಇನ್ನೂ ಮುಂದುವರೆಯುತ್ತಾ ಇರುವುದು

ಕೋಷ್ಟಕ೧೧: ಮೂರು ವಯೋಮಾನಗಳ ತಾಯಿಯರಿಗೆ ಉಂಟಾಗಿದ್ದ ನಾಲ್ಕು ಬಗೆಯ ಶಿಶುನಷ್ಟ

 

ಶಿಶುನಷ್ಟದ ಬಗೆ

 

೧೫-೧೬ ವರ್ಷ

ವಯೋಮಾನ
೧೭-೧೮ ವರ್ಷ
 

೧೮ ವರ್ಷ+

ಗರ್ಭಪಾತವಾದವರು ೩೫.೫% ೩೩% ೦%
ಸತ್ತ ಕೂಸನ್ನು ಹೆತ್ತವರು ೫.೫% ೭% ೧%
ಶಿಶುಮರಣ ೦% ೧೧% ೦%
ನವಜಾತ ಶಿಶುಮರಣ ೩ % ೪.೫% ೦%

ದುರದೃಷ್ಟಕರ. ೧೯೯೮-೯೯ರಲ್ಲಿ ನಡೆಸಲಾದ ಎರಡನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೇಕ್ಷಣೆಯಲ್ಲಿ ೨೦-೨೪ ವರ್ಷಗಳ ವಯೋಮಾನದಲ್ಲಿದ್ದ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ ಹದಿನೆಂಟರೊಳಗೇ ಮದುವೆಯಾಗಿದ್ದದ್ದು ಕಂಡುಬಂದಿದೆ. ಬಾಲ್ಯವಿವಾಹವಾಗಿದ್ದ ಇಂತಹ ಮಹಿಳೆಯರ ಸಂಖ್ಯೆ ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ಶೇಕಡ ಅರವತ್ತಕ್ಕಿಂತಾ ಹೆಚ್ಚಾಗಿದ್ದು ಬಿಹಾರದಲ್ಲಿ ಪ್ರತಿಶತ ಎಪ್ಪತ್ತಕ್ಕಿಂತಾ ಹೆಚ್ಚಾಗಿದ್ದುದ್ದನ್ನು ಸಮೀಕ್ಷೆ ವರದಿ ಮಾರಿದೆ (ಕೋಷ್ಟಕ-೧೧ ನೋಡಿ). ವಿಜ್ಞಾನ ಹಾಗೂ ತಾಂತ್ರಿಕತೆಗಳಲ್ಲಿ ಇಡೀ ರಾಷ್ಟ್ರದ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಸಹ ಈ ಸಂಖ್ಯೆ ಶೇ. ೪೬ರಷ್ಟಿದ್ದು, ಆಗಾಗ ಪತ್ರಿಕೆ ಹಾಗೂ ಇನ್ನಿತರ ಸಮೂಹ ಮಾಧ್ಯಮಗಳಲ್ಲಿ ನಮ್ಮ ರಾಜ್ಯದಲ್ಲಿ ಆಗುವ ಬಾಲ್ಯವಿವಾಹಗಳು ವರದಿಯಾಗುತ್ತಲೇ ಇರುತ್ತವೆ. ಕೆಲವು ಧಾರ್ಮಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಘಟನೆಗಳು ನಡೆಸಿದ ಕೆಲವು ಸಾಮೂಹಿಕ ವಿವಾಹಗಳಲ್ಲಿ ಬಾಲ್ಯವಿವಾಹಗಾಳೂ ಸೇರಿದ್ದನ್ನು ಪತ್ರಿಕೆಗಳು ವರದಿ ಮಾಡಿವೆ. ಹಾಗೆಯೇ ನಮ್ಮ ರಾಜ್ಯದ ಕೆಲವು ಮಂತ್ರಿಗಳು ಹಾಗೂ ಪ್ರತಿಷ್ಠಿತರು ಇಂತಹ ಬಾಲ್ಯವಿವಾಹದ ಸಮಾರಂಭಗಳಲ್ಲಿ ಹಾಜರಾತಿ ಹಾಕಿದ್ದನ್ನು ಪತ್ರಿಕೆಗಳು ಸುದ್ದಿಯನ್ನಾಗಿ ಪ್ರಕಟಿಸಿದ್ದವು.

ಕೋಷ್ಟಕ೧೨: ೨೦೨೪ ವರ್ಷ ವಯೋಮಾನದ ಮಹಿಳೆಯರಲ್ಲಿ ೧೮ ವರ್ಷಕ್ಕೂ ಮೊದಲೇ ವಿವಾಹವಾಗಿದ್ದವರ ಸಂಖ್ಯೆ

೧. ಬಿಹಾರ ೭೧%
೨. ರಾಜಸ್ಥಾನ ೬೮.೩%
೩. ಮಧ್ಯಪ್ರದೇಶ ೬೪.೭%
೪. ಆಂಧ್ರಪ್ರದೇಶ ೬೪.೩%
೫. ಉತ್ತರ ಪ್ರದೇಶ ೬೨.೪%
೬. ಮಹಾರಾಷ್ಟ್ರ ೪೭.೭%
೭. ಕರ್ನಾಟಕ ೪೬.೩%
೮. ಪಶ್ಚಿಮ ಬಂಗಾಳ ೪೫.೯%
೯. ಹರಿಯಾಣ ೪೧.೫%
೧೦. ಗುಜರಾತ್‌ ೪೦.೭%
೧೧. ಅಸ್ಸಾಂ ೪೦.೭%
೧೨. ಒರಿಸ್ಸಾ ೩೭.೬%
೧೩. ತಮಿಳುನಾಡು ೨೪.೯%
೧೪. ಜಮ್ಮು ಮತ್ತು ಕಾಶ್ಮೀರ ೨೨.೧%
೧೫. ಕೇರಳ ೧೭%
೧೬. ಪಂಜಾಬ್‌ ೧೧.೬%
೧೭. ಹಿಮಾಚಲ ಪ್ರದೇಶ ೧೦.೭%

ಮೂಲ: NFHS-2, Bar Diagram modified into table from GOI (undated document). Tenth Five Year Plan 2002-07 Planning Commission, New Delhi. P. 198.

ಕಾನೂನು ಬಾಹಿರವಾಗಿದ್ದರೂ ಸಹ ಬಾಲ್ಯವಿವಾಹಗಳು ಇಂದಿಗೂ ನಡೆಯುತ್ತಿರುವುದಕ್ಕೆ, ಜನಸಾಮಾನ್ಯರಲ್ಲಿ ಬಾಲ್ಯವಿವಾಹಗಳ ದುಷ್ಪರಿಣಾಮಗಳ ಬಗ್ಗೆ ಇರುವ ಅಜ್ಞಾನ, ಅಲಕ್ಷ್ಯ ಹಾಗೂ ಹೆಣ್ಣನ್ನು ಭೋಗವಸ್ತುವನ್ನಾಗಿ ಮತ್ತು ಮಕ್ಕಳನ್ನು ಹಡೆಯಲೆಂದೇ ಇರುವ ಜೀವವನ್ನಾಗಿ ಪರಿಭಾವಿಸಿರುವ ಸಮಾಜ ಹಾಗೂ ಅವಿವಾಹಿತ ಹುಡುಗಿಯರನ್ನು ಹೆತ್ತವರ ಮೇಲಿರುವ ಭಾರವೆಂದು ಎಣಿಸುವ ಕುಟುಂಬಗಳು ಕಾರಣಗಳಾಗಿವೆ. ಜೊತೆಗೆ ಬಾಲ್ಯವಿವಾಹಗಳು ಇನ್ನೂ ರಾಜಾರೋಷವಾಗಿ ನಡೆಯಲು, ಅವುಗಳನ್ನು ನಿಲ್ಲಿಸಲು ಬೇಕಾಗಿರುವ ರಾಜಕೀಯದ ಹಾಗೂ ಆಡಳಿತಾತ್ಮಕ ಬದ್ಧತೆಯಿಲ್ಲದಿರುವುದೂ ಸಹ ಬಾಲ್ಯವಿವಾಹ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗದೇ ಇರುವುದಕ್ಕೆ ಕಾರಣವಾಗಿದೆ.

[1] UNICEF “Adolescence: Development and Obstacles’’ Health Dialoge., No. 28 jan-March 2002, P.3

[2] GOI (Undated document), Tenth Five year plan 2002-07. Vol. 2 Planning Commission, New Delhi., P. 197-99

[3] GOI, Census of India 2001, Directorate of ensus operations, Karnataka.

[4] GOI, Census of India 1991, Directorate of Census Operations, Karnataka.

[5] Netravathi H. S., (2004), Maternity Problems of Adolescent Mothers in India., Seminar paper presented at the Department of Human Development, Rural Home Science College, University of Agricultural Science Dharwad.

[6] Netravathi H. S., (2006)Reproductive Health of Rural Married Adolscent Girls.,Thesis submitted to the University of Agricultural Scences, Dharwad in partial fulfillment of the requirement for the Master Degree in Human Development.