ಮಾಣಿಕ್ಯ ವಾಚಕರ್ಹಿರಿಯ ಶಿವಭಕ್ತರು. ಹದಿನಾರನೆಯ ವಯಸ್ಸಿಗೇ ವಿದ್ವಾಂಸರೆಂದು ಕೀರ್ತಿ ಪಡೆದರು. ಮಧುರೆಯ ಪಾಂಡ್ಯರಾಜನ ಮಂತ್ರಿಯಾದರು. ಭಗವಂತನ ಕಾರುಣ್ಯದ ಅನುಭವವಾಗಿ ಅಧಿಕಾರ, ಐಶ್ವರ್ಯ ಎಲ್ಲವನ್ನೂ ತ್ಯಜಿಸಿ ಭಗವಂತನ ಸೇವಕರಾದರು. ಸುಂದರವಾದ ಹಾಡುಗಳನ್ನು ರಚಿಸಿದ್ದಾರೆ.

ಮಾಣಿಕ್ಯವಾಚಕರ್

ನೂರಾರು ವರ್ಷಗಳ ಹಿಂದಿನ ಮಾತು. ತಮಿಳುನಾಡಿನಲ್ಲಿರುವ ಮಧುರೆಯನ್ನು ಪಾಂಡ್ಯರಾಜ ಆಳುತ್ತಿದ್ದ. ಆತ ತನ್ನ ರಾಜ್ಯವನ್ನು ಸೈನಿಕ ಬಲದಿಂದ ಅಶ್ವಬಲದಿಂದ ಸಜ್ಜುಗೊಳಿಸಿ ನೆರೆಹೊರೆಯ ರಾಜ್ಯಗಳನ್ನು ಗೆದ್ದು ತನ್ನ ರಾಜ್ಯವನ್ನು ವಿಸ್ತರಿಸಬೇಕೆಂಬ ಪ್ರಬಲವಾದ ಆಸೆಯನ್ನು ಇಟ್ಟುಕೊಂಡಿದ್ದ. ಪ್ರಜೆಗಳು ಕೊಡುತ್ತಿದ್ದ ತೆರಿಗೆಯ ಹಣವನ್ನು ಅವರ ಹಿತರಕ್ಷಣೆಗಾಗಿ ವಿನಿಯೋಗಿಸದೆ ಸೈನ್ಯ ಬಲವೃದ್ಧಿಗೆ ಖರ್ಚು ಮಾಡುತ್ತಿದ್ದ.

ಹದಿನಾರು ವರ್ಷಕ್ಕೆ ವಿದ್ವಾಂಸ

ಮಧುರೆಯ ಬಳಿಯಲ್ಲಿ ವೈಗೈ ನದಿಯು ಹರಿಯುತ್ತಿತ್ತು. ಅದರ ತೀರದಲ್ಲಿ ತಿರುವಾತವೂರು ಎಂಬ ಊರಿತ್ತು. ಅದರ ಸಮೀಪದಲ್ಲೆ ಮಾನಮಂಗಲವೆಂಬ ಊರು. ಆ ಊರಿನಲ್ಲಿ ಮಾಣಿಕ್ಯ ವಾಚಕರು ಜನಿಸಿದರು. ತಂದೆಯ ಹೆಸರು ಶಂಭುಪದಾಶ್ರಿತರ್, ತಾಯಿಯ ಹೆಸರು ಶಿವಜ್ಞಾನವತಿ ಎಂದು ಹೇಳುತ್ತಾರೆ. ಇದು ಖಚಿತವಿಲ್ಲ. ಇವರ ಕಾಲವೂ ಖಚಿತವಾಗಿ ತಿಳಿದಿಲ್ಲ. ಕ್ರಿಸ್ತಶಕ ಮೂರನೆಯ ಶತಮಾನದಿಂದ ಒಂಬತ್ತನೆಯ ಶತಮಾನದೊಳಗೆ (ಎಂದರೆ ಒಂದು ಸಾವಿರದಿಂದ ಒಂದು ಸಾವಿರದ ಆರು ನೂರು ವರ್ಷಗಳ ಹಿಂದೆ) ಇದ್ದಿರಬೇಕು ಎಂದು ವಿದ್ವಾಂಸರ ಅಭಿಪ್ರಾಯ. ಅವರ ತಂದೆ ಉದ್ದಾಮ ಪಂಡಿತರಾಗಿದ್ದುದರಿಂದ ಮಗ ಮಾಣಿಕ್ಯವಾಚಕರೂ ತಮ್ಮ ಹದಿನಾರನೇ ವಯಸ್ಸಿಗೆ ವೇದ, ಆಗಮಶಾಸ್ತ್ರಗಳನ್ನು, ಆರ್ಯ-ದ್ರಾವಿಡ ದೇಶಗಳ ಪುರಾಣಗಳನ್ನು ಸಂಸ್ಕೃತ ಮತ್ತು ತಮಿಳು ಭಾಷೆಗಳನ್ನೂ ಅಧ್ಯಯನ ಮಾಡಿ ಅಪಾರ ಜ್ಞಾನ ಸಂಪಾದನೆ ಮಾಡಿದ್ದರು. ತಿರುವಾತವೂರಿನವರು ಎಂಬುದಾಗಿಯೇ ಅವರನ್ನು ಜನರು ಪ್ರೀತಿಯಿಂದ ಕರೆಯುತ್ತಿದ್ದುದರಿಂದ ಅವರಿಗೆ ನಾಮಕರಣವಾದ ಹೆಸರು ಯಾವುದು ಎಂಬುದೇ ತಿಳಿಯದು.

ಪಾಂಡ್ಯರಾಜನ ಮಂತ್ರಿ

ಅನೇಕ ಮಂದಿ ವಿದ್ವಾಂಸರು ಮಾಣಿಕ್ಯ ವಾಚಕರ ಬಗ್ಗೆ ಪಾಂಡ್ಯರಾಜನಿಗೆ ತಿಳಿಸಿದರು. ಅಂಥ ವಿದ್ವಾಂಸರು ತನ್ನ ಆಸ್ಥಾನದಲ್ಲಿರಬೇಕೆಂದು ಆಸೆಪಟ್ಟ ಪಾಂಡ್ಯರಾಜನನು ಅವರನ್ನು ಬರಮಾಡಿಕೊಂಡು ಪರೀಕ್ಷೆಗೊಳಪಡಿಸಿದ. ತಾನು ಕೇಳಿ ತಿಳಿದುದಕ್ಕಿಂತಲೂ ಅವರು ಮೇಧಾವಿಯೆಂಬುದು ಗೊತ್ತಾಗುತ್ತಲೂ ಅವರಿಗೆ ಸಚಿವ ಪದವಿಯನ್ನು ನೀಡಿ ಗೌರವಿಸಿದ. ಮಾಣಿಕ್ಯವಾಚಕರೂ ರಾಜನ ಹಿತವನ್ನು ಬಯಸಿ ಅವನ ಆಜ್ಞೆಗಳನ್ನು ನೆರವೇರಿಸುತ್ತಿದ್ದರು. ಅದರಿಂದ ಪಾಂಡ್ಯರಾಜನಿಗೆ ಅವರ ವಿಚಾರದಲ್ಲಿ ವಿಶೇಷವಾದ ಗೌರವವಿತ್ತು.

ಮಾಣಿಕ್ಯ ವಾಚಕರು ಮಂತ್ರಿಯಾಗಿ ತಮ್ಮಕೆಲಸವನ್ನು ತುಂಬಾ ಶ್ರದ್ಧೆಯಿಂದ ನಡೆಸುತ್ತಿದ್ದರು. ದಕ್ಷತೆಯಿಂದ ಆಡಳಿತ ನಡೆಸುತ್ತಿದ್ದರು. ರಾಜನ ಮತ್ತು ಪ್ರಜೆಗಳ ಮೆಚ್ಚಿಕೆಯನ್ನು ಸಂಪಾದಿಸಿದರು. ಆದರೆ ಅವರ ಮನಸ್ಸು ಈ ಕೆಲಸ, ಪದವಿ, ವೈಭವ ಇವುಗಳಲ್ಲಿ ನಿಲ್ಲಲಿಲ್ಲ. ಇವೆಲ್ಲವನ್ನೂ ಬಿಟ್ಟು, ಮನಸ್ಸಿನ ಶಾಂತಿ ಇರುವಂತೆ ಬಾಳಬೇಕು, ದೇವರ ಧ್ಯಾನ ಮಾಡಬೇಕು-ಹೀಗೆ ಅವರ ಮನಸ್ಸು ಒಲಿಯುತ್ತಿತ್ತು.

ಕುದುರೆಗಳನ್ನು ಕೊಂಡು ತನ್ನಿ

ಒಂದು ದಿನ ರಾಜ ತನ್ನ ಸಚಿವರೊಡನೆ ಸಮಾಲೋಚನೆ ನಡೆಸುತ್ತಿರುವಾಗ ರಾಜ್ಯದ ದಂಡಾಧಿಕಾರಿ ಹೀಗೆ ಅರಿಕೆ ಮಾಡಿದ:

‘‘ಪ್ರಭು, ನಮ್ಮ ಕುದುರೆಯ ಪಡೆಯಲ್ಲಿ ಬಹುಪಾಲು ಕುದುರೆಗಳು ರೋಗಪೀಡಿತವಾಗಿ ಸತ್ತವು. ಉಳಿದ ಕುದುರೆಗಳೂ ಉಳಿಯುವ ನಂಬಿಕೆಯಿಲ್ಲ. ಈ ಕಾರಣದಿಂದ ಜಾತಿ ಕುದುರೆಗಳನ್ನು ತುರ್ತಾಗಿ ಕೊಳ್ಳಬೇಕಾಗಿದೆ.’’

‘‘ಒಳ್ಳೆಯ ಕುದುರೆಗಳು ಎಲ್ಲಿ ಸಿಗುತ್ತವೆ?’’

‘‘ಪ್ರಭು, ಚೋಳರಾಜ್ಯದಲ್ಲಿ ತಿರುಪೆರುಂತುರೈಯೆಂಬ ಶಿವಕ್ಷೇತ್ರವಿದೆ. ಅದರ ಸಮೀಪದಲ್ಲಿ ಸಮುದ್ರ ತೀರವಿದೆ. ಅಲ್ಲಿಗೆ ದೇಶ ವಿದೇಶಗಳಿಂದ ಶ್ರೇಷ್ಠ ದರ್ಜೆಯ ಕುದುರೆಗಳು ಬರುತ್ತವೆ. ನಮ್ಮ ದೂತರು ಅಲ್ಲಿಗೆ ಹೋಗಿ ಕುದುರೆಗಳನ್ನು ನೋಡಿಕೊಂಡು ಬಂದಿದ್ದಾರೆ’’ ದಂಡಾಧಿಕಾರಿ ತಿಳಿಸಿದ.

ಪಾಂಡ್ಯರಾಜನು ಮಾಣಿಕ್ಯ ವಾಚಕರನ್ನು ಕುರಿತು, ‘‘ನೀವು ಅಗತ್ಯವಾದಷ್ಟು ಹಣವನ್ನು ತೆಗೆದುಕೊಂಡು ಚೋಳ ರಾಜ್ಯಕ್ಕೆ ಪ್ರಯಾಣಮಾಡಿ ಶಾಸ್ತ್ರಗ್ರಂಥಗಳಲ್ಲಿ ಉಲ್ಲೇಖಿಸಿರುವಂಥ ಶ್ರೇಷ್ಠ ವರ್ಗದ ಕುದುರೆಗಳನ್ನು ಕೊಂಡುಕೊಂಡು ಬನ್ನಿ’’ ಎಂದ.

ತಿರುಪೆರುಂತುರೈ ಸೇರಿದರು

ಆಗಲೆಂದು ಒಪ್ಪಿಕೊಂಡ ಮಾಣಿಕ್ಯ ವಾಚಕರು ರಾಜ್ಯದ ಬೊಕ್ಕಸದಿಂದ ಕುದುರೆಗಳನ್ನು ಕೊಳ್ಳಲು ಅಗತ್ಯವಾದಷ್ಟು ಹಣವನ್ನು ತೆಗೆದುಕೊಂಡು ಅದನ್ನು ಅಲ್ಲಿದ್ದ ಲೆಕ್ಕದ ಪುಸ್ತಕದಲ್ಲಿ ಬರೆದು ತಮ್ಮ ಪರಿವಾರ ಸಮೇತರಾಗಿ ಊರಿನ ಶಿವಾಲಯಕ್ಕೆ ಬಂದರು.

‘‘ತಂದೆಯೆ, ಪ್ರಭುವಿನ ಆಣತಿಯಂತೆ ಹೊರಟಿಸುವ ನನ್ನ ಕೆಲಸ ಸುಸೂತ್ರವಾಗಿ ನೆರವೇರಿ ಅವರ ಇಚ್ಛೆಯಂತೆ ಒಳ್ಳೆಯ ಕುದುರೆಗಳು ಸಿಗುವಂತೆ ಅನುಗ್ರಹಿಸಬೇಕು’’ ಎಂದು ಪ್ರಾರ್ಥಿಸಿ ಹೊರಟರು.

ಅಲ್ಲಿಂದ ಮುಂದೆ ಪ್ರಯಾಣ ಮಾಡಿದ ಅವರು ತಿರುಕ್ಕಾನ ಪೇರ್ ಎಂಬ ಊರಿನಲ್ಲಿ ಅಂದು ರಾತ್ರಿ ತಂಗಿದ್ದು ಮಾರನೆ ಬೆಳಗ್ಗೆ ತಿರುಪೆರುಂತುರೈಯನ್ನು ಕುರಿತು ಪ್ರಯಾಣ ಮಾಡಿದರು.

ಈ ಕುದುರೆಗಳ ವ್ಯಾಪಾರವನ್ನು ಕುರಿತು ಭಕ್ತರು ಒಂದು ಸ್ವಾರಸ್ಯವಾದ ಕಥೆಯನ್ನು ಹೇಳುತ್ತಾರೆ.

ತಿರುಪೆರುಂತುರೈಯನ್ನು ತಲಪಿದಂತೆಯೇ ಅವರಲ್ಲಿ ಅನೇಕ ಬದಲಾವಣೆಗಳಾದವು. ಹಣದ ಮೇಲಿನ ವ್ಯಾಮೋಹ ಹೊರಟುಹೋಯಿತು. ಪರಮೇಶ್ವರನಲ್ಲಿ ಅತಿಯಾದ ಭಕ್ತಿಭಾವ ಮೂಡಿತು.

‘‘ಈ ಕ್ಷೇತ್ರದ ಮಹಿಮೆ’’  ಎಂದುಕೊಂಡ ಅವರು ಒಂದು ಉದ್ಯಾನವನದಲ್ಲಿ ಬಿಡಾರ ಮಾಡಿದರು.

ಶಿವಯೋಗಿಯ ದರ್ಶನ

ಆಗ ಸುಮಧುರವಾದ ಕಂಠದಲ್ಲಿ ಯಾರೋ ಗಾಯನ ಮಾಡುತ್ತಿರುವುದು ಗಾಳಿಯಲ್ಲಿ ತೇಲಿಬಂತು. ಕಿವಿಗೆ ಹಿತವಾದ ಗಾಯನದಿಂದ ಪುಳಕಿತರಾದ ಮಾಣಿಕ್ಯವಾಚಕರು ಹಾಡುತ್ತಿರುವವರು ಯಾರೆಂದು ನೋಡಿ ಬರಲು ದೂತನನ್ನು ಕಳುಹಿಸಿದರು.

ಸ್ವಲ್ಪ ಹೊತ್ತಿಗೆಲ್ಲ ವಾಪಸು ಬಂದ ದೂತನು, ‘‘ಮಾವಿನ ಮರದ ಕೆಳಗೆ ಒಬ್ಬ ಶಿವಯೋಗಿಗಳು ಬಿಡಾರ ಮಾಡಿದ್ದಾರೆ. ಅವರೇ ಹಾಡುತ್ತಿರುವವರು’’ ಎಂದು ಬಿನ್ನವಿಸಿದ.

ಮಾಣಿಕ್ಯವಾಚಕರು ಲಗುಬಗೆಯಿಂದೆದ್ದು ಹೋಗಿ ಶಿವಯೋಗಿಗಳನ್ನು ಕಂಡು ಅವರ ಪಾದಗಳಿಗೆರಗಿದರು.

ಮುಗುಳುನಗೆ ಬೀರಿದ ಶಿವಯೋಗಿಗಳು ಅವರನ್ನು ನಖಶಿಖಾಂತವಾಗಿ ನೋಡಿ ಅವರ ತಲೆಯ ಮೇಲೆ ಕೈಯಿಟ್ಟು ಹರಸಿ ಕಿವಿಯಲ್ಲಿ ಶಿವಮಂತ್ರಾಕ್ಷರಿಯನ್ನು ಉಪದೇಶ ಮಾಡಿದರು.

ಮಾಣಿಕ್ಯವಾಚಕರು ಶಿವಯೋಗಿಗಳ ಸನ್ನಿಧಿಯಲ್ಲೆ ಹಲವಾರು ದಿನಗಳು ಉಳಿದು ಮೈಮರೆತು ಹಾಡುವರು, ಕುಣಿಯುವರು.

ಕೋಪಗೊಂಡ ರಾಜ

ಅವರ ಜತೆಯಲ್ಲಿ ಬಂದ ಪರಿವಾರದವರು ಅವರಲ್ಲಿ ಆದ ಬದಲಾವಣೆಯನ್ನು ಕಂಡು, ಇವರಿಗೆ ‘‘ಹುಚ್ಚು ಹಿಡಿ ಯಿತು’’ ಎಂಬುದಾಗಿ ನಿರ್ಧರಿಸಿದರು. ಅಲ್ಲಿಂದ ಹೊರಟು ಮಧುರೆಗೆ ಬಂದು ತಾವು ಕಂಡುದನ್ನು ಪಾಂಡ್ಯರಾಜನಿಗೆ ತಿಳಿಸಿದರು.

ರಾಜನಿಗೆ ಬಹಳ ಸಿಟ್ಟು ಬಂತು. ಕೂಡಲೇ ಅವನು ಮಾಣಿಕ್ಯವಾಚಕರಿಗೆ ಒಂದು ಪತ್ರವನ್ನು ಬರೆಸಿದ. ಅದರಲ್ಲಿ, ‘‘ನೀವು ಅಪಾರವಾದ ಹಣವನ್ನು ತೆಗೆದುಕೊಂಡು ನಮ್ಮ ರಾಜ್ಯಕ್ಕೆ ಅಗತ್ಯವಾದ ಕುದುರೆಗಳನ್ನು ತರಲು ಹೋಗಿರುವಿರಿ. ಆದರೆ ನಿಮ್ಮಿಂದ ಈ ವಿಚಾರದಲ್ಲಿ ಇದುವರೆಗೆ ಯಾವ ಸುದ್ದಿಯೂ ಬರಲಿಲ್ಲ. ಇದರ ಅರ್ಥವೇನು? ಸಚಿವರಾದವರು ಹೀಗೆ ನಡೆದುಕೊಳ್ಳಬಹುದೆ? ಈಗಲಾದರೂ ಹೋದ ಕೆಲಸವನ್ನು ಮುಗಿಸಿಕೊಂಡು ಕುದುರೆಗಳೊಡನೆ ಬೇಗ ಬನ್ನಿ’’ ಎಂದು ಬರೆದಿದ್ದರು.

ನಿನ್ನ ರಕ್ಷಣೆಗೆ ನಾನಿದ್ದೇನೆ

ದೂತ ತಂದಿತ್ತ ಪತ್ರವನ್ನು ಓದಿಕೊಂಡ ಮಾಣಿಕ್ಯ ವಾಚಕರು ಬೆಚ್ಚಿಬಿದ್ದರು. ತಾವು ಬಂದ ಕೆಲಸವೇನು, ತಾವು ಮಾಡುತ್ತಿರುವುದೇನು ಎಂಬುದನ್ನು ನೆನೆದರು. ಮನಸ್ಸಿಗೆ ತುಂಬ ಬೇಸರವಾಯಿತು. ರಾಜನ ಅಪನಂಬಿಕೆಗೆ ಪಾತ್ರನಾದೆನಲ್ಲ ಎಂದುಕೊಂಡು ಶಿವಯೋಗಿಗಳ ಬಳಿಗೆ ಬಂದು ತಾವು ಬಂದ ಕಾರ್ಯವನ್ನು ವಿವರಿಸಿದರು.

‘‘ನಿನ್ನ ರಕ್ಷಣೆಗೆ ನಾನಿದ್ದೇನೆ. ಕುದುರೆಗಳು ಜ್ಯೇಷ್ಠ ಮಾಸದ ಮೊದಲ ದಿನ ಬರುತ್ತವೆಂದು ಹೇಳಿ ಕಳುಹಿಸು’’  ಎಂದು ಅವರಿಗೆ ಮಾತ್ರ ಕೇಳಿಸುವಂತೆ ಹೇಳಿದರು ಆ ಶಿವಯೋಗಿ.

ಮಾಣಿಕ್ಯ ವಾಚಕರು ಅದೇ ರೀತಿಯಲ್ಲಿ ಒಂದು ಉತ್ತರ ಬರೆದರು. ಅದರಲ್ಲಿ-

‘‘ಪಾಂಡ್ಯ ದೊರೆಗಳಿಗೆ ವಾತವೂರಿನವನು ಬರೆದ ಸವಿನಯ ಮನವಿಯೇನೆಂದರೆ, ಕುದುರೆಗಳು ಜ್ಯೇಷ್ಠ ಮಾಸದ ಮೊದಲ ದಿನದಂದು ಬರುತ್ತವೆ. ಅವುಗಳನ್ನು ಕಟ್ಟಿಹಾಕಲು ಲಾಯಗಳನ್ನು, ಅವುಗಳಿಗೆ ನೀರು ನಿಡಿಗಳನ್ನು ನೀಡಲು ಅಗತ್ಯವಾದ ಸೌಕರ‍್ಯಗಳನ್ನು ಏರ್ಪಡಿಸಬೇಕು’’ ಎಂದು ಬರೆದು ದೂತನೊಡನೆ ಕೊಟ್ಟು ಕಳುಹಿಸಿದರು.

‘‘ಜನರ ಹಿತಕ್ಕಾಗಿ ಉಪಯೋಗಿಸು

ರಾಜನಿಗೆ ನಾನು ಕುದುರೆಗಳನ್ನು ತಲಪಿಸುವುದು ನಿಜ. ನೀನು ನಿನ್ನ ಬಳಿ ಇರುವ ಹಣವನ್ನು ಜನರ ಹಿತಕ್ಕಾಗಿ ಆಲಯಗಳ ಜೀಣೋದ್ಧಾರಕ್ಕಾಗಿ ಉಪಯೋಗಿಸು. ಮತ್ತೆ ರಾಜನನ್ನು ಕಂಡು ಒಳ್ಳೆಯ ಮಾತುಗಳಿಂದ ಕುದುರೆಗಳು ಬರುವುವೆಂದು ಹೇಳು’’ ಎಂದು ಶಿವಯೋಗಿಗಳು ನುಡಿದರು.

ಮಾಣಿಕ್ಯ ವಾಚಕರು ಕಣ್ಣುಬಿಟ್ಟು ತೆರೆಯುವಷ್ಟರಲ್ಲಿ ಶಿವಯೋಗಿಗಳು ಅಲ್ಲಿ ಕಾಣಿಸಲಿಲ್ಲ.

ಎಲ್ಲ ಅವನ ಇಚ್ಛೆಯೆಂದುಕೊಂಡ ಮಾಣಿಕ್ಯ ವಾಚಕರು ಶಿವಯೋಗಿಗಳು ತಿಳಿಸಿದಂತೆ ಪೂರ್ತಿ ಹಣವನ್ನು ವಿನಿಯೋಗಿಸಿ ಕೈಬರಿದು ಮಾಡಿಕೊಂಡು ಮಧುರೆಗೆ ಬಂದರು.

ಕುದುರೆಗಳು ಬರುತ್ತವೆ

ಪತ್ರವನ್ನು ಓದಿ ಅವರ ಬರವಿಗಾಗಿ ಕಾದಿದ್ದ ಪಾಂಡ್ಯರಾಜನು ಅವರನ್ನು ಆದರದಿಂದ ಬರಮಾಡಿಕೊಂಡು ತನ್ನೊಡನಿದ್ದ ಸಚಿವರನ್ನು ಕಳುಹಿಸಿ, ‘‘ಎಷ್ಟು ಕುದುರೆಗಳನ್ನು ಕೊಂಡಿರಿ? ಯಾವ ಯಾವ ದೇಶದ ಕುದುರೆಗಳು? ಅವು ಬಂದಿಳಿದ ಸ್ಥಳಗಳಾವುವು ತಿಳಿಸಿ’’ ಎಂದ.

ವೆಳ್ಳಿಯಂಬಲ ಸ್ವಾಮಿಯನ್ನು ಮನಸ್ಸಿನಲ್ಲೆ ನೆನೆದ ಮಾಣಿಕ್ಯ ವಾಚಕರು, ‘‘ಪ್ರಭು, ನಾನು ಅನೇಕ ಸ್ಥಳಗಳಿಗೆ ಹೋಗಿ ಆರ‍್ಯ, ಸಾಂಬ್ರಾಣಿ, ಮರಾಠ, ಕಾಂಭೋಜ ಹಾಗೂ ಸೈಂಧವ ರಾಜ್ಯಗಳ ಕುದುರೆಗಳನ್ನೇ ಹೆಚ್ಚಾಗಿ ಕೊಂಡೆ. ಪ್ರಭೂ, ತ್ವರಿತ ಗತಿಯಲ್ಲಿ ಅವು ಸಾಗಬಲ್ಲವು. ಸಮುದ್ರದ ಭೋರ್ಗರೆತವನ್ನು ಮೀರಿಸುವಂತೆ ಅವು ಹೇಷಾರವ ಮಾಡುತ್ತವೆ. ಅವುಗಳನ್ನು ತಾವೇ ಕಣ್ಣಾರ ಕಂಡಾಗ ಈ ಗುಣಗಳನ್ನು ನೋಡಬಹುದು. ಅಶ್ವಗಳ ಪಟ್ಟಣಪ್ರವೇಶಕ್ಕೆ ಶುಭದಿನ ಯಾವುದೆಂದು ವಿಚಾರಿಸಿದಾಗ ಜ್ಯೇಷ್ಠ ಮಾಸದ ಮೊದಲ ದಿನವೆಂದು ಗೊತ್ತಾಯಿತು. ಆ ದಿನ ಬರಲೆಂದು ನಾನು ತಿರುಪೆರುಂತುರೈನಲ್ಲಿ ಕಾದಿದ್ದೆ. ಅಷ್ಟರಲ್ಲಿ ಇಲ್ಲಿಗೆ ಬರುವ ಆತುರದಲ್ಲಿ ನನ್ನ ಸಂಗಡ ಬಂದವರು ತಮ್ಮ ಮುಂದೆ ಅಲ್ಲಸಲ್ಲದುದನ್ನು ಹೇಳಿದ್ದಾರೆ. ಆದ್ದರಿಂದ ಕುದುರೆಗಳು ಸದ್ಯದಲ್ಲೆ ಬರುತ್ತವೆ’’ ಎಂದರು.

‘‘ಸತ್ಯವನ್ನು ತಿಳಿಯದೆ ನಾನು ನಿಮಗೆ ಪತ್ರ ಬರೆದೆ, ಅದರಿಂದ ನಿಮ್ಮ ಮನಸ್ಸು ನೊಂದಿದೆ. ಈ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ’’ ಎಂದ ರಾಜ; ಅವರಿಗೆ ಬೇಕಾದಷ್ಟು ಉಡುಗೊರೆಗಳನ್ನು ನೀಡಿ ಗೌರವಿಸಿ ಅವರನ್ನು ಕಳುಹಿಸಿಕೊಟ್ಟ.

ಪರಮಾತ್ಮನ ಇಚ್ಛೆಯಂತೆ ನಡೆದೆ

ಅರಸನಿಗೆ ಕುದುರೆಗಳು ಬಂದು ಮುಟ್ಟುತ್ತವೆ ಎಂಬುದಾಗಿ ಮಾತು ಕೊಟ್ಟಿದ್ದೇನೆ. ಆದರೆ ಹಣವನ್ನೆಲ್ಲ ಖರ್ಚು ಮಾಡಿದ್ದೇನೆ. ನನ್ನನ್ನು ಈ ಇಕ್ಕಟ್ಟಿನಿಂದ ನನ್ನನ್ನು ಪಾರು ಮಾಡಬೇಕು’ ಎಂದು ಮಾಣಿಕ್ಯವಾಚಕರು ಮನಸ್ಸಿನಲ್ಲೆ ಪ್ರಾರ್ಥಿಸಿದರು.

ಊರಿಗೆ ಮಾಣಿಕ್ಯವಾಚಕರು ಬಂದಾಗ ಅವರ ಬಂಧು ಬಳಗದವರೆಲ್ಲ ಅವರನ್ನು ಸುತ್ತುವರಿದರು. ಕುದುರೆಗಳನ್ನು ಕೊಳ್ಳಲು ಹೋದ ಅವರು ಶಿವಯೋಗಿಯೊಬ್ಬರ ಮಾತಿನಂತೆ ಹಣವನ್ನೆಲ್ಲ ಖರ್ಚುಮಾಡಿದ್ದ ವಿಚಾರ ತಿಳಿದಿತ್ತು. ಅದರಿಂದ ಚಿಂತೆಗೀಡಾಗಿದ್ದ ಹೆಂಡತಿ ಮಕ್ಕಳು ಮತ್ತು ಬಂಧು ಬಾಂಧವರೆಲ್ಲ ಅವರನ್ನು ಕಂಡು, ‘‘ರಾಜರಿಂದ ಪಡೆದ ಹಣದಲ್ಲಿ ಕುದುರೆಗಳನ್ನು ಕೊಳ್ಳದೆ ಅವರಿವರಿಗೆಲ್ಲ ದಾನಮಾಡಿದ್ದೀರಿ. ಈಗಲ್ಲದಿದ್ದರೆ ನಾಳೆಯಾದರೂ ಅರಸರಿಗೆ ಈ ಸಂಗತಿ ಗೊತ್ತಾಗುತ್ತದೆ. ಆಗ ಅವರು ನಮ್ಮನ್ನು ಸುಮ್ಮನೆ ಬಿಡುವರೆ?’’ ಎಂದು ಆತಂಕಪಡುತ್ತ ಕೇಳಿದರು.

‘‘ಪರಮಾತ್ಮನನ್ನು ದರ್ಶನ ಮಾಡಿದೆ. ಅವನು ಹೇಳಿದಂತೆ ಹಣವನ್ನು ಖರ್ಚು ಮಾಡಿದ್ದೇನೆ. ಜನಹಿತಕ್ಕಾಗಿ ಹಣವನ್ನು ಖರ್ಚು ಮಾಡಬೇಕೆಂಬುದು ಪರಮಾತ್ಮ ಅಪೇಕ್ಷೆ. ಅದೇ ನನಗೆ ತೃಪ್ತಿ. ಅದರಿಂದ ಒದಗಬಹುದಾದ ಕಷ್ಟಗಳನ್ನು ಎದುರಿಸುತ್ತೇನೆ’’ ಎಂದರು.

ಮುಂದೆ ಮಾತಾಡಲಾಗದ ಬಂಧುಗಳು ಸುಮ್ಮನಾದರು.

ಪಟ್ಟಣ ಶೃಂಗಾರವಾಯಿತು

‘‘ಮಾರನೆಯ ದಿನ ಮತ್ತೆ ಬಂದ ರಾಜದೂತರು, ‘‘ಕುದುರೆಗಳು ಬಂದುವೇನು?’’ ಎಂದು ಕೇಳಿದರು.

‘‘ಖಂಡಿತವಾಗಿ ಬರುತ್ತವೆ. ಕುದುರೆಗಳನ್ನು ಎದುರುಗೊಳ್ಳಲು ಪಟ್ಟಣವನ್ನು ಸಿಂಗರಿಸಲಿ.’’

ಎಂದ ಮಾಣಿಕ್ಯವಾಚಕರ ಮಾತನ್ನು ಅವರು ರಾಜನಿಗೆ ಅರಿಕೆ ಮಾಡಿದರು.

ರಾಜನಿಗೆ ಸಂತೋಷವಾಯಿತು. ನಗರವನ್ನು ತಳಿರು ತೋರಣಗಳಿಂದ ಅಲಂಕರಿಸಲು ಹೇಳಿದ.

ಈ ಬಗೆಯಲ್ಲಿ ಸಿದ್ಧತೆಗಳಾಗುತ್ತಿರುವಾಗ ಒಬ್ಬ ಸಚಿವನು ದೊರೆಯ ಬಳಿಗೆ ಬಂದು ಮಾಣಿಕ್ಯವಾಚಕರು ಹಣವನ್ನೆಲ್ಲ ದಾನಮಾಡಿದ್ದಾರೆ, ಕುದುರೆಕೊಂಡಿಲ್ಲ ಎಂದು ಹೇಳಿದನು. ರಾಜನು ವಿಷಯವನ್ನು ತಿಳಿದುಕೊಂಡು ಬರಲು ದೂತರನ್ನು ಪೆರುಂತುರೈಗೆ ಕಳುಹಿಸಿದ.

ಶಿಕ್ಷೆ

ದೂತರು ಪೆರಂತುರೈಯಿಂದ ಬಂದು, ‘‘ನಾವು ಅಲ್ಲೆಲ್ಲ ವಿಚಾರಿಸಿದೆವು. ಆದರೆ ಅವರು ಅಲ್ಲಿ ಯಾವ ಕುದುರೆಯನ್ನೂ ಕೊಳ್ಳಲಿಲ್ಲವಂತೆ. ಅಷ್ಟು ಮಾತ್ರವಲ್ಲ; ನಾವು ಅಲ್ಲಿ ಯಾವ ಕುದುರೆಯನ್ನೂ ಕಾಣಲಿಲ್ಲ’’ ಎಂದು ಅರಿಕೆ ಮಾಡಿದರು.

ಅರಸ ಕೆರಳಿ ಕೆಂಡವಾದ. ದಂಡಾಧಿಕಾರಿಯನ್ನು ಬರಮಾಡಿದ; ನೀವು ವಾತವೂರಿನವರನ್ನು ಹಿಡಿದು ಹಿಂಸಿಸಿ ನಮ್ಮ ಹಣವನ್ನು ಹಿಂದಕ್ಕೆ ಪಡೆಯಿರಿ’’ ಎಂದ.

ದಂಡಾಧಿಕಾರಿಯು ಮಾಣಿಕ್ಯ ವಾಚಕರನ್ನು ಕಂಡು ಅರಸನ ಆಜ್ಞೆಯನ್ನು ತಿಳಿಸಿದ. ಆದರೆ ಮಾಣಿಕ್ಯ ವಾಚಕರು ಆ ಮಾತಿಗೆ ಸರಿಯಾದ ಉತ್ತರವನ್ನು ಕೊಡದಿರಲು ಅವರು ಅರಸನನ್ನು ವಂಚಿಸಿರುವುದು ನಿಜವೆಂದು ತಿಳಿದ ದಂಡಾಧಿಕಾರಿ ಮಾಣಿಕ್ಯವಾಚಕರನ್ನು ಹಿಡಿದೆಳೆದುಕೊಂಡು ಹೋಗಿ ಅವರನ್ನು ಹುಣಸೆಯ ಕೋಲಿನಿಂದ ಹೊಡೆಯಲು ಹೋದಾಗ ಅಗೋಚರ ಶಕ್ತಿಯೊಂದು ಅವನ ಕೈ ಹಿಡಿದೆಳೆಯಲು ಅಂಜಿದ ಅವನು ಹಿಂದಕ್ಕೆ ಹೋದ ಎಂದು ಹೇಳುತ್ತಾರೆ.

ಅರಸನ ಸಿಟ್ಟು ಆರಲಿಲ್ಲ. ಮಾಣಿಕ್ಯವಾಚಕರನ್ನು ಸುಡುವ ಬಿಸಿಲಿನಲ್ಲಿ ಕಾದ ಮರಳಿನ ಮೇಲೆ ನಿಲ್ಲಿಸಿದ. ತಾಪವನ್ನು ತಾಳಲಾರದ ವರು ಪರಮಾತ್ಮನ್ನು ಸ್ತುತಿಸುತ್ತ ಕಲ್ಲೂ ಕರಗುವಂತೆ ‘ಪಾಳಾಪತ್ತುಂ ಮತ್ತು ಅರುಳ್ ಪತ್ತುಂ’ ಎಂಬ ಶ್ಲೋಕವನ್ನು ಹೇಳಿ ಕಣ್ಣೀರುಗರೆದರು.

ಈ ಸಮಯದಲ್ಲಿ ಒಂದು ಪವಾಡ ನಡೆಯಿತು ಎಂದು ಭಕ್ತರು ಹೇಳುತ್ತಾರೆ. ಮಾಣಿಕ್ಯ ವಾಚಕರು ಮೈ ಮಾತು ಮನಸ್ಸುಗಳನ್ನೆಲ್ಲ ದೇವರಿಗೆ ಅರ್ಪಿಸಿದ ನಿಜವಾದ ಭಕ್ತರು. ಅವರಿಗೆ ಹಿಂಸೆಯಾಗದಂತೆ ಭಗವಂತನು ಬಂದು ಅನುಗ್ರಹಿಸಿದ ಎಂದು ಭಕ್ತರು ನಂಬುತ್ತಾರೆ.

ಬಂದವು ಕುದುರೆಗಳು

ಪರಮೇಶ್ವರನು ನೂರಾರು ನರಿಗಳನ್ನು ಕುದುರೆಗಳನ್ನಾಗಿ ಮಾರ್ಪಡಿಸಿದನಂತೆ. ತಾನೇ ಅವುಗಳ ಮಾಲಿಕನಂತೆ ವೇಷ ಧರಿಸಿ ಮಧುರೆಗೆ ಬಂದನಂತೆ.

ವಾತವೂರಿನ ಸೆರೆಮನೆಯ ಅಧಿಕಾರಿಯು ಮಧುರೆಯ ಕಡೆಗೆ ದೊಡ್ಡ ಅಶ್ವ ಸಮೂಹ ಬರುತ್ತಿರುವ ಸುದ್ದಿ ತಿಳಿದು ಆನಂದಗೊಂಡು ಮಾಣಿಕ್ಯವಾಚಕರನ್ನು ಬಿಡುಗಡೆ ಮಾಡಿದ.

ಇತ್ತ ಮಧುರೆಯ ನಾಲ್ಕು ದಿಕ್ಕುಗಳಲ್ಲೂ ಪ್ರಳಯ ಕಾಲದ ಪ್ರವಾಹದಂತೆ ಮೇಲೆದ್ದ ಧೂಳು ಆಕಾಶವನ್ನು ಮುಚ್ಚಿತು. ಅಶ್ವದಳದ ಖುರಪುಟದ ನಾದವು ಇಡೀ ಪಟ್ಟಣವನ್ನು ಆವರಿಸಿತು. ಜನರು ಮನೆಗಳಿಂದ ಹೊರಬಂದರು.

ವಿಚಾರ ತಿಳಿದ ಪಾಂಡ್ಯ ರಾಜನು ಮಾಣಿಕ್ಯ ವಾಚಕರನ್ನು ಬರಮಾಡಿ ಅವರಲ್ಲಿ ಕ್ಷಮೆ ಯಾಚಿಸಿದ.

ಸಮುದ್ರದ ಅಲೆಗಳಂತೆ ಕುಲುಕುತ್ತ ಬಳುಕುತ್ತ ಕೊರಳ ರೋಮವನ್ನು ಕುಣಿಸುತ್ತ ಪ್ರವಾಹದಂತೆ ಹರಿದು ಬಂದ ಕುದುರೆಗಳ ಸಾಲನ್ನು ಕಂಡ ಜನ ಜಯ ಜಯಕಾರ ಮಾಡಿದರು. ಅಂಥ ರಾಜ ಗಾಂಭೀರ್ಯದ ಅಷ್ಟು ಕುದುರೆಗಳನ್ನು ಅವರು ಹಿಂದೆಂದೂ ಕಂಡಿರಲಿಲ್ಲ.

ಕುದುರೆಗಳ ಯಜಮಾನ

ತಲೆಯಲ್ಲಿ ರುಮಾಲು, ಉದ್ದನೆಯ ನಿಲುವಂಗಿ ಧರಿಸಿ ಒಂದು ಕೈಲಿ ಕಡಿವಾಣ, ಇನ್ನೊಂದು ಕೈಲಿ ಚಾಟಿಯನ್ನು ಹಿಡಿದ ಕುದುರೆ ಸವಾರರು ಕುದುರೆಯ ಗುಂಪಿನ ಮುಂಭಾಗದಲ್ಲಿ ಬಂದರು. ಒಂದು ಅಚ್ಚಬಿಳುಪಾದ ಕುದುರೆಯ ಮೇಲೆ ಕಿವಿಯಲ್ಲಿ ಮಾಣಿಕ್ಯದ ಹರಳಿನ ಓಲೆ ಧರಿಸಿದ್ದ ಜಟಾಜೂಟಧಾರಿ ನಾಯಕನು ಬಲಬದಿಯಲ್ಲಿ ಸಾಗಿಬಂದ. ರಾಜನನ್ನು ಸಮೀಪಿಸಿದವನೇ ಕುದುರೆಯನ್ನು ಜಗ್ಗಿ ನಿಲ್ಲಿಸಿ ಕುದುರೆಯಿಂದ ಇಳಿದ.

‘‘ಈ ಕುದುರೆಯನ್ನು ನಡೆಸಿ ತೋರಿಸಲು ಹೇಳಿ’’ ಎಂದು ಪಾಂಡ್ಯರಾಜ ಮಾಣಿಕ್ಯವಾಚಕರಿಗೆ ತಿಳಿಸಿದ.

ಎಲ್ಲವನ್ನೂ ಬಲ್ಲ ಆ ಸ್ವಾಮಿಗೆ ಆಜ್ಞಾಪಿಸುವಂತೆ ಅರಸ ಹೇಳುತ್ತಿರುವನಲ್ಲ ಎಂದು ಮನನೊಂದುಕೊಂಡ ಅವರು, ‘‘ನಾಯಿಗೂ ಕಡೆಯಾದ ಈ ಹುಲು ಮನುಷ್ಯನ ಸಲುವಾಗಿ ಕುದುರೆಗಳನ್ನು ತರುವ ಶ್ರಮವಹಿಸಿದ ತಮ್ಮನ್ನು ದರ್ಶಿಸಲು ನಾನು ಪುಣ್ಯ ಮಾಡಿದ್ದೆ ಪ್ರಭು’’ ಎನ್ನುತ್ತ ಕಂಬನಿಗರೆದರು.

ಜಟಾಧಾರಿ ನಾಯಕನು ನಸುನಕ್ಕು ತನ್ನ ಕುದುರೆಯನ್ನು ವಿವಿಧ ರೀತಿಯಲ್ಲಿ ನಡೆಸಿ ತೋರಿಸಿದ. ಆ ನೋಟವನ್ನು ಕಂಡ ಪುರಜನರು ಕೈಜೋಡಿಸಿದರು. ಪಾಂಡ್ಯರಾಜನೂ ಕೈಯೆತ್ತಿದವನು ರಾಜನಾದವನಿಗೆ ಅದು ತಕ್ಕುದಲ್ಲವೆಂದು ಸುಮ್ಮನಾದ.

ಇನ್ನು ನಿಮ್ಮ ಹೊಣೆ

ಕುದುರೆಗಳ ಗುಣಾವಗುಣಗಳನ್ನು ವಿವರಿಸಿದ ನಾಯಕನು ತನಗೆ ಮಾಣಿಕ್ಯವಾಚಕರು ನೀಡಿದ ಒಟ್ಟು ಹಣದಲ್ಲಿ ಒಂದೊಂದು ಕುದುರೆಯ ಬೆಲೆಯನ್ನು ತಿಳಿಸಿದ.

‘‘ಕುದುರೆಗಳನ್ನು ತರುವುದರಲ್ಲಿ ಸ್ವಲ್ಪ ವಿಳಂಬವಾಯಿತು. ಅದು ಪರಮಾತ್ಮನ ಲೀಲಾವಿಲಾಸ. ಈಗ ನಾನು ಕುದುರೆಗಳನ್ನು ನಿಮಗೆ ಒಪ್ಪಿಸಿದ ಮೇಲೆ ಅದರ ಒಳಿತು ಕೆಡುಕುಗಳು ನಿಮಗೇ ಸೇರುತ್ತವೆ’’ ಎಂದು ಕುದುರೆಗಳನ್ನು ರಾಜನ ವಶಕ್ಕೆ ಒಪ್ಪಿಸಿದ.

ಹೊರಟುಹೋದ ಸರದಾರ

‘ನಾನಿತ್ತ ಒಟ್ಟು ಹಣವು ಈ ಕುದುರೆಗಳಲ್ಲಿ ಒಂದು ಕುದುರೆಯ ಬೆಲೆಯಾಗುವುದಿಲ್ಲ’ ಎಂದುಕೊಂಡು ರಾಜನು ಕುದುರೆಗಳನ್ನು ಲಾಯದಲ್ಲಿ ಕಟ್ಟಿಹಾಕುವಂತೆ ತಿಳಿಸಿ ಜಟಾಧಾರಿ ನಾಯಕನಿಗೆ ಒಂದು ಪೀತಾಂಬರವನ್ನು ಕಾಣಿಕೆಯಾಗಿ ಕೊಟ್ಟ.

ಅರಸನಿತ್ತ ಪೀತಾಂಬರವನ್ನು ತನ್ನ ಚಾವಟಿಗೆ ಸಿಕ್ಕಿಸಿ ಪಡೆದುಕೊಂಡ ಅವನು ಮಾಣಿಕ್ಯವಾಚಕರತ್ತ ನಸುನಗೆ ಬೀರುತ್ತ ತನ್ನ ಮುಡಿಯಲ್ಲಿ ಕಟ್ಟಿಕೊಂಡ. ಅನಂತರ ತನ್ನ ಪರಿವಾರದೊಡನೆ ಹೊರಟುಹೋದ.

ಇತ್ತ ಅರಸ ಮತ್ತು ಅವನ ಪರಿವಾರದವರು ತಮ್ಮ ತಮ್ಮ ನಿವಾಸಗಳಿಗೆ ತೆರಳಿದರು.

ಹುಲ್ಲು ಹುರುಳಿ ಮುಟ್ಟದ ಕುದುರೆಗಳು

ಅಂದು ಲಾಯಕ್ಕೆ ಹೊಸದಾಗಿ ಬಂದ ಕುದುರೆಗಳನ್ನು ಕಟ್ಟಿ ಹಾಕಿದ ಊಳಿಗದವರು ಬೇಳೆ-ಬೆಲ್ಲಗಳನ್ನು ತುಪ್ಪದಲ್ಲಿ ಕಲಸಿಟ್ಟು, ಸವಿಯಾದ ಹುಲ್ಲನ್ನು ತಿನ್ನಲು ಕೊಟ್ಟು, ಬೇಯಿಸಿದ ಹುರುಳಿಯನ್ನು ಚೀಲಗಳಲ್ಲಿ ತುಂಬಿಟ್ಟರು. ಆದರೆ ಹೊಸ ಕುದುರೆಗಳಲ್ಲಿ ಒಂದಾದರೂ ಆಹಾರವನ್ನು ಮುಟ್ಟಲಿಲ್ಲ. ಈ ಸೋಜಿಗವನ್ನು ಕಂಡು ಊಳಿಗದ ಜನ ಅಚ್ಚರಿಪಟ್ಟರು.

ಹೊಸ ಕುದುರೆಗಳೂ ಇಲ್ಲ, ಹಳೆಯ ಕುದುರೆಗಳೂ ಇಲ್ಲ

ಮಧ್ಯರಾತ್ರಿಯ ಸಮಯವಾಯಿತು. ಆಗ ಕುದುರೆಗಳೆಲ್ಲ ನರಿಗಳಾಗಿ ಮಾರ್ಪಟ್ಟವು. ಮರುಕ್ಷಣದಲ್ಲಿ ಅವುಗಳ ಹುಟ್ಟುಗುಣ ಮರುಕಳಿಸಿ ತಮ್ಮನ್ನು ಕಟ್ಟಿದ್ದ ಹಗ್ಗವನ್ನು ಹರಿದೊಗೆದು ಲಾಯದ ಮೇಲೆ ದಾಳಿಯಿಟ್ಟವು. ಅವುಗಳ ದಾಳಿಗೆ ರಾಜನ ಕುದುರೆಗಳು ತುತ್ತಾದವು. ಅಲ್ಲಿದ್ದ ಕುದುರೆಗಳನ್ನು ಕಚ್ಚಿ ಕೊಂದು ಹೊಟ್ಟೆ ಬಗೆದು ತಿಂದು ತೇಗಿ ಕೂಗುತ್ತ ಹೊರಬಿದ್ದ ನರಿಗಳ ಸಮೂಹ ಪಟ್ಟಣದ ಬೀದಿಗಳಲ್ಲಿ ಅಲೆದಾಡಿತು. ನರಿಗಳ ಊಳಿಡುವಶಬ್ದವನ್ನು ಕೇಳಿದ ಜನ ಭಯಭೀತರಾಗಿ ತಮ್ಮ ಮನೆ ಬಾಗಿಲುಗಳನ್ನು ಮುಚ್ಚಿ ಗಡಗಡನೆ ನಡುಗುತ್ತ ಕುಳಿತರು.

ಗಲಭೆಯೆಬ್ಬಿಸುತ್ತಿರುವ ನರಿಗಳನ್ನು ಎದುರಿಸಲು ಬಂದ ರಾಜಭಟರ ಮೇಲೆ ಬಿದ್ದ ನರಿಗಳು ಅವರನ್ನು ಕಚ್ಚಿ ಹಾಕಿದವು. ಜೀವ ಭಯದಿಂದ ತತ್ತರಿಸಿದ ಅವರು ಓಟ ಕಿತ್ತರು. ನರಿಗಳೂ ಕಾಡಿಗೆ ಓಡಿದವು. ರಾಜ ಪ್ರಜೆಗಳ ಹಿತವನ್ನು ಗಮನಿಸದೆ ಅವರಿಂದ ವಸೂಲಿ ಮಾಡಿದ ಹಣವನ್ನೆಲ್ಲ ಕುದುರೆಗಳ ಮೇಲೆ ಹಾಕುತ್ತಿದ್ದ. ಕುದುರೆಯ ಹುಚ್ಚಿನಿಂದ ಹಣವನ್ನೂ ಕಳೆದುಕೊಂಡು ಇದ್ದ ಕುದುರೆಗಳನ್ನೂ ಕಳೆದುಕೊಂಡು ಶಿಕ್ಷೆ ಅನುಭವಿಸಬೇಕಾಯಿತು.

ಕ್ರುದ್ಧನಾದ ರಾಜ

ಊರಲ್ಲಿ ನಡೆಯುತ್ತಿದ್ದ ಈ ಕೋಲಾಹಲದ ಸಂಗತಿಯನ್ನು ಕೇಳಿ ಅರಿತ ರಾಜನು, ‘ಲಾಯಕ್ಕೆ ಹೊಸದಾಗಿ ಬಂದ ಕುದುರೆಗಳೆಲ್ಲ ನರಿಗಳಾಗಿ ಮಾರ್ಪಟ್ಟು ಲಾಯದಲ್ಲಿದ್ದ ಒಂದು ಕುದುರೆಯನ್ನೂ ಉಳಿಸದೆ ಎಲ್ಲವನ್ನೂ ಕಚ್ಚಿ ಕೊಂದು ಹಾಕಿವೆ’ ಎಂಬ ಸಂಗತಿಯನ್ನು ಅರಿತ.

‘ಕುದುರೆಗಳು ನರಿಗಳಾಗುವುದೆಂದರೇನು?’ ರಾಜ ಅಚ್ಚರಿಪಟ್ಟ. ಮಾಣಿಕ್ಯ ವಾಚಕರು ತನಗೆ ಮೋಸ ಮಾಡಿದರೆಂದು ಅವರ ಮೇಲಿನ ಕೋಪದಿಂದ ಕುದಿದ.

ಚಿತ್ರಹಿಂಸೆ

ಬೆಳಿಗ್ಗೆ ಮಾಣಿಕ್ಯವಾಚಕರು ರಾಜಸಭೆಗೆ ಬರುತ್ತಲೇ ರಾಜ ಕೋಪದಿಂದ ಕೂಗಾಡಿದ. ಅವರು ಮೋಸ ಮಾಡಿದರೆಂದು  ತೆಗಳಿದ. ಕಡೆಗೆ ‘‘ಗುರು, ಅರಸ, ಧರ್ಮಿಷ್ಠ, ಗೆಳೆಯರನ್ನು ನಿರ್ದಯನಾಗಿ ವಂಚಿಸುವವನಿಗೆ ಮರಣದಂಡನೆಯಲ್ಲದೆ ಬೇರೆ ಶಿಕ್ಷೆಯಿಲ್ಲ ಎಂಬುದು ನಿನಗೆ ತಿಳಿಯದೆ? ನಿನ್ನ ಅಪರಾಧಕ್ಕೆ ತಕ್ಕ ಶಿಕ್ಷೆಯೆಂದರೆ ನಿನಗೆ ಚಿತ್ರಹಿಂಸೆ ಕೊಟ್ಟು  ಕೊಲ್ಲಿಸುವುದೊಂದೆ’’ ಎಂದು ನುಡಿದು ದಂಡಾಧಿಕಾರಿಗೆ ಅವರನ್ನು ಒಪ್ಪಿಸಿದ.

ಮಾಣಿಕ್ಯವಾಚಕರನ್ನು ಕರೆದುಕೊಂಡು ಹೋದ ದಂಡನಾಯಕನು ಅವರನ್ನು ಕಾದ ಮರಳಿನ ಮೇಲೆ ನಿಲ್ಲಿಸಿದ.

ಕಣ್ಣು ಕುಕ್ಕುವ ಆ ಬಿಸಿಲಿನಲ್ಲಿ ಹೊರಗೆ ತಲೆ ಹಾಕಿದವರು ನೆರಳನ್ನು ಆಶ್ರಯಿಸಲು ಹಾತೊರೆಯುವ ಆ ಕಡು ಬಿಸಿಲಿನಲ್ಲಿ ಕಾದ ಮರಳಿನ ಮೇಲೆ ಮಾಣಿಕ್ಯ ವಾಚಕರು ನಿಲ್ಲಬೇಕಾಯಿತು.

ಮಳೆ ಬಂತು, ಎಂತಹ ಮಳೆ!

ಆಗ ಮತ್ತೊಂದು ಅದ್ಭುತ ನಡೆಯಿತು ಎಂದು ಹೇಳುತ್ತಾರೆ. ವೈಶಾಖ ಮಾಸ ಕಳೆದಿತ್ತು. ಜ್ಯೇಷ್ಠಮಾಸ ಪ್ರಾರಂಭವಾಗಿತ್ತು. ಆಕಾಶದಲ್ಲಿ ಒಂದೇ ಒಂದು ತುಣುಕು ಮೋಡವೂ ಇರಲಿಲ್ಲ. ಮಳೆ ಬಂದರೆ ಸಾಕು, ಎಂದು ಜನ ಪರಿತಪಿಸುತ್ತಿದ್ದರು. ಆಗ ಇದ್ದಕ್ಕಿದ್ದಂತೆಯೇ ಕಪ್ಪು ಮೋಡಗಳ ಸಮೂಹವು ಮಧುರೆ ಮಹಾನಗರವನ್ನು ಆವರಿಸಿತು. ಕಾರ್ಮೋಡದ ಆವರಣವೇ ನಿರ್ಮಾಣವಾಗಿ ಹಗಲಿನಲ್ಲೂ ಕತ್ತಲು ಕವಿಯಿತು. ಸಣ್ಣದಾಗಿ ಪ್ರಾರಂಭವಾದ ಮಳೆ ಬಿರುಮಳೆಯಾಯಿತು. ವೈಗೈ ನದಿ ಪ್ರವಾಹದಿಂದ ಉಕ್ಕಿಹರಿದು ಅದು ಬರಬರುತ್ತ ಹೆಚ್ಚಿ ಊರನ್ನೆಲ್ಲ ನೀರಿನಲ್ಲಿ ಮುಳುಗಿಸಿತು.

ಮಾಣಿಕ್ಯ ವಾಚಕರು ಒಂದು ಆಲಯವನ್ನು ಆಶ್ರಯಸಿದರು.

ಊರಿನಲ್ಲಿ ಜಲ ಪ್ರಳಯವಾಗಿರುವುದನ್ನು ಕಂಡ ಪಾಂಡ್ಯರಾಜ ಕಣ್ಣುಕಣ್ಣು ಬಿಟ್ಟ. ತಾನು ಮಾಣಿಕ್ಯ ವಾಚಕರಿಗೆ ನೀಡಿದ ಹಿಂಸೆಯ ಪರಿಣಾಮ ಇದಿರಬಹುದೆ ಎಂಬ ಯೋಚನೆ ಬಂತು.

ಮಾಣಿಕ್ಯ ವಾಚಕರೇ ಗತಿ

ಸಚಿವರನ್ನು ಕರೆಸಿ ಸಮಾಲೋಚನೆ ನಡೆಸಿದ. ಅವರ ಅಭಿಪ್ರಾಯವೂ ಅರಸನ ಅಭಿಪ್ರಾಯವೇ ಆಗಿರಲು ತಡ ಮಾಡದೆ ಪಾಂಡ್ಯರಾಜನು ಮಾಣಿಕ್ಯವಾಚಕರಿದ್ದ ಆಲಯಕ್ಕೆ ಬಂದು ಅವರ ಪಾದಗಳಿಗೆರಗಿದ.

‘‘ನಿಮಗೆ ಮಾಡಿದ ಅನ್ಯಾಯಕ್ಕಾಗಿ ನೀವು ನನ್ನನ್ನು ಕ್ಷಮಿಸಬೇಕು. ಎಲ್ಲ ಅನಾಹುತಗಳಿಗೂ ನೀವೇ ಕಾರಣವೆಂದು ನಾನು ಭಾವಿಸಿದ್ದೆ. ತಾವು ಈ ಮಳೆ ನಿಲ್ಲುವಂತೆ ಪ್ರಾರ್ಥಿಸಿ ಜನರನ್ನು ಕಾಪಾಡಬೇಕು’’ ಎಂದು ಬೇಡಿಕೊಂಡ.

ಮಾಣಿಕ್ಯವಾಚಕರು ಕಲ್ಲೂ ಕರಗುವಂತೆ ಪ್ರಾರ್ಥಿಸಿದರು. ಅರಸ ತಮ್ಮ ಮೇಲೆ ಸಿಟ್ಟಾದಾಗಲೂ ಸರಿ, ಈಗ ಅವರನ್ನೇ ಹೊಗಳಿ ಮಾತಾಡಿದಾಗಲೂ ಸರಿ ಅವರು ಒಂದೇ ರೀತಿಯಲ್ಲಿದ್ದು ಪರಮಾತ್ಮನ್ನು ಪ್ರಾರ್ಥಿಸುತ್ತ ಪ್ರಜೆಗಳ ಕಷ್ಟವನ್ನು ನೀಗಿಸುವಂತೆ ಬೇಡಿಕೊಂಡರು.

ನದಿಗೆ ಒಡ್ಡು ಕಟ್ಟಬೇಕು

ಮಳೆಯ ವೇಗ ತಗ್ಗುತ್ತಾ ಬಂತು. ಆದರೆ ಪ್ರವಾಹ ಇಳಿಮುಖವಾಗಲಿಲ್ಲ.

ಮಧುರೆಯ ಜನರೆಲ್ಲ ಸೇರಿ ವೈಗೈ ನದಿಗೆ ಒಡ್ಡು ಕಟ್ಟಬೇಕೆಂದು ಸಲಹೆ ಬರಲು ಅರಸ ಊರಿನಲ್ಲಿ ಡಂಗೂರ ಸಾರಿಸಿದ. ಜನರು ಸಹ ಸಂತೋಷದಿಂದ ದುರಸ್ತಿ ಕಾರ್ಯದಲ್ಲಿ ತೊಡಗಿದರು.

ಆ ಊರಿನಲ್ಲಿ ಒಬ್ಬ ಮುದುಕಿ ಇದ್ದಳು. ಅವಳಿಗೆ ಯಾವ ಬಂಧುಗಳೂ ಇರಲಿಲ್ಲ. ತನ್ನ ಜೀವನೋಪಾಯಕ್ಕಾಗಿ ಕಡುಬನ್ನು ಮಾರಿ ಆಕೆ ಜೀವಿಸುತ್ತಿದ್ದಳು. ನದಿಯಲ್ಲಿ ಕೋಡಿ ಬಿದ್ದ ಒಂದು ಭಾಗದ ದುರಸ್ತಿ ಕೆಲಸದಲ್ಲಿ ಆ ಮುದುಕಿಯ ಪಾಲೂ ಇತ್ತು. ಆದರೆ ಆಕೆಗೆ ಸಹಾಯಕರು ಯಾರೂ ಇರಲಿಲ್ಲ. ಆಕೆ ತನ್ನ ಪಾಲಿನ ಕೆಲಸವನ್ನು ಮಾಡದಿದ್ದರೆ ರಾಜ ಸುಮ್ಮನಿರುವುದಿಲ್ಲ. ಈ ಕಾರಣದಿಂದ ಆಕೆ ಚಿಂತಾಕ್ರಾಂತಳಾಗಿ ಕುಳಿತಿದ್ದಳು.

ಕೆಲಸ ಬೇಡಿ ಬಂದ ತರುಣ

ಆಗ ಒಂದು ಬಿದಿರಿನ ಬುಟ್ಟಿಯನ್ನು ತಲೆಯ ಮೇಲೆ ಬೋರಲು ಹಾಕಿಕೊಂಡು, ಒಂದು ಪಿಕಾಸಿಯನ್ನು ಹಿಡಿದ ಒಬ್ಬ ತರುಣ, ‘‘ನನ್ನನ್ನು ಯಾರಾದರೂ ಕೆಲಸಕ್ಕೆ ತೆಗೆದುಕೊಳ್ಳುತ್ತೀರಾ’’ ಎಂದು ಕೂಗುತ್ತ ಬಂದ.

ಮುದುಕಿ ಅವನನ್ನು ಕರೆದು ನದಿಯ ದುರಸ್ತಿಯಲ್ಲಿ ತನ್ನ ಭಾಗವನ್ನು ಮಾಡಿಕೊಡುತ್ತೀಯ ಎಂಬುದಾಗಿ ಕೇಳಲು ಅದಕ್ಕೆ ಅವನು ಒಪ್ಪಿಕೊಂಡ.

‘‘ಅಜ್ಜಿ, ನನಗೆ ಹಸಿವಾಗ್ತಿದೆ. ನೀನು ಮಾಡುವ ಕಡುಬಿನಲ್ಲಿ ಚೂರುಪಾರುಗಳನ್ನು ಕೊಟ್ಟರೂ ಸಾಕು’’ ಎಂದ.

ಮುದುಕಿ ಸಂತೋಷದಿಂದ ಅವನಿಗೆ ಕಡುಬನ್ನು ಕೊಟ್ಟು ಅವನೊಡನೆ ನದಿಯ ತೀರಕ್ಕೆ ಬಂದು ತನ್ನ ಪರವಾಗಿ ಆ ತರುಣ ಕೆಲಸ ಮಾಡುವನೆಂದು ಪುಸ್ತಕದಲ್ಲಿ ಬರೆಸಿ ವಾಪಸು ಬಂದಳು.

ಮುದುಕಿಯ ಪಾಲಿನ ಕೆಲಸ ನಿಂತಿತಲ್ಲ!

ಅತ್ತ ನದಿಯ ದುರಸ್ತಿಕಾರ್ಯವೆಲ್ಲ ಮುಗಿದವು. ಮಧುರೆಯ ನಿವಾಸಿಗಳು ತಮ್ಮ ಪಾಲಿನ ಒಡ್ಡುಗಳನ್ನು ಕಟ್ಟಿದ್ದರು. ಆದರೆ ಮುದುಕಿಯ ಪಾಲಿನ ಕೆಲಸ ಹಾಗೇ ಉಳಿದಿತ್ತು. ಅಲ್ಲಿಂದ ಉಕ್ಕಿ ಹರಿಯುತ್ತಿದ್ದ ನೀರಿನಿಂದ ದುರಸ್ತಿಯಾದ ಸ್ಥಳಗಳಲ್ಲೂ ಬಿರುಕುಗಳು ಕಾಣಿಸಿಕೊಳ್ಳಲು ಪ್ರವಾಹ ಹೆಚ್ಚಿತು.

ದುರಸ್ತಿಕಾರ್ಯ ಹೇಗೆ ನಡೆಯುತ್ತಿದೆಯೆಂಬುದನ್ನು ನೋಡಲು ತಮ್ಮ ಸಚಿವರಾದ ಮಾಣಿಕ್ಯ ವಾಚಕರೊಡನೆ ಪಾಂಡ್ಯರಾಜ ಬರಲು ಜನ ದೂರಿತ್ತರು.

ಅದು ಯಾರಿಗೆ ವಹಿಸಿದ್ದ ಕೆಲಸವೆಂದು ಅರಸ ಪ್ರಶ್ನಿಸಲು ಕಡುಬಿನ ಮುದುಕಿಯದೆಂದೂ, ಆಕೆಯ ಪರ ಕೆಲಸ ಮಾಡಲು ಬಂದ ತರುಣ ವ್ಯರ್ಥವಾಗಿ ಕಾಲಕಳೆಯುತ್ತಿರು ವನೆಂದೂ ಅಧಿಕಾರಿಗಳು ತಿಳಿಸಿದರು. ಆ ಹುಡುಗನನ್ನು ಹಿಡಿದು ತರಲು ರಾಜ ಆಜ್ಞಾಪಿಸಲು ರಾಜಭಟರು ಆ ಹುಡುಗ ಮಲಗಿದ್ದ ಮರದ ಕಡೆಗೆ ಹೊರಟರು.

ಕೆಲಸ ಮುಗಿಯಿತು.

ಅವರು ಬಂದುದನ್ನು ಕಂಡ ಆ ಹುಡುಗ ಲಗುಬಗೆಯಿಂದ ಒಂದು ಮಂಕರಿ ಮಣ್ಣನ್ನು ತುಂಬಿಕೊಂಡ. ಅವನನ್ನು ಎಳೆತಂದ ರಾಜಭಟರು ರಾಜನೆದುರು ನಿಲ್ಲಿಸಿದರು.

‘‘ನಿನಗೆ  ಒಪ್ಪಿಸಿದ ಕೆಲಸವನ್ನು ನೀನೇಕೆ ಮಾಡಲಿಲ್ಲ?’’ ರಾಜ ಗದರಿ ಕೇಳಿದ.

ಹುಡುಗ ಸುಮ್ಮನೆ ನಿಂತಿದ್ದ.

ರಾಜನಿಗೆ ಸಿಟ್ಟು ಬಂತು.

ಆ ಹುಡುಗ ಕ್ಷಣವೂ ತಡಮಾಡಲಿಲ್ಲ. ತಲೆಯ ಮೇಲಿದ್ದ ಮಣ್ಣನ್ನು ನದಿಯ ಒಡಕಿನಲ್ಲಿ ಸುರಿದ. ಪ್ರವಾಹ ನಿಂತುಹೋಯಿತು, ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಅವನು ಕಣ್ಮರೆಯಾದ ಎಂದು ಭಕ್ತರು ಹೇಳುತ್ತಾರೆ.

ಪರಮಾತ್ಮ ಕಣ್ಣು ತೆರೆಸಿದ

ಮಾಣಿಕ್ಯ ವಾಚಕರು ಸಂಕಟಪಟ್ಟರು. ಪರಮಾತ್ಮನ ಲೀಲೆಯನ್ನು ನೆನೆದು ಅವರ ಕಣ್ಣಿನಿಂದ ಆನಂದ ಬಾಷ್ಪ ಉದುರಿತು.

‘‘ನನಗೆ ಇನ್ನು ಮಂತ್ರಿ ಪದವಿ ಬೇಡ. ಪರಮಾತ್ಮನ ಲೀಲೆಗಳಿಗೆ ನಾನು ನಿಮಿತ್ತ ಮಾತ್ರನಾದೆ. ತಾವು ಜನರ ಹಿತಚಿಂತನೆ ಮಾಡಲೆಂದು ಪರಮಾತ್ಮ ಹಲವು ಘಟನೆಗಳಿಂದ ತಮ್ಮ ಕಣ್ಣು ತೆರೆಸಿದ್ದಾನೆ’’ ಎಂದ ಮಾಣಿಕ್ಯ ವಾಚಕರು ಪರಮಾತ್ಮನ ಗುಣಗಾನ ಮಾಡುತ್ತ ತಮ್ಮ ಸಚಿವ ಲಾಂಛನಗಳನ್ನು ಕಳಚಿಟ್ಟು ನಡೆದರು.

ಮಾಣಿಕ್ಯವಾಚಕರು ಜೀವನ್ಮುಕ್ತರಾಗಿ ಶಿವಕ್ಷೇತ್ರಗಳನ್ನು ದರ್ಶಿಸುತ್ತ ಕಡೆಗೆ ಚೋಳ ರಾಜ್ಯದ ತಿರುಪೆರುಂತುರೈನಲ್ಲಿ ನೆಲೆಸಿದರು.

ಮಾರ್ಗಶಿರಮಾಸದಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವ. ಹೆಣ್ಣುಮಕ್ಕಳಿ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ಒಟ್ಟಿಗೆ ಭಜನೆ ಮಾಡುತ್ತಾರೆ. ಮಾಣಿಕ್ಯ ವಾಚಕರು ಈ ಬಗೆಯ ಸಮೂಹ ಗಾನಕ್ಕೆಂದೇ ‘ತಿರುವೆಂಬಾವೈ’ ಎಂಬ ಕೃತಿಯನ್ನು ರಚಿಸಿದರು. ಚಿದಂಬರದಲ್ಲಿ ಬಹು ದಿನಗಳು ನೆಲಸಿ ನಟರಾಜನ ದರ್ಶನವನ್ನು ಪ್ರತಿನಿತ್ಯ ಪಡೆದುಕೊಂಡರು. ಈ ದಿನಗಳಲ್ಲಿಯೇ ಅವರು ‘ತಿರುವಾಚಕಂ’ ಎಂಬ ಭಜನೆಯ ಹಾಡುಗಳನ್ನು ರಚಿಸಿದ್ದು.

‘ತಿರುಕ್ಕವೈಯ್ಯಾರ್’ ಎನ್ನುವುದು ಅವರ ಮತ್ತೊಂದು ಪ್ರಸಿದ್ಧ ಕೃತಿ.

ಅವರು ಚಿದಂಬರದಲ್ಲಿ ಇದ್ದ ದಿನಗಳಲ್ಲಿ ಸಿಂಹಳದ ರಾಜನು, ಮೂಕಿಯಾಗಿದ್ದ ತನ್ನ ಮಗಳೊಡನೆ ಬಂದನೆಂದೂ, ಅವರ ಪ್ರಾರ್ಥನೆಯಂತೆ ಮಾಣಿಕ್ಯ ವಾಚಕರು ಹುಡುಗಿಯು ಮಾತನಾಡುವಂತೆ ಅನುಗ್ರಹಿಸಿ ದರೆಂದೂ ಭಕ್ತರು ಹೇಳುತ್ತಾರೆ.

ಗ್ರಂಥ ಸಿದ್ದವಾಯಿತು

ಮಾಣಿಕ್ಯ ವಾಚಕರು ಈ ಜಗತ್ತನ್ನು ಬಿಟ್ಟು ಹೋದದ್ದೂ ಒಂದು ವಿಶೇಷ ರೀತಿಯಲ್ಲಿ ಎಂದು ಭಕ್ತರು ಹೇಳುತ್ತಾರೆ.

ಒಂದು ದಿನ ಮಾಣಿಕ್ಯ ವಾಚಕರ ಆಶ್ರಮಕ್ಕೆ ಬಂದ ಒಬ್ಬ ವೃದ್ಧರು, ‘‘ಸ್ವಾಮೀ, ನಿನ್ನೆ ರಾತ್ರಿ ನನ್ನ ಕನಸಿನಲ್ಲಿ ನಾನು ತಮ್ಮ ಬಳಿಗೆ ಬಂದು ತಾವು ಹಾಡಿರುವ ಶಿವಸ್ತೋತ್ರಗಳನ್ನೆಲ್ಲ ಗ್ರಂಥ ರೂಪದಲ್ಲಿ ಬರೆದಿಡಬೇಕೆಂದು ಅಪ್ಪಣೆಯಾಯಿತು. ತಾವು ಹಾಡಿದರೆ ನಾನು ಬರೆದುಕೊಳ್ಳುತ್ತೇನೆ’’ ಎಂದರು.

ಮಾಣಿಕ್ಯ ವಾಚಕರು ಅಮಿತಾನಂದದಿಂದ ಶಿವನಾಮವನ್ನು ಸ್ತೋತ್ರ ರೂಪದಲ್ಲಿ ಕಲ್ಲುಕರಗುವಂತೆ ಹಾಡಿದರು. ಆ ವೃದ್ಧರು ಸ್ತೋತ್ರ ಪಾಠಗಳನ್ನೆಲ್ಲ ಬರೆದುಕೊಂಡು ಹೋದರು.

ಮಾರನೆದಿನ ಬೆಳಿಗ್ಗೆ ಪೂಜಾರಿಗಳು ಊರಿನ ಶಿವಾಲಯಕ್ಕೆ ಬಂದಾಗ ಬಾಗಿಲಲ್ಲಿ ಒಂದು ಓಲೆಗರಿಯ ಗ್ರಂಥವಿರುವುದನ್ನು ಕಂಡರು. ಅದನ್ನು ಕಂಡು ಅಚ್ಚರಿಪಟ್ಟ ಅವರು ಪುರಜನರನ್ನು ಅಲ್ಲಿಗೆ ಬರಮಾಡಿ ಆ ಗ್ರಂಥಕ್ಕೆ ಪೂಜಾದಿಗಳನ್ನು ನಡೆಸಿ ಕಣ್ಣಿಗೊತ್ತಿಕೊಂಡು ಬಿಡಿಸಿ ನೋಡಲು, ‘ತಿರುವಾಚಕವೆಂಬ ಈ ಗ್ರಂಥವು ತಿರುವಾತವೂರಿನವನು ಹೇಳಲು ತಿರುಚಿತ್ರಂಬಲನು ಬರೆದುದು’ ಎಂದು ಅದರಲ್ಲಿ ಬರೆದಿತ್ತು.

ಅವರೆಲ್ಲ ಆನಂದದಿಂದ ಕುಣಿಯುತ್ತ ಮಾಣಿಕ್ಯ ವಾಚಕರ ಆಶ್ರಮಕ್ಕೆ ಬಂದು ಗ್ರಂಥವನ್ನು ಅವರ ಎದುರಿಗಿಟ್ಟು ವಿಚಾರವನ್ನು ತಿಳಿಸಿದರು.

ಮಾಣಿಕ್ಯವಾಚಕರು ಕಣ್ಮರೆಯಾದರು

ಹರ್ಷಾತಿರೇಕದಿಂದ ಕಂಬನಿ ಹರಿಸಿದ ಮಾಣಿಕ್ಯವಾಚಕರು ಆ ಗ್ರಂಥವನ್ನು ತಲೆಯಮೇಲೆ ಹೊತ್ತು ತಿರುಚಿತ್ರಂಬಲನ ಆಲಯಕ್ಕೆ ಬಂದು, ‘ಈ ತಮಿಳು ಹಾರದ ವಸ್ತು ಆ ನನ್ನ ಸ್ವಾಮಿ’ ಎಂದು ಗದ್ಗದಿತರಾಗಿ ನುಡಿದು ಗರ್ಭಗುಡಿಯ್ನು ಹೊಕ್ಕವರು ಮತ್ತೆ ಅಲ್ಲಿಂದ ಹೊರಬರಲಿಲ್ಲ ಎಂದು ಭಕ್ತರು ಹೇಳುತ್ತಾರೆ.

ಅನುಭಾವಿಗಳು

ಮಾಣಿಕ್ಯವಾಚಕರ ಹಾಡುಗಳಲ್ಲಿ ಭಕ್ತಿಭಾವ ತುಂಬಿ ತುಳುಕುತ್ತದೆ. ಭಗವಂತನೇ ತನ್ನನ್ನು ಹುಡುಕಿಕೊಂಡು ಬಂದ, ಗುರುವಿನ ರೂಪದಲ್ಲಿ ಕಾಣಿಸಿಕೊಂಡ, ತನಗೆ ದಾರಿತೋರಿಸಿದ ಎಂದು ತುಂಬಾ ಕೃತಜ್ಞತೆಯಿಂದ ಹಾಡುತ್ತಾರೆ. ತಮ್ಮನ್ನು ದೇವರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡ ಭಕ್ತರು ಅವರು. ಒಂದು ಬಗೆಯಲ್ಲಿ ಭಕ್ತರನ್ನು ಅನುಭಾವಿಗಳು ಎಂದು ಕರೆಯುತ್ತಾರೆ. ಮಾಣಿಕ್ಯ ವಾಚಕರು ಅನುಭಾವಿಗಳು. ಅನುಭಾವಿಯಾದ ಭಕ್ತನಿಗೆ ದೇವರು ಸದಾ ತನ್ನೊಡನೆ ಇದ್ದಾನೆ ಎಂದೇ ಎನ್ನಿಸುತ್ತದೆ. ನಮಗೆ ಕಣ್ಣ ಮುಂದಿರುವ ವಸ್ತು ನಮ್ಮ ಪ್ರಯತ್ನವೇ ಇಲ್ಲದೆ ಸಹಜವಾಗಿ ಕಾಣುವುದಿಲ್ಲವೆ, ಹಾಗೆ ದೇವರು ಅನುಭಾವಿಗೆ ಕಾಣುತ್ತಾನೆ. ನಮ್ಮ ಜೊತೆಯವರು ನಮಗೆ ಎಷ್ಟು ನಿಜವೂ ಅಷ್ಟೆ ನಿಜ ಅನುಭಾವಿಗೆ ದೇವರು. ಅವನಿಗೆ ತಾನು ಬೇರೆ, ದೇವರು ಬೇರೆ ಎಂದೇ ಎನ್ನಿಸುವುದಿಲ್ಲ. ತಾನು ದೇವರಲ್ಲಿ ಲೀನವಾಗಿದ್ದೇನೆ ಎಂದು ಎನ್ನಿಸುತ್ತದೆ ಅವನಿಗೆ. ತಾನು ದೇವರಿಗೆ ಸೇರಿದವನು. ದೇವರೇ ತನ್ನನ್ನು ನಡೆಸುತ್ತಾನೆ ಎಂಬ ದೃಢವಾದ ಭಾವ ಅವನ ಮನಸ್ಸನ್ನೂ ಜೀವನವನ್ನೂ ತುಂಬಿರುತ್ತದೆ. ದೇವರನ್ನು ಬಿಟ್ಟು ಬದುಕಿರಲಾರೆ ಎಂದು ಅವನ ನಂಬಿಕೆ.

ನೀನೇ ಆಶ್ರಯ

ಮಾಣಿಕ್ಯವಾಚಕರು ಇಂತಹ ಅನುಭಾವಿಗಳು. ಒಂದು ಹಾಡಿನಲ್ಲಿ ಭಗವಂತನಲ್ಲಿ ಹೀಗೆ ಮೊರೆ ಇಡುತ್ತಾರೆ:

ನನ್ನಲ್ಲಿ ನೆಲೆಸು, ನನ್ನನ್ನು ನಿನ್ನ ದಾಸನನ್ನಾಗಿ

ಮಾಡಿಕೊ

ನನ್ನನ್ನು ಮಾರಿಬಿಡು, ಒತ್ತೆಇಡು, ಆದರೆ ಓ ದೇವ

ನನ್ನನ್ನು ದೂರ ಮಾಡಬೇಡ.

ನಿನ್ನ ಆಶ್ರಯವನ್ನು ನೆಚ್ಚಿ ಬಂದ ಅನಾಥ ನಾನು

ಓ ವಿಷಕಂಠ!

ಹುಟ್ಟಿನ ಜಾಡ್ಯದಿಂದ ನರಳುವವರಿಗೆ

ನೀನೇ ಪರಮೌಷಧ!

ದೇವರಲ್ಲಿ ಅವರು ತಮ್ಮನ್ನು ಎಷ್ಟರ ಮಟ್ಟಿಗೆ ಸಮರ್ಪಿಸಿಕೊಂಡಿದ್ದಾರೆ ಎಂದರೆ, ‘ಕಾಲಂದಿಗೆ ತೊಟ್ಟ ನಿನ್ನ ಪಾದದಡಿಯಲ್ಲಿ ನನ್ನನ್ನು ಇಡು, ಓ ಫಾಲನೇತ್ರ’ ಎಂದು ಬೇಡುತ್ತಾರೆ, ಹೀನರಲ್ಲಿ ಹೀನನಾದ, ಬರಿಯ ಒಂದು ಕುನ್ನಿಯಾದ ನನ್ನನ್ನು ನೀನು ಕೃಪೆಯಿಂದ ಕಂಡೆ, ನಿನ್ನ ದಾಸರನ್ನಾಗಿ ಮಾಡಿಕೊಂಡೆ, ನನ್ನ ಹುಟ್ಟು ಸಾವುಗಳ ಯೋಚನೆ ನನಗೇಕೆ, ನಾನು ನಿನಗೆ ಸೇರಿದವನು, ಏನಾದರೂ ಮಾಡು ಎನ್ನುತ್ತಾರೆ. ಒಂದು ಹಾಡಿನಲ್ಲಿ ಹೀಗೆ ಹೇಳುತ್ತಾರೆ:

ಕಾಲಂದಿಗೆ ಬೆಳಗುವ ನಿನ್ನ ಪಾದವನ್ನು

ಕಂಡು ನನ್ನ ಕಣ್ಣಿಗೆ ಹಬ್ಬವಾಯಿತು

ಓ ತಂದೆ,

ಬೇರೆಲ್ಲ ಚಿಂತೆಗಳನ್ನು ದೂರ ಮಾಡಿ

ಹಗಲು ಇರುಳು ಆ ಪಾದವನ್ನು ಧ್ಯಾನಿಸದೆ,

ಬೇರೆ ಏನನ್ನು ಚಿಂತಿಸಲಿ?

ನನ್ನ ಈ ದಾಸ್ಯವೇ ಸೊಗಸು, ಸೊಗಸು

ಪ್ರೇಮಕ್ಕೆ ಸೋಲುತ್ತಾನೆ ಪರಮಾತ್ಮ

ಈ ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದು ಹೇಗೆ? ಪರಿಶುದ್ಧವಾದ ಪ್ರೀತಿಯಿಂದ ಎನ್ನುತ್ತಾರೆ ಮಾಣಿಕ್ಯವಾಚಕರು. ಮೇರೆಯಿಲ್ಲದ ಪ್ರೇಮ ಭಗವಂತನನ್ನು ಒಲಿಸುತ್ತದೆ. ದೇವರನ್ನು ಒಲಿಸಿಕೊಳ್ಳುವುದು ಸುಲಭವಲ್ಲ. ವಿದ್ವಾಂಸರಿಗೆ, ಮಂತ್ರಗಳನ್ನು ಪಠಿಸುತ್ತ ತಪಸ್ಸು ಮಾಡಿದವರಿಗೆ ಸಹ ಅವನನ್ನು ಒಲಿಸಿಕೊಳ್ಳುವುದು ಬಹು ಕಷ್ಟ. ಆದರೆ ಯಾರು ಅತ್ಯಂತ ಪ್ರೀತಿಯಿಂದ ತಮ್ಮನ್ನು ದೇವರಿಗೆ ಅರ್ಪಿಸಿಕೊಳ್ಳುತ್ತಾರೋ ಅಂತಹವರಿಂದ ದೇವರು ದೂರವಿರಲಾರ ಎಂದು ಹಾಡುತ್ತಾರೆ ಮಾಣಿಕ್ಯವಾಚಕರು. ಈ ಸ್ಥಿತಿಯಲ್ಲಿ ಅವರಿಗೆ ಸುತ್ತ ಎಲ್ಲೆಲ್ಲೂ ದೇವರೇ ಕಾಣುತ್ತಾನೆ. ಅಷ್ಟೇ ಅಲ್ಲ, ತನ್ನೊಳಗೂ ದೇವರನ್ನೇ ಕಾಣುತ್ತಾರೆ.

ದಿನದಿನವೂ ಅವನನ್ನು ಹೊಗಳಿ ಹಾಡಿದೆ, ಅವನ

ಸೇವೆ ಮಾಡಿದೆ,

ಕಡೆಗೆ ಆ ಮಹಾದೇವ, ಅವನ ದಿವ್ಯಪಾದಗಳನ್ನು

ನನ್ನ ಹೃದಯದಲ್ಲಿ ನೆಟ್ಟ.

ಸುಂದರ ಜ್ಯೋತಿಯಂತೆ,

ಕಲ್ಲಿನಂತಹ ನನ್ನ ಹೃದಯದ ಎಳೆಗಳನ್ನು ಸುಟ್ಟು

ನನ್ನ ಪ್ರಭುವಾದ.

ದೇವರು ಎಷ್ಟು ಹತ್ತಿರದಲ್ಲಿದ್ದಾನೆ, ಎಷ್ಟು ವಾಸ್ತವವಾಗಿದ್ದಾನೆ ಎಂದರೆ, ಸಾಮಾನ್ಯ ಜನರು ತಮ್ಮ ತಂದೆ ತಾಯಿಯರನ್ನು, ಬಂಧು ಮಿತ್ರರನ್ನು ವರ್ಣಿಸುವಂತೆ ವರ್ಣಿಸಬಲ್ಲರು. ತಾವು ದೇವರಿಂದ ಬೇರೆಯಲ್ಲ, ದೇವರು ತಮ್ಮನ್ನು ಸ್ವೀಕರಿಸಿದ್ದಾನೆ ಎಂಬ ಜ್ಞಾನ ಅವರನ್ನು ರೋಮಾಂಚನಗೊಳಿಸುತ್ತದೆ. ದೇವರೊಡನೆ ಒಂದಾಗುವುದೆ ದಿವ್ಯಫಲ, ಅದೇ ಅಮೃತ, ಅದೆಷ್ಟು ಸುಲಭ ಮನುಷ್ಯ ನಿರ್ಮಲ ಮನಸ್ಸಿನಿಂದ ತನ್ನನ್ನು ದೇವರಿಗೆ ಅರ್ಪಿಸಿಕೊಂಡರೆ ಎನ್ನುತ್ತಾರೆ. ಭಕ್ತಿಯಿಂದ ಅವರು ಹಾಡುವ ಒಂದು ಹಾಡು, ದೇವರಲ್ಲಿ ಎಂತಹ ಸಲಿಗೆ ಬಂದಿದೆ ಎಂಬುದನ್ನು ಸುಂದರವಾಗಿ ತೋರಿಸುತ್ತದೆ.

ನನಗೆ ನಿನ್ನನ್ನು ಕೊಟ್ಟೆ, ಪ್ರತಿಯಾಗಿ ನೀನು ನನ್ನನ್ನು ಸ್ವೀಕರಿಸಿದೆ,

ಓ ಶಂಕರ, ನಮ್ಮಿಬ್ಬರಲ್ಲಿ ನಿಜವಾಗಿ ಬುದ್ಧಿವಂತರು ಯಾರು?

ಮೇರೆಯಿಲ್ಲದ ಆನಂದ ನನಗೆ ಸಿಕ್ಕಿತು, ನನ್ನಿಂದ  ನಿನಗೆ ದೊರೆತದ್ದೇನು?

ನನ್ನ ಹೃದಯವನ್ನೆ ನಿನ್ನ ದೇವಾಲಯವನ್ನಾಗಿ ಮಾಡಿಕೊಂಡ ಮಹಾಪ್ರಭೂ,

ತಿರುಪೆರುಂತುರೈ ನಿವಾಸಿ ಶಿವನೇ

ಓ ತಂದೇ, ಓ ಸರ್ವಲೋಕ ಪ್ರಭೂ,

ನನ್ನ ದೇಹವನ್ನೆ ನಿನ್ನ ಪೀಠವನ್ನಾಗಿ ಮಾಡಿಕೊಂಡಿರುವೆ

ಇದಕ್ಕೆ ಪ್ರತಿಯಾಗಿ ಅರ್ಪಿಸಲು ಏನೂ ನನ್ನ ಬಳಿ ಇಲ್ಲ.

ವಿಚಾರ ಧಾರೆ

ಮಾಣಿಕ್ಯವಾಚಕರ ಕೃತಿಗಳಿಂದ ಕೆಲವು ವಿಷಯಗಳನ್ನು ತೆಗೆದು ಕೆಳಗೆ ಕೊಟ್ಟಿದೆ. ಇವುಗಳಿಂದ ಅವರ ವಿಚಾರಧಾರೆ ಸ್ಪಷ್ಟವಾಗುತ್ತದೆ.

ಶಿವನ ಸಾಕ್ಷಾತ್ಕಾರವನ್ನು ಪಡೆಯುವ ಸುಖವು ಯಾವ ಮಾತಿಗೂ ನಿಲುಕದು, ಎಲ್ಲಕ್ಕೂ ಅತೀತವಾದುದು.

ಮನಸ್ಸು ಆಶಾಪಾಶಗಳಿಗೆ ಎರವಾಗುತ್ತದೆ. ಆತ್ಮ ತನ್ನ ಗುರಿಯನ್ನು ಮರೆತು ಪ್ರಪಂಚದಲ್ಲಿ ಸಿಗುವ ಸುಖದ ಸುಳಿಗೆ ಸಿಕ್ಕಿಕೊಳ್ಳುತ್ತದೆ. ಈ ಸೆಳವಿನಿಂದ ಪಾರಾದರೆ ಆತ್ಮಕ್ಕೆ ಮುಕ್ತಿ ಸಿಗುತ್ತದೆ.

ಪತಂಗದ ಹುಳುವು ದೀಪದ ಸುತ್ತಲೂ ಹಾರಾಡುತ್ತದೆ. ದೀಪದ ಉರಿಯಿಂದ ತನ್ನ ಜೀವಕ್ಕೆ ಹಾನಿಯಿದೆಯೆಂಬುದನ್ನು ತಿಳಿದಿದ್ದರೂ ದೀಪದ ಉರಿಯನ್ನೇ ಬಳಸಿ ಬರುವ ಅದು ಕೊನೆಗೆ ಆ ಉರಿಯಲ್ಲೇ ಬಿದ್ದುಸಾಯುತ್ತದೆ. ಅದೇ ರೀತಿಯಲ್ಲಿ ಆತ್ಮವೂ ಸುಖವನ್ನು ಹುಡುಕುತ್ತಾ ಹೊರಟು ಅದರ ಪರಿಣಾಮವಾಗಿ ತನ್ನ ಅವಸಾನವನ್ನು ತಂದುಕೊಳ್ಳುತ್ತದೆ.

ಶುದ್ಧ ಜೀವನದ ಸಂದೇಶ

ಹೀಗೆ ಮಾಣಿಕ್ಯವಾಚಕರದು ಬಹು ದೊಡ್ಡ ಬದುಕು. ಅಸಾಧಾರಣ ವಿದ್ವತ್ತನ್ನು ಗಳಿಸಿದರು. ಹದಿನಾರನೆಯ ವಯಸ್ಸಿಗೇ ತಮ್ಮ ಪಾಂಡಿತ್ಯದಿಂದ ಕೀರ್ತಿ ಗಳಿಸಿದರು. ಚಿಕ್ಕ ವಯಸ್ಸಿನಲ್ಲೆ ಮಂತ್ರಿಯಾದರು. ರಾಜನ ವಿಶ್ವಾಸವನ್ನೂ ಪ್ರಜೆಗಳ ಮೆಚ್ಚಿಕೆಯನ್ನೂ ಗಳಿಸಿ ದಕ್ಷ ಅಧಿಕಾರಿ ಎನ್ನಿಸಿಕೊಂಡರು. ಆದರೆ ವಿದ್ವತ್ತು, ಅಧಿಕಾರ, ಕೀರ್ತಿ ಇವೆಲ್ಲಕ್ಕಿಂತ ಮುಖ್ಯವಾದದ್ದು ಜೀವನದಲ್ಲಿದೆ, ಅದು ಆತ್ಮೋದ್ಧಾರ ಎಂದು, ಎಲ್ಲವನ್ನೂ ತ್ಯಜಿಸಿ ಭಗವಂತನಿಗೆ ತಮ್ಮನ್ನು ಅರ್ಪಿಸಿಕೊಂಡರು. ಸಾಮಾನ್ಯವಾಗಿ ಜನ ಬಯಸಿ ಹಂಬಲಿಸುವ ಅಧಿಕಾರ, ಸುಖಜೀವನ, ಕೀರ್ತಿ ಎಲ್ಲವನ್ನು ಎಷ್ಟು ಸುಲಭವಾಗಿ ಬಿಟ್ಟುಬಿಟ್ಟರು ಅವರು! ಮೇಲಿನವರು, ಕೀಳಾದವರು, ಬಡವರು, ಬಲ್ಲಿದರು ಎಂಬ ತಾರತಮ್ಯವಿಲ್ಲದೆ ಎಲ್ಲರೂ ದೇವರನ್ನು ಒಲಿಸಿಕೊಳ್ಳಬಹುದು, ಹಣವಿಲ್ಲ ಎಂದಾಗಲಿ ಮಂತ್ರಗಳು ತಿಳಿಯದು ಎಂದಾಗಲಿ ಶಾಸ್ತ್ರಗಳನ್ನೋದಲಿಲ್ಲ ಎಂದಾಗಲಿ ಹಿಂಜರಿಯಬೇಕಾಗಿಲ್ಲ. ಬಾಳು ಶುದ್ಧವಾಗಿ ಭಗವಂತನಲ್ಲಿ ಪ್ರೀತಿ ಪರಿಶುದ್ದವಾಗಿದ್ದರೆ ದೇವರು ಒಲಿಯುತ್ತಾನೆ, ಭಕ್ತನ ಹೃದಯದಲ್ಲಿ ಮನೆ ಮಾಡುತ್ತಾನೆ ಎಂದ ಅವರು, ಮೇಲು,ಕೀಳು ಭಾವನೆಗಳನ್ನು ತೊಡೆದು ಹಾಕಿದರು. ಹಲವು ಹಾಡುಗಳಲ್ಲಿ ಅವರು ತಮ್ಮನ್ನು ನಾಯಿಗೆ ಹೋಲಿಸಿಕೊಳ್ಳುತ್ತಾರೆ. ‘ಇಂತಹ ನನ್ನಲ್ಲಿ ಅನುಗ್ರಹ ಮಾಡಿ ಸ್ವೀಕರಿಸಿದ ದೇವರು ಎಂತಹ ಕರುಣಾಮಯ!’ ಎನ್ನುತ್ತಾರೆ. ದೇವರು ನಮ್ಮಲ್ಲಿ ನೆಲೆಸಬೇಕೆಂಬ ಬಯಕೆ ಇದ್ದರೆ ಪಾಂಡಿತ್ಯ ಬೇಡ, ಅಧಿಕಾರ ಬೇಡ, ಬೇಕಾದದ್ದು ಒಂದೇ-ದೇಹ ಮನಸ್ಸುಗಳನ್ನು ದೇವಾಲಯ ಮಾಡುವುದು, ಎಂದರೆ ದೇವರು ವಾಸಿಸುವುದಕ್ಕೆ ಅರ್ಹವಾಗುವಂತೆ ಶುದ್ಧವಾಗಿಡುವುದು. ಅಹಂಕಾರ, ಸ್ವಾರ್ಥಗಲಿಗೆ ಅಸ್ಪದಕೊಡದೆ, ಕೆಟ್ಟ ಮಾತಾನ್ನಾಡದೆ ಕೆಟ್ಟ ಯೋಚನೆ ಮಾಡದೆ ಕೆಟ್ಟ ಕೆಲಸ ಮಾಡದೆ ದೇವರ ಪೀಠವಾಗಿ ಬದುಕುವುದು. ಮಾಣಿಕ್ಯವಾಚಕರು ಇಂತಹ ಶುಭ್ರವಾದ, ಬೆಳಕು ತುಂಬಿದ ಬಾಳನ್ನು ಬಾಳಿದರು.