ಹೈದ್ರಾಬಾದ ಕರ್ನಾಟಕ ಭಾಗದ ರಾಯಚೂರಿನಲ್ಲಿ ಹುಟ್ಟಿ, ಮಹಾರಾಷ್ಟ್ರದ ಸಂಗೀತ ದಿಗ್ಗಜರಲ್ಲಿ ನಾದವಿದ್ಯೆ ಪಡೆದು ಸುಮಧುರ ಕಂಠದಿಂದ ರಾಷ್ಟ್ರದ ಒಳಹೊರಗೆ ಖ್ಯಾತಿ ಗಳಿಸಿ ಕನ್ನಡನಾಡಿಗೆ ಕೀರ್ತಿ ತಂದಿರುವ ಪಂ. ಮಾಣಿಕರಾವ ರಾಯಚೂರಕರ ಅವರು ಗ್ವಾಲಿಯರ್ ಘರಾಣೆಯ ಹಿರಿಯ ತಲೆಮಾರಿನ ದಿಗ್ಗಜರು.

ಅವರು ಜನಿಸಿದ್ದು ೧೯೨೧ರ ಡಿಸೆಂಬರ್ ೨೨ರಂದು; ರಾಯಚೂರಿನಲ್ಲಿ ಬಾಲ್ಯದಲ್ಲಿಯೇ ಸಂಗೀತದತ್ತ ಆಕರ್ಷಿತರಾದ ಅವರಿಗೆ ನಾದದೀಕ್ಷೆ ನೀಡಿದವರು ಅವರ ಸೋದರಮಾವ ಪಂಡಿತ ಜೆ. ನಾಗರಾಜಶಾಸ್ತ್ರಿಯವರು. ನಂತರ ಪಂಢರಪುರದ ಗ್ವಾಲಿಯರ ಘರಾಣೆಯ ಖ್ಯಾತ ಗಾಯಕ ಪಂ. ಜಗನ್ನಾಥ ಬುವಾ ಅವರಲ್ಲಿ ಏಳು ವರ್ಷಗಳ ಕಾಲ ಸುದೀರ್ಘ ತಾಲೀಮು. ನಿರಂತರ ರಿಯಾಜ್‌. ಗುರುವಿನ ಮಾರ್ಗದರ್ಶನದ ಫಲವಾಗಿ ಮಾಣಿಕರಾವ ಅವರು ನಾಡಿನ ಶ್ರೇಷ್ಠ ಹಿಂದೂಸ್ಥಾನಿ ಗಾಯಕರೆನಿಸಿದರು.

ಮೈಸೂರು, ಬೆಂಗಳೂರು ಮೊದಲ್ಗೊಂಡು ರಾಜ್ಯದ ಅನೇಕ ಕಡೆಗಳಲ್ಲಿ, ದೆಹಲಿ, ಕೋಲ್ಕತ್ತಾ, ಮಧುರಾ, ಜೈಪುರ, ಹೈದ್ರಾಬಾದ, ಪುಣೆ, ಭೂಪಾಲ ಮುಂತಾದ ರಾಷ್ಟ್ರದ ಪ್ರಮುಖ ಪಟ್ಟಣಗಳಲ್ಲಿ ಮತ್ತು ಪಾಕಿಸ್ತಾನದ ಲಾಹೋರ, ಪೇಶಾವರ, ಕರಾಚಿ ಮುಂತಾದ ಬೇರೆ ರಾಷ್ಟ್ರಗಳಲ್ಲಿ ತಮ್ಮ ಸುಮಧುರ ಕಂಠ ಸಿರಿಯಿಂದ ಅಸಂಖ್ಯಾತ ಶ್ರೋತೃಗಳ ಹೃನ್ಮನ ಗೆದ್ದಿರುವ ಅವರು ನಾಡಿನ ಕೀರ್ತಿಯನ್ನು ದಶದಿಕ್ಕಿಗೂ ಹಬ್ಬಿಸಿದ್ದಾರೆ. ಅವರು ಹಾಡಿದ ಅನೇಕ ಪರಂಪರಾಗತ ಬಂದೀಶಗಳನ್ನು HMV ಕಂಪನಿ ಧ್ವನಿ ಮುದ್ರಿಸಿಕೊಂಡಿದೆ. ಬೆಂಗಳೂರು, ಮುಂಬೈ, ಧಾರವಾಡ ಹಾಗೂ ಗುಲ್ಬರ್ಗಾ ಆಕಾಶವಾಣಿ ಇವರ ಗಾಯನ ಬಿತ್ತರಿಸುತ್ತಿವೆ. ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಕಾರ್ಯಕ್ರಮದಲ್ಲೂ ಇವರ ಗಾಯನ ಬಿತ್ತರಗೊಂಡಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಪಂ. ಮಾಣಿಕರಾವ ರಾಯಚೂರಕರ ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರ ಬಂದಿವೆ. ಅಂಥವುಗಳಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (೧೯೮೨-೮೩), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೯), ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪ್ರಶಸ್ತಿ (೨೦೦೪), ಕರ್ನಾಟಕ ಸರ್ಕಾರದ’ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ (೨೦೦೬) ಮುಂತಾದವುಗಳು ಉಲ್ಲೇಖನೀಯವಾಗಿವೆ.

ಹೈದ್ರಾಬಾದ ಕರ್ನಾಟಕ ಭಾಗದ ರಾಯಚೂರಿನಂತಹ ಹಿಂದುಳಿದ ಪ್ರದೇಶದಲ್ಲಿ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಶಾಸ್ತ್ರೀಯ ಸಂಗೀತವನ್ನು ಜತನವಾಗಿ ಕಾಯ್ದುಕೊಂಡು ಬಂದು ಶಿಷ್ಯರಿಗೆ ಅದನ್ನು ಧಾರೆಯೆರೆಯುತ್ತ ಸಂಗೀತದ ಅಭಿವೃದ್ಧಿ ಹಾಗೂ ವಿಕಾಸ ಕಾರ್ಯದಲ್ಲಿ ಅವಿರತವಾಗಿ ದುಡಿದಿದ್ದಾರೆ ಪಂ. ಮಾಣಿಕರಾವ ರಾಯಚೂರಕರ ಅವರು ೧೯-೬-೨೦೦೮ ರಂದು ನಮ್ಮನ್ನಗಲಿದರು.