ಪ್ರಸ್ತಾವನೆ

ಮಹಿಳೆಯರು ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡಗೆಯನ್ನು ನೀಡುತ್ತಿದ್ದಾರೆ. ಆದರೆ ಮಹಿಳೆಯರ ಪಾತ್ರವನ್ನು ಎಲ್ಲ ಅಭಿವೃದ್ಧಿ ಸಿದ್ಧಾಂತಗಳು ಕಡೆಗಣಿಸಿದ್ದವು. ಅಲ್ಲದೆ ಅವರನ್ನು ಕೇವಲ ಅಭಿವೃದ್ಧಿಯ ಫಲಾನುಭವಿಗಳಾಗಿ ಮಾತ್ರ ಪರಿಗಣಿಸಿದ್ದವು. ಇದರೊಂದಿಗೆ ಮಹಿಳೆಯರನ್ನು ಸಾಂಪ್ರದಾಯಿಕ ಅಭಿವೃದ್ಧಿ ಸಿದ್ಧಾಂತಗಳು ಏಕರೂಪಿಯಾಗಿ ಪರಿಭಾವಿಸಿಕೊಂಡಿದ್ದವು. ಅಭಿವೃದ್ಧಿಯನ್ನು ಕೇವಲ ಆದಾಯದ ಮೂಲಕ ಅಳೆಯಲಾಗುತ್ತಿತ್ತು. ಆದಾಯ ತರುವ ಉತ್ಪಾದನಾ ಚಟುವಟಿಕೆಗಳು ಮಾತ್ರ ಅಭಿವೃದ್ಧಿಗೆ ಮುಖ್ಯವಾಗಿತ್ತು. ಆದರೆ ಸಂತಾನೋತ್ಪತ್ತಿಯಾಗಲಿ, ಗೃಹಕೃತ್ಯಗಳಾಗಲಿ- ಹೀಗೆ ಮಹಿಳೆಯರು ಮಾಡುವ ಕೆಲಸಗಳು ಆದಾಯವನ್ನು ತರುವ/ಉತ್ಪಾದನೆ ಕೆಲಸವೆಂದು ಪರಿಭಾವಿಸದೆ, ಅವಳ ಕೆಲಸಗಳನ್ನು ಸೇವೆ ಎಂದು ಪರಿಗಣಿಸಲಾಗಿತ್ತು. ಆದರೆ ಆಧುನಿಕೋತ್ತರ ಸಿದ್ಧಾಂತಗಳು ಹಾಗೂ ಸಬ್ ಆಲ್ಟ್ರನ್ ಅರ್ಧಯಯನಗಳು, ಅದರಲ್ಲಿಯೂ ಪ್ರಮುಖವಾಗಿ ೧೯೯೦ರ ದಶಕದಿಂದೀಚೆಗೆ ಹೆಚ್ಚು ಪ್ರಚಲಿತದಲ್ಲಿರುವ ಮಾನವ ಅಭಿವೃದ್ಧಿ ಸಿದ್ಧಾಂತವು ಒಂದು ಪ್ರದೇಶದ ಅಭಿವೃದ್ಧಿಯು ಕೇವಲ ಆದಾಯದ ಹೆಚ್ಚಳದಿಂದ ಮಾತ್ರವೇ ನಿರ್ಧರಿಸಲ್ಪಡದೆ, ಆರೋಗ್ಯ, ಶಿಕ್ಷಣ, ಅಗತ್ಯ ಮೂಲ ಸೌಲಭ್ಯಗಳ ದೊರೆಯುವಿಕೆ, ಸಮಾನ ಭಾಗವಹಿಸುವಿಕೆ, ಸಾಮಾಜಿಕ ನ್ಯಾಯ, ಸಮಾನತೆ ಮುಂತಾದ ಸಮಾಜಿಕ ಚಲಕಗಳಿಂದ ನಿರ್ಧರಿಸಲ್ಪಡುತ್ತಿರುತ್ತದೆ ಎಂಬುದನ್ನು ತೋರಿಸಿಕೊಟ್ಟಿತು. ಅಲ್ಲದೇ ಈ ಸಿದ್ಧಾಂತವು ಅಭಿವೃದ್ಧಿಯಲ್ಲಿ ಲಿಂಗಸಂಬಂಧಿ ಆಯಾಮದ ಅಗತ್ಯತೆ ಮತ್ತು ಪ್ರಾಮುಖ್ಯತೆಯನ್ನು ಒತ್ತಿ ಹೇಳಿತು. ೧೯೯೫ರ ಮಾನವ ಅಭಿವೃದ್ಧಿ ವರದಿಯು ವಿಶೇಷವಾಗಿ ಮಹಿಳೆಯರನ್ನು ಕುರಿತಾಗಿದ್ದು, ಮಹಿಳೆಯರು ವಿವಿಧ ಸಮಾಜಿಕೆ ಕ್ಷೇತ್ರದಲ್ಲಿ ಎದುರಿಸುತ್ತಿರುವ ಅಸಮಾನತೆಯ ಕುರಿತು ಬೆಳಕು ಚೆಲ್ಲಿತು. ಅಮರ್ತ್ಯಸೆನ್ ಮಹಿಳೆಯರ ಕರ್ತೃತ್ವವಾದಿ ಪಾತ್ರವನ್ನು ಗುರಿತಿಸಿ ಅವರು ಅಭಿವೃದ್ಧಿಯ ಫಲಾನುಭವಿಗಳೂ ಹೌದು, ಅಭಿವೃದ್ಧಿಯ ವಸ್ತವೂ ಹೌದು ಮತ್ತು ಅವರು ಅಭಿವೃದ್ಧಿಯ ಕರ್ತೃಗಳೂ ಹೌದು ಎಂದು ಪರಿಗಣಿಸುತ್ತಾನೆ (ಚಂದ್ರಶೇಖರ ಟಿ. ಆರ್. ೨೦೧೦೨೨).

೨೯೭೫ರಲ್ಲಿ ಪ್ರಕಟಗೊಂಡ ಟುವರ್ಡ್ಸ ಈಕ್ವ್ಯಾಲಿಟಿ ಮತ್ತು ೧೯೮೬ರಲ್ಲಿ ಹೊರಬಂದ ಶ್ರಮಶಕ್ತಿ ವರದಿಯು ಮಹಿಳೆಯರು ಏಕರೂಪಿಯಲ್ಲವೆಂದು ಅಧ್ಯಯನಗಳ ಮೂಲಕ ನಿರೂಪಿಸಿತು. ಮಹಿಳೆಯರಲ್ಲಿಯೇ ಅನೇಕ ಸಮಾನತೆಯನ್ನು ಪಡೆದುಕೊಳ್ಳಲು, ಹೀಗೆ ಇನ್ನು ಮುಂತಾದ ಸಮಾಜಿಕ ಅವಕಾಶಗಳಿಂದ ವಂಚಿತರಾಗಿದ್ದಾರೆ. ಅಂದರೆ ಮಹಿಳೆಯ ಇರುವಿಕೆ ಅಥವಾ ಅಸ್ತಿತ್ವವು ಆಯಾ ಸ್ಥಳೀಯ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ, ಅಂಶಗಳಿಂದ ಪ್ರಭಾವಿಸಲ್ಪಡುತ್ತಿರುತ್ತದೆ. ಅಲ್ಲದೇ ಅವರ ದೈನಂದಿನ ಬದುಕು, ಸಾಮಾಜಿಕ ಸಂರಚನೆ, ಜಾತಿ, ವರ್ಗ,ಆಚರಣೆಗಳು, ಮತ್ತು ನಂಬಿಕೆಗಳು ಇತ್ಯಾದಿಗಳಿಂದ ನಿರ್ಧರಿಸಲ್ಪಡುತ್ತದೆ. ಉದಾಹರಣೆಗೆ, ಒಂದು ಕುಟುಂಬದಲ್ಲಿ ಇರುವವರೆಲ್ಲರೂ ಬಡವರೇ ಆದರೂ ಆ ಕುಟುಂಬದ ಮಹಿಳೆ ಬಡತವನ್ನು ಹೆಚ್ಚಾಗಿ ಅನುಭವಿಸುತ್ತಿರುತ್ತಾಳೆ. ಅಲ್ಲದೆ ಕುಟುಂಬದ ಇತರ ಸದಸ್ಯರಿಗಿಂತ ಆಹಾರದ ಕೊರತೆಯಿಂದ ಮತ್ತು ಅಪೌಷ್ಟಿಕತೆಯಿಂದ ನರಳುತ್ತಿರುತ್ತಾಳೆ. ಸಾಮಾಜಿಕೆವಾಗಿ ಅವಕಾಶ ವಂಚಿತ ಮತ್ತು ಹಿಂದುಳಿದ ಜಾತಿಗೆ ಸೇರಿದ ಕುಟುಂಬದ ಮಹಿಳೆಯ ಪಾಡು ಅತ್ಯಂತ ಕೆಳದರ್ಜೆಯದಾಗಿರುತ್ತದೆ ಎಂದು ಅಮರ್ತ್ಯಸೆನ್ ಮುಂತಾದವರ ಅಧ್ಯಯನಗಳು ತಿಳಿಸುತ್ತವೆ. ಆದ್ದರಿಂದ ಒಂದೇ ವರ್ಗ, ಜಾತಿ, ಒಂದೇ ಕೆಲಸ ಅಥವಾ ದುಡಿಯಲ್ಲಿ ಕಂಡುಬರುವ ಒಂದೇ ಮನೆಗೆ ಸೇರಿದ ಮಹಿಳೆಯರ ಸ್ಥಾನ, ಪಾತ್ರಗಳು ಹಾಗೂ ಅವರ ಸ್ವಾತಂತ್ರ್ಯಗಳು ಬದಲಾಗುತ್ತಿರುತ್ತವೆ.

ಧಾರಣಾ ಸಾಮರ್ಥ್ಯದ ದೃಷ್ಟಿಕೋನ

ಮಾನವ ಅಭಿವೃದ್ಧಿಯು ಮನುಷ್ಯನು ತನ್ನ ಜೀನವನ್ನು ಉತ್ತಮಪಡಿಸಿಕೊಳ್ಳಲು ಇರುವ ಆಯ್ಕೆಯನ್ನು ವಿಸ್ತರಿಸುವುದೇ ಆಗಿದೆ. ಇದಕ್ಕೆ ಆಯ್ಕೆಯು ಸ್ವಾತಂತ್ರ್ಯ ಮುಖ್ಯವಾಗಿರುತ್ತದೆ. ಆದ್ದರಿಂದ ಅಭಿವೃದ್ಧಿ ಎಂದರೆ ಜನರು ಅನುಭವಿಸುವ ವಾಸ್ತವ ಸ್ವಾತಂತ್ರ್ಯದ ವಿಸ್ತರಣೆ ಎಂದು ಅಮರ್ತ್ಯಸೆನ್ ಹೇಳುತ್ತಾರೆ.

ಹೀಗೆ ಆಯ್ಕೆ ಮಾಡಿಕೊಂಡು ಜನರು ಏನನ್ನು ಸಾಧಿಸುವರೋ ಅದು ಆರ್ಥಿಕ ಅವಕಾಶಗಳು, ರಾಜಕೀಯ ಸ್ವಾತಂತ್ರ್ಯ ಸಾಮಾಜಿಕ ಬಲ ಮತ್ತು ಉತ್ತಮ ಆರೋಗ್ಯ ಮೂಲಭೂತ ಶಿಕ್ಷಣ, ಕರ್ತೃತ್ವಶಕ್ತಿಯ ಪೋಷಣೆ ಮತ್ತು ಪ್ರೋತ್ಸಾಹ- ಇವುಗಳಿಂದ ಪ್ರಭಾವಿಸಲ್ಪಟ್ಟಿದೆ. ಒಬ್ಬ ವ್ಯಕ್ತಿಯ ವರಮಾನದಿಂದ ಇವುಗಳ ಸ್ವಾತಂತ್ರ್ಯವನ್ನು ವೃದ್ಧಿಸಬಹುದು. ಆದರೂ ವರಮಾನವು ಸ್ವಾತಂತ್ರ್ಯವನ್ನು ನಿರ್ಧರಿಸುವ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಅವಲಂಬಿಸಿದೆ. ಆದ್ದರಿಂದ ಅಭಿವೃದ್ಧಿ ಎಂಬುದು ಅಸ್ವಾತಂತ್ರ್ಯವನ್ನು ಉಂಟುಮಾಡುವ ಬಡತನ, ಕಡಿಮೆ ಆರ್ಥಿಕ ಅವಕಾಶಗಳು, ಸರಿಯಾಗಿ ದೊರೆಯದ ಸಾಮಾಜಿಕ ಸೌಲಭ್ಯಗಳು, ಸಾರ್ವಜನಿಕ ಸೌಲಭ್ಯಗಳ ಅಲಕ್ಷ್ಯ ಮುಂತಾದ ಜನಸಾಮಾನ್ಯರ ಸ್ವಾತಂತ್ರ್ಯವನ್ನು ಕುಂಠಿತಗೊಳಿಸುವ ತೊಂದರೆಗಳನ್ನು ಅಳಿಸಿಹಾಕುವುದೇ ಆಗಿದೆ.

ಹೆಚ್ಚಿನ ಸ್ವಾತಂತ್ರ್ಯದಿಂದ ಜನರು ತಮ್ಮ ಧಾರಣ ಸಾಮರ್ಥ್ಯವನ್ನು (ಕೆಪಬಿಲಿಟಿ) ಹೆಚ್ಚಿಸಿಕೊಳ್ಳುವುದಲ್ಲದೆ ಇದು ಅಭಿವೃದ್ಧಿಗೂ ಸಹ ಸಹಾಯಕವಾಗುತ್ತದೆ. ಸಾಮಾಜಿಕವಾಗಿ ಸಾಕಷ್ಟು ಅವಕಾಶಗಳು ದೊರೆತರೆ ಜನರು ತಮ್ಮ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳುವುದಲ್ಲದೆ ಪರಸ್ಪರ ಸಹಾಯವನ್ನು ಪಡೆಯುತ್ತಾರೆ. ಇದರಿಂದ ಅವರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೇವಲ ಪಡೆದುಕೊಳ್ಳುವವರಿಗಿಂತ ಅದರಲ್ಲಿ ಪಾಲುದಾರರಾಗಬಹುದು.

ಈ ನಿಟ್ಟಿನಲ್ಲಿ ಅಮರ್ತ್ಯಸೆನ್ ಐದು ರೀತಿಯ ಸ್ವಾತಂತ್ರ್ಯಗಳು ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು ಎಂದು ಹೇಳುತ್ತಾರೆ. ಅವು ಯಾವುವೆಂದರೆ ೧. ರಾಜಕೀಯ ಸ್ವಾತಂತ್ರ್ಯ ೨. ಆರ್ಥಿಕ ಸೌಲಭ್ಯ ೩. ಸಾಮಾಜಿಕ ಅವಕಾಶಗಳು, ೪. ಪಾರದರ್ಶಕತೆಯ ಭರವಸೆ ಮತ್ತು ೫. ಸಂರಕ್ಷಣೆ ಭದ್ರತೆ. ಇವು ಒಂದಕ್ಕೊಂದು ಪೂರಕವಾಗಿರುತ್ತವೆ. ಉದಾಹರಣೆಗೆ ಶಿಕ್ಷಣ,ಆರೋಗ್ಯ ಸೌಲಭ್ಯದಂತಹ ಸಾಮಾಜಿಕೆ ಅವಕಾಶಗಳು ಆರ್ಥಿಕ ವ್ಯವಸ್ಥೆಯಲ್ಲಿ ಭಾಗವಹಿಸಲು ಅನುಕೂಲ ಮಾಡುತ್ತವೆ. ಆರ್ಥಿಕ ಸೌಲಭ್ಯಗಳು ಉತ್ಪಾದನೆ ಮತ್ತು ಉದ್ಯೋಗದಲ್ಲಿ ಇರುವ ಅವಕಾಶಗಳು ವೈಯುಕ್ತಿಕ ಸಂಪತ್ತನ್ನು ಹೆಚ್ಚಿಸುವುದಲ್ಲದೆ ಸಾಮಾಜಿಕೆ ಸೌಲಭ್ಯಗಳನ್ನೂ ಹೆಚ್ಚಿಸುವುದು.

ಧಾರಣ ಸಾಮರ್ಥ್ಯ ಕೂಡ ಒಂದು ರೀತಿಯ ಸ್ವಾತಂತ್ರ್ಯವಿದ್ದಂತೆ. ನಾವು ಬಯಸುವ ಜೀವನಮಟ್ಟವನ್ನು ಅಥವಾ ಜೀವನ ಶೈಲಿಯನ್ನು ಪಡೆಯಲು ಸಾಧ್ಯವಾಗಿಸುವ ವಿವಿಧ ಕ್ರಿಯಾಶೀಲತೆಗಳ (ಫಂಕ್ಷನಿಂಗ್)ಸಂಯೋಜನೆಯೇ ಸಾಮರ್ಥ್ಯಧಾರಣೆ ಎಂದು    ಸೆನ್ ಪ್ರತಿಪಾದಿಸುತ್ತಾರೆ. ನಮಗೆ ಬೇಕಾದ ಅಥವಾ ನಾವು ಬಯಸುವ ಉತ್ತಮ ಜೀವನ ಯಾವುದು ಎಂದು ನಿರ್ಧರಿಸುವಲ್ಲಿ ಹಾಗೂ ಆಯ್ಕೆ ಮಾಡುವಲ್ಲಿ ಧಾರಣ ಸಾಮರ್ಥ್ಯದ ಪಾತ್ರ ಪ್ರಮುಖವಾಗಿದೆ. (ಸೆನ್:೨೦೦೬-೪೨) ತಾನು ಏನಾಗಬೇಕೆಂದು ವ್ಯಕ್ತಿ ಬಯಸುವಳೋ, ಏನು ಮಾಡಬೇಕೆಂದಿರುವಳೋ ಅದನ್ನು ಈಡೇರಿಸಲು ಅವಳು ತೊಡಗಿಕೊಳ್ಳುವ ಚಟುವಟಿಕೆಗಳನ್ನು ಸೆನ್ ಕ್ರಿಯಾಶೀಲವಾಗುವ ಸಾಮರ್ಥ್ಯ (ಕೆಪಬಿಲಿಟಿ ಟು ಫಂಕ್ಷನ್) ಎಂದು ಹೇಳುತ್ತಾರೆ (ರಾಬಿನ್ಸ್ ೨೦೦೩;೬). ಇದರಲ್ಲಿ ಕೆಲಸ, ವಿರಾಮ, ಅಕ್ಷರಸ್ಥರಾಗುವುದು, ಆರೋಗ್ಯ, ಸಮುದಾಯದಲ್ಲಿ ಭಾಗವಹಿಸುವಿಕೆ, ಗೌರವಿಲಸಲ್ಪಡವುದು ಹೀಗೆ ಈ ಎಲ್ಲ ಕ್ರಿಯಾಶೀಲತೆಗಳು (ಫಂಕ್ಷನಿಂಗ್) ಜೀವನವನ್ನು ಅಮೂಲ್ಯವನ್ನಾಗಿ ಮಾಡುತ್ತದೆ.

ಈ ಹಿನ್ನೆಲೆಯಲ್ಲಿ ತರಕಾರಿ ಮಾರುವ ಮಹಿಳೆಯರ ಜೀವನವನ್ನು ಉತ್ತಮಗೊಳಿಸುವ ಸಾಮಾಜಿಕೆ ಮತ್ತು ಆರ್ಥಿಕ ಅವಕಾಶಗಳು, ಸ್ವಾತಂತ್ರ್ಯಗಳು ಯಾವುವು. ಯಾವ ವಿಷಯ ಅವರ ಸಾಮರ್ಥ್ಯವನ್ನು ಹೆಚ್ಚಿಸುವಂಥದ್ದಾಗಿದೆ. ಯಾವುದು ಅವರಿಗೆ ಪ್ರತಿಕೂಲವಾಗಿದೆ, ಇದನ್ನು ಪರಿಹರಿಸಿಕೊಳ್ಳಲು ಅವರು ಕಂಡುಕೊಂಡ ಉಪಾಯ ಯಾವುದು. ಈ ಸ್ಥಿತಿಯಲ್ಲಿ ಅವರ ಮಾರುಕಟ್ಟೆಯ ಸವಾಲುಗಳು ಯಾವುವು ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲು ಈ ಪ್ರಬಂಧ ಉದ್ದೇಶಿಸುತ್ತದೆ.

ಮಾನವ ಅಭಿವೃದ್ಧಿಯು ಮಹಿಳೆಯರನ್ನು ಅಭಿವೃದ್ಧಿ ಪ್ರಕ್ರಿಯೆಯಿಂದ ಹೊರಗೆ ಇಟ್ಟರೆ ಅದೊಂದು ಪ್ರಮಾದವಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ಆದ್ದರಿಂದ ಮಾನವ ಅಭಿವೃದ್ಧಿಯು ಮಹಿಳೆಯರನ್ನೂ ಒಳಗೊಳ್ಳಬೇಕು ಎಂದು ನಂಬುತ್ತದೆ. ಆರ್ಥಿಕ ಹಾಗೂ ರಾಜಕೀಯ ಅವಕಾಶಗಳಿಂದ ಮಹಿಳೆಯರನ್ನು ಹೊರಗಿಟ್ಟರೆ ಅಭಿವೃದ್ಧಿಯು ಪಕ್ಷಪಾತಿಯಾಗುತ್ತದೆ. ಅದ್ದರಿಂದ ೧೯೯೫ರ ಮಾನವ ಅಭಿವೃದ್ಧಿಯು ಮಹಿಳೆಯರನ್ನು ಬದಲಾವಣೆಯ ಹರಿಕಾರರು (ಮಾನವ ಅಭಿವೃದ್ಧಿ ವರದಿ ೧೯೯೫;೨) ಎಂದು ಸಾರುತ್ತದೆ. ಆದ್ದರಿಂದ ಮಹಿಳೆಯ (ಸಾಮರ್ಥ್ಯ ಧಾರಣೆಯನ್ನು ವಿಸ್ತರಿಸಿ) ಅವರನ್ನು ಸಬಲೀಕರಿಸುವುದರಿಂದ ಆರ್ಥಿಕ ಅಭಿವೃದ್ಧಿ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಬಲವಾಗಿ ಪ್ರತಿಪಾದಿಸುತ್ತದೆ (ಅದೇ.) ಪ್ರಸ್ತುತ ಲೇಖನದಲ್ಲಿ ಮಾಹಿತಿದಾರರ ಸಾಮಾಜಿಕ ಹಾಗೂ ಅರ್ಥಿಕ ಪರಿಸ್ಥಿತಿ ಮತ್ತು ಅವುಗಳು ಅವರ ಸಾಮರ್ಥ್ಯವನ್ನು ಯಾವ ರೀತಿಯಲ್ಲಿ ಪ್ರಭಾವಿಸಿದೆ ಎಂದು ನೋಡಲಾಗುವುದು.

ಸಾಹಿತ್ಯ ಸಮೀಕ್ಷೆ

ಆಧುನೀಕರಣ ಮತ್ತು ಕೈಗಾರಿಕರಣ ಪ್ರಕ್ರಿಯೆಯಿಂದ ಎಲ್ಲ ಜಾತಿ ವರ್ಗದ ಜನರಿಗೆ ಮಹಿಳೆಯರನ್ನೂ ಒಳಗೊಂಡು ಎಲ್ಲರ ಬೆಳಗಣಿಗೆಗೆ ಪೂರಕ ಎಂದು ಭಾವಿಸಲಾಗಿತ್ತು. ಆಧುನಿಕ ತಂತ್ರಜ್ಞಾನ ಮತ್ತು ಕೈಗಾರಿಕೀಕರಣದಿಂದ ಮಹಿಳೆಯ ಆರ್ಥಿಕ ಚಟುವಟಿಕೆಗಳಲ್ಲಿ ಬದಲಾವಣೆಗಳು ಆಗುತ್ತವೆ ಎಂದು ತಿಳಿಯಲಾಗಿತ್ತು. ಕೃಷಿ ಕೃಷಿಕೂಲಿಯಿಂದ ಮಹಿಳೆ ಹೊರಬಂದು, ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾಳೆ ಎಂದು ತಿಳಿಯಲಾಗಿತ್ತು. ಆದರೆ ಅಕ್ಷರಸ್ಥರಾಗಿ, ಕೌಶಲ್ಯವನ್ನು ಹೊಂದಿದವರಿಗೆ ಪ್ರವೇಶ ಸಂಘಟಿತ ವಲಯವು ಅನಕ್ಷರಸ್ಥ,ಆಧುನೀಕರಣ ಪ್ರಕ್ರಿಯೆಯ ಭಾಗವಾಗಿ ಬೆಳೆದ ಸಂಘಟಿತ ವಲಯವು ಅನಕ್ಷರಸ್ಥ,ಆಧುನೀಕರಣ ಪ್ರಕ್ರಿಯೆಯ ಜೊತೆ ವ್ಯವಹರಿಸಲು ಕೌಶಲವಿಲ್ಲದ ಜನರನ್ನು ಮತ್ತು ಮಹಿಳೆಯರನ್ನು ಹೊರಗಿಟ್ಟಿತು. ಅಲ್ಲದೆ ತರಬೇತಿ ಶಿಕ್ಷಣದಲ್ಲಿಯೂ ಮಹಿಳೆಯನ್ನು ಪಿತೃಪ್ರಧಾನ ನಂಬಿಕೆಗಳಿಂದ ಪ್ರಜ್ಞಾಪೂರ್ವಕವಾಗಿ ಹೊರಗಿಡಲಾಯಿತು (ಎಸ್ತರ್ ಬೋಸ್ ರಪ್,೨೦೦೮). ಒಂದು ವೇಳೆ ಕೆಲಸ ಕೊಟ್ಟರೂ ಅದು ಹೆಚ್ಚು ಶ್ರಮದಾಯಕ ಹಾಗೂ ಏಕತಾನತೆಯಿಂದ ಕೂಡಿದ್ದು ಕೆಲಸ ಮಾಡುವ ಪರಿಸರ ಇಕ್ಕಟ್ಟು ಮತ್ತು ಅನಾರೋಗ್ಯಕರವಾಗಿರುತ್ತಿತ್ತು. ಕೊಡುವ ಕೂಲಿಯಲ್ಲಿ ತಾರತಮ್ಯ ಮಾಡಲಾಗುತ್ತಿತ್ತು. ಇದರಿಂದ ಹೊರಗುಳಿದವರು ಕಡಿಮೆ ಬಂಡವಾಳದಲ್ಲಿ ಸುಲಭವಾಗಿ ಪ್ರಾರಂಭಿಬಹುದಾದ, ವಿಶೇಷ ಕೌಶಲಗಳ ಅಗತ್ಯವಿಲ್ಲದ ಅಸಂಘಟಿತ ವಲಯದ ಕೆಲಸದಲ್ಲಿ ತೊಡಗುತ್ತಾರೆ (ಭಾರತ ಸರ್ಕಾರ ೧೯೭೪). ಅವರಲ್ಲಿ ಮಹಿಳೆಯರೇ ಹೆಚ್ಚು. ಭಾರತದಲ್ಲಿ ಶೇಕಡ೯೩ರಷ್ಟು ದುಡಿಯುವವರು ಅಸಂಘಟಿತ ವಲಯದಲ್ಲಿ ಇದ್ದಾರೆ. ಅವರಲ್ಲಿ ಶೇಕಡ ೬೦ರಷ್ಟು ಮಹಿಳೆಯರೇ ಇದ್ದಾರೆ. ಈ ಅಂಕಿ-ಅಂಶದಿಂದ ಮಹಿಳೆಯರ ಶ್ರಮಿಕ ಮಾರುಕಟ್ಟೆಯಲ್ಲಿ (ಲೇಬರ್ ಮಾರ್ಕೆಟ್) ಹೆಚ್ಚಾಗಿದ್ದಾರೆ ಎಂಬುದು ತಿಳಿಯುತ್ತದೆ. ಹೀಗೆ ಅಭಿವೃದ್ಧಿ ಪ್ರಕ್ರಿಯೆಯು ಸಾಕಷ್ಟು ಸಾಮಾಜಿಕೆ ಅಸಮಾನತೆಯನ್ನು ತಂದಿದೆ ಎಂದು ನೈಲಾ ಕಬೀರ್ (೧೯೯೬) ಹೇಳುತ್ತಾರೆ. ಅಭಿವೃದ್ಧಿಯಲ್ಲಿ ರಾಚನಿಕ ಬದಲಾವಣೆ ತರುವ ಪ್ರಕ್ರಿಯೆಯಲ್ಲಿ ಮಹಿಳೆಯರೇ ಆಘಾತಗಳಣ್ನು ತಗ್ಗಿಸುವ/ಆಘಾತಗಳನ್ನು ಹೀರುವ ಸೋನಪುರ್ ಮತ್ತು ರವಿಕಪೂರ (೨೦೦೭) ಅಭಿಪ್ರಾಯಪಡುತ್ತಾರೆ. ಅಭಿವೃದ್ಧಿಯಿಂದ ಉಂಟಾದ ಶ್ರಮಿಕ ಮಾರುಕಟ್ಟೆಯಲ್ಲಿಯ ಸರಾಗತನವು (ಲೇಬರ್ ಮಾರ್ಕೆಟ್ ಪ್ಲೆಕ್ಸಿಬಿಲಿಟಿ) ಕೆಲಸದಲ್ಲಿ ಅನೌಪಚಾರಿಕೆತಯನ್ನು ಉಂಟುಮಾಡಿತು. ಇದರಿಂದ ಮಹಿಳೆಯರು ಸಾಮಾಜಿಕ ಭದ್ರತೆಯಿಂದ ಹೊರಗುಳಿಯುವಂತಾಯಿತು (ಪಂಚಾನನ್ ೨೦೦೯). ಹೀಗೆ ಅಸಂಘಟಿತ ವಲಯದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತದಲ್ಲಿ ಸುಮಾರು ೧೦ಮಿಲಿಯನ್ ಜನ ಮಾರಾಟದ ಚಟುವಟಿಕೆಯೊಂದರಲ್ಲೇ ತೊಡಗಿರುವರೆಂದು ರೇನಾನ ಜಬ್ ವಾಲ ಮತ್ತು ಶಾಲಿನಿ ಸಿನ್ಹ ಅವರ ಅಧ್ಯಯನ ತಿಳಿಸುತ್ತದೆ (ಜಬ್ ವಾಲ ಮತ್ತು ಸನ್ಹ ಲಿಬರಲೈಸೇಶನ್ ಅಂಡ್ ದಿ ವಿಮೆನ್ ವರ್ಕರ್- ಸೇವಾ. WWW.sewa.org, ಎಪ್ರಿಲ್ ೧, ೨೦೦೮ ರಂದು ನೋಡಿದ್ದು) ಈ ಗುಂಪಿನಲ್ಲಿ ತರಕಾರಿ ಮಾರುವ ಚಟುವಟಿಕೆಯೂ ಒಂದು. ಆದರೂ ಮಹಿಳೆಯರು ಕೆಲಸ ಮಾಡುವ ‘ಪರಿಸರ, ಅವರ ಯೋಗಕ್ಷೇಮದಲ್ಲಿ ಕೆಲಸದ ಪಾತ್ರ ಇವುಗಳನ್ನು ಕಡೆಗಣಿಸಲಾಗಿದೆ ಎಂದು ಜಯಂತಿ ಘೋಷ್ (ಇನ್ ಫಾರ್ಮಲೈಸೇಶನ್ ಅಂಡ್ ವುಮೆನ್ಸ್ ವರ್ಕಫೋರ್ಸ್ ಪಾರ್ಟಿಸಿಪೇಶನ್: ಆ ಕನ್‌ಸಿಡರೇಶನ್ ಆಫ್ ರೀಸೆಂಟ್ ಟ್ರೆಂಟ್ಸ್ ಇನ್ ಏಶಿಯಾ, www. Unrisd. org, ಜನವರಿ೭, ೨೦೦೯ ರಂದು ನೋಡಿದ್ದು) ಹೇಳುತ್ತಾರೆ. ಹೀಗೆ ಅನೇಕ ಅಧ್ಯಯನಗಳು ಮಹಿಳೆ ಮತ್ತು ಅನೌಪಚಾರಿಕ ಆರ್ಥಿಕ ವ್ಯವಸ್ಥೆಯ ಬಗ್ಗೆ ಆಗಿರುವುದನ್ನು ನಾವು ನೋಡುತ್ತೇವೆ.

ಆದರೆ ನಾವು ನೋಡಿದಂತೆ ಅನೌಪಚಾರಿಕ ಆರ್ಥಿಕ ವ್ಯವಸ್ಥೆಯಲ್ಲಿ ತರಕಾರಿ ಮಾರುವ ಮಹಿಳೆಯರ ಬಗ್ಗೆ ಅಧ್ಯಯನಗಳು ಆಗಿರುವುದು ಕಡಿಮೆ. ತರಕಾರಿ ಮಾರುವ ಮಹಿಳೆಯರಲ್ಲಿಯೇ ಮಾರುಕಟ್ಟೆ ಮತ್ತು ತಲೆ ಮೇಲೆ ಹೊತ್ತು ಸಂಚರಿಸಿ ಅವಲೋಕಿಸಿ ಅಧ್ಯಯನಗಳು ಕಂಡುಬಂದಿಲ್ಲ. ಪ್ರಸ್ತುತ ಅಧ್ಯಯನವು ಈ ವಿಷಯಗಳನ್ನು ವಿಶ್ಲೇಷಿಸುವ ಉದ್ದೇಶವನ್ನು ಹೊಂದಿದೆ ಅಲ್ಲದೆ ಇದನ್ನು (ಧಾರಣಾ ಸಾಮರ್ಥ್ಯದ) ಚೌಕಟ್ಟಿನಲ್ಲಿ ಅಧ್ಯಯನ ಮಾಡಲಾಗುತ್ತದೆ.

ಸಮಸ್ಯೀಕರಣ

ಈ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಬಂಧವು ಅಸಂಘಟಿತ ವಲಯಕ್ಕೆ ಸೇರಿದ ತರಕಾರಿ ಮಾರುವ ಕೆಲಸದಲ್ಲಿ ತೊಡಗಿರುವ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ-ಗತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡುತ್ತದೆ. ತರಕಾರಿ ಮಾತು ಕೆಲಸದಲ್ಲಿ ತೊಡಗಿರುವಎಲ್ಲಾ ಮಹಿಳೆಯರನ್ನು ಒಂದೇ ಗುಂಪಿಗೆ ಸೇರಿಸಲಾಗುವುದಿಲ್ಲ. ಮಹಿಳೆಯರನ್ನು ತರಕಾರಿಯನ್ನು ಮಾರುಕಟ್ಟೆಯಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕುಳಿತು, ರಸ್ತೆ ಬದಿಯಲ್ಲಿ/ಫುಟ್ ಪಾತಿನ ಮೇಲೆ ಕುಳಿತು, ತಳ್ಳುಗಾಡಿಯ ಮೇಲೆ, ಹಾಗೂ ತಲೆಯ ಮೇಲೆ ಬುಟ್ಟಿ ಹೊತ್ತು ಮಾರುತ್ತಾರೆ. ಮಾರುಕಟ್ಟೆಯಲ್ಲಿ ಮಾತುವುದೂ, ತಲೆಯ ಮೇಲೆ ಬುಟ್ಟಿಯಲ್ಲಿ ತರಕಾತಿ ಹೊತ್ತು ಮಾರುವುದೂ ತರಕಾರಿ ವ್ಯಾಪಾರ ಎಂದು ಸರಳೀಕರಿಸಿದಾಗ ಮೇಲ್ನೋಟಕ್ಕೆ ಎರಡೂ ಕೆಲಸ ಒಂದೇ ರೀತಿಯದ್ದು ಎಂದು ಕಂಡುಬರುತ್ತದೆ. ಒಂದೇ ಪ್ರದೇಶದಲ್ಲ ತರಕಾರಿ ಮಾರುವ ಮಹಿಳೆಯರ ನಡುವೆ ಇರುವ ಭಿನ್ನತೆಗಳು ಯಾವುವು? ಇವರ ನಡುವಿನ ಸಾಮ್ಯತೆಗಳು ಯಾವುವು? ಇವನ್ನು ಪ್ರಭಾವಿಸುವ ಅಂಶಗಳು ಯಾವುವು? ಅವರ ಸಾಮಾಜಿಕ ಹಿನ್ನೆಲೆ ಏನು? ಅವರ ಆರ್ಥಿಕ ಪರಿಸ್ಥಿತಿ ಹೇಗಿದೆ? ಇವರು ತಮ್ಮ ವ್ಯವಹಾರದಲ್ಲಿ ಹೂಡಿದ ಬಂಡವಾಳ ಎಷ್ಟು? ಅದರಿಂದ ಪಡೆದ ಲಾಬ ಎಷ್ಟು? ಇವರ ಉಳಿತಾಯದ ಸ್ವರೂಪ ಹೇಗಿದೆ? ಹೀಗೆ ಮಾರುಕಟ್ಟೆಯಲ್ಲಿ ಅವರಿಗಿರುವ ಸವಾಲುಗಳು ಯಾವುವು?ಎಂದು ತರಕಾರಿ ಮಾರಾಟ ಮಾಡುವ ಮಹಿಳೆಯರ ಬದುಕನ್ನು ಮಾನವ ಅಭಿವೃದ್ಧಿ ಹಾಗೂ (ಧಾರಣಾ ಸಾಮರ್ಥ್ಯದ) ನೆಲೆಯಲ್ಲಿ ವಿಶ್ಲೇಷಣೆ ಮಾಡಲು ಪ್ರಸ್ತುತ ಪ್ರಬಂಧವು ಪ್ರಯತ್ನಿಸುತ್ತದೆ.

ಉದ್ದೇಶಗಳು

ಸಮಸ್ಯೀಕರಣದ ಹಿನ್ನೆಲೆಯಲ್ಲಿ ಪ್ರಸ್ತುತ ಅಧ್ಯಯನವು ಕೆಳಗಿನ ಉದ್ದೇಗಳನ್ನು ಹೊಂದಿವೆ.

೧. ಮಾರುಕಟ್ಟೆಯಲ್ಲಿ ಕುಳಿತು ಮಾರುವ ಮತ್ತು ತಲೆ ಮೇಲೆ ಹೊತ್ತು ಸಂಚಾರಿಯಾಗಿ ತರಕಾರಿ ಮಾರುವ ಮಹಿಳೆಯರ ಸಾಮಾಜಿಕ ಸಾಮರ್ಥ್ಯಗಳನ್ನು ಪ್ರಭಾವಿಸುವ ಅಂಶಗಳು ಯಾವುವು ಎಂದು ಅಧ್ಯಯನ ಮಾಡುವುದು.

೨. ಅವರ ಆರ್ಥಿಕ ಸ್ಥಿತಿ ಮತ್ತು ಅದನ್ನು ಪ್ರಭಾವಿಸುವ ಅಂಶಗಳ ಬಗ್ಗೆ ಅಧ್ಯಯನ ಮಾಡುವುದು.

೩. ಈ ಎರಡೂ ಗುಂಪುಗಳ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸುವುದು.

ಸಂಶೋಧನಾ ವಿಧಾನ

ತರಕಾರಿಯನ್ನು ಅನೇಕ ವಿಧದಲ್ಲಿ ಮಾರುವುದನ್ನು ಕಾಣಬಹುದು. ಮಾರುಕಟ್ಟೆಯಲ್ಲಿ ಕುಳಿತು, ರಸ್ತೆ ಬದಿಯಲ್ಲಿ ಕುಳಿತು, ತಳ್ಳುಗಾಡಿಯಲ್ಲಿ ಮತ್ತು ತಲೆಯ ಮೇಲೆ ಹೊತ್ತು ಈ ಎಲ್ಲ ಬಗೆಗಳಲ್ಲಿ ಮಾರುತ್ತಾರೆ. ಪ್ರಸ್ತುತ ಪ್ರಬಂಧದಲ್ಲಿ ಮಾರುಕಟ್ಟೆಯಲ್ಲಿ ತರಕಾರಿ ಮಾರುವ ಮತ್ತು ತಲೆ ಮೇಲೆ ಹೊತ್ತು ಸಂಚರಿಸಿ ಮಾರಾಟ ಮಾಡುವವರನ್ನು ಮಾತ್ರ ಪರಿಗಣಿಸಲಾಗಿದೆ. ಇದು ಪ್ರಬಂಧದ ವ್ಯಾಪ್ತಿಯೂ ಹೌದು. ಅವರನ್ನು ಕ್ರಮವಾಗಿ ಮಾರುಕಟ್ಟೆಯ ಮಾಹಿತಿದಾರರು ಮತ್ತು ಸಂಚಾರಿ ಮಾಹಿತಿದಾರರು ಎಂದು ಅಧ್ಯಯನದಲ್ಲಿ ಉದ್ದೇಶಿಸಲಾಗಿದೆ.

ಈ ಪ್ರಬಂಧವು ಸೂಕ್ಷ್ಮ (ಮೈಕ್ರೋ ಸ್ಟಡಿ) ಅಧ್ಯಯನವಾಗಿದೆ. ಅಧ್ಯಯನಕ್ಕೆ ಹೊಸಪೇಟೆ ತಾಲೂಕಿನ ಹೊಸಪೇಟೆ,ಕಮಲಾಪುರ, ಎಪಿಎಂಸಿ ಯಾರ್ಡ್-ಇಲ್ಲಿಂದ ತರಕಾರಿ ವ್ಯಾಪಾರ ಮಾಡುವ ಸುಮಾರು ೩೦ ಮಹಿಳೆಯರನ್ನು ಯಾದೃಚ್ಛಿಕ (‍ರ್ಯಾಂಡಮ್ ಸ್ಯಾಂಪಲಿಂಗ್) ಮಾದರಿಯಲ್ಲಿ ಗುರುತಿಸಿ, ಅವರನ್ನು ವ್ಯವಸ್ಥಿತ ಪ್ರಶ್ನಾವಳಿಯ ಮೂಲಕ ಪರಿಮಾಣಾತ್ಮಕ ಮಾಹಿತಿ ಮತ್ತು ಕೆಲವರನ್ನು ಗುಂಪು ಚರ್ಚೆಯಲ್ಲಿ ಪ್ರಮುಖ ಪ್ರಶ್ನೆಗಳನ್ನು (ಪೋಕಸ್ಡ್ ಗ್ರೂಪ್ ಡಿಸ್ ಕಶನ್) ಕೇಳುವುದರ ಮೂಲಕ ಗುಣಾತ್ಮಕ ಮಾಹಿತಿಯನ್ನು ಸಂಗ್ರಹಿಸಲಾಯಿತು. . . ಅಲ್ಲದೆ ಸುಮಾರು ೧೦ ಜನ ಸಂಚಾರಿ ಮಾರಾಟಗಾರ ಮಹಿಳೆಯರಿಂದಲೂ ಮಾಹಿತಿ ಸಂಗ್ರಹಿಸಲಾಯಿತು. ಈ ಮಹಿಳೆಯರು ಬೀದಿಗಳಲ್ಲಿ ಅಲೆದು ತಮ್ಮ ತರಕಾರಿ ಮಾರಬೇಕಾದ್ದರಿಂದ ಪ್ರಶ್ನಾವಳಿಗೆ ಉತ್ತರಿಸಲು ಅಥವಾ ದೀರ್ಘವಾಗಿ ಮಾತುಕತೆಯ ಮೂಲಕ ಮಾಹಿತಿ ನೀಡಲು ಸುಲಭವಾಗುವುದಿಲ್ಲ. ಅದ್ದರಿಂದ ತಮ್ಮ ತರಕಾರಿ ಮಾರಬೇಕಾದ್ದರಿಂದ ಪ್ರಶ್ನಾವಳಿಗೆ ಉತ್ತರಿಸಲು ಅಥವಾ ದೀರ್ಘವಾಗಿ ಮಾತುಕತೆಯ ಮೂಲಕ ಮಾಹಿತಿ ನೀಡಲು ಸುಲಭವಾಗುವುದಿಲ್ಲ. ಆದ್ದರಿಂದ ಇವರ ಸಂಖ್ಯೆಯನ್ನು ೧೦ಕ್ಕೆ ಸೀಮಿತಗೊಳಿಸಲಾಯಿತು. ಹೀಗೆ ಒಟ್ಟು ೪೦ ತರಕಾರಿ ಮಾರಾಟಗಾರ ಮಹಿಳೆಯರಿಂದ ಮಾಹಿತಿಯನ್ನು ಪಡೆಯಲಾಗಿದೆ. ಹೀಗೆ ಪಡೆಯಲಾದ ಮಾಹಿತಿಯಿಂದ ದತ್ತಾಂಶಗಳನ್ನು ಸಂಗ್ರಹಿಸಿ, ಸಾಮಾನ್ಯ ಡ್ಯಾಬ್ಯುಲೇಶನ್ ಮಾಡಿ ಕೋಷ್ಟಕಗಳ ರೂಪದಲ್ಲಿ ನೀಡಲಾಗಿದೆ.

ಅನುಷಂಗಿಕ ಮಾಹಿತಿಯನ್ನು ಪ್ರಕಟವಾಗಿರುವ ವರದಿಗಳು, ವೆಬ್ ಸೈಟುಗಳು, ಪತ್ರಿಕೆಗಳು ಹಾಗು ಇದುವರೆಗೆ ಆಗಿರುವ ಅಧ್ಯಯನಗಳಿಂದ ಪಡೆಯಲಾಗಿದೆ. ಕ್ಷೇತ್ರಕಾರ್ಯದಿಂದ ದೊರೆತ ಮಾಹಿತಿಯನ್ನು ಕೋಷ್ಟಗಳಲ್ಲಿ ನೀಡಲಾಗಿದೆ. ಇದರಲ್ಲಿ ಮಾಹಿತಿಯ ಶೇಕಡವಾರನ್ನು ಅಧ್ಯಯನಕ್ಕೆ ಪೂರಕವಾಗಿ ನೀಡಲಾಗಿದೆ.

ಅಧ್ಯಯನ ಪ್ರದೇಶ

ಪ್ರಸ್ತುತ ಅಧ್ಯಯನಕ್ಕೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕನ್ನು ಆರಿಸಿಕೊಳ್ಳಲಾಗಿದೆ. ಬಳ್ಳಾರಿಯಲ್ಲಿ ಖನಿಜ ಸಂಪನ್ಮೂಲಗಳು ಲಭ್ಯವಿದ್ದು ಗಣಿಗಾರಿಕೆಗೆ ಹೆಸರು ವಾಸಿಯಾಗಿದೆ. ಆದರೂ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಇತರ ಕೆಲಸಗಳು ಇಲ್ಲಿಯ ಪ್ರಮುಖ ಉದ್ಯೋಗವಾಗಿದೆ. ಕೃಷಿ ವಲಯದಿಂದ ಈ ಜಿಲ್ಲೆಗೆ ಶೇಕಡ ೪೦ರಷ್ಟು ಆದಾಯ ಮತ್ತು ಕೈಗಾರಿಕೋದ್ಯಮದಿಂದ ಶೇಕಡ ೨೦ ಆದಾಯ ಬರುತ್ತದೆ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ಜಿಲ್ಲೆ ರಾಜ್ಯದಲ್ಲಿ ೧೮ನೇ ಸ್ಥಾನದಲ್ಲಿದೆ. ಆರೋಗ್ಯದಲ್ಲಿ ೭ ಆದಾಯದಲ್ಲಿ ೯ ಮತ್ತು ಶಿಕ್ಷಣದಲ್ಲಿ ೧೮ನೇ ಸ್ಥಾನವನ್ನು ರಾಜ್ಯದಲ್ಲಿ ಪಡೆದಿದೆ. ಈ ಜಿಲ್ಲೆಗೆ ಲಿಂಗಾನುಪಾತ ೯೬೯. ಮಹಿಳಾ ಶಿಕ್ಷಣದ ಮಟ್ಟ ೨೦೦೧ರಲ್ಲಿ ಶೇಕಡ ೪೫.೨೮ ೨೦೧ರಲ್ಲಿ ಇತ್ತು.

ಹೊಸಪೇಟೆ ತಾಲೂಕು ಬಳ್ಳಾರಿಯ ಪಶ್ಚಿಮ ಭಾಗದಲ್ಲಿ ಬಳ್ಳಾರಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ ಹೊಸಪೇಟೆ. ಇದರ ಒಟ್ಟು ವಿಸ್ತೀರ್ಣ ೯.೩೪ ಚದರ ಕಿ. ಮೀ. ರಷ್ಟಿದೆ. ಪ್ರತಿ ಚದರ ಕಿ. ಮೀಗೆ ೩೩೫ ಇರುವ ಜನಸಾಂದ್ರತೆ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನದಾಗಿದೆ. ಈ ತಾಲುಕು ಪುರಾತತ್ವ ಸ್ಥಳಗಳಿಗೂ ಹೆಸರುವಾಸಿಯಾಗಿದೆ. ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಪಡೆದ ವಿಜಯನಗರ ಸಾಮ್ರಾಜ್ಯದ ಹಂಪಿ ಇದೇ ತಾಲೂಕಿನಲ್ಲಿದೆ. ಆದ್ದರಿಂದ ಇದು ಪ್ರವಾಸಿತಾಣವೂ ಆಗಿದೆ.

ತಾಲೂಕಿನಲ್ಲಿ ಕಾಲುವೆ ನೀರಾವರಿಯೇ ಪ್ರಮುಖವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಜನಸಂಖ್ಯೆಯ ಶೇಕಡ ೩೧ ಭಾಗದಷ್ಟು ಇದ್ದಾರೆ. ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದವರು ಜನಸಂಖ್ಯೆ ೩,೧೨,೮೯೭ ಇರುವುದರಿಂದ ಇದನ್ನು ಬುಡಕಟ್ಟುವಲಯವೆಂದು ಪರಿಗಣಿಸಲಾಗಿದೆ.

ಅಧ್ಯಯನದ ಮಿತಿ

ಪ್ರಸ್ತುತ ಅರ್ಧಯಯನವು ಹೊಸಪೇಟೆ ತಾಲೂಕಿಗೆ ಮಾತ್ರ ಸೀಮಿತವಾಗಿದೆ. ಅಧ್ಯಯನವನ್ನು ಕೇವಲ ಮಾರುಕಟ್ಟೆಯಲ್ಲಿ ಕುಳಿತು ಮಾರುವ ವ್ಯಾಪಾರಸ್ಥರು ಮತ್ತು ತಲೆ ಮೇಲೆ ಹೊತ್ತು ರಸ್ತೆಗಳಲ್ಲಿ ಸಂಚರಿಸುತ್ತ ವ್ಯಾಪಾರ ಮಾಡುವ ಮಹಿಳೆಯರನ್ನು ಮಾತ್ರ ಒಳಗೊಂಡಿದೆ, ರಸ್ತೆ ಬದಿ ಕುಳಿತು ಮಾರುವವರು ಮತ್ತು ತಳ್ಳುಗಾಡಿಯ ವ್ಯಾಪಾರಸ್ಥರು ಅಧ್ಯಯನದ ಪರಿಧಿಯೊಳಗೆ ಬಂದಿರುವುದಿಲ್ಲ. ಅಲ್ಲದೆ ಇದು ಕೇವಲ ತರಕಾರಿ ಮಾರುವ ವ್ಯಾಪಾರಸ್ಥರಿಗೆ ಮಾತ್ರ ಸೀಮಿತವಾಗಿದೆ.

ಪ್ರಬಂಧದ ವಿನ್ಯಾಸ

ಈ ಪ್ರಬಂಧದ ಪ್ರಸ್ತಾವನೆಯು (ಧಾರಣಾ ಸಾಮರ್ಥ್ಯ) ವಿಷಯ, ಸಾಹಿತ್ಯ ಸಮೀಕ್ಷೆ, ಸಮಸ್ಯೀಕರಣ, ಉದ್ದೇಶ,ಸಂಶೋಧನಾ ವಿಧಾನ, ಅಧ್ಯಯನ ಪ್ರದೇಶ ಪರಿಚಯ, ಅಧ್ಯಯನದ ಮಿತಿಗಳು ಇವನ್ನು ಒಳಗೊಂಡಿದೆ. ಒಂದನೆಯ ಮತ್ತು ಎರಡನೆಯ ಭಾಗವು ಕ್ಷೇತ್ರಕಾಯ್ ಸಂದರ್ಭದಲ್ಲಿ ನಮಗೆ ದೊರೆತ ಮಾಹಿತಗಳ ವಿಶ್ಲೇಷಣೆಯಾಗಿದೆ. ಒಂದನೆಯ ಭಾಗವು ಮಾಹಿತಿದಾರರ ಸಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸುತ್ತದೆ. ಎರಡನೆಯ ಭಾಗವು ತರಕಾರಿ ಮಾರುವ ಮಹಿಳೆಯರ ಆದಾಯ, ಕೆಲಸ ಮತ್ತು ಮಾರುಕಟ್ಟೆ, ಮಾಹಿತಿದಾರರ ಕೆಲಸದ ವಿಧಾನ, ಇವರು ಮಾರುವ ಸಂದರ್ಭಗಳು ಪರಿಸ್ಥಿತಿಗಳು,ಆಧಾಯ, ಉಳಿತಾಯ ಮುಂತಾದವುಗಳನ್ನು ಕುರಿತು ಚರ್ಚಿಸುತ್ತದೆ. ಮೂರನೆಯ ಭಾಗ ಅಧ್ಯಯನದ ಉಪಸಂಹಾರವಾಗಿದ್ದು, ಅಧ್ಯಯನದಲ್ಲಿ ಕಂಡುಕೊಂಡ ವಿಷಯಗಳು ಮತ್ತು ಸೂಕ್ತವೆನಿಸಿದ ಸಲಹೆಗಳನ್ನು ಒಳಗೊಂಡಿರುತ್ತದೆ.

ಭಾಗ ಒಂದು

ಈ ಭಾಗದಲ್ಲಿ ಮಾಹಿತಿದಾರರಿಗೆ ಸಂಬಂಧಿಸಿದ ಸಾಮಾಜಿಕ ಸಂರಚನೆಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಧಾರಣಾ ಸಾಮರ್ಥ್ಯವನ್ನು ನಿರ್ಧರಿಸುವಲ್ಲಿ ಸಾಮಾಜಿಕ ಅಂಶಗಳು ಮುಖ್ಯ ಎಂಬುದು ಪ್ರಸ್ತಾವನೆಯಲ್ಲಿ ನೋಡಲಾಗಿದೆ. ಒಬ್ಬ ವ್ಯಕ್ತಿಯು ಜಾತಿ ಧರ್ಮ, ಕುಟುಂಬ, ಕುಟುಂಬದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಶಕ್ತಿ ಅವರ ಜೀವನ ಮಟ್ಟ,ಶಿಕ್ಷಣ,ಆದಾಯ-ಹೀಗೆ ಎಲ್ಲವೂ ಮುಖ್ಯವಾಗುತ್ತದೆ. ಇವು ಒಂದಕ್ಕೊಂದು ಪೂರಕವಾಗಿರುವುದರಿಂದ ಎಲ್ಲವೂ ಮನುಷ್ಯನ ಸಾಮರ್ಥ್ಯವನ್ನು ಬೆಳೆಸುವಲ್ಲಿ ಪೋಷಿಸುವಲ್ಲಿ ಮುಖ್ಯವಾಗುತ್ತದೆ. ಇವುಗಳನ್ನು ಪ್ರಮುಖವಾಗಿಟ್ಟುಕೊಂಡು ಅಧ್ಯಯನ ನಡೆಸಿದಾಗ ಬಂದ ಉತ್ತರಗಳನ್ನುಮುಂದೆ ವಿಶ್ಲೇಷಿಸಲಾಗುವುದು.

ಭಾರತವು ಸಂಕೀರ್ಣವಾದ ಹಾಗೂ ವಿಭಿನ್ನ ಸಂಸ್ಕೃತಿಯನ್ನು ಹೊಂದಿದ ರಾಷ್ಟ್ರವಾಗಿದೆ. ಇಲ್ಲಿನ ರೂಢಿಗಳು ಆಚರಣೆಗಳು ಎಲ್ಲವೂವೈವಿಧ್ಯಮಯವಾಗಿದೆ. ಇದರ ಸಮಾಜ ಮುಖ್ಯವಾಗಿ ಪಿತೃಪ್ರಧಾನವಾಗಿದೆ. ಹೀಗಿರಲು ಎಲ್ಲ ಮಹಿಳೆಯರನ್ನು ಒಂದೇ ಸಮೂಹ ಎಂದು ಭಾವಿಸುವುದು ಸೂಕ್ತವಾಗುವುದಿಲ್ಲ. ಅವರವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಗಳಿಗೆ ಅನುಗುಣವಾಗಿ ಅವರ ಸ್ಥಾನಮಾನಗಳು ವ್ಯತ್ಯಾಸ ಹೊಂದುತ್ತವೆ.

ಭಾರತವು ಅನೇಕ ಜಾತಿಗಳನ್ನು ಹೊಂದಿದ ದೇಶ. ಜಾತಿಗಳು ಇಲ್ಲಿಯ ಜನಜೀನವನ್ನು ಬಹುವಾಗಿ ಪ್ರಭಾವಿಸುತ್ತದೆ. ಮಹಿಳೆಯರ ಸ್ಥಿತಿಗತಿ ಸಹ ಇದಕ್ಕೆ ಹೊರತಾಗಿಲ್ಲ. ಮಹಿಳೆಯರ ಕರ್ತವ್ಯಗಳನ್ನು ಕೆಲಸಗಳನ್ನು ಸಹ ಇವು ನಿರ್ಧರಿಸುತ್ತದೆ. ಅಲ್ಲದೆ ಸಾಮಾಜಿಕ ನಿರ್ಬಂಧಗಳನ್ನು ಸಹ ಹೇರುತ್ತದೆ (ಭಾರತ ಸರ್ಕಾರ ೧೯೭೪). ಈ ಹಿನ್ನೆಲೆಯಲ್ಲಿ ತರಕಾರಿ ಮಾರಾಟಗಾರರ ಧರ್ಮ ಹಾಗೂ ಜಾತಿಯ ಬಗ್ಗೆ ತಿಳಿಯುವ ಪ್ರಯತ್ನ ಮಾಡಲಾಯಿತು. ಇದರ ಪ್ರಕಾರ ತರಕಾರಿ ಮಾರುಕಟ್ಟೆಯಲ್ಲಿರುವ ಮಹಿಳೆಯರಲ್ಲಿ ೮೭ರಷ್ಟು ಹಿಂದು ಧರ್ಮಕ್ಕೆ ಸೇರಿದವರು ಮತ್ತು ಇನ್ನುಳಿದ ೧೩ ಹೆಂಗಸರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಆದರೆ ತಲೆಯ ಮೇಲೆ ಹೊತ್ತು ಮಾರುವವರಲ್ಲಿ ಎಲ್ಲರೂ ಹಿಂದು ಧರ್ಮದವರೇ ಆಗಿದ್ದಾರೆ.

ಕರ್ನಾಟಕದಲ್ಲಿ ಹಿಂದುಳಿದ ಜಾತಿಗಳ ಪ್ರಮಾಣ ಭಾರತದ ಮಟ್ಟದಲ್ಲಿ ಅಧಿಕ ಎಂದರೆ ಶೇಕಡ ೬೮. ೫ರಷ್ಟು ಇದೆ. ಅಲ್ಲದೆ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣ ಹೆಚ್ಚಾಗಿ ಇದ್ದು ಅದು ರಾಜ್ಯದ ಸರಾಸರಿ ೪. ೨೬ಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಇರುವುದು ಎಂದು ಸೆನ್ಸಸ್ ಆಫ್ ಇಂಡಿಯಾ, ೧೯೯೧, ತಾಲೂಕು ಸೆನ್ಸಸ ಕೈಪಿಡಿ ತಿಳಿಸುತ್ತದೆ. ಇದು ತರಕಾರಿ ವ್ಯಾಪಾರಸ್ಥರಲ್ಲೂ ಪ್ರತಿಫಲನವಾಗಿದೆ. ಮಾಹಿತಿದಾರರಲ್ಲಿ ಶೇಕಡ ೭೦ರಷ್ಟು ಮಹಿಳೆಯರು-ಮಾರುಕಟ್ಟೆಯಲ್ಲಿ ಮತ್ತು ತಲೆಯ ಮೇಲೆ ಹೊತ್ತು ಮಾರುವವರಲ್ಲಿ ಪರಿಶಿಷ್ಟ ಪಂಗಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಾರುಕಟ್ಟೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಶೇಕಡ ೧೭ರಷ್ಟು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿದ ೧೩ರಷ್ಟು ಮಹಿಳೆಯರು ಇದ್ದರೆ, ತಲೆಮೇಲೆ ಹೊತ್ತು ಮಾರುವವರು ಕೇವಲ ಪರಿಶಿಷ್ಟ ಜಾತಿಗೆ ಸೇರಿದ ೩೦ರಷ್ಟು ಜನರನ್ನು ಕಾಣಬಹುದು. ಇತರ ಜಾತಿಯವರು ಇಲ್ಲಿ ಕಂಡುಬರುವುದಿಲ್ಲದಿರುವುದು, ಈ ಕೆಲಸವು ಕೇವಲ ಕೆಳಜಾತಿಗೆ ಮಾತ್ರ ಮೀಸಲಾಗಿರಬಹುದು ಎಂದು ಊಹಿಸಬಹುದಾಗಿದೆ. ಇದರಿಂದ ಮಹಿಳೆಯರ ಸಂದರ್ಭದಲ್ಲಿ ಜಾತಿ,ಧರ್ಮ, ಆಚರಣೆ, ನಂಬಿಕೆಗಳು ಸೇರಿದ ಮಹಿಳೆಯರು ಹೊರಗೆ ದುಡಿಯಲು ಹೋಗುವುದು ಕಡಿಮೆ ಅಥವಾ ಇಲ್ಲವೆ ಇಲ್ಲ. ಈ ಜಾತಿಗಳಲ್ಲಿ ಮಹಿಳೆಯನ್ನು ಹೊರಗೆ ದುಡಿಯಲು ಕಳುಹಿಸುವುದುಪ್ರತಿಷ್ಠೆಯ ಪ್ರಶ್ನೆಯಾಗುತ್ತದೆ. ಧರ್ಮ ಹಾಗು ಜಾತಿ ಮಹಿಳೆಯರ ದುಡಿಮೆಯನ್ನು ಒಂದು ಕಟ್ಟುಪಾಡಿಗೆ ಗುರಿಪಡಿಸಿರುವುದನ್ನು ನಾವು ಇಲ್ಲಿ ಕಾಣಬಹುದು. ಅಲ್ಲದೆ ಕೆಲವೊಂದು ಹೆಚ್ಚು ಶ್ರಮ ಬೇಡುವ ಕೆಸಲಗಳು ಹೇಗೆ ಕೆಳಜಾತಿಯ ಮಹಿಳೆಯರಿಗೇ ಮೀಸಲಾಗಿದೆ ಎಂಬುದೂ ತಿಳಿಯುತ್ತದೆ.

ತರಕಾರಿ ಮಾರುವ ಮಹಿಳೆಯರು ಯಾವು ಜಾತಿಗೆ ಸೇರಿದವರಾಗಿದ್ದಾರೆ ಎಂದು ನೋಡಿದಾಗ ಮಾರುಕಟ್ಟೆ ಮತ್ತು ಸಂಚಾರಿ ಮಾಹಿತಿದಾರರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಕಂಡು ಬಂದಿರುವರು. ಇದರ ನಂತರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು ತರಕಾರಿ ಮಾರುವ ಚಟುವಟಿಕೆಯಲ್ಲಿ ಕಂಡುಬರುತ್ತಾರೆ. ಇತರೆ ಹಿಂದುಳಿದ ಜಾತಿಯವರು ಕೇವಲ ಮಾರುಕಟ್ಟೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಕಂಡು ಬಂದಿರುವರು. ಆದರೆ ಸಂಚಾರಿ ಮಾಹಿತಿದಾರರಲ್ಲಿ ಪರಿಶಿಷ್ಟ ಪಂಗಡದವರನ್ನು ಹೊರತುಪಡಿಸಿ ಬೇರೆ ಜಾತಿಯವರು ಕಂಡು ಬಂದಿಲ್ಲ. ಸಾಮಾನ್ಯವಾಗಿ ಮೇಲ್ಜಾತಿಯ ಅಥವ ಮೇಲ್ ಸ್ತರದ ಮಹಿಳೆಯರಯ ಮನೆಯ ಹೊರಗೆ ಶ್ರಮದಾಯಕ ಕೆಲಸ ಮಾಡುವುದನ್ನು ಅವಮಾನ ಎಂದು ಭಾವಿಸಲಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ (ಬೋಸ್ ರಪ್ ೨೦೦೮). ಈ ಪ್ರವೃತ್ತಿ ನಮ್ಮ ಅಧ್ಯಯನದಲ್ಲಿಯೂ ಕಂಡುಬಂದಿದೆ.

ಮಹಿಳೆಯರ ವಯಸ್ಸು ಸಹ ಅವರ ದುಡಿಮೆಯನ್ನು ನಿರ್ಧರಿಸುತ್ತದೆ. ತರಕಾರಿ ಮಾರಾಟದಲ್ಲಿ ತೊಡಗಲು ವಯಸ್ಸಿನ ಮಿತಿಯಿಲ್ಲವಾದ್ದರಿಂದ ಸುಮಾರು ಹದಿನೆಂಟು ವಯಸ್ಸಿನಿಂದ ಅರವತ್ತಿಗೂ ಮೇಲ್ಪಟ್ಟು ವಯಸ್ಸಿನವರು ತೊಡಗಿಕೊಂಡಿರುವುದನ್ನು ಕಾಣಬಹುದು. ಮಾರುಕಟ್ಟೆ ಮತ್ತು ಸಂಚಾರಿ ವ್ಯಾಪಾರಸ್ಥರಾಗಿ ನಲವತ್ತೊಂದರಿಂದ ಐವತ್ತು ವಯಸ್ಸಿನ ಮಹಿಳೆಯರನ್ನು ಅಧಿಕ ಸಂಖ್ಯೆಯಲ್ಲಿ ಕಾಣಬಹುದು. ಮದುವೆಯಾಗಿ ಮನೆವಾರ್ತೆಗಳನ್ನು ಮಾಡಿ ಮಕ್ಕಳು ಬೆಳೆದು ಹೋಗುವ ವಯಸ್ಸಿಗೆ ಬಂದ ಮೇಲೆ ಸಾಮಾನ್ಯವಾಗಿ ಮಹಿಳೆಯರು ಸುಮಾರು ಮೂವತ್ತು ವಯಸ್ಸಿನ ನಂತರ ಈ ಚಟುವಟಿಕೆಯಲ್ಲಿ ತೊಡಗಿದ್ದರೆ. ಕಡಿಮೆ ವಯಸ್ಸಿನವರು, ಅಂದರೆ ಹದಿನೆಂಟರಿಂದ ಇಪ್ಪತ್ತನಾಲ್ಕು ವಯೋಮಾನದವರು ಮಾರುಕಟ್ಟೆಯಲ್ಲಿ ಕಂಡು ಬಂದರೆ, ಅರವತ್ತಕ್ಕೆ ಮೇಲ್ಪಟ್ಟು ಮಹಿಳೆಯರು ಸಂಚಾರಿ ಮಾಹಿತಿದಾರರಲ್ಲಿ ಆದರೆ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿರುವರು. ೫೦ರಿಂದ ೭೦ರವರೆಗಿನ ಮಹಿಳೆಯರು ಮಾರುಕಟ್ಟೆಯಲ್ಲಿ ಇದ್ದರೂ ಮಾಹಿತಿಯನ್ನು ನೀಡಲು ನಿರಾಕರಿಸಿದರು.

ಮಾಹಿತಿದಾರರ ವಯೋಮಾನವನ್ನು ನೋಡಿದಾಗ ಸಂಚಾರಿ ವ್ಯಾಪಾರವು ಸಾಮಾಜಿಕ ಕಾರಣಗಳಿಂದಾಗಿ ಕಡಿಮೆ ವಯಸ್ಸಿನವರಿಗೆ ಹೆಚ್ಚು ಸೂಕ್ತವಲ್ಲದೆ ಇರಬಹುದು ಎಂಬ ಸಂಶಯಕ್ಕೆ ಎಡೆಮಾಡಿಕೊಡುತ್ತದೆ. ಆದರೆ ನಿಗದಿತ ಸ್ಥಳವಿರುವ ಮಾರುಕಟ್ಟೆಯ ಭದ್ರತೆ ಎಲ್ಲ ವಯೋಮಾನದವರನ್ನೂ ಒಳಗೊಳ್ಳುತ್ತದೆ.

ವಯಸ್ಸಿನ ಜೊತೆ ಮಹಿಳೆಯರ ವಿಷಯದಲ್ಲಿ ಮುಖ್ಯವಾಗುವುದು ಅವರ ವೈವಾಹಿಕ ಸ್ಥಿತಿ. ಮಹಿಳೆಯರ ಸ್ವಾತಂತ್ರ್ಯವು ಅವರ ವೈವಾಹಿಕ ಸ್ಥಿತಿಯನ್ನು ಸಹ ಅವಲಂಬಿಸಿದೆ. ಅನೇಕೆ ತೊಂದರೆಗಳು ಅವರ ವೈವಾಹಿಕ ಸ್ಥಿತಿಯನ್ನು ಆಧರಿಸಿವೆ (ಭಾರತ ಸರ್ಕಾರ ೧೯೭೪;೬೨) . ಹರೀಶ ಅವರ ಅಧ್ಯಯನದ ಪ್ರಕಾರ ಭಾರತದಲ್ಲಿ ಕಡಿಮೆ ಆದಾಯವಿರುವ ಕುಟುಂಬದ ಹೆಣ್ಣುಮಕ್ಕಳನ್ನು ಕಡಿಮೆ ಗಳಿಕೆ ಇರುವ ಪುರುಷರೊಂದಿಗೆ ಮದುವೆ ಮಾಡುವುದುರಿಂದ ಮದುವೆಯಾದ ಮೇಲೂ ಮಹಿಳೆಯರು ದುಡಿಯಬೇಕಾದ ಪರಿಸ್ಥಿತಿ ಇರುತ್ತದೆ (ವನಜ ೨೦೦೦)

ಅಧ್ಯಯನಕ್ಕೆ ಒಳಪಟ್ಟ ಮಾಹಿತಿದಾರರಲ್ಲಿ ವಿವಾಹಿತ ಮಹಿಳೆಯರು ಮಾರುಕಟ್ಟೆಯಲ್ಲಿ ಸುಮಾರು ಶೇಕಡ ೫೭ರಷ್ಟು ಇದ್ದರೆ,ದೇವದಾಸಿಯರ ಸಂಖ್ಯೆ ಶೇಕಡ ೪೩ರಷ್ಟಿದೆಮತ್ತು ೩೦ರಷ್ಟು ಪರಿತ್ಯಕ್ತ ಮಹಿಳೆಯರಾಗಿದ್ದಾರೆ. ಆದರೆ, ಸಂಚಾರಿ ಮಾಹಿತಿದಾರರಲ್ಲಿ ಎಲ್ಲರೂ ವಿವಾಹಿತರಾಗಿದ್ದಾರೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸಂಚಾರಿ ಮಾಹಿತಿದಾರರು ವಿವಾಹದ ನಂತರವೇ ಈ ಕೆಲಸಕ್ಕೆ ಬಂದಿರುವುರು ಎಂದು ತಿಳಿಯಿತು. ರಸ್ತೆಯಲ್ಲಿ ಅಡ್ಡಾಡಿ ಮನೆ ಮನೆಗಳಿಗೆ ಹೋಗಿ ತರಕಾರಿ ಮಾರಬೇಕಾಗಿರುವುದರಿಂದ ಅವಿವಾಹಿತ ಮತ್ತು ಸಣ್ಣವಯಸ್ಸಿನ ಹೆಣ್ಣುಮಕ್ಕಳನ್ನು ಈ ಕೆಲಸಕ್ಕೆ ಕಳುಹಿಸುವುದಿಲ್ಲ ಎಂದು ಇವರು ತಿಳಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ತಮ್ಮ ತಾಯಂದಿರ ಜೊತೆ ಅಥವ ಅವರ ಅನುಪಸ್ಥಿತಿಯಲ್ಲಿ ಅವರ ಅವಿವಾಹಿತ ಹೆಣ್ಣುಮಕ್ಕಳು ವ್ಯಾಪಾರ ಮಾಡುವುದನ್ನು ಗಮನಿಸಲಾಗಿದೆ. ಇಲ್ಲಿ ಒಂದೇ ಜಾಗದಲ್ಲಿ ಕುಳಿತು ಮಾರುವುದರಿಂದ ಹಾಗೂ ಸಹ ವ್ಯಾಪಾರಸ್ಥರೂ ಇರುವುದರಿಂದ ಇಲ್ಲಿ ತೊಂದರೆ ಕಡಿಮೆ ಎಂದು ಹೇಳುತ್ತಾರೆ.

ಈ ಹಿನ್ನೆಲೆಯಲ್ಲಿ ಅವರ ಶಿಕ್ಷಣ ಮಟ್ಟವನ್ನು ಪರಿಶೀಲಿಸಿದಾಗ ಮಾರುಕಟ್ಟೆಯಲ್ಲಿ ಶೇಕಡ ೭೦ರಷ್ಟು ಮಾಹಿತಿದಾರರು ಅನಕ್ಷರಸ್ಥರಿದ್ದರು. ಉಳಿದ ಶೇಕಡ ೩೦ರಷ್ಟು ಮಾಹಿತಿದಾರರು ಪ್ರಾಥಮಿಕ ಹಂತದ ಶಿಕ್ಷಣವನ್ನು ಪಡೆದಿದ್ದರು. ಆದರೆ, ತಲೆ ಮೇಲೆ ಹೊತ್ತು ಮಾರುವ ಎಲ್ಲ ಮಾಹಿತಿದಾರರೂ ಶಾಲೆಗೆ ಹೋಗಿಯೇ ಇಲ್ಲ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಕೇಳಿದರೆ, ತವರು ಮನೆಯಲ್ಲಿ ಬಡತನವಿತ್ತು. ಆದ್ದರಿಂದ ಸಣ್ಣವಯಸ್ಸಿನಲ್ಲಿಯೇ ಕೆಲಸಕ್ಕೆ ಹೋಗಬೇಕಾಯಿತು ಎಂದು ಅನೇಕೆ ಮಾಹಿತಿದಾರರು ಉತ್ತರಿಸಿದರು.

ಮೇಲಿನ ಚರ್ಚೆಯಲ್ಲಿ ತರಕಾರಿ ಮಾರಾಟಗಾರರ ಧರ್ಮ, ಜಾತಿ, ವೈವಾಹಿಕ ಸ್ಥಿತಿ, ವಯಸ್ಸು ಮತ್ತು ಶಿಕ್ಷಣವನ್ನು ಪರಿಶೀಲಿಸಿಲಾಗಿದೆ. ಜಾತಿಯ ವಿಷಯದಲ್ಲಿ ಚಟುವಟಿಕೆಯಲ್ಲಿ ಕಂಡುಬಂದಿರುವುದು. ಅದರಲ್ಲೂ ಪರಿಶಿಷ್ಟ ಪಂಗಡದವರ ಸಂಖ್ಯೆ ಹೆಚ್ಚು ಕಂಡುಬರುತ್ತದೆ. ಸಂಚಾರಿ ಮಾಹಿತಿದಾರರಲ್ಲಿ ಮಾರುಕಟ್ಟೆ ಮತ್ತು ಸಂಚಾರು ವ್ಯಾಪಾರಗಳಲ್ಲಿ ವಿವಾಹಿತರು ಎಂಬುದನ್ನು ಗಮನಿಸಬೇಕು. ಮಹಿಳೆಯರು ಸಾರ್ವಜನಿಕವಾಗಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವರ ವೈವಾಹಿಕ ಸ್ಥಿತಿ ಸಹ ಪ್ರಭಾವ ಬೀರುತ್ತದೆ. ಎಂಬುದನ್ನು ಕಾಣಬಹುದು. ಆದರೆ ಮಾರುಕಟ್ಟೆಯಲ್ಲಿ ತರಕಾರಿ ಮಾರುವವರು ಸ್ವಲ್ಪಮಟ್ಟಿಗೆ ಅಕ್ಷರಸ್ಥರಾಗಿದ್ದಾರೆ. ಸಂಚಾರಿ ಮಾರಾಠಗಾರರು ಯಾರೊಬ್ಬರೂ ಶಾಲೆಗೆ ಹೋಗಿಲ್ಲ ಮತ್ತು ಇದಕ್ಕೆ ಕಾರಣ ಅವರ ಮನೆಯ ಬಡ ಪರಿಸ್ಥಿತಿ ಎಂಬುದನ್ನು ನೋಡಿದಾಗ, ಸಂಚಾರಿ ಮಾಹಿತಿದಾರರನ್ನು ಮಾರುಕಟ್ಟೆಯ ಮಾಹಿತಿದಾರರಿಗಿಂತ ಬಡಕುಟುಂಬಗಳಿಂದ ಬಂದಿರುವರು ಎಂದು ತಿಳಿಯುತ್ತದೆ.

ಮನೆಯ ಒಡೆತನ

ಮಹಿಳಾ ತರಕಾರಿ ಮಾರಾಟಗಾರರ ವಯಸ್ಸು ಜಾತಿ ಧರ್ಮ ಮುಂತಾದ ಸಾಮಾನ್ಯ ವಿಷಯಗಳನ್ನು ತಿಳಿದ ನಂತರ ಅವರ ಜೀವನ ಸ್ಥಿತಿಯ ಕಡೆ ಗಮನಹರಿಸಬಹುದು. ಅಧ್ಯಯನಕ್ಕೆ ಒಳಪಡಿಸಿದ ಮಾಹಿತಿದಾರರಲ್ಲಿ ಸ್ವಂತ ಮನೆಯಲ್ಲಿ ಮಾರುಕಟ್ಟೆಯ ಮಾಹಿತಿದಾರರು ಶೇಕಡ ೭೦, ಬಾಡಿಗೆ ಮನೆಯಲ್ಲಿ ೧೫ ಹಾಗೂ ಯಾವ ಬಾಡಿಗೆ ನೀಡದೆ ಸಾರ್ವಜನಿಕ ಬಯಲಿನಲ್ಲಿ ಗುಡಿಸಲು ಹಾಕಿ ಇರುವವರು ಶೇಕಡ ೧೫ರಷ್ಟು ಇದ್ದಾರೆ ಎಂದು ಕಂಡುಬಂದಿದೆ. ಹಾಗೆಯೇ ಸಂಚಾರಿ ಮಾಹಿತಿದಾರರಲ್ಲಿ ಶೇಕಡ ೫೦ರಷ್ಟು ಮಾಹಿತಿದಾರರು ಸ್ವಂತ ಮನೆ ಹಾಗೂ ಶೇಕಡ ೫೦ ಮಾಹಿತಿದಾರರು ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ.

ಇದರಲ್ಲಿ ಶೇಕಡ ೮೫ರಷ್ಟು ಮಾರುಕಟ್ಟೆಯ ಮಾಹಿತಿದಾರರು ಪಕ್ಕಾ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಸಂಚಾರಿ ಮಾಹಿತಿದಾರರೆಲ್ಲರೂ ಪಕ್ಕಾ ಮನೆಗಳಲ್ಲಿಯೇ ವಾಸಿಸುತ್ತಿದ್ದಾರೆ, ಪಕ್ಕಾ ಮನೆಗಳನ್ನು ಹೊಂದಿರುವ ೮೫ ಮಾರುಕಟ್ಟೆ ಮಾಹಿತಿದಾರರಲ್ಲಿ ಶೇಕಡ ೪೨ ಆರ್ ಸಿಸಿ ಮನೆಗಳನ್ನು, ಶೇಕಡ ೧೩ ಶೀಟ್ ಮನೆಗಳು ಹಾಗೂ ಶೇಕಡ ೩೦ ಹಂಚಿನ ಮನೆಗಳನ್ನು ಹೊಂದಿರುವರು. ಇನ್ನೂ ಶೇಕಡ ೧೪ರಷ್ಟು ಮಾಹಿತಿದಾರರು ಗುಡಿಸಲುಗಳಲ್ಲಿ ಇರುವುದಾಗಿ ತಿಳಿಸಿದ್ದಾರೆ. ತಲೆ ಮೇಲೆ ತರಕಾರಿ ಹೊತ್ತು ಮಾರುವ ಮಾಹಿತಿದಾರರೆಲ್ಲರೂ ಪಕ್ಕಾ ಮನೆಗಳಲ್ಲಿಯೇ ಇರುವುದರಿಂದ ಅವರ ಸ್ಥಿತಿ ಮಾರುಕಟ್ಟೆಯ ಮಾಹಿತಿದಾರರಿಗಿಂತ ಉತ್ತಮ ಎಂದು ಅನಿಸುತ್ತದೆ. ಅದರೆ ಸೂಕ್ಷ್ಮವಾಗಿ ಗಮನಿಸಿದಾಗ ಅವರಲ್ಲಿ ಶೇಕಡ ೨೫ರಷ್ಟು ಮಾಹಿತಿದಾರರು ಶೀಟ್ ಮನೆಗಳಲ್ಲಿ, ಶೇಕಡ ೭೫ರಷ್ಟು ಮಾಹಿತಿದಾರರು ಹೆಂಚಿನ ಮನೆಗಳಲ್ಲಿ ವಾಸಿಸುವುದನ್ನು ನೋಡುತ್ತೇವೆ.

ಇಷ್ಟಾದರೂ ಶೇಕಡ ೭೫ರಷ್ಟು ಮಾಹಿತಿದಾರರ ಮನೆಯಲ್ಲಿ ಶೌಚ ಮತ್ತು ಬಚ್ಚಲು ಪ್ರತ್ಯೇಕವಾಗಿ ಇಲ್ಲ. ಇನ್ನೂ ಹೊರಗೆ ಬಯಲಿಗೇ ಹೋಗಬೇಕಾದ ಪರಿಸ್ಥಿತಿಯಲ್ಲಿ ಇದ್ದಾರೆ. ಕೇವಲ ಶೇಕಡ ೨೫ರಷ್ಟು ಮಾಹಿತಿದಾರರ ಮನೆಯಲ್ಲಿ ಪ್ರತ್ಯೇಕವಾಗಿ ಅಡುಗೆ ಕೋಣೆ, ಶೌಚ, ಬಚ್ಚಲು ಇವೆ. ಶೇಕಡ ೫೯ರಷ್ಟು ಮಾರುಕಟ್ಟೆಯ ಮಾಹಿತಿದಾರರು, ಶೇಕಡ ೭೫ರಷ್ಟು ಸಂಚಾರಿ ಮಾಹಿತಿದಾರರು ಸಾರ್ವಜನಿಕ ಶೌಚಾಲಯ ಅಥವಾ ಬಯಲನ್ನೇ ನೆಚ್ಚಿಕೊಂಡಿವರು. ಬಚ್ಚಲಿಗೆ ಮನೆಯಲ್ಲಿಯೇ ಒಂದು ವ್ಯವಸ್ಥೆ ಮಾಡಿಕೊಂಡಿರುವುದಾಗಿ ಹೇಳುತ್ತಾರೆ.

ಸ್ವಂತ ಮನೆ, ಹೆಂಚಿನ ಮನೆ, ಶೀಟ್ ಹೊದೆಸಿದ ಮನೆಗಳಲ್ಲಿರುವ ಮಾಹಿತಿದಾರರ ಮನೆಯಲ್ಲಿ ಯಾವ ಸೌಲಭ್ಯಗಳಿವೆ ಎಂದು ನೋಡಿದಾಗ ಅನೇಕ ವ್ಯತ್ಯಾಸಗಳು ಇರುವುದನ್ನು ಗಮನಿಸಲಾಯಿತು. ಯಾವ ಸೌಲಭ್ಯಗಳೂ ಇಲ್ಲದೆ ಶೇಕಡ ೧೩ ಮಾರುಕಟ್ಟೆಯ ಮಾಹಿತಿದಾರರು ಇದ್ದರು. ಎಲ್ಲ ಸಂಚಾರಿ ಮಾಹಿತಿದಾರರ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಇದ್ದರೆ,ಶೇಕಡ ೭೦ ಮಾರುಕಟ್ಟೆಯ ಮಾಹಿತಿದಾರರ ಮನೆಯ ಒಳಗೆ ನೀರನ ನಳ ಇದ್ದರೆ, ಯಾವ ಸಂಚಾರಿ ಮಾರಾಟಗಾರ ಮಾಹಿತಿದಾರರ ಮನೆಯಲ್ಲಿಯೂ ನಳ ಇಲ್ಲ. ನೀರನ್ನು ರಸ್ತೆಯಲ್ಲಿರುವ ಸಾರ್ವಜನಿಕ ನಳದಿಂದ ತರುವುದಾಗಿ ತಿಳಿಸುತ್ತಾರೆ. ಮನೆಗೆ ಕಿಡಕಿಗಳಿದ್ದು ಗಾಳಿ ಬೆಳಕು ಇರುವ ಮನೆಗಳು ಮಾರುಕಟ್ಟೆ ಮತ್ತು ಸಂಚಾರಿ ಮಾಹಿತಿದಾರರ ಮನೆಯಲ್ಲಿ ಕ್ರಮವಾಗಿ ಶೇಕಡ ೫೬ ಮತ್ತು ಶೇಡಕ ೨೫ ಇದೆ. ಅಕ್ಕಪಕ್ಕದ ಮನೆಗಳ ನಡುವೆ ಸೂಕ್ತ ಅಂತರವಿರಿಸದೆ ಮನೆಗಳನ್ನು ಕಟ್ಟಿಸಿದಾಗ ಮತ್ತು ಕಿಟಕಿಗಳನ್ನು ಇಡಿಸಲು ಹಣ ಇಲ್ಲದಿರುವವರು, ಮನೆಗೆ ಒಂದು ಕಿಟಕಿ ಅಷ್ಟನ್ನೆ ಇಡಿಸುತ್ತಾರೆ. ಅಲ್ಲದೆ ಹೊಸಪೇಟೆಯಲ್ಲಿ ಮನೆಗಳು ಒಂದಕ್ಕೆ ಒಂದು ಅಂಟಿಕೊಂಡು ಕಟ್ಟಿಸುವುದರಿಂದಲೂ ಈ ರೀತಿ ಇರಬಹುದು. ಈ ನಿಟ್ಟಿನಲ್ಲಿ ಕೇವಲ ಶೇಕಡ ೨೫ ಸಂಚಾರಿ ಮಾಹಿತಿದಾರರ ಮನೆಗಳು ನೈಸರ್ಗಿಕ ಬೆಳಕು, ಗಾಳಿ ಹೊಂದಿರುವುದು ಇಲ್ಲಿ ತೋರಿಸುತ್ತದೆ. ಹೊಸಪೇಟೆಯಲ್ಲಿ ಬೇಸಿಗೆಯ ಹವಾಮಾನ ೪೨ ಡಿಗ್ರಿ ದಾಟಿದಾಗ ಶೀಟ್ ಮನೆಗಳಲ್ಲಿ ಸೂಕ್ತ ಕಿಟಕಿಗಳಿಂದ ಮನೆಗಳಲ್ಲಿ ವಾಸಿಸುವ ಮಾಹಿತಿದಾರರ ಪರಿಸ್ಥಿತಿಯನ್ನು ಊಹಿಸಬಹುದು.

ಮಾರುಕಟ್ಟೆ ಮತ್ತು ಸಂಚಾರಿ ಮಾಹಿತಿದಾರರ ಮನೆಗಳಲ್ಲಿ ಪ್ರಮುಖ ಗೃಹಪಯೋಗಿ ವಸ್ತುಗಳ ಬಗ್ಗೆ ಸಹ ವಿಚಾರಿಸಲಾಯಿತು. ಟಿವಿ ಶೇಕಡ ೭೦ ಮಾರುಕಟ್ಟೆಯಲ್ಲಿ ಮಾಹಿತಿದಾರರ ಮನೆಯಲ್ಲಿ ಇದೆ. ಅಲ್ಲದೆ ೧೩ ಮಾರುಕಟ್ಟೆ ಮಾಹಿತಿದಾರರ ಮನೆಯಲ್ಲಿ ೨ಡಿವಿಡಿ ಸಹ ಇದೆ. ಆದರೆ ಶೇಕಡ ೫೦ ಸಂಚಾರಿ ಮಾರಾಟಗಾರರ ಮಾಹಿತಿದಾರರ ಟಿವಿ ಇದ್ದರೆ ಯಾರ ಮನೆಯಲ್ಲಿಯೂ ಡಿವಿಡಿ ಇಲ್ಲ. ಡಿವಿಡಿ, ಟಿವಿ, ಮೊಬೈಲ್ ಮುಂತಾದ ವಸ್ತುಗಳು ಮುಖ್ಯ ಅಲ್ಲವೆಂದರೂ ಮಾಹಿತಿದಾರರ ಜೀವನ ಮಟ್ಟವನ್ನು ಪರಿಶೀಲಿಸಲು ಅನುಕೂಲವಾಗುವುದು. ಉದಾಹರಣೆಗೆ, ಮನೆಯಲ್ಲಿ ಟಿವಿ ಇರುವುದು ಮನೆರಂಜನೆ ಒಂದು ಸಾಧನವಾದರೆ, ಡಿವಿಡಿ ಇರುವುದು ಮನರಂಜನೆಯ ಸಾಧ್ಯತೆಗಳನ್ನು, ಆಯ್ಕೆಗಳನ್ನು ಇನ್ನೂ ಹೆಚ್ಚಿಸಿದ ಹಾಗೆ ಆಗುತ್ತದೆ. ಹೊಲಿಗೆ ಯಂತ್ರದ ಮೂಲಕ ಅವರ ಅಥವ ಅವರ ಮನೆಯವರ ಬಿಡುವಿನ ಸಮಯದಲ್ಲಿ ಅವರು ತೊಡಗಿಕೊಳ್ಳುವ ಹವ್ಯಾಸದ ಬಗ್ಗೆ ಒಂದು ಅಂದಾಜು ಮಾಡಿಕೊಳ್ಳಬಹುದು. ದ್ವಿಚಕ್ರ ವಾಹನ, ಅಥವ ಇನ್ಯಾವುದೇ ವಿಧದ ವಾಹನಗಳು ಶೇಕಡ ೫೦ ಸಂಚಾರಿ ಮಾರಾಟಗಾರ ಮಾಹಿತಿದಾರರ ಮನೆಯಲ್ಲಿ ಇದ್ದರೆ, ಮಾರುಕಟ್ಟೆಯ ಮಾಹಿತಿದಾರರಲ್ಲಿ ಕೇವಲ ಶೇಕಡ ೧೩ ಇದೆ.

ಅಡುಗೆ ಅನಿಲವನ್ನು ಶೇಕಡ ೫೦ ಸಂಚಾರಿ ಮಾರಾಟಗಾರರ ಮಾಹಿತಿದಾರರಮನೆಯಲ್ಲಿ ಇದೆ. ಆದರೆ, ಮಾರುಕಟ್ಟೆಯ ಮಾಹಿತಿದಾರರು ಎಲ್ಲರೂ ತಮ್ಮ ಮನೆಯಲ್ಲಿ ಅಡುಗೆ ಅನಿಲ ಸಂಪರ್ಕ ಇಲ್ಲವೆಂದೂ, ತಾವು ಸೀಮೆಎಣ್ಣೆ ಅಥವ ಉರುವಲನ್ನು ಬಳಸುವುದಾಗಿ ಹೇಳಿದರು. ಆದರೆ ಮಾರುಕಟ್ಟೆಯಲ್ಲಿ ಇರುವ ಸಂಘದ ಓರ್ವ ಮುಖಂಡರ ಜೊತೆ ಚರ್ಚಿಸಿದಾಗ ಅಲ್ಲಿರುವ ಬಹುತೇಕ ಮಾಹಿತಿದಾರರ ಮನೆಯಲ್ಲಿ ಅಡುಗೆ ಅನಿಲವಿರುವುದು ತಿಳಿಯಿತು. ಹೊಸಪೇಟೆ ಮಾರುಕಟ್ಟೆಯವರು ಅಧ್ಯಯನಕಾರರು ಕ್ಷೇತ್ರಕಾರ್ಯ ನಡೆಸುತ್ತಿರುವ ಸಮಯದಲ್ಲಿ ಮಾರುಕಟ್ಟೆಯ ಸ್ಥಳಾಂತರದ ವಿಷಯವಾಗಿ ಅತಂತ್ರ ಸ್ಥಿತಿಯಲ್ಲಿದ್ದರು. ಆದ್ದರಿಂದ ಕೆಲ ಮಾಹಿತಿಗಳನ್ನು ತಪ್ಪಾಗಿ ಕೊಟ್ಟಿರುವ ಸಾಧ್ಯತೆಗಳಿವೆ. ಆದರೆ ಈ ರೀತಿಯ ಸ್ಥಿತಿ ಸಂಚಾರಿ ಮಾಹಿತಿದಾರರಲ್ಲಿ ಕಾಣದಿರುವುದು ಈ ಎರಡು ಗುಂಪುಗಳ ನಡೆವೆ ಇರುವ ಪ್ರಮುಖ ವ್ಯತ್ಯಾಸ ಎಂಬುದನ್ನು ಗಮನಿಸಬಹುದು. ಒಂದು ವ್ಯವಸ್ಥೆ ಒಳಗೆ ಇರುವ, ಸೀಮಿತ ವ್ಯಾಪ್ತಿ ಇರುವ ಮಾರುಕಟ್ಟೆಯ ಮಾಹಿತಿದಾರರ ಮಿತಿಯನ್ನು ಮತ್ತು ಎಲ್ಲ ಪ್ರದೇಶಗಳಲ್ಲಿ ತಲೆಯ ಮೇಲೆ ಹೊತ್ತು ಸಂಚರಿಸುವ ಮಾಹಿತಿದಾರರ ಸ್ವಾತಂತ್ರ್ಯ ಇದರಿಂದ ತಿಳಿಯುತ್ತದೆ.