ದೇಶ, ಜಾನಂಗ, ಸಮಾಜ ಹೀಗೆ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಬೇಕಾದರೆ ಅಲ್ಲಿನ ಮಾನವ ಸಂಪನ್ಮೂಲ ಬಹುಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯವಂತ, ಬುದ್ಧಿವಂತ ನಾಗರಿಕರು ಆ ದೇಶದ ನಿಜವಾದ ಸಂಪನ್ಮೂಲ ವಾಗಿರುತ್ತಾರೆ. ಕೃಷಿ ಕ್ಷೇತ್ರದಲ್ಲಿ ಅಂತಹ ಯತೇಚ್ಛವಾಗಿ ದೊರೆಯುವ ಸಂಪನ್ಮೂಲವೆಂದರೆ, ಕೃಷಿ ಕ್ಷೇತ್ರದಲ್ಲಿನ ಕೃಷಿ ಕಾರ್ಮಿಕ ಮಹಿಳೆಯರು. ಗ್ರಾಮೀಣ ಪ್ರದೇಶದಲ್ಲಿ ಶೇ.೭೪ರಷ್ಟು ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಶೇ ೨೮ರಷ್ಟು ಮಹಿಳೆಯರು ಸಾಗುವಳಿದಾರರಾಗಿದ್ದಾರೆ, ಶೇ. ೪೬ರಷ್ಟು ಕೃಷಿ ಕಾರ್ಮಿಕ ಮಹಿಳೆಯರಿದ್ದಾರೆ ಎಂದು ಒಂದು ಅಂದಾಜಿದೆ. ಕೃಷಿ ಅರ್ಥವ್ಯವಸ್ಥೆಯ ಕ್ಷೇತ್ರದಲ್ಲಿ ಮಹಿಳಯದೇ ಸಿಂಹಪಾಲು. ಕೃಷಿ ಕಾರ್ಮಿಕ ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ ಎನ್ನಬಹುದು. ಕಾರಣ ಪುರುಷರು ಹೆಚ್ಚಿನ ಕೂಲಿಗಾಗಿ ಪಟ್ಟಣ ನಗರಗಳೆಡೆಗೆ ವಲಸೆ ಹೋಗುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಪ್ರಧಾನ ಕೃಷಿಕಾರ್ಮಿಕ ಮಹಿಳೆಯರ ಸಂಖ್ಯೆ ಹೆಚ್ಚುತ್ತಲಿದೆ.

ಆದರೆ ಭಾರತದಲ್ಲಿ ಕೃಷಿಕಾರ್ಮಿಕ ಮಹಿಳೆಯರ ಸ್ಥಿತಿಗಳ ಬಗ್ಗೆ ನಾವು ಮಾತನಾಡುವಂತೆಯೇ ಇಲ್ಲ. ಅದು ಇಲ್ಲಿ ಅಪ್ರಸ್ತುತ ಆದರೆ ಕೃಷಿಕಾರ್ಮಿಕ ಮಹಿಳೆಯರು ಜನಪದ ಸಂಸ್ಕೃತಿಗೆ ಹಾಗು ಅದರ ಮುಂದುವರಿಕೆಗೆ ಪ್ರಧಾನ ಕಾರಣಿಭೂತರಾಗಿದ್ದಾರೆ. ನಂಬಿಕೆಗಳು ವಿಧಿಯಾಚರಣೆಗಳು ಅವರಿಂದಾಗಿಯೇ ಹೆಚ್ಚು ಆಪ್ತವಾಗಿ ಉಳಿದು ಬಂದಿವೆ.

ಪುರುಷ ಪ್ರಧಾನ ವ್ಯವಸ್ಥೆಯ ಅಡಿಯಲ್ಲಿ ಮಹಿಳೆ ತನ್ನ ಆಂತರಿಕ ಅಭಿಲಾಷೆಗಳ ಕಡೆಗೆ ಗಮನ ಕೊಡದೆ, ಕೇವಲ ತನ್ನ ಪತಿ ಮಕ್ಕಳು ಮತ್ತು ಸಂಸಾರದ ಏಳಿಗೆಯನ್ನು ಮಾತ್ರ ಬಯಸುತ್ತಿದ್ದಾಳೆ.

ಅವಿದ್ಯಾವಂತರಾದ ಕಾರ್ಮಿಕ ಮಹಿಳೆಯರು ಹೆಚ್ಚು ಭಾವನಾತ್ಮಕ ನೆಲೆಯಲ್ಲಿ ಚಿಂತಿಸುತ್ತಿರುತ್ತಾರೆ. ಹಾಗೂ ಹೆಚ್ಚು ಅವಿಭಕ್ತ ಕುಟುಂಬಗಳಲ್ಲಿ ಜೀವಿಸಲು ಹೆಚ್ಚು ಬಯಸುತ್ತಾರೆ. ಕೃಷಿ ಕಾರ್ಮಿಕ ಮಹಿಳೆಯರು ಹೆಚ್ಚು ಆಶ್ರಯಿಸುವುದು ಧರ್ಮ-ದೇವರುಗಳನ್ನು. ಅವುಗಳಲ್ಲಿರುವ ನಂಬಿಕೆಗಳೇ ಅವರಿಗೆ ಅತೀತವಾದ ಕೆಲಸಗಳನ್ನು ಮಾಡಿಸುತ್ತವೆ. ನಂಬಿಕೆಯಿಂದಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಆದುದರಿಂದಲೇ ಅವರಿಗೆ ಪ್ರತಿಯೊಂದು ತಾವು ವಿಶ್ವಾಸ ಪಡುವುದನ್ನು ಹೊರತುಪಡಿಸಿ ಉಳಿದೆಲ್ಲ ಗೌಣವೆನಿಸಿಬಿಡುತ್ತದೆ.

ಪೂರ್ವದಲ್ಲಿ ಹೆಣ್ಣು ತನ್ನ ಇದೇ ಗುಂಪಿನ ರಕ್ಷಣೆಯನ್ನು ಮತ್ತು ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು ಬೇಸಾಯವು ಸ್ತ್ರೀಯರದೇ ಶೋಧ. ಆದ್ದರಿಂದ ಅದಕ್ಕೆ ಹೊಂದಿಕೊಂಡಂತೆ ಬೆಳೆದ ಮಾಂತ್ರಿಕ ಕ್ರಿಯೆಗಳಲ್ಲಿ ವಿದ್ಯುತ್‌ ಆಚರಣೆಗಳು ಸ್ತ್ರೀಯರಿಂದಲೇ ಹುಟ್ಟಿಕೊಂಡಿರಬೇಕು ಎಂದು ಅಭಿಪ್ರಾಯಪಡುತ್ತಾರೆ. ಬೇಟೆ ಗಂಡಿನ ಹೊಣೆಯಾಗಿದ್ದಾಗ ಆಹಾರ ಸಂರಕ್ಷಣೆಗೆ ನೆಲ ಅಗೆದು ಗಡ್ಡೆ ಗೆಣಸು ಸಂಗ್ರಹಿಸುವುದು ಮತ್ತು ಬೀಜ ಬಿತ್ತಿ ಬೆಳೆ ತೆಗೆಯುವುದು ಹೆಣ್ಣಿನ ಕೆಲಸವಾಗಿತ್ತು.

ಆಹಾರೋತ್ಪಾದನೆ ಮತ್ತು ಸಂತಾನೋತ್ಪತ್ತಿ ಹೆಣ್ಣಿಗೆ ಇರುವ ಮಾಂತ್ರಿಕ ಶಕ್ತಿ ಎಂದು ಪ್ರಾಚೀನ ಮಾನವರ ತಿಳುವಳಿಕೆಯಾಗಿತ್ತು. ಹೆಣ್ಣಿನ ಗರ್ಭದಿಂದ ಶಿಶುವೊಂದು ಹೊರಬರುವ ರೀತಿಗೂ, ಭೂಮಿಯೊಳಗಿನಿಂದ ಸಸ್ಯ ಮೊಳಕೆ ಒಡೆದು ಬರುವ ರೀತಿಗೂ ಹೋಲಿಕೆ ಮಾಡಿ ಅವೆರೆಡರ ಮಧ್ಯೆ ಅವರಿಗೆ ವ್ಯತ್ಯಾಸವೇ ಕಾಣಲಿಲ್ಲ. ಆದ್ದರಿಂದ ಹೆಣ್ಣನ್ನು ಭೂಮಿಗೆ ಹೋಲಿಸಿ ಭೂಮಿ ತಾಯಿ ಎಂದು ಸಂಭೋದಿಸಿ ಆರಾಧೀಸುವ ಪೂಜಿಸುವ ಪರಿಪಾಟ ಬೆಳೆಯಿತು.

ತಮ್ಮ ಜೀವನ ಸುಖವಾಗಿರಬೇಕು. ತಾವು ಬಯಸುವ ರೀತಿಯ ಪರಿಣಾಮಗಳನ್ನು ಸೃಷ್ಠಿಸಬೇಕು. ಎಂಬ ಕಾರಣಕ್ಕಾಗಿ ಮನುಷ್ಯನು ಅನೇಕ ಬಗೆಯ ಧಾರ್ಮಿಕ ವಿಧಿಗಳನ್ನು ಆಚರಣೆಗಳನ್ನು ಕಂಡುಕೊಂಡು ರೂಢಿಗೆ ತಂದರು. ಅವುಗಳ ಆವಿಸ್ಕಾರದಲ್ಲಿ ಸ್ತ್ರೀಯರದ್ದೇ ಸಿಂಹಪಾಲು ಎನ್ನಬೇಕಲು. ಇವುಗಳೇ ಧರ್ಮದ ಪ್ರಾಚೀನತೆಯ ರೂಪವೆನಿಸಿವೆ.

ಉತ್ತುವಾಗ, ಬಿತ್ತುವಾಗ ಒಕ್ಕಲು ಮಾಡುವಾಗ ಅನೇಕ ವಿಧಿಯಾಚರಣೆಗಳನ್ನು ಜನಪದರು ಅಳವಡಿಸಿಕೊಂಡಿದ್ದಾರೆ. ಹೆಚ್ರಚಾಗಿ ಅದನ್ನು ಸ್ತ್ರೀಯರೇ ಆಚರಣೆಗೆ ತರುತ್ತಾರೆ. ಆಹಾರ ಸಂಪಾದನೆ ಮಾಡುವ ಕ್ರಮ ಮತ್ತು ವಿಧಿಯಾಚರಣೆಗಳ ಮೂಲಕ ಧರ್ಮವೊಂದನ್ನು ರೂಢಿಸಿಕೊಂಡಿದ್ದಾರೆ. ಈ ಧರ್ಮದ ಆಚರಣೆಗಳು ಜನಪದರ ಅಡುಗೆ ಮನೆಯಿಂದ ಮೊದಲುಗೊಂಡು ಪ್ರಕೃತಿಯ ವಿಧಿಯಾಚರಣೆಗಳಾದ ಭೂಮಿ, ನೀರು, ಮಳೆ, ಬೆಳೆ, ಬೆಂಕಿಗೆ ಸಂಬಂಧಪಟ್ಟಿರುತ್ತವೆ. ಜನಪದ ಸ್ತ್ರೀ ಯರ ದುಡಿಮೆ ಮತ್ತು ಧರ್ಮ ಮೇಲೆ ಧರ್ಮನಿಂತಿದೆ. ವೈಟ್‌ ಎಂಬ ವಿದ್ವಾಂಸರು ಅಭಿಪ್ರಾಯ ಪಡುವಂತೆ ಮನುಷ್ಯ ತಾನು ಬದುಕುಳಿಯುವ ಪ್ರಕೃತಿಯೊಂದಿಗೆ ನಿರಂತರ ಹೋರಾಟ ಮಾಡಬೇಕಾಗುತ್ತದೆ. ಇದಕ್ಕಾಗಿ ಆತ ಶ್ರಮಪಡಬೇಕಾಗುತ್ತದೆ. ಈ ಶ್ರಮ ಎಷ್ಟೆಷ್ಟೋ ಪ್ರಮಾಣದಲ್ಲಿ ವಿನಿಯೋಗವಾಗುತ್ತದೆಯೋ ಅಷ್ಟಷ್ಟೂ ಪ್ರಮಾಣದಲ್ಲಿ ಸಂಸ್ಕೃತಿ ರೂಪಗೊಳ್ಳುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಸಮಾಜಗಳ ಹಾಗೂ ಜನಾಂಗಗಳ ಉಳಿವಿಗೆ ನಿರಂತರ ಆಹಾರ ಸರಬರಾಜು ಸಂತಾನ ವರ್ಧನೆ ಮತ್ತು ಪಶುಸಂಗೋಪೆನಗಳ ಅವಶ್ಯಕತೆಗಳನ್ನು ಪೂರೈಸುತ್ತಿದ್ದವರು ಹೆಂಗಸರೇ. ವಿವಿಧ ಜನಾಂಗಗಳನ್ನು ಉಳಿಸಿ ಕಾಪಾಡುವ ಮಾತೆಯಾಗಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿದ್ದವರೂ ಸ್ತ್ರೀಯವರೇ.

ಕುಟುಂಬದ ಆತ್ಮೀಯ ವಾತ್ಸಲ್ಯದ ಶೆಲೆಯಾಗಿದ್ದಳು ಹೆಣ್ಣು. ಹೆಣ್ಣುಗಳು ಹೆಚ್ಚಿದಷ್ಟು ಆಹಾರವು ಹೆಚ್ಚುತ್ತದೆ ಎನ್ನುವ ಪಿಗ್ಮಿ ಜನರ ಗಾದೆಮಾತು ಸ್ತ್ರೀಯರ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಆದಿವಾಸಿ ಜನರು ಸ್ತ್ರೀಯರ ಬಗ್ಗೆ ಉನ್ನತವಾದ ಭಾವನೆಗಳನ್ನು ಮತ್ತು ಗೌರವಗಳನ್ನು ಹೊಂದಿದ್ದರು. ಜನಪದದಲ್ಲಿನ ಧಾರ್ಮಿಕ ವಿಧಿ ವಿಧಾನಗಳನ್ನು ಬಹುತೇಕ ಸ್ತ್ರೀಯರೇ ಆಚರಿಸುವುದುಂಟು.

ಉತ್ತುವಾಗ, ಬಿತ್ತುವಾಗ, ಒಕ್ಕಲು ಮಾಡುವಾಗ ಅಳವಡಿಸಿಕೊಂಡಿರುವ ಅನೇಕ ವಿಧಿಯಾಚರಣೆಗಳನ್ನು ಸ್ತ್ರೀಯರೇ ಮಾಡುತ್ತಾರೆ. ಪಶ್ಚಿಮ ಬಂಗಾಳ ಬದ್ದಳನ ಜಿಲ್ಲೆಯಲ್ಲಿ ಹೆಂಗಸರು ಧಾನ್ಯ ವ್ರತವನ್ನು ಮಾಡುತ್ತಾರೆ. ರವೀಂದ್ರನಾಥ ಠಾಕೂರರು ಅದರ ವಿವರವನ್ನು ಕೊಟ್ಟಿದ್ದಾರೆ. ಈ ವ್ರತ ಆಚರಣೆಗೆ ‘ಬಾಂಚೋ’ಎಂಬ ಹೆಸರಿದೆ.

ಭಾದ್ರಪದ ಬಹುಳ ಷಷ್ಠಿಯಿಂದ ಹಿಡಿದು ಶುದ್ಧ ದ್ವಾದಶಿಯವರೆಗೆ ಈ ಆಚರಣೆ ನಡೆಯುತ್ತದೆ. ಪಂಚಮಿದಿನ ಬಟಾಣಿ, ಹೆಸರು, ಅಲಸಂದಿ, ಉದ್ದು ಮತ್ತು ಕಡಲೆ ಈ ಐದು ಧಾನ್ಯಗಳನ್ನು ಒಂದು ಪಾತ್ರೆಯಲ್ಲಿ ನೆನೆಹಾಕಿ ಇಡಲಾಗುತ್ತದೆ. ಮಾರನೆಯ ದಿನ ಇದರಲ್ಲಿಯ ಸ್ವಲ್ಪ ಭಾಗವನ್ನು ನೈವೇದ್ಯಕ್ಕಾಗಿ ತೆಗೆದಿಟ್ಟು ಮಿಕ್ಕಿದ್ದನ್ನು ಮಣ್ಣು ತುಂಬಿದ ಹೊಸ ಹರಿವಾಣದಲ್ಲಿ ಇಡಲಾಗುತ್ತದೆ. ದ್ವಾದಶಿಯವರೆಗೆ ಪ್ರತಿದಿನ ಹೆಂಗಸರು ಸ್ನಾನ ಮಾಡಿ ಅದಕ್ಕೆ ನೀರು ಹಾಕುತ್ತಿರುತ್ತಾರೆ. ನಾಲ್ಕೈದು ದಿನಗಳಲ್ಲಿ ಸಾಕಷ್ಟು ಮೊಳಕೆಗಳು ಕಾಣಿಸಿಕೊಂಡರೆ ಆ ವರ್ಷದಲ್ಲಿ ಸಾಕಷ್ಟು ಬೆಳೆ ಬಂದಿದೆ ಎಂದು ತಿಳಿಯಲಾಗುತ್ತದೆ. ಬೆಳದಿಂಗಳ ಬಯಲು ಪ್ರದೇಶದಲ್ಲಿ ದ್ವಾದಶಿಯ ದಿನ ನಡೆಯುವ ಉತ್ಸವದಲ್ಲಿ ಜಗುಲಿಯ ಮೇಲೆ ರಂಗೋಲಿಯನ್ನು ಇಂದ್ರನ ವಜ್ರಾಯುಧದ ಚಿಹ್ನೆಯನ್ನು ಬಿಡಿಸಲಾಗುತ್ತದೆ. ಕೆಲವು ಕಡೆ ಮಣ್ಣಿನಲ್ಲಿ ಇಂದ್ರನ ಮೂರ್ತಿಯನ್ನು ಮಾಡುತ್ತಾರೆ. ಸುತ್ತಮುತ್ತಲಿರುವ ಹೆಂಗಸರೆಲ್ಲ ಮೊಳಕೆಯೊಡೆದ ಧಾನ್ಯದ ಹರಿವಾಣಗಳನ್ನು ತಂದು ಜಗುಲಿಯ ನಾಲ್ಕು ಮೂಲೆಗಳಲ್ಲಿ ಇಡುತ್ತಾರೆ. ಕೈ-ಕೈ ಹಿಡಿದು ಇದೇ ರಾತ್ರಿಯಲ್ಲಿ ಹಾಡು-ಕುಣಿತಗಳಲ್ಲಿ ತಲ್ಲೀನರಾಗಿರುತ್ತಾರೆ. ಇದರ ಆಶಯವೇನೆಂದರೆ ಹಾಡು-ಕುಣಿತಗಳು ಎಷ್ಟೇಷ್ಟು ಸೊಗಸಾಗಿರುತ್ತವೆಯೋ ಅಷ್ಟಷ್ಟು ಬಾಂಚೋ ಕೂಡ ಇಷ್ಟಾರ್ಥ ಕೈಗೂಡುತ್ತದೆ. ಬೇಕಾದಷ್ಟು ಫಸಲು ಕೈಗೆ ಬರುತ್ತದೆ. ಇದರಲ್ಲಿ ಧರ್ಮದ ಪೂಜೆ ಪ್ರಾರ್ಥನೆ ಉಪಾಸನೆಗಳ ಸೋಂಕು ಇಲ್ಲ. ಹಾಡು ನೃತ್ಯಗಳ ಮೂಲಕ ಬೆಳೆಯನ್ನು ವಶಮಾಡಿಕೊಳ್ಳುವ ಆಶಯವಿದೆ ಎಂದು ಅಭಿಪ್ರಾಯಪಡುತ್ತಾರೆ.

ಉತ್ತರ ಕರ್ನಾಟಕದ ಬಯಲು ಸೀಮೆಯಲ್ಲಿ ಇದೇ ನಾಗರ ಪಂಚಮಿಯಂದು ನಡೆಯುವ ಆಚರಣೆ ರೂಢಿಯಲ್ಲಿದೆ. ಪಂಚಮಿಗೆ ಒಂಭತ್ತು ಇಲ್ಲವೆ ಹನ್ನೊಂದು ದಿನಗಳ ಮುಂಚೆ ಮನೆಯ ಒಡತಿಯು ಮಣ್ಣಿನ ಮಡಕೆ ಅಥವಾ ತೆಂಗಿನ ಕರಟಕಗಳಲ್ಲಿ ಮಣ್ಣನ್ನು ತುಂಬಿ ಅದರಲ್ಲಿ ರಾಗಿ, ಭತ್ತ, ಗೋಧಿ, ನವಣೆ, ಜೋಳ ಹಾಕಿ ಬೆಳೆಸುತ್ತಾಳೆ. ಒಂಭತ್ತು ದಿನಕ್ಕೆಲ್ಲ ಸಸಿಗಳು ಮೊಳಕೆಯೊಡದಿರುತ್ತವೆ. ನಾಗರ ಪಂಚಮಿಯಂದು ನಾಗನಿಗೆ ತನಿ (ಹಾಲು+ತುಪ್ಪ) ಎರೆಯುವ ದಿನ ಪೂಜೆಗೆ ಆ ಸಸಿಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ. ತಮ್ಮ ಹೊಲಗಳಲ್ಲಿ ಸಮೃದ್ಧ ಬೆಳೆ ಕಾಣಲಿ ಎಂಬ ಸದಾಶಯವೆ ಇದರ ಹಿಂದಿನ ಉದ್ದೇಶ ಇರಬೇಕು.

ಕೊಂತಿಯ ಆಚರಣೆ ಎಂಬ ಇನ್ನೊಂದು ಆಚರಣೆ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಇದನ್ನೂ ಸಹ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಹಾಡುವ ಆಚರಿಸುವ ಪರಿಪಾಟವಿದೆ. ಕೃಷಿಕಾರ್ಮಿಕ ಸ್ತ್ರೀಯರು ತಮ್ಮ ಹೊಲಗಳಲ್ಲಿ ಸಮೃದ್ಧಿಗಾಗಿ ಬೆಳೆದ ಫಸಲಿಗೆ ಪೂಜೆ ಮಾಡುವ ಒಂದು ವಿಧಾನವಾಗಿದೆ.

ಕಾರ್ತಿಕ ಮಾಸದ ಬೆಳದಿಂಗಳ ರಾತ್ರಿಗಳಲ್ಲಿ ಹದಿನಾರು ದಿನಗಳ ಕಾಲದವರೆಗೆ ಸತತವಾಗಿ ನಡೆಯುವ ಒಂದು ಸಂಪ್ರದಾಯ. ಆ ಸಂದರ್ಭಗಳಲ್ಲಿ ಹಾಡುವ ಹಾಡುಗಳನ್ನು ಕೊಂತಿಯ ಪದಗಳೆಂದು ಕರೆಯುತ್ತಾರೆ.ಕೊಂತಿ ಪೂಜೆಯ ನಾಂದಿಯ ಹಾಡು ಹೀಗಿದೆ.

ಒನ್ನೊಂದಿ ಪೂಜೆ ಒನ್ನಲ್ಪ ತಾರ್ಸಿ
ಇಂಬಾಳೆ ಹೋದಣ್ಣ ಏನೇನು ತಂದಾನ
ಇಂಬಾಳೆ ತಂದಾನ ಮುಂಬಾಳೆ ತಂದಾನ
ಕೊಂತಿ ಪೂಜೆ ಆಚರಣೆಯ ಮುಕ್ತಾಐದ ಪದ ಹೀಗಿದೆ.
ಬಾಳೆಯ ತೋಟದಲ್ಲಿ ಬಾಲನಾಡುತ ಬಂದ
ಬಾಲೆ ಸ್ತ್ರೀ ಶಿವನ ಪಾದಕೆ ಎತ್ತಿದಳಾರತಿಯ
ಶ್ರೀ ದ್ರೌಪದಿ ಬೆಳಗಿದಳಾರತಿ

ಈ ಪದಗಳನ್ನು ವಿವಿಧ ಮಟ್ಟುಗಳಲ್ಲಿ ವಿವಿಧ ದಾಟಿಗಳಲ್ಲಿ ಹಾಡಲಾಗುವುದು.

ಕೃಷಿ ಕಾರ್ಮಿಕ ಮಹಿಳೆಯಲ್ಲಿ ಸಮಾಜದ ಎಲ್ಲಾ ವರ್ಗವ ಎಲ್ಲ ಜಾತಿಯ ಸ್ತ್ರೀಯರನ್ನು ನಾವು ಕಾಣುತ್ತೇವೆ. ಪತಿ-ಮಕ್ಕಳನ್ನು ಹೊಂದಿದವರೂ ವಿಧವೆಯರೂ, ಅಂಗವಿಕಲರೂ, ದೇವದಾಸಿಯರೂ, ಕಲಾಕಾರರೂ, ವೃದ್ಧರೂ ಕಂಡುಬರುತ್ತಾರೆ.

ಕೃಷಿಯಲ್ಲಿನ ಎಲ್ಲ ಧಾರ್ಮಿಕ ಆಚರಣೆಗಳು ಹೆಣ್ಣಿನಿಂದಲೇ ಪ್ರಾರಂಭವಾಗುತ್ತವೆ. ಅವುಗಳನ್ನು ಆಚರಣೆಗೆ ತರುವುದು ಸ್ತ್ರೀಯರೇ. ಅವುಗಳು ಇಲ್ಲಿಯವರೆಗೂ ಉಳಿದುಬಂದಿರುವುದಕ್ಕೆ ಸ್ತ್ರೀಯರೇ ಕಾರಣರು. ಜೀವನ ಸಾಫಲ್ಯ ಪದಾರ್ಥಗಳನ್ನು ಉತ್ಪಾದಿಸುವ ಸಂದರ್ಭದಲ್ಲಿ ಫಲವಂತಿಕೆಗೆ ಸ್ತ್ರೀತ್ವವು ಸಹಜವಾಗಿ ಅನುಕೂಲಕರ ಸಂಕೇತವಾಗಿ ಒದಗಿತು. ಆದರೆ ಧರ್ಮಗಳ ಬೆಳವಣಿಗೆಯೊಂದಿಗೆ ಕನ್ಯೆಯರು, ಪೂಜಾರಿಣಿಯರು, ಕನ್ಯೆ ಮಾತೆಯರು, ಬ್ರಹ್ಮಚಾರಣಿ, ದೇವಿಯರಿಗೂ ಒತ್ತು ದೊರೆಯಿತು. ಕೃಷಿ ಪ್ರಧಾನ ಸಮಾಜಗಳಲ್ಲಿ ತಾಯಿಯೇ ಕುಟುಂಬದ ಒಡತಿಯಾಗಿದ್ದು ಕುಲಗಳಲ್ಲಿ ಮಾತೃದೇವತೆಗಳು ಉನ್ನತ ಸ್ಥಾನಕ್ಕೆ ಏರಿದ್ದು ಸಹಜ. ಫಲವಂತಿಕೆ ಆರಾಧನೆಗಳು ಮೂಲತಃ ಹೆಣ್ಣನ್ನು ಕೇಂದ್ರವಾಗಿಟ್ಟುಕೊಂಡಿದ್ದವು. ಮುಂದೆ ಇವು ಪಿತೃಪ್ರಧಾನ ಸಮಾಜಗಳಲ್ಲಿ ಪುರುಷನ ಉತ್ತಾರಾಧಿಕಾರತ್ವ, ಕುಟುಂಬದ ಮುಂದುವರೆಕೆಗಾಗಿ ನಡೆವ ಧಾರ್ಮಿಕ ವಿಧಿಗಳಾಗಿ ಬೆಳೆದಿದ್ದು ಗಮನಾರ್ಹ. ಆದರೆ ಕೃಷಿ ಪ್ರಧಾನ ಶಾಂತ ಬದುಕು ನಷ್ಟವಾಗಿ ಪಿತೃಪ್ರಧಾನ ಪಶುಪಾಲನ ಸಂಸ್ಕೃತಿ ಆಕ್ರಮಿಸತೊಡಗಿದಂತೆ ಈ ದೇವಿಯರೆಲ್ಲ ಹಿಂದೆ ಸರಿದರು. ಆದರೂ ಆ ಜನಾಂಗಗಳು ನೆಲೆನಿಂತು ಕೃಷಿಯನ್ನು ಸಾಧಿಸತೊಡಗಿದಂತೆ ನೈಸರ್ಗಿಕ ಚೇತನದ ಒಡತಿ ದುರ್ಗಿ ಅನಂತತೆ ಶಾಸ್ವತೆಯ ಪ್ರತೀಕವಾದ ಕಾಳಿ, ಜ್ಞಾನದ ಒಡತಿ ಸರಸ್ವತಿ. ಸಂಪತ್ತಿನ ಒಡತಿ ಲಕ್ಷ್ಮೀ ವಿದ್ಯೆ, ಹಣ, ಸಂತಾನ, ಗುಣ. ಆರೋಗ್ಯ ಎಲ್ಲ; ಮೂಲಗಳಿಗೂ ಹೆಣ್ಣು ದೇವತೆಗಳೇ ಅದಿದೇವತೆಯಾಗಿ ಎಲ್ಲಾ ಸೃಷ್ಠಿಯ ಮೂಲ ಮಾತೆಯಾದ ಶಕ್ತಿಯರ ಆರಾಧನೆ ಇಲ್ಲಿ ಮತ್ತೆ ವಿಜೃಂಭಿಸಿತು. ಮಾತೃ ದೇವತೆಗಳಲ್ಲಿ ನಷ್ವಾಧ ಕಡೆಗಳಲ್ಲೂ ಲೈಂಗಿಕ ಸಂಕೇತಗಳ ರೂಪದಲ್ಲಿ ಅವರು ಆಸ್ತಿತ್ವ ಪಡೆದಿರುವುದುಂಟು. ಸ್ತ್ರೀ ಜನನೇಂದ್ರಿಯದ ಸಂಕೇತ ಯೋನಿ ಪೂಜೆ ಕೂಡ ಮಾತೃದೇವತೆಯ ಅಸ್ತಿತ್ವದ ಕುರುಹುಗಳೇ. ಮಾತೃಪ್ರಧಾನ ಕುಟುಂಬಗಳು ಬರುಬರುತ್ತಾ ಪಿತೃಪ್ರಧಾನ ಕುಟುಂಬಗಳಾದಾಗ, ಕೃಷಿ ಪ್ರಧಾನ ವ್ಯವಸ್ಥೆಯಲ್ಲಿನ ಧಾರ್ಮಿಕ ಚಟುವಟಿಕೆಗಳು ಮತ್ತು ಅದರಲ್ಲಿನ ಸ್ಥಾನಗಳನ್ನು ಪುರುಷರು ಆಕ್ರಮಿಸಿಕೊಂಡತೆಲ್ಲಾ, ಸ್ತ್ರೀಯರು ಕೆಳಹಂತಕ್ಕೆ ತಳ್ಳಲ್ಪಟ್ಟರು. ಇದರಿಂದ ತಮ್ಮ ಅಸ್ತಿತ್ವದ ಉಳಿವಿಗಾಗಿ, ಹಾಗು ತನ್ನತನವನ್ನು ಸಾಬೀತುಪಡಿಸಿ ತೋರಿಸಲು ಸ್ತ್ರೀಯರಿಗೆ ಧರ್ಮ ಮತ್ತು ಅದರ ವಿಧಿಯಾಚರಣೆಗಳನ್ನು ಬಿಟ್ಟು ಅನ್ಯ ಮಾರ್ಗವಿರಲಿಲ್ಲ. ಅದಕ್ಕಾಗಿ ಅವರು ಕಠಿಣತರವಾದ ವ್ರತ ನೇಯಗಳಿಂದ ತಮ್ಮ ಮೌನ ಹೋರಾಟವನ್ನೇ ಪ್ರಾರಂಭಿಸಿದರು.

ಕೃಷಿ ಪ್ರಧಾನ ವ್ಯವಸ್ಥೆಗಳಲ್ಲೇ ತಮ್ಮ ಹೀನ ಸ್ಥಾನಗಳಿಂದ ಪಶ್ಚಾತ್ತಾಪ ಪಟ್ಟಿರಬಹುದಾದ ಪುರುಷರು ಗುಪತ್ತ ಸಮಾಜಗಳನ್ನು ಕಟ್ಟಿಕೊಂಡು ಸ್ತ್ರೀಯರ ವಿರುದ್ಧವಾದ ರಹಸ್ಯವಾದ, ಭೀಕರವಾದ ವಿಧಿವಿಧಾನಗಳನ್ನು ಆಚರಿಸುತ್ತಾ, ಅವರನ್ನು ವಶೀಕರಣ ಮಾಡಿಕೊಂಡು ಬಲಿಕೊಡುತ್ತಾ ಬಂದರು. ಇದರಿಂದ ಪಾರಾಗಲು ಸ್ತ್ರೀಯರಿಗೆ ತಾವು ನಂಬಿದ ದೈವಗಳ ಮೊರಹೋಗಬೇಕಾಯಿತು.

ಪೂರ್ವದಿಂದಲೂ ಸಮಾಜದಲ್ಲಿ ಪುರುಷರು ತಮ್ಮ ಸ್ವಾರ್ಥ ಸಾಧನೆಗಾಗಿ ಧರ್ಮ ದೇವರುಗಳನ್ನು ಬಳಸಿಕೊಂಡು ಸಮಾಜದ ಶಾಂತಿಯನ್ನು ಸ್ಥಾಸ್ಥವನ್ನು ಕೆಡೆಸಿದರೆ, ಸ್ತ್ರೀಯರು ಧರ್ಮ ದೇವರುಗಳಲ್ಲಿ ಆಧ್ಯಾತ್ಮವಾದ ಶಾಂತಿಯ ನೆಲೆಗಳನ್ನಾಗಿಸಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಧರ್ಮ ಮತ್ತು ಅದರ ವಿಧಿಯಾಚರಣೆಗಳಲ್ಲಿ ಅಚಲವಾದ ನಂಬಿಕೆ. ಅವಳಿಗೆ ಆ ನಂಬಿಕೆಗಳು ಅವರಿಂದ ಅತೀತವಾದ ಕೆಲಸಗಳನ್ನು ಮಾಡಿಸುತ್ತವೆ. ನಂಬಿಕೆಯಿಂದಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಆದುದರಿಂದಲೇ ಅವರಿಗೆ ಪ್ರತಿಯೊಂದು ತಾವು ವಿಶ್ವಾಸ ಪಡುವುದನ್ನು ಹೊರತುಪಡಿಸಿ ಉಳಿದಿದ್ದು ಗೌಣವಾಗಿಬಿಡುತ್ತದೆ. ಧಾರ್ಮಿಕ ವಿಶ್ವಾಸಿಗರು ದೇವರು ಧರ್ಮದ ಮೇಲಿನ ವಿಶ್ವಾಸವನ್ನು ಅವರಿಗೆ ಎಷ್ಟು ಯಾತನೆಯಾಗಲಿ ಸಾವೇ ಎದುರಾದರೂ ಅದರಿಂದ ಹಿಂತೆಗೆಯುವವರಲ್ಲ. ಇದು ದೇವರ ಮೇಲೆ ಅವರಿಗಿರುವ ನಿಷ್ಠೆಯನ್ನು ಎತ್ತಿ ತೋರಿಸುತ್ತದೆ. ಅವರ ವಿಶ್ವಾಸದ ಎದುರು ಪರ್ವತಗಳೇ ಅಲ್ಲಾಡುತ್ತವೆ. ನದಿಗಳೇ ಇಬ್ಬಾಗವಾಗುತ್ತವೆ. ವಿಶ್ವಾಸವಿರುವ ವ್ಯಕ್ತಿಗಳು ಬಲಶಾಲಿ ಸಾಮ್ರಾಟನಿಗಿಂತಲೂ ಶಕ್ತಿ ಶಾಲಿಯಾಗುತ್ತಾರೆ. ಇದು ಸಾಧ್ಯ ಏಕೆಂದರೆ ಅವರು ಯಾತನೆಗೊಳಗಾದರು ದೇವರು ಎನ್ನುವ ನಂಬಿಕೆಯಿಂದ ಹಿಂದೆ ಸರಿಯದ ಆಂತರಿಕ ಶಕ್ತಿಯಿರುತ್ತದೆ. ಆದರೆ ಬರುಬರುತ್ತಾ ಸಮಾಜದಲ್ಲಿನ ಸ್ಥಾನಗಳು ಗಂಡಿನ ಕಡೆಗೆ ಹೆಚ್ಚಿನ ಒತ್ತು ಕೊಡುತ್ತಾ ಅವರ ಅಧೀನದಲ್ಲಿ ಎಲ್ಲಾ ಸ್ಥಾನಗಳು ಒಳಪಟ್ಟವು. ಇದರಿಂದಾಗಿ ಸ್ತ್ರೀಯರ ಸ್ಥಾನಮಾನಗಳು ಕಡೆಗಣಿಸಲ್ಪಟ್ಟವು. ಅವರ ಬದ್ಧತೆ ಕರ್ತವ್ಯಗಳನ್ನು ಅವರ ಅರಿವಿಗೆ ಬಾರದಂತೆ ಕಿತ್ತುಕೊಳ್ಳಲಾಯಿತು. ಇದರಿಂದ ಹತಾಶರಾದ ಸ್ತ್ರೀಯರು ತಮ್ಮ ಉಳಿವಿಗಾಗಿ ಧರ್ಮ ದೇವರುಗಳನ್ನು ಹೆಚ್ಚಾಗಿ ಆಶ್ರಯಿಸಬೇಕಾಯಿತು.

ತನ್ನ ಅಸ್ತಿತ್ವದ ಸಾಬೀತಿಗಾಗಿ ತನ್ನ ಕುಲದ ಉಳಿವಿಗಾಗಿ ಭಕ್ತಿಯೆಂಬ ಧರ್ಮ ಯುದ್ಧವನ್ನೇ ಸಾರಬೇಕಾಯಿತು. ಆದ್ದರಿಂದಲೇ ಆಧ್ಯಾತ್ಮಿಕ ವ್ಯಕ್ತಿಗಳು ನಿರ್ಭಯರು ಧೈರ್ಯಶಾಲಿಗಳು ಆಗಿರುತ್ತಾರೆ. ಆಂತರಿಕವಾದ ಈ ಗುಣವು ದೇವರ ದಯೆಯೂ, ಆಧ್ಯಾತ್ಮಿಕ ಸಾಧನೆಯ ಕೊಡುಗೆಯೂ ಆಗಿದೆ. ಏಕೆಂದರೆ ಇಂತಹ ವ್ಯಕ್ತಿಗಳಿಗೆ ದೇವರ ಅಸ್ತಿತ್ವದ ಬಗೆಗೆ ಬರುವ ಅಚಲ ವಿಶ್ವಾಸವು ದೇವರು ತಮ್ಮ ರಕ್ಷಣೆಗೆ ಇರುವವರೆಗೂ ತಮಗೇನೂ ಆಗಲಾರದು ಎಂಬ ದೃಢತೆಯನ್ನು ತರುತ್ತದೆ.

ಸ್ತ್ರೀಯರು ತಮ್ಮ ಉಳಿವಿಗಾಗಿ ಧರ್ಮ ದೇವರುಗಳ ಮೇಲೆ ಎಷ್ಟು ನಂಬಿಕೆ ಇಟ್ಟುಕೊಂಡು ಬಂದರು ಎಂದರೆ, ಧರ್ಮಕ್ಕಾಗಿ ತಮ್ಮ ತನವನ್ನೇ ಧಾರೆ ಎರೆದುರು. ಆಗಲೇ ಪ್ರಸ್ತುತಪಡಿಸಿದ ಹಾಗೆ ಕೃಷಿಕಾರ್ಮಿಕರಲ್ಲಿ ದೇವದಾಸಿಯರು, ನರ್ತಕಿಯರು, ಕಲಾವಿದರೂ ಇರುವುದರಿಂದ ದೇವರಿಗಾಗಿ ದೇವದಾಸಿಯಾದರೂ, ದೇವರಿಗೆ ಸೇವೆ ರೂಪವಾಗಿ ದೇವಸ್ಥಾನಗಳಲ್ಲಿ ನರ್ತಕಿಯರು, ಹೊಟ್ಟೆ ಪಾಡಿಗಾಗಿಯೋ, ಇನ್ನಾವುದೋ ಬದುಕಿಗೆ ಅನಿವಾರ್ಯವಾಗಿ ಕಲಾಸೇವೆಯನ್ನು ದೇವರ ಸೇವೆಯೆಂದು ತಮ್ಮನ್ನು ಅರ್ಪಿಸಿಕೊಂಡರು. ಇದರಲ್ಲಿ ವಿವಾಹ ಬಂಧನಕ್ಕೊಳಗಾದ ಮಹಿಳೆಯರು ತಮ್ಮ ಸೀಮಿತ ಚೌಕಟ್ಟಿನಲ್ಲಿಯೇ ಧರ್ಮದ ಆಚರಣೆಗಳಲ್ಲಿ ತೊಡಗಿಸಿಕೊಂಡರು. ಅದಕ್ಕಾಗಿ ಕಠಿಣವಾದ ವ್ರತ ನೇಮಗಳ ಕೈಕಂರ್ಯವನ್ನು ಕೈಗೊಂಡರು. ಅನೇಕ ಭಾಗಗಳಲ್ಲಿ ಕೃಷಿ ಕಾರ್ಮಿಕ ಮಹಿಳೆಯರು ತಮ್ಮ ಹೊಲಗಳಲ್ಲಿ ಬೆಳೆದುನಿಂತ ಫಸಲಿಗೆ ಹುಲುಸು ದೊರಕಲಿ ಎಂದು ಹಬ್ಬ ಹುಣ್ಣಿವೆಗಳಲ್ಲಿ ಹೊಲಗಳಲ್ಲಿ ಪಾಂಡವರನ್ನು ಮಾಡಿ ತಾವು ತಯಾರಿಸಿದ ಸಿಹಿಯನ್ನು ನೈವೇದ್ಯಕ್ಕಾಗಿ ಇಡುತ್ತಾರೆ.

ಶ್ರಾವಣದ ಸಮಯದಲ್ಲಿ ಭೂಮಿ ತಾಯಿ ಹಸಿರಿನಿಂದ ಕಂಗೊಳಿಸುವ ದಿನಗಳವು. ಎಲ್ಲಿ ನೋಡಿದರೂ ಕಣ್ಣಿಗೆ ಹಸಿರಿನ ಹಬ್ಬ ಜೊತೆಗೆ ಶ್ರಾವಣದ ಜಿಟಿ ಜಿಟಿ ಮಳೆ. ಅಂತಹ ಸಮಯದಲ್ಲಿ ಕೃಷಿ ಕಾರ್ಯ ಚಟುವಟಿಕೆಗಳಿಗೆ ಕೊಂಚ ವಿರಾಮ. ಆಗ ಬರುವ ಹಬ್ಬ ಶ್ರಾವಣದ ಪಂಚಮಿ. ಆ ಪಂಚಮಿಯಲ್ಲಿ ಮೊದಲನೆಯ ದಿನ ನಾಗನಿಗೆ ತನಿ ಎರೆಯುವ ಸಂಭ್ರಮವಿರುತ್ತದೆ. ಎರಡನೆಯ ದಿನ ಮನೆಯಲ್ಲಿ ಅನ್ನ, ಚಿತ್ರನ್ನ, ಅನ್ನ, ಹುಗ್ಗಿ, ಪಲ್ಯಾ, ಕಡುಬು ಮಾಡಿಕೊಂಡು ಮನೆಯವರೆಲ್ಲಾ ಸೇರಿಕೊಂಡು ಹೊಲಕ್ಕೆ ಹೋಗುತ್ತಾರೆ. ಬೆಳೆದು ನಿಂತ ಫಸಲಿನ ಪೂರ್ವ ದಿಕ್ಕಿನೆಡೆಗೆ ಮುಖ ಮಾಡಿದ ಮಣ್ಣಿನಿಂದ ಮಾಡಿದ ಐದು ಪಾಂಡವರನ್ನು ಮಾಡಿ ಅದಕ್ಕೆ ತಾವು ತಂದ ಪದಾರ್ಥಗಳನ್ನೆಲ್ಲಾ ನೈವೇದ್ಯಮಾಡಿ ಪೂಜೆ ಮಾಡಿದ ಬಳಿಕ ಹೊಲದ ನಾಲ್ಕು ದಿಕ್ಕಿಗೂ ಚರಗವೆಂದು ಚಲ್ಲಿ ಬರುತ್ತಾರೆ.

ಇದೇ ಆಚರಣೆಯನ್ನು ದೀಪಾವಳಿಯ ಎರಡನೆಯ ದಿನ ಅಂದರೆ ಬಲಿಪಾಡ್ಯಮಿಯ ದಿನ ಮನೆಯಲ್ಲಿ ಸಗಣಿಯಿಂದ ಗಿರಿಜವ್ವನನ್ನು ಮಾಡುತ್ತಾರೆ. ಅವುಗಳನ್ನು ಮನೆಯಲ್ಲಿ ಇರುವ ಎಲ್ಲಾ ಬಾಗಿಲುಗಳಿಗೂ ಎಡ-ಬಲಗಡೆ ಇಟ್ಟು ಪೂಜಿಸುತ್ತಾರೆ. ಹಾಗೂ ದನಗಳನ್ನು ಕಟ್ಟಿಕೊಳ್ಳುವ ಭಾಗದಲ್ಲಿ ಇಟ್ಟು ಪೂಜಿಸುತ್ತಾರೆ.

ನಂತರ ಹೊಲಕ್ಕೆ ಹೋಗಿ ಮೇಲೆ ಹೇಳಿದ ರೀತಿಯಲ್ಲಿಯೇ ವಿಧಿಯಾಚರಣೆಗಳನ್ನು ಮಾಡುತ್ತಾರೆ.

ಮುಂಗಾರು ಮಳೆಯ ಆರಂಭದಲ್ಲಿ ಬಿತ್ತನೆಯ ಕಾಲ ಪ್ರಾರಂಭ. ಆಗ ಮನೆಯ ಸ್ತ್ರೀಯರೇ ಬಿತ್ತನೆ ಕಾರ್ಯಕ್ರಮದ ಎಲ್ಲಾ ವಿಧಿಯಾಚರಣೆಗಳನ್ನು ನೆರವೇರಿಸುತ್ತಾರೆ. ಬೀಜಗಳನ್ನು ದೇವರ ಮುಂದೆ ಇರಿಸಿ ಅವುಗಳನ್ನು ಪೂಜಿಸಿ ಪುರುಷರಿಗೆ ಹಸ್ತಾಂತರಿಸುತ್ತಾರೆ.

ಕಾಲಕ್ರಮೇಣ ಕೃಷಿ ಕಾರ್ಮಿಕ ಸ್ತ್ರೀಯರು ಕೇವಲ ಕೃಷಿ ಕಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ತಮ್ಮ ಗಮನವನ್ನು ಪ್ರಸಕ್ತ ರಾಜಕೀಯ ಕಡೆಗೂ ಹೊರಳಿಸಿದ್ದಾರೆ. ಸಂವಿಧಾನವು ಮುಕ್ತ ಮನಸ್ಸಿನಿಂದ ಮಹಿಳೆಯರಿಗೆ ಮೀಸಲಾತಿಯನ್ನು ನೀಡಿದೆ. ಇದರಿಂದಾಗಿ ಸ್ತ್ರೀಯರೂ ಕೂಡ ಪುರುಷನಷ್ಟೇ ಸಮಾನವಾಗಿ ತನ್ನ ಇರುವಿಕೆಯನ್ನು ಪ್ರಚುರಪಡಿಸುತ್ತಿದ್ದಾಳೆ. ಆದರೂ ಅವರ ಹಿಂದೆ ಬಲಿಷ್ಠ ಕೈಗಳೂ ಇರುವುದು ದುರಂತ

ಕೃಷಿ ಕಾರ್ಮಿಕ ಮಹಿಳೆಯರ ಪದಗಳು

ಗ್ರಾಮೀಣ ಪ್ರದೇಶದಲ್ಲಿ ದಣಿವನ್ನು ನಿವಾರಿಸಿಕೊಳ್ಳಲು ತಾವುಗಳೇ ರಚಿಸಿದ ಹಾಡುಗಳು ಇಂದಿಗೂ ಜೀವಂತವಾಗಿವೆ ಎಂದು ನಾವು ಹೇಳಬಹುದಾಗಿದೆ. ಹಾಡಿನ ಜೋಡಿಯಿಲ್ಲದೆ ಶ್ರಮಸಾಧ್ಯವಾದ ಯಾವ ಕೆಲಸಗಳು ಚುರುಕಾಗಿ ಸಾಗುವುದಿಲ್ಲ. ಕೆಲಸ ಏನೇ ಆಗಿರಬಹುದು ಯಾವುದೇ ಬಗೆಯಾಗಿರಬಹುದು ಅದನ್ನು ನಿರ್ವಹಿಸುವಾಗ ಒಬ್ಬಂಟಿಯಾಗಿಯೂ ಸಾಮೂಹಿಕವಾಗಿಯೂ ಹಾಡುವ ಹಾಡುಗಳನ್ನು ಕೆಲಸದ ಹಾಡುಗಳೆಂದು ಕರೆಯಲಾಗುತ್ತದೆ.

ನಾವು ಕೃಷಿಕರನ್ನು ಅವಲೋಕಿಸಿದಾಗ ಯಾವುದೇ ಜನಾಂಗ ಅಥವಾ ಭಾಷೆ ಭಿನ್ನವಾಗಿದ್ದರು ಕೆಲಸಕ್ಕೂ ಹಾಡಿಗೂ ಇರುವ ಸಹಜ ನಂಟಿನಿಂದಾಗಿ ಎಲ್ಲಾ ಭಾಷೆಗಳಲ್ಲೂ ಕೆಲಸದ ಹಾಡುಗಳು ದೊರಕುತ್ತವೆ. ಶ್ರಮದ ದುಡಿಮೆಯ ಜೊತೆಯಲ್ಲೇ ಉಳಿದುಬಂದಿರುವ ಈ ಹಾಡುಗಳು ಶ್ರಮಜೀವಿಗಳ ಶ್ರಮವನ್ನು ಹೋಗಲಾಡಿಸುವುದರ ಜೊತೆಗೆ ಅವರಿಗೆ ಆತ್ಮತೃಪ್ತಿ ತಂದುಕೊಟ್ಟು ಉಲ್ಲಾಸದಿಂದ ಕೆಲಸ ನಿರ್ವಹಿಸಲು ಸೂಕ್ತ ಪ್ರೇರಣೆ ಒದಗಿಸುತ್ತದೆ.

ಕೆಲಸದ ಹಾಡುಗಳು ಕೆಲಸ ಮಾಡುವಾಗ ಹುಟ್ಟುವ ಹಾಡುಗಳಾಗಬಹುದು ಅಥವಾ ಆ ಕೆಲಸದ ಸ್ವಭಾವವನ್ನು ಹೇಳುವ ಹಾಡುಗಳಾಗಬಹುದು ಊಳುವಾಗ, ಬಿತ್ತುವಾಗ, ನಾಟಿ ಹಾಕುವಾಗ, ಕೊಯ್ಯುವಾಗ, ನೇಯುವಾಗ, ನೂಲುವಾಗ, ಕುಟ್ಟುವಾಗ, ಬೀಸುವಾಗ, ಹಚ್ಚೆ ಹೊಯ್ಯುವಾಗ, ಮಕ್ಕಳನ್ನು ಮಲಗಿಸುವಾಗ, ಇಂತಹ ಹಲವು ಸಂದರ್ಭಗಳಲ್ಲಿ ಹಾಡುಗಳು ಹೊರಹೊಮ್ಮುತ್ತವೆ.

ಕಟ್ಟುವಾಗ, ಬೀಸುವಾಗ, ನಾಟಿ ಹಾಕುವಾಗ, ಕಳೆ ಕೀಳುವಾಗ ಮುಂತಾದ ದುಡಿಯುವ ಸಂದರ್ಭಗಳಲ್ಲಿ ಹೆಂಗಸರು ನಾನಾ ಬಗೆಯ ಪದಗಳನ್ನು ಹಾಡುತ್ತಾರೆ. ಈ ಹಾಡುವವರು ಕೇಳುವವರಿಗೆ ತಾವು ಮಾಡುತ್ತಿರುವ ಶ್ರಮದ ಕೆಲಸ ಅರಿವಾಗುವುದೇ ಇಲ್ಲ. ದೇವನು ಭಕ್ತಿ, ಪ್ರಕೃತಿ, ತವರಿನವರು, ರಕ್ತ ಸಂಬಂಧ, ಗೆಳೆತನ, ನೋವು, ನಲಿವುಗಳು, ಪ್ರೇಮ, ದುರಂತಮಯ ಬದುಕು, ಇವೇ ಮೊದಲಾದ ಹಲವು ಹನ್ನೊಂದು ಸಂಗತಿಗಳನ್ನು ಈ ಹಾಡುಗಳ ಒಳಗೊಂಡಿವೆ. ಇಂಪಾಗಿ ಹಾಡುವ ಕಡೆಗೆ ಇಲ್ಲಿ ಹೆಚ್ಚಿನ ಒತ್ತು ಇರುತ್ತವೆ.

ಅಲ್ಲಲ್ಲಿ ಹೇಳಿದ್ದನ್ನೇ ಹೇಳುವ ಸಾಲು ಮತ್ತು ಪದಪುಂಜಗಳು ಕಂಡುಬರುತ್ತವೆ. ಅನೇಕ ವಿಚಾರಗಳಲ್ಲಿ ಸಮಾಜವು ಮೇಲು ನೋಟಕ್ಕೆ ಒಪ್ಪಿಕೊಂಡಿರುವ ಮೌಲ್ಯಗಳನ್ನು ಈ ಹಾಡುಗಳು ಪ್ರತಿಬಿಂಬಿಸಿವೆ. ಇದನ್ನೂ ಮೀರಿದ ಕೆಲವು ಅಂಶಗಳು ಅಲ್ಲಲ್ಲಿ ತಲೆಹಾಕಿರುವುದನ್ನು ನಾವು ಕಾಣುತ್ತೇವೆ. ಸಾಮಾಜಿಕವಾಗಿ ಆರೋಗ್ಯಕರವಲ್ಲವೆಂದು ಕಾಣಬಹುದಾದ ಇಲ್ಲಿನ ಅನೇಕ ಸಂಗತಿಗಳನ್ನು ನಾವು ಕಂಡಾಗ ಮೂಗು ಮುರಿಯಬೇಕಾದ ಅಗತ್ಯವಿಲ್ಲ. ಇಲ್ಲಿ ತೊಡಗಿರುವ ಸಾಮಾಜಿಕ ಬದುಕು ತನ್ನ ದಾರಿಯನ್ನು ಕಂಡುಕೊಳ್ಳದಿದ್ದ ಕಾರಣಕ್ಕಾಗಿ ಆದ ಅಪಾಯದ ಎಳೆಗಳನ್ನು ಪತ್ತೆ ಹಚ್ಚುವುದು ಕೂಡ ಮುಖ್ಯವಾದ ಕರ್ತವ್ಯ ಈ ದೃಷ್ಠಿಯಿಂದ ಜನತೆಯ ಅದರಲ್ಲೂ ಗಂಡಸಿನ ದಬ್ಬಾಳಿಕೆಯನ್ನು ಒಪ್ಪಿ ಕಾಲನೂಕುತ ಬಂದ ಹೆಂಗಸರ ಅನುಭವದ ಸಂಪತ್ತು ನಮಗೆ ಹೆಚ್ಚು ಲಾಭದಾಯಕವಾದ ಸರಕು ಎಂಬುದನ್ನು ಮರೆಯಬಾರದು.

ಹೆಚ್ಚಾಗಿ ಪುರುಷರು ಕೆಲಸಮಾಡುವ ಸಂದರ್ಭದಲ್ಲಿ ಮಾತ್ರ ಹಾಡುಗಳನ್ನು ಹಾಡಿದರೆ ಮಹಿಳೆಯರು ಮಕ್ಕಳನ್ನು ಲಾಲನೆ, ಪಾಲನೆ, ಮದುವೆ, ಮುಂಜಿ ಮುಂತಾದ ಕ್ಷೇತ್ರಗಳಲ್ಲಿ ಹಾಡುಗಳನ್ನು ಹಾಡಿ ರಂಜಿಸುತ್ತಾರೆ.

ಬೀಸುವ ಪದಗಳು

ಜನಪದರ ದೈನಂದಿನ ಬದುಕು ಮೊದಲಾಗುವುದೇ ಬೀಸುವ ಕಾಯಕದಿಂದ ಬೀಸುವ ಕಲ್ಲು ನಡೆಯುತ್ತಿದ್ದರೆ ಮನೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದೇ ಅರ್ಥ. ಪ್ರತಿನಿತ್ಯವೂ ಅಕ್ಕಿ ರಾಗಿ ಜೋಳ ಮುಂತಾದ ಧಾನ್ಯಗಳು ಪೂರೈಕೆಗೊಳ್ಳುತ್ತವೆ. ಈ ಬೀಸುವ ಕಾಯಕದಲ್ಲಿ ಏನಾದರೂ ಅಡ್ಡಿ ಆತಂಕಗಳು ಕಾಣಿಸಿಕೊಂಡರೆ ಬದುಕೇ ದುಸ್ತರವಾದಂತೆ. ಅದಕ್ಕಾಗಿಯೇ ಬೀಸುವ ಕಲ್ಲನ್ನು ಕುರಿತು ಹೀಗೆ ಹಾಡಿದ್ದಾರೆ.

ಕಂಡುಗ ರಾಗಿ ಬೀಸೂ ನನ್ನ ಮುತ್ತಿನ ರಾಗಿಯ ಕಲ್ಲೆ
ದಂಡೆ ತಂದಿವ್ನಿ ಕೊರಳಿಗೆ ನಮ್ಮನಿಯ
ಕಂಬದ ಸಾಲಲ್ಲಿ ಇಡಬಾರೊ

ರಾಗಿಯ ಕಲ್ಲಿಗೆ ರನ್ನದ ಕೈಗೂಟ
ರಾಮದೇವರೆಂಬೊ ಹಿಡಿಗೂಟಹಿಡಕೊಂಡು
ರಾಯಣದೇವನ ಕೊರಳಿಗೆ

ಕಲ್ಲುಕೊಟ್ಟಮ್ಮಗೆ ಎಲ್ಲ ಭಾಗ್ಯವು ಬರಲಿ
ಕಲ್ಗತ್ತಿ ಮೇಲೆ ಮಗ ಬರಲಿನಮ್ಮನಿಗೆ
ಮಲ್ಲಿಗೆ ಮುಡಿಯೊ ಸೊಸೆ ಬರಲಿ

ಕುಟ್ಟವ ಪದಗಳು

ಮನೆಗೆ ಬೇಕಾದ ಅಕ್ಕಿಗಾಗಿ ಬತ್ತ ಕುಟ್ಟುತ್ತಿದ್ದದು ಸಾಮಾನ್ಯವಾಗಿದ್ದ ದಿನಗಳಲ್ಲಿ ಸಮಾರಾಧನೆ. ಮದುವೆಯಂಥ ಸಾಮೂಹಿಕ ಕಾರ್ಯಗಳಿಗಾಗಿಯೂ ಕುಟ್ಟುವ ಸಂದರ್ಭಗಳು ಬರುತ್ತಿದ್ದವು. ಈಚೆಗೆ ಯಂತ್ರಗಳು ಬಂದಿರುವುದರಿಂದ ಬತ್ತ ಕುಟ್ಟುವ ಕಾಯಕ ಮರೆಯಾಗಿ ಹೋಗಿದೆ. ಅದರ ಜೊತೆಯಲ್ಲಿಯೇ ಕಟ್ಟುವ ಹಾಡುಗಳು ಮರೆತು ಹೋಗಿವೆ.

ಬರಳಿನಲ್ಲಿ ಬತ್ತ ಹಾಕಿ ಒನಕೆ ಹಿಡಿದು ಕಟ್ಟುವಾಗ ಹಾಡುತ್ತಿದ್ದ ಒಂದು ರಚನೆ ಹೀಗಿದೆ.

ಸುವ್ವಾ ಬಾ ಸುವ್ವಿ ಸುವ್ವ ಬಾ
ಸುವ್ವಾ ಬಾ ಸುವ್ವಿ ಸುವ್ವಾ ಬಾ ||||
ಅಕ್ಕಂದು ಆಲೂರ ತಂಗೀದು ಬೇಲೂರ
ಸುವ್ವಾ ಬಾ ಸುವ್ವಿ ಸುವ್ವಾ ಬಾ ||
ಅಕ್ಕಂದು ಆಲೂರ ತಂಗೀದು ಬೇಲೂರ
ಚಿಕ್ಕಕ್ಕನೂರು ಚಿಕಬಿದರೆ ||

ಹೀಗೆ ಹಾಡು ಲಯಬದ್ಧವಾಗಿ ಸಾಗುತ್ತದೆ. ಇಂಥ ಬಿಡಿ ಗೀತೆಗಳ ಜೊತೆಗೆ ಕಥನಗೀತೆಗಳನ್ನು ಹಾಡುತ್ತಿದ್ದುದಾಗಿ ತಿಳಿದು ಬರುತ್ತದೆ.

ಹಚ್ಚೆಯ ಹಾಡುಗಳು

ಹಚ್ಚೆ ಹೊಯ್ಯುವ ಕೆಲಸ ನಿರ್ವಹಿಸುವಾಗ ಈ ಪದಗಳನ್ನು ಹಾಡುವ ವಾಡಿಕೆಯಿರುವುದರಿಂದ ಇದನ್ನು ಕೆಲಸದ ಹಾಡುಗಳ ಗುಂಪಿಗೆ ಸೇರಿದೆ.

ಹಚ್ಚೆ ಹೊಯ್ಯುವವರು ಬೇರೆ ಬೇರೆ ಉಪಭಾಷೆಗಳನ್ನು ಮಾತಾಡುವವರಾದರೂ ಅವರು ಹಚ್ಚೆ ಹೊಯ್ಯುವಾಗ ಹಾಡುವ ಹಾಡುಗಳು ಕನ್ನಡದಲ್ಲೇ ಇವೆ. ಗಂಡಸರು ಹೆಂಗಸರು ಮಕ್ಕಳು ಹೀಗೆ ಚುಚ್ಚಿಸಿ ಕೊಳ್ಳುವವರ ವಯೋಮಾನಕ್ಕನುಗುಣವಾಗಿ ಹಚ್ಚೆ ಹೊಯ್ಯುವವರು ತಮ್ಮದೇ ಆದ ವಿಶಿಷ್ಟ ಧಾಟಿಗಳಲ್ಲಿ ಹಾಡುಗಳನ್ನು ಹಾಡುತ್ತಾರೆ.

ಹಚ್ಚೆ ಹೂದೇನು ಬಾಲೆ ಚಿತ್ತಾರಿ ತೋಳಿನ ಮ್ಯಾಲೆ
ನಿನ್ನ ಹಚ್ಚಿಯ ಮೇಲೆ ಗಿಣಿರಾಮಾ ||ಬಾ||

ನಿನ್ನ ಹಚ್ಚಿಯ ಮೇಲೆ ಗಿಣಿರಾಮಾಬರೆದೇನು
ಚುಚ್ಚಿಸಿಕೊಳ್ಳೋದು ನಿಮ ಬಾರ ||ಬಾ||

ಹುಯ್ಯಿಸಿಕೊಳ್ಳುವವರು ಚಿಕ್ಕ ಮಕ್ಕಳಾದರೆ ಅವರಿಗೆ ಹಾಡುವ ಪದ ಬೇರೆಯಾಗಿರುತ್ತದೆ.

ಕಡ್ಲಿ ತಿಂದ ಕುರು ಕುರು
ಹೊಂಸು ಬಿಟ್ಟ ಪುರು ಪುರು
ಉಳ್ಳಾಗಡ್ಡಿ ತಿನ್ನಬ್ಯಾಡ

ಗಂಡ ಬರಿತ್ತಾನ ಅಳಬ್ಯಾಡ
ಕುಂಡಿ ಮ್ಯಾಲೆ ಹೊಡಿತಾನೆ

ಹಾಗೆಯೇ ಸ್ತ್ರೀ ಜೀವನದ ಮಹತ್ವವನ್ನು ಹೇಳುವ ದೇವಾನು ದೇವತೆಗಳ ಕಥೆಗಳನ್ನು ಹಾಡುಗಳಲ್ಲಿ ಹೇಳಿ ಚುಚ್ಚಿಸಿಕೊಳ್ಳುವವರು ಭಾವುಕತೆಯಲ್ಲಿ ಮೈಮರೆಸುತ್ತಾರೆ.

ದೈವಿಕತೆಯ ಹಾಡುಗಳು

ಗಣೇಶ ಚತುರ್ಥಿ ಮುಗಿದ ಮೇಲೆ ಹಳ್ಳಿಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಒಕ್ಕಲು ಮಕ್ಕಳು ಭಾದ್ರಪದ ಮಾಸದಲ್ಲಿ ಮಳೆಯಿಲ್ಲದೆ ಪೈರು ಒಣಗ ಹತ್ತಿದಾಗ ಜೋಕುಮಾರನ ಹಬ್ಬವನ್ನು ಆಚರಿಸುವುದು ರೂಢಿ. ಈ ಹಬ್ಬವನ್ನಾಚರಿಸಿದರೆ ಮಳೆಯಾಗುತ್ತದೆಂದು ನಂಬಿಕೆ. ಜೋಕುಮಾರನನ್ನು ಪುಟ್ಟಿಯಲ್ಲಿ ಕುಳ್ಳಿರಿಸಿಕೊಂಡು ಮನೆಗಳ ಮುಂದೆ ಹಾಡುಗಳನ್ನು ಹಾಡುತ್ತಾ ಹೋಗುತ್ತಾರೆ.

ಉದಾ:

ಅಡ್ಡಡ್ಡ ಮಳೆ ಬಡಿದು ದೊಡ್ಡೊಡ್ಡ ಕೆರೆ ತುಂಬಿ
ಗುಡ್ಡಗಳೆಲ್ಲಾ ಹೈನಾಗಿ | ಜೋಕುಮಾರ | ಗೌಡರ
ಸೆಡ್ಡಿಯ ಮ್ಯಾಲೆ ಸಿರಿಬಂದು | ಜೋಕುಮಾರ
ಹಾಸ್ಹಾಸಿ ಮಳೆ ಬಡಿದು ಬೀಸ್ಬೀಸಿ ಕೆರೆ ತುಂಬಿ
ಬಾಸಿಂಗದಂತಾ ತೆನಿಬಾಗಿ | ಜೋಕುಮಾರ | ಗೌಡರ
ರಾಸಿಯ ಮ್ಯಾಲೆ ಸಿರಿಬಂದು | ಜೋಕುಮಾರ
ಹೀಗೆ ಸಾಗುತ್ತದೆ. ಅವರ ಹಾಡುಗಳು