ನಮ್ಮ ಶೈಕ್ಷಣಿಕ ವಲಯದಲ್ಲಿ ಚಾಲ್ತಿಯಲ್ಲಿರುವ ‘ಅನುವಾದ’ ಎಂಬ ಪದದ ‘ವಿಶೇಷ’ವೆನ್ನಿಸುವ ಅರ್ಥವನ್ನು ಪಲ್ಲಟಗೊಳಿಸಿ, ಅದನ್ನು ದಿನನಿತ್ಯದ ಬಳಕೆಯ ನೆಲೆಯಲ್ಲಿ ಆತ್ಮೀಯಗೊಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ದಿನನಿತ್ಯದ ಮಾತುಕತೆಗಳ ಕಡೆಗೆ ಒಮ್ಮೆ ದೃಷ್ಟಿ ಹಾಯಿಸೋಣ. ಬಹುತೇಕ ಸಂದರ್ಭಗಳಲ್ಲಿ ನಾವು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುತ್ತಿರುತ್ತೇವೆ. ನಮ್ಮಲ್ಲಿ ಅನೇಕರು ಮೂರು ಭಾಷೆಗಳನ್ನು ಆಡುತ್ತಿರುತ್ತಾರೆ. ಒಂದು ಮನೆಯೊಳಗೆ, ಇನ್ನೊಂದು ಹೊರಗೆ, ಮತ್ತೊಂದು ಕಛೇರಿಯಲ್ಲಿ. ನೀವು ನಿಮ್ಮ ತಾಯಿಗೆ ಕಛೇರಿಯಲ್ಲಿ ಏನಾಯಿತು ಎಂದು ವಿವರಿಸುವಾಗ ಅದನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸಿ ಹೇಳುತ್ತಿರುತ್ತೀರಿ. ನಿಮ್ಮ ಅಮ್ಮ ನಿಮ್ಮ ಭಾಷೆಯಲ್ಲಿ ಹೇಳಿದ್ದನ್ನು ಕಛೇರಿಯಲ್ಲಿ ಹಂಚಿಕೊಳ್ಳುವಾಗ, ಅದನ್ನು ಇನ್ನೊಂದು ಭಾಷೆಗೆ ಅನುವಾದಿಸುತ್ತೀರಿ.

ಇದು ಕೇವಲ ಸಮಕಾಲೀನ ನಗರೀಕೃತ ಬದುಕಿನ ವೈಷಿಷ್ಟ್ಯ ಮಾತ್ರವಲ್ಲ, ಆದಿಶಂಕರರೂ ಕೂಡಾ ಎರಡು ಭಾಷೆಗಳನ್ನು ಬಳಸುತ್ತಿದ್ದರೆಂದು ಕಾಣುತ್ತದೆ. ಕಾಲಡಿಯಲ್ಲಿ ಮಲಯಾಳವಾದರೆ, ತಾವು ಸಂಚರಿಸಿದ ಇತರೆಡೆಗಳಲ್ಲಿ ಸಂಸ್ಕೃತ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಶಂಕರರು ಭಾಷೆಯ ಸಂಕೀರ್ಣ ಜಾಲವನ್ನು ಹಾದೇ ಪಯಣಿಸಿದ್ದರು. ಉಡುಪಿಯ ಆನಂದತೀರ್ಥರೂ ಮೂರು ಭಾಷೆಗಳನ್ನು ಬಳಸುತ್ತಿದ್ದಿರಬೇಕು; ಮನೆಯಲ್ಲಿ ತುಳು, ಹೊರಗೆ ಕನ್ನಡ ಮತ್ತು ಇತರ ಕಡೆಗಳಲ್ಲಿ ಸಂಸ್ಕೃತ. ರಾಮಾನುಜರು ಸಮಾಜದ ಕೆಳವರ್ಗದ ಸಂತರಿಂದ, ತಮಿಳುನಾಡಿನ ಆಳ್ವಾರರಿಂದ ಪ್ರಭಾವಿತರಾಗಿದ್ದರೂ ಅನುಭಾವಿಕ ಕಾಣ್ಕೆಯನ್ನು ವಿವರಿಸುವಲ್ಲಿ ಸಂಸ್ಕೃತವನ್ನೇ ಬಳಸಿದರು.

ಭಾರತೀಯರಾದ ನಾವು ಬಹುಭಾಷಿಕ ಪರಿಸರದಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿ ‘ಮಾತೃಭಾಷೆ’ ಎಂಬ ಪದದ ಅರ್ಥ ಯೂರೋಪಿನಲ್ಲಿ ಅದಕ್ಕೆ ಆರೋಪಿಸಲಾದ ಅರ್ಥವಲ್ಲ. ಅನ್ಯಭಾಷೆಯಲ್ಲಿ ಬರೆಯುತ್ತಿದ್ದ ಇಂಗ್ಲೆಂಡಿನ ಕಾದಂಬರಿಕಾರ ಜೋಸೆಫ್ ಕಾನ್ರಾಡ್ ಇದಕ್ಕೆ ಅಪವಾದ, ಯೂರೋಪಿನಲ್ಲಿ ಇಂತಹ ದ್ವಿಭಾಷಾ ಧೀಮಂತ ಲೇಖಕರು ಬೆರಳಣಿಕೆಯಷ್ಟಿದ್ದಾರೆ ಅಷ್ಟೆ. ಆದರೆ ನಮ್ಮಲ್ಲಿನ ಬಹುತೇಕ ಕನ್ನಡ ಸಾಹಿತಿಗಳಲ್ಲಿ ಅದರಲ್ಲೂ ಶ್ರೇಷ್ಠರಾದವರು ಮನೆಯಲ್ಲಿ ಭಿನ್ನಭಾಷೆಯನ್ನೇ ಮಾತನಾಡುವವರು. ಮಾಸ್ತಿ, ಪುತಿನ ಅವರ ಮನೆ ಮಾತು ತಮಿಳು. ಭಾಷೆಯ ಮಾಂತ್ರಿಕ ಬಳಕೆಗೆ ಹೆಸರಾದ ಬೇಂದ್ರೇಯವರ ಮನೆ ಮಾತು ಮರಾಠಿ. ಕೊಂಕಣಿ ಮಾತನಾಡುವವರು, ತುಳು ಮಾತನಾಡುವವರು ಬರೆಯುವುದು ಕನ್ನಡದಲ್ಲಿ. ಒಮ್ಮೆ ಬೇಂದ್ರೆಯವರೇ ನನಗೆ ಹೇಳಿದಂತೆ, ಅವರಿಗೆ ಬಾಲ್ಯದಲ್ಲಿ ತಾವು ಎರಡು ಭಿನ್ನ ಬಾಷೆಗಳನ್ನು ಆಡುತ್ತಿದ್ದೇವೆ ಎಂಬ ಅರಿವೇ ಇರಲಿಲ್ಲವಂತೆ.

ಹಿಂದಿಗೆ ಹತ್ತಿರವಾದ ರಾಜಸ್ಥಾನಿ, ಭೋಜಪುರಿ, ಮೈಥಿಲಿ, ಪಂಜಾಬಿ ಮುಂತಾದ ಭಾಷೆಗಳನ್ನಾಡುವ, ಆದರೆ ಹಿಂದಿಯಲ್ಲಿ ಬರೆಯುವ. ಲೇಖಕರ ವಿಚಾರದಲ್ಲೂ ಇದು ನಿಜವಾಗಿದೆ. ಇವರ ಕಾದಂಬರಿಗಳ ಪಾತ್ರಗಳು ತಮ್ಮದೇ ಆದ ಭಾಷೆಯಲ್ಲಿ ಆಡಿದ ಮಾತುಗಳನ್ನು ಇವರು ಹಿಂದಿಯಲ್ಲಿ ಪ್ರಸ್ತುತಪಡಿಸುತ್ತಾರೆ.

ಇವೆಲ್ಲಕ್ಕಿಂತ ಪ್ರಮುಖವಾದ ಮತ್ತು ವಿಶಿಷ್ಟ ಅಂಶ ಭಾರತೀಯ ದೃಷ್ಟಿಕೋನದಲ್ಲಿ ‘ಸಾಹಿತ್ಯ’ವೆಂದರೇನು? ಎಂಬುದು. ಅನೇಕ ಸಲ ಕಣ್ತಪ್ಪಿ ಸಾಗುವ ವಿಚಾರವಿದು. ಕಾಳಿದಾಸನ ‘ಶಾಕುಂತಲ’ ಏಕಭಾಷೆಯ ಪಠ್ಯವಲ್ಲ. ನಮ್ಮ ಕಾಲದ ಕನ್ನಡದ ಹಿರಿಯ ಕವಿ ಶಿಶುನಾಳ ಶರೀಫರ ಕೆಲವು ಕವನಗಳಲ್ಲಿ ಆರಂಭದ ನಾಲ್ಕು ಸಾಲುಗಳು ಕನ್ನಡದಾಗಿದ್ದು, ನಂತರದ ಸಾಲುಗಳು ತೆಲುಗಿನಲ್ಲಿದ್ದರೆ, ಆನಂತರವು ಉರ್ದುವಿನಲ್ಲಿ ಇರುತ್ತವೆ. ಇವರು ಈ ಭಾಷೆಗಳನ್ನಾಡುವ ಪರಿಸರದಿಂದ ಬಂದವರು. ಇವರು ಜನರ ನಡುವಣ ಅನುಭಾವಿ ಕವಿಯಾದ್ದರಿಂದ ಇವರ ನೇರ ಕೇಳುಗರಿಗೆ ಈ ಭಾಷೆಗಳ ಸಂಯೋಜನೆ ವಿಶಿಷ್ಟ ಸಂವೇದನೆಯನ್ನುಂಟುಮಾಡುತ್ತಿತ್ತು. ಈ ಕೇಳುಗರು ಆಡಿದ ಶಬ್ದಗಳಾಚೆಗಿನ ಮೌನವನ್ನು ಕೇಳುತ್ತಿದ್ದರು; ಶಬ್ದಗಳ ಮೂಲಕ ಮೌನವನ್ನು ಆಸ್ವಾದಿಸುತ್ತಿದ್ದರು.

ಬಹುಭಾಷಿಕ ಪರಿಸರದಲ್ಲಿ ಬದಲಾವಣೆ ಮತ್ತು ಬೆರೆಯುವಿಕೆಗಳೊಡನೆ ಭಾಷೆಯ ಸ್ವಚ್ಛಂದ ಬಳಕೆ ಸಹಜವಾಗಿದೆ. ಯಜಮಾನಿಕೆಯ ಸ್ಥಾನದಲ್ಲಿ ಯಾವ ಭಾಷೆಯೇ ಇರಲಿ, ಬಹುಭಾಷಾ ಬಳಕೆಯ ಈ ಧಾರಾಳದಿಂದದಾಗಿಯೂ, ಒಂದು ಭಾಷೆಯಿಂದ ಇನ್ನೊಂದಕ್ಕೆ ಸಹಜವಾಗಿ ನೆಗೆಯುವ ನಿರಂಬಳದಿಂದಾಗಿಯೂ ಪ್ರಾಚೀನ ಭಾರತೀಯ ಭಾಷೆಗಳ ಲೇಖಕರು ಸಂಸ್ಕೃತದ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಪ್ರಾದೇಶಿಕ ಭಾಷೆಗಳು ಪಡೆಯುವಂತೆ ಮಾಡಲು ದಾರಿಮಾಡಿಕೊಟ್ಟರು. ಹೀಗಾಗಿ ಪ್ರಾದೇಶಿಕ ಭಾಷೆಗಳ ಬಳಕೆ ಒಂದು ಭೂವಲಯಕ್ಕೆ ಸೀಮಿತವಾಗಿದ್ದರೂ ಅನ್ಯರ ಜೊತೆಗಿನ ಸಂವಹನಕ್ಕೆ ಧಕ್ಕೆ ತರುತ್ತಿರಲಿಲ್ಲ. ಇಂತಹ ಸಾಂಸ್ಕೃತಿಕ ಒಳಗೊಳ್ಳುವಿಕೆ ಮತ್ತು ಸಮನ್ವಯ ಭಾರತದಲ್ಲಿ ಸಾವಿರ ವರ್ಷಗಳಿಗಿಂತಲೂ ಹೆಚ್ಚುಕಾಲ ನಡೆಯುತ್ತಾ ಬಂದಿದೆ. ಆರಂಭದಲ್ಲಿ ಇದು ‘ದೇವಭಾಷೆ’ ಎನ್ನಿಸಿಕೊಂಡ ಯಜಮಾನಿಕೆಯ ಸಂಸ್ಕೃತದಿಂದ ಕಡ ಪಡೆಯುತ್ತಲೇ ಸ್ವತಂತ್ರವಾದ ದೇಶಭಾಷೆಗಳಾದರೆ, ಆ ದೇಶಭಾಷೆಗಳೇ ಈಗ ಇಂಗ್ಲಿಷ್ ನಿಂದ ಪಡೆಯಬೇಕಾದ್ದನ್ನು ನಿರಾಂತಕವಾಗಿ ಪಡೆದು ಬೆಳೆದು ನಿಂತಿವೆ; ಬೆಳೆಯುತ್ತಲೂ ಇವೆ. ನಮ್ಮ ಇಷ್ಟಾನಿಷ್ಟಗಳನ್ನು ಮೀರಿ, ಇಂಗ್ಲಿಷ್ ಯಜಮಾನಿಕೆಯ ಸಂದರ್ಭದಲ್ಲೇ ಪ್ರಾದೇಶಿಕ ಭಾಷೆಗಳ ಮುಖೇನ ಸಾಮಾನ್ಯ ಜನಸಮುದಾಯ ಅದರ ಜ್ಞಾನಸಂಪಾದನೆಯಲ್ಲಿ ಬಲಗೊಳ್ಳುತ್ತ ಇದೆ. ಮಾತಾಡುವಾಗ ನಡೆಯುವ ಸಹಜ ಅನುವಾದ ಮತ್ತು ಪಠ್ಯಗಳ ಉದ್ದೇಶಪೂರ್ವಕವಾದ ಅನುವಾದ-ಈ ಎರಡು ಕ್ರಿಯೆಗಳು ಹಿಂದೆಯೂ, ಇಂದಿಗೂ ಕಾಲದ ಜೊತೆಗಿನ ನಮ್ಮ ಅನುಸಂಧಾನದ ಪ್ರಮುಖ ಬಗೆಗಳಾಗಿ ನಮ್ಮನ್ನು ಕೂಪಮಂಡೂಕಗಳಾದಂತೆ ಕಾಪಾಡಿವೆ.

ಸೀಮಿತ ಪ್ರಭುತ್ವದಿಂದಾಗಿ ಕನ್ನಡದಂತಹ ಹೆಚ್ಚು ಓಡಾಡದ ಭಾಷೆಗೂ ಕೂಡ ಯಜಮಾನಿಕೆಯಲ್ಲಿ (ಪ್ರಭುತ್ವ ಶಕ್ತಿಯ ಮುಖೇನ) ವಿಸ್ತರಿಸಿದ ಇತರ ಭಾಷೆಗಳ ಅನುಭವ ಶ್ರೀಮಂತಿಕೆಯ ಜೊತೆಗೆ ಆಧ್ಯಾತ್ಮಿಕ ಕಾರಣಕ್ಕಾಗಿಯೋ, ಜ್ಞಾನದ ಹಸಿವಿಗಾಗಿಯೋ ಅನುಸಂಧಾನದಲ್ಲಿ ಸತತವಾಗಿ ತೊಡಗಿಕೊಂಡಿವೆ. ಈ ಪ್ರಕ್ರಿಯೆಯಲ್ಲಿ ಮೂಲ ಭಾಷೆಯಲ್ಲಿರುವ ಸತ್ವವನ್ನು ನಮ್ಮದಾಗಿಸೊಕೊಳ್ಳುವಾಗ ಅಕ್ಷರಶಃ ಮೂಲಭಾಷೆಯ ನುಡಿಸ್ವರೂಪಕ್ಕೆ ಬದ್ಧರಾಗಿರಬೇಕೆಂಬ ಕಾಳಜಿ ಮುಖ್ಯವಾಗಿರುವುದಿಲ್ಲ. ಯಜಮಾನ ಭಾಷೆಗಳು ನಮ್ಮ ಒಡೆಯರಾಗಲು ಬಿಡದಂತೆ ಅವುಗಳಲ್ಲಿನ ಸತ್ವವನ್ನು ಜೀರ್ಣಿಸಿಕೊಳ್ಳುವುದೇ ಅನುವಾದದ ‘ಉಪಾಯ’ ವಾಗುತ್ತದೆ. ಸಂಸ್ಕೃತದಲ್ಲಿರುವ ‘ಮಂತ್ರ’ವನನ್‌ಉ ಹಿಂದೆ ನಾವು ಅನುವಾದಿಸಲು ಹೋಗಲಿಲ್ಲ. ಇಲ್ಲಿ ಶ್ರದ್ಧಾಳುವಿಗೆ ಮಂತ್ರವೆಂದರೆ ಕಿವಿಗೆ ಕೇಳಿದ ಶಬ್ದವಾಗಿರುವುದರಲ್ಲೇ ಅದರ ಅರ್ಥವೂ ಅಡಗಿದೆ. ವಾಚ್ಯಾತೀತವಾದ ‘ಸ್ವ-ತಂತ್ರಿ’ಯಾದ ವಾಕ್ ಅದು. ಆದರೆ ನಾವು ಹಿಂಜರಿಕೆಯಿಲ್ಲದೇ ದೇವಭಾಷೆಯ ಅಥವಾ ನಮ್ಮನ್ನಾಳುವ ಬಿಳಿಯರ ಭಾಷೆಯ ಪುರಾಣಗಳನ್ನೂ, ವಿವರಣಾತ್ಮಕ ಪಠ್ಯಗಳನ್ನೂ ನಮ್ಮ ಅಗತ್ಯಕ್ಕೆಬೇಕಾದಂತೆ ಬದಲಾಯಿಸಿ, ಅಳವಡಿಸಿ-ಕೊಂಡಿದ್ದೇನೆ. ಕಂಬನ ತಮಿಳು ರಾಮಾಯಣದಲ್ಲಿ ಶಾಪಗ್ರಸ್ತಳಾದ ಅಹಲ್ಯೆ ಕಲ್ಲಾಗುತ್ತಾಳೆ; ಆದರೆ ವಾಲ್ಮೀಕಿ ರಾಮಾಯಣದಲ್ಲಿಯಂತೆ ಅಡಗಿದ ಧ್ವನಿಯಾಗುವುದಿಲ್ಲ. ಹಾಗೆಯೇ ಶೇಕ್ಸ್ಪಿಯರ್ನ ದುರಂತ ನಾಟಕಗಳನ್ನು ಹರ್ಷನಾಟಕಗಳನ್ನಾಗಿ ಮಾರ್ಪಡಿಸಿದ ಅದೇ ಇಂಗ್ಲೆಂಡಿನ ಡ್ರೈಡನ್. ಮಾತ್ರವಲ್ಲ; ನಮ್ಮ ಹಿಂದಿನ ಕನ್ನಡ ಲೇಖಕರೂ ಅದನ್ನು ಮಾಡಿದ್ದರು. ಆದುದರಿಂದಲೇ ಭಾರತ ಒಂದು ವೇಳೆ ದೀರ್ಘ ಇತಿಹಾಸ ಒಡ್ಡಿರುವ ಅನೇಕ ಪ್ರಭಾವಗಳನ್ನು ಅರಗಿಸಿಕೊಂಡಿದೆ-ಯಾದರೆ ಅದು ಈ ಪ್ರಾದೇಶಿಕ ಭಾಷೆಗಳ ಸತ್ವದಿಂದ, ಈ ಭಾಷೆಗಳನ್ನಾಡುವ ಜನರ ತಣಿಯದ ಕಲ್ಪನೆಯ ಹಸಿವಿನಿಂದ.

ಜೊತೆಗೆ, ಈ ಭಾಷೆಗಳ ವೈಶಿಷ್ಟವನ್ನು ಹೇಳಲೇಬೇಕು. ಈ ಜನಭಾಷೆಗಳು ಎದ್ದುತೋರುವ ಸಾಹಿತ್ಯಕ ಪರಂಪರೆಯ ಜಗಲಿಯನ್ನು ಹೊಂದಿವೆ, ಹಾಗೆಯೇ ಸಹಸ್ರಮಾನದವರೆಗೂ ಅನುಸ್ಯೂತವಾಗಿ ಮುಂದುವರೆಯುತ್ತ ಬಂದ ನಮ್ಮ ಬೇರಾದ ಜಾನಪದ ಪರಂಪರೆಯ ಹಿತ್ತಲೂ ಇವಕ್ಕೆ ಇವೆ. ಹಿತ್ತಲಿನಲ್ಲಿ ಸಮೃದ್ಧವಾಗಿ ತಲೆಯೆತ್ತಿದ ಮೌಖಿಕ ಪರಂಪರೆ ಶಕ್ತಿಯುತ ಸಂವೇದನೆಯಿಂದಾಗಿ ಜನರ ನಾಲಗೆಯಲ್ಲಿ ಜೀವಂತವಾಗಿ ಉಳಿದಿವೆ. ನಾಲಿಗೆಯಲ್ಲಿ ಆಟವಾಡಲಾರದ ಸಾಹಿತ್ಯಕ ಭಾಷೆ ತೋರವಾಗಿ ಬೆಳೆಯುತ್ತ, ಘನವಾಗುತ್ತ ಕೃತಕವಾಗಿಬಿಡುತ್ತದೆ.

*

ಇದಕ್ಕೆ ಸಮರ್ಥನೆ ನೀಡುವುದಕ್ಕಾಗಿ ಕೆಲವೊಂದು ಮೂರ್ತ ಉದಾಹರಣೆಗಳನ್ನು ನಾನಿಲ್ಲಿ ನೀಡುತ್ತೇನೆ. ಕರಾವಳಿ ಕರ್ನಾಟಕದಲ್ಲಿ ಉಡುಪಿ ಎನ್ನುವ ಒಂದು ಪುಟ್ಟ ಪಟ್ಟಣವಿದೆ. ಹೋಟೆಲ್ ಉದ್ಯಮದಿಂದಾಗಿ ಭಾರತವಿಡೀ ಈ ಹೆಸರು ಪರಿಚಿತ. ಕನಿಷ್ಠ ಪಕ್ಷ ಉಡುಪಿಯ ಒಳಗೆ ಮತ್ತು ಹೊರಗೆ ಮೂರು ನಾಲ್ಕು ಭಾಷೆಗಳಾದರೂ ಬಳಕೆಯಾಗುತ್ತಿವೆ. ರೈತರು, ಕೆಲಸಗಾರರು ಸೇರಿದಂತೆ ಬಹುಸಂಖ್ಯಾತ ಜನರ ಆಡುಭಾಷೆ ತುಳುವಾಗಿದ್ದು ಇದು ಜಾನಪದೀಯಾವಗಿಯೂ ಶ್ರೀಮಂತವಾಗಿದೆ. ಕೇವಲ ಕೆಳವರ್ಗದವರು ಮಾತ್ರವಲ್ಲ, ಬ್ರಾಹ್ಮಣರೂ ಕೂಡಾ ಸ್ಥಳೀಯ ಶೂದ್ರ ಆಡುಗರಿಂದ ಅಶುದ್ಧವೆಂದು ಕಾಣಲ್ಪಡುವ ಸಂಸ್ಕೃತದ ಪ್ರಭೆಯಿರುವ ತುಳುವನ್ನು ಮಾತೃಭಾಷೆಯಾಗಿ ಆಡುತ್ತಾರೆ. ತುಳುವಿನ ನಂತರದ ಸ್ಥಾನ ವ್ಯಾಪಾರಿ ವರ್ಗದ ಜನರು ಆಡುವ ಕೊಂಕಣಿ ಭಾಷೆಗೆ. ಅಲ್ಲದೆ ಇಲ್ಲಿನ ಮುಸ್ಲಿಮರದು ಬ್ಯಾರಿ ಎನ್ನುವ ಅವರ ಆತ್ಮೀಯತೆಯನ್ನು ಹಂಚಿಕೊಳ್ಳುವ ಅವರ ನಡುವಿನ ಭಾಷೆ.

ಈ ಭಾಷೆಗಳೊಂದಿಗೆ ಉಡುಪಿಯಲ್ಲಿ ಕನ್ನಡ ಅಸ್ತತ್ವದಲ್ಲಿ. ಅದೇನೇ ಇದ್ದರೂ ಕನ್ನಡ ಸಾಂಸ್ಕೃತಿಕವಾಗಿ ಮೇಲ್ಮಟ್ಟದ (ಮೇಲಿನವರ?) ಭಾಷೆ ಎಂದೇ ಎಲ್ಲರಿಂದ ಗ್ರಹೀತಾವಾಗುತ್ತದೆ. ಕನ್ನಡವೂ ಅನೇಕ ಜನರ ಮಾತೃಭಾಷೆಯಾಗಿದೆ. ಒಟ್ಟಿನಲ್ಲಿ ನಾನು ಹೇಳಲು ಹೊರಟಿರುವುದು ಇಷ್ಟು-ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಬಹುದೊಡ್ಡ ಭಾಗ ಕರಾವಳಿಯ ಜನರಿಂದಲೇ ರಚಿತವಾಗಿದೆ. ಹಾದಿಯಲ್ಲಿ ಒಬ್ಬ ಅಪರಿಚಿತನನ್ನು ಮುಖಾಮುಖಿಯಾದಾಗ ಅಲ್ಲಿ ಸಂವಹನಕ್ಕೆ ಬಳಕೆಯಾಗುವ ಭಾಷೆ ಕನ್ನಡ. ಆದರೆ ತುಳು ಅಥವಾ ಕೊಂಕಣಿ ಭಾಷೆಯನ್ನಾಡುವ ಜನರು ಪರಸ್ಪರ ಎದುರಾದಾಗ ಸಹಜವಾಗಿಯೇ ಅವರ ಮಾತೃಭಾಷೆಯನ್ನೇ ಆಡುತ್ತಾರೆ. ಇಲ್ಲದಿದ್ದರೆ ಅದನ್ನು ಅಹಂಕಾರವೆಂದು ಗ್ರಹಿಸಲಾಗುತ್ತದೆ. ಪ್ರತಿಯೊಬ್ಬ ಕೊಂಕಣಿ ಅಥವಾ ತುಳು ಭಾಷಿಕನೂ ಕನ್ನಡವನ್ನು ಅರ್ಥಮಾಡಿಕೊಳ್ಳಬಲ್ಲ ಮತ್ತು ಅವನು ಏನನ್ನಾದರೂ ಬರೆಯಬೇಕಾದಲ್ಲಿ ಅವನ ಆಯ್ಕೆಯ ಭಾಷೆ ಬಹುತೇಕ ಕನ್ನಡವೇ ಆಗಿರುತ್ತದೆ. ‘ಬ್ಯಾರಿ’ ಮಾತಾಡುವ ಮುಸ್ಲಿಮರ ಬಗ್ಗೆಯೂ ಇದು ನಿಜ. ನಮ್ಮ ಹಲವು ಮುಸ್ಲಿಂ ಲೇಖಕರು ಮೈಸೂರು ದೇಶದವರಲ್ಲ; ಉತ್ತರ ಕರ್ನಾಟಕದವರು ಅಥವಾ ದಕ್ಷಿಣ ಕನ್ನಡದವರು.

ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿ ಜೋಮನದುಡಿ ಕನ್ನಡದಲ್ಲಿ ರಚಿತವಾಗಿದೆ. ಕಾದಂಬರಿಯ ನಾಯಕನಾದ ಚೋಮ ಅಸ್ಪೃಶ್ಯನಾಗಿದ್ದಾನೆ; ಮತ್ತು ನಿಜ ಜೀವನದಲ್ಲಿ ಅವನಾಡುವ ಮಾತು ತುಳು. ಬಹುತೇಕ ಈ ಕಾದಂಬರಿಯು ತುಳು ಭಾಷೆಯಲ್ಲೇ ಸಾಗುತ್ತದೆ ಮತ್ತು ಕಾರಂತರು ಅದನ್ನು ಬರೆಯುವಾಗ ನಾನು ಹಿಂದೆ ವಿವರಿಸಿರುವ ನಿಜದರ್ಥದಲ್ಲಿ ತುಳುವಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ನಮ್ಮವರಿಂದ ರಚಿತವಾದ ಅನೇಕ ಒಳ್ಳೆಯ ಇಂಗ್ಲಿಷ್ ಕಾದಂಬರಿಗಳನ್ನು ಈಗ ಪರಿಶೀಲಿಸೋಣ. ಸಲ್ಮಾನ್ ರಷ್ದಿ ತನ್ನ ಕ್ರಿಯಾಶೀಲತೆಯ ಉತ್ತುಂಗದಲ್ಲಿ, ಕಾದಂಬರಿಯ ಹಲವು ಭಾಗಗಳಲ್ಲಿ ಬಾಂಬೆ ಹಿಂದಿಯನ್ನು ಅನುವಾದಿಸುತ್ತಿಲ್ಲವೇ? ಅರುಂಧತಿ ರಾಯ್‌ಯ ಬರಹದ ಉತ್ಕೃಷ್ಟ ಭಾಗಗಳ ಯಶಸ್ಸು ಆಕೆಯ ಸಿರಿಯನ್ ಕ್ರಿಶ್ಚಿಯನ್ ಮಲಯಾಳಂನ ಅನುಕರಣೆ ಮಾಡುವ ಸಾಮರ್ಥ್ಯದಲ್ಲಿ ಅಡಗಿದೆಯಲ್ಲವೇ? ರಾಜಾರಾಯರ ವಿಶಿಷ್ಟ ಕಾದಂಬರಿ ಕಾಂತಪುರ ಅದರ ರಚನೆ ಮತ್ತು ವಿವರಣಾ ವಿಧಾನಗಳಲ್ಲಿ ಮೌಖಿಕ ಪರಂಪರೆಯ ಸತ್ವವಿರುವ ಅಪ್ಪಟ ಕನ್ನಡ ಕಾದಂಬರಿಯಾಗಿದೆ. ಭಾರತದಲ್ಲಿ ಇಂಗ್ಲಿಷನ್ನು ಕಾಣುವ, ಬಳಸುವ ಬಗೆಯನ್ನು ತಿಳಿಸಿಕೊಟ್ಟ ಕ್ರಿಯಾಶೀಲ ಇಂಗ್ಲಿಷ್ ಕಾದಂಬರಿಕಾರರನ್ನು ಗಮನಿಸಿ ನಾನು ಈ ಹೇಳಿಕೆಯನ್ನು ನೀಡುತ್ತಿದ್ದೇನೆ. ಅವರಿಗೆ ವಿಶಿಷ್ಟ ಕೃತಿಯನ್ನು ಇಂಗ್ಲಿಷ್‌ಗೆ ತರುವುದೆಂದರೆ ಭಾರತೀಯ ಭಾಷೆಯ ಸಾಮಾಜಿಕ ಪರಿಸರದ ಭಾಷಿಕ ಪುನಾರಚನೆಯೇ ಆಗಿದೆ.

*

ನಮ್ಮ ಇತ್ತೀಚಿನ ಬರವಣಿಗೆಗಳ ಕುರಿತು ಮಾತನಾಡಿ ನಾನು ಮಾತುಗಳನ್ನು ಕೊನೆಗೊಳಿಸುತ್ತೇನೆ. ‘ಅನುವಾದದ ರಾಜಕಾರಣ’ದ ಕುರಿತು ನಾನಿಲ್ಲಿ ಹೇಳುತ್ತಿದ್ದೇನೆ. ಭಾರತೀಯ ಪಠ್ಯಗಳ ನಡುವೆ ನಾವು ಯಾವುದನ್ನು ಇಂಗ್ಲಿಷಿಗೆ ಅನುವಾದಗೊಳಿಸಿಕೊಳ್ಳಲು ಆರಿಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಾವು ಅನೇಕ ಸಲ ಶ್ರೇಷ್ಠವಾದುದ್ದನ್ನೇ ಆರಿಸಿಕೊಂಡಿದ್ದೇವೆಂದು ಭಾವಿಸುತ್ತೇವೆ. ಆದರೆ ನಾವು ಸಹಜವಾಗಿ ಕಲ್ಪಿಸಿಕೊಳ್ಳುವ ಈ ಶ್ರೇಷ್ಠತೆಯ ಮಾನದಂಡಗಳು ಕೆಲವೊಮ್ಮೆ ಪ್ರಶ್ನಾರ್ಹವಾಗಿವೆ.

ನಾವು ಬರೆಯುವಾಗ ಕೇವಲ ಭಾಷೆಯಲ್ಲಿ ಬರೆಯುವುದಿಲ್ಲ. ಆಯಾ ಸಾಮಾಜಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳ ಸಂದರ್ಭಗಳಲ್ಲಿ ಬರೆಯುತ್ತಿರುತ್ತೇವೆ. ಇಂಗ್ಲೆಂಡಿನ ಛಾಸರ್‌ನ (೧೩೪೩-೧೪೦೦) ಸಮಕಾಲೀನನಾದ ಸಾಮಾನ್ಯ ಓದುಗನಿಗೂ ಇಂಗ್ಲಿಷಿಗೆ ಅನುವಾದಿತವಾದ ಕನ್ನಡದ ಹಿರಿಯಕವಿ ಕುಮಾರಸ್ವಾಮಿ ಖುಷಿಕೊಡಬಹುದಿತ್ತು ಎಂದು ನನ್ನ ಊಹೆ. ಈಗ ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದರೆ ಕೆಲವು ಆಸಕ್ತ ಪಂಡಿತರಾದ ಯುರೋಪಿಯನ್ ಚಿಂತಕರಷ್ಟೆ ಅದನ್ನು ಓದುತ್ತಾರೆ. ಕನ್ನಡದ ಆಧುನಿಕ ಸಾಹಿತ್ಯ ಮಾತ್ರ ಪಶ್ಚಿಮದ ಸಾಮಾನ್ಯ ಓದುಗನಿಗೂ ಆಸಕ್ತಿದಾಯಕವಾಗಬಹುದು. ಆದರೆ ಕುಮಾರಸ್ವಾಮಿ ಇಂದಿಗೂ ಕನ್ನಡದ ಸಾಹಿತ್ಯಕ ಪರಂಪರೆಯ ಭಾಗವೇ. ಈ ದೃಷ್ಟಿಯಿಂದ ನೋಡಿದರೆ, ಛಾರಸ್ ಇಂಗ್ಲೆಂಡಿನ ಜೀವಂತ ಸಾಹಿತ್ಯಕ ಪರಂಪರೆಯ ಭಾಗವಲ್ಲ. ವಾಸ್ತವವಾಗಿ ನಮ್ಮ ದೇಶದ ಅನಕ್ಷರಸ್ತನೊಬ್ಬ ಕುಮಾರವ್ಯಾಸನಿಗೆ ಸ್ಪಂದಿಸುವಷ್ಟು ನೈಜವಾಗಿ, ಸಂವೇದನಾಶೀಲವಾಗಿ ನನ್ನಂಥ ಆಧುನಿಕ ಬರಹಗಾರನಿಗೆ ಸ್ಪಂದಿಸಲಾರ. ಒಬ್ಬ ಬರಹಗಾರನಾಗಿ ಇದು ನನ್ನನ್ನು ನಮ್ರನನ್ನಾಗಿಸುತ್ತದೆ. ಕುಮಾರವ್ಯಾಸನಿಗೆ ಭಾಷೆಯ ಬಳಕೆಯಲ್ಲಿ ಶೇಕ್ಸ್‌ಪಿಯರ್‌ನಲ್ಲಿ ಕಾಣಿಸುವಂತಹ ಅಸಾಧಾರಣ ಸದ್ಯೋಜಾತ ವಿಸ್ತಾರದ ಶಕ್ತಿಯಿದೆ. ಆಧುನಿಕ ಸಮಾಜದ ಆವರಣದಲ್ಲಿ ಬರೆಯುತ್ತಿರುವ ನಮ್ಮಂತಹ ಹೆಚ್ಚಿನ ಲೇಖಕರಿಗಿಂತ ಕುಮಾರವ್ಯಾಸ ಈ ಹಿನ್ನೆಲೆಯಲ್ಲಿ ಶ್ರೇಷ್ಠ ಕೃತಿಕಾರನಾಗುತ್ತಾನೆ.

ರಾಮಾನುಜನ್ ನಮ್ಮ ನಡುವಿನ ಶ್ರೇಷ್ಠ ಅನುವಾದಕರು. ಅವರು ಅನುವಾದಕ್ಕಾಗಿ ಪ್ರಾಚೀನ ತಮಿಳು ಅಥವಾ ಕನ್ನಡದಿಂದ ಪಠ್ಯಗಳನ್ನು ಆರಿಸಿಕೊಳ್ಳುತ್ತಿದ್ದರು. ನಾವಿಲ್ಲಿ ಒಂದು ಸಂಕೀರ್ಣವಾದ, ಕೆಲವರಿಗೆ ಅಧಿಕ ಪ್ರಸಂಗವೆಂದೂ ಅನ್ನಿಸಬಹುದಾದ ಪ್ರಶ್ನೆಯನ್ನು ಎತ್ತಬೇಕು. ಭಾಷಾಂತರಿಸಲು ತಮ್ಮ ಪಠ್ಯಗಳನ್ನು ಅವರು ಆಯುವಾಗ ಇಂಗ್ಲಿಷ್ ಭಾಷೆಯನ್ನು ಮಾತಾಡುವರ ಆಧುನಿಕ ಲೋಕದ ಸಾಹಿತ್ಯಕ ನಿರೀಕ್ಷೆಗಳಿಂದ ಪ್ರಭಾವಿತರಾಗಿದ್ದರೆ? ಇದು ನಿಜವಿದ್ದರೆ ನಮ್ಮ ದೃಷ್ಟಿಯಿಂದ ಮಹತ್ವದ್ದೆನ್ನಿಸುವ ಅನೇಕ ಪಠ್ಯಗಳು ಅವರ ಆಯ್ಕೆಯಿಂದ ಹೊರಗುಳಿಯುತ್ತವೆ ಅಲ್ಲವೆ? ಇಂಗ್ಲಿಷ್ ಲೋಕಕ್ಕೆ-ಛಾಸರ್ ಅಮುಖ್ಯನಾದ ಇಂಗ್ಲಿಷ್ ಲೋಕಕ್ಕೆ-ಇಂತಹ ಪಠ್ಯಗಳು ಅನುವಾದಕ್ಕೆ ಅನುವಾಗಿರುವ ಕೃತಿಗಳೆಂದು, ಅಥವಾ ಓದುಗ ಲಭ್ಯವೆಂದು ಅನ್ನಿಸಲಾರದೆಂದು ನನ್ನ ಊಹೆ.

ಈ ಬಗ್ಗೆ ನಾವು ಏನು ಮಾಡಬೇಕೆಂದು ಚಿಂತಿಸುವುದು ಅರ್ಥಹೀನ. ಯಾವುದು ಇಂಗ್ಲಿಷಿಗೆ ಅನುವಾದವಾಗಬಲ್ಲದು?; ಪಶ್ಚಿಮದ ಸಾಹಿತ್ಯಕ ಪರಿಸರದಲ್ಲಿ ಯಾವುದು ಸ್ವೀಕೃತವಾಗಬಲ್ಲದು ಎಂಬುದು ನನಗೆ ಮುಖ್ಯವೆನ್ನಿಸುವ ಸಂಗತಿಯಾಗಲೇಬಾರದು. ಯಾವುದನ್ನು ಪ್ರಮುಖವಾಗಿ ಆಧುನಿಕ ಪಾಶ್ವಾತ್ಯ ಪರಿಸರಕ್ಕನುಗುಣವಾಗಿ ಅನುವಾದ ಮಾಡಲು ಸಾಧ್ಯವೋ ಅದನ್ನು ಮಾತ್ರ ಶ್ರೇಷ್ಠ ಸಾಹಿತ್ಯವೆಂದು ತಿಳಿಯುವುದು ಅಕ್ಷಮ್ಯ. ಭಾರತೀಯ ಸಾಹಿತ್ಯಕ ಪರಂಪರೆಯಲ್ಲಿ ಪ್ರಾಚೀನ, ಆಧುನಿಕ, ಮೌಖಿಕ ಹೀಗೆ ಎಲ್ಲದಕ್ಕೂ ಪ್ರಸ್ತುತವೆನ್ನಿಸುವ ಸ್ಥಾನವಿದೆ. ಅನುವಾದದ ಪ್ರಕ್ರಿಯೆಯಲ್ಲಿ ಯುರೋಪ್ ಕೂಡ ಧಾರಾಳವಾಗಿ ಭಾರತೀಯ ಭಾಷೆಗಳಿಗೆ ಬಂದಿಳಿಯುತ್ತಿದೆ-ಆದರೆ ಇಲ್ಲಿಂತ ಅಲ್ಲಿಗೆ ಹೋಗುತ್ತಿರುವುದು ಕಡಿಮೆ. ನಾನು ಸಾಲ್‌ಬೆಲ್ಲೋನನ್ನು ಸಾಹಿತ್ಯಕ ಕಾರಣಗಳಿಗೆ ಓದಿದರೆ, ಪ್ರೇಮ್‌ಚಂದ್‌ರ ಕೃತಿಯನ್ನು ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ಸಮಾಜಶಾಸ್ತ್ರೀಯ ಪಠ್ಯವಾಗಿ ಓದಲಾಗುತ್ತಿದೆ. ಅದು ಅವರ ಸಮಸ್ಯೆಯೇ ಹೊರತು ನಮ್ಮದಲ್ಲ. ಆದರೆ ನಾವು ಜಾಗತೀಕರಣಕ್ಕೆ ಒಳಗಾಗಿ ಏಕಮುಖೀ ವಿಶ್ವವ್ಯವಸ್ಥೆಯಲ್ಲಿ ಬಂಧಿಗಳಾದರೆ, ಕುಮಾರವ್ಯಾಸನಂಥವರು ಅಪ್ರಸ್ತುತನೋ ಅಲಭ್ಯನೋ ಎನ್ನಿಸತೊಡಗಿದರೆ, ಆಗ ಅದು ನಮ್ಮ ಸಮಸ್ಯೆಯೂ ಆಗಬಹುದು.

*

(Asia Society, Mumbai ವಿಚಾರಸಂಕಿರಣದಲ್ಲಿ ಮಂಡಿಸಿದ ಲೇಖನ, ೨೦೦೫. ಕನ್ನಡ ರೂಪ: ಭಾರತಿದೇವಿ. ಪಿ)