೧. ಸುನಾಮಿ ಸಂದರ್ಭದಲ್ಲಿ ಮದ್ರಾಸಿನ ಬೀಚ್ ಬಳಿ ಐಸ್ ಕ್ಯಾಂಡಿ ಮಾರುವ ಪಳಸ್ವಾಮಿಯನ್ನು ಮಾತನಾಡಿಸಿದಾಗ ಹೇಳಿದ ಮಾತು ಇದು: ‘ನಾನು ಗಳಿಸುವ ಸಂಪಾದನೆ ದಿನಕ್ಕೆ ೧೫ ರಿಂದ ೨೫ ರುಪಾಯಿ. ನನಗೆ ಸ್ವಂತ ಮನೆಯಿಲ್ಲ. ಎಷ್ಟೋ ದಿನ ನನ್ನ ಮಕ್ಕಳು ಉಪವಾಸ ಮಲಗುತ್ತಾರೆ. ನಾನೂ ಈ ಸುನಾಮಿಯಲ್ಲಿ ಸತ್ತಿದ್ದರೆ ನನ್ನ ಕುಟುಂಬಕ್ಕೊಂದು ಮನೆ ಕಟ್ಟಿಸಿಕೊಡುತ್ತಿದ್ದರು. ಒಂದು ಲಕ್ಷ ಹಣವೂ ಬರುತ್ತಿತ್ತು…..’ ನಮ್ಮ ಸದ್ಯದ ಪರಿಸ್ಥಿತಿಯ ಕುರಿತು ಈ ಮಾತುಗಳಲ್ಲದೆ ಏನು ಹೇಳಲು ಸಾಧ್ಯ?  ನನಗೆ ಗೊತ್ತು ಈ ಹೊತ್ತಿಗೆ ಸಂದರ್ಭವನ್ನು ಹೀಗೇ ಕೆಲವೇ ಮಾತುಗಳಲ್ಲಿ ಜನರಲೈಸ್ ಮಾಡಿ ಹೇಳುವುದು ತಪ್ಪು. ಆದರೆ ಇದು ಕೇವಲ ಪಳನಿಸ್ವಾಮಿಯ ಮಾತಲ್ಲ. ನಾವು ದಿನಾ ಊಟಮಾಡುವ ಅನ್ನ ಕೊಟ್ಟ ರೈತನ ಮಾತುಗಳೂ ಹೌದು. ಸೂರು ಕಟ್ಟಿ ಕೊಡುವ ಕೂಲಿಯವರದೂ ಹೌದು. ಹಾಗಾದರೆ ಭಾರತ ಬಡದೇಶವೇ? ಪತ್ರಿಕೆಗಳಲ್ಲಿ ಮಾತ್ರ ಕಂಪನಿಗಳು ೮೫೦ ಸಾವಿರ ಕೋಟಿ, ೯೫೦ ಸಾವಿರ ಕೋಟಿ, ಡಾಲರ್ ಎಂದೆಲ್ಲಾ ಲಾಭಾಂಶವನ್ನು ಪ್ರಕಟಿಸುತ್ತವೆಯಲ್ಲಾ.

೨. ಇನ್ನೊಂದು ಪುಟ್ಟ ಘಟನೆಯನ್ನು ಹೇಳುತ್ತೇನೆ. ನನ್ನ ಮಗನಿಗೆ ಈಗ ಆರು ವರ್ಷ. ಆತನ ಶಾಲೆಯಲ್ಲಿ ತರಕಾರಿಗಳು, ಹಣ್ಣುಗಳ ಬಗೆಗೆ ಹೇಳಿಕೊಡುವಾಗ ಬೀಜ ಸಹಿತ ಹಣ್ಣುಗಳು, ಬೀಜರಹಿತ ಹಣ್ಣುಗಳೆಂದು ಹೇಳಿಕೊಡುತ್ತಾರೆ. ಮಗ ಮನೆಗೆ ಬಂದು ಪಪ್ಪಾಯಿ ಹೆಚ್ಚಲು ಹೇಳುತ್ತಾನೆ. ಅದರಲ್ಲಿ ಬೀಜಗಳೇ ಇಲ್ಲ! ಅವನಿಗೆ ಹೇಗೆ ಹೇಳುವುದು? ಶಾಲೆಯಲ್ಲಿ ಕಲಿಸಿದ್ದು ತಪ್ಪೆ? ಪಪ್ಪಾಯಿ ಬೀಜರಹಿತವಾದದ್ದು ತಪ್ಪೇ? ಇರುವ ಅಂಗಡಿಗಳನ್ನು ಹುಡುಕಿದರೂ ಸಿಗದ ಬೀಜಸಹಿತ ಪಪ್ಪಾಯಿಯನ್ನು ಮಾರದವರ ತಪ್ಪೇ? ಗೆಳೆಯನೊಬ್ಬ ತಮಾಷೆ ಮಾಡುತ್ತಿದ್ದ: ‘ಮುಂದೆ ಕಡಲೆಕಾಯಿ ಕೂಡ ಸೀಡ್ ಲೆಸ್ ಆಗಬಹುದು’ ಎಂದು.

ಒಮ್ಮೆ ಸೀತಾರಾಮಯ್ಯ ಎಂಬ ಪ್ರತಿಭಾವಂತ ಸಂಗೀತಗಾರ ಸಂಗೀತ ಕಛೇರಿ ನಡೆಯುತ್ತಿತ್ತು. ನಡುವೆ ರಾಮನ ಬಗೆಗಿನ ಕೀರ್ತನೆಯೊಂದನ್ನು ಹಾಡುವಾಗ ಸಹಜವೆಂಬಂತೆ ಸೀತಾರಾಮಯ್ಯನವರ ಕೈ ಮೀಸೆಯ ಮೇಲೆ ಹೋಗುತ್ತದೆ. ಅದನ್ನು ಕಂಡು ತದೇಕಚಿತ್ತದಿಂದ ಆಲಿಸುತ್ತಿದ್ದ ದಂಪತಿಗಳಿಗೆ ಕಸಿವಿಸಿಯಾಗಿ ಮಾತನಾಡಿಕೊಳ್ಳುತ್ತಾರೆ: ‘ಇವನು ಹಾಡುತ್ತಿರುವುದು ರಾಮನಾಮ, ಆದರೆ ರಾವಣನ ತರಹ ಮೀಸೆಯ ಮೇಲೆ ಕೈಯಾಡಿಸುತ್ತಿದ್ದಾರಲ್ಲ!’ ಎಂದು. ಕಛೇರಿ ಮುಗಿದು ಅವರಿಗೆ ಸನ್ಮಾನವಾಗಿ ಮನೆಗೆ ಹೊರಡುತ್ತಾರೆ. ದಂಪತಿಗಳ ಮಾತನ್ನು ಕೇಳಿಸಿಕೊಂಡಿದ್ದ ಶಿಷ್ಯನೊಬ್ಬ ಈ ಮಾತನ್ನು ತಮ್ಮ ಗುರುಗಳಿಗೆ ಹೇಳುತ್ತಾನೆ. ಒಂದು ಕ್ಷಣ ಯೋಚಿಸಿ. ಗುರುಗಳು ಎಷ್ಟೋ ವರ್ಷಗಳಿಂದ ಬಿಟ್ಟಿದ್ದ ತಮ್ಮ ಗಡ್ಡ ಮೀಸೆಯನ್ನು ತೆಗೆದುಬಿಡುತ್ತಾರೆ. ಅಷ್ಟೆ ಅಲ್ಲ ಅವರ ಜೀವನಪರ್ಯಂತ ಈ ಮಾತುಗಳಿಗಾಗಿ ಅವರು ನೊಂದುಕೊಳ್ಳುತ್ತಾರೆ. ಈಗಲೂ ಮಾತು ಬೇರೆಯಲ್ಲ ಕೃತಿ ಬೇರೆಯಲ್ಲ ಎನ್ನುವವರುಂಟೆ? ಈ ಘಟನೆ ಯಾವುದೋ ಓಬಿರಾಯನ ಕಾಲದ್ದಲ್ಲ. ಐದಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದು. (ಈ ಘಟನೆಯನ್ನು ಹೇಳಿದವರು ನನ್ನ ಸಹೋದ್ಯೋಗಿ ವಜ್ರವೇಲು)

ಶ್ರೀ ಅನಂತಮೂರ್ತಿ ಅವರ ‘ಮಾತು ಸೋತ ಭಾರತ’ದ ಲೇಖನಗಳನ್ನು ಓದುವಾಗ ನೆನಪಾದ ಘಟನೆಗಳಿವು.

ಅಭಿನವ ಪ್ರಕಟಿಸುತ್ತಿರುವ ಶ್ರೀ ಯು. ಆರ್. ಅನಂತಮೂರ್ತಿ ಅವರ ಈ ಪುಸ್ತಕ ಹಲವು ಕಾರಣಗಳಿಗಾಗಿ ಮುಖ್ಯವಾದುದು. ಮೊದಲನೆಯದಾಗಿ ಕನ್ನಡದ ಅರಿವನ್ನು, ತಿಳುವಳಿಕೆಯನ್ನು ವಿಸ್ತರಿಸಿದವರಲ್ಲಿ ಕಾರಂತ, ಬೇಂದ್ರೆ, ಕುವೆಂಪು, ಶ್ರೀರಂಗ, ಪು.ತಿ.ನ, ಅಡಿಗರಂತೆ ಅನಂತಮೂರ್ತಿ ಅವರೂ ಒಬ್ಬರು. ‘ಯುಗಪಲ್ಲಟ’ (ವಿಮರ್ಶಾ ಲೇಖನಗಳ ಸಂಕಲನ)ವನ್ನು ತುಮಕೂರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಅಭಿನವ ಪ್ರಕಟಿಸಿತ್ತು. ನಂತರ ‘ವಾಲ್ಮೀಕಿಯ ನೆವದಲ್ಲಿ’ (ಸಮಕಾಲೀನ ಜಗತ್ತಿಗೊಂದು ಮುಖಾಮುಖಿ)ಯನ್ನು ಶಿವಮೊಗ್ಗ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಮ್ಮ ಪುಸ್ತಕ ಮಳಿಗೆಯಲ್ಲಿ ಪುಟ್ಟ ಹುಡುಗಿಯೂ ಕೈಯಲ್ಲಿ ಬಿಡುಗಡೆ ಮಾಡಿಸಲಾಯಿತು. ಅವತ್ತು ಅನಂತಮೂರ್ತಿ ಅವರ ೭೫ನೆಯ ಹುಟ್ಟುಹಬ್ಬ. ಈ ಪ್ರಕ್ರಿಯೆಯನ್ನು ‘ಈ ಟೀವಿ’ ವಾಹಿನಿಯು ‘ಪುಸ್ತಕಗಳನ್ನು ಮುಂದಿನ ಜನಾಂಗದ ಕೈಗಿಡುವ ಪ್ರಯತ್ನ’ ಎಂದು ಬಣ್ಣಿಸಿತು. ಈಗ ‘ಮಾತು ಸೋತ ಭಾರತ’ (ಅರೆಶತಮಾನದ ಅವಗಾಹನೆ) ಪ್ರಕಟಗೊಳ್ಳುತ್ತಿದೆ.

ಎರಡನೆಯ ಬಹುಮುಖ್ಯ ಕಾರಣ: ಐವತ್ತು ವರ್ಷಗಳ ಸಾಂಸ್ಕೃತಿಕ ಪಲ್ಲಟಗಳ ಕುರಿತ ದಾಖಲೆ ಇಲ್ಲಿದೆ. ಉದಾಹರಣೆಗೆ ಅವರ ‘ಸಂಸ್ಕಾರ’ ಪ್ರಕಟಗೊಂಡ ಸಂದರ್ಭದಲ್ಲಿ ಎತ್ತಿದ ಪ್ರಶ್ನೆಗಳಿಗೆ ಆ ದಿನಗಳಲ್ಲಿ ಅನಂತಮೂರ್ತಿ ಅವರು ತಮ್ಮ ದಿನಚರಿಯಲ್ಲಿ ಮಾಡಿಕೊಂಡ ಟಿಪ್ಪಣಿಗಳು, ನರಸಿಂಹಸ್ವಾಮಿ ಅವರ ‘ಶಿಲಾಲತೆ’ ಪ್ರಕಟಗೊಂಡಾಗ ಆ ಕೃತಿಯ ಬಗೆಗೆ ಬರೆದು ಪ್ರಕಟಿಸದೇ ಇದ್ದ ಹಲವು ಒಳನೋಟಗಳುಳ್ಳ ಲೇಖನ ಮತ್ತು ಅಕ್ಷರ ಹೊಸಕಾವ್ಯದ ಲಂಕೇಶರ ಮುನ್ನಡಿಗೆ ಪ್ರತಿಕ್ರಿಯೆಯಾಗಿ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿ ಹಲವು ಬಗೆಯ ಪ್ರತಿಕ್ರಿಯೆಗಳಿಗೆ ಕಾರಣವಾದ ‘ಹಿಪ್ಪಿಯೋ ಡ್ಯಾಂಡಿಯೋ’ ಲೇಖನ, ಕನ್ನಡದಲ್ಲಿ ಹೊಸ ಬಗೆಯ ವಾಗ್ವಾದಕ್ಕೆ ಕಾರಣವಾದ ‘ಸಾಹಿತ್ಯದಲ್ಲಿ ಬ್ರಾಹ್ಮಣ-ಶೂದ್ರ ಪ್ರಜ್ಞೆ’ ಲೇಖನ ಕುರಿತು ವ್ಯಕ್ತವಾದ ಭಿನ್ನಭಿಪ್ರಾಯಗಳಿಗೆ ವ್ಯಕ್ತಪಡಿಸಿದ ಅಪ್ರಕಟಿತ ಟಿಪ್ಪಣೀ ಇತ್ಯಾದಿ ಲೇಖನಗಳು ಈ ಸಂಕಲನದಲ್ಲಿದೆ.

ಮೂರನೆಯ ಮುಖ್ಯ ಕಾರಣ: ಅನಂತಮೂರ್ತಿ ಅವರು ತಮ್ಮ ಸಮಕಾಲೀನ ಮತ್ತು ಕಿರಿಯ ಪ್ರತಿಭೆಗಳಿಗೆ ಪ್ರತಿಸ್ಪಂದಿಸಿರುವುದು. ತೇಜಸ್ವಿ, ಪಠಾಭಿ, ಸುಬ್ರಾಯ ಚೊಕ್ಕಾಡಿ, ರಾಮಚಂದ್ರ ಗಾಂಧಿ, ಭೈರಪ್ಪ, ಬಿ. ವಿ. ಕಾರಂತ, ಮುರಾರಿ ಬಲ್ಲಾಳ, ನಾಗತಿಹಳ್ಳಿ ಚಂದ್ರಶೇಖರ, ಅಕ್ಷರ, ಜಿ.ಪಿ. ಬಸವರಾಜು, ಸುರೇಂದ್ರನಾಥ್ ಮುಂತಾದವರ ಕೃತಿ, ಒಡನಾಡಿನ ಕ್ಷಣಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ.

ಇವೆಲ್ಲದರ ಜೊತೆಗೆ ಐವತ್ತು ವರ್ಷಗಳಲ್ಲಿ ಸಾಂಸ್ಕೃತಿಕವಾಗಿ ಎದ್ದ ವಾಗ್ವಾದಗಳಿಗೆ ತಮ್ಮ ಸುದೀರ್ಘ ಮುನ್ನಡಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮೊದಲನೆಯ ಭಾಗದಲ್ಲಿ ತಾತ್ವಿಕವಾದ ಗ್ರಹಿಕೆಗಳನ್ನು ಮಂಡಿಸುವ ಲೇಖನಗಳಿದ್ದರೆ, ಎರಡನೆಯ ಭಾಗದಲ್ಲಿ ವ್ಯಕ್ತಿ ವಿಶೇಷ ಲೇಖನಗಳಿವೆ. ಮೂರನೆಯ ಭಾಗದಲ್ಲಿ ಅನಂತಮೂರ್ತಿ ಅವರ ಸಮಕಾಲೀನ ಅಥವಾ ಕಿರಿಯರ ಕೃತಿಗಳಿಗೆ ಮುನ್ನುಡಿಯ ರೂಪದಲ್ಲಿಯೋ, ಭಾಷಣದ ರೋಪದಲ್ಲಿಯೋ ಪ್ರಕಟವಾದ ಲೇಖನಗಳಿವೆ. ನಾಲ್ಕನೆಯ ಭಾಗದಲ್ಲಿ ಎರಡು ನಾಟಕ ಪ್ರಯೋಗಗಳಿಗೆ ವ್ಯಕ್ತಪಡಿಸಿದ ಅಭಿಪ್ರಾಯಗಳಿವೆ.

*

ಅನಂತಮೂರ್ತಿ ಅವರ ಎಲ್ಲ ಲೇಖನಗಳನ್ನು ಪರಿಶೀಲಿಸಹೊಗದೆ ಇಲ್ಲಿಯ ಎಲ್ಲ ಲೇಖನಗಳ ಹಿಂದಿರುವ ಬಹುಮುಖ್ಯವಾದ ಅಂಶದ ಕಡೆಗೆ ನಿಮ್ಮ ಗಮನ ಸೆಳೆಯಬಯಸುವೆ. ಅದು ಅವರ ಮೋಹಕ ಭಾಷೆ. ಯಾವ ವಿಷಯವನ್ನಾಗಲೀ ಆಪ್ತವಾಗಿ, ಆಕರ್ಷಕವಾಗಿ, ಓದುಗನ ಮನೆಸ್ಸಿಗೆ ಮುಟ್ಟುವಂತೆ ಧ್ಯಾನಿಸಿ ಹೇಳಬಲ್ಲ ಗುಣ ಇಲ್ಲಿಯ ಎಲ್ಲ ಲೇಖನಗಳಿಗಿದೆ. ಎಷ್ಟೋ ಬಾರಿ ಅವರು ಕಾವ್ಯ, ಕಥೆ, ಪ್ರಬಂಧಗಳೆಂಬ ಪ್ರಕಾರಗಳ ಗೆರೆಯನ್ನು ಇಲ್ಲವಾಗಿಸಬಲ್ಲಂತೆ ಬರೆಯುತ್ತಾರೆ. ಇದೇ ಬಗೆಯಲ್ಲಿ ಬರೆಯುವ ಅಥವಾ ಇನ್ನಷ್ಟು ಆಪ್ತವಾಗಿ ಬರೆಯಬಲ್ಲರೆಂದರೆ ರವಿ ಬೆಳೆಗೆರೆ ಅವರು. (ಕಾಕತಾಳಿಯವೆಂಬಂತೆ ಅನಂತಮೂರ್ತಿಯವರ ಮೇಲೆ ಹಲ್ಲೆಗಳಾದಾಗ ಅದನ್ನು ನೇರವಾಗಿ ಖಂಡಿಸಿ, ಯಾವ ಮುಲಾಜೂ ಇಲ್ಲದೆ ಬರೆದವರು ರವಿಬೆಳೆಗೆರೆ. ತೇಜಸ್ವಿ ಅವರ ಕುರಿತು ಲಂಕೇಶ್ ತೀಕ್ಷವಾಗಿ ಪ್ರತಿಕ್ರಿಯಿಸಿದಾಗ ಸಾತ್ವಾನಕ್ಕೆ ಬಂದವರೂ ರವಿಬೆಳೆಗೆರೆ ಎಂಬುದನ್ನಿಲ್ಲಿ ನೆನಪಿಸಿಕೊಳ್ಳಬಹುದು )

*

ಅನಂತಮೂರ್ತಿ ಅವರ ಭಾಷಣಗಳು, ಅಪ್ರಕಟಿತ ಲೇಖನಗಳ ಭಂಡಾರವೇ ನಮ್ಮ ಮುಂದಿವೆ. ಅದನ್ನು ಬರಹರೂಪಕ್ಕಿಳಿಸುವ ಕೆಲಸ ಸಾಗುತ್ತಿದೆ. ಮುಖ್ಯವಾಗಿ ಅನಂತಮೂರ್ತಿ ಅವರು ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದನ್ನು ನೆಪವಾಗಿರಿಸಕೊಂಡು, ‘ರಾಜಕೀಯ ರೂಪಕ’ವೆಂಬಂತೆ ಕೃತಿಯೊಂದನ್ನು ಗೆಳೆಯ ಇಸ್ಮಾಯಿಲ್ ಸಿದ್ಧಪಡಿಸುತ್ತಿದ್ದಾರೆ. ಅದು ಅನಂತಮೂರ್ತಿಯವರು ಸ್ಪರ್ಧಿಸಲು ಇದ್ದ ಅನಿವಾರ್ಯತೆ, ಆ ಸಂದರ್ಭದಲ್ಲಿ ರಾಜಕೀಯ ಮುಖಂಡರು, ಸಾಹಿತಿಗಳು ಮತ್ತು ಸಾಮಾನ್ಯ ಜನ ವ್ಯಕ್ತಪಡಿಸಿದ ಅಭಿಪ್ರಾಯಗಳು, ಅನಂತಮೂರ್ತಿಯವರು ತಮ್ಮನ್ನು ಬೆಂಬಲಿಸಲು ಸಂಸದರಿಗೆ ಬರೆದ ಪತ್ರಗಳು, ಪತ್ರಿಕೆಗಳು ಬರೆದ ಸಂಪಾದಕೀಯಗಳು, ಸುದ್ದಿ ವಿಶ್ಲೇಷಣೆಗಳು ಇತ್ಯಾದಿಗಳನ್ನೆಲ್ಲಾ ಒಳಗೊಂಡಿರುತ್ತದೆ. ಸದ್ಯದಲ್ಲಿಯೇ ಅದು ಬಿಡುಗಡೆಯಾಗುತ್ತದೆ. ಇವತ್ತಿನ ಪರಿಭಾಷೆಯಲ್ಲಿ ಹೇಳುವುದಾದರೆ ಒಂದು ಪುಟ್ಟ ಬ್ರೇಕನ್ ನಂತರ.

*

ಲೇಖನಗಳನ್ನು ಸಂಪಾದಿಸಿ ಪ್ರಕಟಿಸಲು ಅನುಮತಿ ನೀಡಿದ ಶ್ರೀ ಯು.ಆರ್. ಅನಂತಮೂರ್ತಿ ಅವರಿಗೆ ಮತ್ತು ಶ್ರೀಮತಿ ಎಸ್ತರ್ ಅನಂತಮೂರ್ತಿ ಅವರಿಗೆ,

ಇಲ್ಲಿಯ ಲೇಖನಗಳಲ್ಲಿ ಕೆಲವು ಲೇಖನಗಳನ್ನು ಕಡಿಮೆ ಸಮಯದಲ್ಲಿ ಅನುವಾದಿಸಿಕೊಟ್ಟ ಜಯಪ್ರಕಾಶ್ ಮತ್ತು ಭಾರತೀ ದೇವಿ ಅವರಿಗೆ,

ಅವರ ಭಾಷಣಗಳನ್ನು ಬರಹ ರೂಪಕ್ಕೆ ತಂದ ಶ್ರೀಧರ ಹೆಗ್ಗೊಡು, ಐತಾಳ್, ಕೆ.ಪುಟ್ಟಸ್ವಾಮಿ, ಸುಧಾಕರ್ ಅವರಿಗೆ, ಇಲ್ಲಿಯ ಲೇಖನಗಳನ್ನು ಪ್ರಕಟಿಸಿದ್ದ ಪತ್ರಿಕೆಗಳ ಸಂಪಾದಕರು ಮತ್ತು ಪುಸ್ತಕಗಳ ಲೇಖಕರು ಮತ್ತು ಸಂಪಾದಕರುಗಳಿಗೆ,

ಔಟ್‌ಲುಕ್‌ನ ಪತ್ರಿಕೆಯಲ್ಲಿ ಬಂದಿದ್ದ ಪೋಟೋಗಾಗಿ ‘ಔಟ್ ಲುಕ್ ಪತ್ರಿಕೆ’ಗೆ ಮತ್ತು ಅದನ್ನು ಬಳಸಿಕೊಳ್ಳಲು ಅನುಮತಿ ದೊರಕಿಸಿಕೊಟ್ಟ ಶ್ರೀ ಸುಗತ ಶ್ರೀನಿವಾಸರಾಜು ಅವರಿಗೆ,

ಹಿಂಬದಿಯ ಪೋಟೋಗಾಗಿ ಶ್ರೀ ಡಿ.ಸಿ.ನಾಗೇಶ್, ರಕ್ಷಾಪುಟ ವಿನ್ಯಾಸ ಮಾಡಿದ ಶ್ರೀ ಬಿ. ದೇವರಾಜ್ ಅವರಿಗೆ,

ಈ ಪುಸ್ತಕ ಪ್ರಕಟಗೊಳ್ಳಲು ಹಲವು ಬಗೆಯಲ್ಲಿ ನೆರವಾದ ಶ್ರೀ ಜೋಗಿ, ಕೆ.ವಿ.ಅಕ್ಷರ, ರಹಮತ್ ತರೀಕೆರೆ, ಸತೀಶ್ ಕುಮಾರ್, ಪ್ರಮೀಳಾ ಶ್ರೀನಿವಾಸ್ ಅವರಿಗೆ,

ನಮ್ಮ ಕೆಲಸವನ್ನು ಬೆಂಬಲಿಸುವ ಚಿ. ಶ್ರೀನಿವಾಸರಾಜು, ಎಚ್. ಎಸ್. ರಾಘವೇಂದ್ರರಾವ್, ಜಿ. ರಾಜಶೇಖರ, ಪ್ರಭುಶಂಕರ, ಕಿ. ರಂ. ನಾಗರಾಜ್, ರಾಜೀವ ತಾರಾನಾಥ್, ವಸಂತ ಅನಂತ ದಿವಾಣಜಿ, ರವಿ ಬೆಳೆಗೆರೆ, ಶಿವಪ್ರಕಾಶ್, ದೇವನೂರ ಮಹಾದೇವ, ಷ. ಶೆಟ್ಟರ್, ರಹಮತ್ ತರೀಕೆರೆ, ಫಣಿರಾಜ್, ನಟರಾಜ ಹುಳಿಯಾರ್ ಬಸವರಾಜ ಕಲ್ಗುಡಿ, ವಿಜಯಾ, ಬಿ.ಸುರೇಶ್, ಜಿ. ಎನ್. ಮೋಹನ್, ಕೆಂದೋಳೆ ಸುಬ್ರಹ್ಮಣ್ಯಂ, ಹೂವಪ್ಪ, ಎಮ್. ಕೆ. ನರಸಿಂಹಮೂರ್ತಿ, ಕೆ.ವೆಂಕಟರಾಜು, ಪುಷ್ಪಾ ಪಶುಪತಿ ಮತ್ತು ಅಜಿತಾವೇಣುಕೃಷ್ಣಪ್ರಸಾದ್ ಮುಂತಾದ ಹಿರಿಯರು, ಗೆಳೆಯರಿಗೆ

ಕೃತಜ್ಞತೆಗಳು.

ನ.ರವಿಕುಮಾರ
ಅಭಿನವದ ಪರವಾಗಿ
ಗಾಂಧಿಜಯಂತಿ,
೨-೧೦೨೦೦೭, ಬೆಂಗಳೂರು