ಮಾನವರು ಒಂದು ಸಮಾಜದ ಸದಸ್ಯನಾಗಿ ಬಾಳುತ್ತಿರುವ ಕಾರಣ ಆತ ತಮ್ಮೆಲ್ಲ ಭಾವನೆಗಳನ್ನು ಇತರರಲ್ಲಿ ಹಂಚಿಕೊಳ್ಳುತ್ತಾರೆ. ಹಸಿವು, ನೀರಡಿಕೆ, ನೋವು, ನಲಿವಿನಂತಹ ನೈಸರ್ಗಿಕ ಕ್ರಿಯೆಯಿಂದ ಆರಂಭಿಸಿ ಎಲ್ಲಾ ಸಾಂಸ್ಕೃತಿಕ, ಕಾಲ್ಪನಿಕ, ವೈಚಾರಿಕ, ಭಾವನೆಗಳನ್ನು ಮಾತಿನ ಮುಖಾಂತರ ಹೊರಹಾಕುತ್ತಾನೆ. ಇದಕ್ಕಾಗಿ ಧ್ವನಿ ಮಾಧ್ಯಮವನ್ನು ಬಳಸಿಕೊಂಡಿದ್ದಾರೆ.

ವಸ್ತುಗಳ ಕಂಪನದಿಂದಾಗಿ ಶಬ್ಧ ಹುಟ್ಟುತ್ತದೆ. ಈ ಶಬ್ದವು ಗಾಳಿಯ ಮುಖಾಂತರ ಚಲಿಸುತ್ತದೆ. ವಸ್ತುಗಳ ಕಂಪನದಂತೆಯೇ ಗಾಳಿನಾಳವನ್ನು ಕಂಪನಕ್ಕೊಳಪಡಿಸುವುದರ ಮೂಲಕವೂ ಶಬ್ದವನ್ನುಂಟು ಮಾಡಬಹುದು. ಮಾನವನ ದೇಹದಲ್ಲಿ ಈ ಎರಡೂ ಬಗೆಯಿಂದಲೂ ಅಂದರೆ ಉಚ್ಛಾರಣಾಂಗ ಗಳನ್ನು ಕಂಪನಕ್ಕೊಳಪಡಿಸುವುದರ ಮೂಲಕ ಮತ್ತು ಉಲಿಯಂತ್ರದಲ್ಲಿರುವ ಉಲಿಕುಹರಗಳಲ್ಲಿನ ಗಾಳಿಯನ್ನು ಕಂಪಿಸುವುದರ ಮೂಲಕವೂ ಶಬ್ದ ಉತ್ಪತ್ತಿ ಮಾಡಬಹುದು.

ಶಬ್ದದ ಉತ್ಪತ್ತಿಗೆ ಕಾರಣವಾಗುವ ಪ್ರತಿ ಅಂಗವನ್ನು ಉಚ್ಚಾರಣಾಂಗ ವೆಂದೂ ಈ ಅಂಗಗಳನ್ನು ಹೊಂದಿರುವ ಶರೀರದ ಒಟ್ಟು ಭಾಗವನ್ನು ಉಲಿಯಂತ್ರವೆಂದೂ ಕರೆಯಲಾಗಿದೆ. ಉಳಿದ ಪ್ರಾಣಿಗಳಲ್ಲಿ ಕಂಡು ಬರುವಂತೆ ಉಸಿರಾಟ ಮತ್ತು ಆಹಾರ ಸೇವನೆಯೇ ಇವುಗಳ ಮೂಲ ಕೆಲಸ. ಮಾನವರು ಮಾತ್ರ ತನ್ನ ವೈಚಾರಿಕ ಗುಣದಿಂದಾಗಿ ನುಡಿವ ಕ್ರಿಯೆಗೂ ಇವನ್ನೇ ಬಳಸಿಕೊಂಡರು.

ಮಾನವನ ಶರೀರದಲ್ಲಿ ಅರ್ಧಕ್ಕಿಂತ ಹೆಚ್ಚಿನ ಭಾಗವು ನುಡಿಗಾಗಿ ಬಳಕೆಯಾಗುತ್ತದೆ. ಇದನ್ನು ಕೊಳಲು ಅಥವಾ ಸನಾದಿಯಂತಹ ಒಂದು ಊದುವಾದ್ಯಕ್ಕೆ ಹೋಲಿಸಬಹುದು. ಸನಾದಿಯ ಪೀಪಿಯನ್ನು ಬಾಯಲ್ಲಿಟ್ಟು ಊದಿದ ಗಾಳಿಯು ಕೊಳವೆಯ ಮುಖಾಂತರ ಹೊರಬರುತ್ತದೆ. ಬಾಯಿ ಯಲ್ಲಿರುವ ಗಾಳಿಯು ಪೀಪಿಯ ಸೀಳಿನ ಮುಖಾಂತರ ಬರುವಾಗ ಸಹಜವಾಗಿ ಬರದೆ ಕಂಪನಕ್ಕೊಳಗಾಗುತ್ತದೆ. ಈ ಕಂಪನ ಸಹಿತ ಗಾಳಿಯು ಸನಾದಿಯನ್ನು ಪ್ರವೇಶಿಸುತ್ತದೆ. ಸನಾದಿಯಲ್ಲಿರುವ ಹಲವು ರಂಧ್ರಗಳಲ್ಲಿ ಕೆಲವನ್ನು ಮುಚ್ಚುವುದರ ಮೂಲಕ ಮತ್ತು ಕೆಲವನ್ನು ತೆರೆಯುವುದರ ಮೂಲಕ ಸನಾದಿಯಲ್ಲಿರುವ ಗಾಳಿ ಮೊತ್ತವನ್ನು ನಿಯಂತ್ರಿಸಿ ಅದರ ಘನಪ್ರಮಾಣದಲ್ಲಿ ಮಾರ್ಪಾಡನ್ನುಂಟುಮಾಡಬಹುದು. ಗಾಳಿ ರಾಶಿ ಉಲಿ ಸ್ವರೂಪಕ್ಕೆ ಕಾರಣ ವಾಗುವುದರಿಂದ ಈ ಮಾರ್ಪಾಡು ಕಂಪನವಾಗಿ ಪರಿಣಮಿಸಿ ನಾದಗಳನ್ನು ಹಲವು ಹೊರಡಿಸಲು ಸಹಾಯಕವಾಗುತ್ತದೆ.

ಹೊರಗೆ ಕಾಣುವ ತುಟಿಗಳಿಂದ ಹಿಡಿದು ಹೊಟ್ಟೆಯ ಮೇಲ್ಭಾಗದಲ್ಲಿರುವ ಪೊರೆಯವರೆಗಿನ ಅನೇಕ ಅಂಗಗಳೇ ಉಚ್ಚಾರಣಾಂಗಗಳು. ಹಲ್ಲುಗಳ ಸಾಲು, ಅದನ್ನು ಅನುಸರಿಸಿ ತಾಲವ್ಯ ಭಾಗ, ಬಾಯಿ ತೆರೆದಾಗ ಹಿಂಭಾಗದಲ್ಲಿ ಜೋಲಾಡುತ್ತಿರುವಂತೆ ಕಾಣುವ ಕಿರುನಾಲಿಗೆ, ನಾಲಿಗೆಯ ಎಲ್ಲಾ ಭಾಗಗಳು, ಗಲಕುಹರದ ಭಿತ್ತಿಯನ್ನು ಹೊಂದಿಕೊಂಡು ಅನ್ನನಾಳ, ಗಾಳಿ ನಾಳಗಳು, ಗಾಳಿನಾಳದ ಆರಂಭದಲ್ಲಿ ಧ್ವನಿ ಪೆಟ್ಟಿಗೆ (ಗಂಡು ಮಕ್ಕಳ ಗದ್ದದ ಕೆಳಗೆ ಗಂಟಲಿನಲ್ಲಿರುವ ಉಬ್ಬಿದಂತೆ ಇದು ಕಾಣುತ್ತದೆ). ಧ್ವನಿ ಪೆಟ್ಟಿಗೆಯಲ್ಲಿ ಅಡ್ಡವಾಗಿ ಎರಡು ಪಟಲಗಳು, ಇವು ವಿರುದ್ಧ ದಿಕ್ಕಿನಲ್ಲಿ ಚಲಿಸುವುದರ ಮೂಲಕ ಧ್ವನಿ ಪೆಟ್ಟಿಗೆಯ ಮಧ್ಯ ಉಂಟಾಗುವ ಧ್ವನಿದ್ವಾರ ಗ್ಲಾಟಿಸ್ ಮುಂತಾದವು ಉಚ್ಚಾರಣಾ ಅಂಗಗಳು. ಇಲ್ಲಿಂದ ಗಾಳಿನಾಳ ಆರಂಭ ವಾಗುತ್ತದೆ. ಇದರ ಉದ್ದ 11 ಸೆಂ.ಮೀ. ಇದು ಅನೇಕ ಬಳಕೆಯ ಆಕಾರದ ಮೃದ್ವಸ್ಥಿಗಳ ಕೊಳವೆ, ಇವನ್ನು ಒಂದರ ಮೇಲೆ ಒಂದಾಗಿ ಜೋಡಿಸಿ ನಾಳವನ್ನು ನಿರ್ಮಿಸಲಾಗಿದೆ. ಗಾಳಿ ನಾಳ ಮುಂದೆ ಎರಡು ಕವಲುಗಳಾಗಿ ಟಿಸಿಲೊಡೆದು ಎರಡು ಶ್ವಾಸಕೋಶಗಳನ್ನು ಸೇರುತ್ತದೆ. ಧ್ವನಿ ಉತ್ಪಾದನೆಗೆ ಮೂಲ ದ್ರವ್ಯ ಅವಶ್ಯಕ. ಗಾಳಿ ಧ್ವನಿ ಉತ್ಪಾದನೆಗೆ ಮೂಲ ದ್ರವ್ಯವಾಗಿದೆ. ಈ ಮೂಲ ದ್ರವ್ಯ ಶ್ವಾಸೋಚ್ಛ್ವಾಸ ಕ್ರಿಯೆಯಿಂದ ದೊರಕುತ್ತದೆ.

ಶ್ವಾಸಕೋಶಗಳು ಮತ್ತು ಅದರ ಕಾರ್ಯ ವಿಧಾನ

ಈ ಶ್ವಾಸಕೋಶಗಳು ಎದೆಯ ಎಡಭಾಗ ಮತ್ತು ಬಲಭಾಗದಲ್ಲಿ ಒಂದೊಂದರಂತೆ ಇವೆ. ಶ್ವಾಸಕೋಶಗಳು ಎಲುಬು ಗೂಡಿನ ಮಧ್ಯದ ನಿರ್ವಾತ ಭಾಗದಲ್ಲಿ ಕಂಡುಬರುತ್ತವೆ. ಹಿಂಭಾಗದಲ್ಲಿ ಪಕ್ಕೆಲುಬುಗಳಿಗೆ ಆಧಾರವಾಗಿ ಬೆನ್ನೆಲುಬು ಇದೆ. ಬೆನ್ನೆಲುಬಿನಿಂದ ಆರಂಭವಾಗಿ ಮುಂದಕ್ಕೆ ಚಾಚಿ ಪಕ್ಕೆಲುಬುಗಳ ಮಧ್ಯೆ ಒಂದು ಕುಹರ ನಿರ್ಮಾಣವಾಗಿದೆ. ಇದನ್ನು ಶ್ವಾಸಕೋಶ ಎನ್ನುತ್ತೇವೆ. ಶ್ವಾಸಕೋಶಗಳು ಈ ಕುಹರದಲ್ಲಿಯೇ ಇವೆ. ಬೆನ್ನೆಲುಬಿಗೆ ಹೊಂದಿಕೊಂಡು ಕೆಳಭಾಗದಲ್ಲಿ ಒಂದು ಪೊರೆ ಇದೆ. ಈ ಪೊರೆ ನಾರು ಮಡಿಕೆಗಳಿಂದ ಉಂಟಾದ ಒಂದು ಹಾಸು. ಈ ಪೊರೆ ಮೇಲ್ಬಾಗಕ್ಕೆ ಉಬ್ಬಿಕೊಂಡಿದೆ. ಇದು ಹೊಟ್ಟೆಯ ಕೆಳಭಾಗ ಮತ್ತು ಶ್ವಾಸಕೋಶದ ಭಾಗವನ್ನು ಬೇರ್ಪಡಿಸುತ್ತದೆ. ಬೆನ್ನೆಲುಬು ಪಕ್ಕೆಲುಬುಗಳಿಗೆ ಹೊಂದಿಕೊಂಡು ಶ್ವಾಸ ಕುಹರವನ್ನು ಆವರಿಸಿ ಇರುವ ರಚನಾ ವಿನ್ಯಾಸವನ್ನು ಶ್ವಾಸಪಂಜರ ಎಂದು ಗುರುತಿಸಿದ್ದಾರೆ. ಶ್ವಾಸಪಂಜರ ಕ್ರಿಯೆಗೆ ಒಳಗಾಗುವುದರ ಮೂಲಕ ಶ್ವಾಸಕೋಶಗಳು ಕ್ರಿಯಾಶೀಲವಾಗುವಂತೆ ಮಾಡುತ್ತವೆ. ಶ್ವಾಸಕೋಶಗಳು ತಿದಿಯಂತೆ ವರ್ತಿಸಿ ಗಾಳಿಯ ಒಳಮುಖ ಚಲನೆಗೂ, ಹೊರಮುಖ ಚಲನೆಗೂ ಅವಕಾಶವನ್ನು ಉಂಟುಮಾಡುತ್ತದೆ.

ಉಸಿರಾಟ ಅಥವಾ ಶ್ವಾಸೋಚ್ಛ್ವಾಸ ಶ್ವಾಸಪಂಜರದ ಚಲನೆಯಿಂದ ಉಂಟಾಗುತ್ತದೆ. ಶ್ವಾಸಪಂಜರದ ಚಲನೆಯನ್ನು ಮೆದುಳು ನಿಂಯತ್ರಿಸುತ್ತದೆ. ರಕ್ತದಲ್ಲಿ ಇಂಗಾಲಾಮ್ಲದ ಶೇಖರಣೆ ನಿಗದಿತ ಗಡಿ ದಾಟುತ್ತಿದ್ದಂತೆ, ಕೇಂದ್ರ ನರಮಂಡಲದಿಂದ ಪಕ್ಕೆಲುಬುಗಳ ಮಧ್ಯೆ ಇರುವ ಮಾಂಸಖಂಡಗಳಿಗೆ ನಿರ್ದೇಶನವು ಬರುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಪಕ್ಕೆಲುಬುಗಳು ನಡುವಿನ ಮಾಂಸಖಂಡಗಳು ಸಂಕುಚಿತವಾಗುತ್ತವೆ. ಪಕ್ಕೆಲುಬುಗಳು ಹೊರಮುಖವಾಗಿ ಚಾಚಿಕೊಳ್ಳುತ್ತವೆ. ಇದೇ ಸಮಯದಲ್ಲಿ ಹೊಟ್ಟೆಯ ಮೇಲ್ಭಾಗದ ಪೊರೆಯ ಕೋಶಗಳು ಸಂಕುಚಿತವಾಗುತ್ತವೆ. ಪೊರೆ ಕೆಳಮುಖವಾಗಿ ಚಲಿಸಿ ಉಬ್ಬು ಅಳಿದು ನೇರವಾಗುತ್ತದೆ. ಪೊರೆಗೆ ಹೊಂದಿಕೊಂಡ ಬೆನ್ನೆಲುಬು ಕೆಳಮುಖವಾಗಿ ಜಗ್ಗಲ್ಪಡುತ್ತದೆ. ಈ ಚಲನೆಯು ಶ್ವಾಸಪಂಜರವನ್ನು ಎಲ್ಲ ದಿಕ್ಕಿನಲ್ಲಿ ವಿಸ್ತಾರವಾಗಿ ಹರಡಿಕೊಳ್ಳಲು ಕಾರಣವಾಗುತ್ತದೆ. ಶ್ವಾಸಪಂಜರ ವಿಸ್ತಾರವಾದಂತೆ ಶ್ವಾಸಕೋಶಗಳ ಸುತ್ತಲೂ ಶ್ವಾಸಪಂಜರದಲ್ಲಿ ಒತ್ತಡ ಕಡಿತ ಉಂಟಾಗುತ್ತದೆ. ಒತ್ತಡದಲ್ಲಿನ ಈ ಕಡಿತ ಶ್ವಾಸಕೋಶಗಳು ವಿಸ್ತಾರವಾಗುವಂತೆ ಮಾಡುತ್ತದೆ. ಶ್ವಾಸಕೋಶಗಳು ವಿಸ್ತಾರವಾಗುತ್ತಿದ್ದಂತೆ, ಶ್ವಾಸಕೋಶಗಳ ಒಳಗಿನ ಗಾಳಿಯ ಒತ್ತಡ ಕಡಿಮೆ ಆಗುತ್ತದೆ. ಶ್ವಾಸಕೋಶಗಳು, ಗಾಳಿನಾಳ ಮತ್ತು ಮೂಗಿನ ಮುಖಾಂತರ ವಾತಾವರಣದ ಗಾಳಿಯೊಂದಿಗೆ ಸಂಪರ್ಕ ಹೊಂದಿವೆ. ಶ್ವಾಸ ಕೋಶದ ಗಾಳಿಯ ಒತ್ತಡ ಕಡಿಮೆ ಆಗುತ್ತಿದ್ದಂತೆ, ಅಧಿಕ ಒತ್ತಡ ಇರುವ ವಾತಾವರಣದ ಗಾಳಿ ಒಳಮುಖವಾಗಿ ಚಲಿಸುತ್ತದೆ. ಗಾಳಿಯ ಶ್ವಾಸಮುಖ ಚಲನೆಯನ್ನು ಉಚ್ಛ್ವಾಸಕ್ರಿಯೆ ಎನ್ನುವೆವು. ಈ ರೀತಿ ಉಚ್ಛ್ವಾಸಕ್ರಿಯೆ ಉಂಟಾಗುತ್ತದೆ. ಶ್ವಾಸಕೋಶಗಳ ಹಿಗ್ಗುವಿಕೆ ತಾತ್ಕಾಲಿಕ. ವಾತಾವರಣದ ಗಾಳಿಯ ಒತ್ತಡ ಶ್ವಾಸಕೋಶದಲ್ಲಿನ ಗಾಳಿಯ ಒತ್ತಡದೊಂದಿಗೆ ಸರಿಹೋಗು ವವರೆಗೆ ಉಚ್ಛ್ವಾಸಕ್ರಿಯೆ ಮುಂದುವರಿಯುತ್ತದೆ.

ಉಚ್ಛ್ವಾಸಕ್ರಿಯೆ ಪೂರ್ಣಗೊಳ್ಳುತ್ತಲೇ ನರಮಂಡಲದಿಂದ ಹೊಟ್ಟೆಯ ಪೊರೆ ಮತ್ತು ಪಕ್ಕೆಲುಬುಗಳ ನಡುವಿನ ಮಾಂಸಖಂಡಗಳಿಗೆ ನಿರ್ದೇಶನ ಬರುತ್ತದೆ. ಸಂಕುಚಿತವಾದ ಪೊರೆಯ ಕೋಶಗಳು ಹಿಗ್ಗುತ್ತವೆ. ಹೊಟ್ಟೆಯನ್ನು ಬೇರ್ಪಡಿಸಿ ಪೊರೆ ಕ್ರಮೇಣವಾಗಿ ಮೇಲಕ್ಕೆ ಚಾಚಿ ಉಬ್ಬುತ್ತದೆ. ಬೆನ್ನೆಲುಬು ಪೊರೆಗೆ ಹೊಂದಿಕೊಂಡಿರುವ ಕಾರಣ ಮೇಲಕ್ಕೆ ಏರುತ್ತದೆ. ಇದೇ ಸಮಯದಲ್ಲಿ ಪಕ್ಕೆಲುಬುಗಳ ನಡುವಿನ ಪೊರೆಯ ಕೋಶಗಳು ಸಂಕುಚಿತ ವಾಗುತ್ತವೆ. ಇದರಿಂದ ಪಕ್ಕೆಲುಬುಗಳು ಪರಸ್ಪರ ಹತ್ತಿರಕ್ಕೆ ಜಗ್ಗಲ್ಪಡುತ್ತವೆ. ಬೆನ್ನೆಲುಬು ಮೇಲಕ್ಕೆ ಏರುತ್ತಿದ್ದಂತೆ, ಅದಕ್ಕೆ ಸೇರಿಕೊಂಡಿರುವ ಹೊರ ಚಾಚಿದ ಪಕ್ಕೆಲುಬುಗಳು ಒಳಮುಖವಾಗಿ ಚಲಿಸುತ್ತವೆ. ಪಕ್ಕೆಲುಬುಗಳ ಒಳಮುಖ ಚಲನೆ, ಪೊರೆಯ. ಮೇಲ್ಮುಖ ಚಲನೆಯಿಂದ ಶ್ವಾಸಪಂಜರದ ವಿಸ್ತಾರದಲ್ಲಿ ಕಡಿತ ಉಂಟಾಗುತ್ತದೆ. ಶ್ವಾಸಪಂಜರದ ಒತ್ತಡದ ಹೆಚ್ಚಳ ಶ್ವಾಸಕೋಶಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಇದರಿಂದ ಶ್ವಾಸಕೋಶಗಳು ಕ್ರಮೇಣವಾಗಿ  ಸಂಕುಚಿತವಾಗುತ್ತವೆ. ಶ್ವಾಸಕೋಶಗಳು  ಸಂಕುಚಿತವಾದಂತೆ ಅದರೊಳಗೆ ಒತ್ತಡ ಹೆಚ್ಚುತ್ತದೆ. ಈವರೆಗೆ ಶ್ವಾಸಕೋಶ ಮತ್ತು ವಾತಾವರಣದ ಗಾಳಿಯ ಒತ್ತಡ ಹೆಚ್ಚುತ್ತದೆ. ಈವರೆಗೆ ಶ್ವಾಸಕೋಶದಲ್ಲಿ ಒತ್ತಡ ಹೆಚ್ಚಿದಾಗ, ಶ್ವಾಸಕೋಶ, ಸಂಕುಚಿತವಾಗಿ, ವಾತಾವರಣದ ಒತ್ತಡಕ್ಕಿಂತ ಶ್ವಾಸಕೋಶದ ಒಳಗಿನ ಒತ್ತಡ ಹೆಚ್ಚುತ್ತದೆ. ಇದರಿಂದಾಗಿ ಶ್ವಾಸಕೋಶದ ಒಳಗಿನ ಗಾಳಿ ಹೊರಮುಖವಾಗಿ ಚಲಿಸಿ ವಾತಾವರಣದಲ್ಲಿ ಒಂದಾಗುತ್ತದೆ. ಗಾಳಿಯ ಹೊರಮುಖ ಚಲನಾ ಪ್ರಕ್ರಿಯೆಯೇ ನಿಶ್ವಾಸ. ನಿಶ್ವಾಸಕ್ರಿಯೆ ವಾತಾವರಣದ ಗಾಳಿಯು ಒತ್ತಡ, ಶ್ವಾಸಕೋಶದ ಒಳಗಿನ ಗಾಳಿಯ ಒತ್ತಡದೊಡನೆ ಸಮಾನವಾಗುವವರೆಗೆ ನಡೆಯುತ್ತದೆ. ಉಚ್ಛ್ವಾಸ ಮತ್ತು ನಿಶ್ವಾಸ ಕ್ರಿಯೆಯನ್ನು ಇಡಿಯಾಗಿ ಉಸಿರಾಟ ಎಂದು ಕರೆಯಲಾಗಿದೆ.

ಶ್ವಾಸೋಚ್ಛ್ವಾಸ ಚಕ್ರ

ಉಸಿರಾಡುವಾಗ ಉಚ್ಛ್ವಾಸ ನಂತರದ ನಿಶ್ವಾಸಗಳ ನಡುವೆ ವಿರಾಮ ಸ್ಥಿತಿ ಇರುತ್ತದೆ. ವಿಶ್ರಾಂತ ಸ್ಥಿತಿಯಲ್ಲಿ ಉಚ್ಛ್ವಾಸ, ವಿರಾಮ ಮತ್ತು ನಿಶ್ವಾಸಗಳು ಒಂದನ್ನೊಂದು ಅನುಸರಿಸಿ ನಡೆಯುತ್ತವೆ. ಈ ಮೂರರ ಒಂದು ಸುತ್ತನ್ನು ಶ್ವಾಸೋಚ್ವಾಸದ ಚಕ್ರ ಎಂದು ಕರೆಯಬಹುದು. ಸಾಮಾನ್ಯವಾಗಿ ಉಚ್ಛ್ವಾಸ, ನಿಶ್ವಾಸಗಳು ಸಮ ಪ್ರಮಾಣದಲ್ಲಿರುತ್ತವೆ. ಆದರೂ, ಮಾತನಾಡುವಾಗಿ ಉಚ್ಛ್ವಾಸ ವೇಗವಾಗಿರುತ್ತದೆ ಮತ್ತು ನಿಶ್ವಾಸ ನಿಧಾನವಾಗಿರುತ್ತದೆ. ಉಸಿರಾಟದ ಪ್ರಮಾಣವು ಸಹ ಬದಲಾಗುತ್ತದೆ. ನಾವು ಮೌನವಾಗಿದ್ದಾಗ, ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಪ್ರತಿ ನಿಮಿಷಕ್ಕೆ ಸರಾಸರಿ ಉಸಿರಾಟ 12 ಉಸಿರುಗಳು ಪ್ರತಿ ಉಸಿರಿಗೆ ಐದು ಸೆಕೆಂಡುಗಳು. ಅದರಲ್ಲಿ 2.5 ಸೆಕೆಂಡು ಕೊಳ್ಳುಸಿರಾಟವಾದರೆ 2.5 ಸೆಕೆಂಡು ತಳ್ಳುಸಿರಾಟಕ್ಕೆ (ನಿಶ್ವಾಸಕ್ಕೆ). ಮಾತನಾಡುವಾಗ ಕೊಳ್ಳುಸಿರಾಟ ಅಂದರೆ 1/4 ಉಚ್ಛ್ವಾಸಕ್ಕೆ ಸೆಕೆಂಡು ಮಾತ್ರ. ಹಾಗೂ ತಳ್ಳುಸಿರಾಟವನ್ನು ನಿಯಂತ್ರಿಸಿ ಮಾತನಾಡುವವರ ಧ್ವನಿ ನಿಯಂತ್ರಣ, ಭಾವಸ್ಥಿತಿ ಹಾಗೂ ಇನ್ನಿತರ ವಿಷಯಗಳನ್ನು ಆಧರಿಸಿ ಐದರಿಂದ ಹತ್ತು ಸೆಕೆಂಡಿನವರೆಗೆ ವಿಸ್ತರಿಸುವುದುಂಟು. ಕೆಲವೊಮ್ಮೆ ಇಪ್ಪತ್ತು ಸೆಕೆಂಡಿನವರೆಗೂ ವಿಸ್ತಾರವಾಗುವು ದುಂಟು. ಈ ರೀತಿಯ ಬದಲಾದ ತಳ್ಳುಸಿರಾಟ ಹೆಚ್ಚಿನ ಪ್ರಮಾಣದ ಮಾತಿಗೆ ಅನುವು ಮಾಡಿಕೊಡುತ್ತದೆ. ದಿನನಿತ್ಯದ ಸಂಭಾಷಣೆಯಲ್ಲಿ ಒಂದು ನಿಮಿಷಕ್ಕೆ 250 ರಿಂದ 300 ಅಕ್ಷರಗಳನ್ನು (ಗಣಗಳನ್ನು) ಉತ್ಪಾದಿಸುತ್ತೇವೆ. ಮಾತನಾಡುವಾಗ ತಳ್ಳುಸಿರಿನ ಗಾಳಿಯು ಚಿಕ್ಕ ಚಿಕ್ಕ ಗಾಳಿ ರಾಶಿಯಾಗಿ ಹೊರನೂಕಲ್ಪಡುತ್ತದೆ. ಪ್ರತಿ ನೂಕುವಿಕೆಯೂ ಒಂದಕ್ಕೊಂದು ಒಟ್ಟಾಗಿ ಸೇರಿ ಉಲಿಸರಣಿಗಳು ಉಂಟಾಗುತ್ತದೆ. ಈ ಉಲಿಸರಣಿಗಳನ್ನು ಅಕ್ಷರಗಳು ಅಥವಾ ಗಣಗಳು ಎಂದು ಗುರುತಿಸಲಾಗಿದೆ.

ಮಾತಿಗೆ ಗಾಳಿಯ ಬಳಕೆ

ಶ್ವಾಸೋಚ್ಛ್ವಾಸ ಕ್ರಿಯೆಯಿಂದ ಗಾಳಿಯ ಪ್ರವಾಹ ಉಂಟಾಗುತ್ತದೆ. ಉಚ್ಛ್ವಾಸ ಕ್ರಿಯೆಯಿಂದ ಗಾಳಿಯ ಪ್ರವಾಹ ಒಳಮುಖವಾಗಿ ಚಲಿಸುತ್ತದೆ. ಇದು ಒಳಮುಖ ಪ್ರವಾಹ. ನಿಶ್ವಾಸದಿಂದ ಗಾಳಿಯು ಹೊರಮುಖವಾಗಿ ಚಲಿಸುತ್ತದೆ. ಇದು ಹೊರಮುಖ ಪ್ರವಾಹ. ರಕ್ತಶುದ್ದಿಗೆ ಆಮ್ಲಜನಕವನ್ನು ಒದಗಿಸುವುದು ಉಸಿರಾಟದ ಉದ್ದೇಶ. ಧ್ವನಿ ಉತ್ಪಾದನೆ ಉಸಿರಾಟದ ಸಹಕ್ರಿಯೆ. ಗಾಳಿಯ ಪ್ರವಾಹವನ್ನು ಕಂಪನಕ್ಕೆ ಒಡ್ಡುವುದರ ಮೂಲಕ ಧ್ವನಿ ಉತ್ಪಾದನೆ ಆಗುತ್ತದೆ. ಒಳಮುಖ ಪ್ರವಾಹದಿಂದ ಧ್ವನಿಗಳನ್ನು ಹುಟ್ಟಿಸುವುದು ಕಡಿಮೆ. ಆದರೂ ಯಾರಾದರೂ ಅಳುತ್ತಿರುವಾಗ ಅಂತೆಯೇ  ಇಂಗ್ಲಿಶಿನಲ್ಲಿ ಕೆಲವೊಮ್ಮೆ Yes, No ಪದಗಳನ್ನು ಹೇಳುವಾಗ ಒಳಮುಖ ಪ್ರವಾಹವನ್ನು ಬಳಸುವುದುಂಟು. ಕನ್ನಡ, ತಮಿಳು, ಮರಾಠಿ, ಹಿಂದಿ ಮುಂತಾದ ಭಾರತೀಯ ಭಾಷೆಗಳು, ಇಂಗ್ಲಿಷ್, ಫ್ರೆಂಚ್ ಮುಂತಾದ ಹೆಚ್ಚಿನ ಜಾಗತಿಕ ಭಾಷೆಗಳಲ್ಲಿ ಹೊರಮುಖ ಪ್ರವಾಹವನ್ನು ಧ್ವನಿ ಉತ್ಪತ್ತಿಗೆ ಬಳಸುತ್ತಾರೆ. ಒಳಮುಖ ಗಾಳಿ ಪ್ರವಾಹದಿಂದ ಅಸ್ಪಷ್ಟವಾದ ಕೀರಲು ಧ್ವನಿ ಹುಟ್ಟುವುದರಿಂದ ಗುಣಮಟ್ಟದಲ್ಲಿ ಕಡಿಮೆಯಾದ ಕಾರಣ ಕೇಳುವುದಕ್ಕೆ ಮುದವನ್ನು ನೀಡುವುದಿಲ್ಲ. ಧ್ವನಿ ಉತ್ಪತ್ತಿಯೂ ಕಷ್ಟ. ಆದ್ದರಿಂದ ಒಳಮುಖ ಗಾಳಿ ಪ್ರವಾಹದ ಧ್ವನಿಯನ್ನು ಮಾತಿನಲ್ಲಿ ಬಳಸುವುದು ಕಡಿಮೆ.

ಕೊಳ್ಳುಸಿರು ದನಿಗಳು

ಹೆಚ್ಚಿನ ಭಾಷೆಗಳಲ್ಲಿ ಸ್ವರಧ್ವನಿಗಳಾಗಲಿ, ವ್ಯಂಜನ ಧ್ವನಿಗಳಾಗಲಿ ಹೊರಮುಖ ಗಾಳಿಯ ಪ್ರವಾಹವನ್ನು ಬಳಸಿ ಉತ್ಪತ್ತಿ ಆಗುತ್ತವೆ. ಆದರೆ ಕೆಲವೊಂದು ಧ್ವನಿಗಳ ನಿರ್ಮಾಣಕ್ಕೆ ಹೊರಮುಖ ಪ್ರವಾಹವನ್ನು ಬಳಸುವುದಿಲ್ಲ. ಇದಕ್ಕೆ ಬದಲಾಗಿ ಒಳಮುಖ ಗಾಳಿ ಪ್ರವಾಹವನ್ನು ಧ್ವನಿಹುಟ್ಟಿಗೆ ಬಳಸುತ್ತೇವೆ.

ಲೊಚಕು ದನಿ

ಗಾಳಿಯ ಒಳಮುಖ ಪ್ರವಾಹವನ್ನು ಆಧರಿಸಿ ಹುಟ್ಟವ ಧ್ವನಿ ಪ್ರಕಾರಗಳಲ್ಲಿ ಲೋಚಕು ದನಿ (ಕ್ಲಿಕ್)ಯೂ ಒಂದು. ಲೊಚಕು ದನಿ ಸ್ಪಷ್ಟವಾದ, ತುಟಿ ಅಥವ ನಾಲಿಗೆಯನ್ನು ಬಳಸಿ ಉತ್ಪಾದಿಸಿದ ಹೀರುದನಿ. ಇಂಗ್ಲೀಶಿನಲ್ಲಿ ಬರೆಯುವ tut-tut ಎಂಬ ದನಿ ಅಥವ tsk tsk ಎಂಬವು ಜೋಡು ಕ್ಲಿಕ್ಕು ದನಿಗಳು. ಇದನ್ನು ಉತ್ಪಾದಿಸಲು ನಾಲಿಗೆಯನ್ನು ಮೇಲ್ದಂತದ ಎದುರಾಗಿ ಅಳವಡಿಸಬೇಕು. ಕ್ರಮೇಣ ಗಾಳಿಯನ್ನು ಒಳಮುಖವಾಗಿ ಚಲಿಸುವಂತೆ ಮಾಡುವುದರಿಂದ ದಂತ ಲೊಚಕು ದನಿ ಉತ್ಪತ್ತಿ ಆಗುತ್ತದೆ. ಈ ಧ್ವನಿಯ ಉತ್ಪಾದನೆಯಲ್ಲಿ ಶ್ವಾಸಕೋಶಗಳು  ಭಾಗವಹಿಸುವುದಿಲ್ಲ.

ಯುರೋಪಿಯನ್ ಭಾಷೆಗಳಲ್ಲಿ ಲೊಚಕು ದನಿಗಳು ಸ್ವತಂತ್ರವಾಗಿ ಅರ್ಥ ಪೂರ್ಣವಾಗಿ ಬಳಕೆಯಾಗುತ್ತವೆ. ಆದರೆ ಅವು ಸ್ವರ ಅಥವ ವ್ಯಂಜನ ವ್ಯವಸ್ಥೆಯ ಭಾಗವಾಗಿ ಬರುವುದಿಲ್ಲ. ಇಂಗ್ಲಿಷಿನಲ್ಲಿ tut tut ನಿರಾಕರಣೆಯನ್ನು ಸೂಚಿಸುತ್ತದೆ. ಆದರೆ ಈ ದನಿ ‘ಪ’ ಅಥವ ‘ತ’ ದಂತ ಒಂದು ಪದದ ಭಾಗವಾಗಿ ಬಳಕೆ ಆಗುವುದಿಲ್ಲ. ದಕ್ಷಿಣ ಆಫ್ರಿಕಾ ಭಾಷೆಗಳಲ್ಲಿ ಕ್ಲಿಕ್ಕುಗಳು ಬಳಕೆಯಲ್ಲಿವೆ. ಈ ಭಾಷೆಗಳಲ್ಲಿ ಈ ಲೋಚಕು ದನಿಗಳು ವ್ಯಂಜನ  ಘಟಕವೆಂದು ಪರಿಗಣಿತವಾಗಿವೆ. ಇಂತಹ ಹದಿನೆಂಟು ಕ್ಲಿಕ್ಕುಗಳು ಎಕ್ಕು ಭಾಷೆಯಲ್ಲಿವೆ. ಖೊಯಿಸ್ಯ ಬುಡಕಟ್ಟಿಗೆ ಸೇರಿದ ಭಾಷೆಗಳಲ್ಲಿ ವಿವಿಧ ಸ್ಥಾನಗಳಲ್ಲಿ ಲೊಕಚು ಧ್ವನಿ ಉತ್ಪತ್ತಿ ಮಾಡಿ ಬಳಸುತ್ತಾರೆ. ನಾಸಿಕ ಮತ್ತು ಇನ್ನಿತರ ಧ್ವನಿಗಳೆೊಂದಿಗೆ ಬಳಕೆಯಾಗುವುದರ ಮೂಲಕ ಹೆಚ್ಚು ಸಂಕೀರ್ಣವಾದ ಕ್ಲಿಕ್ಕು ವ್ಯವಸ್ಥೆ ಈ ಭಾಷೆಗಳಲ್ಲಿ ಕಂಡುಬರುತ್ತದೆ. ಲೊಚಕು ದನಿ ಕೇವಲ ಬಾಯಿ ಅಥವ ಆಸ್ಯಕುಹರದ ಹಿಂಭಾಗ ಕಂಠ್ಯ ಸ್ಥಾನದಲ್ಲಿ ಉಂಟಾಗುತ್ತದೆ. ಲೊಕಚುಧ್ವನಿ ಕಂಠ್ಯ ಪ್ರವಾಹತಂತ್ರದಿಂದ ಉತ್ಪತ್ತಿ ಆಗುತ್ತದೆ. ತ್ಚು-ತ್ಚು ಎಂಬುದು ಎರಡೂ ದಂತ ಪಂಕ್ತಿಗಳನ್ನು ಬಳಸಿ ಉತ್ಪಾದಿಸಿದ ದನಿ. ನಾಲಗೆಯ ಇಕ್ಕೆಲಗಳಲ್ಲಿ ಗಾಳಿ ಪ್ರಭಾವಕ್ಕೆ ಎಡೆ ಮಾಡಿ, ಎತ್ತು, ಹಸುಗಳನ್ನು ಹುರಿದುಂಬಿಸುವ ಪಾರ್ಶ್ವಿಕ ಲೊಚಕು ದನಿ ಉತ್ಪಾದಿಸಬಹುದು. ಎರಡೂ ತುಟಿಗಳನ್ನು ದುಂಡಾಗಿಸಿ ಉಭಯೋಷ್ಟ್ಯ ಲೊಚಕು ದನಿ ಹುಟ್ಟಿಸಬಹುದು. ಅಂತರದಿಂದ ಮುತ್ತನ್ನಿಡುವ ಅರ್ಥವನ್ನು ಇದು ನೀಡುತ್ತದೆ. ನಾಯಿಯನ್ನು ಕರೆಯಲು ತಾಲವ್ಯ ಸ್ಥಾನದಲ್ಲಿ ನಾಲಗೆಯನ್ನಿಟ್ಟು ಲೊಚಕು ದನಿಯನ್ನು ಉತ್ಪಾದಿಸಲಾಗುತ್ತದೆ. ಅಸಂತೋಷ ವನ್ನು ಸೂಚಿಸಲು ತುಟಿಯ ಎರಡೂ ತುದಿಯಲ್ಲಿ ಲೊಚಕು ದನಿಯನ್ನು ಉತ್ಪಾದಿಸುತ್ತೇವೆ. ಲೊಚಕು ದನಿ ಉತ್ಪಾದನೆಯಲ್ಲಿ ಗಾಳಿ ವಾತಾವರಣದಿಂದ ಒಳಕ್ಕೆ ಚಲಿಸಿ ಕಂಠ ಹಾಗೂ ಇನ್ನಿತರ ಅಂಗಗಳ ನಡುವೆ ಕುಹರವನ್ನು ನಿರ್ಮಿಸುತ್ತದೆ.

ಕಾಕಲ್ಯ ಧ್ವನಿಗಳು

ಗಂಡಸರ ಗದ್ದದ ಕೆಳಗೆ ಗಂಟಲಿನಲ್ಲಿ ಎದ್ದು ಕಾಣುವ ಉಬ್ಬು ಭಾಗ ‘ಆಡಮ್ಸ್ ಆ್ಯಪಲ್’ ಗಂಟಲಿನಲ್ಲಿ ಧ್ವನಿಪೆಟ್ಟಿಗೆಯ ಸ್ಥಾನವನ್ನು ಇದು ಸೂಚಿಸುತ್ತದೆ. ಧ್ವನಿ ಪೆಟ್ಟಿಗೆಯ ಕ್ರಿಕಾಯ್ಡಿ ಮದ್ವಸ್ಥಿಯ ಮೇಲೆ ಎರಡು ಧ್ವನಿ ಪಟಲಗಳು ಅಡ್ಡವಾಗಿ ಜೋಡಿಸಿವೆ. ಇವೆರಡರ ನಡುವೆ ಗಾಳಿಯ ಸಂಚಾರಕ್ಕೆ ಒಂದು ದ್ವಾರವಿದೆ. ಇದನ್ನು ಧ್ವನಿದ್ವಾರ ಅಥವ ಕಾಕಲ್ಯ ಎನ್ನುವರು. ಗಾಳಿಯ ಪ್ರವಾಹಕ್ಕೆ ಕಂಪನವನ್ನು ನೀಡಲು ಕಾಕಲ್ಯವನ್ನು ಬಳಸಬಹುದು. ಇದರ ಹಿಂದಿನ ತಂತ್ರವನ್ನು ಕಾಕಲ್ಯ ಪ್ರವಾಹ ತಂತ್ರ ಎಂದು ಗುರುತಿಸಲಾಗಿದೆ. ಈ ತಂತ್ರವನ್ನು ಬಳಸಿ ಅನೇಕ ಭಾಷೆಗಳು ಧ್ವನಿಯನ್ನು ಉತ್ಪಾದಿಸಿ ಬಳಸುತ್ತವೆ. ಕಾಕಲ್ಯವು ಒಳಮುಖ ಪ್ರವಾಹದ ಗಾಳಿಯನ್ನು ಬಳಸಿ ಉತ್ಪಾದಿಸಿದ ಧ್ವನಿಗಳು ಒಳಮುಖ ಧ್ವನಿಗಳು. ಗಾಳಿಯ ಹೊರಮುಖ ಪ್ರವಾಹವನ್ನು ಬಳಸಿ ಹೊರಮುಖ ಧ್ವನಿಯನ್ನು ಉತ್ಪಾದಿಸಬಹುದು.

ಒಳಮುಖ ಕಾಕಲ್ಯ ವ್ಯಂಜನ ಅನೇಕ ಭಾಷೆಗಳಲ್ಲಿ ಕಂಡುಬರುತ್ತವೆ. ಅಮೆರಿಕನ್ ಇಂಡಿಯನ್ ಶೋನಾ ಮತ್ತು ಇಜೋದಂತಹ ಆಫ್ರಿಕನ್ ಭಾಷೆಗಳಲ್ಲಿ ಇದು ಸಾಮಾನ್ಯವಾಗಿದೆ. ಹೊರಮುಖ ಕಾಕಲ್ಯ ಧ್ವನಿಗಳು ಕಕೇಷಿಯನ್ ಭಾಷಾ ಪರಿವಾರ, ಅಮೆರಿಕನ್ ಇಂಡಿಯನ್ ಭಾಷೆಗಳು, ಆಫ್ರಿಕಾದ ಹೌಸಾದಂತಹ ಭಾಷೆಗಳಲ್ಲಿ ಅಧಿಕವಾಗಿ ಹೊರಮುಖ ಕಾಕಲ್ಯ ಧ್ವನಿಗಳು ಬಳಕೆಯಲ್ಲಿವೆ. ಇಂಗ್ಲೆಂಡಿನ ಉತ್ತರ ಭಾಗದಲ್ಲಿ ಭಾಷಿಕರು ಪದಾಂತ್ಯದಲ್ಲಿ p,t,k ಧ್ವನಿಗೆ ಬದಲಾಗಿ ಈ ಧ್ವನಿಯನ್ನು ಬಳಸುವರು.

ಹೊರಮುಖಧ್ವನಿ ಉತ್ಪಾದನೆ

ಹೊರಮುಖಧ್ವನಿ ಉತ್ಪಾದನೆ ಮಾಡುವಾಗ ಧ್ವನಿದ್ವಾರ ಮುಚ್ಚಿರುತ್ತದೆ. ಇದರಿಂದ ಗಾಳಿಯು ಶ್ವಾಸಕೋಶದಿಂದ ಹೊರಮುಖವಾಗಲಿ, ಒಳಮುಖ ವಾಗಲಿ ಚಲಿಸದೆ ಸ್ಥಗಿತವಾಗುತ್ತದೆ. ಉಲಿದ್ವಾರದಲ್ಲಿ ತಡೆಯಾಗುತ್ತಿದ್ದಂತೆ ಬಾಯಿಯ ಯಾವುದೇ ಭಾಗದಲ್ಲಿ ಉಚ್ಚಾರಣಾಂಗಗಳು ಕಾರ್ಯ ಪ್ರವೃತ್ತ ವಾಗುತ್ತವೆ. ‘ಪ’ ಧ್ವನಿ ಉಚ್ಚಾರಣೆಗೆ ಎರಡೂ ತುಟಿಗಳು ಮುಟ್ಟುತ್ತವೆ. ‘ತ’ ಅಥವ ‘ರ’ ಉಚ್ಚಾರಕ್ಕೆ ನಾಲಗೆಯ ತುದಿಭಾಗ ಮೇಲಕ್ಕೆ ಏರುತ್ತದೆ. ಇದರಿಂದಾಗಿ ಉಲಿದ್ವಾರ ಮತ್ತು ತಡೆಸ್ಥಾನದ ನಡುವೆ ಗಾಳಿ ತಡೆಯುಂಟಾಗು ತ್ತದೆ. ಧ್ವನಿಪೆಟ್ಟಿಗೆಯ ಮಾಂಸ ಖಂಡಗಳು ಸಂಕುಚಿತವಾಗಿ ಉಲಿದ್ವಾರ ಮುಂದಕ್ಕೆ ತಳ್ಳುತ್ತದೆ. ಇದರಿಂದಾಗಿ ಮುಂದಿನ ಕುಹರದಲ್ಲಿ, ಒತ್ತಡ ಹೆಚ್ಚುತ್ತದೆ. ಒತ್ತಡವು ಹೆಚ್ಚಿದಂತೆ ಬಾಯಿಯಲ್ಲಿನ ತಡೆ ಇದ್ದಕ್ಕಿದ್ದಂತೆ ತೆರೆದುಕೊಳ್ಳುತ್ತದೆ. ಅದೇ ಸಂದರ್ಭದಲ್ಲಿ ಧ್ವನಿದ್ವಾರವು ತೆರೆದುಕೊಂಡು ಶ್ವಾಸನಾಳದ ಗಾಳಿ ಮೇಲಕ್ಕೆ ತಳ್ಳಲ್ಪಡುತ್ತದೆ. ಇದು ಮುಂದಿನ ಧ್ವನಿ ಉತ್ಪಾದನೆಗೆ ಶಕ್ತಿಯಾಗಿ ಪರಿಣಮಿಸುತ್ತದೆ. ಆರಂಭದ ಉಲಿದ್ವಾರದ ಮುಚ್ಚುವಿಕೆಯಿಂದ ಹಿಡಿದು ಅಂತ್ಯದ ಉಲಿದ್ವಾರದ ಬಿಡುಗಡೆಯ ಒಟ್ಟು ಕ್ರಿಯೆ ಒಂದು ಸೆಕೆಂಡಿನ ಇಪ್ಪತ್ತಂಶ (1/20) ಕಾಲದಲ್ಲಿ ನಡೆದುಹೋಗುತ್ತದೆ. ಈ ಕಾಲಾವಧಿ ಭಾಷೆಯಿಂದ ಭಾಷೆಗೆ ಬೇರೆ ಬೇರೆ ಆಗುತ್ತದೆ.

ಒಳಮುಖಧ್ವನಿ ಉತ್ಪಾದನೆ

ಹೊರಮುಖಧ್ವನಿ ಉತ್ಪಾದನೆಗೆ ವಿರುದ್ಧವಾದ ಪ್ರಕ್ರಿಯೆ ಒಳಮುಖಧ್ವನಿ ಉತ್ಪಾದನೆಯಲ್ಲಿ ಉಂಟಾಗುತ್ತದೆ. ಆಸ್ಯ ಕುಹರದಲ್ಲಿ ಸಂಪೂರ್ಣ ತಡೆ ಉಂಟಾಗುತ್ತದೆ. ‘6’ ಧ್ವನಿ ಉತ್ಪಾದಿಸಲು ತುಟಿಗಳು ಮುಚ್ಚಿ ತಡೆ ಒಡ್ಡುತ್ತವೆ. ಧ್ವನಿ ಉತ್ಪಾದನೆಗೆ ತುದಿ ನಾಲಿಗೆ ಅಥವ ಹಿನ್ನಾಲಿಗೆ ಮೇಲಕ್ಕೆ ಚಲಿಸಿ ತಡೆ ಒಡ್ಡುತ್ತವೆ. ಒಳಮುಖ ಮತ್ತು ಹೊರಮುಖ ಧ್ವನಿಗಳನ್ನು ಸಂಕೇತ ಭಿನ್ನತೆಯಿಂದ ಕಾಣಿಸಲಾಗುವುದು. © ಹೊರಮುಖ ಧ್ವನಿ ಚಿಹ್ನೆಯಾದರೆ ಒಳಮುಖಧ್ವನಿ ಚಿಹ್ನೆ d^ ಅಂತೆಯೇ  g^ ಮತ್ತು © ಮತ್ತು ಒಳಮುಖಧ್ವನಿ ಉತ್ಪಾದನೆಯಲ್ಲಿ ಧ್ವನಿಪೆಟ್ಟಿಗೆಯ ಮಾಂಸಖಂಡ ಗಳನ್ನು ಉಲಿದ್ವಾರ ಪಾರ್ಶ್ವಿಕವಾಗಿ ಮುಚ್ಚಲು ಬಳಸಲಾಗುತ್ತದೆ. ಆಗ ಧ್ವನಿಪೆಟ್ಟಿಗೆ ಕೆಳಮುಖವಾಗಿ ಚಲಿಸುತ್ತದೆ. ಇದರಿಂದಾಗಿ ಉಲಿದ್ವಾರದ ಮೇಲಿನ ಕುಹರದಲ್ಲಿನ ಒತ್ತಡ ಕಡಿಮೆ ಆಗುತ್ತದೆ. ಉಲಿದ್ವಾರ ಸಂಪೂರ್ಣವಾಗಿ ಮುಚ್ಚಿರದ ಕಾರಣ ಶ್ವಾಸಕುಹರದ ಗಾಳಿ ಧ್ವನಿ ಪಟಲಗಳ ನಡುವೆ ಚಲಿಸಿ ಧ್ವನಿ ಪಟಲಗಳಲ್ಲಿ ಕಂಪನ ಉಂಟಾಗುತ್ತದೆ. ತುಟಿ, ಅಥವಾ ನಾಲಿಗೆಯಿಂದ ಬಿಡುಗಡೆ ಆಗುತ್ತಿದ್ದಂತೆ ವಾತಾವರಣದ ಗಾಳಿ ಬಾಯಿಯ ಒಳಕ್ಕೆ ನುಗ್ಗುತ್ತದೆ. ಇದು ಉಲಿದ್ವಾರದಲ್ಲಿ ಶ್ವಾಸಗಾಳಿಯೊಡನೆ ಸೇರಿ ಒಂದಾಗುತ್ತದೆ. ಇದರಿಂದ ನಿರ್ವಾತದಲ್ಲಿ ಮಂದವಾದ ಅನುರಕರಣನ ಧ್ವನಿ ಉಂಟಾಗುತ್ತದೆ.

ಇನ್ನಿತರ ಧ್ವನಿಗಳು

ಧ್ವನಿನಾಳದಲ್ಲಿ ಅನೇಕ ತೆರನಾದ ಇನ್ನಿತರ ಧ್ವನಿ ಉತ್ಪಾದನೆ ಆಗಬಲ್ಲವು. ಆದರೆ ಸಾಮಾನ್ಯ ಭಾಷೆಯಲ್ಲಿ ಅವೆಲ್ಲವೂ ನಿಯತವಾಗಿ ಬಳಕೆಯಾಗುವುದಿಲ್ಲ. ಹಲ್ಲುಗಳನ್ನು ಕಡಿಯುವುದು, ಬಾಯಿಯ ತಾಲವ್ಯದಂಗಳದಲ್ಲಿ ನಾಲಗೆಯನ್ನಿಟ್ಟು ಚಪ್ಪರಿಸುವುದು, ಕೆನ್ನೆಯ ಒಳಭಾಗದಲ್ಲಿ ನಾಲಗೆಯನ್ನು ಹತ್ತಿರಕ್ಕೆ ತಂದು ಚೀಪುಧ್ವನಿ ಉಂಟುಮಾಡಬಹುದು ಇತ್ಯಾದಿ. ಆದರೆ ಇಂತಹ ಧ್ವನಿಗಳು ವ್ಯಕ್ತಿಯ ವೈಯಕ್ತಿಕ ಬಳಕೆಗಳು. ಇವಕ್ಕೆ ಭಾಷೆಯಲ್ಲಿ ಸಾಮಾನ್ಯ ಅರ್ಥ ಇರಬೇಕೆಂದೇನೂ ಇಲ್ಲ.

ಇವಲ್ಲದೆ ಇನ್ನೂ ಕೆಲವು, ಗಾಳಿ ಪ್ರವಾಹ ತಂತ್ರಗಳು ಧ್ವನಿ ಉತ್ಪಾದನೆಯಲ್ಲಿ ಬಳಕೆ ಆಗುತ್ತವೆ. ಕಂಠ್ಯ, ತಳ್ಳುಸಿರು ಧ್ವನಿ, ತುಟಿಗಳನ್ನು ಬಳಸಿ ಉತ್ಪಾದಿಸಿದ ಧ್ವನಿಗಳು, ಆಂಗಿಕ ಸಂಜ್ಞೆಯ ಜೊತೆ ಭುಜ ಹಾರಿಸಿ ಉಚ್ಚರಿಸುವುದರ ಮೂಲಕ “ಅದು ನನ್ನ ತಪ್ಪಲ್ಲ” ಎಂಬರ್ಥದಲ್ಲಿ ಫ್ರೆಂಚ್ ಭಾಷೆಯಲ್ಲಿ ಸಾಮಾನ್ಯವಾಗಿ ಬಳಕೆ ಆಗುತ್ತದೆ. ಅಂತಹದೇ ಧ್ವನಿ ನಾಲಗೆ ಯನ್ನು ಹೊರಚಾಚಿ ಉಚ್ಚರಿಸಿದರೆ ಬಹಳಷ್ಟು ಭಾಷೆಗಳಲ್ಲಿ ಕೋಪವನ್ನು ವ್ಯಕ್ತಪಡಿಸುತ್ತದೆ. ಇದಲ್ಲದೆ ಕೆನ್ನೆಯ ಒಳಗೆ ಗಾಳಿಯನ್ನು ಸಂಕ್ಷೇಪಿಸುವುದು, ಅನ್ನನಾಳದ ಮೂಲಕ ಗಾಳಿಯನ್ನು ತಳ್ಳುವುದು ಇತ್ಯಾದಿ.

ಆದರೆ ಸ್ವರ, ವ್ಯಂಜನ ಉತ್ಪಾದನೆಗಳಿಗೆ ಸಾಮಾನ್ಯವಾಗಿ ಇದರಲ್ಲಿ ಒಂದೋ, ಎರಡೋ ವಿಧಾನಗಳನ್ನು ಬಳಸುತ್ತೇವೆ. ಎಲ್ಲ ಭಾಷೆಗಳು ಶ್ವಾಸಕೋಶದಿಂದ ಹೊರಮುಖ ಗಾಳಿ ಪ್ರವಾಹವನ್ನು ಬಳಸುತ್ತವೆ. ಕಾಕಲ್ಯ ತಳ್ಳುಲಿಗಳ ಬಳಕೆ ಬಹಳ ಭಾಷೆಗಳಲ್ಲಿ ಇದೆ. (ಯುರೋಪಿಯನ್ ಭಾಷೆ ಗಳನ್ನು ಹೊರತುಪಡಿಸಿ) ಕಾಕಲ್ಯ ಕೊಳ್ಳುಲಿಗಳ ಬಳಕೆ ಭಾಷೆಯಲ್ಲಿ ಅತಿ ಕಡಿಮೆ. ಕಂಠ್ಯ ದ್ರವ್ಯದಿಂದ ಉತ್ಪತ್ತಿಯಾದ ಧ್ವನಿಗಳು ಕೆಲವು ಆಫ್ರಿಕನ್ ಭಾಷೆಗಳಲ್ಲಿ ಮಾತ್ರ ಕಂಡು ಬರುತ್ತದೆ. ಅಧಿಕ ಸಂಖ್ಯೆಯ ಭಾಷೆಗಳು ಈ ತಂತ್ರಗಳಲ್ಲಿ ಒಂದು ಅಥವಾ ಎರಡು ತಂತ್ರಗಳನ್ನು ನಿಯತವಾಗಿ ಬಳಸುತ್ತವೆ. ಕೆಲವೇ ಭಾಷೆಗಳಲ್ಲಿ ಮೂರು ತಂತ್ರಗಳು ಬಳಕೆಯಲ್ಲಿವೆ. ಉತ್ತರ ಆಸ್ಟ್ರೇಲಿಯಾದ ಲಾರ್ಡಿಲ್ ಮೂಲನಿವಾಸಿಗಳ ಧಾರ್ಮಿಕ ಭಾಷೆ ಡಾಮಿನ್‌ನಲ್ಲಿ ಐದಕ್ಕೂ ಕಡಿಮೆ ಇಲ್ಲದಂತೆ ಗಾಳಿ ಪ್ರವಾಹ ತಂತ್ರಗಳ ಬಳಕೆ ಇದೆ. ಶ್ವಾಸ, ತಳ್ಳುಸಿರು, ಕಾಕಲ್ಯ ತಳ್ಳುಸಿರು, ಕಂಠ್ಯ ಕೊಳ್ಳುಸಿರು ಧ್ವನಿಯನ್ನು ಸಹ ಬಳಸಲಾಗುತ್ತದೆ. ಬೇರೆ ಇನ್ನಿತರ ಭಾಷೆಗಳಲ್ಲಿ ಈ ಎರಡು ತಂತ್ರಗಳ ಬಳಕೆ ಇಲ್ಲ. ಭವಿಷ್ಯ ಧಾರ್ಮಿಕ ಆಚರಣೆಯ ಸಲುವಾಗಿ ಈ ಧ್ವನಿವ್ಯವಸ್ಥೆ ಇರುವುದೆಂಬ ಅಭಿಪ್ರಾಯ ಪಡಬಹುದು.

ಧ್ವನಿ ಪೆಟ್ಟಿಗೆ

ಮಾತಿಗೆ ಮೊದಲು ಶ್ವಾಸಕೋಶದ ಗಾಳಿ ಉಚ್ಚಾರಣಾ ನಾಳದ ವಿವಿಧ ಅಂಗಗಳನ್ನು ಬಳಸಿ ಶ್ರಾವಕ ಕಂಪನಗಳಾಗಿ ಪರಿವರ್ತನೆ ಆಗಬೇಕಾಗುತ್ತದೆ. ಇದಕ್ಕೆ ತೀರ ಪ್ರಮುಖವಾದ ಹಾಗೂ ಧ್ವನಿ ಉಚ್ಚಾರಣೆಗೆ ತೀರ ಅವಶ್ಯಕವಾದ ಕಂಪನ ಆಕರ ಉಚ್ಚಾರಣಾನಾಳದ ಆರಂಭದಲ್ಲಿರುವ ಧ್ವನಿಪೆಟ್ಟಿಗೆಯಲ್ಲಿ ಉಂಟಾಗುತ್ತದೆ.

ಧ್ವನಿಪೆಟ್ಟಿಗೆ ಶ್ವಾಸನಾಳದ ಮೇಲ್ಭಾಗದಲ್ಲಿ ಅಡಕವಾಗಿದೆ. ಗಾಳಿನಾಳ (ಟ್ರಾಕಿಯಾ) ಅನೇಕ ಬಳೆಯಾಕಾರದ ಮೃದ್ವಸ್ಥಿಗಳಿಂದ ನಿರ್ಮಾಣವಾದ, ಮಾಂಸದ ಪೊರೆಗಳಿಂದ ಜೋಡಿಸಲ್ಪಟ್ಟ ಒಂದು ನಾಳ. ಧ್ವನಿಪೆಟ್ಟಿಗೆಯ ಮುಂಭಾಗದಲ್ಲಿ ಥೈರಾಯಿಡ್ ಕಾರ್ಟಿಲೇಜ್ ಎಂಬ ಮೃದ್ವಸ್ಥಿ ಇದನ್ನು ಆವರಿಸಿ ನಿಂತಿದೆ. ಗದ್ದದ ಕೆಳಗೆ ಗಂಟಲಿನಲ್ಲಿ ಉಬ್ಬಿ ಕಾಣುವ ಕೋನಾಕೃತಿಯ ಈ ಆಕೃತಿಯನ್ನು ‘ಆಡಮ್ಸ್ ಆ್ಯಪಲ್’ ಎಂದು ಕರೆಯುತ್ತಾರೆ.  ಗಾಳಿನಾಳದ ಆರಂಭದಲ್ಲಿ ಥೈರಾಯಿಡ್ ಕಾರ್ಟಿಲೇಜನ್ನು ಹೊಂದಿಕೊಂಡಂತೆ ಕ್ರಕಾಯ್ಡ ಕಾರ್ಟಿಲೇಜ್ ಎಂಬ ಬಳೆಯಾಕಾರದ ಮೃದ್ವಸ್ಥಿ ಇದು ಉಳಿದ ಬಳೆಗಳಿಗಿಂತ ದೊಡ್ಡದು. ಇದರ ಮುಂಭಾಗದಲ್ಲಿ ಥೈರಾಯಿಡ್ ಮೃದ್ವಸ್ಥಿ ಇದೆ. ಇದರ ಹಿಂಭಾಗದಲ್ಲಿ ಇದರ ಮೇಲೆ ಎರಡು ಚಿಕ್ಕ ಅರಿಟಿನಾಯಿಡ್ ಕಾರ್ಟಿಲೇಜ್ ಎಂಬ ಮೃದ್ವಸ್ಥಿಗಳಿವೆ. ಕ್ರೈಕಾಯಿಡ್ ಮೃದ್ವಸ್ಥಿಗೆ ಅಡ್ಡಲಾಗಿ ಎರಡೂ ಅರಿಟಿನಾಯಿಡ್ ಮೃದ್ವಸ್ಥಿಯಿಂದ ಆರಂಭವಾಗಿ ಥೈರಾಯಿಡ್ ಮೃದ್ವಸ್ಥಿಯನ್ನು ಒಂದೇ ಬಿಂದುವಿನಲ್ಲಿ ಸೇರುವಂತೆ ಎರಡು ಪಟ್ಟಿಗಳಿವೆ. ಇವನ್ನು ಧ್ವನಿಪಟಲಗಳು ಅಥವ ಉಲಿಪಟಗಳು ಎಂದು ಕರೆಯಲಾಗಿದೆ. ಅರಿಟಿನಾಯಿಡ್ ಕಾರ್ಟಿಲೇಜಿನಿಂದ ಥೈರಾಯಿಡ್ ಕಾರ್ಟಿಲೇಜ ಸೇರುವಲ್ಲಿ ಇವು ತೆರೆದುಕೊಂಡಿವೆ. ಉಳಿದೆಡೆ ಇವು ಕ್ರಿಕಾಯ್ಡಿ ಮೃದ್ವಸ್ಥಿಗೆ ಸೇರಿವೆ. ಇವೆರಡೂ ಪಟಲಗಳನ್ನು ತೆರೆದುಕೊಂಡಿರುವ ಭಾಗವನ್ನು ಧ್ವನಿದ್ವಾರ ಅಥವ ಉಲಿದ್ವಾರ ಎಂದು ಕರೆಯಬಹುದು. ಗಾಳಿಯ ಪ್ರವಾಹ ಈ ದ್ವಾರದ ಮೂಲಕ ಶ್ವಾಸನಾಳಗಳಷ್ಟೆ ಅಥವ ಶ್ವಾಸನಾಳದಿಂದ ಹೊರಕ್ಕೆ ಚಲಿಸುತ್ತದೆ. ಅರಿಟಿನಾಯಿಡ್ ಮೃದ್ವಸ್ಥಿಗಳ ಚಲನೆ ಧ್ವನಿಪಟಲಗಳ ಕಂಪನ ವಿಧಾನವನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಿದೆ.

ಉಲಿದ್ವಾರವಿಲ್ಲದೆ ಧ್ವನಿ ಪಟಲಗಳ ಉದ್ದ ಗಂಡಸರಲ್ಲಿ 17 ರಿಂದ 24 ಮಿಲಿಮೀಟರ್, ಹೆಣ್ಣುಮಕ್ಕಳಲ್ಲಿ ಇದರ ಉದ್ದ ಇದಕ್ಕಿಂತ ಕಡಿಮೆ. ಸುಮಾರು 13 ರಿಂದ 17 ಮಿಲಿಮೀಟರ್. ಉಲಿದ್ವಾರವನ್ನು ಹೊಂದಿಕೊಂಡ ಪಟಲಗಳು ಉಲಿಪಟಲಗಳು. ಇದರಂತೆಯೇ ಮೇಲಿನ ಭಾಗದಲ್ಲಿ ಇನ್ನೆರಡು ಪಟಲಗಳು ಇವೆ. ಇವು ಹುಸಿ ಉಲಿಪಟಲಗಳು ಇವನ್ನು ಮೆಟ್ರಿಕುಲಾರ್ ಎಂದು ಕರೆದಿದ್ದಾರೆ. ಧ್ವನಿ ಉತ್ಪಾದನೆಯಲ್ಲಿ ಇವುಗಳ ಬಳಕೆ ಆಗುವುದಿಲ್ಲ. ಆದರೆ ಕೆಲವೊಂದು ಧ್ವನಿ ಗುಣಕ್ಕಾಗಿ ಇವನ್ನು ವಿಶೇಷವಾಗಿ ಬಳಸುವುದು ಉಂಟು. ಲೂಯಿಸ್ ಅವಾಗಮ್ಮಿಂಗ್ ಎಂಬ ಜಾಜ್‌ವಾದಕ ಆಳವಾದ ಧ್ವನಿ ಉತ್ಪಾದನೆಗೆ ಇವನ್ನು ಬಳಸುತ್ತಾನೆ. ಗಂಟಲು ಸರಿಯಿಲ್ಲದಾಗ ಹುಟ್ಟುವ ಒಡಕು ಧ್ವನಿಗೆ ಇವು ಕಾರಣ.

ಧ್ವನಿಪಟಲಗಳು

ಧ್ವನಿಪಟಲಗಳು ಅಧಿಕ ಚಾಲನ ಗುಣ ಹೊಂದಿವೆ. ಧ್ವನಿಪಟಲಗಳ, ಬಿಗಿತ, ಕುಂಚತ್ವ, ಎತ್ತರ, ಅಗಲ, ಉದ್ದ, ದಪ್ಪ ಮುಂತಾದವು ಧ್ವನಿ ನಿಯಂತ್ರಣಕ್ಕೆ ಕಾರಣವಾಗಿದೆ. ಇವು ಧ್ವನಿ ಉತ್ಪಾದನೆಯಲ್ಲಿ ಸಂಯುಕ್ತವಾಗಿ ಕಾರ್ಯಗೈಯುತ್ತವೆ. ಮತ್ತು ವಿವಿಧ ಶ್ರವಣ ಗುಣವನ್ನುಂಟು ಮಾಡುತ್ತವೆ.

ಘೋಷತ್ವ

ಧ್ವನಿಪಟಲಗಳ ಶ್ರವಣ ಗುಣಗಳಲ್ಲಿ ಅತಿ ಮುಖ್ಯವಾದುದು ಪಟಲಗಳ ಕಂಪನ ಶ್ರವಣಗುಣ. ಘೋಷವೆಂದು ಪರಿಚಿತವಾಗಿರುವ ಒಂದು ವಿಧವಾದ ಅನುರಕರಣ ಗುಣ ಉಲಿಪಟಲಗಳ ಅದುರುವಿಕೆಯಿಂದ ಉಂಟಾಗುತ್ತದೆ. ಎಲ್ಲ ಸ್ವರಗಳು ಉಲಿಪಟಲಗಳ ಕಂಪನಗುಣ ಹೊಂದಿವೆ. ಅಂತೆಯೇ ಬ, ಜ, ಮ ಮುಂತಾದ ಹೆಚ್ಚಿನ ಧ್ವನಿಗಳ ಉತ್ಪಾದನೆಯಲ್ಲಿ ಧ್ವನಿ ಪಟಲಗಳು ಕಂಪನಕ್ಕೆ ಒಳಗಾಗುತ್ತವೆ. ಈ ಕಂಪನ ಗುಣವನ್ನು ಹೊರಗಿನಿಂದಲೇ ಅನುಭವಿಸಬಹುದು. ಎರಡು ಬೆರಳುಗಳನ್ನು ‘ಆಡಮ್ಸ್ ಆ್ಯಪಲ್’ನ ಮೇಲಿಟ್ಟು ಸ್‌ಸ್‌ಸ್ (SSS) ಅಥವ ಜ್‌ಜ್‌ಜ್ (ZZZ) ಧ್ವನಿಗಳನ್ನು ಗಟ್ಟಿಯಾಗಿ ಉಚ್ಚರಿಸಿದಾಗ ಕಂಪನ ಅನುಭವಕ್ಕೆ ಬರುತ್ತದೆ. ಚ್ ಉಚ್ಚಾರದಲ್ಲಿ ಇಲ್ಲದ ಕಂಪನ ಜ್ ಉಚ್ಚಾರದಲ್ಲಿ ಕಂಡು ಬರುತ್ತದೆ. ಕಿವಿಯಲ್ಲಿ ಬೆರಳನ್ನು ಇಟ್ಟು ಈ ಎರಡು ಧ್ವನಿಗಳನ್ನು ಉಚ್ಚರಿಸಿದರೂ ಕಂಪನವನ್ನು ಅನುಭವಿಸ ಬಹುದು.

ಪ್ರತಿಕಂಪನ ಧ್ವನಿಪಟಲಗಳು ಒಂದಕ್ಕೊಂದು ಸೇರುವುದು ಮತ್ತು ತೆರೆಯುವುದನ್ನು ಸೂಚಿಸುತ್ತದೆ. ಪ್ರೌಢ ಗಂಡಸರಲ್ಲಿ ಘೋಷತ್ವ ಪ್ರತಿ ಸೆಕೆಂಡಿಗೆ 120 ಆವರ್ತನಗಳು ಹೆಣ್ಣುಮಕ್ಕಳಲ್ಲಿ ಒಂದು ಸೆಕೆಂಡಿಗೆ 220 ಆವರ್ತನಗಳು. ಧ್ವನಿಯನ್ನು ಗಟ್ಟಿಯಾಗಿ ಉಚ್ಚರಿಸಿದಂತೆ ಆವರ್ತನ ಹೆಚ್ಚುತ್ತದೆ. ಹೊಸದಾಗಿ ಹುಟ್ಟಿದ ಕೂಸು ಒಂದು ಸೆಕೆಂಡಿಗೆ 400 ಕಂಪನವನ್ನು ಉಂಟುಮಾಡಬಲ್ಲುದು.

ತಾನ (ಪಿಚ್)

ನಮ್ಮ ಇಚ್ಛೆಗೆ ಅನುಗುಣವಾಗಿ ಧ್ವನಿಪಟಲಗಳ ಆವರ್ತನವನ್ನು ಹೆಚ್ಚು ಕಡಿಮೆ ಮಾಡಬಹುದು. ಆದರೂ ಇದು ಒಂದು ಅಂಕೆಗೆ ಒಳಪಟ್ಟು ಧ್ವನಿಯ ತಾನ ಮತ್ತು ಗಡಸುತನವನ್ನು ನಿರ್ಧರಿಸುತ್ತದೆ.

ಕಾಕಲ್ಯ ಸ್ಪರ್ಶ

ಧ್ವನಿಪಟಲಗಳನ್ನು ಒಂದಕ್ಕೊಂದನ್ನು ಗಟ್ಟಿಯಾಗಿ ಸೇರಿಸಿ ಮುಚ್ಚ ಬಹುದು. ಹಾಗೆ ಮುಚ್ಚಿದ ಪಟಲಗಳನ್ನು ಒಮ್ಮೆಲೆ ತೆರೆದಾಗ ಶ್ವಾಸ ಪ್ರವಾಹ ಕಾಕಲ್ಯಸ್ಪರ್ಶ ಧ್ವನಿಯನ್ನು ಉತ್ಪತ್ತಿ ಮಾಡುತ್ತದೆ. ಕೆಮ್ಮಿಗೆ ಸಮೀಪವಾದ ಈ ಧ್ವನಿ ಅನೇಕ ಭಾಷೆ, ಉಪಭಾಷೆಗಳಲ್ಲಿ ಬಳಕೆಯಲ್ಲಿದೆ. ಲಂಡನ್ ಭಾಷೆ ಯಿಂದ ಪ್ರೇರಿತವಾದ ಬ್ರಿಟಿಷ್ ಇಂಗ್ಲಿಷ್‌ನಲ್ಲಿ ಇದು ಸಾಮಾನ್ಯ. Bottle ಎಂಬ ಪದದ ‘t’ ಧ್ವನಿಯನ್ನು ಇದು ಸ್ಥಳಾಂತರಿಸುತ್ತದೆ.

ಕಾಕಲ್ಯ ಘರ್ಷ : ಧ್ವನಿಪಟಲಗಳನ್ನು ತೆರೆದಿಟ್ಟು ಶಕ್ತಿಯುತವಾಗಿ ಗಾಳಿ ಚಲಿಸುವಂತೆ ಮಾಡಿದಾಗ ಕಾಕಲ್ಯ ಘರ್ಷಧ್ವನಿ ಉತ್ಪಾದನೆ ಆಗುತ್ತದೆ.

ಕಾಕಲ್ಯ ಧ್ವನಿ ಗುಣಗಳು

ಧ್ವನಿ ಪಟಲಗಳ ವಿವಿಧ ರಚನೆಯಿಂದ ವಿವಿಧ ಧ್ವನಿಗುಣ ನಿರ್ಮಾಣ ವಾಗುತ್ತದೆ. ಅನೇಕ ಕಂಪನ ಸಂಕೀರ್ಣದಿಂದ ಪಿಸುಧ್ವನಿ, ನಡುಗುಧ್ವನಿ, ಒಡಕುಧ್ವನಿ ಮುಂತಾದ ಧ್ವನಿಗುಣಗಳು ಕಾಕಲ್ಯ ಕ್ರಿಯೆಯಿಂದ ಉಂಟಾಗುತ್ತದೆ. ಆದರೂ ಅವುಗಳ ತಾಂತ್ರಿಕ ವಿವರಣೆ ಇನ್ನೂ ಸರಿಯಾಗಿ ತಿಳಿದುಬಂದಿಲ್ಲ.

ಲೆರಿಂಜೊಸ್ಕೋಪ್ ಎಂಬ ಫೈಬರ್‌ನಿಂದ ತಯಾರಿಸಿದ ಕನ್ನಡಿಯನ್ನು ಬಳಸಿ ಅಥವಾ ಅರಿಂಜಿಯೋಲ್ ಕನ್ನಡಿಯನ್ನು ಬಳಸಿ ಧ್ವನಿಪಟಲಗಳ ಕಂಪನವನ್ನು ಕಾಣಬಹುದು. ತೀವ್ರವಾದ ಕಂಪನಗಳು ನಡುಕು ಚಲನೆಯನ್ನು ಹೋಲುತ್ತವೆ. ಇದು ಕಂಪಿಸುತ್ತಿರುವ ಗಿಟಾರಿನ ತಂತಿಯಂತಿರುತ್ತದೆ. ಧ್ವನಿಪಟಲ ಗಳ ಕಂಪನವನ್ನು ಚಿತ್ರೀಕರಿಸಿ ಪರದೆಯ ಮೇಲೆ ಮಂದ ಚಲನೆಗೆ ಒಳಪಡಿಸಿ ಇದನ್ನು ನೋಡಬಹುದು.

ಧ್ವನಿಪಟಲಗಳ ಕಂಪನಕ್ಕೆ ಸಂಬಂಧಿಸಿದಂತೆ ಅನೇಕ ಸಿದ್ದಾಂತಗಳು ನಿರೂಪಿತವಾಗಿವೆ. ಆರಂಭದಲ್ಲಿ, ಧ್ವನಿಪಟಲಗಳ ಕಂಪನವನ್ನು ತಂತಿವಾದ್ಯದ ಕಂಪನದಂತೆ ಇದೆ ಎಂಬ ಅಭಿಪ್ರಾಯವಿತ್ತು. ಕಾಕಲ್ಯದ ಮಾಂಸಖಂಡಗಳು ಚಲಿಸುವಂತೆ ನರಬಡಿತ ನಿರ್ದೇಶನದ ಫಲ ಇದು ಎಂಬುದು ಈ ಅಭಿಪ್ರಾಯದ ಹಿಂದಿತ್ತು. ಗಾಳಿಯ ಒತ್ತಡವು ಪ್ರತಿ ಕಂಪನಕ್ಕೆ ಧ್ವನಿ ಪಟಲವು ತೆರೆಯುವಂತೆ ಮಾಡುತ್ತದೆ. ಅನಂತರ ಅವು ತಮ್ಮ ಸಹಜ ಕುಂಚನಗುಣದಿಂದಾಗಿ ಪೂರ್ವಸ್ಥಿತಿಗೆ ಬರುವುದರ ಮೂಲಕ ಮುಚ್ಚಿಕೊಳ್ಳುತ್ತವೆ. ಮತ್ತೊಂದು ವಾದವಾದ ಬರ್ನೌಲಿ ಪರಿಣಾಮದ ಪ್ರಕಾರ ಚಿಕ್ಕದಾದ ಉಲಿದ್ವಾರದ ಮೂಲಕ ಗಾಳಿ ಚಲಿಸಿ ತಕ್ಷಣ ನಿಲ್ಲುವುದರಿಂದ ಗಾಳಿಯ ಒತ್ತಡ ಕಡಿತ ಉಂಟಾಗಿ ಧ್ವನಿಪಟಲಗಳು ಸೆಳೆತಕ್ಕೆ ಒಳಗಾಗುತ್ತವೆ.

ಉಚ್ಚಾರಣೆ

ಧ್ವನಿಯಿಂದ ಕೂಡಿದ ಗಾಳಿಯ ಪ್ರವಾಹವು ಧ್ವನಿ ಪೆಟ್ಟಿಗೆಯಿಂದ ಹೊರಬಿದ್ದ ನಂತರ ಉದ್ದವಾದ ಧ್ವನಿ ನಾಳವನ್ನು ಪ್ರವೇಶಿಸುತ್ತದೆ.  ಇಲ್ಲಿ ಇದು ವಿವಿಧ ಚಲನಶೀಲ ಅಂಗಗಳ ಪ್ರಕ್ರಿಯೆಯಿಂದ ಬದಲಾವಣೆಗೆ ಒಳಗಾಗಿ ನಿರ್ದಿಷ್ಟ ಧ್ವನಿ ಆಕಾರವನ್ನು ಪಡೆಯುತ್ತದೆ. ಅದರಲ್ಲೂ ನಾಲಿಗೆ, ಮೃದುತಾಲು, ತುಟಿಗಳ ಚಲನೆಯಿಂದ ಧ್ವನಿ ಬದಲಾವಣೆ ಆಗುತ್ತದೆ. ಈ ಅಂಗಗಳೇ ವಿಸ್ತಾರವಾದ ಮಾತಿನ ಧ್ವನಿಗಳಿಗೆ ಕಾರಣವಾಗುತ್ತದೆ. ಈ ಕ್ರಿಯೆ ಯನ್ನು ಉಚ್ಚಾರಣೆ ಎನ್ನುತ್ತೇವೆ.

ಧ್ವನಿಪೆಟ್ಟಿಗೆಯಲ್ಲಿ ಧ್ವನಿ ಉತ್ಪತ್ತಿ ಆದನಂತರ, ಕಾಕಲ್ಯ ಕುಹರದ ಮೇಲಿರುವ ಗಲಕುಹರ, ಅಸ್ಯಕುಹರ (ನಾಲಿಗೆಯ ಆರಂಭದಿಂದ ತುಟಿಯ ವರೆಗಿನ ಭಾಗ), ನಾಸಾಕುಹರ (ಕಿರುನಾಲಿಗೆಯಿಂದ ಆರಂಭವಾಗಿ ಮೂಗಿನ ತುದಿಯವರೆಗಿನ ಭಾಗ), ಓಷ್ಠ ಕುಹರ (ತುಟಿಗಳ ನಡುವಿನ ಭಾಗ)ಗಳಲ್ಲಿ ಗಾಳಿಯ ಪ್ರವಾಹ ಚಲಿಸುತ್ತಿರುವಂತೆ ಆ ಕುಹರಗಳಲ್ಲಿ ಅಂತರ್ಗತವಾದ ರಚನೆಯಿಂದ ಪ್ರಭಾವಿತವಾಗುತ್ತದೆ. ಅಂದರೆ ಕುಹರದ ರಚನೆಗೆ ಅನುಗುಣವಾಗಿ ಅನುರನವುಂಟಾಗುತ್ತದೆ. ಧ್ವನಿ ಉಚ್ಚಾರಕ್ಕೆ ಆಸ್ಯಕುಹರ ಮತ್ತು ಇನ್ನಿತರ ಕುಹರದಲ್ಲಿ ಇರುವ ಸ್ಥಾನ ಮತ್ತು ಕರಣಗಳನ್ನು ಬಳಸಲಾಗುತ್ತದೆ.

ಉಚ್ಚಾರ ನಾಳದಲ್ಲಿ ಚಲನರಹಿತ ಮತ್ತು ಚಲನಶೀಲ ಅಂಗಗಳೆರಡೂ ಸೇರಿ ಉಚ್ಚಾರಣೆ ಉಂಟಾಗುತ್ತದೆ. ಇದರಲ್ಲಿ ಚಲನೆಗೆ ಒಳಗಾಗದ ಒಂದೇ ಸ್ಥಿತಿಯಲ್ಲಿ ಉಳಿಯುವ ಅಂಗಗಳು ಸ್ಥಾನಗಳು. ಇದಕ್ಕೆ ಬದಲಾಗಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ನಿರ್ದಿಷ್ಟ ಸ್ಥಾನದತ್ತ ಚಲಿಸಿ ಗಾಳಿಯ ಪ್ರವಾಹದ ಸ್ವರೂಪವನ್ನು ನಿರ್ಧರಿಸಿರುವ ಚಲನಶೀಲ ಅಂಗಗಳು ಕರಣಗಳು. ಸ್ಥಾನ ಮತ್ತು ಕರಣಗಳೆರಡೂ ಸೇರಿ ಉಚ್ಚಾರಣಾಂಗಗಳು.

ಸ್ಥಾನಗಳು

ಮೇಲಿನ ದಂತ ಪಂಕ್ತಿ ಸ್ಥಾನಗಳಲ್ಲಿ ಒಂದು, ಅದರಲ್ಲಿಯೂ ಮುಂದಿನ ಹಲ್ಲುಗಳು, ಕನ್ನಡದ ತ, ದ, ಧ್ವನಿಗಳು, ಇಂಗ್ಲಿಷಿನ thin ಪದದ ಮೊದಲ ಧ್ವನಿ (0)ಯಂತಹ ಧ್ವನಿಗಳು ಇಲ್ಲಿ ಉತ್ಪತ್ತಿ ಆಗುತ್ತವೆ.

ದಂತಪಂಕ್ತಿಯನ್ನು ಅನುಸರಿಸಿ ಹಿಂದಿರುವ ಹುರುಕಾದ ಉಬ್ಬು ಭಾಗ, ಉಚ್ಚಾರಣೆಯ ಮತ್ತೊಂದು ಸ್ಥಾನ. ಇದನ್ನು ವರ್ತ್ಸ ಎಂದು ಗುರುತಿಸಿದ್ದಾರೆ. ಕನ್ನಡದ ಸ, ಬ, ರ ದಂತಹ ಧ್ವನಿಗಳು ಇಲ್ಲಿ ಹುಟ್ಟುತ್ತವೆ.

ವರ್ತ್ಸವನ್ನು ಅನುಸರಿಸಿ ಮುಂದುವರಿದ ಗಟ್ಟಿಯಾದ ಇಳಿಜಾರು ಭಾಗ ಇನ್ನೊಂದು ಸ್ಥಾನ. ಇದನ್ನು ಮೂರ್ಧನ್ಯ ಎಂದು ಕರೆಯುವರು. ಕನ್ನಡದ ಟ, ಡ, ಳ ಧ್ವನಿಗಳನ್ನು ಇಲ್ಲಿ ಉಚ್ಚಾರ ಮಾಡಬಹುದು.

ಮೂರ್ಧನ್ಯ ಭಾಗದ ನಂತರ ಗಟ್ಟಿಯಾದ ಭಾಗ ಮುಂದುವರಿಯುತ್ತದೆ. ಈ ಭಾಗವನ್ನು ಕಠಿಣತಾಲು ಎಂದು ಹೆಸರಿಸಿದ್ದಾರೆ. ಕಠಿಣತಾಲು ಕೂಡ ಸ್ಥಾನಗಳಲ್ಲಿ ಒಂದು. ಚ, ಜ, ಶ, ಧ್ವನಿಗಳನ್ನು ಇಲ್ಲಿ ಉಚ್ಚರಿಸುತ್ತೇವೆ. ಇಂಗ್ಲಿಷಿನ you ಪದದ ಆದಿಧ್ವನಿ (j) ಸಹ ಇಲ್ಲಿಯೇ ಉಚ್ಚಾರವಾಗುತ್ತದೆ.

ಉಳಿದೆಲ್ಲ ಉಚ್ಚಾರಣಾಂಗಗಳು ಚಲನಶೀಲಗುಣ ಹೊಂದಿವೆ.

ಕರಣಗಳು : ಚಲನಶೀಲಗುಣ ಹೊಂದಿರುವ ಕೆಳಗಿನ ಅಂಗಗಳೇ ಕರಣಗಳು.

ಗಲಕುಹರ

ಕೌಶಲ್ಯ ಕುಹರದಿಂದ ಆರಂಭಿಸಿ ಆಸ್ಯಕುಹರ ಮತ್ತು ನಾಸಾಕುಹದವರೆಗಿನ ಭಾಗ ಗಲಕುಹರ. ಗಲಕುಹರವನ್ನು ಹೊಂದಿಕೊಂಡು ಬರುವ ಇತರ ಕುಹರಗಳನ್ನು ಆಧಾರವಾಗಿರಿಸಿಕೊಂಡು ಗಲಕುಹರವನ್ನು ಕಾಕಲ್ಯಗಲ-ಆಸ್ಯಗಲ-ನಾಸಾಗಲ ಎಂದು ವಿಭಜಿಸಲಾಗಿದೆ. ಗಲಕುಹರದ ಭಿತ್ತಿಯಲ್ಲಿನ ಮಾಂಸಖಂಡ ಗಳಿಂದಾಗಿ ಗಲಕುಹರವನ್ನು ಸಂಕ್ಷೇಪಿಸಿಬಹುದು. ಅಥವ ವಿಸ್ತಾರಗೊಳಿಸ ಬಹುದು. ಇಲ್ಲಿ ಗಾಳಿಯ ಪ್ರವಾಹಕ್ಕೆ ತಡೆಯನ್ನು ಒಡ್ಡುವುದರ ಮೂಲಕ ಹ ಧ್ವನಿಯನ್ನು ಉಚ್ಚರಿಸುತ್ತೇವೆ.

ಮೃದುತಾಲು

ಬಾಯಿಯ ಹಿಂದೆ ಕಠಿಣತಾಲುವನ್ನು ಅನುಸರಿಸಿ ಮೇಲಿನ ಅಂಗಳದಲ್ಲಿ ವಿಸ್ತಾರವಾದ ಚಲಿಸಬಲ್ಲ ಅಂಗವಿದೆ. ಇದನ್ನು ಮೃದುತಾಲು ಎಂದು ಕರೆಯಲಾಗಿದೆ. ಈ ಭಾಗದಲ್ಲಿ ಕನ್ನಡದ ಕ, ಗ, ಧ್ವನಿಗಳನ್ನು ಉಚ್ಚರಿಸುತ್ತೇವೆ.

ಮೃದುತಾಲುವಿನ ಕೊನೆಯಲ್ಲಿ ಜೋತಾಡುತ್ತಿರುವ ಮಾಂಸದ ಭಾಗವಿದೆ. ಇದನ್ನು ಕಿರುನಾಲಿಗೆ ಎನ್ನುತ್ತೇವೆ. ಕಿರುನಾಲಿಗೆ ಸಾಮಾನ್ಯವಾಗಿ ಕೆಳಮುಖವಾಗಿ ಜೋತಾಡುತ್ತಿರುತ್ತದೆ. ಆಗ ಗಾಳಿಯು ಮೂಗಿನ ಮುಖಾಂತರ ಸರಾಗವಾಗಿ ಚಲಿಸುತ್ತಿರುತ್ತದೆ. ಗಾಳಿ ನಾಸಾಕುಹರದ ಮೂಲಕ ಚಲಿಸುತ್ತಿರುವಾಗ ಆಸ್ಯಕುಹರ ತೆರೆದಿರಬಹುದು ಅಥವ ಮುಚ್ಚಿರಬಹುದು. ಮಾತನಾಡುವಾಗ ಕಿರುನಾಲಿಗೆ ಪಾಲ್ಗೊಳ್ಳುವ ಮೂಲಕ ಮೂರು ರೀತಿಯ ಪರಿಣಾಮಗಳನ್ನು ಧ್ವನಿಗಳ ಮೇಲೆ ಉಂಟುಮಾಡಬಹುದು.

ಕಿರುನಾಲಿಗೆ ತನ್ನ ಸಾಮಾನ್ಯ ಸ್ಥಿತಿಯಿಂದ ಮೇಲಕ್ಕೆತ್ತಿ ನಾಸಾಗಲೀಯ ಭಿತ್ತಿಗೆ ಅಂಟಿ ನಿಲ್ಲಬಹುದು. ಇದರಿಂದ ನಾಸಾಕುಹರಕ್ಕೆ ಎಡೆ ಮಾಡಿಕೊಡುವ ದ್ವಾರ ಮುಚ್ಚಿಕೊಳ್ಳುತ್ತದೆ. ಗಾಳಿಯ ಪ್ರವಾಹ ಕೇವಲ ಬಾಯಿಯ ಮುಖಾಂತರ ಚಲಿಸುತ್ತದೆ. ಕಿರುನಾಲಿಗೆ ಈ ಸ್ಥಿತಿಯಲ್ಲಿರುವಾಗ ಆ, ಇ, ಉ ಇತ್ಯಾದಿ ಸ್ವರಗಳು ಕ, ಚ, ಟ, ಪ, ಲ, ರ, ಇತ್ಯಾದಿ ವ್ಯಂಜನಗಳು ಉಚ್ಚಾರವಾಗುತ್ತವೆ.

ಕಿರುನಾಲಿಗೆಯನ್ನು ಕೆಳಕ್ಕೆ ತಂದು ಗಾಳಿಯ ಪ್ರವಾಹ ನಾಸಾಕುಹರ ಆಸ್ಯಕುಹರಗಳೆರಡರ ಮುಖಾಂತರವೂ ಚಲಿಸುವಂತೆ ಮಾಡಬಹುದು. ಈ ಸ್ಥಿತಿಯಲ್ಲಿ ಕೇವಲ ಸ್ವರಗಳು ಉಚ್ಚಾರವಾಗುತ್ತವೆ. ಆದರೆ ಸ್ವರಗಳು ತಮ್ಮ ಉಚ್ಚಾರದೊಂದಿಗೆ ನಾಸಿಕ ಗುಣವನ್ನು ಪಡೆಯುವುದರ ಮೂಲಕ ನಾಸೀಕೃತ ಸ್ವರಗಳಾಗುತ್ತವೆ. ಉತ್ತರ ಕರ್ನಾಟಕದ ‘ಹ್ಯಾಂವ’ ಪದದಲ್ಲಿ ಇದನ್ನು ಕಾಣ ಬಹುದು. ಫ್ರೆಂಚ್‌ನ bon ಪದದಲ್ಲಿ ನಾಸೀಕೃತ ಸ್ವರ ಉಚ್ಚಾರವಿದೆ. ಪೋರ್ಚ್‌ಗೀಸ್ ಮತ್ತು ಇತರ ಭಾಷೆಗಳಲ್ಲಿ ಇವು ಬಳಕೆಯಲ್ಲಿವೆ.

ಕಿರುನಾಲಿಗೆಯನ್ನು ಕೆಳಕ್ಕೆ ತಂದು ನಿಲ್ಲಿಸಿ ಆಸ್ಯಕುಹರದ ಯಾವುದೇ ಭಾಗದಲ್ಲಿ ತಡೆ ಒಡ್ಡಬಹುದು. ಈ ಸ್ಥಿತಿಯಲ್ಲಿ ಎಲ್ಲ ಗಾಳಿಯು ಮೂಗಿನ ಮುಖಾಂತರವೇ ಚಲಿಸುತ್ತದೆ. ಈಗ ಉಚ್ಚಾರವಾಗುವ ಧ್ವನಿಗಳು ನಾಸಿಕಗಳು. ಮ್, ನ್, ಣ್, ಇದಕ್ಕೆ ಉದಾಹರಣೆ.

ತುಟಿಗಳು

ಬಾಯಿಯನ್ನು ಆವರಿಸಿರುವ ಅರ್ಬಿಕ್ಯುಲರಿಯೋ ಒರಿಯೊ ಮಾಂಸ ಖಂಡವು ತುಟಿಗಳ ಚಲನೆಯನ್ನು ನಿಯಂತ್ರಿಸುತ್ತದೆ. ತುಟಿಗಳು ವಿವಿಧ ಆಕಾರದಲ್ಲಿ ರಚಿತವಾಗುವುದರ ಮೂಲಕ ಭಿನ್ನ ಧ್ವನಿಗಳ ಉಚ್ಚಾರವಾಗುತ್ತದೆ. ಧ್ವನಿಗಳ ಉಚ್ಚಾರಕ್ಕೆ ತುಟಿಗಳನ್ನು ಸಂಪೂರ್ಣವಾಗಿ ಮುಚ್ಚಬಹುದು. ಪ, ಖ, ಮ ಉಚ್ಚಾರ ಇದಕ್ಕೆ ಉದಾಹರಣೆ. ಅಥವಾ ಬೇರೆ ಬೇರೆ ಅಂತರದಲ್ಲಿ ನಿಲ್ಲಿಸಿ, ತುಟಿಗಳನ್ನು ದುಂಡಾಗಿಸಿ ಉ, ಒ, ಸ್ವರಗಳನ್ನು ಉಚ್ಚಾರ ಮಾಡಬಹುದು ಅಥವಾ ತುಟಿಗಳನ್ನು ವಿವರವಾಗಿಸಿ, ಇ, ಉ ಸ್ವರಗಳನ್ನು ಉಚ್ಚಾರ ಮಾಡಬಹುದು. ತುಟಿಗಳನ್ನು ಹತ್ತಿರಕ್ಕೆ ತಂದು ವ್ಯಂಜನಗಳಿಗೆ ಘರ್ಷಣ ಗುಣ ನೀಡಬಹುದು. ಸ್ಪ್ಯಾನಿಷ್ ಭಾಷೆಯ saber ‘know’ ಪದದ ‘b’ ಕಾರ ಉಚ್ಚಾರ ಘರ್ಷ ಉಚ್ಚಾರ.

ವಸಡುಗಳು

ಮ್ಯಾಂಡಿಬಲ್ ಎಲುಬು ವಸಡುಗಳ ವಿವಿಧ ಚಲನೆಗೆ ಕಾರಣವಾಗಿದೆ. ವಸಡುಗಳು ಎರಡೂ ದಂತ ಪಂಕ್ತಿಗಳ ನಡುವಿನ ಅಂತರವನ್ನು ನಿರ್ಧರಿಸುತ್ತವೆ. ಅಂತೆಯೇ ತುಟಿಗಳ ಸ್ವರೂಪವನ್ನು ಸಹ ನಿರ್ಣಯಿಸಬಲ್ಲವು. ಕೆಲವೊಮ್ಮೆ ಮಾತುಗಾರರು ತೆರೆದ ಅಥವಾ ಮುಚ್ಚಿದ ದಂತಪಂಕ್ತಿ ಸ್ಥಿತಿಯನ್ನು ಬಳಸಿ ಮಾತಾಡುವುದುಂಟು. ಹಲ್ಲುಕಚ್ಚಿ ಮಾತನಾಡುವುದು ಇದಕ್ಕೆ ಉದಾಹರಣೆ. ವಸಡು ಭಿನ್ನ ಎತ್ತರಗಳಲ್ಲಿ ನಿಲ್ಲುವುದರಿಂದ ಇ, ಎ, ಅ ದಂತಹ ಭಿನ್ನ ಸ್ವರಗಳು ಉಚ್ಚಾರವಾಗುತ್ತವೆ.

ನಾಲಿಗೆ

ಚಲನಶೀಲ ಅಂಗಗಳಲ್ಲಿ ಅಧಿಕ ಚಲನಾಗುಣವನ್ನು ಹೊಂದಿರುವ ಅಂಗ ನಾಲಿಗೆ. ಬೇರೆ ಯಾವುದೇ ಕರಣಕ್ಕಿಂತ ಅಧಿಕವಾದ ವೈವಿಧ್ಯಮಯ ರಚನೆಗಳನ್ನು, ಆಕಾರವನ್ನು ನಾಲಿಗೆ ಉಂಟುಮಾಡುತ್ತದೆ. ಹೀಗಾಗಿ ಭಾಷೆಯ ಎಲ್ಲ ಸ್ವರಗಳು ಹೆಚ್ಚಿನ ವ್ಯಂಜನಗಳನ್ನು ನಾಲಿಗೆಯ ಸ್ಥಿತಿಯನ್ನು ಆಧರಿಸಿಯೇ ವಿವರಿಸಲಾಗುತ್ತದೆ. ನಾಲಿಗೆ ಮೂರು ಆಯಾಮಗಳನ್ನು ಹೊಂದಿರುವ ಅಂಗ. ನಾಲಿಗೆ ಇಡಿಯಾಗಿ ಮೂರು ದಿಕ್ಕಿನಲ್ಲಿ ಚಲಿಸಬಲ್ಲದು. ಮುಮ್ಮುಖವಾಗಿ ಮೇಲಕ್ಕೆ ಚಲಿಸಿ ‘ಇ’ ಸ್ವರ ಉಚ್ಚಾರಕ್ಕೆ ಕಾರಣವಾಗಬಹುದು. ಹಿಂಭಾಗ ಮೇಲಕ್ಕೆ ಚಲಿಸಿ ‘ಉ’ ಸ್ವರ ಉಚ್ಚರಿಸಬಹುದು. ಮಧ್ಯೆ ಕೆಳಮುಖವಾಗಿ ಚಲಿಸಿದರೆ ‘ಅ’ ಸ್ವರ ಉಚ್ಚಾರವಾಗುತ್ತದೆ.

ಅಂತರ್ಗತವಾಗಿ ಅನೇಕ ಮಾಂಸಖಂಡಗಳು ನಾಲಿಗೆಯ ಯಾವುದೇ ರಚನೆಯನ್ನು ನಿರ್ಮಿಸುತ್ತವೆ. ಕೆಲವು ಮಾಂಸಖಂಡಗಳು ತುದಿನಾಲಗೆಯನ್ನು ಮಾತ್ರ ಮೇಲಕ್ಕೆ ಏರಿಸಬಹುದು ಅಥವಾ ಕೆಳಕ್ಕೆ ಇಳಿಸಬಹುದು. ಕೆಲವು ಮಾಂಸಖಂಡಗಳು ನಾಲಗೆಯ ಪಕ್ಕವನ್ನು ಮಾತ್ರ ಏರಿಸಿ ಮಧ್ಯ ದುಂಡಾದ ಕುಳಿಯನ್ನು ನಿರ್ಮಿಸಬಲ್ಲವು. ಸ, ಶ ಧ್ವನಿಗಳು ನಾಲಿಗೆಯ ಈ ರಚನೆಯಲ್ಲಿ ಉಚ್ಚಾರವಾಗುತ್ತವೆ.

ನಾಲಿಗೆಗೆ ಸಂಬಂಧಿಸಿದಂತೆ ಶಾರೀರಿಕವಾದ ವಿಭಜನೆ ಇಲ್ಲ. ಆದರೂ ಭಾಷೆಯ ಧ್ವನಿಗಳನ್ನು ವಿಭಜಿಸಲು ಅನುವಾಗುವಂತೆ ವಿಭಜಿಸಿದ್ದೇವೆ. ತುದಿನಾಲಿಗೆ ಕೆಳದಂತ ಪಂಕ್ತಿಗೆ ಹೊಂದಿಕೊಂಡು ವಿಶ್ರಾಂತ ಸ್ಥಿತಿಯಲ್ಲಿ ಇರುವಾಗ ಇದರ ಪ್ರಮುಖ ಭಾಗಗಳನ್ನು ಗುರುತಿಸಲಾಗಿದೆ.

ಪೂರ್ವ : ಕಠಿಣತಾಲುವಿಗೆ  ಎದುರಾಗಿರುವ ಭಾಗ

ಪಶ್ಚ : ಮೃದುತಾಲುವಿಗೆ ಎದುರಾಗಿರುವ ಭಾಗ

ಮಧ್ಯ : ಕಠಿಣತಾಲು ಮತ್ತು ಮೃದುತಾಲು ಸೇರುವೆಡೆಗೆ ಎದುರಾದ ಭಾಗ

ಫಲಕ : ದಂತ ಪಂಕ್ತಿಗೆ ಎದುರಾದ ಪೂರ್ವದ ಮುಂದಿನ ತೆಳುವಾದ ಭಾಗ

ತುದಿ : ನಾಲಿಗೆಯ ಮುಂದಿನ ತುದಿ ಭಾಗ

ಅಂಚು : ನಾಲಿಗೆಯ ಅಂಚುಭಾಗ

ಧ್ವನ್ಯಂಗಗಳು ಮತ್ತು ಉಚ್ಚಾರಣೆ

ಕರಣಗಳು ಸ್ಥಾನಗಳತ್ತ ಚಲಿಸಿ ಗಾಳಿಯ ಪ್ರವಾಹಕ್ಕೆ ತಡೆಯನ್ನು ಒಡ್ಡುತ್ತವೆ. ಆ ಮೂಲಕ ಭಾಷಿಕ ಧ್ವನಿ ಉತ್ಪತ್ತಿಗೆ ಕಾರಣವಾಗುತ್ತವೆ. ಕರಣ ಮತ್ತು ಸ್ಥಾನಗಳ ಸೇರ್ಪಡೆಯಿಂದ ಧ್ವನಿ ಉತ್ಪಾದನಾ ಕ್ರಿಯೆಯನ್ನು ಉಚ್ಚಾರಣೆ ಎನ್ನಲಾಗುತ್ತದೆ. ವಿವಿಧ ಕರಣ ಮತ್ತು ಸ್ಥಾನಗಳ ಸೇರ್ಪಡೆಯಿಂದ ಉಂಟಾಗುವ ವ್ಯತ್ಯಾಸ ಮತ್ತು ಸೇರ್ಪಡೆಯಲ್ಲಿ ಕಂಡು ಬರುವ ರಚನಾ ವಿನ್ಯಾಸ ಬದಲಾವಣೆಯಿಂದ ಉಚ್ಚಾರವಾಗುವ ಧ್ವನಿಯ ಸ್ವರೂಪಗಳು ಬದಲಾಗುತ್ತದೆ.

ಕೆಳದುಟಿ ಮೇಲ್ದುಟಿಯತ್ತ ಚಲಿಸಿ ಗಾಳಿಯ ಪ್ರವಾಹಕ್ಕೆ ಪೂರ್ತಿ ತಡೆ ಒಡ್ಡಬಹುದು ಅಥವಾ ತೀರ ಸಮೀಪಕ್ಕೆ ಬಂದು ಗಾಳಿಯ ಪ್ರವಾಹಕ್ಕೆ ಸಂಘರ್ಷ ಗುಣ ನೀಡಬಹುದು. ಕೆಳದುಟಿ ಮತ್ತೊಂದು ಸ್ಥಾನವಾದ ಮೇಲ್ದಂತ ಸ್ಥಾನಕ್ಕೆ ಚಲಿಸಿ ‘f, ‘v’ದಂತಹ ಘರ್ಷ ಧ್ವನಿಗಳಿಗೆ ಕಾರಣವಾಗ ಬಹುದು. ತುದಿನಾಲಿಗೆ ದಂತಸ್ಥಾನಕ್ಕೆ ತಲುಪಿ ಪೂರ್ತಿ ತಡೆ ನೀಡಿ ತ, ದ ಧ್ವನಿ ಉಚ್ಚರಿತವಾಗಬಹುದು ಅಥವಾ ಅತಿ ಹತ್ತಿರದಲ್ಲಿ ನಿಂತು ಇಂಗ್ಲಿಷಿನ (Thin, This ಪದಗಳು) ಆದಿ ಧ್ವನಿಗಳು ಉಚ್ಚಾರವಾಗಬಹುದು. ತುದಿನಾಲಿಗೆ ವರ್ತ್ಸ್ಯದ ಬಳಿ ನಿಂತು ಕಂಪಿಸಿ ‘ರ’ (ಕಂಪಿತ) ಧ್ವನಿ ಉಚ್ಚಾರ ವಾಗಬಹುದು. ತುದಿನಾಲಿಗೆ ಮೂರ್ಧನ್ಯ ಭಾಗಕ್ಕೆ ಹಿಂಭಾಗಕ್ಕೆ ಸಂಪೂರ್ಣ ತಡೆ ನೀಡಿ  ಬ, ಡ, ಣ ಧ್ವನಿ ಉತ್ಪಾದನೆಗೆ ಕಾರಣವಾಗಬಹುದು. ನಾಲಗೆ ಪಕ್ಕದ ಅಂಚುಗಳು ವರ್ತ್ಸ್ಯ ಭಾಗದಲ್ಲಿ ಮೇಲಕ್ಕೇರಿ ಮಧ್ಯೆ ಕುಳಿ ಉಂಟಾಗಿ ಧ್ವನಿ ಉಚ್ಚಾರವಾಗಬಹುದು. ಅಥವಾ ಮೂರ್ಧನ್ಯ ಭಾಗದಲ್ಲಿ  ಅಂಚುಗಳು ಮೇಲಕ್ಕೇರಿ ಮಧ್ಯ ದುಂಡಾಕೃತಿ ನಿರ್ಮಾಣವಾಗಿ ಮೂರ್ಧನ್ಯ ಘರ್ಷ ಷ ಧ್ವನಿ ಉಚ್ಚಾರವಾಗಬಹುದು. ನಾಲಗೆಯ ಮಧ್ಯಭಾಗ ಕರಣವಾಗಿ ಕಠಿಣತಾಲು ಸ್ಥಾನವಾಗಿ ಚ, ಜ, ತಡೆಯುಲಿಗಳು ಉಚ್ಚಾರವಾಗಬಹುದು. ಕ, ಗ, ಎಂಬ ಕಂಠ್ಯಧ್ವನಿ ಉಚ್ಚಾರಕ್ಕೆ ಮೃದುತಾಲು ಸ್ಥಾನವಾಗಿ ಪಶ್ಚಜಿಹ್ವೆ ಕರಣವಾಗಿ ಪೂರ್ಣ ತಡೆ ಸ್ಥಳೀಯ ಪ್ರವಾಹಕ್ಕೆ ಉಂಟಾಗುತ್ತದೆ. ಹ ಕಾರ ಗಲಕುಹರ ಭಿತ್ತಿಗಳ ಒಳಮುಖ ಚಲನೆಯಿಂದ ಘರ್ಷಸಹಿತ ಉಚ್ಚಾರವಾಗುತ್ತದೆ. ಈ ಎಲ್ಲ ಧ್ವನಿ ಉಚ್ಚಾರವಾಗಲು ಗಾಳಿಯ ಪ್ರವಾಹ ಕೇವಲ ಆಸ್ಯಕುಹರದ ಮುಖಾಂತರ ಚಲಿಸುತ್ತದೆ. ಈ ಧ್ವನಿ ಉಚ್ಚಾರಣೆಯಾಗುತ್ತಿದ್ದಂತೆ ಮೂಗಿನ ಮುಖಾಂತರ ಗಾಳಿ ಚಲಿಸಿದರೆ ಮ, ನ, ಣ ದಂತಹ ನಾಸಿಕ ಧ್ವನಿ ಉಚ್ಚಾರವಾಗುತ್ತದೆ. ಧ್ವನಿ ಉಚ್ಚಾರವಾದಾಗ ಧ್ವನಿ ಪಟಲ ಕಂಪನವಾದರೆ ಗ,ಜ,ಡ,ದ,ಬ,ಅ,ಇ, ಯಂತಹ ಘೋಷ ಧ್ವನಿ ಉಂಟಾಗುತ್ತವೆ, ಧ್ವನಿ ಪಟಲ ಕಂಪನವಾಗದಿದ್ದರೆ ಕ,ಚ,ಟ,ತ,ಪ ದಂತಹ ಅಘೋಷ ಧ್ವನಿ ಉಚ್ಚಾರವಾಗುತ್ತವೆ.

ಧ್ವನಿ ಪೆಟ್ಟಿಗೆಯಲ್ಲಿ ಗಾಳಿ ಪ್ರವಾಹ ಧ್ವನಿ ಪಟಲ ಉದ್ದಕ್ಕೆ ಚಲಿಸುವಾಗ ಉಲಿಗಳು ಉಂಟಾದರೆ ಸಾಧಾರಣವಾದ ಧ್ವನಿ ಉಚ್ಚಾರವಾಗುತ್ತದೆ. ಉಳಿದೆಡೆ ಪಟಲಗಳು ಮುಚ್ಚಿದ್ದು ಕೇವಲ ಅಂಟಿನಾಯಿಡ್ ಕಾರ್ಟಿಲೇಜ್‌ಗಳ ನಡುವೆ ಉಲಿದ್ವಾರ ಉಂಟಾದರೆ ಪಿಸುಧ್ವನಿ ಉತ್ಪತ್ತಿಯಾಗುತ್ತದೆ.

ಉಚ್ಚಾರಣೆಯ ಅಂಗಗಳನ್ನು ನಿಯಂತ್ರಿಸುವ ನರಗಳು

ಮೆದುಳು ಹಾಗೂ ತಲೆ ಕುತ್ತಿಗೆಯನ್ನು ಸೇರಿಸುವಂತೆ 12 ಕ್ರೇನಿಯಲ್ ನರಗಳಿವೆ. ಇದರಲ್ಲಿ ಕೆಲವು ವಾಹಕ ನರಗಳು. ಇವು ಮಾಂಸಖಂಡಗಳ ಕ್ರಿಯೆಯನ್ನು ನಿಯಂತ್ರಿಸುತ್ತವೆ. ಇನ್ನುಳಿದವು ಅಂಗಗಳು. ಮೆದುಳಿಗೆ ಸಂದೇಶ ಸಂಕೇತವಾಹಕ ಕಾರ್ಯವನ್ನು ಇವು ಮಾಡುತ್ತವೆ. ಕ್ರೇನಿಯಲ್ ನರಗಳಲ್ಲಿ ಏಳು ನರಗಳು ಉಚ್ಚಾರಣೆ ಮತ್ತು ಶ್ರವಣ ಕ್ರಿಯೆಯನ್ನು ನಿರ್ವಹಿಸುತ್ತವೆ.

ಟ್ರೈಜಿಮನ್ ನರ ದಂತಪಂಕ್ತಿ ಮಾಂಸಖಂಡಗಳು ಮತ್ತು ಮೃದುತಾಲು ಗಳನ್ನು ನಿಯಂತ್ರಿಸುವ ಮಾಂಸಖಂಡಗಳಲ್ಲೊಂದಕ್ಕೆ ವಾಹಕ ನರವಾಗಿದೆ. ಅಲ್ಲದೆ ಪಶ್ಚಜಿಹ್ವೆಯ 23 ಭಾಗ ಗ್ರಹಣ ನರ ಆಗಿ ಕಾರ್ಯ ನಿರ್ವಹಿಸುತ್ತದೆ.

ಮುಖನರವು ವಾಹಕ ನರವಾಗಿದ್ದು ತುಟಿಯ ಮಾಂಸಖಂಡಗಳಿಗೆ ಮಾಹಿತಿ ನೀಡುತ್ತದೆ.

ಶ್ರಾವ್ಯ ಅಥವ ಭೌತನರಗಳು ಕಿವಿಯ ಗ್ರಹಣಾಂಗಗಳು. ಗ್ಲಾಸೊ ಪ್ಯಾರೆಂಜಿಯಾ ನರ ಗಲಕುಹರದ ವಾಹಕನರವಾಗಿದೆ ಮತ್ತು ನಾಲಿಗೆಯ ಹಿಂಭಾಗದ ಗ್ರಹಣಾಂಗವೂ ಆಗಿದೆ.

ವೇಗಸ್ ನರವು ಗಲಕುಹರ ಮತ್ತು ಕಾಕಲ್ಯಕ್ಕೆ ಮಾಂಸಖಂಡಗಳನ್ನು ಒದಗಿಸುತ್ತದೆ.

ವಿಶೇಷ ನರಗಳು ಮೃದುತಾಲುವಿನ ಮಾಂಸಖಂಡಗಳ ಏರಿಕೆಯನ್ನು ನಿಯಂತ್ರಿಸುವ ಮಾಂಸಖಂಡಗಳ ವಾಹಕ ನರ.

ಹೈಪೊಗ್ಲಾಸ್ ನರವು ನಾಲಿಗೆಗೆ ಮಾಂಸಖಂಡ ಒದಗಿಸುವ ನರವಾಗಿದೆ. ಇದಲ್ಲದೆ ಅನೇಕ ಬೆನ್ನೆಲುಬಿನ ನರಗಳ ಪ್ರಸ್ತುತತೆ ಗಮನಾರ್ಹವಾಗಿದೆ. ಇವುಗಳಲ್ಲಿ ಕೆಲವು ಶ್ವಾಸೋಚ್ವಾಸ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಎದೆಯ ಮಾಂಸಖಂಡಗಳನ್ನು ನಿಯಂತ್ರಿಸುತ್ತವೆ.