೧೮

ನಮ್ಮಲಿಂದ ಹೀಗೆ ಹೆಣ್ಣುಮಕ್ಕಳನ್ನು ಮಾರಾಟ ಮಡುತ್ತಾ ಹೋದರೆ ಮುಂದೆ ನಮ್ಮ ಸಮಾಜದ ಗತಿಯೇನು? ಎಂದು ಯಾರೂ ಯೋಚಿಸುತ್ತಿಲ್ಲ. ಬೆಳಗಾಂ ಜಿಲ್ಲೆಯ ಬಹಳಷ್ಟು ಹಳ್ಳಿಗಳಿಂದ ನಿತ್ಯವೂ ನೂರಾರು ಹೆಣ್ಣುಮಕ್ಕಳು ಮಾರಾಟವಾಗುತ್ತಿದ್ದಾರೆ. ಹಿಂದೆ ದೇವದಾಸಿ ಹೆಸರಿನಲ್ಲಿ ನಡೆಯುತ್ತಿದ್ದ ಈ ದಂಧೆ ಅಥಣಿ, ಚಿಕ್ಕೋಡಿ, ಸವದತ್ತಿ, ರಾಯಭಾಗ ತಾಲ್ಲೋಕುಗಳಲ್ಲಿ ಈಗಲೂ ಇದೆ. ಅದು ಈಗ ಬೇರೆ ಹೆಸರು ಹಾಗೂ ರೂಪವನ್ನು ಪಡೆದಿದೆ. ಖಾನಾಪುರ ತಾಲೂಕಿನ ಹಳ್ಳಿಗಳಿಂದಹಾಗೂ ಬೈಲಹೊಂಗಲ ತಾಲ್ಲೂಕಿನ ಪಶ್ಚಿಮ ಭಾಗದ ಹಳ್ಳಿಗಳಿಂದ ಹೆಣ್ಣುಮಕ್ಕಳು ಮಾರಾಟವಾಗುತ್ತಿರುವುದನ್ನು ಮಹಿಳಾಪರ ಹೋರಾಟಗಾರ್ತಿಯರು ಪ್ರತಿಭಟಿಸುತ್ತಾ ಬಂದಿದ್ದರೂ ಇದಕ್ಕೆ ಸರಿಯಾದ ಕಾನೂನು ಕ್ರಮ ತೆಗೆದುಕೊಳ್ಳಲು ಪೊಲೀಸ್‌ ಇಲಾಖೆ ಸೋತಿದೆ. ನಿತ್ಯವೂ ನಾಪತ್ತೆ, ಮಾರಾಟದ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರಕಟವಾದರೂ ಇದರ ಹಿಂದಿನ ನಿಗೂಢವನ್ನುಭೇದಿಸಲಾಗಿಲ್ಲ. ನಿಜವಾದ ಅಂಕಿ ಅಂಶಗಳು ಸ್ವತಃ ಪೊಲೀಸರಿಗೂ ತಿಳಿದಿಲ್ಲ. ಯಾಕೆಂದರೆ ಪ್ರಕರಣ ಬೆಳಕಿಗೆ ಬರುತ್ತಿಲ್ಲ. ನಾಪತ್ತೆಯಾದವರು ಏನಾದರು? ಎಲ್ಲಿಹೋದರು? ಮಾರಾಟವಾಗುತ್ತಿರುವ ಈ ಹೆಣ್ಣುಮಕ್ಕಳ ಗತಿ ಏನಾಗುತ್ತಿದೆ? ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಒಮ್ಮೆ ಹೋದ ಹೆಣ್ಣುಮಕ್ಕಳು ಹಿಂದಿರುಗಿ ಬರುವುದೂ ಇಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಅಲ್ಲಲ್ಲಿ ವರದಿಯಾಗುತ್ತಿದ್ದರೂ ಇದನ್ನೊಂದು ಜ್ವಲಂತ ಸಮಸ್ಯೆಯಾಗಿ ಅಧಿಕಾರಿ ವರ್ಗ ಇಂದಿಗೂ ಗಮನ ಹರಿಸದಿರುವುದು ವಿಪರ್ಯಾಸ.

ಇಲ್ಲಿಯ ಹಳ್ಳಿಯ ಜನರು ಹೆಣ್ಣು ಮಾರಾಟವೆಂದರೆ ಮದುವೆ ಮಾಡಿದಂತೆಯೇ ಎಂದು ನೆಂಬಿದಂತವರು. ಕಡು ಬಡತನದಲ್ಲಿರುವ ಈ ಜನರು ನಿಜ ಪರಿಸ್ಥಿತಿ ತಿಳಿದಿದ್ದರೂ ನಿರ್ದಾಕ್ಷಿಣ್ಯವಾಗಿ ಹೆಣ್ಣುಮಕ್ಕಳನ್ನು ಮಾರುತ್ತಿದ್ದಾರೆಂದರೆ ಪರಿಸ್ಥಿತಿಯ ಗಂಭೀರತೆಯನ್ನು ನಾವು ಅರಿಯಬಹುದಾಗಿದೆ. ಒಂದು ಹುಡುಗಿ ೨೫ ರಿಂದ ೫೦ ಸಾವಿರದವರೆಗೆ ಮಾರಾಟವಾಗುತ್ತಾಳೆ. ಆ ಹಣ ಏಜೆಂಟರುಗಳ ಮೂಲಕ ಹಾದು ಕಡೆಯಲ್ಲಿ ತಾಯ್ತಂದೆಯರಿಗೆ ಮುಟ್ಟುವುದು ಎರಡೋ ಮೂರೋ ಸಾವಿರ ಮಾತ್ರ. ಅಷ್ಟು ಕಡಿಮೆ ಹಣಕ್ಕೆ ಹೆಣ್ಣುಮಕ್ಕಳನ್ನು ಮಾರಾಟ ಮಾಡುವಂತಾ ಪರಿಸ್ಥಿತಿ, ಅಜ್ಞಾನ, ಅನಕ್ಷರತೆ, ಮೂಢನಂಬಿಕೆಗಳ ವಿರುದ್ಧ ನಮ್ಮ ಹೋರಾಟಗಳು ನಡೆಯಬೇಕಿವೆ. ಇದು ಕಾಣುವ ವ್ಯಕ್ತಿಗಳೊಂದಿಗಿನ ಹೋರಾಟವಲ್ಲ. ಕಾಣದ ದುಷ್ಟ ಶಕ್ತಿಗಳ ವಿರುದ್ಧದ ಹೋರಾಟ.

ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ‘ಜಾಗೃತ ಮಹಿಳಾ ಒಕ್ಕೂಟ’ದಿಂದ ನಿರಂತರವಾದ ಕೆಲಸ, ಕಾರ್ಯಕ್ರಮಗಳು ಸದ್ದಿಲ್ಲದೇ ನಡೆಯುತ್ತಿವೆ. ಅದು ಉತ್ತರ ಕರ್ನಾಟಕದ ೨೨ ಹಳ್ಳಿಗಳ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯಕರ್ತೆಯರ ಜೊತೆಗೆ ಚರ್ಚೆ ನಡೆಸುತ್ತಾ ಬಂದಿದೆ. ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ, ಸಮಾನ ಅವಕಾಶಗಳ ಬಗ್ಗೆ, ಹೆಣ್ಣು ಭ್ರೂಣಹತ್ಯೆಯ ಪರಿಣಾಮಗಳ ಕುರಿತು, ಲಿಂಗತಾರತಮ್ಯದ ಕುರಿತು ಸಂಘಟನಾತ್ಮಕವಾಗಿ ಸತತ ಸಂವಾದ ನಡೆಸುತ್ತಿದೆ. ಇದು ಸರ್ಕಾರದ ಗಮನಸೆಳೆಯುವಷ್ಟು ಗಟ್ಟಿ ಹೋರಾಟವಾಗಿ ರೂಪಿತವಾಗಬೇಕಿರುವುದು ಇಂದಿನ ಅನಿವಾರ್ಯತೆ.

೧೯

ಶಾಸ್ತ್ರೋಕ್ತ ಹಾಗೂ ಪ್ರೇಮ ವಿವಾಹಗಳೆರಡರಲ್ಲೂ ಇಂದು ಬದ್ಧತೆ, ಪ್ರಾಮಾಣಿಕತೆ ಹಾಗೂ ಹೊಣೆಗಾರಿಕೆ ಕಡಿಮೆಯಾಗುತ್ತಿರುವುದನ್ನು, ವಿಚ್ಛೇದನಗಳು, ವಿವಾಹೇತರ ಸಂಬಂಧಗಳು ಹೆಚ್ಚುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಇದಕ್ಕೆ ಅಸಮಾನತೆಯ ನೆಲೆಯ ಮೇಲೆನಿಂತಿರುವ ನಮ್ಮ ಕುಟುಂಬ ವ್ಯವಸ್ಥೆ ಹಾಗೂ ಮಹಿಳೆಯ ಸಾಮಾಜಿಕ ಮತ್ತು ವೈಯಕ್ತಿಕ ನೆಲೆಯ ಬದಲಾವಣೆಗೆ ತಕ್ಕಂತೆ ಬದಲಾಗದ, ಹೊಂದಾಣಿಕೆ ಮಹಿಳೆಯ ನೆಲೆಯಿಂದಲೇ ಆಗಬೇಕೆಂದು ಅಪೇಕ್ಷಿಸುವ ಪುರುಷ ಮನಸ್ಸು ಮುಖ್ಯ ಕಾರಣಗಳಾಗಿದೆ. ಹಾಗೇ ಕೆಲಸ ಮತ್ತು ಜವಾಬ್ದಾರಿಯ ಸಮಾನ ಹಂಚಿಕೆಯಾಗದಿದ್ದಾಗ ಸಹಜವಾಗಿಯೇ ಸಂಘರ್ಷಗಳು ಪ್ರಾರಂಭವಾಗುತ್ತವೆ. ಅದು ಸಂಬಂಧಗಳ ಬಿರುಕಿಗೆ, ವಿಚ್ಛೇದನಕ್ಕೆ ಕಾರಣವಾಗುತ್ತದೆ.

ಹೀಗಿರುವಾಗ ವಿವಾಹ ಪೂರ್ವ ಲೈಂಗಿಕ ಸಂಬಂಧ ಅಥವಾ ಲಿವಿಂಗ್ ಟುಗೆದರ್ ಸಂಬಂಧಗಳಲ್ಲಿ ಈ ಬದ್ಧತೆ, ಪ್ರಾಮಾಣಿಕತೆಗಳನ್ನು ನಿರೀಕ್ಷಿಸುವುದು ಹೇಗೆ?

ಯಾವುದೇ ಅನಿಶ್ಚಿತ – ಅನಪೇಕ್ಷಿತ ಸಂಬಧದಿಂದ ಹುಟ್ಟುವ ಮಕ್ಕಳ ಮನಸ್ಥಿತಿ ಅದೆಷ್ಟು ಅಭದ್ರತೆಯಿಂದ ಕೂಡಿರಬಹುದೆಂದು ಊಹೆ ಮಾಡಿಕೊಂಡರೂ ಆ ಮಕ್ಕಳ ಸ್ಥಿತಿ ಕುರಿತು ವ್ಯಥೆಯಾಗುತ್ತದೆ. ಪ್ರಬುದ್ಧ ಗಂಡು – ಹೆಣ್ಣಿನ ನಡುವಿನ ಸಂಬಂಧ ಪರಸ್ಪರ ಬದ್ಧತೆ, ಜವಾಬ್ದಾರಿ, ನಂಬಿಕೆಗಳಿಂದ ಕೂಡಿದ್ದಾಗ ಅದು ಪ್ರಶ್ನಾತೀತವಾದದ್ದು. ಯಾವುದೇ ವಿಷಯಕ್ಕೆ ಕಾನೂನಿನ ಮಾನ್ಯತೆ ದೊರಕಿದರೂ ಅದಕ್ಕೆ ಸಾಮಜಿಕ ಒಪ್ಪಿಗೆ ಸಿಗುವವರೆಗೂ ಜನಮಾನ್ಯತೆ ಹಾಗೂ ಗೌರವಗಳಿಲ್ಲ ಎಂಬುದು ನಾವು ಕಾಣುತ್ತಾ ಬಂದಿರುವ ಸತ್ಯ. ಕಾನೂನು ಸಹ ಇಂತಹ ಸಂಬಂಧಗಳ ಪರವಾಗಿಲ್ಲ ಎಂಬುದು ಇತ್ತೀಚೆಗೆ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪಿನಿಂದ ತಿಳಿಯುತ್ತದೆ.

ವಿವಾಹ ಪೂರ್ವ ಲೈಂಗಿಕತೆಯಲ್ಲಿ ಪಾಲ್ಗೊಳ್ಳುವಿಕೆ ಅಥವಾ ಲೈಂಗಿಕ ಕಾರ್ಯಕರ್ತೆಯಾಗುವ ಇಚ್ಛೆ ಹೆಣ್ಣಿಗೆ ಸ್ವಯಂ ಆಯ್ಕೆಯ ವಿಷಯವಾಗುವಷ್ಟು ಅವಳು ದೈಹಿಕ – ಮಾನಸಿಕ – ಬೌದ್ಧಿಕವಾಗಿ ಪ್ರಬುದ್ಧಳಾಗಿದ್ದರೆ ಅದು ಅವಳ ಆಯ್ಕೆಗೆ ಬಿಟ್ಟ ವಿಷಯ. ಆದರೆ ಬಹಳಷ್ಟು ಬಾರಿ ವಯೋಸಹಜ ಆಕರ್ಷಣೆ. ಒತ್ತಡ, ಅಸಹಾಯಕತೆ, ಮಹತ್ವಕಾಂಕ್ಷೆ, ಮುಗ್ಧತೆಯ ಹೆಸರಿನಲ್ಲಿ  ಒಮ್ಮೆ ಲೈಂಗಿಕ ಸಂಬಂಧದ ಸುಳಿಯಲ್ಲಿ ಸಿಲುಕುವ ಹೆಣ್ಣುಮಕ್ಕಳು ಜೀವನ ಪರ್ಯಂತ ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾದಂತ ಪರಿಸ್ಥಿತಿಗೆ ಸಿಕ್ಕಿಬೀಳುವುದು ದುರಂತ.

ಆದ್ದರಿಂದ ಮೊದಲು ಮಾನಸಿಕ – ಬೌದ್ಧಿಕ ಪ್ರಬುದ್ಧತೆಯನ್ನು ಪಡೆಯುವಂತ ಶಿಕ್ಷಣ, ಅರಿವು ಜೊತೆಗೆ ಆರ್ಥಿಕ ಸಬಲತೆಯನ್ನು ನಮ್ಮ ಹೆಣ್ಣು ಮಕ್ಕಳಿಗೆ ನೀಡಿ, ಅವರ ಬದುಕಿನ ಪ್ರತಿಯೊಂದು ಘಟ್ಟದ ಆಯ್ಕೆಯನ್ನೂ ಸ್ವಯಂ ಇಚ್ಛೆಯಿಂದ ಯಾವುದೇ ಬಾಹ್ಯ ಒತ್ತಡವೂ ಇಲ್ಲದಂತೆ ಅವರೇ ಮಾಡಿಕೊಳ್ಳುವಂತಹ ಸ್ವಾತಂತ್ರ್ಯವನ್ನು ಅವರು ಪಡೆಯಬೇಕಿದೆ. ಅಲ್ಲಿಯವರೆಗೆ ಯಾವುದೇ ಕಾರಣದಿಂದ ಹೆಣ್ಣು ವಿವೇಕವಿಲ್ಲದ ಮುಕ್ತ ಮನೋಭಾವದವಳೂ, ಸ್ವೇಚ್ಛಾಚಾರಿಯೂ ಅದಷ್ಟೂ ಅದರಿಂದ ಹೆಚ್ಚಿನ ಲಾಭ ಲಂಪಟ, ಬೇಜವಾಬ್ದಾರಿಯು ಪುರುಷರಿಗೆ. ಜೊತೆಗೆ ವ್ಯಕ್ತಿಯ ಘನತೆ, ಗೌರವಗಳೊಂದನ್ನೂ ಪಡೆಯದೇ ಬರಿಯ ಭೋದ ವಸ್ತು ಮಾತ್ರವಾಗಿ ಇನ್ನಷ್ಟು ಹೆಚ್ಚು ಸಂಕಷ್ಟಕ್ಕೆ, ನೋವಿಗೆ ಗುರಿಯಾಗುವವಳು ಮಹಿಳೆಯೇ ಆಗುತ್ತಾಳೆ. ಈ ಕುರಿತು ಮಹಿಳೆಯರು ವಿವೇಚಿಸಬೇಕಿದೆ.

೨೦

ಆಧುನಿಕತೆ ಮಹಿಳೆಗೆ ಒಡ್ಡುತ್ತಿರುವ ಸವಾಲುಗಳಲ್ಲಿ ಮುಖ್ಯವಾದದ್ದು ಅವಳ ಬಸಿರು ಸಂಬಂಧಿ ಸಮಸ್ಯೆಗಳು. ಈಚೆಗೆ ರಾಜ್ಯದ ಹಲವು ದಿನಪತ್ರಿಕೆ ಹಾಗೂ ವಾರಪತ್ರಿಕೆಗಳಲ್ಲಿ ಅತ್ಯಂತ ಆಕರ್ಷಕ ಪದಗಳೊಂದಿಗೆ ತುರ್ತ ಗರ್ಭನಿರೋಧಕ / ಗರ್ಭನಿವಾರಕ ಮಾತ್ರೆಯೊಂದದರ ಜಾಹಿರಾತು ಪ್ರಕಟವಾಗುತ್ತಿದೆ. ಅದು ಹಲವು ದಿನಗಳು ಮತ್ತೆ ಮತ್ತೆ ಪ್ರಕಟಗೊಂಡಾಗ ಸಾಮಾನ್ಯ ಓದುಗರ ಗಮನ ಸೆಳೆಯುವುದೂ ನಿಜ.

ಅನಿರೀಕ್ಷಿತ, ಅನಪೇಕ್ಷಿತ ಲೈಂಗಿಕ ಸಂಪರ್ಕ ಉಂಟಾದಾಗ ಗರ್ಭಧಾರಣೆಯನ್ನು ತಡೆಯುವ ಹಿನ್ನೆಲೆಯಲ್ಲಿ ಈ ‘ಐ ಪಿಲ್’ ಎಂಬ ಮಾತ್ರೆಯನ್ನು ಮಾರುಕಟ್ಟೆಗೆ ತರಲಾಗಿದೆ. ಆದರೆ ಜಾಹಿರಾತಿನಲ್ಲಿ ಇದನ್ನೊಂದು ‘ತುರ್ತು ಗರ್ಭನಿರೋಧಕ’ ಎಂಬುದನ್ನಷ್ಟೇ ಎತ್ತಿಹಿಡಿದು ಅದಕ್ಕೆ ಸಂಬಂಧಿಸಿದ ಮಿಕ್ಕ ವಿವರಗಳನ್ನು ಚಿಕ್ಕದಾಗಿ, ಅಪ್ರಮುಖವೆಂಬಂತೆ ಬಿಂಬಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಈ ಮಾತ್ರೆ ಔಷಧಿ ಅಂಗಡಿಗಳಲ್ಲಿ, ವೈದ್ಯರ ಪ್ರಿಸ್ಕ್ರಿಪ್ಶನ್‌ ಇಲ್ಲದೇ ಮುಕ್ತವಾಗಿ ಮಾರಾಟಗೊಳ್ಳಲಾರಂಭಿಸಿದ್ದು ಅದರ ಕ್ರಮವನ್ನು ನಿರೀಕ್ಷಿತ ಪ್ರಮಾಣಕ್ಕಿಂತಾ ಹೆಚ್ಚಿಸಿದ್ದರೂ, ಅದರ ವಿಕ್ರಯ ಭರದಿಂದ ನಡೆಯುತ್ತಿದ್ದರೂ ಆತಂಕಕಾರಿಯಾದ ಅಂಶವೆಂದರೆ ಇದನ್ನು ಹೆಚ್ಚಾಗಿ ಬಳಸುತ್ತಿರುವವರು ಶಾಲಾ ಕಾಲೇಜುಗಳ ಹದಿಹರೆಯದ ಯುವತಿಯರು ಎಂಬುದು! ಬೇರೆಲ್ಲಕ್ಕಿಂಥಾ ಔಷಧಿ ಮಾರಾಟದ ಜಾಲ ಶಕ್ತಿಯುವಾಗಿರುವುದರಿಂದ ನಗರ ಪಟ್ಟಣವೆನ್ನದೇ ಇಂತಹ ಉತ್ಪನ್ನಗಳು ಏಕಕಾಲಕ್ಕೆ ಎಲ್ಲೆಡೆ ಲಭ್ಯವಾಗುತ್ತಿವೆ. ಆಶ್ಚರ್ಯವೆಂದರೆ ಇದರ ಮಾಹಿತಿ ವಿವಾಹಿತರಿಗಿಂತ ಹೆಚ್ಚಾಗಿ ನಮ್ಮ ಯುವಜನರಿಗಿರುತ್ತದೆ!

ಈ ಕುರಿತು ಸಮೀಕ್ಷೆ ನಡೆಸಿರುವ ಪತ್ರಿಕೆಯೊಂದರ ಪ್ರಕಾರ ದೇಶಾದ್ಯಂತ ಸುಮಾರು ಎರಡು ಲಕ್ಷ ಐ ಪಿಲ್ ಮಾತ್ರೆಗಳು ಪ್ರತಿ ತಿಂಗಳು ಮಾರಾಟವಾಗುತ್ತಿವೆ. ಹಾಸನದ ನನ್ನ ಸ್ತ್ರೀ ರೋಗ ತಜ್ಞಗೆಳತಿಯರ ಪ್ರಕಾರ ಸರಿಯಾದ ಸೇವನಾ ಕ್ರಮದ ಅರಿವಿರದೇ ತಿಂಗಳಿಗೆ ೩ – ೪ ಬಾರಿ ಈ ಮಾತ್ರೆ ಸೇವಿಸುವ ಹೆಣ್ಣುಮಕ್ಕಳಿಗೆ ಹೊಟ್ಟೆನೋವು, ವಿಪರೀತ ರಕ್ತಸ್ರಾವ, ಸುಸ್ತು. ವಾಕರಿಕೆಗಳು ಪ್ರಾರಂಭಿಕ ಹಂತದಲ್ಲಿ ಕಂಡು ಬರುತ್ತಿದ್ದರೂ ಇದನ್ನು ವೈದ್ಯರ ಸಲಹೆ ಇಲ್ಲದೇ ವಿವೇಚನಾರಹಿತವಾಗಿ ಮಾಮೂಲಿ ಗರ್ಭನಿರೋಧಕದಂತೆ ಪ್ರತಿಬಾರಿಯೂ ಬಳಸಿದಾಗ ತೀವ್ರ ತೆರನಾದ ಪಾರ್ಶ್ವ ಪರಿಣಾಮಗಳು ಕಾಲಾಂತರದಲ್ಲಿ ಆಗುವ ಸಾಧ್ಯತೆಗಳಿವೆ. ಏಕೆಂದರೆ ಇದು ಮಾಮೂಲಿ ಗರ್ಭನಿರೋಧಕಗಳ ನಾಲ್ಕುಪಟ್ಟು ಪ್ರಭಾವಶಾಲಿಯಾಗಿರುತ್ತದೆ. ಅದನ್ನು ಮತ್ತೆ ಮತ್ತೆ ತಡೆದುಕೊಳ್ಳುವ ಸಾಮರ್ಥ್ಯ ದೇಹಕ್ಕಿರುವುದಿಲ್ಲ. ಜೀವಮಾನದಲ್ಲಿ ೧ – ೨ ಬಾರಿ ಅನಿವಾರ್ಯ ಸಂದರ್ಭದಲ್ಲಿ ಬಳಸಬಹುದಾದ ಈ ಮಾತ್ರೆಯನ್ನು ಗರ್ಭಧಾರಣೆಯ ಸಾಧ್ಯತೆಯನ್ನು ತಡೆಯುತ್ತದೆಂದು ಭ್ರಮಿಸಿ ನಿರಂತರವಾಗಿ ಸೇವಿಸಲಾರಂಭಿಸಿದರೆ ಹೆಣ್ಣುಮಕ್ಕಳ ಗತಿ ಏನಾಗಬೇಕು? ಸಂಕೋಚ, ಹೆದರಿಕೆಗಳಿಂದ ವೈದ್ಯರ ಬಳಿಗೆ ತಪಾಸಣೆಗೆ ಹೋಗಲೂ ಹಿಂಜರಿವ ಹೆಣ್ಣುಮಕ್ಕಳು ಮುಂದಿನ ದಿನಗಳಲ್ಲಿ ಆರೋಗ್ಯ ಹಾಗೂ ಬಸಿರು ಸಂಬಂಧಿ ಮುಖ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಂಬ ಆತಂಕ ವೈದ್ಯರದು.

೨೧

ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಮಾಧ್ಯಮಗಳಲ್ಲಿ ಎಲ್ಲೆಂದರಲ್ಲಿ ಪ್ರಕಟಗೊಳ್ಳುತ್ತಿರುವ ಯಾವುದೇ ಗರ್ಭನಿರೋಧಕಗಳ ಅಥವಾ ಏಡ್ಸ್ ಕುರಿತ ಎಚ್ಚರಿಕೆಯ ಜಾಹಿರಾತುಗಳಲ್ಲಿ ಸೆಕ್ಸ್‌ನ ಮುಕ್ತತೆ ತಪ್ಪಲ್ಲವೆಂದು ಪ್ರತಿಪಾದಿಸುತ್ತಲೇ ಅದು ‘ಸುರಕ್ಷಿತವಾಗಿದ್ದರೆ’ ಸಾಕು ಎಂದು ಸಮರ್ತಿಸುತ್ತಿರುವ ಸಂದೇಶದ ಹಿನ್ನೆಲೆಯಲ್ಲಿ ವ್ಯಾಪಾರಿ ಜಗತ್ತಿನ ಕ್ರೂರ ಚಾಣಾಕ್ಷತೆಯೊಂಧಿಗೆ, ಹೆಣ್ಣಿನ ದೇಹವನ್ನು ಸರಕೆಂಬಂತೆ ವೈಭವೀಕರಿಸುತ್ತಿರುವ ಪುರುಷ ವಿಕೃತಿಯೂ ಎದ್ದು ತೋರುತ್ತದೆ. ಇವು ಸದ್ದಿಲ್ಲದೇ ಮುಕ್ತಕಾಮವನ್ನು ಪ್ರಚೋದಿಸುವಂತವೂ ಆಗಿವೆ.

ಗಂಡು – ಹೆಣ್ಣಿನ ಖಾಸಗಿ, ಕೌಟುಂಬಿಕ ಸುಖದ ಪ್ರತೀಕವಾದ ಬಸಿರು ಇಂದು ಬದಲಾವಣೆಯ ಸಂಕೇತವಾಗಿ, ಸಾರ್ವಜನಿಕವಾಗಿ ಬಿಟ್ಟಿರುವುದು ವಿಪರ್ಯಾಸ. ಭಾರತದಲ್ಲಿ ವರ್ಷವೊಂದಕ್ಕೆ ೪೦ – ೫೦ ಲಕ್ಷ ಭ್ರೂಣಗಳು ಹತ್ಯೆಗೀಡಾಗುತ್ತಿವೆಯೆಂದು ವರದಿಯೊಂದು ತಿಳಿಸುತ್ತದೆ. ಅನಾರೋಗ್ಯ ಕಾರಣವಾಗಿ ನಡೆಸಲಾಗುವ ಗರ್ಭಪಾತ ಅತ್ಯಂತ ಕಡಿಮೆ ಪ್ರಮಾಣದ್ದು. ಭೋಗ ಸಂಸ್ಕೃತಿಯೆಡೆಗಿನ ವಿಪರೀತದ ಆಕರ್ಷಣೆ, ಸೆಕ್ಸ್‌ನ್ನು ಎಲ್ಲಕ್ಕೂ ಮಿಗಿಲೆಂಬಂತೆ ಎತ್ತಿ ಹಡಿಯುತ್ತಿರುವ ದೃಶ್ಯ ಮಾಧ್ಯಮಗಳು, ಬದಲಾದ ಆರ್ಥಿಕ, ಸಾಮಾಜಿಕ ಪರಿಸರ ಹಾಗೂ ಶೈಕ್ಷಣಿಕ – ವೈಜ್ಞಾನಿಕ ಸೌಲಭ್ಯಗಳ ಹಿನ್ನೆಲೆಯಲ್ಲಿ ವೈತಿಕತೆಯ – ಲೈಂಗಿಕತೆಯ ಪರಿಕಲ್ಪನೆಯಲ್ಲಿ ವೇಗದ ಬದಲಾವಣೆಗಳಾಗುತ್ತಿರುವುದು, ಸಮಾಜದ ಹಿತಕ್ಕಿಂತ ವೈಯಕ್ತಿಕತೆಯೇ ಮೇಲುಗೈ ಸಾಧಿಸುತ್ತಿರುವುದು, ಸ್ವಂತ ಸ್ವಾತಂತ್ರ್ಯದ ಪರಧಿ ಗಂಡು – ಹೆಣ್ಣುಗಳಿಬ್ಬರಿಗೂ ವಿಸ್ತಾರವಾಗುತ್ತಿರುವುದು, ಇದು ಮಿತಿಯಿರದ ಸ್ವಾತಂತ್ರ್ಯವಾಗಿ ಬದಲಾಗುತ್ತಿರುವುದು, ಇದೇ ಈ ಪ್ರಮಾಣದ ಭ್ರೂಣ ಹತ್ಯೆಗೆ ಕಾರಣ ಎಂದು ಸಮಾಜವಿಜ್ಞಾನಿಗಳು ವಿಶ್ಲೇಷಿಸುತ್ತಾರೆ. ಜೊತೆಗೆ ಭಾವನಾತ್ಮಕ ಅಪಕ್ವತೆ, ಸಂಬಂಧಗಳ ನಿರ್ವಹಣೆಯಲ್ಲಿನ ಬೇಜವಾಬ್ದಾರಿತನ, ಲೈಂಗಿಕತೆ ಕುರಿತು ಅವಸರದ ಕುತೂಹಲ, ಮಾಧ್ಯಮಗಳ ಪ್ರಭಾವ, ಸರಿಯಾದ ಮಾದರಿ – ಮಾರ್ಗದರ್ಶನಗಳ ಕೊರತೆ, ಉಸಿರುಗಟ್ಟಿಸುತ್ತಿರುವ ಸಂಪ್ರದಾಯಗಳು, ಆಧುನಿಕತೆ ಹಾಗೂ ಹಳೆಯ ಸಂಪ್ರದಾಯಗಳ ಸಂಘರ್ಷದಲ್ಲಿ ಮೂರನೆಯ, ಸಮಾಜ ಒಪ್ಪಿತ ದಾರಿ ಇಲ್ಲದಿರುವುದು, ಸಮಾಜದ ವಿರೋಧ ಕಟ್ಟಿಕೊಂಡು, ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯಹೀನತೆ, ಶಿಶುವಿನ ಹೊಣೆಗಾರಿಕೆ ಹೊರಲು ಸಿದ್ಧವಿಲ್ಲದ ಸ್ವತಂತ್ರ ಮನಸ್ಸುಗಳು….. ಇಂಥಹ ಹತ್ತು ಹಲವು ಮನಃಶಾಸ್ತ್ರೀಯ ನೆಲೆಯ ಕಾರಣಗಳು ಬಸಿರನ್ನು ಘಾಸಿಗೊಳಿಸಿ ಹತ್ಯೆಗೊಳಿಸುವ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತವೆ.

ಅತ್ಯಾಚಾರಕ್ಕೆ, ಗೌಪ್ಯ ಲೈಂಗಿಕ ಕಿರುಕುಳಕ್ಕೆ, ತಮ್ಮನ್ನು ತಾವೇ ನಿಭಾಯಿಸಿಕೊಳ್ಳಲಾಗದ ದೌರ್ಬಲ್ಯಕ್ಕೆ, ಮದುವೆಯಾಗುವುದಾಗಿ ನಂಬಿಸಿ ಮೋಸ ಹೋದ ತಪ್ಪಿಗೆ ಬಸಿರಾದ ಹೆಣ್ಣುಮಕ್ಕಳ ಕಥೆಗಳು, ಹೆಣ್ಣುಮಗು ಬೇಡವೆಂಬ ಕುಟುಂಬದವರ ಒತ್ತಡ ಹೀಗೆ ಹಲವಾರು ಬಸಿರು ಸಂಬಂಧಿ ಸಮಸ್ಯೆಯ ಹಲವು ಮುಖಗಳು ವೈದ್ಯರಲ್ಲಿ ‘ಆಫ್ ದಿ ರೆಕಾರ್ಡ್’ ಆಗಿ ದಾಖಲಾಗಿರುತ್ತವೆ. ಯಾವುದೇ ಪ್ರಾಣಿ ಸಂತತಿಯ ಆರೋಗ್ಯವಂತ ಬಸಿರು ಮತ್ತು ಆರೋಗ್ಯಪೂರ್ಣ ಪೀಳಿಗೆಯ ದೃಷ್ಟಿಯಿಂದ ನಿಸರ್ಗವೇ ಅಗೋಚರವಾಗಿ ಹಲವು ಪ್ರಾಕೃತಿಕ ನಿಯಮಗಳನ್ನು ರೂಪಿಸಿದೆ. ಹೆಣ್ಣಿನ ಬಸಿರು ಅದರ ಎಲ್ಲಾ ಧಾರ್ಮಿಕ, ನೈತಿಕ ಚೌಕಟ್ಟುಗಳಿಂದಾಗಿ ಭಾರತೀಯ ಸಂದರ್ಭದಲ್ಲಿ ಪಾವಿತ್ರ್ಯತೆಯ ಹೆಸರಿನಲ್ಲಿಯೇ ಗುಣಾತ್ಮಕತೆಯನ್ನು ಪಡೆದುಕೊಂಡಿದೆ. ಆದರೆ ಇತ್ತೀಚೆಗಿನ ಕೆಲ ದಶಕಗಳಿಂದ ಆಧುನಿಕತೆಯ ಪ್ರಭಾವ, ಮಾಧ್ಯಮಗಳ ಅಬ್ಬರ, ಎಗ್ಗಿಲ್ಲದೇ ಕೈಗೆಟುಕುತ್ತಿರುವ ವೈದ್ಯಕೀಯ ಮುನ್ನೆಚ್ಚರಿಕೆಯ ಸೌಲಭ್ಯಗಳಿಂದಾಗಿ ಹಲವಾರು ಹದಿಹರೆಯದ ಯುವಕ – ಯುವತಿಯರು ಸೆಕ್ಸ್‌ನ್ನು ಮೋಜಿಗಾಗಿ ಬಳಸುತ್ತಿರುವುದು, ನಿರಂತರವಾಗಿ ಹೊಸ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತಿದೆ. ಅವು ಅನೈತಿಕ ನೆಲೆಯ, ಉತ್ತರಗಳೇ ಇಲ್ಲದ ಬೃಹತ್‌ ಸಮಸ್ಯೆಗಳಾಗಿ ಕುಟುಂಬ – ಸಮಾಜದ ಎದುರು ನಿಲ್ಲುತ್ತಿವೆ.

೨೨

ಹೆಣ್ಣಿನ ಬಸಿರನ್ನು ಪ್ರಧಾನವಾಗಿರಿಸಿಕೊಂಡು ವೈದ್ಯಕೀಯ ಪ್ರಾಯೋಗಿಕ ಪರೀಕ್ಷೆಗಾಗಿ ಅನೈತಿಕ ನೆಲೆಗಳಲ್ಲಿ ಭಾರತದ ಬಡ ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಇಂದಿನ ಹಲವು ಸಮೀಕ್ಷೆಗಳು ಬೆಳಕು ತೋರುತ್ತಿವೆ. ೨೦೦೨ ರಲ್ಲಿ ‘ಬಾಡಿಗೆ ತಾಯಂದಿರ’ ಹಕ್ಕನ್ನು ಕಾನೂನು ಬದ್ಧಗೊಳಿಸಿದ ನಂತರ ಭಾರತದ ಅನೇಕ ಬಡ ಹೆಣ್ಣುಮಕ್ಕಳು ಹಣಗಳಿಕೆಯ ಮಾರ್ಗವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇದೂ ಕೂಡ ಶೋಷಣೆಯ ಇನ್ನೊಂದು ಮುಖವೆಂದು ವಾದಿಸುವವರಿದ್ದಾರೆ. ಇದು ಒಂದು ರೀತಿಯಲ್ಲಿ ನಿಜವೂ ಹೌದು. ಆದರೆ ಬಡತನ, ಅಸಹಾಯಕತೆಗಳು ನಮ್ಮ ಹೆಣ್ಣು ಮಕ್ಕಳಿಂದ ಏನೆಲ್ಲಾ ಕುಕೃತ್ಯಗಳನ್ನು ಮಾಡಿಸುತ್ತದೆ ಎಂಬುದುಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಹೆಣ್ಣುಮಕ್ಕಳ ಅಪಹರಣ, ಮಾರಾಟ, ವೇಶ್ಯಾವಾಟಿಕೆ, ಅಕ್ರಮ ಸಂಬಂಧ, ಬಲವಂತದ ವಿವಾಹ….. ಇತ್ಯಾದಿಗಳ ಮೂಲಕ ಬಾಡಿಗೆ ತಾಯಂದಿರಿಗಿಂಥಾ ಕ್ರೂರವಾಗಿ, ಆಘಾತಕಾರಿ ಪ್ರಮಾಣದಲ್ಲಿ ಅವರು ಶೋಷಣೆಗೊಳಗಾಗುತ್ತಿದ್ದಾರೆ.

ಬದಲಾಗುತ್ತಿರುವ ಪರಿಸರದಂತೆ ವೈದ್ಯಕೀಯ ಕ್ಷೇತ್ರದಲ್ಲೂ ಅಗಾಧ ಪ್ರಮಾಣದಲ್ಲಿ ಪ್ರಗತಿಯಾಗಿದೆ. ಹುಟ್ಟಲಿರುವ ಮಗು ಅನಾರೋಗ್ಯ ಹೊಂದಿರುವಂತದು, ಅದರ ಭವಿಷ್ಯದ ದೃಷ್ಟಿಯಿಂದ ಯಾತನಾದಾಯಕವಾದುದೂ ಮತ್ತು ಅಂತಹ ಮಗುವನ್ನು ನೋಡಿಕೊಳ್ಳಲು ವೈದ್ಯಕೀಯ ವೆಚ್ಚಕ್ಕಾಗಿ ಹೆಚ್ಚು ಹಣ ಖರ್ಚುಮಾಡಬೇಕಾದ ಹಾಗೂ ಜೀವನ ಪರ್ಯಂತ ಅಂತಹ ಮಗುವನ್ನು ಸಾಕುವಾಗ ಅನುಭವಿಸಬೇಕಾಗುವ ಮಾನಸಿಕ ಹಿಂಸೆಯಿಂದ ತಪ್ಪಿಸಿಕೊಳ್ಳಲು ಅದನ್ನು ಭ್ರೂಣದ ಹಂತದಲ್ಲೇ ಗರ್ಭಪಾತ ಮಾಡಿಸಲು ಕಾನೂನಿನಲ್ಲಿ ಅವಕಾಶವಿರುವುದು ಎಲ್ಲ ರೀತಿಯಿಂದಲೂ ಸಮಂಜಸವಾದುದು. ಆದರೆ ಕಾನೂನು ಬಾಹಿರವಾಗಿ ಯಾವ ಎಗ್ಗೂ ಇಲ್ಲದೇ ಇಷ್ಟೊಂದು ಪ್ರಮಾಣದಲ್ಲಿ ನಡೆಯುವ ಭ್ರೂಣಹತ್ಯೆಯಂತಹ ಚಟುವಟಿಕೆಗೆ ನಿಯಂತ್ರಣ ತರದಿದ್ದಾಗ ಕಾನೂನಿಗೆ ಯಾವ ಬೆಲೆ ಇರುತ್ತದೆ?

೨೩

ಇಂದಿನ ಮಹಿಳೆ, ಮತ್ತವಳ ಆರೋಗ್ಯಪೂರ್ಣ ಬಸಿರಿನ ಹಿತದೃಷ್ಟಿಯಿಂದ ಯಾವುದೇ ರೀತಿಯ ಗರ್ಭನಿರೋಧಕವನ್ನು ವೈದ್ಯರ ಸಲಹೆ ಇಲ್ಲದೇ ಕೊಂಡುಕೊಳ್ಳುವ ಮತ್ತು ಬಳಸುವ ವಿಧಾನವನ್ನು ಕಾನೂನು ಬಾಹಿರವೆಂದು ಪರಿಗಣಿಸಿ, ಮೊದಲಿಗೆ ಕಟ್ಟುನಿಟ್ಟಿನ ಕಾನೂನಿನ ಕ್ರಮ ಕೈಗೊಳ್ಳಬೇಕು. ನಿರಂತರವಾದ, ಗರ್ಭನಿರೋಧಕದಂತಹ ಪ್ರಖರವಾದ ಔಷಧಿಸೇವನೆಯಿಂದ ಪಾರ್ಶ್ವ ಪರಿಣಾಮಗಳಾಗಿ ಸರಿಪಡಿಸಲಾಗದ ಭೀಕರ ಆರೋಗ್ಯ ಸಮಸ್ಯೆಗಳು ಹಾಗೂ ಅನಾರೋಗ್ಯಕರ ಪೀಳಿಗೆಯ ಹುಟ್ಟಿಗೆ ಕಾರಣವಾಗಬಹುದೆಂದು ಸ್ತ್ರೀರೋಗ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಔಷಧಿ ಅಂಗಡಿಗಳ ಕೌಂಟರ್ ಗಳಲ್ಲಿ ಪ್ರಖರ, ಹನಿಕಾರಕ ಗರ್ಭನಿರೋಧಕಗಳನ್ನು ಮುಕ್ತವಾಗಿ ಮಾರಾಟ ಮಾಡುವ ವಿಧಾನದ ಬಗ್ಗೆಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಆಗ್ರಹಿಸಬೇಕಿದೆ. ಅಂತಹ ಮಾರಾಟಗಾರರಿಗೆ ಕಠಿಣ ಶಿಕ್ಷೆವಿಧಿಸುವಂತಹ ನಿಯಮ ಜಾರಿಯಾಗಬೇಕು ಮಾಧ್ಯಮಗಳಲ್ಲಿ ವಿವೇಚನರಹಿತವಾಗಿ ಜಾಹಿರಾತು ನೀಡುವ ಮೂಲಕ ಯುವ ಜನರು ದಾರಿತಪ್ಪುವ ಸಾಧ್ಯತೆಗಳು ಹೆಚ್ಚಿರುವುದರಿಂದ ಜಾಹಿರಾತುಗಳಿಗೆ ಕಡಿವಾಣ ಅಗತ್ಯ. ಮಾಧ್ಯಮಗಳೂ ಹೆಚ್ಚು ಸಾಮಾಜಿಕ ಜವಾಬ್ದಾರಿಯಿಂದ, ವಿವೇಕಯುತವಾಗಿ ನಡೆದುಕೊಳ್ಳಬೇಕಿರುವುದು ಮುಖ್ಯ. ಜಾಹಿರಾತುಗಳು ಎಲ್ಲಿ? ಹೇಗೆ? ಯಾವ ರೀತಿಯಲ್ಲಿ ಎಚ್ಚರಿಕೆಯಿಂದ ಪ್ರಕಟಗೊಳ್ಳಬೇಕೆಂಬ ಚರ್ಚೆಗಳಾಗಬೇಕು. ಇದನ್ನು ವೈದ್ಯಕೀಯ ಸಂಸ್ಥೆಗಳು, ಮಹಿಳಾಪರ ಚಳುವಳಿಗಾರರು ಮಾಡಬೇಕಿದೆ.

ಇದೆಲ್ಲಕ್ಕಿಂಥಾ ಮುಖ್ಯವಾಗಿ ಹದಿಹರೆಯದ ಪ್ರಾರಂಭದಲ್ಲೇ ಹೆಣ್ಣು ಮಗುವಿಗೆ ಅವಳ ದೇಹ, ಅದರ ಕುರಿತ ಎಚ್ಚರಿಕೆ, ಸೆಕ್ಸ್ ಸಂಬಂಧದಿಂದಾಗುವ ಪರಿಣಾಮ, ಗರ್ಭನಿರೋಧಕ ಮತ್ತದರ ಪ್ರಭಾವವೆಲ್ಲವನ್ನೂ ಮನೆಯಲ್ಲಿ ಶಿಕ್ಷಣದ ಭಾಗವಾಗಿ ತಿಳಿಹೇಳುವುದು ಮುಖ್ಯವಾದುದು. ಇದರೊಂದಿಗೆ ಗಂಡು ಮಕ್ಕಳಿಗೂ ಲೈಂಗಿಕ ಬದುಕಿನ ನೈತಿಕ ಜವಾಬ್ದಾರಿ, ಅದರ ಪರಿಣಾಮಗಳ ಕುರಿತು ಎಚ್ಚರಿಕೆ, ಆರೋಗ್ಯಪೂರ್ಣ, ಹೊಣೆಗಾರಿಕೆಯ ಜೀವನದ ಮಹತ್ವದ ಅರಿವು ಮೂಡಿಸುವುದು ಅಷ್ಟೇ ಮುಖ್ಯವಾದುದು.

ಬಡತನ, ಅಸಹಾಯಕತೆ, ಶಿಕ್ಷಣ ಮತ್ತು ಮುಖ್ಯವಾಗಿ ಅರಿವಿನ ಕೊರತೆ, ಬಹಳಷ್ಟು ಸಮಸ್ಯೆಗಳಿಗೆ ಕಾರಣವಾದ್ದರಿಂದ ಮೊದಲು ಈ ಮೂಲ ಸಮಸ್ಯೆಗಳಿಂದ ವಿಮುಕ್ತಗೊಳಿಸುವುದು ಸರ್ಕಾರ, ಸಮಾಜ ಮತ್ತು ಮಹಿಳಾ ಸಂಘಟನೆಗಳ ಮುಖ್ಯ ಗುರಿಯಾಗಬೇಕಿದೆ. ಹೆಣ್ಣುಮಕ್ಕಳಿಗೆ ಎಲ್ಲಿಯವರೆಗೆ ತಾವೊಂದು ವಸ್ತುವಲ್ಲ ‘ವ್ಯಕ್ತಿ’ ತನ್ನ ವ್ಯಕ್ತಿತ್ವಕ್ಕೆ ಗೌರವ ಪಡೆಯಬೇಕೆಂಬ ವಿವೇಚನೆ ಮೂಡುವುದಿಲ್ಲವೋ ಅಲ್ಲಿಯವರೆಗೂ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಲೇ ಇರಬೇಕಾಗುತ್ತದೆ.

ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಅಧುನಿಕ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಮತ್ತೊಂದು ಹಿಂಸೆ. ಭಾರತದಲ್ಲಿ ಪ್ರತಿ ೨೦ ನಿಮಿಷಕ್ಕೆ ಒಂದು ಲೈಂಗಿಕ ದೌರ್ಜನ್ಯ, ಪ್ರತಿ ೩೦ ನಿಮಿಷಕ್ಕೆ ಒಂದು ಅತ್ಯಾಚಾರ, ಪ್ರತಿ ೧೫೦ ನಿಮಿಷಕ್ಕೆ ೧೬ ವರ್ಷದೊಳಗಿನ ಒಂದು ಅಪ್ರಾಪ್ತ ಹೆಣ್ಣುಮಗುವಿನ ಅತ್ಯಾಚಾರ ನಡೆಯುತ್ತಿದೆ. ೧೦ ವರ್ಷದ ಕೆಳಗಿನ ಒಂದು ಹೆಣ್ಣು ಮಗು ಪ್ರತಿ ೧೩ ಗಂಟೆಗೊಮ್ಮೆ ಹಾಗೂ ೧೦ ಹೆಣ್ಣುಮಕ್ಕಳಲ್ಲಿ ಒಂದು ಹೆಣ್ಣುಮಗು ಯಾವಾಗ ಬೇಕಾದರೂ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದೆ ಎಂದು ಭಾರತೀಯ ಮಹಿಳಾ ಅಧ್ಯಯನ ಸಮೀಕ್ಷೆ ತಿಳಿಸುತ್ತದೆ. ಈ ವರದಿಯನ್ನು ಓದಿದಾಗ ನಮ್ಮ ಸುತ್ತಲೂ ಎಂತಹ ನರಕವಿದೆ ಎಂದು ಹೇಸಿಗೆಯಾಗುತ್ತದೆ. ಇವೆಲ್ಲಾ ಕೇವಲ ದಾಖಲಾದ ಅತ್ಯಾಚಾರಗಳಷ್ಟೇ ಎಂಬುದು ನಮಗೆ ನೆನಪಿರಬೇಕು ದಾಖಲಾಗದವುಗಳ ಸಂಖ್ಯೆ ಖಂಡಿತಾ ಇದಕ್ಕಿಂತ ಹೆಚ್ಚೇ ಆಗಿರುತ್ತದೆ. ಸುದ್ದಿಯಾಗುವುವು ಕೆಲವು ಮಾತ್ರ. ಸುದ್ದಿಯಾದ ಆನಂತರದ ಪರಿಣಾಮ ಎದುರಿಸಲಾಗದೆ ಮರ್ಯಾದೆಗೆ ಅಂಜಿ ಇಂತಹಾ ಹಲವು ಪ್ರಕರಣಗಳು ದನಿ ಕಳೆದುಕೊಳ್ಳುತ್ತವೆ. ಆದರೆ ಅವು ಒಳಗೇ ಉಸಿರಾಡುತ್ತಿರುತ್ತವೆ ಮತ್ತು ನಿತ್ಯ ಮನ ಮುದುರಿಕೊಳ್ಳುತ್ತಾ ಬದುಕು ಕಮರಿಸಿಕೊಳ್ಳುತ್ತಿರುತ್ತವೆ. ಇಷ್ಟೊಂದು ಪ್ರಮಾಣದಲ್ಲಿ ಅತ್ಯಾಚಾರಗಳು ನೆಡೆಯುತ್ತಿವೆ ಎಂದಾದರೆ ಎಷ್ಟೊಂದು ‘ಅಮಾನವೀಯ, ಪೈಶಾಚಿಕ’ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ, ನಿತ್ಯ ಸೃಷ್ಟಿಯಾಗುತ್ತಿದ್ದಾರೆ ಎಂದು ಆತಂಕವಾಗುತ್ತದೆ. ಮತ್ತೆ ಇದರ ಹೊಣೆಗಾರಿಕೆ ಸಮಾಜದ ಮೇಲೆಯೇ. ಅಂದರೆ ನಮ್ಮ ಮೇಲೇ.

೨೪

ಸಮಸ್ಯೆಯ ಇನ್ನೊಂದು ಮಗ್ಗುಲನ್ನು ತೆರೆದು ನೋಡಿದರೆ, ದೃಶ್ಯ ಮಾಧ್ಯಮಗಳಲ್ಲಿನ ಎಗ್ಗಿಲ್ಲದ ಅಶ್ಲೀಲ ಪ್ರದರ್ಶನ, ಕಾಮುಕ ನೃತ್ಯ, ಸೈಬರ್ ಅಪರಾಧಗಳು, ಹಿಂಸೆ, ಸೆಕ್ಸ್‌ನ್ನು ಎತ್ತಿಹಿಡಿಯುತ್ತಿರುವ ಪರಿಣಾಮ ಹೆಣ್ಣನ್ನು ಭೋಗದ ವಸ್ತುವಿನಂತೆ ಬಳಸಿ ಬಿಸಾಡುವ ಇಂತಹ ಸಂಸ್ಕೃತಿಯ ವಿಜೃಂಭಿಸಲು ಕಾರಣವಾಗಿದೆ. ನೈತಿಕ – ತಾತ್ವಿಕ ಹಿನ್ನೆಲೆಯಲ್ಲಿ ಆತ್ಮಸಾಕ್ಷಿಯನ್ನುಜಾಗೃತಗೊಳಿಸಿ, ಉತ್ತಮ ಸಂಸ್ಕಾರ ರೂಪಿಸುವ ಶಿಕ್ಷಣದ ಕೊರತೆಯೂ ಎದ್ದು ಕಾಣುತ್ತಿದೆ. ಜೊತೆಗೆ ಚಿಕ್ಕಂದಿನಲ್ಲಿಯೇ ಮಕ್ಕಳ ವ್ಯಕ್ತಿತ್ವ ದೋಷಗಳನ್ನು ಸಹನೆಯಿಂದ ಗುರುತಿಸಿ ಸರಿಪಡಿಸುವ ಅರಿವು, ಸಮಯ, ಶ್ರದ್ಧೆ ಪಾಲಕರಲ್ಲಿ ಮೂಡಬೇಕಿದೆ. ಅವರಿಗೆ ಕಡಿವಾಣ ಎಲ್ಲಿ? ಹೇಗೆ? ಹಾಕಬೇಕೆಂದು ಚಿಂತಿಸುವ ಅನಿವಾರ್ಯತೆ ಈಗ ಬಂದಿದೆ.

ಜೊತೆಗೆ ಅತ್ಯಾಚಾರ ಪ್ರಕರಣಗಳ ಪೂರ್ವಾಪರಗಳನ್ನು ಎತ್ತಿ ಹಿಡಿದು ತೋರುವುದಕ್ಕಿಂತ ಹೆಣ್ಣುಮಕ್ಕಳ ಮೇಲಾಗುವ ಆನಂತರದ ಪರಿಣಾಮಗಳ ಹೃದಯ ವಿದ್ರಾವಕ ಸ್ಥಿತಿಯ ವರದಿಗಳಿಗೆ ಮಧ್ಯಮಗಳು ಹೆಚ್ಚಿನ ಗಮನಹರಿಸುವಂತೆ ನಾವು ಮಾಡಬೇಕಿದೆ. ಅವು ಬಹು ಸೂಕ್ಷ್ಮ ರೀತಿಯಲ್ಲಿ ಮಾನವೀಯ ನೆಲೆಗಳಲ್ಲಿ ದಾಖಲಾಗಬೇಕು. ಜೊತೆಗೆ ಅತ್ಯಾಚಾರ ಪ್ರಕರಣಗಳಲ್ಲಿ ನೀಡುವ ಶಿಕ್ಷೆಯ ಕುರಿತೂ ಕಾಲ ಕಾಲಕ್ಕೆ ಸುದ್ದಿ ಮೂಡಿಬರಬೇಕು. ಆಗಲಾದರೂ ವಿಕೃತ ವ್ಯಕ್ತಿಗಳ ಮೇಲೆ ಇವು ಪರಿಣಾಮ ಬೀರಿ ಮನಃಪರಿವರ್ತನೆಗೆ ಕಾರಣವಾಗಬಹುದು.

ಸೆಕ್ಸ್‌ನ ಕುರಿತು ಮುಕ್ತವಾಗಿ ಯೋಚಿಸುವ, ನಡೆದುಕೊಳ್ಳುವ ಪ್ರಕ್ರಿಯೆಗಳು ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಕೂಡ ಕೌಮಾರ್ಯ, ಶೀಲದ ಕುರಿತು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ವಿಪರೀತದ ಕಲ್ಪನೆಗಳು ಇನ್ನೂ ಜೀವಂತವಾಗಿವೆ. ಅತ್ಯಾಚಾರಕ್ಕೊಳಗಾಗಿ ಸುದ್ದಿಯಾದ ಹೆಣ್ಣುಮಕ್ಕಳ ಬದುಕು ಅಸಹನೀಯವಾಗಿ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮತ್ತೆ ಕೆಲವರು ಖಿನ್ನತೆಗೆ, ತೀವ್ರ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗಿ ನರಳುತ್ತಿದ್ದಾರೆ. ಕಾನೂನು ತನ್ನ ಪ್ರಕ್ರಿಯೆ ಪೂರೈಸಲು ದೀರ್ಘ ಸಮಯ ಬೇಕಿರುವುದರಿಂದ ಸರಿಯಾದ ಸಾಕ್ಷ್ಯಾಧಾರಗಳಿಲ್ಲದೇ, ನ್ಯಾಯ ಸಿಗದಿದ್ದಾಗ ಬೀದಿಗೆ ಬಿದ್ದ ಹೆಣ್ಣು ಮಗು ಮಾನಸಿಕವಾಗಿ ಛಿದ್ರವಾಗಿ ಹೋಗುತ್ತದೆ. ನ್ಯಾಯಕ್ಕಾಗಿ ಕಾಯುವ ಹಂತದಲ್ಲಿನ ಮಾನಸಿಕ ಹಿಂಸೆ, ಸಮಾಜದ ಹೀನ ವರ್ತನೆ ವರ್ಣನೆಗೂ ನಿಲುಕದಂತಹುದು.

೨೫

ಅಪ್ರಾಪ್ತ ಹೆಣ್ಣು ಮಕ್ಕಳ ಮೆಲೆ ನಡೆಯುವ ಇಂತಹ ಅತ್ಯಾಚಾರಗಳಿಗೆ ಕಾನೂನಿನಲ್ಲಿ ‘ವಿಶೇಷ’ವಾದ ಕಠಿಣ ಶಿಕ್ಷೆ ಇಲ್ಲದಿರುವುದು, ಮಕ್ಕಳ ಹಕ್ಕುಗಳ ಕುರಿತು ನಮ್ಮಲ್ಲಿ ಇನ್ನೂ ಜಾಗೃತಿ ಮೂಡದಿರುವುದು, ಲೈಂಗಿಕ ಬದುಕಿನ ನೈತಿಕ ಹೊಣೆಗಾರಿಕೆಯ ಬಗ್ಗೆ ಯುವಜನರಿಗೆ ತಿಳುವಳಿಕೆ ನೀಡದಿರುವುದು ಇಂತಹ ಪ್ರಕರಣಗಳು ಹೆಚ್ಚುತ್ತಿರುವುದ್ದಕ್ಕೆ ಕೆಲವು ಕಾರಣಗಳು. ಎಲ್ಲಕ್ಕಿಂತಾ ಮುಖ್ಯವಾಗಿ ಇಂದಿನ ಹೆಣ್ಣುಮಕ್ಕಳು ಸಮಾಜದಲ್ಲಿ ಕ್ರಿಯಾಶೀಲರಾದಷ್ಟೂ ಅವರನ್ನು ಗೌರವದಿಂದ ಕಾಣುವ ಮನೋಭಾವ ಮೂಡಬೇಕು. ಹೊರಪ್ರಪಂಚಕ್ಕೆ ಕಾಲಿಡುವ ಪ್ರತಿ ಹೆಣ್ಣೂ ‘ನಾನೊಂದು ಹೆಣ್ಣು ಮಾತ್ರವಲ್ಲ ಭಾವ, ಬುದ್ಧಿ, ಚಿತ್ತ, ಆತ್ಮಗಳಿರುವ ವ್ಯಕ್ತಿ’ ಎಂದುಕೊಂಡು ನಡೆದಿರುವಾಗ, ಅವಳನ್ನು ಅವಳ ದೇಹದಿಂದಲೇ ಅಳೆಯುವ ಇಂತಹ ಅಮಾನುಷ ಕೃತ್ಯಗಳು ದೇಹವನ್ನು ಮಾತ್ರ ಮುರುಟಿ ಹಾಕುವುದಿಲ್ಲ. ಒಂದು ಮನಸ್ಸು, ಒಂದು ಜೀವ, ಒಂದು ಬದುಕು…….. ಎಲ್ಲವನ್ನೂ ಹಿಂಡಿ ಹಿಪ್ಪೆ ಮಾಡಿ ಬಿಸಾಡುತ್ತದೆ. ಇದರ ಕುರಿತು ಅರಿವು ಮೂಡಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ಅತ್ಯಾಚಾರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದಾಗ ವಕೀಲರು ಹಾಕುವ ಸವಾಲು, ನ್ಯಾಯಾಧೀಶರು ಕೇಳುವ ಪ್ರಶ್ನೆಗಳಿಗೆ ಎಷ್ಟೋ ಬಾರಿ ಉತ್ತರಿಸಲು ಸಾಧ್ಯವಾಗದೇ, ಸಾಧ್ಯವಾದರೂ ತಾನು ಅನುಭವಿಸಿದ ನೋವು, ಹಿಂಸೆಯನ್ನು ಪುರುಷ ನ್ಯಾಯಾಧೀಶರ ಎದುರು ಹೇಳಿಕೊಳ್ಳಲಾಗದೇ ಮಹಿಳೆ ಸೋಲು ಅನುಭವಿಸಬೇಕಾಗುವ ಪ್ರಸಂಗಗಳು ಇವೆ. ಇದೇ ಕಾರಣಕ್ಕೆ ನಿರಂತರ ಮಹಿಳಾ ಹೋರಾಟದಿಂದಾಗಿ ಸಿಆರ್ ಪಿ ಸಿಯ ೨೧ನೇ ಕಲಮಿಗೆ ಇತ್ತೀಚೆಗೆ ತಿದ್ದುಪಡಿ ಮಾಡಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಅತ್ಯಾಚಾರ ಪ್ರಕರಣಗಳನ್ನು ಮಹಿಳಾ ನ್ಯಾಯಾಧೀಶರೇ ವಿಚಾರಣೆ ನಡೆಸಬೇಕು ಎನ್ನುತ್ತದೆ ತಿದ್ದುಪಡಿ. ಇದೊಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಮುಖ್ಯವಾಗಿ ಎಲ್ಲ ರೀತಿಯ ದೌರ್ಜನ್ಯವನ್ನು ಪ್ರಶ್ನಿಸುವ ದಿಟ್ಟತನ ನಮ್ಮ ಹೆಣ್ಣುಮಕ್ಕಳಿಗೆ ಬರಬೇಕು. ಕಾನೂನುಗಳ ಸಮಗ್ರ ಅರಿವಿರಬೇಕು. ಅನಿವಾರ್ಯವಾದಾಗ ಅದನ್ನು ಬಳಸಿಕೊಳ್ಳುವ ಅತ್ಮವಿಶ್ವಾಸವಿರಬೇಕು. ಅತ್ಯಾಚಾರಕ್ಕೊಳಗಾಗಿ ದೈಹಿಕ – ಮಾನಸಿಕ ಆಘಾತಕ್ಕೀಡಾದರೂ ಆತ್ಮಹತ್ಯೆಯಂತಾ ಕ್ಷುದ್ರ ತೀರ್ಮಾನವನ್ನು ಎಂದಿಗೂ ತೆಗೆದುಕೊಳ್ಳದೇ ದಿಟ್ಟತನದಿಂದ ಬದುಕನ್ನು ಎದುರಿಸಲು ಆ ಹೆಣ್ಣುಮಕ್ಕಳನ್ನು ತಯಾರು ಮಾಡುವುದು ಹೇಗೆ? ಎನ್ನುವುದು ಇನ್ನೊಂದು ಮುಖ್ಯವಾದ ಸವಾಲು. ಹಾಗೇ ಅಪರಾಧಿಗೆ ಕಠಿಣ ಶಿಕ್ಷೆ ಆದಾಗಿ ಅಪರಾಧ ಮಾಡುವವರಲ್ಲಿ ಭಯ ಮೂಡುತ್ತದೆ. ಸಮುದಾಯದ ಒಳಿತಿಗಾಗಿ ವೈಯಕ್ತಿಕ ಬದುಕು ಒಂದಿಷ್ಟು ಸಮಾಜದೆದುರು ತೆರೆದುಕೊಂಡರೂ ಸರಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಕೇಸು ದಾಖಲು ಮಾಡಬೇಕು. ನಮ್ಮ ನಿಷ್ಠೂರ ಸಮಾಜದ, ಹೆಣ್ಣಿನ ಶೀಲದ ಕುರಿತ ಕಠಿಣ ಪರಿಕಲ್ಪನೆಯನ್ನು ಆಧುನಿಕತೆಗೆ ತಕ್ಕಂತೆ ಸೂಕ್ಷ್ಮವಾಗಿ ಮಾರ್ಪಡಿಸಿ ಕೊಳ್ಳಬೇಕಿರುವುದು ಇಂದಿನ ತುರ್ತು. ಮದುವೆಯೇ ಅಂತಿಮ ಗುರಿಯೆಂಬ ಭ್ರಮೆಯಿಂದ ನಮ್ಮ ಹೆಣ್ಣುಮಕ್ಕಳನ್ನು ಹೊರತಂದು ಅವರಿಗೆ ತಮ್ಮತನದ ಅರಿವು, ವಿಶಾಲ ಪರಿಧಿಯ ಜಾಗೃತಿ ಮೂಡಿಸಬೇಕಿರುವುದು ಎಲ್ಲಕ್ಕಿಂತ ಮುಖ್ಯವಾದುದು.

ಮನುಷ್ಯ ಪ್ರಕೃತಿಯ ಒಂದು ಅದ್ಭುತ ಸೃಷ್ಟಿ. ಅವನ ಅಂಗಾಂಗ ರಚನೆ ಅದರ ಕಾರ್ಯವಿಧಾನ, ವಂಶಾಭಿವೃದ್ಧಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಇದನ್ನೆಲ್ಲಾ ಇಷ್ಟು ಅಚ್ಚುಕಟ್ಟಾಗಿ ಹೇಗೆ ಜೋಡಿಸಲಾಗಿದೆ! ಎಂದು ಅಚ್ಚರಿಯಾಗದೇ ಇರಲಾರದು.