ಕುಟುಂಬದ ಹಿನ್ನಲೆ

ಮನೆಯ ಪರಿಸ್ಥಿತಿಯಿಂದ ಅನೇಕ ಮಾಹಿತಿದಾರರು ಶಾಲೆಗೆ ಹೋಗಲಾಗಲಿಲ್ಲ ಎಂದು ತಿಳಿದಾಗ ಅವರ ಹೆತ್ತವರು ಮಾಡುತ್ತಿದ್ದ ಕೆಲಸದ ಬಗ್ಗೆ ಹಾಗೂ ಅವರ ಕುಟುಂಬದ ಪಾರಂಪರಿಕ ವೃತ್ತಿ ಬಗ್ಗೆ ಕೇಳಿದಾಗ ಮಾರುಕಟ್ಟೆಯ ಮಾಹಿತಿದಾರರು ಕೃಷಿ, ತರಕಾರಿ ವ್ಯಾಪಾರ,ಕೃಷಿಕೂಲಿ, ಕೂಲಿ, ಬೇಲ್ದಾರ್- ಈ ಕೌಟುಂಬಿಕ ಹಿನ್ನೆಲೆಯಿಂದ ಬಂದವರಾಗಿದ್ದಾರೆಎಂಬುದು ತಿಳಿಯಿತು. ಕೂಲಿ ಬೇಲ್ದಾರ್ ಕುಟುಂಬದವರು ಅತಿ ಕಡಿಮೆ ಸಂಖ್ಯೆಯಲ್ಲಿ ಕಂಡುಬಂದಿರುವರು. ಸಂಚಾರಿ ಮಾರಾಟಗಾರರು ಸುಮಾರು ಶೇಕಡ ೭೦ರಷ್ಟು ಮಹಿಳೆಯರು ಕೃಷಿಕೂಲಿಯೇ ಪ್ರಮುಖ ಆಸರೆಯಾದ ಕುಟುಂಬಗಳಿಂದ ಬಂದವರಾಗಿದ್ದರು. ಉಳಿದವರು ಸಣ್ಣ ಕೃಷಿಕ ಕುಟುಂಬಗಳಿಗೆ ಸೇರಿದವರಾದ್ದರು. ಸಂಚಾರಿ ಮಾಹಿತಿದಾರರು ಯಾರೂ ತರಕಾರಿ ವ್ಯಾಪಾರ ಮುಖ್ಯ ಕೆಲಸವಾಗಿದ್ದ ಕುಟುಂಬದಿಂದ ಬಂದವರಾಗಿರಲಿಲ್ಲ. ತಮ್ಮ ಕುಟುಂಬದಲ್ಲಿ ಮೊದಲಿಗೆ ಈ ವ್ಯಾಪಾರ ಪ್ರಾರಂಭಿಸಿದವರೇ ಈ ಮಹಿಳೆಯರು. ತಾವಿರುವ ಪರಿಸ್ಥಿತಿಯೊಂದಿಗೆ ಹುಟ್ಟಿದ ಮನೆಯ ವೃತ್ತಿ ಸಹ ನಮ್ಮ ಮಾಹಿತಿದಾರರ ಮೇಲೆ ಪರಿಣಾಮ ಬೀರಿದೆ ಎಂದು ಇದರಿಂದ ತಿಳಿಯುತ್ತದೆ.

ವಿವಾಹಿತ ಮಾಹಿತಿದಾರರ ಗಂಡಂದಿರ ಕೆಲಸ ಗಮನಿಸಿದಗ ತರಕಾರಿ ಮಾರುಕಟ್ಟೆಯ ಮಾಹಿತಿದಾರರು ತಮ್ಮ ಗಂಡ ಕೃಷಿ, ತರಕಾರಿ ವ್ಯಾಪಾರ, ಕೂಲಿ ಕೆಲಸ ಅಥವ ಅವರಿಗೆ ವಯಸ್ಸಾಗಿದೆ, ಅನಾರೋಗ್ಯ ಇದೆ ಎಂದು ಹೇಳಿದರು. ಅವರ ಗಂಡಂದಿರು ಇಂದು ಈ ಸ್ಥಿತಿಯಲ್ಲಿ ಇದ್ದರೂ ಮೊದಲು ಕೃಷಿ ಮತ್ತು ತರಕಾರಿ ವ್ಯಾಪಾರ ಸಂಬಂಧಿ ಕೆಲಸ ಮಾಡುತ್ತಿರುವುದಾಗಿ ನೋಡುತ್ತೇವೆ. ಆದರೆ ಸಂಚಾರಿ ಮಾಹಿತಿದಾರರಲ್ಲಿ ವಿವಾಹಿತ ಮಹಿಳೆಯರ ಗಂಡಂದಿರು ಶೇಕಡ ೨೦ ಕೃಷಿಕೂಲಿ ಹಿನ್ನೆಲೆ ಬೇಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿಯುತ್ತದೆ. ಇದನ್ನು ನೋಡಿದಾಗ ಸಂಚಾರಿ ಮಾಹಿತಿದಾರರ ಗಂಡಂದಿರು ಸಹ ಕಡಿಮೆ ಗಳಿಕ ತರುವ ಕೆಲಸಗಳಲ್ಲಿ ಕಂಡುಬರುತ್ತಾರೆ.

ಕೃಷಿ ಮನೆತನದಿಂದ ಬಂದ ಮಾರುಕಟ್ಟೆಯ ಮಾಹಿತಿದಾರ ಬಳಿ ಉಳುವ ಭೂಮಿ ಇದೆಯೇ ಎಂದು ಪರಿಶೀಲಿಸಿದಾಗ ಶೇಕಡ ೩೦ರಷ್ಟು ಮಾಹಿತಿದಾರ ಬಳಿ ಒಂದೆರಡು ಎಕರೆ ಭೂಮಿ ಎಂದೂ ಅದನ್ನು ತಮ್ಮಗಂಡ,ಅಥವ ಸಂಬಂಧಿಕರು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಆದರೆ ಅದರಿಂದ ಮಾತ್ರ ನಗಣ್ಯ ಎಂದು ಅಭಿಪ್ರಾಯಪಟ್ಟನು. ಮಾರುಕಟ್ಟೆಯ ಮಾಹಿತಿದಾರರ ಗಂಡಂದಿರು ಕೃಷಿಕೂಲಿಯಲ್ಲಿ ಒಬ್ಬರೂ ಇಲ್ಲ. ಆದರೆ ಶೇಕಡ ೨೯ರಷ್ಟು ಸಂಚಾರಿ ಮಾಹಿತಿದಾರರ ಮನೆಯಲ್ಲಿ ಅವರ ಗಂಡ ಕೃಷಿಕೂಲಿಯನ್ನು ಮಾಡುತ್ತಿದ್ದಾರೆ. ಇದರಲ್ಲಿ ಕಡಿಮೆ ಆದಾಯ ದೊರೆಯುತ್ತದೆಯಾದ್ದರಿಂದ ಅವರು ಈ ಕೆಲಸಕ್ಕೆ ಬಂದಿರುವುದಕ್ಕೆ ಒಂದು ಕಾರಣವನ್ನು ಸೂಚಿಸುತ್ತದೆ.

ಮನೆಯಲ್ಲಿ ಆದಾಯ ಹೆಚ್ಚಾದಂತೆ ಮನೆಯ ಹೆಂಗಸರು ಹೊರಗೆ ಕೆಲಸಕ್ಕೆ ಬರುವುದನ್ನು ನಿಲ್ಲಿಸುತ್ತಾರೆಎಂದು ಎಸ್ತರ್ ಬೋಸರಪ್ (೨೦೦೮) ಅವರ ಅಧ್ಯಯನವುಮನ್ ಇನ್ ಎಕನಾಮಿಕ್ ಡೆವಲಪ್ ಮೆಂಟ್ (೧೯೭೪) ಮತ್ತು ಟುವರ್ಡ್ಸ್‌ ಈಕ್ವ್ಯಾಲಿಟಿ(೧೯೭೪) ಎಂಬ ಮಹಿಳೆಯರ ಬಗೆಗಿನ ವರದಿ ಹೇಳುತ್ತದೆ. ಮೇಲ್ಜಾತಿ ಮನೆಗಳಲ್ಲಿ ಮಹಿಳೆಯರನ್ನು ಸಮಾಜದಲ್ಲಿ ಮರ್ಯಾದೆಯ ಪ್ರಶ್ನೆಯಾಗಿ ಪರಿಭಾವಿಸುವುದರಿಂದ ಅವರನ್ನು ಹೊರಗೆ ದುಡಿಯಲು ಕಳುಹಿಸುವುದಿಲ್ಲ. ಇದು ಜಾತಿಯ ವಿಷಯದಲ್ಲಿ ಈಗಾಗಲೇ ಸಾಬೀತಾಗಿದೆ. ಈ ಸಂಪ್ರದಾಯವನ್ನು ಬೇರೆ ಹೆಚ್ಚಿನ ಆದಾಯ ಇರುವ ಮನೆಗಳ ಮಹಿಳೆಯರು ತರಕಾರಿ ಮಾರುವ ಕೆಲಸದಲ್ಲಿ ಮತ್ತು ಮನೆಯ ಪಟ್ಟು ಆದಾಯ ಎಷ್ಟು ಎಂಬುದನ್ನು ನೋಡಿದಾಗ ಕೆಳಗಿನ ಮಾಹಿತಿ ದೊರಕಿತು. ದುಡಿಮೆಗಾರರೆಂದು ಮನೆಯ ಸದಸ್ಯರು-ಗಂಡ, ಮಕ್ಕಳು-ಮನೆಯ ಹೊರಗೆ ಸಂಬಳ, ಕೂಲಿ-ತರುವಂಥ ಕೆಲಸಗಾರರೆಂದು ಇಲ್ಲಿ ಪರಿಗಣಿಸಲಾಗಿದೆ. ಇದರಲ್ಲಿ ನಮ್ಮ ಮಾಹಿತಿದಾರರನ್ನು ಹೊರತುಪಡಿಸಲಾಗಿದೆ.

ಮಾಹಿತಿದಾರರ ಮನೆಗಳಲ್ಲಿ ಬೇರೆ ಕೆಲಸ ಮಾಡುವ ಕನಿಷ್ಠ ಒಬ್ಬ ಸದಸ್ಯ ಇರುವುದನ್ನು ನೋಡುತ್ತೇವೆ. ಒಟ್ಟು ದುಡಿಮೆಗಾರರ ಸಂಖ್ಯೆ ಮಾರುಕಟ್ಟೆಯ ಮಾಹಿತಿದಾರರ ಮನೆಗೆ ಹೋಲಿಸಿದರೆ, ಸಂಚಾರಿ ಮಾಹಿತಿದಾರರ ಮನೆಯಲ್ಲಿ ಹೆಚ್ಚಿಗೆ ಇರುವುದು ಕಂಡುಬರುತ್ತದೆ. ಅಲ್ಲದೆ ಯಾವ ಮನೆಯಲ್ಲಿಯೂ ಹೊರಗಿನ ದುಡಿಮೆ ಇಲ್ಲದ ಮನೆಯ ಸದಸ್ಯ ಈ ಮನೆಯಲ್ಲಿ ಇಲ್ಲ ಎಂಬ ಅಂಶ ಗೋಚರಿಸುತ್ತದೆ. ಆದರೆ ಮಾರುಕಟ್ಟೆಯ ಮಾಹಿತಿದಾರರಲ್ಲಿ ಶೇಕಡ ೩೦ರಷ್ಟು ಯಾರು ಇಲ್ಲ ಎಂದು ಹೇಳಿರುವವರು. ಇವರು ದೇವದಾಸಿ ಅಥವ ಪರಿತ್ಯಕ್ತ ಗುಂಪಿಗೆ ಸೇರಿದವರಾಗಿದ್ದಾರೆ. ಇದರ ಮತ್ತು ಬೇರೆಲ್ಲ ಮೂಲಗಳಿಂದ ಈ ಕುಟುಂಬಗಳ ಒಟ್ಟು ಆದಾಯವೆಷ್ಟು ಎಂಬುದನ್ನು ಮಾಹಿದಾರರದ್ದು ಹೊರತು ಪಡಿಸಿ ನೋಡಲಾಯಿತು. ಅದನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

ಕೋಷ್ಟಕ ೧ – ಕುಟುಂಬದ ಒಟ್ಟು ಆದಾಯ (ಶೇಕಡವಾರು)

ಕ್ರ. ಸಂ. ಮನೆಯ ತಿಂಗಳ ಒಟ್ಟು ಆದಾಯ* ಮಾರುಕಟ್ಟೆ ಮಾಹಿತಿದಾರರು ಸಂಚಾರಿ ಮಾಹಿತಿದಾರರು
೧೦೦೦-೩೦೦೦ ೪೪ ೨೫
೨. ೩೦೦೧-೬೦೦೦ ೧೩ ೨೫
೩. ೬೦೦೧-೯೦೦೦ ೨೫
೪. ೯೦೦೧-೧೨೦೦೦ ೧೩ ೨೫
  ಒಟ್ಟು ೧೦೦ ೧೦೦

* ಮಾಹಿತಿದಾರರದ್ದು ಹೊರತು ಪಡಿಸಿ

ಮಾರುಕಟ್ಟೆ ಮಾಹಿತಿದಾರರ ಮನೆಯಲ್ಲಿ ದುಡಿಮೆಗಾರರ ಸಂಖ್ಯೆ ಹೆಚ್ಚಿಗೆ ಇದ್ದರೂ ಇವರಲ್ಲಿ ಶೇಕಡ ೪೪ ಜನರ ಮನೆಯ ಆದಾಯ ಕೇವಲ ೧೦೦೦ ರಿಂದ ೩೦೦೦ ರೂಪಾಯಿಗಳು. ಅದರಲ್ಲಿ ದೇವದಾಸಿ ಕುಟುಂಬಗಳನ್ನು ಒಳಗೊಂಡು ೩೦ರಷ್ಟು ಮಾಹಿತಿದಾರರ ಮನೆಯಲ್ಲಿ ಬೇರೆಯವರ ದುಡಿಮೆ ಇಲ್ಲವೇ ಇಲ್ಲ. ಕೆಲವು ಮನೆಗಳಲ್ಲಿ ಗಂಡ ತಾನು ಗಳಿಸಿದ್ದನ್ನು ಮನೆಗೆ ಕೊಡುವುದು ಅಪರೂಪವಾದ್ದರಿಂದ ಆ ಆದಾಯವನ್ನು ಮಾಹಿತಿದಾರರು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಯಿತು. ಮನೆಯಲ್ಲಿ ದುಡಿಮೆಗಾರರು, ಮುಖ್ಯವಾಗಿ ಮಾಹಿತಿದಾರರ ಗಂಡಂದಿರು ತಾವು ದುಡಿದ ಹಣವನ್ನು ಸರಿಯಾಗಿ ಮನೆಗೆ ಕೊಡುತ್ತಿಲ್ಲವಾದ್ದರಿಂದ ಅವರ ಗಂಡಂದಿರಿಗೆ ಕುಡಿತ, ಇತ್ಯಾದಿ ಚಟಗಳು ಇವೆಯೇ ಎಂದು ಕೇಳಿದರೆ, ಯಾರು ಇದಕ್ಕೆ ಸಮ್ಮತಿಸಲಿಲ್ಲ.

ಶೇಕಡ ೨೫ರಷ್ಟು ಸಂಚಾರಿ ಮಾಹಿತಿದಾರರ ಮನೆಯಲ್ಲಿ ೧೦೦೦ ರೂಪಾಯಿಗಳಿಂದ ೧೨೦೦೦ ರೂಪಾಯಿಗಳವರೆಗೆ ಆದಾಯ ಇದೆ ಎಂಬುದು ತಿಳಿಯುತ್ತದೆ. ಆದರೆ ಬಹುತೇಕ ಮಾರುಕಟ್ಟೆ ಮಾಹಿತಿದಾರರ ಮನೆಗಳು ಕಡಿಮೆ ಆದಾಯದ ಗುಂಪು ೧೦೦೦-೩೦೦೦ಕ್ಕೆ ಸೇರುತ್ತದೆ. ಅಂದರೆ ಕುಟುಂಬದ ಸರಾಸರಿ ಆದಾಯ ದಿನಕ್ಕೆ ೬೬ ರೂಪಾಯಿಗಳಷ್ಟು ಆಗುತ್ತದೆ. ಕುಟುಂಬದ ಆದಾಯ ಕಡಿಮೆ ಇರುವುದು ಈ ಮಹಿಳೆಯರ ಹೊರಗಿನ ಕೆಲಸಕ್ಕೆ ಬರುವುದಕ್ಕೆ ಪ್ರಮುಖ ಕಾರಣವೆಂದು ಊಹಿಸಬಹುದು.

ಎಲ್ಲರಲ್ಲೂ ಶಿಕ್ಷಣದ ಮಹತ್ವದ ಬಗ್ಗೆ ಅರಿವಿದ್ದರೂ ಶಾಲೆ ಬಿಟ್ಟ ಮಕ್ಕಳು ನಮಗೆ ಕಾಣುವುದು ಸಂಚಾರಿ ಮಾರಾಟಗಾರ ಮಾಹಿತಿದಾರರ ಮನೆಗಳಲ್ಲಿ ಮಾತ್ರ ಶೇಕಡ ೧೩ ಮಾಹಿತಿದಾರರ ಮನೆಯಲ್ಲಿ ಮಕ್ಕಳು ಶಾಲೆ ಬಿಟ್ಟು ಬೇರೆಯವರ ಮನೆಗಳಲ್ಲಿ ದಿನವೂ ಮನೆಗೆಲಸಕ್ಕೆ ಮತ್ತು ಕಟ್ಟ ಕಟ್ಟುವ ಕೆಲಸಕ್ಕೆ ಹೋಗುತ್ತಿದ್ದಾರೆ. ಅವರ ಮನೆಯಲ್ಲಿ ಆ ಮಕ್ಕಳು ಗಳಿಸಿದ ಹಣವನ್ನು ಮನೆ ಖರ್ಚಿಗೆ ಬಳಸುತ್ತಿದ್ದಾರೆ. ಶಾಲೆ ಬಿಡಲು ಕಾರಣ ಅನಾಸಕ್ತಿ ಮತ್ತು ಮನೆಯ ಜವಾಬ್ದಾರಿಗಳು ಎಂದು ಹೇಳುತ್ತಾರೆ. ಮಾರುಕಟ್ಟೆಯ ಮಾಹಿತಿದಾರರ ಮನೆಯಲ್ಲಿ ಇಂಥ ಉದಾಹರಣೆಗಳು ಕಾಣುವುದಿಲ್ಲ.

ಭಾಗ ಎರಡು

ಈ ಭಾಗದಲ್ಲಿ ಮಾಹಿತಿದಾರರ ಕೆಲಸ, ಈ ಕೆಲಸಕ್ಕೆ ಬರಲು ಇರಬಹುದಾದ ಕಾರಣಗಳು, ವ್ಯಾಪಾರ ಪ್ರಾರಂಭಿಸಲು ಅಗತ್ಯವಾದ ಬಂಡವಾಳದ ಮೂಲ, ಇದರಿಂದ ಬರುವ ಆದಾಯ ಉಳಿತಾಯ- ಹೀಗೆ ಆರ್ಥಿಕ ಅಂಶಗಳನ್ನು ಕುರಿತು ಚರ್ಚಿಸಲಾಗಿದೆ.

ಕೆಲಸಕ್ಕೆ ಬರಲು ಕಾರಣ

ವಿವಿಧ ಕೌಟುಂಬಿಕೆ ಹಿನ್ನಲೆಯಿಂದ ಮಾಹಿತಿದಾರರು ತರಕಾತಿಯ ಮಾರಾಟಕ್ಕೆ ಬಂದಿರುವರು. ಅಲ್ಲದೆ ಮಾರುಕಟ್ಟೆಯ ಮಾಹಿತಿದಾರರಲ್ಲಿ ತರಕಾರಿ ವ್ಯಾಪಾರವೇ ಕುಟುಂಬದ ಮುಖ್ಯ ಚಟುವಟಿಕೆಯಾದ ಕುಟುಂಬಗಳಿಂದ ಅನೇಕ ಮಹಿಳೆಯರು ತರಕಾರಿ ಮಾರಾಟಕ್ಕೆ ಬಂದಿರುವರು ಎಂಬುದನ್ನು ಭಾಗ ಒಂದರಲ್ಲಿ ನೋಡಲಾಗಿದೆ. ಮಾರುಕಟ್ಟೆಯ ಮಾಹಿತಿದಾರರಲ್ಲಿ ಆ ಸಂಖ್ಯೆ ಶೇಕಡ ೪೩ರಷ್ಟು ಇದೆ. ಇವರು ಮದುವೆಯ ನಂತರ ತಾವು ಸ್ವಂತವಾಗಿ ಇದನ್ನು ಮುದುವರೆಸಿಕೊಂಡು ಬಂದಿದ್ದಾರೆ. ಆದರೆ, ಆ ಅಂಶ ಸಂಚಾರಿ ಮಾಹಿತಿದಾರರಲ್ಲಿ ಕಾಣುವುದಿಲ್ಲ. ಈ ವ್ಯಾಪಾರವನ್ನು ತಮ್ಮ ಕುಟುಂಬದಲ್ಲಿ ಪ್ರಾರಂಭ ಮಾಡಿದವರು ಇವರೇ ಮೊದಲಿಗರಾಗಿದ್ದಾರೆ.

ಈ ಕೆಳಗಿನ ಕೋಷ್ಟಕವನ್ನು ನೋಡಿದಾಗ, ಶೇಕಡ ೪೩ರಷ್ಟು ಹೊರತುಪಡಿಸಿ, ಎಲ್ಲರೂ ಬೇರೆ ಕೆಲಸದ ಬಗ್ಗೆ ಅರಿವಿನ ಕೊರತೆಯನ್ನು, ಇದೇ ಲಾಭಕರ,ತಮಗೆ ಇದೇ ರೂಢಿ ಎಂಬೆಲ್ಲ ಕಾರಣಗಳನ್ನು ಹೇಳುತ್ತಾರೆ. ಕೆಲವು ಅಧ್ಯಯನ್ಗಳು (ಬೋಸ್ ರಪ್ ೨೦೦೮, ಭಾರತ ಸರ್ಕಾರ ೧೯೭೪) ಪ್ರಿತೃಪ್ರಧನ ಸಮಾಜವು ಮಹಿಳೆಯರಿಗೆ ಶಿಕ್ಷಣವನ್ನು ನೀಡದೆ, ಯಾವ ಕೌಶಲಗಳು ಇಲ್ಲದವರನ್ನಾಗಿ ಮಾಡಿ ಕೆಲಸದ ಅವಕಾಶಗಳು ಕಡಿಮೆ ಇರುವಂತೆ ಮಾಡಿದೆ ಎಂದು ತಿಳಿಸುತ್ತವೆ. ನಮ್ಮ ಮಾಹಿತಿದಾರರಲ್ಲಿಯೂ ಸಹ ಶೇಕಡ ೫೫ ಅಂದರೆ ಶೇಕಡ ೩೦ ಮಾರುಕಟ್ಟೆಯ ಹಾಗೂ ಶೇಕಡ ೨೫ ಸಂಚಾರಿ ಮಾಹಿತಿದಾರರು ತಮಗೆ ಕೆಲಸ ದೊರೆಯದಿರುವ ಬಗ್ಗೆ ತಿಳಿಸಿದ್ದಾರೆ.

ಪ್ರಿತೃಪ್ರಧನ ಸಮಾಜವು ಮಹಿಳೆಯರಿಗೆ ಶಿಕ್ಷಣವನ್ನು ನೀಡದೆ, ಯಾವ ಕೌಶಲಗಳು ಇಲ್ಲದವರನ್ನಾಗಿ ಮಾಡಿ ಕೆಲಸದ ಅವಕಾಶಗಳು ಕಡಿಮೆ ಇರುವಂತೆ ಮಾಡಿದೆ ಎಂದು ತಿಳಿಸುತ್ತವೆ. ನಮ್ಮ ಮಾಹಿತಿದಾರರಲ್ಲಿಯೂ ಸಹ ಶೇಕಡ ೫೫ ಅಂದರೆ ಶೇಕಡ ೩೦ ಮಾರುಕಟ್ಟೆಯ ಹಾಗೂ ಶೇಕಡ ೨೫ ಸಂಚಾರಿ ಮಾಹಿತಿದಾರರು ತಮಗೆ ಕೆಲಸ ದೊರೆಯದಿರುವ ಬಗ್ಗೆ ತಿಳಿಸಿದ್ದಾರೆ.

ಕೋಷ್ಟಕ ೨ – ತರಕಾರಿ ಮಾರಲು ಕಾರಣಗಳು

ಕ್ರ. ಸಂ. ಕಾರಣಗಳು* ಮಾರುಕಟ್ಟೆ ಮಾಹಿತಿದಾರರು ಸಂಚಾರಿ ಮಾಹಿತಿದಾರರು
ನೈಪುಣ್ಯ ೩೦  
೨. ಲಾಭಕರ ೫೩ ೫೦
೩. ಬೇರೆ ಕೆಲಸ ಸಿಗದು ೩೦ ೨೫
೪. ಪಿತೃಶ್ರದ್ಧೆ ೪೩  
೫. ಬೇರೆ ಕೆಲಸದ ಅರಿವಿಲ್ಲ ೩೦ ೨೫

* ಒಂದಕ್ಕಿಂತ ಹೆಚ್ಚು

ಮೇಲಿನ ಕೋಷ್ಟಕದಲ್ಲಿ ಮಾರುಕಟ್ಟೆಯ ಶೇಕಡ ೪೩ ರಷ್ಟು ಮಾಹಿತಿದಾರರು ಪಿತೃಶ್ರದ್ಧೆಯಿಂದ ಈ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಇಲ್ಲಿಯ ಸುಮಾರು ಶೇಕಡ ೪೭ರಷ್ಟು ಮಾಹಿತಿದಾರರ ಮನೆಯಲ್ಲಿ ಒಬ್ಬರಲ್ಲ ಬ್ಬರು ಈ ಕೆಲಸವನ್ನು ಮಾಡಿಕೊಂಡೇ ಬಂದವರಾಗಿದ್ದಾರೆ. ಸ್ವಂತವಾಗಿ ತಾವೇ ಆರಂಭಸಿದವರು ಈ ಗುಂಪಿನಲ್ಲಿ ಕೇವಲ ೧೩ ಮಾತ್ರ. ಅಲ್ಲದೆ ಇವರಲ್ಲಿ ಇವರ ತಾಯಿ ಈ ಕೆಲಸ ಮಾಡುತ್ತಿದ್ದುದ್ದರಿಂದ ಮಾಹಿತಿದಾರರು ತಮ್ಮ ತಾಯಿಯೊಡನೆ ವ್ಯಾಪಾರಕ್ಕೆ ಬರುತ್ತಿದ್ದರು ಎಂಬುದಾಗಿ ನುಡಿಯುತ್ತಾರೆ. ಆದ್ದರಿಂದ ಈ ಕೆಲಸದ ಬಗ್ಗೆ ಅವರಿಗೆ ಪರಿಚಯ ಮೊದಲೇ ಇದ್ದು, ಈ ವ್ಯಾಪಾರದ ಪರಿಚಯ ಮೊದಲಿನಿಂದಲೂ ಇದೆ. ಈ ವ್ಯಾಪಾರವನ್ನು ಕೇವಲ ಕೆಲ ವರ್ಷಗಳ ಹಿಂದೆ ಪ್ರಾರಂಭಿಸಿದ್ದಲ್ಲ. ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ,ಕೆಲ ಕುಟುಂಬಗಳಲ್ಲಿ ಮೂರನೇ ತಲೆಮಾರು ಹಿಂದಿನಷ್ಟು ವರ್ಷಗಳಿಂದ, ಈ ವ್ಯಾಪಾರ ಮಾಡುತ್ತಿದ್ದರು ಎಂಬುದು ತಿಳಿಯುತ್ತದೆ. ಇದರಿಂದ ಅರಬಿಂದ್ ಸಿಂಗ್ (ಆರ್ಗನೈಸಿಂಗ್ ಸ್ಟ್ರೀಟ್ ವೆಂಡರ್ಸ್. http://WWW.india-seminar.com/2000/491/491% 20 arbind%20singh.httm, ಜನವರಿ ೭ ೨೦೧೦ರಂದು ನೋಡಿದ್ದು). ಅವರು ಈ ವ್ಯಾಪಾರ ಪಾರಂಪರಿಕವಾದದ್ದು ಎಂದು ಹೇಳಿದ್ದು ನಮ್ಮ ಸಂದರ್ಭದಲ್ಲಿಯೂ ಅದು ನಿಜ ಎಂದು ತಿಳಿಯುತ್ತದೆ. ಇದು ಮಾರುಕಟ್ಟೆಯ ಮಾಹಿತಿದಾರರಿಗೆ ಅನುಕೂಲಕರವಾಗಿ ಪರಿಣಮಿಸಿದೆ.

ತಮ್ಮ ತವರು ಮನೆಯ ಕೆಲಸವನ್ನೇ ಮುಂದುವರೆಸಿಕೊಂಡು ಬಂದ ಅನೇಕ ಮಾರುಕಟ್ಟೆಯ ಮಾಹಿತಿದಾರರು ತಮ್ಮ ತವರು ಮನೆಯವರಿಗೆ ಸೇರಿದ ಕಟ್ಟೆಯ ಮೇಲೆ ಕುಳಿತೇ ತಮ್ಮ ವ್ಯಾಪಾರ ಮಾಡುತ್ತಿದ್ದಾರೆ. ಇವರಿಗೆ ಮಾರುಕಟ್ಟೆಯಲ್ಲಿ ತಾಯಿ ಮನೆಯ ಬೆಂಬಲವಿರುವುದರಿಂದ ಮಾರುಕಟ್ಟೆಯ ಮಾಹಿತಿದಾರರಿಗೆ ಮಧ್ಯಾಹ್ನಾದ ಊಟ ಅನೇಕ ವೇಳೆ ತವರು ಮನೆಯಿಂದಲೇ ಬರುವುದುಂಟು. ಕುಟುಂಬದ ಇತರ ಸದಸ್ಯರೂ ಇದೇ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಮಾಹಿತಿದಾರರು ಇಲ್ಲದಾಗ ಅಂಗಡಿ ನೋಡಿಕೊಳ್ಳುವುದು ಹೀಗೆ ಅನೇಕ ಸಹಾಯ ದೊರೆಯುತ್ತಿರುತ್ತದೆ. ಈ ರೀತಿಯ ತವರುಮನೆ ಸಹಾಯ ಸಂಚಾರಿಮಾಹಿತಿದಾರರಿಗೆ ಇಲ್ಲ ಇದಕ್ಕೆ ಕಾರಣಗಳನ್ನು ಅವರು ನೀಡಿದ ಮಾಹಿತಿಯ ಅಧಾರದ ಮೇಲೆ ಹೀಗೆ ಊಹಿಸಬಹುದು. ಒಂದು, ಬಹುತೇಕ ಸಂಚಾರಿ ಮಾಹಿತಿದಾರರಿಗೆ ಹೊಸಪೇಟೆ ಗಂಡನ ಮನೆ ಆಗಿರುವುದು; ಎರಡು, ತಂದೆತಾಯಿಯರ ಕೆಲಸ ಬೇರೆಯಾಗಿರುವುದು.

ಸಣ್ಣ ವಯಸ್ಸಿನಿಂದಲೇ ಮನೆಯಲ್ಲಿ ತಂದೆ ತಾಯಿ ಈ ಕೆಲಸ ಮಾಡುತ್ತಿರುವುದನ್ನು ನೋಡಿದ ಮಾಹಿತಿದಾರರಲ್ಲಿ ಸುಮಾರು ಶೇಕಡ ೭೦, ಮದುವೆಗೆ ಮೊದಲೇ ಈ ಕೆಲಸ ಮಾಡುತ್ತಿದ್ದರು. ಶೇಕಡ ೩೦ ಮಾಹಿತಿದಾರರು ಮದುವೆಯ ನಂತರ ಈ ಕೆಲಸ ಮಾಡುತ್ತಿದ್ದರೂ ಈ ಕೆಲಸದ ಬಗ್ಗೆ ಮೊದಲು ಪರಿಚಯವಿತ್ತು ಎಂದು ಹೇಳುತ್ತಾರೆ. ಸಂಚಾರಿ ಮಾರಾಟಗಾರ ಮಾಹಿತಿದಾರರಲ್ಲಿ ಎಲ್ಲರೂಮದುವೆ ನಂತರವೇ ಈ ಕೆಲಸ ಪ್ರಾರಂಭಿಸಿದ್ದಾರೆ.

ಈ ಕೆಲಸ ಪ್ರಾರಂಭಿಸುವ ಮೊದಲು ಈ ಮಾಹಿತಿದಾರರು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು. ಗಮನಿಸಬೇಕಾದ ಅಂಶವೆಂದರೆ ಸಂಚಾರಿ ಮಾಹಿತಿದಾರರಲ್ಲಿ ಶೇಕಡ ೭೫ ಈ ಕೆಲಸ ಮಾಡುವ ಮೊದಲು ಕೃಷಿಕೂಲಿ, ಮತ್ತು ಶೇಕಡ ೨೫ ಗಣಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇದು ಮೇಲ್ಮಖ ಚಲನೆಯ ಒಂದು ಹಂತ ಹೌದಾದರೂ, ಇದಕ್ಕೆ ಆಧುನೀಕರಣದಿಂದ ಕುಸಿಯುತ್ತಿರುವ ಕೃಷಿ ಚಟುವಟಿಕೆಗಳು ಕಾರಣವೆಂದೂ ಊಹಿಸಬಹುದು. ಹಾಗೆಯೇ ಗಣಿಯಲ್ಲಿ ಕೆಲಸ ಮಾಡುತ್ತಿದ್ದವರು ಯಂತ್ರಗಳು ಬಂದ ಮೇಲೆ ಅಲ್ಲಿ ಕೆಲಸವಿಲ್ಲದೆ ತರಕಾರಿ ಮಾರುವ ಕೆಲಸಕ್ಕೆ ಬಂದಿರುವುದಾಗಿ ಹೇಳುತ್ತಾರೆ.

ಈ ಕೆಲಸಕ್ಕೆ ಮಾಹಿತಿದಾರರು ಬರಲು ಪ್ರಮುಖ ಕಾರಣಗಳು ಅನೇಕ. ಕೆಲವರದ್ದು ಸ್ವಂತ ನಿರ್ಧಾರವಾದರೆ, ಕೆಲವರು ಮನೆಯ ವೃತ್ತಿಯಾದ್ದರಿಂದ ಮಾಡುತ್ತಿರುವುದಾಗಿ ಹೇಳುತ್ತಾರೆ. ಆದರೆ ಅವರು ಈ ಕೆಲಸಕ್ಕೆ ಬರಲು ನಿರ್ಧಾರ ತಳೆಯಲು ಬೇರೆ ಬೇರೆ ಕಾರಣಗಳು ಸಹ ಇರುವವು. ಸಂಚಾರಿ ಮಾಹಿತಿದಾರರ ಮನೆಯಲ್ಲಿ ಗಂಡ ಸರಿಯಾಗಿ ದುಡಿಯುವುದಿಲ್ಲ. ಬಡತನದಿಂದ ಒಬ್ಬರ ದುಡಿಮೆ ಮನೆಗೆ ಸಾಲುವುದಿಲ್ಲ. ಅಥವ ಗಂಡ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವುದು, ಗಂಡ ಕೆಲಸ ಕಳೆದು ಕೊಂಡಿರುವುದು- ಈ ಕಾರಣಗಳಿಗೆ ಅನಿವಾರ್ಯವಾಗಿ ತಲೆ ಮೇಲೆ ಹೊತ್ತು ಸಂಚಾರಿಯಾಗಿ ಮಾರಲು ನಿರ್ಧಾರ ತೆಗೆದುಕೊಂಡಿರುವರು.

ಮಾರುಕಟ್ಟೆಯ ಮಾಹಿತಿದಾರರಲ್ಲಿ ಶೇಕಡ ೪೩ ದೇವದಾಸಿಯರೂ ಇದ್ದಾರೆ. ಇವರು ತಮ್ಮಜೀನಕ್ಕೆ ತಾವೇ ದುಡಿಯಬೇಕಾದ ಸ್ಥಿತಿಯಿರುವುದರಿಂದ ಈ ಕೆಲಸಕ್ಕೆ ಬಂದಿರುವರು. ಉಳಿದವರು ಗಂಡ ಮನೆಯಲ್ಲಿ ಸರಿಯಾಗಿ ದುಡಿಯದಿರುವುದು, ಗಂಡನ ದುಡಿಮೆ ಮನೆಗೆ ಸಾಲದಿರುವುದು, ಗಂಡನ ಅನಾರೋಗ್ಯ ಮುಂತಾದ ಕಾರಣಗಳನ್ನು ನೀಡಿರುವರು.

ಕ್ರಿಯಾತ್ಮಕ ಬಂಡವಾಳದ (ವರ್ಕಿಂಗ್ ಕ್ಯಾಪಿಟಲ್) ಮೂಲ

ಹೀಗೆ ಅನೇಕ ಕಾರಣಗಳಿಂದ ಈ ಕೆಲಸವನ್ನು ಪ್ರಾರಂಭಿಸಿದ ಮಾಹಿತಿದಾರರು ವ್ಯಾಪಾರದಲ್ಲಿ ತೊಡಗಿಸಲು ಪ್ರಾರಂಭಿಕ ಬಂಡವಾಳವನ್ನು ಅನೇಕ ಮೂಲಗಳಿಂದ ಪಡೆದಿರುವರು. ಶೇಕಡ ೧೫ರಷ್ಟು ಮಾರುಕಟ್ಟೆಯ ಮಾಹಿತಿದಾರರು ತಮ್ಮ ಒಡವೆಗಳನ್ನು ಮಾರಿ ಈ ವ್ಯಾಪಾರ ಪ್ರಾರಂಭಿಸಿದ್ದಾರೆ. ಶೇಕಡ ೫೭ರಷ್ಟು ತಮ್ಮ ತಂದೆ ತಾಯಿಉ ಸ್ಥಳ/ಕಟ್ಟೆಯಲ್ಲಿಯೇ ವ್ಯಾಪಾರ ಮುಂದುವರೆಸಿದ್ದಾರೆ ಅಥವಾ ಎಪಿಎಂಸಿಯಿಂದ ತರಕಾರಿಯನ್ನು ಸಾಲವಾಗಿ ತಂದು ಪ್ರಾರಂಭಿಸಿದವರಾಗಿದ್ದಾರೆ. ಸ್ನೇಹಿತಿರಿಂದ, ಉಳಿತಾಯದಿಂದ ಹಣ ಪಡೆದವರು ಯಾರೂ ಇಲ್ಲಿ ಇಲ್ಲ. ಆದರೆ, ಸಣ್ಣ ಬಂಡವಾಳದ ಅವಶ್ಯಕತೆಯಿರುವ ಸಂಚಾರಿ ಮಾರಾಟಗಾರ ಮಾಹಿತಿದಾರರಲ್ಲಿ ಶೇಕಡ ೫೦ ತಮ್ಮ ಉಳಿತಾಯದಿಂದ, ೨೫ ಸಾಲಗಾರರಿಂದ, ಶೇಕಡ ೨೫ ಸ್ನೇಹಿತರಿಂದ ಹಣವನ್ನು ಪಡೆದು ತರಕಾರಿ ವ್ಯಾಪಾರ ಪ್ರಾರಂಭಿಸಿದ್ದಾರೆ.

ಎಲ್ಲ ತರಕಾರಿ ವ್ಯಾಪಾರಸ್ಥರು ಸಗಟು ವ್ಯಾಪಾರಸ್ಥರಿಂದ ಅಂದರೆ ಎಪಿಎಂಸಿಯಿಂದ ತರಕಾರಿ ತರುತ್ತಾರೆ. ಎಪಿಎಂಸಿಯು ತರಕಾರಿ ಹೊಸಪೇಟೆಯ ಹೃದಯಭಾಗದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ. ತರಕಾರಿ ಎಪಿಎಂಸಿಗೆ ಬೆಳಗಿನ ಜಾವ ಒಂದು ಹೊತ್ತು ಬರುತ್ತದೆ. ಆದರೆ ಸೊಪ್ಪು ಮಾರುವವರು ಬೆಳಗಿನ ಜಾವ ರೈತರಿಂದಲೂ ಮತ್ತು ರೈತರಿಂದ ಕೊಂಡು ಅಲ್ಲಿಯೇ ಮಾರುವ ಇತರೆ ವ್ಯಾಪಾರಸ್ಥರಿಂದ ಕೊಳ್ಳುತ್ತಾರೆ. ಈ ವ್ಯಾಪಾರ ತರಕಾರಿ ಮಾರುಕಟ್ಟೆಯ ಹೊರಗೆ ಬೆಳಗಿನ ಜಾವ ಮಾತ್ರ ಆಗುತ್ತದೆ.

ಎಪಿಎಂಸಿಯಿಂದ ಮಾರುಕಟ್ಟೆಯ ಮಾಹಿತಿದಾರರು ತರಕಾರಿ ಸಾಲ ತರಲು ಸುಲಭವಾದಷ್ಟು ಸಂಚಾರಿ ಮಾರಾಟಗಾರರಿಗೆ ಸುಲಭವಲ್ಲ. ಎಪಿಎಂಸಿಯಲ್ಲಿ ಸಗಟು ವ್ಯಾಪಾರಿಗಳು ಪರಿಚಯವಿದ್ದರೆ, ಅಥವ ಎಪಿಎಂಸಿಯವರಿಗೆ ಪರಿಚಯವಿರುವ ಯಾರಾದರೂ ವ್ಯಾಪಾರಸ್ಥರು ಪರಿಚಯ ಮಾಡಿಸಿದರೆ, ಸಾಲ ಕೊಡುತ್ತಾರೆ. ಸಾಲವನ್ನು ಸರಿಯಾಗಿ ಕಟ್ಟುತ್ತಿದ್ದರೆ, ಸಾಲ ದೊರೆಯುವುದು ಕಷ್ಟವಾಗುವುದಿಲ್ಲ. ಸಮಾಜಿಕ ಸಂಪರ್ಕ (ಸೋಶಿಯಲ್ ನೆಟ್ ವರ್ಕ್) ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದು ಸಾಲಗಾರರಿಂದ ಸಾಲ ಪಡೆಯಲೂ ಉಪಯೋಗಿವಾಗುತ್ತದೆ. ಇಲ್ಲಿ ದೇಬ್ದುಲಾಲ್ ಸಹಾ (ಕಂಡೀಶನ್ಸ ಆಫ್ ಡೀಸೆಂಟ್ ವರ್ಕಿಂಗ್ ಲೈಫ್ ಆಫ್ ಸ್ವ್ರೀಟ್ ವೆಂಡರ್ಸ ಇನ್ ಮುಂಬೈ WWW.ilo.org/public/english/protection/condtrav/pdf/rdwpaper27c.pdf, ಜನವರಿ ೧೬,೨೦೧೦ ರಂದು ನೋಡಿದ್ದು) ಅವರ ಅಧ್ಯಯನವು ನಮ್ಮ ಅಧ್ಯಯನಕ್ಕೂ ಅನ್ವಯವಾಗುತ್ತಿರುವುದನ್ನು ನೋಡಬಹುದು. ಇವರ ಅಧ್ಯಯನದ ಪ್ರಕಾರ ಜಾತಿ ಅಥವವರ್ಗ ಸಮುದಾಯಕ್ಕಿಂತ ಸಾಮಾಜಿಕ ಸಂಪರ್ಕವು ವಿಶ್ವಾಸ ಸುಲಭವಾಗುವಂತೆ ಸಂಚಾರಿ ಮಾರಾಡಗಾರ ಮಾಹಿತಿದಾರರಿಗೆ ಸುಲಭವಲ್ಲ. ಇದು ಸಾಮಾಜಿಕ ಬಂಡವಾಳವಾಗಿರುವುದರಿಂದ ಪರಸ್ಪರ ಸಹಕಾರ ಹಾಗೂ ಸಹಾಯವಾಗಿ ಏರ್ಪಡುತ್ತದೆ (ಪೂಜಾರಿ ೨೦೧೦). ಏಕೆಂದರೆ ಶೇಕಡ ೮೭ರಷ್ಟು ಮಾಹಿತಿದಾರರು ಮಾರುಕಟ್ಟೆಯಲ್ಲಿ ಪರಿಚಯವಿರುತ್ತದೆ. ಈ ಪ್ರಯೋಜನ ಸಂಚಾರಿ ಮಾರಾಟಗಾರರಿಗಿಲ್ಲ. ಈ ಸಾಮಾಜಿಕ ಸಂಪರ್ಕದಿಂದ ಭೌತಿಕ ಬಂಡವಾಳದೊಂದಿಗೆ ಸಮಾಜಿಕ ಬಂಡವಾಳವೂ ಸಹಿತ ಮಕ್ಕಳಿಗೆ ಹರಿದು ಬರುವುದರಿಂದ ತಮ್ಮ ವ್ಯವಹಾರವನ್ನು ಸ್ಥಾಪಿಸಲು ಸುಲಭವಾಗಿಸುವುದು (ಅದೇ).

ಸಗಟು ಮಾರುಕಟ್ಟೆಯಲ್ಲಿ ಸಾಲದ ವ್ಯವಸ್ಥೆ ಇರುವುದೇ ಎಂದು ಕೇಳಿದಾಗ ಮಾರುಕಟ್ಟೆಯ ಎಲ್ಲ ಮಾಹಿತಿದಾರರು ಹೌದು ಎಂದು ಉತ್ತರಿಸಿದರೆ,ಸಂಚಾರಿ ಮಾರಾಟಗಾರರಲ್ಲಿ ಕೇವಲ ಶೇಕಡ ೨೫ರಷ್ಟು ಮಾಹಿತಿದಾರರು ಸಾಲದ ಸೌಲಭ್ಯ ತಮಗೂ ಇದೆ ಎಂದು ಹೇಳಿದರು. ಶೇಕಡ ೫೦ ಸಾಲ ತಮಗೆ ದೊರೆಯುವುದಿಲ್ಲ ಎಂದೂ, ಶೇಕಡ ೨೫ರಷ್ಟು ಮಾಹಿತಿದಾರರು ತಾವು ಸಾಲ ಪಡೆಯಲು ಇಚ್ಛಿಸುವುದಿಲ್ಲವೆಂದೂ ತಿಳಿಸಿದರು. ಇವರು ಸ್ವತಃ ತಾವೇ ವ್ಯಾಪಾರ ಪ್ರಾರಂಭಸಿದ್ದರಿಂದ ಇವರಿಗೆ ಶ್ಯೂರಿಟಿ ನೀಡುವವರು ಅಪರೂಪ.

ಈ ವ್ಯಾಪಾರಕ್ಕೆ ಬೇಕಾದ ಸರಾಸರಿ ಬಂಡವಾಳ (ಅಂದಾಜಿನಲ್ಲಿ) ಮಾರುಕಟ್ಟೆಯವರಿಗೆ ಹೋಲಿಸಿದರೆ, ಸಂಚಾರಿ ಮಾರಾಟಗಾರ ಮಾಹಿತಿದಾರರದ್ದು ಕಡಿಮೆ. ನೂರು ರೂಪಾಯಿಗಳಿಂದ ಒಂದು ಸಾವಿರ ರೂಪಾಯಿಯ ಒಳಗೆ ಯಾವ ಮಾರುಕಟ್ಟೆಯ ಮಾಹಿತಿದಾರರೂ ಹಣವನ್ನು ಹೂಡಿರುವುದಿಲ್ಲ ಅವರು ಸುಮಾರು ಸಾವಿರ ರೂಪಾಯಿಗಳಿಂದ ಅದು ಸಾವಿರ ರೂಪಾಯಿಗಳ ಬೆಲೆಯ ತರಕಾರಿಯನ್ನು ಒಂದು ದಿನಕ್ಕೆ ತರುತ್ತಾರೆ. ಆದರೆ,ಸಂಚಾರಿ ಮಾರಾಟಗಾರರು ಮಾತ್ರ ತಮಗೆ ಸುಮಾರು ೪೦೦-೫೦೦ ರೂಪಾಯಿಗಳ ತರಕಾರಿ ದಿನವೂ ಬೇಕಾಗುವುದು ಎಂದು ಹೇಳುತ್ತಾರೆ. ಕೆಲವೊಮ್ಮೆ ಇದಕ್ಕಿಂತಲೂ ಕಡಿಮೆ ಬಂಡವಾಳ ಹಾಕುವುದೂ ಉಂಟು. ಇದರಿಂದ ತರಕಾರಿ ವ್ಯಾಪಾರಕ್ಕೆ ಬಂಡವಾಳ ಹೂಡಿಕೆಯಲ್ಲಿ ಮಾರುಕಟಟೆಯವರು ಹೆಚ್ಚು ಹಣ ತೊಡಗಿಸುತ್ತಾರೆಂದೂ, ಸಂಚಾರಿ ಮಾರಾಟಗಾರರು ಕಡಿಮೆ ಹಣ ತೊಡಗಿಸುತ್ತಾರೆ ಎಂದು ತಿಳಿಯುತ್ತದೆ. ಇದು ಇವರ ವ್ಯಾಪಾರದ ಪ್ರಮಾಣದಲ್ಲಿಯ ವ್ಯತ್ಯಾಸವನ್ನು ತೋರಿಸುತ್ತದೆ ಬಹುಶಃ ಈ ಕಾರಣಕ್ಕಾಗಿಯು ಸಹ ಸಂಚಾರಿ ಮಾಹಿತಿದಾರರಿಗೆ ಸಗಟು ಮಾರುಕಟ್ಟೆಯಲ್ಲಿ ಸಾಲದ ಅವಶ್ಯಕತೆ ಇಲ್ಲದಿರಬಹುದು. ಸಂಚಾರಿ ಮಾಹಿತಿದಾರರ ಕುಟುಂಬದ ಪರಿಸ್ಥಿತಿಯು ಮಾರುಕಟ್ಟೆಯ ಮಾಹಿತಿದಾರರಿಗೆ ಹೋಲಿಸಿದರೆ ಅಷ್ಟು ಉತ್ತಮವಾಗಿಲ್ಲವಾದ್ದರಿಂದ ಕಡಿಮೆ ಹಣವನ್ನು ವ್ಯಾಪಾರಕ್ಕೆ ತೊಡಗಿಸಿರಬಹುದು ಎಂದು ಊಹಿಸಬಹುದು. ಅಲ್ಲದೆ ಮಾರುಕಟ್ಟೆಯಲ್ಲಿ ಒಂದು ಕಟ್ಟೆ ಇರುವುದುರಿಂದ ಹೆಚ್ಚಿನ ತರಕಾರಿಯನ್ನು ಅಲ್ಲಿ ಇಟ್ಟುಕೊಳ್ಳಲು ಅವಕಾಶವಿದೆ. ಸಂಚಾರಿ ಮಾರಾಟಗಾರರು ತಮ್ಮ ತಲೆಯ ಮೇಲೆ ಬುಟ್ಟಿ ಹೊತ್ತು ಮಾರುವುದರಿಂದ ಅವರೇ ಹೇಳುವಂತೆ ಮೂವತ್ತು ಕೇಜಿಗೂ ಮಿಗಲಾದ ಭಾರ ಹೊರಲು ಆಗುವುದಿಲ್ಲ. ಇದು ಸಹ ಅವರ ಬಂಡವಾಳ ತೊಡಗಿಸುವಿಕೆಯ ಪ್ರಮಾಣವನ್ನು ಪ್ರತಿಬಂಧಿಸಬಹುದು ಎಂದು ತಿಳಿಯಬಹುದಾಗಿದೆ.

ಆದಾಯ

ಈ ಪ್ರಮಾಣದ ಬಂಡವಾಳವು ಯಾವ ರೀತಿಯ ಆದಾಯವನ್ನು ತರುತ್ತದೆ ಎಂದು ಸಹ ನೋಡಲಾಗಿದೆ. ತರಕಾರಿ ಮಾರಾಟಗಾರರು ಆದಾಯದ ಬಗ್ಗೆ ಗಮನಹರಿಸಿದಾಗ ಮಾರುಕಟ್ಟೆ ಮಾಹಿತಿದಾರರ ಆದಾಯ ತಿಂಗಳಿಗೆ ಸಾವಿರ ರೂಪಾಯಿಗಳಿಂದ ಹನ್ನೆರಡು ಸಾವಿರ ರೂಪಾಯಿಗಳವರೆಗೆ ಇರುವುದು ತಿಳಿಯುತ್ತದೆ. ಆದರೆ ಸಂಚಾರಿ ಮಾಹಿತಿದಾರರ ತಿಂಗಳ ಆದಾಯ ೧೦೦೦-೩೦೦೦ ರೂಪಾಯಿಗಳವರೆಗೆ ಶೇಕಡ ೭೦ ಇರುವುದನ್ನು ಕಾಣಬಹುದು. ಆದರೆ ಮಾರುಕಟ್ಟೆಯ ವ್ಯಾಪಾರಿಗಳಲ್ಲಿ ೯೦೦೦ದಿಮದ ೧೨೦೦೦ ರೂಪಾಯಿಗಳವರೆಗೆ ಕೂಡ ಸಂಪಾದರೆ ಮಾಡುವ ಸಾಧ್ಯತೆ ಕಂಡುಬರುತ್ತದೆ.

ಆದಾಯ ದೊರೆ ನಂತರ ಅದನ್ನು ಏನು ಮಾಡುತ್ತಾರೆ ಎಂಬುದಕ್ಕೆ ಅನೇಕ ಉತ್ತರಗಳು ದೊರೆತವು. ತರಕಾರಿ ವ್ಯಾಪಾರಿದಲ್ಲಿ ಮಹಿಳೆಯರು, ತಾವು ಹಾಕಿದ ಬಂಡವಾಳವನ್ನು ಅಂದರೆ ಅಸಲನ್ನು ಮೂರನೆ ದಿನ ಮರು ಹೂಡಿಕೆ ಮಾಡುತ್ತಾರೆ. ಮೂಲ ಬಂಡವಾಳದ ಮೇಲೆ ಸಿಗುವ ಹಣ ಅವರಿಗೆ ದೊರೆತ ಲಾಭ-ಅದಾಯವಾಗುತ್ತದೆ. ತಾವೇ ಸ್ವತಃ ಸಗಟು ಮಾರುಕಟ್ಟೆಗೆ ಹೋಗುವ ಮಹಿಳೆಯರು ಬಂದ ಹಣವನ್ನು ತಾವೇ ಇಟ್ಟುಕೊಂಡು ಮರುದಿನ ಅದರಲ್ಲಿ ತರಕಾರಿ ಕೊಳ್ಳುತ್ತಾರೆ. ಮನೆಯ ಪುರುಷರು ಸಗಟು ಮಾರುಕಟ್ಟೆಗೆ ಹೋಗುವ ಮನೆಗಳಲ್ಲಿ ಬಂದ ಅಸಲಿನ ಹಣವನ್ನು ಅವರಿಗೆ ನಿಡಿ ಉಳಿದ ಲಾಭವನ್ನು ತಾವು ಇಟ್ಟುಕೊಳ್ಳತ್ತಾರೆ. ಮದುವೆಯಾದ ಮಹಿಳೆಯರು ತಮ್ಮ ತವರಿನ ಅಂಗಡಿಯಲ್ಲಿ ವ್ಯಾಪಾರ ಮಾಡಲು ಕುಳಿತ್ತಿದ್ದರೆ, ತಾವು ಗಳಿಸುವ ಲಾಭದ ಸ್ವಲ್ಪ ಪಾಲನ್ನು ತವರಿಗೆ ನೀಡಿ ಸ್ವಲ್ಪ ತಾವಿಟ್ಟುಕೊಳ್ಳುತ್ತಾರೆ. ಕೆಲವರು ತಾವು ಗಳಿಸುವ ಹಣವನ್ನು ತಮ್ಮ ಗಂಡನಿಗೆ ಕೊಡುವುದಾಗಿ ಹೇಳುತ್ತಾರೆ ಯಾವ ಲಾಭವೂ ಇಲ್ಲವೆಂದರೆ ತಮ್ಮ ಗಂಡ ಇಲ್ಲಿಗೆ ಕಳುಹಿಸುವುದಿಲ್ಲ. ಆದ್ದರಿಂದ ಅವರಿಗೆ ಕೊಡುವುದು ಅಥವ ಅವರಿಗೆ ದಿನಕ್ಕೆ ಆದ ಲಾಭದ ಬಗ್ಗೆ ತಿಳಿಸುವುದು ಅವಶ್ಯಕ ಎಂದು ಹೇಳುತ್ತಾರೆ.

ಸಂಚಾರಿ ಮಾಹಿತಿದಾರರು ಎಲ್ಲರೂ ತಾವೇ ಸಗಟು ಮಾರುಕಟ್ಟೆಗೆ ಹೋಗುತ್ತಾರೆ ಅಲ್ಲದೆ ಈ ಕೆಲಸಕ್ಕೆ ಬಂದಿರುವುದೂ ಅವರ ಸ್ವಂತ ನಿರ್ಧಾರವಾದ್ದರಿಂದ ಬಂದ ಹಣವನ್ನೆಲ್ಲಾ ತಾವೇ ಇಟ್ಟುಕೊಳ್ಳುತ್ತಾರೆ. ತಮ್ಮ ಗಂಡನಿಗೆ ಕೊಡುವ ಪ್ರಮೇಯವಿಲ್ಲ ಅಥವ ಕೆಲಸಕ್ಕೆ ಗಂಡ ಕಳುಹಿಸದಿರಬಹುದು ಎಂಬ ಅಳುಕು ಇಲ್ಲ. ಈ ನಿಟ್ಟಿನಲ್ಲಿ ಸಂಚಾರಿ ವ್ಯಾಪಾರಸ್ಥರು ಹೆಚ್ಚಿನ ಸ್ವಾತಂತ್ರ್ಯ ಅನುಭವಿಸುತ್ತಿರುವುದಾಗಿ ಕಂಡು ಬರುತ್ತದೆ.

ಉಳಿತಾಯ ಮತ್ತು ಖರ್ಚು

ತರಕಾರಿ ಮಾರುವ ಮಾಹಿತಿದಾರರು ಸ್ವಂತವಾಗಿ ಆದಾಯ ಗಳಿಸುವುದರಿಂದ ಇವರು ಎಷ್ಟು ಉಳಿತಾಯಮಾಡುತ್ತಾರೆ ಎಂದು ಪರಿಶೀಲಿಸಿದಾಗ ಉಳಿತಾಯ ಮಾಡುವವರ ಸರಾಸರಿ ಒಟ್ಟು ಶೇಕಡ ೩೭ ಇರುವುದನ್ನು ಕಾಣುತ್ತೇವೆ. ಅಂದರೆ ಶೇಕಡ ೨೮ರಷ್ಟು ಮಾಹಿತಿದಾರರು ಉಳಿತಾಯ ಮಾಡುವುದಿಲ್ಲ.

ಶೇಕಡ ೭೫ರಷ್ಟು ಸಂಚಾರಿ ಮಾಹಿತಿದಾರರು ಉಳಿತಾಯ ಮಾಡಿದರೂ ಅವರಲ್ಲಿ ಶೇಕಡ ೫೦ರಷ್ಟು ತಿಂಗಳಿಗೆ ಸುಮಾರು ೧೦೦ರಿಂದ ೧೦೦೦ ರೂಪಾಯಿಗಳಷ್ಟೇ ಉಳಿತಾಯ ಮಾಡುತ್ತಾರೆ. ಉಳಿದ ೨೫ರಷ್ಟು ೧೦೦೦ರಿಂದ ೨೦೦೦ರೂಪಾಯಿಗಳವರೆಗೆ ಉಳಿತಾಯ ಮಾಡುತ್ತಾರೆ. ಆದರೆ ಮಾರುಕಟ್ಟೆಯ ಮಾಹಿತಿದಾರರು ೪೪ರಷ್ಟು ೧೦೦೦ರೂಪಾಯಿಗಳವರೆಗೆ, ೧೩ರಷ್ಟು ಎರಡರಿಂದ ಮೂರು ಸಾವಿರದವರೆಗೆ, ಉಳಿದ ೧೩ರಷ್ಟು ಮೂರು ಸಾವಿರದಿಂದ ೪೦೦೦ ಸಾವಿರದ ವರೆಗೆ ಉಳಿತಾಯ ಮಾಡುವುದನ್ನು ನೋಡುತ್ತೇವೆ.

ಉಳಿತಾಯ ಮಾಡದ ಶೇಕಡ ೩೦ರಷ್ಟು ಮಾರುಕಟ್ಟೆಯ ಮಾಹಿತಿದಾರರು ಮರುಹೂಡಿಕೆಗೆ, ತಮ್ಮ ಮನೆ ಖರ್ಚಿಗೆ, ಸಾಲಕ್ಕೆ ಹೋಗುತ್ತದೆ ಎಂದು ಹೇಳಿದರೆ, ಉಳಿತಾಯ ಮಾಡದ ೨೫ರಷ್ಟು ಸಂಚಾರಿ ಮಾಹಿತಿದಾರರಲ್ಲಿ ಮಾಹಿತಿದಾರರು ತಮ್ಮ ಎಲ್ಲ ಆದಾಯವೂ ಮನೆಯ ಖರ್ಚಿಗೇ ಉಪಯೋಗಿಸಲ್ಪಡುತ್ತದೆ ಎಂದು ಹೇಳಿರುವರು. ಭಾಗ ಒಂದರಲ್ಲಿ ಮಾಹಿತಿದಾರರದ್ದು ಹೊರತುಪಡಿಸಿ, ಮನೆಯ ಆದಾಯವು ಕೇವಲ ೧೦೦೦ ರೂಪಾಯಿ ಇರುವ ಗುಂಪು ಸಂಚಾರಿ ಮಾಹಿತಿದಾರರದ್ದು ಎಂಬುದನ್ನು ಗಮನಿಸಿದಾಗ, ಇವರ ಆದಾಯ ಮನೆಗೆ ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ.

ಉಳಿತಾಯ ಮಾಡುವ ಮಾಹಿತಿದಾರರು ಉಳಿತಾಯಕ್ಕೆ ಅನೇಕ ಮಾರ್ಗಗಳನ್ನು ಅನುಸರಿಸುತ್ತಾರೆ. ಪಿಗ್ಮಿ, ಚೀಟಿ, ಎಲ್‌ಐಸಿ, ಬ್ಯಾಂಕಿನಲ್ಲಿ ಉಳಿತಾಯ, ತಮ್ಮ ಬಳಿಯೇ ಇಟ್ಟುಕೊಳ್ಳುವುದು-ಇವು ಪ್ರಮುಖವಾದವು. ಇದರಲ್ಲಿ ಪ್ರತಿ ದಿನ ಕಟ್ಟು ಪಿಗ್ಮಿ ಹೆಚ್ಚು ಜನಪ್ರಿಯವಾಗಿರುವುದನ್ನು ನೋಡಬಹುದು. ಆದರೆ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಕೇವಲ ಮಾರುಕಟ್ಟೆಯ ಮಾಹಿತಿದಾರರು ಹೊಂದಿದ್ದಾರೆ. ಬ್ಯಾಂಕಿನಲ್ಲಿ ಯಾಕೆ ಖಾತೆ ಹೊಂದಿಲ್ಲ ಎಂದು ಸಂಚಾರಿ ಮಾರಾಟಗಾರ ಮಾಹಿತಿದಾರರನ್ನು ಕೇಳಿದರೆ, ತಮಗೆ ಅದು ಗೊತ್ತಿಲ್ಲ ಎಂದೂ ಆ ವ್ಯವಹಾರ ತಮಗೆ ಅರ್ಥ ಆಗುವುದಿಲ್ಲವೆಂದು ಹೇಳುತ್ತಾರೆ. ತಾವು ಅನಕ್ಷರಸ್ಥರಾಗಿರುವುದರಿಂದ ಹಿಂಜರಿಕೆಯುಂಟಾಗುವುದೆಂದು ಸಹ ಹೇಳುತ್ತಾರೆ.

ತಮಗೆ ಬರುವ ಅಲ್ಪ ಆದಾಯದಲ್ಲಿಯೇ ಮಾಹಿತಿದಾರರು ವಿವಿಧ ಉದ್ದೇಶಗಳಿಗೆ ಉಳಿತಾಯ ಮಾಡುತ್ತಿರುವರು. ಆದರೆ ಉಳಿತಾಯ ಉದ್ದೇಶಗಳಲ್ಲಿ ಮಾರುಕಟ್ಟೆಯ ಮಾಹಿತಿದಾರರು ಮತ್ತು ಸಂಚಾರಿ ಮಾರಾಟಗಾರ ಮಾಹಿತಿದಾರರಲ್ಲಿ ವ್ಯತ್ಯಾಸವಿರುವುದನ್ನು ನೋಡಬಹುದು. ಮಾರುಕಟದಟೆಯ ಮಾಹಿತಿದಾರರು ಸಾಲ ತೀರಿಸಲು, ಮನೆ ಕಟ್ಟಲು, ಮನೆ ಖರ್ಚಿಗೆ, ಧಾರ್ಮಿಕ ಕಾರಣಗಳಿಗೆ, ಮಕ್ಕಳ ಭವಿಷ್ಯ ತಮ್ಮ ವೃದ್ಧಾಪ್ಯಕ್ಕೆ ಉಳಿತಾಯ ಮಾಡುವರು. ಸುಖಸಾಧನಗಳನ್ನು,ಬಂಗಾರ ಕೊಳ್ಳಲು ಉಳಿತಾಯ ಮಾಡುವುದಿಲ್ಲ ಎಂದು ಮಾರುಕಟ್ಟೆಯ ಮಾಹಿತಿದಾರರು ಹೇಳಿದರೂ ಅವರ ಬಳಿ ತಕ್ಕಮಟ್ಟಿಗೆ ಬಂಗಾರ ಇದೆ. ಎಂದು ಕ್ಷೇತ್ರಕಾರ್ಯದ ಸಮಯದಲ್ಲಿ ಮಾರುಕಟ್ಟೆಯ ಮಾಹಿತಿದಾರರೊಬ್ಬರಿಂದ ತಿಳಿಯಿತು. ಬಹುತೇಕ ಮಾರುಕಟ್ಟೆಯ ಮಾಹಿತಿದಾರರು ಅಂದರೆ, ಶೇಕಡ ೫೬ರಷ್ಟು ಮಾರುಕಟ್ಟೆಯ ಮಾಹಿತಿದಾರರು ತಮ್ಮ ಮಕ್ಕಳ ಭವಿಷ್ಯಕ್ಕೆ ಉಳಿತಾಯ ಮಾಡಿದರೆ, ೫೦ರಷ್ಟು ಸಂಚಾರಿ ಮಾರಾಟಗಾರ ಮಾಹಿತಿದಾರರು ಕುಟುಂಬದಲ್ಲಿರುವ ಬೇರೆ ಬೇರೆ ಸಾಲ ತೀರಿಸಲು ಉಳಿತಾಯ ಮಾಡುವುದಾಗಿ ಹೇಳುತ್ತಾರೆ. ಅಲ್ಲದೆ ಸಂಚಾರಿ ಮಾರಾಟಗಾರರು ಮನೆಕಟ್ಟಲು, ಧಾರ್ಮಿಕ ಕಾರಣಗಳಿವೆ. ಇವುಗಳಿಗೆ ಉಳಿತಾಯ ಮಾಡುವುದಿಲ್ಲ ಎಂದು ಗಮನಿಸಿದರೆ, ಅವರ ಉಳಿತಾಯದ ಉದ್ದೇಶ ಸಾಮಾನ್ಯ ಅಗತ್ಯಗಳನ್ನು ಪೂರೈಸಲು ಮಾತ್ರ ಎಂದು ಸ್ಪಷ್ಟವಾಗುತ್ತದೆ.

ಆದರೆ ಒಂದು ಗಮನಿಸಬೇಕಾದ ವಿಷಯವೆಂದರೆ ಯಾವ ಮಾಹಿತಿದಾರರು ಸಹ ತಮ್ಮ ವ್ಯಾಪಾರದಲ್ಲಿ ಹೆಚ್ಚಿನ ಹಣ ತೊಡಗುಸಲು ಅಥವ ಇರುವ ವ್ಯಾಪಾರವನ್ನು ವಿಸ್ತರಿಸಲು ಹಣ ಉಳಿತಾಯ ಮಾಡುವುದಿಲ್ಲ ಎಂಬುದು. ಇವರು ಉಳಿತಾಯ ಮಾಡುವ ಕಾರಣಗಳನ್ನು ನೋಡಿದರೆ ಸಾಮಾಜಿಕ ಭದ್ರತೆಗೆ ಪ್ರಾಮುಖ್ಯತೆ ನೀಡಿರುವುದು ಸ್ಪಷ್ಟವಾಗುತ್ತದೆ. ಇವರು ಯಾವ ಕಾರಣಕ್ಕೆ ಸಾಲ ಪಡೆಯುವರು ಎಂದು ಕೇಳಿದಾಗ ತಮ್ಮ ಮನೆ ಖರ್ಚು, ಮಕ್ಕಳ ಮದುವೆ, ಆಸ್ಪತ್ರೆ ಇತ್ಯಾದಿಯಾಗಿ ಹೇಳುತ್ತಾರೆ ಅನೌಪಚಾರಿಕ ವಲಯದ ಕೆಲಸಗಾರರು ಸಾಮಾನ್ಯವಾಗಿ ಒಂದು ಸಂಸ್ಥೆ ಅಥವ ಸರ್ಕಾರದ ಸಾಮಾಜಿಕ ಭದ್ರತೆಯ ಪರಿಧಿಯ ಆಚೆ ಇರುವುದರಿಂದ ಇವರು ಹೆಚ್ಚಿಗೆ ಸಾಲವನ್ನು ತಮ್ಮ ಮತ್ತು ತಮ್ಮ ಕುಟುಂಬದ ಸುರಕ್ಷತೆಗೆ ಪಡೆಯುತ್ತಾರೆ ಎಂದು ದೇಬದುಲಾಲ್ (ಕಂಡೀಶನ್ಸ್ ಆಫ್ ಡೀಸೆಂಟ್ ವರ್ಕಿಂಗ್ ಲೈಫ್ ಆಫ್ ಸ್ವ್ರೀಟ್ ವೆಂಡರ್ಸ ಇನ್ ಮುಂಬೈ WWW.ilo.org/public/english/condtrav/pdf/dwpaper27c.pdf, ಜನವರಿ ೧೬, ೨೦೧೦ರಂದು ನೋಡಿದ್ದು) ಅವರ ಅಧ್ಯಯನವೂ ತಿಳಿಸುತ್ತದೆ.

ಮಾಹಿತಿದಾರರ ಮನೆಯಲ್ಲಿ ಯಾವ ಬಾಬ್ತಿಗೆ ಹೆಚ್ಚಿನ ಹಣ ಖರ್ಚಾಗುತ್ತದೆ ಎಂದು ಕೇಳಿದಾಗ ಎರಡೂ ಗುಂಪಿನಲ್ಲಿ ಆಹಾರಕ್ಕೆ ಹೆಚ್ಚಿನ ಹಣ ಖರ್ಚಾಗುತ್ತದೆ ಎಂದು ಹೇಳಿದರು. ಮಾರುಕಟ್ಟೆಯ ಮಾಹಿತಿದಾರರಿಗೆ ಬಟ್ಟೆ, ಆರೋಗ್ಯ, ಧಾರ್ಮಿಕ-ದೇವರ ಪೂಜೆ, ಒಂದೆರಡು ಪ್ರಮುಖ ದೇವಸ್ಥಾನಗಳಿಗೆ ವರ್ಷದಲ್ಲಿ ಭೇಟಿನೀಡುವುದು, ಹೀಗೆ ಅನೇಕ ಬಾಬ್ತುಗಳಿಗೆ ಆದರೆ ಸಂಚಾರಿ ಮಾರಾಟಗಾರರಿಗೆ ಈ ಖರ್ಚುಗಳು ಇದ್ದರೂ ಅವು ಅವರಿಗೆ ಅಷ್ಟು ಪ್ರಮುಖ ಎಂದು ಅನಿಸಿರಲಿಕ್ಕಿಲ್ಲ. ಅಥವ ಆಹಾರಕ್ಕೆ ಖರ್ಚು ಅವು ಅವರಿಗೆ ಅಷ್ಟು ಪ್ರಮುಖ ಎಂದು ಅನಿಸಿರಲಿಕ್ಕಿಲ್ಲ ಅಥವಾ ಆಹಾರಕ್ಕೆ ಖರ್ಚು ಮಾಡುವ ಪ್ರಮಾಣದಲ್ಲಿ ಬೇರೆಯದಕ್ಕೆ ಖರ್ಚು ಮಾಡುವುದಿಲ್ಲ. ಅಲ್ಲದೇ ಇವರು ಯಾರೂ ಧರ್ಮಸ್ಥಳ ಪಂಡರಾಪುರ ಮುಂತಾದ ದೂರದ ದೇವಸ್ಥನಗಳಿಗೆ ಹೋಗುವುದಿಲ್ಲ.

ಮನೆಯಲ್ಲಿ ಮಾಹಿತಿದಾರರ ಸ್ಥಾನ

ಇಷ್ಟೆಲ್ಲ ದುಡಿಯುವ ಮಹಿಳೆ, ತನ್ನ ಮನೆಯಲ್ಲಿ ಯಾವ ಸ್ಥಾನವನ್ನು ಹೊಂದಿದ್ದಾಳೆ ಮನೆಯ ಯಾವ ಯಾವ ತೀರ್ಮಾನಗಳನ್ನು ತಾನು ತೆಗೆದುಕೊಳ್ಳಲಉ ಸ್ವತಂತ್ರಳು ಎಂದು ವಿಚಾರಿಸಲಾಯಿತು.

ಮಾಹಿತಿದಾರರ ಮಾಹಿತಿಯ ಆಧಾರದ ಮೇಲೆ ಶೇಕಡ ೮೭ ಮಾರುಕಟ್ಟೆಯ ಮಾಹಿತಿದಾರರು, ಹಾಗೂ ಶೇಕಡ ೭೫ ಸಂಚಾರಿ ಮಾರಾಟಗಾರ ಮಹಿಳೆಯರ ಮನೆಗಳಲ್ಲಿ ಇವರ ನಿರ್ಧಾರಗಳಿಗೆ ಮನೆಗಳಲ್ಲಿ ಮಾನ್ಯತೆ ಇದೆ ಎಂದು ತಿಳಿಯುತ್ತದೆ. ೧೩ ಮಾರುಕಟ್ಟೆಯ ಮಾಹಿತಿದಾರರ ಗಂಡಂದಿರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಸಂಚಾರಿ ಮಾರಾಟಗಾರ ಮಾಹಿತಿದಾರರ ಮನೆಗಳಲ್ಲಿ ಎಲ್ಲಿಯೂ ಗಂಡ ಒಬ್ಬರೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಉತ್ತರ ದೊರೆಕಿದೆ. ಶೇಕಡ ೨೫ ಮಾಹಿತಿದಾರರು ಎಲ್ಲ ವಿಷಯಗಳನ್ನು ಮಗ,ಸೊಸೆ, ಮಕ್ಕಳು-ಹೀಗೆ ಇವರ ಮೇಲೆ ಬಿಟ್ಟಿದ್ದಾರೆ. ಆದರೆ, ಮಕ್ಕಳು ದೊಡ್ಡವರಾಗುವವರೆಗೆ ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು. ೨೫ ಸಂಚಾರಿ ಮಾಹಿತಿದಾರರು ಮಕ್ಕಳನ್ನು ಅವಲಂಬಿಸಿದ್ದಾರೆ. ಇದಕ್ಕೆ ವಯಸ್ಸು ಕೂಡ ಒಂದು ಕಾರಣವಿರಬಹುದು. ಇವರೆಲ್ಲರೂ ಎಪ್ಪತ್ತು ವರ್ಷಗಳನ್ನು ದಾಟಿದವರಾಗಿದ್ದಾರೆ.

ಹೀಗೆ ನಮ್ಮ ಮಾಹಿತಿದಾರರು ತಮ್ಮ ಮನೆಯಲ್ಲಿ ವಸ್ತುಗಳನ್ನು ಕೊಳ್ಳಲು ಯಾರ ನಿರ್ಧಾರ ಮುಖ್ಯ ಎಂಬುದನ್ನು ಹೇಳಿರುವರು. ನಿರ್ಧಾರ ತೆಗೆದುಕೊಳ್ಳಲು ಇವರು ಭಾಗವಹಿಸುವ ವಿಷಯಗಳು. ಯಾವುವು ಎಂದು ನೋಡಿದಾಗ ಆಹಾರ ಬಟ್ಟೆ ಖರೀದಿ (ಶೇಕಡ ೫೦), ಮಕ್ಕಳ ಶಿಕ್ಷಣ (ಶೇಕಡ ೩೦) ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳು (ಶೇಕಡ ೧೩), ಆಸ್ಪತ್ರೆಗೆ ಹೋಗಲು (ಶೇಕಡ೧೩)- ಹೀಗೆ ಮಾರುಕಟ್ಟೆಯ ಮಾರಾಟಗಾರರು ಬೇರೆ ಬೇರೆ ವಿಷಯಗಳಲ್ಲಿ ತಮ್ಮ ನಿರ್ಧಾರ ತಿಳಿಸಲು ಭಾಗವಹಿಸುತ್ತಾರೆ. ಆದರೆ, ಸಂಚಾರಿ ವ್ಯಾಪಾರಸ್ಥರು ಮನೆಗೆ ಸಾಮಾನು ಖರೀದಿ ಆಹಾರ ತಯಾರಿಕೆ ಮತ್ತು ಆಹಾರ ಪದಾರ್ಥಗಳ ಖರೀದಿ (ಶೇಕಡ ೫೦), ಬಂಗಾರ ಖರೀದಿ (ಶೇಕಡ ೨೫) ಈ ವಿಷಯಗಳಲ್ಲಿ ಮಾತ್ರ ತಮ್ಮ ನಿರ್ಧಾರಗಳನ್ನು ತಿಳಿಸುತ್ತಾರೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯ ಮಾಹಿತಿದಾರರು ಹೆಚ್ಚು ಸ್ವತಂತ್ರರೆಂದು ಕಂಡುಬರುತ್ತದೆ.