ಅರ್ಧಶತಮಾನಕ್ಕೂ ಹಿಂದೆ ನಾನು ಕುಗ್ರಾಮವೊಂದರ ಕನ್ನಡ ಶಾಲೆಯ ವಿದ್ಯಾರ್ಥಿ. ಅಂದರೆ ಅದು ೧೯೪೦ರ ದಶಕದ ಉತ್ತರಾರ್ಧ. ಆಗ ನಮ್ಮ ಗುರುಗಳು ಇಂಗ್ಲಿಷನ್ನು ಕಲಿತುಕೊಳ್ಳಬೇಕೆಂದರೆ, ಅದರಲ್ಲಿ ಸುಧಾರಿಸಬೇಕೆಂದರೆ ‘ದಿ ಹಿಂದೂ’ ಪತ್ರಿಕೆಯನ್ನು- ಅದರಲ್ಲೂ ಸಂಪಾದಕೀಯಗಳನ್ನು-ಓದಲು ಹೇಳುತ್ತಿದ್ದರು. ಆಗಿನಿಂದಲೂ ನಾನು ‘ದಿ ಹಿಂದೂ’ ಪತ್ರಿಕೆಯನ್ನು ಅದರ ದೃಷ್ಟಿಕೋನ ಮತ್ತು ಸುದ್ದಿಗಾಗಿ, ಹಾಗೆಯೇ ಅದು ಭಾಷೆಯನ್ನು ಬಳಸುವ ರೀತಿಗಾಗಿ ಆರ್ವೆಲ್ ಹೇಳಿದಂತೆ ಓದುತ್ತಲೇ ಇದ್ದೇನೆ. ಅದರ ಭಾಷೆ ಓದುಗನ ಮನವೊಲಿಸುವ ಧಾಟಿಯಲ್ಲಿ ಇರುತ್ತದೆಯೇ ವಿನಾ ತಾನೇತಾನಾಗಿ ಸವಾರಿ ಮಾಡುವುದಿಲ್ಲ.

ಈಗ ನಾನೊಂದು ಕತೆ ಹೇಳಬೇಕು. ಸೋವಿಯತ್ ಒಕ್ಕೂಟ ಹರಿದು ಹಂಚಿಯೋಗುವ ಮೊದಲು ಕೇರಳದಲ್ಲಿ ಹಬ್ಬಿದ ಈ ಕತೆ ಕಲ್ಪಿತವೇ ಇರಬಹುದು. ಆದೇನೆಂದರೆ ಕೇರಳದ ಸಾಹಿತ್ಯ ಲೋಕದಲ್ಲಿ ಗೋವಿಂದನ್ ಅವರದು ಬಹುದೊಡ್ಡ ಹೆಸರು. ಅವರದು ನಿಭೀತ ವ್ಯಕ್ತಿತ್ವ. ಕೇರಳದ ಅನೇಕ ಹೊಸ ಲೇಖಕರು, ಸಿನಿಮಾ ನಿರ್ಮಾಪಕರು ಮತ್ತು ಚಿತ್ರ ಕಲಾವಿದರ ಮೇಲೆಲ್ಲ ದಟ್ಟ ಪ್ರಭಾವ ಬೀರಿದವರು ಅವರು. ಆದರೆ ಅಲ್ಲಿ ಪ್ರಗತಿಪರ ಲೇಖಕರೆಲ್ಲ ‘ಸಮಾಜವಾದಿ ವಾಸ್ತವವಾದ’ಕ್ಕೆ ಮತ್ತು ಸೋವಿಯತ್ ಒಕ್ಕೂಟಗಳ ಸುಳ್ಳುಗಳಿಗೇ ಜೋತುಬಿದ್ದುಬಿಟ್ಟರು. ಆಗ ಕ್ರಾಂತಿಕಾರಿ ಮಾನವತಾವಾದಿ ಮತ್ತು ಸಮಾಜವಾದಿಯಾದ ಗೋವಿಂದನ್ ಸುಮ್ಮನಿರಲಿಲ್ಲ. ಬದಲಿಗೆ ಇಡೀ ಕೇರಳದ ಸಾಹಿತ್ಯ ಲೋಕದಲ್ಲಿ ಮುಕ್ತ ಚಿಂತನೆಗಳು, ಆರ್ವೆಲ್ ಮಾದರಿಯ ಸಾದಾಸೀದಾ ಸತ್ಯಗಳು ಮತ್ತು ಪ್ರಯೋಗಶೀಲ ಬರಹವನ್ನು ಉತ್ತೇಜಿಸಲು ಶುರು ಮಾಡಿದರು. ಆದರೆ ಪ್ರಗತಿಶೀಲ ಲೇಖಕರೆಲ್ಲ ಒಂದು ಕಡೆಯಾದರೆ, ಗೋವಿಂದನ್ ಅದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗಿದರು. ಹೀಗಿದ್ದಾಗ ಒಮ್ಮೆ ಅವರು ಆತ್ಮಹತ್ಯೆ ಮಾಡಿಕೊಂಡು ಇಹಲೋಕ ವ್ಯಾಪಾರ ಮುಗಿಸಿದ ಒಬ್ಬ ಸೋವಿಯತ್ ಲೇಖಕನ ಬಗ್ಗೆ ಮಾತನಾಡಿದರು. ಪಕ್ಷಕ್ಕೆ ಬದ್ಧರಾಗಿದ್ದ ಅನುಯಾಯಿಗಳಿಗೆ ಇದರಿಂದ ಚಿಂತೆಯಾಯಿತು. ಅವರು ಕೂಡಲೇ ಈ ವಿಷಯವನ್ನು ತಮ್ಮ ಅಗ್ರಗಣ್ಯ ನಾಯಕ ಇ.ಎಂ.ಎಸ್. ನಂಬೂದರಿಪಾದ್ ಬಳಿ ಕೊಂಡೊಯ್ದು ತಾವು ಹೇಗೆ ಇದಕ್ಕೆ ಪ್ರತಿಕ್ರಿಯಿಸಬೇಕೆಂದು ಕೇಳಿದರಂತೆ. ನಂಬೂದರಿಪಾದ್ ಆಗ, ‘ನೀವು ಹೇಳುತ್ತಿರುವ ಸುದ್ದಿ ಹಿಂದೂ ಪತ್ರಿಕೆಯಲ್ಲಿ ಬಂದಿದೆಯೇ?’ ಎಂದರಂತೆ!

ಇದು ‘ದಿ ಹಿಂದೂ’ ಪತ್ರಿಕೆಯ ಮುಕ್ತ ಮತ್ತು ಮಾನವತಾವಾದಿ ನಿಲುವಿನ ಹೆಗ್ಗಳಿಕೆಗೆ ಇದೊಂದು ನಿದರ್ಶನ. ಅಷ್ಟೇನೂ ಆಕರ್ಷಕವಲ್ಲದ ಮುಖಪುಟದೊಂದಿಗೆ ‘ಹಿಂದೂ’ ಬರುತ್ತಿದ್ದ ದಿನಗಳಲ್ಲೂ ಮತ್ತು ತೀರಾ ಸಂಪ್ರದಾಯಬದ್ಧವಾಗಿ ಅದರಲ್ಲಿ ಸುದ್ದಿಗಳು ಪ್ರಕಟವಾಗುತ್ತಿದ್ದಾಗಲೂ ಅದರ ಸಂಪಾದಕೀಯ ಮಾತ್ರ ಅರಚಾಟದಂತೆ ಕಂಡಿಲ್ಲ. ಆದರೆ ಅದು ತನ್ನ ಓದುಗರ ಮನವೊಲಿಸುವ ಧಾಟಿಯಲ್ಲಿ ಮತ್ತು ಆತ್ಮಾವಲೋಕನದ ಧಾಟಿಯಲ್ಲಿ ಇರುತ್ತಿತ್ತು. ಅಂದಹಾಗೆ ‘ಸಂಪ್ರದಾಯಬದ್ಧ’ ಎಂದರೆ ಈಗಿನಂತೆ ಪ್ರತಿಗಾಮಿ ಕೋಮುವಾದವಾಗಿರಲಿಲ್ಲ. ಹಾಗೆ ನೋಡಿದರೆ ದೊಡ್ಡ ವ್ಯಕ್ತಿಗಳಾದ ರಾಜಾಜಿ, ಬಾಬು ರಾಜೇಂದ್ರ ಪ್ರಸಾದ್ ಮತ್ತು ಸರ್ದಾರ್ ಪಟೇಲ್ ಕೂಡ ಸಂಪ್ರದಾಯವಾದಿಗಳೇ. ಅಂದರೆ ಅವರು ವಿವೇಕವಂತರಾಗಿದ್ದು, ಆಮೂಲಾಗ್ರ ಬದಲಾವಣೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದರು. ಇವರ ಪೈಕಿ ದೊಡ್ಡ ದೇಶಭಕ್ತರಾಗಿದ್ದ ರಾಜಾಜಿ ಅವರಂತೂ ಯಾವುದೇ ವಿಚಾರದ ಬಗ್ಗೆ ಅಪ್ರಿಯವಾದ ನಿಲುವನ್ನು ವ್ಯಕ್ತಪಡಿಸಲು ಮತ್ತು ಬಾಂಗ್ಲಾ ಯುದ್ಧದ ಸಮಯದಲ್ಲಿ ಮಾಡಿದಂತೆ ಸಮೂಹ ಸನ್ನಿಯ ವಿರುದ್ಧ ಮಾತನಾಡಲು ಹಿಂದೆಮುಂದೆ ನೋಡುತ್ತಿರಲಿಲ್ಲ. ಕೆಲ ವರ್ಷಗಳ ಹಿಂದೆ ನಾನು ‘ದಿ ಹಿಂದೂ’ ಪ್ರಕಟಿಸಿರುವ ತನ್ನ ಕೆಲವು ಹಳೆಯ ಸಂಪಾದಕೀಯಗಳಿರುವ ಪುಸ್ತಕವನ್ನು ಓದುತ್ತಿದ್ದೆ. ಉದಾರ ಮಾನವತಾವಾದಿ ಕಳಕಳಿಯಿಂದ ಕೂಡಿರುವ ಅದರ ವಿವೇಕಪೂರ್ಣ ಮತ್ತು ದೃಢ ನಿಲುವುಗಳನ್ನು ಗಮನಿಸಿದರೆ, ಯಾರಿಗೇ ಆದರೂ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಗೌರವ ಮತ್ತು ವಿಸ್ಮಯ ಹುಟ್ಟಿಬಿಡುತ್ತದೆ. ಸ್ವಾತಂತ್ರ್ಯ ಹೋರಾಟದ ಆ ಅಶಾಂತಿಯ ದಿನಗಳಲ್ಲೂ ಇಂಥದೊಂದು ಆರೋಗ್ಯಪೂರ್ಣ ನಿಲುವು ಹೇಗೆ ಸಾಧ್ಯವಾಯಿತು ಎನ್ನುವುದು ಈ ಅಚ್ಚರಿಗೆ ಕಾರಣ.

ಅಂಥ ದಿನಗಳು ಈಗ ಖಂಡಿತ ಇಲ್ಲ. ಪ್ರಜಾಪ್ರಭುತ್ವಕ್ಕೆ ಪರ್ಯಾಯವೇ ಇಲ್ಲ ಎನ್ನುವುದು ಸತ್ಯ. ಆದರೆ ನಮ್ಮ ಕಾಲದ ವೋಟ್ ಬ್ಯಾಂಕ್ ರಾಜಕೀಯ ಮತ್ತು ನಮ್ಮ ರಾಜಕಾರಣಿಗಳ ನಿರ್ಲಜ್ಜ ಭ್ರಷ್ಟಾಚಾರದಿಂದಾಗಿ ನಾವೆಲ್ಲ ಹತಾಶೆಯಿಂದ ಚೀತ್ಕರಿಸುವ ಸ್ಥಿತಿಗೆ ಬಂದಿದ್ದೇವೆ. ‘ಜಾತ್ಯಾತೀತ’ವೆಂದು ಕೊಚ್ಚಿಕೊಳ್ಳುವ ಪಕ್ಷಗಳು ಈಗ ಮುಸ್ಲಿಂ ವೋಟ್ ಬ್ಯಾಂಕ್ ಸೃಷ್ಟಿಸಿಕೊಳ್ಳಲು ಹವಣಿಸುತ್ತಿದ್ದರೆ, ಹಿಂದುತ್ವವನ್ನೇ ಹೇಳುವ ಪಕ್ಷಗಳು ‘ಹಿಂದೂ ವೋಟ್ ಬ್ಯಾಂಕ್‌’ನ ಕನಸು ಕಾಣುತ್ತಿವೆ. ಇನ್ನು ‘ದಲಿತ ರಾಜಕೀಯ’ವಂತೂ ಚೌಕಾಸಿ ವ್ಯಾಪಾರ ಆಗಿಹೋಗಿದ್ದು, ‘ದಲಿತ ವೋಟ್ ಬ್ಯಾಂಕ್‌’ನ ಗುರಿ ಹೊಂದಿವೆ. ಈ ಬಗೆಯ ಲೆಕ್ಕಾಚಾರಗಳಿರುವ ರಾಜಕಾರಣ ತೀರಾ ಸಿನಿಕವಾದುದು. ಏಕೆಂದರೆ ಇಂಥ ಕ್ಲುಲ್ಲಕ ಲೆಕ್ಕಾಚಾರಗಳಿಂದ ಅಧಿಕಾರಕ್ಕೆ ಬಂದ ಯಾವ ಪಕ್ಷವೂ ಹಿಂದುಳಿದ ಹಿಂದೂಗಳು, ಮುಸ್ಲಿಮರು ಮತ್ತು ದಲಿತರಲ್ಲಿ ಮಡುಗಟ್ಟಿರುವ ಬಡತನ ಮತ್ತು ಅಜ್ಞಾನಗಳ ಬಗ್ಗೆ ಕಳಕಳಿಯಿಂದ ಯೋಚಿಸುವುದಿಲ್ಲ. ಇಂಥ ಸ್ಥಿತಿಯಲ್ಲಿ ಮುಸ್ಲಿಮರು ಮತ್ತು ದಲಿತರೆಲ್ಲ ಸದಾ ಭಯದಿಂದಲೇ ದಿನದೂಡಬೇಕಾಗುತ್ತದೆ. ಇವರ ಬಡತನವೇ ರಾಜಕೀಯ ಪಕ್ಷಗಳ ವೋಟ್ ಬ್ಯಾಂಕ್‌ಗೆ ಬಂಡವಾಳವಾಗುತ್ತದೆ.

ಇದನ್ನೆಲ್ಲ ನೋಡಿ ಯಾರಿಗೇ ಆದರೂ ಕೆಲವೊಮ್ಮೆ ಹತಾಶೆಯಿಂದ ಚೀತ್ಕರಿಸಬೇಕು ಎನಿಸುತ್ತದೆ. ಆದರೆ ಇಂಥ ಸ್ಥಿತಿ ಭಾಷೆಯನ್ನು ಸಮರ್ಥವಾಗಿ ಬಳಸಲು ಸಾಧ್ಯವಾಗದೆ ಇರುವ ವೈಫಲ್ಯದ ಸಂಕೇತವಾಗಿ ಬಿಡುತ್ತದೆ. ಹೀಗಾಗುವುದು ನಮ್ಮ ನಾಗರಿಕತೆಯಲ್ಲಿ ಇರುವ ಪರಮ ಆಲಸ್ಯದ/ಜಡತ್ವದ ಪ್ರತೀಕ.

ಸ್ವಾತಂತ್ರ್ಯಕ್ಕೆ ಮುಂಚೆ ಭಾರತ ತನ್ನ ಸೈದ್ಧಾಂತಿಕ ಕಲ್ಪನೆಗಳಲ್ಲಿ ಹೆಚ್ಚು ಪುರೋಗಾಮಿಯೂ ಮುಕ್ತವೂ ಆಗಿತ್ತು. ಆದ ದಾಶ್ನಿಕರಂತಿದ್ದ ನೆಹರು, ಪಟೇಲ್, ಗಾಂಧೀಜಿ, ರಾಜಾಜಿ ಮತ್ತು ಸುಭಾಷ್‌ಚಂದ್ರ ಬೋಸ್ ಎಲ್ಲರಲ್ಲೂ ಭಿನ್ನಾಭಿಪ್ರಾಯಗಳಿದ್ದವು. ಆದರೆ ಅವರು ಭಾಷೆ ಮತ್ತು ತರ್ಕದ ಆಧಾರದ ಮೇಲೆ ಆ ಸೂಕ್ಷ್ಮಗಳನ್ನು ವ್ಯಕ್ತಪಡಿಸುತ್ತಿದ್ದರು. ಇನ್ನು ನಮ್ಮಲ್ಲಿದ್ದ ದೊಡ್ಡ ವ್ಯಕ್ತಿಗಳು ಹಿಂದೂ ಧರ್ಮದ ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕತೆಯ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದರು. ಅತ್ಯಂತ ಸಹಾನುಭೂತಿಯುಳ್ಳ ಮತ್ತು ಸಹಿಷ್ಣುತೆಯುಳ್ಳ ಹಿಂದೂ ಧರ್ಮವನ್ನು ಪ್ರತಿಪಾದಿಸಿದ ಬಂಕಿಮಚಂದ್ರ ಚಟರ್ಜಿ, ಬಾಲಗಂಗಾಧರ ತಿಲಕ್ ಮತ್ತು ಅರವಿಂದ ಘೋಷ್‌ರಂಥವರಿದ್ದರು. ಆದರೆ ಈಗ ಹಿಂದುತ್ವದ ಚಾಂಪಿಯನ್‌ಗಳಾಗಿರುವ ತೊಗಾಡಿಯಾ ಮತ್ತು ಮೋದಿಯಂಥವರ ಬಗ್ಗೆ ನಾವು ಹೇಗೆ ಮಾತನಾಡುವುದು ಹೇಳಿ? ತಾವು ಲೋಹಿತಯಾ ಶಿಷ್ಯರೆಂದು ಕೊಚ್ಚಿಕೊಳ್ಳುವ ಲಾಲೂ ಪ್ರಸಾದ್ ಅಂಥವರ ಅಗ್ಗದ ರಾಜಕೀಯ ಮತ್ತು ಲೋಹಿಯಾ ಪ್ರತಿಪಾದಿಸಿದಂಥ ಉದಾತ್ತ ತತ್ವಗಳ ಬಗ್ಗೆ ಜತೆಜತೆಯಲ್ಲೇ ಯಾರಾದರೂ ಮಾತನಾಡಲು ಸಾಧ್ಯವೇ? ಹಾಗೆಯೇ ನಾವು ರಾಜಕಾರಣದಲ್ಲಿರುವ ನಮ್ಮ ಮಹಿಳೆಯರು ಎಂಬ ವಿಷಯ ಇಟ್ಟುಕೊಂಡು ಸರೋಜಿನಿ ನಾಯ್ದು, ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಜಲಲಲಿತಾ ಬಗ್ಗೆ ಏಕಕಾಲದಲ್ಲಿ ಮಾತನಾಡಬಹುದೇ? ಖಂಡಿತವಾಗಿಯೂ ನಮ್ಮ ಬದುಕಿನ ಗುಣಮಟ್ಟ ಮತ್ತು ಸಾರ್ವಜನಿಕ ಚಿಂತನೆಗಳು ಎಲ್ಲೋ ಹಳಿ ತಪ್ಪಿವೆ.

ಭ್ರಷ್ಟಾಚಾರದಂಥ ರೋಗ ನಮ್ಮ ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿರುವ ರೀತಿಯೂ ಈ ಕುಸಿತಕ್ಕೆ ಕಾರಣವಾಗುತ್ತದೆ. ಇದು ದುರದೃಷ್ಟಕರ. ಏಕೆಂದರೆ ಮಾಧ್ಯಮಗಳು ‘ಸುದ್ಧಿಯಾಗುವಂಥ’ ಅಂಶಗಳನ್ನು ಮಾತ್ರವೇ ಹೆಕ್ಕಿಕೊಳ್ಳುತ್ತವೆ; ಜತೆಗೆ ಭಾವೋದ್ರೇಕತೆ ಯಾವುದರಲ್ಲಿ ಸಾಧ್ಯವೆಂದು ನೋಡುತ್ತಿರುತ್ತವೆ. ಐವತ್ತು ವರ್ಷಗಳ ಹಿಂದೆ ತೊಗಾಡಿಯಾನಂಥವರು ತುಮಕೂರಿನಂಥ ಅಥವಾ ಹಾಸನದಂಥ ಜಿಲ್ಲಾ ಕೇಂದ್ರದಲ್ಲಿ ಮಾತನಾಡಿದ್ದರೆ ಅದು ಖಂಡಿತ ರಾಷ್ಟ್‌ಈಯ ಸುದ್ಧಿಯಾಗುತ್ತಿರಲಲ್ಲ. ಆದರೆ ತೊಗಾಡಿಯಾ ಇವತ್ತು ಶೋಚನೀಯ ಸ್ಥಿತಿಯಲ್ಲಿದ್ದರೂ ಮತ್ತು ಮಾಧ್ಯಮಗಳು ಆತನನ್ನು ರಾಜಕೀಯವಾಗಿ ಮಾತ್ರ ಸಮಂಜಸವೆನಿಸುವ ದೃಷ್ಟಿಯಿಂದ ವಿಮರ್ಶಿಸಿದ್ದರೂ ಆತ ಮಾತ್ರ ಒಬ್ಬ ರಾಷ್ಟ್ರೀಯ ನಾಯಕನಾಗಿಬಿಟ್ಟಿದ್ದಾನೆ! ತೊಗಾಡಿಯಾನಂಥವರು ಇಷ್ಟೊಂದು ಕ್ಷಿಪ್ರ ಗತಿಯಲ್ಲಿ ರಾಷ್ಟ್ರೀಯ ನಾಯಕನಾಗುವುದು ಸಾಧ್ಯವಾಗಿರುವುದು ಮತ್ತು ಜೀವನವಿಡೀ ಸಂತ್ರಸ್ತರಿಗಾಗಿ ಹೋರಾಡುತ್ತಿರುವ ಮೇಧಾ ಪಾಟ್ಕರ್ ಥರದವರು ಇಂಥ ಸ್ಥಾನಮಾನಕ್ಕೆ ಏರದೆ ಇರುವುದನ್ನು ನೋಡಿ ನನಗಂತೂ ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಒಟ್ಟಿನಲ್ಲಿ ನಮ್ಮ ಈ ಕಾಲದಲ್ಲಿ ಮಾಧ್ಯಮಗಳು ನಕಾರಾತ್ಮಕ ಸಂಗತಿಗಳಿಗೆ ಕೊಡುತ್ತಿರುವ ಗಮನ ಮತ್ತು ಆದ್ಯತೆಗಳಲ್ಲೇ ಏನೋ ದೋಷವಿದೆ. ಅನಗತ್ಯ/ಅಪಾತ್ರ ಸಂಗತಿಯನ್ನೇ ದೊಡ್ಡದಾಗಿ ತೋರಿಸುವುದು ಮಾಧ್ಯಮಗಳ ಪಾಲಿಗೆ ಇದು ಒಂದು ವ್ಯಾಪಾರಿ ತಂತ್ರ ಇನ್ನೊಂದೆಡೆ ನಕಾರಾತ್ಮಕ ಪ್ರಚಾರ ಈಗಲೂ ದುಷ್ಟಶಕ್ತಿಗಳ ಪಾಲಿಗೆ ತಾವು ಪೆಡಂಭೂತದಂತೆ ಬೆಳೆಯಲು ವರವೇ ಆಗಿದೆ. ನಮ್ಮ ದೃಶ್ಯ ಮಾಧ್ಯಮಗಳಲ್ಲಂತೂ ಈ ಪ್ರವೃತ್ತಿ ಕಣ್ಣಿಗೆ ದೊಡೆದಂತೆ ಕಾಣುತ್ತದೆ.

ಇತ್ತೀಚೆಗೆ ಮಾಧ್ಯಮಗಳು ದೊಡ್ಡದಾಗಿ ಬರೆದ/ ಬಿಂಬಿಸಿದ ಒಂದು ಘಟನೆಯಂತೂ ನನ್ನನ್ನಂತೂ ಸಿಕ್ಕಾಪಟ್ಟೆ ಕಂಗೆಡಿಸಿತು. ಅದೇನೆಂದರೆ, ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ನರೇಂದ್ರ ಮೋದಿ ತಮಗೆ ಅಶ್ಲೀಲ ಇ-ಮೇಲ್ ಕಳಿಸಿದ್ದಕ್ಕಾಗಿ ಜೈಲಯ ಕಂಬಿಯ ಹಿಂದೆ ಕೊಳೆಯುತ್ತಿದ್ದ ಒಬ್ಬ ಬಡಪಾಯಿ ಮುಸ್ಲಿಂ ಯುವಕನನ್ನು ಬಿಡುಗಡೆ ಮಾಡಿದ ಘಟನೆ. ಗುಜರಾತಿನಲ್ಲಿ ಅತ್ಯಂತ ಬೀಭತ್ಸಕರವಾದ ಮತ್ತು ನಾಚಿಕೆಗೇಡಿನ ಕೋಮುಗಲಭೆಗಳನ್ನು ನಡೆಸಿದ ಮತ್ತು ಪ್ರಧಾನಿಯಿಂತ ರಾಜಧರ್ಮ ಪರಿಪಾಲಿಸುವಂತೆ ಎಚ್ಚರಿಕೆಯನ್ನು ಪಡೆದ ಈ ಮೋದಿ ಹೀಗೆ ಮುಸ್ಲಿಂ ಹುಡುಗನೊಬ್ಬನನ್ನು ಕ್ಷಮಿಸುವ ಔದಾರ್ಯ ತೋರಿದ್ದನ್ನು ಮಾಧ್ಯಮಗಳು ದೊಡ್ಡ ಫೋಟೋ ಹಾಕಿ, ಪ್ರಕಟಿಸಿದವು. ನಾವು ಅತ್ಯಂತ ಗಾಢವಾಗಿ ಪ್ರೀತಿಸುವ ಮತ್ತು ಮೆಚ್ಚುವ ‘ದಿ ಹಿಂದೂ’ವಿನಲ್ಲೂ ಈ ಫೋಟೋ ಬಂದಿದ್ದನ್ನು ನೋಡಿ ನನಗೆ ನಿಜಕ್ಕೂ ಬೇಸರವಾಯಿತು. ಆದರೆ ಸಾರ್ವಜನಿಕ ಜೀವನದಲ್ಲಿ ನಮ್ಮ ನೈತಿಕ ಮೌಲ್ಯಗಳು ಉಳಿಯಬೇಕೆಂದರೆ, ವಸ್ತುನಿಷ್ಠ ವರದಿಗಾರಿಕೆ ಮತ್ತು ಅಪರಾಧಿಯೊಬ್ಬನನ್ನು ನ್ಯಾಯಬದ್ಧವಾಗಿ ತಿರಸ್ಕರಿಸುವುದನ್ನು ಒಂದಕ್ಕೊಂದು ತದ್ವಿರುದ್ಧ ಸಂಗತಿಗಳೆಂಬಂತೆ ನಾವು ನೋಡಬಾರದು.

‘ದಿ ಹಿಂದೂ’ ಪತ್ರಿಕೆಯ ಸಂಪಾದಕ ಶ್ರೀ ಎನ್. ರಾಮ್ ಅವರು ಬಹಳ ವರ್ಷಗಳಿಂದಲೂ ನನಗೆ ಗೊತ್ತು. ಅವರು ಮಾರ್ಕ್ಸ್‌ ಮತ್ತು ಹೆಗೆಲ್ ಪ್ರತಿಪಾದಿಸಿದ ಮೌಲ್ಯಗಳ ನಂಬಿಕಸ್ಥರು; ಹಾಗೆಯೇ ಸಂಸ್ಕೃತಿ ಮತ್ತು ಸಾಹಿತ್ಯವೆಂದರೂ ಅವರಿಗೆ ಪ್ರೀತಿ. ಸಾಂಸ್ಕೃತಿಕ ಘಟನೆಗಳನ್ನು ಆಮೂಲಾಗ್ರವಾಗಿ ವರದಿ ಮಾಡುವ ‘ಹಿಂದೂ’, ಈಗಲೂ ಅತ್ಯುತ್ತಮ ರಾಷ್ಟ್ರೀಯ ದಿನಪತ್ರಿಕೆ. ಜನಪ್ರಿಯವಲ್ಲದೆ ಇದ್ದರೂ ಮತ್ತು ಯಾವುದೇ ಗ್ಲ್ಯಾಮರ್ ಇಲ್ಲದೆ ಇದ್ದರೂ ಈ ಪತ್ರಿಕೆ ಇನ್ನು ಮುಂದೆಯೂ ಕ್ರಿಯಾಶೀಲ ಅಲ್ಪಸಂಖ್ಯಾತರ ದೃಷ್ಟಿ-ಧೋರಣೆಗಳನ್ನು ಸಮರ್ಥಿಸುವ ಧೈರ್ಯವನ್ನು ಹೊಂದಿರುತ್ತದೆ ಎನ್ನುವ ಭರವಸೆ ನನ್ನದು. ಇಂಥ ಮಧ್ಯ ಪ್ರವೇಶ ಇಲ್ಲದಿದ್ದರೆ ನಮ್ಮ ಅಗ್ಗದ ಜನಪ್ರಿಯತೆಗೆ ಈಡಾಗುವ ಪ್ರಜಾಪ್ರಭುತ್ವ, ದುಬಾರಿ ಚುನಾವಣೆಯಿಂದ ಹುಟ್ಟುವ ಭ್ರಷ್ಟಾಚಾರ, ಅಧಿಕಾರಸ್ಥರ ದುರಾಸೆ ಮತ್ತು ಸಿನಿಕತನದಿಂದ ಹುಟ್ಟುವ ಕ್ಷಣಭಂಗುರ ಯಶಸ್ಸಯ ಎಲ್ಲವನ್ನೂ ಕುಲಗೆಡಿಸಿಬಿಡುತ್ತವೆ. ಇದರ ಪರಿಣಾಮದಿಂದ ಅತ್ಯಂತ ಸದೃಢವಾದ ನಮ್ಮ ಭಾರತೀಯ ನಾಕರಿಕತೆಯ ಮೌಲ್ಯಗಳು ಕೂಡ ನಾಮಾವಶೇಷವಾಗುತ್ತವೆ. ವೋಟ್ ಬ್ಯಾಂಕ್ ಮೇಲೆ ನಡೆಯುತ್ತಿರುವ ಸಿನಿಕ ರಾಜಕಾರಣ ನಮ್ಮ ಮೇಲೆ ದಾಳಿ ಮಾಡಿದವರು ಸಾಧಿಸಲಾಗದ್ದನ್ನು ಸಾಧಿಸುವಲ್ಲಿ ಗೆಲ್ಲುವ ಸಾಧ್ಯತೆ ಇದೆ. ಆದರೆ ಅತ್ಯಂತ ದೊಡ್ಡ ಪರಂಪರೆಯುಳ್ಳ ರಾಷ್ಟ್ರೀಯ ಪತ್ರಿಕೆಯಾದ ‘ದಿ ಹಿಂದೂ’, ಇದೆಲ್ಲಾ ಸಾಧ್ಯವಾಗಲು ಬಿಡಬಾರದು.

*

(‘ದಿ ಹಿಂದೂಪತ್ರಿಕೆಯ ನೂರ ಇಪ್ಪತ್ತೈದನೆಯ ವರ್ಷಾಚರಣೆ ಸಂದರ್ಭದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾಡಿದ ಭಾಷಣ (೨೦೦೪). ಕನ್ನಡಕ್ಕೆ: ಬಿ.ಎಸ್. ಜಯಪ್ರಕಾಶ ನಾರಾಯಣ)