ಅರಳೆಲೆ ಬಸವನ ಹಾಡು

ಉತ್ತರ ಕರ್ನಾಟಕದ ಹೆಣ್ಣು ಮಕ್ಕಳು ಅರಳೆಲೆ ಬಸವನ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವು ಈ ಭಾಗದ ಕೃಷಿ ಮಹಿಳೆಗೆ ತುಂಬಾ ಪ್ರಮುಖವಾದ ಸಂಪ್ರದಾಯದ ಹಬ್ಬವಾಗಿದೆ. ಭೂಮಿ ತಾಯಿಗೂ ಬಸವಣ್ಣನಿಗೂ ತಮ್ಮ ಕೃತಜ್ಞತೆ ಸಲ್ಲಿಸಲು ಉತ್ತರ ಕರ್ನಾಟಕದ ಹೆಣ್ಣು ಮಕ್ಕಳು ಅರಳೆ ಬಸವ ಹಬ್ಬವನ್ನು ಆಚರಿಸುವ ಸಂಪ್ರದಾಯ ಈಗಲೂ ಈ ಭಾಗದಲ್ಲಿದೆ.

ಈ ಹಬ್ಬದ ವೈಶಿಷ್ಟ್ಯವೆಂದರೆ ಹೆಣ್ಣು ಮಕ್ಕಳ ಕೋಲಾಟ ಮತ್ತು ಬಸವನ ಪೂಜೆ ಹಾಡುಗಳು, ಹಬ್ಬದಲ್ಲಿ ಹಾಡುವ ಹಾಡುಗಳು ಮಕ್ಕಳ ಹಾಡುಗಳಂತೆ ಸರಳ ಸುಂದರ ಲಲಿತ ರಚನೆಯಾಗಿವೆ.

ಗೃಹಿಣಿಯ ಅಕ್ಕರೆ ಪದಗಳು

ಹೆಂಗಸರು ಹೆಚ್ಚಾಗಿ ಅನಕ್ಷರಸ್ಥರಾಗಿದ್ದರೂ ಗಂಡಸರು ಓದುತ್ತಿದ್ದ ಪುರಾಣ ಕಾವ್ಯಗಳನ್ನು ಕೇಳುತ್ತಿದ್ದರು, ಹರಿಕಥೆ ಕೇಳಲು ಆಸಕ್ತರಾಗಿದ್ದರು. ಸಂಪ್ರದಾಯನಿಷ್ಠೆ ಹೆಂಗಸರ ಕ್ಷೇತ್ರ ಮನೆಯ ಅಂಗಳಕ್ಕೆ ಸೀಮಿತವಾಗಿತ್ತು. ಅತ್ತೆ ಮಾವಂದಿರ ಸೇವೆ ಮಾಡಿ ಆರಾಧನ ಭಾವದಿಂದ ಪತಿದೇವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತ ಅತಿಥಿಗಳನ್ನು ಆದರದಿಂದ ಸತ್ಕರಿಸಿ ಮಕ್ಕಳನ್ನು ಪ್ರೀತಿಯಿಂದ ಲಾಲಿಸುವುದರಲ್ಲಿ ತಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದರು.

ಅತ್ತೆಗೂ ಮಾವನಿಗೂ ಪುತ್ರರಿಗೆ ಪುರುಷರಿಗೆ
ಅತಿಥಿಯಾಗಿ ಬಂದ ಬ್ರಾಂಬರಿಗೆ
ಸಂಭ್ರಮದಿಂದ ಉಣಬಡಿಸುವೆ |
ಉಂಡ ಭಕ್ತರಿಗೆಲ್ಲ ತಾಂಬೂಲಗಳ ಕೊಟ್ಟು
ಸಂಭ್ರಮದಿಂದ ಪತಿಯುಂಡ ಶೇಷವನು
ಸಂಭ್ರಮದಿಂದ ಸವಿದುಂಬೆ
ಸಂಜೆ ಕಸವನೆ ಗುಡಿಸ ಸಂಧ್ಯಾನ್ನೆಗ್ ನೀರಿಟ್ಟು
ಸಂಭ್ರಮದಿಂದ ಆಕಳ ಹಾಲ್ ಕರೆದು
ಮಂಗಳಾರತಿಗೆಂದು ಇಡುವೆನು..”

ಹೀಗೆ ತಮ್ಮ ದಿನಚರಿಯನ್ನು ಹೇಳುವ ಹೆಣ್ಣುಮಕ್ಕಳು “ಕಾಯಕವೇ ಕೈಲಾಸ”ವೆಂದು ನಂಬಿದ್ದರು. ಬಾಳುವ ಹೆಣ್ಣಿಗೆ “ಗೌರಿಶಂಕರರು ಬಂದು ಸ್ವರ್ಗದ ಬಾಗಿಲು ತೆಗೆಸೋರು” ಎಂದು ನಂಬುತ್ತಿದ್ದರು. ಪತಿಯೇ ಇಹಪರಸುಖ ಸಾಧನವೆಂದು ನಂಬಿ ಉಪವಾಸ ನೇಮನಿಷ್ಟೇಗಳಿಂದ ಪೂಜಾವ್ರತಾದಿಗಳ ನಾಚರಿಸುತ್ತ ಪತಿಯ ಆಯುರಾಭಿವೃದ್ಧಿಗಾಗಿ ಬೇಡುತ್ತಿದ್ದರು. ಇದಕ್ಕೆ ಸತಿ, ಸಾವಿತ್ರಿ, ಸೀತೆ, ಸತಿ ಅನಸೂಯ ಇವರುಗಳನ್ನು ಉದಾಹರಣೆಯಾಗಿ ನೋಡಬಹುದಾಗಿದೆ.

ಬ್ರಾಹ್ಮಣ ಸಮಾಜದ ಪದಗಳು

ಬ್ರಾಹ್ಮಣ ಸಮಾಜದಲ್ಲಿ ವಿಧವೆಯರ ಸ್ಥಾನ ಶೋಚನೀಯವಾಗಿತ್ತು. ಅವರ ಮುಖದರ್ಶನ ಅಮಂಗಳಕರ ಎಂದು ಭಾವಿಸಲಾಗುತ್ತಿತ್ತು. ಶುಭ ಸಮಾರಂಭಗಳಲ್ಲಿ ಭಾಗವಹಿಸಲು ಆಕೆಗೆ ಅವಕಾಶವಿರುತ್ತಿರಲಿಲ್ಲ. ಎಲ್ಲರಿಂದ ದೂರಸರಿದ ವಿಧವೆಯರ ‘ಮಡಿ’ ಎಂದು ಮನೆಯ ಮೂಲೆ ಹಿಡಿಯುತ್ತಿದ್ದರು. ತಾವು ಹಿಂದಿನ ಜನ್ಮದಲ್ಲಿ ಮಾಡಿದ್ದ ಪಾಪಫಲದಿಂದ ತಮಗೆ ವೈಧವ್ಯ ಪ್ರಾಪ್ತವಾಗಿದೆ ಎಂದು ನಂಬಿ ಮುಂದೆ ಸದ್ಗತಿ ದೊರಕಲೆಂದು ಹಾಡುಗಳ ಮೂಲಕ ಸದಾ ದೇವರನ್ನು ಧ್ಯಾನಿಸುತ್ತ ಕಾಲಕಳೆಯುತ್ತಾರೆ.

ಹಳೆಯ ತಲೆಮಾರಿನ ಬ್ರಾಹ್ಮಣ ಹೆಂಗಸರು ಸಂಪ್ರದಾಯದ ಹಾಡುಗಳನ್ನು ವಿಶೇಷವಾಗಿ ಹಾಡುತ್ತಾರೆ. ಬೆಳಿಗ್ಗೆ ಏಳುತ್ತಲೇ ಉದಯರಾಗ ಹಾಡಲು ಪ್ರಾರಂಭಿಸಿದರೆ, ಅಂಗಳ ಸಾರಿಸಿ ರಂಗವಲ್ಲಿ ಇಡುವಾಗ ಹಸೆಯ ಹಾಡು, ಮಡಿಯುಟ್ಟು ದೇವರ ಪೂಜೆ ಮಾಡುವಾಗ ದೈವ ಪರವಾದ ಹಾಡು, ಹಾಲು ಕರೆಯುವಾಗ ಆಕಳ ಹಾಡು, ಬೆಣ್ಣೆ ತೆಗೆಯುವಾಗ, ಮೊಸರು ಕರೆಯುವಾಗ ಹಾಡು ಹೀಗೆ ಕೆಲಸದೊಂದಿಗೆ ಹಾಡುಗಾರಿಕೆಯೂ ಸಾಗುತ್ತಿತ್ತು. ಗಂಡಸರು ಹೆಂಗಸರು ಒಟ್ಟಾಗಿ ಕಲೆತು ಕೆಲಸ ಮಾಡುವಾಗ ಒಬ್ಬರಿಗೆ ಬರುವ ಹಾಡನ್ನು ಮತ್ತೆ ಮತ್ತ ಹೇಳಿಸಿ ಅವರೊಂದಿಗೆ ದನಿಗೂಡಿಸಿ ಇತರರು ಕಲಿಯುತ್ತಾರೆ.

ಮುಕ್ತಾಯುಕ್ತ ಯಾವುದೊಂದರಿಯೇನು ರಾಮರಾಮ ಸತ್ಯಾಸತ್ಯ ಯಾವುದೊಂದರಿಯೆನು ರಾಮರಾಮ

ಭಕ್ತ ಜನರ ಕೈಲಿ ಕೇಳಿ ನಾ ಹೇಳುವೆ ರಾಮರಾಮ
ಆದಿಪುರಾಣದ ಸಾರದ ಕಥೆಯಿದು ರಾಮರಾಮ
ಭಾಗವತರ ಕೈಲಿ ಕೇಳಿ ನಾ ಹೇಳುವೇ ರಾಮರಾಮ

ಎಂದು ಹಾಡುವಲ್ಲಿ ಸಂಪ್ರದಾಯದಲ್ಲಿ ಪರಂಪರಾಗತವಾಗಿ ಮುಂದುವರಿದ ಹಾಡುಗಳಿವು ಎನ್ನುವುದರ ಸ್ಪಷ್ಟ ನಿದರ್ಶನ ಕಂಡುಬರುತ್ತದೆ.

ಮಹಿಳೆಯರ ಜೀವನದ ಪ್ರಮುಖ ಘಟ್ಟಗಳಲ್ಲಿನ ಪದಗಳು

ಜೀವನದ ಪ್ರಮುಖ ಘಟ್ಟಗಳಾದ ಬಾಲ್ಯ, ಯೌವ್ವನ, ಮದುವೆ, ಸಾವುಗಳಲ್ಲಿ ಮತ್ತು ಗುಂಪಿನ ಅನೇಕ ಪ್ರಮುಖ ಚಟುವಟಿಕೆಗಳಲ್ಲಿಯೂ ಜನಪದ ಗೀತೆಗಳನ್ನು ಹಾಡಲಾಗುತ್ತದೆ. ಜೋಗುಳದ ಹಾಡುಗಳು ಒಸಗೆಯ ಹಾಡುಗಳು ಮದುವೆಯ ಹಾಡುಗಳು ಮರಣದ ಸಮಯದಲ್ಲಿ ಹಾಡುವ ಹೊಗಳುವ ಪದಗಳು ಹೀಗೆ ಜೀವನದ ವಿವಿಧ ಘಟ್ಟಗಳಿಗೆ ಸಂಬಂಧಿಸಿದ ಹಾಡುಗಳಿವೆ.

ಈ ಹಾಡುಗಳು ಸಾಮಾನ್ಯವಾಗಿ ಹೆಂಗಸರ ಹಾಡುಗಳೆಂದೇ ಪ್ರಸಿದ್ಧವಾಗಿವೆ. ಜೀವನದುದ್ದಕ್ಕೂ ನೋವು, ತಿರಸ್ಕಾರ ಮತ್ತು ಅಪಮಾನಗಳಿಗೆ ಬಲಿಯಾದ ಸ್ತ್ರೀ ಹೃದಯವನ್ನು ಕುರಿತವಾಗಿವೆ. ಕೆಲವು ಗೀತೆಗಳಲ್ಲಿ ಅಪರಿಚಿತರೊಡನೆ ಕಾಲುನೂಕುವ ಹೆಣ್ಣಿನ ಭಾವನಾತ್ಮಕ ಪ್ರತಿಕ್ರಿಯೆಯಿದ್ದರೆ ಮತ್ತೆ ಕೆಲವು ಗೀತೆಗಳಲ್ಲಿ ಅವಳ ನೋವಿನ ಬದುಕಿನ ಚಿತ್ರಣವಿದೆ. ಸಹಾನುಭೂತಿಪರರಲ್ಲದ ಅತ್ತೆ ಮಾವಂದಿರು, ಮೂದಲಿಸುವ ನಾದನಿಯರು ಅವಳ ಬಾಳನ್ನು ತೊಡಕುಗೊಳಿಸಿದುದು ವರ್ಣನೆಯಿದೆ. ಹೆಣ್ಣು ತಾನು ಅಗಲಿ ಬಂದ ತವರಿನ ಬಗೆಗೆ ಚಿಂತಿಸುವ ಹಳಹಳಿಸುವ ಗೀತೆಗಳೂ ಇವೆ.

ಜೋಗುಳದ ಪದಗಳು

ಹೆಂಗಸರು ತೊಟ್ಟಿಲು ತೂಗುತ್ತಾ ಹಾಡಿ ಮಕ್ಕಳನ್ನು ಮಲಗಿಸುವ ಲಾಲಿ ಪದಗಳ ರೀತಿಯಲ್ಲಿಯೇ ಸಣ್ಣ ಮಕ್ಕಳನ್ನು ಆಡಿಸಲು ಬಳಸುವ ‘ದೂರಿಪದ’ಗಳು ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತವೆ. ಮಕ್ಕಳನ್ನು ತೊಡೆ, ಮಂಡಿ ಅಥವಾ ಪಾದದ ಮೇಲೆ ಕೂರಿಸಿ ಹಿಂದಕ್ಕೂ ಮುಂದಕ್ಕೂ ಮೆಲ್ಲಗೆ ತೂಗಾಡಿಸುತ್ತಾ ಹೇಳುವ ಪದಗಳೂ ಇವೆ. ಕಿವಿಗಳನ್ನು ತುಂಬುವ ನಾದದ ಇಂಪು ಮತ್ತು ಆ ಹಾಡಿನಲ್ಲಿ ಬಳಸಲಾಗುವ ಅಣ್ಣ, ಅಪ್ಪ, ಒಂದು, ಎರಡು, ನೀನು, ನಾನು ಮುಂತಾದ ಪರಿಚಿತ ಶಬ್ದಗಳನ್ನು ಕೇಳುವ ಕುತೂಹಲದಲ್ಲಿ ಮಗುವಿನ ಮನಸ್ಸು ಅರಳುತ್ತದೆ.

ದೂರಿ ದೂರಿ ದುಕ್ಕಲಮ್ಮ
ನಿನಗೆ ಎಷ್ಟು ಮಕ್ಕಳಮ್ಮ?
ದೂರಿ ದೂರಿ ದುಕ್ಕಲಮ್ಮ
ಕೇರಿ ಕೇರಿ ತಿರುಗಳಮ್ಮ
ದೂರಿ ಆಡೂಕೆ ಹೋಗಿ ದೂರಿ ದೂರಿ
ಅವಳು ದುರಾನೆ ತಂದ್ಲು ದೂರಿ ದೂರಿ
ಯಾರ್ಯಾಗೆ ತಂದ್ಲು ದೂರಿ ದೂರಿ
ಅವ್ರಪ್ಪನ್ಗೆ ತಂದ್ಲು ದೂರಿ ದೂರಿ
ಅವಳೇಳು ಬಳಗಾಕೆ ತಂದ್ಲು ದೂರಿ ದೂರಿ

ತಿಂಗಳು ಮಾವ ಎಂಬ ಮುದ್ದಾದ ಹೆಸರಿನಿಂದ ಚಂದ್ರನನ್ನು ಮಕ್ಕಳು ಕರೆಯುತ್ತಾರೆ. ಈ ತಿಂಗಳ ಮಾವನನ್ನು ನೋಡಿ ಬೆರಗಾಗದ ಮಕ್ಕಳಿಲ್ಲ. ಮಗು ಅಳುತ್ತಿರುವಾಗ ತಾಯಿ ಚಂದ್ರಮನನ್ನು ತೋರಿಸಿ ಪದ ಹೇಳಲು ತೊಡಗುತ್ತಾಳೆ. ಸುಂದರವಾದ ರಾತ್ರಿಯ ಆಕಾಶ, ಅಲ್ಲಲ್ಲಿ ಹರಿದಾಡುವ ಮೋಡಗಳು, ಅವುಗಳ ಮರೆಯಲ್ಲಿ ಅವಿತಾಡುವಂತೆ ಕಾಣುವ ಚಂದ್ರ, ಮಿನುಗುವ ಚುಕ್ಕಿಗಳು ಅದರ ಜೊತೆಗೆ ತಾನು ಕೇಳುತ್ತಿರುವ ಹಾಡಿನಲ್ಲಿ ಬರುವ ಚಿತ್ರಗಳಿಗಾಗಿ ಮಗು ಕತ್ತೆತ್ತಿ ಹುಡುಕುತ್ತಿರುತ್ತದೆ. ಅಷ್ಟು ಹೊತ್ತಿಗೆ ಹಾಡು ಮುಗಿಯುತ್ತಿದ್ದಂತೆಯೇ ‘ಚಕ್ಕಳಗುಳಿ’ ಇಟ್ಟು ನಗಿಸುತ್ತಾರೆ. ಆಗ ಮಗುವಿಗೆ ಆಗುವ ಆನಂದ ಹೇಳತೀರದು.

ಒಂದು ಸಲ ಈ ಅನುಭವವನ್ನು ಪಡೆದ ಮಕ್ಕಳು ಮತ್ತೆ ಮತ್ತೆ ಚಂದ್ರನನ್ನು ತೋರಿ ಹಾಡು ಹೇಳುವಂತೆ ಒತ್ತಾಯಿಸುತ್ತವೆ. ಕೊನೆಗೆ ತಾವೂ ಹಾಗೆ ಅನುಕರಿಸುತ್ತವೆ. ಮಕ್ಕಳು ಮತ್ತು ದೊಡ್ಡವರು ಕೂಡಿ ಆನಂದದಲ್ಲಿ ಮೈಮರೆಯುವ ಈ ಬಗೆಯ ಆಟಪಾಠಗಳು ತುಂಬ ಚೇತೋಹಾರಿಗಳಾಗಿವೆ.

ಮಕ್ಕಳಿಗೆ ತುಂಬ ಉಪಯುಕ್ತವಾದ ಶಿಶುಪ್ರಾಸಗಳು ಮನರಂಜನೆಯನ್ನು ಒದಗಿಸುತ್ತವೆ. ಅನೇಕ ಆಚರಣೆಗಳು ಮತ್ತು ನಂಬಿಕೆಗಳ ಹಳೆಯ ತುಣುಕುಗಳನ್ನು ಹೊತ್ತು ತರುತ್ತವೆ. ನಾನಾ ಜನಾಂಗಗಳ ಪ್ರಾರಂಭದ ಬದುಕನ್ನು ಪೂರ್ಣ ಅಧ್ಯಯನಕ್ಕೆ ಬೇಕಾದ ಹೇರಳ ಸಾಮಾಗ್ರಿ ಇಲ್ಲಿ ದೊರೆಯುತ್ತದೆ. ಅನೇಕ ಸರ್ವಕಾಲಿಕ ಸತ್ಯಗಳನ್ನು ಹುದುಗಿಸಿಕೊಂಡಿದೆ. ಈ ತೊದಲು ಮಕ್ಕಳ ಕಾವ್ಯ ಹಿಂದಿನಿಂದಲೂ ಮಕ್ಕಳು ಹೊತ್ತು ತರುತ್ತಿರುವ ಈ ಪದ್ಯಗಳು ತಮಾಷೆ ಮತ್ತು ಚಮತ್ಕಾರದ ಭರದಲ್ಲಿ ಆದ ರಚನೆಗಳು.

ಮಕ್ಕಳ ಭಾವನೆಗಳು ಅರಳಿ, ಹೊಸ ಸೃಷ್ಟಿಗೆ ಚೆಲುವಿಗೆ ಹಾತೊರೆಯುವ ಸಂದರ್ಭದಲ್ಲಿ ಬಂದ ಈ ಪದ್ಯಗಳು ಎಳೆಯ ಹಾಗೂ ತೆರೆದ ಮನಸ್ಸಿನ ಪ್ರಶ್ನೆಗಳ ಕೇಂದ್ರವಾಗಿವೆ.

ಕೋಲಾಟದ ಪದಗಳಲ್ಲಿ ಗಂಗೆ, ಗೌರಿ ಮತ್ತು ಶಿವನಿಗೆ ಸಂಬಂಧಪಟ್ಟ ಕತೆಗಳು ಹೆಚ್ಚಾಗಿವೆ. ದೀವಳಿಗೆಗೆ ತಂಗಿಯನ್ನು ಕರೆತರಲು ಬಂದು ಆಕೆಯ ಮೈಮೇಲಿನ ಒಡವೆಗಳಿಗೆ ಆಸೆಪಟ್ಟು ಅಣ್ಣನ ಕತೆ ಇದೆ. ಚಿಕ್ಕಂದಿನಿಂದ ಬೇರ್ಪಟ್ಟಿದ ತಂಗಿಯನ್ನು ಅರಿಯದೆ ಕಾಮಿಸಲು ಹೋದವನ ಕಥೆ ಇದೆ. ಈ ಕಥೆಗಳನ್ನು ಹಾಡಿನ ರೂಪದಲ್ಲಿ ಜನರ ಬಾಯಲ್ಲಿ ಹಾಸುಹೊಕ್ಕಾಗಿವೆ. ಅರ್ಜುನ, ಹನುಮಂತ ಮುಂತಾದ ಪೌರಾಣಿಕ ವ್ಯಕ್ತಿಗಳು, ಕಿತ್ತೂರು ಚೆನ್ನಮ್ಮನಂಥ ಇತಿಹಾಸ ಪ್ರಸಿದ್ಧ ಮಹಿಳೆ, ಅಳಿದುಹೋದ ಕೆಲವು ಪಾಳೆಯಗಾರರು ಕೋಲಾಟದ ಪದಗಳಲ್ಲಿ ಪದಗಳಲ್ಲಿ ಜೀವವನ್ನು ಪಡೆದಿದ್ದಾರೆ. ಬೆಟ್ಟಗುಡ್ಡಗಳ ನಡುವೆ ತಮ್ಮ ದನಕರುಗಳೊಡನೆ ಪ್ರತ್ಯೇಕವಾಗಿ ಹಟ್ಟಿಗಳಲ್ಲಿ ಬದುಕುವ ಗೊಲ್ಲರ ಹಾಡುಗಳು ತುಂಬ ವೈಶಿಷ್ಟ್ಯಪೂರ್ಣವಾಗಿವೆ.

ಒಸಗಿಯ ಪದಗಳು

ಒಸಗೆ ಹೆಣ್ಣಿನ ಬದುಕಿನಲ್ಲಿ ಒಂದು ಮಹತ್ವದ ಸಂದರ್ಭ. ಹೊಸ ಬದುಕಿಗೆ ಪದಾರ್ಪಣ ಮಾಡುವ ಸಂದರ್ಭ. ಆಕೆ ನೈರೆದಾಗ ಅನುಸರಿಸಲಾಗುವ ಸಂಪ್ರದಾಯಾಚರಣೆಗಳ ವರ್ಣನೆ ಒಸಗೆ ಹಾಡುಗಳಲ್ಲಿ ಕಂಡು ಬರುತ್ತದೆ.

ಮನೆಗೆಲಸವನ್ನು ಮಾಡುತ್ತಲೇ ಹೆಣ್ಣು ಒಸಗೆ ಶಾಸ್ತ್ರಾಚರಣೆಗಳಿಗೆ ಒಳಗಾಗಬೇಕಾದ ಸನ್ನಿವೇಶ ಬರುತ್ತದೆ. ಗುಡ್ಲು ಕೂರುವ ಶಾಸ್ತ್ರದ ಚಿತ್ರ ಹೀಗಿದೆ.

ಹತ್ತೆಮ್ಮೆ ಕರೆದು ಚಟ್ಟಿಗೆ ಹಾಲನು ಬಿಟ್ಟು
ಹಟ್ಟಿ ಮಕ್ಕಳಿಗೆ ಉಣಲಿಕ್ಕೆ ತಾಯಮ್ಮಿ
ಅತ್ತಿ ಗುಡಲಿಗೆ ನಡೆದಾಳೆ

ಗುಡ್ಲಿನಲ್ಲಿ ಕುಳಿತ ಹೆಣ್ಣನ್ನು ನೋಡಲು ನೆಂಟರಿಷ್ಟರು ಬರುತ್ತಾರೆ. ಆಗ ಹೆಣ್ಣು ನಾಚಿ ಮುದ್ದೆಯಾಗಿ ಗುಡ್ಲಿನ ಮೂಲೆಯಲ್ಲಿ ಕೂರುತ್ತಾಳೆ. ಹಾಗೆ ಮೂಲೆಯಲ್ಲಿ ಅವಿತು ಕುಳಿತ ಹೆಣ್ಣನ್ನು ಬಳಗದವರು ಮಾತನಾಡಿಸುವ ರೀತಿ ಇದು

ಅತ್ತಿ ಗುಡುಲಲ್ಲಿ ಅತ್ತತ್ತ ಇರುವೋಳೆ
ಇತ್ತತ್ತ ಬಾರೆ ಇದರೀಗೆ ನಾವು ತಂದ
ಕಾಯ ತುಂಬೇವು ಮಡಲಿಗೆ

ಹೀಗೆ ಈ ಹಾಡುಗಳು ಸಾಮಾಜಿಕ ನಡಾವಳಿ ರೀತಿ ನೀತಿಗಳನ್ನು ತುಂಬ ಸೊಗಸಾಗಿ ಪರಿಚಯಿಸುತ್ತವೆ.

ತವರು ಮನೆ ನೆನೆಯುವ ಪದಗಳು

ಹೆಣ್ಣು ಶಾರೀರಿಕ ರಚನೆಯಲ್ಲಿ ಗಂಡಿಗಿಂತ ಭಿನ್ನಳಾಗಿರುವ ಕಾರಣವೇ ದೊಡ್ಡದಾಗಿ ಅನೇಕ ರೀತಿ ಮಾರ್ಪಾಡುಗಳನ್ನು ತನ್ನ ಜೀವನದಲ್ಲಿ ಕಾಣಬೇಕಾಯಿತು. ಗಂಡಿಗೆ ಇರುವಷ್ಟು ಪ್ರಮಾಣದಷ್ಟು ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರವೇಶಿಸುವ ಅವಕಾಶ ಒದಗಲಿಲ್ಲ. ಇಂತಹ ಹೆಣ್ಣು ತನ್ನ ಅನುಭವಗಳಿಗೆ ಮಾತುಗಳ ರೂಪ ನೀಡುವ ಸಂದರ್ಭ ಬಂದಾಗ ಈ ಮಿತಿಗಳ ಒಳಗೂ ತನ್ನನ್ನು ಆವರಿಸಿರುವ ಸಂಗತಿಗಳನ್ನು ಅಚ್ಚುಕಟ್ಟಾಗಿ ಚಿತ್ರಿಸಿದ್ದಾಳೆ. ಹೆಣ್ಣು ದೊಡ್ಡವಳಾಗುತ್ತಿದ್ದಂತೆ ತನ್ನ ಆವರಣದಲ್ಲಿ ಹೆಚ್ಚಾಗಿ ಬಯಸುವ ತನ್ನ ತಾಯಿಯನ್ನು ನೆನೆಯುತ್ತಾಳೆ. ಮದುವೆಯಾಗಿ ಗಂಡನ ಮನೆಗೆ ಹೋದಮೇಲಂತು ತವರು ಮನಸ್ಸಿನ ಅದಮ್ಯ ಬಯಕೆಯಾಗಿ ಕಾಡುತ್ತದೆ. ತನ್ನನ್ನು ಧಾರೆಯೆರೆದು ಕೊಡುವಾಗ ಗಂಡನ ಮನೆಗೆ ಕಳಿಸುವಾಗ ಕಣ್ಣೀರು ತುಂಬಿಕೊಂಡಿದ್ದ ತಂದೆ, ತಾಯಿ, ಅಣ್ಣ. ಅಕ್ಕ, ತಂಗಿ, ತಮ್ಮ ಮುಂತಾದವರು ಕಣ್ಣಲ್ಲಿ ಮರೆಯದ ಚಿತ್ರವಾಗಿದ್ದಾರೆ. ತಾಯಿಯನ್ನು ಕುರಿತು ಈಕೆ ನಾನಾ ಬಗೆಯಲ್ಲಿ ಹಂಬಲಿಸುತ್ತಾಳೆ.

ತಂಗಾಳಿ ತೀಡಿದರೆ ತಂಗಳ ಬಿಸಿಯಾಯ್ತು
ಗಂಗಾದೇವಿ ನನ್ನ ಹಡದವ್ನ ನೆನೆದರೆ
ಮಾಸಿದ ತಲೆಯು ಮಡಿಯಾಯ್ತು

ಮದುವೆಗೆ ಸಂಬಂಧಿಸಿದಂತೆ ಎಲ್ಲ ಕಾರ್ಯಕ್ರಮಗಳಲ್ಲೂ ಗುಂಪು ಗುಂಪಾಗಿ ಸೇರಿದ ಹೆಂಗಸರು ಪದ ಹೇಳುತ್ತಾಳೆ. ಈ ಪದಗಳನ್ನು ಸೋಬಾನದ ಪದಗಳೆಂದು ಕರೆಯುತ್ತಾರೆ. ಒಂದು ವಾರದ ಮದುವೆಯೂ ಇದ್ದ ಕಾಲ ಇತ್ತು. ಇಂತಹ ಸಂದರ್ಭದಲ್ಲಿ ಇಡೀ ಊರೇ ಭಾಗವಹಿಸುತ್ತಿತ್ತು. ಶಿವಪಾರ್ವತಿಯ ಮದುವೆಗೆ ಸಂಬಂಧಿಸಿದ ಪದಗಳನ್ನು ಹೇಳುವ ಹೆಂಗಸರು ಇಲ್ಲಿನ ಹೆಣ್ಣು-ಗಂಡು ಕೂಡ ಅಷ್ಟೇ ಪ್ರಮಾಣದಲ್ಲಿ ಮುಖ್ಯರು ಎನ್ನುವ ಭಾವನೆ ಉಂಟು ಮಾಡುತ್ತಿದ್ದರು. ಮದುವೆಯ ಪ್ರತಿಯೊಂದು ಶಾಸ್ತ್ರದ ಸಂದರ್ಭದಲ್ಲೂ ಸೋಬಾನೆ ಪದಗಳನ್ನು ಹೆಂಗಸರು ಹಾಡುತ್ತಾರೆ.

ಮರಣ ಸಂದರ್ಭದಲ್ಲಿ ಹಾಡುವ/ಹೊಗಳುವ ಪದಗಳು

ಇವು ವ್ಯಕ್ತಿಯೊಬ್ಬ ತೀರಿಕೊಂಡಾಗ ಅವರ ರಕ್ತ ಸಂಬಂಧಿಗಳು ಶವದ ಮೇಲೆ ಬಿದ್ದು ಹೊರಳಾಡುತ್ತ ಎದೆಗುದ್ದಿಕೊಳ್ಳುತ್ತ ರಾಗಾಲಾಪ ಮಾಡುತ್ತ ಲಯಬದ್ಧವಾಗಿ ಹೇಳುವಂಥವಾಗಿವೆ. ಸಾವಿನ ಸಂದರ್ಭದಲ್ಲಿ ಮಾತ್ರ ಕೇಳಿಬರುವ ಈ ರಚನೆಗಳನ್ನು ಹಾಡುವುದರಲ್ಲಿ ಹೆಂಗಸರದ್ದೇ ಮೈಲುಗೈ. ಮೃತನ ಸಿದ್ಧಿ ಸಾಧನೆ ಧೈರ್ಯ ಸ್ಥೈರ್ಯಾದಿಗಳನ್ನು ನೆನೆದುಕೊಂಡು ರಾಗಾಲಾಪಗೈಯುತ್ತಾರೆ. ಸಾವು ಮಾನವ ಬದುಕಿನ ಕೊನೆಯ ಘಟ್ಟವಾದ್ದರಿಂದ ಆ ಸಂದರ್ಭದಲ್ಲಿ ಹಾಡುವ ಹೊಗುಳುವ ಪದಗಳಿಗೆ ವಿಶೇಷ ಮಹತ್ವವಿದೆ.

ಗಂಡನನ್ನು ಕಳೆದುಕೊಂಡ ಹೆಂಡತಿಯೊಬ್ಬಳು ಪ್ರಲಾಪಿಸುವ ಬಗೆ ಇಂತಿದೆ.

ಅಯ್ಯೋ ನನ ದೇವ್ರೆ ನಿಮುಗೇನು ಬಂದಿತಪ್ಪಾ
ಬಾಳ್ತೀನಂತ ಬಾಳೇನ ಹಾಕಿದ್ರಿ
ಬಾಳಗೊಡದೇ ಹೋದ ಯಮದೋನು
ಆದ ಅನ್ನಾಬಿಟ್ಟು ಕಾದ ನೀರು ಬಿಟ್ಟು
ನಮ್ಮನೆಲ್ಲಾ ಬಿಟ್ಟು ಮನೆಬಿಟ್ಟು ಹೋಗ್ತೀರಲ್ಲಾ ದೇವ್ರೋ
ನಮುಗಿನ್ಯಾರಪ್ಪಾ ದೇವ್ರೇ

ಮನಸ್ಸಿಗೆ ಬಂದಂತೆ ಹುಯ್ಲಿಡುವ ವಿಧವೆಯ ಗೋಳು, ಕಕ್ಕುಲತೆ, ನೋವು ಎಲ್ಲವು ಇಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿವೆ.

ವ್ಯಕ್ತಿಯೊಬ್ಬ ಸತ್ತಾಗ ಒಬ್ಬರು ಇನ್ನೊಬ್ಬರ ಕೊರಳು ಕಟ್ಟಿಕೊಂಡು ಅಳುವುದರಿಂದ ಪರಸ್ಪರರು ನೋವು ನಿರಾಶೆಯ ಭಾವಗಳನ್ನು ಹೊರಹಾಕಲು ಒಂದು ಮಾರ್ಗ ದೊರೆತು ದುಃಖದ ಭಾರವನ್ನು ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಮರಣದ ಸಂದರ್ಭದಲ್ಲಿ ಹಾಡುವ ಈ ರಚನೆಗಳು ಗಮನಾರ್ಹವಾಗಿವೆ.

ಹೀಗೆ ಕನ್ನಡದ ಜನಪದ ಗೀತಪ್ರಕಾರಗಳು ಅಸಂಖ್ಯವಾದವು; ವೈವಿಧ್ಯ ಪೂರ್ಣವಾದವು. ಅವುಗಳ ವಿವಿಧ ಪ್ರಯೋಜನಗಳು ಕನ್ನಡ ಜನ ಪದರ ಜೀವನ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಈ ಎಲ್ಲ ಗೀತ ಪ್ರಕಾರಗಳ ಸಾಹಿತ್ಯವೂ ಸಮಗ್ರವಾಗಿ ಸಂಗ್ರಹಗೊಂಡಾಗ ಕನ್ನಡ ಜನಪದಗೀತೆಗಳ ವಿಸ್ತಾರ, ವೈಭವ, ಸಮೃದ್ಧಿಗಳು ಗೋಚರವಾಗುತ್ತವೆ.

ಮಹಿಳೆ ಮತ್ತು ಪುರುಷರಿಗೆ ಸಂಬಂಧಿಸಿದ ಗಾದೆಗಳು

ಕೃಷಿಕರಲ್ಲಿ ಗಾದೆಗಳ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ. ಅದರಲ್ಲು ಮಹಿಳೆಯರ ಮೇಲಿನ ಗಾದೆಗಳು ಅವರ‍ ನಡೆ-ನುಡಿ ಆಚಾರ ವಿಚಾರಕ್ಕೆ ಸಂಬಂಧಿಸಿದ ಗಾದೆಗಳಾಗಿವೆ “ನಗುವೇ ಬಾಳು-ಅಳುವೇ ಗೋಳು” ಎಂಬ ನುಡಿಗುಚ್ಚದ ಯಥಾರ್ಥತೆಯನ್ನು ಸ್ವಾನುಭವದಿಂದ ಕಂಡುಕೊಂಡ ಗ್ರಾಮೀಣ ಜನ ತಮ್ಮ ಬಾಳಿನಲ್ಲಿ ನಗುವಿನ ಅಲೆಯನ್ನು ಹಾಸ್ಯದ ಕೋಲ್ಮಿಂಚನ್ನು ಸೃಷ್ಟಿಸಿ, ತೃಪ್ತಿಕರ ಬಾಳನ್ನು ಬದುಕಿದರೆಂಬುದು ಗಮನಾರ್ಹ. ಆ ಹಾಸ್ಯವೇ ಅವರ ಬಾಳಿನ ಬುತ್ತಿ, ಚೈತನ್ಯ ಶಕ್ತಿ.

ಶ್ರಮಿಕರರಾದ ಹಳ್ಳಿಗರು ಸ್ವಭಾವತ ರಸಿಕರು, ತಾವು ದುಡಿಯುವ ಸಂದರ್ಭಗಳಲ್ಲಿ ಆಡುವ ಸಹಜ ಮಾತಿನಲ್ಲಿ ಮಾತಿನ ವಿಶೇಷ ಸಂದರ್ಭಗಳಲ್ಲಿ, ಗಲಾಟೆಗಿಳಿದ ಪ್ರಸಂಗದಲ್ಲಿ ಹಾಸ್ಯಯಕ್ತ ಗಾದೆಗಳನ್ನು ಮಾತಿನ ಮಧ್ಯ ಅಡಕಗೊಳಿಸಿ ಔಚಿತ್ಯಪೂರ್ಣವಾಗಿ, ಬಳಸಿ ಹಾಸ್ಯದ ಹೊಳೆಯನ್ನೇ ಹರಿಸಿದ್ದಾರೆ.

ಅನುಭವಿಗಳಾದ ಹಿರಿಯರು ಮಾತು ಮಾತಿಗೆ ಗಾದೆ ಬಳಸುತ್ತಾರೆ. ಹರೆಯದ ಗಂಡು-ಹೆಣ್ಣುಗಳು ಅಶ್ಲೀಲದ ಸೊಗಡು ಹೊಂದಿದ ಗಾದೆಗಳನ್ನು ಬಳಸಲು ಹಿಂದೆ ಮುಂದೆ ನೋಡುವುದಿಲ್ಲ. ಹುಡುಗರು, ಕೆಲವೊಮ್ಮೆ ಮಕ್ಕಳು ಕೂಡ ಗಾದೆಗಳನ್ನು ಬಳಸುತ್ತಾರೆ.

ಗಾದೆಗಳನ್ನು ನಾವು ವಿಧಗಳಾಗಿ ವಿಂಗಡಿಸಬಹುದಾಗಿದೆ.

. ಸಾಂಸಾರಿಕ ಸಂದರ್ಭಗಳಲ್ಲಿಯ ಗಾದೆಗಳು

. ಸಾಮಾಜಿಕ ಸಂದರ್ಭಗಳಲ್ಲಿಯ ಗಾದೆಗಳು

೩. ಋತುಮಾನಕ್ಕನುಗುಣವಾದ ಗಾದೆಗಳು

೪. ವ್ಯಕ್ತಿಯ ಗುಣ-ದೋಷ ರೂಪ-ಸ್ಥಿತಿ-ಕುರಿತಗಾದೆಗಳು

. ಸಾಂಸಾರಿಕ ಸಂದರ್ಭಗಳಲ್ಲಿಯ ಗಾದೆಗಳು

ನಮ್ಮ ಹೆಣ್ಣು ಮಕ್ಕಳಲ್ಲಿ ಗುಟ್ಟುಗುಟ್ಟಾಗಿ ಉಳಿಯೋದು ಅಪರೂಪ, ತೀರ ವೈಯಕ್ತಿಕ ವಿಷಯಗಳಿದ್ದರೂ ಯಾವುದೇ ನಾಚಿಕೆ ಸಂಕೋಚಗಳಿಲ್ಲದೆ, ತನ್ನ ಗೆಳತಿಯ ಜೊತೆಯಲ್ಲಿ ಹೇಳಿ ಕೊಂಡಾಗಲೇ ಅವಳಿಗೆ ಸಮಾಧಾನವೆಂದು ತೋರುತ್ತದೆ. ತಮ್ಮ ತಮ್ಮ ಗಂಡಂದಿರ ದೈಹಿಕ ಬಲದ ಬಗ್ಗೆಯೂ ಮಾತನಾಡಿಕೊಳ್ಳುತ್ತಾರೆ. ಅವರಲ್ಲಿ ಒಬ್ಬಳು ‘ನಾಚಿಕೆ ಗೀಚಿಕೆ ಕಳೆದೊಗೆದಾಚೆಗೆ, ತನ್ನ ಗಂಡ ನೋಡೋದಕ್ಕೆ ಗಂಡೇ ಹೊರತು. ಆತನಲ್ಲಿ ಗಂಡಸತನವನ್ನು ತೋರ್ಪಡಿಸುವ ತಾಕತ್ತಿಲ್ಲವೆಂದು ಲೈಂಗಿಕ ವಿಷಯದಲ್ಲಿ ಆತನಿಂದ ಬಹಳಷ್ಟು ಅತೃಪ್ತಿ ಜಿಗುಪ್ಸೆ ತಾಳಿ ಮುಚ್ಚುಮರೆಯಿಲ್ಲದೆ, ಗಾದೆಗಳ ರೂಪದಲ್ಲಿ ಹೀಗೆ ಹೇಳುತ್ತಾಳೇ.

ಕಡಿಲಾರದ ಕತ್ತಿ ಕೈಯ್ಯಾಗಿದ್ರೇನಂತ, ಮಾಡಲಾರದ ಗಂಡ್ಸು ಮಗ್ಗಲದಾಗಿದ್ರೇನಂತ
ಏಳಲಾರದೋನ್ಗೆ ಏಳು ಜನ ಹೆಂಡ್ರು ಮೇಲೊಬ್ಬಳು ಸೂಳೆ ಎದ್ದು ಮಾಡ, ನಿದ್ದೇನೂ ಕೊಡ

ಹೀಗೆ ಗಂಡನನ್ನು ಕುರಿತು ಹೆಣ್ಣು ಅದೆಷ್ಟೆ ಧೈರ್ಯದಿಂದ ತನ್ನ ಸ್ವಂತದ ವಿಷಯವನ್ನು ತೋಡಿಕೊಂಡಿದ್ದಾಳೆ, ಇನ್ನೊಬ್ಬ ಗರತಿ, ಅತ್ಯಂತ ಸುಲಭದ ಕೆಲಸಕ್ಕೆ ಮುನ್ನುಗ್ಗುವ ತನ್ನ ಗಂಡನನ್ನು ತನ್ಮೂಲಕ ಆತನ ಪುರುಷ ಶಕ್ತಿಯನ್ನು ನಯವಾಗಿ ಗಾದೆಯ ಮೂಲಕ ಛೇಡಿಸಿದ್ದಾಳೆ, ಅದು “ಬಾಳೆದಿಂಡು ಕಡಿಯೋಕೆ ನನ್ನ ಗಂಡ ಗೂಳಿ ಹಾಗೇ” ಹಾಗೆಯೇ ಕೆಲವರ ಗಂಡಂದಿರು ಮನೆಯ ಹೊರಗಡೆಯೇ ತಮ್ಮ ದರ್ಪವನ್ನು ತೋರಿಸುತ್ತಾರೆ. ಮನೆಗೆ ಬಂದೊಡನೆ ‘ಅಮ್ರಾವ್ರ ಗಂಡ’ ನಾಗುತ್ತಾನೆ. ಇಂತಹವರಿಗೂ ಗಾದೆಗಳಿವೆ.

ಸಾವಿರ ಕುದರಿ ಸರದಾರ, ಮನೆಯ ಹೆಂಡತಿಗಿ ಪಿಂಜಾರ
ಗಂಡನ ಜುಟ್ಟ ಹೆಂಡತಿ ಕೈಯಲ್ಲಿ

. ಸಾಮಾಜಿಕ ಸಂದರ್ಭಗಳಲ್ಲಿಯ ಗಾದೆಗಳು

ದುಷ್ಟರ ಸಂಗದಲ್ಲಿ ಕೆಟ್ಟು ಹೋಗುವ ಸಂದರ್ಭವೊಂದನ್ನು ನವಿರಾದ ಹಾಸ್ಯದ ಮೂಲಕ ಚಿತ್ತಿಸುತ್ತದೆ. ಅದು ಹೀಗಿದೆ.

ಮಲಗಾಕೋಗಿ ಮಗ ಕೆಟ್ಟ
ಬೀಸಾಕೋಗಿ ಸೊಸೆ ಕೆಟ್ಳು

ಅಂತೆಯೇ ಹಳ್ಳಿಗಳಲ್ಲಿ ಎಲ್ಲರ ಮನೆಯಲ್ಲಿಯೂ ಎಲ್ಲ ಬಗೆಯ ಬೀಸುಕಲ್ಲುಗಳು ಇಲ್ಲದೇ ಇರಬಹುದು. ಅಂಥ ಸಂದರ್ಭದಲ್ಲಿ ಪಕ್ಕದ ಮನೆಗೆ ಬೀಸಲು ಹೋಗುವುದು ಹೆಣ್ಣುಮಕ್ಕಳಿಗೆ ಅನಿವಾರ್ಯ. ಮನೆಗೆ ಬಂದ ಸೊಸೆ ಮೇಲಿಂದ ಮೇಲೆ ಪರರ ಮನೆಗೆ ರಾಗಿ, ಜೋಳ ಇತ್ಯಾದಿ ಬೀಸಲು ಹೋಗುತ್ತಿದ್ದದ್ದನ್ನು ನೋಡಿದ ನೆರೆಯವರು ಸಂಶಯ ತಾಳದೇ ಇರುತ್ತಾರೆಯೇ ನಂತರ ಅವಳ ಶೀಲದ ಮೇಲೆ ಸಂಶಯ ಮೂಡಿ ಸಂಸಾರ ಹಾಳಾಗುತ್ತದೆ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲಗಾದೆಯನ್ನು ಗಮನಿಸಿದರೆ, ಜನಪದರ ಸಾಮಾಜಿಕ ಪ್ರಜ್ಞೆ ಲಘುಹಾಸ್ಯದ ಮುಖಾಂತರ ವ್ಯಕ್ತವಾದುದು ಕಂಡುಬರುತ್ತದೆ. ಬದುಕಿನಲ್ಲಿ ಕಾಲ ಸ್ಥಿರವಲ್ಲ ಎಂಬ ಎಚ್ಚರಿಕೆಯನ್ನು ತಮ್ಮ ಅನುಭವದ ಹಿನ್ನೆಲೆಯಲ್ಲಿ ಸ್ವಾರಸ್ಯಕರವಾಗಿ ಅಭಿವ್ಯಕ್ತಿಸಿದ್ದಾರೆ.

ಮಹಿಳೆಯರಿಗೆ ಸಂಬಂಧಿಸಿದ ಗಾದೆಗಳು

. ಅಶ್ವತ್ಥ ಪ್ರದಕ್ಷಿಣೆ ಹಾಕಿದ್ರೆ ಮಕ್ಕಳಾಗುತ್ತೇಂದ್ರ, ಒಂದು ಸುತ್ತು ಸುತ್ತಿ ಹೊಟ್ಟೆ ಮುಟ್ಟಿ ನೋಡಿಕೊಂಡ್ಲಂತೆ.

. ಅತ್ತಿ ಸೇಡ ಬಚ್ಚಲ್ದಾಗ

. ಅವಸರದಲ್ಲಿ ಅಜ್ಜಿ ಮೈನೆರೆದಳು

. ಅತ್ತೆಯ ತುರುಬ ಮಾವಗದಾಗ

. ಇತ್ತ ಬಾರಮ್ಮ ಅಂದ್ರ ಹೆಗಲಹತ್ತಿ ಕುಂಡ್ರಾಕಿ

ಒಂದು ತಲೆಗೆ ಒಂದ ತುರುಬ ಚೆಂದ

ಹೀಗೆ ಗಾದೆಗಳು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ದಿನ ನಿತ್ಯದ ಜಂಜಾಟದಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ.

ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬುದು ಸತ್ಯ ಏಕೆಂದರೆ ಮನುಷ್ಯನ ಅನುಭವದ ಮೂಲಕ ಸೃಷ್ಠಿಯಾದಂತವುಗಳಾಗಿವೆ.

ಗ್ರಾಮೀಣ ಮಹಿಳೆಯರ ಆಹಾರ ಪದ್ಧತಿ

ಮನುಷ್ಯನಿಗೆ ಜೀವಿಸಲು ಮುಖ್ಯವಾಗಿ ಗಾಳಿ, ನೀರು, ಆಹಾರ, ವಸತಿ ಬೇಕು ಇವುಗಳಲ್ಲಿ ಆಹಾರವೂ ಕೂಡ ಮುಖ್ಯವಾದದ್ದು. ಅದನ್ನು ಸಿದ್ಧಪಡಿಸುವುದು ಕೂಡ ಒಂದು ಕಲೆ ಎಂದೇ ಹೇಳಬಹುದು. ಅದರಲ್ಲೂ ವೈವಿಧ್ಯತೆ ಇದೆ. ಗ್ರಾಮೀಣ ಜನರು ಅದರಲ್ಲೂ ನಿಪುಣರು. ಸಾಮಾನ್ಯವಾಗಿ ಹೊಲ, ಹದ್ದೆಯ, ಬೇಸಾಯದ ಕೆಲಸದಲ್ಲಿ ಗಂಡಸರು ತೊಡಗಿದ್ದರೆ ಹೆಂಗಸರು ರಾಗಿ, ಬೀಸಿ, ಅಡುಗೆ ಮಾಡಿ ಹೊರಗಡೆ ದುಡಿಯುವ ಗಂಡಸರಿಗೆ ಬುತ್ತಿ ತೆಗೆದುಕೊಂಡು ಹೋಗುತ್ತಾರೆ. ಹೆಂಗಸರು ನಾನಾ ವಿಧವಾಗ ಅಡಿಗೆಗೆಳನ್ನು ಮಾಡಲು ಕಲಿತಿರುತ್ತಾರೆ. ಮಕ್ಕಳಿಗೊಂದು ಗರಹ, ಮಳೆಗಾಲದಲ್ಲೊಂದು ಬಸುರಿ ಬಾಣಂತಿಯರಿಗೆ ಒಂದೊಂದು ತರಹ, ಮಳೆಗಾಲದಲ್ಲೊಂದು ಬೇಸಿಗೆ ಸಮಯದಲ್ಲೊಂದು, ಉಳ್ಳವರ ಮನೆಯ ಊ          ಟ ಒಂದು ತರಹವಿದ್ದರೆ ಬಡವರ ಮನೆಯ ಊಟವು ಮತ್ತೊಂದು ತರಹವಿರುತ್ತದೆ. ಹರಕೆಯ ಎಡೆಯನ್ನು ದೇವರಿಗೆ ಒಪ್ಪಿಸಬೇಕಾದರೆ ಮಡಿ ಮೈಲಿಗೆ ವಿಷಯಗಳನ್ನು ಗಮನಿಸಬೇಕಾಗುತ್ತದೆ. ಜಾತ್ರೆ, ತೇರು, ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಹಳ್ಳಿಯವರೆಲ್ಲಾ ತರತರಹದ ಅಡಿಗೆ ಮಾಡಿರುತ್ತಾರೆ.

ಅಡುಗೆಯನ್ನು ಹಸಿ ಅಡುಗೆ ಮತ್ತು ಬಿಸಿ ಅಡಿಗೆ ಎಂದು ಎರಡು ವಿಧವಾಗಿ ವಿಂಗಡಿಸಬಹುದು. ಹಸಿ ತರಕಾರಿಗಳು, ಹಣ್ಣು ಹಾಲು, ಮೊಸರು, ಬೇಳೆಕಾಳು ಇವುಗಳನ್ನು ಬೆರೆಸಿ ಸಿದ್ಧಪಡಿಸಿದ ಅಡುಗೆಗೆ ಹಿಸ ಅಡುಗೆ ಎನ್ನಬಹುದು.

ಉದಾಹರಣೆಗೆ ಕೋಸಂಬರಿ, ರಸಾಯನ, ಹಸಿ ತಂಬಿಟ್ಟು ಮೊದಲಾದವುಗಳು, ಬಿಸಿ ಅಡುಗೆ ಎಂದರೆ ಪದಾರ್ಥಗಳನ್ನು ಹದವಾಗಿ ಪಕ್ವಗೊಳಿಸಿರುವುದು. ಉದಾಹರಣೆಗೆ ಪಾಯಸ, ಕಜ್ಜಾಯ, ಮೊಸರನ್ನು, ಎಳ್ಳುಂಡೆ, ಕರಿಗಡಬು, ಇನ್ನಿತರ ಖಾದ್ಯಗಳು ಹಳ್ಳಿಗಳಲ್ಲಿ ದೊರೆಯುವ ಕಾಳು ಬೇಳೆ, ಹಾಲು, ತುಪ್ಪ, ಹಣ್ಣು, ಕಾಯಿ, ಬೆಲ್ಲ ಮೊದಲಾದವುಗಳನ್ನು ಉಪಯೋಗಿಸಿ ನಾನಾ ಬಗೆಯ ರುಚಿಕರ ಅಡಿಗೆಯನ್ನು ನಾವು ಜಾನಪದ ಸಾಹಿತ್ಯದಲ್ಲಿ ಕಾಣಬಹುದು.

ಹಸಿ ಅಡುಗೆಗಳಾದ ಹಣ್ಣು ಹೂಗಳನ್ನು ತೆಗೆದುಕೊಂಡು ಹೋಗಿ ದೇವರಿಗೆ ಅರ್ಪಿಸಿ ಧನ್ಯಳಾಗುತ್ತಾಳೆ.

ಹಡಗೇಲಿ ಹಣ್ಯಾಯಿ, ಗಡಿಗೇಲಿ ಜೇನ್ತುಪ್ಪ
ಮಡಿಲಲ್ಲಿಟ್ಟೀವ್ನಿ ಹಿಡಿಧೂಪ | ಶಿವ ಶಂಭು
ಬಡವಿ ಬಂದಿವ್ನಿ ದಯೆ ತೋರೋ |

ಬಿಸಿ ಅಡುಗೆಗಳಾದ ಅನ್ನ, ಹುಗ್ಗಿ, ಸಾಂಬಾರು, ಕಡುಬು, ಹುಂಡಿ, ಹೋಳಿಗೆ, ಪಾಯಸ, ಪಲ್ಯ, ಮುಂತಾದವುಗುಳು.

ಹುಗ್ಗಿ ಹೊದಿವ್ನಿ | ಸಿದ್ಧರಿಗೆ ನೀಡಿವ್ನಿ
ಹುಗ್ಗಿಯಾ ಮೇಲೆ ಎರೆದುಪ್ಪ
ನೀ ಮುದ್ದು ಭೈರವ ಉಣ ಬಾರೋ |
ಪಾಯಸಾ ಕಾಸಿವ್ನಿ ಪಾತ್ರೆಗೇ ತಣಿಸಿನ್ನಿ |
ನೀ ಮಾತುಳ್ಲ ಜೋಗೀ ಉಣಬಾರೋ |

ಹೀಗೆ ಹಸಿ ಅಡುಗೆ ಮತ್ತು ಬಿಸಿ ಅಡುಗೆಗಳನ್ನು ಮಾಡಿ ಹಬ್ಬ ಹರಿದಿನಗಳಲ್ಲಿ ದೇವರಿಗೆ ನೈವೇದ್ಯ ಮಾಡಿ ಸಂಭ್ರಮಿಸುತ್ತಾರೆ.

ಜನಪದ ಆಹಾರ ಪದ್ಧತಿಯಲ್ಲಿ ದೈನಂದಿನ ಆಹಾರ ಮತ್ತು ವಿಶೇಷ ಸಂದರ್ಭಗಳ ಆಹಾರ ಎನ್ನುವ ವರ್ಗೀಕರಣವನ್ನು ಕಾಣುತ್ತೇವೆ. ದೈನಂದಿನ ಸಾಮಾನ್ಯ ಆಹಾರವನ್ನು ಊಟ ಎಂದು ವಿಶೇಷ ಸಾಂದರ್ಭಿಕ ಆಹಾರವನ್ನು ಔತಣ (ಭೋಜನ) ಎಂದು ಕರೆಯುವ ಪದ್ಧತಿ ಇದೆ. ಸಾಮಾನ್ಯವಾಗಿ ಊಟ ಎಂದಾಗ ಅಲ್ಲಿರುವ ದೈನಂದಿನ ಊಟದಲ್ಲಿ ಇರುತ್ತವೆ. ಔತಣ ಅಥವಾ ಭೋಜನ ಅಂದರೆ ಅಲ್ಲಿ ಅನೇಕ ವಿಶೇಷ ಆಹಾರಗಳು ಔತಣ ಆಥವಾ ಭೋಜನದಲ್ಲಿ ಇರುತ್ತವೆ.

ಉದಾ: ದೈನಂದಿನ ಆಹಾರದಲ್ಲಿ ಸಿಹಿತಿಂಡಿಯೋ ಪಾಯಸವೋ ಸೇರಿದರೆ ಅದು ಔತಣ. ಆರ್ಥಿಕ ಸಂಪನ್ನರ ಪಾಲಿನ ಔತನ ಬಹು ಸಂಖ್ಯೆಯ ವಿಶಿಷ್ಠ ತಿನಿಸುಗಳು ಭಕ್ಷಗಳ ಬೃಹತ್  ಪ್ರರ್ಶನವಾಗಬಹುದು. ಇಂತಹ ಔತಣಗಳಲ್ಲಿ ಆಹಾರ ವಸ್ತುಗಳು ಕೇವಲ ಸೇವನೆಯ ವಸ್ತುಗಳಷ್ಟೇ ಆಗದೆ ಅವು ಪ್ರದರ್ಶನದ ವಸ್ತುಗಳು ಆಗುತ್ತವೆ. ಶ್ರೀಮಂತೆಕೆ ಮತ್ತು ಅಂತಸ್ತನ್ನು ನಿರ್ಧರಿಸುವಲ್ಲಿ ಆಹಾರ ಕೂಡಾ ಒಂದು ಮುಖ್ಯ ಸಾಧನವಾಗಿ ಬಳಕೆಯಾಗಿದೆ. ಇಂದು ಈ ರೀತಿಯ ಬಳಕೆಯ ಪ್ರಮಾಣ ಅಧಿಕವಾಗಿದೆ.