ಹಿಂದೂಸ್ಥಾನಿ ಗಾಯಕರಾಗಿ, ನಟರಾಗಿ, ಸಂಗೀತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಮಹೇಂದ್ರ ಕಿಶೋರ್ ಅವರು ಕರ್ನಾಟಕದ ಹಿಂದೂಸ್ಥಾನಿ ಸಂಗೀತಗಾರರಲೊಬ್ಬರಾಗಿದ್ದಾರೆ. ೧೯೩೨ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದ ಶ್ರೀ ಮಹೇಂದ್ರ ಕಿಶೋರರು ಪ್ರಾರಂಭದ ಸಂಗೀತ ಶಿಕ್ಷಣವನ್ನು ತಮ್ಮ ಮಾತಾಮಹರಾಗಿದ್ದ ಶ್ರೀ ಗೋಪಾಲರಾಂ ಭಂಡಾರಕರ್ ಅವರಿಂದ ಪಡೆದರು. ಮುಂದೆ ಶ್ರೀ ಗೋವಿಂದ ವಿಠಲ ಭಾವೆ, ಶ್ರೀ ಡಿ.ಆರ್. ಗರೂಡ್‌ ಮತ್ತು ಶ್ರೀ ರಾಮರಾವ್‌ ವಿ. ನಾಯಕ್‌ ಅವರುಗಳಿಂದ ಹೆಚ್ಚಿನ ಶಿಕ್ಷಣ ಹೊಂದಿ. ೧೯೬೧ ರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಕಛೇರಿಗಳನ್ನು ನೀಡುತ್ತಿದ್ದಾರೆ. ನಟರಾಗಿ ರಂಗಭೂಮಿಯಲ್ಲಿ ಬೆಳಗಿರುವರಲ್ಲದೆ, ನೃತ್ಯಕ್ಕೆ ಹಿನ್ನೆಲೆ ಗಾಯನವನ್ನು ನೀಡಿರುವ ಅನುಭವವೂ ಅವರಿಗಿದೆ. ಕೆಲವು ಚಲನಚಿತ್ರಗಳಲ್ಲೂ ನಟಿಸಿರುವ ಶ್ರೀಯುತರು ಚಿತ್ರಕಲೆ ಮತ್ತು ಮಣ್ಣಿನ ಮೂರ್ತಿಗಳನ್ನು ರಚಿಸುವುದರಲ್ಲೂ ಪ್ರಾವೀಣ್ಯತೆ ಪಡೆದಿದ್ದಾರೆ. ಅಲ್ಲದೆ ಶಿಕ್ಷಕರಾಗಿ ಕಿರಿಯರನ್ನು ಹಿಂದೂಸ್ಥಾನಿ ಸಂಗೀತದಲ್ಲಿ ತರಪೇತುಗೊಳಿಸುತ್ತಲೂ ಇದ್ದಾರೆ. ಈ ಗಾಯಕ, ನಟ ಶ್ರೀ ಮಹೇಂದ್ರ ಕಿಶೋರರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು “ಕರ್ನಾಟಕ ಕಲಾತಿಲಕ” ಪ್ರಶಸ್ತಿ (೧೯೯೦-೮೧) ನೀಡಿ ಗೌರವಿಸಿದೆ.