ನಾವೆಲ್ಲರೂ ಕ್ರಮೇಣ ಕನಿಷ್ಠಗೊಳ್ಳುತ್ತಿರುವ, ಕುಬ್ಜಗೊಳ್ಳುತ್ತಿರುವ, ಅನಧಿಕೃತಗೊಳ್ಳುತ್ತಿರುವ ಈ ಕಾಲದ ದುರಂತದ ಬಗ್ಗೆ ಕೆಲವು ಮಾತುಗಳು.

ಬರೋಡಾದ ವಿಶ್ವವಿದ್ಯಾಲಯದ ಕಲಾ ವಿಭಾಗ ಇಡೀ ಭಾರತದಲ್ಲೇ ಹೆಸರಾದುದು. ನನಗೆ ಗೆಳೆಯರೂ ಮತ್ತು ನಾನು ಬಹುಶವಾಗಿ ಮೆಚ್ಚುವ ಕವಿಯೂ ಕಲಾವಿದನೂ ಆದ ಗುಲಾಂ ಮಹಮ್ಮದ್ ಶೇಖ್ ಈ ಕಲಾಶಾಲೆಯನ್ನು ಕಟ್ಟಿ ಬೆಳಸಿದವರಲ್ಲಿ ನಡೆದ ಗೊಂದಲದ ಬಗ್ಗೆ ಈಗ ನಿವೃತ್ತರಾದ ಗುಲಾಂ ಶೇಖ್ರು ರು ದುಃಖದಲ್ಲಿ ಹೇಳಿದರೆಂಬ ಒಂದು ಮಾತನ್ನು ಈಚೆಗೆ ಕೇಳಿಸಿಕೊಂಡೆ. ಗುಜರಾತಿನ ಕವಿ ಮಿತ್ರರೊಬ್ಬರು ನನಗಿದನ್ನು ಹೇಳಿದ್ದು:

ಕಲಾಶಾಲೆಯಲ್ಲಿ ನಡೆದದ್ದು ಎರಡು ದುರಂತಗಳು: ಮೊದಲನೆಯದು, ಕೆಲವು ವಿದ್ಯಾರ್ಥಿಗಳಿಂದ ರಚಿತವಾದ ಕಲಾಕೃತಿಗಳ ವಿಷಯದಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಶೈಕ್ಷಣಿಕವಾಗಿ ತೀರ್ಮಾನವಾಗಬೇಕಾಗಿದ್ದ ಮೌಲ್ಯಮಾಪನವನ್ನು ಹಿಂದುತ್ವದ ಕೆಲವು ಉಗ್ರಗಾಮಿಗಳು ಒಂದು ತ್ರಿಶೂಲವನ್ನು ಹಿಡಿದು ವಿಶ್ವವಿದ್ಯಾಲಯದ ಒಳಗೆ ನುಗ್ಗಿ ಹಿಂಸಾತ್ಮಕವಾಗಿ ನಡೆಸಿದ್ದು; ಎರಡನೆಯ ದುರಂತ, ಕಳಪೆಯೆಂದೇ ತೀರ್ಮಾನವಾಗುವುದರ ಬದಲಾಗಿ ಹಾಗೆ ಹೇಳಲಾರದಂತೆ ಬಾಯಿ ಕಟ್ಟಿದ್ದು. ಮೊದಲನೆಯ ದುರಂತದ ಫಲವೇ ಎರಡನೆಯ ದುರಂತ.

ಸ್ವತಃ ಕಲಾವಿದನೂ, ಮಾನವತಾವಾದಿಯೂ ಆದ ಗುಲಾಂ ಶೇಖ್‌ರು ಹೀಗೇ ಅಂದರೋ ಇಲ್ಲವೋ ನನಗೆ ತಿಳಿಯದು. ಆದರೆ ಕಲಾವಿದನಾದವನೊಬ್ಬನಿಗೆ ಕಲೆಯ ನಿಜವಾದ ಗುಣಗ್ರಾಹಿಯಾಗುವುದನ್ನು ಬದಿಗಿಟ್ಟು, ಕಲೆಗಾರನ ಆಜನ್ಮ ಸಿದ್ಧವಾದ ಹಕ್ಕಿನ ಸ್ವಾತಂತ್ರ್ಯದ ಬಗ್ಗೆ ಮಾತ್ರ ಮಾತಾಡಲೇಬೇಕಾದ ಸಂದರ್ಭ ಆರೋಗ್ಯಕರವಾದುದು ಅಲ್ಲ. ಆದರೂ ಯಾರೇ ಆಗಲಿ, ಆ ದಿನಗಳಲ್ಲಿ, ಮೋದಿ ಆಳುವ ಬರೋಡದಲ್ಲಿ ಇದ್ದಿದ್ದರೆ ಕೂಡಲೇ ಹೋರಾಡಬೇಕಾದ ಅನಿವಾರ‍್ಯತೆ ಮತೀಯತೆಯ ಅಂಧತೆ ವಿದುದ್ಧ; ಕ್ರೌರ‍್ಯದ ವಿರುದ್ಧ. ಇದರ ಪರಿಣಾಮವೆಂದರೆಃ ಈ ಹೋರಾಟದಲ್ಲಿ ನಾವೆಲ್ಲರೂ ಕಲೆಯ ಬಗ್ಗೆ ಅಂಧರಂತೆಯೇ ವರ್ತಿಸಬೇಕಾಗುತ್ತದೆ. ಎಲ್ಲೋ ನಮ್ಮ ಒಳನೋಟಗಳನ್ನು ಕನಿಷ್ಠಗೊಳಿಸಿಕೊಂಡೇ ನಾವು ಎದುರಾದುದಕ್ಕೆ ಮಾತ್ರ ಪ್ರತಿಕ್ರಿಯಿಸುತ್ತ ಇರುತ್ತೇವೆ.

ಆ ಚಿತ್ರಗಳು ಹಿಂದೂ ಧರ್ಮಕ್ಕೆ ಅಪಮಾನಕರವೆಂದು ಕೆಲವು ಕುಹಕಿಗಳೋ, ಅವಿವೇಕಿಗಳೋ ದಾಳಿಮಾಡಲು ಎಗರುತ್ತ ಇದ್ದಂತೆಯೇ, ಇಂತಹ ವರ್ತನೆ ಸರಿಯೇ ತಪ್ಪೇ ಎನ್ನುವುದೇ ನಮ್ಮ ಚರ್ಚೆಯ ವಿಷಯವಾಗಿಬಿಟ್ಟು ಏನೇನು ತಪ್ಪುಗಳು ಆಗುತ್ತವೆ ಗಮನಿಸಿ. ಒಬ್ಬ ವಿದ್ಯಾರ್ಥಿ ರಚಿಸಿರುವ ಒಂದು ಚಿತ್ರ ಒಂದು ಕಲಾಕೃತಿಯಾಗಿ ಚರ್ಚಿತವಾಗದೇ ಹೋಗಿ ವಿದ್ಯಾರ್ಥಿಗೆ ಅನ್ಯಾಯವಾಗಿದೆ; ತನ್ನ ನ್ಯೂನ್ಯತೆಗಳ ಅರಿವಿನಲ್ಲಿ ಬೆಳೆಯಬೇಕಾದವನು ಅಂತಹ ವಿಮರ್ಶೆಯಿಂದ ವಂಚಿತನಾಗಿದ್ದಾನೆ. ಕಲಾವಿದನಾಗಿ ತನ್ನ ಏಕಾಗ್ರವಾದ ತಪಸ್ಸಿನಲ್ಲಿ ಪಕ್ವವಾಗುತ್ತ ಗಳಿಸಬೇಕಾದ ಪ್ರಸಿದ್ಧಿಯ ಬದಲು ಚೀಪಾದ ಮೀಡಿಯಾ ಪ್ರಚಾರವನ್ನೆ ಗಿಟ್ಟಿಸಿಕೊಂಡರೆ ಸಾಕೆಂಬ ಪ್ರಲೋಭನೆಗೆ ಈ ಕಲಾವಿದ ಒಳಗಾಗಬಹುದು.

ಒಂದು ಸಾಹಿತ್ಯ ಕೃತಿ ಅಥವಾ ಒಂದು ಕಲಾಕೃತಿ ಹೀಗೆ ರಾಜಕೀಯವಾದ ಮತೀಯವಾದ ಒರಟಿನ ಹಿಂಸೆಗೆ ಗುರಿಯಾದಾಗ ನಾವು ನಮ್ಮ ನಾಗರಿಕ ಜೀವನದಲ್ಲಿ ವಿಭಿನ್ನ ದೃಷ್ಟಿಕೋನಗಳ ಮುಖೇನ, ವಾಗ್ವಾದದ ಮುಖೇನ ಪಡೆಯುವ ಅರಿವಿನ ಸ್ಪೋಟವನ್ನೂ, ವಿಕಾಸವನ್ನೂ ಕಳೆದುಕೊಂಡಂತೆ ಆಗುತ್ತದೆ. ಒಂದು ಕೃತಿಯನ್ನು ವಸ್ತುನಿಷ್ಠೆತೆಯ ಆಶಯದಲ್ಲಿ ನಮಗೇ ನಾವು ನಿಜಗೊಳಿಸಿಕೊಳ್ಳಲಾರದ ಉಸಿರು ಗಟ್ಟಿಸುವ ವಾತಾವರಣ ಸೃಷ್ಟಿಯಾಗುತ್ತದೆ. ಕಲಾಭಿಮಾನಿಯಾದ ನಾನು ಆ ಚಿತ್ರವನ್ನು ಒಳ್ಳೆಯದೆಂದು ಹೇಳದೇ ಸುಮ್ಮನಿದ್ದರೂ ಮತೀಯವಾದಿಗಳ ಆರ್ಭಟದಲ್ಲಿ, ಇವನು ಯಾಕೆ ಸುಮ್ಮನಿದ್ದಾನೆ ಎಂಬ ಗುಮಾನಿಗೆ ಒಳಗಾಗಬೇಕಾಗುತ್ತದೆ. ಕರ್ನಾಟಕದಲ್ಲಿ ಬಹಳ ಜನರ ಪಾಲಿಗೆ ಅನುದೇವಾ ಹೊರಗಣವನು ಕೃತಿಯ ಬಗ್ಗೆ ನಡೆದ ಚರ್ಚೆಯೂ ಈ ಬಗೆಯಲ್ಲೇ ಬಾಯಿ ಕಟ್ಟಿಸಿತು. ಒಟ್ಟಿನಲ್ಲಿ ನಮ್ಮ ಮನಸ್ಸಿನ ಸ್ವಾತಂತ್ರ್ಯ ಸದ್ಯದ ಭಾರತದಲ್ಲಿ ಹೀಗೆ ಅಪಹರಣವಾಗುತ್ತಿದೆ.

ನಾನೇನಾದರೂ ಬಂಗಾಳಿ ಬಲ್ಲ ಲೇಖಕನಾಗಿದ್ದರೆ ತಸ್ಲೀಮಾರ ಲಜ್ಜಾ ಎಷ್ಟು ಒಳ್ಳೆಯ ಕೃತಿ, ಅದರ ಗಾಢತೆ ಯಾವ ಬಗೆಯದು, ಅದರ ಸಿಟ್ಟು ಎಷ್ಟು ಆಳವಾದ್ದು, ಆದರ ಕಾಳಜಿ ಮುಸ್ಲಿಮರ ಅರಿವನ್ನು ಹೆಚ್ಚಿಸಲು ಎಷ್ಟು ಉಪಯುಕ್ತವಾದುದು ಎಂದು ಚರ್ಚಿಸಬಹುದಿತ್ತು. ಚೋಮನ ದುಡಿ ನಮ್ಮ ಸಂಪ್ರದಾಯಸ್ತ ಮನಸ್ಸನ್ನು ತಿದ್ದುವಂತೆ ಅಥವಾ ಶ್ರೀರಂಗರ ಹರಿಜನ್ವಾರ ಬ್ರಾಹ್ಮಣರ ಮೌಢ್ಯವನ್ನು ತಿದ್ದುವಂತೆ ಈ ಕೃತಿ ದಟ್ಟವಾಗಿ, ಆಳವಾಗಿ ಇದೆಯೋ ಇಲ್ಲವೋ? ಎನ್ನುವ ಚರ್ಚೆಯೇ ನಡೆಯದಂತೆ ಮುಸ್ಲಿಂ ಮತೀಯವಾದಿಗಳು ಕೃತಿಯನ್ನು ಮಾತ್ರವಲ್ಲ ಕೃತಿಕಾರ್ತಿಯ ಮೇಲೂ ಆಕ್ರಮಣ ಮಾಡಿರುವುದರಿಂದ ನಾವು ಒಂದು ಕೃತಿಯನ್ನೇ ಕಳೆದುಕೊಂಡಂತಾಗಿದೆ. ಅಷ್ಟೇ ಅಲ್ಲ; ನಮ್ಮ ಮೀಡಿಯಾಗಳು ನಿಜವಾದ ಆಸಕ್ತಿ ತೋರಿದ್ದು ಬಂಗಾಲಿಯಲ್ಲಿ ತನ್ನ ಜನರಿಗಾಗಿ ಬರೆಯುವ ಹೆಣ್ಣೊಬ್ಬಳ ಬಗ್ಗೆ ಅಲ್ಲ; ಅವಳ ಕೃತಿಯ ಬಗ್ಗೆ ಅಲ್ಲ. ಹಿಂದುತ್ವವಾದಿಗಳ ಹಿಂಸೆಯನ್ನು ವಿರೋಧಿಸುವ ನಾವೆಲ್ಲರೂ ಪೊಲಿಟಿಕಲ್ಲಿ ಕರೆಕ್ಟ್ ಆಗಿ ತೋರಬೇಕೆಂಬ ಆತಂಕದಲ್ಲಿ ಪರೀಕ್ಷೆಯಲ್ಲಿ ಉತ್ತರ ಬರೆಯುವ ವಿದ್ಯಾರ್ಥಿಗಳಂತಾಗಿಬಿಟ್ಟಿದ್ದೇವೆ. ತಕ್ಷಣದ ಸ್ಪಂದನದ ತ್ರೀವತೆ ಮತ್ತು ಪ್ರಾಮಾಣಿಕತೆ-ಗಳಿಗೆ ಬದಲಾಗಿ ನಾವಾಡುವ ಮಾತುಗಳು ಕಲಿತ ಗಿಣಿಮಾತುಗಳಾಗತೊಡಗಿವೆ. ಅದೂ ತಪ್ಪು, ಇದೂ ತಪ್ಪು ಎಂದು ಸಾರುತ್ತಲೇ ಇರುವ ಡಂಗುರದ ದಾಸಯ್ಯರಾಗಿ ಹೋಗಿದ್ದೇವೆ.

ನಿಜವಾದ ದುಃಖ ಸಂಕಟಗಳ ಮಾತೇ ಬೇರೆ. ಸಾದತ್ ಹಸನ್ ಮಾಂಟೋ ಎನ್ನುವ ಭಾರತ ವಿಭಜನೆಯ ಕಾಲದ ಒಬ್ಬ ಮಹಾನ್ ಕಥೆಗಾರ ಏಕಕಾಲದಲ್ಲಿ ಮತೀಯವಾದಿಯಾದ ಹಿಂದುವೂ ಮತೀಯವಾದಿಯಾದ ಮುಸ್ಲಿಮನೂ ಒಪ್ಪಿಕೊಳ್ಳಲಾರದಂತಹ, ಆದರೆ ಸಂಕಟಪಡಬೇಕಾದ ತೋಬಾತೇಕ್ ಸಿಂಗ್ ಎಂಬ ಕಥೆಯೊಂದನ್ನು ಬರೆದಿದ್ದಾನೆ. ಹೀಗೆ ಎರಡೂ ಬಗೆಯ ಮತೀಯವಾದಿಗಳೂ ಬಹಿಷ್ಕರಿಸಬೇಕು ಎಂದು ಕೇಳಬಹುದಾದ ಕೃತಿಗಳೇ ಈ ಕಾಲದ ಅತ್ಯಂತ ಪ್ರಾಮಾಣಿಕ ಸತ್ಯದ ಕೃತಿಗಳಾಗಿರಬಹುದೇನೋ!

ಎಲ್ಲ ಬಗೆಯ ತೀವ್ರವಾದಿಗಳೂ ಹೀಗೆ ನಮ್ಮ ಸತ್ಯ ದರ್ಶನದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದಾರೆ. ಇಂತಹ ದಿಕ್ಕು ಕೆಡುವ, ದಿಕ್ಕು ತಪ್ಪಿಸುವ ಸಂದರ್ಭದಲ್ಲೂ ಒಂದು ಕೃತಿಯನ್ನು ಕೃತಿಯಾಗಿ ನೋಡಿ, ಎಲ್ಲ ಕ್ರಿಯೆಗಳನ್ನೂ ಸತ್ಯದ ಓರೆಗಲ್ಲಿಗೆ ಹಚ್ಚಿ ನೋಡಿ, ನಮ್ಮ ವಿಮರ್ಶೆಯನ್ನು ಯಾವ ಹಂಗಿಲ್ಲದೆ ದಿಗಿಲಿಲ್ಲದೆ ಮಾಡುವ ಆಸೆಯನ್ನು ನಾವು ಕಳೆದುಕೊಳ್ಳಕೂಡದು. ಅದಕ್ಕೆ ಅಗತ್ಯವಾದ ನಿಷ್ಠುರದ ಭಾಷೆಯನ್ನೂ ಮನಃಸ್ಥಿತಿಯನ್ನೂ ನಾವು ನಮ್ಮ ಅಂತರಂಗದ ಒಳಗೂ, ನಮ್ಮ ಸಮಾಜದಲ್ಲೂ ಸೃಷ್ಟಿಸುವ ದಿವ್ಯದಲ್ಲಿ ಜನಪ್ರಿಯವಾಗುವಂತೆ ಬರೆಯುವ, ಮಾತನಾಡುವ ಗೀಳನ್ನು ಬಿಡಬೇಕಾಗಿದೆ. ಜನಪ್ರಿಯವಾಗಲೆಂದು ಯಾವುದಕ್ಕೂ ಹೇಸದ ಬಲಿಷ್ಠರ ಮೀಡಿಯಾಗಳನ್ನು ನಿರ್ಲಕ್ಷಿಸಬೇಕಾಗಿದೆ.

ಅಂದರೆ, ಒಂಟಿತನಕ್ಕೆ ಹೆದರದವರೇ ಒಂದು ಸಮುದಾಯವಾಗಬೇಕಿದೆ.

*

(‘ವಾರ್ತಾ ಭಾರತಿ’ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ. ಸೆಪ್ಟಂಬರ್ ೧, ೨೦೦೭)