ಮಂಜು ಬಿಳಿನಂಜಾಗಿ ಬೀಸಿತು ಮೇಲೆ ; ಇದ್ದ
ನಾಲ್ಕಾರು ಹಣ್ಣೆಲೆಗಳೂ ಉದುರಿ ಮೈ ಬೋಳು.
ಒಮ್ಮೆ ಹಸುರೆಲೆ ಚಿಗುರು ಹಣ್ಣು ಹೂ ತೂಗಿದ್ದ
ಬದುಕೆಲ್ಲ ಬರಬಡಿದ ಎಲುಬುಗೂಡಿನ ಪಾಳು !
ನಿಸ್ತೇಜ ರವಿ ; ಕಳೆಯಿರದ ತಣ್ಗದಿರ ; ಬೆಪ್ಪು
ಕಣ್‌ಬಿಡುವ ಇರುಳ ನಭ ; ದುರ್ಬಲರ ನೆಲೆವೀಡು !
ಕೊರೆಕೊರೆವ ಕರೆಕರೆಯ ಸೂಜಿಗಾಳಿಗೆ ಈಡು
ಸೋತು ಸಾಯದ ಬದುಕು ! ಹರಿವುದೆಂದಿಗೆ ಹೆಪ್ಪು
ಗಟ್ಟಿಸುವ ಈ ಮಾಗಿ ? ಬಾನೆಲ್ಲ ತಿಳಿಯಾಗಿ
ಮುನ್ನಿನೊಲು ಬೆಳಗೀತೆ ಸೂರ್ಯ ಚಂದ್ರರ ಕಾಂತಿ ?
ಮತ್ತೆ ಮೊಳಗುವುದೇನು ಆ ವಸಂತನ ಕ್ರಾಂತಿ ?
ಬೋಳಾದ ಎದೆಯಲ್ಲಿ ಚಿಗುರು ಹೂವನು ತೂಗಿ
ನಿಲುವ ಒಂದೇ ಕನಸು ಈ ಬಾಳಿಗಾಧಾರ
ತೇಲಬೇಕೇ ಇನ್ನು ? ಎಲ್ಲಿ ದೂರದ ತೀರ ?