ಮಾರುಕಟ್ಟೆ

ಮಾರುಕಟ್ಟೆಯಲ್ಲಿ ಒಂದು ಸ್ಥಳದಲ್ಲಿ ಕುಳಿತು ವ್ಯಾಪಾರ ಮಾಡಬೇಕೆಂದರೆ ಅಲ್ಲಿ ಜಾಗ ದೊರೆಯಬೇಕು ಬಹುತೇಕ ವ್ಯಾಪಾರಸ್ಥರಿಗೆ ಮಾರುಕಟ್ಟೆ ನಿರ್ಮಾಣವಾದಾಗ ಜಾಗ ನಿಗದಿಯಾಗಿದೆ. ಅವರು ಕೂರುವ ಜಾಗಕ್ಕೆ ನಿಗದಿಯಾದ ಜಕಾತಿಯನ್ನು ದಿನವೂ ಮುನ್ಸಿಪಾಲಿಟಿಗೆ ಕಟ್ಟಬೇಕಾಗುತ್ತದೆ. ಕಟ್ಟೆ ಇಲ್ಲದ ಇದ್ದವರು ಮಾರುಕಟ್ಟೆಯಲ್ಲಿ ಒಂದು ಮೂಲೆಯಲ್ಲಿ ತಮ್ಮ ವ್ಯಾಪಾರ ಮಾಡುತ್ತಿದ್ದರೆ,ಆ ಸ್ಥಳಕ್ಕೂ ಜಕಾತಿಯನ್ನು ನೀಡುತ್ತಾರೆ. ಆದರೆ ಸಂಚಾರಿ ಮಾರಾಟಗಾರರು ಯಾವ ಜಕಾತಿಯನ್ನು ಕಟ್ಟಬೇಕಾಗಿಲ್ಲ.

ಮೊದಲು ತಿಳಿಸಿದಂತೆ ಎಪಿಎಂಸಿಗೆ ತರಕಾರಿ ಬರುವುದು ಬೆಳಗಿನ ಜಾವ ಮಾತ್ರ ಆರು-ಏಳು ಗಂಟೆಯವರೆಗೆ ಅಲ್ಲಿ ಬಿರುಸಿನ ವ್ಯಾಪಾರ ಆಗುತ್ತದೆ. ಅಷ್ಟರೊಳಗೆ ಅಲ್ಲಿ ಹೋದರೆ ತಾಜಾ ತರಕಾರಿ ತರಬಹುದು. ಬಿಸಿಲೇರುತ್ತಿದ್ದಂತೆ ತರಕಾರಿ ತಾಜಾತನ ಕಳೆದುಕೊಳ್ಳುವುದರಿಂದ ಸಗಟು ಮಾರುಕಟ್ಟೆಗೆ ಬೆಳಗಿನ ಜಾವವೇ ಹೋಗಬೇಕು. ಮಾರುಕಟ್ಟೆಯ ಮಾಹಿತಿದಾರರೆಲ್ಲರೂ ತಾವೇ ತರಕಾರಿ ಕೊಳ್ಳಲು ಅಲ್ಲಿ ಹೋಗುವುದಿಲ್ಲ. ಶೇಕಡ ೭೦ ಮಾಹಿತಿದಾರರು ಸಗಟು ಮಾರುಕಟ್ಟೆಗೆ ತಾವೆ ಹೋದರೆ, ಶೇಕಡ ೩೦ ಮಾಹಿತಿದಾರರು ಸಗಟು ಮಾರುಕಟ್ಟೆಗೆ ಹೋಗುವುದಿಲ್ಲ. ಮನೆಗೆಲಸವನ್ನು ಮಾಡಬೇಕಾಗಿರುವುದರಿಂದ ಬೆಳಗಿನ ಜಾವ ಹೋಗಲಾಗುವುದಿಲ್ಲ ಎಂದು ಹೇಳುತ್ತಾರೆ ಅವರ ಬದಲು ಅವರ ಗಂಡ ಅಥವ ಅದೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವ ಮನೆಯ ಇತರ ಸದಸ್ಯರು ಹೋಗುತ್ತಾರೆ. ಆದರೆ ತಾಜಾ ತರಕಾರಿ ತರಲು ಸಂಚಾರಿ ಮಾಹಿತಿದಾರರೆಲ್ಲರೂ ಬೆಳಿಗ್ಗೆ ಐದು ಗಂಟೆಗೆ ಮಾರುಕಟ್ಟೆಗೆ ಕಾಲು ನಡಿಗೆಯಲ್ಲಿ ಖುದ್ದಾಗಿ ಹೋಗುತ್ತಾರೆ. ಅವರಿಗೆ ಮನೆಯಿಂದ ಸಹಾಯ ದೊರೆಯುವುದಿಲ್ಲ. ಮನೆಗೆಲಸವನ್ನು ತಾವು ನಂತರ ಮಾಡಿಕೊಳ್ಳುವುದಾಗಿ, ಮತ್ತು ಕೆಲವರು ತಮ್ಮ ಮನೆಯಲ್ಲಿ ತಮ್ಮ ಹೆಣ್ಣುಮಕ್ಕಳು, ಸೊಸೆ-ಮಾಡುತ್ತಾರೆ ಎಂದು ಹೇಳುತ್ತಾರೆ.

ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಮಾಹಿತಿದಾರರಿಗೆ ತರಕಾರಿ ವ್ಯಾಪಾರದಲ್ಲಿ ಬಂಡವಾಳ ತೊಡಗಿಸುವಿಕೆ ಸಂಚಾರಿ ಮಾಹಿತಿದಾರರಿಗೆ ಹೋಲಿಸಿದರೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ತರಕಾರಿಯ ಪ್ರಮಾಣವೂ ಹೆಚ್ಚಿರುತ್ತದೆ. ಆದ್ದರಿಂದ ಅಷ್ಟೊಂದು ತರಕಾರಿಯನ್ನು ಅವರು ಒಬ್ಬರೇ ಹೋಗಿ ತರುವುದು ಕಷ್ಟವಾಗುತ್ತದೆಎಂದು ಊಹಿಸಬಹುದಾದರೂ ಅನೇಕ ಮಾಹಿತಿದಾರರು ತಾವೇ ಖುದ್ದಾಗಿ ಸಗಟು ಮಾರುಕಟ್ಟೆಗೆ ಹೋಗುವುದಾಗಿ ತಿಳಿಸಿದರು.

ಸಗಟು ಮಾರುಕಟ್ಟೆಯಲ್ಲಿ ತರಕಾರಿಯನ್ನು ಕೊಳ್ಳಲು ಅದರ ಬೆಲೆ, ಬೇಡಿಕೆ ಇವು ಪ್ರಮುಖ ಪಾತ್ರ ವಹಿಸುತ್ತವೆ. ಮಾರುಕಟ್ಟೆಯ ಮಾಹಿತಿದಾರರು ಬೆಲೆಯ ಜೊತೆಗೆ ಯಾವ ತರಕಾರಿ ಹೆಚ್ಚು ಮಾರಾಟವಾಗುವುದೋ ಆ ತರಕಾರಿಯನ್ನು ಕೊಳ್ಳುತ್ತಾರೆ. ಸಂಚಾರಿ ಮಾರಾಟಗಾರರು ಸಹ ಹೀಗೆ ಬೆಲೆ ಮತ್ತು ಬೇಡಿಕೆ ಆಧರಿಸಿ ತರಕಾರಿ ಕೊಂಡರೂ ಅವರು ಪ್ರತಿದಿನ ಬೇರೆ ಬೇರೆ ತರಕಾರಿ ಕೊಳ್ಳುತ್ತಾರೆ. ಅವರ ಖಾಯಂ ಮನೆಯ ಗ್ರಾಹಕರು ನಿರ್ದಿಷ್ಟ ತರಕಾರಿಯನ್ನು ಹೇಳಿ ತರಿಸಿಕೊಳ್ಳುತ್ತಾರೆ. ಅಲ್ಲದೆ ಪ್ರತಿ ದಿನ ಒಂದೇ ಪ್ರದೇಶಕ್ಕೆ ಹೋಗುವುದರಿಂದ ಹಿಂದಿನ ದಿನ ಮಾರಿದ ತರಕಾರಿಯನ್ನು ಸಾಮಾನ್ಯವಾಗಿ ಮರುದಿನ ಮಾರುವುದಿಲ್ಲ. ಮಾರುಕಟ್ಟೆಯ ಮಾಹಿತಿದಾರರಲ್ಲಿ ಹೀಗೆ ಗ್ರಾಹಕರು ಬೇಡಿ ಇಟ್ಟು ತರಕಾರಿ ಕೊಳ್ಳುವುದು ಅಪರೂಪ ಅಥವ ಇಲ್ಲವೇ ಇಲ್ಲ ಎನ್ನಬಹುದು. ಗ್ರಾಹಕರಿಗೆ ಬೇಕಾದ ತರಕಾರಿ ಒಬ್ಬ ವ್ಯಾಪಾರಸ್ಥರ ಬಳಿ ಇಲ್ಲದಿದ್ದರೆ, ಆ ತರಕಾರಿ ಇರುವ ಬೇರೆ ವ್ಯಾಪಾರಸ್ಥನ ಬಳಿ ಹೋಗುತ್ತಾರೆ. ಅಲ್ಲಿ ಅವರಿಗೆ ಅಂಗಡಿಗಳ ಆಯ್ಕೆ ಇರುತ್ತದೆ. ’ ಸಂಚಾರಿ ಮಾರಾಟಗಾರ ವ್ಯಾಪಾರಸ್ಥರು ಗ್ರಾಹಕರಿಗೆ ಮಾರುಕಟ್ಟೆಗೆ ಹೋಗುವ ಆಯ್ಕೆ ಇದ್ದರೂ ಮನೆಗೇ ಬಂದು ಮಾರುವ ಇವರು ಹೆಚ್ಚು ಅನಕೂಲವಾದ್ದರಿಂದ ಇವರ ಬಳಿಯೇ ಬೇಡಿಕೆ ಸಲ್ಲಿಸುತ್ತಾರೆ. ಇದು ಗ್ರಾಹಕರ ಮತ್ತು ವ್ಯಾಪಾರಸ್ಥರ ನಡುವೆ ಇರುವ ಸಂಬಂಧವನ್ನು ತಿಳಿಸುತ್ತದೆ.

ಮಾರಾಟ ಚಟುವಟಿಕೆಯ ಅವಧಿ

ಮಾರುಕಟ್ಟೆಯ ಮಾಹಿತಿದಾರರು ಸಾವಿರ ರೂಪಾಯಿಗಿಂತ ಹೆಚ್ಚು ಬಂಡವಾಳ ಹೂಡುತ್ತಾರೆ. ಅದರಂತೆ ಅವರು ಮಾರಾಟಕ್ಕೆ ಕೂರುವ ಅವಧಿಯೂ ಹೆಚ್ಚು ಸಂಚಾರಿ ಮಾರಾಟಗಾರರು ಕಡಿಮೆ ಬಂಡವಾಳ ಹೂಡುತ್ತಾರೆ. ಕಡಿಮೆ ಪ್ರಮಾಣದಲ್ಲಿ ತರಕಾರಿ ಮಾರುವ ಇವರು ದಿನದಲ್ಲಿ ಮೂರರಿಂದ ಎಂಟು ತಾಸುಗಳವರೆಗೆ ವ್ಯಾಪಾರ ಮಾಡುತ್ತಾರೆ. ಅದೂ ದಿನದ ಎರಡು ಹೊತ್ತಿನಲ್ಲಿ ಮಾರಾಟಕ್ಕೆ ತೆರಳುತ್ತಾರೆ. ಬೆಳಿಗ್ಗೆ, ಬಿಸಿಲೇರುವವರೆಗೆ ಕೆಲವು ತಾಸುಗಳು ಮತ್ತು ಸಂಜೆ ಬಿಸಿಲು ಕಡಿಮೆಯಾದ ನಂತರ ಮತ್ತೆ ಕೆಲ ಸಮಯ ವ್ಯಾಪಾರ ಮಾಡುತ್ತಾರೆ. ಮಾರುಕಟ್ಟೆಯ ಮಾಹಿತಿದಾರರಂತೆ ದಿನವಿಡೀ ವ್ಯಾಪಾರಕ್ಕೆ ಎಂದೆಡೆ ಕೂರುವಂತಿಲ್ಲ. ಉರು ಬಿಸಿಲಿನಲ್ಲಿ ಗಾಲಿ,ಮಳೆ, ಚಳಿ ಎಲ್ಲದಕ್ಕೂ ಮೈಯೊಡ್ಡಿ ತರಕಾರು ಮಾರಾಟ ಮಾಡುತ್ತಾರೆ. ಆದ್ದರಿಂದ ಹೆಚ್ಚು ತಾಸುಗಳಲ್ಲಿ ತರಕಾರಿಯ ಭಾರ ಹೊತ್ತು ತಿರುಗುವುದು ಕಷ್ಟವಾಗುತ್ತದೆ. ಅಲ್ಲದೆ ತರಕಾರಿಯ ಪ್ರಮಾಣವೂ ಕಡಿಮೆಯಾದ್ದರಿಂದ ಹೆಚ್ಚು ತಾಸುಗಳ ಕೆಲಸ ಮಾಡುವುದು ಬೇಕಾಗುವುದಿಲ್ಲ. ಆದರೆ ಮಾರುಕಟ್ಟೆಯ ಮಾಹಿತಿದಾರರುಯ ಕನಿಷ್ಟಿ ಸುಮಾರು ಹತ್ತು ತಾಸುಗಳಿಂದ ಹದಿನಾಲ್ಕು ತಾಸುಗಳವರೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಿ ನುಡಿಯುತ್ತಾರೆ. ಆದರೆ, ಶೇಕಡ ೨೫ರಷ್ಟು ಸಂಚಾರಿ ಮಾರಾಟಗಾರ ಮಾಹಿತಿದಾರರಿಗೆ ಇದು ಒಂದೇ ಮುಖ್ಯ ಕೆಲಸವಲ್ಲ. ಅವರು ಬೆಳಿಗ್ಗೆ ಮಾತ್ರ, ಸುಮಾರು ಮೂರು ತಾಸಉ ತರಕಾರಿ/ಸೊಪ್ಪು ಮಾರಾಟ ಮಾಡಿ ನಂತರ ಬೇರೆಯವರ ಮನೆಗೆ ಕೆಲಸಕ್ಕೆ ಹೋಗುತ್ತಾರೆ.

ಕೌಟುಂಬಿಕ ನೆರವು

ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮಾಹಿತಿದಾರರಲ್ಲಿ ಶೇಕಡ ೭೦ ಮಹಿಳೆಯರು ಮಾರುಕಟ್ಟೆಯಲ್ಲಿ ತಮ್ಮಸಂಬಂಧಿಕರು ಇರುವುದಾಗಿ ಹೇಳುತ್ತಾರೆ. ಇವರ ಮನೆಯವರು ಅನೇಕ ವರ್ಷಗಳಿಂದ ಇದೇ ವ್ಯಾಪಾರವನ್ನು ಮಾಡುತ್ತಿರುವುದರಿಂದ, ಮನೆ ಸಹೋದರ ಸಹೋದರಿಯರು, ಚಿಕ್ಕಪ್ಪ, ಸೋದರಮಾವ- ಹೀಗೆ ಸುಮಾರು ಸಂಬಂಧಿಕರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದು ಕಾಣುತ್ತದೆ. ಮಾರುಕಟ್ಟೆಯಲ್ಲಿ ಹೀಗೆ ಸಂಬಂಧಿಕರು ಇರುವುದರಿಂದ ಇವರ ವ್ಯಾಪಾರಕ್ಕೆ ಸಹಾಯವಾಗುತ್ತದೆ. ಮಾಹಿತಿದಾರರು ಸಗಟು ಮಾರುಕಟ್ಟೆಗೆ ಹೋಗಲಾಗುವುದಿಲ್ಲ ಎಂದರೆ ಕುಟುಂಬದವರು ತಮಗೆ ತರಕಾರಿ ತರುವಾಗ ಇವರಿಗೂ ಕೊಂಡು ತರುತ್ತಾರೆ. ಅಲ್ಲದೆ ಇವರಿಗೆ ಯಾವುದಾದರೂ ತರಕಾರಿ ಕಡಿಮೆಯಾದರೆ ಕೊಡುವುದು ಅಥವ ಮಾಹಿತಿದಾರರು ವ್ಯಾಪಾರಕ್ಕೆ ಬರದಿದ್ದಾಗ ಅವರ ಉಳಿದ ತರಕಾರಿಯನ್ನು ಮಾರುವುದು- ಹೀಗೆ ಅವರಿಂದ ಸಹಾಯ ದೊರೆಯುತ್ತದೆ. ಸಂಚಾರಿ ಮಾರಾಟಗಾರ ಮಾಹಿತಿದಾರರು ತಾವೇ ಮೊದಲ ಬಾರಿಗೆ ಈ ಕೆಲಸವನ್ನು ತಮ್ಮ ಕುಟುಂಬದಲ್ಲಿ ಪ್ರಾರಂಭಿಸಿರುವುದರಿಂದ ಕುಟುಂಬದವರು ಯಾರೂ ಈ ವ್ಯಾಪಾರದಲ್ಲಿ ತೊಡಗುವುದಿಲ್ಲ.

ಗ್ರಾಹಕ ಸಂಬಂಧ

ವ್ಯಾಪಾರ ಮಾಡುವ ರೀತಿ ಬೇರೆಯದಾಗಿರುವಂತೆ ಮಾರುಕಟ್ಟೆಯವರ ಮತ್ತು ಸಂಚಾರಿ ಮಾರಾಟಗಾರರು ಗ್ರಾಹಕರಲ್ಲಿಯೂ ವ್ಯತ್ಯಾಸ ಕಾಣುತ್ತದೆ. ಸಂಚಾರಿ ಮಾಹಿತಿದಾರರೆಲ್ಲರ ಗ್ರಾಹಕರು ಮನೆಗಳಾಗಿವೆ. ಇವರಿಗೆ ಹೋಟೇಲ್ ಇತ್ಯಾದಿ ಯಾವ ಗ್ರಾಹಕರಲ್ಲ. ಆದರೆ ಮಾರುಕಟ್ಟೆಯ ಮಾಹಿತಿದಾರರಿಗೆ ಮನೆಗಳೊಂದಿಗೆ, ಚಿಕ್ಕ ಹೋಟೆಲಗಳು, ಜ್ಯೂಸ್ ಅಂಗಡಿಯವರು, ಸಂಚಾರಿ ಮಾರಾಟಗಾರರು ಹೀಗೆ ಬೇರೆ ಬೇರೆ ಗ್ರಾಹಕರಿದ್ದಾರೆ. ಆದರೆ ೧೦ ಮಾರುಕಟ್ಟೆ ಮಾಹಿತಿದಾರರಿಗೆ ಯಾವ ನಿಗದಿತ ಗ್ರಾಹಕರು ಇಲ್ಲ ಬಹುಶಃ ಮಾರುಕಟ್ಟೆಯಲ್ಲಿ ಅನೇಕ ವ್ಯಾಪಾರಸ್ಥರು ಇರುವುದರಿಂದ ಗ್ರಾಹಕರ ಆಯ್ಕೆ ಹೆಚ್ಚಾಗಿರುತ್ತದೆ.

ಸಂಚಾರಿ ಮಾರಾಠಗಾರ ಮಾಹಿತಿದಾರರು ತಮ್ಮ ಗ್ರಾಹಕರು ಮನೆಯವರಾದ್ದರಿಂದ ಅವರಿಗೆ ತರಕಾರಿಯನ್ನು ಉದ್ರಿ (ಸಾಲ) ಕೊಡುತ್ತಾರೆ. ಅಲ್ಲದೆ ಖಾಯಂ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ತರಕಾರಿ ಮಾರುತ್ತಾರೆ. ತರಕಾರಿಯನ್ನು ಕೊಂಡು ಹಣವನ್ನು ತಿಂಗಳಿಗೆ ಒಮ್ಮೆ ಕೊಡುವ ಗ್ರಾಹಕರೂ ಇದ್ದಾರೆ. ಆದ್ದರಿಂದ ಒಂದು ದಿನದ ವ್ಯಾಪಾರದಲ್ಲಿ ಸ್ವಲ್ಪ ಹಣ ಉದ್ರಿಯ ರೂಪದಲ್ಲಿ ಇರುವುದರಿಂದ ಒಂದು ದಿನಕ್ಕೆ ತಮ್ಮ ಲಾಭ ಇಂತಿಷ್ಟೇ ಎಂದು ಹೇಳಲಾಗುವುದಿಲ್ಲ ಎಂದು ಇವರು ಹೇಳುತ್ತಾರೆ. ಕೆಳಗಿನ ಕೋಷ್ಟಕವು ಮಾಹಿತಿದಾರರು ಹೊಂದಿರುವ ಖಾಯಂ ಗ್ರಾಹಕರ ಬಗ್ಗೆ ಚಿತ್ರಣ ನೀಡುತ್ತದೆ.

ಕೋಷ್ಟಕ ೩ – ಖಾಯಂ ಗ್ರಾಹಕರು

ಕ್ರ. ಸಂ. ಖಾಯಂ ಗ್ರಾಹಕರು ಮಾರುಕಟ್ಟೆ ಮಾಹಿತಿದಾರರು ಸಂಚಾರಿ ಮಾಹಿತಿದಾರರು
ಮನೆಗಳು ೭೦  
೨. ಚಿಕ್ಕ ಹೋಟೆಲ್ ೧೦  
೩. ಇತರೆ-ಜ್ಯೂಸ್ ಅಂಗಡಿ ಹೊತ್ತು ಮೇಲೆ ಹೊತ್ತು ಮಾರುವವರು ೧೦  
೪. ಯಾವುದು ಇಲ್ಲ ೧೦  
ಒಟ್ಟು ೧೦೦ ೧೦೦

ಗ್ರಾಹಕರೆನ್ನೇ ಅವಲಂಬಿಸಿರುವ ಈ ವ್ಯಾಪಾರದಲ್ಲಿ ಗ್ರಾಹಕರು ತಮ್ಮ ಬಳಿ ಬರುವಂತೆ ಮಾಡುವುದು ಮುಖ್ಯವಾಗುತ್ತದೆ. ಮಾರುಕಟ್ಟೆಯ ಮಾಹಿತಿದಾರರು ಗ್ರಾಹಕರನ್ನು ಕರೆಯುವ ಮೂಲಕ, ತರಕಾರಿಯನ್ನು ಚೌಕಾಸಿ ಮಾಡಿ ಕಡಿಮೆ ಬೆಲೆಗೆ ನೀಡುವ ಮೂಲಕ, ಅಂಗಡಿಯಲ್ಲಿ ತರಕಾರಿಯನ್ನು ಆಕರ್ಷಕವಾಗಿ ಜೋಡಿಸಿಡುವ ಮೂಲಕ ಹಾಗೂ ಹಳೆ ಪರಿಚಯಸ್ಥರಿಗೆ ತರಕಾರಿಯನ್ನು ಉದ್ರಿ ನೀಡುವ ಮೂಲಕ ಗ್ರಾಹಕರನ್ನು ಉಳಿಸಿಕೊಳ್ಳುತ್ತಾರೆ. ಸಂಚಾರಿ ಮಾರಾಟಗಾರರು ಕೂಡ ಗ್ರಾಹಕರನ್ನು ಕರೆಯುವ ಮೂಲಕ ತಮ್ಮ ಕಡೆ ಸೆಳೆದರೂ ಶೇಕಡ ೭೫ರಷ್ಟು ಮಾಹಿತಿದಾರರು ಕಡಿಮೆ ಬೆಲೆಗೆ ತರಕಾರಿ ಮಾರುತ್ತಾರೆ. ಅಲ್ಲದೆ ಎಲ್ಲರೂ ಮನೆಗಳಿಗೆ ಹೋಗುವುದರಿಂದ ಗ್ರಾಹಕರಿಗೆ ಉದ್ರಿ ಕೊಡುತ್ತಾರೆ. ಮನೆಯ ಗ್ರಾಹಕರೊಂದಿಗೆ ಇವರು ಸಮಾಧಾನದಿಂದ ವ್ಯವಹರಿಸುವುದು ಸಹ ಇವರಿಗೆ ಅನಕೂಲವಾಗಿದೆ. ಇವರ ಪ್ರಮುಖ ಗ್ರಾಹಕರೇ ಮನೆಗಳಾದ್ದರಿಂದ ಸ್ವಲ್ಪ ಉದಾಸೀನವಾಗಿ ಮಾತನಾಡಿದರೂ ಗ್ರಾಹಕರನ್ನು ಕಳೆದುಕೊಲ್ಳಬೇಕಾಗುತ್ತದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ ಗ್ರಾಹಕರನ್ನು ಕಳೆದುಕೊಂಡಷ್ಟೂ ಹೆಚ್ಚು ಸಮಯ ತರಕಾರಿ ಹೊತ್ತು ರಸ್ತೆ ತಿರುಗಬೇಕಾದ್ದರಿಂದ, ಈ ವಿಷಯಗಲದಲಿ ತಾವು ಹುಷಾರಾಗಿರಬೇಕೆಂದು ಇವರು ಹೇಳುತ್ತಾರೆ.

ಬಂಡವಾಳ ಹೂಡಿಕೆ ಮತ್ತು ಲಾಭ

ಮಾರುಕಟ್ಟೆಯ ಮತ್ತು ಸಂಚಾರಿ ಮಾಹಿತಿದಾರರು ಒಂದು ದಿನಕ್ಕೆ ತಮ್ಮ ವ್ಯಾಪಾರದಲ್ಲಿ ಹೂಡುವ ಬಂಡವಾಳದ ಮೊತ್ತದಲ್ಲಿ ವ್ಯತ್ಯಾಸವಾಗುತ್ತದೆ. ಒಂದು ನಿಗದಿತ ಸ್ಥಳ ಹೊಂದಿರುವ ಮಾರುಕಟ್ಟೆಯ ವ್ಯಾಪಾರಸ್ಥರು ಐದುನೂರು ರೂಪಾಯಿಂದ ಸಾವಿರ ರೂಪಾಯಿವರೆಗೆ, ಒಂದು ಸಾವಿರದ ಐದುನೂರು ಹೀಗೆ ಸುಮಾರು ಮೂರು ಸಾವಿರದ ಐದುನೂರು ರೂಪಾಯಿಗಳ ಬೆಲೆಯಷ್ಟು ತರಕಾರಿ ಕೊಳ್ಳುತ್ತಾರೆ. ದಿನಕ್ಕೆ ಐದುನೂರು ರೂಪಾಯಿ ತೊಡಗಿಸುವವರು ಸೊಪ್ಪು ಮಾರುವ ಕೆಲವು ಮಾಹಿತಿದಾರರು. (ಸೊಪ್ಪಿನಲ್ಲಿ ಐದುನೂರು ರೂಪಾಯಿಗೂ ಹೆಚ್ಚು ಹಣ ಹೂಡುವವರೂ ಇದ್ದಾರೆ.) ಆದರೆ ಸಂಚಾರಿ ಮಾರಾಟಗಾರ ಮಾಹಿತಿದಾರರೆಲ್ಲರೂ ಐದುನೂರು ರೂಪಾಯಿಗಳ ಒಳಗೆ ಮಾತ್ರ ಹಣ ತೊಡಗಿಸಲು ಸಾಧ್ಯ. ಹೆಚ್ಚಿನ ಬಂಡವಾಳದ ಕೊರತೆ ಒಂದು ಕಾರಣವಾದರೆ ಮತ್ತೊಂದು ಪ್ರಮುಖ ಕಾರಣ ತರಕಾರಿಯನ್ನು ಹೊತ್ತು ತಿರುಗಬೇಕಾದುದು. ಎಪ್ಪತ್ತು ವರ್ಷದ ಒಬ್ಬ ಮಾಹಿತಿದಾರರು ಸುಮಾರು ೩೦ ಕೇಜಿಯ ಬುಟ್ಟಿಯನ್ನು ತಲೆ ಮೇಲೆ ಹೊರುವುದಾಗಿ ಹೇಳುತ್ತಾರೆ. ತಾವು ಮೊದಲು ವ್ಯಾಪಾರ ಪ್ರಾರಂಭಿಸಿದಾಗ ಇದಕ್ಕೂ ಹೆಚ್ಚಿನ ಭಾರ ಹೊರುತ್ತಿದ್ದೇನೆ ಎಂದು ಹೇಳುತ್ತಾರೆ. ಸರಾಸರಿ ಸುಮರು ಮೂವತ್ತು ಕೇಜಿಗಳಷ್ಟು ತರಕಾರಿಯನ್ನು ಎರಡು ಮೂರು ಕೇಜಿಗಳಷ್ಟು ಕೊಂಡು ಮಾರುತ್ತಾರೆ ಮಾರುಕಟ್ಟೆಯ ಮಾಹಿತಿದರರು ಇಷ್ಟು ಸಣ್ಣ ಪ್ರಮಾಣದಲ್ಲಿ ತರಕಾರಿ ಮಾರುವುದಿಲ್ಲ. ಅವರ ತರಕಾರಿಗಳು ಎಲ್ಲವೂ ಐದು ಕೇಜಿ ಮೇಲ್ಪಟ್ಟು ಇರುತ್ತದೆ.

ಬಂಡವಾಳ ಹೂಡಿಕೆಯ ಪ್ರಮಾಣ ಬಂಡವಾಳ ಪಡೆಯುವ ಸಾಮರ್ಥ್ಯದೊಂದಿಗೆ, ತರಕಾರಿಯನ್ನು ಮಾರಾಟ ಮಾಡುವ ಸ್ಥಳವನ್ನು ಸಹ ಅವಲಂಬಿಸಿದೆ ಎಂದು ಇದರಿಂದ ತಿಳಿಯುತ್ತದೆ.

ದಿನದಲ್ಲಿ ಐದು ನೂರರಿಂದ ಮೂರು ಸಾವಿರದ ಐದುನೂರು ರೂಪಾಯಿಯವರೆಗೆ ಹಣ ತೊಡಗಿಸುವ ಮಾಹಿತಿದಾರರು ದಿನದಲ್ಲಿ ಎಷ್ಟು ಲಾಭ ಗಳಿಸುತ್ತಾರೆ ಎಂದು ನೋಡಿದರೆ ಆ ಉತ್ತರ ಏರುಪೇರಿಂದ ಕೂಡಿರುವುದನ್ನು ಕಾಣಬಹುದು.

ಕೋಷ್ಟಕ ೪ – ದಿನದ ಲಾಭ

ಕ್ರ. ಸಂ. ಲಾಭ ಮಾರುಕಟ್ಟೆ ಮಾಹಿತಿದಾರರು ಸಂಚಾರಿ ಮಾಹಿತಿದಾರರು
೧೦೦ಕ್ಕಿಂತ ಕಡಿಮೆ ೧೫ ೧೦೦
೨. ೩೦೦-೪೦೦ ೭೦  
೩. ೪೦೧-೫೦೦ ೧೫  
ಒಟ್ಟು ೧೦೦ ೧೦೦

ಮಾರುಕಟ್ಟೆಯ ಕೇವಲ ಶೇಕಡ ೧೫ ಮಾಹಿತಿದಾರರು ನೂರು ಅಥವ ನೂರು ರೂಪಾಯಿಗಿಂತ ಕಡಿಮೆ ಲಾಭ ಗಳಿಸಿದರೆ, ಸಂಚಾರಿ ಮಾರಾಟಗಾರ ಮಾಹಿತಿದಾರರೆಲ್ಲರೂ ನೂರು ರೂಪಾಯಿಗಿಂತ ಕಡಿಮೆ ಲಾಭ ಗಳಿಸುತ್ತಾರೆ. ದಿನಕ್ಕೆ ಅವರ ಲಾಭ ಐವತ್ತರಿಂದ ತೊಂಭತ್ತು ರೂಪಾಯಿಗಳವರೆಗೆ ಆಗುತ್ತದೆ. ಮೇಲಿನ ಕೋಷ್ಟಕದಿಂದ ಶೇಕಡ ೮೫ರಷ್ಟು ಮಾರುಕಟ್ಟೆಯ ಮಾಹಿತಿದಾರರು ಮೂನ್ನೂರು ರೂಪಾಯಿಗಿಂತ ಹೆಚ್ಚಿನ ಲಾಭ ಗಳಿಸುವುದನ್ನು ನೋಡುತ್ತೇವೆ. ಅವರ ಹೂಡಿಕೆ ಹೆಚ್ಚಿದ್ದರೆ ಲಾಭವೂ ಅದಕ್ಕೆ ಸಮವಾಗಿರುತ್ತದೆ. ೧೦೦೦ ರೂಪಾಯಿ ಬೆಲೆಯ ತರಕಾರಿ ಒಂದು ದಿನ ಮಾರಿದರೆ, ಸರಾಸರಿ ಮುನ್ನೂರರಿಂದ ನಾಲ್ಕುನೂರು ಲಾಭ ಆಗಬಹುದು ಎಂದು ಮಾರುಕಟ್ಟೆಯಲ್ಲಿಯ ಮಾಹಿತಿದಾರರು ಹೇಳುತ್ತಾರೆ. ಸಂಚಾರಿ ಮಾಹಿತಿದಾರರ ಪ್ರಕಾರ ಸುಮಾರು ೨೦೦ ರೂಪಾಯಿ ಬೆಲೆಗೆ ತರಕಾರಿಗೆ ದಿನದಲ್ಲಿ ೪೦ರಿಂದ ೫೦ ರೂಪಾಯಿಗವರೆಗೆ ಲಾಭ ಆಗುತ್ತದೆ.

ಸ್ವರ್ಧೆ

ಇತ್ತಿಚಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳು ಚಿಲ್ಲರೆ ವ್ಯಾಪಾರಕ್ಕೆ ಕಾಲಿಟ್ಟಿವೆ ಪರಿಣಾಮವಾಗಿ ಮೋರ್, ಬಿಗ್,ಬಝಾರನಂತಹ ಮಳಿಗೆಗಳು ಹೆಚ್ಚಾಗುತ್ತಿವೆ. ಇವು ತರಕಾರಿಯನ್ನು ಸಹ ಮಾರಾಟ ಮಾಡುತ್ತಿರುವುದು ತರಕಾರಿ ಮಾರಾಟಗಾರರಿಗೆ ಸ್ವಲ್ಪಮಟ್ಟಿನ ಹೊಡೆತ ನೀಡಿದೆ. ಮೋರ್ ಮಳಿಗೆ ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಲ್ಪಟ್ಟಿದೆ. ಹೊಸಪೇಟೆಯಲ್ಲಿ ಮೋರ್ ಮಳಿಗೆ ಪ್ರಾರಂಭವಾದಂದಿನಿಂದ ತಮ್ಮ ವ್ಯಾಪಾರ ಕಡಿಮೆಯಾಗಿದೆಎಂದು ಮಾರುಕಟ್ಟೆಯ ಮತ್ತು ಸಂಚಾರಿ ಮಾಹಿತಿದಾರರು ಒಪ್ಪುತ್ತಾರೆ. ಆದರೆ ಮಾರುಕಟ್ಟೆಯ ಮಾಹಿತಿದಾರರು, ಇದು ಕೆಲ ಕಾಲ ಮಾತ್ರ ಆಗುವಂಥದ್ದು. ಏಕೆಂದರೆ ದೊಡ್ಡ ಮಳಿಗೆಗಳಿಗೆ ಕೇವಲ ಒಂದು ವರ್ಗದ ಜನ ಹೋಗುತ್ತಾರೆ. ಆದರೆ ಮಾರುಕಟ್ಟೆಗೆ ಎಲ್ಲ ವರ್ಗದ ಜನ ಬರುತ್ತಾರೆ. ಅಲ್ಲದೆ ತಾವು ದಿನವೂ ತಾಜಾ ತರಕಾರಿಯನ್ನು ತರುವುದರಿಂದ ಜನರು ಮಳಿಗೆಗಳ ಫ್ರಿಡ್ಜನಲ್ಲಿ ಇಟ್ಟ ತರಕಾರಿಯನ್ನು ಕೊಳ್ಳಲು ಇಷ್ಟಪಡದೆ ತಮ್ಮ ಬಳಿ ಬರುತ್ತಾರೆ. ಎಂದು ವಿಶ್ವಾಸದಿಂದ ಹೇಳುತ್ತಾರೆ.

ಸಂಚಾರಿ ಮಾಹಿತಿದಾರರು, ತಮಗೂ ಇದರಿಂದ ವ್ಯಾಪಾರ ಕಡಿಮೆಯಾಗಿದೆ ಎಂದು ಒಪ್ಪುತ್ತಾರೆ. ಅವರು ಸಂಚರಿಸುತ್ತಿರುತ್ತಾರೆ. ಆದ್ದರಿಂದ ಈ ಮಳಿಗೆ ಇರುವ ಪ್ರದೇಶವನ್ನು ಬಿಟ್ಟು ಬೇರೆ ಪ್ರದೇಶಗಳಿಗೆ ಹೋಗಿ ವ್ಯಾಪಾರ ಮಾಡುತ್ತಾರೆ. ಇದು ಇವರು ಕಂಡುಕೊಂಡ ಪರ್ಯಾಯ ಮಾರ್ಗವಾಗಿದೆ.

ಮಾಹಿತಿದಾರರ ಲಾಭ ಅಥವಾ ವ್ಯಾಪಾರ ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತ ಹೋಗುತ್ತದೆ. ಅಂದರೆ ಚಳಿಗಾಲ ಮತ್ತು ಬೇಸಿಗೆಯಲ್ಲಿ ಸಂಚಾರಿ ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆದ್ದರಿಂದ ಆ ಕಾಲದಲ್ಲಿ ಮಾರುಕಟ್ಟೆಯ ಮಾಹಿತಿದಾರರಿಗೆ ಲಾಭ ಕಡಿಮೆ ಇರುತ್ತದೆ. ಅಂದರೆ ಸಂಚಾರಿ ಮಾರಾಟಗಾರರು ಮಾರುಕಟ್ಟೆಯವರಿಗೆ ಪ್ರತಿಸ್ಪರ್ಧಿಯಾಗಿದ್ದಾರೆ. ತರಕಾರಿಯ ಬೆಲೆ ಹೆಚ್ಚಾದಾಗ ಸಂಚಾರಿ ವ್ಯಾಪಾರಸ್ತರ ಸಂಖ್ಯೆ ಕಡಿಮೆಯಾಗುತ್ತದೆ. ಹವಮಾನದೊಂದಿಗೆ ತರಕಾರಿಯ ಬೆಲೆ ಸಂಚಾರಿ ವ್ಯಾಪಾರಸ್ಥರ ಕೆಲಸವನ್ನು ಪ್ರಭಾವಿಸುತ್ತಿರುವ ವಿಷಯ ಇಲ್ಲಿ ನೋಡಬಹುದು. ಬಂಡವಾಳದ ಮಿತಿ ಸಂಚಾರಿ ವ್ಯಾಪಾರಸ್ಥರಿಗೆ ಬಹಳ ಇದೆ ಎಂದು ಇದರಿಂದ ಮತ್ತಷ್ಟು ಸ್ಪಷ್ಟವಾಗುತ್ತದೆ. ಅಲ್ಲದೆ ಮಳೆಗಾಲದಲ್ಲಿ ಇವರ ವ್ಯಾಪಾರ ಕಡಿಮೆ ಆಗುತ್ತದೆ ಎಂಬುದೂ ಇದರಿಂದ ತಿಳಿಯುತ್ತದೆ.

ಸಾಲದ ವ್ಯವಸ್ಥೆ

ತಮ್ಮ ವ್ಯವಹಾರಕ್ಕೆ ಹಬ್ಬದ ಸಂದರ್ಭದಲ್ಲಿ ಅಥವ ತರಕಾರಿ ಬೆಲೆ ಹೆಚ್ಚಾದಾಗ ವ್ಯಾಪಾರಸ್ಥರು ಅನೇಕ ಮೂಲಗಳಿಮದ ಹಣವನ್ನು ಪಡೆಯುತ್ತಾರೆ. ಸಾಮಾನ್ಯವಾಗಿ ಏಳು ಬಂಡವಾಳದ ಮೂಲವನ್ನು ಗುರುತಿಸಲಾಗಿದೆ. ಅವು ೧. ವೈಯುಕ್ತಿಕ ಉಳಿತಾಯ, ೨. ಕುಟುಂಬ ಅಥವ ಸ್ನೇಹಿತರು (ಬಡ್ಡಿ ರಹಿತ), ೩. ಲೇವಾದೇವಿಗಾರರು,೪. ಬ್ಯಾಂಕುಗಳು ಅಥವ ಸಹಕಾರಿ ಸಂಸ್ಥೆಗಳು, ೫. ಸಂಘಟನೆಗಳು,೬. ಸ್ಥಳೀಯ ವ್ಯಾಪಾರಸ್ಥರು ಅಥವ ಚಿಲ್ಲರೆ ವ್ಯಾಪಾರಿಗಳು ಮತ್ತು ೭. ಸಗಟು ವ್ಯಾಪಾರಸ್ಥರು (ದೇಬ್ ದುಲಾಲ್ ಸಹಾ. ಕಂಡೀಶನ್ಸ್ ಆಫ್ ಡೀಸೆಂಟ್ ವರ್ಕಿಂಗ್ ಲೈಫ್ ಆಫ್ ಸ್ಟ್ರೀಟ್ ವೆಂಡರ್ಸ ಇನ್ ಮುಂಬೈ WWW.ilo.org/public/english/protection/condtrav/pdf/dwpaper27c.pdf, ಜನವರೆ ೧೬, ೨೦೧೦ ರಂದು ನೋಡಿದ್ದು).

ಈ ಹಿನ್ನೆಲೆಯಲ್ಲಿ ನೋಡಿದಾಗ ಸಂಚಾರಿ ವ್ಯಾಪಾರಸ್ಥರಿಗೆ ಸಾಲ ದೊರೆಯುವ ಮೂಲಗಳು ಮಾರುಕಟ್ಟೆಯ ಮಾರಾಟಗಾರರಿಗಿಂತ ಸೀಮಿತವಾಗಿರುವುದು ಕಂಡು ಬರುತ್ತದೆ. ಇವರು ತಮ್ಮ ಉಳಿತಾಯ, ಮಿತ್ರರು,ತಮ್ಮ ಸಣ್ಣಪುಟ್ಟ ಒಡವೆಯನ್ನು ಅಡವಿಡುವುದರ ಮೂಲಕ ತಮಗೆ ಬೇಕಾದ ಹಣವನ್ನು ಪಡೆಯುತ್ತಾರೆ. ಮಾರುಕಟ್ಟೆಯ ಮಾಹಿತಿದಾರರು ತಮ್ಮ ಉಳಿತಾಯದೊಂದಿಗೆ ಸಗಟು ವ್ಯಾಪಾರಸ್ಥರಿಂದ, ಮಿತ್ರರಿಂದ, ಖಾಸಗಿ ಸಾಲ ನೀಡುವವರಿಂದ ಸಾಲ ಪಡೆಯುತ್ತಾರೆ. ಸಗಟು ವ್ಯಾಪಾರಸ್ಥರಿಂದ ಹೆಚ್ಚು ಅಂದರೆ ಶೇಕಡ ೮೭ರಷ್ಟು ಮಾಹಿತಿದಾರರು ಸಾಲ ಪಡೆಯುತ್ತಾರೆ. ಇವರ ಬಳಿ ಬಡ್ಡಿ ಇರುವುದಿಲ್ಲ. ಇವರು ತರಕಾರಿಯನ್ನು ಸಾಲದ ಬಾಬ್ತತಿಯಲ್ಲಿ ನೀಡುತ್ತಾರೆ.

ಫೈನಾನ್ಸ್ ಬಳಿ ನೂರು ದಿನಗಳಲ್ಲಿ ಕಟ್ಟಬಹುದಾದ ಸಾಲವನ್ನು ಪಡೆದು ದಿನವೂ ಪಾವತಿಸುತ್ತಾರೆ. ಉದಾಹರಣೆಗೆ, ಹತ್ತು ಸಾವಿರ ರೂಪಾಯನ್ನು ಫೈನಾನ್ಸ್ ನಿಂದ ಪಡೆದಾಗ ಅವರು ೧೫೦೦ ರೂಪಾಯಿ ಬಡ್ಡಿಯಾಗಿ ಮೊದಲೇ ಹಿಡಿದುಕೊಂಡು ೮೫೦೦ ರೂಪಾಯಿಗಳನ್ನು ಕೊಡುತ್ತಾರೆ. ದಿನಕ್ಕೆ ೧೦೦ರಂತೆ ಮೂರು ತಿಂಗಳು ೧೦ ದಿನ ಅಂದರೆ ನೂರು ದಿನಗಳಲ್ಲಿ ೧೦,೦೦೦ ರೂಪಾಯಿಗಳನ್ನು ಫೈನಾನ್ಸ್ಗೆ ಪಾವತಿಸಬೇಕು. ಇದರ ಬಡ್ಡಿ ಸುಮಾರು ಶೇಕಡ ೩೦ರಷ್ಟು ಆಗಿರುತ್ತದೆ. ಈ ಎಲ್ಲ ಅಂಶಗಳಿಂದ ಸಂಚಾರಿ ವ್ಯಾಪಾರಸ್ಥರಿಗೆ ಸೀಮಿತ ಸಾಲ ಪಡೆಯುವ ಮೂಲಗಳಿವೆ ಎಂದು ತಿಳಿಯುತ್ತದೆ. ಇವರು ಬಡ್ಡಿ ವಿಧಿಸಬಹುದಾಗ ಸಾಲ ಮೂಲಗಳನ್ನು ಅವಲಂಬಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಸಂಚಾರಿಮಾಹಿತಿದಾರರು ತಮ್ಮ ಸಾಲ ಮರುಪಾವರಿಸುವು ಸಾಮರ್ಥ್ಯ ಇದಕ್ಕೆ ಕಾರಣ ಎಂದು ತಿಳಿಯಬಹುದಾಗಿದೆ.

ಕೋಷ್ಟಕ ೫ – ಸಾಲದ ಮೂಲಗಳು

ಕ್ರ. ಸಂ. ಸಾಲದ ಮೂಲ* ಮಾರುಕಟ್ಟೆ ಮಾಹಿತಿದಾರರು ಸಂಚಾರಿ ಮಾಹಿತಿದಾರರು
ಉಳಿತಾಯ ೩೦  
೨. ಸಾಲ-ಸಗಟು ವ್ಯಾಪಾರಸ್ಥರು ೮೭  
೩. ಸಂಬಂಧಿಕರು    
೪. ಮಿತ್ರರು ೧೩ ೫೦
೫. ಇತರೆ (ಒಡವೆ ಅಡವಿಡು) ೫೦
೬. ಸಾಲದ-ಫೈನಾನ್ಸ್ ೧೩  
ಒಟ್ಟು ೧೦೦ ೧೦೦

* ಒಂದಕ್ಕಿಂತ ಹೆಚ್ಚು ಚಲಕಗಳು

ಮಾರುಕಟ್ಟೆಯ ಮಾಹಿತಿದಾರರು ಹೇಳುವಂತೆ ದಿನವೂ ಕೊಂಡು ತಂದ ತರಕಾರಿ ಅಂದೇ ಎಲ್ಲವೂ ಮಾರಾಟವಾಗುವುದು ಅಪರೂಪ. ಆದ್ದರಿಂದ ಅದನ್ನು ಮರುದಿನ ತಾಜಾ ತರಕಾರಿಯೊಂದಿಗೆ ಬೆರಿಸಿ, ಹೋಟೆಲುಗಳಿಗೆ/ಖಾನಾವಳಿಗೆ ಕಡಿಮೆ ಬೆಲೆಯಲ್ಲಿ ಮಾರುವುದು, ಬಡವರಿಗೆ ಉಚಿತವಾಗಿ ಕೊಡುವುದ, ಕಡಿಮೆ ಬೆಲೆಗೆ ಮಾರುವುದು, ಮರುದಿನ ಬೆಳಿಗ್ಗೆ ಇತರ ಸಂಚಾರಿ ಬರುವ ಇತರ ಸಂಚಾರಿ ಮಾರಾಟಗಾರರಿಗೆ ಕಡಿಮೆ ಬೆಲೆಯಲ್ಲಿ ಕೊಡುವುದು-ಹೀಗೆ ಉಳಿದ ತರಕಾರಿಯ ವಿಲೇವಾರಿ ಮಾಡುತ್ತಾರೆ. ಕೇವಲ ಶೇಕಡ ೩೦ ಮಾಹಿತಿದಾರರು ಮಾತ್ರ ಎಲ್ಲ ತರಕರಿ ಅಂದೇ ಮಾರಾಟವಾಗುವುದಾಗಿ ಹೇಳಿದರು.

ಶೇಕಡ ೭೫ರಷ್ಟು ಸಂಚಾರಿ ವ್ಯಾಪಾರಸ್ಥರ ಮಾಹಿತಿದಾರರು ತಮ್ಮ ಎಲ್ಲ ತರಕಾರಿಯೂ ಮಾರಾಟವಾಗುವುದಾಗಿ ತಿಳಿಸಿರುವರು. ಅವರು ಕಡಿಮೆ ಬಂಡವಾಳವನ್ನು ಹಾಕಿ ಕಡಿಮೆ ಪ್ರಮಾಣದ ತರಕಾರಿ ತರುವುದರಿಂದ ಮತ್ತು ಅವರಿಗೆ ಖಾಯಂ ಗಿರಾಕಿಗಳು ಇರುವುದರಿಂದ ಎಲ್ಲ ತರಕಾರಿಯೂ ಮಾರಾಟವಾಗುತ್ತದೆ. ಕಡಿಮೆ ಬೆಲೆಗೆ ಮಾರುವುದು ಕೇವಲ ಶೇಕಡ ೨೫ ಮಾಹಿತಿದಾರರು ಮಾತ್ರ.

ಕೋಷ್ಟಕ ೬ – ಉಳಿದ ತರಕಾರಿಯ ವಿಲೇವಾರಿ

ಕ್ರ. ಸಂ. ಸಾಲದ ಮೂಲ* ಮಾರುಕಟ್ಟೆ ಮಾಹಿತಿದಾರರು ಸಂಚಾರಿ ಮಾಹಿತಿದಾರರು
ಹೋಟೆಲುಗಳಿಗೆಕಡಿಮೆ ಬೆಲೆಗೆ ಕೊಡುವುದು ೩೦  
೨. ಉಚಿತವಾಗಿ ಕೊಡುವುದು ೧೩  
೩. ಹೊಸದರೊಂದಿಗೆ ಸೇರಿಸುವುದು ೧೩  
೪. ಕೆಡುತ್ತದೆ/ಕಡಿಮೆ ಬೆಲೆ ಮಾರು ೩೦ ೨೫
೫. ಸಂಚಾರಿ ಮಾರಾಟಗಾರರಿಗೆ ಮಾರುವುದು ೧೩  
೬. ಎಲ್ಲ ಮಾರಾಟ ಆಗುತ್ತದೆ ೩೦ ೭೫
ಒಟ್ಟು ೧೦೦ ೧೦೦

* ಒಂದಕ್ಕಿಂತ ಹೆಚ್ಚು ಚಲಕಗಳು

ಶೇಕಡ ೩೦ ಹೊರತುಪಡಿಸಿ ಉಳಿದ ೭೦ ಮಾರುಕಟ್ಟೆಯ ಮಾಹಿತಿದಾರರು ಮಾರಾಟವಾಗದೆ ಉಳಿದ ತರಕಾರಿಯನ್ನು ಮಾರುಕಟ್ಟೆಯಲ್ಲಿಯೇ ಬಿಡುತ್ತಾರೆ. ಕೆಲವರು ಮಾರಾಟದ ಸ್ಥಳದಲ್ಲಿಯೇ ಬಿಟ್ಟರೆ, ಕೆಲವು ಮಾಹಿತಿದಾರರು ಮಾರುಕಟ್ಟೆಯ ಹಿಂಭಾಗವಿರುವ ಬೇರೆಯವರ ಹೆಸರಿನಲ್ಲಿ ಇರುವ ಕೊಠಡಿಗಳಲ್ಲಿ ವಾರ್ಷಿಕ ೨೦೦೦-೩೦೦೦ ರೂಪಾಯಿ ಬಾಡಿಗೆ ನಿಡು ಇಡುತ್ತಾರೆ. ಸಂಚಾರಿ ಮಾಹಿತಿದಾರರಿಗೆ ಈ ಸಮಸ್ಯೆ ಇರುವುದಿಲ್ಲ ಇದು ಒಂದು ಬಗೆಯಲ್ಲಿ ಮಾರುಕಟ್ಟೆಯ ವ್ಯಾಪಾರಸ್ಥರಿಗೆ ಇರುವ ಅವಕಾಶಗಳು ಅಥವಾ ಸಾಧ್ಯತೆಯ ಬಗ್ಗೆ ತಿಳಿಸುತ್ತದೆ. ಒಂದೇ ಸ್ಥಳದಲ್ಲಿ ಮಾರಾಟ ಮಾಡುವಾಗ ಇತರ ಗ್ರಾಹಕರೊಂದಿಗೆ ಏರ್ಪಡುವ ಪರಿಚಯ, ಸಂಪರ್ಕಗಳು ಇವರಿಗೆ ಅನುಕೂಲಕರವಾಗಿರುತ್ತವೆ. ಅಧಿಕ ಪ್ರಮಾಣದಲ್ಲಿ ತರಕಾರಿ ಕೊಳ್ಳುವ ಹೋಟೆಲುಗಳು ಗ್ರಾಹಕರಾಗುತ್ತವೆ. ಅಂತೆಯೇ ಸಂಚಾರಿ ಗ್ರಾಹಕರು ಸಂಚರಿಸುವ ಕಡೆ ಹೋಟೆಲುಗಳು ಇದ್ದರೂ, ಇವರ ಪ್ರಕಾರ ಅವರು ತುಂಬಾ ಕಡಿಮೆ ಬೆಲೆಗೆ ತರಕಾರಿಯನ್ನು ಕೇಳುತ್ತಾರೆ. ಆದ್ದರಿಂದ ಮನೆಗಳ ಗ್ರಾಹಕರನ್ನು ಹೊರತುಪಡಿಸಿ, ಸಂಚಾರಿ ಮಾಹಿತಿದಾರರಿಗೆ ಇತರ ಖಾಯಂ ಗ್ರಾಹಕರು ಇಲ್ಲವೆಂಬುದು ತಿಳಿದು ಬಂದಿದೆ.

ಸ್ಥಳಾಂತರ ಮತ್ತು ಸಂಘಟನೆ

ಮಾರುಕಟ್ಟೆಯ ಮಾಹಿತಿದಾರರಿಗೆ ನಿಗದಿತ ಸ್ಥಳವಿದ್ದರೂ ಅವರು ಅಭಿವೃದ್ಧಿಯ ಹೆಸರಿನಲ್ಲಿ ಅವರ ಮಾರುಕಟ್ಟೆಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನಡೆಸುತ್ತಿರುತ್ತಾರೆ. ಇದರಿಂದ ತಮ್ಮ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ. ಇದಕ್ಕೂ ಮೊದಲು ಮಾರುಕಟ್ಟೆ ಬೇರೆ ಜಾಗದಲ್ಲಿದ್ದು ಅಲ್ಲಿ ವ್ಯಾಪಾರ ಚೆನ್ನಾಗಿ ಆಗುತ್ತಿತ್ತು. ಸಗಟು ಮಾರುಕಟ್ಟೆಯೂ ಅಲ್ಲಿಯೇ ಇತ್ತು. ಆದರೆ ನಂತರ ಸಗಟು ಮಾರುಕಟ್ಟೆ ನಗರದ ಹೊರ ಪ್ರದೇಶದಲ್ಲಿ ಆಯಿತು. ಮೊದಲು, ಸಗಟು ಮಾರುಕಟ್ಟೆಯಲ್ಲಿ ಜನಸಾಮಾನ್ಯರಿಗೆ ಕೆಲವೇ ತೂಕದಲ್ಲಿ ತರಕಾರಿ ಕೊಳ್ಳಲು ಅವಕಾಶ ನೀಡುತ್ತಿರಲಿಲ್ಲ. ಆಗ ತಮಗೆ ಲಾಭ ಇತ್ತು. ಆದರೆ ಈಗ ಎಪಿಎಂಸಿಯಲ್ಲಿ ಒಂದೆರಡು ಕೆ.ಜಿ ತರಕಾರಿಯನ್ನು ಮಾರಾಟ ಮಾಡುವುದರಿಂದ, ತಮ್ಮ ಬಳಿ ಇರುವ ಜನರ ಸಂಖ್ಯೆ ಕಡಿಮೆಯಾಗಿದೆ. ಮೊದಲಿನಂತೆ ವ್ಯಾಪಾರ ಇಲ್ಲ ಎಂದು ಹೇಳುತ್ತಾರೆ. ಅಲ್ಲದೆ ಮತ್ತೆ ಈಗ ಈ ಮಾರುಕಟ್ಟೆಯನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸುವರು ಎಂಬ ಆತಂಕ ಇವರಲ್ಲಿದೆ. ಈ ರೀತಿಯ ಆತಂಕ ಸಂಚಾರಿ ಮಾಹಿತಿದಾರರಲ್ಲಿ ಇಲ್ಲ.

ಆದರೆ ಹೀಗೆ ಆದಾಯ ತಮ್ಮ ಪರವಾಗಿ ಮಾತನಾಡಲು ಮಾರುಕಟ್ಟೆಯವರಿಗೆ ಒಂದು ಸಂಘವಿದೆ. ಅದು ಸಂಚಾರಿಯವರಲ್ಲಿ ಇಲ್ಲ. ಮಾರುಕಟ್ಟೆಯವರು ಎಲ್ಲರೂ ಒಂದೇ ಸ್ಥಳದಲ್ಲಿಇರುವುದರಿಂದ ಸಂಘ ಸ್ಥಾಫಿಸುವುದು ಸುಲಭವಿದೆ. ಆದರೆ ಮುಂಬೈ ನಗರದಲ್ಲಿ ಸಂಚಾರಿ ವ್ಯಾಪಾರಸ್ಥರು ಕೂಡ ತಮ್ಮ ಸಂಘ ಹೊಂದಿದ್ದಾರೆ. ಎಂದು ದೇಬ್‌ದುಲಾಲ್ ಸಹಾ ಅವರ ಅಧ್ಯಯನ ತಿಳಿಸುತ್ತದೆ. ಆದರೆ ಹೊಸಪೇಟೆಯಲ್ಲಿ ಸಂಚಾರಿ ಮಾರಾಟಗಾರರ ಸಂಘ ಇಲ್ಲವಾದರೂ ತಮ್ಮನ್ನು ಪ್ರತಿನಿಧಿಸುವಂಥ ಒಂದು ಸಂಘಬೇಕು ಎಂಬ ಆಸೆಯೂ ಇಲ್ಲ. ಇದರಿಂದ ವ್ಯವಸ್ಥೆಯಲ್ಲಿ ಇವರ ಹೆಚ್ಚು ಅಗೋಚರವಾಗಿ ಉಳಿಯುವ ಅಪಾಯವುಂಟು.

ಭಾಗ ಮೂರು

ಪ್ರಸ್ತುತ ಅಧ್ಯಯನದಲ್ಲಿ ತರಕಾರಿ ಮಾರುವ ಮಹಿಳೆಯರ ಎರಡು ಗುಂಪುಗಳನ್ನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರು ಮತ್ತು ತಲೆ ಮೇಮೆ ಹೊತ್ತು ಸಂಚರಿಸಿ ತರಕಾರಿ ಮಾರುವವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅವರ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿ ಅವರ ಸಾಮರ್ಥ್ಯವನ್ನು ಅವರಿಗೆ ಎದುರಾಗುವ ಪರಿಸ್ಥಿತಿಯನ್ನು ಹಿನ್ನೆಲೆಯಲ್ಲಿ ಅಧ್ಯಯನ ಮಾಡಲಾಗಿದೆ. ಈ ಎರಡೂ ಗುಂಪುಗಳಿಗೆ ತಮ್ಮದೇ ಆದ ಕೆಲವು ಮಿತಿಗಳು ಹಾಗೂ ಅನುಕೂಲಗಳು ಇರುವುದನ್ನು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಕೆಲವೊಂದು ವಿಷಯಗಳಲ್ಲಿ ಮಾರುಕಟ್ಟೆಯ ಮಾಹಿತಿದಾರರು ಹೆಚ್ಚು ಸಾಮರ್ಥ್ಯ ಹೊಂದಿರುವರು ಎಂದು ಕಂಡುಬಂದರೆ ಕೆಲವೊಂದು ವಿಷಯಗಳಲ್ಲಿ ಸಂಚಾರಿ ಮಾಹಿತಿದಾರರು ಹೆಚ್ಚು ಸಾಮರ್ಥ್ಯ ಹೊಂದಿದ್ದಾರೆ ಎಂದು ತೋರುತ್ತದೆ.

ಮೇಲಿನ ವಿಶ್ಲೇಷಣೆಯಿಂದ ನಮಗೆ ಕಂಡು ಬರುವ ವಿಷಯವೆಂದರೆ, ಮಾರುಕಟ್ಟೆಯಲ್ಲಿ ಕುಳಿತು ವ್ಯಾಪಾರ ಮಾಡುವವರು ಮತ್ತು ಸಂಚಾರಿ ವ್ಯಾಪಾರಸ್ಥರು ಇವರಲ್ಲಿ ಅನೇಕ ವಿಷಯಗಳಲ್ಲಿ ಭೀನ್ನತೆ ಇದೆ. ಮೊದಲಿನಿಂದಲೂ ತಮ್ಮ ಕುಟುಂಬದವರು ಇದೇ ವ್ಯಾಪಾರ ಮಾಡಿಕೊಂಡು ಬಂದಿರುವುದರಿಂದ ಮಾರುಕಟ್ಟೆ ಮಾಹಿತಿದಾರರಿಗೆ, ಅನುಭವ, ಸ್ಥಳದ ಲಭ್ಯತೆ, ಅಂಗಡಿಗೆ ಸಹಾಯ, ಸಹಾಯ, ಸಗಟು ವ್ಯಾಪಾರಸ್ಥರೊಂದಿಗೆ, ಉತ್ತಮ ಸಂಬಂಧ-ಒಟ್ಟಿನಲ್ಲಿ ಸಾಮಾಜಿಕ ಬಂಡವಾಳದ ಲಭ್ಯತೆಯಿಂದ ಅನುಕೂಲವಾಗಿದೆ. ಇದು ಸಂಚಾರಿ ವ್ಯಾಪಾರಸ್ಥರಿಗೆ ಸಾಧ್ಯವಾಗುವುದು ಅಪರೂಪ. ಅಭಿವೃದ್ಧಿ ಹೆಸರಿನಲ್ಲಿ ಆಗುವ ವ್ಯತ್ಯಾಸಗಳು-ಅದು ಸ್ಥಳಾಂತರವಾಗಿರಬಹುದು, ಉತ್ತಮ ಮಾರುಕಟ್ಟೆಯ ಲಭ್ಯತೆ- ಇವು ಮಾರುಕಟ್ಟೆಯ ಮಾರಾಟಗಾರರಿಗೆ ನೇರವಾಗಿ ತಲುಪಿದರೆ, ಸಂಚಾರಿ ಮಾರಾಟಗಾರರಿಗೆ ಇದು ಯಾವ ಬದಲಾವಣೆಯನ್ನೂ ತರುವುದಿಲ್ಲ. ಆಧುನಿಕ ಖಾಸಗಿ ಮಳಿಗೆಗಳಿಂದ ಮಾರುಕಟ್ಟೆ ವ್ಯಾಪಾರಕ್ಕೆ ತೊಂದರೆಯಾದರೆ, ಸಂಚಾರಿ ವ್ಯಾಪಾರಸ್ಥರು ಅದಕ್ಕೆ ಪರ್ಯಾಯ ಉಪಾಯವನ್ನು ಸುಲಭವಾಗಿ ಕಂಡುಕೊಂಡಿದ್ದಾರೆ. ಆದರೆ ಮಾರುಕಟ್ಟೆಯ ಮಾಹಿತಿದಾರರಿಗೆ ತಮ್ಮನ್ನು ಪ್ರತಿನಿಧಿಸಬಲ್ಲ ಸಂಘವಿದೆ. ಆದರೆ ಸಂಚಾರಿ ಮಾರಾಟಗಾರರ ಸಂಘ ಇಲ್ಲ ಹಾಗೂ ತಮ್ಮದೂ ಒಂದು ಸಂಗ ಇರಬೇಕು ಎಂಬ ಆಸೆಯೂ ಇಲ್ಲ. ಎಲ್ಲರೂ ತಮ್ಮ ಮನೆಗಳಲ್ಲಿ ಪೂರ್ಣ ಪ್ರಮಾಣದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲವಾದರೂ ಮನೆಗೆ ಸಹಾಯ ಮಾಡುತ್ತಿರುವ ತೃಪ್ತಿ ಇದೆ. ತಮ್ಮ ದುಡಿಮೆ ತಮಗೆ ತಕ್ಕಮಟ್ಟಿನ ಸ್ವಾತಂತ್ರ‍್ಯವನ್ನು ನೀಡಿದೆ ಎಂದು ಇವರ ಅಭಿಪ್ರಾಯ. ಶೇಕಡ ೧೦೦ ರಷ್ಟು ಸಂಚಾರಿ ಮಾಹಿತಿದಾರರ ಮನೆಯಲ್ಲಿ ಅವರ ನಿರ್ಧಾರಗಳಿಗೆ ಮಾನ್ಯತೆ ಇದೆ. ಆದರೆ ಕೆಲವು ಮಾರುಕಟ್ಟೆ ಮಾಹಿತಿದಾರರಲ್ಲಿ ಅವರ ಗಂಡ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಬಂಡವಾಳ ಹೂಡಿಕೆಯಲ್ಲಿ ಮಾರುಕಟ್ಟೆಯ ಮಾಹಿತಿದಾರರು ಸಂಚಾರಿ ಮಾಹಿತಿದಾರರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂಡುವರು. ಸಗಟು ವ್ಯಾಪಾರಸ್ಥರೊಂದಿಗೆ ಇವರ ಸಂಬಂಧ ಸಂಚಾರಿ ವ್ಯಾಪಾರಸ್ಥರಿಗಿಂತಲೂ ಉತ್ತಮವಾಗಿರುವುದು. ಇದಕ್ಕೆ ನಿಗದಿತ ಸ್ಥಳ ಹಾಗೂ ಇವರ ಕುಟುಂಬದವರ ಹಳೆ ಪರಿಚಯ ಪ್ರಮುಖವಾದ ಕಾರಣವಾಗಿದೆ. ಸಂಚಾರಿ ಗ್ರಾಹಕರಿಗೆ ಕೇವಲ ಮನೆಗಳು ಪ್ರಮುಖ ಗ್ರಾಹಕರಾದರೆ, ಮಾರುಕಟ್ಟೆಯ ಮಾಹಿತಿದಾರರಿಗೆ ಹೋಟೆಲ್‌ಗಳು, ಮನೆಗಳು, ಜ್ಯೂಸ್ ಅಂಗರಿಗಳು ಹೀಗೆ ಅನೇಕ ಬಗೆಯ ಗ್ರಾಹಕರನ್ನು ಪಡೆದಿದ್ದಾರೆ. ಇವೆಲ್ಲವುಗಳಿಂದ ಬಹುತೇಕ ಸಂದರ್ಭಗಳಲ್ಲಿ ಮಾರುಕಟ್ಟೆಯ ಮಾಹಿತಿದಾರರು ಸಂಚಾರಿ ಮಾಹಿತಿದಾರರಿಗೆ ಹೋಲಿಸಿದರೆ ಹೆಚ್ಚು ಅವಕಾಶಗಳನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಪಡೆದಿದ್ದಾರೆ ಎಂದು ಕಂಡುಬರುತ್ತದೆ. ಹೀಗೆ ಎಲ್ಲ ವಿಷಯಗಳಲ್ಲಿಯೂ ಒಂದಲ್ಲ ಒಂದು ವ್ಯತ್ಯಾಸವನ್ನು ಕಾಣುತ್ತೇವೆ.

ಇದರಿಂದ ತಿಳಿಯುವ ಮತ್ತೊಂದು ಅಂಶವೆಂದರೆ, ಮಹಿಳೆ ಎಂಬುದು ಸಮರೂಪಿ ಅಥವಾ ಏಕರೂಪಿಯಾದ ಘಟಕ ಅಲ್ಲ ಎಂಬುದು. ತರಕಾರಿ ಮಾರುವ ಚಟುವಟಿಕೆ, ಮಾರುಕಟ್ಟೆ ಮತ್ತು ಸಂಚಾರಿ ಮಾರಾಟಗಾರರು ತರಕಾರಿ ಮಾರಾಟ ಮಾಡುವ ಸ್ಥಳವನ್ನು ಹೊರತುಪಡಿಸಿ ಮೇಲು ನೋಟಕ್ಕೆ ಒಂದೇ ರೀತಿಯಲ್ಲಿ ಕಾಣುತ್ತದೆ. ಆದರೆ ಅಲ್ಲಿಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬೇರೆ ಬೇರೆ ಅಂಶಗಳು ಹೇಗೆ ಅಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. ಅದು ಸಾಮಾಜಿಕ ಬಂಡವಾಳದ ಲಭ್ಯತೆ ಅಥವಾ ಅದರ ಕೊರತೆ, ಗ್ರಾಹಕ ಸಂಬಂಧಗಳು, ಜಾತಿಯ ಪ್ರಭಾವ, ಮನೆಯ ಪರಿಸ್ಥಿತಿ, ಮಾರಾಟದ ಜಾಗ, ಬಂಡವಾಳದ ಲಭ್ಯತೆ, ಅದರ ಪ್ರಮಾಣ, ಮುಂತಾದವೆಲ್ಲವೂ ವ್ಯತ್ಯಾಸವಾಗುವುದನ್ನು ನೋಡುತ್ತೇವೆ. ಅಂತೆಯೇ ಜಾತಿ, ವರ್ಗ-ಇವು ಸಂಚಾರಿ ಹಾಗೂ ಮಾರುಕಟ್ಟೆಯ ಮಾರಾಟಗಾರ ಮಹಿಳೆಯರನ್ನು ಹೇಗೆ ಪ್ರಭಾವಿಸುತ್ತವೆ ಎಂದು ತಿಳಿಯುತ್ತದೆ. ಇವುಗಳಿಂದ ಪ್ರಭಾವಿಸಲ್ಪಟ್ಟ ಈ ಗುಂಪುಗಳ ಸಾಮರ್ಥ್ಯ ಧಾರಣವೂ ಭಿನ್ನವಾಗಿದೆ. ಇದನ್ನು ಸಹ ಸರಳೀಕರಿಸಲು ಬರುವಂತಿಲ್ಲ. ಈ ನಿಟ್ಟಿನಲ್ಲಿ ಮಹಿಳೆ ಎಂಬುದು ಏಕರೂಪಿಯಾದ ಘಟಕವಲ್ಲ ಎಂಬುದು ಇಲ್ಲಿ ಅರ್ಥಮಾಡಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಒಟ್ಟು ತರಕಾರಿ ವ್ಯಾಪಾರಸ್ಥರಿಗೆ ಉಪಯೋಗವಾಗಲು ನಗರದ ನಕ್ಷೆ ತಯಾರಿಸುವಾಗ ತರಕಾರಿ ಮಾರುಕಟ್ಟೆಗೆ ಸೂಕ್ತ ಸ್ಥಳದ ನಿರ್ಧಾರ, ಕಡಿಮೆ ಬಡ್ಡಿದರದಲ್ಲಿ ಜವಾಬ್ದಾರಿಯುತ ಸಂಸ್ಥೆಗಳ ಮೂಲಕ ಸಾಲ ದೊರೆಯುವ ವ್ಯವಸ್ಥೆ, ಸಂಚಾರಿ ವ್ಯಾಪಾರಸ್ಥರನ್ನು ಸಂಘಟಿಸುವ ಪ್ರಯತ್ನ ಇವುಗಳ ಕಡೆ ಗಮನಹರಿಸಬೇಕಾದ ಅನಿವಾರ್ಯತೆ ಕಾಣುತ್ತದೆ.

ಅಂತೆಯೇ ಅನೌಪಚಾರಿಕವಾಗಿ ಬೇರೆ ಬೇರೆ ಕೆಲಸ ಮಾಡುತ್ತಿರುವ ಮಹಿಳೆಯರನ್ನು ಒಳಗೊಂಡು ಅಧ್ಯಯನಗಳನ್ನು ಮಾಡುವ ಅಗತ್ಯವಿದೆ. ಈ ಅಧ್ಯಯನದಲ್ಲಿ ಕೆಲವು ವಿಷಯಗಳಲ್ಲಿ ಮಾತ್ರ, ಅಂದರೆ ಮಾಹಿತಿದಾರರ ಸ್ವಾತಂತ್ಯ್ರವನ್ನು, ಸಾಮರ್ಥ್ಯವನ್ನು ವಿಶ್ಲೇಷಿಸಲಾಗಿದೆ. ಅವರ ರಾಜಕೀಯ ಸ್ವಾತಂತ್ಯ್ರ, ಹಾಗೂ ಇನ್ನುಳಿದ ಸಾಮಾಜಿಕ ಅವಕಾಶಗಳು, ಅವರ ಸಾಮಾಜಿಕ ಜೀವನಕ್ಕಿರುವ ಭದ್ರತೆ, ಇವುಗಳ ಮೇಲೆ ಅಧ್ಯಯನಗಳು ನಡೆಯಬೇಕಾದ ಅವಶ್ಯಕತೆ ಇದೆ.