ಶ್ರೀ ರಾಮಕೃಷ್ಣ ಪರಮಹಂಸರು ಜನಸಾಮಾನ್ಯಕ್ಕೆ ಮಾರ್ಗದರ್ಶನ ಮಾಡಿದ ಮಹಾ ಜ್ಞಾನಿಗಳಲ್ಲಿ ಒಬ್ಬರು. ವಿವೇಕಾನಂದರು ಇವರ ಶಿಷ್ಯರಲ್ಲಿ ಪ್ರಮುಖರು. ಪರಮಹಂಸರಿಗೆ ಅಷ್ಟೇನೂ ವಿದ್ಯಾಭ್ಯಾಸ ಆಗಿರಲಿಲ್ಲ. ಅವರು ತಮ್ಮ ಶಿಷ್ಯರೊಂದಿಗೆ ಸಹಜವಾಗಿ ಮಾತನಾಡುತ್ತಿದ್ದಾಗ, ಆಡುತ್ತಿದ್ದ ಮಾತುಗಳಲ್ಲಿ ಅವರ ಜ್ಞಾನ, ಅವರ ಚಿಂತನೆ ಬೆಳಗುತ್ತಿದ್ದವು, ಆದರೆ ಅವರು ಯಾವ ಪುಸ್ತಕವನ್ನೂ ಬರೆಯಲಿಲ್ಲ!

ಪರಮಹಂಸರ ಮಾತುಕತೆಗಳಲ್ಲಿ ಬಹು ಭಾಗವನ್ನು ನಮಗೆ ಉಳಿಸಿಕೊಟ್ಟವರು ಅವರ ಒಬ್ಬ ಶಿಷ್ಯರು. ಈತ ಶ್ರಮವನ್ನು ಲಕ್ಷಿಸದೆ, ಬೇಸರ ಪಡದೆ ಗುರುಗಳು ತನ್ನ ಎದುರಿಗೆ ಆಡಿದ ಮಾತುಗಳನ್ನು ಬರೆದಿಟ್ಟರು. ಅಷ್ಟೇ ಅಲ್ಲ ತಾವಿಲ್ಲದಾಗ ನಡೆದ ಮಾತುಕತೆಗಳನ್ನು ಅಲ್ಲಿದ್ದವರನ್ನು ಕೇಳಿ ಬರೆದರು. ಇವೆಲ್ಲ ಸೇರಿ ನೂರಾರು ಪುಟಗಳಾದವು. ಇದನ್ನು ’ಶ್ರೀರಾಮಕೃಷ್ಣ ಕಥಾಮೃತ’ ಎಂಬ ಹೆಸರಿನಲ್ಲಿ ಬಂಗಾಳಿ ಭಾಷೆಯಲ್ಲಿ ಪ್ರಕಟಿಸಿದರು. ಇದೇ ಪುಸ್ತಕ ಇಂಗ್ಲೀಷ್ ಭಾಷೆಗೆ ಅನುವಾದವಾಗಿ ’ದಿ ಗಾಸ್ಪೆಲ್ ಆಫ್ ಶ್ರೀರಾಮಕೃಷ್ಣ’ ಎಂದು ಪ್ರಕಟವಾಗಿದೆ; ಪ್ರಪಂಚದ ಹಲವು ದೇಶಗಳ ವಿದ್ವಾಂಸರು ಇದನ್ನು ಮೆಚ್ಚಿಕೊಂಡಿದ್ದಾರೆ. ಈ ಪುಸ್ತಕ ’ಶ್ರೀ ರಾಮಕೃಷ್ಣ ವಚನವೇದ’ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಪ್ರಕಟವಾಗಿದೆ.

ಲೋಕವಿಖ್ಯಾತಿ ಪಡೆದಿರುವ ಈ ಕೃತಿಯನ್ನು ಬರೆದಿರುವವರು “ಮ”. ಅವರ ನಿಜವಾದ ಹೆಸರು ಮಹೇಂದ್ರನಾಥ ಗುಪ್ತ. ಇವರು ಶ್ರೀ ರಾಮಕೃಷ್ಣರ ಆಪ್ತಶಿಷ್ಯ, ಪಂಡಿತ, ಶಿಕ್ಷಣ ತಜ್ಞ. ತನ್ನ ಪೂಣ್ ಹೆಸರು ಪ್ರಪಂಚಕ್ಕೆ ಗೊತ್ತಾಗಬಾರದೆಂದು ಅವರ ಅಪೇಕ್ಷೆ. ಎಲೆಗಳ ಮರೆಯ ಹೂವಿನಂತೆ ಇರಬೇಕೆಂಬುದು ಅವರ ಬಯಕೆ. ರಾಮಕೃಷ್ಣರ ಶಿಷ್ಯ ಬಳಗದಲ್ಲಿ ಅವರು “ಮಾಸ್ಟರ್ ಮಹಾಶಯ” ಎಂದು ಹೆಸರಾಗಿದ್ದರು.

ಬಾಲ್ಯ

ಮಹೇಂದ್ರನಾಥನ ಜನನ ೧೮೫೪ನೇ ಜುಲೈ ೧೪ರಂದು, ಕಲ್ಕತ್ತೆಯ ಷಿಮೊಲಿಯ ಪ್ರದೇಶದ ಶಿವ ನಾರಾಯಣ ದಾಸಗಲ್ಲಿಯ ಮನೆಯೊಂದರಲ್ಲಿ ಆಯಿತು. ಅಂದು ಶುಕ್ರವಾರ, ನಾಗರ ಪಂಚಮಿ.

ಅವನ ತಂದೆ ಮಧುಸೂದನ ಗುಪ್ತ. ತಾಯಿ ಸ್ವರ್ಣಮಯಿದೇವಿ. ಇವರು ಸರಳ ಸ್ವಭಾವದವರು, ಧರ್ಮಶ್ರದ್ಧೆಯುಳ್ಳವರು, ಮಹಾದೈವ ಭಕ್ತರು, ಶಿವನ ಆರಾಧಕರು. ಮಧುಸೂದನ ಗುಪ್ತರು ಕಲ್ಕತ್ತದ ಉಚ್ಚ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ನಾಲ್ಕು ಮಂದಿ ಗಂಡು ಮಕ್ಕಳು ಮತ್ತು ನಾಲ್ಕು ಮಂದಿ ಹೆಣ್ಣು ಮಕ್ಕಳು. ಇವರಲ್ಲಿ ಮಹೇಂದ್ರನಾಥ ಮೂರನೆಯವನು.

ಮಹೇಂದ್ರನಾಥ ತನ್ನ ನಾಲ್ಕನೆ ವಯಸ್ಸಿನಲ್ಲಿ ತಾಯಿಯೊಂದಿಗೆ ದಕ್ಷಿಣೇಶ್ವರಕ್ಕೆ ಹೋಗಿದ್ದ. ದಕ್ಷಿಣೇಶ್ವರ ರಾಮಕೃಷ್ಣರು ಇದ್ದ ಸ್ಥಳ. ಅವರ ದರ್ಶನಕ್ಕಾಗಿ ಬೇಕಾದಷ್ಟು ಜನ ಅಲ್ಲಿಗೆ ಬರುತ್ತಿದ್ದರು. ಮಹೇಂದ್ರನಾಥ ಜನ ಸಂದಣಿಯಲ್ಲಿ ತಾಯಿಯಿಂದ ತಪ್ಪಿಸಿಕೊಂಡ. ದೇವಸ್ಥಾನದ ಅಂಗಳದಲ್ಲಿ ಒಬ್ಬನೇ ಆಳುತ್ತಿದ್ದಾಗ ಒಬ್ಬರು ಬಂದು ಮಗುವನ್ನು ಮೈದಡವಿ ಸಮಾಧಾನ ಮಾಡಿ “ಯಾರ ಮಗು ಇದು? ಇದರ ತಾಯಿ ಎಲ್ಲಿ?” ಎಂದು ಕೇಳಿದ ರಂತೆ ಬಹುಶಃ ಅವರೇ ರಾಮಕೃಷ್ಣರಿರಬಹುದೆಂದು ಅನಂತರ ಮಹೇಂದ್ರನಾಥನು ಹೇಳುತ್ತಿದ್ದನು.

ಪ್ರತಿಭಾವಂತ ವಿದ್ಯಾರ್ಥಿ

ಪಾಠಶಾಲೆಯೊಂದರಲ್ಲಿ ಮಹೇಂದ್ರನಾಥನ ವಿದ್ಯಾಭ್ಯಾಸ ಆರಂಭವಾಯಿತು. ಶಾಲೆಯಲ್ಲಿ ಮಹೇಂದ್ರನಾಥನು ಗುರುಗಳ ಪ್ರೀತಿಗೆ ಹೆಚ್ಚು ಪಾತ್ರನಾಗಿದ್ದ. ಕೆಲವು ಸಾರಿ ಗುರುಗಳೇ ಮನೆಗೆ ಬಂದು ಮಹೇಂದ್ರನಾಥನನ್ನು ಶಾಲೆಗೆ ಎತ್ತಿಕೊಂಡು ಹೋಗುತ್ತಿದ್ದರು. ಕಲ್ಕತ್ತೆಯ ಹ್ಯಾರಿ ಶಾಲೆಯಲ್ಲಿ ಬಾಲಕನ ವ್ಯಾಸಂಗ ಮುಂದುವರಿಯಿತು. ಮಹೇಂದ್ರನಾಥ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ತನ್ನ ದಿನಚರಿಯನ್ನು ಬರೆಯಲು ಆರಂಭಿಸಿದ. ಯಾರೊಬ್ಬರ ಸಲಹೆ ಇಲ್ಲದೆ ಸ್ವಪ್ರೇರಣೆಯಿಂದಲೇ ಈ ಕೆಲಸ ಆರಂಭಿಸಿದ. ಹಳೆಯ ದಿನಚರಿ ಪುಸ್ತಕದಲ್ಲಿ ಒಂದು ಕಡೆ ಈ ರೀತಿ ಬರೆದಿದ್ದ : “ಈ ದಿನ ಬೆಳಗ್ಗೆ ಎದ್ದ ಕೂಡಲೇ ತಂದೆ ತಾಯಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ”. ಇನ್ನೊಂದು ಕಡೆ “ಈ ದಿನ ನಾನು ಶಾಲೆಗೆ ಹೋಗುವಾಗ ಎಂದಿನಂತೆ ಕಾಳಿಮಂದಿರವನ್ನು ಸಂದಿರ್ಶಿಸಿದೆ.” ದಿನಚರಿ ಬರೆಯುವ ಈ ಅಭ್ಯಾಸವೇ ಮುಂದೆ “ಶ್ರೀ ರಾಮಕೃಷ್ಣ ಕಥಾಮೃತ” ಸೃಷ್ಟಿಗೆ ಕಾರಣವಾಯಿತು.

ಮಹೇಂದ್ರನಾಥ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಬ್ರಹ್ಮ ಸಮಾಜದ ಮುಖಂಡ ಕೇಶವಚಂದ್ರ ಸೇನರ ಪ್ರಭಾವಕ್ಕೆ ಒಳಗಾದ.

ಮಹೇಂದ್ರನಾ ಕಾಲೇಜು ವಿದ್ಯಾಭ್ಯಾಸಕ್ಕೆ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದ. ಬಿ.ಎ. ಪರೀಕ್ಷೆಯಲ್ಲಿ ಮೂರನೇ ರ‍್ಯಾಂಕ್ ಗಳಿಸಿದ. ಆತನಿಗೆ ಜ್ಞಾನಾರ್ಜನೆಯಲ್ಲಿ ಎಷ್ಟು ಆಸೆ, ಚಿಕ್ಕವಯಸ್ಸಿನಲ್ಲೆ ಎಷ್ಟು ಓದಿದ್ದ ಎಂದು ಕಂಡಾಗ ಆಶ್ಚರ್ಯವಾಗುತ್ತದೆ. ಅರ್ಥ, ನ್ಯಾಯಶಾಸ್ತ್ರಗಳನ್ನು ಅಧ್ಯಯನ ಮಾಡಿದ. ಯಾಜ್ಞವಲ್ಕ್ಯ, ಬೃಹಸ್ಪತಿ ಮತ್ತಿತರ ಋಷಿಗಳು ಪ್ರಾಚೀನ ಭಾರತದಲ್ಲಿ ಉಪದೇಶಿಸಿದ್ದನ್ನು ಓದಿದ. ಪಾಶ್ಚಿಮಾತ್ಯ – ತತ್ವಶಾಸ್ತ್ರ, ಸಾಹಿತ್ಯ, ಇತಿಹಾಸ ಮುಂತಾದುವುಗಳಲ್ಲಿ ಪಾಂಡಿತ್ಯ ಗಳಿಸಿದ. ಸಂಸ್ಕೃತದಲ್ಲಿ ಪುರಾಣ, ಕಾವ್ಯ, ವ್ಯಾಕರಣ ಹಾಗೂ ಪ್ರಾಚೀನ ಸಾಹಿತ್ಯ ಓದಿದ. ಕಾಳಿದಾಸ ಕವಿ ಅವನಿಗೆ ಬಹು ಮೆಚ್ಚು. ಭಾರತೀಯ ತತ್ವಶಾಸ್ತ್ರ, ಜೈನ, ಬೌದ್ಧರ ಧರ್ಮಗ್ರಂಥಗಳನ್ನು, ಆಯುರ್ವೇದ, ಜ್ಯೋತಿಷ್ಯ ಶಾಸ್ತ್ರಗಳನ್ನು ಅಧ್ಯಯನ ಮಾಡಿದ. ಹೆಸರಾಂತ ಉಪನ್ಯಾಸಕ ಸುರೇಂದ್ರನಾಥ ಬ್ಯಾನರ್ಜಿ ಅವರು ಇಂಗ್ಲೆಂಡ್‌ನಲ್ಲಿ ಐ.ಸಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕಲ್ಕತ್ತಾದಲ್ಲಿ ವಾಸವಾಗಿದ್ದರು. ಮಹೇಂದ್ರನಾಥ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸುರೇಂದ್ರನಾಥರು ಅಧ್ಯಕ್ಷರಾಗಿದ್ದ ಸಂಸ್ಥೆಯೊಂದರಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ.

ಮಹೇಂದ್ರನಾಥರು ಬಿ.ಎ. ವ್ಯಾಸಂಗ ಮಾಡುತ್ತಿರುವಾಗಲೆ ಅವರ ವಿವಾಹ ನಿಕುಂಜದೇವಿ ಅವರೊಂದಿಗೆ ೧೯೭೩ ರಲ್ಲಿ ಜರುಗಿತು. ನಿಕುಂಜದೇವಿ ಅವರು ಬ್ರಹ್ಮ ಸಮಾಜದ ಕೇಶವಚಂದ್ರ ಸೇನರ ಸಂಬಂಧಿ.

ಅಧ್ಯಾಪಕ

ಅನೇಕ ಕಾರಣಗಳಿಗಾಗಿ ಮಹೇಂದ್ರನಾಥ ತಮ್ಮ ವ್ಯಾಸಂಗ ಪೂರೈಸುವುದಕ್ಕಿಂತ ಮುಂಚಿತವಾಗಿಯೇ ಕೆಲಸಕ್ಕೆ ಸೇರಬೇಕಾಗಿ ಬಂತು. ಆರಂಭದಲ್ಲಿ ಬ್ರಿಟಿಷ್ ವಾಣಿಜ್ಯ ಸಂಸ್ಥೆಯೊಂದರಲ್ಲಿದ್ದರು. ಅನಂತರ ಶಿಕ್ಷಣ ಕ್ಷೇತ್ರಕ್ಕೆ ಬಂದರು. ಜಸ್ಸೂರ್ ಜಿಲ್ಲೆಯಲ್ಲಿನ ನರೈಲ್ ಪ್ರೌಢಶಾಲೆಯಲ್ಲಿ ಸ್ವಲ್ಪಕಾಲ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದರು. ಅನಂತರ ಕಲ್ಕತ್ತಕ್ಕೆ ಹಿಂತಿರುಗಿದರು. ಅವರು ಕಲ್ಕತ್ತಾದಲ್ಲಿ ಸಿಟಿ ಸ್ಕೂಲ್, ರಿಪ್ಪನ್ ಕೊಲಿಜಿಯಟ್ ಸ್ಕೂಲ್, ಆರ್ಯನ್ ಸ್ಕೂಲ್, ಮಾಡೆಲ್ ಸ್ಕೂಲ್ ಇನ್ನೂ ಮುಂತಾದ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದರು. ಇದರ ಜೊತೆಗೆ ಸಿಟಿ ಮತ್ತು ರಿಪ್ಪನ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡು, ಇಂಗ್ಲಿಷ್, ಚರಿತ್ರೆ, ತತ್ವಶಾಸ್ತ್ರ, ಅರ್ಥಶಾಸ್ತ್ರಗಳ ಪಾಠ ಹೇಳಿಕೊಟ್ಟರು. ಕೆಲವು ಕಾಲ ಏಕಕಾಲದಲ್ಲಿ ಮೂರು ಶಾಲೆಗಳ ಮುಖ್ಯೋಪಾಧ್ಯಾಯರಾಗಿದ್ದುಕೊಂಡು ಒಂದೊಂದು ಶಾಲೆಯಲ್ಲಿ ಒಂದೊಂದು ಗಂಟೆಗಳ ಕಾಲ ಕೆಲಸ ಮಾಡಿದರು.

ಮಹೇಂದ್ರನಾಥ ಗುಪ್ತರಿಗೆ ಹೊಂದುವಂತಹ ಕ್ಷೇತ್ರವೆಂದರೆ ಶಿಕ್ಷಣ ಕ್ಷೇತ್ರವಾಗಿತ್ತು. ಅವರು ಪಾಠ ಹೇಳಿ ಕೊಡುತ್ತಿದ್ದ ಕ್ರಮದಲ್ಲಿ ಒಂದು ವೈಶಿಷ್ಟ್ಯವಿತ್ತು. ಅವರು ವಿದ್ಯಾರ್ಥಿಗಳಿಗೆ ಮನಸ್ಸಿಗೆ ನಾಟುವಂತೆ, ಅವರ ಜ್ಞಾನ ಮಟ್ಟಕ್ಕೆ ತಕ್ಕ ರೀತಿಯಲ್ಲಿ ಬೋಧಿಸುತ್ತಿದ್ದರು. ವಿದ್ಯಾರ್ಥಿಗಳು ಮತ್ತು ಉಪಾಧ್ಯಾಯರು “ಮ” ಅವರನ್ನು “ಅಧ್ಯಕ್ಷ ಮಹಾಶಯ” ಎಂದು ಕರೆಯುತ್ತಿದ್ದರು. ಮಕ್ಕಳಿಗೆ ಅವರ ಭಾಷೆಯಲ್ಲಿಯೇ ಪಾಠ ಹೇಳಿಕೊಟ್ಟರೆ ಸುಲಭವಾಗಿ ತಿಳಿಯುತ್ತದೆ. ಆದರೆ ಆಗಿನ ಕಾಲದಲ್ಲಿ ಇನ್ನೂ ಹೆಚ್ಚು ಜನ ಈ ರೀತಿ ಯೋಚನೆ ಮಾಡುತ್ತಿರಲಿಲ್ಲ. ಕಲ್ಕತ್ತ ವಿಶ್ವವಿದ್ಯಾನಿಲಯ ಈ ವಿಷಯವನ್ನು ಯೋಚಿಸುವುದಕ್ಕಿಂತ ಮೊದಲೇ ಮಹೇಂದ್ರನಾಥರು ತಮ್ಮ ಶಾಲೆಯಲ್ಲಿ ಬಂಗಾಳಿ ಭಾಷೆಯಲ್ಲಿ ಎಲ್ಲ ವಿಷಯಗಳನ್ನು ಹೇಳಿಕೊಡುವ ವ್ಯವಸ್ಥೆ ಮಾಡಿದರು.

ಮನೆಯನ್ನು ಬಿಟ್ಟರು

ಸುಮಾರು ಹತ್ತು ವರ್ಷಗಳ ಕಾಲ ಕೆಲಸ ಮಾಡುವ ಹೊತ್ತಿಗೆ ಮಹೇಂದ್ರನಾಥರು, ಅವರ ಸಂಸಾರದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅವರದು ದೊಡ್ಡ ಕುಟುಂಬ. ಕುಟುಂಬದಲ್ಲಿನ ಜಗಳಗಳಿಂದ ಅವರು ಬೇಸರಗೊಂಡರು. ಅವರ ಮನಸ್ಸಿನ ಶಾಂತಿ ಕದಡಿತು. ಕುಟುಂಬದಿಂದಲೇ ದೂರವಾಗಬೇಕೆಂದು ಆಲೋಚಿಸತೊಡಗಿದರು.

ಅಂದು ಶನಿವಾರ, ರಾತ್ರಿ ೧೦ರ ಸಮಯ. ಮಹೇಂದ್ರನಾಥರು ಮನೆ ಬಿಟ್ಟು ಹೋಗಲು ಸಿದ್ಧರಾದರು ಅವರ ಜೀವನ ಸಂಗಾತಿ ನಿಕುಂಜದೇವಿ ಪತಿಯ ಮನಸ್ಸಿನ ಸ್ಥಿತಿಯನ್ನು ಅರ್ಥ ಮಾಡಿಕೊಂಡಳು. ಪತಿಯ ಜತೆಗೇ ಹೊರಡಲು ಅನುವಾದಳು. ಮನೆಯಲ್ಲಿ ಪತ್ರವೊಂದನ್ನು ಬರೆದಿಟ್ಟು ಪತಿ-ಪತ್ನಿ ಇಬ್ಬರು ಮನೆಯಿಂದ ಹೊರ ಬಂದರು. ಮಧ್ಯರಾತ್ರಿಯಲ್ಲಿ “ಮ” ಪತ್ನಿಯೊಂದಿಗೆ ವರನಗರದಲ್ಲಿದ್ದ ತಮ್ಮ ಸೋದರಿಯ ಮನೆಗೆ ಬಂದರು.

“ಮ” ತುಂಬಾ ಹತಾಶರಾಗಿದ್ದರು. ಬದುಕಿ ಪ್ರಯೋಜನವಿಲ್ಲವೆಮಬ ಅಭಿಪ್ರಾಯಕ್ಕೆ ಬಮದಿದ್ದರು. ಭಾನುವಾರ ಸಂಜೆ ರಜಾದಿನವಾದ್ದರಿಂದ “ಮ” ತಮ್ಮ ಸೋದರಳಿಯ ಸಿದ್ದೇಶ್ವರನೊಡನೆ ಹೊರಟರು. ಉದ್ಯಾನದಲ್ಲಿ ಅಡ್ಡಾಡುತ್ತಿರುವಾಗ ಸಿದ್ದೇಶ್ವರ “ಮ” ಅವರನ್ನು ಕೇಳಿದ : “ಗಂಗಾ ತೀರದಲ್ಲಿ ಬಹಳ ಮನೋಹರವಾದ ಒಂದು ಉದ್ಯಾನವನವಿದೆ. ಅಲ್ಲಿಗೆ ಹೋಗೋಣವೆ?” “ಮ” ಒಪ್ಪಿದರು. ಇಬ್ಬರೂ ದಕ್ಷಿಣೇಶ್ವರ ಕಾಳೀ ದೇವಾಲಯದ ಕಡೆ ಹೊರಟರು.

ಗುರುವಿನ ದರ್ಶನ

ಅವರು ದೇವಸ್ಥಾನದ ಹೆಬ್ಬಾಗಿಲು ದಾಟಿ ನೇರವಾಗಿ ಪರಮಹಂಸರ ಕೊಠಡಿಗೇ ಹೋದರು. ಪರಮಹಂಸರು ಮಂಚದ ಮೇಲೆ ಕುಳಿತು ಪ್ರಸನ್ನ ಚಿತ್ತದಿಂದ ಮಾತನಾಡುತ್ತಿದ್ದರು. ಕೊಠಡಿ ಜನರಿಂದ ತುಂಬಿತ್ತು. ಎಲ್ಲರೂ ನೆಲದ ಮೇಲೆ ಕುಳಿತು ಅವರ ಅಮೃತವಾನಿಯನ್ನು ಕೇಳುತ್ತಿದ್ದರು. ಅವರ ಮಾತುಗಳನ್ನು ಕೇಳುತ್ತ ಕೇಳುತ್ತ ಮಹೇಂದ್ರನಾಥರು ಮಂತ್ರಮುಗ್ಧರಂತೆ ತಲ್ಲೀನರಾದರು.

ರಾಮಕೃಷ್ಣರು ಹೇಳುತ್ತಿದ್ದರು, “ಯಾವಾಗ ನಿಮಗೆ ಹರಿನಾಮವನ್ನೋ, ರಾಮನಾಮವನ್ನೋ, ಒಮ್ಮೆ ಉಚ್ಚರಿಸಿದ ಮಾತ್ರದಿಂದಲೆ ರೋಮಾಂಚನವಾಗುವುದೊ, ಪ್ರೀತಿಯ ಕಣ್ಣೀರು ಸುರಿಯುವುದೊ ಆಗ ನಿಜವಾಗಿ ತಿಳಿದುಕೊಳ್ಳಿ ಇನ್ನು ನೀವು ಸಂಧ್ಯಾದಿಕರ್ಮಗಳನ್ನು ಮಾಡಬೇಕಾಗಿಲ್ಲ ಎಂದು. ಆಗ ಕೇವಲ ರಾಮನಾಮವನ್ನೋ, ಹರಿನಾಮವನ್ನೋ ಅಥವಾ ಓಂಕಾರವನ್ನೊ ಜಪಿಸಿದರೆ ಸಾಕು.”

‘ಗುರುವಿನೊಡನೆ ಮೊದಲನೆಯ ಭೇಟಿ’

“ಮ” ಸುತ್ತಲೂ ನೋಡುತ್ತ ತಮಗೆ ತಾವೇ ಹೇಳಿ ಕೊಳ್ಳುತ್ತಿದ್ದರು. “ಎಂಥ ರಮ್ಯವಾದ ಸ್ಥಳ, ಎಂಥ ಮೋಹಕ ವ್ಯಕ್ತಿ ಇವರು! ಈ ಸ್ಥಳವನ್ನು ಬಿಟ್ಟು ಕದಲಲೂ ಮನಸ್ಸಾಗುತ್ತಿಲ್ಲ.” ಕೆಲವು ನಿಮಿಷಗಳ ನಂತರ “ಮ” ಕೊಠಡಿಯಿಂದ ಹೊರಕ್ಕೆ ಬಂದರು. ಅಷ್ಟರಲ್ಲೇ ಶಂಖ, ಗಂಟೆ, ಜಾಗಟೆ, ನಗಾರಿ ವಾದ್ಯಘೋಷ ದೇವಾಲಯದಿಂದ ಹೊರಹೊಮ್ಮಿ ಬಂತು. ಮಂಗಳಾರತಿಯ ಮಧುರನಿನಾದ ಕೇಳಿಬಂತು. ಹೂವಾಸನೆಯನ್ನು ಹೊತ್ತ ಮಂದ ಮಾರುತ ಬೀಸಲಾರಂಭಿಸಿತು. ಚಂದ್ರ ಆಗ ತಾನೇ ಉದಯಿಸುತ್ತಿದ್ದ. ದೇವಾಲಯದಲ್ಲಿ ನಡೆದ ಮಂಗಳಾರತಿಯನ್ನು ನೋಡಿ “ಮ” ಅವರಿಗೆ ಪರಮಾನಂದವಾಯಿತು.

’ಚಿತ್ರ: ಗುರುವಿನೊಡನೆ ಮೊದಲನೆಯ ಭೇಟಿ’

ಗ್ರಂಥಗಳು ಇವರ ಬಾಯಲ್ಲೆ

ಅವರಿಬ್ಬರೂ ಪುನಃ ಪರಮಹಂಸರ ಕೊಠಡಿಯ ಕಡೆ ಬರುತ್ತಿದ್ದಾಗ ಸಿಧು “ಮ”ಗೆ ಹೇಳಿದ, “ರಾಣಿ ರಾಸಮಣಿ ಕಟ್ಟಿಸಿದ ದೇವಾಲಯ ಎಂಬುದು ಇದೇ. ಇಲ್ಲಿ ನಿತ್ಯಪೂಜೆ ನಡೆಯುತ್ತಿದೆ.” ಅವರು ಪರಮಹಂಸರ ಕೊಠಡಿಯ ಹತ್ತಿರ ಬಂದು ನೋಡುತ್ತಾರೆ, ಬಾಗಿಲು ಮುಚ್ಚಿದೆ. ಬೃಂದೆ ಎಂಬ ಸೇವಕಿ ಬಾಗಿಲ ಹತ್ತಿರ ನಿಂತಿದ್ದಾಳೆ. “ಮ” ಒಮ್ಮಿಂದೊಮ್ಮೆಗೆ ಕೊಠಡಿಯನ್ನು ಪ್ರವೇಶಿಸಲು ಹಿಂಜರಿದು ಬೃಂದೆಯನ್ನು ಕೇಳಿದ “ಸಾಧುಗಳು ಒಳಗಿರುವರೆ?”

ಬೃಂದೆ ಹೇಳಿದಳು “ಹೌದು, ಒಳಗಿದ್ದಾರೆ.”

ಮ: “ಇವರು ಇಲ್ಲಿ ಎಷ್ಟು ಕಾಲದಿಂದ ಇದ್ದಾರೆ?

ಬೃಂದೆ : ಬಹಳ ಕಾಲದಿಂದ.

ಮ : ಒಳ್ಳೇದು, ಇವರೇನು ಬಹಳವಾಗಿ ಗ್ರಂಥಗಳನ್ನು ಓದುತ್ತಾರೊ?

ಬೃಂದ : ಗ್ರಂಥಗಳೇ! ಎಲ್ಲ ಇವರ ಬಾಯಲ್ಲೇ.”

ಪರಮಹಂಸರು ಗ್ರಂಥಗಳನ್ನೂ ಏನೂ ಓದುವುದಿಲ್ಲ ಎಂಬುದನ್ನು ಕೇಳಿ “ಮ” ಬಹಳ ಆಶ್ಚರ್ಯಪಟ್ಟರು.

ಮ : ನಾವು ಈಗ ಒಳಕ್ಕೆ ಹೋಗಬಹುದೆ?

ಬೃಂದೆ : ನೀವು ಒಳಕ್ಕೆ ಹೋಗಿ ಒಂದು ಕಡೆ ಕುಳಿತುಕೊಳ್ಳಿ.

ಆಗ ಅವರು ಕೊಠಡಿಯನ್ನು ಪ್ರವೇಶಿಸಿದರು.

ರಾಮಕೃಷ್ಣರು ಮಂಚದ ಮೇಲೆ ಕುಳಿತಿದ್ದರು. ಬೇರೆ ಯಾರೂ ಇರಲಿಲ್ಲ. ಕೊಠಡಿಯಲ್ಲಿ ಧೂಪ ಹಾಕಿದೆ. ಕಿಟಕಿ ಬಾಗಿಲುಗಳೆಲ್ಲ ಮುಚ್ಚಿವೆ. “ಮ” ರಾಮಕೃಷ್ಣರಿಗೆ ಪ್ರಣಾಮ ಮಾಡಿದರು. ಅನಂತರ “ಮ” ಸಿಧು ನೆಲದ ಮೇಲೆ ಕುಳಿತುಕೊಂಡರು. ರಾಮಕೃಷ್ಣರು ಕೇಳಿದರು. “ಎಲ್ಲಿದ್ದೀರಿ? ಏನು ಕೆಲಸ? ವರನಗರಕ್ಕೆ ಬಂದ ಉದ್ದೇಶವೇನು?” “ಮ” ಅವಕ್ಕೆಲ್ಲಾ ಉತ್ತರ ಹೇಳಿದರು.

ಅನಂತರ “ಮಹಿ” ಎಂದರು : “ಬಹುಶಃ ಈಗ ನಿಮಗೆ ಸಾಯಂಕಾಲ ಸಂಧ್ಯಾವಂದನಕ್ಕೆ ಹೊತ್ತಾಗಿರಬೇಕು. ನಾವು ಹೋಗಿ ಬರಲು ಅಪ್ಪಣೆ ಕೊಡುತ್ತೀರ?”

ರಾಮಕೃಷ್ಣರು : ಸಂಧ್ಯಾವಂದನೆಯೆ? ಇಲ್ಲಿ ಅಂಥದೇನಿಲ್ಲ.

ಹಾಗೆಯೇ ಸ್ವಲ್ಪ ಹೊತ್ತು ಮಾತು ಕಥೆಗಳಾಡಿದ ನಂತರ “ಮ” ಪ್ರಣಾಮ ಮಾಡಿ ಅವರಿಂದ ಬೀಳ್ಕೊಂಡರು. “ಮತ್ತೆ ಬನ್ನಿ” ಎಂದರು ರಾಮಕೃಷ್ಣರು.

ಅಹಂಕಾರ ಅಡಗಿಸುವ ಗುರು

ಎರಡನೆಯ ಬಾರಿಗೆ “ಮ” ಅವರಿಗೆ ರಾಮಕೃಷ್ಣರ ದರ್ಶನ ದೊರೆತದ್ದು ಅವರ ಕೊಠಡಿಯ ಆಗ್ನೇಯ ಜಗುಲಿಯ ಮೇಲೆ. ಇನ್ನೂ ಚಳಿಗಾಲವಾಗಿದ್ದುದರಿಂದ ರಾಮಕೃಷ್ಣರು ಒಂದು ವಿಧದ ಉಣ್ಣೆಯ ಶಾಲು ಹೊದ್ದು ಕೊಂಡಿದ್ದರು. “ಮ” ಅವರನ್ನು ನೋಡಿ ರಾಮಕೃಷ್ಣರು “ಬಂದೆಯಾ? ಒಳ್ಳೇದು ಇಲ್ಲಿ ಕುಳಿತುಕೊ” ಎಂದರು.

ರಾಮಕೃಷ್ಣರು : ನಿನಗೆ ಮದುವೆಯಾಗಿದೆಯೆ?

ಮ : ಹೌದು ಆಗಿದೆ.

ರಾಮಕೃಷ್ಣರು ಬೆಚ್ಚಿ ಬಿದ್ದು “ಓ! ರಾಮಲಾಲ! ನೋಡು ಇವನಿಗೆ ಮದುವೆ ಆಗಿದೆಯಂತೆ” ಎಂದರು. “ಮ” ಏನೋ ಮಹಾಪರಾಧ ಮಾಡಿದವರ ಹಾಗೆ ಸ್ತಬ್ಧರಾಗಿ ತಲೆ ತಗ್ಗಿಸಿ ನೆಲ ನೋಡುತ್ತಾ ಕುಳಿತಿದ್ದರು. ’ಮದುವೆಯಾಗುವುದು ಅಂತಹ ಮಹಾಪಾಪವೇ?’ ಎಂದು ಚಿಂತಿಸುತ್ತಿದ್ದರು.

ರಾಮಕೃಷ್ಣರು : ನಿನಗೆ ಮಕ್ಕಳಿರುವೆ?

“ಮ” ಅವರು ಹೆದರಿ ಹೆದರಿ ಹೇಳಿದರು “ಹೌದು ಆಗಿದೆ.”

ರಾಮಕೃಷ್ಣರು ವ್ಯಥೆಯಿಂದ “ಅಯ್ಯೋ! ಇವನಿಗೆ ಮಕ್ಕಳು ಬೇರೆ ಇವೆಯಂತೆ” ಎಂದರು. ರಾಮಕೃಷ್ಣರು ಹೀಗೆ ಅವರನ್ನು ಆಕ್ಷೇಪಿಸಿದ ಮೇಲೆ “ಮ” ಮೌನವಾಗಿ ಕುಳಿತರು. ಅವರ ಅಹಂಕಾರಕ್ಕೆ ದೊಡ್ಡದೊಂದು ಪೆಟ್ಟು ಬಿತ್ತು. ಕೆಲವು ನಿಮಿಷದ ಮೇಲೆ ರಾಮಕೃಷ್ಣರು ಅವರನ್ನು ಕೃಪಾದೃಷ್ಟಿಯಿಂದ ನೋಡಿ ಪ್ರೀತಿಯಿಂದ ಹೇಳಿದರು : “ನೋಡು ನಿನ್ನಲ್ಲಿ ಒಳ್ಳೆಯ ಲಕ್ಷಣಗಳಿವೆ. ಒಬ್ಬರ ಹಣೆ, ಕಣ್ಣು ಇವನ್ನು ನೋಡಿದರೆ ನನಗೆ ಎಲ್ಲ ಗೊತ್ತಾಗುವುದು, ನಿನ್ನ ಹೆಂಡತಿ ಎಂಥವಳು? ಹೇಳು, ಅವಳಲ್ಲಿ ಧೈವೀ ಪ್ರವೃತ್ತಿಗಳಿವೆಯೋ, ಅಥವಾ ಅಸುರೀ ಪ್ರವೃತ್ತಿಗಳಿವೆಯೋ?

ಮ : ಅವಳೇನೋ ಒಳ್ಳೆಯವಳು, ಆದರೆ ಅಜ್ಞಾನಿ.

ರಾಮಕೃಷ್ಣರು : (ಅಸಮಾಧಾನದಿಂದ) ನೀನೇನು ದೊಡ್ಡ ಜ್ಞಾನಿಯೊ?

“ಮ” ಅವರಿಗೆ, ಜ್ಞಾನ-ಅಜ್ಞಾನದ ವ್ಯತ್ಯಾಸ ಇನ್ನೂ ತಿಳಿಯಬೇಕಾಗಿತ್ತು. ತಮ್ಮ ಹೆಂಡತಿಗೆ ಹೆಚ್ಚು ವಿದ್ಯಾಭ್ಯಾಸವಿಲ್ಲ ಎಂಬ ದೃಷ್ಟಿಯಿಂದ ಅವರು ಆಕೆ ಅಜ್ಞಾನಿ ಎಂದಿದ್ದರು. ಈಗ ಅವರಿಗೆ ಅರಿವಾಯಿತು: ದೇವರ ದಿವ್ಯ ಸ್ವರೂಪವನ್ನು ಅರಿಯದಿರುವುದೇ ಅಜ್ಞಾನ. ಅವನನ್ನು ಅರಿಯುವುದೇ ಜ್ಞಾನ ಎಂದು.

ರಾಮಕೃಷ್ಣರು : ನೀನು ನಂಬುವ ಭಗವಂತನು ಆಕಾರವುಳ್ಳವನೋ ನಿರಾಕಾರನೋ? (ಎಂದರೆ ಆಕಾರವಿಲ್ಲದವನೋ?)

ಮ : ನನಗೆ ನಿರಾಕಾರದಲ್ಲಿ ನಂಬಿಕೆ.

ರಾಮಕೃಷ್ಣರು : ಒಳ್ಳೆಯದು, ಯಾವುದಾದರೂ ಒಮದರಲ್ಲಿ ನಂಬಿಕೆ ಇಟ್ಟುಕೊಂಡರೆ ಸಾಕು. ಆದರೆ ಇದು ಮಾತ್ರ ಸತ್ಯ, ಮಿಕ್ಕವು ಅಸತ್ಯ ಎಂದು ಮಾತ್ರ ಯಾವಾಗಲೂ ಭಾವಿಸಬೇಡ. ನಿರಾಕಾರದಷ್ಟೇ, ಸಾಕಾರ ದೇವರೂ ಸತ್ಯ ಎಂಬುದನ್ನು ಗಮನದಲ್ಲಿಡು.

ಎರಡೂ ಸತ್ಯ ಎಂಬ ಅವರ ವಾದ “ಮ” ಅವರಿಗೆ ಆಶ್ಚರ್ಯವಾಯಿತು. ಈಗ ಗುರುಗಳು ತನ್ನ ಅಹಂಕಾರವನ್ನು ಪೂರ್ತಿಯಾಗಿ ಅಡಗಿಸಿಬಿಟ್ಟರೆಂದು “ಮ” ಅವರಿಗೆ ಗೊತ್ತಾಯಿತು.

ವಚನಾಮೃತ

ಮ : ನಾವು ಮನಸ್ಸನ್ನು ದೇವರಲ್ಲಿ ಹೇಗೆ ನಿಲ್ಲಿಸುವುದು?

ರಾಮಕೃಷ್ಣರು : ಭಗವನ್ನಾಮವನ್ನು ಜಪಿಸು.

ಅವನ ದಿವ್ಯ ಪ್ರಭಾವವನ್ನು ಕೊಂಡಾಡು. ಸತ್ಸಂಗದಲ್ಲಿ ಇರು. ಧ್ಯಾನಕ್ಕೆ ಏಕಾಂತ ಸ್ಥಳವೊಂದನ್ನು ಹುಡುಕಿಕೊ. ದೇವರೊಬ್ಬನೇ ಸತ್ಯ ಮಿಕ್ಕಿದ್ದೆಲ್ಲಾ ಅಸತ್ಯ.

ಮ : ನಾವು ಪ್ರಪಂಚದಲ್ಲಿ ಹೇಗಿರಬೇಕು?

ರಾಮಕೃಷ್ಣರು : ನಿನ್ನ ಕರ್ತವ್ಯವನ್ನೆಲ್ಲಾ ಮಾಡು, ಆದರೆ ನಿನ್ನ ಮನಸ್ಸನ್ನು ದೇವರಲ್ಲಿ ಇಡು. ಹೆಂಡತಿ ಮಕ್ಕಳು, ತಾಯಿ ತಂದೆ ಎಲ್ಲರೊಡನೆಯೂ ಇರಬೇಕು. ಅವರು ನಿನ್ನ ನಿಕಟ ಪ್ರೀತಿ ವಿಶ್ವಾಸಕ್ಕೆ ಪಾತ್ರರೆಂದು ನೋಡಿಕೊ. ಆದರೆ ನಿನ್ನ ಹೃದಯಾಂತರಾಳದಲ್ಲಿ ಅವರು ನಿನಗೆ ಸೇರಿದವರಲ್ಲ ಎಂಬುದನ್ನು ತಿಳಿದುಕೊ.

ಹಳ್ಳಿಯಿಂದ ಶ್ರೀಮಂತನ ಮನೆಯಲ್ಲಿ ಕೆಲಸಕ್ಕೆ ಬಂದ ಪರಿಚಾರಕಳು ಮನೆಯ ಕೆಲಸವನ್ನೆಲ್ಲಾ ಮಾಡುವಳು. ಆದರೆ ಅವಳ ಮನಸ್ಸೆಲ್ಲಾ ತನ್ನ ಹಳ್ಳಿಯಲ್ಲಿರುವ ಮನೆಯ ಮೇಲಿದೆ. ಅವಳು ಯಜಮಾನನ ಮಕ್ಕಳನ್ನು ತನ್ನ ಮಕ್ಕಳೇ ಎಂಬಂತೆ ನೋಡಿಕೊಳ್ಳುವಳು. ಅವನ ಮಕ್ಕಳನ್ನು ಕುರಿತು, ನನ್ನ ಹರಿ ನನ್ನ ರಾಮ ಎಂದು ಹೇಳುವಳು. ಆದರೆ ತನ್ನ ಮನಸ್ಸಿನಲ್ಲಿ ಅವಳಿಗೆ ಚೆನ್ನಾಗಿ ಗೊತ್ತಿದೆ, ಇವರು ತನ್ನವರಲ್ಲ ಎಂದು.

ಆಮೆ ನೀರಿನಲ್ಲಿ ಓಡಾಡುತ್ತಿರುವುದು. ಆದರೆ ಅದರ ಮನಸ್ಸೆಲ್ಲಾ ಎಲ್ಲಿದೆ ಗೊತ್ತೆ? ತೀರದಲ್ಲಿರುವ ಮೊಟ್ಟೆಯ ಮೇಲೆ. ಪ್ರಪಂಚದಲ್ಲಿ ನಿಮ್ಮ ಕರ್ತವ್ಯವನ್ನೆಲ್ಲಾ ಮಾಡಿ.

ಈ ಪ್ರಪಂಚವನ್ನು ಏಕೆ ಬಿಡುವೆ? ನಿನಗೆ ಗುರು ದೊರಕಲಿಲ್ಲವೆ?

ಆದರೆ ಮನಸ್ಸನ್ನು ದೇವರ ಮೇಲೆ ಇಡಿ.

ಕೈಗೆ ಮೊದಲು ಎಣ್ಣೆ ಸವರಿಕೊಂಡು ಹಲಸಿನ ಹಣ್ಣನ್ನು ಹೆಚ್ಚಿ. ಇಲ್ಲದೆ ಇದ್ದರೆ ಅಂಟೆಲ್ಲ ಕೈಗೆ ಮೆತ್ತಿಕೊಳ್ಳುವುದು. ಮೊದಲು ಭಕ್ತಿ ತೈಲವನ್ನು ಹಚ್ಚಿಕೊಂಡು ಅನಂತರ ನಿಮ್ಮ ಕರ್ತವ್ಯಕ್ಕೆ ತೊಡಗಿ.

ಮ : ದೇವರನ್ನು ನೋಡುವುದು ಸಾಧ್ಯವೇ?

ರಾಮಕೃಷ್ಣರು : ಅತ್ಯಂತ ವ್ಯಾಕುಲತೆಯಿಂದ ಅತ್ತತೆ ಆತನ ದರ್ಶನ ಪಡೆಯಲು ಸಾಧ್ಯ. ಹೆಂಡತಿ, ಮಕ್ಕಳಿಗಾಗಿ ಜನ ಬಿಂದಿಗೆ ತುಂಬ ಕಣ್ಣೀರು ಸುರಿಸುತ್ತಾರೆ. ಹಣಕ್ಕಾಗಿ ಕಣ್ಣೀರ ಕಡಲಿನಲ್ಲೇ ತೇಲಿಬಿಡುತ್ತಾರೆ. ಆದರೆ ಭಗವಂತನು ಬೇಕೆಂದು ಯಾರು ತಾನೇ ಕಣ್ಣೀರಿಡುತ್ತಾರೆ?

ರಾಮಕೃಷ್ಣರು ಹಾಡಲಾರಂಭಿಸಿದರು.

ನಂಬಿ ಕರೆದರೆ ತಾಯಿ ಓ ಎನ್ನದಿಹಳೇನೋ?

ಬಿಲ್ವದಳ ಹೂಗಳ ತಂದು ಪಾದಕೆ ಮುಡಿಸೊ

ನಿನ್ನ ಭಕ್ತಿಯ ದಿವ್ಯ ಗಂಧದೊಡನೆ!

ಮತ್ತೆ ರಾಮಕೃಷ್ಣರು ಹೇಳಿದರು : ವ್ಯಾಕುಲತೆ ಉಂಟಾಯಿತು ಎಂದರೆ ಅರುಣೋದಯವಾದ ಹಾಗೇ. ಬಳಿಕ ಸೂರ್ಯೋದಯ. ವ್ಯಾಕುಲತೆಯಾದ ನಂತರವೇ ಭಗವಂತನ ದರ್ಶನ.

ರಾಮಕೃಷ್ಣರು ಸಮಾಧಿಯಲ್ಲಿ

“ಮ” ಅವರಿಗೆ ರಾಮಕೃಷ್ಣರ ಮೂರನೇ ದರ್ಶನ ದೊರೆತದ್ದು ಮತ್ತೊಂದು ಭಾನುವಾರ ಮಧ್ಯಾಹ್ನ. ರಾಮಕೃಷ್ಣರು ಚಿಕ್ಕಮಂಚದ ಮೇಲೆ ಕುಳಿತುಕೊಂಡಿದ್ದರು. ಕೊಠಡಿ ಭಕ್ತರಿಂದ ತುಂಬಿತ್ತು. “ಮ” ಒಂದು ಮೂಲೆಯಲ್ಲಿ ಕುಳಿತುಕೊಂಡಿದ್ದರು. ರಾಮಕೃಷ್ಣರು ಹಸನ್ಮುಖಿಗಳಾಗಿ ಭಕ್ತರೊಡನೆ ಮಾತುಕತೆ ನಡೆಸುತ್ತಿದ್ದರು. ಮಹೇಂದ್ರನಾಥರು ಸ್ವಲ್ಪ ಹೊತ್ತು ಅಡ್ಡಾಡಿದ ನಂತರ ರಾಮಕೃಷ್ಣರ ಕೊಠಡಿಗೆ ಬಂದರು. ಅದರ ಉತ್ತರ ದಿಕ್ಕಿನ ಚಿಕ್ಕ ಕೋಣೆಯಲ್ಲಿ ಒಂದು ಅದ್ಭುತ ದೃಶ್ಯ ಅವರ ಕಣ್ಣಿಗೆ ಬಿತ್ತು.

ರಾಮಕೃಷ್ಣರು ಸ್ಥಿರವಾಗಿ ನಿಂತಿದ್ದರು. ನರೇಂದ್ರ (ಮುಂದೆ ವಿವೇಕಾನಂದ ಎಂದು ಪ್ರಸಿದ್ಧವಾದ ಶಿಷ್ಯ) ಹಾಡುತ್ತಿದ್ದ. ಹತ್ತಿರವೇ, ನಾಲ್ಕೈದು ಜನ ಭಕ್ತರು ನಿಂತಿದ್ದರು. ರಾಮಕೃಷ್ಣರು ಎವೆಯಿಕ್ಕದೆ ನೆಟ್ಟ ಕಣ್ಣುಗಳಿಂದ ಸ್ಥಿರವಾಗಿ ನಿಂತಿದ್ದರು. ಉಸಿರಾಡುತ್ತಿರುವಂತೆಯೂ ತೋರಿಬರಲಿಲ್ಲ. ಕೇಳಲಾಗಿ ಒಬ್ಬ ಭಕ್ತ ಹೇಳಿದ: ’ರಾಮಕೃಷ್ಣರು ಸಮಾಧಿಯಲ್ಲಿದ್ದಾರೆ’ ಎಂದು. “ಮ” ಇಂಥದ್ದನ್ನು ಎಂದೂ ನೋಡಿಯೂ ಇರಲಿಲ್ಲ. ಕೇಳಿಯೂ ಇರಲಿಲ್ಲ. “ಭಗವಂತನ ಧ್ಯಾನದಲ್ಲಿರುವಾಗ ಮನುಷ್ಯ ಇಷ್ಟರಮಟ್ಟಿಗೆ ಬಾಹ್ಯಶೂನ್ಯನಾಗಲು ಸಾಧ್ಯವೇ?” ಎಂದು “ಮ” ವಿಸ್ಮಿತರಾದರು.

ಅಫೀಮಿಗೆ ಅಂಟಿದ ನವಿಲು

ಮಾರನೆಯ ದಿನವೂ “ಮ” ಅವರಿಗೆ ರಜವಿತ್ತು. ದಕ್ಷಿಣೇಶ್ವರಕ್ಕೆ ಮಧ್ಯಾಹ್ನ ಮೂರಕ್ಕೆ ಬಂದರು. ರಾಮಕೃಷ್ಣರು ತಮ್ಮ  ಕೊಠಡಿಯಲ್ಲಿ ಕುಳಿತುಕೊಂಡಿದ್ದರು. ನರೇಂದ್ರ ಹಾಗೂ ಇನ್ನೂ ಕೆಲವು ಯುಕವರು ಕುಳಿತಿದ್ದರು.

“ಮ” ಕೊಠಡಿಯನ್ನು ಪ್ರವೇಶಿಸುವುದೇ ತಡ, ರಾಮಕೃಷ್ಣರು ಗಟ್ಟಿಯಾಗಿ ನಗುತ್ತಾ ಹೇಳಿದರು : “ಅಲ್ಲಿ! ಮತ್ತೆ ಬಂದಿದ್ದಾನೆ”. ಯುವಕರೂ ನಗಲಾರಂಭಿಸಿದರು. “ಮ” ಸಾಷ್ಟಾಂಗ ಪ್ರಣಾಮ ಮಾಡಿ ಕುಳಿತುಕೊಂಡರು.

ಈಗ ರಾಮಕೃಷ್ಣರು ತಮ್ಮ ನಗುವಿಗೆ ಕಾರಣವೇನೆಂಬುದನ್ನು ಯುವಕರಿಗೆ ವಿವರಿಸಲಾರಂಭಿಸಿದರು. “ನೋಡಿ ಒಮ್ಮೆ ಒಬ್ಬ ಒಂದು ನವಿಲಿಗೆ ಮಧ್ಯಾಹ್ನ ನಾಲ್ಕು ಘಂಟೆ ಸಮಯಕ್ಕೆ ಅಫೀಮು ತಿನ್ನಿಸಿದ. ಮಾರನೆ ದಿನ ಸರಿಯಾಗಿ ನಾಲ್ಕು ಘಂಟೆಗೆ ನವಿಲು ಮತ್ತೆ ಬಂತು. ಅಫೀಮಿನ ಆಸೆ ಅದನ್ನು ಹಿಡಿದು ಬಿಟ್ಟಿತ್ತು. ಅದಕ್ಕಾಗಿಯೇ ಆ ಸಮಯಕ್ಕೆ ಸರಿಯಾಗಿ ನವಿಲು ಅಫೀಮು ತಿನ್ನಲು ಬಂತು.

“ಮ”ಗೆ ಎನ್ನಿಸಿತು : ಇದು ತನಗೆ ಅನ್ವಯಿಸುವ ಸರಿಯಾದ ಉದಾಹರಣೆ, ಮನೆಯಲ್ಲೂ ಇವರ ಯೋಚನೆ ಮಾಡದೆ ಒಂದು ಕ್ಷಣವೂ ಇರಲಾಗುತ್ತಿಲ್ಲ ಮನಸ್ಸು ಇಲ್ಲೇ ನೆಲೆಸಿಬಿಟ್ಟದೆ ಎಂದು.

ಹೊಸ ಜೀವನ

“ಮ” ದಕ್ಷಿಣೇಶ್ವರಕ್ಕೆ ಆಗಾಗ್ಗೆ ಬರಲು ಆರಂಭಿಸಿದರು. ಸ್ವಲ್ಪ ಸಮಯದಲ್ಲೇ ರಾಮಕೃಷ್ಣರಿಗೆ ಆತ್ಮೀಯರಾದರು. ರಾಮಕೃಷ್ಣರು “ಮ” ಅವರಿಗೆ ತಮ್ಮ ಪ್ರೀತಿ ವಿಶ್ವಾಸ ತೋರಿಸಿದರು.

ಒಂದು ದಿನ ಅವರಿಬ್ಬರೂ ಕಾಳೀ ದೇವಸ್ಥಾನದ ಮುಂಭಾಗದಲ್ಲಿರುವ ನಾಟ್ಯ ಮಂದಿರದಲ್ಲಿ ಅಡ್ಡಾಡುತ್ತಿರುವಾಗ “ಮ” ಧೈರ್ಯ ಮಾಡಿ ತಮ್ಮ ಮನಸ್ಸಿನ ಒಳತೋಟಿಯನ್ನು ತೋಡಿಕೊಂಡರು. ಪ್ರಪಂಚದಲ್ಲಿ ತಮಗೆ ಜಿಗುಪ್ಸೆ ಬಂದಿದೆ. ಪ್ರಪಂಚದಿಂದ ದೂರವಾಗಬೇಕೆನಿಸುತ್ತಿದೆ ಎಂದರು. ರಾಮಕೃಷ್ಣರು “ಮ” ಅವರ ಮನಸ್ಸಿನ ಸ್ಥಿತಿಯನ್ನು ಅರಿತುಕೊಂಡರು. ಕೊಡಲೇ ಅವರ ಮನಸ್ಸಿನ ಕ್ಲೇಶವನ್ನು ದೂರ ಮಾಡಿದರು. “ಈ ಪ್ರಪಂಚವನ್ನು ಏಕೆ ಬಿಡುತ್ತಿ! ನಿನಗೆ ಗುರು ದೊರಕಲಿಲ್ಲವೆ? ಅವನ ಕರುಣೆಯಿಂದ ಎಲ್ಲವೂ ಸುಲಭವಾಗುತ್ತದೆ” ಎಂದು ಧೈರ್ಯ ಹೇಳಿದರು.

“ಮ” ಅವರಮನಸ್ಸಿಗೆ ಕವಿದಿದ್ದ ದುಃಖದ ಕಾರ್ಮೋಡಗಳು ಚದುರಿಹೋದವು. ರಾಮಕೃಷ್ಣರ ಆಶೀರ್ವಾದಕ್ಕೆ ಪಾತ್ರರಾದ ಮೇಲೆ “ಮ” ಅವರಿಗೆ ಹೊಸ ಜೀವನ ಆರಂಭವಾಯಿತು. ಗುರುವಿನ ಕರುಣೆಯಿಂದ ಅವರ ಜೀವನ ಪುಷ್ಪ ಅರಳಿತು. ರಾಮಕೃಷ್ಣರು “ಮ” ಅವರನ್ನು ದಕ್ಷಿಣೇಶ್ವರದಲ್ಲಿ ತಮ್ಮ ಬಳಿಯೇ ಇಟ್ಟುಕೊಂಡರು. ತೀವ್ರ ಸಾಧನೆಯಲ್ಲಿ ತೊಡಗುವಂತೆ ಮಾಡಿದರು. ಮತಿಶೀಲ್ ಸರೋವರದ ಬಳಿ ಧ್ಯಾನಕ್ಕೆ ತೊಡಗಿದರು. ಅವರಿಗೆ ರಾಮಕೃಷ್ಣರು ಯೋಗದ ರಹಸ್ಯವನ್ನು ಹೇಳಿಕೊಟ್ಟರು. ಶುದ್ಧಭಕ್ತಿ “ಮ” ಅವರ ಸ್ವಭಾವವಾಗಿತ್ತು. ಈ ಭಾವ ಸಾಧನೆಯಲ್ಲಿ ಅವರು ತೊಡಗಿದರು. ಗಾಢವಾದ ಭಕ್ತಿಯಿಂದ ದೇವರಲ್ಲಿ ಒಂದಾಗುವ ಸಾಧನೆಯಲ್ಲಿ ಮುಂದುವರಿದರು. ರಾಮಕೃಷ್ಣರು ಕಾಳಿಕಾಮಾತೆಯಲ್ಲಿ “ಮ” ಪರವಾಗಿ ಪ್ರಾರ್ಥಿಸಿದರು. ಗೃಹಸ್ಥನಾಗಿಯೆ ಇದ್ದುಕೊಂಡಿದ್ದು ಅಗತ್ಯವಾದ ವಿವಿಧ ಸಾಧನೆ ಮಾಡುವಂತೆ “ಮ” ಅವರಿಗೆ ಅನುಗ್ರಹಿಸುವಂತೆ ಪ್ರಾರ್ಥಿಸಿದರು.

ಸರ್ವಸ್ವವನ್ನೂ ತ್ಯಾಗಮಾಡಿ ಸಂನ್ಯಾಸ ಆಶ್ರಮ ಸ್ವೀಕರಿಸಬೇಕೆಂಬುದು “ಮ” ಅಪೇಕ್ಷೆಯಾಗಿತ್ತು. ಈ ಆಶಯವನ್ನು ರಾಮಕೃಷ್ಣರ ಬಳಿ ಹೇಳಿದಾಗ “ನೀನು ಸ್ವಲ್ಪ ತಾಯಿಯ ಕೆಲಸವನ್ನು ಮಾಡಬೇಕು. ತಾಯಿ ನನಗೆ ಹೇಳಿದ್ದಾಳೆ. ಭಾಗವತವನ್ನು ನೀನು ಮಾನವ ಜನಾಂಗಕ್ಕೆ ಬೋಧಿಸಬೇಕು” ಎಂದರು. ರಾಮಕೃಷ್ಣರು ಈ ರೀತಿ ಹೇಳಿದರೂ “ಮ” ಸಂನ್ಯಾಸಕ್ಕೆ ಒತ್ತಾಯಪಡಿಸಿದರು. ಕೊನೆಗೆ ರಾಮಕೃಷ್ಣರ ಅಭೀಷ್ಟಕ್ಕೆ ಶರಣಾಗಿ “ಮ” ಮನೆ ಯಲ್ಲೇ ಇದ್ದುಕೊಂಡು ಸಂನ್ಯಾಸಿಯಂತೆ ಬಾಳಿದರು. ಅವರು ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಹೆಂಡತಿ ಮಕ್ಕಳನ್ನು ಬಿಟ್ಟು ದೂರ ಹೋಗಲಿಲ್ಲ. ಮನೆಯ ಯಜಮಾನವಾಗಿ ಸಂಸಾರದವರ ಯೋಗಕ್ಷೇಮವನ್ನು ನೋಡಿಕೊಳ್ಳುವ ಕರ್ತವ್ಯವನ್ನು ನಿರ್ವಹಿಸಿದರು. ಆದರೆ ತಾವು ಯಾವುದಕ್ಕೂ ಆಸೆ ಪಡಲಿಲ್ಲ. ಸದಾ ಅವರ ಮನಸ್ಸು ಇದ್ದದ್ದು ದೇವರಲ್ಲಿ. “ಮ” ಅವರ ಹೆಂಡತಿ ಕೂಡ ರಾಮಕೃಷ್ಣರ ಶಿಷ್ಯಬಳಗಕ್ಕೆ ಸೇರಿಕೊಂಡರು.

ಹೊಸ ಕೆಲಸ

“ಮ” ಈಶ್ವರಚಂದ್ರ ವಿದ್ಯಾಸಾಗರ್ ಅವರು ನಡೆಸುತ್ತಿದ್ದ ಒಂದುಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ೧೮೮೬ರ ಸುಮಾರಿನಲ್ಲಿ ರಾಮಕೃಷ್ಣರ ಆರೋಗ್ಯ ಕೆಟ್ಟಿತು. ಕಾಶೀಪುರ ತೋಟದಲ್ಲಿದ್ದ ರಾಮಕೃಷ್ಣರನ್ನು ನೋಡಿಕೊಳ್ಳಲು “ಮ” ಆಗಾಗ್ಗೆ ಬರುತ್ತಿದ್ದರು. ಗುರುವಿನ ಶುಶ್ರೂಷೆಗೆ ಹೆಚ್ಚು ಗಮನ ಹರಿಸುತ್ತಿದ್ದರು. ಇದರಿಂದ ಶಾಲೆಯ ವಾರ್ಷಿಕ ಪರೀಕ್ಷಾ ಫಲಿತಾಂಶ ಹಿಂದಿನ ವರ್ಷಕ್ಕಿಂತ ಉತ್ತಮವಾಗಿ ಬರಲಿಲ್ಲ. ಒಂದು ದಿನ ವಿದ್ಯಾಸಾಗರ್ ಅವರು “ಮ” ಜೊತೆ ಈ ವಿಷಯವನ್ನು ಪ್ರಸ್ತಾಪಿಸುತ್ತಾ “ರಾಮಕೃಷ್ಣರನ್ನು ನೋಡಲು ನೀನು ಆಗಾಗ್ಗೆ ಕಾಶೀಪುರ ತೋಟಕ್ಕೆ ಹೋಗುತ್ತಿದ್ದ ಕಾರಣ ಶಾಲೆಯಲ್ಲಿ ಫಲಿತಾಂಶ ಕೆಟ್ಟಿತು” ಎಂದರು. ಅವರೇನೊ ವಿಶ್ವಾಸದಿಂದಲೇ ಆ ಮಾತನ್ನು ಹೇಳಿದರು. ವಿದ್ಯಾಸಾಗರರು ಅವರಿಗೆ ತಂದೆಯಂತಿದ್ದರು. ಆದರೂ ಅವರ ಈ ಆಕ್ಷೇಪಣೆಯ ಮಾತನ್ನು “ಮ” ಸಹಿಸಲಿಲ್ಲ. ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತರು. ಈ ವಿಷಯ ರಾಮಕೃಷ್ಣರಿಗೆ ತಿಳಿಯಿತು. “ಒಳ್ಳೆಯ ಕೆಲಸ ಮಾಡಿಬಿಟ್ಟೆ” ಅಂದರು.

ಕೆಲಸ ಬಿಟ್ಟ ಎರಡು ವಾರ ಕಳೆಯುವುದರೊಳಗಾಗಿ “ಮ” ಅವರಿಗೆ ಸಂಸಾರದ ಖರ್ಚು ಸರಿತೂಗಿಸಲು ಕಷ್ಟವಾಯಿತು. “ಮಕ್ಕಳಿಗೆ ಊಟಕ್ಕೆ ಏನು ಮಾಡಲಿ?” ಎಂಬ ಚಿಂತೆ ಕಾಡತೊಡಗಿತು.

ಒಂದು ದಿನ ತಮ್ಮ ಮನೆಯ ಮೊದಲ ಮಹಡಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ತೀವ್ರವಾಗಿ ಯೋಚಿಸುತ್ತಾ ಒಂದೇ ಸಮನೆ ಕೋಣೆಯಲ್ಲಿ ಮೆಲ್ಲಗೆ ಅಡ್ಡಾಡುತ್ತಿದ್ದರು. ಆಗ ಕೆಳಗಡೆಯಿಂದ ’ಮಹೇಂದ್ರಬಾಬು ಇದ್ದಾರೆಯೋ?’ ಎಂಬ ಕೂಗು ಕೇಳಿಬಂತು. ಯಾರೋ ಒಬ್ಬಾತ “ಮ” ಅವರಿಗೆ ಪತ್ರವೊಂದನ್ನು ತಂದಿದ್ದ. ಸುರೇಂದ್ರನಾಥ ಬ್ಯಾನರ್ಜಿಯವರು ರಿಪ್ಪನ್ ಕಾಲೇಜ್ ಎಂಬ ಕಾಲೇಜನ್ನು ನಡೆಸುತ್ತಿದ್ದರು. ಅಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು ಒಪ್ಪಿಕೊಳ್ಳುವಂತೆ ಸುರೇಂದ್ರನಾಥ ಬ್ಯಾನರ್ಜಿ ಅವರು “ಮ” ಅವರನ್ನು ಪ್ರಾರ್ಥಿಸಿದ್ದರು. ಪತ್ರ ತಂದವನ ಜತೆಯಲ್ಲೇ “ಮ” ಬ್ಯಾನರ್ಜಿಯವರನ್ನು ಕಾಣಲು ಹೋದರು. ಪ್ರಾಧ್ಯಾಪಕ ಹುದ್ದೆಗೆ ಸೇರಿಕೊಂಡರು.

ರಾಮಕೃಷ್ಣರು ಕಣ್ಮರೆಯಾದ ಮೇಲೆ

ಗಂಟಲು ಬೇನೆಯಿಂದ ನರಳುತ್ತಿದ್ದ ರಾಮಕೃಷ್ಣರ ಆರೋಗ್ಯ ಕೆಟ್ಟಿತು. ಅವರಿಗೆ ಬರಬರುತ್ತಾ ಶಕ್ತಿ ಕುಗ್ಗಿತು. ಗಂಟಲೊಳಗೆ ಆಹಾರ ಇಳಿಯುತ್ತಿರಲಿಲ್ಲ. ಔಷಧಿ ಸೇರುತ್ತಿರಲಿಲ್ಲ. ಗುರುವು ದೇಹವನ್ನು ಬಿಡುವರೆಂಬ ಭಯ ಶಿಷ್ಯರನ್ನೆಲ್ಲ ಒಟ್ಟುಗೂಡಿಸಿತು. ರಾಮಕೃಷ್ಣರು ೧೮೮೬ನೇ ಆಗಸ್ಟ್ ೧೬ರಂದು ದೇಹತ್ಯಾಗ ಮಾಡಿದರು.

ರಾಮಕೃಷ್ಣರು ಮಹಾ ಸಮಾಧಿ ಹೊಂದಿದ ಮೇಲೆ “ಮ” ದಕ್ಷಿಣೇಶ್ವರದಲ್ಲೇ ಇದ್ದುಕೊಂಡು ತಮ್ಮ ಸಾಧನೆಯಲ್ಲಿ ಮುಂದುವರಿದರು. ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಿ, ಮಿಕ್ಕ ಮೂರು ದಿನಗಳ ಕಾಲ ದಕ್ಷಿಣೇಶ್ವರದಲ್ಲಿರುತ್ತಿದ್ದರು. ಸಾಧನೆಯಿಂದ “ಮ” ಅವರ ಆರೋಗ್ಯ ಅನೇಕ ಸಾರಿ ಕೆಟ್ಟಿತು. ಆದರೂ ಅವರು ಅದನ್ನು ಬಿಡಲಿಲ್ಲ.

ಶಾರದಾ ಮಾತೆಯವರ ಆಶಯದಂತೆ ಕೆಲವು ತಿಂಗಳುಗಳ ನಂತರ “ಮ” ತಮ್ಮ ಮನೆಗೆ ಹೋದರು. ಆಧ್ಯಾತ್ಮಿಕ ಸಾಧನೆಯಲ್ಲಿ ಮುಂದುವರಿದರು. ಗೃಹ ಜೀವನದಲ್ಲಿ ಅವರು ತಾವರೆ ಎಲೆಯ ಮೇಲಿನ ನೀರಿನ ಹನಿಯಂತೆ, ರಾಮಕೃಷ್ಣರು ಕಥೆಯಲ್ಲಿ ವರ್ಣಿಸಿದ ಸಾಹುಕಾರನ ಮನೆಯ ದಾಸಿಯಂತೆ ಇದ್ದರು.

ಶ್ರೀ ರಾಮಕೃಷ್ಣ ಕಥಾಮೃತ

“ಮ” ಅವರ ಹೃದಯದಲ್ಲಿ ರಾಮಕೃಷ್ಣರು ವಾಸವಾಗಿದ್ದರು. “ರಾಮಕೃಷ್ಣರು ನನ್ನ ನಾಲಿಗೆಯಲ್ಲಿ ಕುಳಿತು ಮಾತನಾಡುತ್ತಿದ್ದಾರೆ ನಾನು ನಿಮಿತ್ತ ಮಾತ್ರ, ನಾನು ಯಂತ್ರ ಮಾತ್ರ” ಎಂದು ಹೇಳುತ್ತಿದ್ದರು. ರಾಮ ಕೃಷ್ಣರ ಉಪದೇಶಗಳ ಕಥಾಮೃತವನ್ನು ಭಕ್ತಕೋಟಿಗೆ ಕೊಡಲು ಅವರು ಆರಂಭಿಸಿದರು. ಈ ಕಥಾಮೃತ ಕೃತಿಯು ಧಾರ್ಮಿಕ ಕ್ಷೇತ್ರದಲ್ಲಿ ಅನೇಕ ಜನರಿಗೆ ಹೊಸ ಉತ್ಸಾಹ ನೀಡಿತು, ನೀಡುತ್ತಿದೆ.

“ಮ” ಅವರ ೧೯೧೨ ರಲ್ಲಿ ಕಾಶಿಗೆ ತೆರಳಿದರು. ಅಲ್ಲಿಂದ ಹರಿದ್ವಾರದ ಬಳಿ ಗಂಗಾ ನದಿ ತೀರದಲ್ಲಿ ಕನಖಾಲ್ ಬಳಿ ಕುಟೀರವೊಂದರಲ್ಲಿ ವಾಸವಾಗಿದ್ದು ಕೊಂಡು ತಪಸ್ಸನ್ನಾಚರಿಸಿದರು. ಹೃಷಿಕೇಶಕ್ಕೆ ತೆರಳಿ ಸ್ವಲ್ಪ ಕಾಲ ಮಾಯಾಕುಂಡದಲ್ಲಿ ವಾಸವಾಗಿದ್ದರು. ಅನಂತರ ಸ್ವರ್ಗಾಶ್ರಮದ ಕುಟೀರವೊಂದಕ್ಕೆ ಬಂದರು. ಪಾಳು ಬಿದ್ದಿರುವ ಈ ಕುಟೀರವನ್ನು ಇಂದಿಗೂ ಕಾಣಬಹುದು.

ಕೆಲವು ಸಾರಿ ಭಕ್ತರು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ವಾಸಮಾಡಬೇಕೆಂದು ರಾಮಕೃಷ್ಣರು ಬೋಧಿಸುತ್ತಿದ್ದರು. ಈ ತತ್ವವನ್ನು “ಮ” ತಮ್ಮ ಜೀವನಾಧ್ಯಂತ ಪಾಲಿಸಿಕೊಂಡು ಬಂದರು. ಕೆಲವೇ ಸಮಯದಲ್ಲಿ ರಾಮಕೃಷ್ಣರ ಧಾರ್ಮಿಕ ಕುಟುಂಬದ ಪ್ರಮುಖರು ಒಬ್ಬೊಬ್ಬರಾಗಿ ಕಳಚಿಕೊಂಡರು. ಇಡೀ ಶಿಷ್ಯವೃಂದಕ್ಕೆ ಪ್ರಮುಖ ಆಶ್ರಯವಾಗಿದ್ದ ಶಾರದಾಮಾತೆ ತೀರಿಕೊಂಡರು. ಮಾತೆಯ ನಿಧನದಿಂದ ೭೦ ವರ್ಷ ವಯಸ್ಸಿನ “ಮ” ತಬ್ಬಲಿಯಾದರು. “ತಾಯಿ ಹೋದರು. ೩೫ ವರ್ಷಗಳ ದೀರ್ಘ ಕಾಲ ಅವರು ನಮ್ಮನ್ನು ಕಾಪಾಡಿದರು.” ಎಂದು ದುಃಖದಿಂದ ಹಲುಬುತ್ತಿದ್ದರು. ಈ ಘಟನೆ “ಮ” ಅವರದೇಹ ಮತ್ತು ಮನಸ್ಸಿನ ಮೇಲೆ ಭಾರಿ ಆಘಾತ ಉಂಟು ಮಾಡಿತು.

ಮಿಹಿಜಾಮ್ನಲ್ಲಿ

ಮಾಸ್ಟರ್ ಅವರಿಗೆ ವಿಶ್ರಾಂತಿ ತುಂಬಾ ಅಗತ್ಯವಾಗಿತ್ತು. ಆಗ ತಾನೇ ಕೆಲವು ಸಾಧುಗಳ ಮತ್ತು ಬ್ರಹ್ಮಚಾರಿಗಳ ನೆರವಿನಿಂದ ಮಿಹಿಜಾಮ್‌ನಲ್ಲಿ ವಿದ್ಯಾಪೀಠವೊಂದನ್ನು ಸ್ಥಾಪಿಸಲಾಗಿತ್ತು. (ಮಿಹಿಜಾಮ್ ಸಣ್ಣ ಹಳ್ಳಿ. ಪೂರ್ಣ ರೈಲ್ವೆ ವಿಭಾಗದಲ್ಲಿ ಕಲ್ಕತ್ತಾಕ್ಕೆ ೧೪೪ ಮೈಲಿ ದೂರದಲ್ಲಿದೆ.) ಬ್ರಹ್ಮಚಾರಿ ವಿದ್ಯಾಚೈತನ್ಯ ಅವರ ಆಮಂತ್ರಣದ ಮೇರೆಗೆ “ಮ” ಮಿಹಿಜಾಮ್‌ಗೆ ಬಂದು ಸ್ವಲ್ಪಕಾಲ ಕಳೆದರು.

ಪ್ರಶಾಂತವಾದ ಪ್ರದೇಶದಲ್ಲಿ ವಿಶ್ರಾಂತಿ ಪಡೆಯಬೇಕೆಂಬ ಹಾಗೂ ಧ್ಯಾನ ಮಾಡಬೇಕೆಂಬ ಎರಡು ಧ್ಯೇಯಗಳು “ಮ” ಅವರನ್ನು ಮಿಹಿಜಾಮ್‌ಗೆ ಕರೆತಂದವು. ಕಲ್ಕತ್ತೆಯಿಂದಲೂ ಅನೇಕ ಭಕ್ತರು ಆಗಾಗ್ಗೆ ಅಲ್ಲಿಗೆ ಬಂದು ಒಂದೆರಡು ದಿನಗಳ ಕಾಲ ಇರುತ್ತಿದ್ದರು. ರಾಮ ಕೃಷ್ಣಾಶ್ರಮದ ಕೇಂದ್ರವಾದ ಬೇಲೂರು ಮಠದ ಸಂನ್ಯಾಸಿಗಳೂ ಕೂಡ ಈ ಆಶ್ರಮಕ್ಕೆ ಆಗಾಗ್ಗೆ ಬರುತ್ತಿದ್ದರು.

ವ್ಯಕ್ತಿತ್ವ

“ಮ” ಎತ್ತರವಾದ ಆಳು ಮತ್ತು ಗಂಭೀರ ವ್ಯಕ್ತಿ. ಅವರದು ಸುಂದರ ಕಾಯ. ದೈವೀ ಕಳೆಯನ್ನು ಬಿಂಬಿಸುವ ಕಣ್ಣು. ವಿಶಾಲವಾದ ಹಣೆ, ನೀಳವಾದ ಗಡ್ಡ, ತೇಜಃಪುಂಜವಾದ ಮುಖ, ಸುಂದರ ನೋಟ, ರಾಮಕೃಷ್ಣರ ವಿಚಾರಧಾರೆಯಲ್ಲಿ ಮೈಮರೆಯುವ ಸ್ವಭಾವ. ಹಗಲು ರಾತ್ರಿ ರಾಮಕೃಷ್ಣರ ಮಹಿಮೆಯನ್ನು ಕೊಂಡಾಡುವ ಮಹಾಯೋಗಿ. “ಮ” ಅವರಿಗೆ ಆಶ್ರಮದಲ್ಲಿ ವಾಸಕ್ಕೆ ದೊಡ್ಡ ಕುಟೀರವೊಂದನ್ನು ಬಿಟ್ಟುಕೊಡಲಾಗಿತ್ತು. ಸಮೀಪದಲ್ಲೇ ಇಟ್ಟಿಗೆಯಿಂದ ಕಟ್ಟಿದ ಮನೆ. ಇದರಲ್ಲಿ ಬ್ರಹ್ಮಚಾರಿಗಳು ವಾಸವಾಗಿದ್ದರು. ಮಾಸ್ಟರ್ ಇದ್ದ ಕುಟೀರ ಪೂರ್ವಾಭಿಮುಖವಾಗಿತ್ತು. ಕುಟೀರದ ದಕ್ಷಿಣಕ್ಕೆ ಗುಲಾಬಿ, ಜಾಜಿ, ಮಲ್ಲಿಗೆ ಹೂಗಳ ತೋಟ, ಮಾವಿನ ತೋಪು. ಗುಡಿಸಲು ಮುಂದೆ ದೊಡ್ಡ ಜಂಬು ವೃಕ್ಷ. ಮರದ ಸುತ್ತ ಇಟ್ಟಿಗೆಯಿಂದ ನಿರ್ಮಿಸಿದ ಜಗುಲಿ. ಅಲ್ಲಿ “ಮ” ಭಕ್ತ ರೊಡನೆ ಕುಳಿತುಕೊಳ್ಳುತ್ತಿದ್ದರು. ಭಾಗವತ ಪ್ರವಚನವನ್ನು ಭಕ್ತರು ಕೇಳುತ್ತಿದ್ದರು. ಗುಡಿಸಲ ಉತ್ತರಕ್ಕೆ ಇರುವ ಮೈದಾನದಲ್ಲಿ ಅಶ್ವತ್ಥ ವೃಕ್ಷ. “ಮ” ಅದರ ಕೆಳಗಡೆ ಕುಳಿತು ಧ್ಯಾನ ಮಾಡುತ್ತಿದ್ದರು.

ಸರಳ ಜೀವನ

ಬ್ರಹ್ಮಚಾರಿಗಳು ಮತ್ತು ಭಕ್ತರ ಜತೆ ವಾಸವಾಗಿದ್ದ “ಮ” ಅವರ ಜೀವನ ವೇದಗಳ ಕಾಲದ ಋಷಿಗಳ ತಪೋವನ ಜೀವನವನ್ನು ಜ್ಞಾಪಕಕ್ಕೆ ತರುತ್ತಿತ್ತು. ಆಶ್ರಮದಲ್ಲಿ ಸೇವಕರೇ ಇರಲಿಲ್ಲ. ಗೃಹಕೃತ್ಯಗಳನ್ನು ಭಕ್ತರೇ ಮಾಡಿಕೊಳ್ಳುತ್ತಿದ್ದರು. ಅಡಿಗೆಗೆ ಮಣ್ಣಿನ ಮಡಕೆ; ಕಾಡಿನಲ್ಲಿ ದೊರಕುವ ಹಸಿರೆಲೆಗಳೇ ಊಟ ಮಾಡುವ ತಟ್ಟೆಗಳು. ಕಂಬಳಿಯೇ ಹಾಸಿಗೆ. ವಯಸ್ಸಾಗಿದ್ದ “ಮ” ಅವರಿಗೆ ಮಾತ್ರ ಮಲಗಲು ಮರದ ಹಲಗೆಗಳನ್ನು ಹಾಕಲಾಗಿತ್ತು. “ಮ” ಆಹಾರವಾಗಿ ಹಾಲು, ಅನ್ನ, ರೊಟ್ಟಿ, ತೆಗೆದು ಕೊಳ್ಳುತ್ತಿದ್ದರು. ಬ್ರಹ್ಮಚಾರಿಗಳು ಅನ್ನ, ಬೇಳೆ ಕಟ್ಟು ಉಪಯೋಗಿಸುತ್ತಿದ್ದರು. “ತಪಸ್ಸಿಗಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಸರಳ ಜೀವನ ಸಾಗಿಸದಿದ್ದರೆ ತಪಸ್ಸು ಮಾಡಲು ಸಾಧ್ಯವಾಗದು” ಎಂದು “ಮ” ಹೇಳುತ್ತಿದ್ದರು. ಸರಳ ಜೀವನ, ಉನ್ನತ ಆದರ್ಶ ಅವರ ಬದುಕಾಗಿತ್ತು.

“ಮ” ವಾಸವಾಗಿದ್ದ ಕುಟೀರದಲ್ಲೇ ಪೂಜಾಮಂದಿರ ಇತ್ತು. ರಾಮಕೃಷ್ಣರ ಚಿತ್ರವೊಂದನ್ನು ಅಲ್ಲಿ ಇಡಲಾಗಿತ್ತು. ರಾಮಕೃಷ್ಣರ ಭಾವಚಿತ್ರಕ್ಕೆ ಎದುರಾಗಿ ಭಕ್ತಾದಿಗಳು ನೆಲದ ಮೇಲೆ ಹಾಸಿದ ಕಂಬಳಿಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಬೆಳಗ್ಗೆ, ಸಂಜೆ ನಂದಾದೀಪ ಉರಿಯುತ್ತಿತ್ತು. ಮಧ್ಯಾಹ್ನ ಹಣ್ಣು ಸಿಹಿಯನ್ನು ನೈವೇದ್ಯಕ್ಕೆ ಇಡುತ್ತಿದ್ದರು. “ಮ” ಬೆಳಗ್ಗೆ ಹೊತ್ತು ಉಪನಿಷತ್‌ಗಳನ್ನು ಓದಿ ವಿವರಿಸುತ್ತಿದ್ದರು. ಸಂಜೆ ಹೊತ್ತು ಕಥಾಮೃತದ ಬಗ್ಗೆ ವಿವರಣೆ ಕೊಡುತ್ತಿದ್ದರು. ಪ್ರತಿ ಬೆಳಗ್ಗೆ ಪ್ರಾರ್ಥನೆಯ ನಂತರ ಮತ್ತು ಮಧ್ಯಾಹ್ನ ಬ್ರಹ್ಮಚಾರಿಗಳನ್ನು ರ್ಧಯಾನ ಮಾಡಲು, ಒಂಟಿ ಒಂಟಿಯಾಗಿ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸುತ್ತಿದ್ದರು. ಸಂಜೆ ಸಮಯದಲ್ಲಿ ಕೆಲವು ಭಕ್ತರೊಂದಿಗೆ ಗಾಳಿ ಸಂಚಾರಕ್ಕಾಗಿ ಹೋಗುತ್ತಿದ್ದರು. ರಾತ್ರಿ ಊಟವಾದ ಮೇಲೆ ಕುಟೀರದ ಅಂಗಳದಲ್ಲಿ ಹೊಳೆವ ನಕ್ಷತ್ರದ ನಸು ಬೆಳಕಿನಲ್ಲಿ “ಮ” ಬ್ರಹ್ಮಚಾರಿಗಳೊಂದಿಗೆ ಕುಳಿತುಕೊಳ್ಳುತ್ತಿದ್ದರು. ಸದಾ ಅವರಿಗೆ ರಾಮಕೃಷ್ಣರ ಧ್ಯಾನವೇ.

ಮಿಹಿಜಾಮ್ ಆಶ್ರಮದ ಸುತ್ತಲ ನೋಟ, ಸಮೀಪದಲ್ಲಿನ ಮಾವಿನ ತೋಪು ಎಲ್ಲವನ್ನೂ ನೋಡಿದಾಗ, “ಮ” ಆಗಾಗ್ಗೆ “ಇದು ಬಹಳ ಸುಂದರ ತಾಣ. ಇಲ್ಲಿ ಕುಳಿತಿದ್ದ ಹಾಗೆ ರಾಮಕೃಷ್ಣರು ನೆನಪಾಗುತ್ತಾರೆ. ಅವರು ನನಗೆ ಹೇಳುತ್ತಿದ್ದುದೆಲ್ಲ ಜ್ಞಾಪಕಕ್ಕೆ ಬರುತ್ತದೆ. ಏನನ್ನಾದರೂ ತಿಳಿದುಕೊಳ್ಳಬೇಕೆಂದು ನಿಷ್ಠೆಯಿಂದ ರಾಮಕೃಷ್ಣರನ್ನು ಪ್ರಾರ್ಥಿಸಿದರೆ, ಅಂಥವರಿಗೆ ಅವರು ಮಾರ್ಗದರ್ಶನ ನೀಡುತ್ತಾರೆ. ಅವರೇ ಬಂದು ಅದನ್ನು ಮಾಡು ಇಲ್ಲವೇ ಬಿಡು ಎಂದು ಹೇಳುತ್ತಾರೆ. ಕೆಲವರ ಮನಸ್ಸಿಗೆ ರಾಮ ಕೃಷ್ಣರು ಬಂದು ನಿರ್ದೇನ ನೀಡುತ್ತಾರೆ. ಶುದ್ಧ ಮನಸ್ಸಿಗೆ ಆಲೋಚನೆ ರೂಪದಲ್ಲಿ ಅವರು ಬರುತ್ತಾರೆ. ಸಾಧುಗಳ ಜತೆ ಇರುವುದರಿಂದ ಮನಸ್ಸು ಶುದ್ಧಿ ಹೊಂದುತ್ತದೆ” ಎಂದಿದ್ದಾರೆ. ಅಲ್ಲಿ ಕುಳಿತಾಗ ಅವರಿಗೆ ರಾಮಕೃಷ್ಣರು ಹೇಳಿದ ಮಾತುಗಳೆಲ್ಲ ನೆನಪಾಗುತ್ತಿದ್ದವು.

ಕಲ್ಕತ್ತೆಯಲ್ಲಿ

“ಮ” ಮಿಹಿಜಾಮ್‌ನಿಂದ ಕಲ್ಕತ್ತೆಯ ತಮ್ಮ ಸ್ವಂತ ಮನೆಗೆ ಬಂದ ಮೇಲೆಯೂ ಮನೆಯಲ್ಲಿ ಮತ್ತು ಮಾರ್ಟಿನ್ ಶಾಲೆ ಆವರಣದಲ್ಲಿ ಅನೇಕ ಬಗೆಯ ಹೂ, ಹಣ್ಣಿನ ಗಿಡಗಳನ್ನು ಬೆಳೆಸಿದರು. ಮನೆಯನ್ನು ಆಶ್ರಮದಂತೆಯೇ ಇಟ್ಟುಕೊಂಡರು. ಅಲ್ಲಿ ಉಪನಿಷತ್ ಪಠಣ ಮಾಡುವುದನ್ನು ಕೇಳಲು ಅನೇಕ ಮಂದಿ ಭಕ್ತರು ಅವರ ಮನೆಗೇ ಬರುತ್ತಿದ್ದರು. ಮಾಸ್ಟರ್ ಸದಾ ಸಾಧುಗಳ ಮತ್ತು ಭಕ್ತರ ಮಧ್ಯೆ ಇರುತ್ತಿದ್ದರು. ತಮ್ಮನ್ನು ಕಾಣಲು ಬರುವ ಭಕ್ತವೃಂದವನ್ನು ಸಾಧುಗಳ ಸಂಗಕ್ಕಾಗಿ ಪ್ರತಿದಿನ ಬೇಲೂರು ಮಠಕ್ಕೆ ಕಳುಹಿಸುತ್ತಿದ್ದರು.

ಕಥಾಮೃತ ಜಗತ್ತಿಗೆ

“ಮ” ಅವರು ರಾಮಕೃಷ್ಣರನ್ನು ಸಂದರ್ಶಿಸಿದಾಗಲೆಲ್ಲಾ ನಡೆದ ಸಂಗತಿಗಳ ಬಗ್ಗೆ ವಿಸ್ತಾರವಾಗಿ ಟಿಪ್ಪಣಿಗಳನ್ನು ಗುರುತು ಹಾಕಿಕೊಳ್ಳುತ್ತಿದ್ದರು. ಅನೇಕ ವೇಳೆ ಒಂದು ದಿನದ ಭೇಟಿಯಲ್ಲಿ ನಡೆದುದನ್ನು ಕ್ರಮವಾಗಿ ನಿರೂಪಿಸಲು ಮೂರು ದಿನ ವಿರಾಮವಿಲ್ಲದೆ ಬರೆಯುತ್ತಿದ್ದರಂತೆ.

ತಾವು ಬರೆದಿಟ್ಟುಕೊಂಡಿದ್ದ ಟಿಪ್ಪಣಿಗಳನ್ನು ಗ್ರಂಥ ರೂಪವಾಗಿ ಪ್ರಕಟಿಸುವ ಇಷ್ಟವಾಗಲೀ, ಉದ್ದೇಶವಾಗಲೀ “ಮ” ಅವರಿಗೆ ಮೊದಲು ಇರಲಿಲ್ಲ. ಆದರೆ ಅನೇಕರು ಒತ್ತಾಯ ಮಾಡಿ ಗ್ರಂಥವನ್ನು ಪ್ರಕಟಿಸಬೇಕೆಂದು ಪ್ರಭಾವ ಬೀರಿದರು. ರಾಮಕೃಷ್ಣರು ಮಹಾ ಸಮಾಧಿಗೆ ಸಂದ ಮೇಲೆ ಬಾರಾ ನಗರದಲ್ಲಿ ತರುಣ ಯತಿಗಳು ಮೊದಲು ಮಠವನ್ನು ಸ್ಥಾಪಿಸಿದರು. ಅವರ ಸಹಾಯಕರ ತಂಡದಲ್ಲಿ “ಮ” ಅವರು ಒಬ್ಬರು. ಗುರುವಿನ ಚರಿತ್ರೆಯ ಸಂಗತಿಯನ್ನು ಬಲ್ಲ ಯತಿಗಳು ನಿಮ್ಮ ಟಿಪ್ಪಣಿಯನ್ನು ಪ್ರಕಟಿಸಿದರೆ ಎಲ್ಲರಿಗೂ ಉಪಕಾರವಾಗುತ್ತದೆ ಎಂದು “ಮ” ಅವರನ್ನು ಒತ್ತಾಯಪಡಿಸಿದರು. ೧೮೮೯ ರಲ್ಲಿ ಮಹಾಮಾತೆ ಶಾರದಾದೇವಿ ಅವರು “ಮ” ಅವರ ಟಿಪ್ಪಣಿಯಲ್ಲಿ ಆಸಕ್ತಿ ತೋರಿಸಿದರು. “ಮ” ಅವರು ಓದಿ ಹೇಳಿದರು. ಮಾತೆಯವರು ಕಥಾಮೃತದಲ್ಲಿ ಕಂಡುಬಂದ ಗುಣವನ್ನು ಮೆಚ್ಚಿ ಗ್ರಂಥರೂಪವಾಗಿ ಪ್ರಕಟಿಸಲೇಬೇಕೆಂದು ಸೂಚನೆ ಕೊಟ್ಟರು. ಮಾತೆಯ ಈ ಸೂಚನೆಯನ್ನು “ಮ” ಅಪ್ಪಣೆಯಾಗಿ ಸ್ವೀಕರಿಸಿದರು. ಕಥಾಮೃತದ ಕೆಲವು ಭಾಗಗಳನ್ನು ಆಯ್ದು ಇಂಗ್ಲೀಷಿನಲ್ಲಿ ಎರಡು ಸಣ್ಣ ಪುಸ್ತಕಗಳನ್ನು ಪ್ರಕಟಿಸಿದರು. ಇವನ್ನು ಸ್ವಾಮಿ ವಿವೇಕಾನಂದರು ತುಂಬಾ ಮೆಚ್ಚಿ ಕೊಂಡರು. ಬಂಗಾಳಿ ಭಾಷೆಯ ಮೂರು ನಾಲ್ಕು ಬೇರೆ ಬೇರೆ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ’ರಾಮಕೃಷ್ಣ ಕಥಾಮೃತದ ನಾಲ್ಕು ಸಂಪುಟಗಳು ಗ್ರಂಥ ರೂಪದಲ್ಲಿ ಪ್ರಕಟವಾದುವು. ಕೊನೆಯ ಸಂಪುಟ ಪ್ರಕಟವಾದದ್ದು ೧೯೩೨ ರಲ್ಲಿ, ಅದೂ “ಮ” ಅವರು ಕಾಲಾಧೀನರಾದ ಮೇಲೆ. ಗ್ರಂಥ ಪ್ರಕಾಶನ ಇಷ್ಟು ತಡವಾದುದಕ್ಕೆ ಕಾರಣ “ಮ” ಅವರು ಕಥಾಮೃತ ಗ್ರಂಥ ರಚನೆಯನ್ನು ದೇವತಾಪೂಜೆಯೆಂದು ಭಾವಿಸಿದ್ದುದರಿಂದ ಅವರು ಗ್ರಂಥರಚನೆ ಮುಂದುವರಿಸಲು ಕುಳಿತಾಗಲೆಲ್ಲ ಧ್ಯಾನ ಪರವಶರಾಗಿಬಿಡುತ್ತಿದ್ದರು.

ಮಹಾ ಸಮಾಧಿ

ರಾಮಕೃಷ್ಣರ ಗೃಹಸ್ಥ ಭಕ್ತರಿಗೆಲ್ಲ ಮಹೇಂದ್ರನಾಥ ಗುಪ್ತರು ಆದರ್ಶ ಪ್ರಾಯರಾಗಿದ್ದರು. ಗುರುವಿನ ಉಪದೇಶಗಳನ್ನು ಕಥಾಮೃತದ ಮೂಲಕ ಜನರಲ್ಲಿ ಹರಡ ಬೇಕೆಂಬುದೇ ಅವರ ಜೀವನದ ಮುಖ್ಯ ಉದ್ದೇಶವಾಗಿತ್ತು. ಈ ಗ್ರಂಥದ ಐದನೆಯ ಭಾಗದ ಬರಹ ರಾತ್ರಿ ೯ ಘಂಟೆಗೆ ಮುಗಿಯಿತು. ಕೆಲವೇ ದಿನಗಳ ನಂತರ ೧೯೩೨ನೇ ಜೂನ್ ೪ರಂದು ಶನಿವಾರ ರಾತ್ರಿ ಅವರಿಗೆ ನರಗಳ ವ್ಯಾಧಿಕಾಣಿಸಿಕೊಂಡಿತು. ಮಹೇಂದ್ರನಾಥ ಗುಪ್ತರು ದುರ್ಗನಾಮ ಜಪಮಾಡಲು ಆರಂಭಿಸಿ ಅಂದಿಗೆ ೨೧ ದಿನಗಳಾಗಿತ್ತು. “ನಿರ್ಭಯಳಾದ ದೇವಿಯ ಚರಣಗಳಲ್ಲಿ ನಾನು ಶರಣು ಹೋಗಿದ್ದೇನೆ. ಮೃತ್ಯುದೇವತೆಯಿಂದ ನನಗೇನು ಭಯವಿದೆ?” ಎನ್ನುತ್ತಿದ್ದರು. ಅವರು ’ಗುರು ದೇವ! ಮಾತೆ! ನನ್ನನ್ನು ನಿಮ್ಮ ತೋಳುಗಳಲ್ಲಿ ಸೇರಿಸಿಕೊಳ್ಳಿ’ ಎನ್ನುತ್ತಾ ಮಹಾಸಮಾಧಿಯನ್ನು ಪ್ರವೇಶಿಸಿದರು.

“ಮ” ಅವರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಹೆಣ್ಣು ಮಕ್ಕಳು, ಅಪಾರ ಬಂಧುವರ್ಗ. “ಮ” ತನ್ನ ಕರ್ತವ್ಯಗಳನ್ನೆಲ್ಲಾ ಮಾಡಿದರು. ಕೊನೆಗೂ ಕುಟುಂಬದಲ್ಲಿ ಆಲಿಪ್ತವಾಗಿದ್ದು ಬಿಟ್ಟಿದ್ದರು.

ಹಿರಿಯ ಚೇತನ

ತಮ್ಮ ಗುರುವಿನಂತೆ “ಮ” ಕೂಡ ಪ್ರಪಂಚದ ಎಲ್ಲ ಧರ್ಮಗಳ ಬಗ್ಗೆ ಗೌರವ ತಳೆದಿದ್ದರು. ಅವರು ದೇವಸ್ಥಾನ, ಚರ್ಚ್‌, ಮಸೀದಿ, ಗುರುದ್ವಾರ, ಬೌದ್ಧ, ಜೈನರ ಮತ್ತು ಆರ್ಯ ಸಮಾಜ ಬ್ರಹ್ಮ ಸಮಾಜ ಮಂದಿರಗಳಿಗೂ ಹೋಗುತ್ತಿದ್ದರು.ಎಲ್ಲ ಪವಿತ್ರ ಸ್ಥಳಗಳಲ್ಲಿಯೂ ಪ್ರಾರ್ಥನೆ ಸಲ್ಲಿಸುತ್ತಿದ್ದರು.

“ಮ” ಸದಾ ರಾಮಕೃಷ್ಣರ ಗುಣಗಾನ ಮಾಡುತ್ತಿದ್ದರು. ಸುಮಾರು ೫೦ ವರ್ಷಗಳ ಕಾಲ ಭಕ್ತರ ಮನಸ್ಸಿಗೆ ತಮ್ಮ ಬೋಧನೆಗಳಿಂದ ಶಾಂತಿ, ಸಮಾಧಾನ ನೀಡಿದರು. ಯುವಕ ಬ್ರಹ್ಮಚಾರಿಗಳಿಗೆ ಸರ್ವಸ್ವವನ್ನೂ ತ್ಯಾಗ ಮಾಡಿ ಪವಿತ್ರ ಜೀವನ ಅವಲಂಬಿಸುವಂತೆ ಸ್ಫೂರ್ತಿ ನೀಡಿದರು.

“ಮ” ಅನೇಕ ದೈವೀಗುಣಗಳಿಂದ ಕೂಡಿದ್ದರು. ದೇವರಲ್ಲಿ ನಂಬಿಕೆ, ಅಚಲವಾದ ಭಕ್ತಿ, ಸಾಧು ಸಂತರ ಬಗ್ಗೆ ಗೌರವ, ಹಿತನುಡಿ, ಪ್ರಶಾಂತ ಚಿತ್ತತೆ, ಇತರರ ಕಷ್ಟಗಳ ಬಗ್ಗೆ ಅನುಕಂಪ ಮುಂತಾದ ಉತ್ತಮ ಗುಣಗಳು “ಮ” ಅವರ ಜೀವನದಲ್ಲಿ ಅಚ್ಚೊತ್ತಿದ್ದುವು. ಎಷ್ಟೋ ರಾತ್ರಿ ಅವರು ತಮ್ಮ ಹಾಸಿಗೆಯನ್ನು ತೆಗೆದುಕೊಂಡು ಮನೆ ಬಿಟ್ಟು ಹೊರಟು ಹೋಗುತ್ತಿದ್ದರಂತೆ. ಮನೆಮಠಗಳಿಲ್ಲದೆ ಯಾವುದೇ ಕಟ್ಟಡದ ಹಜಾರದಲ್ಲಿ ಮಲಗಿದ್ದ ಭಿಕ್ಷುಕ ಯುವಕರ ಜೊತೆಗೆ ಮಲಗಿಕೊಳ್ಳುತ್ತಿದ್ದರಂತೆ. ಮಹಾ ದಾನಗಳಲ್ಲಿ ಜ್ಞಾನದಾನವೂ ಒಂದು. ತಮ್ಮ ಇಡೀ ಜೀವನದಲ್ಲಿ ಪ್ರಾಪಂಚಿಕ ಮತ್ತು ಬ್ರಹ್ಮ ಜ್ಞಾನವನ್ನು ಹಂಚಿದ ವಿಶ್ವದ ಮಹಾದಾನಿಗಳಲ್ಲಿ “ಮ” ಒಬ್ಬರು. ರಾಮಕೃಷ್ಣ ಮಠ ಮತ್ತು ಮಿಷನ್ ಅಷ್ಟು ಪ್ರಖ್ಯಾತವಾಗದೆ ಇದ್ದ ಆ ಕಾಲದಲ್ಲಿ ಕಥಾಮೃತವನ್ನು ಪ್ರಕಟಿಸಿ ಅದರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಮಹಾಸಾಹಸಿ.

ಮನೆ ಮಠಗಳಿಲ್ಲದ ಭಿಕ್ಷುಕರೊಡನೆ ಮಲಗಲು ಹೋಗುತ್ತಿದ್ದರು.

ಮಹೇಂದ್ರನಾಥರು ಬರೆದ ’ಶ್ರೀರಾಮಕೃಷ್ಣ ಕಥಾಮೃತ’ವನ್ನು ಓದುತ್ತಿದ್ದರೆ ರಾಮಕೃಷ್ಣರನ್ನು ಎದುರಿಗೆ ಕಂಡಂತೆ ಎನ್ನಿಸುತ್ತದೆ, ಅವರ ಮಾತುಗಳು ಕೇಳಿಸಿದಂತಾಗುತ್ತದೆ. ಮಂಚದ ಮೇಲೆ ಕುಳಿತ ರಾಮಕೃಷ್ಣರು, ನಿಂತಂತೆಯೇ, ಸಮಾಧಿಸ್ಥರಾದ ರಾಮಕೃಷ್ಣರು, ಅವರ ನಗುಮುಖ, ಅವರು ಕಥೆ ಹೇಳುವುದು, ಅವರ ಸುತ್ತ ಮುತ್ತಲಿನ ಶಿಷ್ಯರ – ಎಲ್ಲ ಕಣ್ಣ ಮುಂದೆ ಕಂಡಂತಾಗುತ್ತದೆ.

“ಮ” ಅಂದು ಹೊತ್ತಿಸಿದ ಕಥಾಮೃತದ ಹಣತೆ ಇಂದು ರಾಮಕೃಷ್ಣ ಭಕ್ತರ ಹೃದಯದಲ್ಲಿ ಅಖಂಡ ಜ್ಯೋತಿಯಾಗಿ ರಾರಾಜಿಸುತ್ತಿದೆ.