ಸಂಸತ್‌ನಲ್ಲಿ ಒಮ್ಮೆ ಏನಾಯಿತು ಎಂದರೆ ಆಚಾರ್ಯ ಕೃಪಾಲಾನಿ ಸಿಟ್ಟಿಗೆದ್ದಿದ್ದರು. ಅವರು ಅದು ಯಾಕೆ ಸಿಟ್ಟಿಗೆದ್ದಿದ್ದರು ಎನ್ನುವುದು ನನಗೆ ನೆನಪಿಲ್ಲ. ಆದರೆ ಅವರು ತಮ್ಮ ಸಿಟ್ಟನ್ನು ಹೇಗೆ ವ್ಯಕ್ತಪಡಿಸಿದರು ಎನ್ನುವುದು ನೆನಪಿದೆ. ಗಾಂಧೀಜಿ ಬದುಕಿದ್ದಾಗ ಅವರ ಬಗ್ಗೆ ಕೂಡ ನಿಷ್ಠುರವಾಗಿ ಮಾತನಾಡಬಲ್ಲ ಮುತ್ಸದ್ದಿಯಾಗಿದ್ದ ಕೃಪಲಾನಿ ತಮ್ಮ ನಡುಗುವ ದನಿಯಲ್ಲಿ ‘ಈ ಸಚಿವರು ತಮ್ಮ ಅವಿವೇಕಕ್ಕೆ ಅಷ್ಟೆ’ ಎಂದಿದ್ದರು. ಪ್ರಾಯಶಃ ಕೃಪಲಾನಿ ಇದೇ ಪದಗಳನ್ನು ಆಡಿರಲಾರರು. ಆದರೆ, ಅವರ ಮಾತಿನ ಅರ್ಥ ಮಾತ್ರ ಇದೇ ಆಗಿತ್ತು. ಕೃಪಲಾನಿಯಂಥ ಧೀಮಂತರಿಗೆ ಪ್ರತಿಭಟನೆಯ ಅತ್ಯುಗ್ರ ವಿಧಾನವೆಂದರೆ ಸಭಾತ್ಯಾಗ ಮಾಡುವುದಾಗಿತ್ತು.

ಆದರೆ ಇವತ್ತು ಹೀಗೆ ಸಭೆಯಿಂದ ಹೊರನಡೆಯುವುದು ಏನೂ ಅಲ್ಲ. ಏಕೆಂದರೆ ಪ್ರತಿಭಟನೆ ಎಂದರೆ ಗಂಟಲು ಹರಿದುಹೋಗುವಂತೆ ಘೋಷಣೆಗಳನ್ನು ಕೂಗುವುದು ಮತ್ತು ದಿನಗಟ್ಟಲೆ ಕಲಾಪ ನಡೆಯದಂತೆ ಅಡ್ಡಿಪಡಿಸುವುದು ಎಂಬಂತಾಗಿಬಿಟ್ಟದೆ. ಇಷ್ಟೇ ಅಲ್ಲ, ವಿರೋಧಿಗಳನ್ನು ಮನಸೋ ಇಚ್ಛೆ ತಳ್ಳುವುದು, ಎಳೆದಾಡುವುದೆಲ್ಲನ ನಡೆಯುತ್ತದೆ. ಆದರೆ ಇದು ಯಾರ ಮನಸನ್ನೂ ಸೆಳೆದಿಲ್ಲ. ಇಂಥ ಅತ್ಯುಗ್ರ ಪ್ರತಿಭಠನೆ ಈಗ ಪ್ರತಿಪಕ್ಷಗಳ ಸಾಲಿನಲ್ಲಿ ಕೂತಿರುವವರು ಅನಿವಾರ್ಯವಾಗಿ ಮಾಡಲೇಬೇಕಾದ ನಾಟಕದಂತಾಗಿಬಿಟ್ಟಿದೆ. ಈಗ ನಮ್ಮನ್ನು ಆಳುತ್ತಿರುವವರೂ ಒಮ್ಮೆ ಇಂಥ ನಾಟಕ-ಮಾಡಿದ್ದಾರೆ. ಈಗ ಇನ್ನೊಬ್ಬರ ಸರದಿ ಬಂದಿದೆ ಅಷ್ಟೆ.

ನಮ್ಮನ್ನು ಶತಮಾನಗಳ ಕಾಲ ಆಳಿದ ಬ್ರಿಟಿಷರ ವಿರುದ್ಧ ಗಾಂಧೀಜಿ ಕಟ್ಟಕಡೆಗೆ ಬಳಸಿದ ಅತ್ಯಂತ ಕಹಿಯಾದ ಶಬ್ದಗಳನ್ನು ಪ್ರಯೋಗಿಸಲು ತಮಗೆ ತಾವೇ ಒಪ್ಪಿಗೆ ಕೊಟ್ಟುಕೊಳ್ಳುವ ಮೊದಲು ಗಾಂಧೀಜಿ, ದಶಕಗಳನ್ನು ಕಾಲ ಸತ್ಯಾಗ್ರಹದಂಥ ಸಾಧನಗಳ ಮೂಲಕ ಬ್ರಿಟಿಷರ ಹೃದಯ ಪರಿವರ್ತಿಸಲು ನೋಡಿದ್ದರು. ಆದರೆ ಸ್ವಾತಂತ್ರ್ಯ ಸಿಕ್ಕಿದ ನಂತರ ನಾವು ಭಾಷೆಗಿರುವ ಮನವೊಲಿಸುವ ಶಕ್ತಿಯ ಮೇಲೆ ನಂಬಿಕೆಯನ್ನೇ ಕ್ರಮೇಣ ಕಳೆದುಕೊಂಡಿದ್ದೇವೆ. ೧೯ನೆಯ ಶತಮಾನದಲ್ಲಿ ಇಂಗ್ಲೆಂಡಿನ ದೊಡ್ಡದೊಡ್ಡ ಲೇಖಕರೆಲ್ಲ ಭಾಷೆಯ ಈ ಶಕ್ತಿಯನ್ನು ಹಿಗ್ಗಿಸಲು ಸಾಕಷ್ಟು ಪ್ರಯೋಗಗಳನ್ನು ಮಾಡಿದರು. ಕಾರ್ಲೈಲ್ ಇರಲಿ, ರಸ್ಕಿನ್ ಇರಲಿ ಅಥವಾ ಮ್ಯಾಥ್ಯೂ ಆರ್ನಾಲ್ಡ್ ಇರಲಿ, ಇವೆಲ್ಲರೂ ತಮ್ಮ ವಿರೋದಿಗಳನ್ನು ಸಮಾಧಾನಪಡಿಸಲು ಭಾಷೆಯ ಸಕಲ ಸಂಪನ್ಮೂಲಗಳನ್ನೂ ಬಳಸಿದರು. ಇದು ಸಾಧ್ಯವಾಗಿದ್ದು ಆ ಕಾಲದಲ್ಲಿ ಜಾರಿಯಲ್ಲಿದ್ದ ಪ್ರಜಾಸತ್ತಾತ್ಮಕ ಚಳವಳಿಗಳಿಂದ. ಇದರ ಅರ್ಥ ಇಷ್ಟೆ-ಅಂದರೆ, ಒಂದು ನಿರ್ದಿಷ್ಟ ವಿಷಯದ ಬಗ್ಗೆ ತನ್ನ ವಿರೋಧಿಯೊಬ್ಬ ಚಿಂತಿಸುವ ಕ್ರಮವನ್ನು ತಾವು ಬಳಸುವ ಭಾಷೆಯಿಂದ ಬದಲಿಸಬಹುದೆನ್ನುವ ನಂಬಿಕೆ.

ಭಾರತದಲ್ಲೂ ಹೀಗಾಗಿದೆ. ಇಲ್ಲೂ ರಾಜಾರಾಂ ಮೋಹನರಾಯ್, ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿ,

[1] ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು, ತಿಲಕ್, ಅಂಬೇಡ್ಕರ್ ಮತ್ತು ಗೋಖಲೆ ಅವರೆಲ್ಲ ಭಾಷೆಯನ್ನು ಹೀಗೆ ತಮ್ಮ ವಿರೋಧಿಗಳ ಮನವೊಲಿಸಲು ಬಳಸಿದವರೇ. ಜತೆಗೆ ಬೇರೊಂದು ನಿಲುವು ಹೊಂದಿರುವ ತಮ್ಮ ವಿರೋದಿಗಳನ್ನು ಭಾಷೆಯ ಸಮರ್ಪಕ  ಬಳಕೆಯಿಂದ ಪ್ರಭಾವಿಸಬಹುದು ಎಂಬ ನಂಬಿಕೆ ಇವರಿಗೆಲ್ಲ ಇತ್ತು. ಇವೆರೆಲ್ಲರ ಪೈಕಿ ಅತ್ಯಂತ ಸರಳವಾಗಿದ್ದ ಗಾಂಧೀಜಿ ಅನನ್ಯ ಬರಹಗಾರ ಮತ್ತು ಮಾತುಗಾರರಾಗಿದ್ದರು. ಇನ್ನೊಂದೆಡೆ ರಾಜಾಜಿಯಂಥವರ ಮಾತಿನಲ್ಲಿ ತಮಾಷೆ ಮತ್ತು ಬುದ್ಧಿವಂತಿಕೆಗಳು ಮೇಳೈಸಿಕೊಂಡಿರುತ್ತಿದ್ದವು. ಆಗಿನ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ರಾಜಾಜಿ ಆಡಿದ ಮಾತನ್ನು ನಾವೆಂದೂ ಮರೆಯಲು ಸಾಧ್ಯವಿಲ್ಲ. ಅವರು ಹೇಳಿದ್ದಿಷ್ಟೆ: ‘ನನಗೆ ಎರಡು ಶತ್ರುಗಳಿವೆ. ಪಿಡಬ್ಲ್ಯುಡಿ ಇಲಾಖೆ ನನ್ನ ಮೊದಲ ಶತ್ರು; ಈ ಕಮ್ಯುನಿಸ್ಟರು ನನ್ನ ಎರಡನೆಯ ವೈರಿಗಳು’.

ನಮ್ಮಲ್ಲಿ, ಅಂದರೆ ಕರ್ನಾಟಕ ರಾಜಕೀಯ ರಂಗದಲ್ಲಿ ಭಾಷೆಯನ್ನು ಹೀಗೆ ಮನವೊಲಿಸಲು ಬಳಸಿದ ಅಗ್ರಗಣ್ಯರೆಂದರೆ ಶಾಂತವೇರಿ ಗೋಪಾಲಗೌಡರು. ಇನ್ನೊಂದೆಡೆ ನಮ್ಮ ಕವಿ ಬೇಂದ್ರೆ ಇದ್ದಾರೆ, ಬೇಂದ್ರೆಯನ್ನು ಕೇಳಿಸಿಕೊಂಡಾಗ ಅವರು ತಮಗೆ ತಾವೇ ಏನೋ ಮಾತಾಡಿಕೊಳ್ಳುತ್ತಿದ್ದಾರೆ ಅನಿಸುತ್ತಿತ್ತು. ಆದರೆ ಅವರು ಕೇಳುಗರನ್ನೆಲ್ಲ ಮಂತ್ರಮುಗ್ಧಗೊಳಿಸುತ್ತಿದ್ದರು. ನಾನು ದೇವರಾಜ ಅರಸು, ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲರ ಮಾತುಗಳನ್ನೆಲ್ಲ ಆಲಿಸಿದ್ದೇನೆ. ಇವರೆಲ್ಲ ನಿಜವಾಗಿಯೂ ಭಾಷೆಗಿರುವ ಮನವೊಲಿಕೆಯ ಶಕ್ತಿಯ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದರು. ಆದರೆ ಈಗ ನೋಡಿದರೆ ನಮ್ಮ ಒಬ್ಬೇ ಒಬ್ಬ ರಾಜಕಾರಣಿಗೂ ಭಾಷೆ ಮತ್ತು ಅದರ ತರ್ಕದ ಮೇಲೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ.

ಇಷ್ಟೇ ಅಲ್ಲ, ಜಾಹೀರಾತಿನ ಭಾಷೆಯೇ ಈಗ ಸಂಹನದ ಪ್ರತಿಯೊಂದು ಕ್ಷೇತ್ರವನ್ನೂ ಆಕ್ರಮಿಸಿಕೊಂಡಿದೆ. ನಮ್ಮ ಭಿನ್ನಾಭಿಪ್ರಾಯಗಳನ್ನು ಹೊಸಕಿ ಹಾಕುವುದೇ ಈ ಜಾಹೀರಾತಿನ ಭಾಷೆಯ ಉದ್ದೇಶ. ಇತ್ತೀಚಿಗೆ ಕನ್ನಡದ ಎರಡು ಪತ್ರಿಕೆಗಳು ಈ ಲೇಖಕಕನ ವಿರುದ್ಧ ‘ಎಸ್‌ಎಂಎಸ್ ದಾಳಿ’ ನಡೆಸಿದವು. ಇಡೀ ಕನ್ನಡ ಸಾಹಿತ್ಯ ಚರಿತ್ರೆಯಲ್ಲೇ ಯಾವತ್ತೂ ಇಂಥ ೨-೩ ಸಾಲುಗಳ ಅನಾರೋಗ್ಯಕರ ಆಕ್ರಮಣ ನಡೆದಿರಲಿಲ್ಲ. ಆದರೆ ನಮ್ಮ ಸಾಂಸ್ಕೃತಿಕ ಜಗತ್ತು ಇದರ ವಿರುದ್ಧ ಯಾವ ಪರಿಣಾಮಕಾರಿ ಪ್ರತಿಭಟನೆಯನ್ನೂ ತೋರಲಿಲ್ಲ. ನಿಷ್ಠುರವಾದ ಸತ್ಯಕ್ಕೆ ಬದ್ಧರಾದ ಲೇಖಕರೊಬ್ಬರು ಇದನ್ನು ಖಂಡಿಸಿ ಬರೆದರು. ಆದರೆ ಅವರ ಲೇಖನವನ್ನು ಪೊಳ್ಳಾಗಿಸುವಂತಹ ಇನ್ನೊಂದು ಲೇಖನವನ್ನೂ ಆ ಪತ್ರಿಕೆ ಬರೆಸಿ ಅದೇ ಸಂಚಿಕೆಯಲ್ಲಿ ಪ್ರಕಟಿಸಿತು. ಇದು ನಿಜಕ್ಕೂ ನಮ್ಮ ಕಾಲದ ಅತ್ಯಂತ ಅನಾರೋಗ್ಯಕರ ಬೆಳವಣಿಗೆ ಎನಿಸುತ್ತದೆ. ಇದನ್ನು ಬಿಟ್ಟರೆ ನಮ್ಮ ಪತ್ರಿಕೆಗಳಲ್ಲಿ ಏನೂ ಇರುವುದಿಲ್ಲ, ಅವು ಪೇಲವವೂ ನೀರಸವೂ ಆಗಿರುತ್ತವೆ. ವಾಸ್ತವವಾಗಿ ಸುದ್ದಿ ಮಾಧ್ಯಮಗಳಿಗೆ ಸಾವಿನಂಥ ಗಂಭೀರ ಸಂಗತಿ ಕೂಡ ತೀರಾ ತಮಾಷೆಯ ವಸ್ತುವಾಗಿ ಪರಿಣಮಿಸಿಬಿಟ್ಟಿದೆ.

ಇತ್ತೀಚೆಗೆ ಕಾಶಿಯಲ್ಲಿ ಕೆಲವು ಅಂಗವಿಕಲರು ತಮ್ಮ ಆಗ್ರಹಗಳ ಕಡೆ ಗಮನ ಸೆಳೆಯಲು ಟಿ.ವಿ. ಕ್ಯಾಮರಾಗಳ ಮುಂದೆ ಸಲೀಸಾಗಿ ವಿಷ ಕುಡಿದರು. ಇದಕ್ಕೆ ಯಾರನ್ನು ದೂಷಿಸಬೇಕು? ಇವರ ಬಗ್ಗೆ ಗಮನಹರಿಸದ ಸರ್ಕಾರವನ್ನೋ ಅಥವಾ ನೇಣು ಬಿಗಿದುಕೊಂಡು ಇಲ್ಲವೇ ಸೀಮೆಎಣ್ಣೆ ಸುರಿದುಕೊಂಡು ಸಾಯುವ ದೃಶ್ಯಗಳನ್ನು ಪದೇ ಪದೇ ಪ್ರಸಾರ ಮಾಡುವ ಸುದ್ದಿ ಮಾಧ್ಯಮಗಳನ್ನೋ? ಇಷ್ಟಾದ ಮೇಲೆ ಇದರ ಬಗ್ಗೆ ಒಂದು ಚಾನೆಲ್ ನಲ್ಲಿ ಇಂಥದನ್ನು ತೋರಿಸಬಹುದೇ ? ಎನ್ನುವ ಚರ್ಚೆ ನಡೆಯುತ್ತಿದ್ದಾಗಲೇ ಈ ಸಾವಿನ ದೃಶ್ಯಗಳನ್ನು ಮತ್ತೆ ಮತ್ತೆ ತೋರಿಸಲಾಗುತ್ತಿತ್ತು.

ಇಂಗ್ಲೆಂಡ್ ನಲ್ಲಿ ಹಿಂದೆ ಚರ್ಚಿಲ್, ದೇಶಕ್ಕೆ ಎದುರಾಗಿರುವ ಕಷ್ಟವನ್ನು ಧೈರ್ಯದಿಂದ ಎದುರಿಸುವಂತೆ ಜನರಿಗೆ ಮನದಟ್ಟು ಮಾಡಿಕೊಟ್ಟ. ಹಾಗೆಯೇ ತನ್ನ ಭಾಷೆಯಿಂದ ಪ್ರಗತಿಪರ ಚಿಂತನೆಯನ್ನೇ ತುಳಿದು ಹಾಕಿದ ಹಿಟ್ಲರ್ ಕೂಡ ಇದ್ದಾನೆ. ಆರ್ವೆಲ್ ಹೇಳುವಂತೆಃ ‘ರಾಜಕಾರಣಿಗಳು ಸದಾ ದ್ವಂದ್ವವನ್ನೇ ಮಾತನಾಡುತ್ತಾ, ಜನರ ಕಣ್ಣಿಗೆ ಮಣ್ಣೆರಚುತ್ತಾರೆ’. ಈಗಂತೂ ಜಾರ್ಜ್ ಬುಷ್ ಇದ್ದಾನೆ. ಇವರೆಲ್ಲ ಭಾಷೆಯನ್ನೂ ದುರುಪಯೋಗ ಮಾಡಿಕೊಂಡವರು. ಭಾರತ ಕೂಡ ಇದರಿಂದೇನೂ ಹೊರತಾಗಿಲ್ಲ.

ಹಾಗಾದರೆ ಸ್ವಾತಂತ್ರ್ಯಕ್ಕೆ ಮುಂಚೆ ಭಾರತ ಹೇಗಿತ್ತು? ಎನ್ನುವ ಪ್ರಶ್ನೆ ಬರುತ್ತದೆ. ಕೆಲ ತಿಂಗಳ ಹಿಂದೆ ನಾನಾ ತೀರಾ ಹಳೆಯದಾದ ಎರಡು ಕರಪತ್ರಗಳನ್ನು ನೋಡಿದೆ. ಇವು ನನ್ನ ಕಣ್ಣಿಗೆ ಬಿದ್ದಿದ್ದು ಮಲೆನಾಡಿನ ತೀರ್ಥಹಳ್ಳಿಯಲ್ಲಿ. ಮಹಾತ್ಮ ಗಾಂಧೀಜಿ ೧೯೨೯ರಲ್ಲಿ ತೀರ್ಥಹಳ್ಳಿಗೆ ಬಂದಿದ್ದರು. ಆಗ ತೀರ್ಥಹಳ್ಳಿಯ ಹಿರಿಯರೆಲ್ಲ ಸೇರಿ, ಗಾಂಧೀಜಿಯನ್ನು ನೋಡಲು ಮತ್ತು ಅವರ ಭಾಷಣವನ್ನು ಕೇಳಲು ಜನರೆಲ್ಲ ಒಂದು ನಿಗದಿತ ಸಮಯದಲ್ಲಿ ಊರಮಧ್ಯದಲ್ಲಿ ಸೇರಬೇಕೆಂದು ವಿಜ್ಞಾಪನೆ ಮಾಡಿ-ಕೊಂಡಿದ್ದರು. ಆದರೆ ಈ ವಿಜ್ಞಾಪನೆ ಎರಡು ಷರತ್ತುಗಳನ್ನು ಒಳಗೊಂಡಿತ್ತು. ಯಾರೊಬ್ಬರೂ ‘ಮಹಾತ್ಮ ಗಾಂಧೀಜಿ ಕೀ ಜೈ ಎಂದು ಕೂಗಬಾರದು’ ಮತ್ತು ‘ಯಾರೊಬ್ಬರು ಗಾಂಧೀಜಿಯ ಸುತ್ತ ಮುತ್ತಿಕೊಳ್ಳಬಾರದು’ ಎನ್ನುವುದೇ ಆ ಎರಡು ಷರತ್ತುಗಳಾಗಿದ್ದವು. ಇನ್ನೊಂದು ಕರಪತ್ರದಲ್ಲಿ ಗಾಂಧೀಜಿಯವರಿಗೆ ಮಾಡಿಕೊಂಡ ಅರಿಕೆ ಇತ್ತು. ಇದರಲ್ಲಿ ಊರಿನ ಹಿರಿಯರೆಲ್ಲ ತಾವು ಖಾದಿ ಅಭಿವೃದ್ದಿಗೆ ದುಡಿಯುತ್ತಿರುವುದಾಗಿ ಹೇಳಿ, ಅಸ್ಪೃಶ್ಯತೆ ನಿವಾರಣೆ ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಗಾಂಧೀಜಿಯ ಕ್ಷಮೆ ಕೋರಿದ್ದರು. ಅಸತ್ಯ ಪ್ರದರ್ಶನ ಈ ಕಾಲದಲ್ಲಿ ಇದನ್ನಂತೂ ಯಾರೂ ನಂಬುವುದಿಲ್ಲ.

ಸ್ವಾತಂತ್ರ್ಯ ಸಿಕ್ಕುವುದಕ್ಕೆ ಮುಂಚೆ ಮತ್ತು ಅನಂತರ ಕೂಡ ಅದೆಷ್ಟೋ ವರ್ಷಗಳ ಕಾಲ ನಮ್ಮ ಪ್ರತಿಯೊಂದು ನಗರಗಳಲ್ಲೂ ಆಕಾಶವನ್ನು ನಾವೆಲ್ಲ ನೋಡಬಹುದಿತ್ತು. ಆದರೆ ಈಗ ಇದು ಸಾಧ್ಯವೇ ಇಲ್ಲ. ಏಕೆಂದರೆ ಯಾವ ನಗರಕ್ಕೇ ಹೋದರೂ ಒಬ್ಬಲ್ಲ ಒಬ್ಬ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿರುವ ದೊಡ್ಡದೊಡ್ಡ ಫಲಕಗಳೇ ತುಂಬಿಕೊಂಡಿರುತ್ತವೆ. ಈ ಫಲಕಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಾಯಕನ ಜತೆಗೆ ಆತನ ಅನುಯಾಯಿಗಳ ಭಾವಚಿತ್ರಗಳು ಕಣ್ಣಿಗೆ ರಾಚುತ್ತಿರುತ್ತವೆ. ಇನ್ನು ಪ್ರತಿನಿತ್ಯವೂ ಒಬ್ಬಲ್ಲ ಒಬ್ಬ ಇಂಥ ರಾಜಕಾರಣಿಯ ಅಥವಾ ಇಂಥದೇ ಇನ್ನೊಬ್ಬನ ಹುಟ್ಟುಹಬ್ಬವಿರುತ್ತದೆ. ಇದನ್ನು ನಿಮಗೆ ನೋಡಲು ಇಷ್ಟವಿಲ್ಲವೆಂದರೂ ಅದರಿಂದ ತಪ್ಪಿಸಿಕೊಳ್ಳವುದು ಸಾಧ್ಯವೇ ಇಲ್ಲ. ಏಕೆಂದರೆ ಇಂಥ ಫಲಕಗಳನ್ನು ಬಿಟ್ಟರೆ ನಮ್ಮ ನಗರಗಳಲ್ಲಿ ಈಗ ಇನ್ನೇನೂ ಇಲ್ಲ. ಇದನ್ನು ಬಿಟ್ಟರೆ ಇರುವುದೆಲ್ಲ ಹಲ್ಲುಜ್ಜುವ ಪೇಸ್ಟು, ಮೈಗೆ ಹಾಕುವ ಸೋಪು ಅಥವಾ ಒಳುಉಡುಪಗಳ ಭರ್ಜರಿ ವ್ಯಾಪಾರಕ್ಕೆಂದೇ ಅವತರಿಸಿರುವ ಮಾದಕ ಜಾಹೀರಾತುಗಳು ಅಷ್ಟೆ. ಇವೇ ಈಗ ಯಾವುದೇ ವಿಷಯದ ಬಗ್ಗೆ ನಮ್ಮ ಮನಸ್ಸನ್ನು ಒಪ್ಪಿಸುವಂಥ ಸಾಧನೆಗಳಾಗಿ ಬಿಟ್ಟಿವೆ.

ಈಗ ನಾವು ಯಾವುದರ ಬಗ್ಗೆ ಸಿಕ್ಕಾಪಟ್ಟೆ ಕೋಪ ಅಥವಾ ತೀವ್ರ ಅಸಂತೋಷ ವ್ಯಕ್ತಪಡಿಸುತ್ತಿದ್ದೇವೆ ಹೇಳಿ? ಅನೇಕರ ಹಸಿವಿನ ಬಗ್ಗೆಯಾಗಲಿ, ರೈತರ ಆತ್ಮಹತ್ಯೆ ಬಗ್ಗೆಯಾಗಲಿ ನಾವ್ಯಾರೂ ಕೋಪತಾಪವನ್ನಾಗಲಿ, ಅಸಮಾಧಾನವನ್ನಾಗಲಿ ಹೊರಹಾಕುತ್ತಿಲ್ಲ. ಬಸವಣ್ಣನ ಮೂಲದ ಬಗ್ಗೆ ಸದುದ್ದೇಶದಿಂದ ಬರೆದ ಒಂದು ಸಂಶೋಧನಾ ಕೃತಿಯನ್ನು ಕೆಲವು ಗೌರವಾನ್ವಿತ ಮಹಿಳೆಯರೇ ಇತ್ತೀಚೆಗೆ ಬಹಿರಂಗವಾಗಿ ಸುಟ್ಟುಹಾಕಿದರು. ಈ ಕೃತಿಯಲ್ಲಿ ಹೇಳಿರುವ ವಿಚಾರಗಳಲ್ಲಿ ಖಾಚಿತ್ಯ ಇಲ್ಲದಿರುವುದನ್ನು ಟೀಕಿಸಲು/ಅದರ ಬಗ್ಗೆ ದನಿಯೆತ್ತಲು ಮುಕ್ತ ಅವಕಾಶವಿದ್ದರೂ ಈ ಮಹಿಳೆಯರು ಟಿ.ವಿ. ಕ್ಯಾಮರಾಗಳ ಸಲುವಾಗಿ ಈ ತಮಾಷೆಯನ್ನೆಲ್ಲ ಮಾಡಿದರು. ಆಮೇಲೆ ಸರಕಾರ ಪುಸ್ತಕವನ್ನೇ ಮುಟ್ಟುಗೋಲು ಹಾಕಿಕೊಂಡಿತು.

ತರ್ಕದ ಮೂಲಕ ವಿರೋಧಿಗಳ ಮನವೊಲಿಸುವ ಶಕ್ತಿ ಭಾಷೆಗಿದೆ. ಆದರೆ ಭಾಷೆಯ ಈ ಶಕ್ತಿಯ ಮೇಲೆ ನಾವು ನಂಬಿಕೆಯನ್ನೇ ಕಳೆದುಕೊಂಡಿದ್ದೇವೆ. ಹೀಗಾಗಿ ಈಗ ಒಂದು ನಾಗರಿಕತೆಯಾಗಿ ನಾವು ದ್ವಿತೀಯ ದರ್ಜೆಯವರಾಗಿದ್ದೇವೆ.

*

(ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ೧೫ ಆಗಸ್ಟ್ ೨೦೦೭ ಕನ್ನಡಕ್ಕೆ ಬಿ.ಎಸ್,ಜಯಪ್ರಕಾಶ ನಾರಾಯಣ)


[1] ಗಾಂಧಿಜಿಯ ಇಂಗ್ಲಿಷಿನ ಕೆಲವು ತಪ್ಪುಗಳನ್ನು ‘ಹರಿಜನ’ ಪತ್ರಿಕೆಗೆ ಓದುಗರ ಪರವಾಗಿ ಬರೆದು ತಿದ್ದಿದವರು. ನಿಷ್ಠಾವಂತ ವ್ಯಾಕರಣಿಯ ಗಾಂಧಿಯ ಇಂಗ್ಲಿಷ್ ಸಮಕಾಲೀನ ನುಡಿಗಟ್ಟಿನ ಸರಳತೆ ಪಡೆದಿತ್ತು. ನೋಡಿ: ಕೆ.ವಿ. ಸುಬ್ಬಣ್ಣ: ಸ್ವರಾಜ್ಯದ ಹಾದಿ ಹೆಜ್ಜೆಗಳು, ಪುಟ ೧೧೨-೧೧೬.