೧೦

೨೦೦೧ನೇ ಇಸವಿಯ ಅಂಕಿ ಅಂಶಗಳಂತೆ ಪುರುಷರ ವಿದ್ಯಾಭ್ಯಾಸ ಪ್ರಮಾಣ ೭೫%ಗಿಂತ ಹೆಚ್ಚಿದೆ. ಅದೇ ಸಮಯದಲ್ಲಿ ಮಹಿಳೆಯರ ವಿದ್ಯಾಭ್ಯಾಸ ಪ್ರಮಾಣ ೫೪.೧೬% ಇದೆ. ಇದರೊಂದಿಗೆ ಗ್ರಾಮೀಣ ಹಾಗೂ ನಗರಪ್ರದೇಶದ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಪ್ರಮಾಣಗಳಲ್ಲಿ ಅಗಾಧ ವ್ಯತ್ಯಾಸವಿದೆ. ೧೯೯೧ ರಲ್ಲಿ ನಗರದ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಪ್ರಮಾಣ ಶೇಕಡ ೬೪ ಇದ್ದರೆ, ಗ್ರಾಮೀಣ ಪ್ರದೇಶದಲ್ಲಿ ಆ ಪ್ರಮಾಣ ಶೇಕಡ ೩೧ ಮಾತ್ರ ಇತ್ತು. ದಶಕಗಳ ನಂತರ ಕೂಡ ಈಗ ನಿರೀಕ್ಷಿತ ಪ್ರಮಾಣದ ಬದಲಾವಣೆಗಳು ಆಗಿದ್ದರೂ ಅನಕ್ಷರಸ್ಥ ಮಹಿಳೆಯರ ಪ್ರಮಾಣ ಇಂದಿಗೂ ಅಧಿಕ ವಾಗಿಯೇ ಇದೆ. ಭಾರತದಲ್ಲಿ ಶೇ.ಕಡ ೬೦ ರಷ್ಟು ಅಕ್ಷರಸ್ಥ ಮಹಿಳೆಯರು ಕೇವಲ ಪ್ರಾಥಮಿಕ ಶಿಕ್ಷಣ ಅಥವಾ ಅದಕ್ಕಿಂಥ ಕಡಿಮೆ ವಿದ್ಯಾಭ್ಯಾಸ ಪಡೆದಿದ್ದಾರೆ. ೧೯೯೧ರ ಒಂದು ವರದಿಯ ಪ್ರಕಾರ, ಕೇವಲ ೧೩% ಮಹಿಳೆಯರು ಮಾತ್ರ ಪ್ರಾಥಮಿಕ ಶಿಕ್ಷಣಕ್ಕಿಂಥಾ ಹೆಚ್ಚಿನ ವಿದ್ಯಾಭ್ಯಾಸ ಪಡೆದಿದ್ದಾರೆ ಎಂಬುದು ವಾಸ್ತವ ದುರಂತ. ನಿರುದ್ಯೋಗಿ ಅಶಿಕ್ಷಿತ ಹುಡುಗಿಯರ ಸಂಖ್ಯೆ ಭಾರತದಲ್ಲಿ ನಾಲ್ಕುಕೋಟಿ ಎಂದು ಒಂದು ಅಧ್ಯಯನ ತಿಳಿಸುತ್ತದೆ.

ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಪ್ರಮಾಣ ಕಡಿಮೆ ಇರುವುದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ ಅವರಿಗೆ ಓದುವ ಅವಕಾಶಗಳೇ ಮಿತವಾಗಿವೆ. ಚಿಕ್ಕ ವಯಸ್ಸಿನಲ್ಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಮುಂದೆ ಅವರು ಕೇವಲ ಮಕ್ಕಳನ್ನು ಹಡೆದು, ಅವನ್ನು ಸಾಕಿ ಅದಕ್ಕಾಗೇ ಬದುಕನ್ನು ಮುಡುಪಾಗಿಡಬೇಕೆಂಬ ದೃಷ್ಟಿ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿದೆ. ಜೊತೆಗೆ ಗಂಡು ಮಗನಾದರೆ ಓದಿ ವಿದ್ಯಾಭ್ಯಾಸ ಪಡೆದು, ಕೆಲಸಕ್ಕೆ ಸೇರಿ ತಮ್ಮನ್ನು ಸಾಕುತ್ತಾನೆ. ಹೆಣ್ಣು ಮಗಳಾದರೆ ಮದುವೆಯಾಗಿ ಗಂಡನ ಮನೆಗೆ ಹೋಗುವವಳು. ಅವಳಿಗಾಗಿ ಮಾಡುವ ಖರ್ಚು ವ್ಯರ್ಥ ಎಂಬ ಭಾವನೆ ಹಲವರಲ್ಲಿದೆ. ಸಂವಿಧಾನಾತ್ಮಕವಾಗಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿದ್ದರೂ, ಈಗ ಪ್ರೌಢಶಿಕ್ಷಣದವರೆಗೆ ಶಿಕ್ಷಣ ಉಚಿತವಾಗಿದ್ದರೂ ಕಲಿಯಲು ಶಾಲೆಗೆ ಹೋಗುವ ಸಮಯದಲ್ಲಿ ಮನೆಕೆಲಸಕ್ಕೆ, ಹೊರಗಿನ ಕೆಲಸಕ್ಕೆ ಮಗಳು ಜೊತೆ ನೀಡಿದರೆ ಕೆಲಸವೂ ಹಗುರ, ಹಣವನ್ನೂ ಸಂಪಾದಿಸಬಹುದೆಂಬ ಯೋಜನೆ ಹಲವರದು. ಕುಟುಂಬದಲ್ಲಿ ಆರ್ಥಿಕವಾಗಿ ಹೆಚ್ಚಿನ ಹೊರೆ ಬೀಳುತ್ತಿದ್ದರೆ ಅದಕ್ಕೆ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಕತ್ತರಿ ಹಾಕಿ ಗಂಡುಮಕ್ಕಳನ್ನು ಓದಲು ಕಳಿಸುವ ಸಂಪ್ರದಾಯ ನಮ್ಮ ಗ್ರಾಮೀಣ ಪ್ರದೇಶದಲ್ಲಿದೆ. ಶಿಕ್ಷಣದಿಂದ ವಂಚಿತರಾದ ಅತಿ ಹೆಚ್ಚು ಕೂಲಿಕಾರ್ಮಿಕ ಹೆಣ್ಣುಮಕ್ಕಳು ವಿಶ್ವದಲ್ಲೇ ಅತಿ ಹೆಚ್ಚಾಗಿ ಇರುವುದು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ.

೧೧

ಜೊತೆಗೆ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಓದಿನೊಂದಿಗೆ ನಿತ್ಯದ ಬಿಡುವಿಲ್ಲದ ಕೆಲಸದಲ್ಲಿಯೂ ತೊಡಗಿಕೊಳ್ಳಬೇಕು. ಪೌಷ್ಟಿಕ ಆಹಾರದ ಕೊರತೆಯೊಂದಿಗೆ ಹೊಲಗದ್ದೆ, ಕಸ – ಮುಸುರೆ, ಕೊಟ್ಟಿಗೆ ಕೆಲಸಗಳಲ್ಲಿ ಭಾಗಿಯಾಗುತ್ತಲೇ ಶಾಲೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಾಗ ಆಯಸ, ಒತ್ತಡಗಳಾಗುವುದು ಸಹಜ. ಇದನ್ನೂ ಮೀರಿ ವಿದ್ಯಾಭ್ಯಾಸವನ್ನು ಮುಂದುವರೆಸಿದರೂ ಶಾಲೆಗಳು ಹತ್ತಿರವಿದ್ದಾಗ ನಿರಾತಂಕದಿಂಧ ಕಳುಹಿಸುವ ಪೋಷಕರು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಕ್ಕದ ಹಳ್ಳಿಗೆ ಕಳಿಸಬೇಕಾದಾಗ ಸುರಕ್ಷತೆಯ ದೃಷ್ಟಿಯಿಂದ ಹೆದರುತ್ತಾರೆ. ಬೆಳೆದ ಹೆಣ್ಣುಮಕ್ಕಳ ‘ಶೀಲ ರಕ್ಷಣೆ’ ಸಧ್ಯದ ಸಮಾಜದಲ್ಲಿ ಪೋಷಕರನ್ನು ಕಾಡುವ ವಿಷಯ. ಭಾರತೀಯ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಗ್ರಾಮೀಣ ಪ್ರದೇಶದ ಜನರಿಗೆ ‘ರಿಸ್ಕ್’ ಎನ್ನಿಸಿದೆ. ಮಹಿಳೆಯನ್ನು ಒಂದು ಆಸ್ತಿಯಾಗಿ ಪರಿಗಣಿಸುವ ಪರಿಪಾಠದಿಂದಾಗಿ ಅವಳನ್ನು ಸಂರಕ್ಷಿಸುವ ಕೆಲಸದ ಮುಖಾಂತರ ಅವಳ ಶೀಲವನ್ನು ಜೋಪಾನ ಮಾಡುವ ಕೆಲಸ ನಡೆಯುತ್ತಾ ಬಂದಿದೆ. ಎಲ್ಲಯವರೆಗೆ ಪಾತಿವ್ರತ್ಯದ, ಕೌಮಾರ್ಯದ, ಶೀಲದ ಕಲ್ಪನೆಗಳು ನಮ್ಮ ಸಮಾಜವನ್ನು ಬಿಟ್ಟು ಹೋಗುವುದಿಲ್ಲವೋ ಅಲ್ಲಿಯವರೆಗೆ ಮಹಿಳೆಯ ಸಬಲೀಕರಣ ಸಾಧ್ಯವಿಲ್ಲ. ಹೀಗಾಗೇ ಇಂದಿಗೂ ಬಹುಜನರ ದೃಷ್ಟಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣವೆಂದರೆ ಮದುವೆಯಾಗುವವರೆಗೂ ಹೊತ್ತು ಕಳೆಯುವ ಸಾಧನ ಎಂಬಂತಾ ಭಾವನೆ ಇದೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಋತುಮತಿಯಾದ ನಂತರ ಶಾಲೆಗೆ ಕಳುಹಿಸುವುದನ್ನೇ ನಿಲ್ಲಿಸುವ ಪೋಷಕರೂ ಇದ್ದಾರೆ. ಹಬ್ಬ ಹರಿದಿನಗಳಲ್ಲಿ, ಮಾಸಿಕ ಸ್ರಾವದ ದಿನಗಳಲ್ಲಿ, ಮನೆಯಲ್ಲಿ ಹೆಚ್ಚಿನ ಕೆಲಸಗಳಿದ್ದಾಗ, ಹೆಣ್ಣುಮಕ್ಕಳು ಶಾಲೆಗೆ ಹೋಗದೇ ಉಳಿದು ಬಿಡುತ್ತಾರೆ. ಕುಟುಂಬದಲ್ಲಿ ಹೆಚ್ಚಿನ ಮಕ್ಕಳಿದ್ದ ಸಂದರ್ಭದಲ್ಲಿ ಹೆಚ್ಚಿನ ಹೊರೆ ಅನಿವಾರ್ಯವಾಗಿ ಹೆಣ್ಣುಮಕ್ಕಳ ಮೇಲೇ ಬೀಳುವುದರಿಂದ, ಹಾಗೂ ಪಕ್ಕದ ಹಳ್ಳಿಗಳಿಗೆ ಓದಲು ಹೋಗಬೇಕಾದಾಗ ಆಗುವ ಆಯಾಸದಿಂದ ಕೂಡ ಹೆಣ್ಣುಮಕ್ಕಳ ವಿದ್ಯಾಭ್ಯಾಸ ನಿರೀಕ್ಷಿತ ಪ್ರಮಾಣದಲ್ಲಿ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೆಣ್ಣುಮಕ್ಕಳಿಗೆ ನೀಡುತ್ತಿರುವ ಉಚಿತ ಸೈಕಲ್ ಯೋಜನೆ ಒಂದಿಷ್ಟು ಬದಲಾವಣೆಯನ್ನು ತಂದಿದ್ದರೂ ಆದು ಇನ್ನೂ ಲಕ್ಷಾಂತರ ಬಾಲೆಯರನ್ನು ತಲುಪಬೇಕಿದೆ.

ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮುಖ್ಯ ಹಿನ್ನಡೆ ಎಂದು ಭಾವಿಸಲಾಗಿದೆ. ಜೊತೆಗೆ ಮಹಿಳಾ ಶಿಕ್ಷಕರ ಕೊರತೆಯೂ ಹೆಣ್ಣುಮಕ್ಕಳ ಶಿಕ್ಷಣದ ಆಸಕ್ತಿಯನ್ನು ಪೋಷಕರಲ್ಲಿ ಕಡಿಮೆ ಮಾಡುತ್ತದೆ. ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ೨೯% ಮಹಿಳಾ ಶಿಕ್ಷಕರು, ಹಾಗೂ ಪ್ರೌಡ ಶಿಕ್ಷಣದ ಹಂತದಲ್ಲಿ ಕೇವಲ ೨೨% ಮಹಿಳಾ ಶಿಕ್ಷಕರಿರುವುದು ಪರೋಕ್ಷವಾಗಿ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರುತ್ತದೆ. ಈ ಯಾವ ಸಮಸ್ಯೆಗಳೂ ಗಂಡುಮಕ್ಕಳನ್ನು ಕಾಡದೇ ಇರುವುದರಿಂದ ಅವರ ಶಿಕ್ಷಣ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದರೆ ಹೆಣ್ಣುಮಕ್ಕಳಿಗೆ ಸಮಾನ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸರ್ಕಾರದಿಂದ ನಿರಂತರ ಪ್ರಯತ್ನಗಳು ನಡೆದಿವೆ. ಶಾಲೆ ಬಿಟ್ಟ ಹೆಣ್ಣುಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮನ ಒಲಿಸಲು ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಆದರ ಫಲವಾಗಿ ಹೆಚ್ಚಿನ ಹೆಣ್ಣುಮಕ್ಕಳು ಓದಿನ ಬಗೆಗೆ ಆಸಕ್ತರಾಗಿರುವುದು ಒಂದು ಆಶಾದಾಯಕ ಬೆಳವಣಿಗೆ.

೧೨

ಇದರೊಂದಿಗೆ ಸರ್ಕಾರದ ವತಿಯಿಂದ ಗ್ರಾಮಾಂತರ ಪ್ರದೇಶದ ಹೆಣ್ಣುಮಕ್ಕಳಿಗಾಗಿ ಶಿಕ್ಷಣದ ಸೌಲಭ್ಯ ದೊರಕುವಂತೆ ಮಾಡಲು ಪ್ರತಿ ಹಳ್ಳಿಯಲ್ಲಿಯೂ ಸಾಲೆಗಳನ್ನು ತೆರೆಯಬೇಕು. ಇದು ಸಾಧ್ಯವಾಗದಿದ್ದರೆ ಉಚಿತ ಸರ್ಕಾರಿ ಬಸ್‌ ಸೌಲಭ್ಯವನ್ನು ಒದಗಿಸಬೇಕು. ಅವರ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಕೆಲವು ಹಳ್ಳಿಗಳನ್ನು ಒಳಗೊಂಡಂತೆ ಕಾಲೇಜು ಶಿಕ್ಷಣ ವ್ಯವಸ್ಥೆ, ವೃತ್ತಿ ತರಬೇತಿ ಕೇಂದ್ರಗಳು, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯಬೇಕು. ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಸೌಕರ್ಯವಿರುವ ವಿದ್ಯಾರ್ಥಿನಿಲಯಗಳನ್ನು ದೊಡ್ಡ ಪ್ರಮಾಣದಲ್ಲಿ ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಒದಗಿಸಬೇಕು.ಹೆಣ್ಣುಮಕ್ಕಳ ಶಿಕ್ಷಣವೆಂದರೆ ಅವಶ್ಯಕ ಮೂಲ ಶಿಕ್ಷಣ ಮಾತ್ರವಲ್ಲ ಅವರು ಸಂಪೂರ್ಣವಾಗಿ ಸ್ವಾವಲಂಬಿಗಳಾಗುವ ನೆಲೆಯಲ್ಲಿ ಎಲ್ಲ ರೀತಿಯ ಅನುಕೂಲವನ್ನೂ ಸರ್ಕಾರ ಮಾಡಿಕೊಡಬೇಕು. ಆಗಿ ಮಾತ್ರ ಆರ್ಥಿಕ ದಾಸ್ಯವನ್ನು ಮೀರಿ ಆತ್ಮ ಸ್ವಾತಂತ್ರ್ಯದ ಸಿದ್ಧಿಯೆಡೆಗೆ ಸಾಗಲು ನಮ್ಮ ಹೆಣ್ಣುಮಕ್ಕಳಿಗೆ ಸಾಧ್ಯವಾಗುತ್ತದೆ.

ಇಂದು ಕಾಲ ವೇಗವಾಗಿ ಓಡುತ್ತಿದೆ. ಜೊತೆಗೆ ಅದು ಇಂದು ಸ್ಪರ್ಧಾತ್ಮಕವಾಗಿದೆ. ಅದಕ್ಕೆ ತಕ್ಕಂತೆ ನಮ್ಮ ಹೆಣ್ಣುಮಕ್ಕಳು ಆತ್ಮವಿಶ್ವಾಸ, ಛಲ, ಧೈರ್ಯವನ್ನು ತುಂಬುವುದರೊಂದಿಗೆ ಬದುಕನ್ನು ಯಾವುದೇ ಸಂದಿಗ್ಧ ಪರಿಸ್ಥಿಯಿಯಲ್ಲೂ ಎದುರಿಸುವ ಮನೋಸ್ಥೈರ್ಯವನ್ನು ನೀಡಬೇಕಿದೆ. ಅಂತಹ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕಿದೆ. ಉನ್ನತ ವ್ಯಾಸಂಗ ಮಾಡಿದ ನಮ್ಮ ಅನೇಕ ಮಹಿಳೆಯರು ಇಂದಿಗೂ ಮೂಢನಂಬಿಕೆಗಳ ದಾಸರೂ, ಕಂದಾ ಚಾರಿಗಳೂ, ಗೊಡ್ಡು ಸಂಪ್ರದಾಯಸ್ಥರೂ ಆಗಿರುತ್ತಾರೆ. ಹಾಗಿದ್ದರೆ ನಮ್ಮ ಶಿಕ್ಷಣ ನಮಗೆ ನೀಡುತ್ತಿರುವುದಾದರೂ ಏನನ್ನು? ಶಿಕ್ಷಣ ಜ್ಞಾನದ ಪರಿಧಿಯನ್ನು ವಿಸ್ತರಿಸುವುದರೊಂದಿಗೆ, ಅರಿವಿನ ಬಾಗಿಲನ್ನು ಬೇರೆ ಭೇರೆ ಕ್ಷೇತ್ರಗಳಿಗೆ ವಿಸ್ತರಿಸಬೇಕು. ನಾವು ವೈಚಾರಿಕವಾಗಿ, ಚೌಕಟ್ಟುಗಳಿಂದ ಮುಕ್ತವಾಗಿ ಚಿಂತಿಸುವ ನೆಲೆಯಲ್ಲಿ ನಮ್ಮನ್ನು ತಯಾರು ಮಾಡಬೇಕು. ಮಹಿಳಾ ಸಬಲೀಕರಣದ ಮೊದಲ ಮೆಟ್ಟಿಲು, ಸ್ವಾವಲಂಬನೆಯ ಮೊದಲ ಹೆಜ್ಜೆ ಹೆಣ್ಣುಮಕ್ಕಳ ಶಿಕ್ಷಣವಾಗಿರುವುದರಿಂಧ ಭವಿಷ್ಯದಲ್ಲಿ ದೃಢತೆಯನ್ನು ಬಯಸುವ ಹೆಣ್ಣುಮಕ್ಕಳೆಲ್ಲರಿಗೆ ಇದು ಅತ್ಯಂತ ಅವಶ್ಯಕ. ಈ ತಿಳಿವನ್ನು ಪ್ರತಿ ಹೆಣ್ಣು ಮಗುವಿನಲ್ಲೂ ಮೂಡಿಸಬೇಕಿರುವುದೇ ಇಂದಿನ ತುರ್ತು.

೧೩

ಕರ್ನಾಟಕದ ಜನಸಂಖ್ಯೆಯಲ್ಲಿ ಸುಮಾರು ಮೂರು ಕೋಟಿ ಮಹಿಳೆಯರಿದ್ದಾರೆ. ಪ್ರತಿ ೧೦೦೦ ಪುರುಷರಿಗೆ ೯೬೪ ಮಂದಿ ಮಹಿಳೆಯರಿದ್ದಾರೆಂದು ಲಿಂಗಾನುಪಾತದ ಅಧ್ಯಯನಗಳು ಹೇಳುತ್ತವೆ. ಇದರಲ್ಲಿ ಶೇ. ೬೪ರಷ್ಟು ಗ್ರಾಮೀಣ ಕರ್ನಾಟಕದಲ್ಲಿ ವಾಸಿಸುತ್ತಾ ಇದ್ದರೆ ಉಳಿದ ಶೇ. ೩೬ ಮಂದಿ ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ. ಭಾರತದಲ್ಲಿನ ೧.೫ ಕೋಟಿ ಹೆಣ್ಣು ಶಿಶುಗಳಲ್ಲಿ ಶೇ.೨೫ ರಷ್ಟು ಮಕ್ಕಳು ತಮ್ಮ ೧೫ ನೇ ಹುಟ್ಟುಹಬ್ಬವನ್ನು ಕಾಣುವುದಿಲ್ಲ. ಪ್ರತಿ ವರ್ಷ ೫೦ ಲಕ್ಷಕ್ಕೂ ಹೆಚ್ಚು ಗರ್ಭಪಾತ ಮಾಡಲಾಗುತ್ತಿದೆ. ಅಪೌಷ್ಟಿಕತೆ ನಮ್ಮ ಗ್ರಾಮೀಣ ಭಾರತದ ಮಹಿಳೆಯರಲ್ಲಿದೆ. ನಮ್ಮ ಸಂಪ್ರದಾಯ ಹಾಗೂ ಪದ್ಧತಿಯಿಂದಾಗಿ ಅವಳು ಊಟ ಮಾಡುವುದು ಕೊನೆಯಲ್ಲಿ ಮತ್ತು ಉಳಿದ ಆಹಾರವನ್ನು. ಜೊತೆಗೆ ಉಪವಾಸ, ಒಂದು ಹೊತ್ತು ಆಹಾರ ತೆಗೆದುಕೊಳ್ಳುವಂತಹ ಮೂಢನಂಬಿಕೆಗಳು. ಇದು ಬಸುರಿಯಿದ್ದಾಗಲೂ ಮುಂದುವರೆದು ಬಲಹೀನ ಮಕ್ಕಳನ್ನು ಹೆರುವುದು ನಿರಂತರವಾಗಿದೆ. ಕರ್ನಾಟಕದ ಸಾಮಾನ್ಯ ಮಹಿಳೆಯರಲ್ಲಿ ಶೇ.೫೦ ಮಂದಿ ರಕ್ತ ಹೀನತೆಯಿಂದ ಮತ್ತು ಅದರಿಂದ ಉಂಟಾಗುವ ಹಲವು ರೀತಿಯ ಆರೋಗ್ಯದ ಸಮಸ್ಯೆಗಳಿಂದ ನರಳುತ್ತಿದ್ದಾರೆ. ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಮಹಿಳಾ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಕೊನೆಯ ಸ್ಥಾನದಲ್ಲಿದೆ. ಇಲ್ಲಿನ ಶೇ. ೩೦ ರಷ್ಟು ಮಹಿಳೆಯರು ಪ್ರತಿದಿನ ತಾವು ತಿನ್ನಬೇಕಾದ ಸರಾಸರಿ ಆಹಾರದಲ್ಲಿ ಅರ್ಧದಷ್ಟನ್ನು ಕೂಡ ಪಡೆಯಲಾರದ ಸ್ಥಿತಿಯಲ್ಲಿ ಇದ್ದಾರೆ. ಪುರುಷರ ಆರೋಗ್ಯಕ್ಕೆ ಸಿಗುವ ನಿಗಾ ಹೆಣ್ಣುಮಕ್ಕಳ ಆರೋಗ್ಯಕ್ಕೆ ಸಿಕ್ಕುವುದಿಲ್ಲ ಎಂಬುದು ಸರ್ವವಿಧಿತ. ಹಣಗಳಿಸುವ ಮಹಿಳೆ ಕೂಡ ಸಾಮಾನ್ಯವಾಗಿ ಅದನ್ನು ತನ್ನ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣಕ್ಕೆ ಬಳಸುತ್ತಾಳೆ. ತನ್ನ ಆರೋಗ್ಯದ ಕಡೆಗೆ ಕಾಳಜಿ ಮಾಡುವಷ್ಟು ಸಮಯ ಹಾಗೂ ಹಣ ಹೆಚ್ಚಿನ ಮಹಿಳೆಯರಲ್ಲಿ ಇರುವುದಿಲ್ಲ.

ಒಟ್ಟಾರೆ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಲಿಂಗಾನುಪಾತ ಕಡಿಮೆಯಾಗುತ್ತಿದೆ. ೨೦೦೧ ರಲ್ಲಿ ಪ್ರತಿ ೧೦೦೦ ಪುರುಷರಿಗೆ ೯೩೩ ಹೆಣ್ಣುಮಕ್ಕಳಿದ್ದು, ಅದು ಇತ್ತೀಚೆಗಿನ ವರದಿಯ ಪ್ರಕಾರ ೯೨೭ಕ್ಕೆ ಇಳಿದಿರುವುದು ಅತ್ಯಂತ ಆತಂಕಕಾರಿಯಾಗಿದೆ. ಸಧ್ಯ ಹೆಣ್ಣು ಭ್ರೂಣ ಹತ್ಯೆಯು ಒಂದು ಗುಪ್ತ ಭಯೋತ್ಪಾದಕನಂತೆ ಸಮಾಜವನ್ನು ಕಾಡುತ್ತಿದೆ. ಪ್ರತಿ ವರ್ಷ ದೇಶದಲ್ಲಿ ಲಕ್ಷಾಂತರ ಹೆಣ್ಣು ಭ್ರೂಣಹತ್ಯೆ ಆಗುತ್ತಿದೆಯೆಂದು ಒಂದು ಸಂಶೋಧನಾ ವರದಿ ಹೇಳುತ್ತದೆ. ಇದು ಹೀಗೇ ಮುಂದುವರೆದರೆ ಸಮಾಜದಲ್ಲಿ ಗಂಡಿಗೆ ವಿವಾಹಕ್ಕಾಗಿ ಹೆಣ್ಣು ದೊರೆಯದೇ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ಈಗಾಗಲೇ ಅನೇಕ ರಾಜ್ಯಗಳಲ್ಲಿ ಹೇಣ್ಣುಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು ಹೊರ ರಾಜ್ಯಗಳಿಂದ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯ ಕರಾಳ ಮುಖಗಳಾದ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಿತಿಮೀರಿದ ವೇಶ್ಯಾವಾಟಿಕೆ, ಹೆಣ್ಣುಮಕ್ಕಳ ಮಾರಾಟ, ಕಣ್ಮರೆಯಂತಾ ಪ್ರಕರಣಗಳು ಹೆಚ್ಚಾಗಿ, ದಿನನಿತ್ಯ ನಮ್ಮ ಕಣ್ಣಿನ ಮುಂದೆ ಕಾಣುತ್ತಿದೆ. ತನ್ನ ಭ್ರೂಣದಲ್ಲಿರುವ ಮಗು ಹೆಣ್ಣಾದರೂ ಅದನ್ನು ಚಿವುಟಿ ಹಾಕದೇ ಅದನ್ನು ಪುರುಷನಷ್ಟೇ ದಿಟ್ಟವಾಗಿ ಬೆಳೆಸಿ, ಸಮಾಜದ ಆಸ್ತಿಯನ್ನಾಗಿಸುವಂತಾ ಕೆಲಸ ತುರ್ತಾಗಿ ಮತ್ತು ಆತ್ಮವಿಶ್ವಾಸದಿಂದ ನಮ್ಮ ಹೆಣ್ಣುಮಕ್ಕಳಿಂದ ನಡೆಯಬೇಕಿದೆ. ತನ್ನ ಪ್ರತಿರೂಪ ಹಾಗೂ ತನ್ನ ವಂಶವನ್ನು ಬೆಳೆಸುವ ಸವಾಲನ್ನು ಗಂಭಿರವಾಗಿ ಸ್ವೀಕರಿಸಬೇಕಿದೆ. ಹುಟ್ಟುವ ಹೆಣ್ಣುಮಕ್ಕಳ ಭವಿಷ್ಯ ಹೆಣ್ಣಿನ ಗಟ್ಟಿ ನಿರ್ಧಾರದ ಮೇಲೆಯೇ ಅವಲಂಬಿತವಾಗಿದೆ. ಇದು ಬರಿಯ ಹೆಣ್ಣುಮಕ್ಕಳ ಹೋರಾಟವಾಗದೇ ಇಡೀ ಸಮಾಜದ, ಪ್ರತಿಯೊಬ್ಬ ಮಾನವ ಜೀವಿಯ ಹೋರಾಟವಾಗಬೇಕು, ಮಹಿಳೆಯ ಬಗೆಗಿನ ಸಮಾಜದ ಒಟ್ಟಾರೆ ಗ್ರಹಿಕೆ ಮತ್ತು ಮನೋಭಾವ ಬದಲಗುವ ನೆಲೆಗಳಲ್ಲಿ ನಮ್ಮ ಪ್ರಯತ್ನಗಳು ಸಾಗಬೇಕಿವೆ.

೧೪

ಮಹಿಳಾ ಆರೋಗ್ಯದ  ಸ್ಥಿತಿ ಈಗಲೂ ಚಿಂತಾಜನಕವಾಗಿಯೇ ಇದೆ. ಮಹಿಳೆಯರ ಮರಣ ಪ್ರಮಾಣ ಪುರುಷರ ಮರಣ ಪ್ರಮಾಣಕ್ಕಿಂತ ಅತ್ಯಧಿಕವಾಗಿದೆ. ಅವಳ ಫಲವಂತಿಕೆಯ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅವಳಿಗೆ ನಿಗದಿತ ಪೋಷಕಾಂಶ ಹಾಗೂ ಪೌಷ್ಟಿಕಾಂಶದ ಕೊರತೆಯಿಂದಾಗಿ ಬಸುರಾದಾಗಲೇ ಮರಣ ಹೊಂದುವ ಮಹಿಳೆಯರ ಪ್ರಮಾಣ, ಶಿಶು ಮರಣದ ಪ್ರಮಾಣ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹೆಚ್ಚಾಗಿಯೇ ಇದೆ. ವರ್ಷಕ್ಕೆ ೫ ರಿಂದ ೬ ದಶಲಕ್ಷ ಅಸುರಕ್ಷಿತ ಗರ್ಭ ಪಾತಗಳು ನಡೆಯುತ್ತಿರುವ ದಾಖಲೆಗಳಿವೆ. ಯಾವ ಶಾಸನವೂ ಮಹಿಳೆಯ ಲೈಂಗಿಕ ಹಾಗೂ ಪ್ರಜನನಾತ್ಮಕ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗದಿರುವುದು ವಿಪರ್ಯಾಸ.

ಇತ್ತೀಚೆಗೆ ಮಾಧ್ಯಮಗಳಲ್ಲಿ ಚರ್ಚಿತವಾಗುತ್ತಿರುವ ಮಹಿಳೆಗೆ ಸಂಬಂಧಿಸಿದ ಮುಖ್ಯವಾದ ವಿಷಯಗಳೆಂದರೆ ವಿವಾಹಪೂರ್ವ ಲೈಂಗಿಕ ಸಂಬಂಧ ಮತ್ತು ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವಿಕೆ ಕುರಿತಾದದ್ದು. ಇವು ಸರಿಯೋ ತಪ್ಪೋ ಎಂಬ ಚರ್ಚೆಗಿಂತ ವಾಸ್ತವ ಸ್ಥಿತಿಯ ಬೇರೆ ಬೇರೆ ಮುಖಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವೆನಿಸುತ್ತದೆ. ಈ ವಿಷಯಗಳು ನೇರವಾಗಿ ಮತ್ತು ಮುಖ್ಯವಾಗಿ ಹೆಣ್ಣಿಗೆ ಸಂಬಂಧಿಸಿದವಾದರೂ ಎಂದಿನಂತೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಉತ್ಸಾಹದಿಂದ ಪೂರ್ವ ಪರ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹ.

ಒಂದು ಮನಸ್ಸು ಹೆಣ್ಣು ಹೀಗೆಯೇ ಇರಬೇಕು ಎಂದು ಯೋಚಿಸುವ ಸಂಪ್ರದಾಯಬದ್ಧ ಪೂರ್ವಾಗ್ರಹ ಪೀಡಿತ ಮನಸ್ಥಿತಿಯದಾದರೆ, ಇನ್ನೊಂದು ಮುಕ್ತಕಾಮದ ಅನುಕೂಲಗಳ ಬಗ್ಗೆ ಯೋಚಿಸುವ ಲಂಪಟ ಮನಸ್ಸು. ಇವುಗಳನ್ನು ಮೀರಿ ಹೆಣ್ಣುಮಕ್ಕಳ ಮನಸ್ಸನ್ನು ಅವರಿರುವಂಥಾ ಸ್ಥಿತಿಯನ್ನು ವಿವೇಚಿಸಿ ನಿಜವಾಗಿ ಹೆಣ್ಣಿಗೆ ಏನು ಬೇಕು? ಎಂದು ಯೋಚಿಸುವ ಮನಸ್ಸುಗಳು ಕಡಿಮೆ. ನಮ್ಮ ಬಹಳಷ್ಟು ವಿಚಾರಗಳು, ಕಾನೂನುಗಳು ಹೆಚ್ಚಾಗಿ ನಗರ ಕೇಂದ್ರಿತ – ಉಚ್ಚವರ್ಗ – ಸುಶಿಕ್ಷಿತ – ಬೌದ್ಧಿಕ ಸಮಾಜವನ್ನು ಉದ್ದೇಶಿಸಿ ರೂಪುಗೊಳ್ಳುವಂಥವು. ಹಾಗೇ ನಮ್ಮ ಮಾಧ್ಯಮಗಳೂ ಹೆಚ್ಚಾಗಿ ಇವುಗಳ ಪರ. ಗ್ರಾಮೀಣ ಪ್ರದೇಶದ – ಬಡ – ಅಶಿಕ್ಷಿತ ಅದರಲ್ಲೂ ಮುಖ್ಯವಾಗಿ ಮುಗ್ಧ ಅಸಹಾಯಕ ಹೆಣ್ಣುಮಕ್ಕಳ ಬದುಕಿನ ಮೇಲೆ ಇವು ಯಾವ ರೀತಿಯ ಪರಿಣಾಮವನ್ನು ಬೀರಬಲ್ಲವು ಎಂಬುದನ್ನು ಚರ್ಚಿಸುವ ಸಂದರ್ಭಗಳು ಬಹಳ ಕಡಿಮೆ. ಇಲ್ಲಿ ಅಳುವ ಮಗುವಿಗಷ್ಟೇ ಹಾಲು. ದನಿಯಿದ್ದವರಿಗಷ್ಟೇ ನ್ಯಾಯ.

ಇತ್ತೀಚೆಗೆ ನಮ್ಮ ಹೆಣ್ಣುಮಕ್ಕಳು ವಿಭಿನ್ನ ಕಾರಣಗಳಿಂದಾಗಿ ೧೦ – ೧೧ನೆಯ ವಯಸ್ಸಿಗೇ ಋತುಮತಿಯರಾಗುತ್ತಿದ್ದಾರೆ. ಅವರ ದೇಹ ಪ್ರಬುದ್ಧವಾಗುವಷ್ಟು ವೇಗದಲ್ಲಿ ಮನಸ್ಸು ಹಾಗೂ ಬುದ್ಧಿ ಪ್ರಬುದ್ಧವಾಗಲಾರದೆಂಬುದು ನಿರ್ವಿವಾದ. ವಯೋಸಹಜಆಕರ್ಷಣೆ, ಅಸಹಾಯಕತೆ, ಮುಗ್ಧ ಪ್ರೇಮದ ಹೆಸರಿನಲ್ಲಿ ಲೈಂಗಿಕ ಶೋಷಣೆಗೆ ಗುರಿಯಾಗಿ ಕುಟುಂಬದ ಆಶ್ರಯವಿಲ್ಲದೇ ಅಡ್ಡದಾರಿ ಹಿಡಿದಿದ್ದ ಸಾವಿರಾರು ಹೆಣ್ಣುಮಕ್ಕಳು ಇಂದು ರಾಜ್ಯದಾದ್ಯಂತ ರಿಮ್ಯಾಂಡ್‌ ಹೋಂಗಳಲ್ಲಿ, ಬಾಲಮಂದಿರಗಳಲ್ಲಿ ಸರ್ಟಿಫೈಡ್ ಶಾಲೆಗಳಲ್ಲಿ ಇದ್ದಾರೆ. ಅಲ್ಲಿನ ಬಹಳಷ್ಟು ಹೆಣ್ಣುಮಕ್ಕಳ ಕಥೆ ಅರಿವಿಲ್ಲದ ವಿವಾಹ ಪೂರ್ವ ಲೈಂಗಿಕ ಸಂಬಂಧದಿಂದ ದುರಂತದಲ್ಲಿ ಕೊನೆಗೊಂಡಿರುವಂತದ್ದು ಬಹಳಷ್ಟು ಸಂದರ್ಭದಲ್ಲಿ ಹೀಗೆ ಹೆಣ್ಣುಮಕ್ಕಳನ್ನು ನಂಬಿ ಮಾಡುವವರು ಹತ್ತಿರದ ಸಂಬಂಧಿಗಳು ಹಾಗೂ ಆತ್ಮೀಯರೇ ಆಗಿರುತ್ತಾರೆ. ಮರ್ಯಾದೆಗೆ ಅಂಜಿ ಇಂತಹ ವಿಷಯಗಳು ಬಹಿರಂಗಗೊಳ್ಳದೇ, ಅಪರಾಧಿ ರಾಜಾರೋಷವಾಗಿ ತಿರುಗಾಡುತ್ತಿರುತ್ತಾನೆ. ಆದರೆ ಹೆಣ್ಣುಮಕ್ಕಳು ಮಾತ್ರ ಜೀವನ ಪರ್ಯಂತ ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ. ತಮ್ಮ ಬದುಕಿನ ಅಮೂಲ್ಯ ಗಳಿಗೆಗಳನ್ನು ತಮ್ಮವರೆನ್ನುವವರಿಲ್ಲದೇ, ಸುರಕ್ಷಿತ ಭವಿಷ್ಯವಿಲ್ಲದೇ ಕಳೆಯಬೇಕಾಗುತ್ತದೆ.

೧೫

ಹಾಸನದಂತ ಚಿಕ್ಕ ಜಿಲ್ಲಾ ಕೇಂದ್ರವೊಂದರಲ್ಲೇ ೧೫೦೦ ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ವಿವಿಧ ಸೌಲಭ್ಯಗಳಿಗಾಗಿ, ಮುಖ್ಯವಾಗಿ ಏಡ್ಸ್ ಮತ್ತಿತರ ಲೈಂಗಿಕ ರೋಗಗಳು ಹರಡದಂತೆ ಸುರಕ್ಷಿತ ಲೈಂಗಿಕತೆಯ ಅರಿವು ಪಡೆದುಕೊಳ್ಳಲು ತಮ್ಮದೇ ಒಂದು ಸಂಪರ್ಕ ಜಾಲವನ್ನು ಮಾಡಿಕೊಂಡಿದ್ದಾರೆ. ಇವರೆಲ್ಲಾ ಬಡ ಮಹಿಳೆಯರು ಎಂದು ಬೇರೆ ಹೇಳಬೇಕಿಲ್ಲ ಮತ್ತು ಇವರ್ಯಾರೂ ಸ್ವಇಚ್ಛೆಯಿಂದ ಈ ವೃತ್ತಿಯನ್ನು ಆಯ್ದುಕೊಂಡವರಲ್ಲ. ಅನಿವಾರ್ಯತೆಗೆ ಸಿಕ್ಕು, ಅಸಹಾಯಕತೆಯಿಂದ ಬಲಿಪಶುಗಳಾದವರು. ಇನ್ನೊಂದು ಮುಖ್ಯ ವಿಷಯವೆಂದರೆ ಈ ಮಹಿಳೆಯರು, ಪುರುಷರು ತಮಗೆ ಅಂಟಿಸುವ ಗುಪ್ತ ರೋಗಗಳು, ಹೆಚ್‌ಐವಿ, ಏಡ್ಸ್‌ ಮುಂತಾದ ಲೈಂಗಿಕ ಸಂಬಂಧದಿಂದ ಉಂಟಾಗುವ ರೋಗಗಳ ವಾಹಕರಾಗಿ ಕೆಲಸ ಮಾಡುತ್ತಾರೆ.

ಇನ್ನು ಶ್ರೀಮಂತ ಹಾಗೂ ಮೇಲ್ಮಧ್ಯಮ ವರ್ಗಗಳ ಹೆಣ್ಣುಮಕ್ಕಳೂ ಈ ದಂಧೆಯನ್ನು ಗೌಪ್ಯವಾಗಿ, ವ್ಯವಸ್ಥಿತವಾಗಿ, ಶೋಕಿಗಾಗಿ, ಹಣಕ್ಕಾಗಿ ಹಾಗೂ ತಮ್ಮ ಕಾರ್ಯ ಸಾಧನೆಗಾಗಿ ನಡೆಸುತ್ತಿದ್ದರೂ ಅದು ಹೆಚ್ಚಿನ ಸಂದರ್ಭದಲ್ಲಿ ಹೊರಜಗತ್ತಿಗೆ ಕಾಣುವುದಿಲ್ಲ ಮಖ್ಯ ಅಂಶವೆಂದರೆ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿಲ್ಲವಾದರೂ ಅದನ್ನು ಸಾಮಾಜಿಕವಾಗಿ ಒಪ್ಪಿಕೊಂಡಿದ್ದೇವೆ. ಹೀಗೆಂದೇ ಲೈಂಗಿಕ ಕಾರ್ಯಕರ್ತೆಯರಿಗೆ ಸುರಕ್ಷಿತ ಲೈಂಗಿಕತೆಯ ಪಾಠವನ್ನು ಆರೋಗ್ಯ ಇಲಾಖೆಯೂ ಸೇರಿದಂತೆ ವಿವಿಧ ಸ್ವಯಂಸೇವಾ ಸಂಸ್ಥೆಗಳು ನೀಡುತ್ತಿವೆ. ಗಂಡು – ಹೆಣ್ಣಿನ ಲೈಂಗಿಕತೆಯ ವಿಚಾರದಲ್ಲಿಯೇ ನಮ್ಮ ಸಮಾಜದಲ್ಲಿ ದ್ವಂದ್ವ ನೀತಿ ಇದೆ. ವೇಶ್ಯಾವಾಟಿಕೆಯಲ್ಲಿ ಇಬ್ಬರೂ ತೊಡಗಿದ್ದರೂ ಮಹಿಳೆಗೆ ಮಾತ್ರ ಅನೈತಿಕತೆಯ ಪಟ್ಟ ಕಟ್ಟಲಾಗುತ್ತದೆ. ಆದರೆ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸುವ ಕೂಗಿನ ಹಿಂದೆ ಪುರುಷ ಸುಖದ ಹುನ್ನಾರವಿದೆ. ವೇಶ್ಯಾ ವಾಟಿಕೆಯನ್ನು ಯಾವುದೇ ದೇಶ ಕಾನೂನು ಬದ್ಧಗೊಳಿಸಲಿ ಬಿಡಲಿ ವಿಶ್ವದ ಮೂರನೇ ಹೆಚ್ಚು ಆದಾಯ ಗಳಿಕೆಯ ಬೃಹತ್‌ ಉದ್ಯಮವಾಗಿ ಸೆಕ್ಸೋದ್ಯಮ ಸ್ಥಾನ ಪಡೆದಿರುವುದು ನಾವೆಲ್ಲರೂ ಒಪ್ಪಲೇಬೇಕಾದ ಸತ್ಯ. ಮೊದಲ ಸ್ಥಾನದಲ್ಲಿರುವುದು ಶಸ್ತ್ರಾಸ್ತ್ರಗಳ ಉದ್ಯಮ ಹಾಗೂ ಎರಡನೇ ಸ್ಥಾನದಲ್ಲಿರುವುದು ಮಾದಕವಸ್ತುಗಳದು. ಇದು ನಮ್ಮ ಇಡೀ ಜಗತ್ತು ಇಂದು ಎತ್ತ ಸಾಗುತ್ತಿದೆ ಎಂಬುದರ ದಿಕ್ಸೊಚಿಯಾಗಿದೆ.

೧೬

ಕಳೆದ ಮೂರು ವರ್ಷದಲ್ಲಿ ೭೦ ಕ್ಕೂ ಹೆಚ್ಚು ಬೀದಿಗೆ ಬಿಸಾಡಲ್ಪಟ್ಟ ನವಜಾತ ಶಿಶುಗಳನ್ನುಹಾಸನದಲ್ಲಿ ಸಂರಕ್ಷಿಸಲಾಗಿದೆ ಹಾಗೂ ಇನ್ನೂ ಹಲವು ಬಿಸಾಡಲ್ಪಟ್ಟ ನವಜಾತ ಶಿಶುಗಳ ನಾಯಿ – ಹಂದಿಗಳ ಪಾಲಾಗಿ ಜೀವ ಕಳೆದುಕೊಂಡಿವೆ. ಈ ಮಕ್ಕಳ ತಾಯಂದಿರಲ್ಲಿ ಹೆಚ್ಚಿನವರು ವಿವಾಹ ಪೂರ್ವ ಲೈಂಗಿಕ ಸಂಬಂಧಗಳಿಂದ ಮೊಸಹೋದವರೇ ಆಗಿದ್ದಾರೆ ಎಂಬುದು ಗಮನಾರ್ಹ. ವರ್ಷಕ್ಕೆ ಇಪ್ಪತ್ತಕ್ಕೂ ಹೆಚ್ಚು ಹದಿಹರೆಯದ ಹೆಣ್ಣುಮಕ್ಕಳು ವಿವಿಧ ಕಾರಣಗಳಿಂದಾಗಿ ಹಾಸನ ಜಿಲ್ಲೆಯಲ್ಲಿಕಾಣೆಯಾಗುತ್ತಿದ್ದಾರೆ. ಅವರ ಪತ್ತೆಯೇ ಆಗುತ್ತಿಲ್ಲ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣುಮಕ್ಕಳ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಇದು ಒಂದು ಜಿಲ್ಲೆಯ ಉದಾಹರಣೆಯಷ್ಟೇ. ಈ ಕಣ್ಮರೆಯ ಪ್ರಕರಣಗಳು ಊರುಗಳನ್ನು ದಾಟಿದ, ರಾಜ್ಯಗಳನ್ನು ದಾಟಿದ ಒಂದು ಜಾಗತಿಕ ವಿದ್ಯಮಾನವಾಗಿ ಬೆಳೆದಿದೆ. ಈ ಕಣ್ಮರೆಯ ಹಿಂದೆ ವ್ಯವಸ್ಥಿತವಾಗಿ ರೂಪಿಸಿರುವ ದೊಡ್ಡ ದೊಡ್ಡ ಜಾಲಗಳೇ ಇವೆ.

ಜಗತ್ತಿನಲ್ಲಿ ಇದೊಂದು ಬೃಹತ್‌ ಉದ್ಯಮವಾಗಿ ಬೆಳೆಯುತ್ತಿದೆ. ಎಳೆಯ ಮಕ್ಕಳನ್ನು, ಹದಿಹರೆಯದವರನ್ನು ಮತ್ತು ಮಹಿಳೆಯರನ್ನು ಅಪಹರಿಸಿ, ಆಮಿಷ ತೋರಿಸಿ ಸಾಗಿಸುವುದು, ಅವರನ್ನು ಬಗೆಬಗೆಯ ಉದ್ಯಮಗಳಲ್ಲಿ ತೊಡಗಿಸುವುದು ಈ ಜಾಲಗಳ ಕೆಲಸ. ಈ ಉದ್ಯಮಕ್ಕೆ ಇಂತಹುದೇ ಎಂದು ನಿರ್ದಿಷ್ಟ ಹೆಸರಿಲ್ಲ. ಇದಕ್ಕೆ ಸೇವೆ, ಮನೆಗೆಲಸ, ಪಬ್, ಬಾರ್, ಡಾನ್ಸ್‌ಬಾರ್, ಮಸಾಜ್‌ ಪಾರ್ಲರ್, ಪ್ರವಾಸೋದ್ಯಮ ಇತ್ಯಾದಿಗಳ ಮುಖವಾಡವಿದ್ದರೂ ಕೊನೆಗಿದು ವೇಶ್ಯಾವಾಟಿಕೆಯ ಉದ್ಯೋಗ. ಬೇರೆ ಬೇರೆ ಹೆಸರಿದ್ದರೂ ಸೇವೆಯ ಸ್ವರೂಪ ಮಾತ್ರ ಲೈಂಗಿಕ ಸೇವೆ. ಬಾರತದ ಆರು ಮಹಾನಗರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು  ಅಪ್ರಾಪ್ತ ಬಾಲೆಯರು ವೇಶ್ಯಾವಾಟಿಕೆಗಳಲ್ಲಿ ಬದುಕು ಸವೆಸುತ್ತಿರುವುದು ನಮ್ಮ ದೇಶದ ಹೆಣ್ಣುಮಕ್ಕಳ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಇತ್ತೀಚಿನ ವರದಿಯ ಪ್ರಕಾರ ೧೯೯೬ – ೨೦೦೧ ರ ಮಧ್ಯೆ ಭಾರತದಲ್ಲಿ ಕಣ್ಮರೆಯಾದ ಮಹಿಳೆಯರ ಸಂಖ್ಯೆ ೨೨೪೮೦. ಇವರಲ್ಲಿ ೫೪೫೬ ಮಂದಿ ಏನಾದರು ಎಂಬುದು ಇವತ್ತಿಗೂ ತಿಳಿದಿಲ್ಲ. ಇದು ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳು. ಇಲ್ಲಿ ದಾಖಲಾಗದ ಪ್ರಕರಣದ ಸಂಖ್ಯೆ ಇನ್ನೂ ದೊಡ್ಡದಿದೆ. ಹಾಗೇ ಮೇಲೆ ಹೇಳಿದ ಆರು ವರ್ಷಗಳಲ್ಲಿ ಕಣ್ಮರೆಯಾದ ೧೮ ವರ್ಷ ಒಳಗಿನ ಹುಡುಗಿಯರ ಸಂಖ್ಯೆ ೪೪೪೭೬. ಇವರ ಪತ್ತೆ ಇದುವರೆಗೂ ಆಗಿಲ್ಲ.

ಇಲ್ಲಿ ಉಲ್ಲೇಖಿತರಾದ ಹೆಚ್ಚಿನವರು ಲೈಂಗಿಕ ಸಂಬಂಧಗಳಿಂದ ಮೋಸ ಹೋದ ಅಶಿಕ್ಷಿತ, ಅಲ್ಪ ವಿದ್ಯಭ್ಯಾಸ ಪಡೆದ ಬಡ ಹೆಣ್ಣುಮಕ್ಕಳೆಂಬುದನ್ನು ವಿವಿಧ ಇಲಾಖೆಯ ದಾಖಲೆಗಳು ಸ್ಪಷ್ಟೀಕರಿಸುತ್ತವೆ. ಕಿತ್ತು ತಿನ್ನುವ ಬಡತನ, ಬೆಳೆಯುತ್ತಾ ಹೋಗುವ ಕನಸುಗಳು, ಸುಖಜೀವನದ ಹತ್ತಿಕ್ಕಲಾರದ ಆಮಿಷಗಳೂ, ಪ್ರೀತಿಯ ಹೆಸರಿನ ಭ್ರಮೆ ಕಾರಣವಾಗಿ ಈ ಕಣ್ಮರೆಯ ಹಿಂದೆ ಅನೇಕ ದಾರುಣ ಕಥೆಗಳನ್ನು ಹೊಂದಿರುತ್ತವೆ. ಹಲವು ಬಾರಿ ಪೊಲೀಸರು, ಏಜೆಂಟರು, ಮಧ್ಯವರ್ತಿಗಳು ಎಲ್ಲರ ಬೆಂಬಲದಲ್ಲಿಯೇ ಈ ಅಪಹರಣ ಕಾರ್ಯಗಳು ನಡೆಯುವುದರಿಂದ ಇದಕ್ಕೆ ಕಡಿವಾಣ ಹಾಕುವುದು ಕಷ್ಟದ ಕೆಲಸವಾಗಿದೆ. ಸೃಷ್ಟಿ ಸಹಜವಾದ ಲೈಂಗಿಕತೆಯೇ ಹೆಣ್ಣಿಗೆ ಶಾಪವಾಗುವ ಅಸಂಖ್ಯ ಕಥೆಗಳು ಜಗತಿನಾದ್ಯಂತ ಇವರ ಅರಿವಿಲ್ಲದೇ ಇದರ ಸುಳಿಗೆ ಸಿಲುಕುವ ಇಂತಹ ಹೆಣ್ಣುಮಕ್ಕಳಿಗೆ ನ್ಯಾಯ ನೀಡುವವರಾರು? ನಿಜವಾದ ಅಪರಾಧಿಗೆ ಶಿಕ್ಷೆ ನೀಡುವವರು ಯಾರು? ನಮ್ಮ ಕಾನೂನಿಗೆ ಇದನ್ನೆಲ್ಲಾ ನೋಡುವ ಕಣ್ಣು – ಮನಸ್ಸು ಇದೆಯೇ?

೧೭

ಈ ಕಾನೂನು ಬಾಹಿರ ಕೃತ್ಯಕ್ಕೆ ತಡೆಹಾಕಲು ಅನೇಕ ರಾಷ್ಟ್ರಗಳಲ್ಲಿ ಪ್ರಯತ್ನಗಳು ನಡೆಯುತ್ತಿದ್ದರೂ ನಿರೀಕ್ಷಿತ ಫಲವಂತರೂ ಸಿಕ್ಕಿಲ್ಲ. ಕನಾಟಕದಲ್ಲಿಯೂ ಇದಕ್ಕೆ ಬಹಳಷ್ಟು ಪ್ರಯತ್ನಗಳು ನಡೆದಿವೆ. ಆದರೆ ಅನೇಕ ತೊಡಕುಗಳೂ ಇವೆ. ಇಲಾಖೆ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲದೇ ಇರುವುದು, ಮಾಫಿಯಾ ಗ್ಯಾಂಗ್‌ಗಳಿಗೆ ಸರ್ಕಾರಿ ಅಧಿಕಾರಿಗಳ, ರಾಜಕಾರಣಿಗಳ ಪರೋಕ್ಷ ಬೆಂಬಲವೂ ಇರುವುದು, ಅನೇಕ ಸಾಮಾಜಿಕ, ಆರ್ಥಿಕ ಕಾರಣಗಳು, ಅನಕ್ಷರತೆ, ಮೌಢ್ಯ, ಅಸಹಾಯಕತೆ ಎಲ್ಲವೂ ಸೇರಿ ಮಹಿಳೆಯರ ಅಕ್ರಮ ಸಾಗಣೆ ನಿರಾತಂಕವಾಗಿ ನಡೆಯುತ್ತಲೇ ಇದೆ.

ಹಾಗೇ ಕರ್ನಾಟಕ ಹೊಸ ಯೋಜನೆಯೊಂದನ್ನು ರೂಪಿಸುತ್ತಿದೆ. ಈ ಯೋಜನೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿಯೂ ಅಕ್ರಮ ಸಾಗಣೆ ತಡೆಗಾಗಿ ಒಂದು ಘಟಕವಿರುತ್ತದೆ. ಈ ಘಟಕದ ನೇತೃತ್ವವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಹಿಸಿರುತ್ತಾರೆ. ಪೊಲೀಸು, ಕಾರ್ಮಿಕ, ಸಮಾಜಕಲ್ಯಾಣ ಇಲಖೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿ ಈ ಘಟಕವನ್ನು ರೂಪಿಸುತ್ತಾರೆ. ಶೇ.೩೦ ರಷ್ಟು ಮಂದಿ ಮಹಿಳೆಯರೇ ಈ ಘಟಕದಲ್ಲಿ ಇರಬೇಕೆಂಬ ನಿಯಮವೂ ಇದೆ. ಈ ಘಟಕ ತನ್ನ ವ್ಯಾಪ್ತಿಯ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಅಕ್ರಮ ಸಾಗಣೆ ಮತ್ತು ಅಪಹರಣವನ್ನು ತಡೆಯಲು ಪ್ರಯತ್ನಿಸುತ್ತದೆ. ಈ ಘಟಕದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅಗತ್ಯ ನೆರವು ಹಾಗೂ ಇತರ ತಾಂತ್ರಿಕ ಸಹಾಯವನ್ನು ವಿಶ್ವಸಂಸ್ಥೆ ಒದಗಿಸಲಿದೆ.

ಈ ಕಾನೂನು ಬಾಹಿರ ಕೃತ್ಯ ತಡೆಗೆ ಕರ್ನಾಟಕದಲ್ಲಿ ಅನೇಕ ಸವಾಲುಗಳಿವೆ. ಉತ್ತರ ಕರ್ನಾಟಕದ ದೇವದಾಸಿ ಪದ್ಧತಿ, ಅದರ ಸುತ್ತ ಹೆಣೆದುಕೊಂಡಿರುವ ನಂಬಿಕೆಗಳು, ಮೌಢ್ಯಗಳು, ಬಡತನ ಇತ್ಯಾದಿ ವಿಷಯಗಳು ಅಕ್ರಮ ಸಾಗಣೆಗೆ ಬೆಂಬಲ ನೀಡುತ್ತವೆ. ‘ಗುಜ್ಜರಕ್ಕೆ ಹೆಣ್ಣು ಕೊಡುವುದು’ ಉತ್ತರ ಕರ್ನಾಟಕದಲ್ಲಿ ತೀರಾ ಸಾಮಾನ್ಯವಾದ ವಿಷಯವಾಗಿದೆ. ಈ ಹೆಸರಲ್ಲಿ ಹೆಣ್ಣುಮಕ್ಕಳ ಮಾರಾಟವು ನಿರಂತರವಾಗಿ, ಯಾವುದೇ ತಡೆಯಿಲ್ಲದೇ ಸಾಗಿದೆ. ಮದುವೆ ದಲ್ಲಾಳಿಗಳು ಇರುವಂತೆ ಕೆಲ ಹಳ್ಳಿಯಲ್ಲಿಯೂ ಹೆಣ್ಣು ಮಾರಾಟ ಏಜೆಂಟರು ಇದ್ದಾರೆ. ಇನ್ನೂ ಇದೀಗ ಹದಿಹರೆಯಕ್ಕೆ ಕಾಲಿಡುತ್ತಿರುವ ಹೆಣ್ಣುಮಕ್ಕಳನ್ನು ಕುರಿ ಕೋಣಗಳಂತೆ ಬೆಲೆ ಕಟ್ಟಿ ಮಾರಾಟ ಮಾಡಲಾಗುತ್ತಿದೆ. ವಿಚಿತ್ರವೆಂದರೆ ತಾಯಿ ತಂದೆಯರು ಕೂಡ ತಮ್ಮ ಕರುಳ ಕುಡಿಯ ಭವಿಷ್ಯವೇನು ಎಂದು ಯೋಚಿಸದೇ ಒಂದು ಹೆಣ್ಣಿನ ಜವಾಬ್ದಾರಿ, ಮದುವೆ ಹೊರೆ ಕಡಿಮೆಯಾದರೆ ಸಾಕೆಂದು ಸಾಗಹಾಕುತ್ತಿದ್ದಾರೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು  ಇಲ್ಲಿಂದ ಬಡ ಹೆಣ್ಣುಮಕ್ಕಳನ್ನು ಕಡಿಮೆ ಬೆಲೆಗೆ ಕೊಂಡು ಕೊಂಡು ಹೋಗುತ್ತಿರುವ ಅಂಶ ಬೆಳಕಿಗೆ ಬಂದಿದ್ದರೂ ಯಾವ ಕ್ರಮವನ್ನೂ ತೆಗೆದುಕೊಳ್ಳಲಾರದಂತಾ ಸ್ಥಿತಿಯಲ್ಲಿ  ನಮ್ಮ ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿದೆ.