‘ಆಧುನಿಕ ನಾಗರಿಕತೆಗೆ ವಿಜ್ಞಾನ ಒಂದು ಅದ್ಭುತ ಸಾಧನ. ವಿಜ್ಞಾನವು ಎಂದೂ ಸುಳ್ಳಾಗುವುದಿಲ್ಲ. ಸತ್ಯವನ್ನಷ್ಟೇ ಅದು ಸಾರುತ್ತದೆ. ಒಂದು ರಾಷ್ಟ್ರದ ಉನ್ನತಿಗೆ ವಿಜ್ಞಾನವೇ ಪ್ರಗತಿ ಆಗಬೇಕಾಗಿದೆ.” ಕಲ್ಕತ್ತೆಯಲ್ಲಿ ವಿಜ್ಞಾನದ ಉಪಾಸನೆಗಾಗಿ ಒಂದು ಮಂದಿರ; ವಿಜ್ಞಾನದ ಪಾಲನೆ ಪೋಷಣೆಗಾಗಿ ಆ ಮಂದಿರದ ಸ್ಥಾಪನೆಯಾಗಿತ್ತು. ಒಬ್ಬ ವೈದ್ಯರು ಅಲ್ಲಿನ ಅರ್ಚಕರು. ಈ ಮೇಲಿನ ಮಾತುಗಳೂ ಅವರು ದುಡಿದುವೇ. “ಸತ್ಯವೇ ದೇವರು, ನಾನು ಆ ದೇವರ ಸಾಧನ. ನನ್ನ ವೃತ್ತಿಯನ್ನಾದರೂ ಬಿಟ್ಟುಕೊಟ್ಟೇನು, ಸತ್ಯವನ್ನು ಬಿಡಲಾರೆ. ಎಲ್ಲಿ ಸತ್ಯವೋ ಅಲ್ಲಿ ನಾನು” ಈ ನಿಷ್ಠೆಯಿಂದ ಬಾಳಿದವರು ಡಾ. ಮಹೇಂದ್ರಲಾಲ್ ಸರ್ಕಾರ್. ಭಾರತದ ಖ್ಯಾತ ವೈದ್ಯ ವಿಜ್ಞಾನಿ.

ಒಂದು ನೂರು ವರ್ಷಗಳ ಹಿಂದೆ ಭಾರತದಲ್ಲಿ ವಿಜ್ಞಾನದ ಕೆಲಸಕ್ಕೆ ಮುಡಿಪಾಗಿ ‘ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಷನ್ ಆಫ್ ಸೈನ್ಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ ಧೀರರು ಇವರು.

ಬಾಲ್ಯ, ವಿದ್ಯಾಭ್ಯಾಸ

ಬಂಗಾಳದ ಹೌರಾ ಪಟ್ಟಣದ ಬಳಿಯ ಒಂದು ಹಳ್ಳಿ; ಅದರ ಹೆಸರು ಪೈಕವಾಡಾ. ಅಲ್ಲೊಂದು ರೈತ ಕುಟುಂಬ. ಸರ್ಕಾರ್ ಕುಟುಂಬದ ರಾಮತಾರಕ್, ಕುಟುಂಬದ ಯಜಮಾನ; ಗದ್ದೆ ಹೊಲಗಳಲ್ಲಿ ಅವನ ಕೆಲಸ. ಅವನಿಗೆ ಇಬ್ಬರು ಗಂಡು ಮಕ್ಕಳು. ಹಿರಿಯವನೇ ಮಹೇಂದ್ರಲಾಲ್.

ಮಹೇಂದ್ರಲಾಲ್ ಜನಿಸಿದ್ದು ೧೮೩೩ ನವೆಂಬರ್ ೨ ರಂದು. ಐದು ವರ್ಷ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ. ಮಹೇಂದ್ರಲಾಲ್ ಸೋದರಮಾವಂದಿರ ಆಶ್ರಯದಲಲಿ ಬೆಳೆದ. ಸ್ವಲ್ಪ ಕಾಲ ಕಳೆಯುವುದರಲ್ಲೇ ಅವನ ತಾಯಿಯೂ ತೀರಿಕೊಂಡಳು. ಮಹೇಂದ್ರಲಾಲ್ ತಬ್ಬಲಿಯಾದ. ಮಾವಂದಿರೇ ಅವನನ್ನು ಪ್ರೀತಿಯಿಂದ ಸಾಕಿದರು.

ಓದು ಕಲಿಯಲು ಸರಿಯಾದ ಶಾಲೆಗಳಿಲ್ಲದ ಕಾಲವದು. ಪಾಠ ಹೇಳುವ ಗುರುಗಳ ಮನೆಯೇ ಪಾಠಶಾಲೆ. ಮಹೇಂದ್ರಲಾಲ್ ಅಲ್ಲಿ ಬಂಗಾಳಿ ಭಾಷೆಯನ್ನು ಅಭ್ಯಾಸ ಮಾಡಿದ. ವಿದ್ಯೆ ಕಲಿಯುವುದೆಂದರೆ ಅವನಿಗೆ ತುಂಬಾ ಶ್ರದ್ಧೆ. ಓದುವುದರಲ್ಲಿ ಇತರ ವಿದ್ಯಾರ್ಥಿಗಳಿಗಿಂತ ಯಾವಾಗಲೂ ಸ್ವಲ್ಪ ಮುಂದೆಯೇ. ಇದು ಅವನ ಮಾವಂದಿರ ಗಮನಕ್ಕೆ ಬಾರದೇ ಹೋಗಲಿಲ್ಲ. ಅವನನ್ನು ಇಂಗ್ಲಿಷ್ ವಿದ್ಯಾಭ್ಯಾಸಕ್ಕೆಂದು ಠಾಕೂರನಾಥ ಡೇ ಎಂಬ ಅಧ್ಯಾಪಕರ ಬಳಿ ಸೇರಿಸಿದರು. ಠಾಕೂರನಾಥ ಡೇಯವರು ಅಪರೂಪದ ವ್ಯಕ್ತಿ. ಮಹೇಂದ್ರಲಾಲ್ ಮಹಾ ವ್ಯಕ್ತಿಯಾಗಲು ಠಾಕೂರನಾತ ಡೇಯವರಿಂದ ದೊರೆತ ಸ್ಫೂರ್ತಿಯೇ ಕಾರಣ ಎನ್ನಬಹುದು. ಅವರದೇ ಒಂದು ಪಾಠಶಾಲೆ. ಹಳ್ಳಿ ಮಾಸ್ತರರಾದರೂ ಅವರಲ್ಲಿದ್ದ ತಿಳಿವಳಿಕೆ ಅಪಾರ ಮಹೇಂದ್ರಲಾಲನನ್ನು ತಮ್ಮ ಮಗನಂತೆ ನೋಡಿಕೊಂಡರು. ಮಹೇಂದ್ರಲಾಲ್ ಅವರಲ್ಲಿ ಕಲಿತದ್ದು ಹನ್ನೆರಡೇ ತಿಂಗಳು. ಆದರೂ ಅವು ಮರೆಯಲಾಗದ ದಿನಗಳು. ಅಂತಹ ರೂಪಶಿಲ್ಪಿಯಾಗಿದ್ದರು ಠಾಕೂರ ನಾಥ ಡೇ.

ಕಲ್ಕತ್ತೆಯಲ್ಲಿ ಡೇವಿಡ್ ಹ್ಯಾರ್ ಎಂಬ ಉದಾರಿಯ ಒಂದು ಶಾಲೆ ಇತ್ತು. ಬುದ್ಧಿವಂತ ಮಕ್ಕಳನ್ನು ಹ್ಯಾರ್ ಬಹು ಪ್ರೀತಿಯಿಂದ ಶಾಲೆಗೆ ಸೇರಿಸಿಕೊಳ್ಳುತ್ತಿದ್ದ. ಓದು ಕಲಿಯುವ ಯಾವ ವಿದ್ಯಾಶುಲ್ಕವನ್ನೂ ತೆರಬೇಕಾಗಿರಲಿಲ್ಲ. ಮಹೇಂದ್ರಲಾಲನಿಗೆ ಆಗ ಏಳು ವರ್ಷ ವಯಸ್ಸು. ಹ್ಯಾರ್‌ನಂತಹ ಉತ್ತಮ ಮಾರ್ಗದರ್ಶಕರು ಲಭಿಸಿದ್ದು ಅವನ ಸುಯೋಗ.

ಸಾಹಿತ್ಯಪ್ರಿಯ

ತರುಣ ಮಹೇಂದ್ರಲಾಲನಿಗೆ ೧೮೫೦ರಲ್ಲಿ ಹಿಂದೂ ಕಾಲೇಜಿನಲ್ಲಿ (ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜು) ಪ್ರವೇಶ ದೊರೆಯಿತು. ಅಲ್ಲಿ ಅವನು ಆರಿಸಿಕೊಂಡ ವಿಷಯ ಇಂಗ್ಲಿಷ್ ಸಾಹಿತ್ಯ. ಮುಂದೆ ವೈದ್ಯಕೀಯ ವಿಜ್ಞಾನವನ್ನು ಅಭ್ಯಾಸಮಾಡಿದ ಮಹೇಂದ್ರಲಾಲನಿಗೆ ಇಂಗ್ಲಿಷ್ ಪ್ರಿಯವಾದದ್ದು. ಆಶ್ಚರ್ಯವೇ! ಇಂಗ್ಲಿಷ್ ಸಾಹಿತ್ಯದ ಜೊತೆಗೆ ಇತಿಹಾಸ, ತತ್ವಜ್ಞಾನ ಅವನ ಆಸಕ್ತಿಯ ವಿಷಯಗಳಾದವು. ಕಾಳೇಜಿನ ಪ್ರಿನ್ಸಿಪಾಲ್ ಸಟ್‌ಕ್ಲಿಫ್ ಅವರಿಗೆ ಮಹೇಂದ್ರಲಾಲ್ ಅಚ್ಚುಮೆಚ್ಚು.

ವಿಜ್ಞಾನದ ಒಲವು

ಮಹೇಂದ್ರಲಾಲನಿಗೂ ಪುಸ್ತಕಕ್ಕೂ ಬಿಡಲಾರದ ನಂಟು. ಹೊಸ ಪುಸ್ತಕಗಳು ಯಾವುದೇ ಬಂದಿದ್ದರೂ ತಾನು ಅದನ್ನು ಓದಬೇಕು. ಇದೊಂದು ಚಟವಾಯಿತು ಅವನಿಗೆ. ಒಮ್ಮೆ ಮಹೇಂದ್ರಲಾಲನಿಗೆ ‘ಟೂರ್ ತ್ರೂ ಕ್ರಿಯೇಷನ್’ ಎಂಬ ಪುಸ್ತಕ ಸಿಕ್ಕಿತು. ಮಿಲ್ನರ್ ಎಂಬುವನು ಅದರ ಗ್ರಂಥಕರ್ತ. ಈ ಗ್ರಂಥದಲ್ಲಿ ಆತ ಸರ್ ವಿಲಿಯಂ ಹರ್ಷಲ್ ಎಂಬಾತ ಸೂರ್ಯ ಮಂಡಲವನ್ನು ಕಂಡ ರೀತಿಯನ್ನು ವರ್ಣಿಸಿದ್ದ. ಸೂರ್ಯ ಒಂದು ಕಡೆ ಇರುವ ಗೋಳವಲ್ಲ. ಅದೂ ಚಲಿಸುತ್ತದೆ – ಇದೇ ಅಲ್ಲಿನ ಸಿದ್ಧಾಂತವಾಗಿತ್ತು. ಮಹೇಂದ್ರಲಾಲನಿಗೆ ಇದು ಕುತೂಹಲದ ವಿಷಯವಾಯಿತು. ಪ್ರಕೃತಿಯಲ್ಲಿ ಇಂತಹ ಇನ್ನೂ ಎಷ್ಟೋ ರಹಸ್ಯಗಳಿರಬೇಕಲ್ಲವೆ, ಎಂದು ಅವನ ಮನಸ್ಸು ಕೇಳಿತು. ಓದುತ್ತಿದ್ದ ಕೋಣೆಯ ಹೊರಗೆ ಬಂದ. ಆಕಾಶದಲ್ಲಿನ ನಕ್ಷತ್ರಗಳನ್ನು ನೋಡಿದ. ಯಾವುದೋ ತಿಳಿಯದ ವಿಷಯವೊಂದಿದೆ ಎನಿಸಿತವನಿಗೆ. ಇದೊಂದು ಘಟನೆ ಅವನ ಸ್ಫೂರ್ತಿಯ ಸಲೆ ಆಯಿತು. ವಿಜ್ಞಾನ ಕಲಿಯಬೇಕೆನಿಸಿತು.

ಮಹೇಂದ್ರಲಾಲನ ಕಾಲೇಜು ವಿದ್ಯಾಭ್ಯಾಸ ಸಾಗಿತ್ತು. ಸಾಹಿತ್ಯ ಅವನಿಗೆ ಪ್ರಿಯವಾದ ವಿಷಯವೇ ಆಗಿದ್ದರೂ ವಿಜ್ಞಾನದ ಹಂಬಲ ಉಂಟಾಗತೊಡಗಿತು. ಥಾಮಸ್ ಹಕ್ಸ್ಲಿ, ಜಾನ್ ಸ್ಟೋಅರ್ಟ್ ಮಿಲ್‌ರವರ ಪುಸ್ತಕಗಳನ್ನು ಓದಿದ ಮೇಲಂತೂ ವಿಜ್ಞಾನದ ವ್ಯಾಸಂಗ ಎಷ್ಟು ಅಗತ್ಯವೆಂದು ಮಹೇಂದ್ರಲಾಲನಿಗೆ ಅರಿವಾಯಿತು. ಸೃಷ್ಟಿಯ ವಿಚಿತ್ರವನ್ನು ತಿಳಿಯುವ ಬಯಕೆ ಮೂಡಿತು. ವಿಜ್ಞಾನವನ್ನು ಅಭ್ಯಾಸ ಮಾಡಬೇಕೆಂಬ ನಿರ್ಧಾರ ಕೈಗೊಂಡ ಮಹೇಂದ್ರಲಾಲ್. ಹಿಂದೂ ಕಾಲೇಜನ್ನು ಬಿಡುವ ತೀರ್ಮಾನವೂ ಇದರೊಂದಿಗೇ ಆಯಿತು.

ಮಹೇಂದ್ರಲಾಲ್ ಕಾಲೇಜು ಬಿಡುವನೆಂದು ಕೇಳಿದ ಪ್ರಿನ್ಸಿಪಾಲ್ ಸಟ್‌ಕ್ಲಿಫ್ ನಿರಾಶರಾದರು. ಮಹೇಂದ್ರಲಾಲನಿಗೆ ಸಾಹಿತ್ಯದ ವಿಶೇಷ ಅಭ್ಯಾಸಕ್ಕಾಗಿ ಹಿರಿಯ ವಿದ್ಯಾರ್ಥಿವೇತನ ದೊರೆತಿದ್ದ ಸಮಯವದು. ಅವನಿಗೆ ಸಟ್‌ಕ್ಲಿಫ್ ಎಷ್ಟೋ ಹೇಳಿ ನೋಡಿದರು. ಆದರೆ ಮಹೇಂದ್ರಲಾಲನದು ದೃಢ ನಿರ್ಧಾರವಾಗಿತ್ತು.

ವಿದ್ಯಾರ್ಥಿ ಯಾರು?’           

ಭಾರತದಲ್ಲಿ ಆಗ ಇದ್ದ ವಿಜ್ಞಾನ ಶಿಕ್ಷಣ ಸಂಸ್ಥೆ ಕಲಿಸುತ್ತಿದ್ದುದು ವೈದ್ಯ ವಿಜ್ಞಾನವೊಂದನ್ನೆ. ವಿದ್ಯಾರ್ಥಿ ಮಹೇಂದ್ರ ಲಾಲ್ ೧೮೫೫ರಲ್ಲಿ ಮೆಡಿಕಲ್ ಕಾಲೇಜನ್ನು ಸೇರಿದರು. ಆಗಲೇ ರಾಜಕುಮಾರಿ ಎಂಬಾಕೆಯೊಡನೆ ಅವರ ಮದುವೆಯೂ ಜರುಗಿತು. ಮಹೇಂದ್ರಲಾಲ್ ಕಾಲೇಜಿನಲ್ಲಿ ಎಲ್ಲ ಅಧ್ಯಾಪಕರ ಮೆಚ್ಚುಗೆಯ ಶಿಷ್ಯರಾದರು ಪ್ರಯೋಗಾಲಯಗಳಲ್ಲಿ ಮಹೇಂದ್ರಲಾಲ್ ಚಟುವಟಿಕೆಯಿಂದಿರುತ್ತಿದ್ದು ಹೊಸ ವಿಷಯಗಳನ್ನು ಕಲಿತುಕೊಳ್ಳಲು ಆಸಕ್ತಿ ತೋರಿಸುತ್ತಿದ್ದರು.

ಮಹೇಂದ್ರಲಾಲ್ ಕಾಲೇಜಿನಲ್ಲಿ ಎರಡನೆಯ ವರ್ಷ ಓದುತ್ತಿದ್ದ ಸಮಯ; ಅದೊಂದು ದಿನ ಅವರು ತಮ್ಮ ಬಂಧುವೊಬ್ಬರ ಹುಡುಗನ ಕಣ್ಣು ತೋರಿಸಲೆಂದು ಕಾಲೇಜಿನ ಚಿಕಿತ್ಸಾಲಯಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲೊಂದು ಕೊಠಡಿ. ಡಾ. ಆರ್ಚರ್ ಎಂಬುವರು ಅಲ್ಲಿ ಐದನೆಯ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದ್ದರು. ಆರ್ಚರ್ ಪ್ರಶ್ನೆ ಕೇಳುವರು. ವಿದ್ಯಾರ್ಥಿಗಳು ಅಲ್ಲೇ ಉತ್ತರ ಹೇಳಬೇಕು. ಇದು ಪರೀಕ್ಷೆಯ ಸ್ವರೂಪ.

ಆರ್ಚರರ ಪ್ರಶ್ನೆ ಎಂದರೆ ಕಬ್ಬಿಣದ ಕಡಲೆಯೇ. ಕಣ್ಣಿನ ರಚನೆಯ ಕುರಿತ ಒಂದು ಪ್ರಶ್ನೆಯನ್ನು ಒಬ್ಬ ವಿದ್ಯಾರ್ಥಿಗೆ ಹಾಕಿದರು. ವಿದ್ಯಾರ್ಥಿಗೆ ಥಟ್ಟನೆ ಉತ್ತರ ಹೊಳೆಯಲಿಲ್ಲ. ಅದೇ ವೇಲೆಗೆ ಮಹೇಂದ್ರ ಲಾಲರು ಅಲ್ಲಿಗೆ ಬಂದಿದ್ದರು. ಪ್ರಶ್ನೆ ಕಿವಿಗೆ ಬಿತ್ತು. ಉತ್ತರ ಸಿದ್ಧವಿತ್ತು. ಕೊಠಡಿಯಲ್ಲಿ ಮೌನ ಇತ್ತು. ಮಹೇಂದ್ರಲಾಲರಿಗೆ ತಡೆಯಲಾಗಲಿಲ್ಲ. ಆರ್ಚರರ ಪ್ರಶ್ನೆಗೆ ಕೊಠಡಿ ಬಾಗಿಲಲ್ಲೇ ನಿಂತು ಉತ್ತರ ಇತ್ತರು. ಆರ್ಚರ್ ತಬ್ಬಿಬ್ಬಾಗಿ, “ಹಾಂ! ಆ ವಿದ್ಯಾರ್ಥಿ ಯಾರು?” ಎಂದು ತಿರುಗಿದರು. ಮಹೇಂದ್ರಲಾಲರಿಗೆ ಗಾಬರಿಯಾಯಿತು. ತನಗೆ ಸಂಬಂಧವಿಲ್ಲದ ವಿಷಯದಲ್ಲಿ ತಲೆ ಹಾಕಿದುದಕ್ಕೆ ಏನು ಶಿಕ್ಷೆ ಕಾದಿದೆಯೋ ಎಂದೆನಿಸಿತು. ಆದರೆ ಅಂತಹುದೇನೂ ನಡೆಯಲಿಲ್ಲ.

 

‘ಆ ವಿದ್ಯಾರ್ಥಿ ಯಾರು?’

ಆರ್ಚರರು ಮಹೇಂದ್ರಲಾಲರನ್ನು ಒಳಗೆ ಕರೆದರು. ಮತ್ತಷ್ಟು ಪ್ರಶ್ನೆಗಳನ್ನು ಹಾಕಿದರು. ಮಹೇಂದ್ರಲಾಲರು ಎಲ್ಲಕ್ಕೂ ಸಮರ್ಪಕ ಉತ್ತರಗಳನ್ನು ಹೇಳಿದರು. ಆರ್ಚರರ ಆನಂದಕ್ಕೆ ಪಾರವೇ ಇಲ್ಲ ದಂತಾಯಿತು. ಮಹೇಂದ್ರಲಾಲರ ಬೆನ್ನು ತಟ್ಟಿದರು. “ಇನ್ನು ಮೇಲೆ ಪ್ರತಿ ದಿನವೂ ಇಲ್ಲಿಗೆ ಬಂದು ಕಣ್ಣಿನ ಚಿಕಿತ್ಸೆ ಕುರಿತು ಅಭ್ಯಾಸ ಮಾಡಿ” ಎಂದರು. ಎರಡನೆಯ ವರ್ಷದ ವಿದ್ಯಾರ್ಥಿ ಇಷ್ಟೆಲ್ಲ ತಿಳಿದಿರುವನಲ್ಲ! ಇದು ಆರ್ಚರರಿಗೆ ಹೆಮ್ಮೆಯ ವಿಷಯವಾಯಿತು. ಮುಂದೆ ಕಣ್ಣಿನ ರಚನೆ, ದೃಷ್ಟಿದೋಷಗಳನ್ನು ಕುರಿತು ಮಹೇಂದ್ರಲಾಲರೇ ಉಪನ್ಯಾಸ ನೀಡಬೇಕೆಂದು ಅವರನ್ನು ನಿಯಮಿಸಿದರು. ವಿದ್ಯಾರ್ಥಿ ಜೀವನದಲ್ಲೇ ಅಧ್ಯಾಪಕರಾಗಿ ಕೆಲಸ ಮಾಡುವ ಸುಯೋಗ ಅವರದಾಗಿತ್ತು.

ಡಾಕ್ಟರ್ ಸರ್ಕಾರ್

ಮೆಡಿಕಲ್ ಕಾಲೇಜಿನಲ್ಲಿ ೬ ವರ್ಷಗಳ ಕಾಲ ಮಹೇಂದ್ರಲಾಲರು ವಿದ್ಯಾಭ್ಯಾಸ ಮಾಡಿದರು. ಕಡೆಯ ವರ್ಷದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಆದರೂ ಅವರಿಗೆ ಸ್ವರ್ಣಪದಕವು ಲಭಿಸಲಿಲ್ಲ. ಅನೇಕ ವಿಷಯಗಳನ್ನು ಅವರು ವೈದ್ಯಕೀಯ ನಿಯತಕಾಲಿಕಗಳನ್ನೋದಿ ಹೆಚ್ಚು ತಿಳಿದುಕೊಂಡಿರುತ್ತಿದ್ದರು. ಹೀಗೆ ಒಮ್ಮೆ ಇದರ ಬಗ್ಗೆ ಪರೀಕ್ಷೆಯಲ್ಲಿ ಬರೆದ ಉತ್ತರ ಪರೀಕ್ಷಕರಿಗೇ ಅರ್ಥವಾಗಲಿಲ್ಲ! ಮಹೇಂದ್ರಲಾಲರು ಕೊಟ್ಟ ಉತ್ತರ ತಪ್ಪು ಎಂದು ತೀರ್ಮಾನಿಸಿದರು.

೧೮೬೩ರಲ್ಲಿ ಮಹೇಂದ್ರಲಾಲ್ ಸರ್ಕಾರರು ಎಂ.ಡಿ. ಪರೀಕ್ಷೆಗೆ ಕುಳಿತು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು; ಡಾಕ್ಟರ್ ಮಹೇಂದ್ರಲಾಲ್ ಸರ್ಕಾರ್ ಆದರು.

ಪದವೀಧರರಾದ ಮಹೇಂದ್ರಲಾಲರು ವೈದ್ಯ ವೃತ್ತಿಯನ್ನು ಹಿಡಿದರು. ಅವರು ಅಲೋಪತಿ ಚಿಕಿತ್ಸಾ ಪದ್ಧತಿಯನ್ನು (ಪಾಶ್ಚಾತ್ಯರ ಚಿಕಿತ್ಸಾ ಪದ್ಧತಿ) ಅನುಸರಿಸುತ್ತಿದ್ದರು. ಮನುಷ್ಯನಿಗೆ ಒಂದು ರೋಗ ಬಂದರೆ ಅದಕ್ಕೆ ಒಂದು ಕಾರಣ ಉಂಟು; ಆ ಕಾರಣಕ್ಕೆ ವಿರೋಧಸ್ಥಿತಿಯನ್ನು ಉಂಟುಮಾಡಬೇಕು ಎಂಬುದು ಈ ಪದ್ಧತಿಯ ತತ್ವ. ಸರ್ಕಾರರು ವೈದ್ಯವೃತ್ತಿ ಹಿಡಿದು ಯಶಸ್ವಿಯಾದರು. ಪ್ರೀತಿ, ವಿನಯಗಳ ಮೂರ್ತಿಯಾಗಿದ್ದ ಅವರು ಜನರ ಗೌರವಕ್ಕೆ ಪಾತ್ರರಾದರು. ಕಲ್ಕತ್ತೆಯಲ್ಲಿ ಅವರ ಹೆಸರು ಮನೆಮಾತಾಗಿತ್ತು.

ಹೋಮಿಯೋಪತಿಗೆ ವಿರೋಧ

ಅಲೋಪತಿ ಚಿಕಿತ್ಸಾಕ್ರಮ ಹೆಸರುವಾಸಿಯಾಗುತ್ತಿದ್ದ ಆ ಕಾಲದಲ್ಲೇ ಹೋಮಿಯೋಪತಿ ಎಂಬು ವೈದ್ಯಪದ್ಧತಿ ಬೆಳಕಿಗೆ ಬಂದಿತ್ತು. ರೋಗಿಯ ಸಹನಶಕ್ತಿಯನ್ನು ತಿಳಿದು ಸಣ್ಣಸಣ್ಣ ಗುಳಿಗೆಗಳನ್ನು ಕೊಡುವುದು ಇಲ್ಲಿ ಅನುಸರಿಸುತ್ತಿದ್ದ ಕ್ರಮವಾಗಿತ್ತು. ಈ ಗುಳಿಗೆಗಳು ಸೂಕ್ಷ್ಮವಿರುತ್ತಿದ್ದರೂ ಪ್ರಭಾವ ಮಹತ್ವದ್ದಾಗಿರುತ್ತಿತ್ತು. ಗುಳಿಗೆಗಳ ಸತ್ವವನ್ನು ಏರಿಸುವುದು ಇಳಿಸುವುದು ಹೋಮಿಯೋಪತಿಯ ಹೆಚ್ಚುಗಾರಿಕೆ. ಅಲ್ಪ ಔಷಧಿ ಪ್ರಮಾಣ ನಿಯಮಿಸುವುದು ಇಲ್ಲಿನ ಸೂತ್ರ. ಮಹೇಂದ್ರಲಾಲರು ಈ ಪದ್ಧತಿ ಅನುಸರಿಸುತ್ತಿದ್ದವರನ್ನು ಅಳಲೆಕಾಯಿ ಪಂಡಿತರು ಎಂದು ಕರೆದರು.

೧೮೬೩ರ ಮೇ ತಿಂಗಳ ೨೭ನೆ ದಿನ ನಡೆದ ಕಲ್ಕತ್ತೆಯ ಬ್ರಿಟಿಷ್ ಮೆಡಿಕಲ್ ಅಸೋಸಿಯೇಷನ್ನಿನ ಸಭೆಯೊಂದರಲ್ಲಿ ಮಹೇಂದ್ರ ಲಾಲರು ಹೋಮಿಯೋಪತಿ ಪದ್ಧತಿ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸದ ತುಂಬ ಆ ಪದ್ಧತಿ ಕುರಿತ ಟೀಕೆ ಟಿಪ್ಪಣಿಗಳೇ. ಅಲ್ಲಿಗೆ ಬಂದಿದ್ದ ವೈದ್ಯಮಂಡಲದ ಎಲ್ಲರಿಗೂ ಉಪನ್ಯಾಸ ಮೆಚ್ಚುಗೆಯಾಯಿತು.

ಮಹೇಂದ್ರಲಾಲರನ್ನು ಅಸೋಷಿಯೇಷನ್ನಿನ ಕಾರ್ಯದರ್ಶಿಯನ್ನಾಗಿ ಆರಿಸಿದರು. ೧೮೬೬ರಲ್ಲಿ ಮಹೇಂದ್ರಲಾಲರು ಅಸೋಸಿಯೇಷನ್ನಿನ ಉಪಾಧ್ಯಕ್ಷರಾಗಿ ಕೆಲಸ ಮಾಡಿದರು.

ಕಾರ್ಯ ಶ್ರದ್ಧೆ

ಮಹೇಂದ್ರಲಾಲರು ವೈದ್ಯಕೀಯ ವೃತ್ತಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದರು. ಅವರಲ್ಲಿ ವಿದ್ಯೆ ಇತ್ತು, ಜತೆಗೆ ವಿನಯವೂ ಇತ್ತು. ಮಾಡುವ ಕೆಲಸದಲ್ಲಿ ಶ್ರದ್ಧೆ ಇತ್ತು. ಧರ್ಪ, ದುರಭಿಮಾನಕ್ಕೆ ಅವಕಾಶವಿರಲಿಲ್ಲ. ಒಮ್ಮೆ ಒಂದು ವಿಚಾರವು ಅವರ ಮನಸ್ಸು ಹೊಕ್ಕರೆ ಅದನ್ನು ಸಂಪೂರ್ಣವಾಗಿ ತಿಳಿಯಲು ಯತ್ನಿಸುತ್ತಿದ್ದರು. ವಿಜ್ಞಾನದಲ್ಲಿ ಆಸೆ ಹೆಚ್ಚಾಗತೊಡಗಿತ್ತು. ಭಾರತದಲ್ಲಿ ವಿಜ್ಞಾನದ ವಿಷಯಗಳನ್ನು ಕಲಿಸಬಲ್ಲ ಸಮರ್ಥ ಭಾರತೀಯರಂತೂ ಆಗ ಇರಲೇ ಇಲ್ಲ ಎನ್ನಬಹುದು. ಈ ಸಂದರ್ಭದಲ್ಲಿ ಮಹೇಂದ್ರಲಾಲರಿಗೆ ವಿಜ್ಞಾನಕ್ಕಾಗಿ ತಮ್ಮ ಸರ್ವಸ್ವವನ್ನೂ ಒಪ್ಪಿಸಬೇಕೆಂಬ ವಿಚಾರ ಮನಸ್ಸಿನಲ್ಲಿ ಮೂಡಿತು.

ಸರ್ಕಾರರೇ ಹೋಮಿಯೋಪತಿ ವೈದ್ಯರು!

ಸರ್ಕಾರರ ಜೀವನದಲ್ಲಿ ಒಂದು ವಿಚಿತ್ರ ಘಟನೆ ಜರುಗಿತು. ಮಹೇಂದ್ರಲಾಲರು ಹೋಮಿಯೋಪತಿ ಪದ್ಧತಿಯನ್ನು ನಿಂದಿಸುತ್ತ ಬಂದಿದ್ದರಲ್ಲವೆ? ‘ಹೋಮಿಯೋಪತಿ ತತ್ವಜ್ಞಾನ’ ಎಂಬ ಒಂದು ಪುಸ್ತಕ ಅವರಿಗೆ ವಿಮರ್ಶೆಗಾಗಿ ಬಂದಿತು. ಆ ಪುಸ್ತಕ ಮಾರ್ಗನ್ ಎಂಬಾತ ಬರೆದದ್ದು. ಸರ್ಕಾರರು ಪುಸ್ತಕ ಪ್ರಿಯರಲ್ಲವೆ? ಒಮ್ಮೆ ತಿರುವಿಹಾಕಿದರು. ಹೋಮಿಯೋಪತಿ ಸಿದ್ಧಾಂತಗಳನ್ನು ತೆಗಳಲಿಕ್ಕಾದರೂ ಅದನ್ನು ತಿಳಿದುಕೊಂಡಿರುವುದು ಮೇಲು ಎಂದು ಆ ಪುಸ್ತಕವನ್ನು ಮತ್ತೆ ಮತ್ತೆ ಓದಿದರು. ಓದುತ್ತಿದ್ದಂತೆ ಕುತೂಹಲ ಹೆಚ್ಚತೊಡಗಿತು. ಮಾರ್ಗನ್ನನ ವಿಚಾರ ಸರಣಿಯಲ್ಲಿ ನ್ಯಾಯ ಇತ್ತು. ಮಹೇಂದ್ರಲಾಲರಿಗೆ ಆ ಪುಸ್ತಕ ಬಹಳ ಮೆಚ್ಚುಗೆಯಾಯಿತು. ಜೊತೆಗೆ ಹೋಮಿಯೋಪತಿಯ ಹುಚ್ಚು ಹತ್ತಿತು. ಹಳಿಯುತ್ತಿದ್ದವರು ಹೊಗಳ ಹೊರಟರು.

ಮಾರ್ಗನ್ನನ ಪುಸ್ತಕ ಓದಿದಂದಿನಿಂದ ಮಹೇಂದ್ರಲಾಲರು ಹೋಮಿಯೋಪತಿ ವೈದ್ಯ ಪದ್ಧತಿಗೆ ಮಾರುಹೋದರು. ಆ ಪದ್ಧತಿಯನ್ನು ಅಭ್ಯಾಸ ಮಾಡತೊಡಗಿದರು. ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ತರಿಸಿಕೊಂಡು ಓದಿದರು. ಲಂಡನ್, ನ್ಯೂಯಾರ್ಕ್‌ನಿಂದ ಬಂದ ಗ್ರಂಥಗಳು ಅವರ ಖಾಸಗಿ ಗ್ರಂಥ ಭಂಡಾರವನ್ನು ಸೇರಿದವು. ಓದಿದ್ದನ್ನು ಪ್ರಯೋಗಗಳ ಮೂಲಕ ಖಚಿತ ಪಡಸಿಕೊಂಡರು. ಹೋಮಿಯೋಪತಿ ಚಿಕಿತ್ಸೆ ಪದ್ಧತಿಯಲ್ಲಿ ಸತ್ವವಿದೆ ಎಂಬುದು ಅವರಿಗೆ ಮನವರಿಕೆಯಾಯಿತು.

ಮಹೇಂದ್ರಲಾಲರು ಹೋಮಿಯೋಪತಿ ವೈದ್ಯರಾದರು.

ಸಭೆಯಲ್ಲಿ ಕೋಲಾಹಲ

೧೮೬೭ರ ಫೆಬ್ರವರಿ ತಿಂಗಳ ಒಂದು ದಿನ. ಮೆಡಿಕಲ್ ಅಸೋಸಿಯೇಷನ್ನಿನ ನಾಲ್ಕನೆಯ ವಾರ್ಷಿಕ ಸಭೆ ಸೇರಿತ್ತು. ವೈದ್ಯಮಂಡಲದ ಪ್ರಸಿದ್ಧರು ಅಲ್ಲಿ ಸೇರಿದರು. ಅಂದು ಮಹೇಂದ್ರಲಾಲರ ಭಾಷಣವೇರ್ಪಟ್ಟಿತ್ತು. ಮಹೇಂದ್ರಲಾಲರು ಹೊಸ ದೀಕ್ಷೆ ತೊಟ್ಟು ಬಂದಿದ್ದ ದಿನ ಅದು. ಅವರ ಭಾಷಣದ ತುಂಬ ಹೋಮಿಯೋಪತಿ ಪದ್ಧತಿಯನ್ನು ಕುರಿತು ಹೊಗಳಿಕೆಯ ಮಾತುಗಳೇ ತುಂಬಿದ್ದವು. ಹೋಮಿಯೋಪತಿ ಪದ್ಧತಿಯಿಂದ ಕೆಲವು ರೋಗಗಳಿಗೆ ಚಿಕಿತ್ಸೆ ನಡೆಸಬಹುದಾಗಿದೆ, ಈ ಚಿಕಿತ್ಸಾ ಪದ್ಧತಿಗೂ ಮನ್ನಣೆ ದೊರೆಯುವಂತಾಗಬೇಕು ಎಂದು ಕರೆಯಿತ್ತರು.

ಹಿಂದೊಮ್ಮೆ ಹೋಮಿಯೋಪತಿ ಪದ್ಧತಿಯನ್ನು ಜರೆದಿದ್ದವರು ಹೀಗೆ ಮಾತನಾಡಿದ್ದುದರ ಪರಿಣಾಮವಾಗಿ ಸಭೆಯಲ್ಲಿ ಗುಲ್ಲೆದ್ದಿತು. “ಅಲೋಪತಿ ವೈದ್ಯರ ಸಂಘದಲ್ಲಿ ಹೋಮಿಯೋಪತಿಗೆ ಗೌರವವೆ? ಮಾಳಿಗೆ ಮನೆಗೂ ಗುಡಿಸಲಿಗೂ ಎಲ್ಲಿಗೆಲ್ಲಿಯ ಸಂಬಂಧ?’ ಎಂದರು ಒಬ್ಬ ಪ್ರಸಿದ್ಧ ಡಾಕ್ಟರ್. “ಸಂಘದ ಉಪಾಧ್ಯಕ್ಷರಾಗಿ ಇಂತಹ ಅವಿವೇಕದ ಕಾರ್ಯ ಮಾಡಲು ತೊಡಗುವುದೇ?” ಮತ್ತೊಬ್ಬ ವೈದ್ಯರ ಅಭಿಪ್ರಾಯ ಹೀಗೆ ಹೊರಬಂದಿತ್ತು. ಮಹೇಂದ್ರಲಾಲರು ಮೌನವಾಗಿಯೇ ಇದ್ದರು.

ಅಚಲ ಶ್ರದ್ಧೆ

ಡಾ. ಮಹೇಂದ್ರಲಾಲ್ ಸರ್ಕಾರರಿಗೆ ಮೆಡಿಕಲ್ ಅಸೋಸಿಯೇಷನ್ನಿನ ಸದಸ್ಯತ್ವ ರದ್ದಾಯಿತು. ಅವರು ಈಗ ಸಂಪೂರ್ಣ ಹೋಮಿಯೋಪತಿ ವೈದ್ಯರಾಗಿದ್ದರು. ಕೆಲವರು ಮಹೇಂದ್ರಲಾಲರು ಬುದ್ಧಿಯನ್ನು ಕಳೆದುಕೊಂಡಿದ್ದಾರೆ ಎಂದರು. ಮತ್ತೆ ಕೆಲವರಿಗೆ ಮಹೇಂದ್ರಲಾಲರು ಹುಚ್ಚರೆನಿಸಿದರು. ಮಹೇಂದ್ರಲಾಲರು ಬೆಲೆ ಕೊಟ್ಟಿದ್ದೆಲ್ಲ ಸತ್ಯಕ್ಕೆ, ಪ್ರಾಮಾಣಿಕತೆಗೆ.

ಹೋಮಿಯೋಪತಿ ಪದ್ಧತಿ ಹಿಡಿದಂದಿನಿಂದ ಅವರ ಬಳಿ ಬರುತ್ತಿದ್ದ ರೋಗಿಗಳ ಸಂಖ್ಯೆ ಕಡಿಮೆಯಾಯಿತು. ಒಮ್ಮೆ ಆರು ತಿಂಗಳ ಕಾಲ ಅವರ ಬಳಿ ಒಬ್ಬರೂ ಸುಳಿಯಲಿಲ್ಲ. ಗೆಳೆಯರು ಮತ್ತೆ ಅವರು ಅಲೋಪತಿ ವೈದ್ಯ ಪದ್ಧತಿಯನ್ನನುಸರಿಸಲು ಅವರನ್ನು ಒಪ್ಪಿಸಲು ನೋಡಿದರು. ಮಹೇಂದ್ರಲಾಲಲರು ಇದಾವುದಕ್ಕೂ ಜಗ್ಗಲಿಲ್ಲ. ಅವರ ಹೋರಾಟ ಸಾಗಿತ್ತು.

ಕಲ್ಕತ್ತೆಯ ಡಾಕ್ಟರ್ ರಾಜೇಂದ್ರನಾಥ ದತ್ತರು ಮಹೇಂದ್ರಲಾಲರಿಗೆ ನೆರವಾದರು. ರಾಜೇಂದ್ರನಾಥ ದತ್ತರು ಆಗ ಬಂಗಾಳದಲ್ಲಿ ಒಬ್ಬ ಶ್ರೀಮಂತರು. ತಮ್ಮ ಸಂಪತ್ತನ್ನು ಬಳಸಿ ಹೋಮಿಯೋಪತಿ ಪದ್ಧತಿಯನ್ನು ಬಂಗಾಳದಲ್ಲಿ ಬಳಕೆಗೆ ತಂದಿದ್ದರು.

ಕ್ರಮೇಣ ಮಹೇಂದ್ರಲಾಲರ ಧೀರ ನಿಲುವಿಗೆ ಸೌಹಾರ್ದದ ಹಸ್ತಗಳೂ ನೆರವಾದವು. ದೇಶದ ಬೇರೆ ಬೇರೆ ವೈದ್ಯಕೀಯ ಪಂಥಗಳ ಅನುಯಾಯಿಗಳು ಸ್ನೇಹ ಬೆಳೆಸುವಂತಾಯಿತು. ಔಷಧಿ ಚಿಕಿತ್ಸೆಯಲ್ಲಿ ರೋಗಿಯ ರೋಗ ವಾಸಿಯಾಗುವುದೇ ಮುಖ್ಯ. ಯಾವ ಪದ್ಧತಿಯ ಔಷಧವಾರೇನು? ಇದು ಅವರು ತಂದ ಸುಧಾರಣೆಯ ಮುಖ್ಯ ಗುರಿಯಾಗಿತ್ತು.

ಮಹೇಂದ್ರಲಾಲರ ಔಷಧಾಲಯಕ್ಕೆ ಜನ ಬರತೊಡಗಿದರು. ಕಾಯಿಲೆಯಿಂದ ಗುಣಮುಖವಾಗುವುದು ಜನರಿಗೆ ಮುಖ್ಯವಾಗಿತ್ತು. ಆಶ್ಚರ್ಯದ ವಿಷಯ ಎಂದರೆ ಕೆಲವು ಪ್ರಸಿದ್ಧ ವೈದ್ಯರೂ ಚಿಕಿತ್ಸಾ ತಜ್ಞರೂ ಅಲ್ಲಿಗೆ ಬರುವಂತಾಯಿತು. ಇದು ಸತ್ಯದ ಜಯ ಎಂದರು ಮಹೇಂದ್ರಲಾಲರು.

ಹೋಮಿಯೋಪತಿಯನ್ನು ವಿವರಿಸಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅವರ ಶ್ರದ್ಧೆಯೂ ಆಶ್ಚರ್ಯಕರ. ಒಮ್ಮೆ ಅವರು ಹೋಮಿಯೋಪತಿಯನ್ನು ವಿವರಿಸಲು ಒಂದು ಭಾಷಣಕ್ಕೆ ಹೊರಡುವುದರಲ್ಲಿದ್ದರು. ಮೂವತ್ತು ಮೈಲಿ ದೂರದಲ್ಲಿದ್ದ ರೋಗಿಯೊಬ್ಬನನ್ನು ನೋಡಬೇಕೆಂದು ಕರೆ ಬಂತು. ತಾವು ಉಪನ್ಯಾಸಕ್ಕೆ ಹೋಬೇಕು, ಬೇರೆ ವೈದ್ಯರನ್ನು ಕರೆದುಕೊಂಡು ಹೋಗಿ ಎಂದರು ಸರ್ಕಾರರು. ರೋಗಿಯ ನೆಂಟರು ಒಂದು ಸಾವಿರ ರೂಪಾಯಿ ಸಂಭಾವನೆ ಕೊಡುವುದಾಗಿ ಹೇಳಿದರು. ಸರ್ಕಾರರು ಒಪ್ಪಲಿಲ್ಲ.

 

‘ರಾಷ್ಟ್ರದ ಉನ್ನತಿಗೆ ವಿಜ್ಞಾನವೇ ಮೂಲ ಬಂಡವಾಳವಾಗಬೇಕು’

ವಿಜ್ಞಾನ ಪ್ರಚಾರಕಾರ್ಯ

 

ಮಹೇಂದ್ರಲಾಲರು ಔಷಧಿಗಳನ್ನು ಕೊಡುತ್ತಾ ಕುಳಿತ ವೈದ್ಯರಷ್ಟೇ ಆಗಿರಲಿಲ್ಲ. ವಿಜ್ಞಾನದ ಪ್ರಚಾರ, ಭಾರತದಲ್ಲಿ ವೈಜ್ಞಾನಿಕ ಜಾಗೃತಿ ಇವು ಅವರ ಮನಸ್ಸನ್ನು ಹೊಕ್ಕಿದ್ದ ವಿಷಯಗಳು. ಭಾರತದಲ್ಲಿ ವೈದ್ಯಕೀಯ ವಿಚಾರಗಳ ಪ್ರಚಾರಕ್ಕಿದ್ದ ಪತ್ರಿಕೆ ಎಂದರೆ ‘ಇಂಡಿಯನ್ ಮೆಡಿಕಲ್ ಗೆಜೆಟ್’. ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ವಿಷಯಗಳೆಲ್ಲ ಅಲೋಪತಿ ವೈದ್ಯ ಪದ್ಧತಿಗೆ ಸಂಬಂಧಿಸಿರುತ್ತಿದ್ದವು. ಆದುದರಿಂದ ತಮ್ಮ ವಿಚಾರಗಳಿಗೆ ಒಂದು ಹೊಸ ಪತ್ರಿಕೆಯ ಅಗತ್ಯವಿದೆ ಎಂದು ಮಹೇಂದ್ರಲಾಲರು ಭಾವಿಸಿದರು. ೧೮೭೮ರಲ್ಲಿ ;ಕಲ್ಕತ್ತಾ ಜರ್ನಲ್ ಆಫ್ ಮೆಡಿಸಿನ್’ ಎಂಬ ಹೊಸ ಪತ್ರಿಕೆಯನ್ನಾರಂಭಿಸಿದರು. ಇಲ್ಲಿ ಪ್ರಕಟಣೆಗೆ ಬರುತ್ತಿದ್ದ ವಿಷಯಗಳಿಗೆ ಯಾವ ನಿರ್ಬಂಧವೂ ಇರುತ್ತಿರಲಿಲ್ಲ. ಪಾಂಡಿತ್ಯಕ್ಕೆ ಅಲ್ಲಿ ಅವಕಾಶ, ಸ್ವಪ್ರಚಾರಕ್ಕಲ್ಲ. ಮಹೇಂದ್ರಲಾಲರು ಪತ್ರಿಕೆಯಲ್ಲಿ ವಿದ್ವತ್ಪೂರ್ಣ ಲೇಖನಗಳನ್ನು ಬರೆದರು. ‘ಭಾರತದಲ್ಲಿ ವೈಜ್ಞಾನಿಕ ಶಿಕ್ಷಣ ಆಗಬೇಕಾಗಿದೆ. ಸದ್ಯದ ಭಾರತೀಯ ಶಿಕ್ಷಣ ಪದ್ಧತಿ ಪ್ರಯೋಜನವಿಲ್ಲದ್ದು’ ಎಂದು ಕೆಲವು ಲೇಖನಗಳಲ್ಲಿ ಸಾರಿದರು. ‘ವಿಜ್ಞಾನವು ಎಂದೂ ಸುಳ್ಳಲ್ಲ. ಮನಸ್ಸನ್ನು ವಿಕಾಸಗೊಳಿಸಲು ವಿಜ್ಞಾನದ ಬೆಳವಣಿಗೆಯೇ ಒಂದು ಸಾಧನ’ ಎಂದು ಬರೆದರು. ಅವರ ಲೇಖನಗಳಿಗೆ ಸ್ವಾಗತ ದೊರೆಯಿತು. ಪ್ರಪಂಚದ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸಂಪರ್ಕವಿಟ್ಟುಕೊಳ್ಳಲು ಪತ್ರಿಕೆ ನೆರವಾಯಿತು. ವಿಜ್ಞಾನ ಎಲ್ಲರಿಗೂ ತಿಳಿದಿರಬೇಕಾದುದಲ್ಲವೆ? ಇದಕ್ಕೆ ಬೋಧನೆ ಅಗತ್ಯ. ಮಹೇಂದ್ರಲಾಲರು ವಿಜ್ಞಾನ ಪ್ರಚಾರಕ್ಕೆ ನಿಂತರು. ಅಲ್ಲಲ್ಲಿ ಜನರ, ತರುಣ ವಿದ್ಯಾರ್ಥಿಗಳ ಗುಂಪನ್ನು ಸೇರಿಸಿ ಉಪನ್ಯಾಸಗಳನ್ನು ನೀಡಿದರು, ಬಿಡುವು ದೊರೆತಾಗಲೆಲ್ಲ ಅವರಿಗೆ  ವಿಜ್ಞಾನ ಪ್ರಚಾರ ಒಂದು ಕಸುಬಾಯಿತು. ಇದಕ್ಕಾಗಿ ಅವರಿಗೆ ಯಾರೂ ಹಣ ಕೊಡುತ್ತಿರಲಿಲ್ಲ. ಅವರಲ್ಲಿದ್ದ ನಿಷ್ಠೆ, ದೇಶಭಕ್ತಿಗಳೇ ಅವರ ಸಂಪತ್ತುಗಳಾಗಿದ್ದವು.

ಸಂಶೋಧನೆ ಮಾಡುವವನಂತೆ ವಿಜ್ಞಾನ ಪ್ರಸಾರ ಮಾಡುವವನೂ ದೊಡ್ಡವನು. ವಿಜ್ಞಾನದ ವ್ಯಾಸಂಗ, ಅದನ್ನು ಪ್ರಯೋಗಗಳ ಮೂಲಕ ಕಲಿಯಲು ಬೇಕಾಗುವ ಸೌಲಭ್ಯ, ಅವಕಾಶಗಳನ್ನೊದಗಿಸಲು ಶ್ರಮಿಸುವಾತನನ್ನೂ ರಾಷ್ಟ್ರ ಗೌರವಿಸಬೇಕು.

ಮಹೇಂದ್ರಲಾಲಾರಿಗೆ ಮೊದಲು ವಿಜ್ಞಾನ ಜನಪ್ರಿಯವಾಗುವುದು ಬೇಕಾಗಿತ್ತು. ಅದಕ್ಕಾಗಿ ಒಂದು ಸಂಸ್ಥೆಯ ಅಗತ್ಯವಿದೆ ಎಂದೆನಿಸಿತವರಿಗೆ.

ಸರ್ಕಾರರು ಪತ್ರಿಕೆಯ ೧೮೬೯ರ ಆಗಸ್ಟ್ ಸಂಚಿಕೆಯಲ್ಲಿ ತಾವು ವಿಜ್ಞಾನದ ಬೆಳವಣಿಗೆಗಾಗಿ ಒಂದು ಸಂಸ್ಥೆ ಸ್ಥಾಪಿಸುವ ಆಸೆ ಹೊತ್ತಿರುವುದಾಗಿ ತಿಳಿಸಿ ಒಂದು ಲೇಖನ ಬರೆದರು. ಈ ಲೇಖನವನ್ನು ಕೆಲವು ಪತ್ರಿಕೆಗಳು ಹೊಗಳಿ ಬರೆದವು. ಕಲ್ಕತ್ತೆಯ ಜನಪ್ರಿಯ ಪತ್ರಿಕೆ ‘ಸ್ಟೇಟ್ಸ್‌ಮೆನ್’ನ ಅಗ್ರಲೇಖನದಲ್ಲಿ ಈ ಲೇಖನವಾದ ಪ್ರಸ್ತಾಪ ಬಂತು. ಮಹೇಂದ್ರಲಾಲರ ಉದ್ದೇಶ ಭಾರತದಲ್ಲಿ ಹೊಸ ಯುಗದ ಆರಂಭಕ್ಕೆ ನಾಂದಿ ಎಂದು ಆ ಪತ್ರಿಕೆ ಹೊಗಳಿ ಬರೆದಿತ್ತು.

ಲೇಖನದಿಂದಾದ ಮೊದಲ ಲಾಬ ಕಲ್ಕತ್ತ ವಿಶ್ವವಿದ್ಯಾಲಯ ಬಿ.ಎ. ಪರೀಕ್ಷೆಗೆ ವಿಜ್ಞಾನವನ್ನು ವ್ಯಾಸಂಗದ ವಿಷಯವನ್ನಾಗಿ ಅಂಗೀಕರಿಸಿದ್ದು.

ಕನಸುನನಸು

ವಿಜ್ಞಾನ ಸಂಸ್ಥೆ ಸ್ಥಾಪಿಸುವ ಕನಸು ಹೊತ್ತ ಮಹೇಂದ್ರಲಾಲರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ೧೮೬೯ರ ಡಿಸೆಂಬರಿನಲ್ಲಿ ಸಂಸ್ಥೆಯ ಯೋಜನೆಯನ್ನು ರೂಪಿಸಿದರು. ಕಲ್ಕತ್ತೆಯ ಜನರ ಸಹಾನುಭೂತಿಯೂ ದೊರಕಿತು. ಮಹೇಂದ್ರಲಾಲರು ಸರ್ಕಾರದ ಹಿರಿಯ ಆಡಳಿತಗಾರ ಸಂಪರ್ಕ ಬೆಳೆಸಿಕೊಂಡರು. ಸುಮಾರು ಆರು ವರ್ಷಗಳ ಕಾಲ ಈ ಕಾರ್ಯಕ್ಕಾಗಿ ದುಡಿದರು. ಅವರ ಈ ಕಾರ್ಯದಲ್ಲಿ ಮೊದಲಿಗೆ ನೆರವಾದವರು ಬಂಗಾಳದಲ್ಲಿ ಲೆಫ್ಟಿನೆಂಟ್ ಗನರ್ವರ್ ಆಗಿದ್ದ ಸರ್ ರಿಚರ್ಡ್ ಟೆಂಪಲ್ ಎಂಬುವರು. ಜನ ಉನ್ನತ ಶಿಕ್ಷಣ ಹೊಂದಿರಬೇಕೆಂಬ ಮಹದಾಸೆ ಉಳ್ಳವರು ಅವರು. ಮಹೇಂದ್ರಲಾಲರ ಕಾರ್ಯಕ್ಕೆ ಸರ್ಕಾರದ ಆಶ್ರಯ ಲಭಿಸುವುದು ಖಚಿತವಾಯಿತು. ೧೮೭೬ರ ಜನವರಿ ೧೫ ರಂದು ಕಲ್ಕತ್ತೆಯ ಬೌ ಬಜಾರ್ ಸ್ಟ್ರೀಟ್‌ನಲ್ಲಿ ವಿಜ್ಞಾನ ಸಂಸ್ಥೆ ಸ್ಥಾಪನೆಯಾಯಿತು. ಸಂಸ್ಥೆಗೆ ‘ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಪಿವೇಷನ್ ಆಫ್ ಸೈನ್ಸ್ (ವಿಜ್ಞಾನದ ಬೆಳವಣಿಗೆಗಾಗಿ ಭಾರತೀಯ ಸಂಘ) ಎಂದು ನಾಮಕರಣವಾಯಿತು. ವಿಜ್ಞಾನ ಸಂಘಕ್ಕೆ ಭಾರತದ ವೈಸರಾಯ್‌ರವರು ಪೋಷಕರಾಗಿಯೂ ಬಂಗಾಳದ ಲೆಫ್ಟಿನೆಂಟ್ ಗವರ್ನರ್ ಅಧ್ಯಕ್ಷರಾಗಿಯೂ ಇರತಕ್ಕದ್ದೆಂದು ತೀರ್ಮಾನವಾಯಿತು. ಇಂಗ್ಲೆಂಡಿನ ರಾಯಲ್ ಸೊಸೈಟಿಯ ಮಾರ್ಗದಲ್ಲಿ ಸಂಘ ತನ್ನ ಕಾರ್ಯ ನೆರವೇರಿಸಲು ಆರಂಭ ಮಾಡಿತು.

ಮೂವತ್ತು ವರ್ಷಗಳ ಕಾಲ ಸರ್ಕಾರರು ಈ ಸಂಸ್ಥೆಗಾಗಿ ದುಡಿದರು. ತಮ್ಮ ಆರೋಗ್ಯ ಕೆಟ್ಟಿದ್ದನ್ನು ಲಕ್ಷಿಸಲಿಲ್ಲ. ಕೈತುಂಬ ಹಣ ತರುತ್ತಿದ್ದ ವೃತ್ತಿಗೂ ಹೆಚ್ಚು ಗಮನ ಕೊಡಲಾಗದೆ ವರಮಾನ ಕಡಿಮೆಯಾದುದನ್ನೂ ಲಕ್ಷಿಸಲಿಲ್ಲ.

ಮಹೇಂದ್ರಲಾಲರು ವಿಜ್ಞಾನ ಸಂಘದಲ್ಲಿ ವಿಜ್ಞಾನ ಕುರಿತು ಉಪನ್ಯಾಸಗಳನ್ನು ನೀಡುತ್ತಿದ್ದರು. ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನದಲ್ಲಾಗುತ್ತಿದ್ದ ಸಂಶೋಧನೆಗಳನ್ನು ಭಾರತೀಯ ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದರು. ಹಲವರಿಗೆ ವಿಜ್ಞಾನವನ್ನು ಕಲಿಸಿ ಶಿಕ್ಷಣ ಕೊಡುವುದು, ಮುಂದೆ ಅವರನ್ನು ಸಂಶೋಧನೆಯಲ್ಲಿ ತೊಡಗಿಸುವುದು ಸಂಘದ ಕಾರ್ಯವೆಂದು ತೀರ್ಮಾನಿಸಲಾಗಿತ್ತು. ಮಹೇಂದ್ರಲಾಲರು ಆ ಕೆಲಸದಲ್ಲಿ ಮುಂದಾದರು. ಅವರ ಉಪನ್ಯಾಸಗಳಿಗೆ ಅನೇಕರು ಮನಸೋತರು. ಅಂದಿನ ಭಾರತ ವೈಸರಾಯ್ ಲಾರ್ಡ್ ಲಿಟ್ಟನ್‌ರವರು ಕ್ರೂಕ್ಸ್‌ಟ್ಯೂಬ್ ಮತ್ತು ರೇಡಿಯೋಮೀಟರುಗಳ ಸಂಬಂಧವಾಗಿ ಪ್ರಯೋಗಗಳಣ್ನು ಮಾಡಿ ಅವುಗಳನ್ನು ಕುರಿತು ವಿಸ್ತಾರವಾಗಿ ಹೇಳಬೇಕೆಂದು ಮಹೇಂದ್ರಲಾಲರನ್ನು ತಮ್ಮಲ್ಲಿಗೇ ಕರೆಸಿಕೊಂಡರು. ಮಹೇಂದ್ರಲಾಲರಿಗಿದ್ದ ಮತ್ತೊಂದು ವಿಶಿಷ್ಟ ಶಕ್ತಿ ಎಂದರೆ ಉತ್ತಮ ಉಪನ್ಯಾಸಕಾರರನ್ನು ಗುರುತಿಸಿ ಅವರಿಂದ ಉಪನ್ಯಾಸಗಳನ್ನು ಏರ್ಪಡಿಸುವುದು. ಸರ್. ಅಶುತೋಷ್ ಮುಖರ್ಜಿಯವರು ಮಹೇಂದರಲಾಲರಿಗಂದ ಗೌರವಿಸಲ್ಪಟ್ಟವರಲ್ಲೊಬ್ಬರು. ಮುಖರ್ಜಿಯವರು ಸುಮಾರು ಐದು ವರ್ಷಗಳ ಕಾಲ ವಿಜ್ಞಾನ ಸಂಘದಲ್ಲಿ ಉನ್ನತ ಗಣಿತ ಶಾಸ್ತ್ರದ ಬಗ್ಗೆ ಕಲ್ಕತ್ತ ಕಾಲೇಜಿನ ಎಂ.ಎ. ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

೧೮೮೨ರಲ್ಲಿ ಭಾರತದ ವೈಸ್‌ರಾಯ್ ಲಾರ್ಡ್ ರಿಪ್ಪನ್‌ರವರು ವಿಜ್ಞಾನ ಸಂಘದ ಸಭಾಭವನದ ಶಂಕುಸ್ಥಾಪನೆ ಸಮಾರಂಭ ನೆರವೇರಿಸಿದರು.

ಸ್ವದೇಶಿಯಾಗಬೇಕು

ಮಹೇಂದ್ರಲಾಲರು ಸ್ಥಾಪಿಸಿದ ಸಂಘ ಸರ್ಕಾರದ ಆಶ್ರಯದಲ್ಲಿ ಬೆಳೆಯುತ್ತಿತ್ತು. ಅವರಿಗೆ ವಿಜ್ಞಾನ ಸಂಘ ಒಂದು ಸ್ವತಂತ್ರ ಸಂಸ್ಥೆಯಾಗಬೇಕು ಎನಿಸಿತು. ಸಂಘದಲ್ಲಿ ಎಲ್ಲ ಕಾರ್ಯವೂ ಭಾರತೀಯರಿಂದಲೇ ಆಗಬೇಕು ಎಂದು ಆಶಿಸಿದರು. ಆದರೆ ಅದು ಒಂದೇ ಬಾರಿಗೆ ಸಾಧ್ಯವಾಗುವಂತಿರಲಿಲ್ಲ. ಭಾರತೀಯ ವಿದ್ಯಾರ್ಥಿಗಳಿಗೆ ವಿಜ್ಞಾನವೇ ಒಂದು ಹೊಸ ವಿಷಯವಾಗಿತ್ತು. ಕಲಿತವರು ತೀರಾ ಕಡಿಮೆ. ಇನ್ನೂ ಕೆಲಕಾಲ ಪಾಶ್ಚಾತ್ಯರ ಸಹಕಾರ ಅಗತ್ಯ ಎಂದು ಮಹೇಂದ್ರಲಾಲರು ಅಭಿಪ್ರಾಯಪಟ್ಟರು. ಭಾರತದಲ್ಲಿ ವಿಜ್ಞಾನಿಗಳ ಪರಂಪರೆ ಆರಂಭವಾಗಲು ಮೊದಲು ಭಾರತೀಯರು ಪಾಶ್ಚಾತ್ಯ ವಿಜ್ಞಾನವನ್ನು ಅಭ್ಯಾಸ ಮಾಡಬೇಕು. ಅನಂತರ ವಿಜ್ಞಾನಕ್ಕೆ ತಮ್ಮ ಕಾಣಿಕೆಯನ್ನು ಸಲ್ಲಿಸಲು ಮುಂದಾಗಬೇಕು. ಇದು ಅವರ ಇಚ್ಛೆಯಾಗಿತ್ತು.

ಸಂಘವನ್ನು ಸಂಪೂರ್ಣ ಸ್ವದೇಶಿಯಾಗಿಸಲು ಮಹೇಂದ್ರಲಾಲರು ಪ್ರಯತ್ನಿಸುತ್ತಲೇ ಇದ್ದರು. ದೂರದೃಷ್ಟಿ ಇದ್ದ ಅವರನ್ನು ಅರ್ಥಮಾಡಿಕೊಳ್ಳಲಾರದೆ ಕೆಲ ಮಿತ್ರರು ಅವರನ್ನು ವಿರೋಧಿಸುತ್ತಲೇ ಇದ್ದರು. ಅಂತಹವರನ್ನು ಮಹೇಂದ್ರಲಾಲರು ವಿನಯದಿಂದಲೇ ಒಲಿಸಿಕೊಳ್ಳುತ್ತಿದ್ದರು. ಅವರಲ್ಲಿ ವಿಜ್ಞಾನಿಗಿರಬೇಕಾದ ಸಹನೆ, ನಿಷ್ಠೆ, ವಿನಯ ತುಂಬಿದ್ದವು. ಕ್ರಮೇಣ ವಿಜ್ಞಾನ ಸಂಘ ಜನಪ್ರಿಯವಾಗತೊಡಗಿತು. ಇದೇ ಸಮಯದಲ್ಲಿ ಕಾಲ್ಮಿಕಿಶನ ಠಾಕೂರ್ ಎಂಬ ಶ್ರೀಮಂತ ಜಮೀನುದಾರರು ಮುಂದೆ ಬಂದು ವಿಜ್ಞಾನ ಸಂಘ ಉಪಕರಣಗಳನ್ನು ಕೊಳ್ಳಲೆಂದು ಧನಸಹಾಯ ಮಾಡಿದರು. ಅಲ್ಲದೆ ಸಂಘದ ಕಟ್ಟಡದ ನಿಧಿಗೆ ಸಹಾಯ ಮಾಡಿದರು. ವಿಜಯನಗರಂ ಎಂಬಲ್ಲಿನ ಮಹಾರಾಜರು ವಿಜ್ಞಾನ ಸಂಘಕ್ಕೆ ಅಗತ್ಯವಾಗಿದ್ದ ಪ್ರಯೋಗಶಾಲೆಯನ್ನು ಕಟ್ಟಿಸಿಕೊಡಲು ಮುಂದೆ ಬಂದರು. ಅದರ ಸಂಪೂರ್ಣ ಖರ್ಚನ್ನು ತಾವೇ ಚೇತರಿಸಿಕೊಂಡಿತು. ವಿಜಯನಗರಂ ಪ್ರಯೋಗ ಶಾಲೆಯ ಶಂಕುಸ್ಥಾಪನೆ ನೆರವೇರಿದಾಗ ಸಮಾರಂಭಕ್ಕೆ ಅಂದಿನ ಭಾರತದ ವೈಸ್‌ರಾಯ್, ದೇಶದ ಪ್ರಮುಖರು, ವಿದೇಶಿ ತಜ್ಞರು ಆಗಮಿಸಿದ್ದರು. ಮಹೇಂದ್ರಲಾಲರಿಗೆ ಹೊಗಳಿಕೆಯ ಸುರಿಮಳೆ. ಮಹೇಂದ್ರಲಾಲರು ಅಂದು ಮಾತನಾಡುತ್ತಾ, ‘ನಾನು ಅಂತಹುದೇನೋ ಮಾಡಿಲ್ಲ. ಜ್ಞಾನವನ್ನು ಹುಡುಕುತ್ತಾ ಹೊರಟು ಜ್ಞಾನದಲ್ಲಿ ಆನಂದವನ್ನು ಕಂಡೆ. ಈ ಆನಂದದಲ್ಲಿ ಇತರ ಪಾಲುದಾರಾಗುವಂತೆ ಮಾಡುವುದೇ ನನ್ನ ಅಭಿಲಾಷೆ ಎಂದು ವಿನಯದಿಂದ ಹೇಳಿದರು.

ಬಿರುಗಾಳಿ

ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನಗು ಎನ್ನುತ್ತಾರೆ. ಮಹೇಂದ್ರಲಾಲರ ವಿಷಯದಲ್ಲೂ ಇದು ಸತ್ಯವಾಯಿತು. ಅವರು ಹೋಮಿಯೋಪತಿ ಪದ್ಧತಿಗೆ ಶರಣಾದಾಗಲೇ ವಿರೋಧ ಒದಗಿತ್ತು. ವಿಜ್ಞಾನ ಸಂಘದ ಸ್ಥಾಪನೆಯಾದ ಮೇಲೂ ಇದು ತಪ್ಪಲಿಲ್ಲ. ಕಲ್ಕತ್ತೆಯ ಉಗ್ರ ದೇಶಭಕ್ತರ ಗುಂಪೊಂದು ವಿಜ್ಞಾನ ಸಂಘವನ್ನು ಟೀಕಿಸಿತು. ಅಪಪ್ರಚಾರ ಮಾಡತೊಡಗಿತು. “ಭಾರತೀಯ ತರುಣರಿಗೆ ತಾಂತ್ರಿಕ ಶಿಕ್ಷಣದ ಅಗತ್ಯವಿದೆ. ದಿನನಿತ್ಯದ ವ್ಯವಹಾರಗಳಿಗೆ ಇದರಿಂದ ಬಹಳ ಪ್ರಯೋಜನವಿದೆ. ಶುದ್ಧ ವಿಜ್ಞಾನ ಕಲಿಯುವುದರಿಂದ ಏನೂ ಲಾಭವಿಲ್ಲ. ಮಹೇಂದ್ರಲಾಲರ ಸಂಘ ಯಾವ ರೀತಿಯಲ್ಲೂ ನೆರವಾಗುತ್ತಿಲ್ಲ. ಅಲ್ಲಿ ಹಣ ವ್ಯರ್ಥವಾಗುತ್ತಿದೆ” ಎಂದೆಲ್ಲ ಪ್ರಚಾರ ಮಾಡತೊಡಗಿತು. ಆ ಗುಂಪಿನವರೇ ಒಂದು ಹೊಸ ಸಂಸ್ಥೆಯನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಿದರು. ರಿಚರ್ಡ್ ಟೆಂಪಲ್‌ರವರ ಅಧ್ಯಕ್ಷತೆಯಲ್ಲಿ ಹಣ ಸಂಗ್ರಹಿಸಿದರು. ‘ಇಂಡಿಯಾ ಲೀಗ್’ ಎಂಬ ಹೊಸ ಸಂಸ್ಥೆಯ ಸ್ಥಾಪನೆಯೂ ಆಯಿತು.

‘ಇಂಡಿಯಾ ಲೀಗ್’ ಮಹೇಂದ್ರಲಾಲರು ಸ್ಥಾಪಿಸಿದ್ದ ವಿಜ್ಞಾನ ಸಂಘಕ್ಕೆ ವಿರೋಧಿಯಾಗಿ ನಿಲ್ಲುವಂತಿರಲಿಲ್ಲ. ಅವರ ಸಂಘ ಒಂದು ಹೆಮ್ಮರವಾಗಿತ್ತು. ಕಲ್ಕತ್ತಾ ನಗರದ ಮೇಧಾವಿಗಳು, ವಿಚಾರವಂತರ ನೆರವು ಪಡೆದಿದ್ದ ಸಂಘ ವಿಜ್ಞಾನದ ದೇವಾಲಯವಾಗಿತ್ತು.  ‘ಇಂಡಿಯಾ ಲೀಗ್’ನ ಸದಸ್ಯರು ವಿಜ್ಞಾನ ಸಂಘವು ಈ ಹೊಸ ಸಂಸ್ಥೆಯೊಡನೆ ಸೇರಿ ಕೆಲಸ ಮಾಡಬೇಕೆಂದು ಮಹೇಂದ್ರಲಾಲರಿಗೆ ಮನವಿ ಕಳಿಸಿದರು. ಇಂಥ ಮನವಿಗಳು ಮೇಲಿಂದ ಮೇಲೆ ಬಂದು ಮಹೇಂದ್ರಲಾಲರಿಗೆ ಅದೊಂದು ಬಿರುಗಾಳಿಯಾಗಿ ಪರಿಣಮಿಸಿತು. ಅವರು ಮಾತ್ರ ಕದಲಲಿಲ್ಲ. ನಿರ್ಧಾರ ಬದಲಿಸಲಿಲ್ಲ. ‘ಇಂಡಿಯಾ ಲೀಗ್’ ಸದಸ್ಯರನ್ನು ಕರೆಸಿ ಟೆಂಪಲ್ ಅಧ್ಯಕ್ಷತೆಯಲ್ಲಿ ಹೀಗೆ ಹೇಳಿದರು: “ವಿಜ್ಞಾನದ ಬೆಳವಣಿಗೆಗಾಗಿ ನಿರ್ಮಾಣವಾಗಿರುವ ಈ ಸಂಘ ಭಾರತೀಯ ತರುಣರಿಗೆ ಒಂದು ಪ್ರಯೋಗಶಾಲೆಯಂತೆ.  ಶುದ್ಧ ವಿಜ್ಞಾನವನ್ನು ಬೋಧಿಸಲು ಹೊರಟ ಕೇಂದ್ರ; ಕೇವಲ ನಿತ್ಯ ಜೀವನದ ಪ್ರಯೋಜನಗಳ ದೃಷ್ಟಿಯಿಂದ ತಾಂತ್ರಿಕ ಶಿಕ್ಷಣ ಕೊಡುವ ಕೇಂದ್ರವಲ್ಲ. ಸಂಶೋಧನೆ ನಿರಂತರವಾದದ್ದು. ಅದು ಪ್ರತ್ಯೇಕವಾಗಿಯೇ ಜರುಗಬೇಕು. ಎರಡು ಸಂಸ್ಥೆಗಳ ಉದ್ದೇಶ ಬೇರೆ.” ಅವರ ಸತ್ಯನಿಷ್ಠೆ, ವಿಜ್ಞಾನದ ಹಂಬಲ ಅಲ್ಲಿ ನೆರೆದಿದ್ದ ಎಲ್ಲರಿಗೂ ಮನದಟ್ಟಾಯಿತು. ಅವರನ್ನು ಶುದ್ಧ ಬಂಗಾರ ಎಂದುಕೊಂಡಾಡಿದರು.

ಸನ್ಮಾನ

ಮಹೇಂದ್ರಲಾಲರ ಪ್ರತಿಭೆ ಬೆಳಕಿಗೆ ಬಂದಂತೆ ಅವರಿಗೆ ಹಲವು ಗೌರವಗಳು ಸಂದವು. ಗೌರವ ದೊರೆತಂತೆ ಅವರ ಕಾರ್ಯಕ್ಷೇತ್ರವೂ ವಿಸ್ತಾರವಾಯಿತು. ಭಾರತ ದೇಶದ ಅತಿ ಶ್ರೇಷ್ಠ ವಿಜ್ಞಾನದ ಪ್ರೋತ್ಸಾಹಕ ಎಂಬ ಪ್ರಶಸ್ತಿ ಅವರದಾಗಿತ್ತು. ೧೮೯೮ರಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯವು ಅವರಿಗೆ ಡಾಕ್ಟರ್ ಆಫ್ ಲಾಸ್ ಎಂಬ ಪದವಿಯನ್ನು ಅರ್ಪಿಸಿತು. ಮಹೇಂದ್ರಲಾಲರು ಹೋಮಿಯೋಪತಿ ಚಿಕಿತ್ಸೆ ಪದ್ಧತಿ ಮೂಲಕ ಬಡ ನಾಗರಿಕರಿಗೆ ಸೇವೆ ಸಲ್ಲಿಸಿದ್ದರು. ಹೋಮಿಯೋಪತಿ ಪ್ರಚಾರಕ್ಕಾಗಿ ‘ಕಲ್ಕತ್ತ ಹೋಮಿಯೋಪತಿಸ್ಟ್’ ಎಂಬ ಪತ್ರಿಕೆ ನಡೆಸಿದರು. ಅವರ ಈ ಸೇವೆಯನ್ನು ಕಲ್ಕತ್ತ ನಗರವಾಸಿಗಳು ಮರೆಯಲಿಲ್ಲ. ಬಂಗಾಲ ನಗರ ಸಭೆಗೆ ಅವರನ್ನು ಸದಸ್ಯರನ್ನಾಗಿ ಚುನಾಯಿಸಿ ಗೌರವಿಸಿದರು. ೧೮೮೭ ರಿಂದ ೧೮೯೩ರವರೆಗೆ ಮಹೇಂದ್ರಲಾಲರು ನಗರ ಸಭೆಗೆ ಸೇವೆ ಸಲ್ಲಿಸಿದರು. ೧೮೮೩ರಲ್ಲಿ ಅವರು ವಿಜ್ಞಾನಕ್ಕೆ ಸಲ್ಲಿಸಿದ ಸೇವೆಗಾಗಿ ಅವರಿಗೆ ಸಿ.ಐ.ಇ ಪದವಿ ಲಭಿಸಿತು. ಭಾರತದಲ್ಲಿ ಇಂತಹ ಗೌರವಗಳನ್ನು ದೊರಕಿಸಿಕೊಂಡ ವೈದ್ಯಕೀಯ ಕ್ಷೇತ್ರದ ವ್ಯಕ್ತಿಗಳಲ್ಲಿ ಮಹೇಂದ್ರಲಾಲರೇ ಮೊದಲಿಗರು.

ಕಲ್ಕತ್ತ ವಿಶ್ವವಿದ್ಯಾನಿಲಯದ ಸಿಂಡಿಕೇಟಿನ ಸದಸ್ಯರಾಗಿ ಮಹೇಂದ್ರಲಾಲರು ಹತ್ತು ವರ್ಷಗಳ ಕಾಲ ದುಡಿದರು. ಅಲ್ಲದೆ ಅಲ್ಲಿನ ಕಲಾ ವಿಭಾಗದ ಅಧ್ಯಕ್ಷರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದರು. ಬಂಗಾಳದ ಏಪ್ಯಾಟಿಕ್ ಸೊಸೈಟಿಯ ಪ್ರಮುಖ ಸದಸ್ಯರಾಗಿಯೂ ಕಲ್ಕತ್ತೆಯ ಇಂಡಿಯಾ ಮ್ಯೂಸಿಯಂನ ವಿಶ್ವಸ್ಥರಲ್ಲಿ ಒಬ್ಬರಾಗಿಯೂ ಇದ್ದು ಮಹೇಂದ್ರಲಾಲರು ಸೇವೆ ಸಲ್ಲಿಸಿದರು.

ಮಹೇಂದ್ರಲಾಲರದು ಚಟುವಟಿಕೆಯ ಜೀವನ. ತನಗೆ ಬೇಸರ ಎಂದು ಎಂದೂ ಅವರು ಹೇಳಿದ್ದಿಲ್ಲ. ಭಾರತದಲ್ಲಿನ ಹಾಗೂ ಹೊರ ದೇಶಗಳ ಅನೇಕ ಸಂಸ್ಕೃತಿ ಪೋಷಕ ಸಂಸ್ಥೆಗಳ ಸಂಪರ್ಕವನ್ನಿಟ್ಟುಕೊಂಡಿದ್ದರು. ಹೊರ ದೇಶಗಳಲ್ಲಿ ಜನಜಾಗೃತಿಗೆ ಕೈಗೊಳ್ಳುತ್ತಿದ್ದ ಕಾರ್ಯಕ್ರಮಗಳನ್ನು ಪರಿಶೀಲಿಸುತ್ತಿದ್ದರು. ಮಹೇಂದ್ರಲಾಲರು ತಮ್ಮ ಹೆಂಡತಿಯ ಹೆಸರಿನಲ್ಲಿ ನಿರ್ಮಿಸಲಾದ ಕುಷ್ಠರೋಗಿ ರಕ್ಷಣಾಲಯ ಕಟ್ಟಡದ ಸಂಪೂರ್ಣ ವೆಚ್ಚವನ್ನು ವಹಿಸಿದರು.

ಪರಮಹಂಸರ ಸೇವೆ

೧೮೮೫ರ ಸೆಪ್ಟೆಂಬರ್ ತಿಂಗಳು. ಭಾರತದ ಸಂತ ಶ್ರೇಷ್ಠ ರಾಮಕೃಷ್ಣ ಪರಮಹಂಸರಿಗೆ ಕಾಯಿಲೆ ಆಗಿತ್ತು. ಡಾ. ಮಹೇಂದ್ರಲಾಲ್ ಸರ್ಕಾರರನ್ನು ರಾಮಕೃಷ್ಣರ ವೈದ್ಯರನ್ನಾಗಿ ನಿಯಮಿಸಲಾಯಿತು. ಮಹೇಂದ್ರಲಾಲರು ಆ ವೇಳೆಗೆ ರಾಮಕೃಷ್ಣರ ವಿಚಾರವನ್ನು ತಿಳಿದು  ಕೊಂಡಿದ್ದರು. ಕರೆ ಬಂದೊಡನೆ ಅವರಲ್ಲಿಗೆ ಹೋದರು. ಅಲ್ಲೊಂದು ಪವಾಡವೇ ಜರುಗಿತ್ತು. ರಾಮಕೃಷ್ಣ ಆರೈಕೆಯಲ್ಲಿ ಶಿಷ್ಯರು ನಿರತರಾಗಿದ್ದರು. ಮನೆ ಬಾಡಿಗೆ, ಗುರುಗಳ ಆಹಾರ, ಚಿಕಿತ್ಸೆಯ ವೆಚ್ಚ ಎಲ್ಲವನ್ನು ಶಿಷ್ಯರೇ ವಹಿಸುತ್ತಿದ್ದರು. ಮಹೇಂದ್ರಲಾಲರು ಇದನ್ನುಕಂಡ ಮೇಲೆ ರಾಮಕೃಷ್ಣರ ಸೇವೆ ಸಲ್ಲಿಸುವುದು ತಮ್ಮ ಭಾಗ್ಯವೆಂದು ತಿಳಿದರು. ರಾಮಕೃಷ್ಣರು ಸತ್ಯಪ್ರೇಮಿಗಳಾಗಿದ್ದುದು ಮಹೇಂದ್ರಲಾಲರಿಗೆ ಅವರಲ್ಲಿ ವಿಶೇಷ ಗೌರವ ಮೂಡುವಂತೆ ಮಾಡಿತು. ಗುರುಭಕ್ತಿಯಿಂದ ಅವರಿಗೆ ಚಿಕಿತ್ಸೆ ಮಾಡತೊಡಗಿದರು. ಆದರೆ ರಾಮಕೃಷ್ಣರ ದೇಹಸ್ಥಿತಿ ಆ ವೇಳೆಗೆ ಹದಗೆಟ್ಟಿತ್ತು. ಮಹೇಂದ್ರಲಾಲರು ಮಾಡಬಹುದಾಗಿದ್ದುದು ಎಂದರೆ ಅವರು ಉಳಿದಿರುವಷ್ಟು ಕಾಲ ಹೆಚ್ಚು ತೊಂದರೆ ಇಲ್ಲದಂತೆ ನೋಡಿಕೊಳ್ಳುವುದು. ರಾಮಕೃಷ್ಣರ ದೇಹ ಪರೀಕ್ಷೆ ಮಾಡಿದ ನಂತರ ಸ್ವಲ್ಪ ಹೊತ್ತು ಅವರೊಡನೆ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದರು. ಅವರಿಬ್ಬರಲ್ಲಿ ಮಾತುಕತೆ ಜರುಗುತ್ತಿತ್ತು. ಧರ್ಮ, ಮತ ಕುರಿತು ಪ್ರಶ್ನೋತ್ತರ. ಗಂಟೆಗಟ್ಟಲೆ ಎನ್ನುವಂತೆ ಚರ್ಚೆ ದಿನ ಕಳೆದಂತೆ ಮಹೇಂದ್ರಲಾಲರು ರಾಮಕೃಷ್ಣರ ತತ್ವಗಳಿಗೆ ಮನಸೋತರು. ವಿಜ್ಞಾನವು ವೇದಾಂತದೊಡನೆ ಬೆರೆಯಿತು.

ರಾಮಕೃಷ್ಣ ಪರಮಹಂಸರ ಕಡೆಯ ದಿನಗಳಲ್ಲಿ ಮಹೇಂದ್ರಲಾಲರು ಭಕ್ತಿಯಿಂದ ತಮ್ಮಿಂದಾದ ಚಿಕಿತ್ಸೆಯನ್ನೆಲ್ಲ ಮಾಡಿದರು.

 

ರಾಮಕೃಷ್ಣ ಪರಮಹಂಸರ ಸನ್ನಿಧಿ, ಸೇವೆ.

ದುಡಿದ ಜೀವಕ್ಕೆ ದಣಿವು

 

ಮಹೇಂದ್ರಲಾಲರು ತಮ್ಮ ಬಾಳಿನುದ್ದಕ್ಕೂ ವಿಜ್ಞಾನದ ಏಳಿಗೆಗೆ ದುಡಿದರು. ತಾವು ಕಟ್ಟಿದ ಸಂಸ್ಥೆಯ ಉದ್ಧಾರಕ್ಕೆ ಶ್ರಮಿಸಿದರು. ಅವರದು ಉದಾರ ಮನಸ್ಸು. ಎಂದೂ ಅವರು ಸರ್ಕಾರವನ್ನು ಯಾವುದಕ್ಕೂ ಒತ್ತಾಯ ಪಡಿಸಲಿಲ್ಲ. ದೈವದ ನೆರವಿನಲ್ಲಿ ಅವರಿಗೆ ಅಪಾರ ನಂಬಿಕೆ. ತಾವು ನಡೆಸುತ್ತಿದ್ದ ಪತ್ರಿಕೆಯನ್ನು ಕೊನೆಯವರೆಗೂ ನಡೆಸಿದರು. ಅವರು ಬರೆದ ವೈದ್ಯಕೀಯ ಮತ್ತು ವೈಜ್ಞಾನಿಕ ಲೇಖನಗಳು ಆ ಪತ್ರಿಕೆಯಲ್ಲೇ ಬೆಳಕು ಕಂಡವು. ಅವರು ಕಾಲರಾ ಮತ್ತು ಪ್ಲೇಗ್ ಕುರಿತು ರಚಿಸಿದ ಗ್ರಂಥಗಳು ಉತ್ತಮ ಗ್ರಂಥಗಳೆದು ಪ್ರಶಂಸಿಸಲ್ಪಟ್ಟಿವೆ.

ದುಡಿದ ದೇಹ ದಣಿಯಿತು. ೧೮೯೨ರಲ್ಲಿ ಇನ್‌ಫ್ಲೊಯೆಂಜಾ ಜ್ವರವು ಅವರನ್ನು ಬಾಧಿಸಿತು. ಅಂತಹ ಜ್ವರ ಬಂದಾಗಲೂ ಮಹೇಂದ್ರಲಾಲರು ತಮ್ಮ ಬಳಿಗೆ ಬಂದ ರೋಗಿಗಳ ಉಪಚಾರವನ್ನು ಬಿಡಲಿಲ್ಲ. ಒಮ್ಮೆ ಬಡ ಹುಡುಗನೊಬ್ಬನಿಗೆ ಮಲೇರಿಯಾ ರೋಗ ತಗುಲಿತ್ತು. ಹಾಸಿಗೆ ಹಿಡಿದಿದ್ದ. ಅವನು ಹೂಗ್ಲಿಯಲ್ಲಿದ್ದ. ಮಹೇಂದ್ರಲಾಲರು ಹುಡುಗನನ್ನು ಗುಣಪಡಿಸಲು ಮುಂದೆ ಬಂದರು. ಕಲ್ಕತ್ತೆಯಿಂದ ಹೂಗ್ಲಿಗೆ ಒಂಬತ್ತು ದಿನಗಳ ಕಾಲ ಹೋಗಿ ಬರುತ್ತಿದ್ದರು. ಹುಡುಗ ಗುಣ ಮುಖನಾದ. ಮಹೇಂದ್ರಲಾಲರು ಅವನಿಂದ ಬಿಡಿಕಾಸನ್ನೂ ತೆಗೆದುಕೊಳ್ಳಲಿಲ್ಲ. ಬದಲಿಗೆ ಮಲೇರಿಯಾ ರೋಗ ತಂದುಕೊಂಡರು. ಮತ್ತೊಮ್ಮೆ ಪರಡುಹಾ ಎಂಬಲ್ಲಿ ಒಬ್ಬ ರೋಗಿಯನ್ನು ಕಂಡುಬಂದರು. ಆಗ ಅವರ ಜ್ವರ ಹೆಚ್ಚಿತು. ಮೂರು ವರ್ಷ ರೋಗದ ಕಷ್ಟ ಅನುಭವಿಸಿದರು.

೧೮೯೬ರಲ್ಲಿ ಫಿರೋಜ ಷಹ ಎಂಬ ಒಬ್ಬ ಜಮೀನುದಾರನಿಗೆ ಉಪಚಾರ ಮಾಡಲು ಕರೆಬಂದಿತು. ಫಿರೋಜ ಷಹ ಬಾಲಿಗಂಜ್‌ನಲ್ಲಿದ್ದ. ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದ ಮಹೇಂದ್ರಲಾಲರು ಅಲ್ಲಿಗೆ ಹೋಗಲು ಸಾಧ್ಯವೂ ಇರಲಿಲ್ಲ. ಗೆಳೆಯರ ಒತ್ತಾಯಕ್ಕೆ ಕಟ್ಟುಬಿದ್ದು ಹೇಗೋ ಹೋಗಿ ಫಿರೋಜ ಷಹನಿಗೆ ಉಪಚಾರ ಮಾಡಿದರು. ಈ ಬಾರಿ ಹಿಂದಿರುಗಿ ಬಂದಾಗ ಮತ್ತೆ ಜ್ವರವನ್ನು ಹೊತ್ತು ತಂದಿದ್ದರು. ಮಹೇಂದ್ರಲಾಲರ ಮುಂದಿನ ಬದುಕು ಬರಿಯ ನರಳಿಕೆಯೇ ಆಯಿತು. ತಾವು ಇದ್ದಲ್ಲಿಯೇ ಇರತೊಡಗಿದರು. ಅವರಾಯತು, ಅವರ ಸಂಸ್ಥೆಯಾಯಿತು. ಆ ವೇಳೆಗೆ ಅವರ ಪುತ್ರ ಅಮೃತಲಾಲ್ ಸರ್ಕಾರರು ವಯಸ್ಸಿಗೆ ಬಂದಿದ್ದರು. ಸಂಸ್ಥೆಯ ಬಹುಪಾಲು ಕೆಲಸವನ್ನು ಅವರೇ ನೋಡಿಕೊಳ್ಳುತ್ತಿದ್ದರು.

ಕಡೆಯ ದಿನಗಳು

ಮಹೇಂದ್ರಲಾಲರು ಎಷ್ಟೇ ಕಾಯಿಲೆ ಅನುಭವಿಸಿದರೂ ತಮ್ಮ ಇಳಿವಯಸ್ಸಿನಲ್ಲಿಯೂ ಅಸೋಸಿಯೇಷನ್ನಿನ ಕಾರ್ಯವನ್ನು ಬಿಡಲಿಲ್ಲ. ಪ್ರತಿದಿನ ಸಂಘದಲ್ಲಿ ಉಪನ್ಯಾಸ ಕೊಡುವುದು ಬಿಡಲಿಲ್ಲ. ಮಾತನಾಡಲು ಕಷ್ಟವಾದರೆ ಉಪನ್ಯಾಸದ ಮೊದಲು ಮಾತುಗಳನ್ನಾಡುವರು. ಅದೇ ಒಂದು ತೃಪ್ತಿ. ಕಡೆ ಕಡೆಗೆ ಅವರು ರೋಗಿಗಳ ಉಪಚಾರಕ್ಕೆ ಹೋಗುವುದನ್ನು ಬಿಟ್ಟರು. ಉಪನ್ಯಾಸ ನೀಡುವುದನ್ನು ಬಿಡಲಿಲ್ಲ. ಅದು ಅರ ಉಸಿರಾಗಿತ್ತು; ನಿತ್ಯ ಕರ್ಮದ ಒಂದು ಭಾಗವಾಗಿತ್ತು.

೧೯೦೩ ಮಹೇಂದ್ರಲಾಲರಿಗೆ ೭೦ ವರ್ಷ ವಯಸ್ಸು. ಜ್ವರದಿಂದ ಸೊರಗಿದ್ದರು. ತಾವಿನ್ನು ಕೆಲವೇ ತಿಂಗಳುಗಳು ಉಳಿದಿರಲು ಸಾಧ್ಯ ಎಂದು ನಿರ್ಧಾರ ಮಾಡಿಕೊಂಡರು.  ಸಾವಿಗೆ ಅವರು ಹೆದರಿರಲಿಲ್ಲ. ಅವರ ಆತ್ಮದಲ್ಲಿ ಶಾಂತಿ ನೆಲೆಸಿತ್ತು. ತಮ್ಮ ತಾರುಣ್ಯದಲ್ಲಿ ಏನನ್ನು ಸಾಧಿಸಬೇಕೆಂದು ಕೊಂಡಿದ್ದರೋ ಅದನ್ನು ಮಾಡಿ ತೃಪ್ತಿಹೊಂದಿದ್ದರು. ಮಹೇಂದ್ರಲಾಲರು ಹುಟ್ಟಿದಾಗ ಭಾರತದ ದೇಶ ವೈಜ್ಞಾನಿಕವಾಗಿ ಮೂಕವಾಗಿತ್ತು. ವಿಜ್ಞಾನದ ಸಾಧನೆಗಳನ್ನು ಕಂಡು ಚಕಿತಗೊಳ್ಳುತ್ತಿತ್ತು. ಮಹೇಂದ್ರಲಾಲರ ಕೊನೆಯ ದಿನಗಳ ಹೊತ್ತಿಗೆ ಭಾರತವು ವಿಜ್ಞಾನ ಕ್ಷೇತ್ರದಲ್ಲಿ ಇತರ ದೇಶಗಳೊಂದಿಗೆ ಭಾಗವಹಿಸಲು ಸಿದ್ಧತೆ ಮಾಡಿಕೊಂಡಿತ್ತು. ಇಂತಹ ಸತ್ಕಾರ್ಯದಲ್ಲಿ ಭಾಗವಹಿಸಿದ್ದರು ವಿಜ್ಞಾನಿ ಮಹೇಂದ್ರಲಾಲ್ ಸರ್ಕಾರ್.

೧೯೦೪ ಫೆಬ್ರವರಿ ೨೩. ಮಹೇಂದ್ರಲಾಲರ ದೇಹ ಸ್ಥಿತಿ ತೀರ ಹದಗೆಟ್ಟಿತು. ತಮ್ಮ ಹತ್ತಿರದ ಬಂಧುಗಳನ್ನು ಬರಮಾಡಿಕೊಂಡಿದ್ದರು. ಅವರ ಹಾಸಿಗೆಯ ಸುತ್ತ ನೆರೆದಿದ್ದವರಿಗೆ ಧೈರ್ಯ ಹೇಳಿದರು. “ಧರ್ಮದಲ್ಲಿ, ದೇವರಲ್ಲಿ ನಂಬುಗೆ ಇಡಿರಿ” ಎನ್ನುತ್ತಾ ಇಹಲೋಕದ ಬಾಳನ್ನು ಮುಗಿಸಿದರು.

ಸಸಿ ಹೆಮ್ಮರವಾಯಿತು

ಸರ್ಕಾರರು ಸ್ಥಾಪಿಸಿದ ’ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಷನ್ ಆಫ್ ಸೈನ್ಸ್’ ಸಂಸ್ಥಗೆ ಅಮೃತ ಲಾಲ್ ಸರ್ಕಾರ್‌ ಕಾರ್ಯದರ್ಶಿಗಳಾದರು. ೧೯೦೭ರಲ್ಲಿ ಖ್ಯಾತ ವಿಜ್ಞಾನಿ ಸರ್. ಸಿ.ವಿ. ರಾಮನ್ ಅವರಿಗೆ ಅಸೋಸಿಯೇಷನ್ ಆಶ್ರಯ ನೀಡಿತು. ಭಾರತಕ್ಕೆ ರಾಮನ್‌ರಂತಹ ವಿಶ್ವವಿಖ್ಯಾತ ವಿಜ್ಞಾನಿಯನ್ನು ಕೊಟ್ಟ ಕೀರ್ತಿ ಮಹೇಂದ್ರಲಾಲರ ಸಂಸ್ಥೆಗೆ ಸಲ್ಲುತ್ತದೆ. ತಮ್ಮ ಆರಂಭದ ಸಂಶೋಧನೆಗಾಗಿ ಈ ಸಂಸ್ಥೆಯನ್ನು ಆರಿಸಿಕೊಂಡ ರಾಮನ್ ೧೯೧೯ ರಲ್ಲಿ ಅಮೃತಲಾಲರು ತೀರಿಕೊಂಡ ಮೇಲೆ ಅದರ ಕಾರ್ಯದರ್ಶಿಗಳಾದರು. ಮಹೇಂರ ಲಾಲರ ಈ ವಿಜ್ಞಾನ ಮಂದಿರದಿಂದಲೇ ರಾಮನ್ ಪರಿಣಾಮದ ಸಿದ್ಧಾಂತ ಆವಿಷ್ಕರಣವಾಯಿತು.

೧೯೪೬ ರಲ್ಲಿ ಭಾಋತ ಸರ್ಕರ ಸುಮಾರು ಮೂರು ಲಕ್ಷ ರೂಪಾಯಿಗಳನ್ನು ಅಸೋಸಿಯೇಷನ್ನಿನ ಏಳಿಗೆಗೆ ಕೊಟ್ಟಿತು. ೧೯೫೨ ರಲ್ಲಿ ಅಸೋಸಿಯೇಷನ್ನಿನ ಹೊಸ ಕಟ್ಟಡ ಎದ್ದಿತು.

ಇಂದು ಮಹೇಂದ್ರ ಲಾಲರು ನಿರ್ಮಿಸಿದ ವಿಜ್ಞಾನ ಸಂಘ ರಸಾಯನಶಾಸ್ತ್ರ, ಭೌತಶಾಸ್ತ್ರ, ತಾತ್ವಿಕ ಭೌತಶಾಸ್ತ್ರ, ಕ್ಷಕಿರಣಗಳು- ಇವುಗಳಲ್ಲಿ ಸಂಶೋಧನೆ ನಡೆಸಲು ತರುಣ ವಿಜ್ಞಾನಿಗಳಿಗೆ ನೆರವಾಗಿದೆ. ಸಂಘವು ಸುಮಾರು ಇಪ್ಪತ್ತೈದು ಸಹಸ್ರ ಗ್ರಂಥಗಳ ಗ್ರಂಥಭಂಡಾರವನ್ನು ಹೊಂದಿದೆ. ಚಾರಿತ್ರಿಕ ಮೌಲ್ಯವುಳ್ಳ ಹಲವಾರು ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ಅಸೋಸಿಯೇಷನ್ ಇಂದೂ ಚಟುವಟಿಕೆಯಿಂದ ಕೆಲಸ ಮಾಡುತ್ತಿದೆ. ಸ್ಫಟಿಕ ಕಾಂತತೆಯ ಮೇಲೆ ಖ್ಯಾತ ವಿಜ್ಞಾನಿ ಡಾ. ಕೆ.ಎಸ್. ಕೃಷ್ಣನ್‌ರವರು ವಿಶೇಷ ಸಂಶೋಧನೆ ನಡೆಸಿದ್ದು ಇಲ್ಲೇ. ಸರ್. ಸಿ.ವಿ. ರಾಮನ್ನರೇ ಕೊಂಡಾಡಿದಂತೆ. ’ಮಹೇಂದ್ರಲಾಲ್ ಸರ್ಕಾರು ನಿರ್ಮಿಸಿದ ವಿಜ್ಞಾನ ಸಂಘ ಇಂದು ವಿಶ್ವದ ಬೇರೆ ಬೇರೆ ನಿಟ್ಟಿನಲ್ಲಿ ತನ್ನ ಹೊಸ ಜ್ಞಾನಪ್ರವಾಹವನ್ನು ಹರಿಸಿದೆ. ಪ್ರಪಂಚದಲ್ಲಿ ಭೌತಶಾಸ್ತ್ರ ವ್ಯಾಸಂಗ ನಡೆದಲ್ಲೆಲ್ಲಾ ಈ ಸಂಘದ ಹೆಸರು ಕೇಳಿಬರುತ್ತಿದೆ’. ರಾಮನ್ನರೇ ವಿಜ್ಞಾನ ಸಂಘವನ್ನು ಸಮರ್ಥ ರೀತಿಯ ಸಂಶೋಧನಾ ಕೇಂದ್ರವನ್ನಾಗಿಸಲು ಹೆಣಗಿ ಯಶಸ್ವಿ ಆದರು.

ಮಹೇಂದ್ರಲಾಲ್ ಸರ್ಕಾರರು ಹೇಳುತ್ತಿದ್ದರು: “ನಿಷ್ಠೆಯಿಂದ ನಡೆಸಿದ ಸಂಶೋಧನೆ ಫಲ ಕೊಡುತ್ತದೆ. ಮಹಾ ಸಂಶೋಧನೆಗಳು ಇನ್ನು ಮುಂದೆಯೂ ಆಗುವುದಕ್ಕೆ ಕಾರಣ ಸಂಶೋಧಕನ ಹೃದಯದಲ್ಲಿರುವ ನಿಶ್ಚಲ ವಿಶ್ವಾಸ ಪ್ರವೃತ್ತಿಯೇ ದೃಢ ಉತ್ಸಾಹವೇ.”