“ಮಾತು ಬಲ್ಲವನಿಗೆ ಜಗಳವಿಲ್ಲ
ಊಟ ಬಲ್ಲವನಿಗೆ ರೋಗವಿಲ್ಲ.”

ಎಂಬ ನಾಣ್ಣುಡಿಯು ಮಾತನಾಡುವಾಗ ನಾವು ಬಳಸಬೇಕಾದ ಭಾಷೆಯ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು ಮತ್ತು ಮಾರ್ಗದರ್ಶನವನ್ನು ನೀಡುತ್ತದೆ. ಯಾವಾಗ? ಎಲ್ಲಿ? ಯಾರೊಡನೆ ಏಕೆ? ಹೇಗೆ? ಮಾತನಾಡಬೇಕೆಂಬ ಸೂಕ್ಷ್ಮ ಗಳನ್ನು ಅರಿತಿರುವವರನ್ನು ಮಾತು ಬಲ್ಲವರೆಂದು ಗುರುತಿಸುತ್ತಾರೆ.

ಪ್ರತಿನಿತ್ಯ ನಾನಾ ಸ್ಥಳಗಳಲ್ಲಿ ನಾವು ಮಾತಿನ ಮೂಲಕ ವ್ಯವಹರಿಸುತ್ತೇವೆ. ಕೌಟುಂಬಿಕ ನೆಲೆಯಾದ ಮನೆಯಲ್ಲಿ; ಸಾರ್ವಜನಿಕ ಸಂಸ್ಥೆಗಳಾದ ಶಾಲಾ, ಕಾಲೇಜು, ಆಸ್ಪತ್ರೆ ಹಾಗೂ ಬಹು ಬಗೆಯ ಕಛೇರಿಗಳಲ್ಲಿ; ದುಡಿಮೆಯನ್ನು ಮಾಡುವಂತಹ ನೆಲೆಗಳಲ್ಲಿ; ಸಿನಿಮಾ, ನಾಟಕ, ನೃತ್ಯ ಮುಂತಾದ ಮನರಂಜನೆಯ ಮಂದಿರಗಳಲ್ಲಿ; ಮದುವೆಯ ಮಂಟಪಗಳಲ್ಲಿ; ದೇಗುಲಗಳಲ್ಲಿ; ಅಂಗಡಿ ಮುಂಗಟ್ಟುಗಳಲ್ಲಿ; ಬೀದಿಗಳಲ್ಲಿ; ಸಂಚಾರ ಮಾಡುವ ವಾಹನಗಳಲ್ಲಿ; ಒಟ್ಟಿನಲ್ಲಿ ಹೇಳುವುದಾದರೆ, ಎಲ್ಲೆಲ್ಲಿ ಮಾನವರ ಚಟುವಟಿಕೆಗಳು ಇರುತ್ತವೆಯೋ ಅಲ್ಲೆಲ್ಲಾ ಇತರರೊಡನೆ ಮಾತನಾಡುತ್ತಿರುತ್ತೇವೆ.

ಒಂದು ಅಚ್ಚರಿ ಸಂಗತಿಯೆಂದರೆ ಎಲ್ಲರೊಡನೆಯೂ, ಎಲ್ಲಾ ಸ್ಥಳಗಳಲ್ಲಿಯೂ ‘ಒಂದೇ ಬಗೆಯ ಮಾತಿನ ಶೈಲಿಯನ್ನು’ ನಾವು ಬಳಸುವು ದಿಲ್ಲ. ಆಯಾಯ ಸಂದರ್ಭಕ್ಕೆ ತಕ್ಕಂತೆ ವಿವಿಧ ಬಗೆಯ ಮಾತುಗಳನ್ನು ಬಳಸುತ್ತೇವೆ. ಆದ್ದರಿಂದ ‘ಮಾತಿನ ಸಂದರ್ಭ’ ಯಾವುದೆಂಬುದು ಬಹು ಮುಖ್ಯವಾಗುತ್ತದೆ.

ಸಾಮಾಜಿಕ ಭಾಷಾ ವಿಜ್ಞಾನಿಗಳು ಕ್ರಿ.ಶ.1960 ರ ದಶಕದಿಂದ ಈ ನಿಟ್ಟಿನಲ್ಲಿ ಅನೇಕ ಸಂಶೋಧನೆಗಳನ್ನು ಮಾಡುತ್ತಾ, ಮಾತಿನ ಸಂದರ್ಭದಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶಗಳನ್ನು ಈ ಕೆಳಕಂಡಂತೆ ಗುರುತಿಸಿದ್ದಾರೆ.

1. ಸ್ಥಳ, ಕಾಲ ಮತ್ತು ಆವರಣ.

‘ಆವರಣ’ ಎಂದರೆ ಸುತ್ತಮುತ್ತಲಿನ ಭೌತಿಕ ಮತ್ತು ಸಾಂಸ್ಕೃತಿಕ ಸನ್ನಿವೇಶ.

2. ಮಾತಿನಲ್ಲಿ ಭಾಗಿಗಳಾಗುವ ವ್ಯಕ್ತಿಗಳು

ಅ. ಮಾತನಾಡುವವರು, ಆ. ಕೇಳುವವರು (ಯಾರನ್ನು ಉದ್ದೇಶಿಸಿ ಮಾತನಾಡಲಾಗುತ್ತದೆಯೋ ಅವರು) ಇ. ಆಡುವ ಮಾತುಗಳನ್ನು ಕೇಳಿಸಿಕೊಳ್ಳುವ ಇತರ ವ್ಯಕ್ತಿಗಳು.

3. ಮಾತಿನಲ್ಲಿ ಭಾಗಿಗಳಾದ ವ್ಯಕ್ತಿಗಳ ಸಾಮಾಜಿಕ ಸ್ಥಾನಮಾನಗಳು. ಲಿಂಗ, ವಯಸ್ಸು, ಜಾತಿ, ಮತ, ಆರ್ಥಿಕ ಸ್ಥಿತಿ, ಶಿಕ್ಷಣ, ಅಧಿಕಾರ, ದೈಹಿಕ ಸಾಮರ್ಥ್ಯ.

4. ಮಾತಿನಲ್ಲಿ ಭಾಗಿಗಳಾದ ವ್ಯಕ್ತಿಗಳ ಪರಸ್ಪರ ಸಂಬಂಧಗಳು, ನೆಂಟರು, ಸ್ನೇಹಿತರು, ಪರಿಚಿತರು, ಅಪರಿಚಿತರು, ಹಗೆಗಳು, ಗುರು ಶಿಷ್ಯರು, ಯಜಮಾನ, ಸೇವಕರು, ಅಧಿಕಾರಿ ನೌಕರರು, ಗಂಡ ಹೆಂಡತಿ, ವ್ಯಾಪಾರಿ ಗ್ರಾಹಕರು, ಉದ್ಯೋಗಿ ಸಾರ್ವಜನಿಕರು, ತಂದೆ ತಾಯಿ ಮಕ್ಕಳು.

5. ಮಾತನಾಡುತ್ತಿರುವುದರ ಉದ್ದೇಶ ಅಥವಾ ಮಾತಿನ ನಿಯೋಗಗಳು.

6. ಮಾತಿನಲ್ಲಿ ಪ್ರಸ್ತಾಪಗೊಳ್ಳುವ ವಿಷಯ.

7. ವಿಷಯವನ್ನು ಅಭಿವ್ಯಕ್ತಿಸುತ್ತಿರುವ ಮಾತಿನ ರೂಪಗಳು, ಶಿಷ್ಟಭಾಷೆ, ಉಪಭಾಷೆ, ನಾಗರಿಕ ಭಾಷೆ, ಗ್ರಾಮೀಣ ಭಾಷೆ, ಗೂಢ ಭಾಷೆ ಇತ್ಯಾದಿ.

8. ಮಾತುಗಳಿಗೆ ಪೂರಕವಾಗಿ ಒದಗಿ ಬರುವ ವ್ಯಕ್ತಿಯ ಆಂಗಿಕ ಹಾವಭಾವಗಳು ಮತ್ತು ಚಲನವಲನಗಳು.

9. ಮಾತನಾಡುವಾಗ ಕೇಳಿ ಬರುವ ಮಾತಿನ ಧ್ವನಿಯ ಏರಿಳಿತ.

10. ಮಾತಿನಲ್ಲಿ ಭಾಗಿಗಳಾದವರು ತಮ್ಮ ಉದ್ದೇಶಿತ ಗುರಿ ಸಾಧನೆಗಾಗಿ ಬಳಸುವ ತಂತ್ರ ಅಥವಾ ವಿಧಾನ.

11. ಮಾತಿನಿಂದ ಉಂಟಾಗುವ ಪರಿಣಾಮಗಳು.

ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಒಗ್ಗೂಡಿಸಿ, ಮಾತಿನ ಸಂದರ್ಭದ ನೆಲೆಯಲ್ಲಿ ಭಾಷೆಯು ಪಡೆಯುವ ಅರ್ಥವನ್ನು ತಿಳಿಯಬಹುದು.  ಶಬ್ದ ಗಳಿಗಿರುವ ಶಬ್ದಕೋಶದ ಅರ್ಥಕ್ಕಿಂತ ಮಿಗಿಲಾಗಿ, ಬಳಕೆಯ ಸಂದರ್ಭದಲ್ಲಿ ಶಬ್ದಗಳು ಪಡೆಯುವ ವಸ್ತುನಿಷ್ಠವಾದ ಹಾಗೂ ಭಾವನಾತ್ಮಕವಾದ ಅರ್ಥ ಗಳನ್ನು ಸ್ಪಷ್ಟವಾಗಿ ಗ್ರಹಿಸಬಹುದು. ಮಾತಿನ ಸಂದರ್ಭದಲ್ಲಿ ಪ್ರಯೋಗಗೊಳ್ಳುವ ಭಾಷೆಯು ಮಾತನಾಡುವವರು ಪರಸ್ಪರ ಹೊಂದಿರುವ ಭಾವನೆಗಳನ್ನು ಮತ್ತು ದೃಷ್ಠಿಕೋನಗಳನ್ನು ಪ್ರತಿಫಲಿಸುತ್ತದೆ. ಭಾಗಿಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆಯೂ ಬೆಳಕನ್ನು ಚೆಲ್ಲುತ್ತದೆ.

. ಅಗತ್ಯಗಳನ್ನು ಡೇರಿಸಿಕೊಳ್ಳುವುದು.

ಉದಾ : ಅಂಗಡಿಯೊಂದರಲ್ಲಿ ತರಕಾರಿಯನ್ನು ಕೊಂಡುಕೊಳ್ಳುವ ಸಂದರ್ಭ

ಗಿರಾಕಿ : ಹೆಂಗಪ್ಪ ಮೂಲಂಗಿ?

ವ್ಯಾಪಾರಿ : ಕೆ.ಜಿ. ಮೂರು ರೂಪಾಯಿ, ಸ್ವಾಮಿ

ಗಿರಾಕಿ : ಒಂದು ಕೆ.ಜಿ. ಕೊಡಿ

(ಗಿರಾಕಿಯ ಅಗತ್ಯವನ್ನು ವ್ಯಾಪಾರಿಯು ಮೂಲಂಗಿಯನ್ನು ತೂಗಿ ಕೊಡುವುದರ ಮೂಲಕ ಈಡೇರಿಸುತ್ತಾನೆ)

. ಅನ್ಯರ ವರ್ತನೆಗಳನ್ನು ನಿಯಂತ್ರಿಸುವುದು.

ಉದಾ : ವಿದ್ಯಾರ್ಥಿಗಳು ಗದ್ದಲದಲ್ಲಿ ಮಗ್ನರಾಗಿದ್ದಾಗ, ತರಗತಿಯೊಳಕ್ಕೆ ಬಂದ ಅಧ್ಯಾಪಕರು, ಅವರನ್ನು ನಿಂಯತ್ರಿಸುವ ಸಂದರ್ಭ.

ಅಧ್ಯಾಪಕರು : (ಡಸ್ಟರನ್ನು ಟೇಬಲ್ಲಿನ ಮೇಲೆ ಜೋರಾಗಿ ಬಡಿದು, ಎತ್ತರದ ಧ್ವನಿಯಲ್ಲಿ)

ಏನಿದು ಗಲಾಟೆ? ಇದೇನ್ ಕ್ಲಾಸ್ ರೂಮೋ? ಸಂತೇನೋ? …….

(ವಿದ್ಯಾರ್ಥಿಗಳು ತಕ್ಷಣ ಮಾತನ್ನು ನಿಲ್ಲಿಸಿ, ಶಿಸ್ತಿನಿಂದ ವರ್ತಿಸ ತೊಡಗುತ್ತಾರೆ.)

. ಅನ್ಯರ ಜೊತೆ ಸಂಪರ್ಕ ಪಡೆಯುವುದು.

ಉದಾ : ಬಸ್‌ಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯುತ್ತಾ, ಕುಳಿತಿರುವಾಗ, ಪಕ್ಕದಲ್ಲಿರುವ ಅಪರಿಚಿತ ವ್ಯಕ್ತಿಯನ್ನು ಪರಿಚಯಿಸಿಕೊಳ್ಳುವ ಸಂದರ್ಭ.

ವ್ಯಕ್ತಿ – 1 : ನೀವು ಯಾವ ಊರಿಗೆ?

ವ್ಯಕ್ತಿ – 2 : ಮಂಡ್ಯಕ್ಕೆ

ವ್ಯಕ್ತಿ – 1 : ನಾನೂ ಅಲ್ಲಿಗೇ ಬರ್ಬೇಕು. ಏನೋ ಸ್ವಾಮಿ, ಈ ಬಸ್ ಕಾಯೋದರಲ್ಲೇ ನಮ್ಮ ಜೀವಮಾನವೆಲ್ಲಾ ಮುಗ್ದೋಯ್ತು! ………. ಮಂಡ್ಯಕ್ಕೆ ಬರ್ತಾಯಿದ್ದೀರೋ? ಇನ್ನು ಮುಂದಕ್ಕೆ ಎಲ್ಲಾದ್ರೂ ಹೋಗ್ಬೇಕೋ?

ವ್ಯಕ್ತಿ – 2 : ಮಂಡ್ಯದ ಹತ್ತಿರ ಕೊತ್ತತ್ತಿಗೆ ಹೋಗ್ಬೇಕು,

(ಹೀಗೆ ಮಾತು ಮುಂದುವರಿದಂತೆಲ್ಲಾ ವ್ಯಕ್ತಿ – 2 ರ ವಿವರಗಳನ್ನೆಲ್ಲಾ ವ್ಯಕ್ತಿ – 1 ತಿಳಿದುಕೊಳ್ಳುತ್ತಾ, ತನ್ನ ವಿವರಗಳನ್ನು ತಿಳಿಸುತ್ತಾನೆ. ಅವರಿಬ್ಬರೂ ಪ್ರಯಾಣ ಕಾಲದಲ್ಲಿ ಸಹ ಪ್ರಯಾಣಿಕರಾಗಿ ಸಂಪರ್ಕ ಹೊಂದುತ್ತಾರೆ)

. ವ್ಯಕ್ತಿತ್ವವನ್ನು ಪ್ರದರ್ಶಿಸುವುದು.

ಉದಾ: ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಕುರಿತ ಚರ್ಚೆ ಯಲ್ಲಿ ಭಾಗಿಗಳಾಗಿದ್ದವರು, ತಮ್ಮದೇ ಆದ ವಿಚಾರಗಳನ್ನು ಅಭಿವ್ಯಕ್ತಿಸುತ್ತಿರುವ ಸಂದರ್ಭ.

ವ್ಯಕ್ತಿ – 1 : ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಉತ್ತಮಪಡಿಸಬೇಕಾದರೆ, ವೃತ್ತಿಪರ ಶಿಕ್ಷಣವನ್ನು ಎಲ್ಲಾ ಕಡೆ ಜಾರಿಗೆ ತರಬೇಕು. ಈ ದಿಕ್ಕಿನಲ್ಲಿ ಮೊದಲ ಹೆಜ್ಜೆ ಎಂದರೆ ಈಗಿರುವ ಸಾಮಾನ್ಯ ಪದವಿ ನೀಡುತ್ತಿರುವ ಪ್ರಥಮ ದರ್ಜೆ ಕಾಲೇಜುಗಳನ್ನೆಲ್ಲಾ ಈ ಕ್ಷಣದಿಂದಲೇ ಮುಚ್ಚಬೇಕು.

ವ್ಯಕ್ತಿ – 2 : ರೋಗ ಬಂದರೆ, ರೋಗಿಯನ್ನೇ ಕೊಲ್ಲಬೇಕು ಎಂಬಂತಿದೆ ನಿಮ್ಮ ವಾದ. ಕಾಲೇಜುಗಳನ್ನು ಮುಚ್ಚುವುದು ಸರಿಯಲ್ಲ. ಶಿಕ್ಷಣ ನೀಡುವ ಕ್ರಮದಲ್ಲಿ ಸುಧಾರಣೆಗಳನ್ನು ತರಬೇಕು.

(ಹೀಗೆ ಅಲ್ಲಿದ್ದವರೆಲ್ಲಾ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವುದರ ಮೂಲಕವೇ, ತಮ್ಮ ವ್ಯಕ್ತಿತ್ವದ ವಿಶೇಷವನ್ನು ಪ್ರಕಟಿಸುತ್ತಾರೆ)

. ನಾನಾ ಬಗೆಯ ವಿಷಯಗಳನ್ನು ಪರಿಶೋಧಿಸುವುದು.

ಉದಾ: ಗ್ರಾಮವೊಂದರಲ್ಲಿ ಸಾಮಾಜಿಕ ಸಂಗತಿಗಳನ್ನು ಪರಿಶೋಧಿಸಿ, ಸಂಗ್ರಹಿಸುವ ಸಂದರ್ಭ.

ಸಂಶೋಧಕರು : ನಿಮ್ಮೂರಿನ ಜನಸಂಖ್ಯೆ ಎಷ್ಟು?

ವಕ್ತೃ : ಎರಡು ಸಾವಿರ.

ಸಂಶೋಧಕರು : ಜನರ ಪ್ರಮುಖ ವೃತ್ತಿ ಯಾವುದು?

ವಕ್ತೃ : ವ್ಯವಸಾಯ.

ಸಂಶೋಧಕರು : ಯಾವ ಯಾವ ಬೆಳೆ ಬೆಳೀತೀರಿ?

ವಕ್ತೃ : ಕಬ್ಬು, ಭತ್ತ, ರಾಗಿ.

(ಹೀಗೆ ಪ್ರಶ್ನೆ-ಉತ್ತರಗಳು ಮುಂದುವರಿಯುತ್ತಾ, ಆ ಗ್ರಾಮದಲ್ಲಿನ ಜಾತಿ ವ್ಯವಸ್ಥೆ, ಲಭಿಸುವ ಶಿಕ್ಷಣ ವ್ಯವಸ್ಥೆ, ಆರ್ಥಿಕ ಸ್ಥಿತಿಗತಿಗಳು ಮುಂತಾದ ಅಂಶಗಳನ್ನೆಲ್ಲಾ ಸಂಶೋಧಕರು ಸಂಗ್ರಹಿಸುತ್ತಾರೆ)

. ಹೊಸ ಮಾಹಿತಿಗಳನ್ನು ಇತರರಿಗೆ ತಿಳಿಸುವುದು

ಉದಾ: ಆರೋಗ್ಯ ಇಲಾಖೆಯ ಕಾರ್ಯಕರ್ತರೊಬ್ಬರು ಸಭೆಯೊಂದರಲ್ಲಿ ಏಡ್ಸ್ ರೋಗದ ಬಗ್ಗೆ ಮಾಹಿತಿಗಳನ್ನು ನೀಡುತ್ತಿರುವ ಸಂದರ್ಭ.

ಕಾರ್ಯಕರ್ತ: ನೋಡಿ, ಈ ರೋಗಕ್ಕೆ ಮದ್ದಿಲ್ಲ. ಈ ರೋಗಕ್ಕೆ ತುತ್ತಾದ ವ್ಯಕ್ತಿಗೆ ಸಾವು ಕಟ್ಟಿಟ್ಟ ಬುತ್ತಿ. ಇದು ಪ್ರಮುಖವಾಗಿ ಅಕ್ರಮ ಲೈಂಗಿಕ ಸಂಬಂಧದಿಂದ ಬರುತ್ತದೆ. …………

(ಹೀಗೆ ಮಾತನ್ನು ಮುಂದುವರಿಸುತ್ತಾ, ರೋಗ ಬರುವುದಕ್ಕೆ ಪ್ರಮುಖ ಕಾರಣಗಳು, ರೋಗದ ಲಕ್ಷಣಗಳು, ರೋಗ ಬರದಂತೆ ಜನತೆ ತಾಳಬೇಕಾದ ಎಚ್ಚರಿಕೆಯ ಬಗ್ಗೆ ಮಾಹಿತಿಗಳನ್ನು ನೀಡುತ್ತಾರೆ.)

ಮಾತಿನ ಸಂದರ್ಭ 1

ಸಾಮಾಜಿಕ ನೆಲೆಯಲ್ಲಿ ಮಾತುಗಳು ಪ್ರಯೋಗಗೊಂಡಾಗ ಪಡೆಯುವ ವಿಭಿನ್ನವಾದ ಅರ್ಥಗಳನ್ನು ಈ ಕೆಳಕಂಡ ಉದಾಹರಣೆಯಿಂದ ತಿಳಿಯ ಬಹುದು.

“ಏನೋ ಬೋಳಿಮಗ್ನೆ, ಈಗ ಬತ್ತಾಯಿದ್ದೀಯ”

ಕೆಲಸಕ್ಕೆ ತಡವಾಗಿ ಬರುತ್ತಿರುವ ಆಳನ್ನು ಕುರಿತು ಯಜಮಾನನು ಆಕ್ರೋಶದ ಧ್ವನಿಯಲ್ಲಿ ನುಡಿದಾಗ, ಈ ಮಾತುಗಳು ಬಯ್ಗುಳದ ಅರ್ಥವನ್ನು ಹೊಂದುತ್ತವೆ. ಇದರ ಜೊತೆಗೆ ಯಜಮಾನನು ಆರ್ಥಿಕ ಉತ್ತಮ ಸ್ಥಿತಿಯಲ್ಲಿರುವುದನ್ನು ಮತ್ತು ಸಾಮಾಜಿಕವಾಗಿ ಆಳಿಗಿಂತ ಮೇಲಿನ ಸ್ಥಾನದಲ್ಲಿರುವುದನ್ನು ಸೂಚಿಸುತ್ತಿವೆ. ಆಳನ್ನು ಕೀಳಾಗಿ ಕಾಣುವ ಬಂಡವಾಳಶಾಹಿ ಸಂಸ್ಕೃತಿಯ ಅಹಂಭಾವವನ್ನು ನಿರ್ದೇಶಿಸುತ್ತಿವೆ.

ಮಾತಿನ ಸಂದರ್ಭ 2

ಭೋಜನಕ್ಕೆ ಆಹ್ವಾನವನ್ನು ಪಡೆದಿದ್ದ ಗೆಳೆಯನು ತಡವಾಗಿ ಬರುತ್ತಿರುವುದನ್ನು ಕಂಡು, ಆತನಿಗಾಗಿ ಕಾದು ಕಾದು ಬೇಸರಗೊಂಡಿದ್ದ ವ್ಯಕ್ತಿಯೊಬ್ಬನು ಈ ಮಾತುಗಳನ್ನಾಡಿದಾಗ, ಅವರಿಬ್ಬರ ನಡುವಣ ಗೆಳೆತನದ ಆತ್ಮೀಯತೆಗೆ ಸಂಕೇತವಾಗುತ್ತವೆ. ಬಯ್ಗುಳದ ಛಾಯೆ ಸಂಪೂರ್ಣ ಮರೆಯಾಗಿ, ಬಯ್ಗುಳದ ಶಬ್ದವೇ ಸ್ನೇಹದ ಸಂಬಂಧವನ್ನು ಎತ್ತಿತೋರಿಸುವ ಮಹತ್ವವನ್ನು ಪಡೆಯುತ್ತದೆ. ಈ ಇಬ್ಬರು ಗೆಳೆಯರ ಸಮಾನವಾದ ಸಾಮಾಜಿಕ ಅಂತಸ್ತನ್ನು ಈ ಮಾತುಗಳು ಸೂಚಿಸುತ್ತವೆ.

ಭಾಷೆಯಲ್ಲಿನ ಯಾವುದೇ ಶಬ್ದಗಳು ತಮಗೆ ತಾವೇ ‘ಕೆಟ್ಟದ್ದು ಅಥವಾ ಒಳ್ಳೆಯದು’ ಆಗಿರುವುದಿಲ್ಲ. ಪ್ರಯೋಗಿಸುವ ಸಂದರ್ಭದ ಹಿನ್ನೆಲೆಯಲ್ಲಿ ಶಬ್ದದ ಅರ್ಥ ನಿರ್ಧಾರಿತವಾಗುತ್ತದೆ. ಶಬ್ದಗಳ ಅರ್ಥದ ಔಚಿತ್ಯವು ಪ್ರಯೋಗಿಸುವ ವ್ಯಕ್ತಿಗಳ ವ್ಯಕ್ತಿತ್ವ ಮತ್ತು ಹೊಣೆಗಾರಿಕೆಯೊಡನೆ ಸಂಗತ ಗೊಂಡಿರುತ್ತದೆ.

ಯಾವುದೇ ಮಾತಿನ ಸಂದರ್ಭದಲ್ಲಿ ನಾವು ಪ್ರಮುಖವಾಗಿ ಗಮನಿಸ ಬೇಕಾದ ಮತ್ತೊಂದು ಅಂಶವೆಂದರೆ ಮಾತಿನಲ್ಲಿ ಭಾಗಿಗಳಾದ ವ್ಯಕ್ತಿಗಳು ಯಾವುದೇ ಉದ್ದೇಶವಿಲ್ಲದೆ, ಯಾವುದೇ ರೀತಿಯನ್ನು ಅನುಸರಿಸದೆ, ಏನನ್ನೋ ಬಾಯಿಗೆ ಬಂದಂತೆ ಮಾತವಾಡುವಂತಿಲ್ಲ. ಏಕೆಂದರೆ ಯಾವುದೇ ಒಂದು ಮಾತಿನ ಸಮುದಾಯದಲ್ಲಿ ಮಾತಿನ ಚಟುವಟಿಕೆಯು ನಿಯಮ ಬದ್ದವಾಗಿ ರೂಪುಗೊಂಡಿರುತ್ತದೆ. ಭಾಷಿಕ ರಚನೆಗಳಿಗೆ ವ್ಯಾಕರಣ ನಿಯಮಗಳು ಇರುವಂತೆಯೇ, ಮಾತನಾಡುವಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ನಿಯಮಗಳಿರುತ್ತವೆ. ಆದ್ದರಿಂದಲೇ ಯಾವುದೇ ವ್ಯಕ್ತಿ ಭಾಷೆಯ ಮೂಲಕ ವ್ಯವಹರಿಸುವಾಗ ಮಾತಿನ ಸಮುದಾಯದ ಭಾಷೆಯ ನಿಯಮಗಳನ್ನು ಮತ್ತು ವ್ಯಕ್ತಿಗಳ ಭಾಷಿಕ ವರ್ತನೆಗಳನ್ನು ಚೆನ್ನಾಗಿ ಅರಿತಿರಬೇಕು.

ಉದಾಹರಣೆ:

“ರಾಮನು ಕಾಡಿಗೆ ಹೋದಳು. ಅವನೊಡನೆ ಸೀತೆಯೂ ಕಾಡಿಗೆ ಹೋದನು.

ಈ ಮೇಲ್ಕಂಡ ವಾಕ್ಯಗಳನ್ನು ಓದುತ್ತಿದ್ದಂತೆಯೇ ಅಥವಾ ಕೇಳು ತ್ತಿದ್ದಂತೆಯೇ ವಾಕ್ಯದ ರಚನೆಯಲ್ಲಿರುವ ದೋಷವನ್ನು ಕನ್ನಡ ಭಾಷೆಯನ್ನು ಅರಿತಿರುವ ಪ್ರತಿಯೊಬ್ಬರು ಗುರುತಿಸುತ್ತಾರೆ. ವಾಕ್ಯದಲ್ಲಿನ ನಾಮಪದಗಳ ಲಿಂಗಕ್ಕೆ ಅನುಗುಣವಾಗಿಯೇ ಕ್ರಿಯಾಪದವು ಪ್ರಯೋಗಗೊಳ್ಳಬೇಕೆಂಬುದು ವ್ಯಾಕರಣದ ನಿಯಮ ಆದ್ದರಿಂದ ಮೇಲ್ಕಂಡ ವಾಕ್ಯಗಳು

“ರಾಮನು ಕಾಡಿನ ಹೋದನು. ಅವನೊಡನೆ ಸೀತೆಯೂ ಕಾಡಿಗೆ ಹೋದಳು”. ಎಂದು ಪ್ರಯೋಗಗೊಳ್ಳಬೇಕು.

ಭಾಷಿಕ ರಚನೆಗೆ ನಿರ್ದಿಷ್ಟವಾದ ನಿಯಮಗಳು ಮತ್ತು ಲಕ್ಷಣಗಳು ಇರುವಂತೆಯೇ, ಯಾವ ಯಾವ ಬಗೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ, ಯಾವ ಬಗೆಯ ಭಾಷೆಯನ್ನು, ಯಾರು, ಯಾರಿಗೆ ಬಳಸಬೇಕೆಂಬುದರ ಬಗ್ಗೆಯೂ ಅಲಿಖಿತ ನಿಯಮಗಳಿರುತ್ತವೆ. ಈ ನಿಯಮಗಳನ್ನು ಮಾತಿನ ಸಮುದಾಯದ ಸದಸ್ಯರೇ ರೂಪಿಸಿಕೊಂಡು, ಪ್ರತಿ ನಿತ್ಯ ತಮ್ಮ ಪರಸ್ಪರ ಕ್ರಿಯಾತ್ಮಕವಾದ ವ್ಯವಹಾರಗಳಲ್ಲಿ ಸಂದರ್ಭಕ್ಕೆ ಸೂಕ್ತವಾದ ಭಾಷೆಯನ್ನು ಬಳಸುತ್ತಾರೆ.

ಪರಸ್ಪರ ಭೇಟಿಯಾದಾಗ, ಕುಶಲ ಪ್ರಶ್ನೆಗಳನ್ನು ಕೇಳುವಾಗ, ಅಭಿನಂದಿಸುವಾಗ, ಬೀಳ್ಕೊಳ್ಳುವಾಗ, ನೋವು ನಲಿವಿನ ವಿಷಯಗಳನ್ನು ತಿಳಿಸುವಾಗ, ಪ್ರಮುಖವಾದ ವಿಷಯಗಳನ್ನು ಚರ್ಚಿಸುವಾಗ, ಹೀಗೆ ಇಂತಹ ಹತ್ತಾರು ಬಗೆಯ ಮಾತಿನ ಸಂದರ್ಭಗಳಲ್ಲಿ ಯಾವ ಬಗೆಯ ಮಾತು ಗಳನ್ನು ಆಡಬೇಕೆಂಬುದು ಪೂರ್ವ ನಿರ್ಧಾರಿತವಾಗಿರುತ್ತದೆ. ಇದೇ ರೀತಿ ಕೌಟುಂಬಿಕ ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಜಾತಿ ಮತ ಸಂಬಂಧವಾದ ಸಾಂಪ್ರದಾಯಿಕ ಆಚರಣೆಗಳಲ್ಲಿ, ಭೋಜನ ಕೂಟಗಳಲ್ಲಿ ಮತ್ತು ಭಾಷೆ ಜೊತೆಗೂಡಿರುವ ಯಾವುದೇ ಸಂದರ್ಭಗಳಲ್ಲಿ  ಯಾವ ಬಗೆಯ ಮಾತುಗಳನ್ನು ಆಡಬೇಕೆಂಬುದನ್ನು ಮಾತಿನ ಸಮುದಾಯದ ಸದಸ್ಯರು ಚೆನ್ನಾಗಿ ಬಲ್ಲವರಾಗಿರುತ್ತಾರೆ.

ಯಾವುದೇ ಮಾತಿನ ಸಂದರ್ಭದಲ್ಲಿ ಕೇಳಿ ಬರುತ್ತಿರುವ ಪದಗಳ ಮೂಲಕವಾಗಿಯೇ, ಮಾತಿನಲ್ಲಿ ಭಾಗಿಗಳಾಗಿರುವ ವ್ಯಕ್ತಿಗಳ ಸಾಮಾಜಿಕ  ಅಂತಸ್ತನ್ನು, ಹೊಣೆಗಾರಿಕೆಯನ್ನು ಮತ್ತು ಸಾಂಸ್ಕೃತಿಕ ವ್ಯಕ್ತಿತ್ವವನ್ನು ತಿಳಿಯ ಬಹುದು.

ಅಜ್ಜ, ಅಜ್ಜಿ, ತಂದೆ ತಾಯಿ, ಅಣ್ಣ ತಮ್ಮ, ಅಕ್ಕ ತಂಗಿ, ಅತ್ತೆ ಮಾವ, ಹೆಂಡತಿ ಮಕ್ಕಳು ಮತ್ತು ಇತರ ಬಂಧುಗಳೊಡನೆ ಮಾತನಾಡುವಾಗ ವಿವಿಧ ಬಗೆಯ ಸಂಬೋಧನೆಯ ಪದಗಳನ್ನು ಮತ್ತು ಗೌರವ ಸೂಚಕವಾಗಿ ಕೆಲವರಿಗೆ ಬಹುವಚನಗಳನ್ನು ಪ್ರಯೋಗಿಸಲಾಗುತ್ತದೆ. ಕೌಟುಂಬಿಕ ನೆಲೆಯಲ್ಲಿ ಪ್ರಯೋಗಗೊಳ್ಳುವ ಭಾಷೆಯು ಕುಟುಂಬದ ವ್ಯಕ್ತಿಗಳ ವಯಸ್ಸು, ಲಿಂಗ ಮತ್ತು ಕುಟುಂಬದಲ್ಲಿ ಅವರು ಹೊಂದಿರುವ ಜವಾಬ್ದಾರಿ ಸ್ಥಾನಕ್ಕೆ ಅನುಗುಣ ವಾಗಿರುತ್ತದೆ.

ಸಾರ್ವಜನಿಕ ಕ್ಷೇತ್ರಗಳಾದ ಸಂಘ ಸಂಸ್ಥೆಗಳಲ್ಲಿ ಮತ್ತು ಕಛೇರಿಗಳಲ್ಲಿ ವ್ಯಕ್ತಿಗಳು ಹೊಂದಿರುವ ಅಧಿಕಾರದ ಸ್ಥಾನವೇ ಮುಖ್ಯವಾಗಿ ‘ಅಲ್ಲಿ ಪ್ರಯೋಗಗೊಳ್ಳುವ ಭಾಷೆಯನ್ನು’ ನಿಯಂತ್ರಿಸುತ್ತದೆ. ಉನ್ನತ ಅಧಿಕಾರ ದಲ್ಲಿರುವವರು ತಮ್ಮ ಕೈ ಕೆಳಗಿನ ನೌಕರರನ್ನು, ಅವರ ವಯಸ್ಸಿನ ಹಿರಿತನ ವನ್ನು ಅಷ್ಟಾಗಿ ಗಮನಿಸದೆ, ಸಾಮಾನ್ಯವಾಗಿ ಏಕವಚನದಲ್ಲಿ ಸಂಬೋಧಿಸುತ್ತಾರೆ. ಅಧಿಕಾರದ ಅಂತರ ಕಡಿಮೆಯಾದಷ್ಟು ಏಕವಚನ ಸ್ಥಾನದಲ್ಲಿ ಬಹುವಚನ ಪ್ರಯೋಗಗೊಳ್ಳುತ್ತದೆ. ಆದರೆ ಉನ್ನತ ಅಧಿಕಾರದಲ್ಲಿರುವವರನ್ನು ಇತರರು ಬಹುವಚನದಲ್ಲೇ ಸಂಬೋಧಿಸುತ್ತಾರೆ.

ಪ್ರತಿಯೊಂದು ಮಾತಿನ ಸಮುದಾಯವು ತನ್ನದೆ ಆದ ರೀತಿಯಲ್ಲಿ ‘ಮಾತನಾಡುವಿಕೆಯ ನಿಯಮ’ಗಳನ್ನು ರೂಪಿಸಿಕೊಂಡಿರುತ್ತದೆ. ಈ ನಿಯಮ ಗಳು ಆಯಾಯ ಸಮುದಾಯದ ಸಾಮಾಜಿಕ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ಹೊಂದಿಕೊಂಡಿರುತ್ತವೆ.

ಉದಾಹರಣೆ:

“ನಮಸ್ಕಾರ ಸ್ವಾಮಿ, ಚೆನ್ನಾಗಿದ್ದೀರಾ?”

ಹಿಂದೂ ಸಂಸ್ಕೃತಿಯ ಜನ ಸಮುದಾಯದಲ್ಲಿನ ಮಧ್ಯಮ ವರ್ಗದ ಜನರು, ತಮ್ಮ ಸಮಾನ ಸಾಮಾಜಿಕ ಅಂತಸ್ತಿನ ಅಥವಾ ತಮಗಿಂತ ಮೇಲು ಅಂತಸ್ತಿನ ಪರಿಚಿತರನ್ನು ಭೇಟಿ ಮಾಡಿದಾಗ, ಮೇಲ್ಕಂಡ ನುಡಿಗಳನ್ನಾಡುತ್ತಾ, ಕೈ ಮುಗಿಯುತ್ತಾರೆ.

ಇಸ್ಲಾಂ ಸಂಸ್ಕೃತಿಯ ಮುಸಲ್ಮಾನರು, ಕ್ರೈಸ್ತ ಸಂಸ್ಕೃತಿಯ ಪಾಶ್ಚಿಮಾತ್ಯರು ಮತ್ತು ನೀಗ್ರೊ ಸಂಸ್ಕೃತಿಯ ಕರಿಯರು ಪರಸ್ಪರ ಭೇಟಿಯಾದಾಗ ಆಡುವ ಮಾತುಗಳು ಮತ್ತು ಆಂಗಿಕ ಚಲನವಲನಗಳು ಹಿಂದೂ ಸಂಸ್ಕೃತಿ ಮತ್ತು ಸಮಾಜದ ಮಾತಿನ ಸಮುದಾಯದವರಿಗಿಂತಲೂ ಭಿನ್ನವಾಗಿರುತ್ತವೆ. ಆದ್ದರಿಂದ ಯಾವುದೇ ವ್ಯಕ್ತಿ ತನ್ನ ನಿತ್ಯ ಜೀವನದಲ್ಲಿ  ಭಾಷೆಯ ಮೂಲಕ ಅನ್ಯರೊಡನೆ ವ್ಯವಹರಿಸುವಾಗ, ಅವರು ಪ್ರತಿನಿಧಿಸುವ ಸಮುದಾಯದಲ್ಲಿನ ಮಾತನಾಡು ವಿಕೆಯ ನಿಯಮಗಳನ್ನು ಚೆನ್ನಾಗಿ ಅರಿತಿರಬೇಕು.

ಹಿಂದೂ ಸಂಸ್ಕೃತಿಯನ್ನು ಒಳಗೊಂಡಿರುವ ನಮ್ಮ ಸಾಮಾಜಿಕ ಜೀವನವು ಜಾತಿ ವ್ಯವಸ್ಥೆಯಿಂದ ಕೂಡಿದೆ. ನಮ್ಮ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಜಾತಿ ಶ್ರೇಣಿಯ ಯಾವುದಾದರೊಂದು ಹಂತದಲ್ಲಿದ್ದಾನೆ. ಬಡವ, ಮಧ್ಯಮ ಮತ್ತು ಶ್ರೀಮಂತ ಎಂಬ ವರ್ಗ ಭೇದಗಳು ನಮ್ಮ ಸಮಾಜದಲ್ಲಿವೆ. ಈ ಬಗೆಯ ಜಾತಿ ಮತ್ತು ವರ್ಗ ಭೇದಗಳ ಸಾಮಾಜಿಕ ಜೀವನವು ನಮ್ಮ ಸಮುದಾಯದ ಮಾತಿನ ಅಭಿವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರಿ, ಹಲವು ಬಗೆಯ ನಿಯಮಗಳನ್ನು ರೂಪಿಸಿದೆ ಹಾಗೂ ನಿಯಂತ್ರಣಗಳನ್ನು ಹಾಕಿದೆ.

ಇದೇ ರೀತಿ ಜಗತ್ತಿನ ಎಲ್ಲೆಡೆಯಲ್ಲಿಯೂ ನಾನಾ ಬಗೆಯ ಮಾತಿನ ಸಮುದಾಯಗಳಲ್ಲಿರುವ ಜಾತಿ, ವರ್ಗ, ವರ್ಣ ಮತ್ತು ಲಿಂಗ ಭೇದಗಳಿಗೆ ಅನುಸಾರವಾಗಿ ಮಾತನಾಡುವಿಕೆಯ ನಿಯಮಗಳು ರೂಪುಗೊಂಡು, ಮಾತಿನ ಸಂದರ್ಭದ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರುತ್ತವೆ.

ಗಾದೆಗಳು

ಜನ ಸಾಮಾನ್ಯರು ತಮ್ಮ ಪ್ರತಿನಿತ್ಯದ ಮಾತುಕತೆಯ ಸಂದರ್ಭದಲ್ಲಿ ತಾವು ಹೇಳಬೇಕಾಗಿರುವ ವಿಷಯವನ್ನು ಮತ್ತಷ್ಟು ಸ್ಪಷ್ಟವಾಗಿ ನಿರೂಪಿಸುವ ಉದ್ದೇಶದಿಂದ, ತಾವಾಡುವ ಮಾತುಗಳ ಮಧ್ಯೆ ಮಧ್ಯೆ ಗಾದೆಗಳನ್ನು ಬಳಸುತ್ತಾರೆ. “ಹತ್ತು ಕಟ್ಟುವ ಕಡೆ, ಒಂದು ಮುತ್ತು ಕಟ್ಟು” ಎಂಬ ಗಾದೆಯಂತೆ ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೇಳುವಂತಹ ಶಕ್ತಿಯು ಗಾದೆ ಮಾತುಗಳಿಗಿದೆ.

ಉದಾಹರಣೆಗೆ : ಅಂಗಡಿಯೊಂದರಲ್ಲಿ ಅಕ್ಕಿಯನ್ನು ಕೊಂಡುಕೊಳ್ಳಲೆಂದು ಬಂದ ಸುಮಾರು ಐವತ್ತು ವರ್ಷದ ಹೆಂಗಸೊಬ್ಬಳು ಅಂಗಡಿಯಲ್ಲಿದ್ದ ಎರಡು ತರದ ಅಕ್ಕಿಯನ್ನು ನೋಡಿ, ವರ್ತಕನಲ್ಲಿ ಕಳಪೆ ದರ್ಜೆಯ ಅಕ್ಕಿಗೆ ಕಡಿಮೆ ದರವನ್ನು ಮತ್ತು ಉತ್ತಮ ದರ್ಜೆಯ ಅಕ್ಕಿಗೆ ಹೆಚ್ಚಿನ ದರವನ್ನು ಹೇಳಿದಾಗ, ಕೆಲವು ಕ್ಷಣ ಎರಡು ತರದ ಅಕ್ಕಿಯನ್ನು ಕೈಯಲ್ಲಿ ಹಿಡಿದುಕೊಂಡು, ಗುಣಮಟ್ಟವನ್ನು ಪರಿಶೀಲಿಸುತ್ತಿದ್ದು, ಅನಂತರ ವರ್ತಕನನ್ನು ಕುರಿತು,

“ಮೂರ್ಕಾಸು ಕೊಟ್ಟು ಮುದುಕಿ ಕಟ್ಕೊಳ್ಳೋದಕ್ಕಿಂತ, ಆರ್ಕಾಸು ಕೊಟ್ಟು ಹರೇದೋಳ್ನೆ ಕಟ್ಕೊಳ್ಳೋದು ಮೇಲಲ್ವೆ”

ಎಂದಳು. ಅವಳ ಇಂಗಿತವನ್ನು ಮತ್ತು ಆಯ್ಕೆಯನ್ನು ಅರಿತ ವರ್ತಕನು ಉತ್ತಮ ದರ್ಜೆಯ ಅಕ್ಕಿಯನ್ನು ತೂಗಿ ಕೊಟ್ಟನು.

ಮೊಸರನ್ನು ಕಡೆದಾಗ ಬೆಣ್ಣೆ ಬರುವಂತೆ, ಜನಮನದಲ್ಲಿ ಸಾವಿರಾರು ಬಗೆಯ ಜೀವನಾನುಭವಗಳು ಚೆನ್ನಾಗಿ ಮಂಥನಗೊಂಡು, ಸೂಕ್ತ ಸಂದರ್ಭದಲ್ಲಿ ವಿವೇಕಿಯಾದ ವ್ಯಕ್ತಿಯೊಬ್ಬನ ಅಥವಾ ಒಬ್ಬಳ ಬಾಯಿಂದ ಗಾದೆಯ ನುಡಿಗಳಾಗಿ ಹೊರಹೊಮ್ಮಿವೆ. “ವೇದ ಸುಳ್ಳಾದರೂ, ಗಾದೆ ಸುಳ್ಳಾಗುವುದಿಲ್ಲ”ವೆಂಬ ಮಾತಿದೆ. ಅಂದರೆ ವೇದಗಳನ್ನು ರಚಿಸಿದವರು ಹಲವು ಮಂದಿ ಋಷಿಗಳು. ಕೆಲವು ಋಷಿಗಳು ಆಡಿದ ವಾಣಿ ಸುಳ್ಳಾಗಬಹುದು. ಆದರೆ ಸಾವಿರಾರು ಮಂದಿಯ ಜೀವನದ ನೋವು ನಲಿವುಗಳಿಂದ ಮತ್ತು ಮಾನವ ಜೀವನದ ಸೂಕ್ಷ್ಮವಾದ ಒಳನೋಟಗಳಿಂದ ಕೂಡಿ ಅನುಭವದ ವಾಣಿಯಾಗಿ ಮೂಡಿ ಬಂದಿರುವ ಗಾದೆಗಳು ಸುಳ್ಳಾಗುವುದಕ್ಕೆ ಸಾಧ್ಯವಿಲ್ಲ. ಗಾದೆಗಳ ಸೃಷ್ಟಿಯಲ್ಲಿ ಗ್ರಾಮೀಣ ಜನರ ಕೊಡುಗೆ ಅಧಿಕವಾಗಿದೆ.

ಗ್ರಾಮೀಣ ಪ್ರದೇಶದಲ್ಲಿನ ಜನರು ಗಾದೆಗಳನ್ನು ಅಧಿಕವಾಗಿ ಬಳಸುತ್ತಾರೆ. ಅಕ್ಷರ ಕಲಿತಿರುವ ನಾಗರಿಕರ ದೈನಂದಿನ ಮಾತುಕತೆಯಲ್ಲಿ ಗಾದೆಗಳ ಬಳಕೆ ಬಹಳ ಕಡಿಮೆ. ಗಾದೆಯನ್ನು ಬಳಸುವಂಥ ಸಂದರ್ಭ ಬಂದಾಗ “ಅದೇನೋ, ಗಾದೆ ಹೇಳ್ತಾರಲ್ಲ! ಹಾಗೆ” ಎಂದು ನುಡಿದು ಮಾತನ್ನು ಮುಂದುವರಿಸುತ್ತಾರೆ.

ಒಂದು ನಾಣ್ಯಕ್ಕೆ ಎರಡು ಮುಖಗಳಿರುಂತೆ, ಪ್ರತಿಯೊಂದು ಗಾದೆಯಲ್ಲಿಯೂ ಲೋಕಾನುಭವ ಮತ್ತು ಲೋಕನೀತಿಯ ವಿಚಾರಗಳಿರುತ್ತವೆ.

ಉದಾಹರಣೆ : ‘ತುಂಬಿದ ಕೊಡ ತುಳುಕುವುದಿಲ್ಲ’. ವಿದ್ಯೆ, ಅಧಿಕಾರ ಮತ್ತು ಸಂಪತ್ತನ್ನು ಪಡೆದಿದ್ದರೂ, ವಿನಯಶೀಲವಾದ ನಡೆ ನುಡಿಗಳನ್ನು ಹೊಂದಿರುವ ವ್ಯಕ್ತಿಯ ಬಗ್ಗೆ ಮಾತನಾಡುವಾಗ “ತುಂಬಿದ ಕೊಡ ತುಳುಕುವುದಿಲ್ಲ” ಎನ್ನುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಅಹಂಕಾರದಲ್ಲಿ ವರ್ತಿಸುವವರನ್ನು ಕಂಡಾಗ  “ಅಲ್ಪ ವಿದ್ಯೆ ಮಹಾಗರ್ವಿ” ಅಥವಾ “ಸಿರಿ ಬಂತು ಅಂತ ಅರ್ಧ ರಾತ್ರೀಲಿ ಕೊಡೆ ಹಿಡ್ಕೊಂಡು ಹೊರಟ” ಎಂದು ವ್ಯಂಗ್ಯವಾಡುತ್ತಾರೆ. ನಾನಾ ಬಗೆಯ ಗಾದೆಗಳನ್ನು ವಿವಿಧ ಬಗೆಯ ಮಾತಿನ ಸಂದರ್ಭಗಳಲ್ಲಿ ಸೂಕ್ತವಾಗಿ ಬಳಸಿದಾಗ, ಮಾತಿನಲ್ಲಿ ಭಾಗಿಗಳಾದವರಿಗೆ ಶ್ರೇಷ್ಠವಾದ ಅರ್ಥಗಳು ಮನದಟ್ಟಾಗುತ್ತವೆ.

ಗಾದೆಗಳು ಸಾಮಾಜಿಕ ಮನುಷ್ಯನ ಎಲ್ಲಾ ಬಗೆಯ ವರ್ತನೆಗಳನ್ನು ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಲೋಪದೋಷಗಳನ್ನು ಅತ್ಯಂತ ಮಾರ್ಮಿಕ ವಾದ ರೀತಿಯಲ್ಲಿ ವಿಮರ್ಶೆ ಮಾಡಿವೆ. ಜೀವನದ ಕಟು ಸತ್ಯಗಳನ್ನು ಗಾದೆಗಳು ಸರಳವಾದ ಆದರೆ ಪರಿಣಾಮಕಾರಿಯಾದ ನುಡಿಗಟ್ಟುಗಳ ಮೂಲಕ ತಿಳಿಸುತ್ತವೆ. ಸಾಮಾನ್ಯವಾಗಿ ಗಾದೆಯ ವಾಕ್ಯಗಳು ಅತ್ಯಂತ ಸಂಕ್ಷಿಪ್ತವಾಗಿರುತ್ತವೆ. ಅರ್ಥಗಳ ಪರಂಪರೆಯನ್ನೇ ಒಳಗೊಂಡಿರುವ ಉಪಮೆ, ದೃಷ್ಟಾಂತ ಮತ್ತು ರೂಪಕಗಳನ್ನು ಗಾದೆಗಳಲ್ಲಿ ನಾವು ಕಾಣಬಹುದು. ಕೆಲವು ಗಾದೆಗಳು ಸಂಭಾಷಣೆಯ ಶೈಲಿಯಲ್ಲಿರುವುದು ಕಂಡುಬರುತ್ತದೆ.

1. ದೂರದ ಬೆಟ್ಟ ನುಣ್ಣಗೆ.

2. ಬೆಳ್ಳಗಿರುವುದೆಲ್ಲಾ ಹಾಲಲ್ಲ.

3. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.

4. ನಾಯಿ ಬಾಲಕ್ಕೆ ದಬ್ಬೆ ಕಟ್ಟಿದ ಹಾಗೆ.

5. ಉತ್ತರನ ಪೌರುಷ ಒಲೆ ಮುಂದೆ.

6. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ.

7. ಒಂದು ನಾಯಿಗೆ ಹಿಟ್ಹಾಕಿ. ಎರಡು ನಾಯಿ ‘ಚೂ’ ಬಿಟ್ಟಂತೆ.

8. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.

9. ಊರು ಮುಂದಲ ಮಾರಿಗುಡೀಲಿ ಮಲಗಿದರೆ ಏಳ್ಸೋರು ಯಾರು ಅಂದ್ರೆ ನನ್ನೂರ ಕೋಳಿಹುಂಜ ಅಂದಂಗೆ.

10. ಎಷ್ಟು ಜನ ಮಕ್ಕಳು ನಿನಗೆ ಎಂದೊತ್ತಿಗೆ ಊರಲ್ಲಿರೋ ಬೊಡ್ಡೀವೆಲ್ಲಾ ನನ್ನವೆ, ಆದರೆ ಅಪ್ಪಾ ಅನ್ನೋ ಬೊಡ್ಡೀವು ಒಂದೂ ಇಲ್ಲ ಅಂದ್ನಂತೆ.

ಗಾದೆಯ ಮಾತುಗಳಿಗೆ ‘ನಾಣ್ಣುಡಿ’ ಎಂಬ ಮತ್ತೊಂದು ಹೆಸರಿದೆ. ಗಾದೆಗಳು ನಮ್ಮ ಬದುಕಿಗೆ ಅಗತ್ಯವಾದ ಎಲ್ಲಾ ಬಗೆಯ ಅರಿವು, ವಿವೇಕ ಮತ್ತು ಎಚ್ಚರಿಕೆಯನ್ನು ಬೋಧಿಸುವಂತಹ ಸಾಮರ್ಥ್ಯವನ್ನು ಹೊಂದಿವೆ.

ಶಾಪಗಳು

ಅನ್ಯರಿಗೆ ಹಾನಿಯುಂಟಾಗಲೆಂಬ ಆಶಯವನ್ನು ಹೊಂದಿರುವ ನುಡಿಗಳಿಗೆ ಶಾಪದ ನುಡಿಗಳೆಂದು ಹೆಸರು. ಶಾಪದ ನುಡಿಗಳನ್ನಾಡುವುದನ್ನು  “ಶಾಪ ಹಾಕುವುದು” ಎಂದು ಕರೆಯುತ್ತಾರೆ.

ತಮ್ಮ ಹಗೆಗಳಿಗೆ “ಸಾವು ಬರಲಿ; ಮನೆಯ ಆಸ್ತಿ-ಪಾಸ್ತಿಗಳು ನಾಶವಾಗಲಿ; ದೇಹದ ಅಂಗಾಂಗಗಳು ಊನಗೊಳ್ಳಲಿ ; ದಾರಿದ್ರ್ಯ ತಟ್ಟಲಿ; ರೋಗಗಳು ಬರಲಿ” ಎಂಬ ನಾನಾ ಬಗೆಯ ಕೇಡಿನ ಆಶಯಗಳನ್ನು ಹೊಂದಿರುವ ಶಾಪರೂಪದ ನುಡಿಗಳನ್ನು ಸಾಮಾಜಿಕ ವ್ಯಕ್ತಿಗಳು ಮಾತಿನ ಸಂದರ್ಭಗಳಲ್ಲಿ ಪ್ರಯೋಗಿಸುತ್ತಾರೆ. ಶಾಪದ ನುಡಿಗಳ ಭಾಷಿಕ ರೂಪಗಳು ಈ ಕೆಳಕಂಡಂತೆ ಇವೆ.

ನಿನ್ ಬಾಯ್ಗೆ ಮಣ್ಬೀಳ.
ನಿನ್ನನೆ ಪಾಳ್ಮನೆಯಾಗ.
ನಿನ್ ಕಣ್ ಇಂಗ್ಹೋಗ.
ನಿಂಗೆ ಮೊಲ್ಲಾಗ್ರು ಬರ.
ನಿನ್ ಕಂದನ್ ತಿನ್ನ.
ನಿನ್ ಕೈಗೆ ಬಂದದ್ದು, ಬಾಯ್ಗೆ ಬರ್ದೇ ಹೋಗ.
ನಿನ್ ಎಮ್ಮೇಗೆ ದೊಡ್ರೋಗ ಬರ.
ನಿನ್ ಹಣೆ ಮ್ಯಾಲೆ ಬಾಚಿಂಗ ಕಟ್ದೇ ಹೋಗ.
ನಿನ್ ದುವ್ವೆ ಮ್ಯಾಕೆ ಕಾಗೆ ಬರ್ದೇ ಹೋಗ.

ಶಾಪ ಹಾಕುವುದರ ಉದ್ದೇಶ ಅಥವಾ ನಿಯೋಗಗಳು

1. ಹಗೆಗಳಿಗೆ ಕೇಡನ್ನು ಹಾರೈಸುವುದು

2. ತಮಗುಂಟಾಗಿರುವ ಹತಾಶೆ ಅಥವಾ ದುಃಖದ ತೀವ್ರತೆಯನ್ನು ನಿವಾರಿಸಿಕೊಳ್ಳುವುದು.

ಮಾತಿನ ಸಂದರ್ಭ 1

ಒಬ್ಬ ಹೆಂಗಸು (ಸುಮಾರು 30 ವರ್ಷ) ಮತ್ತೊಬ್ಬ ಹೆಂಗಸಿಗೆ (ಸುಮಾರು 35 ವರ್ಷ) ಶಾಪ ಹಾಕುತ್ತಿರುವುದು.

ಹೆಂಗಸು : ನನ್ ಗಂಡನ ಮ್ಯಾಲೆ ಇಂಥಾ ಅನ್ನಾಯ ಆಡಿದ್ದೀಯಲ್ಲ!

ನಿಂಗೆ ಒಳ್ಳೇದಾದದೆ? ಥೂ ………… ನನ್ ಸವ್ತಿ …….

ಹಾದರ್ರ‍್ಗಿ‍ತ್ ನನ್ ಸವ್ತಿ ……….

ಯಾರ್ಮನೆ ಹಾಳ್ ಮಾಡೊಕೆ ಅಂತ ಹೇಳ್ದೆ …..

ನಿನ್ ಮಗನ್ನ ತಿನ್ನ …….. ನಿನ್ ಗೆಡ್ ತಿನ್ನ ……

ನಿನ್ ಹೆಣ್ ಮುಂಡೆಯಾಗ…………

ನಿಂಗೆ ಬರಬಾರದ್ದು ಬರ……………..

ನಿಂಗೆ ವಾಂತ್ಬೇದಿ ತಗಳ……….

ಶಾಪ ಹಾಕಲು ಕಾರಣ : ತನ್ನ ಗಂಡನ ನಡತೆಯ ಬಗ್ಗೆ ಆಕೆಯು ಅನ್ಯರ ಮುಂದೆ ಕೆಟ್ಟ ಮಾತುಗಳನ್ನು ಆಡಿದ್ದಳೆಂಬುದನ್ನು ತಿಳಿದು, ಈ ರೀತಿ ಶಪಿಸುತ್ತಿದ್ದಳು.

ಮಾತಿನ ಸಂದರ್ಭ 2

ಸುಮಾರು ನಲವತ್ತೈದು ವಯಸ್ಸಿನ ಹೆಂಗಸೊಬ್ಬಳು ಒಂದು ಮನೆಯ ಮುಂದೆ ನಿಂತು ಶಾಪ ಹಾಕುತ್ತಿರುವುದು.

ಹೆಂಗಸು : ನಿಮ್ಮನೆ ಎಕ್ಕುಟ್ಟೋಗ………

ನಮ್ಮ ಹೊಟ್ಟೆ ಉರಿಸ್ಕೊಂಡಂಗೆ, ನಿಮ್ಮನೆ ಉರ‌್ದು ಬೆಂದೋಗ.

(ಶಾಪದ ನುಡಿಗಳನ್ನಾಡುತ್ತಿದ್ದಂತೆಯೇ, ಬೀದಿಯ ಧೂಳನ್ನು ಕೈಗಳಿಂದ ಗೋರಿಕೊಂಡು, ಆ ಮನೆಯ ಮುಂದೆ ಎರಚುತ್ತಾ)

ನನ್ ಮಗಳು ಸತ್ಯವಂತೆಯೇ ಆಗಿದ್ರೆ…………

ನಿಮಗೆ ಬರಬಾರದ್ದು ಬರ…….

ನಿಮ್ ಮಕ್ಳು ಸಾಲ್ ಸಮಾಧಿ ಮಾಡ………….

(‘ಲಬೋ ಲಬೋ’ ಎಂದು ಬಾಯಿ ಬಡಿದುಕೊಳ್ಳುತ್ತಾ ಅಳುತ್ತಿರುತ್ತಾಳೆ)

ಶಾಪ ಹಾಕಲು ಕಾರಣ

ವರದಕ್ಷಿಣೆಯ ಕಾರಣಕ್ಕಾಗಿ ಗಂಡನ ಮನೆಯಲ್ಲಿ ಅಕಾಲ ಮರಣಕ್ಕೆ ತುತ್ತಾದ ತನ್ನ ಮಗಳ ಶವ ಸಂಸ್ಕಾರ ಮುಗಿದ ನಂತರ, ಹೆತ್ತ ತಾಯಿಯು ತನ್ನ ಹತಾಶ ಭಾವವನ್ನು ಮತ್ತು ದುಃಖವನ್ನು ವ್ಯಕ್ತಪಡಿಸುತ್ತಾ ಬೀಗರ ಮನೆಯವರನ್ನು ಶಪಿಸುತ್ತಿರುವುದು.

ಸಾಮಾಜಿಕ ಜೀವನದಲ್ಲಿ ತಮಗೆ ನಾನಾ ಬಗೆಯ ತೊಂದರೆಗಳನ್ನು ನೀಡಿದ ಅಥವಾ ಕೇಡುಗಳನ್ನು ಮಾಡಿದ ವ್ಯಕ್ತಿಗಳ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಪ್ರತೀಕಾರವನ್ನು ತೀರಿಸಿಕೊಳ್ಳಲಾಗದೆ, ಶಾಬ್ದಿಕ ರೂಪದಲ್ಲಿ ಶಾಪ ಹಾಕುತ್ತಾ, ಕೇಡನ್ನು ಹಾರೈಸುತ್ತಾರೆ. ಸಾಮಾಜಿಕವಾಗಿ ಕೆಳವರ್ಗ ಮತ್ತು ಮಧ್ಯಮ ಕೆಳವರ್ಗದ ಹೆಂಗಸರು ಶಾಪದ ನುಡಿಗಳನ್ನು ಅಧಿಕವಾಗಿ ಬಳಸುತ್ತಾರೆ. ಗಂಡಸರ ಬಾಯಲ್ಲಿ ಬಹಳ ಅಪರೂಪಕ್ಕೆ ಶಾಪದ ನುಡಿಗಳು ಹೊರಬೀಳುತ್ತವೆ. ಶಾಪವನ್ನು ಹಾಕುವವರು ತಾವು ನಂಬಿರುವ ದೇವರಲ್ಲಿ ಅಥವಾ ಅಗೋಚರವಾದ ಶಕ್ತಿಯಲ್ಲಿ ಮೊರೆಯಿಡುತ್ತಾ, ಎತ್ತರದ ಧ್ವನಿಯಲ್ಲಿ ಲಯಬದ್ಧವಾಗಿ ಶಾಪಗಳನ್ನು ಉಚ್ಚರಿಸುತ್ತಾರೆ. ಕೆಲವೊಮ್ಮೆ ಶಾಪದ ನುಡಿಗಳ ಜೊತೆಗೆ ಹಗೆಗಳ ಮೈಮೇಲೆ ಉಗಿಯುವ ಅಥವಾ ಮನೆಯ ಮೇಲೆ ಧೂಳನ್ನು ಎರಚುವ ಕ್ರಿಯೆಯಲ್ಲಿ ತೊಡಗುತ್ತಾರೆ. ಉಗುಳು ಅಥವಾ ಧೂಳು ಶಾಪ ವಾಹಕಗಳಾಗಿ ತಮ್ಮ ಹಗೆಗಳಿಗೆ ಕೇಡನ್ನು ಮಾಡಲೆಂಬುದೇ ಈ ಕ್ರಿಯೆಯ ಉದ್ದೇಶವಾಗಿರುತ್ತದೆ.

ಶಾಪಗಳನ್ನು ಹಾಕುವ ಮತ್ತು ಹಾಕಿಸಿಕೊಳ್ಳುವುದರ ಬಗ್ಗೆ ನಮ್ಮ ಮಾತಿನ ಸಮುದಾಯದಲ್ಲಿ ನಾನಾ ಬಗೆಯ ನಂಬಿಕೆಗಳಿವೆ.

1. ಸರಿಯಾದ ಕಾರಣವಿಲ್ಲದೆ ಶಾಪ ಹಾಕಿದರೆ, ಆ ಶಾಪ ಹಾಕಿದ ವ್ಯಕ್ತಿಗೆ ಬಂದು ತಟ್ಟುತ್ತದೆ.

2. ಗುರು ಹಿರಿಯರು ಹಾಕಿದ ಶಾಪ, ಅದರಲ್ಲಿಯೂ ತಾಯಿ ತಂದೆಗಳು ಹಾಕಿದ ಶಾಪ ಖಂಡಿತ ಕೇಡನ್ನು ಮಾಡುತ್ತದೆ.

3. ಶಾಪ ಹಾಕಿಸಿಕೊಳ್ಳಲು ಎಂಥವರೂ ಬೆಚ್ಚುತ್ತಾರೆ. ಯಾಕೆಂದರೆ ಯಾವುದೋ ಕೆಟ್ಟ ಗಳಿಗೆಯಲ್ಲಿ ಹಗೆಗಳು ಹಾಕಿದ ಶಾಪ, ಜೀವನದ ಅವಧಿಯಲ್ಲಿ ಎಂದಾದರೊಮ್ಮೆ ನಿಜವಾಗಿ ತಟ್ಟಬಹುದೆಂಬ ಭೀತಿಯು ಸದಾಕಾಲ ಕಾಡುತ್ತಿರುತ್ತದೆ.

ಆಣೆ ಪ್ರಮಾಣಗಳು

ತಾವು ಆಡುತ್ತಿರುವ ಮಾತುಗಳು ಸತ್ಯವೆಂದು ಮತ್ತು ಕೇಳುತ್ತಿರುವವರು ತಮ್ಮ ಮಾತುಗಳನ್ನು ನಂಬಬೇಕೆಂದು ಒತ್ತಾಯ ಮಾಡುವಂಥ ಮಾತಿನ ಸಂದರ್ಭಗಳಲ್ಲಿ ಆಣೆಗಳನ್ನು ಇಡುತ್ತಾರೆ.

ತಮ್ಮ ಮೇಲೆ ಬಂದಿರುವ ಯಾವುದೇ ವಿಧವಾದ ಆಪಾದನೆಯನ್ನು ನಿರಾಕರಿಸುವಾಗ ‘ಒಂದು ವಸ್ತು ಅಥವಾ ಜೀವಿ’ಯನ್ನು ಮುಟ್ಟಿ ಮಾತನಾಡುವುದರ ಮೂಲಕ ಪ್ರಮಾಣವನ್ನು ಮಾಡುತ್ತಾರೆ. ಪ್ರಮಾಣವನ್ನು ಮಾಡುವಾಗ ಮಾತಿನ ಘಟನೆಯಲ್ಲಿ ನೇರವಾಗಿ ಭಾಗಿಗಳಾದ  ವ್ಯಕ್ತಿಗಳಲ್ಲದೆ, ಸಾಕ್ಷಿಗಳಾಗಿ ಇತರರು ಇರುವ ಸಂಭವವಿರುತ್ತದೆ. ಆಣೆಗಳನ್ನು ಇಡುವ ಪ್ರಸಂಗಗಳು ನಿತ್ಯ ಜೀವನದಲ್ಲಿ ಹೇರಳವಾಗಿ ಕಂಡುಬಂದರೆ, ಪ್ರಮಾಣವನ್ನು ಮಾಡುವ ಪ್ರಸಂಗಗಳು ಬಹು ವಿರಳವಾಗಿ ಕಂಡುಬರುತ್ತವೆ. ಮಾತಿನ ಸಂದರ್ಭಗಳಲ್ಲಿ ಆಪಾದನೆಗೆ ಗುರಿಯಾದ ವ್ಯಕ್ತಿ ತನ್ನ ಮೇಲಿನ ಆಪಾದನೆ ಯನ್ನು ನಿರಾಕರಿಸತೊಡಗಿದಾಗ, ಅಂತಿಮ ಘಟ್ಟದಲ್ಲಿ ಪ್ರಮಾಣ ಮಾಡಿಸುವ ಆಚರಣೆಯು ನಡೆಯುತ್ತದೆ.

ಉದಾಹರಣೆ: ಮನೆಯಲ್ಲಿ ಮೇಜಿನ ಮೇಲೆ ಇಟ್ಟಿದ್ದ ಇನ್ನೂರು ರೂ.ಗಳು ಕಾಣೆಯಾದುದುರ ಬಗ್ಗೆ ಹದಿನೆಂಟರ ವಯಸ್ಸಿನ ಆಳನ್ನು ಮನೆಯ ಯಜಮಾನ (ಸುಮಾರು 50 ವಯಸ್ಸು) ಮತ್ತು ಯಜಮಾನಿ (ಸುಮಾರು 40 ವಯಸ್ಸು) ಪ್ರಶ್ನಿಸುತ್ತಿರುವ ಮಾತಿನ ಸಂದರ್ಭ.

ಯಜಮಾನ : ಲೇ ನಿಜ ಬೊಗಳು. ತಗೊಂಡಿದ್ರೆ ಕೊಟ್ಬುಡು

ಆಳು : ನನ್ ತಾಯಾಣೆಗೂ ತಕೊಂಡಿಲ್ಲ ಕಣ್ರಪ್ಪ ದೇವರಾಣೆಗೂ ನಾ ಕಾಣೆ. ಅದೆಲ್ಲಿತ್ತೊ ನಂಗೊತ್ತಿಲ್ಲ.

ಯಜಮಾನಿ : ನಿಂಗೆ ಗೊತ್ತಿಲ್ದೆ ಏನ್ಲ? ನೀನೊಬ್ನೆ ಅಲ್ವೆ ಮನೇಲಿ ದ್ದೋನು? ಇನ್ಯಾರು ಬಂದಿದ್ರು ಒಳಕ್ಕೆ?

ಆಳು : ಇದೇನ್ರವ್ವ ಹಿಂಗಂತೀರಿ? ಯಾವತ್ತಾದ್ರು ನಾನು ಹಂಗೆ ಮಾಡಿದ್ನ? ನನ್ ಕಣ್ಣಾಣೆಗೂ ಇಲ್ಲ ಕಣ್ರವ್ವ. ಈ ಭೂಮ್ತಾಯಿ ಆಣೆಗೂ ನಾ ದುಡ್ಡ ಕಾಣೆ ಕಾಣ್ರವ್ವ.

ಯಜಮಾನ : ಲೇ, ನೀ ಆಣೆ – ಗೀಣೆ ಇಕ್ಬೇಡ. ನಿಜ ಹೇಳು ಎಲ್ಲಿಟ್ಟಿದ್ದೀಯೆ?

(ಹೊಡೆಯಲೆಂದು ಕೈಯೆತ್ತಿ ಮುನ್ನುಗ್ಗುತ್ತಾನೆ)

ಯಜಮಾನಿ : (ಅಡ್ಡ ಬಂದು ತಡೆಯುತ್ತಾ)

ಹೊಡಿಗಿಡಿ ಬ್ಯಾಡಿ. ಎಲ್ಲಾದ್ರು ಆಸವಲ್ಲದ ಜಾಗಕ್ಕೆ ಏಟು ಬಿದ್ದು, ಇನ್ನೇನಾದ್ರೂ ಆದದು! ಸುಮ್ನೆ ಮಾತಲ್ಲೆ ಕೇಳಿ.

ಆಳು : ನಿಜವಾಗ್ಲೂ ನಾ ಎತ್ಕೊಂಡಿಲ್ಲ ಕಣ್ರಪ್ಪ. ಯಾವ ದೇವರ ಮುಂದೇನಾದ್ರು ಪ್ರಮಾಣ ಮಾಡ್ತೀನಿ. ಆ ಪಟಲದವ್ವನಾಣೆಗೂ ನಾ ಕಳ್ಳ ಅಲ್ಲ ಕಣ್ರಪ್ಪ.

ಯಜಮಾನಿ : ಹಂಗಾದ್ರೆ ಪಟಲದವ್ವನ ಗುಡಿ ಮುಂದೆ ನಿಂತ್ಕೊಂಡು ಪ್ರಮಾಣ ಮಾಡೀಯ?

ಆಳು : ಆಗ್ಲಿ ಕಣ್ರವ್ವ. ಈಗ್ಲೆ ನಡೀರಿ ಬೇಕಾದ್ರೆ.

ಯಜಮಾನ : ಪಟಲದವ್ವನ ಗುಡೀನು ಬೇಡ, ಏನು ಬೇಡ ಇಲ್ಲೆ ನಮ್ಮ ಕೊಟ್ಗೇಲಿ ಬಸವಣ್ ದೇವರ ಬಾಲ ಹಿಡ್ಕೊಡು ಪ್ರಮಾಣ ಮಾಡ್ನಡಿ.

ಆಳು : ಹಂಗೆ ಆಗ್ಲಿ ಕಣ್ರಪ್ಪ, ನಡೀರಿ.

(ಕೊಟ್ಟಿಗೆಗೆ ಬಂದು ಹಸುವಿನ ಬಾಲವನ್ನು ಹಿಡಿದುಕೊಂಡು)

ಈ ಬಸವಣ್ಣಾಣೆಗೂ ನಾನು ಅಲ್ಲಿದ್ದ ದುಡ್ಡ ತಕೊಂಡಿಲ್ಲ. ನಾನು ಆ ದುಡ್ಡ ಕಾಣೂಕೆ ಕಾಣೆ. ನಾನೇನಾದ್ರು ಎತ್ಕೊಂಡು ಸುಳ್ಳು ಹೇಳ್ತಿದ್ರೆ ……….. ನನ್ ಕಣ್ ಹಿಂಗೋಗ್ಲಿ …… ನನ್ ಕೈ ಸೇದೋಗ್ಲಿ……….. ನಂಗೆ ಬರಬಾರದ್ದು ಬರ್ಲಿ.

ತಮಗೆ ಆತ್ಮೀಯರಾದ ತಾಯಿ ತಂದೆ ಮಕ್ಕಳ ಹೆಸರಿನಲ್ಲಿ; ತಮ್ಮ ಮನೆ ದೇವರ ಅಥವಾ ತಮ್ಮ ಪರಿಸರದಲ್ಲಿ ಪ್ರಸಿದ್ಧರಾಗಿರುವ ದೇವರ ಹೆಸರಿನಲ್ಲಿ; ಪವಿತ್ರವೆಂದು ತಾವು ನಂಬಿರುವ ವಸ್ತುಗಳ ಹೆಸರಿನಲ್ಲಿ; ತಮಗೆ ಪ್ರೀತಿ ಪಾತ್ರವಾದ ಪ್ರಾಣಿ ಪಕ್ಷಿಗಳ ಹೆಸರಿನಲ್ಲಿ; ತಮ್ಮ ನಡೆನುಡಿಗಳ ಹೆಸರಿನಲ್ಲಿ ಆಣೆ ಪ್ರಮಾಣಗಳನ್ನು ಮಾಡುತ್ತಾರೆ. ಆಣೆ ಪ್ರಮಾಣಗಳ ಪ್ರಮುಖ ಉದ್ದೇಶ ಅಥವಾ ನಿಯೋಗವೆಂದರೆ ತಮ್ಮನ್ನು ತಾವು ಉತ್ತಮರೆಂದು ಸಮರ್ಥಿಸಿ ಕೊಳ್ಳುವುದು.

ಆಣೆ ಪ್ರಮಾಣಗಳನ್ನು ನಿತ್ಯಜೀವನದ ಮಾತುಕತೆಗಳಲ್ಲಿ ಅತ್ಯಧಿಕವಾಗಿ ಮಾಡುವವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುತ್ತಾರೆ. ಗಂಡಸರಿಗಿಂತ ಹೆಂಗಸರು ನಾಗರಿಕರಿಗಿಂತ ಗ್ರಾಮೀಣರು ಮತ್ತು ದೈಹಿಕವಾಗಿ ಸಬಲರಿಗಿಂತ ದುರ್ಬಲವಾಗಿರುವವರು ಅಧಿಕವಾಗಿ ಆಣೆ ಪ್ರಮಾಣಗಳನ್ನು ಮಾಡುತ್ತಾರೆ.

ಮಾತಿಗೆ ಮುಂಚೆ ಆಣೆ-ಪ್ರಮಾಣ ಮಾಡುವವರನ್ನು ನಂಬಬಾರದು ಎಂಬ ಭಾವನೆ ನಮ್ಮ ಮಾತಿನ ಸಮುದಾಯದಲ್ಲಿದೆ. ಮನೆಯ ಒಳಗೆ ಆಣೆ ಪ್ರಮಾಣ ಮಾಡುವುದು ಒಳ್ಳೆಯದಲ್ಲವೆಂದು, ಅಂಥಾ ಮನೆಗಳು ಬೇಗ ಹಾಳಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಮಾತಿನ ಸಂದರ್ಭಗಳಲ್ಲಿ ಪ್ರಯೋಗಗೊಳ್ಳುವ ಆಣೆ ಪ್ರಮಾಣಗಳ ಭಾಷಿಕ ರೂಪಗಳು ಈ ಕೆಳ ಕಂಡಂತೆ ಇವೆ.

ನನ್ ಮಕ್ಕಳಾಣೆಗೂ………..

ನನ್ ತಿನ್ಕೊಂಡಾಣೆಗೂ……..

ನನ್ನಾಣೆಗೂ………..

ನಿನ್ನಾಣೆಗೂ………..

ದೇವರಾಣೆಗೂ…………

ಸರಸ್ವತಿ ಆಣೆಗೂ…………

ಧರ್ಮದೇವತೆ ಆಣೆಗೂ……….

ಈ ಮೇಲ್ಕಂಡ ಆಣೆಗಳನ್ನು ಹೇಳಿ, ಅದರ ಮುಂದೆ ತಾವು ಕೆಟ್ಟವರಲ್ಲ ಅಥವಾ ಕೆಟ್ಟ ಕೆಲಸವನ್ನು ಮಾಡಿಲ್ಲವೆಂದು ಹೇಳುತ್ತಾರೆ. ಬಹು ವಿರಳ ಸಂದರ್ಭಗಳಲ್ಲಿ ತಾವು ಖಂಡಿತವಾಗಿಯೂ ಉದ್ದೇಶಿತ ಕೆಲಸವನ್ನು ಮಾಡುವ ಭರವಸೆಯನ್ನು ನೀಡುವಾಗ

“ನಮ್ಮ ತಾಯಾಣೆಗೂ ಮಾಡ್ತೀನಿ. ದೇವರಾಣೆಗೂ ಕೊಡ್ತೀನಿ. ನನ್ನಾಣೆಗೂ ಬರ‌್ತೀನಿ” ಎಂದು ಆಣೆಗಳನ್ನು ಇಡುತ್ತಾರೆ. ನಾಗರಿಕ ಸಮಾಜ ದಲ್ಲಿನ ಹದಿ ಹರೆಯದ ಮಕ್ಕಳು ತಮ್ಮ ನಿತ್ಯ ಸಂಭಾಷಣೆಯಲ್ಲಿ “ಗಾಡ್ ಪ್ರಾಮಿಸ್………. ಮದರ್ ಪ್ರಾಮಿಸ್” ಎಂಬ ಆಣೆಗಳನ್ನು ಇಡುತ್ತಾರೆ.

ಪ್ರಮಾಣಗಳನ್ನು ಮಾಡುವಾಗ ಕ್ರಮಬದ್ಧವಾದ ಒಂದು ಆಚರಣೆಯೇ ನಮ್ಮ ಸಮಾಜದಲ್ಲಿ ಕಂಡುಬರುತ್ತದೆ. ತಮ್ಮ ಮಕ್ಕಳ ತಲೆಯ ಮೇಲೆ ಕೈಯಿಟ್ಟು ಅಥವಾ ಉಪ್ಪಿನ ಗುಡ್ಡೆಯ ಮೇಲೆ ನಿಂತು ಪ್ರಮಾಣ ಮಾಡುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಹಾಲನ್ನು, ಭೂಮಿಯನ್ನು ಅಥವಾ ಮಣ್ಣನ್ನು, ದನದ ಬಾಲವನ್ನು, ದೇವರ ಪಟವನ್ನು, ನೀರನ್ನು, ಪುಸ್ತಕವನ್ನು, ತಮ್ಮ ಕಣ್ಣುಗಳನ್ನು, ದೇಗುಲದ ಹೊಸ್ತಿಲನ್ನು ತಮ್ಮೆರಡು ಕೈಗಳಿಂದ ಮುಟ್ಟಿ ಇವುಗಳ ಮೇಲೆ ಆಣೆಯಿಟ್ಟು ಅಥವಾ ಇವುಗಳ ಸಾಕ್ಷಿಯಾಗಿ ತಾವು ಕೆಟ್ಟ ಕಾರ್ಯ ಮಾಡಿಲ್ಲವೆಂದು ಪ್ರಮಾಣ ಮಾಡುತ್ತಾರೆ. ಒಂದು ವೇಳೆ ಕೆಟ್ಟದ್ದನ್ನು ಮಾಡಿ ಅಥವಾ ಆಡಿ, ಈಗ ಸುಳ್ಳಾಡುತ್ತಿದ್ದರೆ, ತಮಗೆ ತೀವ್ರತರವಾದ ದುಃಖ ದುರಂತಗಳು ಬರಲೆಂದು, ತಮ್ಮನ್ನು ತಾವೇ  ಶಪಿಸಿಕೊಳ್ಳುತ್ತಾರೆ.