ಗ್ರಾಮೀಣ ಪಾನೀಯ

ಗ್ರಾಮೀಣ ಪ್ರದೇಶದಲ್ಲಿ ಇನ್ನೊಂದು ಮುಖ್ಯ ಪಾನೀಯವೆಂದರೆ ಹಾಲು, ಹಸು, ಎಮ್ಮೆ, ಅಢು ಇಂತಹ ಪ್ರಾನಿಗಳಿಂದ ದೊರೆಯುವ ಹಾಲು ಆಹಾರವಾಗಿ ಮತ್ತು ಆರ್ಥಿಕ ಸಂಪನ್ಮೂಲವಾಗಿ ಒಂದು ಜನಪ್ರಿಯ ಮೂಲ ದ್ರವ್ಯ, ಹಾಗಾಗಿ ಹಾಲನ್ನು ಕುರಿತ ಗಾದೆಗಳು, ನಂಬಿಕೆಗಳು, ರೂಪಕಗಳು, ಜಾನಪದದಲ್ಲಿ ಬಹು ಪ್ರಮಾಣದಲ್ಲಿ ದೊರೆಯುತ್ತವೆ. ಗ್ರಾಮೀಣ ಮಹಿಳೆಯರು ಬೇರೆ ಊರುಗಳಿಂದ ಬಂದಂತಹ ಅಥಿತಿಗಳಿಗೆ ಹೊಲದಲ್ಲಿ ದಣಿದು ಬಂದವರಿಗೆ ಮನೆಯಲ್ಲಿ ಮೊದಲು ತಯಾರಿಸಿ ಕೊಡುವುದು, ಮಜ್ಜಿಗೆ, ಅಥವಾ ನಿಂಬು ಶರಬತ್ತು, ನೀರು ಮತ್ತು ಹಾಲು ತಮ್ಮ ಸಹಜ ರೂಪಗಳಲ್ಲಿ ಪಾನೀಯಗಳು. ಇವು ಇತರ ವಸ್ತುಗಳೊಂದಿಗೆ ಸೇರಿಯೂ ಅನೇಕ ರೀತಿಯ ಪಾನೀಯಗಳ ನಿರ್ಮಾಣಕ್ಕೆ ಆಕರ ಸಾಮಾಗ್ರಿಗಳಾಗುತ್ತವೆ. ಚಹಾ, ಕಾಫಿ, ಕಷಾಯ ಇತ್ಯಾದಿ ಈ ರೀತಿಯ ಪಾನೀಯಗಳನ್ನು ಮಿಶ್ರ ಮಾಡಿ ಹೊಸಪಾನೀಯಗಳನ್ನು ಸೃಷ್ಟಿಸುವ ಪ್ರಯೋಗಗಳನ್ನು ಮಹಿಳೆಯರು ಮಾಡಿಕೊಂಡು ಬಂದಿದ್ದಾರೆ, ಪರಸ್ಪರ ಬೆರೆಯುವ ಪ್ರವೃತ್ತಿಯನ್ನು ತಮ್ಮ ಬದುಕಿನ ಆರೋಗ್ಯಕರ ದೃಷ್ಟಿಯನ್ನಾಗಿ ಇಟ್ಟುಕೊಂಡ ಜನಪದರು ಆಹಾರ ಮತ್ತು ಪಾನೀಯಗಳ ಸಿದ್ಧತೆಯಲ್ಲೂ ಇದನ್ನು ಅನ್ವಯಿಸಿಕೊಂಡ ಮಿಶ್ರ ಆಹಾರಗಳ ಮತ್ತು ಮಿಶ್ರ ಪಾನೀಯಗಳ ಸೃಷ್ಟಿಗೆ ಕಾರಣವಾಗಿದ್ದಾರೆ.

ಪಾನೀಯಗಳ ಉಲ್ಲೇಖ ಮಾಡುವಾಗ ಜನಪದರು ಪರಂಪರಾಗತವಾಗಿ ಬಳಸುತ್ತಿದ್ದ ನೈಸರ್ಗಿಕ ಮೂಲದ ಕಳ್ಳು ಮತ್ತು ಅದರ ಸಂಬಂಧಿಯಾದ ಮರದ ಪಾನೀಯಗಳು ವಿಶೇಷ ಉಲ್ಲೇಖಕ್ಕೆ ಅರ್ಹವಾಗುತ್ತದೆ. ತಾಳೆ, ತೆಂಗು, ಬೈನೆ, ಈಚಲು ಹೀಗೆ ಬೇರೆ ಬೇರೆ ಸಸ್ಯಗಳಿಂದ ರಸಗಳನ್ನು ಉತ್ಪಾದಿಸಿ ಕೆಲವೊಮ್ಮೆ ಕೆಲವು ಪರಿಷ್ಕರಣಗಳ ಮೂಲಕ ಸೇವಿಸುವ ಬಹುಬಗೆಗಳು ಕರ್ನಾಟಕ ಸಂಸ್ಕೃತಿಯಲ್ಲಿ ದೊರೆಯುತ್ತವೆ.

ಬೇಸಿಗೆ ಸಂದರ್ಭದಲ್ಲಿ ದೇಹವನ್ನು ತಂಪಾಗಿ ಇರಲು ಯಾವ ರೀತಿಯ ಆಹಾರ ಉಪಯೋಗಿಸಬೇಕು ಹಾಗೆಯೇ ಚಳಿಗಾಲದಲ್ಲಿ ಯಾವ ಆಹಾರವನ್ನು ಉಪಯೋಗಿಸಿದರೆ ದೇಹಕ್ಕೆ ಉತ್ತಮ ಎಂಬುದನ್ನು ಗ್ರಾಮೀಣ ಮಹಿಳೆಯರಿಗೆ ಗೊತ್ತಿರುವ ಸಂಗತಿಯಾಗಿದೆ.

ಕೃಷಿ ಮಹಿಳೆಯರಲ್ಲಿ ಮನೆ ಮದ್ದು

ಸ್ಥಳೀಯ ಪ್ರಾಕೃತಿಕ ಪರಿಸರ ಮತ್ತು ಸಂಪ್ರದಾಯಗಳಿಗನುಸಾರವಾಗಿ ಜಗತ್ತಿನ ಎಲ್ಲಾ ಕಡೆಗಳಲ್ಲು ಜಾನಪದ ವೈದ್ಯದ ಮಹತ್ವವಿದೆ. ಮನೆ ಮಂದಿಗೆ ಬರುವ ಸಣ್ಣಪುಟ್ಟ ಕಾಯಿಲೆಗಳನ್ನು ತನ್ನ ಗಿಡಮೂಲಿಕೆಯ ಔಷಧಿಗಳಿಂದ ಮನೆಯ ಅಜ್ಜಿಯೇ ನಿವಾರಿಸುತ್ತಾಳೆ. ನಾರು ಬೇರುಗಳನ್ನು, ಗೆಡ್ಡೆ ಗೆಣಸುಗಳನ್ನೂ, ಎಲೆಗಳನ್ನೂ, ಕೆಲವು ಔಷಧೀಯ ಕಾಯಿಗಳನ್ನೂ ಕಾಡಿನಲ್ಲಿ ಬೆಟ್ಟಗಳಲ್ಲಿ ಸಂಗ್ರಹಿಸಿಟ್ಟುಕೊಂಡು ಬೇಕಾದಾಗ ಅವುಗಳನ್ನು ಒಣಗಿಸಿಯೋ, ಕುಟ್ಟಿ ಪುಡಿಮಾಡಿಯೋ, ನೀರಿಗೆ ಬೆರೆಸಿಯೋ ಕೊಡುತ್ತಾರೆ. ಕಷಾಯ, ಚೂರ್ಣ, ಇವುಗಳಿಂದ ಎಲ್ಲಾ ಖಾಯಿಲೆಗಳೂ ವಾಸಿಯಾಗುತ್ತದೆಂಬ ನಂಬಿಕೆ ಇದೆ. ಹೀಗೆ ಜಾನಪದ, ವೈದ್ಯವೊಂದು ಪ್ರಾಚೀನ ಕಲೆ.

ಮನೆಯವರೆಲ್ಲರ ಆರೋಗ್ಯವೂ ಗೃಹಿಣಿಯರ ಕೈಯಲ್ಲೇ ಇರುತ್ತದೆ. ರುಚಿ, ಶುಚಿ, ಪ್ರೀತಿ, ಆದರ, ಕರ್ತವ್ಯ, ಶ್ರಮಜೀವನ, ಇವುಗಳಿಂದ ಮಾಡಿ ಬಡಿಸಿದ ಅಡುಗೆ ಅಮೃತ ಸಮಾನವಾಗಿರುತ್ತದೆ. ಇದರ ಜೊತೆಗೆ ಕೆಲವು ಔಷಧೀಯ ಪಾಕಗಳನ್ನು ಕಲಿತಿರುತ್ತಾರೆ. ತಂಬುಳಿ, ಚಟ್ನಿ, ಸಾರು, ಗಂಜಿ, ಇವುಗಳಿಗೆ ಮೂಲಿಕೆ, ಬೇರು ಇವುಗಳನ್ನು ಬೆರಸಿ ಪಥ್ಯದ ಅಡುಗೆ ಮಾಡಿ ಮನೆಯವರ ಆರೋಗ್ಯವನ್ನು ಕಾಪಾಡುತ್ತಾರೆ. ಹೀಗೆ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಮನೆಯಾಕೆ ಆರೈಕೆ ಮಾಡಬೇಕು, ಅಜೀರ್ಣ, ಹೊಟ್ಟೆನೋವು, ಕೀಲುನೋವು, ತಲೆ ನೋವಿಗೂ ಮನೆ ಮದ್ದೇ ರಾಮ ಬಾಣ.

ಮಕ್ಕಳು ಆರೋಗ್ಯವಂತರಾಗಿ, ದೃಢಕಾಯರಾಗಿ ಬೆಳೆಯಲು ಪುಷ್ಟಿಕರವಾದ ಆಹಾರವನ್ನು ಕೊಡುವರು. ಹೀಗೆ ಮನೆಯ ಹಿರಿಯರೇ ಮನೆಯ ವೈದ್ಯರಾಗಿ ಕೆಲಸಮಾಡಿ ಮನೆಯ ಆರೋಗ್ಯವನ್ನು ಕಾಪಾಡುವರು.

ಮಹಿಳೆಯರು ಸೌಂದರ್ಯವರ್ಧನೆಗೆ ಗಿಡಮೂಲಿಕೆಗಳನ್ನೇ ಬಳಸುತ್ತಿದ್ದರು. ಅರಿಶಿಣ, ಚಂದನ, ಗೋರಂಜನ, ಕಸ್ತೂರಿ ಮೊದಲಾದವುಗಳನ್ನು ಹಚ್ಚಿಕೊಳ್ಳುತ್ತಿದ್ದರು.

ಮಹಿಳೆಯರ ಶೃಂಗಾರ ಹಾಗೂ ಆಭರಣಗಳು

ಗ್ರಾಮೀಣ ಮಹಿಳೆಯರು ಮತ್ತು ಪುರುಷರು ಅಲಂಕಾರ ಪ್ರಿಯರು ತಾವು ವಾಸಿಸುವ ಪರಿಸರದಲ್ಲಿ ದೊರೆಯುವ ವಸ್ತುಗಳನ್ನೇ ಉಪಯೋಗಿಸಿಕೊಂಡು ಶೃಂಗರಿಸಿಕೊಳ್ಳುತ್ತಾರೆ.

ಈ ಆಭರಣಗಳಲ್ಲಿ ಪುರುಷರ ಆಭರಣಗಳು, ಸ್ತ್ರೀಯರ ಆಭರಣಗಳು ಎಂದು ಎರಡು ವಿಧವಾಗಿ ವಿಂಗಡಿಸಬಹುದು. ಓಲೆ, ಕಡಗ, ಒಡ್ಯಾಣ, ಕಾಲ್ಬಳೆ, ಮೂಗುತಿ, ಅಡಿಕೆ, ಸರ, ಉಂಗುರ ಇವುಗಳು ಮುಖ್ಯವಾಗಿ ಹೆಂಗಸರ ಆಭರಣಗಳು.

ಬಳೆಗಳು ಮಹಿಳೆಯರಿಗೆ ಪ್ರಿಯವಾದ ಆಭರಣ ಅದರಲ್ಲಿ ಕೆಂಪು ಮತ್ತು ಕಪ್ಪು ಪಟ್ಟಿ ಬಳೆ ಮುತ್ತೈದೆಯರ ಕೈಯಲ್ಲಿ ಶೋಭಿಸುತ್ತದೆ. ಮದುವೆಗೆ ಮುನ್ನಾ ದಿನ ಮದುಮಗಳಿಗೆ ಹಾಗೂ ಅವಳ ಓರಗೆಯವರಿಗೆ ಬಳೆ ತೊಡಿಸುವ ಶಾಸ್ತ್ರವು ಪ್ರಚಲಿತದಲ್ಲಿದೆ.

ಹೆಣ್ಣು ಮಗಳೊಬ್ಬಳು ಬಳೆಗಾರ ಸೆಟ್ಟಿಯನ್ನು ಕರೆದು ತನ್ನ ತವರು ಮನೆಯ ಗುರುತನ್ನು ಹೇಳಿ ತನ್ನ ತಾಯಿಗೆ ಬಳೆ ತೊಡಿಸಿ ಬಾರೆಂದು ಕೇಳಿ ಕೊಳ್ಳುತ್ತಾಳೆ.

ಅಚ್ಚ ಕೆಂಪು, ಚಿಕ್ಕ ಹೂಗಳಾ
ಪಟ್ಟಿಯಾ ಬಳೆ ನನ್ನ ಹಡೆದವ್ವಗೆ
ಬಲು ಆಸೆ, ಬಳೆಗಾರ
ಕೊಂಡ್ಹೋಗೋ ನನ್ನ ತವರೀಗೆ

ಹಸಿರು ಬಳೆಯನ್ನು ಗರ್ಭಿಣಿ ಸ್ತ್ರೀಯರಿಗೆ ತೊಡಿಸುವ ಶಾಸ್ತ್ರವಿದೆ. ಮಗಳು ಅಥವಾ ಸೊಸೆ ಗರ್ಭಿಣಿಯಾದರೆ ಅವಳಿಗೆ ಹಸಿರು ಬಣ್ಣದ ಸೀರೆ ತಂದು ಬಳೆ ತೊಡಿಸಿ ಮುತ್ತಯದೆಯರಿಂದ ಆರ್ಶೀರ್ವಾದ ಮಾಡಿಸುತ್ತಾರೆ.

ಕಡಗ, ಅಡ್ಡಿಕೆ ಇವುಗಳನ್ನು ಇಟ್ಟುಕೊಳ್ಳುವುದು ಪ್ರತಿಷ್ಠೆಯ ಸಂಕೇತವಾಗಿದೆ. ಹೆಂಗಸರ ಕೊರಳಲ್ಲಿ, ಕಾಲಲ್ಲಿ, ಸೊಂಟದಲ್ಲಿ, ಕಿವಿಯಲ್ಲಿ ಹಾಕಿಕೊಂಡಿರುವ ಆಭರಣಗಳಿಂದ ಅವರ ಶ್ರೀಮಂತಿಕೆಯನ್ನು ಅಳೆಯುತ್ತಾರೆ. ಹೀಗೆ ಮಹಿಳೆಯರು ಅಲಂಕಾರ ಮಾಡಿಕೊಳ್ಳಲು ತಮಗೆ ಬೇಕಾದ ಆಕಾರ, ವಿನ್ಯಾಸಗಳಲ್ಲಿ ಒಡವೆಗಳನ್ನು ಮಾಡಿಸಿ ಹಾಕಿಕೊಳ್ಳುತ್ತಾರೆ.

ಗ್ರಾಮೀಣ ಮಹಿಳೆಯರ ಕ್ರೀಡೆಗಳು

ಮನುಷ್ಯನ ಜೀವನದಲ್ಲಿ ದುಡಿತ, ಅನ್ನ ಇವುಗಳಿಗೆ ಪ್ರಾಮುಖ್ಯತೆ ಇರುವಂತೆ ಆಟಪಾಠಗಳಿಗೂ ಮಹತ್ವವಿದ್ದರೆ ಚೆನ್ನ. ಗ್ರಾಮೀಣ ಪ್ರದೇಶದಲ್ಲಿ ಜನರು ಪ್ರತಿದಿನ ದುಡಿದು ಬೇಸತ್ತು ಹೋಗಿರುತ್ತಾರೆ. ಆದ್ದರಿಂದ ಅವರು ಹಬ್ಬಹರಿದಿನಗಳಲ್ಲಿ ಮನರಂಜನೆಗೋಸ್ಕರವಾಗಿ ಆಟಗಳನ್ನು ಆಡುತ್ತಾರೆ. ಈ ಆಟಗಳು ದೇಹಕ್ಕೆ ಶಕ್ತಿ ಹಾಗೂ ಮನಸ್ಸಿಗೆ ಮನರಂಜನೆ ನೀಡುತ್ತವೆ. ಇಂತಹ ಆಟಗಳನ್ನು ನಾಲ್ಕು ವಿಧವಾಗಿ ವಿಂಗಡಿಸಬಹುದು. ಅವುಗಳು ಈ ರೀತಿಯಾಗಿವೆ. ಹೊರಾಂಗಣ, ಒಳಾಂಗಣ, ಸ್ತ್ರೀಯರ ಆಟಗಳು ಹಾಗೂ ಪುರುಷರ ಆಟಗಳು.

ಸ್ತ್ರೀಯರು ಕೋಲಾಟ, ಹಳಗುಳಿಮಣೆ, ಗಿರಿಗಿಟ್ಟಲೆ, ಹುಲಿಕಲ್ಲು ಆಟ, ಪಗಡೆ, ಕಲ್ಲಾಟ, ಕವಡೆ, ಗಜ್ಜಗದಾಟ, ಕುಂಟೋಬಿಲ್ಲೆ, ಕಣ್ಣಾಮುಚ್ಚಾಲೆ, ಜೂಜಾಟ, ಟೋಪಿ ಆಟ, ಬೆಕ್ಕು ಇಲಿ ಆಟಗಳನ್ನು ಆಡುತ್ತಾರೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಈ ಹಬ್ಬವನ್ನು ಮಹಿಳೆಯರ ಹಬ್ಬವೆಂದೂ ಕರೆಯುತ್ತಾರೆ. ಈ ಹಬ್ಬಕ್ಕೆ ಗಂಡನ ಮನೆಗೆ ಹೋದ ಸ್ತ್ರೀಯರನ್ನು ತವರು ಮನೆಯವರು ಕರೆಸಿಕೊಳ್ಳುತ್ತಾರೆ. ಸ್ತ್ರೀಯರು ಹಾವಿನ ಹುತ್ತಕ್ಕೆ ಹಾಲೆರೆದು ಪೂಜೆ ಮಾಡುತ್ತಾರೆ. ನಂತರ ತರತರಹದ ಅಡುಗೆಯನ್ನು ಊಟ ಮಾಡಿ ಜೋಕಾಲಿ ಆಡಲು ಗುಂಪಾಗಿ ಹೋಗುತ್ತಾರೆ. ಈ ರೀತಿ ಗ್ರಾಮೀಣ ಪ್ರದೇಶದಲ್ಲಿ ಸ್ತ್ರೀಯರು ಕ್ರೀಡೆಗಳನ್ನು ಆಡಿ ಸಂತೋಷಪಡುತ್ತಾರೆ.

ಈಗ ಕ್ರೀಡೆಗಳ ಕ್ಷೇತ್ರದಲ್ಲಿಯೂ ಆಧುನಿಕತೆಯ ಗಾಳಿ ಬೀಸಿ ಈ ಆಟಗಳಿಗೆ ತೆರೆ ಬೀಳುತ್ತಾ ಇರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಜನರ ಮನೋಭಾವವೂ ಬದಲಾಗುತ್ತಾ ಬರುತ್ತಿದೆ.

ಮಹಿಳಾ ಕತೆಗಳಲ್ಲಿ ಮೌಲ್ಯಗಳು

‘ಮಹಿಳಾ ಕತೆ-ಸಾಹಿತ್ಯ’ ಅಂತ ಪ್ರತ್ಯೇಕಿಸಿ ನೋಡುವುದು ಲಿಂಗಭೇದ ಕಾರಣಕ್ಕಲ್ಲ. ಔದರ್ಯ ತೋರಿಸಲಿಕ್ಕಲ್ಲ. ಮಹಿಳಾ ಕತೆಗಳಿಗೆ ತನ್ನದ್ದೇ ಆದ ಒಂದು ಒಳನೋಟ ಇದೆ, ಒಳ ಸ್ವರೂಪ ಇದೆ. ತಿರುಮಲಾಂಬ, ಕಲ್ಯಾಣಮ್ಮ, ಕೊಡಗಿನ ಗೌರಮ್ಮ, ಸಾವಿತ್ರಮ್ಮ, ತ್ರಿವೇಣಿ, ಎಂ.ಕೆ.ಇಂದಿರಾ, ಅನುಪಮಾ ನಿರಂಜನ, ಮೊದಲಾದವರು ಹೆಣ್ಣಿನ ಒಳ ಚರಿತ್ರೆಯನ್ನು, ಒಳನೋವು, ತೊಳಲಾಟ, ನಿಟ್ಟುಸಿರು, ಅವ್ಯಕ್ತ ಮೌನಗಳನ್ನು ತಮ್ಮ ಕತೆಗಳಲ್ಲಿ ದಾಖಲಿಸಿದ್ದಾರೆ. ಕೌಟುಂಬಿಕ ಸಾಂಸಾರಿಕ ಕತೆಗಳೆಂದು ತೋರಿದರೂ, ಆಳದಲ್ಲಿ, ಸೂಕ್ಷ್ಮ ತುಳಿತವನ್ನು ಬೇರೆ ಬೇರೆ ರೀತಿಯಲ್ಲಿ ಹೇಳಲು ಹವಣಿಸಿದ್ದಾರೆ.

ಮಹಿಳಾ ಕತೆಗಳ ಮುಸುಗಿನಲ್ಲಿ ಹುದುಗಿಕೊಂಡ ಒಳ ಚರಿತ್ರೆಯನ್ನು ಗ್ರಹಿಸಲು ಬೇರೊಂದು ಭಿನ್ನವಾದ ಒಳ ಸೂಕ್ಷ್ಮದ ಒಳನೋಟ ಬೇಕಾಗುತ್ತದೆ. ಮಹಿಳೆಯ ಒಳಸ್ಥಿತಿಯನ್ನು ಒಳವಾಸ್ತವಿಕತೆಯನ್ನು ಗ್ರಹಿಸಲು ಚಾರಿತ್ರಿಕವಾದ ಒಂದು ಸ್ತ್ರೀಪರ ದೃಷ್ಟಿಕೋನ ಇರಬೇಕಾಗುತ್ತದೆ. ಮತ್ತು ಮಹಿಳಾ ಪ್ರಜ್ಞೆಯ ಒಳನೋಟವನ್ನು ಧ್ವನಿಸುವ ಸಲುವಾಗಿ ‘ಮಹಿಳಾ’ ಕತೆ ಅಂತ ಪ್ರತ್ಯೇಕಿಸಿ ನೋಡುವುದು ಸೂಕ್ತ ಎನಿಸುತ್ತದೆ.

ಈ ಹಿನ್ನೆಲೆಯಲ್ಲಿ ‘ಷೋಕೇಸಿನ ಗೊಂಬೆ’ ಎಂಬ ಕಥಾಸಂಕಲನವನ್ನು ಪರಿಶೀಲಿಸಿದಾಗ ಇದರಲ್ಲಿ ಕೌಟುಂಬಿಕ ಸಾಂಸಾರಿಕ ಚೌಕಟ್ಟು ಇದೆ. ಮನಕರಗಿಸುವ ಭಾವುಕ ಘಟನೆ ಸನ್ನಿವೇಶಗಳಿವೆ. ಇಲ್ಲಿನ ಎಲ್ಲಾ ಕಥೆಗಳಲ್ಲೂ ಸ್ತ್ರೀಯರ ಅಸಹಾಯಕತೆ, ಶೋಷಣೆ, ಸ್ಥಾನಮಾನ, ಗಂಡಸಿನಿಂದ ಆಗುತ್ತಿರುವ ಅನ್ಯಾಯ, ಅಪಚಾರ ಮತ್ತು ಅವಳು ಎದುರಿಸುತ್ತಿರುವ ಆರ್ಥಿಕ, ಸಾಮಾಜಿ, ಕೌಟುಂಬಿಕ ಸಮಸ್ಯೆಗಳು ಇವುಗಳ ಸುತ್ತ ಇಲ್ಲಿನ ಕಥೆಗಳ ಜಾಲ ವ್ಯಾಪಿಸಿಕೊಂಡಿದೆ.

ಸುಶೀಲಾ ದೇವಿಯವರ ಕತೆಗಳಲ್ಲಿ ವ್ಯಕ್ತವಾಗಿರುವ ಥರಾವರೀ ರೀತಿಯ ಮೌಲ್ಯಗಳು ಇಡೀ ಮಹಿಳಾ ಕಥಾ ಪರಂಪರೆಯಲ್ಲಿನ ನೆಲೆಗಳನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಬಹುದು. ಆದರೆ ನಿಜಸ್ಥಿತಿಯನ್ನು ಇದು ಮರೆಮಾಚಲಾರದು.

ಮಹಿಳಾ ಸಾಹಿತ್ಯದಲ್ಲಿ ತೆರೆದುಕೊಳ್ಳುವ ಪ್ರಪಂಚ ನಿಜವಲ್ಲ ಎಂದಲ್ಲ; ಹೆಣ್ಣು ಅನುಭವಿಸುವ ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳು, ಆತಂಕ-ತಲ್ಲಣ-ತಳಮಳಗಳು ಸೀಮಿತ ಎಂದಲ್ಲ; ಈ ಸಮಸ್ಯೆಗಳನ್ನು ಪರಿಭಾವಿಸುವ ನೆಲೆಯಲ್ಲಿ ವಸ್ತು ಧ್ವನಿಸುವ ಮೌಲ್ಯಗಳ ಬಗ್ಗೆ ಮತ್ತು ಈ ಮೌಲ್ಯಗಳು ತಲುಪುವ ಸ್ತರಗಳ ಬಗ್ಗೆ ಕೃತಿ ರಚನೆಯ ಸಂದರ್ಭದಲ್ಲಿ ಧ್ಯಾನಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಹೆಣ್ಣನ್ನು ಕುರಿತ ಪರಂಪರಾಗತ ಪುರುಷ ನಿರ್ಮಿತ ಮೌಲ್ಯಗಳನ್ನೇ ಎತ್ತಿ ಹಿಡಿಯುವ ಕೆಲಸ ಮಾಡಿದಂತಾಗುತ್ತದೆ. ಇದನ್ನು ಮಹಿಳಾ ಸಾಹಿತ್ಯ ಅಂತ ಹೇಗೆ ಕರೆಯಲಿಕ್ಕಾಗುತ್ತದೆ? ಹೆಣ್ಣಿನ ತ್ಯಾಗ, ನಿಯತ್ತು, ನಿಷ್ಠೆ, ಉದಾರತೆ, ಕ್ಷಮೆ, ಸಹನೆ, ಇತ್ಯಾದಿ ಮೌಲ್ಯಗಳ ವೈಭವೀಕರಣವು ಪುರುಷನ ಷೋಕೇಸಿನಲ್ಲಿಟ್ಟು ಗೊಂಬೆಗಳಾಗುತ್ತವೆಯೇ ಹೊರತು ಮಹಿಳಾ ಪ್ರಜ್ಞೆಯ ಒಳವಾಸ್ತವಿಕತೆಯನ್ನು ಮುಚ್ಚಿ ಹಾಕುತ್ತವೆ. ಆಶಾದಾಯಕ ಸಂಗತಿ ಎಂದರೆ; ಇಂಥ ಷೋಕೇಸಿನ ಗಾಜುಗಳನ್ನೊಡೆದು ಕೊಂಡು, ಸುಶೀಲಾದೇವಿ, ‘ಷೋಕೇಸಿನ ಗೊಂಬೆ’ ಕತೆಯಲ್ಲಿ ಮಹಿಳಾ ಪ್ರಜ್ಞೆಯನ್ನು ಜಾಗೃತಿಯನ್ನು ಮಹಿಳಾ ದೃಷ್ಠಿಕೋನವನ್ನು ಗ್ರಹಿಸುತ್ತಿದ್ದಾರೆ.

ಪೌರಾಣಿಕ ಕಥೆಗಳಲ್ಲಿ ಮಹಿಳೆಯರ ಸಹಾಸ ಪ್ರಸಂಗಗಳನ್ನು ನಾವು ನೋಡಬಹುದಾಗಿದೆ. ಅದರಲ್ಲೂ ಕಥೆಗಳಲ್ಲಿ ಬರುವ ಪಾತ್ರಗಳು ಗ್ರಾಮೀಣ ಪ್ರದೇಶದವರನ್ನು ಒಳಗೊಂಡಿರುತ್ತದೆ. ಕಾರಣ ಪ್ರತಿಯೊಂದು ಕಥೆಗಳು ಒಂದು ಹಳ್ಳಿ ಎಂಬುದರಿಂದ ಪ್ರಾರಂಭವಾಗುತ್ತದೆ. ಹಾಗಾಗಿ ಅನೇಕ ಸಾಹಸ ಮಯ ಕಥೆಗಳನ್ನು ನಾವುಗಳು ಮೌಖಿಕವಾಗಿ ಮತ್ತು ಬರಹ ರೂಪದಲ್ಲಿ ಇನ್ನೂ ಜೀವಂತವಾಗಿ ಉಳಿದುಕೊಂಡು ಬಂದಿವೆ.

ಏಳು ಸಮುದ್ರ ಅಳೆದ ನಾರಿ ಇದು ಅನೇಕ ರೀತಿಗಳಲ್ಲಿ ಹಿಂದಿನ ಕವನಕ್ಕೆ ವೈಷಮ್ಯರೂಪವಾಗಿದೆ. ಪಾಪದ ನಿವಾರಣೆ ಮಾಡಿಕೊಳ್ಳಲು ನಲ್ಲೆಯು ಗಂಡನು ಹೇಳಿದ ಹಾಗೆ ನಾಗರ ಪೂಜೆ ಮಾಡಿದಳು. ಆದರೂ ಪಾಪ ತೊಳೆಯಲಿಲ್ಲ. ಏಳು ಸಮುದ್ರ ಅಳೆಯಬೇಕು ಎಂದು ಅವನೆಂದಾಗ ಅದಕ್ಕೂ ಸಿದ್ಧಳಾಗಿ ತವರು ಮನೆಯಿಂದ ಚಿನ್ನದ ಕೊಳಗ ನಾರಾಯಣ ಸ್ವಾಮಿ ಅಚ್ಚರಿಯಿಂದ ಮನೆಗೆ ಬಂದು ಅದನ್ನು ಕೇಳಿ ಅವಳು ಯಾವ ತಾಯಿ ಹಡ್ದೆ ಮಗಳು? ಎಂದು ಕೇಳುತ್ತಾನೆ. ಅವಳು ನಮ್ಮ ಮಗಳೇ ಎಂದಳು ಅವಳು. ಆಮೇಲೆ ಏಳು ಸಮುದ್ರ ಅಳೆಯುತ್ತಿದ್ದ ಹೆಣ್ಣು ನೀರಿಗೆ ನೀರಾಗಿ ಹರಿಯುತ್ತಿದ್ದಳು. ನಾರಾಯಣಸ್ವಾಮಿ ನೀಲಿಯ ಕುಂಚ ಹಿಡಿದು ತಿರುಗಿಸಿ ಅವಳನ್ನು ಪುನಃ ಹೆಣ್ಣಾಗಿ ಮಾಡಿದನು. ಪಾಪನಿವಾರಣೆ ಮಾಡಿಕೊಳ್ಳುವುದು ಎಷ್ಟು ಕಷ್ಟದ್ದಾದರೂ ಈ ಕಥೆ ಹೇಳುತ್ತಿರುವಂತೆ ಕಾಣುತ್ತದೆ. ಈ ಅಸ್ವಾಭಾವಿಕವಾದ ಕಥೆಯಲ್ಲಿ ಪುರಾಣ ಸಂಕೇತವನ್ನು ಕಾಣುವ ಸಾಧ್ಯತೆಯುಂಟು. ಅವಳು ಸೂರ್ಯನ ಮಗಳು ಅವಳು ಏಳು ಸಮುದ್ರವನ್ನಳೆದು ಪುನಃ ಹುಟ್ಟಿ ಬರುವ ಕಥೆ ಸೂರ್ಯ ಮುಳುಗಿ ಪುನಃ ಉದಯವಾದ ಪುರಾಣ ಸಂಕೇತವಿರಬಹುದು. ಆದರೆ ಈ ಅರ್ಥ ಪದವನ್ನು ರಚಿಸಿದ ಮಹಿಳೆಗೆ ಹೇಳುವುದು ಅಸಾಧ್ಯವಾಗಿದೆ.

ಹೀಗೆ ಪ್ರತಿಯೊಂದು ಕಥೆಗಳು ಮಹಿಳೆಯರ ಧೈರ್ಯ ಸಾಹಸ ಮುಂತಾದ ಪ್ರಮಾಣಿಕತೆಗಳನ್ನು ನಾವುಗಳು ಅದರಲ್ಲಿ ನೋಡಬಹುದಾಗಿದೆ.

ಸ್ಥಳೀಯ ಚುನಾವಣೆಯಲ್ಲಿ ಕೃಷಿ ಮಹಿಳೆ

ಚುನಾವಣೆ ಬಂತೆಂದರೆ ಸಾಕು ಗ್ರಾಮೀಣ ಪ್ರದೇಶದಿಂದ ಹಿಡಿದು ನಗರ ಪ್ರದೇಶದಲ್ಲೂ ಅದರ ಜ್ವಾಲೆ ಹರಡುತ್ತದೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿಯೇ ಅತೀ ಹೆಚ್ಚು ರಾಜಕೀಯ ವೈಷಮ್ಯ ಇರುವುದನ್ನು ನಾವು ನೋಡಬಹುದಾಗಿದೆ. ಅದರಲ್ಲೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಹಳಷ್ಟು ಮಹಿಳೆಯನ್ನು ನಿಲ್ಲಿಸುವಂತ ಪ್ರಕ್ರಿಯೇ ಇದೆ. ಕಾರಣ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ. ೩೧ರಷ್ಟು ಮೀಸಲಾತಿ ಇರುವುದರಿಂದ ಪ್ರತಿಯೊಬ್ಬರು ಚುನಾವಣೆಯನ್ನು ಎದುರಿಸಲು ಸಿದ್ಧರಾಗುತ್ತಾರೆ.

ಚುನಾವಣೆಯ ನಂತರ ಅಧಿಕಾರ ಮತ್ತು ಆಡಳಿತ ಅವರ ಸಹೋದರರ ಕೈಗೋ ಅಥವಾ ತಮ್ಮ ಗಂಡಂದಿರ ಕೈಗಳಿಗೆ ವರ್ಗಾವಣೆಯಾಗುತ್ತದೆ. ಈ ದಿಶೆಯಲ್ಲಿ ಮಹಿಳೆಯರ ಆಡಳಿತ ಮತ್ತು ದಕ್ಷತೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಸನ್ನಡೆತೆ ಮತ್ತು ಪ್ರಾಮಾಣಿಕತೆ ಪುರುಷರಗಿಂತಲು ಹೆಚ್ಚಾಗಿ ಮಹಿಳೆಯರಲ್ಲಿ ಕಾಣಬಹುದು.

ಉದಾಹರಣೆಗೆ ಹೇಳಬೇಕಾದರೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ನಿರ್ವಾಹಕಿಯರು ಪುರುಷರಿಗಿಂತಲೂ ಅತಿ ಹೆಚ್ಚು ಲಾಭ ತಂದು ಕೊಟ್ಟಿದ್ದಾರೆ. ಹೀಗಾಗಿ ರಾಜಕೀಯದಲ್ಲಿ ಮಹಿಳೆಯರನ್ನು ಅತಿ ಹೆಚ್ಚು ತೊಡಗಿಸಿದಷ್ಟು ಅಭಿವೃದ್ಧಿಯ ಕಾರ್ಯಗಳು ಪ್ರಗತಿಯತ್ತ ಸಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಇತ್ತೀಚಿಗೆ ಸ್ಥಳೀಯ ಚುನಾವಣೆಗಳಲ್ಲಿ ಭಾಗವಹಿಸುವಿಕೆಯಿಂದಾಗಿ ಧರ್ಮದ ವಿಧಿಯಾಚರಣೆಗಳು ಮಂಕಾಗುತ್ತಿವೆಯೆನೋ ಎನಿಸುತ್ತಿವೆ. ಅವುಗಳನ್ನು ನೆರವೇರಿಸಲು ಅವರಿಗೆ ಸಮಯದ ಅಭಾವದ ಕಾರಣವೂ ಇದೆ. ಪುರುಷರು ತಮ್ಮ ಸ್ವಾರ್ಥ ಸಾಧನೆಗಾಗಿ ಮಹಿಳೆಯರನ್ನು ಮುಂದೆ ಇಟ್ಟು ತಾವು ಹಿಂದೆ ನಿಂತ ತಮ್ಮ ಕೈಗೊಂಬೆಗಳನ್ನಾಗಿಸಿ ಕೊಂಡಿದ್ದಾರೆ. ಚುಣಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದ ಮಹಿಳೆಯರು ತಾವು ಆಯ್ಕೆಗೊಂಡ ಯಾವುದೇ ಕಾರ್ಯ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಅಧೀನದಲ್ಲಿನ ಎಲ್ಲಾ ಸ್ಥಾನಗಳಲ್ಲೂ ಅವರ ಗಂಡಂದಿರು ಮತ್ತು ಮಕ್ಕಳ ಅಣತಿಯಂತೆ ಅವರು ಕೆಲಸ ಮಾಡಬೇಕಾಗುತ್ತದೆ. ಅವರ ಬದ್ಧತೆ ಕರ್ತವ್ಯಗಳನ್ನು ಅವರ ಅರಿವಿಗೆ ಬಾರದಂತೆ ಕಿತ್ತುಕೊಳ್ಳುತ್ತಿದ್ದಾರೆ. ಭ್ರಷ್ಟರನ್ನಾಗಿಸುತ್ತಿದ್ದಾರೆ. ಸ್ತ್ರೀಯರ ವ್ಯಕ್ತಿತ್ವ ಪ್ರಖರಗೊಳ್ಳುವ ಅವಕಾಶವೇ ಸಿಕ್ಕುತ್ತಿಲ್ಲ. ಮೊದಲೇ ಅವಿದ್ಯಾವಂತಳಾದ ಕೃಷಿ ಮಹಿಲೆ ತನ್ನ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವುದೂ ಕಾರಣವಾಗಿದೆ. ಎಲ್ಲ ಸ್ತರದ ಮಾನ್ಯತೆ ಅವರಿಗ ದೊರಕುತ್ತಿಲ್ಲ.

ಈ ವಿಷಯದಲ್ಲಿ ಸ್ತ್ರೀಯರು ಬಂಡಾಯವೆಂದಾಗ “ದುಡ್ಡು ಖರ್ಚು ಮಾಡಿ ಗೆಲ್ಲಿಸಿರುವವನು ನಾನು” ನಿನಗೆ ಅವಕಾಶ ಕೊಡಿಸಿರುವನು ನಾನು ಹೇಳಿದಂತೆ ಬಿದ್ದಿರು ಎಂಬ ಕಟು ನುಡಿಗಳನ್ನು ಎದುರಿಸಬೇಕಾಗುತ್ತದೆ.

ಪ್ರಸ್ತುತ ರಾಜಕೀಯದಲ್ಲಿ ಸ್ತ್ರೀಯರಿಗೆ ಹೆಚ್ಚಿನ ಅವಕಾಶಗಳಿದ್ದರೂ ಅವರ ಸಂಖ್ಯೆಯಲ್ಲಿ ಹೆಚ್ಚು ಇದ್ದರು ಅವರು ಪುರುಷ ತಾಳಕ್ಕೆ ತಕ್ಕಂತೆ ಕುಣಿಯಬೇಕಾಗುವುದು ಇಂದಿನ ದುರಂತವೇ ಸರಿ. ಕೃಷಿ ಕಾರ್ಮಿಕ ಮಹಿಳೆಯರು ಬದುಕನ್ನು ಅದರ ಎಲ್ಲ ಅಕರಾಳ ವಿಕರಾಳತೆಯೊಂದಿಗೆ ಒಪ್ಪಿಕೊಳ್ಳುವ ಮನಸ್ಥೈರ್ಯವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಬದಲಾಗದ ಬದುಕನ್ನು ತಾನು ಬದಲಾಗುವ ಮೂಲಕ ಎದುರಿಸುವ ತಾಕತ್ತನ್ನು ಮಹಿಳೆಯರು ಅಭಿವ್ಯಕ್ತಿಸುತ್ತಿದ್ದಾರೆ. ಇನ್ನು ಗೊಣಗುವುದರಲ್ಲಿ ಅರ್ಥವಿಲ್ಲವೆಂದು ವ್ಯಕ್ತಿನಿಷ್ಠತೆಗಿಂತ ಸಮೂಹ ನಿಷ್ಠತೆ ಇಲ್ಲ ಆಧ್ಯತೆ ಪಡೆಯುತ್ತ ಇದೆ. ತನ್ನದಲ್ಲದ ಬದುಕನ್ನು ಬದುಕುತ್ತಿರುವ ಹೆಣ್ಣು, ತನ್ನದಲ್ಲದ ಮಾತನ್ನು ಆಡಲು ಒತ್ತಾಯಿಸುತ್ತಿದ್ದಾಳೆ. ಅಧೀನ ಪ್ರಜ್ಞೆ ಹೆಣ್ಣಿನ ಭಾಷೆಯನ್ನು ಸಾಂಕೇತಿಕಗೊಳಿಸಿದೆ. ಸಂಕೀರ್ಣವಾಗಿದೆ. ದಿನನಿತ್ಯದ ಕೌಟುಂಬಿಕ ಬದುಕಿನಲ್ಲೂ ಮಹಿಳೆಯ ಮಾತು ಸುತ್ತು ಬಳಸಿನದಾಗಿರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಬೆಂಬಿಡದೆ ಕಾಡುತ್ತಿರುವ ಬರಗಾಲದಿಂದಾಗಿ ಗ್ರಾಮೀಣ ಬಡವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಕೃಷಿರಂಗದಲ್ಲಿ ರಾಶಿ ಮಾಡಲು, ಬೀಜ ಬಿತ್ತಲು ಕಟಾವು ಮಾಡಲು ಎಲ್ಲ ರಂಗದಲ್ಲೂ ಯಂತ್ರಗಳ ಪ್ರವೇಶದಿಂದಾಗಿ ಕೃಷಿ ಕಾರ್ಮಿಕ ಮಹಿಳೆಯರು ಬೀದಿಪಾಲಾಗಿದ್ದಾರೆ. ಇತ್ತೀಚಿನ ಆರ್ಥಿಕ ಸಮೀಕ್ಷೆಯೊಂದರ ಪ್ರಕಾರ ಹಳ್ಳಿಗಾಡಿನಲ್ಲಿ ನಿರುದ್ಯೋಗ ಪ್ರಮಾಣ ಶೇ.೭ ರಷ್ಟು ಹೆಚ್ಚಾಗಿದೆ.

ಸ್ಥಳೀಯವಾಗಿ ಬೆಳದು ಸ್ಥಳೀಯವಾಗಿ ಮಾರಾಟವಾಗುವ ಆಹಾರ ಧಾನ್ಯಗಳ ಕೃಷಿ ಪೂರೈಕೆ ಕಡಿಮೆಯಾಗುವುದಲ್ಲದೆ ಲಭ್ಯವಾಗುವ ಆಹಾರ ಧಾನ್ಯ ವಾಣಿಜ್ಯೀಕರಣಗೊಂಡಾಗ ಬೆಲೆಯು ದುಬಾರಿಯಾಗುತ್ತದೆ. ಕುಟುಂಬದ ಆಹಾರ ಬೇಡಿಕೆಯನ್ನು ಪೂರೈಸುವ ದಿಸೆಯಲ್ಲಿ ಹೆಚ್ಚು ಹೆಚ್ಚು ಅಸಹಾಯಕರಾಗುತ್ತೇವೆ. ವಾಣಿಜ್ಯೀಕರಣಗೊಂಡ ಕೃಷಿ ಚಟುವಟಿಕೆ ಅನೇಕ ವಿಧಗಳಲ್ಲಿ ಕೃಷಿಕರ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಬೆಲೆಗಳ ಪೋಷಣೆಗೆ ಅಗತ್ಯವಾದ ರಾಸಾಯನಿಕ ಗೊಬ್ಬರ ಅತ್ಯಂತ ದುಬಾರಿಯಾಗಿ ಅವನ್ನು ಬ್ಯಾಂಕ್‌ಗಳಲ್ಲಿ ಸಾಲ ಎತ್ತುವುದು ಆಧರಿಸುತ್ತದೆ. ಇವುಗಳಿಂದ ರೈತ ಸದಾಕಾಲವೂ ಅನಿಶ್ಚಿತತೆಯ ಅಸ್ಥಿರತೆಯ ಸುಳಿಯಲ್ಲಿ ಸಿಲುಕುತ್ತಾನೆ. ಅಲ್ಲದೆ ಸಾಲವನ್ನು ಮರುಪಾವತಿ ಮಾಡುವ ಶಕ್ತಿಯನ್ನು ಕಳೆದು ಕೊಳ್ಳುತ್ತಾನೆ. ಈ ವಿಷ ವರ್ತುಲದಲ್ಲಿ ನಲುಗಿದ ಕುಟುಂಬಗಳಲ್ಲಿನ ಹೆಣ್ಣಿನ ಮೇಲೆ ಆಗಾದ ಭಾರ ಬೀಳುವುದು ಖಚಿತ. ಇತ್ತೀಚೆಗೆ ವರದಿಯಾದ ಹತ್ತಿ ಕೃಷಿಕರ ಆತ್ಮ ಹತ್ಯೆಯ ಪ್ರಕರಣಗಳಿಗೂ ನಮ್ಮ ರಾಷ್ಟ್ರದ ಕೃಷಿ ಜಾಗತೀಕರಣ ನೀತಿಗೂ ಸಂಬಂಧವಿರುವುದನ್ನು ಕಡೆಗಣಿಸಬಾರದು.

ಜನಸಂಖ್ಯಾ ನಿಯಂತ್ರಣ ನೀತಿಗೆ ಪ್ರಪ್ರಥಮವಾಗಿ ಬಲಿಯಾಗುವ ವ್ಯಕ್ತಿ ಎಂದರೆ ಹೆಣ್ಣು. ಪ್ರಭುತ್ವ ಅವರ ಖಾಸಗಿ ಜೀವನಕ್ಕೆ ನುಗ್ಗಿ ಅವರ ಶರೀರಗಳನ್ನು ನಿಯಂತ್ರಿಸಲು ಹೇಸುವುದೇ ಇಲ್ಲ. ಇಂತಹ ಪವಿತ್ರ ಕಾರ್ಯದಲ್ಲಿ ದುಡಿಯುವ ವರ್ಗದ ಮಹಿಳೆ ಸಂಶಯಾಸ್ಪದವಾದ ತಂತ್ರಜ್ಞಾನಗಳಿಗೆ ಪ್ರಯೋಗ ಪ್ರಾಣಿಯಾಗುತ್ತಿರುವುದು ಇಂದಿನ ಕಟು ಸತ್ಯ.

ಕೃಷಿ ಮತ್ತು ಕೈಗಾರಿಕೆಯನ್ನೊಳಗೊಂಡ ಸಂಕೀರ್ಣ ಉದ್ಯಮವಾದ ರೇಷ್ಮೆ ಕೃಷಿ ಒಕ್ಕಲುತನದ ಮತ್ತೊಂದು ಅಂಗವಾಗಿದೆ. ಹೆಚ್ಚು ಬಂಡವಾಳವಿಲ್ಲದೆಯೇ ಸ್ಥಳೀಯವಾಗಿ ದೊರೆಯುವ ಸಲಕರಣೆಗಳನ್ನು ಬಳಸಿಕೊಂಡು ಕೈಗೊಳ್ಳಬಹುದಾದ ಉದ್ಯಮವಾಗಿದೆ. ಮಹಿಳೆಯರು ಹಿಪ್ಪು ನೇರಳೆ ವ್ಯವಸಾಯದಿಂದ ಹಿಡಿದು ರೇಷ್ಮೆ ಹುಳು ಸಾಕಣೆ, ರೇಷ್ಮೆ ನೂಲು ಬಿಚ್ಚುವುದು, ನೂಲು ಹುರಿ ಮಾಡುವುದು, ಸಿದ್ಧ ಉಡುಪುಗಳ ತಯಾರಿಸುವುದು, ಮಾರಾಟ, ಜಾಹಿರಾತು ಮುಂತಾದ ಕೆಲಸಗಳನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ.

ಕೌಟುಂಬಿಕ ಸ್ವಾವಲಂಬನೆಯನ್ನು ಗುರಿಯಾಗಿ ಹೊಂದಿರುವ ಗ್ರಾಮೀಣ ಮಹಿಳೆಯರು ಮತ್ತು ಬುಡಕಟ್ಟು ಮಹಿಳೆಯರು ನಿಸರ್ಗದೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದು ತಮಗೆ ಅಗತ್ಯವಾದ ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳು ಅರಣ್ಯ ಕಳೆದುಕೊಂಡು ಬೆತ್ತಲಾಗುತ್ತಿವೆ. ಗ್ರಾಮೀಣ ಮಹಿಳೆಯರು ಉಚಿತವಾಗಿ ಪಡೆಯುತ್ತಿದ್ದ ಸೌದೆ ಇಲ್ಲದಂತಾಗಿ ಸೀಮೆಎಣ್ಣೆಯ ಮೊರೆ ಹೋಗಬೇಕಾಗಿದೆ.

ವ್ಯವಸಾಯದಲ್ಲಿ ಮಹಿಳೆಯರ ಪಾತ್ರ ಅಪಾರವಾದದ್ದು. ಬೀಜ ಬಿತ್ತುವುದು, ಪೈರು ನಾಟಿ ಮಾಡುವುದು ಕಳೆ ಕೀಳುವುದು ನೇಗಿಲು ಹಿಡಿಯುವುದೊಂದನ್ನು ಬಿಟ್ಟು ಉಳಿದೆಲ್ಲಾ ಕೆಲಸಗಳನ್ನೂ ಮಹಿಳೆಯರು ನಿರ್ವಹಿಸುತ್ತಿದ್ದಾರೆ. ಕ್ರಮವಾಗಿ ಬಟ್ಟೆ ಒಗೆಯುವುದು, ನೀರು ಸಂಗ್ರಹಿಸುವುದು, ಕುಟುಂಬದ ನಿರ್ವಹಣೆ, ಸೌದೆ ತರುವುದು, ಮಕ್ಕಳ ಪಾಲನೆ ಮುಂತಾದ ಕೆಲಸಗಳಲ್ಲಿ ಮಹಿಳೆಯರು ತಮ್ಮ ಶ್ರಮವನ್ನು ವ್ಯಯಿಸುತ್ತಾರೆ.

ಕೃಷಿ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಮತ್ತೊಂದು ವರ್ಗವೆಂದರೆ ಕೃಷಿ ಕಾರ್ಮಿಕ ಮಹಿಳೆಯರು ವ್ಯವಸಾಯ ಕೂಲಿಯೇ ಇವರ ಜೀವನದ ಮಾರ್ಗೋಪಾಯವಾಗಿದೆ. ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಅವಸರದಲ್ಲಿ ಆಧುನಿಕ ಸುಧಾರಿತ ಕೃಷಿ ಉಪಕರಣಗಳಾದ ಟ್ರ್ಯಾಕ್ಟರ್, ಟಿಲ್ಲರ್, ಕಟಾವು ಮಾಡುವ ಯಂತ್ರ, ಭತ್ತದ ನಾಟಿ ಮಾಡುವ ಯಂತ್ರ ಮುಂತಾದ ಯಾಂತ್ರಿಕ ಉಪಕರಣಗಳ ಬಳಕೆಯಿಂದಾಗಿ ಈ ಮಹಿಳೆಯರು ಕೃಷಿಯಲ್ಲಿನ ತಮ್ಮ ಕೆಲಸಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ವರ್ಷಪೂರ್ತಿ ದುಡಿದರು ಅವರ ದುಡಿಮೆಗೆ ಸಿಗುವ ಪ್ರತಿಫಲ ಕಡಿಮೆ. ಸ್ತ್ರೀ-ಪುರುಷರಿಬ್ಬರೂ ಒಂದೇ ರೀತಿಯ ಸಮಾನ ಕೆಲಸ ನಿರ್ವಹಿಸಿದೂ ಮಹಿಳೆಯರು ಪುರುಷರಿಗಿಂತ ಕಡಿಮೆ ಕೂಲಿ ಪಡೆಯುತ್ತಾರೆ. ಇವರಿಗೆ ಕುಟುಂಬದ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದು ಕೊಳ್ಳುವ ಸ್ವಾತಂತ್ರ್ಯವಿಲ್ಲ.

ಮಹಿಳೆಯನ್ನು ಅಭಿವೃದ್ಧಿಯ ಫಲವನ್ನು ಪಡೆಯುವವಳು ಎಂದು ಪರಿಗಣಿಸಲಾಗುತ್ತದೆಯೇ ಹೊರತು ಅವಳನ್ನು ಉತ್ಪಾದಕಳೆಂದು ಗುರ್ತಿಸಲಾಗುವುದಿಲ್ಲ. ಕುಟುಂಬ ಹಾಗೂ ಸಮಾಜಕ್ಕೆ ಸಲ್ಲಿಸುತ್ತಿರುವ ಅವಳ ಸೇವೆಯನ್ನು ಕಡೆಗಣಿಸಲಾಗಿದೆ.

ಕೆಲಸಗಳನ್ನು ಹುಡುಕಿಕೊಂಡು ನಗರಗಳಿಗೆ ಧಾವಿಸುತ್ತಿರುವ ಗ್ರಾಮೀಣರಿಗೆ ಅಲ್ಲಿಯ ಉದ್ಯೋಗವಿಲ್ಲದೆ, ದುಡಿಯಲು ಪ್ರದೇಶಗಳಲ್ಲಿ ಕೊಳಚೆಗೇರಿಗಳನ್ನು ಸೃಷ್ಟಿಸುತ್ತಿದ್ದಾರೆ. ಕುಟುಂಬದ ನಿರ್ವಹಣೆ ಹೊತ್ತಿರುವ ಮಹಿಳೆಯರು, ಪುರುಷರಂತೆ ದೂರದ ಊರುಗಳಿಗೆ ಕೂಲಿ ಹುಡುಕಿಕೊಂಡು ಹೋಗಲಾರದೆ, ಇತ್ತ ಕೃಷಿಯೇತರ ಉದ್ಯೋಗಗಳೂ ಇಲ್ಲದಂತಾಗಿ ಕೃಷಿ ಕಾರ್ಮಿಕ ಮಹಿಳೆಯರು ಬೀದಿಪಾಲಾಗುತ್ತಿದ್ದಾರೆ.

ಮಹಿಳಾಭಿವೃದ್ಧಿ ಕಾರ್ಯಕ್ರಮಗಳು

ಅಭಿವೃದ್ಧಿಯ ಪ್ರಮುಖ ಗುರಿ ಎಂದರೆ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳಲ್ಲಿ ಸುಧಾರಣೆ ತಂದು, ಕ್ರಮೇಣ ಸಮಾಜದಲ್ಲಿ ಬಡತನವನ್ನು ನಿರ್ಮೂಲನೆ ಮಾಡುವುದೇ ಆಗಿದೆ. ಭಾರತ ದೇಶವು ಅಭಿವೃದ್ಧಿ ಹೊಂದಲೆಂದು ಸರ್ಕಾರವು ಅನೇಕ ಅಭಿವೃದ್ಧಿ ಪರ ಕಾರ್ಯಕ್ರಮಗಳಾದ ಗ್ರಾಮೀಣ ಭೂ ರಹಿತರಿಗಾಗಿ ಉದ್ಯೋಗ ಭರವಸೆ ಯೋಜನೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ, ಸಮಗ್ರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಜನರ ಸ್ಥಿತಿಯನ್ನು ಸುಧಾರಿಸಲು ರೂಪಿತವಾದವು.

ಈ ಮೇಲಿನ ಕಾರ್ಯಕ್ರಮಗಳನ್ನು ಅವಲೋಕಿಸಿದಾಗ ನಮಗೆ ತಿಳಿಯುವ ಸಂಗತಿಯೆಂದರೆ, ಮಹಿಳೆಯರನ್ನೂ ಅದರಲ್ಲೂ ಗ್ರಾಮೀಣ ಮಹಿಳೆಯರನ್ನು ಅದರಲ್ಲೂ ಗ್ರಾಮೀಣ ಮಹಿಳೆಯರನ್ನು ಕಡೆಗಣಿಸಲಾಗಿದೆ ಎನ್ನಬಹುದು.

ಯಾವುದೇ ಸಮಾಜ ಆಗಿರಬಹುದು, ಯಾವುದೇ ದೇಶ ಆಗಿರಬಹುದು ಇವು ಅಭಿವೃದ್ಧಿ ಹೊಂದಬೇಕಾದರೆ ಮಹಿಳೆಯರಿಗೆ ಸ್ಥಾನಮಾನ ನೀಡಬೇಕು. ದೇಶದ ಸರ್ವಾಂಗೀಣ ಪ್ರಗತಿಗಾಗಿ, ಗೃಹಿಣಿಯರಾಗಿ, ಭಾವಿ ಪ್ರಜೆಗಳನ್ನು ಹೊತ್ತು, ಹೆತ್ತು, ದೊಡ್ಡದು ಮತ್ತು ಅಮೋಘವಾದುದು. ಆದ್ದರಿಂದಲೇ ಅವರನ್ನು ಅಭಿವೃದ್ಧಿ ಪಠದಲ್ಲಿ ಹಾಕಿಕೊಂಡು ಮುಂದುವರೆಯುವ ಅವಶ್ಯಕತೆ ಇದೆ. ಇದರಲ್ಲಿ ಬರಿಯ ಅವರ ಪ್ರಗತಿ ಮಾತ್ರವಲ್ಲದೆ, ದೇಶದ ಪ್ರಗತಿ ಸಹ ಅಡಕವಾಗಿದೆ.

ಇತ್ತೀಚೆಗೆ ಮಹಿಳೆಯ ಸ್ಥಿತಿಗತಿಗಳನ್ನು ಕುರಿತು ನಡೆದ ಹಲವು ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಸಂಘ ಸಂಸ್ಥೆಗಳ ಶೃಂಗ ಸಭೆಗಳಲ್ಲಿನ ಚರ್ಚೆಗಳು ಮತ್ತು ಮಾನವ ಅಭಿವೃದ್ಧಿ ವರದಿಗಳು ಪುರುಷಾಶಾಹಿತ್ವದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಲಿಂಗ ತಾರತಮ್ಯಗಳಿಂದ ಅಂತರ್ಗತವಾಗಿರುವ ಮಹಿಳೆಯ ನಿಕೃಷ್ಟ ಬದುಕಿನ ಮಡಿಕೆಗಳನ್ನು ಬಿಚ್ಚಿ ಒಂದೊಂದಾಗಿ ಬಯಲಿಗೆಳೆದು ಸೂಕ್ಷ್ಮ ಹಾಗೂ ಸಂಕೀರ್ಣ ಸತ್ಯ ಸಂಗತಿಗಳನ್ನು ಬೆಳಕಿಗೆ ತಂದ ಪರಿಣಾಮದಿಂದಾಗಿ ಲಿಂಗತಾರತಮ್ಯಗಳ ಆಯಾಮ ಕುರಿತ ಅಧ್ಯಯನಗಳು ಚರ್ಚೆಯ ಮುಂಚೂಣಿಗೆ ಬಂದವು.

೧೯೭೦ರಲ್ಲಿ ಹೊರಬಂದ ಮಹಿಳೆಯರ ಸ್ಥಾನಮಾನ ಕುರಿತ ರಾಷ್ಟ್ರೀಯ ಆಯೋಗದ ವರದಿಯಂತೆ ಭಾರತೀಯ ಸಂವಿಧಾನದಲ್ಲಿ ಸ್ತ್ರೀಯರಿಗೆ ಸಮಾನತೆ ನೀಡಲಾಯಿತು. ಕೃಷಿ ಸುಧಾರಣೆ ಹಾಗೂ ಗ್ರಾಮೀಣ ಅಭಿವೃದ್ಧಿ ಕುರಿತ ವಿಶ್ವ ಸಮ್ಮೇಳನದಲ್ಲಿ ಕೃಷಿರಂಗದಲ್ಲಿನ ಮಹಿಳೆಯರ ದುಡಿಮೆಗೆ ಮಾನ್ಯತೆ ನೀಡಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅವರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಲಾಯಿತು. ಅಭಿವೃದ್ಧಿ ಪರಿಸರದಿಂದ ಮಹಿಳೆಯನ್ನು ಹೊರಗಟ್ಟಿದ್ದರಿಂದ ಉಂಟಾದ ನಷ್ಟದ ಸಂಪೂರ್ಣ ಅರಿವು ನೀತಿ ನಿರೂಪಕರ ಗಮನಕ್ಕೆ ಬಂದಿದ್ದು ಮಹಿಳೆಯರಿಗೆ ಆರ್ಥಿಕ ಶಕ್ತಿ ಒದಗಿಸಿ ಸ್ವಾವಲಂಬಿಯಾಗುವಂತೆ ಮಾಡುವಲ್ಲಿ ಹಾಗೂ ಅವರು ಅಭಿವೃದ್ಧಿಯ ಫಲದಿಂದ ನುಸುಳಿ ಹೋಗದಂತೆ ಮಾಡುವಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಯಿತು.

ಐದನೆ ಪಂಚವಾರ್ಷಿಕ ಯೋಜನೆಯಲ್ಲಿ ಮಹಿಳೆಯರನ್ನು ಉತ್ಪಾದನಾ ಅಂಗವೆಂದು ಪರಿಗಣಿಸಿದರೆ ಹಲವು ಆಯಾಮಗಳಿಂದ ಕೂಡಿದ ಆರನೆ ಯೋಜನೆ ಮಹಿಳೆಯರ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಿತು. ಏಳನೆಯದರಲ್ಲಿ ಸಶಂಕ್ತೀಕರಣಕ್ಕೆ ಸವಲತ್ತುಗಳನ್ನೊದಗಿಸಿ, ಎಂಟನೆ ಯೋಜನೆ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಮಹಿಳೆಯರನ್ನು ಸಮಾನ ಭಾಗಿದಾರರನ್ನಾಗಿ ಪರಿಗಣಿಸಲಾಯಿತ್ತು.

ಪಂಚವಾರ್ಷಿಕ ಯೋಜನೆಗಳ ಸತತ ಕಳಕಳಿಯ ಸಾಮಾಜಿಕ ನ್ಯಾಯದೊಡನೆ ಆರ್ಥಿಕ ಬೆಳವಣಿಗೆ ಸಾಧಿಸಲು, ಕೃಷಿ ಮತ್ತು ಅದರ ಆಧಾರಿತ ವಲಯಗಳಲ್ಲಿ ಮಹಿಳೆಯರನ್ನು ತೊಡಗಿಸಿಕೊಂಡು ಅಭಿವೃದ್ಧಿಯ ಜೊತೆ ಜೊತೆಗೆ ದೇಶದ ಆಹಾರ ಬೇಡಿಕೆಯನ್ನು ಪೂರೈಸಿಕೊಳ್ಳಲು ಕೃಷಿ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಯಿತು.

ಗ್ರಾಮೀಣ ಅರ್ಥವ್ಯವಸ್ಥೆಯ ಬೆನ್ನಲುಬಾದ ಕೃಷಿ ಮತ್ತು ಪಕ್ಕೆಲುಬುಗಳಾದ ಪಶುಪಾಲನೆ, ರೇಷ್ಮೆ ಕೃಷಿ, ಮೀನುಗಾರಿಕೆ, ಕೋಳಿಸಾಕಾಣಿಕೆ, ಅರಣ್ಯೀಕರಣ ಕಾಮಗಾರಿಕೆ ಮುಂತಾದ ವಲಯಗಳಲ್ಲಿ ಉದ್ಯೋಗಾವಕಾಶಗಳನ್ನು ವಲಯಗಳನ್ನು ಗುರುತಿಸಿ ಕೃಷಿ ಉತ್ಪಾದನೆ ಹೆಚ್ಚಿಸುವ ದಿಕ್ಕಿನಲ್ಲಿ ಅಗತ್ಯವಾದ ಜಮೀನು, ಸಾಲ ಸೌಲಭ್ಯ, ತಾಂತ್ರಿಕ ತರಬೇತಿ, ಮುಂತಾದ ಸಂಪನ್ಮೂಲ ಸೇವಾ ಸವಲತ್ತುಗಳನ್ನು ಒದಗಿಸಲಾಗಿದೆ. ಸರ್ಕಾರವು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಇದರಲ್ಲಿ ಹೆಣ್ಣು ಮಕ್ಕಳಿಗೆ ಸ್ವಯಂ ಸೇವಕರ ಮೂಲಕ ಹೊಲಿಗೆ ತರಬೇತಿ, ಕಸೂತಿ ಕೆಲಸ, ಸಂಗೀತ, ಚಿತ್ರಕಲೆ ಕಲಿಸುವ ಸೌಲಭ್ಯ ಒದಗಿಸಲಾಗಿದೆ. ಇದರಿಂದ ಮುಂದೆ ಹೆಣ್ಣು ಮಕ್ಕಳು ಮನೆಯಲ್ಲಿ ಕುಶಲ ಕಲೆಗಳನ್ನು ಮಾಡಿಕೊಂಡು ಜೀವನ ನಡೆಸಲು ಅನುಕೂಲವಾಗುತ್ತದೆ.