ಬಹಳ ಧರ್ಮಬೀರುವೂ ಸಂಪ್ರದಾಯಶೀಲರೂ ಆಗಿದ್ದ ನಮ್ಮ ಅಜ್ಜಯ್ಯ, ಅವರ ಇಡೀ ಜೀವಮಾನದಲ್ಲಿ ಒಂದೇ ಒಂದು ಸಲವೂ ‘ನಾನೊಬ್ಬ ಭಾರತೀಯ’ ಎನ್ನಲಿಲ್ಲ. ಇದೇನೇ ಇರಲಿ, ‘ಭಾರತ’ ಎನ್ನುವ ಕಲ್ಪನೆ ಮೂಡಿಬಂದಿದ್ದೇ ಇಲ್ಲಿ ಹರಿಯುವ ನದಿಗಳಿಂದ. ಹೀಗಾಗಿಯೇ ಅಜ್ಜಯ್ಯ ನಮ್ಮ ಬಾವಿಯ ನೀರನ್ನು ಸೇದಿಕೊಂಡು ತಮ್ಮ ತಲೆಯ ಮೇಲೆ ಸುರಿದುಕೊಂಡು ಸ್ನಾನ ಮಾಡುತ್ತಿದ್ದಾಗ ತಪ್ಪದೆ, ‘ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ/ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂಬ ಮಂತ್ರ ಹೇಳುತ್ತಿದ್ದರು. ಅಂದರೆ ಈ ನದಿಗಳ ನೀರೆಲ್ಲ ಈ ಬಾವಿಯ ನೀರಿನಲ್ಲಿದ್ದು ತಮ್ಮನ್ನು ಪವಿತ್ರಗೊಳಿಸುತ್ತಿದೆ ಎಂಬುದು ಇದರ ಹಿಂದಿನ ನಂಬಿಕೆಯಾಗಿತ್ತು. ಅವರು ಸಂಧ್ಯಾವಂದನೆಗೆ ಕೂತಾಗಲೂ ಇಷ್ಟೆ. ಅಂದರೆ ತಮ್ಮನ್ನು ತಾವು ಮೊದಲು ಭರತ ವರ್ಷ, ನಂತರ ಭರತ ಖಂಡ, ಆನಂತರ ಜಂಬೂದ್ವೀಪವೆಂಬ ಪ್ರದೇಶ/ಜಾಗದಲ್ಲಿ ಪ್ರತಿಷ್ಠಾಪಿಸಿಕೊಂಡು, ಚಾಂದ್ರಮಾನ ಪಂಚಾಂಗದ ಪ್ರಕಾರ ಬರುವ ವಾರ, ತಿಥಿ, ನಕ್ಷತ್ರ ಇತ್ಯಾದಿಗಳೆನ್ನೆಲ್ಲ ಹೇಳುತ್ತಿದ್ದರು. ಬಳಿಕ ತಮ್ಮ ದೇಹದ ವಿವಿಧ ಅಂಗಾಂಗಗಳಿಗೆಲ್ಲ ದೇವಾನುದೇವತೆಗಳನ್ನು ಅವರು ಆವಾಹಿಸಿಕೊಳ್ಳುತ್ತಿದ್ದರು. ಇದರಿಂದಾಗಿ ನಮ್ಮ ಅಜ್ಜಯ್ಯನಿಗೆ ಇಡೀ ಮನುಕುಲದ ಮಾನಸಿಕ ಶಕ್ತಿಯನ್ನು ಹಿಗ್ಗಿಸುವಂಥ ಗಾಯತ್ರಿ ಮಂತ್ರವನ್ನು ಪಠಿಸಲು ಅನುಕೂಲವಾಗುತ್ತಿತ್ತು.

ನಾನು ನಮ್ಮೂರಿನ ಶಾಲೆಗೆ ಸೇರಿದ ಮೇಲಷ್ಟೆ ನನಗೆ ಭಾರತವೆಂದರೆ ಕೇವಲ ಒಂದು ಪೌರಾಣಿಕ ಜಾಗವಲ್ಲ, ಇದೊಂದು ಭೌಗೋಳಿಕ ಪ್ರದೇಶವೆಂಬುದು ಗೊತ್ತಾಯಿತು. ಅಲ್ಲಿ ಗುರುಗಳು ನಮಗೆಲ್ಲ ಭಾರತ ಪರಾಧೀನದಲ್ಲಿದೆ ಎಂದೂ, ನಮ್ಮನ್ನು ಆಳುತ್ತಿರುವ ಪರಕೀಯರು (ಬ್ರಿಟಿಷರು) ನಮ್ಮ ದೇಶವನ್ನು ಕೊಳ್ಳೆ ಹೊಡೆದು ನಮ್ಮನ್ನು ಬಡವರನ್ನಾಗಿ ಮಾಡಿದ್ದಾರೆಂದೂ ಹೇಳಿದರು. ಗಾಂಧೀಜಿ ಬ್ರಿಟಿಷರಿಗೆ ‘ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ) ಎಂಬ ಕರೆ ಕೊಟ್ಟಾಗ ನನಗೆ ಹತ್ತು ವರ್ಷ. ಆಗೆಲ್ಲ ನಾವು ದೇಶಭಕ್ತಿ ಗೀತೆಗಳನ್ನು ಹಾಡುತ್ತಿದ್ದೆವು. ಇಷ್ಟಾಗಿಯೂ ಭಾರತ ಒಂದು ಪುರಾಣದ ಜಾಗವೇ ಆಗಿತ್ತು. ನಮ್ಮ ಮಲೆನಾಡಿನ ಹಳ್ಳಿಗಳಲ್ಲಿ ರಾಮಾಯಾಣದ ಸೀತೆ ಸಾಕ್ಷಾತ್ತಾಗಿ ಬದುಕಿದ್ದಳು. ಕಾಡಿನಲ್ಲಿದ್ದಾಗ ಲಕ್ಷ್ಮಣ ಅವಳಿಗಾಗಿ ಕಿತ್ತುಕೊಟ್ಟಿದ್ದ ಸೀತಾಳೆ ಹೂವನ್ನು ಅವಳು ಇಷ್ಟಪಟ್ಟಿದ್ದಳು. ಇನ್ನು ಮಹಾಭಾರತದ ಕಾಲದಲ್ಲಿ ಪಾಂಡವರು ದಂಡಕಾರಣ್ಯದಲ್ಲಿ ಅಲೆಯುತ್ತಿದ್ದಾಗ ಸ್ನಾನ ಮಾಡಿದ್ದು ಇಲ್ಲಿ ಹರಿಯುವ ತುಂಗಾ ನದಿಯಲ್ಲೇ. ಇದೇ ನದಿಯಲ್ಲಿ ನಾವು ಕೂಡ ಈಜಾಡಿ ಸುಖಿಸಿದ್ದೇವೆ. ಇಲ್ಲೊಂದು ಸ್ವಾರಸ್ಯಕರವಾದ ಕತೆ ಇದೆ.

ಪಾಂಡವರು ಇಲ್ಲಿದ್ದಾಗ ದ್ರೌಪದಿಗೆ ಒಮ್ಮೆ ಕೊಳದಲ್ಲಿ ಸ್ವಚ್ಛಂದವಾಗಿ ಈಜಾಡಿ, ವಿಹರಿಸಬೇಕೆಂಬ ಮನಸ್ಸಾಯಿತು. ಇದಕ್ಕಾಗಿ ಆಕೆಯ ನೆಚ್ಚಿನ ಗಂಡ ಭೀಮಸೇನ ತುಂಗಾ ನದಿಗೆ ಅಡ್ಡಲಾಗಿ ದೊಡ್ಡದೊಡ್ಡ ಬಂಡೆಗಳನ್ನಿಟ್ಟು ಜೋಡಿಸಿ, ಒಂದು ಅಣೆಕಟ್ಟು ಕಟ್ಟಿದ. ಈ ಕೊಳಕ್ಕೆ ಸ್ವಲ್ಪ ದೂರದಲ್ಲೇ ತನ್ನ ಕಡುಕೋಪಕ್ಕೆ ಹೆಸರಾದ ದೂರ್ವಾಸ ಮುನಿಗಳಿದ್ದರು. ಆದರೆ ಭೀಮ ಕಟ್ಟಿದ ಈ ಅಣೆಕಟ್ಟಿನಿಂದಾಗಿ ದೂರ್ವಾಸರು ಇದ್ದ ದ್ವೀಪಕ್ಕೆ ನೀರು ಸರಾಗವಾಗಿ ಹೋಗುವುದು ನಿಂತುಹೋಯಿತು. ಪರಿಣಾಮವಾಗಿ ದೂರ್ವಾಸ ಸಿಟ್ಟಿಗೆದ್ದು, ಶಾಪ ಕೊಡುವುದು ಖಚಿತವಾಯಿತು. ಇದು ಕೃಷ್ಣನಿಗೆ ಗೊತ್ತಾಗಿ ಅವನು ಕೂಡಲೇ ಭೀಮನನ್ನು ಎಚ್ಚರಿಸಿ, ತುಂಗೆಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆಯಲ್ಲಿ ಮೂರು ಬಿರುಕುಗಳನ್ನು ಮಾಡಲು ಹೇಳಿದನಲ್ಲದೆ, ಇದರ ಸಲುವಾಗಿ ಶಿವನನ್ನು ಪ್ರಾರ್ಥಿಸುವಂತೆ ಹೇಳಿದನು. ಕೃಷ್ಣನ ಮಾತನ್ನು ಕೇಳಿದ ಭೀಮ ಅವರಸವಸರವಾಗಿ ಈ ಉದ್ದೇಶಕ್ಕಾಗಿ ತುಂಗಾ ತಟದಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಿದ.

ನಾವೆಲ್ಲ ಹುಡುಗರಾಗಿದ್ದಾಗ ಈ ಅಣೆಕಟ್ಟೆಯ ಬಿರುಕುಗಳಿಂದ ರಭಸವಾಗಿ ನುಗ್ಗಿಬರುವ ಜಲರಾಶಿಯಲ್ಲಿ ಮಿಂದು, ಅಲ್ಲಿದ್ದ ಲಿಂಗಕ್ಕೆ ಪೂಜೆ ಮಾಡುತ್ತಿದ್ದೆವು. ಜತೆಗೆ ನಮ್ಮ ಮೈ ಮತ್ತು ನಮ್ಮ ಬಟ್ಟೆಗಳೆಲ್ಲ ಒಣಗಬೇಕಾಗಿದ್ದರಿಂದ ಈ ಕತೆಯನ್ನು ನಮಗೆ ನಾವೇ ನೂರಾರು ಸಲ ಹೇಳಿಕೊಳ್ಳುತ್ತಿದ್ದೆವು.

ಒಂದೆರಡು ವರ್ಷಗಳ ಹಿಂದೆ ತುಂಗೆಯ ತಟದಲ್ಲಿರುವ ಈ ಮೋಹಕ ದೇವಸ್ಥಾನಕ್ಕೆ ನಾನು ಮತ್ತೆ ಹೋಗಿದ್ದೆ. ಆಗ ಅಲ್ಲಿಯ ವಯೋವೃದ್ಧ ಅರ್ಚಕರು ಈ ಲಿಂಗಕ್ಕೆ ಪೂಜೆ ಮಾಡುತ್ತಿದ್ದುದನ್ನು ಗಮನಿಸಿದೆ. ತಮ್ಮ ಪೂಜೆ ಮುಗಿಸಿ, ಹೊರಬಂದ ಅರ್ಚಕರು ನನ್ನನ್ನು ಗುರುತಿಸಿ, ನಾನು ಚಿಕ್ಕವನಾಗಿದ್ದಾಗ ಕೇಳಿದ್ದ ಕತೆಗೆ ಅಂತ್ಯವನ್ನು ಒದಗಿಸಿದರು.

ಕೇವಲ ಒಂದು ವರ್ಷದ ಹಿಂದೆ, ಈ ಅರ್ಚಕರು ಕೊನೆಗೂ ಭೀಮ ತನ್ನ ಅವರಸದಲ್ಲಿ ಮಾಡಿದ್ದ ಒಂದು ತಪ್ಪನ್ನು ಸರಿಪಡಿಸಿದ್ದರು. ವಾಸ್ತವವಾಗಿ ಈ ಅರ್ಚಕರ ತಂದೆ ಮತ್ತು ಅಜ್ಜಂದಿರೇ ಇದನ್ನು ಮಾಡಲು ಬಯಸಿದ್ದರು. ಆದರೆ ಅವರಿಂದ ಆಗಿರಲಿಲ್ಲ. ಅದೇನೆಂದರೆ ಭೀಮ ತುಂಗೆಯ ತಟದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಾಗ ಆ ಅವಸರದಲ್ಲಿ ತಳಹದಿಯಾಗಿ ಒಂದು ತಟಸ್ಥ ಶಿಲೆ ಮತ್ತು ಒಂದು ಸ್ತ್ರೀ ಶಿಲೆಯನ್ನು ಇಡಬೇಕೆಂಬುದನ್ನೇ ಮರೆತನಂತೆ (ಆ ಅರ್ಚಕರು ಹೇಳಿದ ಈ ಧಾರ್ಮಿಕ ಕ್ರಿಯಾವಿಧಿಯ ಅಗತ್ಯ ನನಗೆ ಸರಿಯಾಗಿ ನೆನಪಿಗೆ ಬರುತ್ತಿಲ್ಲ). ದ್ವಾಪರ ಯುಗದಲ್ಲಿ ಆದ ಈ ತಪ್ಪನ್ನು ಸರಿಪಡಿಸುವ ಕೆಲಸ ನಮ್ಮ ಕಲಿಯುಗದ ಅರ್ಚಕರಿಗೆ ಬಿತ್ತು. ಇದಕ್ಕೆ ಬೇಕಾದ ಕ್ರಿಯಾವಿಧಿಗಳಿಗೆಲ್ಲ ಸಾಕಷ್ಟು ದುಡ್ಡು ಸುರಿಯಬೇಕಾಯಿತು. ಈ ಪೈಕಿ ಅರ್ಚಕರು ಸ್ವಲ್ಪ ಭಾಗವನ್ನು ಅವರಿವರಿಂದ ಸಂಗ್ರಹಿಸಿದರೆ, ಮತ್ತಷ್ಟನ್ನು ತಮ್ಮ ಕೈಯಿಂದಲೇ ಹಾಕಿದರು. ಆದರೂ ಈ ಅರ್ಚಕರ ನೆರೆಹೊರೆಯಲ್ಲಿದ್ದ ದುಷ್ಟರು, ‘ಈ ಆಸಾಮಿ (ಅರ್ಚಕರು) ದೇವರ ದುಡ್ಡನ್ನೆಲ್ಲ ತೆಗೆದುಕೊಂಡು ಮಜಾ ಉಡಾಯಿಸಿದ್ದಾನೆ’ ಎಂದು ಸುದ್ದಿ ಹಬ್ಬಿಸಿದರದರಂತೆ. ‘ಇಂಥ ದುಷ್ಟರು ದ್ವಾಪರಯುಗದಲ್ಲೂ ಇದ್ದರು, ಕಲಿಯುಗದಲ್ಲೂ ಇದ್ದಾರೆ ಅಂತ ನಿಮಗೆ ಅನಿಸುವುದಿಲ್ಲವೇ?’ ಎಂದು ಇದನ್ನು ಹೇಳಿದವರು ನನ್ನನ್ನು ಕೇಳಿದರು.

(ಇದಾದ ನಂತರ ನನ್ನನ್ನು ಗುರುತಿಸದ ಊರಿನ ಯುವಕರ ಗುಂಪೆಯೊಂದು ನನ್ನ ಬಳಿ ಬಂದು ‘ಸರ್ಕಾರವು ವಿದ್ಯುತ್ ಉತ್ಪಾದನೆಗೆಂದು ತುಂಗೆಗೆ ಅಡ್ಡಲಾಗಿ ಕೆಲವು ಸಣ್ಣಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಲು ಯೋಚಿಸುತ್ತಿದೆ. ಇದರಿಂದ ಕೃಷಿ ಭೂಮಿ ಮತ್ತು ಅರಣ್ಯವೆಲ್ಲ ನಾಶವಾಗುತ್ತದೆ. ಇದರ ವಿರುದ್ಧ ಹೋರಾಡಲು ನೀವು ಸಹಾಯ ಮಾಡಬೇಕು’ ಎಂದರು. ಆ ಭೀಮ ಕೂಡ ದ್ವಾಪರ ಯುಗದಲ್ಲಿ ಮಾಡಿದ್ದು ಇದನ್ನೇ ತಾನೇ ಎಂದು ನನಗೆ ಆಶ್ಚರ್ಯವಾಯಿತು).

ಅರ್ಚಕರು ಹೇಳುತ್ತಿದ್ದ ಕತೆ ಕೇಳುತ್ತಿರುವಾಗಲೇ ನನಗೆ, ಕೃಷ್ಣ ಪರಮಾತ್ಮನ ಸಮಕಾಲೀನನಾದ ಭೀಮ ಆ ದ್ವಾಪಾರಯುಗದಲ್ಲಿ ಮಾಡಿದ ತಪ್ಪನ್ನು ಸರಿಪಡಿಸುವುದು ವಿನೀತ ಸ್ವಭಾವದ ನಮ್ಮ ಈ ಅರ್ಚಕರಿಗೆ ಸಾಧ್ಯ ಎಂಬುದನ್ನು ಹಿಂದೂ ಮೂಲಭೂತವಾದಿಗಳೂ ತಿಳಿದುಕೊಳ್ಳಬೇಕು ಎನಿಸಿತು. ಏಕೆಂದರೆ ಭಾರತದಲ್ಲಿರುವ ನಾವು-ಅಂದರೆ ಹಿಂದೂಗಳು-ಇಡೀ ಜಗತ್ತಿನಲ್ಲೇ ಅನನ್ಯವಾದ ಪರಿಷ್ಕರಣವಾದಿಗಳು. ಇದು ಇತರೆ ಸೆಮೆಟಿಕ್ ಧರ್ಮಗಳಿಗೆ ಇಷ್ಟು ಸುಲಭವಲ್ಲ.

ಈಗ ನಮ್ಮ ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಸೇರಿಕೊಂಡಿರುವ ಒಂದು ಪದ ಎಲ್ಲೆಲ್ಲೂ ಕೇಳಿಬರುತ್ತದೆ. ‘ಅಡ್ಜಸ್ಟ್ ಮಾಡ್ಕೊಂಡ್ಹೋಗಿ’ ಅನ್ನೋದೇ ಈ ಪದ, ಇಂಥ ಪರಿಷ್ಕರಣೆ ಮತ್ತು ಹೊಂದಾಣಿಕೆಯ ಗುಣವಿರುವುದರಿಂದಲೇ ನಾವು ಸಾವಿರಾರು ವರ್ಷಗಳಾದರೂ ಒಂದು ದೇಶವಾಗಿ ಉಳಿದುಕೊಂಡಿದ್ದೇವೆ ಎಂಬುದು ನನ್ನ ಭಾವನೆ.

ನನ್ನಂಥವರಿಗೆ ಭಾರತದ ಕಲ್ಪನೆಯಲ್ಲಿ ಆದ ಅತ್ಯಂತ ದೊಡ್ಡ ಪರಿವರ್ತನೆಯೆಂದರೆ ಅದು ಪುರಾಣದ ನೆಲೆಯಿಂದ ರಾಜಕೀಯ ಮತ್ತು ಇತಿಹಾಸದ ನೆಲೆಗೆ ಬಂದಿದ್ದು. ಇದನ್ನು ಮಾಡಿದ್ದು ಮಹಾತ್ಮ ಗಾಂಧಿ. ಆದರೆ ನಾನು ಇಲ್ಲೊಂದು ಮಾತು ಹೇಳಬೇಕು. ಅದೇನೆಂದರೆ, ಗಾಂಧಿ ಪುರಾಣಗಳ ಕಲ್ಪನೆಯನ್ನು ಪರಿಷ್ಕರಿಸಿದರೇ ವಿನಾ ಅದನ್ನು ಸಂಪೂರ್ಣವಾಗಿ ಕೈಬಿಡಲಿಲ್ಲ. ಅವರ ರಾಮ್ ಭಜನ್ ನಲ್ಲಿರುವ ‘ಈಶ್ವರ ಅಲ್ಲಾ ತೇರೇ ನಾಮ್’ ಎಂಬ ಸಾಲು ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದವನ್ನು ಸ್ಪಷ್ಟವಾಗಿ ವಿರೋಧಿಸುತ್ತದೆ. ಒಟ್ಟಿನಲ್ಲಿ ರಾಜಕೀಯ ಮತ್ತು ಧರ್ಮಗಳೆರಡೂ ಸೇರಿ ಭಾರತವನ್ನು ಒಂದಾಗಿಟ್ಟಿವೆ. ಒಂದು ಪ್ರಬಲವಾದ ರಾಷ್ಟ್ರವೆಂದರೆ ಒಂದೇ ಒಂದು ಭಾಷೆ, ಒಂದೇ ಒಂದು ಧರ್ಮ ಮತ್ತು ಒಂದೇ ಒಂದು ಜನಾಂಗ ಇರಬೇಕೆಂಬ ಐರೋಪ್ಯ ಮಾದರಿಯ ರಾಷ್ಟ್ರದ ಕಲ್ಪನೆಯ ಬೆನ್ನು ಹತ್ತಿಹೋದರೆ, ಅದು ಭಾರತವನ್ನು ಚೂರುಚೂರು ಮಾಡಿಹಾಕುತ್ತದೆ ಅಷ್ಟೆ. ಐರೋಪ್ಯ ಮಾದರಿಯ ಇಂಥ ರಾಷ್ಟ್ರವನ್ನೇ ಹಿಂದೆ ವೀರ್ ಸಾವರ್ಕರ್ ಬಯಸಿದ್ದು. ಈಗ ಪರಮಾಣು ರಾಷ್ಟ್ರವಾಗಿರುವ ಭಾರತ ಕೂಡ ಇದನ್ನೇ ಬಯಸುತ್ತಿದೆ. ಆದರೆ ಭಾರತದ ಐಕ್ಯತೆಯ ಹೆಸರಿನಲ್ಲಿ ನಾವು ಅತಿಯಾದ ಕೇಂದ್ರಿಕರಣಕ್ಕೆ ಜೋತುಬಿದ್ದರೆ ಅದರಿಂದ ನಾವು ದ್ವೀಪಗಳಾಗುತ್ತೇವೆ ಅಷ್ಟೆ ಎಂಬುದನ್ನು ನಮ್ಮ  ಸಮಕಾಲೀನ ರಾಜಕೀಯ ಅನುಭವವೇ ನಮಗೆ ಚೆನ್ನಾಗಿ ಮನದಟ್ಟು ಮಾಡಿಕೊಟ್ಟಿದೆ.

ಭಾರತ ಯಾವತ್ತಿಗೂ ಯೂರೋಪಿಯನ್ ಕಲ್ಪನೆಯ ರಾಷ್ಟ್ರದಂತಾಗಲು ಸಾಧ್ಯವಿಲ್ಲ. ನಾವೇನಿದ್ದರೂ ಒಂದು ನಾಗರಿಕತೆ. ಈ ಸಂಬಂಧ ನಮ್ಮ ಕವಿ ಮತ್ತು ಅನುವಾದಕರಲ್ಲಿ ಒಬ್ಬರಾದ ಎ.ಕೆ. ರಾಮಾನುಜನ್ ಹೇಳುತ್ತಿದ್ದ ಒಂದು ಕತೆಯನ್ನು ನಾನು ಇಲ್ಲಿ ಮತ್ತೆ ಹೇಳುತ್ತೇನೆ. ರಾಮಾನುಜನ್ ಒಮ್ಮೆ ಕರ್ನಾಟಕದ ಹಳ್ಳಿಗಳಲ್ಲಿ ಜೀವಂತವಾಗಿರುವ ರಾಮಾಯಣದ ಮೌಖಿಕ ರೂಪಗಳನ್ನು ಕಲೆಹಾಕುತ್ತಿದ್ದರು. ಅದರಲ್ಲಿ ಒಂದು ಕಡೆ ರಾಮ ವನವಾಸಕ್ಕೆ ಹೊರಟು ನಿಂತಿದ್ದಾನೆ. ಆಗ ಆತನ ಹೆಂಡತಿಯಾದ ಸೀತೆಯು ತಾನೂ ಜತೆಯಲ್ಲಿ ಕಾಡಿಗೆ ಬರುವೆನೆಂದು ಹಟ ಹಿಡಿದಿದ್ದಾಳೆ. ಇದಕ್ಕೆ ರಾಮ ಎಂದಿನಂತೆಯೇ, ತುಂಬಾ ಸುಖದ ವಾತಾವರಣದಲ್ಲಿ ಬೆಳೆದ ನೀನು ಕಾಡಿಗೆ ಬಂದು ಕಷ್ಟಪಡುವುದು ಬೇಡ ಎನ್ನುತ್ತಿದ್ದಾನೆ (ಈ ಕತೆಯಲ್ಲಿ ಬರುವ ರಾಮ-ಸೀತೆಯರಿಬ್ಬರೂ ಅನಕ್ಷರಸ್ಥರು. ಆದರೂ ವಾದ ಮಾಡುತ್ತಲೇ ಇದ್ದಾರೆ). ಇದನ್ನು ಒಪ್ಪದ ಸೀತೆ ಕೊನೆಗೆ, ‘ನನಗೆ ಗೊತ್ತಿರುವಂಥ ಪ್ರತಿಯೊಂದು ರಾಮಾಯಣದಲ್ಲೂ ರಾಮನು ತನ್ನ ಜತೆಯಲ್ಲಿ ಸೀತೆಯೂ ಕಾಡಿಗೆ ಬರುವುದಕ್ಕೆ ಒಪ್ಪಿಗೆ ಕೊಟ್ಟಿದ್ದಾನೆ. ಅದ್ಹೇಗೆ ನೀನು ಮಾತ್ರ ಬೇಡ ಎನ್ನುತ್ತಿದ್ದೀಯಾ?’ ಎನ್ನುತ್ತಾಳೆ. ಭಾರತವನ್ನು ಬೆಸೆದಿರುವ ಅಂಶಗಳಲ್ಲಿ ಅಂತರ್ಪಠ್ಯೀಯತೆಯೂ ಒಂದು ಎನ್ನುವುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ನನ್ನ ಇನ್ನೊಬ್ಬ ಗೆಳೆಯರು ಸದಾ ಭಾರತದಲ್ಲಿರುವ ಅಸಂಖ್ಯಾತ ಭಾಷೆಗಳಲ್ಲಿ ಎರಡು ಮಾತ್ರ ಎಲ್ಲರಿಗೂ ಅರ್ಥವಾಗುತ್ತದೆ. ಆ ಎರಡು ಭಾಷೆಗಳು ಯಾವುವೆಂದರೆ ರಾಮಾಯಣ ಮತ್ತು ಮಹಾಭಾರತ ಎನ್ನುತ್ತಿರುತ್ತಾರೆ. ಅಂದರೆ ಇವೆರಡೂ ಮಹಾಕಾವ್ಯಗಳನ್ನು ನಮ್ಮಲ್ಲಿ ಹೆಚ್ಚಿನ ಜನ ಓದಿಯೇ ಇಲ್ಲ ಎನ್ನುವುದು ಸತ್ಯ.

ಕೋಮುವಾದಿ ಭಾರತ ಏನಿದ್ದರೂ ನಮ್ಮ ಧರ್ಮಗಳಲ್ಲಿರುವ ಹೊಸತನದ ಚೈತನ್ಯವನ್ನು ಕೊಂದುಹಾಕುತ್ತದೆ ಅಷ್ಟೆ. ಬೇರುಗಳಿಲ್ಲದ ಆಧುನಿಕತೆ ಮತ್ತು ಅತ್ಯಂತ ಉಗ್ರವಾದ ಮೂಲಭೂತವಾದಿ ಕೋಮುವಾದಗಳೆರಡೂ ಭಾರತದ ಜನರಲ್ಲಿರುವ ಪುರಾಣ ಪ್ರಜ್ಞೆಯನ್ನು ದುರ್ಬಲಗೊಳಿಸುತ್ತವೆ.

*

(‘ಇಂಡಿಯಾ ಟುಡೆ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಕನ್ನಡಕ್ಕೆ: ಬಿ.ಎಸ್. ಜಯಪ್ರಕಾಶ ನಾರಾಯಣ. ೧೫ ಅಗಸ್ಟ್ ೨೦೦೭)