ಇಂದಿನ ಭಾರತದ ಮಹಿಳೆ ಸ್ಥಿತ್ಯಂತರದ ಕಾಲಘಟ್ಟದಲ್ಲಿ ನಿಂತಿದ್ದಾಳೆ. ಅವಳ ಮುಂದೆ ಸಾಧಿಸಲು ಅಪಾರ ಅವಕಾಶಗಳ ಬಾಗಿಲುಗಳ ತೆರೆದಿವೆ. ಆದರೆ ಅವಳು ಎರಡು ಹೆಜ್ಜೆ ಮುಂದೆ ಇಟ್ಟರೆ ನಾಲ್ಕು ಹೆಜ್ಜೆ ಕೆಳಕ್ಕೆಳೆಯಲು ಅನೇಕ ದುಷ್ಟ ಶಕ್ತಿಗಳು ಕಾದು ನಿಂತಿವೆ. ‘ಭಾರತ ಇವತ್ತು ಎಲ್ಲ ರಂಗಗಳಲ್ಲೂ ಗಮನಾರ್ಹವಾದುದನ್ನು ಸಾಧಿಸುತ್ತಾ ಇದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತಮ್ಮನ್ನು ಆತ್ಮವಿಶ್ವಾಸದಿಂದ, ಧೈರ್ಯದಿಂದ ತೊಡಗಿಸಿಕೊಳ್ಳುತ್ತಿದ್ದಾರೆ’ ಎಂಬ ಮಾತು ಸಹಜವೆಂಬಂತೆ ನಮ್ಮ ಕಿವಿಗೆ ಬೀಳುತ್ತಿರುತ್ತದೆ. ಆದರೆ ಸಮಾಜದಲ್ಲಿ ಅವಳಿನ್ನೂ ಎರಡನೇ ದರ್ಜೆ ಪ್ರಜೆಯೇ ಆಗಿದ್ದಾಳೆ ಎಂಬುದು ಢಾಳಾಗಿಯೇ ಗೋಚರಿಸುತ್ತಿರುತ್ತದೆ. ಅವಳಿನ್ನೂ ಸಮಾಜದ ಪ್ರಮುಖ, ಮುಖ್ಯವಾಹಿನಿಗೆ ಬರಲಾಗಿಲ್ಲ ಎನ್ನುವುದು ಅಷ್ಟೇ ಸತ್ಯ. ಅದಕ್ಕೆ ಕಾರಣ ನಮ್ಮ ಪುರುಷ ಪ್ರಧಾನ ಸಮಾಜ ಎಂದು ಸ್ಥೂಲವಾಗಿ ಹೇಳಿದರೂ ಅದರ ಒಳ ನೋಟಗಳಲ್ಲಿ ಈ ಸಮಸ್ತೆಗೆ ಆಳವಾಗಿ ಬೇರುಬಿಟ್ಟಿರುವ ಹಲವಾರು ಆಯಾಮಗಳಿವೆ.

ಇತ್ತೀಚಿನ ವರ್ಷಗಳಲ್ಲಿ ಲಿಂಗತ್ವ ಸಮನ್ಯಾಯದ ಪರಿಕಲ್ಪನೆ ಬೆಳೆಯತೊಡಗಿದೆ. ಇದು ಸ್ತ್ರೀ ಪುರುಷರಿಬ್ಬರಿಗೂ ಸಮಾನ ಸ್ವಾತಂತ್ರ್ಯ, ಸ್ಥಾನ-ಮಾನ, ಅವಕಾಶ ಅಧಿಕಾರ ಮುಂತಾದವುಗಳ ಹಂಚುವಿಕೆಯನ್ನು ಮೌಲ್ಯವೆಂದು ಒಪ್ಪಿಕೊಳ್ಳುತ್ತದೆ. ಈಗಾಗಲೇ ಇದನ್ನು ಸಂವಿಧಾನದಲ್ಲಿ, ಶಾಸನ – ಕಾನೂನುಗಳಲ್ಲಿ ಒಪ್ಪಿಕೊಂಡು ಆಗಿದೆ. ಆದರೆ ಇದನ್ನು ನಮ್ಮ ಆಚಾರ – ವಿಚಾರಗಳಲ್ಲಿ, ನಡೆ-ನುಡಿಗಳಲ್ಲಿ, ಮನಸ್ಸಿನಲ್ಲಿ, ಒಟ್ಟಾರೆ ನಮ್ಮ ಜೀವನ ಕ್ರಮದಲ್ಲಿ ಅಳವಡಿಸಿಕೊಂಡು ಚಲಾವಣೆಗೆ ತರಲಾಗಿಲ್ಲದಿರುವುದೇ ಮಹಿಳೆಯ ಸ್ಥಾನ ಸಮಾಜದಲ್ಲಿ ಎರಡನೆಯ ದರ್ಜೆಯಲ್ಲುಳಿಯುವುದಕ್ಕೆ ಮುಖ್ಯ ಕಾರಣವಾಗಿದೆ. ಮಹಿಳೆ ಎಂಬ ಗೌರವವನ್ನು ಕೊಡುವುದು, ಹಾಗೂ ಸಮಾನ ಸ್ಥಾನ – ಮಾನವನ್ನು ನೀಡುವುದು ಎರಡೂ ಬೇರೆ ಬೇರೆಯದೇ ವಿಚಾರಗಳು. ಏಕೆಂದರೆ ಎಷ್ಟೋ ಬಾರಿ ಮಹಿಳೆ ಎಂಬ ಗೌರವ ನೀಡುತ್ತಿದ್ದಾಗಲೂ ಸಹಜವೆಂಬಂತೆ, ಅಸಮಾನತೆಯಿಂದ ನಡೆಸಿಕೊಳ್ಳುವುದನ್ನು ಕಾಣುತ್ತೇವೆ. ಪ್ರತಿಯೋರ್ವ ಜೀವಿಗೂ ಈ ಭೂಮಿಯಲ್ಲಿ ಸಮಾನವಾಗಿ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಆದರೆ ಈ ಜನ್ಮ ಸಿದ್ಧ ಹಕ್ಕು ಸಮಾನ ನೆಲೆಯಲ್ಲಿ ಹಂಚಿಕೆಯಾಗಿಲ್ಲ. ಲಿಂಗತ್ವ ಸಮನ್ಯಾಯವೆನ್ನುವಂತದ್ದು ಈಗಾಗಲೇ ಸಾಧಿತವಾಗಿರುವಂತಾ ನೆಲೆಯಾಗಿರದೇ ಮಹಿಳೆ ಹಾಗೂ ಪುರುಷರಿಬ್ಬರೂ ಮನದಾಳದಿಂದ ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಳ್ಳಬೇಕಾದ ಪರಿಕಲ್ಪನೆಯಾಗಿದೆ.

ಗಂಡು – ಹೆಣ್ಣಿನ ವರ್ಗೀಕರಣಕ್ಕೆ ಅವರೊಳಗಿನ ಜೈವಿಕ ಭಿನ್ನತೆಗಳು ಮೂಲ ಆಧಾರ. ನಿಸರ್ಗದತ್ತವಾದ ಭಿನ್ನತೆ, ಸಂತಾನೋತ್ಪತ್ತಿಗೆ ಪೂರಕವಾಗುವಂತೆ ಅವರ ದೈಹಿಕ – ಮಾನಸಿಕ ರಚನೆಗಳಿರುತ್ತವೆ. ಇಬ್ಬರಿಗೂ ಅವರದ್ದೇ ಆದ ನಿರ್ದಿಷ್ಟ ಜವಾಬ್ದಾರಿಗಳಿರುತ್ತವೆ. ಈ ಜೈವಿಕ ಭಿನ್ನತೆಯನ್ನು ಸಾಮಾಜಿಕವಾಗಿ – ಸಾಂಸ್ಕೃತಿಕವಾಗಿ ಹಿಗ್ಗಿಸಲಾಗಿದೆ. ಈ ಭಿನ್ನತೆಯ ಆಧಾರದಿಂದಲೇ ಶ್ರೇಷ್ಠತೆ – ಕನಿಷ್ಠತೆಯೆಂಬ ಶ್ರೇಣೀಕರಣವನ್ನು ಸಮಾಜ ಮಾಡಿದೆ. ಲಿಂಗತ್ವದ ರಾಜಕಾರಣವು ಅವರಲ್ಲಿರುವ ಭಿನ್ನತೆಯನ್ನು ಎತ್ತಿ ತೋರಿಸಿ ಅವರಲ್ಲಿರುವ ಸಾಮ್ಯತೆಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದೆ.

ಧೈರ್ಯ – ಸಾಹಸ, ಆಕ್ರಮಣಶೀಲತೆ, ಬುದ್ಧಿಮಂತಿಕೆ, ಮುಂದಾಳತ್ವ, ಒರಟುತನ, ಕ್ರಿಯಾಶೀಲತೆ ಗಂಡುಗುಣಗಳು ಎಂದೂ, ನಾಚಿಕೆ, ಸಂಕೋಚ, ಸಹನೆ, ತಾಳ್ಮೆ, ಪುಕ್ಕಲುತನ, ಹಿಂಬಾಲಕತ್ವಗಳು ಹೆಣ್ಣುಗುಣಗಳೆಂದು ವಿಭಾಗಿಸಲಾಗಿದೆ. ಅತಂಹ ಗುಣಗಳಿರುವ ಕಾರಣಕ್ಕೆ ಗಂಡಸರು ಶ್ರೇಷ್ಠರು, ಮತ್ತು ಹೆಂಗಸರು ಕನಿಷ್ಠರು ಎಂಬ ಮನೋಭಾವ ಹುಟ್ಟಿಕೊಂಡಿದೆ. ತೋಳ್ಬಲದ ದೃಷ್ಠಿಯಿಂದ ಗಂಡಸರು ಬಲಿಷ್ಠರಾದವರಾದುದರಿಂದ ಅವರು ಆಳಬೇಕಾದವರು ಹೆಂಗಸರು ದುರ್ಬಲ ರಾದುದರಿಂದ ಅವರು ಆಳಿಸಿಕೊಳ್ಳಬೇಕಾದವರು ಎಂದು ಶತಮಾನಗಳಿಂದ ನಂಬಿಸುತ್ತಾ ಬರಲಾಗಿದ್ದು ಇದರ ಆಧಾರದಿಂದಲೇ ಸ್ತ್ರೀ ಪುರುಷರ ನೆಲೆ – ಬೆಲೆಗಳನ್ನು ಗುರುತಿಸುತ್ತಾ ಬರಲಾಗಿದೆ. ಆದರೆ ವಾಸ್ತವವಾಗಿ ‘ಬಲ’ ಎನ್ನುವ ಕಲ್ಪನೆಯೇ ಪೂರ್ವಗ್ರಹ ಪೀಡಿತವಾದುದು. ಮನಃಶಾಸ್ತ್ರಜ್ಞರ ಪ್ರಕಾರ ನೂರಕ್ಕೆ ನೂರು ಗಂಡು – ಹೆಣ್ಣು ಗುಣಗಳನ್ನು ಹೊಂದಿರುವವರು ಯಾರೂ ಇಲ್ಲ.

ಮುಖ್ಯವಾಗಿ, ನಮ್ಮ ಕುಟುಂಬ ವ್ಯವಸ್ಥೆಯೇ ಅಸಮಾನತೆಯ ಆಧಾರದಲ್ಲಿ ನಿಂತಿರುವಂತದ್ದಾಗಿದೆ. ಇಲ್ಲಿ ಹುಟ್ಟಿನಿಂದಲೇ ಗಂಡು – ಹೆಣ್ಣುಮಕ್ಕಳನ್ನು ಬೆಳೆಸುವ ವಿಧಾನದಲ್ಲೇ ಭಿನ್ನತೆಯಿದೆ. ಇಲ್ಲಿಂದಲೇ ಅಸಮತೆಯ ಬೀಜ ಮೊಳಕೆಯೊಡೆದು ಸಮಾಜದಲ್ಲಿ ಬೆಳೆಯುತ್ತದೆ. ಮದುವೆಯಾಗಿ ಹೆಣ್ಣು ಗಂಡನ ಮನೆಗೆ ಹೋಗಿ, ತನ್ನ ಹಿಂದಿನ ಪರಿಸರವನ್ನು ಮರೆತು ಅಲ್ಲಿನ ಪರಿಸರವನ್ನೇ ತನ್ನ ಪರಿಸರವೆಂದು ನಂಬಿ ಆ ಕುಟುಂಬದ ಎಲ್ಲಾ ಜವಾಬ್ದಾರಿಯನ್ನೂ ಗೃಹಕೃತ್ಯ, ಮನೆವಾರ್ತೆ, ಮಕ್ಕಳ ವೃದ್ಧರ ಪಾಲನೆ….. ಇತ್ಯಾದಿಗಳನ್ನು ನಿರ್ವಹಿಸಬೇಕೆಂಬ ಕಟ್ಟುಪಾಡಿನ ಹಿಂದೆ ನಮ್ಮ ಪುರುಷ ನಿರ್ಮಿತ ಸಮಾಜ ಹಾಗೂ ಸಂಸ್ಕೃತಿಯ ಏಕಪಕ್ಷೀಯ ಸ್ವಾರ್ಥವಿದೆ. ನಮ್ಮ ಸಂಸ್ಕೃತಿಯೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು ಕೊಂಚ ಯೋಚಿಸಿದರೆ ತಿಳಿಯುತ್ತದೆ ಈ ಸಮಜ ಮತ್ತು ಸಂಸ್ಕೃತಿಯನ್ನು ತನಗೆ ಬೇಕೆಂದಂತೆ ಸೃಷ್ಟಿ ಮಾಡಿಕೊಂಡಿರುವವನು ಪುರುಷ ಎಂದು. ನಾವು ಹೆಣ್ಣನ್ನು ಸಂಸ್ಕೃತಿ ರಕ್ಷಕಳು ಎನ್ನುತ್ತೇವೆ ಆದರೆ ಸಂಸ್ಕೃತಿ ನಿರ್ಮಾಪಕಳು ಎನ್ನುವುದಿಲ್ಲ. ಪುರುಷ ನಿರ್ಮಿತ ಈ ಸಂಸ್ಕೃತಿಯನ್ನು ಹೆಣ್ಣು ಪಾಲಿಸಬೇಕು, ಸಂರಕ್ಷಿಸಬೇಕಷ್ಟೇ. ಆದರಲ್ಲಿ ಕೊಂಚ ಏರುಪೇರಾದರೂ ಅಲ್ಲೋಲಕಲ್ಲೋಲ. ಆದರೆ ಈ ಕುಟುಂಬ, ಸಮಾಜ, ನೈತಿಕತೆಯ ಚೌಕಟ್ಟುಗಳನ್ನು ಕಾಲದಿಂದ ಕಾಲಕ್ಕೆ ಪುರುಷ ತನಗೆ ಬೇಕೆಂದಂತೆ ಬದಲಾಯಿಸಿಕೊಳ್ಳುತ್ತಾ ಹೋಗಿರುವುದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.

ಹೆಣ್ಣಿಗೆ, ನೀನು ಹೀಗಿರಬೇಕು, ಹೀಗೆ ಮಾಡಬೇಕು, ಎಂದು ನಿರ್ದೇಶಿಸಿ ಅವಳನ್ನು ತನಗೆ ಬೇಕೆಂದಂತೆ ಒಂದು ಚೌಕಟ್ಟಿನಲ್ಲಿ ನಿಯಂತ್ರಿಸಿರುವುದು. ಸಂಸ್ಕೃತಿಯ ಸಂಕೋಲೆಯಲ್ಲಿ ಬಂಧಿಸಿರುವುದು, ಅಸಮಾನತೆಯ ನೆಲೆಯ ಬಲಿಷ್ಠ ಮತ್ತು ಅಸಹಾಯಕತೆಯ ನಡುವಿನ ಆಧಾರದಿಂದ ಸೃಷ್ಟಿಯಾದದ್ದು ನಮ್ಮ ಪುರುಷ ಕೇಂದ್ರಿತ ಸಮಾಜ. ಹೆಣ್ಣಿನ ನೈಜ ಆಲೋಚನೆ, ವಿವೇಕ, ಜ್ಞಾನ, ಆರ್ದ್ರತೆ, ಅಂತಃಕರಣ, ಪ್ರೀತಿ ಯಾವುದೂ ಈ ಸಂಸ್ಕೃತಿಯಲ್ಲಿ ಪೂರ್ಣಪ್ರಮಾಣದಲ್ಲಿ ಒಳಗೊಂಡಿಲ್ಲ. ಇವತ್ತು ನಮ್ಮ ಸುತ್ತ ಜಾತಿ – ಧರ್ಮ, ಕೋಮುವಾದ, ಭಯೋತ್ಪಾದನೆ ಹೆಸರಿನಲ್ಲಿ ಎಷ್ಟೊಂದು ಯುದ್ಧ, ಕೊಲೆ, ಹಿಂಸೆ, ಅನಾಚಾರಗಳು ನಡೆಯುತ್ತಿವೆ. ಇದೆಲ್ಲದರ ಸೃಷ್ಟಿಕರ್ತ ಪುರುಷನೇ. ಹೆಣ್ಣು ಸದಾ ಬಯಸುವುದು ಶಾಂತಿ, ನೆಮ್ಮದಿ, ಸಹನೆಯ ಜೀವನವನ್ನು ನಿಜಕ್ಕೂ ನಮ್ಮ ಸಮಾಜ ಹಾಗೂ ಸಂಸ್ಕೃತಿ ನಿರ್ಮಾಣದಲ್ಲಿ ಮಹಿಳೆಯ ಪಾತ್ರವಿದ್ದಿದ್ದರೆ, ಅವಳನ್ನು ಒಳಗೊಂಡಿದ್ದರೆ ನಮ್ಮ ಸಮಾಜ ಖಂಡಿತಾ ಇಷ್ಟು ಕ್ಷುದ್ರವಾಗಿ ಇರುತ್ತಿರಲಿಲ್ಲ. ಆಗ ಅದು ಹೆಚ್ಚು ಆಪ್ತವೂ, ಆರ್ದ್ರವೂ ಆಗಿರುತ್ತಿತ್ತು. ಖಂಡಿತಾ ಅವಳು ಜಾತಿ, ಮತ, ಧರ್ಮಗಳನ್ನು ಸೃಷ್ಟಿಸುತ್ತಿರಲಿಲ್ಲ. ಪ್ರೀತಿ ಮತ್ತು ಅಂತಃಕರಣ ಮೂಲವಾಗಿ ಉಳ್ಳ ಸಮಾನತೆಯ ಆಧಾರದ ಸಮಾಜವನ್ನು, ಸಂಸ್ಕೃತಿಯನ್ನು ಸೃಷ್ಟಿಸುತ್ತಿದ್ದಳು. ಇಂದಿನ ಆಧುನಿಕ ಮಹಿಳೆಯ ಮುಂದಿರುವ  ಬಹು ದೊಡ್ಡ ಸವಾಲು ಇದೇ ಆಗಿದೆ. ನಮ್ಮ ಸಂಸ್ಕೃತಿ, ಬೌದ್ಧಿಕತೆ, ಆಧುನಿಕತೆ, ಶಿಕ್ಷಣ, ಸಮಾಜ ಎಲ್ಲವನ್ನೂ ಈ ನೆಲೆಗಳಲ್ಲಿ ಪುನರ್ ರೂಪಿಸಬೇಕಿದೆ.

ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಸಬಲೀಕರಣದ ಮಾತು ಮತ್ತೆ ಮತ್ತೆ ಕೇಳಿಬರುತ್ತಿದೆ. ೭೦ರ ದಶಕದಲ್ಲಿ ಸ್ತ್ರೀವಾದದ ಅಲೆ ಬೀಸತೊಡಗಿದಾಗ ಆರ್ಥಿಕ ಸ್ವಾತಂತ್ರ್ಯವೇ ಮಹಿಳಾ ಸಮಾನತೆಯ, ಸಬಲೀಕರಣದ ಪ್ರಮುಖ ಅಸ್ತ್ರ ಎಂಬಂತೆ ಬಿಂಬಿತವಾಗಿತ್ತು. ಆ ಕಾಲಕ್ಕೆ ಅದು ಅವಶ್ಯಕವೂ ಆಗಿತ್ತು. ಆದರೆ ನಮ್ಮ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಯಾವಾಗಲೂ ನಿರುದ್ಯೋಗಿಗಳಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಅನಾದಿ ಕಾಲದಿಂದಲೇ ಹೆಣ್ಣು ಕೃಷಿ, ಹೈನುಗಾರಿಕೆ, ಗೃಹಕೃತ್ಯ, ಗುಡಿಕೈಗಾರಿಕೆಗಳಲ್ಲಿ ತೊಡಗಿಕೊಂಡು ಆರ್ಥಿಕ ಉತ್ಪಾದನೆಯಲ್ಲಿ ‘ಸಹಾಯಕಿ’ ಎನ್ನುವ ರೀತಿ ಪಾಲ್ಗೊಳ್ಳುತ್ತಲೇ ಬಂದಿದ್ದಾಳೆ. ಅವಳ ಕೆಲಸವನ್ನು, ಶ್ರಮವನ್ನು ‘ಸೇವೆ’ ಎಂಬ ಸೀಮಿತ ಚೌಕಟ್ಟಿಗೆ ಸಿಲುಕಿಸಿ ಅದನ್ನು ಆರ್ಥಿಕ ಮೌಲ್ಯದ ಲೆಕ್ಕಚಾರದಲ್ಲಿ ಪರಿಗಣಿಸದೇ ನಗಣ್ಯವೆಂದೆಣಿಸುತ್ತಾ ಬಂದ ನಮ್ಮ ಪುರುಷ ಪ್ರಧಾನ ‘ಮಹಿಳಾ ಮಾನದಂಡ’ ದ ಅನ್ಯಾಯ ಇವತ್ತಿಗೂ ನಡೆದೇ ಇದೆ. ಜಗತ್ತಿನ ಎಲ್ಲಾ ಕೆಲಸಗಳ ಶೇಕಡಾ ೬೦ ರಷ್ಟನ್ನು ಮಹಿಳೆಯರು ಮಾಡಿದರೂ ಅವರ ಜಾಗತಿಕ ವರಮಾನ ಶೇ. ೧೦ರಷ್ಟು ಮಾತ್ರ ಎಲ್ಲ ದೇಶಗಳಲ್ಲೂ ಪುರುಷರಿಗಿಂತ ಮಹಿಳೆಯರು ಸಮಾನ ಕೆಲಸಗಳಿಗಾಗಿ ೩೦-೪೦ ರಷ್ಟು ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆಂದು ಒಂದು ವರದಿ ತಿಳಿಸುತ್ತದೆ. ನಮ್ಮಲ್ಲಿ ಇಂದಿಗೂ ಶೇ.ಕಡಾ ೪೫ ರಷ್ಟು ಸ್ತ್ರೀ ಕೆಸಗಾರರು ಯಾವುದೇ ಸಂಬಳ ಪಡೆಯದೇ ಬೇಸಾಯದಲ್ಲಿ ಸಹಾಯಕರಾಗಿ ದುಡಿಯುತ್ತಿದ್ದಾರೆ. ಒಂದು ಅಧ್ಯಯನದ ಪ್ರಕಾರ ಹಳ್ಳಿಗಳ ಶ್ರಮಶಕ್ತಿಯ ಶೇ. ೬೫ಕ್ಕಿಂತ ಹೆಚ್ಚು ಭಾಗವನ್ನು ಮಹಿಳೆಯರೇ ಪೂರೈಸುತ್ತಿದ್ದಾರೆ. ಆದರೆ ಈ ದುಡಿಮೆಯ ಫಲವಾದ ಲಾಭಾಂಶವೆಲ್ಲ ಕುಟುಂಬದ ಪುರುಷರ ಕೈಗಳಲ್ಲಿರುವುದರಿಂದ ಮಹಿಳೆಯರಿಗೆ ಯವ ಸ್ವಂತ ಆದಾಯವೂ ಇರುವುದಿಲ್ಲ ಮತ್ತು ಬಹುಪಾಲು ಹೆಣ್ಣುಮಕ್ಕಳಿಗೆ ಜಮೀನಿನ ಮೇಲೆ ಯಾವ ಅಧಿಕಾರವೂ ಇರುವುದಿಲ್ಲ. ಕಾನೂನಿನ ಪ್ರಕಾರ ಗಂಡನ ಅಥವಾ ತವರು ಮನೆಯ ಆಸ್ತಿಯಲ್ಲಿ ಪಾಲು ಪಡೆಯುವ ಅಧಿಕಾರ ಇದ್ದಾಗಲೂ ಆ ಕುರಿತಾದ ಸರಿಯಾದ ಮಾಹಿತಿ ಹಾಗೂ ಬೆಂಬಲ  ಇಂದಿಗೂ ಶೇಕಡಾ ೮೦ರಷ್ಟು ಮಹಿಳೆಯರಿಗೆ ಇಲ್ಲದಿರುವುದರಿಂದ ಮಹಿಳೆಯರು ಆಸ್ತಿಯ ಹಕ್ಕಿನಿಂದಲೂ ವಂಚಿತರಾಗುತ್ತಿದ್ದಾರೆ. ಸಮಾನ ಆಸ್ತಿ ಹಕ್ಕಿನ ಕುರಿತು ತಿಳುವಳಿಕೆ ಇದ್ದಾಗಲೂ ಹೆಣ್ಣಮಕ್ಕಳ ಭಾವುಕತೆಯನ್ನು ನೆಪವಾಗಿರಿಸಿ ಭಾರತದ ಸಂದರ್ಭದಲ್ಲಿ ಅವರನ್ನು ಅದರಿಂದ ವಂಚಿತರಾಗಿಸುವುದೇ ಹೆಚ್ಚು. ಅನೇಕ ಮಹಿಳಾ ಪರ ಕಾನೂನುಗಳ ಕಥೆ ಇದೇ ಆಗಿದೆ.

ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಆರ್ಥಿಕ ಚಟುವಟಿಕೆಗಳನ್ನು ಅಳೆಯುವುದು ಮತ್ತು ಅದನ್ನು ವಿವಿಧ ರೀತಿಯಲ್ಲಿ ವರ್ಗೀಕರಿಸುವುದು ಕಷ್ಟದ ಕೆಲಸ. ಅದರಲ್ಲೂ ಅವರ ಕೆಲಸಗಳು ವೈವಿಧ್ಯಮಯವಾಗಿರುವುದರಿಂದ ಅದು ಇನ್ನೂ ಕ್ಲಿಷ್ಟ. ಅವರ ಕೆಲಸ ಪದೇ ಪದೇ ಬದಲಗುತ್ತಿರುತ್ತದೆ. ಅವರು ಉತ್ಪಾದಿಸಿದ ವಸ್ತುಗಳು ಮಾರುಕಟ್ಟೆಯನ್ನು ಪ್ರವೇಶಿಸುವುದೇ ಇಲ್ಲ. ಅಥವಾ ಕೆಲವು ಪ್ರಮಾಣದಲ್ಲಿ ಮಾತರ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ. ಜೊತೆಗೆ ಅವರ ಉತ್ಪಾದನೆ ಕೆಲವು ಪ್ರಮುಖ ಉತ್ಪಾದನೆಗೆ ಪೂರಕವಾಗಿ ಮಾತ್ರ ಇರಬಹುದು. ಹೀಗಾಗಿ ಮಹಿಳೆಯರ ಶ್ರಮಕ್ಕೆ ಇಲ್ಲೆಲ್ಲಾ ಸ್ವತಂತ್ರವಾಗಿ ಬೆಲೆ ಕಟ್ಟಲಾಗುತ್ತಿಲ್ಲ. ಆರ್ಥಿಕ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದರೂ ಅವರ ಶ್ರಮವನ್ನು ಪರಿಗಣಿಸಲಾಗದೇ ಇರುವುದು ಒಂದು ದುರಂತ. ಇದಕ್ಕೆ ಮುಖ್ಯ ಕಾರಣ ಮಹಿಳೆಯರ ಆರ್ಥಿಕ ಚಟುವಟಿಕೆಯ ಪ್ರಾರಂಭ ಮತ್ತು ಗೃಹ ಕೆಲಸದ ಅಂತ್ಯ ಎಲ್ಲಿಂದ ಎಂದು ವಿಂಗಡಿಸುವುದೇ ಸಾಧ್ಯ ಆಗದೇ ಇರುವುದು. ಅವರ ನಿರುದ್ಯೋಗದ ಪ್ರಮಾಣ, ಅವರ ಆದಾಯ, ಅವರ ಆರ್ಥಿಕ ಕೊಡುಗೆಗಳ ನಿರ್ದಿಷ್ಟ ಅರಿವು ಇಂದಿಗೂ ಸಾಧ್ಯವಾಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಮಹಿಳೆಯರ ಆರ್ಥಿಕ ಪಾತ್ರವನ್ನು ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಿರ್ಧರಿಸಲು ಈಗಿರುವಂತಹ ವ್ಯಾಖ್ಯೆ ಮತ್ತು ಮಾಹಿತಿ ಅಸಮರ್ಪಕವಾಗಿದೆ. ಇದು ಮಹಿಳಾ ಮುನ್ನಡೆಗೆ ಒಂದು ಸವಾಲು.

ಜೊತೆಗೆ ಮಹಿಳೆ ಮಾಡುವಂತಹ ಮನೆಗೆಲಸ, ಮಕ್ಕಳ – ವೃದ್ಧರ ಲಾಲನೆ ಪಾಲನೆ, ಕುಟುಂಬ ನಿರ್ವಹಣೆ, ಗೃಹಕೃತ್ಯ ಇತ್ಯಾದಿಗಳಿಗೆ ತಗುಲುವ ಶ್ರಮ ಮತ್ತು ಸಮಯ ಎಲ್ಲಿಯೂ ದಾಖಲಾಗುವುದೇ ಇಲ್ಲ. ಇದಕ್ಕೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಸ್ಥಳವೇ ಇಲ್ಲ. ಇವುಗಳ ಮೌಲ್ಯ ಸುಮಾರು ೧೧ ಟ್ರೆಲಿಯ ಯು. ಎಸ್. ಡಾಲರ್ ಗಳೆಂದು ಅಂದಾಜಿಸಲಾಗಿದೆ. ಸ್ತ್ರೀಯರ ಮತ್ತು ಪುರುಷರ ಕೆಲಸಗಳು ಭಿನ್ನವಾಗಿರುವುದರಿಂದ ಸ್ತ್ರೀಯರ ಕೆಲಸ ಎಷ್ಟೇ ಕಠಿಣತಮವಾಗಿದ್ದಾಗಲೂ ಅದು ಪುರುಷರ ಶ್ರಮಕ್ಕಿಂತ ಕಡಿಮೆಯೆಂದು, ಕೆಲವೊಮ್ಮೆ ಪರಿಗಣನೆಗೇ ಬಾರದೆ ಹೋಗುತ್ತದೆ. ಅವಳ ಶ್ರಮಕ್ಕೆ ಆರ್ಥಿಕ ಮೌಲ್ಯ, ಉತ್ಪಾದನಾ ಸಾಮರ್ಥ್ಯ ಇಲ್ಲದಿರುವುದೇ ಮುಖ್ಯ ಕಾರಣ . ಎಲ್ಲ ದೇಶಗಳಲ್ಲಿ ಮಹಿಳೆಯರು ಮನೆ ಹಾಗೂ ಮಾರುಕಟ್ಟೆಯ ಕೆಲಸಗಳಿಗಾಗಿ ಪುರುಷರಿಗಿಂತ ಶೇ.೧೨ ರಷ್ಟು ಜಾಸ್ತಿ ದುಡಿಯುತ್ತಾರೆ. ಜೊತೆಗೆ ನಮ್ಮ ಪುರುಷ ಪ್ರಧಾನ ವ್ಯವಸ್ಥೆ ತನಗೆ ಬೇಕೆಂದಂತೆ ಸಮಾಜವನ್ನು ರೂಪಿಸಿಕೊಂಡಿರುವುದರಿಂದ ತಾನು ಆಳುವವನು, ಹೆಣ್ಣು ಅಧೀನಳು ಎಂಬ ಭಾವನೆಯೂ ಈ ಅಸಮತೋಲನಕ್ಕೆ ಕಾರಣವಾಗಿದೆ. ಈ ಎಲ್ಲ ಕಾರಣದಿಂದಾಗಿಯೇ ಹಲವು ಬಾರಿ ಇಂತಹ ಮಹಿಳೆಯರ ಬಹಳಷ್ಟು ಸಾಮರ್ಥ್ಯಗಳೂ ಪರಿಗಣನೆಗೆ ಬಾರದೇ ಹೋಗುತ್ತದೆ. ಹಾಗೇ ನಗರದ ಸುಶಿಕ್ಷಿತ ಮಹಿಳೆಯರು ಕಚೇರಿಯಲ್ಲಿ ದುಡಿಯುವುದಕ್ಕಿಂತ ಹೆಚ್ಚು ಸಮಯ ಮತ್ತು ಶ್ರಮ ಗ್ರಾಮೀಣ ಮಹಿಳೆ ಮತ್ತು ಗೃಹಿಣಿಯರಿಗೆ ತಗುಲಿದರೂ ಅವರಿಗೆ ದೊರಕುವ ಆರ್ಥಿಕ ಸೌಲಭ್ಯಗಳು ಹಾಗೂ ಸಾಮಾಜಿಕ ಸ್ಥಾನಮಾನ ಇವರಿಗೆ ದೊರೆಯುವುದಿಲ್ಲ.

ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುತ್ತಿರುವ ಶಿಕ್ಷಿತ ಹೆಣ್ಣುಮಕ್ಕಳು ಆಯ್ದು ಕೊಳ್ಳುತ್ತಿರುವ ಉದ್ಯೋಗ ಎಂಥದೆಂದು ಗಮನಿಸಿದರೆ ಹೆಚ್ಚಿನವರು ಶಿಕ್ಷಕಿಯರಾಗಿ, ನರ್ಸ್‌ಗಳಾಗಿ, ಸ್ವಾಹತಕಾರಿಣಿಯರು, ಗುಮಾಸ್ತೆಯರೂ ಆಗಿ ಇರುವುದನ್ನು ಬಯಸುತ್ತಾರೆ ಎಂಬುದು ಗಮನಾರ್ಹವಾದ ಅಂಶ. ಇದಕ್ಕೆ ಹೆಣ್ಣುಮಕ್ಕಳನ್ನು ಎರಡನೆಯ ದರ್ಜೆಯ ಪ್ರಜೆಯಾಗಿ ರೂಪಿಸಿರುವ ನಮ್ಮ ಸಾಮಾಜಿಕ ವ್ಯವಸ್ಥೆಯೇ ಕಾರಣ. ಉನ್ನತವಾದ ಹುದ್ದೆಗೆ ಹೋದಷ್ಟೂ ಕುಟುಂಬದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆಗ ಘರ್ಷಣೆಗಳು ಪ್ರಾರಂಭವಾಗುತ್ತದೆ. ಕುಟುಂಬವೋ – ಉದ್ಯೋಗವೋ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಹೀಗಾಗಿ ಕಡಿಮೆ ಜವಾಬ್ದಾರಿ ಇರುವ, ಹೆಚ್ಚು ಶ್ರಮ ಹಾಗೂ ಸಮಯವನ್ನು ಬೇಡದ ‘ಈಜಿಗೋಯಿಂಗ್’ ಇರುವಂತಾ ಕೆಲಸಗಳನ್ನೇ ಹೆಚ್ಚಿನವರು ಇಷ್ಟಪಡುತ್ತಾರೆ. ಹೀಗಾಗೇ ಅವರಿಗೆ ಸಾಮರ್ಥ್ಯ ಇದ್ದರೂ ಕೌಟುಂಬಿಕ ಜವಾಬ್ದಾರಿಗಳಿಂದಾಗಿ, ಬಸಿರು, ಬಾಣಂತನ, ಋತುಸ್ರಾವ ಮುಂತಾದ ಜೈವಿಕ ಕಾರಣಗಳಿಂದಾಗಿ ಉನ್ನತ  ಹುದ್ದೆ, ಉನ್ನತ ಸಾಧನೆಯನ್ನು ಅನೇಕರು ತ್ಯಾಗ ಮಾಡುತ್ತಾರೆ. ಹಾಗೆ ಇತ್ತೀಚೆಗಿನ ಒಂದು ಅಧ್ಯಯನದ ಪ್ರಕಾರ ಒಂಟಿ ಮಹಿಳೆಯರೇ ಹೆಚ್ಚಾಗಿ ಔದ್ಯೋಗಿಕ ಕ್ಷೇತ್ರಗಳಲ್ಲಿ ಉನ್ನತವಾದುದನ್ನು ಸಾಧಿಸುತ್ತಿರುವುದು ದಾಖಲಾಗಿದೆ.

ಸಬಲೀಕರಣವನ್ನು ಹೆಚ್ಚಿನ ಬಾರಿ ನಾವು ನಗರ ಕೇಂದ್ರಿತವಾಗಿ ಮಾತ್ರ ಚರ್ಚಿಸುತ್ತಿರತ್ತೇವೆ. ವಿದ್ಯೆ ಕಲಿತ, ಬಿಳಿ ಕಾಲರಿನ ಕೆಲಸದಲ್ಲಿ ತೊಡಗಿಕೊಂಡಿರುವ, ನಯಗಾರಿಕೆಯ ತಿಳುವಳಿಕೆ ಇರುವ ಮಹಿಳೆಯರು ಮಾತ್ರ ಸಬಲೆಯರು, ಮನೆವಾರ್ತೆ ನೋಡಿಕೊಳ್ಳುವ ಗೃಹಿಣಿಯರು, ಗ್ರಾಮೀಣ, ಕೃಷಿ ಹಾಗೂ ಅದನ್ನಾಧಾರಿತ ಕೆಲಸಗಳಲ್ಲಿತೊಡಗಿಕೊಂಡಿರುವ ಕಚ್ಚಾ ತಿಳುವಳಿಕೆಯನ್ನು ಹೊಂದಿರುವ ಅಸಂಘಟಿತ ವಲಯದ ಮಹಿಳೆಯರು ಸಬಲೆಯರಲ್ಲ ಎನ್ನುವ ಒಂದು ತಪ್ಪು ತಿಳುವಳಿಕೆ ನಮ್ಮನ್ನಾವರಿಸಿರುತ್ತದೆ. ಆದರೆ ಎಷ್ಟೋ ಬಾರಿ ವಿದ್ಯೆ ಕಲಿತು, ಉದ್ಯೋಗಸ್ಥೆಯರಾಗಿದ್ದರೂ ಸಮಯಾಭಾವದಿಂದ, ಕುಟುಂಬದ ಹೆಚ್ಚಿನ ಜವಾಬ್ದಾರಿಯಿಂದ ತಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವಿರದ ವಿದ್ಯಾವಂತ ಹೆಣ್ಣು ಮಕ್ಕಳೂ ನಮ್ಮ ಮಧ್ಯೆ ಇದ್ದಾರೆ. ಅವರು ಒಳ ಹೊರಗಿನ ಕೆಲಸದ ಒತ್ತಡದಿಂದಾಗಿ ಮಾನಸಿಕವಾಗಿ – ದೈಹಿಕವಾಗಿ ಜರ್ಜರಿತರಾಗುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಮಹಿಳೆಯರು ಹೊರಗೆ ದುಡಿಯ ಬಾರದು ಎಂದಲ್ಲ. ತನ್ನ ಕೆಲಸದ ಹೊರೆಯನ್ನು ಕುಟುಂಬದ ಇತರ ಸದಸ್ಯರೊಂದಿಗೆ ಹಂಚಿಕೊಂಡು ಮಾಡುವ ಜಾಣ್ಮೆ ಇದ್ದಾಗ ಆರ್ಥಿಕ ಸ್ವಾವಲಂಬನೆ, ನೆಮ್ಮದಿಯನ್ನೂ ತಂದು ಕೊಡುತ್ತದೆ. ಮಹಿಳೆಗೆ ಸಮಾಜದಲ್ಲಿ ಗೌರವ, ಸಮಾನ ಸ್ಥಾನ – ಮಾನ ಕೂಡ ಸಿಕ್ಕುತ್ತದೆ. ಎರಡೂ ದೋಣಿಯ ಮೇಲೆ ಕಾಲಿಟ್ಟು ಅದನ್ನು ಹೇಗೆ ಯಶಸ್ವಿಯಾಗಿ ನಿಭಾಯಿಸುವುದು, ಮತ್ತು ಸಮಾಜಕ್ಕೆ ಲಿಂಗ ಸೂಕ್ಷ್ಮತೆಯ ಅರಿವು ಮೂಡಿಸುವುದು ಹೇಗೆ? ಎನ್ನುವುದು ಕೂಡು ಇಂದಿನ ಆಧುನಿಕ ಮಹಿಳೆಯ ಮುಂದಿರುವ ಬಹು ದೊಡ್ಡ ಸವಾಲು.

ಮಹಿಳಾ ಸಿಬ್ಬಂದಿಯೊಂದಿಗೆ ಮೇಲಿನ ಅಧಿಕಾರಿಗಳೂ – ಸಹೋದ್ಯೋಗಿಗಳು ನಡೆದುಕೊಳ್ಳುವ ರೀತಿ ಕೂಡ ಕೆಲವು ಬಾರಿ ಕ್ರೂರವಾಗಿರುತ್ತದೆ. ಅದನ್ನು ಆಡಲೂ ಆಗದ ಅನುಭವಿಸಲೂ ಆಗದ ಸ್ಥಿತಿಯಲ್ಲಿ ನಮ್ಮ ಮಹಿಳೆಯರು ಇರುತ್ತಾರೆ. ಹೀಗೆಂದೇ ಇವತ್ತು ಶೋಷಣೆಗಳು ನಿಂತಿಲ್ಲ, ಶೋಷಣೆಯ ಮುಖಗಳು ಬದಲಾಗಿವೆ ಎಂದಷ್ಟೇ ಸಮಸ್ಯೆಯನ್ನು ನಾವು ವಿಶ್ಲೇಷಿಸಬೇಕಾಗುತ್ತದೆ. ಬಹಳಷ್ಟು ಬಾರಿ ಹೆಣ್ಣಿನ ಹೆಣ್ತನ, ಶೀಲದ ಸುತ್ತಲೇ ಅವಳ ಸಮಸ್ಯೆಗಳು ಸುತ್ತುವರಿದಿರುತ್ತವೆ. ಇದು ಅವಳಿಗೆ ಮಾನಸಿಕ ಹಿಂಸೆಯನ್ನು ನೀಡಿ ದೈಹಿಕ ಸಮಸ್ಯೆಗೂ ಕಾರಣವಾಗುತ್ತದೆ. ಮೇಲಿನ ಅಧಿಕಾರಿ ಮಹಿಳೆಯಾಗಿದ್ದಾಗ ಅವಳ ಕೈಕೆಳಗೆ ಕೆಲಸ ಮಾಡುವ ಪುರುಷರ ಮನಸ್ಥಿತಿಯೂ ಮುಕ್ತವಾಗಿರಬೇಕಾಗುತ್ತದೆ. ಹಾಗಿಲ್ಲದಾಗ ‘ಹೆಣ್ಣಲ್ಲವೇ? ಅವಳಿಗೇನು ತಿಳಿಯುತ್ತದೆ ಮಹಾ.’ ಎಂಬ ಧೋರಣೆಯಿಂದ, ಕೀಳರಿಮೆಯಿಂದ ಕಂಡಾಗಲೂ ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತದೆ.

ಕುಟುಂಬದ ಹೆಚ್ಚಿನ ಜವಾಬ್ದಾರಿ, ಸೇವಾ ಕೈಂಕರ್ಯ ಮಹಿಳೆಯ ಮೇಲೇ ಇರುವುದರಿಂದ ನಮ್ಮ ದೇಶದ ಅನೇಕ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಕೇವಲ ನೀರು ಮತ್ತು ಉರುವಲಿಗಾಗಿ ಮೈಲಿಗಟ್ಟಲೆ ನಡೆದು ಅದನ್ನು ಸಂಪಾದಿಸ ಬೆಕಾದ ಅನಿವಾರ್ಯತೆ ಇಂದಿಗೂ ಇದೆ. ಅಭಿವೃದ್ಧಶೀಲ ದೇಶಗಳ ಗ್ರಾಮೀಣ ಪ್ರದೇಶಗಳಲ್ಲಿ ನೀರು ಮತ್ತು ಉರುವಲಿಗಾಗಿ ಮಹಿಳೆಯರು ಪುರುಷರಿಗಿಂತ ೧೦ ಪಟ್ಟು ಹೆಚು ಸಮಯ ವಿನಿಯೋಗಿಸುತ್ತಾರೆ. [ಮಹಿಳೆಯರು ೯.೭ ಗಂಟೆ, ಪುರುಷರು ೦.೯ ಗಂಟೆ]ಅದಕ್ಕಾಗಿ ಅವರು ವ್ಯಯಿಸುವ ಗಂಟೆಗಟ್ಟಲೆ ಸಮಯ ಹಾಗೂ ಅವರ ಶ್ರಮವನ್ನು ಎಲ್ಲಿ? ಹೇಗೆ ದಾಖಲಿಸುವುದು? ಈ ನೆವದಲ್ಲಿ ವ್ಯರ್ಥವಾದ ಅವರ ಪ್ರತಿಭೆ – ಸಾಮರ್ಥ್ಯ – ಕೌಶಲ್ಯಗಳನ್ನು ಎಲ್ಲಿ ಲೆಕ್ಕಕ್ಕಿಡುವುದು? ಮನೆಗಳಲ್ಲಿ ಶೌಚಾಲಯಗಳಿಲ್ಲದೇ ಬಯಲಿಗಿಳಿಯಬೇಕಾದಾಗ ಅವರು ಪಡುವ ಮುಜುಗರ, ಮಾನಸಿಕ ಹಿಂಸೆಗಳು ಎಲ್ಲಿಯೂ ದಾಖಲಾಗದಂತಹವು. ಇಂತಹ ಮೂಲಭೂತ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾಗಿ ಇಂದಿಗೂ ನೀಡದಿರುವ ನಮ್ಮ ಸರ್ಕಾರಗಳ ವೈಫಲ್ಯ ಮಹಿಳೆ ಮುಖ್ಯವಾಹಿನಿಗೆ ಬರಲು ಪ್ರಮುಖ ತೊಡಕಾಗಿದೆ. ಪುರುಷನಿಗೆ ಸಮಾನ ಬೇಡ ನಗರ ಪ್ರದೇಶದ ಬಿಳಿ ಕಾಲರಿನ ಕೆಲಸದಲ್ಲಿ ತೊಡಗಿಕೊಂಡ ಮಹಿಳೆಗೆ ಸಿದ್ದುವ ಅರ್ಧದಷ್ಟೂ ಹಣ, ಗೌರವ, ಅನುಕೂಲತೆಗಳು ದೊರೆಯದ ಗ್ರಾಮೀಣ ಮಹಿಳೆ ತನ್ನ ಅಸ್ತಿತ್ವ ಮತ್ತು ವ್ಯಕ್ತಿತ್ವ ಕಂಡುಕೊಳ್ಳುವುದೆಲ್ಲಿ? ಮತ್ತು ಹೇಗೆ? ಇವು ನಮ್ಮ ಮುಂದಿರುವ ಪ್ರಮುಖ ಸವಾಲುಗಳು.

ಈ ಕಾರಣಗಳಿಂದಾಗಿ ಸಬಲೀಕರಣದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಬೇಕಾದ ಅವಶ್ಯಕತೆಯಿದೆ. ಮತ್ತು ಸಬಲೀಕರಣದ ಭಾಗವಾಗಿ ೨೦ನೇ ಶತಮಾನದಲ್ಲಿ ಅಧಿಕಾರವನ್ನೂ ಸೇರಿಸುತ್ತಾ ಬಂದಿದ್ದೇವೆ. ಅಂದರೆ ಆರ್ಥಿಕತೆ ಹಾಗೂ ಆಧಿಕಾರವನ್ನು ಸ್ವಾಧೀನಪಡಿಸಿಕೊಳ್ಳುವುದೇ ಮಹಿಳಾ ಸಬಲೀಕರಣದ ಗುರಿ ಎನ್ನುವ ತತ್ವವನ್ನೇ ಎತ್ತಿಹಿಡಿಯಲಾಗುತ್ತಿದೆ. ಬಡ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಬದಲಾವಣೆಗೆ ಸೂಕ್ತ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ರಾಜ್ಯ ಸರಕಾರ ೨೦೦೦ ನೇ ಇಸವಿಯಲ್ಲಿ ಸ್ತ್ರೀ ಶಕ್ತಿ ಯೋಜನೆ ರೂಪಿಸಿದೆ. ರಾಜ್ಯಾದ್ಯಂತ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಇದುವರೆಗೂ ೧.೩೦ ಲಕ್ಷ ಸ್ತ್ರೀ ಶಕ್ತಿ ಗುಂಪುಗಳು ರಚನೆಯಾಗಿವೆ. ೨೦.೮೦ ಲಕ್ಷ ಮಹಿಳೆಯರು ಸದಸ್ಯರಾಗಿದ್ದಾರೆ. ಇದುವರೆಗೆ ೫೨೭ ಕೋಟಿ ರೂಪಾಯಿಗಳ ಉಳಿತಾಯ ಮಾಡಲಾಗಿದೆ. ಸಾಲ ಮರು ಪಾವತಿಯಲ್ಲಿ ೧೦೦% ಗುರಿ ಸಾಧಿಸಲಾಗಿದೆ. ಇದು ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಮೂಡಿಸಿ ಸಂಪನ್ಮೂಲ ಬಳಕೆಗೆ ದಾರಿ ಮಾಡಿಕೊಟ್ಟಿದೆ. ಇದರಿಂದ ಇನ್ನೂ ಹೆಚ್ಚು ಸಶಕ್ತವಾಗಿ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಜವಾಬ್ದಾರಿಯನ್ನು ಮಹಿಳೆಯರು ಹೊತ್ತಿದ್ದಾರೆ. ಬಹಳಷ್ಟು ಜನರು ಸ್ವಯಂ ಉದ್ಯೋಗ ಕೈಗೊಂಡಿದ್ದಾರೆ, ಸಂಘಟಿತರಾಗಿದ್ದಾರೆ, ತನ್ಮೂಲಕ ಗ್ರಾಮದ ಅಭ್ಯದಯ, ಸ್ವಚ್ಛತೆ, ಸಾಮಾಜಿಕ ಕಳಕಳಿ ಮೂಡಿದೆ. ಕೆಲವೆಡೆ ಬಡತನ ನಿರ್ಮೂಲನೆ, ಸಮುದಾಯ ಅಭಿವೃದ್ಧಿಗೆ ಇದು ನೆರವಾಗಿರುವುದೂ ಅಷ್ಟೇ ಸತ್ಯ.

ಆದರೆ ಹಣ ಹಾಗೂ ಅಧಿಕಾರವನ್ನು ಹೇಗಾದರೂ ಸರಿ ಸ್ವಾಧೀನಪಡಿಸಿಕೊಳ್ಳುವುದೇ ಮುಖ್ಯ ಎಂದಾದಾಗ ಅದರ ಮಾರ್ಗಗಳ ಕಡೆ ಹೆಚ್ಚಿನ ಗಮನ ಕೊಡದೇ, ಅದನ್ನು ಪಡೆದ ನಂತರ ಉಪಯೋಗಿಸುವ ವಿಧಾನ, ಕ್ರಮಗಳ ಅರಿವಿಲ್ಲದಾಗ ಬೇರೆಯವರು ಇಂತಹ ಹೆಣ್ಣುಮಕ್ಕಳ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದಕ್ಕೆ ನಮ್ಮ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಲ್ಲಿನ ನಾಯಕಿಯರು. ಗ್ರಾಮಪಂಚಾಯಿತಿ, ಜಿಲ್ಲಾಪಂಚಾಯಿತಿಯ ಮಹಿಳಾ ಮೀಸಲು ಸ್ಥಾನಗಳಲ್ಲಿನ  ಹಲವು ಮಹಿಳೆಯರ ಉದಾಹರಣೆಗಳಿವೆ. ಚುನಾವಣೆಯ ಸಂದರ್ಭದಲ್ಲಿ ಇವರು ತೆಗೆದುಕೊಳ್ಳುವ ಒಂದು ತಪ್ಪು ನಿರ್ಧಾರ ಇಡೀ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡಬಹುದು. ಅಧಿಕಾರ ಸ್ಥಾನದಲ್ಲಿರುವ ಇವರ ಕೈಯಲ್ಲಿ ಇತ್ತೀಚೆಗೆ ಒಂದಿಷ್ಟು ಹಣ ಓಡಾಡುತ್ತಿರುವುದು ನಿಜ. ಹಾಗೆಂದ ಮಾತ್ರಕ್ಕೆ ಆರ್ಥಿಕ ಸ್ವಾವಲಂಬನೆಯೊಂದೇ ಮಹಿಳಾ ಪ್ರಗತಿ ಎಂದುಕೊಳ್ಳಲು ಸಾಧ್ಯವೇ? ಹಾಗೇ ಮತ್ತೆ ಅಧಿಕಾರದ ಕೇಂದ್ರೀಕರಣವಾಗಿ ಬೆರಳೆಣಿಕೆಯ ಕೆಲವು ಮಹಿಳೆಯರು ಮಾತ್ರ ನಾಯಕಿಯರಾಗುವುದಕ್ಕಿಂತ ಸಾಮುದಾಯಿಕ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಪ್ರತಿಯೊಬ್ಬ ಮಹಿಳೆಯೂ ಜನನಾಯಕಿಯಾಗಬೇಕಾದ ಸವಾಲು ಅವರ ಮುಂದಿದೆ. ಸಧ್ಯ ಹೊರಳು ಹಾದಿಯಲ್ಲಿರುವ ಸ್ತ್ರೀಶಕ್ತಿ ಸಂಘಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದಾಗಿದೆ.

ಸಬಲೀಕರಣವೆನ್ನುವುದು ಹೊರಗಿನ ಐಹಿಕ ವಸ್ತುಗಳ ಸ್ವಾಧೀನ ಪಡಿಸಿಕೊಳ್ಳುವಿಕೆ ಮಾತ್ರವಾಗಿರದೇ ಮುಖ್ಯವಾಗಿ ಮಾನಸಿಕ, ಬೌದ್ಧಿಕ ಹಾಗೂ ಬೌತಿಕ ಗಟ್ಟಿತನದ ಸಂಕೇತವಾಗಿ ಮೂಡಿಬರಬೇಕು. ಮಹಿಳೆ ತಾನು ಒಳಗಾಗಬಹುದಾದ ಎಲ್ಲ ರೀತಿಯ ಶೋಷಣೆಗಳಿಂದ ಮುಕ್ತಳಾಗುವುದು, ಸಂತೋಷದಿಂದ, ಸಮಾಧಾನದಿಂದ ತಾನೂ ಒಬ್ಬ ವ್ಯಕ್ತಿ ಅದಕ್ಕೆ ಗೌರವ ದೊರಕಬೇಕು ಎಂಬ ಅರಿವಿನಿಂದ ಬದುಕುವುದೇ ಅವಳು ಸ್ವತಂತ್ರಳಾಗುವ, ಪುರುಷನಿಗೆ ಸಮಾನಳಾಗುವ, ಒಳಮುಖಗಳಿಂದ ಸಬಲಳಾಗುವ ಸಂಕೇತ. ತನ್ನ ಬದುಕಿನ ಎಲ್ಲ ಘಟ್ಟಗಳನ್ನೂ ತನ್ನ ಆಯ್ಕೆಯ ಮುಖಾಂತರ ನಿರ್ಧರಿಸುವ ಆಯ್ಕೆಯ ಸ್ವಾತಂತ್ರ್ಯವನ್ನು ಹೊಂದುವಂತಾ ಜ್ಞಾನ ಮತ್ತು ತಿಳಿವು ಅವಳಿಗೆ ಬರಬೇಕು. ಇವುಗಳನ್ನು ಪಡೆಯಲು ತನ್ನ ಅರಿವಿನ ಪರಿಧಿಯನ್ನು ಹಿಗ್ಗಿಸಿಕೊಳ್ಳಬೇಕಿರುವುದು ತುಂಬಾ ಮುಖ್ಯ. ಈ ಅರಿವು ಬರುವುದು ಶಿಕ್ಷಣದಿಂದ.

ಶಿಕ್ಷಣವೆಂದರೆ ತರಗತಿಯ ಓದು – ಬರಹ ಮಾತ್ರ ಅಲ್ಲ. ಅದು ಹೊರೆಗಿನ ಪ್ರಪಂಚದಲ್ಲಿ ದಿನನಿತ್ಯದ ವ್ಯಾವಹಾರಿಕ ಆಗು ಹೋಗಿಗೆ ಸಂಬಂಧಿಸಿದಂತೆ ಮುಖ್ಯವಾಗಿ ಪ್ರತಿಯೊಬ್ಬ ನಾಗರಿಕನೂ ತಿಳಿದಿರಲೇಬೇಕಾದಂತ ಮೂಲಭೂತ ತಿಳುವಳಿಕೆ. ಈ ತಿಳುವಳಿಕೆ ಕಾನೂನಿಗೆ ಸಂಬಂಧಿಸಿದ್ದು, ಆರೋಗ್ಯಕ್ಕೆ ಸಂಬಂಧಿಸಿದ್ದು, ರಾಜಕೀಯದ ನಡೆಗಳು, ಕುಟುಂಬ ಯೋಜನೆಗೆ ಸಂಬಂಧಿಸಿದ್ದು, ಗ್ರಾಮ ಹಾಗೂ ವೈಯಕ್ತಿಕ ಸ್ವಚ್ಛತೆಯನ್ನು ಒಳಗೊಂಡಿರಬಹುದು, ಬ್ಯಾಂಕ್‌ ವ್ಯವಹಾರ, ಸಾಲ ಸೌಲಭ್ಯ, ಸಂಚಾರಿ ನಿಯಮ, ಸರ್ಕಾರಿ ಯೋಜನೆಗಳು, ಅದರಿಂದ ದೊರಕುವ ಸೌಲಭ್ಯ, ಅನುಕೂಲಗಳು ಹೀಗೆ…… ನಾಗರಿಕ ಬದುಕಿಗೆ ಸಂಬಂಧಿಸಿದಂಥ ಎಲ್ಲದರ ಬಗ್ಗೆ ಮಹಿಳೆಯರು ಅರಿವನ್ನು ಮೂಡಿಸಿಕೊಂಡಾಗ ಮಾತ್ರ ಸಬಲೀಕರಣಕ್ಕೆ ನಿಜವಾದ ಅರ್ಥ ಬರುತ್ತದೆ. ತನ್ನ ಸ್ವಂತ ಬದುಕಿನ ನಿರ್ಧಾರಗಳನ್ನು ಸ್ವತಃ ತಾನೇ ತೆಗೆದುಕೊಳ್ಳುವಷ್ಟು ವೈಚಾರಿಕ ಪ್ರಜ್ಞೆಯನ್ನು, ಎಲ್ಲ ರೀತಿಯ ಶೋಷಣೆಯ ವಿರುದ್ಧದ ಜಾಗೃತಿಯನ್ನು ಮಹಿಳೆ ಪಡೆಯದಿದ್ದರೆ ಮತ್ತೊಂದು ಘೋರ ದುರಂತದ ಹಾದಿಯನ್ನು ಅವಳು ತುಳಿಯಬೇಕಾಗುತ್ತದೆ. ಇದೇ ಇಂದು ನಮ್ಮನ್ನು ಕಾಡುತ್ತಿರುವ ಮುಖ್ಯ ಸವಾಲುಗಳಲ್ಲಿ ಒಂದು.

ಇಂದಿಗೂ ಬಹಳಷ್ಟು ಬಾರಿ ನಮ್ಮ ಸಮಾಜದಲ್ಲಿ ವಿವಾಹ ಹೆಣ್ಣುಮಕ್ಕಳ ಬದುಕಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಉನ್ನತ ವ್ಯಾಸಂಘ ಮಾಡಿದ ಹೆಣ್ಣು ಮಕ್ಕಳೂ ಮದುವೆಯನ್ನು ಆಧರಿಸಿ ತಮ್ಮ ಔದ್ಯೋಗಿಕ ಗುರಿಯನ್ನು ನಿರ್ದರಿಸಿಕೊಳ್ಳಬೇಕಾದ ಪರಿಸ್ಥಿತಿ ಇಂದಿಗೂ ಇದೆ. ಬಹಳಷ್ಟು ಹೆಣ್ಣುಮಕ್ಕಳು ಮದುವೆಯ ನಂತರ ತಮ್ಮ ಆದರ್ಶ, ಪ್ರತಿಭೆ, ವ್ಯಕ್ತಿತ್ವ, ಕೆಲಸ ಮಾಡುವ, ತನ್ಮೂಲಕ ಉನ್ನತವಾದುದನ್ನು ಸಾಧಿಸುವ ಬಯಕೆಯನ್ನು ಬಲಿಕೊಟ್ಟು ಪರಿಸ್ಥಿತಿಯ ಜೊತೆಗೆ ಹೊಂದಿಕೊಂಡು ಹೋಗುತ್ತಾರೆ. ಬೌದ್ಧಿಕ ಸಾಧನೆ ಹೆಣ್ಣಿನ ಕೌಟುಂಬಿಕ ಜೀವನಕ್ಕೆ ಧಕ್ಕೆ ತರುವಂತದ್ದು ಎಂಬ ನಂಬಿಕೆ ಈಗಲೂ ಸಮಾಜದಲ್ಲಿದೆ.

ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ನಮ್ಮ ಬಹಳಷ್ಟು ಹೆಣ್ಣುಮಕ್ಕಳನ್ನು ನಲುಗಿಸುತ್ತಿದೆ. ವರದಕ್ಷಿಣೆಗಾಗಿ ಹೆಣ್ಣನ್ನು ದೈಹಿಕವಾಗಿ, ಮಾನಸಿಕವಾಗಿ ಹಿಂಸಿಸುವ, ಸುಡುವ, ಕೊಲ್ಲುವ ಘಟನೆಗಳು ನಿತ್ಯ ನಡೆಯುತ್ತಿವೆ. ಪ್ರತಿ ೩೫ ನಿಮಿಷಕ್ಕೊಂದು ವರದಕ್ಷಿಣೆ ಸಾವು ಸಂಭವಿಸುತ್ತಿದೆ ಎಂಬ ಮಹಿಳಾ ಅಧ್ಯಯನದ ವರದಿ ಗಾಬರಿಯುಂಟು ಮಾಡುತ್ತದೆ. ೧೯೨೧ರಲ್ಲೇ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದಿದ್ದರೂ ಅದು ಇಂದಿಗೂ ಅನುಷ್ಟಾನಕ್ಕೆ ಬಂದಿಲ್ಲ. ಈ ಪಿಡುಗಿಗೆ ಮೂಲ ಕಾರಣ ಹೆಣ್ಣನ್ನು ಒಂದು ಆಸ್ತಿಯನ್ನು ಮಾಡಿಕೊಳ್ಳುವ ವಸ್ತುವಿನಂತೆ ಪರಿಗಣಿಸಿರುವುದು. ತಾನೊಂದು ವಸ್ತುವಲ್ಲ, ವ್ಯಕ್ತಿ ಎಂಬ ಅರಿವು ಎಲ್ಲಿಯವರೆಗೆ ಹೆಣ್ಣಿಗೆ ಬರುವುದಿಲ್ಲವೋ ಅಲ್ಲಿಯವರೆಗೂ ಈ ಪಿಡುಗು ಜೀವಂತವಾಗಿರುತ್ತದೆ.

ಜೊತೆಗೆ ಶಾಸನದಲ್ಲಿ ಸಮಾನ ಶಿಕ್ಷಣ – ಉದ್ಯೋಗದ ಹಕ್ಕುಗಳು ಗಂಡು – ಹೆಣ್ಣುಗಳಿಬ್ಬರಿಗೂ ಇದ್ದಾಗಲೂ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂಸತ್ತು, ಸರ್ಕಾರ, ಖಾಸಗಿ ವಲಯಗಳಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ಇಂತಹ ಹುದ್ದೆಗಳಲ್ಲಿ ಇಂದಿಗೂ ಕೇವಲ ೪% ಮಹಿಳೆಯರು ಮಾತ್ರ ಕೆಲಸ ಮಾಡುತ್ತಿದ್ದಾರೆ. ವಿಶ್ವದ ೫೦೦ ಅತಿ ದೊಡ್ಡ ಸಂಸ್ಥೆಗಳಲ್ಲಿ ೧೩ ಸಂಸ್ಥೆಗಳಲ್ಲಿ ಮಾತ್ರ ಮಹಿಳಾ ಸಿಇಒಗಳಿದ್ದಾರೆಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯೊಂದು ತಿಳಿಸುತ್ತದೆ. ಇದು ಪ್ರಪಂಚದಾದ್ಯಂತ ಹೆಣ್ಣುಮಕ್ಕಳಿಗಿರುವ ಸ್ಥಾನಮಾನವನ್ನು ಸೂಚಿಸುತ್ತದೆ.

ಇವತ್ತಿಗೂ ಸಾಂಪ್ರದಾಯಿಕವಲ್ಲದ ಸಾರ್ವಜನಿಕ ಸಂಪರ್ಕ, ಪತ್ರಿಕೋದ್ಯಮ, ಪ್ರವಾಸೋದ್ಯಮ, ನಾಗರಿಕ – ವಿಮಾನಯಾನ, ವಿಜ್ಞಾನ ಪ್ರಯೋಗಾಲಯಗಳಲ್ಲಿ, ವೈಜ್ಞಾನಿಕ ಸಾಧನೆ ಮುಂತಾದ ಕ್ಷೇತ್ರಗಳನ್ನು ಪ್ರವೇಶಿಸಿದಾಗ ಅಥವಾಯಾವುದೇ ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ ಹೆಚ್ಚಿನ ಜವಾಬ್ದಾರಿಯಿಂದ ಮಹಿಳೆ ಅನೇಕ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಶ್ರಮ, ಕೆಲಸವನ್ನು ಕೆಲವೊಮ್ಮೆ ಕುಟುಂಬವನ್ನು ನಿರ್ಲಕ್ಷಿಸಿ ಮಾಡಬೇಕಾಗುತ್ತದೆ. ಆಗೆಲ್ಲಾ ಒಳಗೂ – ಹೊರಗೂ ಘರ್ಷಣೆಗಳು, ಸಂಘರ್ಷಗಳು ಉಂಟಾಗುತ್ತದೆ. ಜೊತೆಗೆ ದೈಹಿಕ – ಮಾನಸಿಕ ಒತ್ತಡವೂ ಉಂಟಾಗುತ್ತದೆ. ಇದಕ್ಕೆ ಸೋತು ಅನೇಕ ಮಹಿಳೆಯರು ತಮ್ಮ ಮಹತ್ವಾಕಾಂಕ್ಷೆಯ ಕನಸನ್ನು ಬಿಟ್ಟು ಕೊಟ್ಟು ಗೃಹಿಣಯರಾಗಿ, ಅಥವಾ ಹೆಚ್ಚಿನ ಜವಾಬ್ದಾರಿ ಬೇಡದ ಚಿಕ್ಕಪುಟ್ಟ ಕೆಲಸ ಹಿಡಿದು ಉಳಿದುಬಿಡುತ್ತಾರೆ.

ಒಂದು ಅಧ್ಯಯನದ ಪ್ರಕಾರ ಕರ್ನಾಟಕದ ನಗರ ಪ್ರದೇಶದಲ್ಲಿ ಶೇ. ೪೦ ಮಂದಿ ಪೂರ್ಣಕಾಲೀನ ಉದ್ಯೋಗಸ್ಥೆಯರು, ಶೇ. ೩೫ ಮಂದಿ ಅರೆ ಉದ್ಯೋಗಸ್ಥೆಯರು ಇದ್ದಾರೆ. ಇವರಲ್ಲಿ ಸಂಘಟಿತ ಕ್ಷೇತ್ರದಲ್ಲಿರುವ ಮಹಿಳೆಯರು ಶೇ. ೧೮ ಮಾತ್ರ. ಆ ಸಂಘಟಿತ ಕ್ಷೇತ್ರದಲ್ಲಿ ಶೇ. ೮೦ಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ. ಅವರಲ್ಲಿ ಸಿದ್ಧುಡುಪು ಕೈಗಾರಿಕೆಯ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಪೌರ ಕಾರ್ಮಿಕರು, ಅಂಗಡಿ – ಮಳಿಗೆಗಳಲ್ಲಿ ವ್ಯಾಪಾರ ಮಾಡುವವರು, ಮನೆಗೆಲಸದವರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ತಯಾರಿಸುವ ಕಾರ್ಮಿಕರು, ಜೊತೆಗೆ ಮನೆಯಲ್ಲೇ ಇದ್ದು ಹೂ ಕಟ್ಟುವ, ಊದಿನಕಡ್ಡಿ ಹೊಸೆಯುವ, ಎಲೆ ಹಚ್ಚುವ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಿಗೆ ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಗೆ ಸಿಕ್ಕುವಂತ ನಿಗದಿತ ಆದಾಯ, ನಿಗದಿತ ಸೌಲಭ್ಯ, ರಜೆ ಮತ್ತು ಇತರೆ ಯಾವ ಅನುಕೂಲಗಳೂ ದೊರೆಯುವುದಿಲ್ಲ ಎಂಬುದು ಸರ್ವವಿಧಿತ. ಸಮಾಜದಲ್ಲಿ ಪುರುಷನೊಬ್ಬ ಹೆಣ್ಣಿಗಿಂತ ಉನ್ನತ ಸ್ಥಾನ ಪಡೆಯುವುದು ಅವನಿಗಿರುವ ಪರಿಸರ ಪ್ರೋತ್ಸಾಹದಿಂದ. ಮಹಿಳೆಗೂ ಇಂತದ್ದೇ ವಾತಾವರಣ ಸಿಕ್ಕರೆ ಅವಳೂ ಸಬಲಳಾಗಿ, ಸಶಕ್ತಳಾಗಿ ಬೆಳೆಯಬಹುದು. ಮಹಿಳೆಯ ಬಗೆಗಿನ ಸಮಾಜದ ಒಟ್ಟಾರೆ ಗ್ರಹಿಕೆ, ಮನೋಭಾವ ಬದಲಾಗಬೇಕಿದೆ. ಮಹಿಳೆ ತನ್ನ ಸಹಜೀವಿ ಅವಳಿಗೂ ತನ್ನಂತೆಯೇ ಸಮಾನ ಹಕ್ಕುಗಳಿವೆ ಎಂದು ಪುರುಷರು ಭಾವಿಸುವ ಸಾಮಾಜಿಕ ವ್ಯವಸ್ಥೆ ಇನ್ನೂ ಬರಬೇಕಿದೆ. ಇಂತಹ ಮನೋಭಾವವನ್ನು ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ರೂಪಿಸುವ ಮುಖ್ಯ ಸವಾಲೂ ಆಧುನಿಕ ಮಹಿಳೆಯ ಮೇಲಿದೆ.

ಭಾರತದ ಸಂವಿಧಾನದ ಪ್ರಕಾರ ಸ್ತ್ರೀ ಪುರುಷರಿಬ್ಬರಿಗೂ ಸಮಾನತೆ, ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ೧೯೫೦ರಲ್ಲೇ ನೀಡಲಾಗಿದೆ. ವಿದ್ಯಾಭ್ಯಾಸದಲ್ಲಿ ಕೂಡ ಸರಿಸಮಾನವಾದ ಹಕ್ಕುಗಳಿವೆ. ಆದರೆ ವಾಸ್ತವದಲ್ಲಿ ಮಹಿಳಾ ಶಿಕ್ಷಣ ಮತ್ತು ಸಮಾನತೆ ಸಂವಿಧಾನದ ಕಡತದಲ್ಲೇ ಉಳಿದು ಹೋಗಿದೆ. ಹೆಣ್ಣುಮಕ್ಕಳಿಗೆ ಸಾಮಾಜಿಕ ಹಾಗೂ ಕೌಟುಂಬಿಕವಾಗಿ ಇರುವ ಹೆಚ್ಚಿನ ಜವಾಬ್ದಾರಿಗಳು ಹಾಗೂ ಮಿತಿಗಳಿಂದಾಗಿ ಗಂಡುಮಕ್ಕಳ ವಿದ್ಯಾಭ್ಯಾಸದಷ್ಟು ಸರಾಗವಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಸಾಗುತ್ತಿಲ್ಲ. ಸಧ್ಯಕ್ಕೆ ಭಾರತದಲ್ಲಿ ೨೦೦ ಮಿಲಿಯ ಅನಕ್ಷರಸ್ಥ ಹೆಣ್ಣುಮಕ್ಕಳಿದ್ದಾರೆ. ವಿಶ್ವದಲ್ಲಿರುವ ಒಂದು ಬಿಲಿಯ ವಯಸ್ಕ ನಿರಕ್ಷರಕುಕ್ಷಿಗಳಲ್ಲಿ ಮೂರನೇ ಎರಡು ಭಾಗ ಮಹಿಳೆಯರಿದ್ದಾರೆ. ಅವರಿಗೆ ಮೂಲಶಿಕ್ಷಣವೇ ಸಿಗುತ್ತಿಲ್ಲ. ಹಾಗೂ ಪ್ರಪಂಚದಾದ್ಯಂತ ಇರುವ ಸುಮಾರು ೧೩೦ ಮಿಲಿಯ ಮಕ್ಕಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾದವರಲ್ಲಿ ಹೆಣ್ಣುಮಕ್ಕಳೇ ಹೆಚ್ಚು ಎಂಬುದು ಜಾಗತಿಕ ಸಮೀಕ್ಷೆಯ ಅಂಕಿ ಅಂಶವಾಗಿದೆ.