೨೬

ಯಾವುದೇ ಜೀವಿಯ ಕಾಮದ ಮೂಲ ಉದ್ದೇಶ ಸಂತಾನಾಭಿವೃದ್ಧಿ. ಗಂಡು – ಹೆಣ್ಣುಗಳ ಸಮ್ಮಿಲನದಿಂದ ಮನುಷ್ಯ ಸಂತತಿ ಈ ಭೂಮಿಯ ಮೇಲೆ ಬೆಳೆಯುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಣ್ಣು –ಗಂಡುಗಳಿಬ್ಬರಿಗೂ ತಮ್ಮದೇ ಆದ ವಿಶಿಷ್ಟ ಪಾತ್ರಗಳಿವೆ. ಭಾರತ ಸಧ್ಯಕ್ಕೆ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೆಯ ದೇಶವಾಗಿದೆ. ಭಾರತದಲ್ಲಿ ಈಗ ೧.೧೫ ಬಿಲಿಯನ್‌ ಜನರಿದ್ದೇವೆ. ೨೦೩೦ರ ಹೊತ್ತಿಗೆ ೧.೫೩ ಬಿಲಿಯನ್‌ ಆಗುವ ಸಾಧ್ಯತೆ ಇದೆಯೆಂದು ಒಂದು ಸಂಶೋಧನಾ ವರದಿ ಹೇಳುತ್ತದೆ. ಇದರ ವೇಗ ಹೀಗೇ ಮುಂದುವರಿದರೆ ಸಧ್ಯ ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಚೀನಾವನ್ನೂ ಕೆಲವೇ ದಶಕಗಳಲ್ಲಿ ಹಿಂದಿಕ್ಕುವ ಸಾಧ್ಯತೆ ಇದೆ. ಇದು ನಾಗರಿಕ ಜಗತ್ತಿನ ಲೆಕ್ಕಾಚಾರದ ಒಂದು ಮುಖವಷ್ಟೇ. ಪ್ರಕೃತಿಯ ನೀತಿಗೆ ಇನ್ನೊಂದು ಮುಖವಿದೆ.

ಈ ಜನಸಂಖ್ಯಾ ಸ್ಪೊಟಕ್ಕೆದುರಾಗಿ ಪ್ರಕೃತಿ ಸದ್ದಿಲ್ಲದೇ ಮನುಕುಲಕ್ಕೆ ತನ್ನ ಪ್ರತೀಕಾರವೆಸಗಲು ಪ್ರಾರಂಭಿಸಿದ್ದಾಳೆ. ಮನುಷ್ಯನ ಮಿತಿಮೀರಿದ ಆಸೆ, ಅಸಹಜ ನಡವಳಿಕೆ, ಹೆಚ್ಚಿದ ಜನಸಂಖ್ಯೆಯ ಪರಿಣಾಮದಿಂದ ಕುಸಿಯುತ್ತಿರುವ ಮುನುಷ್ಯನ ಆರೋಗ್ಯದ ಗುಣಮಟ್ಟ, ಕಲುಷಿತಗೊಳ್ಳುತ್ತಿರುವ ಪರಿಸರ…… ಹೀಗೆ ಹಲವಾರು ಕಾರಣಗಳಿಂದ ಗಂಡು – ಹೆಣ್ಣಿನ ಸಂತಾನೋತ್ಪತ್ತಿಯ ಕಾರ್ಯ ಕುಂಠಿತಗೊಳ್ಳುತ್ತಿದೆ. ಗಂಡಿನಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಚಲನೆಯ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಆದರೆ ಇತ್ತೀಚೆಗೆ ಆತಂಕಕ್ಕೀಡುಮಾಡಿರುವ ಮುಖ್ಯ ಸಮಸ್ಯೆ ಎಂದರೆ, ಸ್ತ್ರೀ ಹಾರ್ಮೋನುಗಳ ಉತ್ಪತ್ತಿಯಲ್ಲಿನ ಏರುಪೇರು ಮತ್ತು ಅವಳಲ್ಲಿ ಪುರಷ ಹಾರ್ಮೋನುಗಳ ಹೆಚ್ಚಳದಿಂದಾಗಿ, ಗರ್ಭಧಾರಣೆಗೆ ಸಂಬಂಧಿಸಿದ ಹಲವು ತೊಂದರೆಗಳನ್ನು ಆಕೆ ಎದುರಿಸುತ್ತಿದ್ದಾಳೆ. ಆಕೆಯಲ್ಲಿ ಅಂಡಾಣು ಉತ್ಪಾದನೆ ಕಡಿಮೆಯಾಗುತ್ತಿದೆ. ಗರ್ಭಪಾತಗಳು ಹೆಚ್ಚಾಗುತ್ತಿವೆ. ಅವಳಲ್ಲಿ ನಿರ್ದಿಷ್ಟ ಕಾರಣವಿಲ್ಲದೇ ಸ್ತ್ರೀತ್ವದ ಹಾರ್ಮೋನಿಗೆ ಬದಲಾಗಿ ಪುರುಷ ಹಾರ್ಮೋನುಗಳು ಉತ್ಪತ್ತಿಯಾಗುತ್ತಿರುವ ಸಮಸ್ಯೆಗೆ ‘ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್’ [ಪಿ.ಸಿ.ಒ.ಎಸ್] ಎಂದು ಹೆಸರಿಸಲಾಗಿದೆ. ಇದೊಂದು ನಿರ್ನಾಳ ಗ್ರಂಥಿಗಳ ಸಮಸ್ಯೆ ಇದು ಪ್ರಕೃತಿ ಹೆಣ್ತನಕ್ಕೆ ಒಡ್ಡಿರುವ ಸವಾಲು ಎಂದೇ ವೈದ್ಯ ಲೋಕ ಪರಗಣಿಸಿದೆ.

೧೯೩೦ ರಲ್ಲಿಯೇ ಈ ಸಮಸ್ಯೆಯನ್ನು ಪತ್ತೆ ಹಚ್ಚಿದ್ದರೂ ಇದಕ್ಕೆ ಕಾರಣವನ್ನು ಇದುವರೆವಿಗೂ ಕಂಡುಹಿಡಿಯಲಾಗಿಲ್ಲ. ಈ ಸಮಸ್ಯೆಯು ನಿರ್ದಿಷ್ಟ ರೋಗಲಕ್ಷಣವನ್ನು ಹೊಂದಿಲ್ಲದ ಕಾರಣ ಇದನ್ನು ಪತ್ತೆ ಹಚ್ಚಲು ಅನೇಕ ವೈದ್ಯ ವಿಧಾನಗಳನ್ನು ಪ್ರಯೋಗಿಸಬೇಕಿದೆ. ಜೊತೆಗೆ ಇದಕ್ಕೆ ನಿರ್ದಿಷ್ಟವಾದ ಯಾವುದೇ ಒಂದು ಚಿಕಿತ್ಸಾಕ್ರಮವೂ ಇಲ್ಲ. ಪ್ರಾರಂಭದಲ್ಲಿ ಈ ಸಮಸ್ಯೆಯಿಂದ ಬಳಲುವ ಮಹಿಳೆಯರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದ್ದು, ಇಂದು ಜಗತ್ತಿನಾದ್ಯಂತ ಶೇ.ಕಡಾ ೧೦ ರಷ್ಟು ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.

೨೭

ಈ ಸಮಸ್ಯೆ ಇರುವ ಮಹಿಳೆಯರಲ್ಲಿ ಸ್ತ್ರೀ ಹಾರ್ಮೋನುಗಳ ಸ್ರವಿಸುವಿಕೆಯಲ್ಲಿ ಏರುಪೇರಾಗಿ ಅಂಡಾಣು ಬೆಳವಣಿಗೆ ಮತ್ತು ಬಿಡುಗಡೆಗೆ ತೊಂದರೆಯುಂಟಾಗುತ್ತದೆ. ಜೊತೆಗೆ ಪುರುಷ ಹಾರ್ಮೋನುಗಳಾದ ಟೆಸ್ಪೆಸ್ಪಿರೋನ್ ಹಾಗೂ ಆಂಡ್ರೋಜನ್ ಅಂಶ ಹೆಚ್ಚಾಗಿ, ಮಹಿಳೆಯರಲ್ಲಿ ಪುರುಷನಂತೆ ಮುಖ ಹಾಗೂ ಮೈ – ಕೈಗಳ ಮೇಲೆ ರೋಮ ಬೆಳೆಯುವುದು, ಗಂಡಿನಂತೆ ತಲೆಗೂದಲು ಉದುರುವುದು, ಹೆಚ್ಚು ಮೊಡವೆಗಳು ಬರುವುದು……. ಮಾಸಿಕ ಸ್ರಾವದಲ್ಲಿ ಏರುಪೇರಾಗುವುದು, ಬಂಜೆತನ ಕಾಣಿಸಿಕೊಳ್ಳುವುದು, ಗರ್ಭಿಣಿಯಾದರೂ ಗರ್ಭಸ್ರಾವ, ಗರ್ಭಪಾತಗಳಂತ ತೊಂದರೆಗಳು ಉಂಟಾಗುತ್ತವೆ. ಇದಕ್ಕೆ ಸ್ತೂಲವಾಗಿ, ಮಹಿಳೆಯರಲ್ಲಿ ಅತೀ ಹೆಚ್ಚಾದ ಕೊಬ್ಬಿನಾಂಶದ ಆಹಾರ ಸೇವನೆ, ಧೂಮಪಾನ – ಮಧ್ಯಪಾನದ ಅಭ್ಯಾಸ, ಯಾವುದೇ ರೀತಿಯ ವ್ಯಾಯಾಮ ಇಲ್ಲದಿರುವುದು, ನಗರದ ಆದುನಿಕ ಜೀವನ ಕ್ರಮ ಮತ್ತು ಮುಖ್ಯವಾಗಿ ಒತ್ತಡದ ಬದುಕಿನ ಪದ್ಧತಿಗಳು ಕಾರಣವೆಂದು ಹೇಳಲಾಗುತ್ತಿದ್ದರೂ ಈ ಸಮಸ್ಯೆಗೆ ನಿರ್ದಿಷ್ಟ ಕಾರಣವನ್ನು ಇನ್ನೂ ಸಂಶೋಧಿಸಬೇಕಿದೆ.

ಈ ಸಮಸ್ಯೆ ಹೆಚ್ಚಾಗಿ ನಗರ ಪ್ರದೇಶದ ಹೆಣ್ಣು ಮಕ್ಕಳನ್ನು ಕಾಡುತ್ತಿರವುದು, ಆಧುನಿಕ ಜೀವನ ವಿಧಾನದ ಬದಲಾವಣೆಯ ಕಡೆಗೆ ಬೊಟ್ಟು ಮಾಡಿ ತೋರುತ್ತಿದೆ.ಮಹಿಳೆಯ ಬದಲಾದ ಸಾಮಾಜಿಕ, ಕೌಟುಂಬಿಕ, ವೈಯಕ್ತಿಕ ಬದುಕಿನ ಪದ್ಧತಿ ಮತ್ತು ಅವಳ ಸ್ಥಾನಮಾನ, ತನ್ಮೂಲಕ ಬದಲಾದ ಅವಳ ಗುಣ ಸ್ವಭಾವಗಳೂ, ಅತೀ ಒತ್ತಡದ ಜೀವನ ಕ್ರಮ ಈ ಸಮಸ್ಯೆಗೆ ಮುಖ್ಯ ಕಾರಣವೆಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಹೇಳುತ್ತಿದ್ದಾರೆ. ಈ ಕುರಿತು ಮನಃಶಾಸ್ತ್ರೀಯ ನೆಲೆಯಲ್ಲಿಯೂ ಹೆಚ್ಚಿನ ಸಂಶೋಧನೆಗಳಾದರೆ, ಮಹಿಳೆಯ ಕುರಿತ ನಮ್ಮ ಇದುವರೆಗಿನ ಸಿದ್ಧಾಂತಗಳು, ತಿಳುವಳಿಕೆಗಳೇ ತಲೆಕೆಳಗಾಗುವ ಪ್ರಸಂಗಗಳು ಬರಬಹುದು. ಈ ಸಮಸ್ಯೆ ಔಷಧಿಗಳಿಗಿಂತ ಹೆಚ್ಚಾಗಿ ಸರಿಯಾದ ಜೀವನ ಕ್ರಮದ ನಿರ್ವಣೆಯಿಂದ, ಎಂದರೆ ನಿಯಮಿತವಾದ, ಕೊಬ್ಬಿನಂಶವಿರದ ಆಹಾರ ಸೇವನೆ, ಸೂಕ್ತವಾದ ವ್ಯಾಯಮ, ಮಾನಸಿಕ ಒತ್ತಡ ನಿವಾರಣಾ ಕ್ರಮಗಳ ಅನುಸರಣೆಯೇ ಸ್ವಲ್ಪ ಮಟ್ಟಿಗಿನ ಈ ಸಮಸ್ಯೆಯ ನಿಯಂತ್ರಣಕ್ಕೆ ಪರಿಹಾರಗಳು ಎಂದು ವೈದ್ಯರು ಹೇಳುವುದನ್ನು ಕೇಳಿದಾಗ ಪ್ರಕೃತಿಯ ಮುಂದೆ ನಾವು ಎಷ್ಟು ದುರ್ಬಲರು ಎಂದು ಅರಿವಾಗುತ್ತದೆ.

ತಾಯ್ತನವೇ ತಮ್ಮ ಸಾಧನೆಗೆ, ಏಳ್ಗೆಗೆ ಅಂಟಿದ ಶಾಪವೆಂದು ಒಂದು ಸ್ತ್ರೀ ಸಮೂಹ ಭಾವಿಸುತ್ತಿದೆ. ಹಾಗೇ ತಮಗೆ ಮಕ್ಕಳ ಬಂಧನವೇ ಬೇಡವೆಂದು ಇನ್ನೊಂದು ಯುವ ಸಮೂಹ ಯೋಚಿಸುತ್ತಿದೆ. ಇದರ ಮಧ್ಯೆಯೇ ತಮ್ಮ ಬದುಕು ಸಾರ್ಥಕಗೊಳ್ಳಲು ಒಂದಾದರೂ ಮಗುವಿರಬೇಕೆಂದು ಬಯಸುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಮಾನವ ತನ್ನ ಮಿತಿಯನ್ನು ಅರ್ಥಮಾಡಿಕೊಳ್ಳದೇ ಸ್ವಾರ್ಥಿಯಾದಷ್ಟೂ ಅವನ ಅತಿಗಳನ್ನು ತಡೆಯಲು, ಸೃಷ್ಟಿಯ ಸಮತೋಲನವನ್ನು ಕಾಪಾಡಲು ಪ್ರಕೃತಿ ಸದ್ದಿಲ್ಲದೇ ತನ್ನ ತಂತ್ರ ಹೊಡುತ್ತಲೇ ಇರುತ್ತದೆ. ಅದನ್ನು ಎದುರಿಸಲು ನಾವು ಹೊಸ ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಲೇ ಇರಬೇಕಾಗುತ್ತದೆ. ಅತಿಯಿರದ ಸಮತೋಲನದ ಬದುಕನ್ನು ಅಳವಿಡಿಸಿಕೊಳ್ಳುವ ನಿಟ್ಟಿನಲ್ಲಿ ಆಧುನಿಕ ಮಹಿಳೆಯರು ಇಂದು ಗಮನಹರಿಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ.

ಇಂದಿಗೂ ಮಹಿಳೆ ಸಕ್ರಿಯ ರಾಜಕಾರಣದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಭಾಗಿಯಾಗಲು ಆಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಲೇ ಇದೆ. ಆದರೆ ಇದಕ್ಕೆ ಕಾರಣಗಳನ್ನು ರಾಜಕಾರಣದಲ್ಲಿ ಹುಡುಕುವುದಕ್ಕಿಂತ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹುಡುಕಬೇಕಿದೆ. ಭಾರತ ಒಂದು ಕುಟುಂಬ ಮೌಲ್ಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸುವ ನಾಡು ಜೊತೆಗೆ ಇಲ್ಲಿ ಲಿಂಗ ತಾರತಮ್ಯ ಅತ್ಯಂತ ಸಹಜ ಕ್ರಿಯೆ ಎಂಬಂತೆ ನಡೆಯುತ್ತದೆ. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು, ಮತ ಚಲಾಯಿಸಲು ಮಾತ್ರ ಮತಬ್ಯಾಂಕ್‌ಗಳಂತೆ ಬಳಕೆಯಾಗುತ್ತಿದ್ದಾರೆ. ಭಾರತದಲ್ಲಿ ಮೊನ್ನಿನ ಏಪ್ರಿಲ್ – ಮೇ ಚುನಾವಣೆಯಲ್ಲಿ ೭೧೪ ದಶಲಕ್ಷ ಮತದಾರರಲ್ಲಿ ೩೪೦ ದಶಲಕ್ಷ ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

೨೮

ಈಗಂತೂ ಹಲವು ರಾಜಕೀಯ ಪಕ್ಷಗಳಿಗೆ ಮಹಿಳೆಯರದ್ದೇ ನೇತೃತ್ವ ಇದೆ. ಆದರೆ ಸ್ವತಂತ್ರ ಭಾರತದಲ್ಲಿ ೧೯೫೨ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದ ನಂತರದ ಕಳೆದ ೫೭ ವರ್ಷಗಳಲ್ಲಿ ಲೋಕಸಭೆಯಲ್ಲಿ ಮಹಿಳೆಯರ ಪ್ರಮಾಣ ಈವರೆವಿಗೂ ಶೇ.. ೧೦ ದಾಟಿಲ್ಲ ಎಂಬುದು ರಾಜಕೀಯ ವಲಯದಲ್ಲಿ ಮಹಿಳೆಗಿರುವ ಸ್ಥಾನಮಾನಕ್ಕೆ ಹಿಡಿದ ಕನ್ನಡಿಯಾಗಿದೆ. ೨೦೦೪ ರ ೧೪ನೇ ಲೋಕಸಭೆಯಲ್ಲಿ ೪೪ ಮಹಿಳಾ ಎಂ.ಪಿ. ಗಳಿದ್ದರು. ೨೦ ವರ್ಷಗಳ ಹಿಂದೆ ೧೯೮೪ ರಲ್ಲೂ ಆಯ್ಕೆ ಯಾಗಿದ್ದ ಮಹಿಳೆಯರ ಪ್ರಮಾಣ ಅಷ್ಟೇ ಆಗಿತ್ತು! ಸದ್ಯ ೨೦೦೯ ರ ೧೫ ನೇ ಲೋಕಸಭೆಯಲ್ಲಿ ೫೧೨ ಚುನಾಯಿತ ಸದಸ್ಯರಲ್ಲಿ ಮಹಿಳೆಯರ ಸಂಖ್ಯೆ ಕೇವಲ ೪೭ ಎಂದರೆ ಇವರ ಪಾಲು ಶೇ.ಕಡಾ ೯.೨ ರಷ್ಟು ಮಾತ್ರ. ಇನ್ನು ೨೨೪ ಸದಸ್ಯರಿರುವ ಕರ್ನಾಟಕ ವಿಧಾನಸಭೆಯಲ್ಲಿ ಮಹಿಳೆಯರ ಸಂಖ್ಯೆ ಹೋದ ಬಾರಿ ೩ ಇದ್ದದ್ದು ಈ ಬಾರಿ ೫ ಕ್ಕೆ ಏರಿದೆ. ಇವರ ಪ್ರಾತಿನಿಧ್ಯ ಕೇವಲ ಶೇ.. ೨.೨ ರಷ್ಟು.

ಇನ್ನು ಮಂತ್ರಿಮಂಡಲದಲ್ಲಿ ಮಹಿಳೆಯರ ಪ್ರಾತಿನಿಧ್ಯದ ವಿಷಯ ಬಂದಾಗ ರಾಜ್ಯದ ಮಂತ್ರಿಮಂಡಲದಲ್ಲಿ ಒಬ್ಬ ಮಂತ್ರಿ ಹಾಗೂ ಕೇಂದ್ರ ಮಂಡಲದಲ್ಲಿ ೮ ಮಂದಿ ಮಹಿಳೆಯರಿದ್ದಾರೆ. ಭಾರತದ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿರುವಂತೆಯೇ ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಗೆ ಅವರ ಸ್ಪರ್ಧಿಸುವ ಸಂಖ್ಯೆಯೂ ಕೂಡ ಕಡಿಮೆ ಆಗುತ್ತಿದೆ. ರಾಜಕೀಯ ನಾಯಕತ್ವದ ಸ್ಥಾವಗಳನ್ನು ಏರಲು ನಮ್ಮಲ್ಲಿ ಸಮರ್ಥ ಮಹಿಳೆಯರ ಕೊರತೆ ಇದೆಯೇ  ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವುದಕ್ಕೆ ನಮ್ಮ ಮಹಿಳೆಯರೇ ಸಿದ್ಧರಿಲ್ಲವೇ ಎಂಬುದು ಚರ್ಚಿಸಬೇಕಾದ ವಿಷಯ. ಜಿನೀವಾ ಮೂಲದ ಇಂಟರ್‌ ಪಾರ್ಲಿಮೆಂಟರಿ ಯೂನಿಯನ್ [ಐಪಿಯು] ಸಂಗ್ರಹಿಸಿರುವ ಅಂಕಿ ಅಂಶಗಳ ಪ್ರಕಾರ ಬಾಂಗ್ಲಾದೇಶ, ನೇಪಾಳ ಹಾಗೂ ಪಾಕಿಸ್ತಾನಗಳಿಗಿಂತಲೂ ಭಾರತದಲ್ಲಿ ಮಹಿಳೆಯರ ಸಂಸದೀಯ ಪ್ರಾತಿನಿಧ್ಯ ಅತ್ಯಂತ ಕಡಿಮೆ.

ರಾಜಕೀಯ ಕ್ಷೇತ್ರ ಮಹಿಳೆಯರಿಗೆ ಸುರಕ್ಷಿತವಾದ ಸ್ಥಳವಲ್ಲ. ಏಕೆಂದರೆ ಇಲ್ಲಿ ಅಧಿಕಾರಕ್ಕಾಗಿ ಹಣ, ಹೆಂಡ ಹಾಗೂ ಹಿಂಸೆಯನ್ನು ಅಧಿಕವಾಗಿ ಬಳಸಲಾಗುತ್ತದೆ ಎಂಬ ವಾದವೊಂದಿದೆ. ಅದು ಅನೇಕ ಸಲ ನಿಜವೂ ಆಗಿರುತ್ತದೆ. ಎಲ್ಲಿ ಈ ರೀತಿಯ ಸ್ಥಿತಿ ಇರುತ್ತದೋ ಅಂಥಹ ಸಂದರ್ಭದಲ್ಲಿ ಮಹಿಳೆಯರ ಮಾನ – ಸ್ವಾಭಿಮಾನಗಳು ಹರಣವಾಗುವ ಸಾಧ್ಯತೆಗಳಿವೆ. ರಾಜಕೀಯ ಕ್ಷೇತ್ರದಲ್ಲಿ ಅಪರಾಧಿಗಳು, ಅಪರಾಧಿ ಪ್ರವೃತ್ತಿ ಮಿತಿಮೀರಿದೆ ಅದ್ದರಿಂದ ನೀವೇ ಅದರಿಂದ ದೊರವಿದ್ದುಬಿಡಿ ಎಂದು ಮಹಿಳೆಯರಿಗೆ ನೀಡುತ್ತಿರುವ ಎಚ್ಚರಿಕೆಯ ಮೂಲಕ ಈ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಅಳೆಯಬಹುದಾಗಿದೆ.

೨೯

ಭಾರತಕ್ಕೆ ಸ್ವಾತಂತ್ರ‍್ಯ ಬಂದಾಗಿನಿಂದ ಅಧಿಕಾರ ವಿಕೇಂದ್ರಿಕರಣದ ಬಗೆಗೆ, ಅಧಿಕಾರದ ಮರು ಹಂಚಿಕೆಯ ಬಗೆಗೆ,ಮಾತಾಡುತ್ತಲೇ ಬಂದಿದ್ದೇವೆ. ಆದರೆ ಮಹಿಳೆಯರ ಪಾಲಿಗೆ ಈ ವಿಕೇಂದ್ರಿಕರಣ ಕೇಂದ್ರೀಕೃತವಾಗಿರುವುದು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರವನ್ನು ಪಡೆಯುವ ಮಟ್ಟಿಗೆ ಮಾತ್ರ. ಪಂಚಾಯಿತಿಗಳಲ್ಲಿ, ನಗರ ಪಾಲಿಕೆಗಳಲ್ಲಿ ಇದುವರೆಗೆ ೩೩% ಇದ್ದ ಅಧಿಕಾರ ಇನ್ನು ಮುಂದೆ ೫೦%ಗೆ ಏರಲಿದೆ. ಇಲ್ಲಿ ಎಷ್ಟು ಮೀಸಲಾತಿ ನೀಡಲು ಮುಂದಾದ ಜನಪ್ರತಿನಿಧಿಗಳು ರಾಜ್ಯ – ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರದ ಮರು ಹಂಚಿಕೆಗೆ ತಯಾರಿಲ್ಲ. ಯಾವುದೇ ಕಾಲದಲ್ಲೂ ೧೦%ಕ್ಕಿಂತ ಹೆಚ್ಚಿರದ ಮಹಿಳಾ ಪ್ರಾತಿನಿಧ್ಯ ೩೩% ಕ್ಕೆ ಏರಿದರೆ ಅಷ್ಟು ಸಂಖ್ಯೆಯ ಪುರುಷರು ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂಬ ಭಯ. ಜೊತೆಗೆ ತಾವು ಪ್ರತಿನಿಧಿಸುವ ಕ್ಷೇತ್ರಗಳನ್ನು ತಮ್ಮ ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಿಕೊಂಡಿರುವ ಅನೇಕ ಪಟ್ಟಭದ್ದರ ಹಿತಾಸಕ್ತಿಗಳಿಗೆ ಅಧಿಕಾರ ಮರುಹಂಚಿಕೆಯ ಕಲ್ಪನೆಯೇ ಭಯ ಹುಟ್ಟಿಸುವಂತದ್ದು. ನಮ್ಮ ಸಂವಿಧಾನವು ಪ್ರಜಾಪ್ರಭುತ್ವ ಮಾದರಿಯ ರಾಜಕಾರಣವನ್ನು ಒಪ್ಪಿಕೊಂಡಿದ್ದು ಸ್ತ್ರೀ – ಪುರುಷ ಸಮಾನತೆಯನ್ನು ಘೋಷಿಸಿದ್ದರೂ ವಾಸ್ತವ ಅದಕ್ಕಿಂತಾ ಬಹಳ ಭಿನ್ನವಾಗಿದೆ. ಕೌಟುಂಬಿಕ – ಸಾಮಜಿಕ – ಆರ್ಥಿಕ – ರಾಜಕೀಯ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳಿಗಾಗಿ, ಸಮಾನ ಹಕ್ಕುಗಳಿಗಾಗಿ ಮಹಿಳೆಯರ ಮೇಲೆ ಹೊರಿಸಲಾಗುವ ಅನರ್ಹತೆಯ ಆರೋಪಕ್ಕೆ ವಿರುದ್ಧವಾಗಿ ಪದೇ ಪದೇ ತಮ್ಮನ್ನು ಸಾಬೀತು ಪಡಿಸಬೇಕಾಗಿದೆ. ಇದೇ ದೊಡ್ಡ ಸವಾಲು.

ಪಂಚಾಯತ್‌‌ರಾಜ್‌‌ ತಿದ್ದುಪಡಿಯ ನಂತರ ಕೆಳಹಂತದ ಸ್ಥಾನಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಗಮನಾರ್ಹವಾಗಿ ಹೆಚ್ಚಾಗಿದೆ. ಕರ್ನಾಟಕದ ಒಟ್ಟು ೩೫,೯೨೨ ಗ್ರಾಮ ಪಂಚಾಯತ್‌ ಸ್ಥಾನಗಳಲ್ಲಿ, ೧೩೭೫ ತಾಲ್ಲೋಕು ಪಂಚಾಯತ್‌ಗಳಲ್ಲಿ ಹಾಗೂ ೩೩೯ ಜಿಲ್ಲಾ ಪಂಚಾಯತ್‌ನಲ್ಲಿ ಮಹಿಳೆಯರಿಗೆ ಇದುವರೆಗೆ ಮೀಸಲು ಇತ್ತು. ಇದರರ್ಥ ಚುನಾವಣಾ ರಾಜಕೀಯ ಪಕ್ಷಗಳು ಮಹಿಳೆಯರ ಕಷ್ಟಗಳಿಗೆ ಸ್ಪಂದಿಸುತ್ತಿವೆಯೆಂದಾಗಲೀ ಅಥವಾ ಅವರ ಬೇಡಿಕೆಗಳಿಗೆ ಸಹಮತ ಹೊಂದಿವೆ ಎಂದಾಗಲಿ ಅಥವಾ ಅವರನ್ನು ನಾಯಕತ್ವದ ಸ್ಥಾನಗಳಿಗೆ ತರುತ್ತಿವೆಯೆಂದಾಗಲೀ ಅಲ್ಲ. ಏಕೆಂದರೆ ಮೇಲಿನ ಹಂತಗಳಿಗೆ ಹೋಂದತೆ ಮಹಿಳೆಯರ ಪ್ರಾತಿನಿಧ್ಯ ಮುಖಕ್ಕೆ ರಾಚುವಂತೆ ಕಡಿಮೆಯಾಗುತ್ತದೆ. ಇಂದಿಗೂ ರಾಜಕಾರಣೀಗಳೂ ಪುರುಷಾಧಿಪತ್ಯದ ಪೂರ್ವಗ್ರಹದಿಂದಲೇ ಮಹಿಳೆಯರನ್ನು ಪರಿಗಣಿಸುತ್ತಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಹಿನ್ನಡೆಗೆ ಕೇವಲ ಪುರುಷರೇ ಜವಾಬ್ದಾರರೇ? ತಮ್ಮ ಹಕ್ಕುಗಳನ್ನು– ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವಲ್ಲಿ ಮಹಿಳೆಯರ ಪಾಲೇನು? ಎಂಬ ಪ್ರಶ್ನೆ ಏಳುತ್ತದೆ. ರಾಜಕೀಯ ಭಾಗವಹಿಸುವಿಕೆ ತಮ್ಮ ಹಕ್ಕು. ಅದು ಪುರುಷರ, ಪಕ್ಷಗಳ ಕೃಪಾಕಟಾಕ್ಷದಿಂದ ತಮಗೆ ದೊರೆತ ಬಳುವಳಿ ಎಂಬ ಭಾವನೆಯಿಂದ ನಮ್ಮ ಮಹಿಳೆಯರು ಮೊದಲು ಹೊರಬರಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾದ ಅಧಿಕಾರವನ್ನು ಪಡೆದ ಅನೇಕ ಮಹಿಳೆಯರು ತಮ್ಮ ನಾಯಕತ್ವವನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಇನ್ನೂ ಅನೇಕ ಮಹಿಳೆಯರು ತಮ್ಮ ಕುಟುಂಬದ ಗಂಡ, ತಂದೆ, ಅಣ್ಣ – ತಮ್ಮಂದಿರ ಕೈಗೊಂಬೆಗಳಾಗಿದ್ದಾರೆ ಎಂಬುದೂ ನಿಜ. ಆದರೆ ಇವರೂ ನಿಧಾನಕ್ಕೆ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಿದ್ದಾರೆ. ಪುರುಷ ಹಸ್ತಕ್ಷೇಪವನ್ನು ನಿರಾಕರಿಸುವ ಮನೋಭವವನ್ನು ಬೆಳೆಸಿಕೊಳ್ಳುವಂತಾ ಧೀಮಂತಿಕೆಯನ್ನು ಇವರಲ್ಲಿ ಬೆಳೆಸಬೇಕಿದೆ. ರಾಜಕೀಯ ಪ್ರವೇಶಕ್ಕೆ ಮುನ್ನ ತರಬೇತಿ ಹಾಗೂ ತಯಾರಿಯ ಕೊರತೆ ಇವರಲ್ಲಿ ಎದ್ದು ತೋರುತ್ತಿದೆ.

೩೦

ಈ ಹಿನ್ನೆಲೆಯಲ್ಲಿ ಮಹಿಳೆಯರ ರಾಜಕೀಯ ಹಕ್ಕುಗಳನ್ನು ಖಾತ್ರಿಗೊಳಿಸಬೇಕು. ಪ್ರಜಾತಂತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕು. ಅವರನ್ನು ಕೆವಲ ಫಲಾನುಭವಿಗಳಾಗಿಸದೇ ಯೋಜನೆಗಳ ರಚನೆಯಲ್ಲಿ ಮತ್ತು ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಸಾಕಷ್ಟಿರುವಂತೆ ನೋಡಿಕೊಳ್ಳಬೇಕು. ಮಹಿಳಾ ಮೀಸಲಾತಿ ಎಲ್ಲಾಕ್ಷೇತ್ರಗಳಲ್ಲಿ ಜಾರಿಗೆ ಬರಬೇಕು. ವೈಜ್ಞಾನಿಕವಾಗಿ ಮೀಸಲಾತಿಯನ್ನು ಜನಸಂಖ್ಯಾಧಾರಿತವಾಗಿ ನೀಡಬೇಕು. ಅಂದರೆ ೫೦%ರಷ್ಟು ನೀಡಬೇಕು. ಸಧ್ಯ ತಕ್ಷಣಕ್ಕೆ ಸರ್ಕಾರಗಳು ಒಪ್ಪಿಕೊಂಡಿರುವ ೩೩% ಆದರೂ ಜಾರಿಯಾಗಬೇಕು. ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷವಾಗಿ ರಚಿತವಾದ ಮಹಿಳಾ ಆಯೋಗವನ್ನು ಸಶಕ್ತಗೊಳಿಸಬೇಕು. ಜಿಲ್ಲಾ ಮಟ್ಟದಲ್ಲೂ ಅದರ ಯಶಸ್ವಿ ಕಾರ್ಯಾಚರಣೆಯಾಗಬೇಕು. ಇತ್ತೀಚೆಗಿನ ಕೆಲವರ್ಷಗಳಿಂದ ಎಲ್ಲ ರಾಜಕೀಯ ಪಕ್ಷಗಳೂ ಮಹಿಳೆಯರಿಗೆ ನೀಡುವ ಟಿಕೆಟ್ ಪ್ರಮಾಣ ಕಡಿಮೆಯಾಗಿದೆ. ಅದಕ್ಕಿರುವ ಮಾನದಂಡ, ಒಂದು ಗಂಡ ಸತ್ತಿದ್ದರೆ ಅನುಕಂಪದ ಅಲೆಯ ಲಾಭ ಪಡೆಯಬೇಕೆನ್ನುವ ಸಂದರ್ಭ. ಇನ್ನೊಂದು ಸೋಲು ಖಚಿತ ಇರುವ ಸ್ಥಳಗಳಲ್ಲಿ ಕಾಟಾಚಾರಕ್ಕೆ ಮಹಿಳೆಗೆ ಅವಕಾಶ ನೀಡಿ ಕೈತೊಳೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಮಹಿಳಾ ಮೀಸಲು ಮಸೂದೆ ಜಾರಿ ಅನಿವಾರ್ಯ.

ಲೋಕಸಭಾ ಚುನಾವಣೆಗೆ ನಿಲ್ಲುವುದೆಂದರೆ ಈಗ ರೂ. ೧೦ ಕೋಟಿಗೂ ಹೆಚ್ಚಾಗಿ ಹಣ ಖರ್ಚುಮಾಡಬೇಕು ಎನ್ನುವುದು ರಾಜಕೀಯ ವಲಯಗಳಲ್ಲಿನ ಮಾತು. ಇಂತಹ ಸ್ಥಿತಿಯಲ್ಲಿ ಈ ಪ್ರಮಾಣದ ಹಣ ಹೊಂದಿರುವುದೂ ಮಹಿಳೆಗೆ ಸಾಧ್ಯವಿಲ್ಲ. ಭಾರತದ ಶೇ.. ೪ – ೫ ರಷ್ಟು ಮಹಿಳೆಯರು ಮಾತ್ರ ಸ್ಥಿರ ಆಸ್ತಿಯ ಒಡೆಯರಾಗಿರುವುದು ಇಲ್ಲಿ ಗಮನಿಸಬೇಕಾದ ಅಂಶ. ಜೊತೆಗೆ ಜನ ಸಂಪರ್ಕಗಳಿಗೆ ತಮ್ಮದೇ ಆದ ವಿಸ್ತೃತವಾದ ಜಾಲದ ಬಲವೂ ಆಕೆಗಿಲ್ಲ. ಹಣ, ಹೆಂಡ ಇತ್ಯಾದಿ ಗಿಮಿಕ್‌ಗಳನ್ನು ಮಾಡಲೂ ಅವಳಿಗೆ ಬರುವುದಿಲ್ಲ. ಜೊತೆಗೆ ಪ್ರಾಮಾಣಿಕತೆ ಇರುವವರ‍್ಯಾರೂ ರಾಜಕೀಯ ಪ್ರವೇಶಿಸಲು ಹಿಂಜರಿಯುತ್ತಾರೆ. ಪಕ್ಷದಲ್ಲಿನ ಸಂಘಟನೆಯ ಮಟ್ಟದಲ್ಲೂ ಹೆಚ್ಚಿನ ಮಹಿಳಾ ಪದಾಧಿಕಾರಿಗಳು ಇಲ್ಲದಿರುವುದು ಮತ್ತೊಂದು ಕೊರತೆ. ಹಾಗೇ ಮುಖ್ಯವಾಗಿ ಗೆಲ್ಲುವ ಶಕ್ತಿ ಪ್ರದರ್ಶಿಸಿದ ನಂತರ ಕೂಡ ಮಹಿಳೆಯರನ್ನು ರಾಜಕೀಯದಲ್ಲಿ ಒಪ್ಪಿಕೊಳ್ಳಲು ಪುರುಷ ಅಹಂಕಾರವು ಅಡ್ಡಿ ಬರುತ್ತದೆ. ಎಲ್ಲಕ್ಕಿಂತಾ ಮುಖ್ಯವಾಗಿ ರಾಜಕೀಯ ಎನ್ನುವುದೇ ಪುರುಷ ಸಂಸ್ಕೃತಿ. ಅದನ್ನು ಮಹಿಳೆ ಹೊರಗಿನಿಂದ. ಉದ್ದೇಶಪೂರಿತವಾಗಿ ಕಲಿತು ಜಾಣಳಾಗ ಬೇಕಿದೆ. ರಾಜಕೀಯದ ತರಬೇತಿ ಹಾಗೂ ತಯಾರಿ ಎರಡೂ ಮೂಲಮಟ್ಟದಿಂದ ಆದಾಗ ನಮ್ಮ ಮಹಿಳೆಯರು ರಾಜಕೀಯವನ್ನು ಸಮರ್ಥವಾಗಿ ಸ್ವೀಕರಿಸಬಹುದು. ಈ ಕುರಿತು ಗಂಭೀರ ಚಿಂತನೆಗಳು ಆಗಬೇಕಿವೆ.

೩೧

‘ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನಾದರೂ ಅಳೆಯಬಹುದು ಹೆಣ್ಣಿನ ಮನಸಿನ ಆಳವನ್ನು ಅರಿತವರಿಲ್ಲ’ ಎಂದು ಯಾರೋ ಹೇಳಿದ ಸುಂದರ ಸುಳ್ಳು ನಂಬಿ ಅವಳನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗಿದ್ದೇ ಕಡಿಮೆ ನಮ್ಮ ಪುರುಷ ಪ್ರಧಾನ ಸಮಾಜ. ‘ಹೆಣ್ಣು ಸ್ವಾತಂತ್ರ‍್ಯಕ್ಕೆ ಅನರ್ಹಳು’ ಎಂದ ಮನು, ಹೆಣ್ಣು ಸುಕೋಮಲೆಅವಳನ್ನು ರಕ್ಷಿಸು ಕಾಪಾಡು’ ಎಂದು ಕಟ್ಟಳೆ ಬರೆದಿಟ್ಟ ಶಾಸ್ತ್ರಗಳು, ಹೆಣ್ಣೆಂದರೆ ‘ಕ್ಷಮಯಾಧರಿತ್ರಿ, ಸಹನಮಯಿ, ಮಾಯೆ, ಶಕ್ತಿ, ಪ್ರಕೃತಿ, ದೇವತೆ…… ಎಂದೆಲ್ಲಾ ವರ್ಣಿಸುವ ಕವಿಗಳ ಅತಿ ವೈಭವೀಕರಣಗಳ ಮಧ್ಯೆ ಸಿಕ್ಕಿ ತನ್ನದಲ್ಲದ ನೂರಾರು ಮುಖವಾಡಗಳನ್ನು ಹೊತ್ತು ‘ನಿಜಕ್ಕೂ ನಾನೆಂದರೆ ಏನು?’ ಎಂಬ ಗೊಂದಲ ಸ್ವತಹ ಹೆಣ್ಣಿಗೇ ಮೂಡಿ ಚಡಪಡಿಸುವಂತಾಗಿದೆ.

ಅವಳ ತೀವ್ರ ಸಂವೇದನಾಶೀಲ ಸ್ವಭಾವ ಮತ್ತು ಪ್ರವೃತ್ತಿ ಪುರುಷನದಕ್ಕಿಂತಾ ಭಿನ್ನವಾದದ್ದು ಮಾತ್ರವಲ್ಲ ಸೂಕ್ಷ್ಮತರವಾದದ್ದೂ ಹೌದು. ಗಾಢವಾದದ್ದೂ ಹೌದು. ವಸ್ತು, ವಿಷಯ, ಘಟನೆ ಮತ್ತು ಸಂಬಂಧಗಳನ್ನು ಪುರುಷನಿಗಿಂತಾ ಭಿನ್ನವಾದ ಭಾವನಾತ್ಮಕವಾದ ನೆಲೆಯಲ್ಲಿ ಹಿಡಿಯಬಲ್ಲ ಇಂದ್ರೀಯ ಸಂವೇದನೆ ಮತ್ತು ಸಂವಹನತೆ ಸರಳ, ಸೂಕ್ಷ್ಮವಾಗಿರುವುದರ ಜೊತೆಗೇ ಸಂಕೀರ್ಣವಾದದ್ದು! ಆದರೆ ಇವೆಲ್ಲವೂ ಅವಳ ಅವ್ಯಕ್ತ ಭಾವನಾ ಪ್ರಪಂಚದ ಒಳಗೆ ವ್ಯಕ್ತವಾಗದೇ ಹಾಗೆಯೇ ಉಳಿದುಬಿಡುವುದೇ ಹೆಚ್ಚು. ಅವಳ ಮೌನ ಪ್ರಪಂಚದೊಳಗೆ ಒಂದು ಸುತ್ತು ಬಂದರೆ ಹಲವು ವಿಸ್ಮಯಗಳ ಅದ್ಭುತ ಲೋಕವೊಂದು ತೆರೆದುಕೊಳ್ಳುತ್ತದೆ.

ಹೆಣ್ಣೆಂದರಿ ಇಷ್ಟೇ…. ಹೀಗೇ.. ಎಂದು ಅವಳ ಗುಣ ಸ್ವಭಾವಗಳಿಗೆ ಕವಚ ತೊಡಿಸಿ ಇರಿಸಿದ್ದಾಗಲೂ ಹೆಣ್ಣಿನ ಅಭಿವ್ಯಕ್ತಿಗಳು ಚೌಕಟ್ಟನ್ನು ಮೀರಿ ದಿಟ್ಟವಾಗಿ ಹೊರಬಿದ್ದಿವೆ. ಹಾಗೇ ಸಂಘರ್ಷಕ್ಕೂ ಗುರಿಯಾಗಿವೆ. ‘ಗಿಡವೆಂದು ತಿಳಿದೆಯೋ ಹೆಣ್ಣು ಜನ್ಮದ ಒಡಲ, ಫಲಗಳನ್ನು ಮನಬಂದಂತೆ ಸೃಜಿಸುವುದಕೆ?’ ಎಂದು ಪ್ರಶ್ನಿಸಿದ ಬೆಳಗೆರೆ ಜಾನಕಮ್ಮ, ‘ಹೊಟ್ಟೆಯ ಈ ಕಿಚ್ಚು ಮುಟ್ಟಲಾಗದ ಬೆಂಕಿ ನನ್ನ ಸಿಟ್ಟೋಗಿ ತಟ್ಟಲಿ ಆ ಪರಶಿವನ ಮಡದಿಗೆ’ ಎಂದು ಶಪಿಸಿದ ಜಾನಪದ ಕವಯಿತ್ರಿ, ‘ಆರೂ ಇಲ್ಲದವಳೆಂದು ಅಳಿಗೊಳಲು ಬೇಡ ಕಂಡಯ್ಯ, ಏನ ಮಾಡಿದಡೆಯೂ ನಾನಂಜುವಳಲ್ಲ, ತರಗೆಲೆಯ ಮೆಲಿದು ನಾನಿಹೆನು, ಸುರಗಿಯ ಮೇಲೆರಗಿ ನಾನಿಹೆನು ಚೆನ್ನಮಲ್ಲಿಕಾರ್ಜುನಯ್ಯ ಕರಕರ ಕಾಡಿ ನೋಡಿದರೆ ಒಡಲನೂ ಪ್ರಾಣವನೂ ನಿಮಗೊಪ್ಪಿಸಿ ಶುದ್ಧಳಿಹೆನು’ ಎಂದು ದಿಟ್ಟವಾಗಿ ಹೇಳಿದ ಅಕ್ಕಮಹಾದೇವಿ ತಮ್ಮ ಕಾಲಗಳಲ್ಲಿ ನಿಜ ಸಂಘರ್ಷಕ್ಕೆ ಗುರಿಯಾಗಿದ್ದಾರೆ. ಅವರು ಆತ್ಮಚರಿತ್ರೆಗಳನ್ನು ಬರೆದಿಟ್ಟಿದ್ದರೆ ಅವುಗಳು ಈಗ ದಾಖಲೆಗಳಾಗುತ್ತಿದ್ದವು. ಮಹಿಳೆಯ ಇತಿಹಾಸ ಅವಳಿಂದಲೇ ಬರೆಯಲ್ಪಟ್ಟಿದ್ದರೆ ಇಂದಿನವರೆಗಿನ ಹಾದಿಯಲ್ಲಿನ ಹೋರಾಟ, ನೋವು – ನಲಿವುಗಳು ಸ್ಪಷ್ಟವಾಗಿ ಅಭಿವ್ಯಕ್ತಿಗೊಳ್ಳುತ್ತಿದ್ದವು.

ಇತ್ತೀಚಿನ ದಿನಗಳಲ್ಲಿ ಸ್ತ್ರೀ ಸಂವೇದನೆಗಳಿಗೆ ಹೆಚ್ಚಿನ ಮಹತ್ವ ಬಂದಿರುವುದು ನಮ್ಮಂತೆಯೇ, ನಮಗೆ ಸಮಾನಳು, ಅವಳೂ ತನ್ನ ಅಭಿಪ್ರಾಯ ಹಂಚಿಕೊಳ್ಳಲಿ, ಸಾಮಾಜಿಕವಾಗಿ ಪಾಲ್ಗೊಳ್ಳಲಿ ಎಂಬ ಸಮನ್ವಯ ಭಾವ, ಅವಳ ವಿಚಾರಕ್ಕೂ ಬೆಲೆಕೊಡಬೇಕೆಂಬ ಗೌರವದ ನಿಲುವುಗಳು ಅವಳ ಭವಿಷ್ಯದ ಬಗೆಗೆ ಕೊಂಚ ಆಶಾದಾಯಕವಾದ ದೃಷ್ಟಿ ಇರಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಆದರೆ ಇಂದಿಗೂ ಹೆಣ್ಣಿಗೆ ತನ್ನ ಮನಸ್ಸಿನ ಎಲ್ಲ ಮುಖಗಳನ್ನೂ ಪ್ರಪಂಚದೆದುರು’ ತೆರೆದಿಡಲು ಸಾಧ್ಯವಾಗಿಲ್ಲ ಎಂಬುದೂ ಅಷ್ಟೇ ಸತ್ಯ. ಅವಳು ಬೌದ್ಧಿಕವಾಗಿ ಮಾನಸಿಕವಾಗಿ ಪ್ರಬುದ್ಧಳಾದಷ್ಟು ವೇಗದಲ್ಲಿ ನಮ್ಮ ಪುರುಷ ಪ್ರಧಾನ ಸಮಾಜ ಬದಲಾಗುವುದಿಲ್ಲ. ಇವೆರಡರ ನಡುವಿನ ಅಂತರವನ್ನು ಗಮನದಲ್ಲಿಟ್ಟುಕೊಂಡೇ ಇಂದಿನ ಮಹಿಳೆ ತನ್ನ ನಿಲುವುಗಳನ್ನು ಅತ್ಯಂತ ಎಚ್ಚರಿಕೆಯಿಂದ, ಸೂಕ್ಷ್ಮವಾಗಿ ಮಂಡಿಸಬೇಕಿರುವುದು ಇಂದಿನ ಅನಿವಾರ್ಯತೆ. ತನ್ನ ಅಭಿವ್ಯಕ್ತಿ ತನ್ನೊಬ್ಬಳದೇ ಅಲ್ಲ ತಾನು ಇಡೀ ಸಮುದಾಯದ ಪ್ರತಿನಿಧಿ ಎಂಬ ಅರಿವು ಸದಾ ಜಾಗೃತವಾಗಿರಬೇಕು. ಜೊತೆಗೆ ತನ್ನ ನಿಗೂಢ ಅವ್ಯಕ್ತ ಲೋಕದ ವಿಶಿಷ್ಟತೆಯನ್ನು ದಿಟ್ಟತನದಿಂದ ಪ್ರತಿಪಾದಿಸಲು ಹೊರಟಾಗಲೆಲ್ಲಾ ತಾಳ್ಮೆ, ವಿವೇಚನೆಗಳಿಲ್ಲದೇ ಆತುರ ತೋರಿದರೆ ವಿವಾದಗಳು, ಸಂಘರ್ಷಗಳು ಉಂಟಾಗುತ್ತವೆ. ಹೀಗಾಗಗಿ ಅವಳು ಪುರುಷ ನಿರ್ಮಿತ ಪೂರ್ವಗ್ರಹಗಳ ಗೋಡೆಯನ್ನು ಒಡೆಯುತ್ತಾ ಮೊದಲು ತನಗೆ ತಾನು ಸರಿಯಾಗಿ ಅರ್ಥವಾಗಿ ನಂತರ ಹೊರಜಗತ್ತಿಗೆ ತೆರೆದು ಕೊಳ್ಳುವುದು ಮುಖ್ಯ. ಈ ಹಿನ್ನೆಲೆಯಲ್ಲಿಯೇ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಅನಿಯಂತ್ರಿತವಾಗಿ, ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡಂತ ಮಹಿಳೆಯರ ಆತ್ಮಚರಿತ್ರೆಗಳು ಹೆಚ್ಚು ಸ್ವಾಗತಾರ್ಹವಾದುವು.

೩೨

ಮಹಿಳಾಬರಹಗಾರರಲ್ಲಿ ಯಾಕೆ ಒಬ್ಬ ಪಂಪ, ಒಬ್ಬ ಕುಮಾರವ್ಯಾಸ, ಒಬ್ಬ ಕುವೆಂಪು, ಒಬ್ಬ ಬೇಂದ್ರೆ ಹುಟ್ಟಲಿಲ್ಲ? ಎಂದು ಗೇಲಿ ಮಾಡುವ ಪ್ರಶ್ನೆ ನಮ್ಮ ಪುರುಷ ವರ್ಗದಿಂದ ಆಗೀಗ ಕೇಳಿ ಬರುತ್ತಿರುತ್ತದೆ. ಇಂತಹ ದೊಡ್ಡ ವ್ಯಕ್ತಿಗಳು ಮಹಿಳೆಯರಲ್ಲಿ ಹುಟ್ಟಿ ಬರಲಿಲ್ಲ ಎನ್ನುವುದು ನಿಜವಾದ ವಿಷಯವೇ. ಆದರೆ ಮಹಿಳೆಯರಿಗೆ ಬರೆಯುವಂತಹ ಅವಕಾಶಗಳು ತೆರೆದುಕೊಂಡಿದ್ದು ಯಾವಾಗ? ಎಂದು ನಾವು ಯೋಚಿಸಬೇಕು. ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸವನ್ನು ನಿರಾಕರಿಸಿದಂತ ಕಾಲ ಕೂಡ ಹಿಂದೆ ಇತ್ತು. ವಚನ ಯುಗವನ್ನು ಬಿಟ್ಟರೆ ೧೮ನೇ ಶತಮಾನದ ಕೊನೆಯ ಭಾಗದಲ್ಲಿ ಉಚ್ಚವರ್ಗದ ಕೆಲವು ಹೆಣ್ಣುಮಕ್ಕಳಿಗೆ ಶಿಕ್ಷಣದ ಅವಕಾಶ ದೊರಕಲಾರಂಭಿಸಿದರೂ ಉನ್ನತ ಶಿಕ್ಷಣವನ್ನು ಪಡೆದು ತನ್ನ ವ್ಯಕ್ತಿತ್ವದ ಪರಧಿಯನ್ನು ಹಿಗ್ಗಿಸಿಕೊಂಡು ಯೋಚಿಸುವಂತಹ ಅವಕಾಶ ಹೆಚ್ಚಿನ ಪ್ರಮಾಣದಲ್ಲಿ ಆಗಲಾರಂಭಿಸಿದ್ದು ೭೦ರ ದಶಕದಲ್ಲಿ. ಹೀಗೆ ಶತಮಾನಗಳ ಕಾಲ ವಿದ್ಯೆಯಿಂದ ವಂಚಿತಳಾದ ಸ್ತ್ರೀ ತಾನೇ ತನಗನಿಸಿದ್ದನ್ನು ಅಭಿವ್ಯಕ್ತಿಸುವ ಅವಕಾಸ ಪಡೆದುಕೊಂಡಿದ್ದು ಇತ್ತೀಚೆಗಷ್ಟೇ.

ಅಭಿವ್ಯಕ್ತಿಯಲ್ಲಿ ಪುರುಷ ಮತ್ತು ಸ್ತ್ರೀ ಎಂಬ ವಿಭಾಗಗಳೇ ತಪ್ಪು. ಅಭಿವ್ಯಕ್ತಿ ಯಾವಾಗಲೂ ಒಂದೇ ಎಂಬ ವಾದ ಆಗೀಗ ಕೇಳಿ ಬರುತ್ತಿರುತ್ತದೆ. ಆದರೆ ಪುರುಷ ಮತ್ತು ಮಹಿಳೆಯ ಆಲೋಚನಾ ಕ್ರಮಗಳಲ್ಲಿ, ಸಂವೇದನೆಗಳಲ್ಲಿ ಅನನ್ಯತೆ ಹಾಗೂ ವಿಭಿನ್ನತೆಗಳಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಸ್ವಲ್ಪ ವಿವೇಚಿಸಿ ನೋಡಿದರೆ ಮಹಿಳೆ ಬರೆಯುವಂತಹ ಕೃತಿಗಳ ಹಿಂದ ಒಂದು ಹೆಣ್ಣುತನ ಇರುವುದು ಗೋಚರಿಸುತ್ತದೆ. ಹೆಣ್ಣುತನವೆಂದರೆ ಮತ್ತೆ ಸಾಂಪ್ರದಾಯಿಕವಾಗಿ ಹೇಳುವಂತಹ ತ್ಯಾಗ, ಔದಾರ್ಯ, ಕ್ಷಮಶೀಲತೆ, ಮಾರ್ದವತೆ, ಮಾಗುವಿಕೆ ಎಂದಷ್ಟೇ ಅರ್ಥೈಸಬೇಕಿಲ್ಲ. ನಿಜವಾಗಿ ಹೆಣ್ಣುತನವೆಂದರೆ ಪುರುಷ ಪ್ರಧಾನ ಮೌಲ್ಯಗಳನ್ನೊಳಗೊಂಡ ಗಂಡುತನದ ಅಭಿವ್ಯಕ್ತಿಯನ್ನು ನಿರಾಕರಿಸಿ, ಅವಕ್ಕೆ ಸಹಜವಾಗಿ ಎದುರಾಗಿರುವಂತಹ ಒಂದು ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳುವುದೇ ಆಗಿರುತ್ತದೆ. ಅದನ್ನು ಪ್ರಯತ್ನ ಪೂರ್ವಕವಾಗಿ ಬರಹಗಾರ್ತಿಯರು ತಮ್ಮದಾಗಿಸಿಕೊಳ್ಳಬೇಕಿದೆ.

೩೩

ಪುರುಷನಿಗೆ ತಾನು ಮಹಿಳೆಗಿಂತ ಶ್ರೇಷ್ಠ, ಅನನ್ಯ ಎನ್ನುವಂತಹ ಪ್ರಬಲವಾದ ನಂಬಿಕೆ ಇರುತ್ತದೆ. ಆದರೆ ಪುರುಷ ನಿರ್ಮಿತ ಈ ಸಮಾಜದಲ್ಲಿ ಮಹಿಳೆ ಕೂಡ ತಾನು ಪುರುಷನ ಪ್ರತಿರೂ, ಪಡಿಯಚ್ಚು ಆಗುವುದರಲ್ಲೇ ತನ್ನ ಸಾರ್ಥಕತೆ ಇದೆ ಎಂದು ಭಾವಿಸಿದ್ದಾಳೆ. ಕೆಲವೊಮ್ಮೆ ಅದು ಅನಿವಾರ್ಯ ಕೂಡ ಆಗಿರುತ್ತದೆ. ಆದರೆ ಅವಳೂ ಅವನಂತೆಯೇ ಇರಬೇಕಿಲ್ಲ, ಯೋಚಿಸಬೇಕಿಲ್ಲ, ಬರೆಯಬೇಕಿಲ್ಲ. ತಾನು ನಿಜವಾಗಿ ಏನು? ತನ್ನ ಅನನ್ಯತೆ, ಸೃಷ್ಟಿ ಸಹಜತೆಗಳೇನು? ಎನ್ನುವುದನ್ನು ಹಲವು ಬಾರಿ ಮಹಿಳೆಯರು ಪ್ರಜ್ಞಾಪೂರ್ವಕವಾಗಿ, ಇಲ್ಲವೇ ಅರಿವಿಲ್ಲದೇ ಅಳಿಸಿ ಹಾಕಿರುತ್ತಾರೆ. ಆದರೆ ತನ್ನ ನಿಜ ಆಂತರಿಕ ಸ್ವರೂಪವನ್ನು ಕಂಡುಕೊಂಡ ಮಹಿಳೆ ಮಾತ್ರ ತನ್ನ ಉತ್ಕಟ ಜೀವನ ಪ್ರೀತಿ, ಭಾವತೀವ್ರತೆಯೊಂದಿಗೆ, ತನ್ನ ಸಹಜತೆಯಲ್ಲಿಯೇ ಬದುಕುತ್ತಾಳೆ ಮತ್ತು ಬರೆಯುತ್ತಾಳೆ. ಪುರುಷನಿಗ ಮುಖ್ಯವಾಗುವಂತಾ ಯುದ್ಧ, ರಾಜಕಾರಣ ತಂತ್ರಗಾರಿಕೆ, ಬೌದ್ಧಿಕ ಶ್ರೇಷ್ಠತೆ, ಪೌರುಷ ಪ್ರದರ್ಶನ, ಪ್ರಾಬಲ್ಯ ವಿಸ್ತರಣೆ….. ಮಹಿಳೆಗೆ ಅಮುಖ್ಯವೆನಿಸುತ್ತದೆ. ಆಪ್ತ ಸಂಬಂಧಗಳು, ಜಿವಂತಿಕೆಗೆ ಮುಖಾಮುಖಿಯಾಗುವಂತಹ ತುಡಿತಗಳು, ಅದರೊಂದಿಗಿನ ತನ್ನ ಗಾಢ ಹೊಂದಾಣಿಕೆ, ಚಿಕ್ಕ ಪುಟ್ಟ ವಿಷಯವೂ ನೀಡುವ ಬೆರಗು, ಸಂತಸ ಅವಳಿಗೆ ಮುಖ್ಯವೆನಿಸುತ್ತದೆ. ಅದರಂತೆಯೇ ಅವಳು ಬದುಕುತ್ತಾಳೆ. ಅದನ್ನು ಕುರಿತೇ ಅವಳು ಬರೆಯುತ್ತಾಳೆ. ಆದರೆ ಸಮಾಜಕ್ಕೆ ಅದೆಂದೂ ಮುಖ್ಯ ಅಗುವುದಿಲ್ಲ. ಏಕೆಂದರೆ ಶ್ರೇಷ್ಠ ಮಾದರಿ ಹಾಗೂ ಅಂತಿಮ ಮಾನದಂಡದ ತಕ್ಕಡಿಗಳಿರುವುದು ಪುರುಷರಲ್ಲಿ. ನಮ್ಮ ಸಮಾಜ ನಿರ್ಮಾಣಗೊಂಡಿರುವುದೇ ಪುರುಷ ಕೇಂದ್ರಿತ ಏಕಪಕ್ಷೀಯ ನಿರ್ಣಯಗಳಿಂದ ಅಲ್ಲಿ ಅವಳ ಭಾವನೆಗಳು ನಗಣ್ಯ.

ಈ ಹಿನ್ನೆಲೆಯಲ್ಲಿ ನೋಡಿದಾಗ ಮಹಿಳೆ ಹಲವು ಬಾರಿ ತನ್ನ ಅಭಿವ್ಯಕ್ತಿಯನ್ನು ತಾನೆ ಸ್ವಯಂ ನಿಯಂತ್ರಸಿಕೊಂಡಿರುವುದು ಕಾಣುತ್ತದೆ. ಮಹಿಳೆ ಆಧುನಿಕತೆಯೊಂಧಿಗೆ ಅನುಸಂಧಾನ ನಡೆಸಿದಷ್ಟು ವೇಗವಾಗಿ ನಮ್ಮ ಪುರುಷಪ್ರಧಾನ ವ್ಯವಸ್ಥೆ ಬದಲಾಗುವುದಿಲ್ಲವಾದ್ದರಿಂದ ಅವಳು ತನ್ನನ್ನ ತಾನು ಈ ಸಮಾಜದಿಂದ ರಕ್ಷಿಸಿಕೊಳ್ಳಲು ಒಂದು ಮುಖವಾಡವನ್ನು ಹಾಕಿಕೊಂಡೇ ಬಹಳಷ್ಟು ಬಾರಿ ಅಭಿವ್ಯಕ್ತಿಸುತ್ತಾ ಇರುತ್ತಾಳೆ. ಮಹಿಳೆಯನ್ನು ಸದಾ ಒಂದು ಗುಡ್ ಗರ್ಲ್ ಸಿಂಡ್ರೋಮ್ ಆವರಿಸಿರುತ್ತದೆ. ಅದು ಈ ಸಮಾಜಕ್ಕೆ ಒಪ್ಪಿತವಾಗಿದ್ದನ್ನೇ ಬರೆದು ಒಳ್ಳೆಯವಳು ಎನ್ನಿಸಿಕೊಳ್ಳಬೇಕು ಎನ್ನುವಂತಾ ಭಾವನೆ. ಅದು ಮಹಿಳೆ ತನ್ನ ಪೂರ್ವ ನಿರ್ಧಾರಿತ ಚೌಕಟ್ಟನ್ನು ಮೀರಿ ಹೋಗಲು ಬಿಡುವುದಿಲ್ಲ. ಹೀಗಾಗೇ ಮುಕ್ತವಾಗಿ ಬರೆಯುವಂತಾ ಅವಕಾಶಗಳಿದ್ದಾಗಲೂ ಹಾಗೆ ಬರೆಯದೇ ಉಳಿಯುತ್ತಾಳೇ. ಇಂತಹ ಭ್ರಮೆಗಳನ್ನು ಒಡೆದು, ಮಿತಿಗಳನ್ನು ಮೀರಿದಾಗ ಮಾತ್ರ ಮಹಿಳೆ ಮುಕ್ತವಾಗಿ ಅಭಿವ್ಯಕ್ತಿಸುವುದಕ್ಕೆ ಸಾಧ್ಯ.

೩೪

ಮುಖ್ಯವಾಗಿ ಮಹಿಳೆಯರು ಬರವಣಿಗೆಯನ್ನು ಇನ್ನು ಹೆಚ್ಚು ಗಂಭೀರುವಾಗಿ ಪರಿಗಣಿಸಬೇಕಿದೆ. ಸಾಂಸ್ಕೃತಿಕವಾಗಿ, ವೈಚಾರಿಕವಾಗಿ, ಮುಕ್ತವಾಗಿ ಸವಾಲುಗಳನ್ನು ಎದುರಿಸುವುದಕ್ಕೆ ಅವರು ಸಜ್ಜಾಗಬೇಕಿದೆ. ತನ್ನ ಬದುಕಿನ ಎಲ್ಲ ಸೂಕ್ಷ್ಮಗಳನ್ನೂ, ಮುಖಗಳನ್ನೂ ಅವಳೇ ಯಾವುದೇ ಬಾಹ್ಯ ಒತ್ತಡ, ನಿರ್ಬಂಧವಿಲ್ಲದೇ, ಪೂರ್ವ ನಿರ್ಧಾರಿತ ಮೌಲ್ಯಗಳ ಗೋಜಲು ಗದ್ದಲಗಳಿಲ್ಲದೇ ತೆರೆದಿಡುವಂತಾ ಸಾಮಾಜಿಕ ಸ್ಥಿತಿ ನಿರ್ಮಾಣಗೊಂಡರೆ, ಮಹಿಳೆಯ ಬರಹಗಳು ಅವಳ ಮನಸ್ಸು, ಪುರುಷನ ವರ್ತನೆ ಹಾಗೂ ಸಾಮಾಜಿಕ ಬದಲಾವಣೆಯ ಮೈಲಿಗಲ್ಲುಗಳಾಗುತ್ತವೆ. ಅವಳ ಸಂಘರ್ಷಗಳು ಅವಳದೇ ಅಭಿವ್ಯಕ್ತಿಯಲ್ಲಿ ದಾಖಲಾದಾಗ, ನಿಧಾನವಾಗಿಯಾದರೂ ಸಮಾಜ ಅಂತರ್ಮುಖಿಯಾಗಿರುವ ಅವಳ ಸೂಕ್ಷ್ಮ ಬಹುಮುಖೀ ಭಾವಗಳನ್ನು, ವಿಚಾರಗಳನ್ನು ಸ್ವಾಗತಿಸಬಹದು.

ನಮ್ಮ ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣೆಂದರೆ ಯಶಸ್ವೀ ಪುರುಷನ ಹಿಂದೆ ನಿಂತು ಅವನೆಲ್ಲಾ ಕಾರ್ಯಗಳಿಗೂ ಸಹಕರಿಸಿ, ಕೃತಜ್ಞತಾ ಭಾವದಿಂದ ಬೀಗುವ ದಾಸಿಯಾಗಿರಬೇಕೆಂಧೇ ಬಯಸುವುದು ಹಲವು ಬಾರಿ ಢಾಳಾಗಿಯೇ ಗೋಚರಿಸುತ್ತಿರುತ್ತದೆ. ಇಂದು ಹೆಣ್ಣು ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಡುತ್ತಿದ್ದಾಳೆ. ಸ್ತ್ರೀ ವಿದ್ಯಾಭ್ಯಾಸ ಹಾಗೂ ಉದ್ಯೋಗ ಪ್ರಮಾಣ ಗಣನೀಯವಾಗಿ ಹೆಚ್ಚಾಗಿರುವುದು ದಾಖಲಾಗಿದ್ದರೂ ಉನ್ನತ ಅಧಿಕಾರ ಸ್ಥಾನಗಳಲ್ಲಿ, ಮಹತ್ವದ ನಿರ್ಧಾರ, ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದ ಸ್ಥಾನಗಳಲ್ಲಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದ ಪ್ರಮುಖ ಹುದ್ದೆಗಳಲ್ಲಿ ಅವಳಿಗಿನ್ನೂ ಗಮನಾರ್ಹವಾದ ಸ್ಥಾನ ದೊರಕಬೇಕಿದೆ. ಅವಳ ಬುದ್ಧಿವಂತಿಕೆ, ಸಾಮರ್ಥ್ಯ, ಪ್ರತಿಭೆ, ಜಾಣ್ಮೆಗಳೆಲ್ಲವೂ ಹಿಂಬದಿಯಿಂದ ಉಪಯೋಗಿಸಲ್ಪಟ್ಟು ಎರಡನೆಯ ದರ್ಜೆಯ ಪ್ರಜೆಯಾಗಿಯೇ ಉಳಿಯುವುದಕ್ಕಿಂತ ನೇರವಾಗಿ ಮುಖ್ಯವಾಹಿನಿಯಲ್ಲಿ ತನ್ನ ಹಕ್ಕು ಪ್ರತಿಪಾದಿಸುವಂತಹ ಗುರುತುರವಾದ ಸವಾಲನ್ನು ಇಂದಿನ ಆಧುನಿಕ ಮಹಿಳೆ ತನ್ನ ಹೆಗಲ ಮೇಲೆ ಹೊರಬೇಕಿದೆ. ಹಾದಿ ದುರ್ಗಮವಾದರೂ ನಡೆಯಲಾಗದಷ್ಟು, ಗುರಿ ತಲುಪಲಾಗದಷ್ಟು ಕಠಿಣವಾದುದಲ್ಲ. ಹೆಜ್ಜೆಗಳು ದೃಢವಾಗಿವೆ ಮತ್ತು ಸಶಕ್ತವಾಗಿವೆ.